ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೆಯ ನಾಯಕತ್ವ ಲೋಕವ್ಯಾಪಕವಾಗಿ ಎದ್ದಿರುವ ಸವಾಲು

ಒಳ್ಳೆಯ ನಾಯಕತ್ವ ಲೋಕವ್ಯಾಪಕವಾಗಿ ಎದ್ದಿರುವ ಸವಾಲು

ಒಳ್ಳೆಯ ನಾಯಕತ್ವ ಲೋಕವ್ಯಾಪಕವಾಗಿ ಎದ್ದಿರುವ ಸವಾಲು

ಅವನೊಬ್ಬ ಲೇಖಕನೂ ಕವಿಯೂ ಆಗಿದ್ದನು. ಭವಿಷ್ಯತ್ತು ಸರ್ವರಿಗೂ ಸುಕ್ಷೇಮವನ್ನು ತರುವುದೆಂಬ ನಿರೀಕ್ಷೆ ಅವನ ಹೃದಯದಲ್ಲಿ ತುಂಬಿ ತುಳುಕುತ್ತಿತ್ತು. ಸುಮಾರು 90 ವರುಷಗಳಿಗೆ ಹಿಂದೆ, “ಭಯರಹಿತವಾದ ಮನಸ್ಸು, ಆಶಾವಾದದಿಂದ ಮೇಲೆತ್ತಿದ ತಲೆ, ಉಚಿತವಾಗಿ ಲಭ್ಯವಾಗುವ ಜ್ಞಾನ, ರಾಷ್ಟ್ರೀಯ ಗಡಿಗಳಿಂದ ಛಿದ್ರವಾಗಿಲ್ಲದ, ಸತ್ಯವನ್ನಾಡುವ, ಅವಿಶ್ರಾಂತ ಪ್ರಯಾಸದ ಕಾರಣ ಪರಿಪೂರ್ಣತೆಗೆ ಸಮೀಪವಾಗಿರುವ ಸಾಧನೆಗಳಿರುವ ಒಂದು ಲೋಕದ” ಬಗ್ಗೆ ಅವನು ಊಹಿಸಿಕೊಂಡನು.

ಆ ಬಳಿಕ ಆ ಲೇಖಕನು, ಒಂದಾನೊಂದು ದಿನ ತನ್ನ ದೇಶ ಹಾಗೂ ಜಗತ್ತಿನ ಇತರ ದೇಶಗಳು ಅಂತಹ ಸ್ಥಳದಲ್ಲಿರುವವು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದನು. ನೋಬೆಲ್‌ ಪಾರಿತೋಷಕ ವಿಜೇತನಾದ ಈ ಕವಿಯು ಇಂದು ಜೀವಿಸುತ್ತಿರುತ್ತಿದ್ದಲ್ಲಿ, ಅತ್ಯಂತ ನಿರಾಶೆಗೊಳಗಾಗುತ್ತಿದ್ದನೆಂಬುದು ನಿಶ್ಚಯ. ಸಕಲ ರೀತಿಯ ಅಭಿವೃದ್ಧಿ ಮತ್ತು ಪ್ರಗತಿಗಳು ಆಗಿರುವುದಾದರೂ, ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಛಿದ್ರಗೊಂಡಿದೆ. ಒಟ್ಟಿನಲ್ಲಿ, ಮಾನವನ ಭವಿಷ್ಯವು ನಿರಾಶಾದಾಯಕವಾಗಿದೆ.

ತನ್ನ ದೇಶದಲ್ಲಿ ಕೆಲವು ಪಂಗಡಗಳ ಮಧ್ಯೆ ಹಿಂಸಾಚಾರವು ಥಟ್ಟನೆ ಎದ್ದುಬರಲು ಕಾರಣವೇನೆಂದು ಕೇಳಲಾಗಿ, ಒಬ್ಬ ರೈತನು ತನಗೆ ಕಂಡುಬಂದ ಒಂದು ಕಾರಣವನ್ನು ಹೇಳಿದನು. “ಕೆಟ್ಟ ನಾಯಕರೇ ಇದಕ್ಕೆ ಕಾರಣ” ಎಂದನವನು. ಮಾನವತ್ವ​—ಇಪ್ಪತ್ತನೆಯ ಶತಮಾನದ ನೈತಿಕ ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಇತಿಹಾಸಕಾರರಾದ ಜಾನತನ್‌ ಗ್ಲೋವರ್‌ ತದ್ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ: “[ಅದೇ ದೇಶದಲ್ಲಿ] ನಡೆದ ಜನಹತ್ಯೆಯು, ಕುಲಗಳ ಮಧ್ಯೆ ಇರುವ ದ್ವೇಷದ ಕಾರಣ ಸ್ವಾಭಾವಿಕವಾಗಿ ಎದ್ದುಬರಲಿಲ್ಲ, ಅದು ತಮ್ಮ ಅಧಿಕಾರವನ್ನು ತಮ್ಮದಾಗಿಯೇ ಇಟ್ಟುಕೊಳ್ಳಲು ಜನರು ಯೋಜಿಸಿದ ಸಂಗತಿಯಾಗಿತ್ತು.”

ಹಿಂದಿನ ಯುಗೊಸ್ಲಾವಿಯದ ಎರಡು ಗಣರಾಜ್ಯಗಳ ಮಧ್ಯೆ 1990ಗಳ ಆರಂಭದಲ್ಲಿ ಯುದ್ಧವು ನಡೆದಾಗ, ಒಬ್ಬ ಪತ್ರಕರ್ತರು ಬರೆದುದು: “ನಾವು ಅನೇಕ ವರ್ಷಕಾಲ ಸಂತೋಷದಿಂದ ಕೂಡಿ ಜೀವಿಸುತ್ತಿದ್ದೆವು, ಆದರೆ ಈಗ ನಾವು ಒಬ್ಬರು ಇನ್ನೊಬ್ಬರ ಶಿಶುಗಳನ್ನು ಹತಿಸುವಷ್ಟು ಕೀಳ್ಮಟ್ಟಕ್ಕಿಳಿದಿದ್ದೇವೆ. ನಾವು ಹೀಗೇಕೆ ವರ್ತಿಸುತ್ತಿದ್ದೇವೆಂದು ನಮಗೇ ತಿಳಿಯುವುದಿಲ್ಲ.”

ಯೂರೋಪ್‌ ಮತ್ತು ಆಫ್ರಿಕದಿಂದ ಸಾವಿರಾರು ಕಿಲೊಮೀಟರ್‌ ದೂರದಲ್ಲಿ, ಮೇಲೆ ಹೇಳಿರುವ ಕವಿಯ ಜನ್ಮಭೂಮಿಯಾಗಿರುವ ಭಾರತವಿದೆ. “ಭಾರತವು ಒಂದೇ ರಾಷ್ಟ್ರವಾಗಿ ಬದುಕಿ ಉಳಿಯಬಲ್ಲದೊ?” ಎಂಬ ಭಾಷಣದಲ್ಲಿ, ಪ್ರಣಯ್‌ ಗುಪ್ತೆ ಎಂಬ ಲೇಖಕರು ಹೇಳಿದ್ದು: ‘ಭಾರತದ ಜನಸಂಖ್ಯೆಯಲ್ಲಿ ಸುಮಾರು 70 ಪ್ರತಿಶತ ಜನರು 30ಕ್ಕಿಂತ ಕೆಳಪ್ರಾಯದವರಾಗಿದ್ದಾರೆ, ಆದರೆ ಅವರಿಗೆ ಆದರ್ಶಪ್ರಾಯರಾಗಿರುವ ನಾಯಕರೇ ಇಲ್ಲ.’

ಕೆಲವು ದೇಶಗಳಲ್ಲಿ, ಭ್ರಷ್ಟಾಚಾರದ ಆರೋಪಗಳ ಕಾರಣ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕಾಗಿ ಬಂದಿದೆ. ಹೀಗೆ ಅನೇಕ ಕಾರಣಗಳಿಂದಾಗಿ, ಜಗತ್ತು ನಾಯಕತ್ವದ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ಪರಿಸ್ಥಿತಿಗಳು, ಸುಮಾರು 2,600 ವರುಷಗಳ ಹಿಂದೆ ಜೀವಿಸುತ್ತಿದ್ದ ಪ್ರವಾದಿಯೊಬ್ಬನ ಮಾತುಗಳ ಸತ್ಯತೆಗೆ ಸಾಕ್ಷಿ ನೀಡುತ್ತವೆ. ಅವನಂದದ್ದು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”​—ಯೆರೆಮೀಯ 10:23.

ಹಾಗಾದರೆ, ಈಗಿನ ಲೋಕಸಂಕಟಕ್ಕೆ ಪರಿಹಾರವಿದೆಯೆ? ಮಾನವ ಸಮಾಜವನ್ನು, ಕಲಹ-ಛಿದ್ರವೂ ಭಯಭರಿತವೂ ಆಗಿಲ್ಲದಿರುವಂಥ, ಜ್ಞಾನವು ಉಚಿತವಾಗಿ ಮತ್ತು ಸಮೃದ್ಧವಾಗಿ ದೊರೆಯುವಂಥ ಮತ್ತು ಮಾನವಕುಲವು ಪರಿಪೂರ್ಣತೆಗೆ ಅಭಿಮುಖವಾಗಿ ಮುನ್ನಡೆಯುತ್ತಿರುವಂತಹ ಜಗತ್ತಿಗೆ ಯಾರು ತಾನೇ ನಡೆಸಬಲ್ಲರು?

[ಪುಟ 3ರಲ್ಲಿರುವ ಚಿತ್ರ ಕೃಪೆ]

Fatmir Boshnjaku