ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂಟಿತನವನ್ನು ನೀವು ಜಯಿಸಬಲ್ಲಿರಿ

ಒಂಟಿತನವನ್ನು ನೀವು ಜಯಿಸಬಲ್ಲಿರಿ

ಒಂಟಿತನವನ್ನು ನೀವು ಜಯಿಸಬಲ್ಲಿರಿ

ಒಂಟಿತನವು ತರುವ ಮನೋವೇದನೆಯನ್ನು ತಾನು ಎಂದಿಗೂ ಅನುಭವಿಸಿಲ್ಲ ಎಂದು ಯಾರು ಹೇಳಬಲ್ಲರು? ನಮಗೆ ಒಂಟಿತನದ ಅನಿಸಿಕೆಯನ್ನು ಬರಮಾಡುವ ಅನೇಕ ಅಂಶಗಳಿವೆ. ಪ್ರಾಮುಖ್ಯವಾಗಿ, ಎಂದೂ ಮದುವೆಯಾಗದ ಸ್ತ್ರೀಯರ ಅಥವಾ ವಿಧವೆಯಾದವರ ಇಲ್ಲವೇ ವಿಚ್ಛೇದಗೊಳಿಸಲ್ಪಟ್ಟವರ ಒಂಟಿತನವು ತೀವ್ರವಾಗಿರಬಲ್ಲದು.

ಉದಾಹರಣೆಗೆ, ಫ್ರಾನ್ಸಸ್‌ ಎಂಬ ಒಬ್ಬ ಯುವ ಕ್ರೈಸ್ತ ಸ್ತ್ರೀಯು ಹೇಳುವುದು: “ನಾನು 23 ವರ್ಷ ಪ್ರಾಯದವಳಾಗುವಷ್ಟರಲ್ಲಿ, ನನ್ನ ಎಲ್ಲ ಸ್ನೇಹಿತೆಯರಿಗೆ ಮದುವೆಯಾಗಿ ಹೋಗಿತ್ತು ಮತ್ತು ನಾನು ಮಾತ್ರ ಒಂಟಿಯಾಗಿ ಬಿಡಲ್ಪಟ್ಟಿದ್ದೇನೆ ಎಂಬ ಅನಿಸಿಕೆಯು ನನಗಾಯಿತು.” * ವರ್ಷಗಳು ಕಳೆದ ಹಾಗೆ ಏಕಾಂಗಿತನದ ಅನಿಸಿಕೆಯು ಹೆಚ್ಚಬಹುದು ಮತ್ತು ವಿವಾಹದ ಪ್ರತೀಕ್ಷೆಗಳು ಕಡಿಮೆಯಾಗುತ್ತಾ ಹೋಗಬಹುದು. “ಅವಿವಾಹಿತಳಾಗಿ ಉಳಿಯಬೇಕೆಂದು ನಾನು ಎಂದೂ ಮನಸ್ಸುಮಾಡಿರಲಿಲ್ಲ, ಮತ್ತು ಅವಕಾಶವು ಏಳುವುದಾದರೆ ನಾನು ಈಗಲೂ ಮದುವೆಯಾಗಲು ಬಯಸುತ್ತೇನೆ,” ಎಂದು ತನ್ನ 40ರ ವಯಸ್ಸಿನ ಕೊನೆಯಲ್ಲಿರುವ ಸ್ಯಾಂಡ್ರ ಒಪ್ಪಿಕೊಳ್ಳುತ್ತಾಳೆ. 50ರ ಪ್ರಾಯದಲ್ಲಿರುವ ಆ್ಯಂಜಲ ಸೂಚಿಸುವುದು: “ನಾನು ಅವಿವಾಹಿತಳಾಗಿ ಉಳಿಯಬೇಕು ಎಂಬ ದೃಢನಿರ್ಧಾರವನ್ನು ಮಾಡಿರಲಿಲ್ಲ, ಆದರೆ ಪರಿಸ್ಥಿತಿ ಹಾಗೆ ಮಾಡಿತು. ನಾನು ವಿಶೇಷ ಪಯನೀಯರಳಾಗಿ ನೇಮಿಸಲ್ಪಟ್ಟ ಕ್ಷೇತ್ರದಲ್ಲಿ ತೀರ ಕಡಿಮೆ ಅವಿವಾಹಿತ ಸಹೋದರರಿದ್ದರು.”

ಶ್ಲಾಘನೀಯವಾಗಿ, ಅನೇಕ ಕ್ರೈಸ್ತ ಸ್ತ್ರೀಯರು ಮದುವೆ ಮಾಡಿಕೊಳ್ಳದೆ ಉಳಿಯುವ ಆಯ್ಕೆಮಾಡುತ್ತಾರೆ, ಏಕೆಂದರೆ ಅವರು “ಕರ್ತನಲ್ಲಿ ಮಾತ್ರ” ವಿವಾಹವಾಗಬೇಕು ಎಂಬ ಯೆಹೋವನ ಬುದ್ಧಿವಾದಕ್ಕೆ ನಿಷ್ಠೆಯಿಂದ ಅಧೀನರಾಗುತ್ತಿದ್ದಾರೆ. (1 ಕೊರಿಂಥ 7:​39, NW) ಅವಿವಾಹಿತ ಪರಿಸ್ಥಿತಿಗೆ ಕೆಲವರು ತುಂಬ ಚೆನ್ನಾಗಿಯೇ ಹೊಂದಿಕೊಳ್ಳುತ್ತಾರೆ, ಆದರೆ ವರ್ಷಗಳು ಕಳೆದಂತೆ ಮದುವೆಯಾಗುವ ಮತ್ತು ಮಕ್ಕಳನ್ನು ಪಡೆಯುವ ಬಯಕೆಯು ಹೆಚ್ಚೆಚ್ಚಾಗುತ್ತಾ ಹೋಗುತ್ತದೆ ಎಂಬುದನ್ನು ಇತರರು ಕಂಡುಕೊಂಡಿದ್ದಾರೆ. “ಒಬ್ಬ ವಿವಾಹ ಸಂಗಾತಿಯಿಲ್ಲದಿರುವುದರಿಂದ ಉಂಟಾಗಿರುವ ಭಾವನಾತ್ಮಕ ಬರಿದಾದ ಅನಿಸಿಕೆಯೇ ನನ್ನ ಒಡನಾಡಿಯಾಗಿ ಉಳಿದಿದೆ” ಎಂದು ಸ್ಯಾಂಡ್ರ ನಿವೇದಿಸುತ್ತಾಳೆ.

ವೃದ್ಧ ಹೆತ್ತವರನ್ನು ನೋಡಿಕೊಳ್ಳುವಂಥ ಇತರ ಅಂಶಗಳು, ಒಂಟಿತನದ ಅನಿಸಿಕೆಯನ್ನು ಹೆಚ್ಚಿಸಬಲ್ಲವು. “ನಾನು ಅವಿವಾಹಿತಳಾಗಿದ್ದ ಕಾರಣ, ನಮ್ಮ ವೃದ್ಧ ಹೆತ್ತವರನ್ನು ನಾನು ನೋಡಿಕೊಳ್ಳಬೇಕು ಎಂದು ನನ್ನ ಕುಟುಂಬವು ಬಯಸಿತು,” ಅನ್ನುತ್ತಾಳೆ ಸ್ಯಾಂಡ್ರ. “ನಾನು ಆರು ಮಂದಿ ಮಕ್ಕಳಲ್ಲಿ ಒಬ್ಬಳಾಗಿದ್ದರೂ, 20 ವರ್ಷಗಳ ವರೆಗೆ ನಾನೇ ಈ ಜವಾಬ್ದಾರಿಯಲ್ಲಿ ಹೆಚ್ಚಿನದ್ದನ್ನು ಹೊತ್ತುಕೊಂಡೆ. ನನ್ನನ್ನು ಬೆಂಬಲಿಸಸಾಧ್ಯವಿದ್ದ ಒಬ್ಬ ಗಂಡನಿರುತ್ತಿದ್ದಲ್ಲಿ ಜೀವಿತವು ಎಷ್ಟೋ ಸುಗಮವಾಗಿರುತ್ತಿತ್ತು.”

ಒಂಟಿತನವನ್ನು ಅಧಿಕಗೊಳಿಸುವಂಥ ಮತ್ತೊಂದು ವಿಷಯವನ್ನು ಫ್ರಾನ್ಸಸ್‌ ತಿಳಿಸುತ್ತಾಳೆ. ಅವಳು ವಿವರಿಸುವುದು: “‘ನೀನು ಯಾಕೆ ಮದುವೆಯಾಗಲಿಲ್ಲ?’ ಎಂದು ಕೆಲವೊಮ್ಮೆ ಜನರು ನನ್ನನ್ನು ನೇರವಾಗಿ ಕೇಳುತ್ತಾರೆ. ಇಂತಹ ಒಂದು ಪ್ರಶ್ನೆಯು, ನಾನು ಮದುವೆಯಾಗದೇ ಇದ್ದದ್ದು ಹೇಗೊ ನನ್ನದೇ ತಪ್ಪಾಗಿದೆ ಎಂಬ ಭಾವನೆಯನ್ನು ನನಗೆ ಕೊಡುತ್ತದೆ. ನಾನು ಹೋಗುವ ಪ್ರತಿಯೊಂದು ಮದುವೆಯಲ್ಲೂ, ‘ಮತ್ತೆ ನಿನ್ನ ಮದುವೆ ಯಾವಾಗ?’ ಎಂಬ, ನಾನು ಕೇಳಿಸಿಕೊಳ್ಳಲು ಬಯಸದ ಪ್ರಶ್ನೆಯನ್ನು ಯಾರಾದರೂ ಕೇಳುತ್ತಾರೆ. ಆಗ ನಾನು, ‘ಆತ್ಮಿಕ ಮನೋಭಾವವುಳ್ಳ ಸಹೋದರರು ನನ್ನಲ್ಲಿ ಆಸಕ್ತರಾಗಿರದಿರುವಲ್ಲಿ, ನನ್ನಲ್ಲಿ ಆವಶ್ಯಕವಾದ ಕ್ರೈಸ್ತ ಗುಣಗಳು ಇಲ್ಲವೊ ಏನೋ ಅಥವಾ ಒಂದುವೇಳೆ ನಾನು ಆಕರ್ಷಕಳಾಗಿಲ್ಲವೊ ಏನೋ’ ಎಂದು ಯೋಚಿಸಲಾರಂಭಿಸುತ್ತೇನೆ.”

ಬೇರ್ಪಡಿಕೆ ಮತ್ತು ಒಂಟಿತನದ ಅನಿಸಿಕೆಗಳ ಮೇಲೆ ನಾವು ಹೇಗೆ ಮೇಲುಗೈ ಪಡೆಯಬಹುದು? ಯಾವುದೇ ರೀತಿಯ ಸಹಾಯವನ್ನು ಯಾರಾದರೂ ಮಾಡಬಹುದಾದರೆ, ಅದನ್ನು ಹೇಗೆ ಮಾಡಬಹುದು?

ಯೆಹೋವನ ಮೇಲೆ ಆತುಕೊಳ್ಳಿ

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು,” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 55:22) “ಭಾರ” ಎಂಬ ಶಬ್ದದ ಇಬ್ರಿಯ ಪದವು ಅಕ್ಷರಾರ್ಥವಾಗಿ “ಪಾಲು” ಎಂದಾಗಿದೆ, ಮತ್ತು ಜೀವನದಲ್ಲಿ ನಮ್ಮ ಪಾಲಿನಿಂದಾಗಿ ನಾವು ಅನುಭವಿಸುವ ಕಾಳಜಿ ಮತ್ತು ಚಿಂತೆಗಳನ್ನು ಇದು ಸೂಚಿಸುತ್ತದೆ. ಬೇರೆ ಯಾರಿಗಿಂತಲೂ ಹೆಚ್ಚಾಗಿ ಯೆಹೋವನು ಇದರ ಕುರಿತು ಹೆಚ್ಚು ಬಲ್ಲವನಾಗಿದ್ದಾನೆ ಮತ್ತು ಅವುಗಳನ್ನು ನಿಭಾಯಿಸಬೇಕಾದ ಶಕ್ತಿಯನ್ನು ಒದಗಿಸುವವನಾಗಿದ್ದಾನೆ. ಯೆಹೋವ ದೇವರ ಮೇಲಣ ಆತುಕೊಳ್ಳುವಿಕೆಯೇ ತನ್ನ ಒಂಟಿತನದ ಅನಿಸಿಕೆಯೊಂದಿಗೆ ನಿಭಾಯಿಸಿಕೊಂಡು ಹೋಗಲು ಆ್ಯಂಜಲಳಿಗೆ ಸಹಾಯಮಾಡಿದೆ. ತನ್ನ ಪೂರ್ಣ ಸಮಯದ ಶುಶ್ರೂಷೆಗೆ ಸೂಚಿಸುತ್ತಾ ಅವಳು ಮರುಜ್ಞಾಪಿಸಿಕೊಳ್ಳುವುದು: “ನಾನು ಪಯನೀಯರ್‌ ಸೇವೆಯನ್ನು ಮಾಡಲು ಆರಂಭಿಸಿದಾಗ, ನಾನು ಮತ್ತು ನನ್ನ ಪಯನೀಯರ್‌ ಸಂಗಾತಿಯು ಹತ್ತಿರದ ಸಭೆಯಿಂದ ತುಂಬ ದೂರದಲ್ಲಿ ವಾಸಿಸುತ್ತಿದ್ದೆವು. ನಾವು ಯೆಹೋವನ ಮೇಲೆ ಸಂಪೂರ್ಣವಾಗಿ ಆತುಕೊಳ್ಳಲು ಕಲಿತುಕೊಂಡೆವು, ಮತ್ತು ಈ ಆತುಕೊಳ್ಳುವಿಕೆಯು ನನ್ನ ಜೀವನಪರ್ಯಂತ ನನಗೆ ಸಹಾಯಮಾಡಿದೆ. ನನಗೆ ನಕಾರಾತ್ಮಕ ಅನಿಸಿಕೆಗಳು ಬರುವಾಗ, ನಾನು ಯೆಹೋವನೊಂದಿಗೆ ಮಾತಾಡುತ್ತೇನೆ ಮತ್ತು ಆತನು ನನಗೆ ಸಹಾಯಮಾಡುತ್ತಾನೆ. 23ನೆಯ ಕೀರ್ತನೆಯು ಯಾವಾಗಲೂ ನನಗೆ ಮಹತ್ತರವಾದ ಸಾಂತ್ವನವನ್ನು ಕೊಟ್ಟಿದೆ, ಮತ್ತು ನಾನು ಅದನ್ನು ಆಗಿಂದಾಗ್ಗೆ ಓದುತ್ತಿರುತ್ತೇನೆ.”

ಅಪೊಸ್ತಲ ಪೌಲನು ಗಮನಾರ್ಹವಾದ ಒಂದು ಹೊರೆಯನ್ನು ಹೊರಬೇಕಾಗಿತ್ತು. ಕಡಿಮೆಪಕ್ಷ ಮೂರು ಸಂದರ್ಭಗಳಲ್ಲಿ ಅವನು, ‘ತನ್ನ ಶರೀರದಲ್ಲಿನ ಮುಳ್ಳು ತನ್ನನ್ನು ಬಿಟ್ಟುಹೋಗಬೇಕೆಂದು ಕರ್ತನನ್ನು ಬೇಡಿಕೊಂಡಿದ್ದನು.’ ಪೌಲನು ಅದ್ಭುತಕರವಾಗಿ ಸಹಾಯಮಾಡಲ್ಪಡಲಿಲ್ಲ, ಆದರೆ ದೇವರ ಕೃಪೆಯು ಅವನನ್ನು ಬಲಪಡಿಸುವುದು ಎಂಬ ವಾಗ್ದಾನವನ್ನು ಅವನು ಪಡೆದುಕೊಂಡನು. (2 ಕೊರಿಂಥ 12:7-9, NW) ಪೌಲನು ಸಂತೃಪ್ತಿಯ ರಹಸ್ಯವನ್ನೂ ಕಂಡುಹಿಡಿದನು. ಅವನು ತದನಂತರ ಬರೆದದ್ದು: “ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—ಫಿಲಿಪ್ಪಿ 4:12, 13.

ನಿರುತ್ತೇಜನಗೊಂಡಿರುವಾಗ ಅಥವಾ ಒಂಟಿಯಾದ ಅನಿಸಿಕೆಯಾದಾಗ ಒಬ್ಬ ವ್ಯಕ್ತಿಯು ಹೇಗೆ ದೇವರ ಬಲವನ್ನು ಪಡೆದುಕೊಳ್ಳಬಹುದು? ಪೌಲನು ಬರೆದದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಸ್ಯಾಂಡ್ರ ಈ ಬುದ್ಧಿವಾದವನ್ನು ಕಾರ್ಯರೂಪಕ್ಕೆ ಹಾಕುತ್ತಾಳೆ. ಅವಳು ವಿವರಿಸುವುದು: “ಅವಿವಾಹಿತಳಾಗಿರುವ ಕಾರಣ ನಾನು ಹೆಚ್ಚು ಸಮಯ ಏಕಾಂತತೆಯಲ್ಲಿ ಕಳೆಯುತ್ತೇನೆ. ಇದು ನಾನು ಯೆಹೋವನೊಂದಿಗೆ ಪ್ರಾರ್ಥಿಸಲು ಸಾಕಷ್ಟು ಸಮಯವನ್ನು ಒದಗಿಸಿ ಕೊಡುತ್ತದೆ. ನನಗೆ ಆತನೊಂದಿಗೆ ಅತ್ಯಾಪ್ತವಾದ ಅನಿಸಿಕೆಯಾಗುತ್ತದೆ ಮತ್ತು ನಾನು ಆತನೊಂದಿಗೆ ನನ್ನ ಕಷ್ಟಸುಖಗಳ ಕುರಿತು ಮಾತಾಡಲು ಹೆಚ್ಚು ಸುಲಭವಾಗಿರುತ್ತದೆ.” ಮತ್ತು ಫ್ರಾನ್ಸಸ್‌ ಹೇಳುವುದು: “ನನ್ನಷ್ಟಕ್ಕೆ ನಾನೇ ನಕಾರಾತ್ಮಕ ಅನಿಸಿಕೆಗಳ ವಿರುದ್ಧವಾಗಿ ಹೋರಾಡುವುದು ಅಲೆಗಳಿಗೆ ವಿರುದ್ಧವಾದ ಈಜುವಿಕೆಯಂತಿದೆ. ಆದರೆ ಯೆಹೋವನೊಂದಿಗೆ ನನ್ನ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವುದು ನನಗೆ ಅತ್ಯಧಿಕವಾಗಿ ಸಹಾಯಮಾಡುತ್ತದೆ. ನನ್ನ ಆತ್ಮಿಕ ಮತ್ತು ಭಾವನಾತ್ಮಕ ಹಿತಕ್ಷೇಮವನ್ನು ಬಾಧಿಸುವಂಥ ಯಾವುದೇ ವಿಷಯದ ಕುರಿತು ಯೆಹೋವನು ಚಿಂತಿತನಾಗಿದ್ದಾನೆ ಎಂಬ ದೃಢವಿಶ್ವಾಸವು ನನಗಿದೆ.”​—1 ತಿಮೊಥೆಯ 5:5.

‘ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಿ’

ಕ್ರೈಸ್ತ ಸಹೋದರರ ಬಳಗದಲ್ಲಿ, ಭಾರಗಳನ್ನು ಒಂಟಿಯಾಗಿ ಹೊರುವ ಆವಶ್ಯಕತೆಯಿಲ್ಲ. “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ,” ಎಂದು ಅಪೊಸ್ತಲ ಪೌಲನು ಉತ್ತೇಜಿಸಿದನು. (ಗಲಾತ್ಯ 6:2) ಜೊತೆ ಕ್ರೈಸ್ತರೊಂದಿಗಿನ ಸಹವಾಸದೊಂದಿಗೆ, ಒಂಟಿತನವೆಂಬ ನಮ್ಮ ಹೊರೆಯನ್ನು ಹಗುರಗೊಳಿಸಬಹುದಾದ ಉತ್ತೇಜನದಾಯಕ ‘ಕನಿಕರದ ಮಾತನ್ನು’ ನಾವು ಪಡೆದುಕೊಳ್ಳಬಹುದು.​—ಜ್ಞಾನೋಕ್ತಿ 12:25.

ಇಸ್ರಾಯೇಲಿನ ನ್ಯಾಯಸ್ಥಾಪಕನಾದ ಯೆಫ್ತಾಹನ ಮಗಳ ಕುರಿತು ಶಾಸ್ತ್ರವಚನಗಳು ಏನು ಹೇಳುತ್ತವೆ ಎಂಬುದನ್ನೂ ಪರಿಗಣಿಸಿರಿ. ಅಮ್ಮೋನಿಯ ವೈರಿ ಪಡೆಗಳ ವಿರುದ್ಧ ಜಯಗಳಿಸುವ ಮುನ್ನ ಅವನು, ತನ್ನನ್ನು ಅಭಿನಂದಿಸಲು ಪ್ರಥಮವಾಗಿ ಬರುವ ತನ್ನ ಮನೆವಾರ್ತೆಯ ಯಾವುದೇ ವ್ಯಕ್ತಿಯನ್ನು ತಾನು ಯೆಹೋವನಿಗೆ ಕೊಡುವುದಾಗಿ ಅವನು ಹರಕೆಮಾಡಿದನು. ಮತ್ತು ಮೊದಲಾಗಿ ಹೊರಬಂದ ವ್ಯಕ್ತಿ ಅವನ ಮಗಳೇ ಆಗಿದ್ದಳು. (ನ್ಯಾಯಸ್ಥಾಪಕರು 11:30, 31, 34-36) ಇದು ಅವಳು ಅವಿವಾಹಿತಳಾಗಿಯೇ ಉಳಿದು, ಒಂದು ಕುಟುಂಬವನ್ನು ಹೊಂದಿರಬೇಕೆಂಬ ಅವಳ ಸಹಜವಾದ ಆಸೆಯನ್ನು ಬಿಟ್ಟುಬಿಡುವುದನ್ನು ಅರ್ಥೈಸಿತಾದರೂ, ಯೆಫ್ತಾಹನ ಮಗಳು ಅವನು ಮಾಡಿದ ಆ ಹರಕೆಗೆ ಮನಃಪೂರ್ವಕವಾಗಿ ಅಧೀನಳಾದಳು ಮತ್ತು ತನ್ನ ಉಳಿದ ಜೀವಮಾನಕಾಲವೆಲ್ಲ ಶೀಲೋವಿನಲ್ಲಿರುವ ದೇವಾಲಯದಲ್ಲಿ ಸೇವೆ ಸಲ್ಲಿಸಿದಳು. ಅವಳ ತ್ಯಾಗವು ಗಮನಿಸಲ್ಪಡದೇ ಹೋಯಿತೋ? ಇದಕ್ಕೆ ವ್ಯತಿರಿಕ್ತವಾದ್ದದ್ದಾಯಿತು: “ಪ್ರತಿ ವರ್ಷ ಇಸ್ರಾಯೇಲ್ಯರ ಪುತ್ರಿಯರು ಗಿಲ್ಯಾದ್ಯನಾದ ಯೆಫ್ತಾಹನ ಮಗಳನ್ನು ಪ್ರಶಂಶಿಸಲು ವರುಷದಲ್ಲಿ ನಾಲ್ಕು ದಿನ ಹೋಗುತ್ತಿದ್ದರು.” (ನ್ಯಾಯಸ್ಥಾಪಕರು 11:​40, NW) ನಿಜ, ಶ್ಲಾಘನೆಯನ್ನು ಪಡೆದುಕೊಳ್ಳುತ್ತಿರುವವರು ಅದರಿಂದ ಉತ್ತೇಜಿಸಲ್ಪಡಬಲ್ಲರು. ಆದುದರಿಂದ, ಯೋಗ್ಯರಾದವರನ್ನು ಶ್ಲಾಘಿಸಲು ನಾವು ಮರೆಯದಿರೋಣ.

ನಾವು ಯೇಸುವಿನ ಮಾದರಿಯನ್ನು ಪರಿಗಣಿಸುವುದೂ ಒಳ್ಳೆಯದಾಗಿರುವುದು. ಪುರುಷರು ಸ್ತ್ರೀಯರೊಂದಿಗೆ ಮಾತಾಡುವುದು ಯೆಹೂದಿ ಪದ್ಧತಿಯಾಗಿರಲಿಲ್ಲವಾದರೂ, ಯೇಸು ಮಾರ್ಥ ಮತ್ತು ಮರಿಯಳೊಂದಿಗೆ ಸಮಯವನ್ನು ಕಳೆದನು. ಪ್ರಾಯಶಃ ಅವರು ವಿಧವೆಯರಾಗಿದ್ದರು ಅಥವಾ ಅವಿವಾಹಿತರಾದ ಸ್ತ್ರೀಯರಾಗಿದ್ದರು. ಅವರಿಬ್ಬರೂ ಅವನ ಸ್ನೇಹದ ಆತ್ಮಿಕ ಪ್ರಯೋಜನಗಳನ್ನು ಆನಂದಿಸಬೇಕೆಂದು ಯೇಸು ಬಯಸಿದನು. (ಲೂಕ 10:38-42) ನಮ್ಮ ಅವಿವಾಹಿತ ಆತ್ಮಿಕ ಸಹೋದರಿಯರನ್ನು ಮಿತ್ರಗೋಷ್ಠಿಗಳಲ್ಲಿ ಒಳಗೂಡಿಸಿಕೊಳ್ಳುವ ಮತ್ತು ಅವರೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಏರ್ಪಾಡುಗಳನ್ನು ಮಾಡುವ ಮೂಲಕ, ನಾವು ಯೇಸುವಿನ ಮಾದರಿಯನ್ನು ಅನುಕರಿಸಬಹುದು. (ರೋಮಾಪುರ 12:13) ಅವರು ಈ ರೀತಿಯ ಗಮನವನ್ನು ಗಣ್ಯಮಾಡುತ್ತಾರೋ? ಒಬ್ಬ ಸಹೋದರಿಯು ಹೇಳಿದ್ದು: “ಸಹೋದರರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನನಗೆ ಬೆಲೆಕೊಡುತ್ತಾರೆ ಎಂಬುದು ನನಗೆ ಗೊತ್ತು, ಆದರೆ ಅವರು ಹೆಚ್ಚು ವೈಯಕ್ತಿಕ ಆಸಕ್ತಿಯನ್ನು ತೋರಿಸುವಾಗ ನಾನು ಕೃತಜ್ಞಳಾಗಿದ್ದೇನೆ.”

“ನಮ್ಮ ಕುಟುಂಬದವರು ಎಂದು ಹೇಳಿಕೊಳ್ಳಲು ನಮಗೆ ಯಾರೂ ಇಲ್ಲದಿರುವ ಕಾರಣ, ನಮ್ಮನ್ನು ಪ್ರೀತಿಸಲಾಗುತ್ತಿದೆ, ನಾವು ಆತ್ಮಿಕ ಸಹೋದರ ಸಹೋದರಿಯರ ಕುಟುಂಬದ ಭಾಗವಾಗಿದ್ದೇವೆ ಎಂದು ಭಾವಿಸಿಕೊಳ್ಳುವ ಹೆಚ್ಚಿನ ಅಗತ್ಯ ನಮಗಿದೆ,” ಎಂದು ಸ್ಯಾಂಡ್ರ ವಿವರಿಸುತ್ತಾಳೆ. ಯೆಹೋವನು ಇಂಥವರ ಕುರಿತು ಕಾಳಜಿ ವಹಿಸುತ್ತಾನೆ ಎಂಬುದು ವಾಸ್ತವಿಕ ಸಂಗತಿ; ಅವರ ಆವಶ್ಯಕತೆಯಿದೆ ಹಾಗೂ ನಾವು ಅವರನ್ನು ಪ್ರೀತಿಸುತ್ತೇವೆ ಎಂಬ ಅನಿಸಿಕೆಯನ್ನು ನಾವು ಅವರಲ್ಲಿ ಮೂಡಿಸುವಲ್ಲಿ, ನಾವು ಆತನೊಂದಿಗೆ ಸಹಕರಿಸುತ್ತಿದ್ದೇವೆ. (1 ಪೇತ್ರ 5:6, 7) ಇಂತಹ ಕಳಕಳಿಯು ಗಮನಿಸಲ್ಪಡದೇ ಹೋಗಲಾರದು, ಏಕೆಂದರೆ “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು.”​—ಜ್ಞಾನೋಕ್ತಿ 19:17.

“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು”

ಇತರರು ಸಹಾಯಮಾಡಬಹುದಾದರೂ ಮತ್ತು ಅವರ ಬೆಂಬಲವು ತುಂಬ ಉತ್ತೇಜನದಾಯಕವಾಗಿರುವುದಾದರೂ, “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಆದರೂ, ಒಂಟಿತನದ ಹೊರೆಯನ್ನು ಹೊತ್ತುಕೊಂಡು ಹೋಗುವುದರಲ್ಲಿ, ನಾವು ಕೆಲವು ಅಪಾಯಗಳ ಕುರಿತು ಎಚ್ಚರಿಕೆಯುಳ್ಳವರಾಗಿರಬೇಕು. ಉದಾಹರಣೆಗೆ, ಯಾರೊಂದಿಗೂ ಸಹವಾಸ ಮಾಡುವುದಿಲ್ಲ ಎಂದು ನಾವು ನಮ್ಮನ್ನೇ ಪ್ರತ್ಯೇಕಿಸಿಕೊಳ್ಳುವುದಾದರೆ, ಒಂಟಿತನವು ನಮ್ಮ ಮೇಲೆ ಜಯಗಳಿಸುವುದು. ಇನ್ನೊಂದು ಬದಿಯಲ್ಲಿ, ನಾವು ಒಂಟಿತನವನ್ನು ಪ್ರೀತಿಯಿಂದ ಜಯಿಸಬಹುದು. (1 ಕೊರಿಂಥ 13:7, 8) ನಮ್ಮ ಪರಿಸ್ಥಿತಿಗಳ ಹೊರತೂ, ಕೊಡುವಿಕೆ ಮತ್ತು ಹಂಚಿಕೊಳ್ಳುವಿಕೆಯು ಸಂತೋಷಕ್ಕೆ ನಡೆಸುವ ಅತ್ಯುತ್ತಮ ವಿಧಾನವಾಗಿದೆ. (ಅ. ಕೃತ್ಯಗಳು 20:35) “ನಾನು ಒಂಟಿಗಳಾಗಿದ್ದೇನೆ ಎಂಬುದರ ಕುರಿತು ಯೋಚಿಸುತ್ತಾ ಕುಳಿತುಕೊಳ್ಳಲು ನನ್ನ ಬಳಿ ಹೆಚ್ಚು ಸಮಯವಿಲ್ಲ,” ಎಂದು ಒಬ್ಬ ಪರಿಶ್ರಮಿ ಪಯನೀಯರ್‌ ಸಹೋದರಿಯು ಹೇಳುತ್ತಾಳೆ. “ನಾನು ಉಪಯುಕ್ತಳು ಮತ್ತು ಕಾರ್ಯಮಗ್ನಳು ಎಂದು ನನಗನಿಸುವಾಗ, ನನಗೆ ಒಂಟಿಗಳಾಗಿರುವ ಅನಿಸಿಕೆಯಾಗುವುದಿಲ್ಲ.”

ಮಾತ್ರವಲ್ಲದೆ, ಒಂಟಿತನವು ನಮ್ಮನ್ನು ಒಂದು ವಿವೇಕಹೀನ ಸಂಬಂಧದೊಳಗೆ ತಳ್ಳದಂತೆ ನಾವು ನಮ್ಮನ್ನೇ ಕಾಪಾಡಿಕೊಳ್ಳಬೇಕು. ಉದಾಹರಣೆಗೆ, ಮದುವೆ ಮಾಡಿಕೊಳ್ಳಬೇಕೆಂಬ ಆಸೆಯು, ಒಬ್ಬ ಅವಿಶ್ವಾಸಿಯನ್ನು ಮದುವೆ ಮಾಡಿಕೊಳ್ಳುವುದರಿಂದ ಬರಬಹುದಾದ ಸಮಸ್ಯೆಗಳ ವಿಷಯದಲ್ಲಿ ಮತ್ತು ಪ್ರಾಮುಖ್ಯವಾಗಿ ಇಂತಹ ಒಂದು ಇಜ್ಜೋಡಾಗುವಿಕೆಯಿಂದ ದೂರವಿರುವಂತೆ ಹೇಳುವ ಶಾಸ್ತ್ರೀಯ ಬುದ್ಧಿವಾದದ ವಿಷಯದಲ್ಲಿ ನಮ್ಮನ್ನು ಕುರುಡುಗೊಳಿಸುವಂತೆ ಬಿಡುವುದು ಎಷ್ಟು ಶೋಚನೀಯವಾಗಿರುವುದು. (2 ಕೊರಿಂಥ 6:14) ವಿಚ್ಛೇದಿತಳಾದ ಒಬ್ಬ ಕ್ರೈಸ್ತ ಸ್ತ್ರೀಯು ಹೇಳಿದ್ದು: “ಅವಿವಾಹಿತರಾಗಿರುವುದಕ್ಕಿಂತ ಹೆಚ್ಚು ಘೋರವಾದ ಇನ್ನೊಂದು ವಿಷಯವಿದೆ. ಅದು ತಪ್ಪಾದ ವ್ಯಕ್ತಿಯನ್ನು ಮದುವೆಯಾಗಿರುವುದೇ ಆಗಿದೆ.”

ಪರಿಹರಿಸಲ್ಪಡಲಾಗದ ಒಂದು ಸಮಸ್ಯೆಯು ತಾಳಿಕೊಳ್ಳಲ್ಪಡಬೇಕಾಗಿರಬಹುದು​—ಕಡಿಮೆಪಕ್ಷ ಸದ್ಯಕ್ಕಾದರೂ. ದೇವರ ಸಹಾಯದೊಂದಿಗೆ, ಒಂಟಿತನದ ಅನಿಸಿಕೆಯನ್ನು ತಾಳಿಕೊಳ್ಳಬಹುದು. ನಾವು ಯೆಹೋವನಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಿರುವಾಗ, ಒಂದು ದಿನ ನಮ್ಮ ಎಲ್ಲ ಅಗತ್ಯಗಳು ಸಾಧ್ಯವಿರುವ ಅತ್ಯುತ್ತಮವಾದ ರೀತಿಯಲ್ಲಿ ಪೂರೈಸಲ್ಪಡುವವು ಎಂಬುದರ ಕುರಿತು ನಾವು ಖಾತ್ರಿಯಿಂದಿರೋಣ.​—ಕೀರ್ತನೆ 145:16.

[ಪಾದಟಿಪ್ಪಣಿ]

^ ಪ್ಯಾರ. 3 ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ಸ್ತ್ರೀಯರ ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 28ರಲ್ಲಿರುವ ಚಿತ್ರಗಳು]

ಕೊಡುವಿಕೆ ಮತ್ತು ಹಂಚಿಕೊಳ್ಳುವಿಕೆಯ ಮೂಲಕ ಒಂಟಿತನವನ್ನು ಜಯಿಸಬಹುದು