ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೆಯ ನಾಯಕತ್ವ ನಾವು ಅದನ್ನು ಎಲ್ಲಿ ಕಂಡುಕೊಳ್ಳಬಹುದು?

ಒಳ್ಳೆಯ ನಾಯಕತ್ವ ನಾವು ಅದನ್ನು ಎಲ್ಲಿ ಕಂಡುಕೊಳ್ಳಬಹುದು?

ಒಳ್ಳೆಯ ನಾಯಕತ್ವ ನಾವು ಅದನ್ನು ಎಲ್ಲಿ ಕಂಡುಕೊಳ್ಳಬಹುದು?

“ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ” ಎನ್ನುತ್ತದೆ ಬೈಬಲು. (ಇಬ್ರಿಯ 3:4; ಪ್ರಕಟನೆ 4:11) ನಮ್ಮ ಸೃಷ್ಟಿಕರ್ತನು ಸತ್ಯ ದೇವರಾದ ಯೆಹೋವನಾಗಿರುವುದರಿಂದ, “ಆತನು ನಮ್ಮ ಪ್ರಕೃತಿಯನ್ನು ಬಲ್ಲನು.” (ಕೀರ್ತನೆ 103:14) ನಮ್ಮ ಇತಿಮಿತಿಗಳನ್ನು ಮತ್ತು ನಮಗಿರುವ ಆವಶ್ಯಕತೆಗಳನ್ನು ಆತನು ಪೂರ್ತಿಯಾಗಿ ತಿಳಿದಿದ್ದಾನೆ. ಮತ್ತು ಆತನು ಪ್ರೀತಿಪೂರ್ಣನಾದ ದೇವರಾಗಿರುವುದರಿಂದ, ನಮ್ಮ ಆವಶ್ಯಕತೆಗಳನ್ನು ತೃಪ್ತಿಪಡಿಸುವುದು ಆತನ ಅಪೇಕ್ಷೆಯಾಗಿದೆ. (ಕೀರ್ತನೆ 145:16; 1 ಯೋಹಾನ 4:8) ಇದರಲ್ಲಿ, ಒಳ್ಳೆಯ ನಾಯಕತ್ವದ ವಿಷಯದಲ್ಲಿ ನಮಗಿರುವ ಆವಶ್ಯಕತೆಯನ್ನು ತೃಪ್ತಿಪಡಿಸುವುದೂ ಸೇರಿದೆ.

ಯೆಹೋವನು ಯೆಶಾಯ ಪ್ರವಾದಿಯ ಮೂಲಕ ಹೀಗೆ ಹೇಳಿದನು: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” (ಯೆಶಾಯ 55:4) ಆದಕಾರಣ ಇಂದಿನ ನಾಯಕತ್ವದ ಬಿಕ್ಕಟ್ಟಿಗೆ ಇರುವ ಪರಿಹಾರವು, ಸರ್ವಶಕ್ತನಾದ ದೇವರೇ ನೇಮಿಸಿರುವ ಈ ನಾಯಕನನ್ನು ಗುರುತಿಸಿ, ಅವನ ನಾಯಕತ್ವವನ್ನು ಅಂಗೀಕರಿಸುವುದೇ ಆಗಿದೆ. ಹಾಗಾದರೆ ಮುಂತಿಳಿಸಲ್ಪಟ್ಟ ಈ ನಾಯಕನೂ ಅಧಿಪತಿಯೂ ಯಾರು? ಅವನು ನಾಯಕನೆಂಬುದಕ್ಕೆ ಸಾಕ್ಷ್ಯಗಳೇನು? ಅವನು ನಮ್ಮನ್ನು ಎಲ್ಲಿಗೆ ನಡೆಸುವನು? ಅವನ ನಾಯಕತ್ವದಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?

ವಾಗ್ದಾನಿತ ನಾಯಕನು ಬರುತ್ತಾನೆ

ಸುಮಾರು 2,500 ವರ್ಷಗಳ ಹಿಂದೆ, ಗಬ್ರಿಯೇಲ ದೇವದೂತನು ದಾನಿಯೇಲ ಪ್ರವಾದಿಗೆ ಕಾಣಿಸಿಕೊಂಡು ಹೇಳಿದ್ದು: “ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರುವತ್ತೆರಡು ವಾರ ಇರುವದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.”​—ದಾನಿಯೇಲ 9:25.

ಇಲ್ಲಿ ದೇವದೂತನು ದಾನಿಯೇಲನಿಗೆ, ಯೆಹೋವನು ಆಯ್ಕೆಮಾಡಿರುವ ನಾಯಕನ ಬರೋಣದ ನಿರ್ದಿಷ್ಟ ಸಮಯವನ್ನು ತಿಳಿಸುತ್ತಿದ್ದನೆಂಬುದು ಸ್ಪಷ್ಟ. “‘ಅಭಿಷಿಕ್ತನಾದ ಪ್ರಭುವು’ ಅಥವಾ ನಾಯಕನು,” 69 ವಾರಗಳ ಅಂತ್ಯದಲ್ಲಿ ಅಥವಾ ಸಾ.ಶ.ಪೂ. 455ರಲ್ಲಿ ಯೆರೂಸಲೇಮಿನ ಜೀರ್ಣೋದ್ಧಾರದ ಆಜ್ಞೆಯು ಹೊರಟಂದಿನಿಂದ ಎಣಿಸುವಾಗ, 483 ವರುಷಗಳ ಅಂತ್ಯದಲ್ಲಿ ತೋರಿಬರಲಿಕ್ಕಿದ್ದನು. * (ನೆಹೆಮೀಯ 2:​1-8) ಆ ಅವಧಿಯ ಅಂತ್ಯದಲ್ಲಿ ಏನು ನಡೆಯಿತು? ಸುವಾರ್ತಾ ಲೇಖಕನಾದ ಲೂಕನು ತಿಳಿಸುವುದು: “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ, ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ [ಸಾ.ಶ. 29] . . . [ಆಗಿದ್ದ] ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು. ಅವನು ಯೊರ್ದನ್‌ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ​—ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುವವನಾದನು.” ಆ ಸಮಯದಲ್ಲಿ, “ಇಸ್ರಾಯೇಲ್‌ ಜನರು” ಮೆಸ್ಸೀಯನಾದ ನಾಯಕನನ್ನು “ಎದುರುನೋಡು”ತ್ತಾ ಇದ್ದರು. (ಲೂಕ 3:​1-3, 15) ಜನಸಮೂಹಗಳು ಯೋಹಾನನ ಬಳಿಗೆ ಹೋಗುತ್ತಿದ್ದವಾದರೂ ಅವನು ಆ ನಾಯಕನಾಗಿರಲಿಲ್ಲ.

ಆ ಬಳಿಕ ಸಾ.ಶ. 29ರ ಅಕ್ಟೋಬರ್‌ ತಿಂಗಳ ಸುಮಾರಿಗೆ, ನಜರೇತಿನ ಯೇಸು ದೀಕ್ಷಾಸ್ನಾನಕ್ಕಾಗಿ ಯೋಹಾನನ ಬಳಿಗೆ ಬಂದನು. ಮತ್ತು ಯೋಹಾನನು ಹೀಗೆ ಹೇಳುತ್ತ ಸಾಕ್ಷಿ ನೀಡಿದನು: “ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು​—ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ.” (ಯೋಹಾನ 1:​32-34) ಹೀಗೆ, ಯೇಸು ದೀಕ್ಷಾಸ್ನಾನ ಹೊಂದಿದಾಗ, ಅವನು ಅಭಿಷಿಕ್ತ ನಾಯಕನು, ಮೆಸ್ಸೀಯನು, ಅಥವಾ ಕ್ರಿಸ್ತನಾದನು.

ಹೌದು, ಯೇಸು ಕ್ರಿಸ್ತನೇ ‘ಜನಾಂಗಗಳಿಗೆ ನಾಯಕನೂ ಅಧಿಪತಿಯೂ’ ಆಗಿ ಪರಿಣಮಿಸಿದನು. ಮತ್ತು ನಾಯಕನಾಗಿರುವ ಅವನ ಗುಣಗಳನ್ನು ನಾವು ಪರೀಕ್ಷಿಸುವಾಗ, ಅವನ ನಾಯಕತ್ವವು ಆಧುನಿಕ ದಿನಗಳಲ್ಲಿ ಆದರ್ಶಪ್ರಾಯ ನಾಯಕನಲ್ಲಿ ಇರಬೇಕೆಂದು ಬಯಸುವಂಥ ನಾಯಕತ್ವಕ್ಕಿಂತ ಎಷ್ಟೋ ಮಿಗಿಲಾದದ್ದಾಗಿದೆಯೆಂದು ಕೂಡಲೇ ಗ್ರಹಿಸುವೆವು.

ಮೆಸ್ಸೀಯನು​—ಆದರ್ಶ ನಾಯಕನು

ಒಬ್ಬ ಒಳ್ಳೇ ನಾಯಕನು ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟು, ತನ್ನ ಉಸ್ತುವಾರಿಯಲ್ಲಿರುವ ಜನರು ಸಮಸ್ಯೆಗಳನ್ನು ಜಯಪ್ರದವಾಗಿ ಬಗೆಹರಿಸಲು ಅವರಿಗೆ ಬೇಕಾಗಿರುವ ವೈಯಕ್ತಿಕ ಬಲ ಮತ್ತು ದೃಢನಿಶ್ಚಯ ಹಾಗೂ ಸಾಮರ್ಥ್ಯವನ್ನು ಪಡೆಯಲು ಸಹಾಯಮಾಡುತ್ತಾನೆ. 21ನೆಯ ಶತಮಾನದ ನಾಯಕತ್ವ​—ನೂರು ಮಂದಿ ಪ್ರಮುಖ ನಾಯಕರೊಂದಿಗೆ ಸಂಭಾಷಣೆ (ಇಂಗ್ಲಿಷ್‌) ಎಂಬ ಪುಸ್ತಕವು, ‘ಇದು 21ನೆಯ ಶತಮಾನದ ಜಯಪ್ರದ ನಾಯಕನಲ್ಲಿರಬೇಕಾದ ಆವಶ್ಯಕ ವಿಷಯ’ ಎಂದು ಹೇಳುತ್ತದೆ. ಯೇಸು ತನ್ನ ಕೇಳುಗರನ್ನು, ಅವರು ದಿನನಿತ್ಯದ ಸನ್ನಿವೇಶಗಳನ್ನು ನಿಭಾಯಿಸುವಂತೆ ಎಷ್ಟು ಕಾರ್ಯಸಾಧಕವಾಗಿ ಸಿದ್ಧಪಡಿಸಿದನು! ಅವನ ಅತ್ಯಂತ ಪ್ರಸಿದ್ಧ ಭಾಷಣವಾದ ಪರ್ವತ ಪ್ರಸಂಗದ ಕುರಿತು ಯೋಚಿಸಿರಿ. ಮತ್ತಾಯ 5-7ನೆಯ ಅಧ್ಯಾಯಗಳಲ್ಲಿ ದಾಖಲೆಯಾಗಿರುವ ಮಾತುಗಳಲ್ಲಿ ಪುಷ್ಕಳ ಪ್ರಾಯೋಗಿಕ ಬುದ್ಧಿವಾದವಿದೆ.

ಉದಾಹರಣೆಗೆ, ವೈಯಕ್ತಿಕ ಭೇದಭಾವಗಳನ್ನು ಬಗೆಹರಿಸಲು ಯೇಸು ಕೊಟ್ಟ ಬುದ್ಧಿವಾದವನ್ನು ಪರಿಗಣಿಸಿರಿ. ಅವನಂದದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:​23, 24) ಇತರರೊಂದಿಗೆ ಸಮಾಧಾನ ಮಾಡಿಕೊಳ್ಳಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು, ಮೋಶೆಯ ಧರ್ಮಶಾಸ್ತ್ರವು ಯಾವುದನ್ನು ಆವಶ್ಯಕವಾಗಿ ಮಾಡಿತೊ ಆ ಯೆರೂಸಲೇಮಿನ ದೇವಾಲಯದ ಯಜ್ಞವೇದಿಯ ಮೇಲೆ ಕಾಣಿಕೆಗಳನ್ನು ಕೊಡುವಂಥ ಧಾರ್ಮಿಕ ಕರ್ತವ್ಯಕ್ಕಿಂತಲೂ ಮಿಗಿಲಾದುದಾಗಿತ್ತು. ಹಾಗೆ ಮಾಡದಿರುವಲ್ಲಿ ಆರಾಧನಾ ಕ್ರಿಯೆಗಳು ದೇವರಿಗೆ ಅಂಗೀಕಾರಾರ್ಹವಾಗುವುದಿಲ್ಲ. ಯೇಸುವಿನ ಈ ಬುದ್ಧಿವಾದವು ಶತಮಾನಗಳ ಹಿಂದೆ ಪ್ರಾಯೋಗಿಕವಾಗಿದ್ದಂತೆಯೇ ಈಗಲೂ ಪ್ರಾಯೋಗಿಕವಾಗಿದೆ.

ಯೇಸು ತನ್ನ ಕೇಳುಗರು ಲೈಂಗಿಕ ದುರಾಚಾರದ ಜಾಲದಿಂದ ದೂರವಾಗಿರುವಂತೆ ಸಹ ಸಹಾಯಮಾಡಿದನು. ಅವನು ಅವರಿಗೆ ಬುದ್ಧಿಹೇಳಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ​—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:​27, 28) ಎಷ್ಟು ಸೂಕ್ತವಾದ ಎಚ್ಚರಿಕೆ! ವ್ಯಭಿಚಾರದ ಕುರಿತು ಯೋಚಿಸುವ ಮೂಲಕ ನಾವು ಅದನ್ನು ಮಾಡುವ ದಾರಿಯಲ್ಲಿ ಏಕೆ ಕಾಲಿರಿಸಬೇಕು ಅಲ್ಲವೇ? ಹಾದರ, ವ್ಯಭಿಚಾರಗಳು ಹೃದಯದೊಳಗಿಂದ ಬರುತ್ತವೆಂದು ಯೇಸು ಹೇಳಿದನು. (ಮತ್ತಾಯ 15:​18, 19) ನಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದೇ ವಿವೇಕದ ಮಾರ್ಗವಾಗಿದೆ.​—ಜ್ಞಾನೋಕ್ತಿ 4:23.

ಒಬ್ಬನ ವೈರಿಗಳನ್ನು ಪ್ರೀತಿಸುವ, ಉದಾರಭಾವವನ್ನು ತೋರಿಸುವ, ಲೌಕಿಕ ಮತ್ತು ಆತ್ಮಿಕ ಮತ್ತಿತರ ವಿಷಯಗಳ ಕುರಿತಾದ ಸರಿಯಾದ ದೃಷ್ಟಿಕೋನವನ್ನು ಹೊಂದಿರುವುದರ ಬಗ್ಗೆಯೂ ಶ್ರೇಷ್ಠ ರೀತಿಯ ಸಲಹೆಯು ಆ ಪರ್ವತ ಪ್ರಸಂಗದಲ್ಲಿದೆ. (ಮತ್ತಾಯ 5:​43-47; 6:​1-4, 19-21, 24-34) ಯೇಸು ತನ್ನ ಸಭಿಕರಿಗೆ ಪ್ರಾರ್ಥನೆ ಮಾಡುವ ವಿಧವನ್ನು ಕಲಿಸಿ ದೇವರ ಸಹಾಯವನ್ನು ಹೇಗೆ ಕೋರಬೇಕೆಂದೂ ತೋರಿಸಿದನು. (ಮತ್ತಾಯ 6:​9-13) ನಾಯಕನಾದ ಮೆಸ್ಸೀಯನು ಮಾನವಕುಲಕ್ಕೆ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ತನ್ನ ಹಿಂಬಾಲಕರು ನಿಭಾಯಿಸುವಂತೆ ಅವರನ್ನು ಬಲಪಡಿಸುವವನೂ ಅವರನ್ನು ಸಿದ್ಧಪಡಿಸುವವನೂ ಆಗಿದ್ದಾನೆ.

ಪರ್ವತ ಪ್ರಸಂಗದಲ್ಲಿ ಯೇಸು ಆರು ಬಾರಿ, “ಹೇಳಿಯದೆಯೆಂದು ಕೇಳಿದ್ದೀರಷ್ಟೇ,” ಮತ್ತು “ಇದಲ್ಲದೆ . . . ಹೇಳಿದೆಯಷ್ಟೇ” ಎಂದು ಹೇಳಿದ ನಂತರ, “ಆದರೆ ನಾನು ನಿಮಗೆ ಹೇಳುವದೇನಂದರೆ” ಎಂಬ ಇನ್ನೊಂದು ವಿಚಾರವನ್ನು ತಿಳಿಸುತ್ತಾನೆ. (ಮತ್ತಾಯ 5:​21, 22, 27, 28, 31-34, 38, 39, 43, 44) ಅಂದರೆ ಫರಿಸಾಯರ ಮೌಖಿಕ ಸಂಪ್ರದಾಯಗಳ ಪ್ರಕಾರ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವುದು ಅವನ ಕೇಳುಗರ ವಾಡಿಕೆಯಾಗಿತ್ತೆಂದು ಇದು ಸೂಚಿಸುತ್ತದೆ. ಆದರೆ ಈಗ ಯೇಸು ಅವರಿಗೆ ಇನ್ನೊಂದು ವ್ಯತ್ಯಸ್ತವಾದ ಮಾರ್ಗವನ್ನು, ಮೋಶೆಯ ಧರ್ಮಶಾಸ್ತ್ರದ ನಿಜ ಇಂಗಿತವನ್ನು ಪ್ರತಿಬಿಂಬಿಸಿದ ಮಾರ್ಗವನ್ನು ತೋರಿಸುತ್ತಿದ್ದನು. ಹೀಗೆ ಯೇಸು ಒಂದು ಬದಲಾವಣೆಯನ್ನು ಪರಿಚಯಪಡಿಸಿದನು ಮತ್ತು ಹಾಗೆ ಮಾಡುವಾಗ ತನ್ನ ಹಿಂಬಾಲಕರಿಗೆ ಅದನ್ನು ಅಂಗೀಕರಿಸಲು ಸುಲಭವಾಗುವ ರೀತಿಯಲ್ಲಿ ಮಾಡಿದನು. ಹೌದು, ತಮ್ಮ ಜೀವನಗಳಲ್ಲಿ ಆತ್ಮಿಕವಾಗಿಯೂ ನೈತಿಕವಾಗಿಯೂ ಮಹಾ ಬದಲಾವಣೆಗಳನ್ನು ಮಾಡುವಂತೆ ಯೇಸು ಜನರನ್ನು ಪ್ರಚೋದಿಸಿದನು. ಇದು ನಿಜವಾದ ನಾಯಕನ ಲಕ್ಷಣವಾಗಿದೆ.

ಇಂತಹ ಬದಲಾವಣೆಯನ್ನು ತರಿಸುವುದು ಎಷ್ಟು ಕಷ್ಟಕರವೆಂಬುದನ್ನು ಒಂದು ಮ್ಯಾನೆಜ್‌ಮೆಂಟ್‌ ಪಠ್ಯಪುಸ್ತಕವು ತೋರಿಸುತ್ತದೆ. ಅದು ಹೇಳುವುದು: “ಇಂತಹ ಬದಲಾವಣೆಯನ್ನು ತರಿಸುವವನಿಗೆ [ನಾಯಕನಿಗೆ] ಸಮಾಜ ಸೇವಕನ ಸಂವೇದನ ಶಕ್ತಿಯೂ, ಮನಶ್ಶಾಸ್ತ್ರಜ್ಞನ ಗ್ರಹಣಶಕ್ತಿಯೂ, ದೂರದ ಓಟಗಾರನ ತಾಕತ್ತೂ, ಗೂಳಿನಾಯಿ (ಬುಲ್ಡಾಗ್‌)ಯ ಬಿಗಿಹಿಡಿತವೂ, ಸಂನ್ಯಾಸಿಯ ಸ್ವಾವಲಂಬನೆಯೂ, ಸಾಧುವಿನ ತಾಳ್ಮೆಯೂ ಅಗತ್ಯ. ಮತ್ತು ಈ ಎಲ್ಲ ಗುಣಗಳಿದ್ದರೂ ಯಶಸ್ಸಿನ ಖಾತ್ರಿಯಿರುವುದಿಲ್ಲ.”

“ನಾಯಕತ್ವ: ಗುಣಗಳು ಪ್ರಾಮುಖ್ಯವೊ?” ಎಂಬ ಲೇಖನವು ಹೇಳಿದ್ದು: “ನಾಯಕರು ತಮ್ಮ ಹಿಂಬಾಲಕರು ಹೇಗೆ ವರ್ತಿಸಬೇಕೆಂದು ಅಪೇಕ್ಷಿಸುತ್ತಾರೊ ಹಾಗೆಯೇ ಅವರೂ ವರ್ತಿಸತಕ್ಕದ್ದು.” ಒಳ್ಳೆಯ ನಾಯಕನು ತಾನು ನುಡಿಯುವಂತೆ ನಡೆಯುತ್ತಾನೆ. ಮತ್ತು ಇದು ಯೇಸು ಕ್ರಿಸ್ತನ ಸಂಬಂಧದಲ್ಲಿ ಎಷ್ಟು ನಿಜವಾಗಿತ್ತು! ತನ್ನ ಜೊತೆಗಾರರು ದೈನ್ಯಭಾವವನ್ನು ತೋರಿಸುವಂತೆ ಅವನು ಕಲಿಸಿದ್ದು ಮಾತ್ರವಲ್ಲ, ಅವರ ಪಾದಗಳನ್ನು ತೊಳೆದು ಅವನು ಒಂದು ವಸ್ತುಪಾಠವನ್ನೂ ಒದಗಿಸಿದನು. (ಯೋಹಾನ 13:​5-15) ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಅವನು ತನ್ನ ಶಿಷ್ಯರನ್ನು ಮಾತ್ರ ಕಳುಹಿಸದೆ, ಅವನು ಸಹ ಆ ಕೆಲಸವನ್ನು ಪ್ರಯಾಸಪಟ್ಟು ಹುರುಪಿನಿಂದ ಮಾಡಿದನು. (ಮತ್ತಾಯ 4:​18-25; ಲೂಕ 8:​1-3; 9:​1-6; 10:​1-24; ಯೋಹಾನ 10:​40-42) ಮತ್ತು ನಾಯಕತ್ವಕ್ಕೆ ಓಗೊಡುವ ವಿಷಯದಲ್ಲಿ ಯೇಸು ಮಾದರಿಯನ್ನಿಟ್ಟನು. ಅವನು ತನ್ನ ವಿಷಯವಾಗಿ ಹೇಳಿದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು.”​—ಯೋಹಾನ 5:19.

ಯೇಸು ಹೇಳಿ ಮಾಡಿದ ವಿಷಯಗಳ ಈ ಮೇಲಿನ ಪರಿಗಣನೆಯು, ಅವನು ನಿಜವಾಗಿಯೂ ಒಬ್ಬ ಆದರ್ಶ ನಾಯಕನಾಗಿದ್ದಾನೆಂದು ಸ್ಪಷ್ಟವಾಗಿ ತೋರಿಸುತ್ತದೆ. ವಾಸ್ತವವೇನಂದರೆ, ಒಳ್ಳೆಯ ನಾಯಕತ್ವಕ್ಕಿರುವ ಎಲ್ಲಾ ಮಾನವ ಮಟ್ಟಗಳು ಅವನಲ್ಲಿ ವಿಫುಲವಾಗಿವೆ. ಯೇಸು ಪರಿಪೂರ್ಣನಾಗಿದ್ದಾನೆ. ಮರಣ, ಪುನರುತ್ಥಾನಗಳ ಬಳಿಕ ಅಮರತ್ವವನ್ನು ಪಡೆದಿರುವ ಅವನು ಸದಾಕಾಲ ಜೀವಿಸುತ್ತಾನೆ. (1 ಪೇತ್ರ 3:18; ಪ್ರಕಟನೆ 1:​13-18) ಈ ಗುಣಮಟ್ಟವನ್ನು ಯಾವ ಮಾನವ ನಾಯಕನು ತಾನೇ ತಲಪಬಲ್ಲನು?

ನಾವೇನು ಮಾಡತಕ್ಕದ್ದು?

ದೇವರ ರಾಜ್ಯದ ಆಳುತ್ತಿರುವ ರಾಜನೋಪಾದಿ, ಈ ‘ಅಭಿಷಿಕ್ತನಾದ ನಾಯಕನು’ ವಿಧೇಯ ಮಾನವಕುಲದ ಮೇಲೆ ಆಶೀರ್ವಾದಗಳನ್ನು ಸುರಿಸುವನು. ಈ ಸಂಬಂಧದಲ್ಲಿ ಶಾಸ್ತ್ರವು ವಚನಕೊಡುವುದು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11) “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” (ಮೀಕ 4:4) “ಆತನು [ದೇವರು] ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—ಪ್ರಕಟನೆ 21:​3, 4.

ಇಂದಿನ ಲೋಕವು ನಾಯಕತ್ವದ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಆದರೆ ಯೇಸು ಕ್ರಿಸ್ತನು ದೀನರನ್ನು, ಎಲ್ಲಿ ವಿಧೇಯ ಮಾನವಕುಲವು ಯೆಹೋವ ದೇವರ ಆರಾಧನೆಯಲ್ಲಿ ಐಕ್ಯವಾಗಿದ್ದು, ಪರಿಪೂರ್ಣತೆಯ ಕಡೆಗೆ ಪ್ರಗತಿಮಾಡಲಿದೆಯೊ ಆ ಶಾಂತಿಭರಿತ ನೂತನ ಲೋಕಕ್ಕೆ ನಡೆಸುತ್ತಿದ್ದಾನೆ. ಆದಕಾರಣ, ಸತ್ಯ ದೇವರ ಮತ್ತು ಆತನ ನೇಮಿತ ನಾಯಕನ ಜ್ಞಾನವನ್ನು ಪಡೆದುಕೊಂಡು, ಆ ಜ್ಞಾನಾನುಸಾರ ವರ್ತಿಸುವುದು ಅದೆಷ್ಟು ಮಹತ್ವವುಳ್ಳದ್ದಾಗಿದೆ!​—ಯೋಹಾನ 17:3.

ಒಬ್ಬ ವ್ಯಕ್ತಿಯನ್ನು ಅನುಕರಿಸುವುದೇ ಆ ವ್ಯಕ್ತಿಗೆ ನಾವು ಸಲ್ಲಿಸಬಹುದಾದ ಅತ್ಯುತ್ತಮ ಅಭಿನಂದನೆಗಳಲ್ಲಿ ಒಂದಾಗಿದೆ. ಹಾಗಾದರೆ, ಮಾನವ ಇತಿಹಾಸದಲ್ಲೇ ಅತ್ಯಂತ ಮಹಾ ನಾಯಕನಾದ ಯೇಸು ಕ್ರಿಸ್ತನನ್ನು ನಾವು ಅನುಕರಿಸಲು ಪ್ರಯತ್ನಿಸಬಾರದೊ? ನಾವು ಅದನ್ನು ಹೇಗೆ ಮಾಡಬಹುದು? ಅವನ ನಾಯಕತ್ವವನ್ನು ಅಂಗೀಕರಿಸುವುದು ನಮ್ಮ ಜೀವಿತದ ಮೇಲೆ ಯಾವ ಪ್ರಭಾವವನ್ನು ಬೀರುವುದು? ಮುಂದಿನ ಲೇಖನಗಳಲ್ಲಿ ಈ ಪ್ರಶ್ನೆಗಳನ್ನು ಮತ್ತು ಇನ್ನಿತರ ಪ್ರಶ್ನೆಗಳನ್ನು ಚರ್ಚಿಸಲಾಗುವುದು.

[ಪಾದಟಿಪ್ಪಣಿ]

^ ಪ್ಯಾರ. 6 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 186-92ನೆಯ ಪುಟಗಳನ್ನು ನೋಡಿರಿ.

[ಪುಟ 4ರಲ್ಲಿರುವ ಚಿತ್ರ]

ದಾನಿಯೇಲನು ದೇವರಾದುಕೊಂಡ ನಾಯಕನ ಬರೋಣವನ್ನು ಮುಂತಿಳಿಸಿದನು

[ಪುಟ 7ರಲ್ಲಿರುವ ಚಿತ್ರಗಳು]

ಯೇಸುವಿನ ಬೋಧನೆಗಳು ಜನರನ್ನು, ಜೀವನದ ಸಮಸ್ಯೆಗಳನ್ನು ನಿಭಾಯಿಸುವಂತೆ ಸಿದ್ಧಪಡಿಸಿದವು

[ಪುಟ 7ರಲ್ಲಿರುವ ಚಿತ್ರ]

ಯೇಸು ವಿಧೇಯ ಮಾನವರನ್ನು ಶಾಂತಿಭರಿತವಾದ ನೂತನ ಲೋಕದೊಳಗೆ ನಡೆಸುವನು