ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನು ತನ್ನ ಸಭೆಯನ್ನು ನಡೆಸುತ್ತಾನೆ

ಕ್ರಿಸ್ತನು ತನ್ನ ಸಭೆಯನ್ನು ನಡೆಸುತ್ತಾನೆ

ಕ್ರಿಸ್ತನು ತನ್ನ ಸಭೆಯನ್ನು ನಡೆಸುತ್ತಾನೆ

“ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” ​—ಮತ್ತಾಯ 28:20.

1, 2. (ಎ) ಶಿಷ್ಯರನ್ನಾಗಿ ಮಾಡಲು ಆಜ್ಞಾಪಿಸಿದಾಗ, ಪುನರುತ್ಥಾನಗೊಂಡಿದ್ದ ಯೇಸು ತನ್ನ ಅನುಯಾಯಿಗಳಿಗೆ ಯಾವ ವಚನವನ್ನಿತ್ತನು? (ಬಿ) ಯೇಸು ಆದಿ ಕ್ರೈಸ್ತ ಸಭೆಯನ್ನು ಹೇಗೆ ಸಕ್ರಿಯವಾಗಿ ನಡೆಸಿದನು?

ದಿವಾರೋಹಣಕ್ಕೆ ಮೊದಲು, ನಮ್ಮ ಪುನರುತ್ಥಿತ ನಾಯಕನಾದ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕಾಣಿಸಿಕೊಂಡು, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.​—ಮತ್ತಾಯ 23:​10, NW; ಮತ್ತಾಯ 28:​18-20.

2 ಯೇಸು ತನ್ನ ಶಿಷ್ಯರಿಗೆ ಇನ್ನೂ ಹೆಚ್ಚು ಶಿಷ್ಯರನ್ನು ಮಾಡುವ ಜೀವರಕ್ಷಕ ಕೆಲಸವನ್ನು ನೇಮಿಸಿದ್ದು ಮಾತ್ರವಲ್ಲ, ತಾನು ಅವರೊಂದಿಗೆ ಇರುತ್ತೇನೆಂದೂ ವಚನಕೊಟ್ಟನು. ಬೈಬಲಿನ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ದಾಖಲೆಯಾಗಿರುವ ಆದಿ ಕ್ರೈಸ್ತತ್ವದ ಇತಿಹಾಸವು, ಕ್ರಿಸ್ತನು ತನ್ನ ಅಧಿಕಾರವನ್ನು ಹೊಸದಾಗಿ ರಚಿಸಲ್ಪಟ್ಟಿದ್ದ ಕ್ರೈಸ್ತ ಸಭೆಯನ್ನು ನಡೆಸಲಿಕ್ಕಾಗಿ ಉಪಯೋಗಿಸಿದನೆಂದು ತೋರಿಸುತ್ತದೆ. ಅವನು ವಾಗ್ದತ್ತ “ಸಹಾಯಕ”ನನ್ನು ಅಂದರೆ ಪವಿತ್ರಾತ್ಮವನ್ನು, ಅದು ತನ್ನ ಶಿಷ್ಯರನ್ನು ಬಲಪಡಿಸಿ, ಅವರ ಪ್ರಯತ್ನಗಳನ್ನು ಮಾರ್ಗದರ್ಶಿಸಲಿಕ್ಕಾಗಿ ಕಳುಹಿಸಿದನು. (ಯೋಹಾನ 16:7; ಅ. ಕೃತ್ಯಗಳು 2:​4, 33; 13:2-4; 16:​6-10) ಪುನರುತ್ಥಾನಗೊಂಡಿದ್ದ ಯೇಸು ತನ್ನ ಅಧಿಕಾರದ ಕೆಳಗಿದ್ದ ದೇವದೂತರನ್ನು, ತನ್ನ ಶಿಷ್ಯರನ್ನು ಬೆಂಬಲಿಸಲಿಕ್ಕಾಗಿ ಉಪಯೋಗಿಸಿದನು. (ಅ. ಕೃತ್ಯಗಳು 5:19; 8:26; 10:​3-8, 22; 12:​7-11; 27:​23, 24; 1 ಪೇತ್ರ 3:22) ಇದಲ್ಲದೆ ನಮ್ಮ ನಾಯಕನು, ಸಭೆಯ ನಿರ್ದೇಶನಕ್ಕಾಗಿ ಆಡಳಿತ ಮಂಡಲಿಯಾಗಿ ಸೇವೆ ಮಾಡಲು ಅರ್ಹರಾಗಿರುವ ಪುರುಷರನ್ನು ಒದಗಿಸಿದನು.​—ಅ. ಕೃತ್ಯಗಳು 1:​20, 24-26; 6:​1-6; 8:​5, 14-17.

3. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು?

3 ಆದರೆ ನಮ್ಮ ದಿನಗಳಲ್ಲಿ, ಅಂದರೆ “ಯುಗದ ಸಮಾಪ್ತಿ”ಯಲ್ಲಿ ಏನು ನಡೆಯುತ್ತಿದೆ? ಯೇಸು ಕ್ರಿಸ್ತನು ಇಂದು ಕ್ರೈಸ್ತ ಸಭೆಯನ್ನು ಹೇಗೆ ನಡೆಸುತ್ತಿದ್ದಾನೆ? ಮತ್ತು ಅವನ ನಾಯಕತ್ವವನ್ನು ನಾವು ಅಂಗೀಕರಿಸುತ್ತೇವೆಂಬುದನ್ನು ನಾವು ಹೇಗೆ ತೋರಿಸಬಲ್ಲೆವು?

ಯಜಮಾನನಿಗಿರುವ ನಂಬಿಗಸ್ತ ಆಳು

4. (ಎ) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಲ್ಲಿ’ ಯಾರು ಸೇರಿದ್ದಾರೆ? (ಬಿ) ಯಜಮಾನನು ಆಳಿನ ವಶಕ್ಕೆ ಏನನ್ನು ಕೊಟ್ಟಿದ್ದಾನೆ?

4 ತನ್ನ ಸಾನ್ನಿಧ್ಯದ ಸೂಚನೆಗಳನ್ನು ಕೊಡುತ್ತಿದ್ದಾಗ ಯೇಸು ಹೇಳಿದ್ದು: “ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು.” (ಮತ್ತಾಯ 24:​45-47) ಇಲ್ಲಿ ಹೇಳಲ್ಪಟ್ಟಿರುವ “ಯಜಮಾನನು” ನಮ್ಮ ನಾಯಕನಾದ ಯೇಸು ಕ್ರಿಸ್ತನು. ಅವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಅಂದರೆ ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರ ಮಂಡಲಿಯನ್ನು ತನ್ನ ಭೂಸಂಬಂಧವಾದ ಎಲ್ಲ ವಿಷಯಗಳನ್ನು ನೋಡಿಕೊಳ್ಳಲಿಕ್ಕಾಗಿ ನೇಮಿಸಿದ್ದಾನೆ.

5, 6. (ಎ) ಅಪೊಸ್ತಲ ಯೋಹಾನನು ಪಡೆದ ದರ್ಶನದಲ್ಲಿ, “ಏಳು ಚಿನ್ನದ ದೀಪಸ್ತಂಭಗಳು” ಮತ್ತು “ಏಳು ನಕ್ಷತ್ರಗಳು” ಏನನ್ನು ಚಿತ್ರಿಸುತ್ತವೆ? (ಬಿ) “ಏಳು ನಕ್ಷತ್ರಗಳು” ಯೇಸುವಿನ ಬಲಗೈಯಲ್ಲಿರುವುದು ಏನನ್ನು ಸೂಚಿಸುತ್ತದೆ?

5 ಬೈಬಲಿನ ಪ್ರಕಟನೆ ಪುಸ್ತಕವು, ಈ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ನೇರವಾಗಿ ಯೇಸು ಕ್ರಿಸ್ತನ ನಿಯಂತ್ರಣದಡಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. “ಕರ್ತನ ದಿನ”ದ ಒಂದು ದರ್ಶನದಲ್ಲಿ ಅಪೊಸ್ತಲ ಯೋಹಾನನು, “ಏಳು ಚಿನ್ನದ ದೀಪಸ್ತಂಭಗಳನ್ನೂ ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ” ಕಂಡನು. ಅವನ “ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು.” ಈ ದರ್ಶನವನ್ನು ಯೋಹಾನನಿಗೆ ವಿವರಿಸುವಾಗ ಯೇಸು ಹೇಳಿದ್ದು: “ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ​—ಆ ಏಳು ನಕ್ಷತ್ರಗಳು ಅಂದರೆ ಆ ಏಳು ಸಭೆಗಳ ದೂತರು; ಆ ಏಳು ದೀಪಸ್ತಂಭಗಳು ಅಂದರೆ ಆ ಏಳು ಸಭೆಗಳು.”​—ಪ್ರಕಟನೆ 1:​1, 10-20.

6 ಆ “ಏಳು ಚಿನ್ನದ ದೀಪಸ್ತಂಭಗಳು” 1914ರಲ್ಲಿ ಆರಂಭಗೊಂಡ “ಕರ್ತನ ದಿನದಲ್ಲಿ” ಅಸ್ತಿತ್ವದಲ್ಲಿದ್ದ ಸತ್ಯ ಕ್ರೈಸ್ತರ ಸಮಸ್ತ ಸಭೆಗಳನ್ನು ಚಿತ್ರಿಸುತ್ತವೆ. ಆದರೆ ಆ “ಏಳು ನಕ್ಷತ್ರಗಳು” ಎಂದರೇನು? ಆರಂಭದಲ್ಲಿ ಅವು ಆ ಒಂದನೆಯ ಶತಮಾನದ ಸಭೆಗಳನ್ನು ನೋಡಿಕೊಳ್ಳುತ್ತಿದ್ದ ಎಲ್ಲ ಆತ್ಮಜನಿತ, ಅಭಿಷಿಕ್ತ ಮೇಲ್ವಿಚಾರಕರನ್ನು ಚಿತ್ರಿಸಿದವು. * ಈ ಮೇಲ್ವಿಚಾರಕರು ಯೇಸುವಿನ ಬಲಗೈಯಲ್ಲಿ ಅಂದರೆ ಅವನ ನಿಯಂತ್ರಣ ಮತ್ತು ನಿರ್ದೇಶನದ ಕೆಳಗಿದ್ದರು. ಹೌದು, ಕ್ರಿಸ್ತ ಯೇಸುವು ಈ ಅನೇಕ ವ್ಯಕ್ತಿಗಳಿಂದ ಸಂಘಟಿತವಾಗಿದ್ದ ಆಳು ವರ್ಗವನ್ನು ನಡೆಸಿದನು. ಆದರೆ ಈಗ, ಇಂತಹ ಅಭಿಷಿಕ್ತ ಮೇಲ್ವಿಚಾರಕರ ಸಂಖ್ಯೆಯು ಕೊಂಚವಿದೆ. ಹಾಗಾದರೆ ಕ್ರಿಸ್ತನ ನಾಯಕತ್ವವು ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳ 93,000 ಸಭೆಗಳನ್ನು ಹೇಗೆ ವ್ಯಾಪಿಸುತ್ತದೆ?

7. (ಎ) ಸಭೆಗಳಲ್ಲಿ ಭೂವ್ಯಾಪಕವಾಗಿ ನಾಯಕತ್ವವನ್ನು ಒದಗಿಸಲು ಯೇಸು ಆಡಳಿತ ಮಂಡಲಿಯನ್ನು ಹೇಗೆ ಉಪಯೋಗಿಸುತ್ತಾನೆ? (ಬಿ) ಕ್ರೈಸ್ತ ಮೇಲ್ವಿಚಾರಕರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟವರೆಂದು ಏಕೆ ಹೇಳಸಾಧ್ಯವಿದೆ?

7 ಒಂದನೆಯ ಶತಮಾನದಲ್ಲಿದ್ದಂತೆ, ಇಂದು ಸಹ ಅಭಿಷಿಕ್ತ ಮೇಲ್ವಿಚಾರಕರಲ್ಲಿ ಅರ್ಹ ಪುರುಷರ ಒಂದು ಸಣ್ಣ ಗುಂಪು, ನಂಬಿಗಸ್ತನೂ ವಿವೇಕಿಯೂ ಆದಂಥ ಸಂಘಟಿತ ಆಳನ್ನು ಪ್ರತಿನಿಧಿಸುತ್ತ, ಆಡಳಿತ ಮಂಡಲಿಯಾಗಿ ಕಾರ್ಯನಡೆಸುತ್ತದೆ. ಈ ಆಡಳಿತ ಮಂಡಲಿಯು ಅರ್ಹರಾದ ಪುರುಷರನ್ನು​—ಅವರು ಆತ್ಮಾಭಿಷಿಕ್ತರಾಗಿರಬಹುದು, ಇಲ್ಲದಿರಬಹುದು​—ಸ್ಥಳಿಕ ಸಭೆಯಲ್ಲಿ ಹಿರಿಯರಾಗಿ ನೇಮಿಸುವಂತೆ ನಮ್ಮ ನಾಯಕನು ಉಪಯೋಗಿಸುತ್ತಾನೆ. ಈ ಸಂಬಂಧದಲ್ಲಿ, ಯೇಸುವಿನ ಅಧಿಕಾರದಲ್ಲಿ ಉಪಯೋಗಿಸಲ್ಪಡುವಂತೆ ಯೆಹೋವನು ಕೊಟ್ಟಿರುವ ಪವಿತ್ರಾತ್ಮವು ಅತಿ ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸುತ್ತದೆ. (ಅ. ಕೃತ್ಯಗಳು 2:​32, 33) ಮೊದಲನೆಯದಾಗಿ, ಈ ಮೇಲ್ವಿಚಾರಕರು ಪವಿತ್ರಾತ್ಮಪ್ರೇರಿತವಾದ ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಆವಶ್ಯಕತೆಗಳನ್ನು ತಲಪಬೇಕಾಗಿದೆ. (1 ತಿಮೊಥೆಯ 3:​1-7; ತೀತ 1:​5-9; 2 ಪೇತ್ರ 1:​20, 21) ಅವರ ಶಿಫಾರಸ್ಸುಗಳನ್ನೂ ನೇಮಕಗಳನ್ನೂ ಪ್ರಾರ್ಥನಾಪೂರ್ವಕವಾಗಿ ಮತ್ತು ದೇವರಾತ್ಮದ ಮಾರ್ಗದರ್ಶನೆಯ ಕೆಳಗೆ ಮಾಡಲ್ಪಡುತ್ತದೆ. ಇದಲ್ಲದೆ, ನೇಮಕ ಹೊಂದಿರುವ ವ್ಯಕ್ತಿಗಳು ಆ ಆತ್ಮದ ಫಲವನ್ನು ತಾವು ಉತ್ಪಾದಿಸುತ್ತಿದ್ದೇವೆಂಬುದಕ್ಕೆ ಪುರಾವೆಯನ್ನು ಕೊಡುತ್ತಾರೆ. (ಗಲಾತ್ಯ 5:​22, 23) ಆದುದರಿಂದ, ಪೌಲನ ಈ ಕೆಳಗಿನ ಸಲಹೆಯು, ಅಭಿಷಿಕ್ತರಾಗಿರುವ ಮತ್ತು ಅಭಿಷಿಕ್ತರಲ್ಲದ ಎಲ್ಲ ಹಿರಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ: “ಪವಿತ್ರಾತ್ಮವು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:28) ನೇಮಕ ಹೊಂದಿರುವ ಈ ಪುರುಷರು ಆಡಳಿತ ಮಂಡಲಿಯಿಂದ ನಿರ್ದೇಶನವನ್ನು ಪಡೆದು, ಸಭೆಯನ್ನು ಇಷ್ಟಪೂರ್ವಕವಾಗಿ ಪಾಲಿಸುತ್ತಾರೆ. ಹೀಗೆ ಕ್ರಿಸ್ತನು ಈಗ ನಮ್ಮ ಕೂಡ ಇದ್ದು, ಸಭೆಯನ್ನು ಸಕ್ರಿಯವಾಗಿ ನಡೆಸುತ್ತಿದ್ದಾನೆ.

8. ತನ್ನ ಶಿಷ್ಯರನ್ನು ನಡೆಸಲು ಕ್ರಿಸ್ತನು ದೇವದೂತರನ್ನು ಹೇಗೆ ಉಪಯೋಗಿಸುತ್ತಾನೆ?

8 ಯೇಸು ಇಂದು ತನ್ನ ಹಿಂಬಾಲಕರನ್ನು ನಡೆಸಲು ನಿಜವಾದ ದೇವದೂತರನ್ನೂ ಉಪಯೋಗಿಸುತ್ತಾನೆ. ಗೋದಿ ಮತ್ತು ಹಣಜಿಯ ದೃಷ್ಟಾಂತಕ್ಕನುಸಾರ, ಸುಗ್ಗೀಕಾಲವು “ಯುಗದ ಸಮಾಪ್ತಿ”ಯಲ್ಲಿ ಬರುತ್ತದೆ. ಹಾಗಾದರೆ ಕೊಯ್ಲಿನ ಕೆಲಸದಲ್ಲಿ ಯಜಮಾನನು ಯಾರನ್ನು ಉಪಯೋಗಿಸುತ್ತಾನೆ? “ಕೊಯ್ಯುವವರು ಅಂದರೆ ದೇವದೂತರು” ಎಂದನು ಕ್ರಿಸ್ತನು. ಅವನು ಮುಂದುವರಿಸಿ ಹೇಳಿದ್ದು: “ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು; ಅವರು ಆತನ ರಾಜ್ಯದೊಳಗಿಂದ ಎಲ್ಲಾ ಕಂಟಕರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕೀಕೊಂಡದಲ್ಲಿ ಹಾಕುವರು.” (ಮತ್ತಾಯ 13:​37-41) ಅಲ್ಲದೆ, ಇಥಿಯೋಪ್ಯದ ಕಂಚುಕಿಯನ್ನು ಕಂಡುಹಿಡಿಯಲು ಒಬ್ಬ ದೇವದೂತನು ಫಿಲಿಪ್ಪನನ್ನು ನಡೆಸಿದಂತೆಯೇ, ಇಂದು ಪ್ರಾಮಾಣಿಕ ಹೃದಯಿಗಳನ್ನು ಕಂಡುಹಿಡಿಯುವ ಸತ್ಯ ಕ್ರೈಸ್ತರ ಕೆಲಸವನ್ನು ನಿರ್ದೇಶಿಸುವುದರಲ್ಲಿ ಕ್ರಿಸ್ತನು ತನ್ನ ದೂತರನ್ನು ಉಪಯೋಗಿಸುತ್ತಾನೆಂಬುದಕ್ಕೆ ಹೇರಳವಾದ ಪುರಾವೆಯಿದೆ.​—ಅ. ಕೃತ್ಯಗಳು 8:​26, 27; ಪ್ರಕಟನೆ 14:6.

9. (ಎ) ಕ್ರಿಸ್ತನು ಕ್ರೈಸ್ತ ಸಭೆಯನ್ನು ಯಾವುದರ ಮೂಲಕ ನಡೆಸುತ್ತಾನೆ? (ಬಿ) ಕ್ರಿಸ್ತನ ನಾಯಕತ್ವದಿಂದ ನಾವು ಪ್ರಯೋಜನ ಪಡೆಯಬೇಕಾದರೆ ಯಾವ ಪ್ರಶ್ನೆಯನ್ನು ಪರಿಗಣಿಸಬೇಕು?

9 ಇಂದು ಯೇಸು ಕ್ರಿಸ್ತನು ಆಡಳಿತ ಮಂಡಲಿ, ಪವಿತ್ರಾತ್ಮ ಮತ್ತು ದೇವದೂತರ ಮೂಲಕ ತನ್ನ ಶಿಷ್ಯರಿಗೆ ನಾಯಕತ್ವವನ್ನು ಒದಗಿಸುತ್ತಾನೆ ಎಂಬುದನ್ನು ತಿಳಿಯುವುದು ಎಷ್ಟು ಪುನರಾಶ್ವಾಸನೆಯನ್ನು ನೀಡುತ್ತದೆ! ಹಿಂಸೆ ಅಥವಾ ಬೇರೆ ಕಾರಣಗಳ ನಿಮಿತ್ತ ಯೆಹೋವನ ಆರಾಧಕರಲ್ಲಿ ಕೆಲವರು ಆಡಳಿತ ಮಂಡಲಿಯ ಸಂಪರ್ಕದಿಂದ ತಾತ್ಕಾಲಿಕವಾಗಿ ಬೇರ್ಪಟ್ಟರೂ, ಕ್ರಿಸ್ತನು ಆಗಲೂ ಪವಿತ್ರಾತ್ಮ ಮತ್ತು ದೇವದೂತರ ಬೆಂಬಲದಿಂದ ನಾಯಕತ್ವವನ್ನು ಒದಗಿಸುವನು. ಆದರೂ, ಅದನ್ನು ಅಂಗೀಕರಿಸಿದರೆ ಮಾತ್ರ ನಾವು ಅದರಿಂದ ಪ್ರಯೋಜನ ಪಡೆಯುತ್ತೇವೆ. ಹಾಗಾದರೆ, ಕ್ರಿಸ್ತನ ನಾಯಕತ್ವವನ್ನು ನಾವು ಒಪ್ಪಿಕೊಳ್ಳುತ್ತೇವೆಂಬುದನ್ನು ನಾವು ಹೇಗೆ ತೋರಿಸಬಹುದು?

“ಮಾತನ್ನು ಕೇಳಿರಿ . . . ಅಧೀನರಾಗಿರಿ”

10. ಸಭೆಯಲ್ಲಿ ನೇಮಕ ಹೊಂದಿರುವ ಹಿರಿಯರಿಗೆ ನಾವು ಹೇಗೆ ಆದರವನ್ನು ತೋರಿಸಬಲ್ಲೆವು?

10 ನಮ್ಮ ನಾಯಕನು ಸಭೆಗಳಿಗೆ ‘ಪುರುಷರಲ್ಲಿ ವರದಾನಗಳನ್ನು’ ಅಂದರೆ “ಕೆಲವರನ್ನು . . . ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ” ಕೊಟ್ಟನು. (ಎಫೆಸ 4:​8, 11, 12, NW) ಅವರ ಕಡೆಗಿನ ನಮ್ಮ ಮನೋಭಾವಗಳೂ ವರ್ತನೆಗಳೂ, ನಾವು ಕ್ರಿಸ್ತನ ನಾಯಕತ್ವವನ್ನು ಅಂಗೀಕರಿಸುತ್ತೇವೊ ಇಲ್ಲವೊ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಕ್ರಿಸ್ತನು ಕೊಟ್ಟಿರುವ ಆತ್ಮಿಕಾರ್ಹತೆಯ ಪುರುಷರಿಗೆ “ಕೃತಜ್ಞತೆಯುಳ್ಳವರು” ಆಗಿರುವುದು ಸಮಂಜಸವಾದ ವಿಷಯವಾಗಿದೆ. (ಕೊಲೊಸ್ಸೆ 3:15) ಅವರು ನಮ್ಮ ಸನ್ಮಾನಕ್ಕೂ ಅರ್ಹರು. “ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು . . . ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು” ಎಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 5:17) ಹಾಗಾದರೆ ಇಂತಹ ಹಿರೀ ಪುರುಷರಿಗೆ ಅಂದರೆ ಹಿರಿಯರು ಅಥವಾ ಮೇಲ್ವಿಚಾರಕರಿಗೆ ನಾವು ಕೃತಜ್ಞತೆಯನ್ನೂ ಮಾನ್ಯತೆಯನ್ನೂ ಹೇಗೆ ತೋರಿಸಬಲ್ಲೆವು? ಪೌಲನು ಉತ್ತರ ಕೊಡುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, [“ವಿಧೇಯರಾಗಿರಿ,” NW] ಅವರಿಗೆ ಅಧೀನರಾಗಿರಿ.” (ಇಬ್ರಿಯ 13:17) ಹೌದು, ನಾವು ಅವರಿಗೆ ವಿಧೇಯರೂ ಅಧೀನರೂ ಆಗಿರಬೇಕು, ಅವರಿಗೆ ಮಣಿಯುವವರಾಗಿರಬೇಕು.

11. ಹಿರಿಯರ ಏರ್ಪಾಡಿಗೆ ನಾವು ತೋರಿಸುವ ಗೌರವವು, ನಮ್ಮ ದೀಕ್ಷಾಸ್ನಾನಕ್ಕೆ ಅನುಸಾರವಾಗಿ ಜೀವಿಸುವುದರ ಒಂದು ಭಾಗವಾಗಿದೆ ಏಕೆ?

11 ನಮ್ಮ ನಾಯಕನು ಪರಿಪೂರ್ಣನು. ಆದರೆ ಅವನು ಕೊಟ್ಟಿರುವ ಪುರುಷರಲ್ಲಿನ ವರದಾನಗಳು ಪರಿಪೂರ್ಣರಲ್ಲ. ಆದಕಾರಣ, ಅವರು ಆಗಾಗ ತಪ್ಪು ಮಾಡಿಯಾರು. ಆದರೂ, ನಾವು ಕ್ರಿಸ್ತನ ಏರ್ಪಾಡಿಗೆ ನಿಷ್ಠರಾಗಿರುವುದು ಮಹತ್ವಪೂರ್ಣವಾಗಿದೆ. ವಾಸ್ತವದಲ್ಲಿ, ನಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕನುಸಾರವಾಗಿ ಜೀವಿಸುವುದೆಂದರೆ, ಸಭೆಯ ಆತ್ಮನಿಯಮಿತ ಅಧಿಕಾರದ ಔಚಿತ್ಯವನ್ನು ಒಪ್ಪಿಕೊಂಡು ಅದಕ್ಕೆ ಇಷ್ಟಪೂರ್ವಕವಾಗಿ ಅಧೀನರಾಗಿರುವುದೆಂದರ್ಥ. ‘ಪವಿತ್ರಾತ್ಮದ ಹೆಸರಿನಲ್ಲಿ’ ನಾವು ತೆಗೆದುಕೊಳ್ಳುವ ದೀಕ್ಷಾಸ್ನಾನವು, ನಾವು ಪವಿತ್ರಾತ್ಮವು ಏನಾಗಿದೆಯೆಂಬುದನ್ನು ತಿಳಿದುಕೊಂಡು ಯೆಹೋವನ ಉದ್ದೇಶಗಳಲ್ಲಿ ಅದು ವಹಿಸುವ ಪಾತ್ರವನ್ನು ಒಪ್ಪಿಕೊಳ್ಳುತ್ತೇವೆಂಬುದರ ಬಹಿರಂಗ ಪ್ರಕಟನೆಯಾಗಿರುತ್ತದೆ. (ಮತ್ತಾಯ 28:19) ಇಂತಹ ದೀಕ್ಷಾಸ್ನಾನವು, ನಾವು ಆ ಆತ್ಮದೊಂದಿಗೆ ಸಹಕರಿಸುತ್ತೇವೆಂದೂ, ಕ್ರಿಸ್ತನ ಹಿಂಬಾಲಕರ ಮಧ್ಯೆ ಅದು ನಡೆಸುವ ಕಾರ್ಯಕ್ಕೆ ಯಾವ ತಡೆಯನ್ನೂ ಹಾಕುವುದಿಲ್ಲವೆಂಬುದನ್ನೂ ಸೂಚಿಸುತ್ತದೆ. ಪವಿತ್ರಾತ್ಮವು ಹಿರಿಯರ ವಿಷಯದಲ್ಲಿ ಮಾಡುವ ಶಿಫಾರಸ್ಸು ಮತ್ತು ನೇಮಕದಲ್ಲಿ ಮಹತ್ತಾದ ಪಾತ್ರವನ್ನು ವಹಿಸುವುದರಿಂದ, ಸಭೆಯಲ್ಲಿರುವ ಹಿರಿಯರ ಏರ್ಪಾಡಿನೊಂದಿಗೆ ನಾವು ಸಹಕರಿಸದಿದ್ದರೆ, ನಮ್ಮ ಸಮರ್ಪಣೆಗೆ ನಾವು ನಿಜವಾಗಿಯೂ ನಂಬಿಗಸ್ತರಾಗಿರುತ್ತೇವೊ?

12. ಅಧಿಕಾರಕ್ಕೆ ಅಗೌರವವನ್ನು ತೋರಿಸುವ ಯಾವ ಉದಾಹರಣೆಗಳನ್ನು ಯೂದನು ಕೊಡುತ್ತಾನೆ ಮತ್ತು ಅವು ನಮಗೆ ಏನನ್ನು ಕಲಿಸುತ್ತವೆ?

12 ವಿಧೇಯತೆ ಮತ್ತು ಅಧೀನತೆಯ ಮೌಲ್ಯವನ್ನು ತೋರಿಸುವ ಉದಾಹರಣೆಗಳು ಶಾಸ್ತ್ರದಲ್ಲಿವೆ. ಸಭೆಯಲ್ಲಿ ನೇಮಕ ಪಡೆದಿದ್ದವರನ್ನು ದೂಷಿಸುತ್ತಿದ್ದ ವ್ಯಕ್ತಿಗಳಿಗೆ ಸೂಚಿಸುತ್ತ, ಶಿಷ್ಯ ಯೂದನು ಮೂರು ಎಚ್ಚರಿಕೆಯ ಉದಾಹರಣೆಗಳನ್ನು ಕೊಡುತ್ತಾನೆ: “ಅವರ ಗತಿಯನ್ನು ಏನು ಹೇಳಲಿ; ಇವರು ಕಾಯಿನನ ಮಾರ್ಗವನ್ನು ಹಿಡಿದವರೂ ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಣುಗಿದವರೂ ಕೋರಹನಂತೆ ಎದುರುಮಾತುಗಳನ್ನಾಡಿ ನಾಶವಾಗಿಹೋಗತಕ್ಕವರೂ ಆಗಿದ್ದಾರೆ.” (ಯೂದ 11) ಕಾಯಿನನು ಯೆಹೋವನ ಪ್ರೀತಿಪೂರ್ವಕವಾದ ಸಲಹೆಯನ್ನು ಅಲಕ್ಷ್ಯಮಾಡಿ, ಕೊಲೆಗೆ ನಡೆಸುವ ದ್ವೇಷಮಾರ್ಗವನ್ನು ಬೇಕುಬೇಕೆಂದು ಅನುಸರಿಸಿದನು. (ಆದಿಕಾಂಡ 4:​4-8) ಬಿಳಾಮನು ದೈವಿಕ ಎಚ್ಚರಿಕೆಯನ್ನು ಪದೇ ಪದೇ ಪಡೆದರೂ ಆರ್ಥಿಕ ಬಹುಮಾನಕ್ಕಾಗಿ ದೇವಜನರನ್ನು ಶಪಿಸಲು ಪ್ರಯತ್ನಿಸಿದನು. (ಅರಣ್ಯಕಾಂಡ 22:​5-28, 32-34; ಧರ್ಮೋಪದೇಶಕಾಂಡ 23:5) ಕೋರಹನಿಗೆ ಇಸ್ರಾಯೇಲಿನಲ್ಲಿ ಗೌರವದ ಸ್ಥಾನವಿದ್ದರೂ ಅದರಲ್ಲಿ ಅವನಿಗೆ ತೃಪ್ತಿಯಿರಲಿಲ್ಲ. ಆದುದರಿಂದ ಅವನು ಭೂಮಿಯ ಮೇಲಿರುವ ಎಲ್ಲ ಮನುಷ್ಯರಿಗಿಂತಲೂ ಬಹುಸಾತ್ವಿಕನಾಗಿದ್ದ ದೇವರ ಸೇವಕನ ವಿರುದ್ಧ ದಂಗೆಯನ್ನು ಚಿತಾಯಿಸಿದನು. (ಅರಣ್ಯಕಾಂಡ 12:3; 16:1-3, 32, 33) ಆದರೆ ಕಾಯಿನ, ಬಿಳಾಮ ಮತ್ತು ಕೋರಹರಿಗೆ ವಿಪತ್ತು ಬಂದೆರಗಿತು. ಯೆಹೋವನು ಜವಾಬ್ದಾರಿಯ ಸ್ಥಾನಗಳಲ್ಲಿ ಉಪಯೋಗಿಸುವವರ ಸಲಹೆಗಳಿಗೆ ಕಿವಿಗೊಟ್ಟು, ಅವರನ್ನು ಗೌರವಿಸಬೇಕೆಂಬ ಪಾಠವನ್ನು ಈ ಉದಾಹರಣೆಗಳು ಎಷ್ಟು ವಿಶದವಾಗಿ ಬೋಧಿಸುತ್ತವೆ!

13. ಹಿರಿಯರ ಏರ್ಪಾಡಿಗೆ ಅಧೀನರಾಗುವವರಿಗೆ ಯಾವ ಆಶೀರ್ವಾದಗಳನ್ನು ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು?

13 ಕ್ರೈಸ್ತ ಸಭೆಯಲ್ಲಿ ನಮ್ಮ ನಾಯಕನು ಇಟ್ಟಿರುವ ಮೇಲ್ವಿಚಾರಣೆಯ ಈ ಮಹಾ ಏರ್ಪಾಡಿನಿಂದ ಯಾರು ತಾನೇ ಪ್ರಯೋಜನ ಪಡೆಯಲು ಬಯಸುವುದಿಲ್ಲ? ಯೆಶಾಯ ಪ್ರವಾದಿಯು ಹೀಗೆ ಹೇಳುತ್ತ ಅದರ ಆಶೀರ್ವಾದಗಳನ್ನು ಮುಂತಿಳಿಸಿದನು: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು. ಮತ್ತು ಒಬ್ಬ ಪುರುಷನು [“ಪ್ರತಿಯೊಬ್ಬನೂ,” NW] ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” (ಯೆಶಾಯ 32:​1, 2) ಹಿರಿಯರಲ್ಲಿ ಪ್ರತಿಯೊಬ್ಬನು ಇಂತಹ ಸಂರಕ್ಷಣೆ ಮತ್ತು ಸುರಕ್ಷೆಯ ಸ್ಥಳವಾಗಿರಬೇಕು. ಅಧಿಕಾರಕ್ಕೆ ಅಧೀನತೆಯನ್ನು ತೋರಿಸುವುದು ನಮಗೆ ಕಷ್ಟಕರವಾಗಬಹುದಾದರೂ, ನಾವು ಸಭೆಯೊಳಗೆ ದೇವರಿಂದ ವಿಧಿಸಲಾಗಿರುವ ಅಧಿಕಾರಕ್ಕೆ ವಿಧೇಯರು ಮತ್ತು ಅಧೀನರು ಆಗಿರಲು ಪ್ರಾರ್ಥನಾಪೂರ್ವಕವಾಗಿ ಪ್ರಯತ್ನಿಸೋಣ.

ಹಿರಿಯರು ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗುವ ವಿಧ

14, 15. ಸಭೆಯಲ್ಲಿ ನಾಯಕತ್ವ ವಹಿಸುವವರು ತಾವು ಕ್ರಿಸ್ತನ ನಾಯಕತ್ವಕ್ಕೆ ಅಧೀನರೆಂದು ಹೇಗೆ ತೋರಿಸುತ್ತಾರೆ?

14 ಪ್ರತಿಯೊಬ್ಬ ಕ್ರೈಸ್ತನು, ವಿಶೇಷವಾಗಿ ಹಿರಿಯರು ಕ್ರಿಸ್ತನ ನಾಯಕತ್ವವನ್ನು ಅನುಸರಿಸಬೇಕು. ಮೇಲ್ವಿಚಾರಕರಿಗೆ ಅಥವಾ ಹಿರಿಯರಿಗೆ ಸಭೆಯಲ್ಲಿ ಸ್ವಲ್ಪಮಟ್ಟಿಗೆ ಅಧಿಕಾರವಿರುತ್ತದೆ. ಆದರೆ ಜೊತೆವಿಶ್ವಾಸಿಗಳ ಜೀವಿತಗಳನ್ನು ನಿಯಂತ್ರಿಸಲು ಪ್ರಯತ್ನಿಸುವ ಮೂಲಕ ಮೇಲ್ವಿಚಾರಕರು ‘ಅವರ ನಂಬಿಕೆಯ ಮೇಲೆ ದೊರೆತನ ಮಾಡಲು’ ಪ್ರಯತ್ನಿಸುವುದಿಲ್ಲ. (2 ಕೊರಿಂಥ 1:24) ಹಿರಿಯರು ಯೇಸುವಿನ ಈ ಮಾತುಗಳಿಗೆ ಕಿವಿಗೊಡುತ್ತಾರೆ: “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರಬಾರದು.” (ಮತ್ತಾಯ 20:​25-27) ಹೀಗೆ, ಹಿರಿಯರು ತಮ್ಮ ಜವಾಬ್ದಾರಿಗಳನ್ನು ನೆರವೇರಿಸುವಾಗ, ಅವರು ಇತರರ ಸೇವೆಮಾಡಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತಾರೆ.

15 ಕ್ರೈಸ್ತರು ಹೀಗೆ ಪ್ರೋತ್ಸಾಹಿಸಲ್ಪಡುತ್ತಾರೆ: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು [“ನಿಮ್ಮಲ್ಲಿ ನಾಯಕತ್ವ ವಹಿಸುವವರನ್ನು,” NW] ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” (ಇಬ್ರಿಯ 13:7) ಹಿರಿಯರು ನಾಯಕತ್ವ ವಹಿಸುವ ಕಾರಣ ಅವರ ನಂಬಿಕೆಯನ್ನು ಅನುಸರಿಸಬೇಕೆಂದು ಇದರ ಅರ್ಥವಲ್ಲ. ಏಕೆಂದರೆ ಯೇಸು ಹೇಳಿದ್ದು: “ಕ್ರಿಸ್ತನೊಬ್ಬನೇ ನಿಮಗೆ ಗುರುವು [“ನಾಯಕನು,” NW].” (ಮತ್ತಾಯ 23:10) ನಾವು ಅನುಸರಿಸಬೇಕಾಗಿರುವುದು ಅವರ ನಂಬಿಕೆಯನ್ನೇ, ಏಕೆಂದರೆ ಅವರು ನಮ್ಮ ನಿಜ ನಾಯಕನಾದ ಕ್ರಿಸ್ತನನ್ನು ಅನುಕರಿಸುತ್ತಾರೆ. (1 ಕೊರಿಂಥ 11:1) ಹಿರಿಯರು ಸಭೆಯಲ್ಲಿರುವ ಇತರರೊಂದಿಗಿನ ಸಂಬಂಧದಲ್ಲಿ ಕ್ರಿಸ್ತಸದೃಶರಾಗಿರಲು ಪ್ರಯತ್ನಿಸುವ ಕೆಲವು ವಿಧಗಳನ್ನು ಪರಿಗಣಿಸಿರಿ.

16. ಅಧಿಕಾರವುಳ್ಳವನಾಗಿದ್ದರೂ ಯೇಸು ತನ್ನ ಹಿಂಬಾಲಕರನ್ನು ಹೇಗೆ ಉಪಚರಿಸಿದನು?

16 ಯೇಸು ಸಕಲ ವಿಧಗಳಲ್ಲಿಯೂ ಅಪರಿಪೂರ್ಣ ಮಾನವರಿಗಿಂತ ಶ್ರೇಷ್ಠನಾಗಿದ್ದರೂ ಮತ್ತು ತನ್ನ ತಂದೆಯಿಂದ ಅತುಲ್ಯ ಅಧಿಕಾರವನ್ನು ಹೊಂದಿದವನಾಗಿದ್ದರೂ, ಅವನು ತನ್ನ ಶಿಷ್ಯರೊಂದಿಗಿನ ವರ್ತನೆಯಲ್ಲಿ ಅಭಿಮಾನಮಿತಿಯನ್ನು ತೋರಿಸಿದನು. ತನಗಿರುವ ಜ್ಞಾನದ ಆಡಂಬರದ ಪ್ರದರ್ಶನವನ್ನು ಮಾಡಿ ಅವನು ತನ್ನ ಕೇಳುಗರನ್ನು ಭಾವಪರವಶರನ್ನಾಗಿ ಮಾಡಲಿಲ್ಲ. ಅವನು ತನ್ನ ಹಿಂಬಾಲಕರ ಕಡೆಗೆ ಸೂಕ್ಷ್ಮ ಸಂವೇದನೆಯನ್ನು ಮತ್ತು ಕನಿಕರವನ್ನು ತೋರಿಸಿ, ಮಾನವ ಆವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡನು. (ಮತ್ತಾಯ 15:32; 26:​40, 41; ಮಾರ್ಕ 6:31) ತನ್ನ ಶಿಷ್ಯರು ಕೊಡಲು ಸಾಧ್ಯವಾಗುವುದಕ್ಕಿಂತ ಹೆಚ್ಚನ್ನು ಅವನು ಅವರಿಂದ ಕೇಳಲೂ ಇಲ್ಲ, ಅವರಿಗೆ ಹೊರಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಅವರ ಮೇಲೆ ಹೇರಲೂ ಇಲ್ಲ. (ಯೋಹಾನ 16:12) ಯೇಸು “ಸಾತ್ವಿಕನೂ ದೀನ ಮನಸ್ಸುಳ್ಳವನೂ” ಆಗಿದ್ದನು. ಆದಕಾರಣ, ಅನೇಕರು ಅವನನ್ನು ಚೈತನ್ಯದಾಯಕವಾಗಿ ಕಂಡುಕೊಂಡದ್ದರಲ್ಲಿ ಆಶ್ಚರ್ಯವಿಲ್ಲ.​—ಮತ್ತಾಯ 11:​28-30, NW.

17. ಹಿರಿಯರು ಸಭೆಯೊಂದಿಗಿನ ತಮ್ಮ ಸಂಬಂಧದಲ್ಲಿ ಕ್ರಿಸ್ತಸದೃಶ ಅಭಿಮಾನಮಿತಿಯನ್ನು ಹೇಗೆ ತೋರಿಸಬೇಕು?

17 ನಾಯಕನಾದ ಕ್ರಿಸ್ತನೇ ಅಭಿಮಾನಮಿತಿಯನ್ನು ತೋರಿಸಿರುವಾಗ, ಸಭೆಯಲ್ಲಿ ನಾಯಕತ್ವವನ್ನು ವಹಿಸುವವರು ಅದೆಷ್ಟು ಹೆಚ್ಚು ಅಭಿಮಾನಮಿತಿಯನ್ನು ತೋರಿಸಬೇಕು! ಹೌದು, ತಮಗೆ ವಹಿಸಲ್ಪಟ್ಟಿರುವ ಅಧಿಕಾರವನ್ನು ಅಪಪ್ರಯೋಗಿಸದಂತೆ ಅವರು ಜಾಗ್ರತೆ ವಹಿಸುತ್ತಾರೆ. ಇತರರ ಮನಮೆಚ್ಚಿಸಲಿಕ್ಕಾಗಿ ಅವರು ‘ವಾಕ್ಚಾತುರ್ಯದಿಂದ ಬರುವುದಿಲ್ಲ.’ (1 ಕೊರಿಂಥ 2:​1, 2) ಬದಲಿಗೆ, ಅವರು ಶಾಸ್ತ್ರಸಂಬಂಧವಾದ ಸತ್ಯದ ಮಾತುಗಳನ್ನು ಸರಳತೆಯಿಂದಲೂ ಯಥಾರ್ಥತೆಯಿಂದಲೂ ಹೇಳಲು ಪ್ರಯತ್ನಿಸುತ್ತಾರೆ. ಅಲ್ಲದೆ, ಇತರರಿಂದ ಅಪೇಕ್ಷಿಸುವ ವಿಷಯಗಳ ಸಂಬಂಧದಲ್ಲಿ ಅವರು ನ್ಯಾಯಸಮ್ಮತತೆಯನ್ನು ತೋರಿಸಿ, ಅವರ ಆವಶ್ಯಕತೆಗಳ ಕುರಿತು ಪರಿಗಣನೆ ತೋರಿಸಲು ಪ್ರಯತ್ನಿಸುತ್ತಾರೆ. (ಫಿಲಿಪ್ಪಿ 4:5) ಪ್ರತಿಯೊಬ್ಬರಿಗೂ ಅವರವರ ಇತಿಮಿತಿಗಳಿವೆಯೆಂಬುದನ್ನು ತಿಳಿದಿರುವ ಅವರು, ತಮ್ಮ ಸಹೋದರರಲ್ಲಿರುವ ಈ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. (1 ಪೇತ್ರ 4:8) ಮತ್ತು ದೈನ್ಯಭಾವದ ಹಾಗೂ ಮೃದುಸ್ವಭಾವದ ಹಿರಿಯರು ನಿಜವಾಗಿಯೂ ಚೈತನ್ಯದಾಯಕರಾಗಿರುತ್ತಾರಲ್ಲವೊ? ಖಂಡಿತವಾಗಿಯೂ ಹಾಗಿರುತ್ತಾರೆ.

18. ಯೇಸು ಮಕ್ಕಳನ್ನು ಉಪಚರಿಸಿದ ರೀತಿಯಿಂದ ಹಿರಿಯರು ಏನು ಕಲಿಯಬಲ್ಲರು?

18 ಚಿಕ್ಕವರೂ ಯಾವುದೇ ಹಿಂಜರಿಕೆಯಿಲ್ಲದೆ ಯೇಸುವಿನ ಬಳಿ ಬರುತ್ತಿದ್ದರು. ಜನರು “ಚಿಕ್ಕ ಮಕ್ಕಳನ್ನು . . . ಆತನ ಬಳಿಗೆ” ತರುವುದನ್ನು ನೋಡಿ ಅವನ ಶಿಷ್ಯರು ಅವರನ್ನು ಗದರಿಸಿದಾಗ, ಯೇಸು ಹೇಳಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ಬಳಿಕ ಅವನು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.” (ಮಾರ್ಕ 10:​13-16) ಯೇಸು ಸ್ನೇಹಭಾವದವನೂ ದಯಾಪರನೂ ಆಗಿದ್ದುದರಿಂದ, ಜನರು ಅವನ ಕಡೆಗೆ ಆಕರ್ಷಿತರಾದರು. ಜನರು ಯೇಸುವನ್ನು ನೋಡಿ ಭಯಪಡಲಿಲ್ಲ. ಅವನ ಹತ್ತಿರವಿದ್ದಾಗ ಮಕ್ಕಳೂ ಆರಾಮವಾಗಿದ್ದರು. ಹಿರಿಯರೂ ಸ್ನೇಹಪರರಾಗಿದ್ದಾರೆ ಮತ್ತು ಅವರು ಹೃತ್ಪೂರ್ವಕವಾದ ಮಮತೆ ಹಾಗೂ ದಯೆಯನ್ನು ತೋರಿಸುವಾಗ, ಇತರರು​—ಮಕ್ಕಳು ಸಹ​—ಅವರ ಮುಂದೆ ಆರಾಮವಾಗಿರುತ್ತಾರೆ.

19. “ಕ್ರಿಸ್ತನ ಮನಸ್ಸು” ನಮ್ಮಲ್ಲಿರುವುದರಲ್ಲಿ ಏನು ಒಳಗೂಡಿದೆ, ಮತ್ತು ಇದು ಯಾವ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ?

19 ಹಿರಿಯರು ಯೇಸು ಕ್ರಿಸ್ತನನ್ನು ಎಷ್ಟರ ಮಟ್ಟಿಗೆ ಅನುಕರಿಸಬಲ್ಲರೆಂಬುದು, ಅವರು ಅವನನ್ನು ಎಷ್ಟು ಉತ್ತಮವಾಗಿ ತಿಳಿದುಕೊಂಡಿದ್ದಾರೆ ಎಂಬುದರ ಮೇಲೆ ಹೊಂದಿಕೊಂಡಿದೆ. ಪೌಲನು, “ಕರ್ತನ [“ಯೆಹೋವನ,” NW] ಮನಸ್ಸನ್ನು ತಿಳುಕೊಂಡು ಆತನಿಗೆ ಉಪದೇಶಿಸುವವನಾರು” ಎಂದು ಕೇಳಿದನು. ಬಳಿಕ ಅವನು ಹೇಳಿದ್ದು: “ನಮಗಾದರೋ ಕ್ರಿಸ್ತನ ಮನಸ್ಸು ದೊರಕಿತು.” (1 ಕೊರಿಂಥ 2:16) ಕ್ರಿಸ್ತನ ಮನಸ್ಸು ನಮಗಿರುವುದರಲ್ಲಿ, ಅವನ ಆಲೋಚನೆಗಳೂ ಅವನ ವ್ಯಕ್ತಿತ್ವದ ಪೂರ್ತಿ ವ್ಯಾಪ್ತಿಯ ನಮೂನೆಯೂ ನಮ್ಮಲ್ಲಿರುವುದು ಸೇರಿದೆ. ಇದರಿಂದಾಗಿ ಅವನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಏನು ಮಾಡುತ್ತಿದ್ದಿರಬಹುದೆಂಬುದು ನಮಗೆ ತಿಳಿಯುತ್ತದೆ. ನಮ್ಮ ನಾಯಕನ ಅಷ್ಟು ಉತ್ತಮವಾದ ಪರಿಚಯವನ್ನು ಮಾಡಿಕೊಳ್ಳುವುದರ ಕುರಿತು ಊಹಿಸಿರಿ! ಹೌದು, ಇದು ಸುವಾರ್ತಾ ವೃತ್ತಾಂತಗಳಿಗೆ ನಿಕಟವಾದ ಗಮನವನ್ನು ಕೊಡುವುದು ಮತ್ತು ಯೇಸುವಿನ ಜೀವನ ಹಾಗೂ ಮಾದರಿಯ ತಿಳಿವಳಿಕೆಯಿಂದ ನಮ್ಮ ಮನಸ್ಸುಗಳನ್ನು ಕ್ರಮವಾಗಿ ತುಂಬಿಸಿಕೊಳ್ಳುವುದನ್ನು ಕೇಳಿಕೊಳ್ಳುತ್ತದೆ. ಹಿರಿಯರು ಅಷ್ಟರ ಮಟ್ಟಿಗೆ ಕ್ರಿಸ್ತನ ನಾಯಕತ್ವವನ್ನು ಅನುಸರಿಸಲು ಪ್ರಯತ್ನಿಸುವಾಗ, ಸಭೆಯಲ್ಲಿರುವವರು ಅವರ ನಂಬಿಕೆಯನ್ನು ಅನುಕರಿಸಲು ಹೆಚ್ಚು ಮನಸ್ಸುಳ್ಳವರಾಗುತ್ತಾರೆ. ಮತ್ತು ಇತರರು ಸಹ ನಾಯಕನ ಹೆಜ್ಜೆಜಾಡಿನಲ್ಲಿ ಹರ್ಷದಿಂದ ನಡೆಯುವುದನ್ನು ನೋಡುವ ಸಂತೃಪ್ತಿ ಹಿರಿಯರಿಗಿರುತ್ತದೆ.

ಕ್ರಿಸ್ತನ ನಾಯಕತ್ವದ ಕೆಳಗೆ ಮುಂದುವರಿಯಿರಿ

20, 21. ನಾವು ವಾಗ್ದತ್ತ ನೂತನ ಲೋಕವನ್ನು ಮುನ್ನೋಡುತ್ತಿರುವಾಗ, ನಮ್ಮ ದೃಢನಿರ್ಧಾರವು ಏನಾಗಿರಬೇಕು?

20 ನಾವೆಲ್ಲರೂ ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗಿ ಮುಂದುವರಿಯುವುದು ಮಹತ್ವವುಳ್ಳದ್ದು. ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ನಾವು ಸಮೀಪಿಸುವಾಗ, ನಮ್ಮ ನಿಲುವು, ಸಾ.ಶ.ಪೂ. 1473ರಲ್ಲಿ ಮೋವಾಬಿನ ಬಯಲಿನಲ್ಲಿ ಬಂದು ಸೇರಿದ್ದ ಇಸ್ರಾಯೇಲ್ಯರ ನಿಲುವಿಗೆ ಸಮಾನವಾಗಿದೆ. ಅವರು ಆಗ ವಾಗ್ದತ್ತ ದೇಶದ ಹೊಸ್ತಿಲಲ್ಲಿ ನಿಂತಿದ್ದರು. ಮತ್ತು ಪ್ರವಾದಿಯಾದ ಮೋಶೆಯ ಮೂಲಕ ದೇವರು ಹೀಗಂದನು: “ಯೆಹೋವನು ಇವರ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶಕ್ಕೆ ನೀನೇ [ಯೆಹೋಶುವನು] ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು.” (ಧರ್ಮೋಪದೇಶಕಾಂಡ 31:​7, 8) ಯೆಹೋಶುವನು ಅವರ ನೇಮಿತ ನಾಯಕನಾಗಿದ್ದನು. ವಾಗ್ದತ್ತ ದೇಶವನ್ನು ಪ್ರವೇಶಿಸಲಿಕ್ಕಾಗಿ ಇಸ್ರಾಯೇಲ್ಯರು ಯೆಹೋಶುವನ ನಾಯಕತ್ವಕ್ಕೆ ಅಧೀನರಾಗಬೇಕಾಗಿತ್ತು.

21 ‘ಕ್ರಿಸ್ತನೊಬ್ಬನೇ ನಿಮಗೆ ನಾಯಕನು’ ಎಂದು ಬೈಬಲು ನಮಗೆ ಹೇಳುತ್ತದೆ. ನೀತಿಭರಿತವಾಗಿರುವ ವಾಗ್ದತ್ತ ನೂತನ ಲೋಕದೊಳಗೆ ನಮ್ಮನ್ನು ನಡೆಸುವವನು ಕ್ರಿಸ್ತನೊಬ್ಬನೇ. (2 ಪೇತ್ರ 3:13) ಆದುದರಿಂದ, ನಾವು ನಮ್ಮ ಜೀವನದ ಸಕಲ ಕ್ಷೇತ್ರಗಳಲ್ಲಿ ಅವನ ನಾಯಕತ್ವಕ್ಕೆ ಅಧೀನರಾಗಿರಲು ದೃಢನಿರ್ಧಾರವನ್ನು ಮಾಡೋಣ.

[ಪಾದಟಿಪ್ಪಣಿ]

^ ಪ್ಯಾರ. 6 ಇಲ್ಲಿ “ನಕ್ಷತ್ರಗಳು” ಅಕ್ಷರಾರ್ಥ ದೇವದೂತರನ್ನು ಸೂಚಿಸುವುದಿಲ್ಲ. ಏಕೆಂದರೆ ಅದೃಶ್ಯ ಆತ್ಮಜೀವಿಗಳಿಗಾಗಿ ಮಾಹಿತಿಯನ್ನು ದಾಖಲಿಸಿಡುವಂತೆ ಯೇಸು ಒಬ್ಬ ಮಾನವನನ್ನು ಉಪಯೋಗಿಸುತ್ತಿರಲಿಲ್ಲ. ಆದಕಾರಣ, ಈ “ನಕ್ಷತ್ರಗಳು” ಯೇಸುವಿನ ಸಂದೇಶವಾಹಕರಾಗಿ ವೀಕ್ಷಿಸಲ್ಪಡುವ, ಸಭೆಗಳ ಮಾನವ ಮೇಲ್ವಿಚಾರಕರನ್ನು ಅಥವಾ ಹಿರಿಯರನ್ನು ಪ್ರತಿನಿಧಿಸಲೇಬೇಕು. ಏಳು ಆಗಿರುವ ಅವರ ಸಂಖ್ಯೆ ದೈವಿಕವಾಗಿ ನಿರ್ಣಯಿಸಲ್ಪಟ್ಟಿರುವ ಸಂಪೂರ್ಣತೆಯನ್ನು ಸೂಚಿಸುತ್ತದೆ.

ನಿಮಗೆ ನೆನಪಿದೆಯೆ?

• ಕ್ರಿಸ್ತನು ಆದಿ ಕ್ರೈಸ್ತ ಸಭೆಯನ್ನು ಹೇಗೆ ನಡೆಸಿದನು?

• ಕ್ರಿಸ್ತನು ಇಂದು ತನ್ನ ಸಭೆಯನ್ನು ಹೇಗೆ ನಡೆಸುತ್ತಾನೆ?

• ಸಭೆಯಲ್ಲಿ ನಾಯಕತ್ವ ವಹಿಸುವವರಿಗೆ ನಾವು ಏಕೆ ಅಧೀನರಾಗಿರಬೇಕು?

• ಕ್ರಿಸ್ತನು ತಮ್ಮ ನಾಯಕನೆಂಬುದನ್ನು ಹಿರಿಯರು ಯಾವ ವಿಧಗಳಲ್ಲಿ ತೋರಿಸಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಕ್ರಿಸ್ತನು ತನ್ನ ಸಭೆಯನ್ನು ನಡೆಸುತ್ತ, ಮೇಲ್ವಿಚಾರಕರನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡಿದ್ದಾನೆ

[ಪುಟ 16ರಲ್ಲಿರುವ ಚಿತ್ರಗಳು]

‘ನಿಮ್ಮಲ್ಲಿ ನಾಯಕತ್ವವನ್ನು ವಹಿಸುವವರಿಗೆ ವಿಧೇಯರಾಗಿದ್ದು, ಅವರಿಗೆ ಅಧೀನರಾಗಿರಿ’

[ಪುಟ 18ರಲ್ಲಿರುವ ಚಿತ್ರ]

ಯೇಸು ಪ್ರೀತಿಪರನೂ ಸ್ನೇಹಭಾವದವನೂ ಆಗಿದ್ದನು. ಕ್ರೈಸ್ತ ಹಿರಿಯರು ಅವನಂತಿರಲು ಪ್ರಯತ್ನಿಸುತ್ತಾರೆ