ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶವಸಂರಕ್ಷಣೆ ಕ್ರೈಸ್ತರಿಗೆ ಯೋಗ್ಯವಾದದ್ದೋ?

ಶವಸಂರಕ್ಷಣೆ ಕ್ರೈಸ್ತರಿಗೆ ಯೋಗ್ಯವಾದದ್ದೋ?

ಶವಸಂರಕ್ಷಣೆ ಕ್ರೈಸ್ತರಿಗೆ ಯೋಗ್ಯವಾದದ್ದೋ?

ಅವನ ಮರಣವು ಹತ್ತಿರವಾಗುತ್ತಿದ್ದಂತೆ, ನಂಬಿಗಸ್ತ ಮೂಲಪಿತನಾದ ಯಾಕೋಬನು ತನ್ನ ಕೊನೇ ಆಸೆಯನ್ನು ವ್ಯಕ್ತಪಡಿಸಿದನು: “ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ ನನಗೆ ಪಿತೃಗಳ ಬಳಿಯಲ್ಲಿ ಸಮಾಧಿಮಾಡಬೇಕು. ಆ ಗವಿಯು ಕಾನಾನ್‌ದೇಶದ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬೈಲಿನಲ್ಲಿ ಅದೆ.”​—ಆದಿಕಾಂಡ 49:29-31.

ಆಸಮಯದಲ್ಲಿ ಐಗುಪ್ತದಲ್ಲಿ ಅಸ್ತಿತ್ವದಲ್ಲಿದ್ದ ಒಂದು ಪದ್ಧತಿಯನ್ನು ಸದುಪಯೋಗಿಸಿಕೊಳ್ಳುವ ಮೂಲಕ ಯೋಸೇಫನು ತನ್ನ ತಂದೆಯ ಕೋರಿಕೆಗೆ ಮಾನ್ಯತೆ ತೋರಿಸಿದನು. ಅವನು “ತನ್ನ ಸೇವಕರಾದ ವೈದ್ಯರಿಗೆ​—ನನ್ನ ತಂದೆಯ ಶವವನ್ನು ಸುಗಂಧದ್ರವ್ಯಗಳಿಂದ ತುಂಬಿ ಸಿದ್ಧಪಡಿಸಿರಿ [“ಶವಸಂರಕ್ಷಣೆ ಮಾಡಿರಿ,” NW]” ಎಂದು ಆಜ್ಞಾಪಿಸಿದನು. ಆದಿಕಾಂಡ ಪುಸ್ತಕದ 50ನೆಯ ಅಧ್ಯಾಯದಲ್ಲಿ ಕಂಡುಬರುವ ವರದಿಯ ಪ್ರಕಾರ, ವೈದ್ಯರು ಶವವನ್ನು ಸಿದ್ಧಪಡಿಸಲಿಕ್ಕಾಗಿ ರೂಢಿಗನುಸಾರ 40 ದಿನಗಳನ್ನು ತೆಗೆದುಕೊಂಡರು. ಯಾಕೋಬನ ಶವಸಂರಕ್ಷಣೆಯು, ಕುಟುಂಬ ಸದಸ್ಯರು ಮತ್ತು ಐಗುಪ್ತದ ಪ್ರತಿಷ್ಠಿತರ ದೊಡ್ಡ ಹಾಗೂ ನಿಧಾನವಾಗಿ ಚಲಿಸುವ ಪ್ರವಾಸಿತಂಡವು, ಯಾಕೋಬನ ಶವವನ್ನು ಸಮಾಧಿಮಾಡಲಿಕ್ಕಾಗಿ 400 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಮಾಡುವುದನ್ನು ಸಾಧ್ಯಗೊಳಿಸಿತು.​—ಆದಿಕಾಂಡ 50:1-14.

ಎಂದಾದರೊಂದು ದಿನ ಯಾಕೋಬನ ಶವಸಂರಕ್ಷಣೆ ಮಾಡಲ್ಪಟ್ಟ ದೇಹವು ಸಿಗುವ ಸಾಧ್ಯತೆಯಿದೆಯೋ? ಸಂಭಾವ್ಯತೆಗಳು ಅತಿ ವಿರಳ. ಇಸ್ರಾಯೇಲ್‌ ನೀರಾವರಿ ಪ್ರದೇಶವಾಗಿದ್ದ ಕಾರಣ, ಅಲ್ಲಿ ಪ್ರಾಕ್ತನಶಾಸ್ತ್ರಕ್ಕೆ ಸಂಬಂಧಿಸಿದ ತುಂಬ ಮಿತವಾದ ಕೈವಸ್ತುಗಳನ್ನು ಕಂಡುಕೊಳ್ಳಬಹುದು. (ವಿಮೋಚನಕಾಂಡ 3:8) ಪುರಾತನ ಲೋಹ ಮತ್ತು ಕಲ್ಲಿನ ವಸ್ತುಗಳು ವಿಫುಲವಾಗಿ ಸಿಕ್ಕಿವೆ, ಆದರೆ ಬಟ್ಟೆ, ಚರ್ಮ, ಮತ್ತು ಸಂರಕ್ಷಿಸಲ್ಪಟ್ಟ ಶವಗಳಂಥ ಹೆಚ್ಚು ನವಿರಾದ ವಸ್ತುಗಳಲ್ಲಿ ಹೆಚ್ಚಿನವು, ಆರ್ದ್ರತೆಯನ್ನೂ ಕಾಲಪ್ರವಾಹದ ಪ್ರಾಕೃತಿಕ ಬದಲಾವಣೆಗಳನ್ನೂ ಎದುರಿಸಿ ನಿಂತಿಲ್ಲ.

ಆದರೆ ಶವಸಂರಕ್ಷಣೆ ಅಂದರೆ ಏನು? ಅದನ್ನು ಏಕೆ ಮಾಡಲಾಗುತ್ತದೆ? ಅದು ಕ್ರೈಸ್ತರಿಗೆ ಯೋಗ್ಯವಾದದ್ದೋ?

ಈ ಪದ್ಧತಿಯು ಎಲ್ಲಿ ಪ್ರಾರಂಭವಾಯಿತು?

ಶವಸಂರಕ್ಷಣೆಯನ್ನು, ಮಾನವ ಅಥವಾ ಪಶುವಿನ ಶವದ ಕಾಪಾಡುವಿಕೆ ಎಂದು ವರ್ಣಿಸಬಹುದು. ಶವಸಂರಕ್ಷಣೆಯ ಪದ್ಧತಿಯು ಐಗುಪ್ತದಲ್ಲಿ ಆರಂಭವಾಯಿತೆಂದು ಇತಿಹಾಸಕಾರರು ಒಪ್ಪಿಕೊಳ್ಳುತ್ತಾರೆ, ಆದರೆ ಪುರಾತನ ಅಶ್ಶೂರ್ಯರು, ಪಾರಸೀಯರು, ಮತ್ತು ಹೂಣರಲ್ಲಿಯೂ ಈ ರೂಢಿಯಿತ್ತು. ಬಂಜರು ಭೂಮಿಯಲ್ಲಿ ಹೂಳಿಡಲ್ಪಟ್ಟಿದ್ದ ಮತ್ತು ನೈಸರ್ಗಿಕವಾಗಿ ಕಾಪಾಡಲ್ಪಟ್ಟಿದ್ದ ದೇಹಗಳ ಕಂಡುಹಿಡಿತವೇ, ಪ್ರಾಯಶಃ ಶವಸಂರಕ್ಷಣೆಯಲ್ಲಿ ಪ್ರಾಥಮಿಕವಾಗಿ ಆಸಕ್ತಿ ಮತ್ತು ಪ್ರಯೋಗ ಪರೀಕ್ಷೆಯನ್ನು ಪ್ರಾರಂಭಿಸಿತು. ಇಂತಹ ಒಂದು ಹೂಳಿಡುವಿಕೆಯು, ಆರ್ದ್ರತೆ ಮತ್ತು ಗಾಳಿಯು ಶವವನ್ನು ತಟ್ಟುವುದರಿಂದ ತಡೆದಿರಬೇಕು ಮತ್ತು ಹೀಗೆ ಅದರ ಕೆಟ್ಟುಹೋಗುವಿಕೆಯನ್ನು ಸೀಮಿತಗೊಳಿಸಿರಬೇಕು. ಐಗುಪ್ತ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ವಿಫುಲವಾಗಿರುವ ನೇಟ್ರನ್‌ (ಸೋಡಿಯಮ್‌ ಕಾರ್ಬೊನೇಟ್‌) ಎಂಬ ಕ್ಷಾರದಲ್ಲಿ ದೇಹಗಳು ಸಂರಕ್ಷಿಸಿಡಲ್ಪಟ್ಟಿರುವುದನ್ನು ನೋಡಿದಾಗ, ಶವಸಂರಕ್ಷಣೆಯ ಪದ್ಧತಿಯು ಆರಂಭವಾಗಿರಬಹುದು ಎಂದು ಕೆಲವರು ಊಹಿಸುತ್ತಾರೆ.

ಒಬ್ಬ ಶವಸಂರಕ್ಷಕನ ಗುರಿ ಏನೆಂದರೆ, ಮರಣದ ಕೆಲವೇ ತಾಸುಗಳೊಳಗೆ ಶವವನ್ನು ಕೆಡಿಸಲಾರಂಭಿಸುವ ಬ್ಯಾಕ್ಟೀರಿಯಗಳಿಗೆ ಸಂಬಂಧಿಸಿದ ನೈಸರ್ಗಿಕ ಕ್ರಿಯೆಯನ್ನು ತಡೆಗಟ್ಟುವುದೇ ಆಗಿದೆ. ಈ ಕಾರ್ಯಗತಿಯು ತಡೆಗಟ್ಟಲ್ಪಡುವಲ್ಲಿ, ಕೊಳೆತವು ನಿಲ್ಲಬಹುದು ಇಲ್ಲವೇ ಕಡಿಮೆಪಕ್ಷ ನಿಧಾನಗೊಳಿಸಲ್ಪಡಬಹುದು. ಇದರಲ್ಲಿ ಆವಶ್ಯಕವಾದ ಮೂರು ಅಂಶಗಳಿವೆ: ಶವವನ್ನು ಜೀವಸದೃಶ ಸ್ಥಿತಿಯಲ್ಲಿಡುವುದು, ಕೊಳೆತುಹೋಗುವಿಕೆಯನ್ನು ತಡೆಗಟ್ಟುವುದು, ಮತ್ತು ಕ್ರಿಮಿಕೀಟಗಳ ಹಾವಳಿಯನ್ನು ನಿರೋಧಿಸಲು ಶವವನ್ನು ಸಜ್ಜುಗೊಳಿಸುವುದು.

ಪುರಾತನ ಐಗುಪ್ತ್ಯರು ವಿಶೇಷವಾಗಿ ಧಾರ್ಮಿಕ ಕಾರಣಗಳಿಗಾಗಿ ಅವರ ಮೃತರ ಶವಸಂರಕ್ಷಣೆಯನ್ನು ಮಾಡುತ್ತಿದ್ದರು. ಮರಣಾನಂತರದ ಜೀವಿತದಲ್ಲಿನ ಅವರ ನಂಬಿಕೆಯು, ಮೃತರು ಭೌತ ಲೋಕದೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವ ಒಂದು ಆಸೆಯೊಂದಿಗೆ ಜೋಡಿಸಲ್ಪಟ್ಟಿತ್ತು. ಅವರ ದೇಹಗಳು ಸದಾಕಾಲಕ್ಕೂ ಉಪಯೋಗಿಸಲ್ಪಡುವವು ಮತ್ತು ಅವು ಜೀವದಿಂದ ಪುನಃ ಪುಷ್ಟಿಗೊಳಿಸಲ್ಪಡುವವು ಎಂದು ಅವರು ನಂಬಿದರು. ಶವಸಂರಕ್ಷಣೆಯೆಂಬುದು ಅಷ್ಟು ಸಾಮಾನ್ಯವಾಗಿದ್ದರೂ, ಈಗಿನ ವರೆಗೂ ಅದನ್ನು ಹೇಗೆ ಮಾಡಲಾಗುತ್ತಿತ್ತು ಎಂಬುದರ ಕುರಿತಾಗಿ ಐಗುಪ್ತದ ಯಾವುದೇ ದಾಖಲೆಯು ಸಿಕ್ಕಿಲ್ಲ. ಅತ್ಯುತ್ತಮವಾದ ದಾಖಲೆಯು, ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್‌ ಇತಿಹಾಸಕಾರನಾದ ಹಿರಾಡಟಸ್‌ನದ್ದಾಗಿದೆ. ಆದರೆ, ಹಿರಾಡಟಸ್‌ನಿಂದ ಕೊಡಲ್ಪಟ್ಟಿರುವ ವಿವರಗಳನ್ನು ಉಪಯೋಗಿಸುತ್ತಾ, ಅದೇ ಪರಿಣಾಮಗಳನ್ನು ತರಲು ಮಾಡಲ್ಪಟ್ಟ ಪ್ರಯತ್ನವು ಅಷ್ಟೇನೂ ಯಶಸ್ವಿಕರವಾಗಿರಲಿಲ್ಲ ಎಂಬುದಾಗಿ ವರದಿಸಲ್ಪಡುತ್ತದೆ.

ಅದು ಕ್ರೈಸ್ತರಿಗೆ ಯೋಗ್ಯವಾದದ್ದೋ?

ಯಾಕೋಬನ ಶವಸಂರಕ್ಷಣೆಯು, ಅವನ ಸ್ವಂತ ಧರ್ಮಕ್ಕೆ ಸೇರಿರದ ವ್ಯಕ್ತಿಗಳಿಂದ ಮಾಡಲ್ಪಟ್ಟಿತು. ಆದರೂ, ಯೋಸೇಫನು ತನ್ನ ತಂದೆಯ ದೇಹವನ್ನು ಆ ವೈದ್ಯರುಗಳ ಕೈಗೊಪ್ಪಿಸುವಾಗ, ಆ ಸಮಯದಲ್ಲಿ ಐಗುಪ್ತದಲ್ಲಿ ಹೆಚ್ಚಿನ ಶವಸಂರಕ್ಷಣೆಗಳೊಂದಿಗೆ ಮಾಡಲಾಗುತ್ತಿದ್ದ ಪ್ರಾರ್ಥನೆಗಳು ಹಾಗೂ ಧಾರ್ಮಿಕ ಪದ್ಧತಿಗಳನ್ನು ನಡೆಸುವಂತೆ ಅವರಿಗೆ ಕೇಳಿಕೊಂಡಿರುವನು ಎಂಬುದು ತೀರ ಅಸಂಭಾವ್ಯ. ಏಕೆಂದರೆ ಯಾಕೋಬ ಯೋಸೇಫರಿಬ್ಬರೂ ನಂಬಿಗಸ್ತ ವ್ಯಕ್ತಿಗಳಾಗಿದ್ದರು. (ಇಬ್ರಿಯ 11:21, 22) ಪ್ರಾಯಶಃ ಯೆಹೋವನಿಂದ ಆಜ್ಞಾಪಿಸಲ್ಪಡದಿದ್ದರೂ, ಯಾಕೋಬನ ಶವದ ಕಾಪಾಡುವಿಕೆಯ ಬಗ್ಗೆ ಅಸಮ್ಮತಿಯನ್ನು ಸೂಚಿಸುವ ರೀತಿಯಲ್ಲಿ ಶಾಸ್ತ್ರವಚನಗಳಲ್ಲಿ ಮಾತಾಡಲಾಗಿಲ್ಲ. ಯಾಕೋಬನ ಶವಸಂರಕ್ಷಣೆಯು ಇಸ್ರಾಯೇಲ್‌ ಜನಾಂಗಕ್ಕೆ ಇಲ್ಲವೇ ಕ್ರೈಸ್ತ ಸಭೆಗೆ ಒಂದು ಪೂರ್ವನಿದರ್ಶನವಾಗಿದೆ ಎಂಬುದನ್ನು ಅರ್ಥೈಸುವುದಿಲ್ಲ. ವಾಸ್ತವದಲ್ಲಿ, ಈ ವಿಷಯದ ಕುರಿತು ದೇವರ ವಾಕ್ಯದಲ್ಲಿ ಯಾವುದೇ ನಿರ್ದಿಷ್ಟ ಸೂಚನೆಗಳು ಕೊಡಲ್ಪಟ್ಟಿಲ್ಲ. ಸ್ವತಃ ಯೋಸೇಫನ ಶವಕ್ಕೆ ಐಗುಪ್ತದಲ್ಲಿ ಶವಸಂರಕ್ಷಣೆ ಮಾಡಲ್ಪಟ್ಟಿರುವುದರ ಬಗ್ಗೆ ತಿಳಿಸಿದ ನಂತರ, ಮುಂದೆ ಈ ಪದ್ಧತಿಯ ಕುರಿತಾಗಿ ಯಾವುದೇ ಶಾಸ್ತ್ರೀಯ ದಾಖಲೆಯು ಇರುವುದಿಲ್ಲ.​—ಆದಿಕಾಂಡ 50:26.

ಪ್ಯಾಲೆಸ್ಟೈನ್‌ನ ಸಮಾಧಿಗಳಲ್ಲಿ ಹದಗೆಟ್ಟ ಸ್ಥಿತಿಯಲ್ಲಿ ಕಂಡುಕೊಳ್ಳಲ್ಪಟ್ಟಿರುವ ಮಾನವ ಕಳೇಬರಗಳು, ಶವಸಂರಕ್ಷಣೆಯು ಒಂದು ಇಬ್ರಿಯ ಪದ್ಧತಿಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತವೆ; ಕಡಿಮೆಪಕ್ಷ ದೀರ್ಘ ಅವಧಿಗಳಿಗಾಗಿರಲಿಲ್ಲ. ಉದಾಹರಣೆಗೆ, ಲಾಜರನ ಶವಸಂರಕ್ಷಣೆ ಮಾಡಲ್ಪಡಲಿಲ್ಲ. ಅವನನ್ನು ಬಟ್ಟೆಗಳಿಂದ ಸುತ್ತಿದ್ದರೂ, ಸಮಾಧಿಯನ್ನು ಮುಚ್ಚಿರುವ ಕಲ್ಲು ತೆಗೆಯಲ್ಪಡಲಿದ್ದಾಗ, ನೆರೆದು ಬಂದಿದ್ದವರು ಚಿಂತೆಯನ್ನು ವ್ಯಕ್ತಪಡಿಸಿದರು. ಲಾಜರನು ನಾಲ್ಕು ದಿನಗಳ ಹಿಂದೆ ಸತ್ತಿದ್ದ ಕಾರಣ, ಸಮಾಧಿಯು ತೆರೆಯಲ್ಪಟ್ಟಾಗ ಕೆಟ್ಟ ನಾತವು ಬರುವುದೆಂದು ಅವನ ಸಹೋದರಿಗೆ ಖಂಡಿತ ಗೊತ್ತಿತ್ತು.​—ಯೋಹಾನ 11:38-44.

ಯೇಸು ಕ್ರಿಸ್ತನ ಶವಸಂರಕ್ಷಣೆ ಮಾಡಲ್ಪಟ್ಟಿತೋ? ಈ ವಿಚಾರವನ್ನು ಸುವಾರ್ತಾ ದಾಖಲೆಗಳು ಬೆಂಬಲಿಸುವುದಿಲ್ಲ. ಆ ಸಮಯದಲ್ಲಿ, ದೇಹವನ್ನು ಸಮಾಧಿಯಲ್ಲಿ ಇಡುವ ಮುನ್ನ ಅದನ್ನು ಸುಗಂಧದ್ರವ್ಯಗಳಿಂದ ಸಿದ್ಧಪಡಿಸುವುದು ಯೆಹೂದಿ ಪದ್ಧತಿಯಾಗಿತ್ತು. ಉದಾಹರಣೆಗೆ, ಯೇಸುವಿನ ದೇಹವನ್ನು ಸಿದ್ಧಪಡಿಸಲಿಕ್ಕಾಗಿ, ನಿಕೊದೇಮನು ದೊಡ್ಡ ಪ್ರಮಾಣದಲ್ಲಿ ಸುಗಂಧದ್ರವ್ಯಗಳನ್ನು ಒದಗಿಸಿದನು. (ಯೋಹಾನ 19:38-42) ಇಷ್ಟೊಂದು ಸುಗಂಧದ್ರವ್ಯಗಳೇಕೆ? ಯೇಸುವಿಗಾಗಿರುವ ಹೃತ್ಪೂರ್ವಕ ಪ್ರೀತಿ ಮತ್ತು ಗೌರವವು ಈ ಉದಾರಕೃತ್ಯಕ್ಕೆ ಅವನನ್ನು ಪ್ರೇರಿಸಿರಬಹುದು. ದೇಹವನ್ನು ಕಾಪಾಡುವ ಉದ್ದೇಶದಿಂದಲೇ ಇಂಥ ಸುಗಂಧದ್ರವ್ಯಗಳನ್ನು ಉಪಯೋಗಿಸಲಾಗಿತ್ತು ಎಂದು ನಾವು ತೀರ್ಮಾನಿಸಬೇಕಾಗಿಲ್ಲ.

ಒಬ್ಬ ಕ್ರೈಸ್ತನು ಶವಸಂರಕ್ಷಣೆಯ ಪದ್ಧತಿಗೆ ಆಕ್ಷೇಪವನ್ನೆತ್ತಬೇಕೋ? ವಾಸ್ತವಿಕವಾದ ಒಂದು ದೃಷ್ಟಿಕೋನದಿಂದ ನೋಡುವಾಗ, ಶವಸಂರಕ್ಷಣೆಯೆಂಬುದು ಕೇವಲ ತಡೆಯಲಸಾಧ್ಯವಾದದ್ದನ್ನು ತಡಮಾಡುವುದೇ ಆಗಿದೆ. ಮಣ್ಣಿನಿಂದ ತೆಗೆಯಲ್ಪಟ್ಟ ನಾವು ಮರಣದಲ್ಲಿ ಮಣ್ಣಿಗೇ ಹಿಂದಿರುಗುವೆವು. (ಆದಿಕಾಂಡ 3:19) ಆದರೆ ಮರಣದ ಸಮಯದಿಂದ ಶವಸಂಸ್ಕಾರದ ವರೆಗೆ ಎಷ್ಟು ಸಮಯವಿರುವುದು? ಕುಟುಂಬ ಸದಸ್ಯರು ಮತ್ತು ಸ್ನೇಹಿತರು ದೂರದಲ್ಲಿರುವ ಸ್ಥಳಗಳಿಂದ ಬರಬೇಕಾಗಿರುವಲ್ಲಿ ಮತ್ತು ಅವರು ದೇಹವನ್ನು ನೋಡಲು ಬಯಸುವಲ್ಲಿ, ಶವವನ್ನು ಒಂದಷ್ಟು ಮಟ್ಟಿಗೆ ಶವಸಂರಕ್ಷಣೆ ಮಾಡಬೇಕು.

ಹೀಗಿರುವುದರಿಂದ, ಸ್ಥಳಿಕ ಆವಶ್ಯಕತೆಗಳು ಅಗತ್ಯಪಡಿಸುವುದಾದರೆ ಅಥವಾ ಕುಟುಂಬ ಸದಸ್ಯರು ಶವಸಂರಕ್ಷಣೆ ಮಾಡಲ್ಪಡಬೇಕು ಎಂದು ಬಯಸುವುದಾದರೆ, ಇದರ ಕುರಿತು ಶಾಸ್ತ್ರೀಯವಾಗಿ ಯಾವ ನಿರ್ದೇಶನವಿದೆ ಎಂದು ಚಿಂತಿಸಬೇಕಾದ ಆವಶ್ಯಕತೆಯಿಲ್ಲ. ಸತ್ತವರಿಗಾದರೋ “ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಅವರು ದೇವರ ಸ್ಮರಣೆಯಲ್ಲಿರುವುದಾದರೆ, ಅವರು ಆತನ ವಾಗ್ದತ್ತ ಹೊಸ ಲೋಕದಲ್ಲಿ ಖಂಡಿತ ಉಜ್ಜೀವಿಸಲ್ಪಡುವರು.​—ಯೋಬ 14:13-15; ಅ. ಕೃತ್ಯಗಳು 24:15; 2 ಪೇತ್ರ 3:13.

[ಪುಟ 31ರಲ್ಲಿರುವ ಚೌಕ/ಚಿತ್ರ]

ಶವಸಂರಕ್ಷಣೆ​—ಅಂದು ಮತ್ತು ಇಂದು

ಪುರಾತನ ಐಗುಪ್ತದಲ್ಲಿ, ಒಂದು ಶವವು ಯಾವ ರೀತಿಯ ಶವಸಂರಕ್ಷಣೆಯನ್ನು ಪಡೆದುಕೊಳ್ಳುತ್ತದೆ ಎಂಬುದು ಕುಟುಂಬದ ಅಂತಸ್ತಿನ ಮೇಲೆ ಹೊಂದಿಕೊಂಡಿತ್ತು. ಒಂದು ಐಶ್ವರ್ಯವಂತ ಕುಟುಂಬವು ಹೆಚ್ಚಾಗಿ ಈ ಕೆಳಗಿನ ಪದ್ಧತಿಯನ್ನು ಆಯ್ಕೆಮಾಡಿದ್ದಿರಬಹುದು:

ಒಂದು ಲೋಹ ಯಂತ್ರದ ಉಪಯೋಗದಿಂದ ಮೂಗಿನ ಹೊಳ್ಳೆಗಳ ಮೂಲಕ ಮಿದುಳು ಹೊರತೆಗೆಯಲ್ಪಡುವುದು. ನಂತರ, ಸೂಕ್ತವಾದ ಮೂಲಿಕೆಗಳಿಂದ ತಲೆಬುರುಡೆಯು ತುಂಬಿಸಲ್ಪಡುವುದು. ಮುಂದಿನ ಹೆಜ್ಜೆ, ಹೃದಯ ಮತ್ತು ಮೂತ್ರಜನಕಾಂಗಗಳನ್ನು ಬಿಟ್ಟು ಒಳಗಿನ ಎಲ್ಲ ಅಂಗಗಳ ತೆಗೆಯುವಿಕೆಯಾಗಿತ್ತು. ಕಿಬ್ಬೊಟ್ಟೆಯ ಭಾಗವನ್ನು ತಲಪಲಿಕ್ಕಾಗಿ, ದೇಹದಲ್ಲಿ ಒಂದು ಸೀಳನ್ನು ಮಾಡಬೇಕಾಗಿತ್ತು, ಆದರೆ ಇದು ಒಂದು ಪಾಪವಾಗಿ ಪರಿಗಣಿಸಲ್ಪಡುತ್ತಿತ್ತು. ಈ ವಿವಾದಾಸ್ಪದವಾದ ವಿಷಯದಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಐಗುಪ್ತ್ಯ ಶವಸಂರಕ್ಷಕರು ಕತ್ತರಿಸುವವ ಎಂದು ಕರೆಯಲ್ಪಟ್ಟ ಒಬ್ಬ ವ್ಯಕ್ತಿಗೆ ಈ ಸೀಳುವಿಕೆಯ ಕೆಲಸವನ್ನು ವಹಿಸಿಕೊಡುತ್ತಿದ್ದರು. ಇದನ್ನು ಮಾಡಿದ ಕೂಡಲೆ ಅವನು ಅಲ್ಲಿಂದ ಓಡಿಬಿಡಬೇಕಾಗಿತ್ತು, ಏಕೆಂದರೆ ಈ ದುಷ್ಕೃತ್ಯ ಎಂದು ಕರೆಯಲ್ಪಟ್ಟ ಪಾಪಕ್ಕೆ ಶಾಪಗಳು ಮತ್ತು ಕಲ್ಲೆಸೆತಗಳು ದಂಡನೆಯಾಗಿದ್ದವು.

ಕಿಬ್ಬೊಟ್ಟೆಯ ಗೂಡು ಖಾಲಿಮಾಡಲ್ಪಟ್ಟ ನಂತರ, ಅದನ್ನು ಚೆನ್ನಾಗಿ ತೊಳೆಯಲಾಗುತ್ತಿತ್ತು. ಇತಿಹಾಸಕಾರ ಹಿರಾಡಟಸ್‌ ಬರೆಯುವುದು: “ಆ ಗೂಡನ್ನು ಅವರು ಅತಿ ಶುದ್ಧವಾದ ಪುಡಿಮಾಡಲ್ಪಟ್ಟ ರಕ್ತಬೋಳದೊಂದಿಗೆ, ದಾಲ್ಚಿನ್ನಿಯೊಂದಿಗೆ, ಮತ್ತು ಲೋಬಾನದ ಹೊರತು ಬೇರೆಲ್ಲ ಸುಗಂಧದ್ರವ್ಯಗಳನ್ನು ಉಪಯೋಗಿಸುತ್ತಾ ತುಂಬಿಸುತ್ತಿದ್ದರು; ನಂತರ ಆ ಸೀಳನ್ನು ಹೊಲಿಯುತ್ತಿದ್ದರು.”

ನಂತರ, ಶವವನ್ನು ನೇಟ್ರನ್‌ನಲ್ಲಿ 70 ದಿವಸಗಳ ತನಕ ಮುಳುಗಿಸಿಡುವ ಮೂಲಕ ನಿರಾರ್ದ್ರಗೊಳಿಸಲಾಗುತ್ತಿತ್ತು. ತರುವಾಯ, ಶವವು ತೊಳೆಯಲ್ಪಟ್ಟು, ನಿಪುಣವಾದ ರೀತಿಯಲ್ಲಿ ಬಟ್ಟೆಯಿಂದ ಸುತ್ತಲ್ಪಡುತ್ತಿತ್ತು. ನಂತರ ಬಟ್ಟೆಯ ಮೇಲೆ ರಾಳವನ್ನು ಅಥವಾ ಗೋಂದಿನಂಥ ಪದಾರ್ಥವನ್ನು ಹಚ್ಚಲಾಗುತ್ತಿತ್ತು; ಬಳಿಕ ಮಾನವ ಆಕಾರವಿದ್ದ ಒಂದು ಅತ್ಯಾಡಂಭರವಾದ ಮರದ ಪೆಟ್ಟಿಗೆಯಲ್ಲಿ ರಕ್ಷಿತ ಶವ (ಮಮ್ಮಿ)ವನ್ನು ಇಡಲಾಗುತ್ತಿತ್ತು.

ಇಂದು, ಶವಸಂರಕ್ಷಣೆಯನ್ನು ಕೇವಲ ಕೆಲವೇ ತಾಸುಗಳಲ್ಲಿ ಮಾಡಬಹುದು. ಇದನ್ನು, ಅಭಿಧಮನಿ ಮತ್ತು ಅಪಧಮನಿ ರಕ್ತನಾಳಗಳಲ್ಲಿ ಮಾತ್ರವಲ್ಲದೆ ಕಿಬ್ಬೊಟ್ಟೆಯ ಹಾಗೂ ಎದೆಯ ಗೂಡುಗಳಲ್ಲಿ ಸೂಕ್ತ ಪ್ರಮಾಣದ ಶವಸಂರಕ್ಷಕ ದ್ರವವನ್ನು ಇಡುವ ಮೂಲಕ ಮಾಡಲಾಗುತ್ತದೆ. ವರ್ಷಗಳು ಕಳೆದಂತೆ, ಅನೇಕ ರೀತಿಯ ದ್ರವಗಳು ತಯಾರಿಸಲಾಗಿದೆ ಮತ್ತು ಉಪಯೋಗಿಸಲಾಗಿದೆ. ಆದರೂ, ವೆಚ್ಚ ಮತ್ತು ಭದ್ರತೆಯ ಕಾರಣಗಳಿಂದಾಗಿ, ಫಾರ್ಮ್ಯೊಲ್ಡಿಹೈಡ್‌ ಎಂಬ ಶವಸಂರಕ್ಷಕ ದ್ರವವೇ ಸಾಮಾನ್ಯವಾಗಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ.

[ಚಿತ್ರ]

ರಾಜ ಟುಟಂಕಮೇನನ ಚಿನ್ನದ ಶವಪೆಟ್ಟಿಗೆ