ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸುವ ಕೂಟಗಳು

ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸುವ ಕೂಟಗಳು

“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”

ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸುವ ಕೂಟಗಳು

ಟೊರಾಂಟೊದಿಂದ ಟೋಕ್ಯೊ ವರೆಗೆ, ಮಾಸ್ಕೊವಿನಿಂದ ಮಾನ್ಟೇವಡೆಯೋವಿನ ವರೆಗೆ​—ವಾರಕ್ಕೆ ಅನೇಕ ಬಾರಿ, ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಮತ್ತು ಅವರ ಸ್ನೇಹಿತರು ತಮ್ಮ ಆರಾಧನಾ ಸ್ಥಳಗಳಿಗೆ ಪ್ರವಾಹದಂತೆ ಕೂಡಿಬರುತ್ತಾರೆ. ಇವರಲ್ಲಿ, ಇಡೀ ದಿನ ಕೆಲಸ ಮಾಡಿ ಆಯಾಸಗೊಂಡಿರುವ ಪರಿಶ್ರಮಿ ಕುಟುಂಬಸ್ಥ ಪುರುಷರು; ಶ್ರಮಶೀಲ ಪತ್ನಿಯರು ಹಾಗೂ ಚಿಕ್ಕ ಮಕ್ಕಳ ಸಮೇತ ಬರುವ ತಾಯಂದಿರು; ಇಡೀ ದಿನವನ್ನು ಶಾಲೆಯಲ್ಲಿ ಕಳೆದಿರುವ ಚುರುಕಿನ ಎಳೆಯರು; ನೋವು ಬೇನೆಗಳಿಂದ ನಿಧಾನ ಹೆಜ್ಜೆಗಳನ್ನು ಹಾಕುತ್ತಾ ಬರುವ ಬಲಹೀನ ವೃದ್ಧರು; ಧೀರ ವಿಧವೆಯರು ಮತ್ತು ಅನಾಥ ಮಕ್ಕಳು; ಸಾಂತ್ವನಕ್ಕಾಗಿ ಹುಡುಕುತ್ತಾ ಬರುವ ಖಿನ್ನ ಮನಸ್ಸಿನ ವ್ಯಕ್ತಿಗಳು ಒಳಗೂಡಿದ್ದಾರೆ.

ಈ ಯೆಹೋವನ ಸಾಕ್ಷಿಗಳು ಅನೇಕ ರೀತಿಯ ಸಾರಿಗೆ ಮಾಧ್ಯಮಗಳನ್ನು ಉಪಯೋಗಿಸುತ್ತಾರೆ​—ಅತ್ಯಂತ ವೇಗವಾದ ಬುಲೆಟ್‌ ಟ್ರೇನ್‌ಗಳಿಂದ ಹಿಡಿದು ಸಾಧುಪ್ರಾಣಿ ಕತ್ತೆಯ ವರೆಗೆ, ಕಿರಿದಾದ ಸುರಂಗ ರೈಲಿನಿಂದ ಹಿಡಿದು ಟ್ರಕ್‌ಗಳ ವರೆಗೆ. ಕೆಲವರು ಮೊಸಳೆಗಳಿಂದ ತುಂಬಿರುವ ನದಿಗಳನ್ನು ದಾಟಬೇಕಾಗಿರುವಾಗ, ಇನ್ನಿತರರು ದೊಡ್ಡ ನಗರಗಳ ಕಿರಿಕಿರಿಗೊಳಿಸುವ ವಾಹನ ಸಂಚಾರವನ್ನು ತಾಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಜನರು ಇಷ್ಟೊಂದು ಪ್ರಯಾಸಪಡುವುದು ಯಾತಕ್ಕಾಗಿ?

ಪ್ರಧಾನ ಕಾರಣವೇನೆಂದರೆ, ಕ್ರೈಸ್ತ ಕೂಟಗಳಿಗೆ ಹಾಜರಾಗು ವುದು ಮತ್ತು ಅದರಲ್ಲಿ ಭಾಗವಹಿಸುವುದು, ಯೆಹೋವ ದೇವರಿಗೆ ಆರಾಧನೆ ಸಲ್ಲಿಸುವ ಒಂದು ಪ್ರಮುಖ ವಿಧಾನವಾಗಿದೆ. (ಇಬ್ರಿಯ 13:15) ಅಪೊಸ್ತಲ ಪೌಲನು ಹೀಗೆ ಬರೆದಾಗ ಇನ್ನೊಂದು ಕಾರಣದೆಡೆಗೆ ಸೂಚಿಸಿದನು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು . . . ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಓರೆ ಅಕ್ಷರಗಳು ನಮ್ಮವು.) (ಇಬ್ರಿಯ 10:24, 25) ಪೌಲನು ಇಲ್ಲಿ ಕೀರ್ತನೆಗಾರ ದಾವೀದನ ಭಾವನೆಗಳನ್ನು ಪ್ರತಿಧ್ವನಿಸುತ್ತಿದ್ದಾನೆ. ಅವನು ಹಾಡಿದ್ದು: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.”​—ಕೀರ್ತನೆ 122:1.

ಕ್ರೈಸ್ತರು ತಮ್ಮ ಕೂಟಗಳಿಗೆ ಹಾಜರಾಗಲು ಸಂತೋಷಪಡುವುದು ಏಕೆ? ಏಕೆಂದರೆ ಅಲ್ಲಿ ಕೂಡಿಬರುವವರು ಕೇವಲ ಮೂಕ ಪ್ರೇಕ್ಷಕರಾಗಿರುವುದಿಲ್ಲ. ಬದಲಿಗೆ, ಕೂಟಗಳು ಅವರು ಪರಸ್ಪರರನ್ನು ತಿಳಿದುಕೊಳ್ಳಲು ಅವಕಾಶಗಳನ್ನು ಮಾಡಿಕೊಡುತ್ತವೆ. ವಿಶೇಷವಾಗಿ ಈ ಒಕ್ಕೂಟಗಳು ಕೇವಲ ಪಡೆದುಕೊಳ್ಳಲಿಕ್ಕಾಗಿ ಅಲ್ಲ, ಬದಲಾಗಿ ಕೊಡುವುದಕ್ಕಾಗಿಯೂ ಮತ್ತು ಒಬ್ಬರನ್ನೊಬ್ಬರು ಪ್ರೇರೇಪಿಸಲು, ಪ್ರೀತಿ ತೋರಿಸಲು ಮತ್ತು ಸತ್ಕಾರ್ಯಗಳಲ್ಲಿ ಒಳಗೂಡಲು ಸಂದರ್ಭಗಳನ್ನು ಒದಗಿಸಿಕೊಡುತ್ತವೆ. ಇದು ಕೂಟಗಳನ್ನು ಉತ್ತೇಜನದಾಯಕ ಸಂದರ್ಭಗಳನ್ನಾಗಿ ಮಾಡುತ್ತದೆ. ಮಾತ್ರವಲ್ಲದೆ, ಕ್ರೈಸ್ತ ಕೂಟಗಳು, “ನನ್ನ ಬಳಿಗೆ ಬನ್ನಿರಿ . . . ನಾನು ನಿಮಗೆ ಚೈತನ್ಯ ನೀಡುವೆನು” ಎಂಬ ತನ್ನ ವಾಗ್ದಾನವನ್ನು ಯೇಸು ಪೂರೈಸುವ ವಿಧಾನಗಳಲ್ಲಿ ಒಂದಾಗಿವೆ.​—ಮತ್ತಾಯ 11:​28, NW.

ಸಾಂತ್ವನ ಹಾಗೂ ಕಳಕಳಿಯ ಆಶ್ರಯಧಾಮ

ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳನ್ನು ಚೈತನ್ಯದಾಯಕವೆಂದು ವೀಕ್ಷಿಸಲು ಸಕಾರಣಗಳಿವೆ. ಒಂದು ವಿಷಯವೇನೆಂದರೆ, ಕೂಟಗಳಲ್ಲಿ ಆತ್ಮಿಕ ಆಹಾರವು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಸರಿಯಾದ ಸಮಯಕ್ಕೆ ಒದಗಿಸಲ್ಪಡುತ್ತದೆ. (ಮತ್ತಾಯ 24:45) ಕೂಟಗಳು, ಯೆಹೋವನ ಸೇವಕರನ್ನು ಆತನ ವಾಕ್ಯದ ನಿಪುಣ ಹಾಗೂ ಹುರುಪುಳ್ಳ ಬೋಧಕರಾಗಿ ಮಾಡುವುದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರ ಜೊತೆಗೆ, ರಾಜ್ಯ ಸಭಾಗೃಹದಲ್ಲಿ, ಸಹಾಯಮಾಡಲು ಸಿದ್ಧರೂ ಮನಸ್ಸುಳ್ಳವರೂ ಆಗಿರುವ ಮತ್ತು ಸಂಕಟಮಯ ಸಮಯದಲ್ಲಿ ಇತರರನ್ನು ಸಂತೈಸುವ ಪ್ರೀತಿಪೂರ್ವಕ, ಕಾಳಜಿಭರಿತ ಮತ್ತು ಕಳಕಳಿಯುಳ್ಳ ಸ್ನೇಹಿತರ ಗುಂಪನ್ನು ಕಂಡುಕೊಳ್ಳಬಹುದು.​—2 ಕೊರಿಂಥ 7:5-7.

ಫಿಲಿಸ್‌ನ ಅನುಭವವು ಇದಾಗಿತ್ತು. ಇವಳು, ತನ್ನ ಮಕ್ಕಳು ಐದು ಮತ್ತು ಎಂಟು ವರ್ಷ ಪ್ರಾಯದವರಾಗಿದ್ದಾಗ ತನ್ನ ಗಂಡನನ್ನು ಕಳೆದುಕೊಂಡ ವಿಧವೆಯಾಗಿದ್ದಾಳೆ. ಕ್ರೈಸ್ತ ಕೂಟಗಳು ತನ್ನ ಮತ್ತು ತನ್ನ ಎಳೆಯ ಮಕ್ಕಳ ಮೇಲೆ ಬೀರಿದ ಚೈತನ್ಯದಾಯಕ ಪರಿಣಾಮದ ಕುರಿತಾಗಿ ಮಾತಾಡುತ್ತಾ ಅವಳು ಹೇಳಿದ್ದು: “ರಾಜ್ಯ ಸಭಾಗೃಹಕ್ಕೆ ಹೋಗುವುದು ಸಾಂತ್ವನದಾಯಕವಾಗಿತ್ತು. ಏಕೆಂದರೆ ಜೊತೆ ವಿಶ್ವಾಸಿಗಳು ಯಾವಾಗಲೂ ಒಂದು ಆಲಿಂಗನ, ಒಂದು ಶಾಸ್ತ್ರೀಯ ವಿಚಾರ, ಅಥವಾ ಬಿಗಿಯಾದ ಹಸ್ತಲಾಘವದ ಮೂಲಕ ತಮ್ಮ ಪ್ರೀತಿ ಮತ್ತು ಕಳಕಳಿಯನ್ನು ವ್ಯಕ್ತಪಡಿಸುತ್ತಿದ್ದರು. ನಾನು ಯಾವಾಗಲೂ ಇರಲು ಬಯಸಿದ ಸ್ಥಳವು ಅದಾಗಿತ್ತು.”​—1 ಥೆಸಲೊನೀಕ 5:14.

ಮರೀ ಎಂಬವಳಿಗೆ ಒಂದು ದೊಡ್ಡ ಶಸ್ತ್ರಚಿಕಿತ್ಸೆಯಾದ ನಂತರ, ಗುಣವಾಗಲು ಕಡಿಮೆಪಕ್ಷ ಆರು ವಾರಗಳು ತಗಲಬಹುದು ಎಂದು ಅವಳ ಡಾಕ್ಟರ್‌ ಹೇಳಿದನು. ಅವಳ ಚೇತರಿಸಿಕೊಳ್ಳುವಿಕೆಯ ಪ್ರಾರಂಭದ ವಾರಗಳಲ್ಲಿ, ಮರೀ ಕೂಟಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಅವಳು ಮೊದಲಿನಂತೆ ಸಂತೋಷಿತಳಾಗಿಲ್ಲ ಎಂಬುದನ್ನು ಅವಳ ಡಾಕ್ಟರನು ಕಂಡುಕೊಂಡನು. ಅವಳು ಕೂಟಗಳಿಗೆ ಹಾಜರಾಗುತ್ತಿಲ್ಲ ಎಂಬುದನ್ನು ಅವನು ಗ್ರಹಿಸಿದ ನಂತರ, ಅವಳು ಹಾಗೆ ಮಾಡುವಂತೆ ಅವಳನ್ನು ಉತ್ತೇಜಿಸಿದನು. ತನ್ನ ಧರ್ಮದವನಾಗಿರದ ತನ್ನ ಗಂಡನು, ತನ್ನ ಆರೋಗ್ಯದ ಕುರಿತು ಕಾಳಜಿಯುಳ್ಳವನಾಗಿ ತನ್ನನ್ನು ಕೂಟಗಳಿಗೆ ಹೋಗಲು ಬಿಡಲಿಕ್ಕಿಲ್ಲವೆಂದು ಮರೀ ಉತ್ತರ ಕೊಟ್ಟಳು. ಆದುದರಿಂದ, ಪ್ರೋತ್ಸಾಹ ಮತ್ತು ಉತ್ತೇಜನಭರಿತ ಸಾಹಚರ್ಯಕ್ಕಾಗಿ ರಾಜ್ಯ ಸಭಾಗೃಹಕ್ಕೆ ಹೋಗುವಂತೆ “ಅಪ್ಪಣೆಕೊಡುವ” ಒಂದು ಅಧಿಕೃತ ಔಷಧಚೀಟಿಯನ್ನು ಆ ಡಾಕ್ಟರನು ಬರೆದುಕೊಟ್ಟನು. ಮರೀ ಮುಕ್ತಾಯಗೊಳಿಸುವುದು: “ಒಂದು ಕೂಟಕ್ಕೆ ಹಾಜರಾದ ನಂತರ, ನನಗೆ ಎಷ್ಟೋ ಮೇಲು ಅನಿಸಿತು. ನಾನು ಊಟ ಮಾಡತೊಡಗಿದೆ, ಇಡೀ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದೆ, ಮೊದಲಿನಷ್ಟು ಹೆಚ್ಚು ಬಾರಿ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳಲಿಲ್ಲ, ಮತ್ತು ಪುನಃ ನನ್ನ ಮುಖದಲ್ಲಿ ನಸುನಗೆಯು ಲಾಸ್ಯವಾಡುತ್ತಿತ್ತು!”​—ಜ್ಞಾನೋಕ್ತಿ 16:24.

ಕ್ರೈಸ್ತ ಕೂಟಗಳ ಪ್ರೀತಿಭರಿತ ವಾತಾವರಣವನ್ನು ಹೊರಗಿನವರು ಗಮನಿಸದೆ ಹೋಗುವುದಿಲ್ಲ. ಒಬ್ಬ ಕಾಲೇಜ್‌ ವಿದ್ಯಾರ್ಥಿನಿಯು ತನ್ನ ಜನಾಂಗಶಾಸ್ತ್ರದ ತರಗತಿಗಾಗಿ ಯೆಹೋವನ ಸಾಕ್ಷಿಗಳ ಬಗ್ಗೆ ಒಂದು ಲೇಖನವನ್ನು ಬರೆಯುವ ಆಯ್ಕೆಮಾಡಿದಳು. ಕೂಟಗಳಲ್ಲಿದ್ದ ವಾತಾವರಣದ ಕುರಿತಾಗಿ ಅವಳು ತನ್ನ ಲೇಖನದಲ್ಲಿ ಬರೆದದ್ದು: “ನಾನು ಪಡೆದುಕೊಂಡಂಥ ಆದರಪೂರ್ವಕ ಸ್ವಾಗತವು . . . ಮನಮುಟ್ಟುವಂಥದ್ದಾಗಿತ್ತು. . . . ಯೆಹೋವನ ಸಾಕ್ಷಿಗಳ ಸ್ನೇಹಭಾವವು ತುಂಬ ಪ್ರಧಾನ ಗುಣವಾಗಿತ್ತು ಮತ್ತು ಈ ವಾತಾವರಣದ ಅತಿ ಪ್ರಾಮುಖ್ಯವಾದ ಭಾಗವಾಗಿತ್ತು ಎಂದು ನನಗನಿಸುತ್ತದೆ.”​—1 ಕೊರಿಂಥ 14:25.

ಈ ತೊಂದರೆಭರಿತ ಲೋಕದಲ್ಲಿ, ಕ್ರೈಸ್ತ ಸಭೆಯು ಒಂದು ಆತ್ಮಿಕ ಆಶ್ರಯಧಾಮವಾಗಿದೆ. ಇದು ಶಾಂತಿ ಮತ್ತು ಪ್ರೀತಿಯ ತಂಗುದಾಣವಾಗಿದೆ. ಕೂಟಗಳಿಗೆ ಹಾಜರಿರುವ ಮೂಲಕ, ಕೀರ್ತನೆಗಾರನ ಮಾತುಗಳ ಸತ್ಯತೆಯನ್ನು ನೀವು ಸ್ವತಃ ಅನುಭವಿಸಬಹುದು: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”​—ಕೀರ್ತನೆ 133:1.

[ಪುಟ 25ರಲ್ಲಿರುವ ಚೌಕ/ಚಿತ್ರ]

ಒಂದು ವಿಶೇಷ ಅಗತ್ಯವನ್ನು ಪೂರೈಸುವುದು

ಕಿವುಡರಾಗಿರುವ ಜನರು ಕ್ರೈಸ್ತ ಕೂಟಗಳಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲರು? ಲೋಕದಾದ್ಯಂತ ಯೆಹೋವನ ಸಾಕ್ಷಿಗಳು ಸನ್ನೆ ಭಾಷೆಯ ಸಭೆಗಳನ್ನು ಏರ್ಪಡಿಸುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ, 27 ಸನ್ನೆ ಭಾಷೆಯ ಸಭೆಗಳು ಮತ್ತು 43 ಸನ್ನೆ ಭಾಷೆಯ ಗುಂಪುಗಳು ಅಮೆರಿಕದಲ್ಲಿ ಏರ್ಪಡಿಸಲ್ಪಟ್ಟಿವೆ. ಕಡಿಮೆಪಕ್ಷ 40 ಇತರ ದೇಶಗಳಲ್ಲಿ, ಈಗ ಸುಮಾರು 140 ಸನ್ನೆ ಭಾಷೆಯ ಸಭೆಗಳಿವೆ. ಕ್ರೈಸ್ತ ಪ್ರಕಾಶನಗಳನ್ನು 13 ಸನ್ನೆ ಭಾಷೆಗಳಲ್ಲಿ ವಿಡಿಯೋ ರೂಪದಲ್ಲಿ ತಯಾರಿಸಲಾಗಿದೆ.

ಕಿವುಡರು ಯೆಹೋವನನ್ನು ಸ್ತುತಿಸುವಂತೆ ಕ್ರೈಸ್ತ ಸಭೆಯು ಅವಕಾಶವನ್ನು ಮಾಡಿಕೊಡುತ್ತದೆ. ತೀವ್ರ ಖಿನ್ನತೆಯ ದಾಳಿಗಳಿಂದ ನರಳುತ್ತಿದ್ದ ಮತ್ತು ಆತ್ಮಹತ್ಯೆಯ ಅನಿಸಿಕೆಗಳಿದ್ದ ಫ್ರಾನ್ಸ್‌ನಲ್ಲಿರುವ ಒಬ್ಬ ಮಾಜಿ ಕ್ಯಾಥೊಲಿಕಳಾದ ಓಡೀಲ್‌ ಎಂಬವಳು, ಕ್ರೈಸ್ತ ಕೂಟಗಳ ಮೂಲಕ ಪಡೆದುಕೊಂಡಿರುವ ಬೈಬಲ್‌ ಶಿಕ್ಷಣಕ್ಕಾಗಿ ತುಂಬ ಗಣ್ಯತೆಯುಳ್ಳವಳಾಗಿದ್ದಾಳೆ. “ನಾನು ನನ್ನ ಆರೋಗ್ಯವನ್ನು ಮತ್ತು ಜೀವನಮಾಧುರ್ಯವನ್ನು ಪುನಃ ಪಡೆದುಕೊಂಡೆ,” ಎಂದು ಅವಳು ಹೇಳುತ್ತಾಳೆ. “ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಸತ್ಯವನ್ನು ಕಂಡುಕೊಂಡೆ. ಈಗ ಜೀವಿತದಲ್ಲಿ ನನಗೆ ಒಂದು ಉದ್ದೇಶವಿದೆ.”