ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕನ್ಯೆ ಮರಿಯಳಲ್ಲಿದ್ದ ಅಪರಿಪೂರ್ಣತೆಯು, ಅವಳಲ್ಲಿ ಗರ್ಭಧರಿಸಿದ ಯೇಸುವಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿತೊ?

“ಯೇಸು ಕ್ರಿಸ್ತನ ಜನನ”ದ ಕುರಿತು ಪ್ರೇರಿತ ದಾಖಲೆಯು ಹೇಳುವುದು: “ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಮಾಡಿರಲಾಗಿ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದುಬಂತು.” (ಮತ್ತಾಯ 1:18) ಹೌದು, ಮರಿಯಳ ಗರ್ಭಧಾರಣೆಯಲ್ಲಿ ದೇವರ ಪವಿತ್ರಾತ್ಮವು ಪ್ರಮುಖ ಪಾತ್ರವನ್ನು ವಹಿಸಿತು.

ಆದರೆ ಮರಿಯಳ ಒಳಗೆ ಏನು ಸಂಭವಿಸಿತು? ಆಕೆಯ ಅಂಡಾಣು ಆಕೆಯ ಗರ್ಭಧಾರಣೆಯಲ್ಲಿ ಯಾವ ಸಹಾಯವನ್ನಾದರೂ ಮಾಡಿತೊ? ಮರಿಯಳ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬ, ಯೆಹೂದ ಮತ್ತು ದಾವೀದರಿಗೆ ದೇವರು ಕೊಟ್ಟ ವಾಗ್ದಾನಕ್ಕನುಸಾರ, ಹುಟ್ಟುವ ಮಗು ಅವರ ನಿಜ ವಂಶಸ್ಥನಾಗಿರಬೇಕಾಗಿತ್ತು. (ಆದಿಕಾಂಡ 22:18; 26:24; 28:​10-14; 49:10; 2 ಸಮುವೇಲ 7:16) ಇಲ್ಲದಿದ್ದರೆ, ಮರಿಯಳಿಗೆ ಹುಟ್ಟುವ ಮಗು ಇನ್ನಾವ ವಿಧದಲ್ಲಿ ಆ ದೈವಿಕ ವಾಗ್ದಾನಗಳ ಹಕ್ಕುಳ್ಳ ಉತ್ತರಾಧಿಕಾರಿಯಾಗಸಾಧ್ಯವಿತ್ತು? ಅವನು ವಾಸ್ತವದಲ್ಲಿ ಅವಳ ಮಗನಾಗಿರಬೇಕಾಗಿತ್ತು.​—ಲೂಕ 3:​23-34.

ಯೆಹೋವನ ದೂತನು ಕನ್ಯೆಯಾಗಿದ್ದ ಮರಿಯಳಿಗೆ ಕಾಣಿಸಿಕೊಂಡು ಹೀಗಂದನು: “ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ ದೊರಕಿತು. ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.” (ಲೂಕ 1:​30, 31) ಗರ್ಭಧಾರಣೆಯಾಗಬೇಕಾದರೆ ಅಂಡಾಣುವು ಫಲಿತ ಮಾಡಲ್ಪಡಬೇಕು. ಆದುದರಿಂದ, ಯೆಹೋವ ದೇವರು ಹಾಗೆ ಮಾಡಿದ್ದು ಮರಿಯಳ ಗರ್ಭದಿಂದ ಒಂದು ಅಂಡಾಣುವನ್ನು ಫಲಿತಮಾಡಿಯೇ ಎಂಬುದು ಸ್ಪಷ್ಟ. ತನ್ನ ಏಕಜಾತ ಪುತ್ರನ ಜೀವವನ್ನು ಆತ್ಮಜೀವಿ ಕ್ಷೇತ್ರದಿಂದ ಭೂಮಿಗೆ ವರ್ಗಾಯಿಸುವ ಮೂಲಕ ಆತನು ಇದನ್ನು ಪೂರೈಸಿದನು.​—ಗಲಾತ್ಯ 4:4.

ಒಬ್ಬ ಅಪರಿಪೂರ್ಣ ಸ್ತ್ರೀಯಲ್ಲಿ ಈ ರೀತಿ ಗರ್ಭಧರಿಸಿದ ಶಿಶುವು, ಶಾರೀರಿಕವಾಗಿ ಪರಿಪೂರ್ಣನೂ ಪಾಪವಿಮುಕ್ತನೂ ಆಗಿರಬಲ್ಲನೊ? ಪರಿಪೂರ್ಣತೆ ಮತ್ತು ಅಪರಿಪೂರ್ಣತೆಯು ಹೀಗೆ ಐಕ್ಯವಾಗುವಾಗ, ಆನುವಂಶೀಯತೆಯ ನಿಯಮಗಳು ಹೇಗೆ ಕಾರ್ಯನಡಿಸುತ್ತವೆ? ದೇವಕುಮಾರನ ಪರಿಪೂರ್ಣ ಜೀವಶಕ್ತಿಯನ್ನು ಸ್ಥಳಾಂತರಿಸುವುದರಲ್ಲಿ ಮತ್ತು ಗರ್ಭಧಾರಣೆಯನ್ನು ಉಂಟುಮಾಡುವುದರಲ್ಲಿ ಪವಿತ್ರಾತ್ಮವು ಉಪಯೋಗಿಸಲ್ಪಟ್ಟಿತು ಎಂಬುದನ್ನು ನೆನಪಿನಲ್ಲಿಡಿರಿ. ಇದು ಮರಿಯಳ ಅಂಡಾಣುವಿನಲ್ಲಿದ್ದ ಯಾವುದೇ ಅಪರಿಪೂರ್ಣತೆಯನ್ನು ರದ್ದುಮಾಡಿತು. ಹೀಗೆ ಆರಂಭದಿಂದಲೇ ಅದು ಪರಿಪೂರ್ಣವಾಗಿರುವ ತಳಿಶಾಸ್ತ್ರೀಯ ನಮೂನೆಯನ್ನು ಉಂಟುಮಾಡಿತು.

ಮರಿಯಳ ಅಂಡಾಣು ಹೇಗೆಯೇ ಫಲಿತ ಮಾಡಲ್ಪಟ್ಟಿರಲಿ, ಆ ಸಮಯದಲ್ಲಿ ಕಾರ್ಯನಡಿಸುತ್ತಿದ್ದ ದೇವರ ಪವಿತ್ರಾತ್ಮವು, ದೇವರ ಉದ್ದೇಶದ ಕಾರ್ಯಸಿದ್ಧಿಯ ಖಾತ್ರಿಯನ್ನು ನೀಡಿತೆಂದು ನಮಗೆ ನಿಶ್ಚಯವಿರಬಲ್ಲದು. ಗಬ್ರಿಯೇಲ ದೂತನು ಮರಿಯಳಿಗೆ ಹೀಗೆ ಹೇಳಿದ್ದನು: “ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.” (ಲೂಕ 1:35) ಹೌದು, ಗರ್ಭಧಾರಣೆಯಾದ ಮೇಲೆ ಆ ಭ್ರೂಣವು ಬೆಳೆಯುತ್ತಿರುವಾಗ, ಯಾವುದೇ ಅಪರಿಪೂರ್ಣತೆ ಅಥವಾ ಹಾನಿಕಾರಕ ಶಕ್ತಿಯು ಅದನ್ನು ಮಲಿನಗೊಳಿಸದಂತೆ ರಕ್ಷಕ ತಡೆಗಟ್ಟೊ ಎಂಬಂತೆ ಪವಿತ್ರಾತ್ಮವು ಅದನ್ನು ರಕ್ಷಿಸಿತು.

ಯೇಸು ತನ್ನ ಪರಿಪೂರ್ಣ ಜೀವವನ್ನು ಯಾವನೇ ಮನುಷ್ಯನಿಂದಲ್ಲ, ತನ್ನ ಸ್ವರ್ಗೀಯ ತಂದೆಯಿಂದ ಪಡೆದನೆಂಬುದು ಸ್ಪಷ್ಟ. ಯೆಹೋವನು ಅವನಿಗೆ “ದೇಹವನ್ನು ಸಿದ್ಧಮಾಡಿ” ಕೊಟ್ಟಿದ್ದನು ಮತ್ತು ಗರ್ಭಧರಿಸಿದಂದಿನಿಂದ ಯೇಸು ನಿಜವಾಗಿಯೂ “ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ” ಆಗಿದ್ದನು.​—ಇಬ್ರಿಯ 7:26; 10:5.

[ಪುಟ 19ರಲ್ಲಿರುವ ಚಿತ್ರ]

“ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ”