ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಲ್ಡೆನ್ಸೀಸ್‌ ಪಾಷಂಡವಾದದಿಂದ ಪ್ರಾಟೆಸ್ಟಂಟ್‌ ಮತಕ್ಕೆ

ವಾಲ್ಡೆನ್ಸೀಸ್‌ ಪಾಷಂಡವಾದದಿಂದ ಪ್ರಾಟೆಸ್ಟಂಟ್‌ ಮತಕ್ಕೆ

ವಾಲ್ಡೆನ್ಸೀಸ್‌ ಪಾಷಂಡವಾದದಿಂದ ಪ್ರಾಟೆಸ್ಟಂಟ್‌ ಮತಕ್ಕೆ

ಇಸವಿ 1545; ಅದು ದಕ್ಷಿಣ ಫ್ರಾನ್ಸ್‌, ಪ್ರಾವೆನ್ಸ್‌ನ ಸುಂದರವಾದ ಲ್ಯೂಬಾರೊನ್‌ ಪ್ರದೇಶವಾಗಿತ್ತು. ಇಲ್ಲಿ, ಧಾರ್ಮಿಕ ಅಸಹಿಷ್ಣುತೆಯಿಂದ ಪ್ರೇರಿಸಲ್ಪಟ್ಟ ಒಂದು ಘೋರವಾದ ಕಾರ್ಯಾಚರಣೆಯನ್ನು ಜಾರಿಗೆ ತರಲು ಒಂದು ಸೈನ್ಯವು ಕೂಡಿಬಂದಿತ್ತು. ಅಲ್ಲಿ ಒಂದು ವಾರದ ವರೆಗೆ ರಕ್ತಪಾತವು ನಡೆಯಿತು.

ಗ್ರಾಮಗಳು ನೆಲಸಮಮಾಡಲ್ಪಟ್ಟವು, ಮತ್ತು ಅದರ ನಿವಾಸಿಗಳು ಬಂಧಿಸಲ್ಪಟ್ಟರು ಇಲ್ಲವೇ ಕೊಲ್ಲಲ್ಪಟ್ಟರು. ಕ್ರೂರ ಸೈನಿಕರಿಂದ ನಡೆಸಲ್ಪಟ್ಟ ಒಂದು ಹತ್ಯಾಕಾಂಡವು, ಯೂರೋಪ್‌ ಅನ್ನು ತತ್ತರಿಸಿಬಿಟ್ಟಿತು. ಸ್ತ್ರೀಯರು ಮತ್ತು ಮಕ್ಕಳು ಅನುಭವಿಸಿದ ಹಿಂಸೆಯ ಜೊತೆಗೆ, ಸುಮಾರು 2,700 ಮಂದಿ ಪುರುಷರು ಮರಣವನ್ನಪ್ಪಿದರು ಮತ್ತು 600 ಮಂದಿ ಹಡಗುಗಳಲ್ಲಿ ಕೆಲಸ ಮಾಡಲಿಕ್ಕಾಗಿ ಕಳುಹಿಸಲ್ಪಟ್ಟರು. ಈ ರಕ್ತಮಯ ಕಾರ್ಯಾಚರಣೆಯನ್ನು ನಡೆಸಿದ ಮಿಲಿಟರಿ ಕಮಾಂಡರ್‌, ಫ್ರಾನ್ಸ್‌ನ ರಾಜ ಮತ್ತು ಪೋಪ್‌ನಿಂದ ಹೊಗಳಲ್ಪಟ್ಟನು.

ಪ್ರಾಟೆಸ್ಟಂಟ್‌ ಮತದ ಹಬ್ಬುವಿಕೆಯ ಕುರಿತು ಚಿಂತಿತನಾಗಿದ್ದ ಫ್ರಾನ್ಸ್‌ನ ಕ್ಯಾಥೊಲಿಕ್‌ ರಾಜ Iನೆಯ ಫ್ರಾನ್ಸಿಸ್‌, ತನ್ನ ರಾಜ್ಯದಲ್ಲಿ ಪಾಷಂಡವಾದಿಗಳು ಎಂದು ಕರೆಯಲ್ಪಟ್ಟವರ ಕುರಿತು ವಿಚಾರಿಸಲಾರಂಭಿಸಿದಾಗ, ಆಗಲೇ ಈ ಮತಸುಧಾರಣೆಯು ಜರ್ಮನಿಯನ್ನು ಛಿದ್ರಗೊಳಿಸಿತ್ತು. ಅಲ್ಲಿ ಇಲ್ಲಿ ಕೆಲವೇ ಪಾಷಂಡವಾದಿಗಳನ್ನು ಕಂಡುಕೊಳ್ಳುವ ಬದಲು, ಪ್ರಾವೆನ್ಸ್‌ನ ಅಧಿಕಾರಿಗಳು ಭಿನ್ನಮತೀಯ ಅಭಿಪ್ರಾಯಗಳುಳ್ಳ ಇಡೀ ಗ್ರಾಮಗಳೇ ಇರುವುದನ್ನು ಕಂಡುಕೊಂಡರು. ಈ ಪಾಷಂಡವಾದವನ್ನು ಅಳಿಸಿಹಾಕುವ ಆಜ್ಞೆಯು ಹೊರಡಿಸಲ್ಪಟ್ಟಿತು ಮತ್ತು 1545ರ ಹತ್ಯಾಕಾಂಡದಲ್ಲಿ ಇದು ಜಾರಿಗೆ ತರಲ್ಪಟ್ಟಿತು.

ಈ ಪಾಷಂಡವಾದಿಗಳು ಯಾರಾಗಿದ್ದರು? ಮತ್ತು ಅವರು ಹಿಂಸಾತ್ಮಕ ಧಾರ್ಮಿಕ ಅಸಹಿಷ್ಣುತೆಗೆ ಗುರಿಯಾದದ್ದು ಏಕೆ?

ಸಿರಿತನದಿಂದ ಬಡತನಕ್ಕೆ

ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟವರು, 12ನೇ ಶತಮಾನದಲ್ಲಿ ಆರಂಭಿಸಲ್ಪಟ್ಟ ಮತ್ತು ಯೂರೋಪ್‌ನ ದೊಡ್ಡ ಕ್ಷೇತ್ರವನ್ನು ಆವರಿಸಿದ್ದ ಒಂದು ಧಾರ್ಮಿಕ ಚಳವಳಿಗೆ ಸೇರಿದವರಾಗಿದ್ದರು. ಅದು ವಿಸ್ತಾರಗೊಂಡ ರೀತಿ ಮತ್ತು ಹಲವಾರು ಶತಮಾನಗಳ ತನಕ ಬದುಕಿ ಉಳಿದ ರೀತಿಯು ಅದನ್ನು ಧಾರ್ಮಿಕ ಒಡಕಿನ ಕುರಿತಾದ ಚಾರಿತ್ರಲೇಖನಗಳಲ್ಲಿ ಅದ್ವಿತೀಯವಾದದ್ದಾಗಿ ಮಾಡುತ್ತದೆ. ಈ ಚಳವಳಿಯು ಸರಿಸುಮಾರು 1170ರಲ್ಲಿ ಆರಂಭಿಸಲ್ಪಟ್ಟಿತು ಎಂಬುದಾಗಿ ಹೆಚ್ಚಿನ ಇತಿಹಾಸಕಾರರು ಒಪ್ಪಿಕೊಳ್ಳುತ್ತಾರೆ. ಫ್ರೆಂಚ್‌ ಪಟ್ಟಣವಾದ ಲೀಓನ್ಸ್‌ನ ವೊಡೀ ಎಂಬ ಒಬ್ಬ ಐಶ್ವರ್ಯವಂತ ವ್ಯಾಪಾರಿಯು, ದೇವರನ್ನು ಹೇಗೆ ಮೆಚ್ಚಿಸುವುದು ಎಂಬ ವಿಷಯವನ್ನು ಕಂಡುಕೊಳ್ಳುವುದರಲ್ಲಿ ತೀವ್ರಾಸಕ್ತನಾದನು. ಒಬ್ಬ ಐಶ್ವರ್ಯವಂತ ವ್ಯಕ್ತಿಯು ತನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡುವಂತೆ ಹೇಳಿದ ಯೇಸು ಕ್ರಿಸ್ತನ ಉತ್ತೇಜನದಿಂದ ಪ್ರಾಯಶಃ ಪ್ರೇರಿಸಲ್ಪಟ್ಟವನಾಗಿ, ವೊಡೀ ತನ್ನ ಕುಟುಂಬಕ್ಕಾಗಿ ಆರ್ಥಿಕ ಒದಗಿಸುವಿಕೆಯನ್ನು ಮಾಡಿದ ನಂತರ, ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನ ಸಿರಿತನವನ್ನು ತೊರೆದುಬಿಟ್ಟನು. (ಮತ್ತಾಯ 19:16-22) ಶೀಘ್ರದಲ್ಲೇ ಅವನನ್ನು ಹಿಂಬಾಲಿಸುವವರಿದ್ದರು ಮತ್ತು ಇವರು ನಂತರ ವಾಲ್ಡೆನ್ಸೀಸ್‌ ಎಂಬ ಹೆಸರಿನಿಂದ ಪ್ರಖ್ಯಾತರಾದರು. *

ಬಡತನ, ಸಾರುವಿಕೆ ಮತ್ತು ಬೈಬಲುಗಳು ವೊಡೀಯ ಜೀವನದ ಪ್ರಾಮುಖ್ಯ ವಿಷಯಗಳಾಗಿದ್ದವು. ಪಾದ್ರಿವರ್ಗದ ಸುಖಸಮೃದ್ಧಿಯ ವಿರುದ್ಧವಾದ ಪ್ರತಿಭಟನೆಯು ಹೊಸ ಸಂಗತಿಯಾಗಿರಲಿಲ್ಲ. ಸ್ವಲ್ಪ ಸಮಯದಿಂದ, ಅನೇಕ ಭಿನ್ನಮತೀಯರು ಚರ್ಚಿನ ಭ್ರಷ್ಟ ಆಚರಣೆಗಳು ಮತ್ತು ಅಧಿಕಾರದ ದುರುಪಯೋಗವನ್ನು ವಿರೋಧಿಸಿದ್ದರು. ಆದರೆ ವೊಡೀ ಮತ್ತು ಅವನ ಹಿಂಬಾಲಕರಲ್ಲಿ ಹೆಚ್ಚಿನವರು ಸಾಮಾನ್ಯ ವ್ಯಕ್ತಿಗಳಾಗಿದ್ದರು. ಈ ವಿಷಯವು, ಬೈಬಲು ದೇಶೀಯ ಭಾಷೆಯಲ್ಲಿ, ಅಂದರೆ ಜನರ ಭಾಷೆಯಲ್ಲಿರುವುದು ಆವಶ್ಯಕವೆಂದು ಅವನಿಗನಿಸಿದ ಕಾರಣವನ್ನು ಸದೃಢವಾಗಿ ವಿವರಿಸುತ್ತದೆ. ಚರ್ಚಿನ ಬೈಬಲಿನ ಲ್ಯಾಟಿನ್‌ ತರ್ಜುಮೆಯು ಕೇವಲ ಪಾದ್ರಿವರ್ಗದಿಂದ ಮಾತ್ರ ಉಪಯೋಗಿಸಲ್ಪಡಸಾಧ್ಯವಿದ್ದ ಕಾರಣ, ಸುವಾರ್ತೆಗಳು ಮತ್ತು ಬೈಬಲಿನ ಇನ್ನಿತರ ಪುಸ್ತಕಗಳು ಫ್ರಾಂಕೋ-ಪ್ರಾವೆನ್ಸಲ್‌ ಭಾಷೆಗೆ ತರ್ಜುಮೆಮಾಡಲ್ಪಡುವಂತೆ ವೊಡೀ ಆಜ್ಞಾಪಿಸಿದನು; ಇದು ಪೂರ್ವ ಮಧ್ಯ ಫ್ರಾನ್ಸ್‌ನಲ್ಲಿರುವ ಸಾಮಾನ್ಯ ಜನರಿಂದ ಅರ್ಥಮಾಡಿಕೊಳ್ಳಲ್ಪಟ್ಟ ಭಾಷೆಯಾಗಿದೆ. * ಸಾರಬೇಕು ಎಂಬ ಯೇಸುವಿನ ಆಜ್ಞೆಯನ್ನು ಕಾರ್ಯರೂಪಕ್ಕೆ ಹಾಕುತ್ತಾ, ‘ಲೀಓನ್ಸ್‌ನ ಸಾಮಾನ್ಯರು’ ತಮ್ಮ ಸಂದೇಶವನ್ನು ಬಹಿರಂಗವಾಗಿ ಸಾರಲು ಆರಂಭಿಸಿದರು. (ಮತ್ತಾಯ 28:19, 20) ಬಹಿರಂಗವಾದ ಸಾರುವಿಕೆಯಲ್ಲಿನ ಅವರ ಪಟ್ಟುಹಿಡಿಯುವಿಕೆಯೇ, ವಾಲ್ಡೆನ್ಸೀಸ್‌ರ ಕಡೆಗಿನ ಚರ್ಚಿನ ಮನೋಭಾವಕ್ಕೆ ನಿರ್ಣಾಯಕ ಅಂಶವಾಯಿತು ಎಂಬುದಾಗಿ ಇತಿಹಾಸಕಾರ ಗಾಬ್ರೀಅಲ್‌ ಒಡೀಸೋ ವಿವರಿಸುತ್ತಾರೆ.

ಕ್ಯಾಥೊಲಿಕರಿಂದ ಪಾಷಂಡಿಗಳು

ಆ ದಿನಗಳಲ್ಲಿ, ಸಾರುವಿಕೆಯು ಪಾದ್ರಿವರ್ಗಕ್ಕಾಗಿ ಮಾತ್ರ ಮೀಸಲಾಗಿಡಲ್ಪಟ್ಟ ಕೆಲಸವಾಗಿತ್ತು, ಮತ್ತು ಸಾರುವುದಕ್ಕಾಗಿ ಅಧಿಕಾರವನ್ನು ನೀಡುವ ಹಕ್ಕನ್ನು ಚರ್ಚ್‌ ತನ್ನದಾಗಿಸಿಕೊಂಡಿತ್ತು. ಚರ್ಚ್‌ ವಾಲ್ಡೆನ್ಸೀಸ್‌ರನ್ನು ಅಜ್ಞಾನಿಗಳು ಮತ್ತು ಅನಕ್ಷರಸ್ಥರೆಂದು ವೀಕ್ಷಿಸಿತು. ಆದರೆ 1179ರಲ್ಲಿ, ವೊಡೀ ತನ್ನ ಸಾರುವಿಕೆಗಾಗಿ IIIನೆಯ ಪೋಪ್‌ ಅಲೆಕ್ಸಾಂಡರ್‌ನಿಂದ ಅಧಿಕೃತ ಅಂಗೀಕಾರವನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. ಅನುಮತಿಯು ಕೊಡಲ್ಪಟ್ಟಿತು, ಆದರೆ ಒಂದು ಷರತ್ತಿನ ಮೇರೆಗೆ​—ಇದನ್ನು ಸ್ಥಳಿಕ ಪಾದ್ರಿಗಳು ಒಪ್ಪಿಕೊಳ್ಳಬೇಕು. ಇತಿಹಾಸಕಾರ ಮಾಲ್ಕಮ್‌ ಲಾಂಬರ್ಟ್‌ಗನುಸಾರ, ಇದು “ಹೆಚ್ಚು ಕಡಿಮೆ ಸಂಪೂರ್ಣ ನಿರಾಕರಣೆಯಾಗಿತ್ತು.” ವಾಸ್ತವದಲ್ಲಿ, ಲೀಓನ್ಸ್‌ನ ಆರ್ಚ್‌ಬಿಷಪ್‌ ಸಾನ್‌ ಬೆಲ್ಮನ್‌, ಬಹಿರಂಗವಾದ ಸಾರುವಿಕೆಯನ್ನು ವಿಧಿವಿಹಿತವಾಗಿ ನಿರಾಕರಿಸಿದನು. “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ,” ಎಂದು ಹೇಳುವ ಅ. ಕೃತ್ಯಗಳು 5:29ನ್ನು ಉಲ್ಲೇಖಿಸಿ ವೊಡೀ ಪ್ರತಿಕ್ರಿಯಿಸಿದನು. ನಿಷೇಧಕ್ಕೆ ವಿಧೇಯತೆ ತೋರಿಸಲು ತಪ್ಪಿಹೋದ ವೊಡೀ, 1184ರಲ್ಲಿ ಚರ್ಚ್‌ನಿಂದ ಬಹಿಷ್ಕರಿಸಲ್ಪಟ್ಟನು.

ವಾಲ್ಡೆನ್ಸೀಸ್‌ರು ಚರ್ಚ್‌ ಪ್ರಾಂತ್ಯದಿಂದ ಬಹಿಷ್ಕರಿಸಲ್ಪಟ್ಟು ನಗರದ ಹೊರಕ್ಕೆ ಅಟ್ಟಲ್ಪಟ್ಟರೂ, ಪ್ರಾಥಮಿಕವಾದ ಖಂಡನೆಯು ಮೇಲುಮೇಲಿನದ್ದಾಗಿತ್ತು ಎಂಬುದಾಗಿ ತೋರುತ್ತದೆ. ಅನೇಕ ಸಾಮಾನ್ಯ ಜನರು ವಾಲ್ಡೆನ್ಸೀಸ್‌ರವರ ಪ್ರಾಮಾಣಿಕತೆ ಮತ್ತು ಜೀವನ ರೀತಿಯನ್ನು ಮೆಚ್ಚಿಕೆಯಿಂದ ನೋಡುತ್ತಿದ್ದರು, ಮತ್ತು ಬಿಷಪ್‌ಗಳು ಕೂಡ ಅವರೊಂದಿಗೆ ಮಾತಾಡುತ್ತಾ ಇದ್ದರು.

ಇತಿಹಾಸಕಾರ ಯೂಆನ್‌ ಕಮ್ರನ್‌ಗನುಸಾರ, ವಾಲ್ಡೆನ್ಸೀಸ್‌ ಪ್ರಚಾರಕರು “ರೋಮನ್‌ ಚರ್ಚ್‌ ಅನ್ನು ಕೇವಲ ಅದನ್ನು ವಿರೋಧಿಸಬೇಕು ಎಂಬ ಕಾರಣಕ್ಕಾಗಿ ವಿರೋಧಿಸ”ಲಿಲ್ಲ ಎಂಬುದಾಗಿ ತೋರುತ್ತದೆ. ಅವರು ಕೇವಲ “ಪ್ರಚಾರ ಮಾಡಲು ಮತ್ತು ಬೋಧಿಸಲು ಬಯಸಿದರು.” ಆದರೆ, ಅವರ ಶಕ್ತಿ ಮತ್ತು ಪ್ರಭಾವವನ್ನು ಕ್ರಮಾನುಗತವಾಗಿ ಮತ್ತು ಶಾಶ್ವತವಾಗಿ ನಿಗ್ರಹಿಸಿದ ಕಟ್ಟಳೆಗಳ ಸರಪಳಿಯು, ಆ ಚಳವಳಿಯನ್ನು ಪಾಷಂಡವಾದವಾಗಿ ಬದಲಾಯಿಸಿತು ಎಂಬುದು ಇತಿಹಾಸಕಾರರ ಹೇಳಿಕೆಯಾಗಿದೆ. 1215ರಲ್ಲಿ ವಾಲ್ಡೆನ್ಸೀಸ್‌ರ ವಿರುದ್ಧವಾಗಿ ನೀಡಲ್ಪಟ್ಟ ನಾಲ್ಕನೆಯ ಲ್ಯಾಟರಿನ್‌ ಕೌನ್ಸಿಲ್‌ನಲ್ಲಿ ಚರ್ಚಿನ ಆಪಾದನೆಗಳು ಉತ್ತುಂಗಕ್ಕೇರಿದವು. ಇದು ವಾಲ್ಡೆನ್ಸೀಸ್‌ರ ಸಾರುವಿಕೆಯನ್ನು ಹೇಗೆ ಬಾಧಿಸಿತು?

ಅವರು ಭೂಗತಕ್ಕಿಳಿಯುತ್ತಾರೆ

ವೊಡೀ 1217ರಲ್ಲಿ ಮೃತನಾದನು ಮತ್ತು ಹಿಂಸಾಚಾರದಿಂದಾಗಿ ಅವನ ಹಿಂಬಾಲಕರು ಫ್ರಾನ್ಸ್‌ನ ಆ್ಯಲ್ಪೈನ್‌ ಬೆಟ್ಟ ಪ್ರದೇಶಗಳಿಗೆ, ಜರ್ಮನಿ, ಉತ್ತರ ಇಟಲಿ, ಮತ್ತು ಮಧ್ಯ ಹಾಗೂ ಪೂರ್ವ ಯೂರೋಪಿಗೆ ಚದರಿಹೋದರು. ಹಿಂಸಾಚಾರವು ವಾಲ್ಡೆನ್ಸೀಸ್‌ರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ನೆಲೆಸುವಂತೆ ಮಾಡಿತು, ಮತ್ತು ಇದು ಅನೇಕ ಕ್ಷೇತ್ರಗಳಲ್ಲಿ ಅವರ ಸಾರುವ ಚಟುವಟಿಕೆಯನ್ನು ಸೀಮಿತಗೊಳಿಸಿತು.

ಇಸವಿ 1229ರಲ್ಲಿ ಕ್ಯಾಥೊಲಿಕ್‌ ಚರ್ಚ್‌, ದಕ್ಷಿಣ ಫ್ರಾನ್ಸ್‌ನಲ್ಲಿ ಕ್ಯಾತರೈ ಅಥವಾ ಆ್ಯಲ್ಬೀಜೆನ್ಸೀಸ್‌ ವಿರುದ್ಧವಾದ ಧರ್ಮಯುದ್ಧವನ್ನು ಪೂರ್ಣಗೊಳಿಸಿತು. * ನಂತರ ವಾಲ್ಡೆನ್ಸೀಸ್‌ರು ಅಂತಹ ಘೋರ ಕೃತ್ಯಗಳಿಗೆ ಗುರಿಯಾದರು. ಮಠೀಯ ನ್ಯಾಯಸ್ಥಾನವು ಅತಿ ಬೇಗನೆ ಚರ್ಚನ್ನು ವಿರೋಧಿಸುವ ಎಲ್ಲರ ಮೇಲೆ ದಯೆಯಿಲ್ಲದೆ ಎರಗಲಿತ್ತು. ಭಯವು ವಾಲ್ಡೆನ್ಸೀಸ್‌ರು ಭೂಗತಕ್ಕಿಳಿಯುವಂತೆ ಮಾಡಿತು. 1230ರಷ್ಟಕ್ಕೆ ಅವರು ಬಹಿರಂಗವಾಗಿ ಸಾರುವುದನ್ನು ನಿಲ್ಲಿಸಿದ್ದರು. ಒಡೀಸೋ ವಿವರಿಸುವುದು: “ಹೊಸ ಕುರಿಗಳಿಗಾಗಿ ಹುಡುಕಲು ಹೋಗುವ ಬದಲು . . . , ಈಗಾಗಲೇ ಮತಾಂತರಿಸಲ್ಪಟ್ಟಿರುವವರನ್ನು, ಹೊರಗಿನ ಒತ್ತಡ ಮತ್ತು ಹಿಂಸಾಚಾರದ ಮಧ್ಯೆಯೂ ನಂಬಿಕೆಯಲ್ಲಿ ಅವರನ್ನು ಕಾಪಾಡಿಕೊಳ್ಳುತ್ತಾ ಅವರನ್ನು ನೋಡಿಕೊಳ್ಳುವುದಕ್ಕಾಗಿ ಅವರು ತಮ್ಮನ್ನೇ ನೀಡಿಕೊಂಡರು.” ಅವರು ಕೂಡಿಸುವುದು: “ಆಗಲೂ ಸಾರುವಿಕೆಯು ಪ್ರಾಮುಖ್ಯವಾದದ್ದಾಗಿತ್ತು, ಆದರೆ ಅದನ್ನು ನಡೆಸುವ ರೀತಿಯು ಸಂಪೂರ್ಣವಾಗಿ ಬದಲಾಗಿತ್ತು.”

ಅವರ ನಂಬಿಕೆಗಳು ಮತ್ತು ಆಚರಣೆಗಳು

ಸಾರುವ ಚಟುವಟಿಕೆಗಳಲ್ಲಿ ಸ್ತ್ರೀಯರು ಮತ್ತು ಪುರುಷರು ಪಾಲ್ಗೊಳ್ಳುವ ಬದಲು, 14ನೆಯ ಶತಮಾನದಷ್ಟಕ್ಕೆ ವಾಲ್ಡೆನ್ಸೀಸ್‌ರು ಸಾರುವವರು ಮತ್ತು ವಿಶ್ವಾಸಿಗಳು ಎಂಬ ವರ್ಗಭೇದವನ್ನು ಬೆಳೆಸಿದ್ದರು. ಪ್ರಚಾರ ಕಾರ್ಯದಲ್ಲಿ ಕೇವಲ ಒಳ್ಳೆಯ ತರಬೇತಿ ಪಡೆದ ಪುರುಷರು ಮಾತ್ರ ಪಾಲ್ಗೊಳ್ಳುತ್ತಿದ್ದರು. ನಂತರ ಈ ಸಂಚಾರೀ ಶುಶ್ರೂಷಕರನ್ನು ಬಾರ್ಬ್‌ಗಳು (ಅಂಕಲ್ಸ್‌) ಎಂದು ಕರೆಯಲಾಗುತ್ತಿತ್ತು.

ವಾಲ್ಡೆನ್ಸೀಸ್‌ ಕುಟುಂಬಗಳನ್ನು ಅವರ ಮನೆಗಳಲ್ಲಿ ಭೇಟಿಮಾಡಿದ ಈ ಬಾರ್ಬ್‌ಗಳು, ಈ ಚಳವಳಿಯನ್ನು ವಿಸ್ತರಿಸುವ ಬದಲು ಅದನ್ನು ಅಸ್ತಿತ್ವದಲ್ಲಿಟ್ಟುಕೊಳ್ಳಲಿಕ್ಕೋಸ್ಕರ ಕೆಲಸಮಾಡಿದರು. ಎಲ್ಲ ಬಾರ್ಬ್‌ಗಳು ಓದಲು ಮತ್ತು ಬರೆಯಲು ಶಕ್ತರಾಗಿದ್ದರು, ಮತ್ತು ಆರು ವರ್ಷಗಳ ಕಾಲಾವಧಿಯ ಅವರ ತರಬೇತಿಯು ಬೈಬಲ್‌ ಸಂಬಂಧಿತವಾಗಿತ್ತು. ದೇಶೀಯ ಭಾಷೆಯ ಬೈಬಲಿನ ಉಪಯೋಗವು, ಅವರು ಅದನ್ನು ಅವರ ಹಿಂಡಿಗೆ ವಿವರಿಸಲು ಸಹಾಯಮಾಡಿತು. ಮಕ್ಕಳೂ ಒಳಗೊಂಡು, ವಾಲ್ಡೆನ್ಸೀಸ್‌ರಿಗೆ ಒಂದು ಬಲವಾದ ಬೈಬಲ್‌ ಸಂಸ್ಕೃತಿಯಿತ್ತು ಮತ್ತು ಅವರು ಶಾಸ್ತ್ರವಚನಗಳ ದೊಡ್ಡ ದೊಡ್ಡ ಭಾಗಗಳನ್ನೇ ಉಲ್ಲೇಖಿಸಬಲ್ಲರು ಎಂಬುದನ್ನು ಅವರ ವಿರೋಧಿಗಳು ಕೂಡ ಒಪ್ಪಿಕೊಂಡರು.

ಆರಂಭದ ವಾಲ್ಡೆನ್ಸೀಸ್‌ರು ನಿರಾಕರಿಸಿದ ಕೆಲವು ವಿಷಯಗಳಲ್ಲಿ, ಸುಳ್ಳು ಹೇಳುವುದು, ಶುದ್ಧಿಲೋಕ, ಸತ್ತವರಿಗಾಗಿ ಮಾಸ್‌ಗಳು, ಪೋಪರಿಂದ ಪಾಪ ಕ್ಷಮೆ, ಮತ್ತು ಮರಿಯಳ ಹಾಗೂ “ಸಂತರ” ಆರಾಧನೆಯು ಒಳಗೂಡಿತ್ತು. ಅವರು, ಕರ್ತನ ಸಂಧ್ಯಾ ಭೋಜನದ ಅಥವಾ ಅಂತಿಮ ಭೋಜನದ ವಾರ್ಷಿಕ ಆಚರಣೆಗಳನ್ನೂ ಹೊಂದಿದ್ದರು. ಲಾಂಬರ್ಟ್‌ಗನುಸಾರ, ಅವರ ಆರಾಧನಾ ರೀತಿಯು “ಕಾರ್ಯತಃ, ಸಾಮಾನ್ಯ ಮನುಷ್ಯನ ಧರ್ಮವಾಗಿತ್ತು.”

“ಇಬ್ಬಗೆಯ ಜೀವನ”

ವಾಲ್ಡೆನ್ಸೀಸ್‌ರ ಸಮಾಜಗಳು ಅನ್ಯೋನ್ಯವಾಗಿ ಜೀವಿಸುತ್ತಿದ್ದವು. ವ್ಯಕ್ತಿಗಳು ಚಳವಳಿಯ ಸದಸ್ಯರನ್ನೇ ಮದುವೆ ಮಾಡಿಕೊಳ್ಳುತ್ತಿದ್ದರು, ಮತ್ತು ಶತಮಾನಗಳು ಕಳೆದಂತೆ ಇದು ವಾಲ್ಡೆನ್ಸೀಯನ್‌ ಉಪನಾಮಗಳನ್ನು ಉಂಟುಮಾಡಿತು. ಆದರೂ, ಬದುಕಿರಲಿಕ್ಕಾಗಿರುವ ಅವರ ಹೋರಾಟದಲ್ಲಿ, ವಾಲ್ಡೆನ್ಸೀಸ್‌ ತಮ್ಮ ಅಭಿಪ್ರಾಯಗಳನ್ನು ಮುಚ್ಚಿಡಲು ಪ್ರಯತ್ನಿಸಿದರು. ಅವರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಗೆ ಸಂಬಂಧಿಸಲ್ಪಟ್ಟಿರುವ ಗೋಪ್ಯತೆಯು, ಅವರ ವಿರುದ್ಧವಾಗಿ ವಿರೋಧಿಗಳು ಮಿತಿಯಿಲ್ಲದ ಆರೋಪಗಳನ್ನು ಹೊರಿಸುವುದನ್ನು ಸುಲಭಗೊಳಿಸಿತು; ಉದಾಹರಣೆಗೆ ಅವರು ಪಿಶಾಚನ ಆರಾಧನೆಯಲ್ಲಿ ಪಾಲ್ಗೊಂಡರು ಎಂಬ ಆರೋಪವನ್ನು ಹೊರಿಸಲಾಯಿತು. *

ವಾಲ್ಡೆನ್ಸೀಸ್‌ರು ಇಂತಹ ಆರೋಪಗಳನ್ನು ನಿಭಾಯಿಸಿದ ಒಂದು ರೀತಿ, ರಾಜಿಮಾಡಿಕೊಳ್ಳುವುದು ಮತ್ತು ಇತಿಹಾಸಕಾರ ಕಮ್ರನ್‌ ಯಾವುದನ್ನು ಕ್ಯಾಥೊಲಿಕ್‌ ಆರಾಧನೆಯೊಂದಿಗಿನ “ಕನಿಷ್ಠವಾದ ಅನುಸರಣೆ” ಎಂದು ಕರೆಯುತ್ತಾನೋ ಅದನ್ನು ಆಚರಿಸುವುದೇ ಆಗಿತ್ತು. ಅನೇಕ ವಾಲ್ಡೆನ್ಸೀಸ್‌ರು ಕ್ಯಾಥೊಲಿಕ್‌ ಪಾದ್ರಿಗಳಿಗೆ ಪಾಪ ಅರಿಕೆಮಾಡಿದರು, ಮಾಸ್‌ಗಳಿಗೆ ಹಾಜರಾದರು, ಪವಿತ್ರ ಜಲವನ್ನು ಉಪಯೋಗಿಸಿದರು, ಮತ್ತು ತೀರ್ಥಯಾತ್ರೆಗಳಿಗೂ ಹೋದರು. ಲಾಂಬರ್ಟ್‌ ಗಮನಿಸುವುದು: “ಅನೇಕ ವಿಷಯಗಳಲ್ಲಿ ಅವರು ತಮ್ಮ ಕ್ಯಾಥೊಲಿಕ್‌ ನೆರೆಯವರು ಮಾಡಿದಂತೆಯೇ ಮಾಡಿದರು.” ಒಡೀಸೋ ನೇರವಾಗಿ ಹೇಳುವುದು, ಕಾಲ ಕಳೆದಂತೆ ವಾಲ್ಡೆನ್ಸೀಸ್‌ “ಇಬ್ಬಗೆಯ ಜೀವನವನ್ನು ನಡೆಸಿದರು.” ಅವರು ಕೂಡಿಸುವುದು: “ಒಂದು ಕಡೆಯಲ್ಲಿ, ಹೊರತೋರಿಕೆಯಲ್ಲಿ ತಮ್ಮ ಸಂಬಂಧಿತ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಕ್ಯಾಥೊಲಿಕರ ರೀತಿಯಲ್ಲಿ ನಡೆದುಕೊಂಡರು; ಇನ್ನೊಂದು ಕಡೆಯಲ್ಲಿ, ತಮ್ಮ ಸಮಾಜವು ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕೋಸ್ಕರ ಒಂದಿಷ್ಟು ಸಂಖ್ಯೆಯ ರೀತಿನೀತಿಗಳನ್ನು ತಮ್ಮ ಮಧ್ಯದಲ್ಲೇ ಆಚರಿಸಿದರು.”

ಪಾಷಂಡವಾದದಿಂದ ಪ್ರಾಟೆಸ್ಟಂಟ್‌ ಮತಕ್ಕೆ

ಹದಿನಾರನೆಯ ಶತಮಾನದಲ್ಲಿ, ಮತಸುಧಾರಣೆಯು ಯೂರೋಪಿನ ಧಾರ್ಮಿಕ ರೂಪವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು. ಅಸಹಿಷ್ಣುತೆಗೆ ಗುರಿಯಾದವರು, ಒಂದೇ ತಮ್ಮ ದೇಶದಲ್ಲೇ ಶಾಸನಬದ್ಧ ಅಂಗೀಕಾರಕ್ಕಾಗಿ ಪ್ರಯತ್ನಿಸಬೇಕಿತ್ತು ಇಲ್ಲವೇ ಹೆಚ್ಚಿನ ಅನುಕೂಲಕರ ಪರಿಸ್ಥಿತಿಗಳಿರುವ ಸ್ಥಳಗಳನ್ನು ಹುಡುಕುತ್ತಾ ವಲಸೆಹೋಗಬೇಕಿತ್ತು. ಪಾಷಂಡವಾದದ ವಿಚಾರವು ಕೂಡ ಕಡಿಮೆ ಗಂಭೀರವಾದ ವಿಷಯವಾಯಿತು, ಏಕೆಂದರೆ ಅನೇಕಾನೇಕ ಜನರು ಸ್ಥಾಪಿತ ಧಾರ್ಮಿಕ ಬೋಧನೆಯನ್ನು ಪ್ರಶ್ನಿಸಲಾರಂಭಿಸಿದ್ದರು.

ಇಸವಿ 1523ರಷ್ಟು ಹಿಂದೆ, ಪ್ರಖ್ಯಾತ ಮತಸುಧಾರಕನಾಗಿದ್ದ ಮಾರ್ಟಿನ್‌ ಲೂಥರ್‌, ವಾಲ್ಡೆನ್ಸೀಸ್‌ರ ಕುರಿತು ಸೂಚಿಸಿ ಮಾತಾಡಿದನು. 1526ರಲ್ಲಿ ವಾಲ್ಡೆನ್ಸೀಸ್‌ರ ಬಾರ್ಬ್‌ಗಳಲ್ಲಿ ಒಬ್ಬನು, ಯೂರೋಪಿನಲ್ಲಿ ನಡೆಯುತ್ತಿದ್ದ ಧಾರ್ಮಿಕ ಸುಧಾರಣೆಗಳ ಕುರಿತಾದ ಸುದ್ದಿಯನ್ನು ಆ್ಯಲ್ಪ್ಸ್‌ ಪ್ರದೇಶಕ್ಕೆ ತಂದನು. ಇದನ್ನು ಹಿಂಬಾಲಿಸುತ್ತಾ, ಪ್ರಾಟೆಸ್ಟಂಟ್‌ ಸಮಾಜಗಳು ತಮ್ಮ ಅಭಿಪ್ರಾಯಗಳನ್ನು ವಾಲ್ಡೆನ್ಸೀಸ್‌ರೊಂದಿಗೆ ಹಂಚಿಕೊಳ್ಳುವ ಒಂದು ಸಮಯವು ಬಂತು. ಬೈಬಲನ್ನು ಅದರ ಮೂಲಭೂತ ಭಾಷೆಗಳಿಂದ ಫ್ರೆಂಚ್‌ ಭಾಷೆಗೆ ತರ್ಜುಮೆಮಾಡುವ ಮೊದಲ ಭಾಷಾಂತರವನ್ನು ಪ್ರಾಯೋಜಿಸುವಂತೆ ಪ್ರಾಟೆಸ್ಟಂಟರು ವಾಲ್ಡೆನ್ಸೀಸ್‌ರನ್ನು ಉತ್ತೇಜಿಸಿದರು. ಇದು 1535ರಲ್ಲಿ ಮುದ್ರಿಸಲ್ಪಟ್ಟು, ನಂತರ ಇದನ್ನು ಓಲೀವೇಟಾನ್‌ ಬೈಬಲ್‌ ಎಂದು ಕರೆಯಲಾಯಿತು. ಆದರೆ ಹಾಸ್ಯಾಸ್ಪದವಾಗಿ, ವಾಲ್ಡೆನ್ಸೀಸ್‌ರಲ್ಲೇ ಹೆಚ್ಚಿನವರಿಗೆ ಫ್ರೆಂಚ್‌ ಭಾಷೆಯು ಅರ್ಥವಾಗುತ್ತಿರಲಿಲ್ಲ.

ಕ್ಯಾಥೊಲಿಕ್‌ ಚರ್ಚಿನ ಹಿಂಸಾಚಾರವು ಮುಂದುವರಿದಂತೆ, ಪ್ರಾಟೆಸ್ಟಂಟ್‌ ವಲಸಿಗರು ಮಾಡಿದಂತೆಯೇ, ವಾಲ್ಡೆನ್ಸೀಸ್‌ರು ದೊಡ್ಡ ಸಂಖ್ಯೆಯಲ್ಲಿ ದಕ್ಷಿಣ ಫ್ರಾನ್ಸ್‌ನ ಹೆಚ್ಚು ಸುರಕ್ಷಿತವಾದ ಪ್ರಾವೆನ್ಸ್‌ ಪ್ರದೇಶಕ್ಕೆ ಬಂದು ನೆಲೆಸಿದರು. ಈ ವಲಸೆ ಹೋಗುವಿಕೆಯ ಕುರಿತು ಶೀಘ್ರವೇ ಅಧಿಕಾರಿಗಳಿಗೆ ಎಚ್ಚರಿಸಲಾಯಿತು. ವಾಲ್ಡೆನ್ಸೀಸ್‌ರ ಜೀವನ ರೀತಿ ಮತ್ತು ನೈತಿಕ ಮೌಲ್ಯಗಳ ಕುರಿತಾದ ಅನೇಕ ಸಕಾರಾತ್ಮಕ ವರದಿಗಳ ಹೊರತೂ, ಕೆಲವರು ಅವರ ನಿಷ್ಠೆಯನ್ನು ಪ್ರಶ್ನಿಸಿದರು ಮತ್ತು ಅವರು ಸುವ್ಯವಸ್ಥೆಗೆ ಒಂದು ಬೆದರಿಕೆಯಾಗಿದ್ದಾರೆ ಎಂಬ ಅಪವಾದವನ್ನು ಹೊರಿಸಿದರು. ಮೆರಿಂಡೊಲ್‌ ಕಟ್ಟಳೆಯು ವಿಧಿಸಲ್ಪಟ್ಟಿತು, ಮತ್ತು ಇದು ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಘೋರ ರಕ್ತಪಾತಕ್ಕೆ ನಡೆಸಿತು.

ಕ್ಯಾಥೊಲಿಕರ ಮತ್ತು ವಾಲ್ಡೆನ್ಸೀಸ್‌ರ ಮಧ್ಯೆಯ ಸಂಬಂಧವು ಹದಗೆಡುತ್ತಾ ಹೋಯಿತು. ತಮ್ಮ ವಿರುದ್ಧವಾಗಿ ಹೊರಡಿಸಲ್ಪಟ್ಟ ದಾಳಿಗಳಿಗೆ ಪ್ರತಿಕ್ರಿಯಿಸುತ್ತಾ, ವಾಲ್ಡೆನ್ಸೀಸ್‌ರು ತಮ್ಮನ್ನೇ ರಕ್ಷಿಸಿಕೊಳ್ಳುವುದಕ್ಕೋಸ್ಕರ ಶಸ್ತ್ರಾಸ್ತ್ರಗಳ ಬಲವನ್ನೂ ಉಪಯೋಗಿಸಿದರು. ಈ ಹೋರಾಟವು ಅವರನ್ನು ಪ್ರಾಟೆಸ್ಟಂಟರ ಒಗ್ಗಟ್ಟಿನೊಳಗೆ ಸೇರಿಸಿತು. ಹೀಗೆ ವಾಲ್ಡೆನ್ಸೀಸ್‌ರು ತಮ್ಮನ್ನು ಪ್ರಧಾನ ಗುಂಪಾದ ಪ್ರಾಟೆಸ್ಟಂಟ್‌ ಧರ್ಮದೊಂದಿಗೆ ಸೇರಿಸಿಕೊಂಡರು.

ಶತಮಾನಗಳು ಕಳೆದಂತೆ, ವಾಲ್ಡೆನ್ಸೀಸ್‌ರ ಚರ್ಚುಗಳು ಫ್ರಾನ್ಸ್‌ನಿಂದ ಉರುಗ್ವೆ ಮತ್ತು ಅಮೆರಿಕದಷ್ಟು ದೂರದ ದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ಆದರೂ, ಹೆಚ್ಚಿನ ಇತಿಹಾಸಕಾರರು ಒಡೀಸೋವಿನೊಂದಿಗೆ ಒಪ್ಪಿಕೊಳ್ಳುತ್ತಾರೆ; ಪ್ರಾಟೆಸ್ಟಂಟ್‌ ಮತದಿಂದ “ನುಂಗಲ್ಪಟ್ಟಾಗ,” “ವಾಲ್ಡೆನ್ಸೀಯನಿಸಮ್‌ ಮತಸುಧಾರಣೆಯ ಸಮಯದಲ್ಲಿ ಕೊನೆಗೊಂಡಿತು” ಎಂದು ಅವರು ಹೇಳಿದರು. ವಾಸ್ತವದಲ್ಲಿ, ವಾಲ್ಡೆನ್ಸೀಯನ್‌ ಚಳವಳಿಯು ಅದರ ಹೆಚ್ಚಿನ ಆರಂಭಿಕ ಹುರುಪನ್ನು ಶತಮಾನಗಳ ಹಿಂದೆಯೇ ಕಳೆದುಕೊಂಡಿತ್ತು. ಇದು, ಅದರ ಸದಸ್ಯರು ಭಯದಿಂದಾಗಿ ಬೈಬಲ್‌ ಸಂಬಂಧಿತ ಸಾರುವಿಕೆ ಮತ್ತು ಬೋಧಿಸುವಿಕೆಯನ್ನು ತ್ಯಜಿಸಿದಾಗಲೇ ಸಂಭವಿಸಿತು.

[ಪಾದಟಿಪ್ಪಣಿಗಳು]

^ ಪ್ಯಾರ. 7 ವೊಡೀಯನ್ನು ವಾಲ್ಡೆಸ್‌, ವಾಲ್ಡೀಸೀಯಸ್‌, ಅಥವಾ ವಾಲ್ಡೊ ಎಂದು ವಿಭಿನ್ನವಾಗಿ ಗುರುತಿಸಲಾಗುತ್ತದೆ. “ವಾಲ್ಡೆನ್ಸೀಸ್‌” ಎಂಬ ಪದವು ತನ್ನ ಮೂಲವನ್ನು ವಾಲ್ಡೊ ಎಂಬ ಹೆಸರಿನಲ್ಲಿ ಕಂಡುಕೊಂಡಿತು. ವಾಲ್ಡೆನ್ಸೀಸ್‌ ಅಥವಾ ವಾಲ್ಡೆನ್ಸೀಯನ್ಸ್‌, ‘ಲೀಓನ್ಸ್‌ನ ಸಾಮಾನ್ಯರು’ ಎಂದೂ ಕರೆಯಲ್ಪಟ್ಟರು.

^ ಪ್ಯಾರ. 8 ಇಸವಿ 1199ರಷ್ಟು ಹಿಂದೆಯೇ, ಈಶಾನ್ಯ ಫ್ರಾನ್ಸ್‌ನಲ್ಲಿರುವ ಮೆಟ್ಸ್‌ನ ಬಿಷಪನು, ದೇಶೀಯ ಭಾಷೆಯಲ್ಲಿ ಅನೇಕ ವ್ಯಕ್ತಿಗಳು ಬೈಬಲನ್ನು ಓದಿ ಚರ್ಚಿಸುತ್ತಿದ್ದರು ಎಂದು IIIನೆಯ ಪೋಪ್‌ ಇನೊಸೆಂಟ್‌ಗೆ ದೂರನ್ನು ಸಲ್ಲಿಸಿದನು. ಆ ಬಿಷಪನು ವಾಲ್ಡೆನ್ಸೀಸ್‌ರನ್ನು ಸೂಚಿಸುತ್ತಿದ್ದನು ಎಂಬುದು ಹೆಚ್ಚು ಸಂಭವನೀಯ.

^ ಪ್ಯಾರ. 15ಕ್ಯಾತರೈಗಳು​—ಅವರು ಕ್ರೈಸ್ತ ಹುತಾತ್ಮರಾಗಿದ್ದರೋ?” ಎಂಬ ಲೇಖನವನ್ನು, 1995, ಸೆಪ್ಟೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯ 27-30ನೆಯ ಪುಟಗಳಲ್ಲಿ ನೋಡಿರಿ.

^ ಪ್ಯಾರ. 21 ವಾಲ್ಡೆನ್ಸೀಸ್‌ರ ಸತತವಾದ ಮಾನಹಾನಿಯು, ವೊಡರೀ (ಫ್ರೆಂಚ್‌ ಭಾಷೆಯ ವೊಡ್‌ವಾ ಎಂಬ ಶಬ್ದದಿಂದ) ಎಂಬ ಶಬ್ದವು ರೂಪುಗೊಳ್ಳುವಂತೆ ಮಾಡಿತು. ಇದು ಶಂಕಿತ ಪಾಷಂಡವಾದಿಗಳನ್ನು ಅಥವಾ ಪಿಶಾಚನ ಆರಾಧಕರನ್ನು ವರ್ಣಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ.

[ಪುಟ 23ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ವಾಲ್ಡೆನ್ಸೀಸ್‌ರಿಂದ ಪ್ರಭಾವಿಸಲ್ಪಟ್ಟಿರುವ ಕ್ಷೇತ್ರಗಳು

ಫ್ರಾನ್ಸ್‌

ಲೀಓನ್ಸ್‌

ಪ್ರಾವೆನ್ಸ್‌

ಲ್ಯೂಬಾರೊನ್‌

ಸ್ಟ್ರಾಸ್‌ಬರ್ಗ್‌

ಮಲಾನ್‌

ರೋಮ್‌

ಬರ್ಲಿನ್‌

ಪ್ರಾಗ್‌

ವಿಯೆನ್ನಾ

[ಚಿತ್ರ]

ವಾಲ್ಡೆನ್ಸೀಸ್‌ 1535ರ ಓಲೀವೇಟಾನ್‌ ಬೈಬಲಿನ ತರ್ಜುಮೆಯನ್ನು ಪ್ರಾಯೋಜಿಸಿದರು

[ಕೃಪೆ]

ಬೈಬಲ್‌: © Cliché Bibliothèque nationale de France, Paris

[ಪುಟ 20, 21ರಲ್ಲಿರುವ ಚಿತ್ರಗಳು]

ವೊಡೀ

ಇಬ್ಬರು ವೃದ್ಧ ವಾಲ್ಡೆನ್ಸೀಯನ್‌ ಸ್ತ್ರೀಯರ ಸುಡುವಿಕೆ

[ಕೃಪೆ]

20 ಮತ್ತು 21ನೆಯ ಪುಟಗಳು: © Landesbildstelle Baden, Karlsruhe