ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯವು ನಿಮಗೆಷ್ಟು ಅಮೂಲ್ಯವಾದದ್ದಾಗಿದೆ?

ಸತ್ಯವು ನಿಮಗೆಷ್ಟು ಅಮೂಲ್ಯವಾದದ್ದಾಗಿದೆ?

ಸತ್ಯವು ನಿಮಗೆಷ್ಟು ಅಮೂಲ್ಯವಾದದ್ದಾಗಿದೆ?

“ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:31, 32.

1. ಪಿಲಾತನು “ಸತ್ಯ” ಎಂಬ ಪದವನ್ನು ಉಪಯೋಗಿಸಿದ ರೀತಿ, ಮತ್ತು ಯೇಸು ಅದನ್ನು ಬಳಸಿದ ರೀತಿ ಹೇಗೆ ಭಿನ್ನವಾಗಿರುವಂತೆ ತೋರುತ್ತದೆ?

“ಸತ್ಯವಂದರೇನು?” ಪಿಲಾತನು ಈ ಪ್ರಶ್ನೆಯನ್ನು ಕೇಳಿದಾಗ, ಅವನು ಸಾಮಾನ್ಯವಾದ ಸತ್ಯದ ಕುರಿತಾಗಿ ಮಾತ್ರ ಆಸಕ್ತನಾಗಿದ್ದನೆಂದು ತೋರುತ್ತದೆ ಮತ್ತು ಅದೇ ವಾಸ್ತವಾಂಶವಾಗಿತ್ತು. ಯೇಸುವಾದರೋ ಅದಕ್ಕೆ ಮುಂಚೆಯಷ್ಟೇ ಹೀಗಂದಿದ್ದನು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37, 38) ‘ಸತ್ಯಕ್ಕೆ’ ಸೂಚಿಸಿ ಮಾತಾಡುವಾಗ ಯೇಸು ನಿರ್ದೇಶಕ ಗುಣವಾಚಿಯನ್ನು ಉಪಯೋಗಿಸಿದನೆಂದು ಮೂಲ ಗ್ರೀಕ್‌ ಗ್ರಂಥಪಾಠವು ತೋರಿಸುತ್ತದೆ. ಅವನು ದೈವಿಕ ಸತ್ಯಕ್ಕೆ ಸೂಚಿಸಿ ಮಾತಾಡುತ್ತಿದ್ದನು.

ಸತ್ಯದ ಕುರಿತು ಲೋಕದ ಮನೋಭಾವ

2. ಯೇಸುವಿನ ಯಾವ ಹೇಳಿಕೆಯು ಸತ್ಯದ ಮೌಲ್ಯವನ್ನು ತೋರಿಸುತ್ತದೆ?

2 ಪೌಲನು ಹೇಳಿದ್ದು: “ಎಲ್ಲರಲ್ಲಿ ಕ್ರಿಸ್ತನಂಬಿಕೆಯಿಲ್ಲವಲ್ಲಾ.” (2 ಥೆಸಲೊನೀಕ 3:2) ಸತ್ಯದ ಕುರಿತಾಗಿಯೂ ಇದನ್ನೇ ಹೇಳಬಹುದು. ಬೈಬಲಾಧಾರಿತವಾದ ಸತ್ಯವನ್ನು ತಿಳಿದುಕೊಳ್ಳುವ ಅವಕಾಶವು ಅವರ ಮುಂದೆಯೇ ಇದ್ದರೂ, ಅನೇಕ ಜನರು ಅದನ್ನು ಉದ್ದೇಶಪೂರ್ವಕವಾಗಿ ಅಲಕ್ಷಿಸುತ್ತಾರೆ. ಆದರೆ ಸತ್ಯವು ಎಷ್ಟು ಅಮೂಲ್ಯವಾಗಿದೆ! ಯೇಸು ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”​—ಯೋಹಾನ 8:31, 32.

3. ಮೋಸಕರ ಬೋಧನೆಗಳ ಕುರಿತಾಗಿ ಯಾವ ಎಚ್ಚರಿಕೆಗೆ ನಾವು ಕಿವಿಗೊಡಬೇಕು?

3 ಸತ್ಯವನ್ನು ಮಾನವ ತತ್ತ್ವಜ್ಞಾನಗಳಲ್ಲಾಗಲಿ, ಸಂಪ್ರದಾಯಗಳಲ್ಲಾಗಲಿ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ಅಪೊಸ್ತಲ ಪೌಲನು ಹೇಳಿದನು. (ಕೊಲೊಸ್ಸೆ 2:8) ಹೌದು, ಅಂಥ ಬೋಧನೆಗಳು ವಂಚನಾತ್ಮಕವಾಗಿವೆ. ಎಫೆಸದ ಕ್ರೈಸ್ತರು ಅದರಲ್ಲಿ ನಂಬಿಕೆಯಿಟ್ಟರೆ, ಅವರು “ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವ” ಆತ್ಮಿಕ ಶಿಶುಗಳಂತಿರುವರೆಂದು ಪೌಲನು ಅವರನ್ನು ಎಚ್ಚರಿಸಿದನು. (ಎಫೆಸ 4:14) ಇಂದು ‘ದುರ್ಬೋಧಕರ ಕುಯುಕ್ತಿಯು’ ದೈವಿಕ ಸತ್ಯವನ್ನು ವಿರೋಧಿಸುವವರ ಪ್ರಚಾರದ ಮೂಲಕ ಬೆಂಬಲಿಸಲ್ಪಟ್ಟಿದೆ. ಅಂಥ ಪ್ರಚಾರವು, ಸತ್ಯವನ್ನು ಸುಳ್ಳನ್ನಾಗಿ ತಿರುಚಿ, ಸುಳ್ಳುಗಳನ್ನು ಸತ್ಯವನ್ನಾಗಿ ಪ್ರವರ್ಧಿಸುತ್ತದೆ. ಅಂಥ ಅಗೋಚರವಾದ ಒತ್ತಡಗಳ ಎದುರಿನಲ್ಲಿ ಸತ್ಯವನ್ನು ಕಂಡುಕೊಳ್ಳಲು ನಾವು ಶ್ರದ್ಧೆಯಿಂದ ಶಾಸ್ತ್ರಗಳನ್ನು ಪರಿಗಣಿಸಬೇಕು.

ಕ್ರೈಸ್ತರು ಮತ್ತು ಲೋಕ

4. ಯಾರಿಗೆ ಸತ್ಯವು ಲಭ್ಯಗೊಳಿಸಲ್ಪಡುತ್ತದೆ, ಮತ್ತು ಅದನ್ನು ಪಡೆಯುವವರ ಕರ್ತವ್ಯವೇನು?

4 ತನ್ನ ಶಿಷ್ಯರಾಗಿ ಪರಿಣಮಿಸಿದವರನ್ನು ಸೂಚಿಸುತ್ತಾ, ಯೇಸು ಕ್ರಿಸ್ತನು ಯೆಹೋವನಿಗೆ ಪ್ರಾರ್ಥಿಸಿದ್ದು: “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಅಂಥವರನ್ನು, ಯೆಹೋವನನ್ನು ಸೇವಿಸುವ ಮತ್ತು ಆತನ ನಾಮ ಹಾಗೂ ರಾಜ್ಯವನ್ನು ಪ್ರಸಿದ್ಧಪಡಿಸುವ ಉದ್ದೇಶಕ್ಕಾಗಿ ಪ್ರತಿಷ್ಠೆಪಡಿಸಲಾಗುವುದು ಇಲ್ಲವೇ ಮೀಸಲಾಗಿಡಲಾಗುವುದು. (ಮತ್ತಾಯ 6:​9, 10; 24:14) ಯೆಹೋವನ ಸತ್ಯವು ಎಲ್ಲ ಜನರ ಬಳಿ ಇರದಿದ್ದರೂ, ಅದನ್ನು ಹುಡುಕುವವರು ಯಾವುದೇ ರಾಷ್ಟ್ರ, ಕುಲ ಇಲ್ಲವೇ ಸಾಂಸ್ಕೃತಿಕ ಹಿನ್ನೆಲೆಯವರಾಗಿರಲಿ, ಅದು ಅವರಿಗೆ ಉಚಿತವಾದ ಕೊಡುಗೆಯೋಪಾದಿ ಲಭ್ಯವಿದೆ. ಅಪೊಸ್ತಲ ಪೇತ್ರನು ಹೇಳುವುದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”​—ಅ. ಕೃತ್ಯಗಳು 10:34, 35.

5. ಕ್ರೈಸ್ತರು ಅನೇಕವೇಳೆ ಹಿಂಸಿಸಲ್ಪಡುವುದೇಕೆ?

5 ಇತರರೊಂದಿಗೆ ಬೈಬಲ್‌ ಸತ್ಯವನ್ನು ಹಂಚಿಕೊಳ್ಳುವ ಕ್ರೈಸ್ತರನ್ನು ಎಲ್ಲ ಕಡೆಗಳಲ್ಲಿ ಸಂತೋಷದಿಂದ ಸ್ವಾಗತಿಸಲಾಗುವುದಿಲ್ಲ. ಯೇಸು ಎಚ್ಚರಿಸಿದ್ದು: “ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಮತ್ತಾಯ 24:9) ಈ ವಚನದ ಕುರಿತು ಹೇಳಿಕೆಯನ್ನು ಕೊಡುತ್ತಾ, ಐಯರ್ಲೆಂಡಿನ ಪಾದ್ರಿಯಾಗಿರುವ ಜಾನ್‌ ಆರ್‌. ಕಾಟರ್‌ 1817ರಲ್ಲಿ ಬರೆದುದು: “ತಮ್ಮ ಸಾರುವಿಕೆಯ ಮೂಲಕ ಮಾನವರ ಜೀವನಗಳನ್ನು ಸುಧಾರಿಸಲು ಅವರು [ಕ್ರೈಸ್ತರು] ಮಾಡುವ ಪ್ರಯತ್ನಗಳು, ಜನರಲ್ಲಿ ಕೃತಜ್ಞತಾಭಾವವನ್ನು ಉಂಟುಮಾಡುವ ಬದಲು, ತಮ್ಮ ದುರಾಚಾರಗಳನ್ನು ಬಯಲಿಗೆಳೆದದ್ದಕ್ಕಾಗಿ ಶಿಷ್ಯರನ್ನು ವಾಸ್ತವದಲ್ಲಿ ದ್ವೇಷಿಸಿ ಹಿಂಸಿಸುವಂತೆ ಮಾಡುವವು.” ಈ ಹಿಂಸಕರು, ‘ರಕ್ಷಣೆಯನ್ನು ಹೊಂದುವಂತೆ ಸತ್ಯದ ಮೇಲೆ ಪ್ರೀತಿಯನ್ನಿಡುವುದಿಲ್ಲ.’ ಈ ಕಾರಣಕ್ಕಾಗಿ “ದೇವರು ಅಸತ್ಯನಡಿಸುವ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಆ ಸುಳ್ಳನ್ನು ನಂಬುವದಕ್ಕೆ ಅವರನ್ನು ಬಿಡುತ್ತಾನೆ.”​—2 ಥೆಸಲೊನೀಕ 2:10-12.

6. ಒಬ್ಬ ಕ್ರೈಸ್ತನು ಯಾವ ಆಸೆಗಳನ್ನು ಬೆಳೆಸಿಕೊಳ್ಳಬಾರದು?

6 ಈ ದ್ವೇಷಭರಿತ ಲೋಕದಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅಪೊಸ್ತಲ ಯೋಹಾನನು ಸಲಹೆ ನೀಡುವುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. . . . ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾನ 2:15, 16) “ಮೊದಲಾದವುಗಳೆಲ್ಲವು” ಎಂದು ಹೇಳುವ ಮೂಲಕ ಯೋಹಾನನು ಯಾವುದನ್ನೂ ಹೊರತುಪಡಿಸುವುದಿಲ್ಲ. ಈ ಕಾರಣಕ್ಕಾಗಿಯೇ, ನಾವು ಸತ್ಯದಿಂದ ವಿಚಲಿತರಾಗುವಂತೆ ಮಾಡಸಾಧ್ಯವಿರುವ ಈ ಲೋಕದ ಯಾವುದೇ ಸಂಗತಿಗಾಗಿ ಆಸೆಯನ್ನು ಬೆಳೆಸಿಕೊಳ್ಳಬಾರದು. ಯೋಹಾನನ ಸಲಹೆಯನ್ನು ಪಾಲಿಸುವುದು ನಮ್ಮ ಜೀವಿತಗಳ ಮೇಲೆ ಒಂದು ಬಲವಾದ ಪ್ರಭಾವವನ್ನು ಬೀರುವುದು. ಹೇಗೆ?

7. ಸತ್ಯದ ಜ್ಞಾನವು ಸಹೃದಯಿಗಳನ್ನು ಹೇಗೆ ಪ್ರಚೋದಿಸುತ್ತದೆ?

7 ಇಸವಿ 2001ರಲ್ಲಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಪ್ರತಿ ತಿಂಗಳು 45 ಲಕ್ಷ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾ, ಜನರಿಗೆ ವೈಯಕ್ತಿಕವಾಗಿಯೂ ಗುಂಪುಗಳಾಗಿಯೂ ಜೀವಕ್ಕಾಗಿರುವ ದೈವಿಕ ಆವಶ್ಯಕತೆಗಳನ್ನು ಕಲಿಸಿದರು. ಫಲಿತಾಂಶವಾಗಿ 2,63,431 ಜನರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಸತ್ಯದ ಬೆಳಕು ಈ ಹೊಸ ಶಿಷ್ಯರಿಗೆ ಅಮೂಲ್ಯವಾಗಿ ಪರಿಣಮಿಸಿತು, ಮತ್ತು ಅವರು ಕೆಟ್ಟ ಸಹವಾಸ ಹಾಗೂ ಈ ಲೋಕದಲ್ಲಿ ವ್ಯಾಪಿಸಿರುವ ಅನೈತಿಕ, ದೇವನಿಂದಕ ಮಾರ್ಗಗಳನ್ನು ತೊರೆದರು. ಅವರು ದೀಕ್ಷಾಸ್ನಾನವನ್ನು ಪಡೆದಂದಿನಿಂದ, ಯೆಹೋವನು ಎಲ್ಲ ಕ್ರೈಸ್ತರಿಗಾಗಿ ಇಟ್ಟಿರುವ ಮಟ್ಟಗಳಿಗನುಸಾರ ಜೀವಿಸುವುದನ್ನು ಮುಂದುವರಿಸಿದ್ದಾರೆ. (ಎಫೆಸ 5:5) ಸತ್ಯವು ನಿಮಗೆ ಅಷ್ಟೇ ಅಮೂಲ್ಯವಾಗಿದೆಯೊ?

ಯೆಹೋವನು ನಮ್ಮ ಆರೈಕೆಮಾಡುತ್ತಾನೆ

8. ಯೆಹೋವನು ನಮ್ಮ ಸಮರ್ಪಣೆಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತಾನೆ, ಮತ್ತು ‘ಮೊದಲು ರಾಜ್ಯಕ್ಕಾಗಿ ತವಕಪಡುವುದು’ ಏಕೆ ವಿವೇಕಯುತವಾದದ್ದಾಗಿದೆ?

8 ನಮಗೆ ಅಪರಿಪೂರ್ಣತೆಗಳಿರುವುದಾದರೂ, ಯೆಹೋವನು ಕೃಪಾಪೂರ್ಣನಾಗಿ ನಮ್ಮ ಸಮರ್ಪಣೆಯನ್ನು ಸ್ವೀಕರಿಸುತ್ತಾನೆ. ಸಾಂಕೇತಿಕವಾಗಿ ಹೇಳುವುದಾದರೆ, ನಮ್ಮನ್ನು ತನ್ನ ಬಳಿ ಎಳೆದುಕೊಳ್ಳಲಿಕ್ಕಾಗಿ ಆತನು ಬಗ್ಗುತ್ತಾನೆ. ಹೀಗೆ ಆತನು, ನಾವು ನಮ್ಮ ಗುರಿಗಳನ್ನೂ ಆಸೆಗಳನ್ನೂ ಉನ್ನತಗೊಳಿಸುವಂತೆ ಕಲಿಸುತ್ತಾನೆ. (ಕೀರ್ತನೆ 113:​6-8) ಅದೇ ಸಮಯದಲ್ಲಿ ನಾವು ಆತನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳುವಂತೆ ಯೆಹೋವನು ಅನುಮತಿಸುತ್ತಾನೆ. ಮತ್ತು ನಾವು “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಟ್ಟರೆ ನಮ್ಮ ಆರೈಕೆಮಾಡುವನೆಂದು ವಾಗ್ದಾನಿಸುತ್ತಾನೆ. ನಾವಿದನ್ನು ಮಾಡುವಲ್ಲಿ ಮತ್ತು ಆತ್ಮಿಕವಾಗಿ ನಮ್ಮನ್ನೇ ರಕ್ಷಿಸಿಕೊಳ್ಳುವಲ್ಲಿ, “ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು” ಎಂದು ಆತನು ವಾಗ್ದಾನಿಸುತ್ತಾನೆ.​—ಮತ್ತಾಯ 6:33.

9. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರು, ಮತ್ತು ಈ ‘ಆಳನ್ನು’ ಉಪಯೋಗಿಸುತ್ತಾ ಯೆಹೋವನು ಹೇಗೆ ನಮ್ಮ ಆರೈಕೆಮಾಡುತ್ತಾನೆ?

9 ಯೇಸು ಕ್ರಿಸ್ತನು ತನ್ನ 12 ಮಂದಿ ಅಪೊಸ್ತಲರನ್ನು ಆಯ್ಕೆಮಾಡಿ, ಹೀಗೆ ‘ದೇವರ ಇಸ್ರಾಯೇಲ್‌’ ಎಂದು ಹೆಸರಿಸಲ್ಪಟ್ಟ ಅಭಿಷಿಕ್ತ ಕ್ರೈಸ್ತರ ಸಭೆಗಾಗಿ ಅಸ್ತಿವಾರವನ್ನು ಹಾಕಿದನು. (ಗಲಾತ್ಯ 6:16; ಪ್ರಕಟನೆ 21:​9, 14) ಈ ಸಭೆಯನ್ನು ಅನಂತರ, ‘ಜೀವಸ್ವರೂಪನಾದ ದೇವರ ಸಭೆ, ಸತ್ಯಕ್ಕೆ ಸ್ತಂಭ ಮತ್ತು ಆಧಾರ’ ಎಂದು ವರ್ಣಿಸಲಾಯಿತು. (1 ತಿಮೊಥೆಯ 3:15) ಆ ಸಭೆಯ ಸದಸ್ಯರನ್ನು ಯೇಸು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು” ಎಂದು ಗುರುತಿಸಿದನು. ಆ ನಂಬಿಗಸ್ತ ಸೇವಕನು, ಕ್ರೈಸ್ತರಿಗೆ ‘ಹೊತ್ತುಹೊತ್ತಿಗೆ ಆಹಾರವನ್ನು ಕೊಡುವ’ ಜವಾಬ್ದಾರಿಯುಳ್ಳವನಾಗಿದ್ದಾನೆ ಎಂದು ಯೇಸು ಹೇಳಿದನು. (ಮತ್ತಾಯ 24:​3, 45-47; ಲೂಕ 12:42) ಆಹಾರವಿಲ್ಲದಿರುವಲ್ಲಿ, ನಾವು ಹಸಿವೆಯಿಂದ ಸಾಯುತ್ತೇವೆ. ಅಂತೆಯೇ, ಆತ್ಮಿಕ ಆಹಾರವಿಲ್ಲದೆ ನಾವು ದುರ್ಬಲರಾಗಿ ಆತ್ಮಿಕವಾಗಿ ಸಾಯುವೆವು. ಆದುದರಿಂದ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಅಸ್ತಿತ್ವವು, ಯೆಹೋವನು ನಮ್ಮ ಆರೈಕೆಮಾಡುತ್ತಾನೆಂಬುದಕ್ಕೆ ಇನ್ನೊಂದು ಪುರಾವೆಯಾಗಿದೆ. ಆ ‘ಆಳಿನ’ ಮೂಲಕ ನಮಗಾಗಿ ಮಾಡಲಾಗುವ ಅಮೂಲ್ಯವಾದ ಆತ್ಮಿಕ ಏರ್ಪಾಡುಗಳನ್ನೂ ನಾವು ಯಾವಾಗಲೂ ತುಂಬ ಗಣ್ಯಮಾಡುತ್ತಿರೋಣ.​—ಮತ್ತಾಯ 5:3.

10. ಕೂಟಗಳಲ್ಲಿ ಕ್ರಮವಾಗಿ ಹಾಜರಿರುವುದು ಏಕೆ ಅತ್ಯಾವಶ್ಯಕವಾಗಿದೆ?

10 ಆತ್ಮಿಕ ಆಹಾರವನ್ನು ತೆಗೆದುಕೊಳ್ಳುವುದರಲ್ಲಿ ವೈಯಕ್ತಿಕ ಅಧ್ಯಯನವು ಸೇರಿರುತ್ತದೆ. ಅದರಲ್ಲಿ ಬೇರೆ ಕ್ರೈಸ್ತರೊಂದಿಗೆ ಸಹವಾಸಮಾಡುವುದು ಮತ್ತು ಸಭಾ ಕೂಟಗಳಿಗೆ ಹಾಜರಾಗುವುದೂ ಒಳಗೂಡಿದೆ. ನೀವು ಆರು ತಿಂಗಳುಗಳ ಹಿಂದೆ, ಇಲ್ಲವೆ ಇತ್ತೀಚೆಗೆ ಆರು ವಾರಗಳ ಹಿಂದೆ ಏನು ತಿಂದಿರಿ ಎಂಬುದು ಸರಿಯಾಗಿ ನೆನಪಿದೆಯೊ? ಬಹುಶಃ ಇಲ್ಲ. ಹಾಗಿದ್ದರೂ, ನೀವೇನನ್ನು ತಿಂದಿರೊ ಅದು ನಿಮ್ಮನ್ನು ಪೋಷಿಸಲಿಕ್ಕಾಗಿ ಬೇಕಾಗಿದ್ದ ಪೌಷ್ಟಿಕತೆಯನ್ನು ಕೊಟ್ಟಿತು. ಮತ್ತು ಅಂದಿನಿಂದ ನೀವು ಬಹುಶಃ ಅದೇ ರೀತಿಯ ಆಹಾರವನ್ನು ತಿಂದಿರಬಹುದು. ನಮ್ಮ ಕ್ರೈಸ್ತ ಕೂಟಗಳಲ್ಲಿ ಒದಗಿಸಲ್ಪಡುವ ಆತ್ಮಿಕ ಆಹಾರದ ಕುರಿತಾಗಿಯೂ ಇದು ಸತ್ಯವಾಗಿದೆ. ನಾವು ಕೂಟಗಳಲ್ಲಿ ಏನನ್ನು ಕೇಳಿದ್ದೇವೊ ಅದರ ಕುರಿತಾದ ಪ್ರತಿಯೊಂದೂ ವಿವರವು ನಮಗೆ ಕೂಲಂಕಷವಾಗಿ ನೆನಪಿರಲಿಕ್ಕಿಲ್ಲ. ಮತ್ತು ಅದೇ ರೀತಿಯ ಮಾಹಿತಿಯು ಒಂದಕ್ಕಿಂತಲೂ ಹೆಚ್ಚು ಬಾರಿ ಒದಗಿಸಲ್ಪಟ್ಟಿರುತ್ತದೆ. ಆದರೂ ಅದು ಆತ್ಮಿಕ ಆಹಾರವಾಗಿದೆ ಮತ್ತು ನಮ್ಮ ಕ್ಷೇಮಕ್ಕಾಗಿ ಅತ್ಯಾವಶ್ಯಕವಾಗಿದೆ. ನಮ್ಮ ಕೂಟಗಳು ಯಾವಾಗಲೂ ಒಳ್ಳೆಯ ಆತ್ಮಿಕ ಪೋಷಣೆಯನ್ನು ಸರಿಯಾದ ಸಮಯದಲ್ಲಿ ಒದಗಿಸುತ್ತವೆ.

11. ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ ನಮಗೆ ಯಾವ ಕರ್ತವ್ಯಗಳನ್ನು ಪೂರೈಸಲಿಕ್ಕಿದೆ?

11 ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ನಮ್ಮ ಮೇಲೆ ಒಂದು ಜವಾಬ್ದಾರಿಯನ್ನೂ ಹಾಕುತ್ತದೆ. ಕ್ರೈಸ್ತರು, ಸಭೆಯಲ್ಲಿರುವ ಜೊತೆ ಸದಸ್ಯರನ್ನು ‘ಪ್ರೀತಿಸುತ್ತಿರಲೂ ಸತ್ಕಾರ್ಯಮಾಡುತ್ತಿರಲೂ’ ಪ್ರೇರೇಪಿಸುತ್ತಾ, ‘ಒಬ್ಬರನ್ನೊಬ್ಬರು ಎಚ್ಚರಿಸುವಂತೆ’ ಬುದ್ಧಿವಾದ ಕೊಡಲಾಗಿದೆ. ಎಲ್ಲ ಕ್ರೈಸ್ತ ಕೂಟಗಳಿಗಾಗಿ ತಯಾರಿಯನ್ನು ಮಾಡುವುದು, ಹಾಜರಾಗುವುದು ಮತ್ತು ಅವುಗಳಲ್ಲಿ ಭಾಗವಹಿಸುವುದು ವ್ಯಕ್ತಿಗತವಾಗಿ ನಮಗೆ ನಂಬಿಕೆಯನ್ನು ಬಲಪಡಿಸುವಂಥದ್ದಾಗಿದೆ ಮತ್ತು ಇತರರಿಗೆ ಉತ್ತೇಜನದಾಯಕವಾಗಿದೆ. (ಇಬ್ರಿಯ 10:​23-25) ಊಟ ಎಂದಾಕ್ಷಣ ಮೂಗು ಮುರಿಯುವ ಚಿಕ್ಕ ಮಕ್ಕಳಂತೆ, ಕೆಲವರಿಗೆ ಆತ್ಮಿಕ ಪೋಷಣೆಯನ್ನು ತೆಗೆದುಕೊಳ್ಳಲು ಸತತವಾದ ಪ್ರೋತ್ಸಾಹದ ಅಗತ್ಯವಿರಬಹುದು. (ಎಫೆಸ 4:​12) ಅಂಥವರು ಪ್ರೌಢ ಕ್ರೈಸ್ತರಾಗಿ ಬೆಳೆಯುವಂತೆ, ಅಗತ್ಯವಿರುವಾಗಲೆಲ್ಲಾ ಅಂಥ ಪ್ರೋತ್ಸಾಹವನ್ನು ಕೊಡುವುದು ಪ್ರೀತಿಪರವಾದದ್ದಾಗಿದೆ. ಇಂಥವರ ಬಗ್ಗೆ ಅಪೊಸ್ತಲ ಪೌಲನು ಬರೆದುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.”​—ಇಬ್ರಿಯ 5:14.

ನಮ್ಮ ಆತ್ಮಿಕ ಆರೈಕೆಯನ್ನು ಮಾಡಿಕೊಳ್ಳುವುದು

12. ನಾವು ಸತ್ಯದಲ್ಲಿ ಉಳಿಯುವುದಕ್ಕಾಗಿ ಯಾರ ಮೇಲೆ ದೊಡ್ಡ ಜವಾಬ್ದಾರಿಯಿದೆ? ವಿವರಿಸಿರಿ.

12 ನಮ್ಮ ವಿವಾಹ ಸಂಗಾತಿ ಇಲ್ಲವೆ ನಮ್ಮ ಹೆತ್ತವರು ನಮ್ಮನ್ನು ಸತ್ಯದ ಮಾರ್ಗದಲ್ಲಿ ನಡೆಯುತ್ತಾ ಇರುವಂತೆ ಪ್ರೋತ್ಸಾಹಿಸಬಲ್ಲರು. ಹಾಗೆಯೇ, ಸಭಾ ಹಿರಿಯರು ತಮ್ಮ ಆರೈಕೆಯಲ್ಲಿರುವ ಹಿಂಡಿನ ಭಾಗವಾಗಿ ನಮ್ಮ ಕುರಿಪಾಲನೆ ಮಾಡಬಲ್ಲರು. (ಅ. ಕೃತ್ಯಗಳು 20:28) ಆದರೆ ಸತ್ಯದ ಮೇಲೆ ಆಧಾರಿತವಾಗಿರುವ ಜೀವನ ಮಾರ್ಗದಲ್ಲಿ ನಾವು ಪಟ್ಟುಹಿಡಿಯಬೇಕಾದರೆ, ಅತಿ ದೊಡ್ಡ ಜವಾಬ್ದಾರಿಯು ಯಾರಿಗಿದೆ? ನಿಜವಾಗಿಯೂ ಆ ಜವಾಬ್ದಾರಿ ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಇದೆ. ಮತ್ತು ಇದು ಸಾಮಾನ್ಯ ಪರಿಸ್ಥಿತಿಗಳಲ್ಲೂ, ಕಷ್ಟಕರ ಸಮಯಗಳಲ್ಲೂ ಸತ್ಯವಾಗಿದೆ. ಈ ಮುಂದಿನ ಘಟನೆಯನ್ನು ಪರಿಗಣಿಸಿರಿ.

13, 14. ಒಂದು ಕುರಿಮರಿಯ ಕುರಿತಾದ ಅನುಭವದಲ್ಲಿ ದೃಷ್ಟಾಂತಿಸಲ್ಪಟ್ಟಂತೆ, ನಮಗೆ ಅಗತ್ಯವಿರುವ ಆತ್ಮಿಕ ಸಹಾಯವನ್ನು ನಾವು ಹೇಗೆ ಪಡೆದುಕೊಳ್ಳಬಹುದು?

13 ಸ್ಕಾಟ್‌ಲೆಂಡ್‌ನಲ್ಲಿ ಕೆಲವು ಕುರಿಮರಿಗಳು ಒಂದು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದವು. ಅವುಗಳಲ್ಲಿ ಒಂದು ಕುರಿಮರಿಯು, ಒಂದು ಗುಡ್ಡದ ಅಂಚಿನಲ್ಲಿ ಅಲೆದಾಡಿ, ಕೆಳಗಿದ್ದ ಚಾಚಿನ ಮೇಲೆ ಬಿತ್ತು. ಅದಕ್ಕೆ ಯಾವುದೇ ಗಾಯಗಳಾಗಿರದಿದ್ದರೂ, ಅದು ತುಂಬ ಹೆದರಿದ್ದರಿಂದ, ಪುನಃ ಮೇಲೆ ಹತ್ತಿ ಬರಲು ಅಶಕ್ತವಾಗಿತ್ತು. ಆಗ ಅದು ಗೋಳುಕರೆಯಿಂದ ಅರಚಲಾರಂಭಿಸಿತು. ಅದರ ತಾಯಿಯು ಇದನ್ನು ಕೇಳಿಸಿಕೊಂಡಿತು, ಮತ್ತು ಅದು ಸಹ ಅರಚಲಾರಂಭಿಸಿತು. ಕುರುಬನು ಬಂದು ಆ ಕುರಿಮರಿಯನ್ನು ಪುನಃ ಹಿಂದೆ ತರುವ ವರೆಗೆ ಅದು ಹಾಗೆಯೇ ಅರಚುತ್ತಾ ಇತ್ತು.

14 ಈ ಘಟನೆಗಳ ಹಂತಗಳನ್ನು ಗಮನಿಸಿರಿ. ಮೊದಲು ಕುರಿಮರಿಯು ಸಹಾಯಕ್ಕಾಗಿ ಕೂಗಾಡಿತು, ನಂತರ ತಾಯಿ ಕುರಿಯು ತನ್ನ ದನಿಗೂಡಿಸಿತು, ಮತ್ತು ಇದರಿಂದಾಗಿ ಚುರುಕುಗೊಂಡ ಕುರುಬನು, ಆ ಕುರಿಮರಿಯನ್ನು ರಕ್ಷಿಸಲು ಕಾರ್ಯಪ್ರವೃತ್ತನಾದನು. ಒಂದು ಎಳೆಯ ಪ್ರಾಣಿ ಮತ್ತು ಅದರ ತಾಯಿಗೆ ಅಪಾಯದ ಅರಿವಾಗಿ, ಅವು ತತ್‌ಕ್ಷಣವೇ ಸಹಾಯಕ್ಕಾಗಿ ಕೂಗಸಾಧ್ಯವಿರುವಲ್ಲಿ, ನಾವು ಆತ್ಮಿಕವಾಗಿ ಎಡವಿಬೀಳುವಾಗ ಅಥವಾ ಸೈತಾನನ ಲೋಕದಿಂದ ಅನಿರೀಕ್ಷಿತವಾದ ಅಪಾಯಗಳನ್ನು ಎದುರಿಸುವಾಗ ನಾವೂ ಅದನ್ನೇ ಮಾಡಬೇಕಲ್ಲವೇ? (ಯಾಕೋಬ 5:​14, 15; 1 ಪೇತ್ರ 5:8) ನಾವು ಹಾಗೆ ಮಾಡಲೇಬೇಕು. ವಿಶೇಷವಾಗಿ ನಾವು ಎಳೆಯರಾಗಿರುವುದರಿಂದ ಇಲ್ಲವೇ ತುಲನಾತ್ಮಕವಾಗಿ ಸತ್ಯದಲ್ಲಿ ಹೊಸಬರಾಗಿರುವುದರಿಂದ, ಅನುಭವದ ಕೊರತೆಯುಳ್ಳವರಾಗಿರುವಲ್ಲಿ ಅದನ್ನು ಮಾಡಬೇಕು.

ದೈವಿಕ ಮಾರ್ಗದರ್ಶನವನ್ನು ಅನುಸರಿಸುವುದು ಸಂತೋಷವನ್ನು ತರುತ್ತದೆ

15. ಒಬ್ಬ ಮಹಿಳೆಯು ಕ್ರೈಸ್ತ ಸಭೆಯೊಂದಿಗೆ ಸಹವಾಸಿಸಲಾರಂಭಿಸಿದಾಗ ಅವರಿಗೆ ಹೇಗನಿಸಿತು?

15 ಬೈಬಲ್‌ ತಿಳಿವಳಿಕೆಯ ಮೌಲ್ಯವನ್ನು ಮತ್ತು ಸತ್ಯ ದೇವರನ್ನು ಸೇವಿಸುವವರಿಗೆ ಅದು ತರುವಂಥ ಮನಶ್ಶಾಂತಿಯನ್ನು ಪರಿಗಣಿಸಿರಿ. ಜೀವನದುದ್ದಕ್ಕೂ ಚರ್ಚ್‌ ಆಫ್‌ ಇಂಗ್ಲೆಂಡ್‌ಗೆ ಹೋಗುತ್ತಿದ್ದ ಒಬ್ಬ 70 ವರ್ಷ ಪ್ರಾಯದ ಮಹಿಳೆಯು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ವೈಯಕ್ತಿಕವಾಗಿ ಅಧ್ಯಯನ ಮಾಡಲು ಒಪ್ಪಿಕೊಂಡರು. ದೇವರ ಹೆಸರು ಯೆಹೋವ ಎಂದಾಗಿದೆಯೆಂಬುದನ್ನು ಅವರು ಬೇಗನೆ ಕಲಿತುಕೊಂಡರು, ಮತ್ತು ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಹೇಳಲಾಗುತ್ತಿದ್ದ ಹೃತ್ಪೂರ್ವಕ ಪ್ರಾರ್ಥನೆಗಳಿಗೆ “ಆಮೆನ್‌” ಎಂದು ಹೇಳುವುದರಲ್ಲಿ ಜೊತೆಗೂಡಿದರು. ತುಂಬ ಭಾವುಕತೆಯಿಂದ ಅವರಂದದ್ದು: “ದೇವರು ಬರೀ ಮನುಷ್ಯರಾದ ನಮಗಿಂತಲೂ ಎಷ್ಟೋ ಮೇಲಿರುವಂತೆ ಚಿತ್ರಿಸುವುದರ ಬದಲು, ನೀವು ಆತನನ್ನು ಒಬ್ಬ ಪ್ರಿಯ ಮಿತ್ರನಂತೆ ನಮ್ಮ ಮಧ್ಯದಲ್ಲೇ ಇರುವಂತೆ ಮಾಡುತ್ತೀರಿ. ನನಗೆಂದೂ ಈ ರೀತಿಯ ಅನುಭವವಾಗಿಲ್ಲ.” ಸತ್ಯವು ಮನಸ್ಸಿನ ಮೇಲೆ ಅಚ್ಚೊತ್ತಿದ ಆ ಮೊತ್ತಮೊದಲ ಅಭಿಪ್ರಾಯವನ್ನು ಆ ಪ್ರಿಯ ಆಸಕ್ತ ವ್ಯಕ್ತಿಯು ಎಂದಿಗೂ ಮರೆಯಲಿಕ್ಕಿಲ್ಲ. ಅದೇ ರೀತಿಯಲ್ಲಿ, ನಾವು ಸತ್ಯವನ್ನು ಮೊತ್ತಮೊದಲು ಸ್ವೀಕರಿಸಿದಾಗ ಅದು ನಮಗೆಷ್ಟು ಅಮೂಲ್ಯವಾಗಿತ್ತೆಂಬುದನ್ನು ನಾವು ಸಹ ಎಂದಿಗೂ ಮರೆಯದಿರೋಣ.

16. (ಎ) ಹಣವನ್ನು ಗಳಿಸುವುದನ್ನೇ ನಾವು ನಮ್ಮ ಮುಖ್ಯ ಗುರಿಯನ್ನಾಗಿ ಮಾಡುವಲ್ಲಿ ಏನಾಗಸಾಧ್ಯವಿದೆ? (ಬಿ) ನಾವು ನಿಜ ಸಂತೋಷವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ?

16 ತಮ್ಮ ಬಳಿ ಹೆಚ್ಚು ಹಣ ಇರುತ್ತಿದ್ದರೆ, ತಾವು ಹೆಚ್ಚು ಸಂತೋಷದಿಂದಿರುತ್ತಿದ್ದೆವು ಎಂದು ಅನೇಕರು ನೆನಸುತ್ತಾರೆ. ಆದರೆ ಹಣ ಸಂಪಾದಿಸುವುದನ್ನೇ ನಾವು ನಮ್ಮ ಬದುಕಿನ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳುವಲ್ಲಿ, ನಾವು “ಹೇಳಲಾಗದಷ್ಟು ಮನೋವೇದನೆಗಳನ್ನು” ಅನುಭವಿಸಬಹುದು. (1 ತಿಮೊಥೆಯ 6:​10, ಫಿಲಿಪ್ಸ್‌) ಎಷ್ಟೊಂದು ಜನರು ಐಶ್ವರ್ಯವನ್ನು ಪಡೆಯುವ ಕನಸುಕಾಣುತ್ತಾ ಲಾಟರಿ ಟಿಕೇಟುಗಳನ್ನು ಖರೀದಿಸುತ್ತಾರೆ, ಜೂಜುಗೃಹಗಳಲ್ಲಿ ಹಣವನ್ನು ಪೋಲುಮಾಡುತ್ತಾರೆ, ಇಲ್ಲವೇ ಸ್ಟಾಕ್‌ಮಾರ್ಕೆಟ್‌ನಲ್ಲಿ ಹಣಹಾಕುತ್ತಾರೆ. ಆದರೆ ತೀರ ಕಡಿಮೆ ಜನರು ಮಾತ್ರ, ತಾವು ನಿರೀಕ್ಷಿಸುವ ಐಶ್ವರ್ಯವನ್ನು ಗಳಿಸುತ್ತಾರೆ. ಮತ್ತು ಐಶ್ವರ್ಯವನ್ನು ಗಳಿಸಿದವರು ಕೂಡ, ತಮಗೆ ಥಟ್ಟನೆ ಒದಗಿಬಂದ ಐಶ್ವರ್ಯವು ಸಂತೋಷವನ್ನು ತರುವುದಿಲ್ಲವೆಂಬುದನ್ನು ಅನೇಕವೇಳೆ ಕಂಡುಕೊಂಡಿದ್ದಾರೆ. ಅದರ ಬದಲು ಸದಾ ಬಾಳುವಂಥ ಸಂತೋಷವು, ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನ ಹಾಗೂ ಆತನ ದೇವದೂತರ ಸಹಾಯದೊಂದಿಗೆ, ಕ್ರೈಸ್ತ ಸಭೆಯೊಂದಿಗೆ ಕೆಲಸಮಾಡುತ್ತಾ ಯೆಹೋವನ ಚಿತ್ತವನ್ನು ಮಾಡುವುದರಿಂದ ಸಿಗುತ್ತದೆ. (ಕೀರ್ತನೆ 1:​1-3; 84:​4, 5; 89:15) ನಾವಿದನ್ನು ಮಾಡುವಾಗ, ನಮಗೆ ಅನಿರೀಕ್ಷಿತವಾದ ಆಶೀರ್ವಾದಗಳು ಸಿಗಬಹುದು. ಸತ್ಯವು ನಿಮಗೆ ನಿಮ್ಮ ಜೀವಿತದಲ್ಲಿ ಅಂಥ ಆಶೀರ್ವಾದಗಳನ್ನು ತರುವಷ್ಟು ಅಮೂಲ್ಯವಾಗಿದೆಯೊ?

17. ಪೇತ್ರನು ಚರ್ಮಕಾರನಾದ ಸೀಮೋನನ ಮನೆಯಲ್ಲಿ ತಂಗಿದ್ದು, ಆ ಅಪೊಸ್ತಲನ ಮನೋಭಾವದ ಬಗ್ಗೆ ಏನನ್ನು ತೋರಿಸಿತು?

17 ಅಪೊಸ್ತಲ ಪೇತ್ರನ ಒಂದು ಅನುಭವವನ್ನು ಪರಿಗಣಿಸಿರಿ. ಸಾ.ಶ. 36ರಲ್ಲಿ ಅವನು ಸಾರೋನಪ್ರಾಂತ್ಯಕ್ಕೆ ಮಿಷನೆರಿಯಾಗಿ ಪ್ರಯಾಣಮಾಡಿದನು. ಅವನು ಲುದ್ದದಲ್ಲಿಯೂ ತಂಗಿದನು. ಅಲ್ಲಿ ಅವನು ಐನೇಯನೆಂಬ ಪಾರ್ಶ್ವವಾಯುರೋಗಿಯನ್ನು ಗುಣಪಡಿಸಿ, ಯೊಪ್ಪ ಎಂಬ ಸಮುದ್ರಬಂದರಿಗೆ ಮುಂದುವರಿದನು. ಅಲ್ಲಿ ಅವನು ದೊರ್ಕಳನ್ನು ಪುನರುತ್ಥಾನಗೊಳಿಸಿದನು. ಅ. ಕೃತ್ಯಗಳು 9:43 ನಮಗನ್ನುವುದು: “ಪೇತ್ರನು ಯೊಪ್ಪದಲ್ಲಿ ಚರ್ಮಕಾರನಾದ ಸೀಮೋನನೆಂಬವನ ಬಳಿಯಲ್ಲಿ ಬಹಳ ದಿವಸದ ವರೆಗೂ ಇದ್ದನು.” ಈ ಚಿಕ್ಕ ವಿವರವು, ಪೇತ್ರನು ಆ ನಗರದಲ್ಲಿದ್ದ ಜನರ ಸೇವೆಮಾಡುತ್ತಿದ್ದಾಗ ಅವನಿಗಿದ್ದ ನಿಷ್ಪಕ್ಷಪಾತ ಮನೋಭಾವವನ್ನು ತೋರಿಸುತ್ತದೆ. ಹೇಗೆ? ಫೆಡ್‌ರಿಕ್‌ ಡಬ್ಲ್ಯೂ. ಫರಾರ್‌ ಎಂಬ ಬೈಬಲ್‌ ವಿದ್ವಾಂಸರು ಬರೆದುದು: “ಮೌಖಿಕ [ಮೋಶೆಯ] ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಮತ್ತು ಚಾಚೂತಪ್ಪದೇ ಅನುಸರಿಸುತ್ತಿದ್ದ ಯಾವನೇ ವ್ಯಕ್ತಿಯು, ಒಬ್ಬ ಚರ್ಮಕಾರನ ಮನೆಯಲ್ಲಿ ವಾಸಿಸುತ್ತಿರಲಿಲ್ಲ. ಈ ಕಸಬಿನಲ್ಲಿ ಮತ್ತು ಅದಕ್ಕೆ ಅಗತ್ಯವಿದ್ದ ಸಾಮಗ್ರಿಗಳಿಗಾಗಿ ವಿಭಿನ್ನ ಪ್ರಾಣಿಗಳ ಚರ್ಮ ಮತ್ತು ಕಳೇಬರಗಳೊಂದಿಗೆ ದಿನಾಲೂ ಸಂಪರ್ಕವಾಗುತ್ತಿದ್ದದರಿಂದ, ಅದು ಅಶುದ್ಧವೂ, ಎಲ್ಲ ಕಟ್ಟುನಿಟ್ಟಾದ ಕಾನೂನುಪಾಲಕರ ದೃಷ್ಟಿಯಲ್ಲಿ ಹೇಯವಾದದ್ದೂ ಆಗಿತ್ತು.” ಸೀಮೋನನ ‘ಸಮುದ್ರದ ಬಳಿಯಲ್ಲಿದ್ದ ಮನೆಯು’ ಅವನ ಚರ್ಮಶಾಲೆಯ ಪಕ್ಕದಲ್ಲೇ ಇರದೇ ಇದ್ದರೂ, ಸೀಮೋನನು ಯಾವ ಕಸಬಿನಲ್ಲಿ ತೊಡಗಿದ್ದನೊ ‘ಆ ಕಸಬು ಹೇವರಿಕೆಯಿಂದ ದೃಷ್ಟಿಸಲ್ಪಡುತ್ತಿತ್ತು ಮತ್ತು ಹೀಗೆ ಆ ಕಸಬಿನವರ ಸ್ವಗೌರವವನ್ನು ಕಡಿಮೆಗೊಳಿಸುತ್ತಿತ್ತು’ ಎಂದು ಫರಾರ್‌ ಹೇಳುತ್ತಾರೆ.​—ಅ. ಕೃತ್ಯಗಳು 10:6.

18, 19. (ಎ) ಪೇತ್ರನು ಪಡೆದಂಥ ದರ್ಶನದಿಂದಾಗಿ ಅವನು ಕಳವಳಗೊಂಡದ್ದೇಕೆ? (ಬಿ) ಪೇತ್ರನು ಯಾವ ಅನಿರೀಕ್ಷಿತ ಆಶೀರ್ವಾದವನ್ನು ಪಡೆದನು?

18 ನಿಷ್ಪಕ್ಷಪಾತ ಮನೋಭಾವವುಳ್ಳ ಪೇತ್ರನು ಸೀಮೋನನ ಅತಿಥಿಸತ್ಕಾರವನ್ನು ಸ್ವೀಕರಿಸಿದನು ಮತ್ತು ಅಲ್ಲಿ ಪೇತ್ರನಿಗೆ ಅನಿರೀಕ್ಷಿತವಾಗಿ ದೈವಿಕ ಮಾರ್ಗದರ್ಶನವು ಸಿಕ್ಕಿತು. ಯೆಹೂದಿ ನಿಯಮಕ್ಕನುಸಾರ ಅಶುದ್ಧವಾಗಿದ್ದ ಪಶುಗಳನ್ನು ತಿನ್ನುವಂತೆ ಆಜ್ಞಾಪಿಸಲ್ಪಟ್ಟ ಒಂದು ದರ್ಶನವನ್ನು ಅವನು ನೋಡಿದನು. ಆಗ ಪೇತ್ರನು, ತಾನು “ಎಂದೂ ಹೊಲೆ ಪದಾರ್ಥವನ್ನಾಗಲಿ ಅಶುದ್ಧ ಪದಾರ್ಥವನ್ನಾಗಲಿ ತಿಂದವನಲ್ಲ” ಎಂದು ಆಕ್ಷೇಪಿಸಿದನು. ಆದರೆ ಅವನಿಗೆ ಮೂರು ಸಲ, “ದೇವರು ಶುದ್ದಮಾಡಿದ್ದನ್ನು ನೀನು ಹೊಲೆ ಎನ್ನಬೇಡ” ಎಂದು ಹೇಳಲಾಯಿತು. ಆದುದರಿಂದ, “ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ”ಪಟ್ಟದ್ದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ.​—ಅ. ಕೃತ್ಯಗಳು 10:​5-17; 11:​7-10.

19 ಹಿಂದಿನ ದಿನ ಸುಮಾರು 50 ಕಿಲೊಮೀಟರ್‌ ದೂರದಲ್ಲಿದ್ದ ಕೈಸರೈಯದಲ್ಲಿ, ಕೊರ್ನೇಲ್ಯ ಎಂಬ ಹೆಸರಿನ ಒಬ್ಬ ಅನ್ಯಜನಾಂಗದ ವ್ಯಕ್ತಿಗೂ ಒಂದು ದರ್ಶನವಾಗಿತ್ತೆಂಬುದು ಪೇತ್ರನಿಗೆ ಗೊತ್ತಿರಲಿಲ್ಲ. ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇಳುಕೊಂಡಿದ್ದ ಪೇತ್ರನನ್ನು ಹುಡುಕುವಂತೆ ಸೇವಕರನ್ನು ಕಳುಹಿಸಲು ಯೆಹೋವನ ದೇವದೂತನು ಕೊರ್ನೇಲ್ಯನಿಗೆ ಸೂಚನೆಯನ್ನು ಕೊಟ್ಟಿದ್ದನು. ಕೊರ್ನೇಲ್ಯನು ತನ್ನ ಆಳುಗಳನ್ನು ಸೀಮೋನನ ಮನೆಗೆ ಕಳುಹಿಸಿದನು, ಮತ್ತು ಪೇತ್ರನು ಅವರೊಂದಿಗೆ ಕೈಸರೈಯಕ್ಕೆ ಬಂದನು. ಅಲ್ಲಿ ಅವನು ಕೊರ್ನೇಲ್ಯನಿಗೂ ಅವನ ಬಂಧುಬಳಗದವರಿಗೂ ಸಾರಿದನು. ಫಲಿತಾಂಶವಾಗಿ, ಅವರು ರಾಜ್ಯದ ವಾರಸುದಾರರಾಗಿ ಪವಿತ್ರಾತ್ಮವನ್ನು ಪಡೆದಂಥ, ಸುನ್ನತಿಯಿಲ್ಲದ ಅನ್ಯಜನಾಂಗದ ವಿಶ್ವಾಸಿಗಳಲ್ಲಿ ಮೊತ್ತಮೊದಲಿನವರಾದರು. ಪುರುಷರು ಸುನ್ನತಿಯನ್ನು ಮಾಡಿಸಿಕೊಂಡಿರದಿದ್ದರೂ, ಪೇತ್ರನ ಮಾತುಗಳನ್ನು ಕೇಳಿಸಿಕೊಂಡವರೆಲ್ಲರೂ ದೀಕ್ಷಾಸ್ನಾನಹೊಂದಿದರು. ಇದು, ಯೆಹೂದ್ಯರ ದೃಷ್ಟಿಕೋನದಲ್ಲಿ ಅಶುದ್ಧರೆಂದು ಅಭಿಪ್ರಯಿಸಲಾಗುತ್ತಿದ್ದ ಅನ್ಯಜನಾಂಗದ ಜನರು ಕ್ರೈಸ್ತ ಸಭೆಯ ಸದಸ್ಯರಾಗುವಂತೆ ಮಾರ್ಗವನ್ನು ತೆರೆಯಿತು. (ಅ. ಕೃತ್ಯಗಳು 10:​1-48; 11:18) ಪೇತ್ರನಿಗೆ ಇದು ಎಂಥ ಅಸಾಮಾನ್ಯವಾದ ಸುಯೋಗವಾಗಿತ್ತು! ಇದೆಲ್ಲವೂ ಸಾಧ್ಯವಾಗಲು ಕಾರಣ, ಸತ್ಯವು ಅವನಿಗೆ ಅಮೂಲ್ಯವಾಗಿದ್ದು, ಯೆಹೋವನಿಂದ ಬರುವ ನಿರ್ದೇಶನವನ್ನು ಪಾಲಿಸುವಂತೆ ಮತ್ತು ನಂಬಿಕೆಯಿಂದ ಕ್ರಿಯೆಗೈಯುವಂತೆ ಅವನನ್ನು ನಡೆಸಿದ್ದೇ ಆಗಿತ್ತು.

20. ನಾವು ನಮ್ಮ ಜೀವಿತಗಳಲ್ಲಿ ಸತ್ಯವನ್ನು ಪ್ರಥಮವಾಗಿಡುವಲ್ಲಿ ನಮಗೆ ಯಾವ ದೈವಿಕ ನೆರವು ಕೊಡಲ್ಪಡುತ್ತದೆ?

20 ಪೌಲನು ಬುದ್ಧಿವಾದ ನೀಡಿದ್ದು: “ಪ್ರೀತಿಯಿಂದ ಸತ್ಯವನ್ನನುಸರಿಸುತ್ತಾ ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು.” (ಓರೆ ಅಕ್ಷರಗಳು ನಮ್ಮವು.) (ಎಫೆಸ 4:15) ಹೌದು, ನಾವು ಸತ್ಯವನ್ನು ನಮ್ಮ ಜೀವನಗಳಲ್ಲಿ ಪ್ರಥಮವಾಗಿಡುವಲ್ಲಿ ಮತ್ತು ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮ್ಮ ಹೆಜ್ಜೆಗಳನ್ನು ನಿರ್ದೇಶಿಸುವಂತೆ ಅನುಮತಿಸುವಲ್ಲಿ, ಸತ್ಯವು ನಮಗೆ ಈಗಲೇ ಸರಿಸಾಟಿಯಿಲ್ಲದಷ್ಟು ಸಂತೋಷವನ್ನು ತರುವುದು. ಅಷ್ಟುಮಾತ್ರವಲ್ಲದೆ, ನಮ್ಮ ಸಾರುವ ಚಟುವಟಿಕೆಯಲ್ಲಿ ಪವಿತ್ರ ದೇವದೂತರು ಕೊಡುವ ಬೆಂಬಲವನ್ನೂ ಮನಸ್ಸಿನಲ್ಲಿಡಿರಿ. (ಪ್ರಕಟನೆ 14:​6, 7; 22:6) ಯೆಹೋವನು ನಮಗೆ ಮಾಡುವಂತೆ ನೇಮಿಸಿರುವ ಕೆಲಸದಲ್ಲಿ ಇಂಥ ಬೆಂಬಲವನ್ನು ಪಡೆದಿರಲು ನಾವೆಷ್ಟು ಸನ್ಮಾನಿತರು! ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ನಾವು ನಿತ್ಯತೆಗೂ ಸತ್ಯದ ದೇವರಾಗಿರುವ ಯೆಹೋವನನ್ನು ಸ್ತುತಿಸುವಂತೆ ನಡೆಸುವುದು. ಇದಕ್ಕಿಂತಲೂ ಅಮೂಲ್ಯವಾದದ್ದೇನಾದರೂ ಇರಬಲ್ಲದೊ?​—ಯೋಹಾನ 17:3.

ನಾವೇನು ಕಲಿತೆವು?

• ಅನೇಕರು ಸತ್ಯವನ್ನು ಏಕೆ ಸ್ವೀಕರಿಸುವುದಿಲ್ಲ?

• ಕ್ರೈಸ್ತರು ಸೈತಾನನ ಲೋಕದ ವಿಷಯಗಳನ್ನು ಹೇಗೆ ದೃಷ್ಟಿಸಬೇಕು?

• ಕೂಟಗಳ ಕುರಿತು ನಮ್ಮ ಮನೋಭಾವ ಏನಾಗಿರಬೇಕು, ಮತ್ತು ಏಕೆ?

• ನಮ್ಮ ಆತ್ಮಿಕ ಆರೈಕೆಯನ್ನು ಮಾಡಲು ನಮಗೆ ಯಾವ ಜವಾಬ್ದಾರಿಯಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮಹಾಸಮುದ್ರ

ಕೈಸರೈಯ

ಸಾರೋನಪ್ರಾಂತ್ಯ

ಯೊಪ್ಪ

ಲುದ್ದ

ಜೆರೂಸಲೇಮ್‌

[ಚಿತ್ರ]

ಪೇತ್ರನು ದೈವಿಕ ನಿರ್ದೇಶನವನ್ನು ಪಾಲಿಸಿ, ಅನಿರೀಕ್ಷಿತವಾದ ಆಶೀರ್ವಾದಗಳನ್ನು ಕೊಯ್ದನು

[ಕೃಪೆ]

ಭೂಪಟ: Mountain High Maps® Copyright © 1997 Digital Wisdom, Inc.

[ಪುಟ 13ರಲ್ಲಿರುವ ಚಿತ್ರ]

ಯೇಸು ಸತ್ಯಕ್ಕೆ ಸಾಕ್ಷಿಯನ್ನು ಕೊಟ್ಟನು

[ಪುಟ 15ರಲ್ಲಿರುವ ಚಿತ್ರ]

ಭೌತಿಕ ಆಹಾರದಂತೆ, ಆತ್ಮಿಕ ಆಹಾರವು ಸಹ ನಮ್ಮ ಕ್ಷೇಮಕ್ಕೆ ಅತ್ಯಾವಶ್ಯಕವಾಗಿದೆ