ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರವಾಗಿದ್ದು, ಧೈರ್ಯದಿಂದ ಮುಂದೆ ಸಾಗಿರಿ!

ಎಚ್ಚರವಾಗಿದ್ದು, ಧೈರ್ಯದಿಂದ ಮುಂದೆ ಸಾಗಿರಿ!

ಎಚ್ಚರವಾಗಿದ್ದು, ಧೈರ್ಯದಿಂದ ಮುಂದೆ ಸಾಗಿರಿ!

ವಿಶೇಷ ಕೂಟಗಳ ಕುರಿತಾದ ವರದಿ

“ವ್ಯವಹರಿಸಲು ಕಷ್ಟಕರವಾಗಿರುವ ಕಠಿನ ಕಾಲ”ಗಳಲ್ಲಿ ನಾವು ಜೀವಿಸುತ್ತಿದ್ದೇವೆಂಬುದನ್ನು ಯಾರಾದರೂ ಅಲ್ಲಗಳೆಯಬಲ್ಲರೊ? ನಾವು ಯೆಹೋವನ ಸಾಕ್ಷಿಗಳಾಗಿದ್ದರೂ, “ಕಡೇ ದಿವಸಗಳಲ್ಲಿ” ಜೀವಿಸುವಾಗ ಬರುವ ಒತ್ತಡಗಳಿಂದ ನಾವು ರಕ್ಷಿತರಾಗಿಲ್ಲ. (2 ತಿಮೊಥೆಯ 3:​1-5, NW) ಆದರೆ ಜನರಿಗೆ ಸಹಾಯದ ಅಗತ್ಯವಿದೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಅವರಿಗೆ ಲೋಕ ಘಟನೆಗಳ ಅರ್ಥವೇನೆಂಬುದು ಗೊತ್ತಾಗುವುದಿಲ್ಲ. ಅವರಿಗೆ ಸಾಂತ್ವನ ಮತ್ತು ನಿರೀಕ್ಷೆಯ ಅಗತ್ಯವಿದೆ. ನಮ್ಮ ಜೊತೆ ಮಾನವರಿಗೆ ಸಹಾಯಮಾಡುವುದರಲ್ಲಿ ಪ್ರಮುಖವಾಗಿ ನಮ್ಮ ಪಾತ್ರವೇನು?

ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರುವ ದೇವದತ್ತ ನೇಮಕ ನಮಗಿದೆ. (ಮತ್ತಾಯ 24:14) ಈ ಸ್ವರ್ಗೀಯ ರಾಜ್ಯವು ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿದೆಯೆಂದು ಜನರಿಗೆ ತಿಳಿದುಬರಬೇಕು. ಆದರೆ ನಮ್ಮ ಸಂದೇಶವನ್ನು ಯಾವಾಗಲೂ ಸಂತೋಷದಿಂದ ಸ್ವೀಕರಿಸಲಾಗುವುದಿಲ್ಲ. ಕೆಲವೊಂದು ಸ್ಥಳಗಳಲ್ಲಿ ನಮ್ಮ ಕೆಲಸವು ನಿಷೇಧಿಸಲ್ಪಟ್ಟಿದೆ ಮತ್ತು ನಮ್ಮ ಸಹೋದರರನ್ನು ಹಿಂಸಿಸಲಾಗಿದೆ. ಆದರೂ ನಾವು ಬಿಟ್ಟುಕೊಡುವುದಿಲ್ಲ. ಯೆಹೋವನ ಮೇಲೆ ಪೂರ್ಣ ಭರವಸೆಯೊಂದಿಗೆ, ನಾವು ಎಚ್ಚರವಾಗಿರಲು ಮತ್ತು ಸುವಾರ್ತೆಯನ್ನು ಬಿಟ್ಟುಕೊಡದೆ ಘೋಷಿಸುತ್ತಾ ಇದ್ದು ಧೈರ್ಯದಿಂದ ಮುಂದೊತ್ತಲು ದೃಢಸಂಕಲ್ಪವನ್ನು ಮಾಡಿದ್ದೇವೆ.​—ಅ. ಕೃತ್ಯಗಳು 5:42.

ಇಸವಿ 2001ರ ಅಕ್ಟೋಬರ್‌ನಲ್ಲಿ ನಡೆದ ವಿಶೇಷ ಕೂಟಗಳಲ್ಲಿ ಈ ಧೃಢಸಂಕಲ್ಪವು ಸ್ಪಷ್ಟವಾಗಿ ವ್ಯಕ್ತವಾಯಿತು. ಶನಿವಾರ ಅಕ್ಟೋಬರ್‌ 6ರಂದು, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್‌ವೇನಿಯದ ವಾರ್ಷಿಕ ಕೂಟವು, ಅಮೆರಿಕದ ನ್ಯೂಜರ್ಸಿ, ಜರ್ಸಿ ಸಿಟಿಯ ಯೆಹೋವನ ಸಾಕ್ಷಿಗಳ ಸಮ್ಮೇಳನ ಸಭಾಗೃಹದಲ್ಲಿ ನಡೆಯಿತು. * ಮರುದಿನ, ಅಮೆರಿಕದಲ್ಲಿ ಮೂರು ಮತ್ತು ಕೆನಡದಲ್ಲಿ ಒಂದು ಹೀಗೆ ನಾಲ್ಕು ಸ್ಥಳಗಳಲ್ಲಿ ಸಂಪೂರಕ ಕೂಟಗಳು ನಡೆಸಲ್ಪಟ್ಟವು. *

ವಾರ್ಷಿಕ ಕೂಟದಲ್ಲಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ, ಅಧ್ಯಕ್ಷತೆ ವಹಿಸಿದ ಸಾಮ್ಯುವೇಲ್‌ ಎಫ್‌. ಹರ್ಡ್‌ ತಮ್ಮ ಆರಂಭದ ಮಾತುಗಳಲ್ಲಿ ಕೀರ್ತನೆ 92:​1, 4ಕ್ಕೆ ಸೂಚಿಸಿ ಅನಂತರ ಹೇಳಿದ್ದು: “ನಾವು ಆಭಾರಿಗಳಾಗಿದ್ದೇವೆಂದು ತೋರಿಸಬಯಸುತ್ತೇವೆ.” ಲೋಕದ ಸುತ್ತಲಿಂದ ಬಂದ ಐದು ವರದಿಗಳಲ್ಲಿ ಆಭಾರಿಗಳಾಗಿರಲು ಕಾರಣಗಳು ಕೊಡಲ್ಪಟ್ಟವು.

ಎಲ್ಲೆಡೆಯಿಂದಲೂ ವರದಿಗಳು

ಹಿಂದೆ ಗೋಲ್ಡ್‌ ಕೋಸ್ಟ್‌ ಎಂದು ಪ್ರಸಿದ್ಧವಾಗಿದ್ದ ಘಾನ ದೇಶದಲ್ಲಿ ಸಾರುವ ಕಾರ್ಯದ ಪ್ರಗತಿಯ ಬಗ್ಗೆ ಸಹೋದರ ಆಲ್ಫ್ರಡ್‌ ಕ್ವಾಚೀ ವರದಿಸಿದರು. ಆ ದೇಶದಲ್ಲಿ ನಮ್ಮ ಕೆಲಸವು ಅನೇಕ ವರ್ಷಗಳ ವರೆಗೆ ನಿಷೇಧಿಸಲ್ಪಟ್ಟಿತ್ತು. “ಈ ನಿಷೇಧ ಏಕೆ? ನೀವೇನು ಮಾಡಿದಿರಿ?” ಎಂದು ಜನರು ಕೇಳುತ್ತಿದ್ದರು. ಇದು, ಸಾಕ್ಷಿಯನ್ನು ಕೊಡಲಿಕ್ಕಾಗಿ ಅವಕಾಶಗಳನ್ನು ತೆರೆಯುತ್ತಿತ್ತು ಎಂದು ಸಹೋದರ ಕ್ವಾಚೀ ವಿವರಿಸಿದರು. 1991ರಲ್ಲಿ ನಿಷೇಧವು ತೆಗೆಯಲ್ಪಟ್ಟಾಗ, ಘಾನದಲ್ಲಿ 34,421 ಮಂದಿ ಸಾಕ್ಷಿಗಳಿದ್ದರು. ಆಗಸ್ಟ್‌ 2001ರಲ್ಲಿ, ಒಟ್ಟು ಸಂಖ್ಯೆಯು 68,152 ಆಗಿತ್ತು​—ಇದು 98 ಪ್ರತಿಶತ ವೃದ್ಧಿಯಾಗಿತ್ತು. 10,000 ಮಂದಿಗಾಗಿ ಪೀಠ ವ್ಯವಸ್ಥೆಯಿರುವ ಸಮ್ಮೇಳನ ಸಭಾಗೃಹವನ್ನು ಕಟ್ಟಲಿಕ್ಕಾಗಿ ಯೋಜನೆಗಳು ನಡೆಯುತ್ತಾ ಇವೆ. ಘಾನದಲ್ಲಿರುವ ನಮ್ಮ ಸಹೋದರರು ತಮಗಿರುವ ಧಾರ್ಮಿಕ ಸ್ವಾತಂತ್ರ್ಯದ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳುತ್ತಿದ್ದಾರೆಂಬುದು ಸ್ಪಷ್ಟ.

ರಾಜಕೀಯ ಅಸ್ಥಿರತೆಯ ಎದುರಿನಲ್ಲೂ, ಐರ್ಲೆಂಡ್‌ನಲ್ಲಿರುವ ನಮ್ಮ ಸಹೋದರರು ಶುಶ್ರೂಷೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ, ಮತ್ತು ಅವರ ತಟಸ್ಥ ನಿಲುವಿಗಾಗಿ ಅವರನ್ನು ಗೌರವಿಸಲಾಗುತ್ತದೆ. ಐರ್ಲೆಂಡಿನ 6 ಸರ್ಕಿಟ್‌ಗಳಲ್ಲಿ 115 ಸಭೆಗಳು ಇವೆಯೆಂದು ಬ್ರಾಂಚ್‌ ಕಮಿಟಿ ಕೋಆರ್ಡಿನೇಟರ್‌ ಪೀಟರ್‌ ಆ್ಯಂಡ್ರೂಸ್‌ ಹೇಳಿದರು. ಸಹೋದರ ಆ್ಯಂಡ್ರೂಸ್‌ ಹತ್ತು ವರ್ಷ ಪ್ರಾಯದ ಲಿಯಾಮ್‌ ಎಂಬ ಹುಡುಗನ ಅನುಭವವನ್ನು ಹೇಳಿದರು. ಅವನು ಶಾಲೆಯಲ್ಲಿ ಧೈರ್ಯದಿಂದ ಸಾಕ್ಷಿ ಕೊಡುತ್ತಾನೆ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಅವನು 25 ಮಂದಿ ಸಹಪಾಠಿಗಳಿಗೂ ತನ್ನ ಶಿಕ್ಷಕಿಗೂ ಕೊಟ್ಟನು. ಲಿಯಾಮ್‌ಗೆ ದೀಕ್ಷಾಸ್ನಾನ ಹೊಂದಲು ಮನಸ್ಸಿತ್ತು, ಆದರೆ ಅವನು ತುಂಬ ಚಿಕ್ಕವನಲ್ಲವೇ ಎಂದು ಯಾರೋ ಅವನಿಗೆ ಕೇಳಿದರು. ಲಿಯಾಮ್‌ ಉತ್ತರಿಸಿದ್ದು: “ನನ್ನ ವಯಸ್ಸಲ್ಲ, ಬದಲಾಗಿ ಯೆಹೋವನಿಗಾಗಿ ನನಗಿರುವ ಪ್ರೀತಿಯೇ ನಿರ್ಧಾರಕ ಅಂಶವಾಗಿರಬೇಕು. ಮತ್ತು ನಾನು ಆತನನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನನ್ನ ದೀಕ್ಷಾಸ್ನಾನವೇ ತೋರಿಸುವುದು.” ಲಿಯಾಮನ ಗುರಿಯು ಒಬ್ಬ ಮಿಷನೆರಿಯಾಗುವುದು ಆಗಿದೆ.

ಇಸವಿ 1968ರಲ್ಲಿ ವೆನಿಸ್ವೇಲದಲ್ಲಿ 5,400 ಮಂದಿ ಪ್ರಚಾರಕರಿದ್ದರು. ಆದರೆ ಈಗ 88,000ಕ್ಕಿಂತಲೂ ಹೆಚ್ಚು ಮಂದಿಯಿದ್ದಾರೆ ಎಂದು ಬ್ರಾಂಚ್‌ ಕಮಿಟಿ ಕೋಆರ್ಡಿನೇಟರ್‌ ಸ್ಟೀಫಾನ್‌ ಯೊಹಾನ್ಸನ್‌ ಹೇಳಿದರು. ಮತ್ತು 2001ರಲ್ಲಿ 2,96,000 ಮಂದಿ ಜ್ಞಾಪಕಾಚರಣೆಗೆ ಹಾಜರಾದದ್ದರಿಂದ ಇನ್ನೂ ಹೆಚ್ಚಿನ ವೃದ್ಧಿಯಾಗುವ ಸಾಧ್ಯತೆಯಿದೆ. 1999ರ ಡಿಸೆಂಬರ್‌ ತಿಂಗಳಿನಲ್ಲಿ ಭಾರೀ ಮಳೆಗಳಿಂದಾಗಿ ನೆಲ ಕುಸಿತಗಳಾಗಿ, ಹಲವಾರು ಸಾಕ್ಷಿಗಳ ಸಮೇತ ಅಂದಾಜಿಗನುಸಾರ 50,000 ಜನರು ಕೊಲ್ಲಲ್ಪಟ್ಟರು. ಒಂದು ರಾಜ್ಯ ಸಭಾಗೃಹದಲ್ಲಿ ಮಣ್ಣು ಎಷ್ಟು ತುಂಬಿಹೋಗಿತ್ತೆಂದರೆ, ಸೂರಿಗೂ ಮಣ್ಣಿಗೂ ಕೇವಲ ಎರಡು ಅಡಿ ಸ್ಥಳ ಮಾತ್ರ ಉಳಿದಿತ್ತು. ಆ ಕಟ್ಟಡವನ್ನು ತೊರೆಯುವಂತೆ ಯಾರೊ ಸಲಹೆ ನೀಡಿದಾಗ, ಸಹೋದರರು ಉತ್ತರಿಸಿದ್ದು: “ಸಾಧ್ಯವೇ ಇಲ್ಲ! ಇದು ನಮ್ಮ ರಾಜ್ಯ ಸಭಾಗೃಹ. ನಾವು ಈಗ ಅದನ್ನು ತೊರೆಯಲು ಬಯಸುವುದಿಲ್ಲ.” ಅವರು ಕೆಲಸಮಾಡಲಾರಂಭಿಸಿ, ಟನ್ನುಗಟ್ಟಲೆಯಷ್ಟು ಮಣ್ಣು, ಕಲ್ಲುಗಳು ಮತ್ತು ಇನ್ನಿತರ ಕಚಡವನ್ನು ತೆಗೆದುಹಾಕಿದರು. ಆ ಕಟ್ಟಡವನ್ನು ಪುನರ್‌ರಚಿಸಲಾಯಿತು, ಮತ್ತು ಈಗ ಅದು ವಿಪತ್ತು ಎರಗುವುದಕ್ಕಿಂತ ಮುಂಚೆ ಇದ್ದದ್ದಕ್ಕಿಂತಲೂ ಹೆಚ್ಚು ಆಕರ್ಷಕವಾಗಿ ತೋರುತ್ತದೆಂದು ಸಹೋದರರು ಹೇಳುತ್ತಾರೆ!

ಫಿಲಿಪ್ಪೀನ್ಸ್‌ನಲ್ಲಿ 87 ಭಾಷೆಗಳು ಹಾಗೂ ಉಪಭಾಷೆಗಳನ್ನಾಡಲಾಗುತ್ತದೆ ಎಂದು ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಸಹೋದರ ಡೆಂಟನ್‌ ಹಾಪ್‌ಕಿನ್ಸನ್‌ ಹೇಳಿದರು. ಗತ ಸೇವಾ ವರ್ಷದಲ್ಲಿ, ಇಡೀ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು ಆ ದೇಶದ ಮೂರು ಮುಖ್ಯ ಭಾಷೆಗಳಾದ ಸೆಬುವಾನೊ, ಇಲೊಕೊ ಮತ್ತು ಟಗಾಲಗ್‌ನಲ್ಲಿ ಬಿಡುಗಡೆಮಾಡಲಾಯಿತು. ಸಹೋದರ ಹಾಪ್‌ಕಿನ್ಸನ್‌ ಅವರು ಒಂಬತ್ತು ವರ್ಷ ಪ್ರಾಯದ ಒಬ್ಬ ಹುಡುಗನ ಅನುಭವವನ್ನು ತಿಳಿಸಿದರು. ಅವನು, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ನಿಮ್ಮನ್ನು ಸಂತೋಷಪಡಿಸಲಿಕ್ಕಾಗಿ ಸುವಾರ್ತೆ ಎಂಬ ಪುಸ್ತಕವನ್ನು ಓದಿದ್ದನು. ಅವನು ಬ್ರಾಂಚ್‌ನಿಂದ ಬೇರೆ ಪ್ರಕಾಶನಗಳನ್ನು ಕೇಳಿ ತರಿಸಿಕೊಂಡನು ಮತ್ತು ಅವುಗಳನ್ನೂ ಓದಿ ಮುಗಿಸಿದನು. ಆದರೆ ಅವನ ಕುಟುಂಬವು ಅವನನ್ನು ವಿರೋಧಿಸಿತು. ವರ್ಷಗಳಾನಂತರ ಅವನು ಮೆಡಿಕಲ್‌ ಕಾಲೇಜಿನಲ್ಲಿದ್ದಾಗ, ಬ್ರಾಂಚ್‌ ಅನ್ನು ಸಂಪರ್ಕಿಸಿ ಒಂದು ಬೈಬಲ್‌ ಅಧ್ಯಯನಕ್ಕಾಗಿ ವಿನಂತಿಸಿದನು. ಅವನು 1996ರಲ್ಲಿ ದೀಕ್ಷಾಸ್ನಾನಪಡೆದು, ಬೇಗನೆ ಪೂರ್ಣ ಸಮಯದ ಶುಶ್ರೂಷೆಯನ್ನು ಸೇರಿದನು. ಈಗ ಅವನು ತನ್ನ ಹೆಂಡತಿಯೊಂದಿಗೆ ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾನೆ.

‘ಪೋರ್ಟರೀಕೊ “ಸಾಕ್ಷಿಗಳ ರಫ್ತು” ವ್ಯಾಪಾರದಲ್ಲಿ ತೊಡಗಿದೆ’ ಎಂದು ಬ್ರಾಂಚ್‌ ಕಮಿಟಿ ಕೋಆರ್ಡಿನೇಟರ್‌ ರಾನಲ್ಡ್‌ ಪಾರ್ಕನ್‌ ವಿವರಿಸಿದರು. ಆ ದ್ವೀಪದಲ್ಲಿ ಸುಮಾರು 25,000 ಪ್ರಚಾರಕರು ಇದ್ದಾರೆ ಮತ್ತು ಆ ಸಂಖ್ಯೆಯು ಹಲವಾರು ವರ್ಷಗಳಿಂದ ಅಷ್ಟಕ್ಕೇ ನಿಂತುಬಿಟ್ಟಿದೆ. ಏಕೆ? ಪ್ರತಿ ವರ್ಷ ಪೋರ್ಟರೀಕೊ ಸುಮಾರು 1,000 ಪ್ರಚಾರಕರನ್ನು ಅಮೆರಿಕಕ್ಕೆ “ರಫ್ತು” ಮಾಡುತ್ತದೆಂದು ಅಂದಾಜಿಸಲಾಗಿದೆ. ಇವರಲ್ಲಿ ಅನೇಕರು ಆರ್ಥಿಕ ಕಾರಣಗಳಿಗಾಗಿ ಅಲ್ಲಿಗೆ ಸ್ಥಳಾಂತರಿಸುತ್ತಾರೆ. ಸಹೋದರ ಪಾರ್ಕನ್‌ರು, ಲ್ಯುಕೇಮಿಯ ರೋಗದಿಂದ ಬಳಲುತ್ತಿದ್ದ ಲೂಯೀಸ್‌ ಎಂಬ 17 ವರ್ಷ ಪ್ರಾಯದ ಸಾಕ್ಷಿಯೊಬ್ಬನನ್ನು ಒಳಗೊಂಡಿದ್ದ ಒಂದು ಗುರುತರವಾದ ಕೋರ್ಟ್‌ ತೀರ್ಪಿನ ಕುರಿತಾಗಿ ಹೇಳಿದರು. ಲೂಯೀಸ್‌ ರಕ್ತವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ, ಅವನ ಮೊಕದ್ದಮೆಯನ್ನು ಕೋರ್ಟಿಗೆ ತೆಗೆದುಕೊಂಡು ಹೋಗಲಾಯಿತು. ನ್ಯಾಯಾಧೀಶರು ಅವನೊಂದಿಗೆ ನೇರವಾಗಿ ಮಾತಾಡಲು ಬಯಸಿದರು, ಆದುದರಿಂದ ಅವರು ಅವನನ್ನು ಆಸ್ಪತ್ರೆಯಲ್ಲಿಯೇ ಭೇಟಿಮಾಡಿದರು. ಲೂಯೀಸ್‌ ಅವರಿಗೆ ಹೀಗೆ ಕೇಳಿದನು: “ನಾನೊಂದು ಗಂಭೀರವಾದ ಅಪರಾಧವನ್ನು ನಡೆಸಿದರೆ ನೀವು ನನ್ನನ್ನು ಒಬ್ಬ ವಯಸ್ಕನೋಪಾದಿ ತೀರ್ಪು ಕೊಡುವಿರಿ, ಆದರೆ ನಾನು ದೇವರಿಗೆ ವಿಧೇಯನಾಗಲು ಬಯಸುವಾಗ ನೀವು ನನ್ನನ್ನು ಅಪ್ರಾಪ್ತ ವಯಸ್ಕನೋಪಾದಿ ಉಪಚರಿಸುವುದು ಏಕೆ?” ಅವನೊಬ್ಬ ಪ್ರೌಢ ಅಪ್ರಾಪ್ತ ವಯಸ್ಕನಾಗಿದ್ದಾನೆ ಮತ್ತು ತನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾನೆಂದು ನ್ಯಾಯಾಧೀಶರಿಗೆ ಮನದಟ್ಟಾಯಿತು.

ದೂರದೂರದ ದೇಶಗಳಿಂದ ಬಂದ ವರದಿಗಳ ನಂತರ, ಅಮೆರಿಕದ ಬ್ರಾಂಚ್‌ ಕಮಿಟಿಯ ಸದಸ್ಯರಾದ ಹ್ಯಾರಲ್ಡ್‌ ಕಾರ್‌ಕರ್ನ್‌ ಅವರು, ದೀರ್ಘ ಸಮಯದಿಂದಲೂ ಯೆಹೋವನ ಸೇವಕರಾಗಿರುವ ನಾಲ್ಕು ವ್ಯಕ್ತಿಗಳ ಇಂಟರ್‌ವ್ಯೂ ನಡೆಸಿದರು. ಆರ್ತರ್‌ ಬೊನೊ ಎಂಬವರು ಪೂರ್ಣ ಸಮಯದ ಸೇವೆಯಲ್ಲಿ 51 ವರ್ಷಗಳನ್ನು ಕಳೆದಿದ್ದಾರೆ ಮತ್ತು ಈಗ ಎಕ್ವಡಾರ್‌ ಬ್ರಾಂಚ್‌ ಕಮಿಟಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಆ್ಯಂಜೆಲೋ ಕಾಟನ್‌ಸಾರೊ ಎಂಬವರು ಪೂರ್ಣ ಸಮಯದ ಸೇವೆಯಲ್ಲಿ 59 ವರ್ಷಗಳನ್ನು ಕಳೆದಿದ್ದಾರೆ, ಮತ್ತು ಇವುಗಳಲ್ಲಿ ಹೆಚ್ಚಿನ ವರ್ಷಗಳನ್ನು ಸಂಚರಣಾ ಮೇಲ್ವಿಚಾರಕರಾಗಿ ಕಳೆದಿದ್ದಾರೆ. ರಿಚರ್ಡ್‌ ಏಬ್ರಹಾಮ್ಸನ್‌ ಎಂಬವರು, 1953ರಲ್ಲಿ ಗಿಲ್ಯಡ್‌ ಶಾಲೆಯಿಂದ ಪದವಿಪ್ರಾಪ್ತರಾದರು ಮತ್ತು ಬ್ರೂಕ್ಲಿನ್‌ ಬೆತೆಲ್‌ಗೆ ಪುನಃ ಹಿಂದಿರುಗುವ ಮುಂಚೆ 26 ವರ್ಷಗಳ ವರೆಗೆ ಡೆನ್ಮಾರ್ಕ್‌ನಲ್ಲಿನ ಕೆಲಸದ ಮೇಲ್ವಿಚಾರಣೆ ಮಾಡುವ ಸುಯೋಗವನ್ನು ಹೊಂದಿದ್ದರು. ಕೊನೆಯಲ್ಲಿ, 96 ವರ್ಷ ಪ್ರಾಯದ ಕ್ಯಾರೀ ಡಬ್ಲ್ಯೂ. ಬಾರ್ಬರ್‌ ಅವರ ಮಾತುಗಳನ್ನು ಕೇಳಿ ಎಲ್ಲರೂ ಹರ್ಷಿತರಾದರು. ಸಹೋದರ ಬಾರ್ಬರ್‌ 1921ರಲ್ಲಿ ದೀಕ್ಷಾಸ್ನಾನವನ್ನು ಪಡೆದಿದ್ದರು, ಪೂರ್ಣ ಸಮಯದ ಸೇವೆಯಲ್ಲಿ 78 ವರ್ಷಗಳನ್ನು ಕಳೆದಿದ್ದಾರೆ ಮತ್ತು 1978ರಿಂದ ಆಡಳಿತ ಮಂಡಲಿಯ ಸದಸ್ಯರಾಗಿದ್ದಾರೆ.

ಸ್ಫೂರ್ತಿದಾಯಕ ಭಾಷಣಗಳು

ವಾರ್ಷಿಕ ಕೂಟದಲ್ಲಿ, ವಿಚಾರ ಪ್ರೇರಕವಾದ ಭಾಷಣಗಳ ಸರಮಾಲೆಯು ಸೇರಿತ್ತು. ಸಹೋದರ ರಾಬರ್ಟ್‌ ಡಬ್ಲ್ಯೂ. ವಾಲನ್‌ “ತನ್ನ ಹೆಸರಿಗಾಗಿ ಒಂದು ಜನಾಂಗ” ಎಂಬ ವಿಷಯದ ಕುರಿತಾಗಿ ಮಾತಾಡಿದರು. ನಾವು ದೇವರ ಹೆಸರಿನ ಜನರಾಗಿದ್ದೇವೆ, ಮತ್ತು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿದ್ದೇವೆ. ಯೆಹೋವನು ನಮಗೆ “ಒಂದು ಭವಿಷ್ಯವನ್ನು ಮತ್ತು ಒಂದು ನಿರೀಕ್ಷೆಯನ್ನು” ಕೊಟ್ಟಿದ್ದಾನೆ. (ಯೆರೆಮೀಯ 29:​11, NW) ನಾವು ದೇವರ ರಾಜ್ಯವನ್ನು ವ್ಯಾಪಕವಾಗಿ ಪ್ರಸಿದ್ಧಿಪಡಿಸುತ್ತಾ, ಸಾಂತ್ವನ ಹಾಗೂ ದುಃಖೋಪಶಮನದ ಅದ್ಭುತ ಸಂದೇಶವನ್ನು ಹಂಚಬೇಕು. (ಯೆಶಾಯ 61:1) “ಪ್ರತಿ ದಿನವೂ, ಯೆಹೋವನ ಸಾಕ್ಷಿಗಳೆಂಬ ನಮ್ಮ ಹೆಸರಿಗೆ ತಕ್ಕಂತೆ ಜೀವಿಸುವುದನ್ನು ಮುಂದುವರಿಸೋಣ” ಎಂದು ಹೇಳುತ್ತಾ ಸಹೋದರ ವಾಲನ್‌ ಸಮಾಪ್ತಿಗೊಳಿಸಿದರು.​—ಯೆಶಾಯ 43:10.

ಕಾರ್ಯಕ್ರಮದ ಕೊನೆಯ ಭಾಗವು ಆಡಳಿತ ಮಂಡಲಿಯ ಮೂವರು ಸದಸ್ಯರಿಂದ ಒಂದು ಭಾಷಣಮಾಲೆಯಾಗಿತ್ತು. ಅದರ ಶೀರ್ಷಿಕೆಯು, “ಎಚ್ಚರವಾಗಿದ್ದು, ದೃಢವಾಗಿ ನಿಂತು, ಬಲಗೊಳ್ಳುವ ಸಮಯವು ಇದೇ” ಎಂದಾಗಿತ್ತು.​—1 ಕೊರಿಂಥ 16:13.

ಪ್ರಥಮವಾಗಿ, ಸಹೋದರ ಸ್ಟೀವನ್‌ ಲೆಟ್‌ ಎಂಬವರು, “ಈ ರಾತ್ರಿ ವೇಳೆಯಲ್ಲಿ ಎಚ್ಚರವಾಗಿರ್ರಿ” ಎಂಬ ವಿಷಯದ ಕುರಿತಾಗಿ ಮಾತಾಡಿದರು. ಶಾರೀರಿಕ ನಿದ್ದೆಯು ಒಂದು ವರದಾನವಾಗಿದೆ, ಎಂದು ಸಹೋದರ ಲೆಟ್‌ ವಿವರಿಸಿದರು. ಅದು ನಮ್ಮನ್ನು ಪುನರ್ಚೈತನ್ಯಗೊಳಿಸುತ್ತದೆ. ಆದರೆ ಆತ್ಮಿಕ ನಿದ್ದೆಯಂತೂ ಎಂದೂ ಉಪಯುಕ್ತವಾಗಿರುವುದಿಲ್ಲ. (1 ಥೆಸಲೊನೀಕ 5:6) ಹಾಗಾದರೆ ನಾವು ಹೇಗೆ ಆತ್ಮಿಕವಾಗಿ ಎಚ್ಚರವಾಗಿರಬಹುದು? ಸಹೋದರ ಲೆಟ್‌ ಮೂರು ಆತ್ಮಿಕ “ಮಾತ್ರೆಗಳನ್ನು” ತಿಳಿಸಿದರು: (1) ಕರ್ತನ ಕೆಲಸದಲ್ಲಿ ಬಹಳಷ್ಟನ್ನು ಮಾಡುವವರಾಗಿರ್ರಿ. (1 ಕೊರಿಂಥ 15:​58, NW) (2) ನಿಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರ್ರಿ. (ಮತ್ತಾಯ 5:​3, NW) (3) ವಿವೇಕಯುತವಾಗಿ ಕ್ರಿಯೆಗೈಯಲು ಬೈಬಲಾಧರಿತ ಸಲಹೆಗೆ ಪ್ರತಿಕ್ರಿಯಿಸುತ್ತಾ ಇರ್ರಿ.​—ಜ್ಞಾನೋಕ್ತಿ 13:20.

ಸಹೋದರ ಥಿಯೊಡೊರ್‌ ಜಾರಸ್‌ರವರು, “ಪರೀಕ್ಷೆಯ ಕೆಳಗೆ ದೃಢರಾಗಿ ನಿಲ್ಲಿರಿ” ಎಂಬ ಹುರಿದುಂಬಿಸುವ ಭಾಷಣವನ್ನು ಕೊಟ್ಟರು. ಪ್ರಕಟನೆ 3:10ಕ್ಕೆ ಸೂಚಿಸುತ್ತಾ ಸಹೋದರ ಜಾರಸ್‌ ಕೇಳಿದ್ದು: “ಈ ‘ಶೋಧನೆಯ ಸಮಯ’ ಯಾವುದು?” ಆ ಶೋಧನೆಯು “ಕರ್ತನ ದಿನದಲ್ಲಿ” ಬರುತ್ತದೆ. ಸದ್ಯಕ್ಕೆ ನಾವು ಆ ಸಮಯದಲ್ಲೇ ಜೀವಿಸುತ್ತಿದ್ದೇವೆ. (ಪ್ರಕಟನೆ 1:10) ಆ ಶೋಧನೆಯು, ನಾವು ದೇವರ ಸ್ಥಾಪಿತ ರಾಜ್ಯದ ಪರವಾಗಿದ್ದೇವೊ ಇಲ್ಲವೇ ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ಪರವಾಗಿದ್ದೇವೊ ಎಂಬ ಮುಖ್ಯ ವಿಷಯದ ಮೇಲೆ ಕೇಂದ್ರಿತವಾಗಿದೆ. ಆ ಶೋಧನೆಯ ಸಮಯವು ಅಂತ್ಯಗೊಳ್ಳುವ ತನಕ ನಾವು ಸಂಕಷ್ಟಗಳು ಇಲ್ಲವೇ ತೊಂದರೆಗಳನ್ನು ಅನುಭವಿಸುವೆವು ಎಂಬುದಂತೂ ಖಂಡಿತ. ನಾವು ಯೆಹೋವನಿಗೂ ಆತನ ಸಂಸ್ಥೆಗೂ ನಿಷ್ಠಾವಂತರಾಗಿ ಉಳಿಯುವೆವೊ? ‘ಅಂಥ ನಿಷ್ಠೆಯನ್ನು ನಾವು ವ್ಯಕ್ತಿಗತವಾಗಿ ತೋರಿಸಬೇಕಾಗುವುದು,’ ಎಂದು ಸಹೋದರ ಜಾರಸ್‌ ಹೇಳಿದರು.

ಕೊನೆಯಲ್ಲಿ ಸಹೋದರ ಜಾನ್‌ ಈ. ಬಾರ್‌, “ಒಬ್ಬ ಆತ್ಮಿಕ ವ್ಯಕ್ತಿಯೋಪಾದಿ ಬಲಗೊಳ್ಳಿರಿ” ಎಂಬ ಮುಖ್ಯವಿಷಯದ ಕುರಿತಾಗಿ ಮಾತಾಡಿದರು. ಲೂಕ 13:​23-25ಕ್ಕೆ ಸೂಚಿಸುತ್ತಾ, “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ” ನಾವು ಹೆಣಗಾಡಬೇಕೆಂದು ಅವರು ಹೇಳಿದರು. ಅನೇಕರು ಇದರಲ್ಲಿ ತಪ್ಪಿಹೋಗುತ್ತಾರೆ, ಯಾಕೆಂದರೆ ಬಲಗೊಳ್ಳಲಿಕ್ಕಾಗಿ ಅವರು ಅಷ್ಟೊಂದು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಿಲ್ಲ. ಪೂರ್ಣವಾಗಿ ಬೆಳೆದಿರುವ ಕ್ರೈಸ್ತರಾಗಲು, ನಾವು ಜೀವಿತದ ಎಲ್ಲ ಅಂಶಗಳಲ್ಲಿ ಬೈಬಲ್‌ ತತ್ತ್ವಗಳನ್ನು ಅನ್ವಯಿಸಲು ಕಲಿಯಬೇಕು. ಸಹೋದರ ಬಾರ್‌ ಉತ್ತೇಜಿಸಿದ್ದು: “(1) ಯೆಹೋವನನ್ನು ಪ್ರಥಮ ಹಾಗೂ ಪ್ರಮುಖ ಸ್ಥಾನದಲ್ಲಿಡುವ (2) ಬಲಗೊಳ್ಳುವ, ಮತ್ತು (3) ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಹೆಣಗಾಡುವ ಸಮಯವು ಇದೇ ಎಂಬುದನ್ನು ನೀವು ಒಪ್ಪಿಕೊಳ್ಳುವಿರೆಂದು ನನಗೆ ಖಾತ್ರಿಯಿದೆ. ಈ ರೀತಿಯಲ್ಲಿ ನಾವು ಅಂತ್ಯವಿಲ್ಲದ ಅದ್ಭುತ ಜೀವನಕ್ಕೆ ನಡೆಸುವ ಇಕ್ಕಟ್ಟಾದ ಬಾಗಲಿನ ಮೂಲಕ ದಾಟಿಹೋಗಲು ಶಕ್ತರಾಗುವೆವು.”

ವಾರ್ಷಿಕ ಕೂಟವು ಅಂತ್ಯವಾಗುತ್ತಿದ್ದಂತೆಯೇ, ಇನ್ನೂ ಉತ್ತರಿಸಲ್ಪಡದಿದ್ದ ಒಂದು ಪ್ರಶ್ನೆಯಿತ್ತು: 2002ನೇ ಸೇವಾ ವರ್ಷದ ವಾರ್ಷಿಕವಚನ ಯಾವುದು? ಮರುದಿನ ಆ ಪ್ರಶ್ನೆಯನ್ನು ಉತ್ತರಿಸಲಾಯಿತು.

ಸಂಪೂರಕ ಕೂಟ

ಭಾನುವಾರ ಬೆಳಗ್ಗೆ ಸಂಪೂರಕ ಕೂಟದ ಕಾರ್ಯಕ್ರಮವು ಆರಂಭಿಸಿದಾಗ, ಉಚ್ಛ ನಿರೀಕ್ಷೆಗಳಿದ್ದವು. ಅದು ಆ ವಾರದ ಕಾವಲಿನಬರುಜು ಪಾಠದ ಸಾರಾಂಶದೊಂದಿಗೆ ಆರಂಭವಾಯಿತು. ತದನಂತರ ಆ ವಾರ್ಷಿಕ ಕೂಟದ ಕೆಲವೊಂದು ಮುಖ್ಯಾಂಶಗಳ ಸಂಕ್ಷಿಪ್ತ ನಿರೂಪಣೆಯಿತ್ತು. ಅನಂತರ, ಎಲ್ಲರೂ 2002 ಇಸವಿಗಾಗಿರುವ, “ನನ್ನ ಬಳಿಗೆ ಬನ್ನಿರಿ . . . ನಾನು ನಿಮಗೆ ಚೈತನ್ಯ ನೀಡುವೆನು” ಎಂಬ ವಾರ್ಷಿಕವಚನದ ಕುರಿತಾದ ಒಂದು ಭಾಷಣವನ್ನು ಕೇಳಿ ಹರ್ಷಿಸಿದರು. (ಮತ್ತಾಯ 11:​28, NW) ಆ ಭಾಷಣವು ಕಾವಲಿನಬುರುಜು ಪತ್ರಿಕೆಯ 2001, ಡಿಸೆಂಬರ್‌ 15ರ ಸಂಚಿಕೆಯಲ್ಲಿ ತದನಂತರ ಪ್ರಕಾಶಿಸಲ್ಪಟ್ಟ ಅಧ್ಯಯನ ಲೇಖನಗಳ ಮೇಲೆ ಆಧಾರಿತವಾಗಿತ್ತು.

ಆಮೇಲೆ, ಆಗಸ್ಟ್‌ 2001ರಲ್ಲಿ ಫ್ರಾನ್ಸ್‌ ಹಾಗೂ ಇಟಲಿಯಲ್ಲಿ ನಡೆದ “ದೇವರ ವಾಕ್ಯದ ಬೋಧಕರು” ವಿಶೇಷ ಅಧಿವೇಶನಗಳಿಗೆ ಹಾಜರಾಗಿದ್ದವರಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. * ಕೊನೆಯಲ್ಲಿ ಆ ದಿನದ ಕಾರ್ಯಕ್ರಮದ ಮುಖ್ಯಾಂಶವಾಗಿ, ಬ್ರೂಕ್ಲಿನ್‌ ಬೆತೆಲಿನಿಂದ ಬಂದಿದ್ದ ಸಂದರ್ಶಕ ಭಾಷಣಕರ್ತರು ಎರಡು ಅಂತಿಮ ಭಾಷಣಗಳನ್ನು ಕೊಟ್ಟರು.

ಮೊದಲನೆಯ ಭಾಷಣದ ಶೀರ್ಷಿಕೆಯು, “ಈ ಕಷ್ಟಕರ ಸಮಯಗಳಲ್ಲಿ ಯೆಹೋವನಲ್ಲಿ ಧೈರ್ಯದಿಂದ ಭರವಸೆಯಿಡುವುದು” ಎಂದಾಗಿತ್ತು. ಭಾಷಣಕರ್ತನು ಈ ಮೂರು ಮುಖ್ಯ ವಿಷಯಗಳನ್ನು ವಿಸ್ತರಿಸಿದನು: (1) ಯೆಹೋವನಲ್ಲಿ ಧೈರ್ಯದಿಂದ ಭರವಸೆಯಿಡುವುದು ದೇವಜನರಿಗೆ ಯಾವಾಗಲೂ ಅತ್ಯಾವಶ್ಯಕವಾದದ್ದಾಗಿದೆ. ವಿರೋಧದ ಎದುರಿನಲ್ಲೂ ಧೈರ್ಯ ಹಾಗೂ ನಂಬಿಕೆಯನ್ನು ತೋರಿಸಿದ ಅನೇಕರ ಉದಾಹರಣೆಗಳು ಬೈಬಲಿನಲ್ಲಿ ಅಡಕವಾಗಿವೆ. (ಇಬ್ರಿಯ 11:​1–12:3) (2) ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಆತನು ನಮಗೆ ಬಲವಾದ ಆಧಾರವನ್ನು ಕೊಡುತ್ತಾನೆ. ಆತನ ಕೆಲಸಗಳು ಮತ್ತು ಆತನ ವಾಕ್ಯವು ಆತನು ತನ್ನ ಸೇವಕರ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಅವರನ್ನೆಂದಿಗೂ ಮರೆಯನು ಎಂಬ ಖಾತ್ರಿಯನ್ನು ಕೊಡುತ್ತವೆ. (ಇಬ್ರಿಯ 6:10) (3) ಧೈರ್ಯ ಮತ್ತು ಭರವಸೆಯು ಇಂದು ವಿಶೇಷವಾಗಿ ಅಗತ್ಯವಾಗಿದೆ. ಯೇಸು ಮುಂತಿಳಿಸಿದಂತೆ ನಮ್ಮನ್ನು “ಜನಾಂಗಗಳವರು ಹಗೆಮಾಡು”ತ್ತಾರೆ. (ಮತ್ತಾಯ 24:9) ತಾಳಿಕೊಳ್ಳಲಿಕ್ಕೋಸ್ಕರ ನಾವು ದೇವರ ವಾಕ್ಯದ ಮೇಲೆ ಆತುಕೊಳ್ಳಬೇಕು, ಆತನ ಆತ್ಮ ನಮ್ಮೊಂದಿಗಿದೆ ಎಂದು ಭರವಸೆಯಿಡಬೇಕು, ಮತ್ತು ಸುವಾರ್ತೆಯನ್ನು ಘೋಷಿಸುತ್ತಾ ಇರಲು ಧೈರ್ಯದಿಂದಿರಬೇಕು. (4) ನಾವು ಈ ಹೊತ್ತಿನಲ್ಲೂ ವಿರೋಧವನ್ನು ಎದುರಿಸುತ್ತಿದ್ದೇವೆಂಬುದನ್ನು ಉದಾಹರಣೆಗಳು ತೋರಿಸುತ್ತವೆ. ಅರ್ಮೇನಿಯಾ, ಕಸಾಕ್‌ಸ್ತಾನ್‌, ಜಾರ್ಜಿಯ, ಟುರ್ಕ್‌ಮೆನಿಸ್ತಾನ್‌, ಫ್ರಾನ್ಸ್‌, ಹಾಗೂ ರಷ್ಯಾ ಎಂಬ ಸ್ಥಳಗಳಲ್ಲಿ ನಮ್ಮ ಸಹೋದರರು ಏನೇನು ತಾಳಿಕೊಂಡಿದ್ದಾರೆಂಬುದನ್ನು ಭಾಷಣಕರ್ತನು ತಿಳಿಸಿದಾಗ, ಎಲ್ಲರ ಹೃದಯವು ತುಂಬಿಬಂತು. ಧೈರ್ಯ ಹಾಗೂ ಯೆಹೋವನಲ್ಲಿ ಭರವಸೆಯನ್ನು ಪ್ರದರ್ಶಿಸುವ ಸಮಯ ಇದೇ ಎಂಬುದು ನಿಜ!

ಕೊನೆಯ ಭಾಷಣಕರ್ತನು, “ಐಕ್ಯದಿಂದ ಯೆಹೋವನ ಸಂಸ್ಥೆಯೊಂದಿಗೆ ಮುಂದೊತ್ತುವುದು” ಎಂಬ ಮುಖ್ಯವಿಷಯವುಳ್ಳ ಭಾಷಣವನ್ನು ಕೊಟ್ಟನು. ಆ ಭಾಷಣವು ಅನೇಕ ಸಮಯೋಚಿತ ವಿಷಯಗಳನ್ನು ಪ್ರಸ್ತುತಪಡಿಸಿತು. (1) ಯೆಹೋವನ ಜನರ ಮುನ್ನಡೆಯನ್ನು ವ್ಯಾಪಕವಾಗಿ ಗಮನಿಸಲಾಗಿದೆ. ನಮ್ಮ ಸಾರುವ ಕೆಲಸ ಹಾಗೂ ನಮ್ಮ ಅಧಿವೇಶನಗಳು ಸಾರ್ವಜನಿಕ ಗಮನವನ್ನು ಆಕರ್ಷಿಸುತ್ತವೆ. (2) ಐಕ್ಯವಾಗಿರುವ ಒಂದು ಸಂಸ್ಥೆಯನ್ನು ಯೆಹೋವನು ಸ್ಥಾಪಿಸಿದ್ದಾನೆ. “ಸಮಸ್ತವನ್ನೂ,” ಅಂದರೆ ಸ್ವರ್ಗೀಯ ಪ್ರತೀಕ್ಷೆ ಹಾಗೂ ಭೂನಿರೀಕ್ಷೆಯುಳ್ಳವರನ್ನು ಸಹ ದೇವರ ಐಕ್ಯ ಕುಟುಂಬದೊಳಗೆ ಒಟ್ಟುಗೂಡಿಸುವ ಉದ್ದೇಶದಿಂದ ಸಾ.ಶ. 29ರಲ್ಲಿ ಯೇಸುವು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟನು. (ಎಫೆಸ 1:​8-10) (3) ಅಧಿವೇಶನಗಳು ಅಂತಾರಾಷ್ಟ್ರೀಯ ಐಕ್ಯದ ಒಂದು ಗಮನಾರ್ಹ ಪ್ರದರ್ಶನವಾಗಿವೆ. ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಫ್ರಾನ್ಸ್‌ ಹಾಗೂ ಇಟಲಿಯಲ್ಲಿ ನಡೆಸಲ್ಪಟ್ಟ ವಿಶೇಷ ಅಧಿವೇಶನಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಯಿತು. (4) ಫ್ರಾನ್ಸ್‌ ಹಾಗೂ ಇಟಲಿಯಲ್ಲಿ ಒಂದು ಸ್ಫೂರ್ತಿದಾಯಕ ಠರಾವನ್ನು ಅಂಗೀಕರಿಸಲಾಯಿತು. ಆ ಸ್ಫೂರ್ತಿದಾಯಕ ಠರಾವಿನ ಕೆಲವೊಂದು ಭಾಗಗಳನ್ನು ಭಾಷಣಕರ್ತನು ಹಂಚಿಕೊಂಡನು. ಈ ಇಡೀ ಠರಾವು ಇಲ್ಲಿ ಕೆಳಗೆ ಕೊಡಲ್ಪಟ್ಟಿದೆ.

ಕೊನೆಯ ಭಾಷಣದ ಸಮಾಪ್ತಿಯಲ್ಲಿ, ಆ ಸಂದರ್ಶಕ ಭಾಷಣಕರ್ತನು, ಆಡಳಿತ ಮಂಡಲಿಯಿಂದ ತಯಾರಿಸಲ್ಪಟ್ಟ ಒಂದು ಮನಮುಟ್ಟುವ ಪ್ರಕಟನೆಯನ್ನು ಓದಿಹೇಳಿದನು. ಭಾಗಶಃ ಅದರಲ್ಲಿ ಹೀಗೆ ಹೇಳಲಾಗಿತ್ತು: “ಲೋಕ ರಂಗದಲ್ಲಿ ಘಟನೆಗಳು ವಿಕಸಿಸುತ್ತಿರುವ ರೀತಿಯನ್ನು ವಿವೇಚಿಸುತ್ತಾ, ಎಚ್ಚರವುಳ್ಳವರೂ ಜಾಗರೂಕರೂ ಆಗಿ ಉಳಿಯುವ ಸಮಯವು ಇದೇ. . . . ಆಡಳಿತ ಮಂಡಲಿಗೆ ನಿಮ್ಮ ಬಗ್ಗೆ ಹಾಗೂ ದೇವಜನರಲ್ಲಿ ಉಳಿದವರಿಗಾಗಿ ಇರುವ ಪ್ರೀತಿಯ ಕಳಕಳಿಯನ್ನು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಆತನ ಚಿತ್ತವನ್ನು ನೀವು ಪೂರ್ಣ ಪ್ರಾಣದಿಂದ ಮಾಡುತ್ತಿರುವಾಗ ಆತನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.” ಎಲ್ಲೆಡೆಯೂ ಇರುವ ಯೆಹೋವನ ಜನರು, ಈ ಕಷ್ಟಕರವಾದ ಸಮಯಗಳಲ್ಲಿ ಎಚ್ಚರವುಳ್ಳವರಾಗಿರಲು ಮತ್ತು ಯೆಹೋವನ ಏಕೀಕೃತ ಸಂಸ್ಥೆಯೊಂದಿಗೆ ಧೈರ್ಯದಿಂದ ಮುಂದೆ ಸಾಗುತ್ತಾ ಇರಲು ದೃಢಸಂಕಲ್ಪವುಳ್ಳವರಾಗಿದ್ದಾರೆ.

[ಪಾದಟಿಪ್ಪಣಿಗಳು]

^ ಪ್ಯಾರ. 5 ವಾರ್ಷಿಕ ಕೂಟದ ಕಾರ್ಯಕ್ರಮವು ಹಲವಾರು ಸ್ಥಳಗಳಿಗೆ ಫೋನ್‌ ಮೂಲಕ ಜೋಡಿಸಲ್ಪಟ್ಟಿದ್ದು, ಒಟ್ಟು ಹಾಜರಿಯು 13,757 ಆಗಿತ್ತು.

^ ಪ್ಯಾರ. 5 ಸಂಪೂರಕ ಕೂಟಗಳನ್ನು ಲಾಂಗ್‌ ಬೀಚ್‌, ಕ್ಯಾಲಿಫೋರ್ನಿಯ; ಪೋಂಟಿಯಾಕ್‌, ಮಿಷಿಗನ್‌; ಯೂನಿಯನ್‌ಡೇಲ್‌, ನ್ಯೂ ಯಾರ್ಕ್‌; ಮತ್ತು ಹ್ಯಾಮಿಲ್ಟನ್‌, ಆಂಟೆರೀಯೊದಲ್ಲಿ ನಡೆಸಲಾಯಿತು. ಇತರ ಸ್ಥಳಗಳಲ್ಲಿ ಫೋನ್‌ ಮೂಲಕ ಜೋಡಿಸಲ್ಪಟ್ಟವರ ಸಮೇತ ಒಟ್ಟು ಹಾಜರಿಯು 1,17,885 ಆಗಿತ್ತು.

^ ಪ್ಯಾರ. 23 ಫ್ರಾನ್ಸ್‌ ದೇಶದಲ್ಲಿ, ಪ್ಯಾರಿಸ್‌, ಬಾರ್ಡ್ಯೊಕ್ಸ್‌ ಮತ್ತು ಲೀಓನ್ಸ್‌ನಲ್ಲಿ ಮೂರು ವಿಶೇಷ ಅಧಿವೇಶನಗಳು ನಡೆಸಲ್ಪಟ್ಟವು. ಇಟಲಿಯಲ್ಲಿ, ರೋಮ್‌ ಹಾಗೂ ಮಿಲಾನ್‌ಗೆ ಅಮೆರಿಕದಿಂದ ಅಭ್ಯರ್ಥಿಗಳನ್ನು ನೇಮಿಸಲಾಯಿತು. ಆದರೆ ಒಟ್ಟಾಗಿ ಒಂಬತ್ತು ಅಧಿವೇಶನಗಳು ಒಂದೇ ಸಮಯದಲ್ಲಿ ನಡೆಸಲ್ಪಟ್ಟವು.

[ಪುಟ 29-31ರಲ್ಲಿರುವ ಚೌಕ/ಚಿತ್ರಗಳು]

ಠರಾವು

ಇಸವಿ 2001ರ ಆಗಸ್ಟ್‌ ತಿಂಗಳಿನಲ್ಲಿ, ಫ್ರಾನ್ಸ್‌ ಹಾಗೂ ಇಟಲಿಯಲ್ಲಿ ವಿಶೇಷವಾದ “ದೇವರ ವಾಕ್ಯದ ಬೋಧಕರು” ಅಧಿವೇಶನಗಳನ್ನು ನಡೆಸಲಾಯಿತು. ಆ ಅಧಿವೇಶನಗಳಲ್ಲಿ ಒಂದು ಸ್ಫೂರ್ತಿದಾಯಕ ಠರಾವನ್ನು ಪ್ರಸ್ತುತಪಡಿಸಲಾಯಿತು. ಆ ಠರಾವಿನ ವಾಕ್ಯಗಳನ್ನು ಇಲ್ಲಿ ಕೊಡಲಾಗಿದೆ.

“ಯೆಹೋವನ ಸಾಕ್ಷಿಗಳೋಪಾದಿ, ಈ ‘ದೇವರ ವಾಕ್ಯದ ಬೋಧಕರು’ ಎಂಬ ಅಧಿವೇಶನದಲ್ಲಿ ಕೂಡಿಬಂದಿರುವ ನಾವೆಲ್ಲರೂ ಬಹಳಷ್ಟು ಉಪಯುಕ್ತವಾಗಿರುವ ಬೋಧನೆಯಿಂದ ಉಪದೇಶಿಸಲ್ಪಟ್ಟಿದ್ದೇವೆ. ಈ ಬೋಧನೆಯ ಮೂಲನು ಯಾರೆಂಬುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಬೋಧನೆಯು ಯಾವುದೇ ಮಾನವ ಮೂಲದಿಂದ ಬಂದಿರುವುದಿಲ್ಲ. ಪುರಾತನಕಾಲದ ಪ್ರವಾದಿಯಾದ ಯೆಶಾಯನು ಯಾರನ್ನು ನಮ್ಮ ‘ಮಹಾ ಉಪದೇಶಕ’ನೆಂದು ವರ್ಣಿಸಿದ್ದಾನೊ ಆತನಿಂದ ಅದು ಬರುತ್ತದೆ. (ಯೆಶಾಯ 30:​20, NW) ಯೆಶಾಯ 48:17ರಲ್ಲಿ ತಿಳಿಸಲ್ಪಟ್ಟಿರುವ ಯೆಹೋವನ ಮರುಜ್ಞಾಪಕವನ್ನು ಗಮನಿಸಿರಿ: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.’ ಆತನು ಇದನ್ನು ಹೇಗೆ ಮಾಡುತ್ತಾನೆ? ಪ್ರಮುಖ ಮಾಧ್ಯಮವು, ಅತಿ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟಿರುವ ಹಾಗೂ ಚಲಾವಣೆಗೊಂಡಿರುವ ಪುಸ್ತಕವಾದ ಬೈಬಲ್‌ ಆಗಿದೆ. ಅದರಲ್ಲಿ ನಮಗೆ ಖಡಾಖಂಡಿತವಾಗಿ ಹೀಗೆ ಹೇಳಲಾಗಿದೆ: ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವೂ ಉಪಯುಕ್ತವೂ ಆಗಿದೆ.’​—2 ತಿಮೊಥೆಯ 3:16.

“ಇಂದು ಮಾನವಕುಲಕ್ಕೆ ಈ ರೀತಿಯ ಬೋಧನೆಯು ಬಹಳಷ್ಟು ಅಗತ್ಯವಾಗಿದೆ. ಹೀಗೇಕೆ ಹೇಳಬಹುದು? ಈ ಲೋಕದ ಬದಲಾಗುತ್ತಿರುವ, ಗಲಿಬಿಲಿಯ ದೃಶ್ಯವನ್ನು ನೋಡುವಾಗ, ಚಿಂತನಾಶೀಲ ಜನರು ಏನನ್ನು ಅಂಗೀಕರಿಸುತ್ತಾರೆ? ಬರೀ ಇದನ್ನೇ: ಈ ಲೋಕದ ಶೈಕ್ಷಣಿಕ ವ್ಯವಸ್ಥೆಗಳು ಕೋಟಿಗಟ್ಟಲೆ ಜನರನ್ನು ಕಲಿಸಿವೆಯಾದರೂ, ಲೋಕದಲ್ಲಿ ನಿಜವಾದ ಮೌಲ್ಯಗಳ ತೀವ್ರ ಕೊರತೆ ಮತ್ತು ಸರಿ ಹಾಗೂ ತಪ್ಪಿನ ನಡುವಿನ ಭೇದವನ್ನು ಮಾಡುವುದರಲ್ಲಿ ನ್ಯೂನತೆ ಈಗಲೂ ಇದೆ. (ಯೆಶಾಯ 5:​20, 21) ಬೈಬಲ್‌ ಅನಕ್ಷರತೆಯು ಎಲ್ಲಡೆಯೂ ಹಬ್ಬಿಕೊಂಡಿದೆ. ಕಂಪ್ಯೂಟರ್‌ಗಳ ಮೂಲಕ ತಂತ್ರಜ್ಞಾನವು ಮಾಹಿತಿಯ ಅತಿರೇಕ ಸರಬರಾಯಿಯನ್ನು ಒದಗಿಸುತ್ತಿರುವುದಾದರೂ, ಜೀವನದ ಉದ್ದೇಶವೇನು? ನಮ್ಮ ಸಮಯದ ಘಟನೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಭವಿಷ್ಯಕ್ಕಾಗಿ ದೃಢವಾದ ನಿರೀಕ್ಷೆಯಿದೆಯೊ? ಶಾಂತಿ ಹಾಗೂ ಭದ್ರತೆಯು ವಾಸ್ತವಿಕ ಸಂಗತಿಗಳಾಗುವವೊ? ಎಂಬಂಥ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳೆಲ್ಲಿವೆ? ಅಷ್ಟುಮಾತ್ರವಲ್ಲದೆ ಗ್ರಂಥಾಲಯಗಳಲ್ಲಿ ಮಾನವ ಸಾಧನೆಯ ಕಾರ್ಯತಃ ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಅಸಂಖ್ಯಾತ ಗ್ರಂಥಕೃತಿಗಳಿವೆ. ಆದರೂ ಮನುಷ್ಯರು, ಹಿಂದೆ ಮಾಡಲ್ಪಟ್ಟ ತಪ್ಪುಗಳನ್ನೇ ಪುನಃ ಪುನಃ ಮಾಡುತ್ತಿರುತ್ತಾರೆ. ಅಪರಾಧವು ಗಗನಕ್ಕೇರುತ್ತಿದೆ. ನಿರ್ಮೂಲಮಾಡಲಾಗಿದೆ ಎಂದು ಒಂದು ಕಾಲದಲ್ಲಿ ಎಣಿಸಲಾಗಿರುವ ರೋಗಗಳು ಪುನಃ ತಲೆದೋರುತ್ತಿವೆ, ಮತ್ತು ಏಡ್ಸ್‌ನಂಥ ಇತರ ರೋಗಗಳು ದಿಗಿಲುಹುಟ್ಟಿಸುವಷ್ಟು ವೇಗವಾಗಿ ಹರಡುತ್ತಿವೆ. ಕುಟುಂಬ ಜೀವನವು ದಿಗ್ಭ್ರಮೆಗೊಳಿಸುವಂಥ ಪ್ರಮಾಣದಲ್ಲಿ ಕುಸಿಯುತ್ತಾ ಇದೆ. ಮಾಲಿನ್ಯವು ಪರಿಸರವನ್ನು ಕೆಡಿಸುತ್ತಿದೆ. ಭಯೋತ್ಪಾದನೆ ಮತ್ತು ಸಾಮೂಹಿಕ ವಿನಾಶದ ಶಸ್ತ್ರಗಳು ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯನ್ನೊಡ್ಡುತ್ತಿವೆ. ಪರಿಹಾರಗಳಿಲ್ಲದ ಸಮಸ್ಯೆಗಳು ರಾಶಿಬೀಳುತ್ತಿವೆ. ಈ ಕಷ್ಟಕರ ಸಮಯಗಳಲ್ಲಿ ನಮ್ಮ ಜೊತೆಮಾನವರಿಗೆ ಸಹಾಯಮಾಡುವುದರಲ್ಲಿ ನಮ್ಮ ಪಾತ್ರವೇನು? ಮಾನವಕುಲದ ಈ ದಶೆಗೆ ಕಾರಣವನ್ನು ವಿವರಿಸುವ ಮತ್ತು ಈಗಲೇ ಉತ್ತಮ ಜೀವನಕ್ಕಾಗಿ ಮಾರ್ಗವನ್ನೂ ತೋರಿಸುವುದಲ್ಲದೆ, ಭವಿಷ್ಯಕ್ಕಾಗಿಯೂ ನಿಶ್ಚಿತ ನಿರೀಕ್ಷೆಯನ್ನು ನೀಡುವ ಯಾವುದೇ ಬೋಧನೆ ಇದೆಯೊ?

“‘ಹೋಗಿ, ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ, ಕ್ರಿಸ್ತನು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡುವುದು’ ನಮಗೆ ಕೊಡಲ್ಪಟ್ಟಿರುವ ಶಾಸ್ತ್ರೀಯ ನೇಮಕವಾಗಿದೆ. (ಮತ್ತಾಯ 28:​19, 20) ಆತನ ಮರಣ ಹಾಗೂ ಪುನರುತ್ಥಾನದ ನಂತರ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲ ಅಧಿಕಾರವು ಅವನಿಗೆ ಕೊಡಲ್ಪಟ್ಟ ಬಳಿಕ ಯೇಸು ಕ್ರಿಸ್ತನು ಈ ನೇಮಕವನ್ನು ಕೊಟ್ಟನು. ಇದು ಮನುಷ್ಯರು ಪ್ರವರ್ಧಿಸುವ ಎಲ್ಲ ಚಟುವಟಿಕೆಗಳನ್ನೂ ಮೀರಿ ನಿಲ್ಲುತ್ತದೆ. ನೀತಿಗಾಗಿ ಹಸಿಯುತ್ತಿರುವವರ ಆತ್ಮಿಕ ಅಗತ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ನಮ್ಮ ನೇಮಕವು ದೇವರ ದೃಷ್ಟಿಕೋನದಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದುದರಿಂದ ಆ ನೇಮಕವನ್ನು ಗಂಭೀರವಾಗಿ ತೆಗೆದುಕೊಳ್ಳಲು ನಮಗೆ ಬಲವಾದ ಶಾಸ್ತ್ರೀಯ ಕಾರಣಗಳಿವೆ.

“ಆ ಚಟುವಟಿಕೆಯನ್ನು ನಮ್ಮ ಜೀವಿತಗಳಲ್ಲಿ ಅಗ್ರ ಸ್ಥಾನದಲ್ಲಿಡುವುದನ್ನು ಇದು ಅವಶ್ಯಪಡಿಸುತ್ತದೆ. ಈ ಭೌಗೋಲಿಕ ಶಿಕ್ಷಣ ಕಾರ್ಯಕ್ರಮದ ಪ್ರಗತಿಗೆ ತಡೆಯನ್ನು ಹಾಕಲಿಕ್ಕಾಗಿ ರಚಿಸಲ್ಪಟ್ಟಿರುವ ಅಪಕರ್ಷಿಸುವಂಥ ಪ್ರಭಾವಗಳು, ಅಡ್ಡಿತಡೆಗಳು, ಮತ್ತು ಧಾರ್ಮಿಕ ಹಾಗೂ ರಾಜಕೀಯ ಘಟಕಾಂಶಗಳ ವಿರೋಧದ ಎದುರಿನಲ್ಲೂ, ದೇವರ ಆಶೀರ್ವಾದ ಹಾಗೂ ಸಹಾಯದೊಂದಿಗೆ ಈ ಕೆಲಸವು ಖಂಡಿತವಾಗಿಯೂ ಪೂರೈಸಲ್ಪಡುವುದು. ಈ ಕೆಲಸವು ವೃದ್ಧಿಯಾಗುತ್ತಾ, ಭವ್ಯವಾದ ಸಮಾಪ್ತಿಯನ್ನು ತಲಪುವುದೆಂದು ನಮಗೆ ದೃಢಭರವಸೆ ಹಾಗೂ ನಂಬಿಕೆಯಿದೆ. ನಾವು ಏಕೆ ಅಷ್ಟು ಖಾತ್ರಿಯಿಂದಿರಬಲ್ಲೆವು? ಏಕೆಂದರೆ ಕರ್ತನಾದ ಯೇಸು ಕ್ರಿಸ್ತನು ಈ ಯುಗದ ಸಮಾಪ್ತಿಯವರೆಗೂ ನಮ್ಮ ದೇವದತ್ತ ಶುಶ್ರೂಷೆಯಲ್ಲಿ ನಮ್ಮೊಂದಿಗಿರುವನೆಂದು ಮಾತುಕೊಟ್ಟಿದ್ದಾನೆ.

“ಕಷ್ಟದೆಶೆಯಲ್ಲಿರುವ ಮಾನವಕುಲಕ್ಕೆ ಅಂತ್ಯವು ಹತ್ತಿರವಾಗುತ್ತಾ ಇದೆ. ನಮ್ಮ ಸದ್ಯದ ನೇಮಕವು, ಅಂತ್ಯವು ಬರುವ ಮುಂಚೆ ಪೂರೈಸಲ್ಪಡಲೇಬೇಕು. ಆದುದರಿಂದ ಯೆಹೋವನ ಸಾಕ್ಷಿಗಳಾಗಿರುವ ನಾವು ಈ ಠರಾವನ್ನು ಮಾಡುತ್ತೇವೆ:

“ಮೊದಲನೆಯದ್ದು: ಸಮರ್ಪಿತ ಶುಶ್ರೂಷಕರೋಪಾದಿ, ನಾವು ನಮ್ಮ ಜೀವನಗಳಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಲು ಮತ್ತು ಆತ್ಮಿಕವಾಗಿ ಬೆಳೆಯುತ್ತಾ ಇರಲು ದೃಢಸಂಕಲ್ಪವುಳ್ಳವರಾಗಿದ್ದೇವೆ. ಆ ಉದ್ದೇಶವನ್ನು ಪೂರೈಸಲಿಕ್ಕಾಗಿ, ನಮ್ಮ ಪ್ರಾರ್ಥನೆಯು ಕೀರ್ತನೆ 143:10ರಲ್ಲಿರುವ ಮಾತುಗಳಿಗೆ ಹೊಂದಿಕೆಯಲ್ಲಿದೆ: ‘ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು.’ ಇದಕ್ಕಾಗಿ ನಾವು ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿರುವುದು, ಬೈಬಲನ್ನು ದಿನಾಲೂ ಓದಲು ಪ್ರಯತ್ನಿಸುವುದು, ವೈಯಕ್ತಿಕ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗುವುದು ಆವಶ್ಯಕ. ನಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವಂತೆ, ಸಭಾ ಕೂಟಗಳಲ್ಲಿ, ಸರ್ಕಿಟ್‌ ಸಮ್ಮೇಳನಗಳು, ಮತ್ತು ಜಿಲ್ಲಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಒದಗಿಸಲಾಗುವ ದೇವಪ್ರಭುತ್ವಾತ್ಮಕ ಶಿಕ್ಷಣಕ್ಕಾಗಿ ತಯಾರಿಮಾಡಲು ಮತ್ತು ಪೂರ್ಣವಾಗಿ ಪ್ರಯೋಜನಹೊಂದಲು ನಾವು ಸಾಧ್ಯವಿರುವ ಪ್ರತಿಯೊಂದು ಪ್ರಯತ್ನವನ್ನೂ ಮಾಡುವೆವು.​—1 ತಿಮೊಥೆಯ 4:15; ಇಬ್ರಿಯ 10:​23-25.

“ಎರಡನೆಯದ್ದು: ದೇವರಿಂದ ಕಲಿಸಲ್ಪಡಲಿಕ್ಕಾಗಿ, ನಾವು ಕೇವಲ ಆತನ ಮೇಜಿನಲ್ಲಿಯೇ ತಿನ್ನುವೆವು, ಮತ್ತು ದೆವ್ವಗಳ ಮೋಸಕರ ಬೋಧನೆಗಳ ಬಗ್ಗೆ ಬೈಬಲಿನ ಎಚ್ಚರಿಕೆಯನ್ನು ಜಾಗ್ರತೆಯಿಂದ ಪಾಲಿಸುವೆವು. (1 ಕೊರಿಂಥ 10:21; 1 ತಿಮೊಥೆಯ 4:1) ಧಾರ್ಮಿಕ ಸುಳ್ಳುಗಳು, ವ್ಯರ್ಥ ತರ್ಕಸರಣಿಗಳು, ನಾಚಿಕೆಗೆಟ್ಟ ಲೈಂಗಿಕ ವಕ್ರತೆಗಳು, ಅಶ್ಲೀಲಸಾಹಿತ್ಯವೆಂಬ ಪಿಡುಗು, ನೀಚ ಮನೋರಂಜನೆ, ಮತ್ತು ‘ಸ್ವಸ್ಥವಾದ ಉಪದೇಶಕ್ಕೆ ಸಮ್ಮತಿಸದೆ’ ಹೋಗುವ ಪ್ರತಿಯೊಂದು ವಿಷಯದಂಥ ಹಾನಿಕರ ಘಟಕಾಂಶಗಳಿಂದ ದೂರವಿರಲು ನಾವು ವಿಶೇಷ ಮುಂಜಾಗ್ರತೆಯನ್ನು ತೆಗೆದುಕೊಳ್ಳುವೆವು. (ರೋಮಾಪುರ 1:​26, 27; 1 ಕೊರಿಂಥ 3:20; 1 ತಿಮೊಥೆಯ 6:3; 2 ತಿಮೊಥೆಯ 1:13) ಹಿತಕರವಾದದ್ದನ್ನು ಕಲಿಸಲು ಅರ್ಹರಾಗಿರುವ ‘ಪುರುಷರಲ್ಲಿನ ವರದಾನಗಳಿಗೆ’ ಗೌರವದಿಂದಾಗಿ, ನಾವು ಅವರ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಗೌರವಿಸುವೆವು ಮತ್ತು ದೇವರ ವಾಕ್ಯದ ಶುದ್ಧ ಹಾಗೂ ನೀತಿಭರಿತ ನೈತಿಕ ಮತ್ತು ಆತ್ಮಿಕ ಮಟ್ಟಗಳನ್ನು ಎತ್ತಿಹಿಡಿಯುವುದರಲ್ಲಿ ಮನಃಪೂರ್ವಕವಾಗಿ ಸಹಕರಿಸುವೆವು.​—ಎಫೆಸ 4:​7, 8, 11, 12, NW; 1 ಥೆಸಲೊನೀಕ 5:​12, 13; ತೀತ 1:9.

“ಮೂರನೆಯದ್ದು: ಕ್ರೈಸ್ತ ಹೆತ್ತವರೋಪಾದಿ, ನಮ್ಮ ಮಕ್ಕಳನ್ನು ಕೇವಲ ಬಾಯಿಮಾತಿನಿಂದಲ್ಲ ಬದಲಾಗಿ ನಮ್ಮ ಮಾದರಿಯ ಮೂಲಕವೂ ಉಪದೇಶಿಸಲು ನಾವು ಮನಃಪೂರ್ವಕವಾಗಿ ಪ್ರಯತ್ನಿಸುವೆವು. ಅವರ ಶೈಶವಾವಸ್ಥೆಯಿಂದಲೇ ‘ರಕ್ಷಣೆಹೊಂದಿಸುವ ಜ್ಞಾನವನ್ನು ಗ್ರಂಥಗಳಿಂದ ಕಲಿಯಲಿಕ್ಕಾಗಿ’ ಅವರಿಗೆ ಸಹಾಯಮಾಡುವುದೇ ನಮ್ಮ ಮುಖ್ಯ ಚಿಂತೆಯಾಗಿದೆ. (2 ತಿಮೊಥೆಯ 3:15) ಅವರನ್ನು ಯೆಹೋವನ ಶಿಸ್ತು ಹಾಗೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುವುದು, ‘ಅವರಿಗೆ ಮೇಲಾಗುವುದು ಮತ್ತು ಅವರು ಭೂಮಿಯ ಮೇಲೆ ಬಹುಕಾಲ ಬದುಕುವರು’ ಎಂಬ ದೇವರ ವಾಗ್ದಾನವನ್ನು ಅನುಭವಿಸುವ ಅತ್ಯುತ್ತಮ ಅವಕಾಶವನ್ನು ಕೊಡುವುದೆಂಬುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡುವೆವು.​—ಎಫೆಸ 6:​1-4.

“ನಾಲ್ಕನೆಯದ್ದು: ಚಿಂತೆಗಳು ಇಲ್ಲವೇ ಗಂಭೀರ ಸಮಸ್ಯೆಗಳು ಎದುರಾದಾಗ, ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು’ ನಮ್ಮನ್ನು ರಕ್ಷಿಸುವುದೆಂಬ ಆಶ್ವಾಸನೆಯುಳ್ಳವರಾಗಿ ನಾವು ಪ್ರಪ್ರಥಮವಾಗಿ, ‘ದೇವರ ಮುಂದೆ ನಮಗೆ ಬೇಕಾದದ್ದನ್ನು ತಿಳಿಯಪಡಿಸುವೆವು.’ (ಫಿಲಿಪ್ಪಿ 4:​6, 7) ಕ್ರಿಸ್ತನ ನೊಗದ ಕೆಳಗೆ ಬಂದಿರುವುದರಿಂದ ನಾವು ಚೈತನ್ಯವನ್ನು ಕಂಡುಕೊಳ್ಳುವೆವು. ದೇವರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಂದು ತಿಳಿದವರಾಗಿ, ನಾವು ಆತನ ಮೇಲೆ ನಮ್ಮ ಚಿಂತಾಭಾರವನ್ನು ಹಾಕಲು ಹಿಂದೆಮುಂದೆ ನೋಡೆವು.​—ಮತ್ತಾಯ 11:​28-30; 1 ಪೇತ್ರ 5:​6, 7.

“ಐದನೆಯದ್ದು: ಆತನ ವಾಕ್ಯದ ಬೋಧಕರಾಗಿರಲು ಕೊಡಲ್ಪಟ್ಟಿರುವ ಸುಯೋಗಕ್ಕಾಗಿ ಯೆಹೋವನಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ನಾವು ‘ಆತನ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು’ ಮತ್ತು ‘ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲು’ ಮಾಡುವ ಪ್ರಯತ್ನಗಳನ್ನು ನವೀಕರಿಸುವೆವು. (2 ತಿಮೊಥೆಯ 2:15; 4:​5, NW) ಏನೆಲ್ಲಾ ಒಳಗೂಡಿದೆಯೆಂದು ನಮಗೆ ಸೂಕ್ಷ್ಮವಾಗಿ ತಿಳಿದಿರುವುದರಿಂದ, ಅರ್ಹ ವ್ಯಕ್ತಿಗಳಿಗಾಗಿ ಹುಡುಕುವುದು ಮತ್ತು ಬಿತ್ತಲ್ಪಟ್ಟಿರುವ ಬೀಜವನ್ನು ಬೆಳೆಸುವುದು ನಮ್ಮ ಹೃತ್ಪೂರ್ವಕ ಆಸೆಯಾಗಿದೆ. ಅಷ್ಟುಮಾತ್ರವಲ್ಲದೆ, ಇನ್ನೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮೂಲಕ ನಾವು ನಮ್ಮ ಬೋಧಿಸುವಿಕೆಯನ್ನು ಸುಧಾರಿಸುವೆವು. ಇದರಿಂದಾಗಿ ನಾವು ‘ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬ ಆತನ ಚಿತ್ತಕ್ಕೆ’ ಹೆಚ್ಚು ಹೊಂದಿಕೆಯಲ್ಲಿರುವೆವು.​—1 ತಿಮೊಥೆಯ 2:​3, 4.

“ಆರನೆಯದ್ದು: ಗತ ಶತಮಾನದಲ್ಲಿ ಮತ್ತು ಈ ಶತಮಾನದಲ್ಲೆಲ್ಲಾ ಅನೇಕ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ವಿಭಿನ್ನ ಪ್ರಕಾರದ ವಿರೋಧ ಹಾಗೂ ಹಿಂಸೆಯನ್ನು ಅನುಭವಿಸಿದ್ದಾರೆ. ಆದರೆ ಯೆಹೋವನು ನಮ್ಮೊಂದಿಗೆ ಇದ್ದಾನೆ. (ರೋಮಾಪುರ 8:31) ಎಂದಿಗೂ ವಿಫಲವಾಗದ ಆತನ ವಾಕ್ಯವು, ನಮ್ಮ ರಾಜ್ಯ ಸಾರುವಿಕೆ ಮತ್ತು ಕಲಿಸುವಿಕೆಯ ಕೆಲಸವನ್ನು ಅಡ್ಡಿಪಡಿಸಲು, ನಿಧಾನಿಸಲು ಇಲ್ಲವೇ ನಿಲ್ಲಿಸಲು ‘ಕಲ್ಪಿಸಲ್ಪಟ್ಟ ಯಾವ ಆಯುಧವೂ’ ಜಯಿಸದೆಂದು ನಮಗೆ ಆಶ್ವಾಸನೆ ಕೊಡುತ್ತದೆ. (ಯೆಶಾಯ 54:17) ಅನುಕೂಲಕರ ಸಮಯದಲ್ಲಾಗಿರಲಿ, ತೊಂದರೆಭರಿತ ಸಮಯದಲ್ಲಾಗಿರಲಿ, ನಾವು ಸತ್ಯವನ್ನು ಸಾರುವುದನ್ನು ಎಂದಿಗೂ ನಿಲ್ಲಿಸಲಾರೆವು. ನಮ್ಮ ಸಾರುವ ಹಾಗೂ ಕಲಿಸುವ ನೇಮಕವನ್ನು ತುರ್ತಿನಿಂದ ಪೂರೈಸುವುದೇ ನಮ್ಮ ದೃಢಸಂಕಲ್ಪವಾಗಿದೆ. (2 ತಿಮೊಥೆಯ 4:​1, 2) ಎಲ್ಲ ದೇಶಗಳ ಜನರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾಧ್ಯವಿರುವಷ್ಟು ಪೂರ್ಣವಾಗಿ ಹಂಚಿಕೊಳ್ಳುವುದೇ ನಮ್ಮ ಗುರಿಯಾಗಿದೆ. ಹೀಗೆ ಅವರು, ನೀತಿಯ ಹೊಸ ಲೋಕದಲ್ಲಿ ನಿತ್ಯಜೀವವನ್ನು ಗಳಿಸಲಿಕ್ಕಾಗಿರುವ ಏರ್ಪಾಡಿನ ಕುರಿತಾಗಿ ಕಲಿಯಲು ಅವಕಾಶವನ್ನು ಪಡೆಯುತ್ತಾ ಇರುವರು. ದೇವರ ವಾಕ್ಯದ ಬೋಧಕರ ಒಂದು ಐಕ್ಯ ಸಮೂಹದೋಪಾದಿ, ಮಹಾ ಬೋಧಕನಾದ ಯೇಸು ಕ್ರಿಸ್ತನ ಮಾದರಿಯನ್ನು ಅನುಕರಿಸುತ್ತಾ ಇರುವುದು ಮತ್ತು ಅವನ ದೈವಿಕ ಗುಣಗಳನ್ನು ಪ್ರತಿಫಲಿಸುವುದು ನಮ್ಮ ದೃಢನಿರ್ಧಾರವಾಗಿದೆ. ನಾವು ಇದೆಲ್ಲವನ್ನೂ, ನಮ್ಮ ಮಹಾ ಉಪದೇಶಕನೂ, ಜೀವದಾತನೂ ಆಗಿರುವ ಯೆಹೋವ ದೇವರ ಗೌರವ ಹಾಗೂ ಸ್ತುತಿಗಾಗಿ ಮಾಡುವೆವು.

“ಈ ಠರಾವನ್ನು ಅಂಗೀಕರಿಸುವ ಪಕ್ಷದಲ್ಲಿರುವ, ಈ ಅಧಿವೇಶನದಲ್ಲಿ ಹಾಜರಿರುವವರೆಲ್ಲರೂ, ದಯವಿಟ್ಟು ಹೌದು ಎಂದು ಹೇಳಿರಿ!”

ಠರಾವಿನ ಕೊನೆಯ ವಾಕ್ಯವನ್ನು, ಫ್ರಾನ್ಸ್‌ನ ಮೂರು ಅಧಿವೇಶನಗಳಲ್ಲಿ ಕೂಡಿಬಂದಿದ್ದ 1,60,000 ಮಂದಿ ಮತ್ತು ಇಟಲಿಯ ಒಂಬತ್ತು ಸ್ಥಳಗಳಲ್ಲಿ ಕೂಡಿಬಂದಿದ್ದ 2,89,000 ಮಂದಿಯ ಮುಂದೆ ಪ್ರಸ್ತುತಪಡಿಸಲ್ಪಟ್ಟಾಗ, ಅಭ್ಯರ್ಥಿಗಳು ಅನೇಕ ಭಾಷೆಗಳಲ್ಲಿ “ಹೌದು” ಎಂದು ಗಟ್ಟಿಯಾಗಿ ಕೂಗಿ ಹೇಳಿದರು.