ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲಾ ದೇಶಗಳ ಜನರನ್ನು ದೇವರು ಸ್ವಾಗತಿಸುತ್ತಾನೆ

ಎಲ್ಲಾ ದೇಶಗಳ ಜನರನ್ನು ದೇವರು ಸ್ವಾಗತಿಸುತ್ತಾನೆ

ಎಲ್ಲಾ ದೇಶಗಳ ಜನರನ್ನು ದೇವರು ಸ್ವಾಗತಿಸುತ್ತಾನೆ

ಜಾನ್‌ ಪ್ರಥಮ ಬಾರಿ ಮಾಲೀ ದೇಶಕ್ಕೆ ಭೇಟಿಮಾಡುತ್ತಾ ಇದ್ದನು. ಮಾಮಾಡೂ ಮತ್ತು ಅವನ ಕುಟುಂಬವು ತೋರಿಸಿದಂಥ ಆದರಪೂರ್ಣ ಅತಿಥಿಸತ್ಕಾರವು ಅವನ ಹೃದಯವನ್ನು ಸ್ಪರ್ಶಿಸಿತು. ಜಾನ್‌ ನೆಲದ ಮೇಲೆ ಕುಳಿತುಕೊಂಡು, ಎಲ್ಲರೂ ತಿನ್ನುವಂಥ ಅದೇ ಬಟ್ಟಲಿನಿಂದ ಒಡ್ಡೊಡ್ಡಾಗಿ ತಿನ್ನುತ್ತಿದ್ದಾಗ ಅವನ ಮನಸ್ಸಿನಲ್ಲಿ ಒಂದೇ ವಿಚಾರವು ಸುತ್ತುತ್ತಾ ಇತ್ತು. ಅದೇನೆಂದರೆ, ತನ್ನ ಅತಿಥೇಯನಿಗೆ ಅತ್ಯಮೂಲ್ಯವಾದ ಕೊಡುಗೆಯೊಂದನ್ನು, ಅಂದರೆ ದೇವರ ವಾಕ್ಯವಾದ ಬೈಬಲಿನಿಂದ ರಾಜ್ಯದ ಸುವಾರ್ತೆಯನ್ನು ತಾನು ಹೇಗೆ ಅತ್ಯುತ್ತಮವಾದ ರೀತಿಯಲ್ಲಿ ಹಂಚಿಕೊಳ್ಳಬಹುದೆಂದೇ. ಮಾಲೀಯಲ್ಲಿ ಮಾತಾಡಲಾಗುತ್ತಿದ್ದ ಫ್ರೆಂಚ್‌ ಭಾಷೆ ಅವನಿಗೆ ಗೊತ್ತಿತ್ತಾದರೂ, ಸಂಪೂರ್ಣವಾಗಿ ಭಿನ್ನವಾದ ರೀತಿಯ ಧರ್ಮ ಹಾಗೂ ವಿಚಾರಧಾಟಿಯುಳ್ಳ ಒಂದು ಕುಟುಂಬದೊಂದಿಗೆ ಹೇಗೆ ಸಂಭಾಷಿಸುವುದು ಎಂಬುದರ ಬಗ್ಗೆಯೇ ಜಾನ್‌ ಯೋಚಿಸುತ್ತಾ ಇದ್ದನು.

ಜಾನ್‌, ಬಾಬೆಲ್‌ ನಗರದ ಕುರಿತಾದ ಬೈಬಲ್‌ ವೃತ್ತಾಂತದ ಕುರಿತಾಗಿ ಯೋಚಿಸಿದ್ದು ಆಶ್ಚರ್ಯಕರವೇನಲ್ಲ. ಏಕೆಂದರೆ, ಅಲ್ಲಿಯೇ ದೇವರು ದಂಗೆಕೋರ ಜನರ ಭಾಷೆಯನ್ನು ಗಲಿಬಿಲಿಗೊಳಿಸಿದ್ದನು. (ಆದಿಕಾಂಡ 11:​1-9) ಫಲಸ್ವರೂಪವಾಗಿ, ಭೂಮಿಯ ಭಿನ್ನ ಭಿನ್ನ ಭಾಗಗಳಲ್ಲಿ, ವಿಭಿನ್ನ ಭಾಷೆಗಳು, ಧರ್ಮಗಳು ಮತ್ತು ಯೋಚನಾ ನಮೂನೆಗಳುಳ್ಳ ಜನಸಮೂಹಗಳು ತಲೆದೋರಿವೆ. ಇಂದು, ಪ್ರಯಾಣ ಮತ್ತು ವಲಸೆಹೋಗುವಿಕೆಯು ಸರ್ವಸಾಮಾನ್ಯವಾಗಿಬಿಟ್ಟಿವೆ. ಆದುದರಿಂದ, ಜಾನ್‌ ಎದುರಿಸಿದಂಥದ್ದೇ ಪಂಥಾಹ್ವಾನವನ್ನು ಅನೇಕರು ತಮ್ಮ ಸ್ವಂತ ನೆರೆಹೊರೆಯಲ್ಲೂ ಎದುರಿಸುತ್ತಾರೆ. ಅದೇನೆಂದರೆ, ಇನ್ನೊಂದು ಹಿನ್ನೆಲೆಯ ಜನರೊಂದಿಗೆ ಬೈಬಲ್‌ ಆಧಾರಿತ ನಿರೀಕ್ಷೆಯನ್ನು ಹಂಚಿಕೊಳ್ಳುವುದು ಹೇಗೆ?

ಒಂದು ಪ್ರಾಚೀನ ಉದಾಹರಣೆ

ಇಸ್ರಾಯೇಲಿನ ಇತರ ಪ್ರವಾದಿಗಳಂತೆ, ಯೋನನು ಪ್ರಮುಖವಾಗಿ ಇಸ್ರಾಯೇಲ್ಯರೊಂದಿಗೆ ಮಾತಾಡುತ್ತಿದ್ದನು. ಧರ್ಮಭ್ರಷ್ಟವಾದ ಹತ್ತು ಕುಲಗಳ ರಾಜ್ಯವು ಬಹಿರಂಗವಾಗಿ ದೇವನಿಂದಕ ಆಚರಣೆಗಳಲ್ಲಿ ಒಳಗೂಡಿದ್ದ ಒಂದು ಸಮಯದಲ್ಲಿ ಅವನು ಪ್ರವಾದಿಸಿದನು. (2 ಅರಸು 14:​23-25) ತನ್ನ ಸ್ವದೇಶವನ್ನು ಬಿಟ್ಟು, ಅಶ್ಶೂರಕ್ಕೆ ಹೋಗಿ ಒಂದು ಭಿನ್ನ ಧರ್ಮ ಹಾಗೂ ಸಂಸ್ಕೃತಿಯುಳ್ಳ ನಿನೆವೆಯ ನಿವಾಸಿಗಳಿಗೆ ಸಾರುವಂತೆ ಅವನಿಗೆ ಒಂದು ವಿಶೇಷ ನೇಮಕ ಸಿಕ್ಕಿದಾಗ ಅವನ ಪ್ರತಿಕ್ರಿಯೆಯು ಹೇಗಿತ್ತೆಂಬದನ್ನು ಸ್ವಲ್ಪ ಊಹಿಸಿಕೊಳ್ಳಿ. ಯೋನನಿಗೆ ಅವರ ಭಾಷೆಯನ್ನಾಡಲು ಬಾರದೇ ಇದ್ದಿರಬಹುದು, ಇಲ್ಲವೇ ಅದನ್ನು ಸರಾಗವಾಗಿ ಮಾತಾಡಲು ಬಾರದೇ ಇದ್ದಿರಬಹುದು. ಏನೇ ಆಗಿರಲಿ, ಈ ಪಂಥಾಹ್ವಾನವು ದುಸ್ಸಾಧ್ಯವೆಂದು ಯೋನನಿಗನಿಸಿರಬಹುದು ಮತ್ತು ಅವನು ಅಲ್ಲಿಂದ ಓಡಿಹೋದನು.​—ಯೋನ 1:​1-3.

ಯೆಹೋವ ದೇವರು ಕೇವಲ ಹೊರತೋರಿಕೆಯನ್ನು ಮಾತ್ರ ನೋಡುವುದಿಲ್ಲ, ಬದಲಾಗಿ ಹೃದಯವನ್ನು ಪರೀಕ್ಷಿಸುತ್ತಾನೆಂಬುದನ್ನು ಯೋನನು ಕಲಿಯುವ ಅಗತ್ಯವಿತ್ತೆಂಬುದು ಸ್ಪಷ್ಟ. (1 ಸಮುವೇಲ 16:7) ಸಮುದ್ರದಲ್ಲಿ ಮುಳುಗಿಹೋಗುವುದರಿಂದ ಯೋನನನ್ನು ಅದ್ಭುತಕರವಾಗಿ ರಕ್ಷಿಸಿದ ನಂತರ, ಅವನು ನಿನೆವೆಯ ನಿವಾಸಿಗಳಿಗೆ ಸಾರುವಂತೆ ಯೆಹೋವನು ಎರಡನೆಯ ಸಲ ಯೋನನಿಗೆ ಆಜ್ಞಾಪಿಸಿದನು. ಆಗ ಯೋನನು ವಿಧೇಯನಾದನು, ಮತ್ತು ಫಲಸ್ವರೂಪವಾಗಿ ಒಂದು ಸಮೂಹದೋಪಾದಿ ನಿನೆವೆಯ ನಿವಾಸಿಗಳು ಪಶ್ಚಾತ್ತಾಪಪಟ್ಟರು. ಆದರೆ ಆಗಲೂ ಯೋನನಿಗೆ ಸರಿಯಾದ ದೃಷ್ಟಿಕೋನವಿರಲಿಲ್ಲ. ಒಂದು ಬಲವಾದ ವಸ್ತುಪಾಠದ ಮೂಲಕ, ಅವನು ತನ್ನ ಮನೋಭಾವವನ್ನು ಬದಲಾಯಿಸುವ ಅಗತ್ಯವಿದೆಯೆಂಬುದನ್ನು ಯೆಹೋವನು ಅವನಿಗೆ ಕಲಿಸಿದನು. ಯೆಹೋವನು ಯೋನನಿಗೆ ಕೇಳಿದ್ದು: “ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ”? (ಯೋನ 4:5-11) ಇಂದು ನಮ್ಮ ಕುರಿತಾಗಿ ಏನು? ಬೇರೆ ಹಿನ್ನೆಲೆಯ ಜನರಿಗೆ ನಾವು ಹೇಗೆ ಸಹಾಯಮಾಡಬಹುದು?

ಸಮಾರ್ಯದವರನ್ನು ಮತ್ತು ಯೆಹೂದ್ಯೇತರರನ್ನು ಸ್ವಾಗತಿಸುವುದು

ಪ್ರಥಮ ಶತಮಾನದಲ್ಲಿ ಯೇಸು ತನ್ನ ಹಿಂಬಾಲಕರಿಗೆ, ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ ಅಪ್ಪಣೆಯನ್ನು ಕೊಟ್ಟನು. (ಮತ್ತಾಯ 28:19) ಇದು ಅವರಿಗೆ ಸುಲಭದ ಸಂಗತಿಯಾಗಿರಲಿಲ್ಲ. ಯೇಸುವಿನ ಶಿಷ್ಯರು ಯೆಹೂದ್ಯರಾಗಿದ್ದರು ಮತ್ತು ಯೋನನಂತೆ, ತಮ್ಮದೇ ಹಿನ್ನೆಲೆ ಹಾಗೂ ಸಂಸ್ಕೃತಿಯ ಜನರೊಂದಿಗೆ ಮಾತ್ರ ಮಾತಾಡುವ ರೂಢಿಗೆ ಒಗ್ಗಿಹೋಗಿದ್ದರು. ಸ್ವಾಭಾವಿಕವಾಗಿಯೇ, ಅವರು ಕೂಡ ತಮ್ಮ ಆ ಸಮಯದಲ್ಲಿದ್ದ ಸಾಮಾನ್ಯವಾದ ಪೂರ್ವಾಗ್ರಹಗಳಿಂದ ಪ್ರಭಾವಿಸಲ್ಪಟ್ಟಿರಬಹುದು. ಆದರೆ ತನ್ನ ಸೇವಕರಿಗಾಗಿ ತನ್ನ ಚಿತ್ತವೇನಾಗಿದೆ ಎಂಬುದನ್ನು ಅವರು ಪ್ರಗತಿಪರವಾಗಿ ಗ್ರಹಿಸುವಂತೆ ಯೆಹೋವನು ವಿಷಯಗಳನ್ನು ನಿರ್ದೇಶಿಸಿದನು.

ಮೊದಲನೆಯ ಹೆಜ್ಜೆಯು, ಅವರು ಯೆಹೂದ್ಯರು ಹಾಗೂ ಸಮಾರ್ಯದವರ ನಡುವೆಯಿದ್ದ ಪೂರ್ವಾಗ್ರಹವನ್ನು ಜಯಿಸಬೇಕಾಗಿತ್ತು. ಯೆಹೂದ್ಯರಿಗೂ ಸಮಾರ್ಯದವರಿಗೂ ಯಾವುದೇ ಸಂಪರ್ಕವಿರುತ್ತಿರಲಿಲ್ಲ. ಆದರೆ ಯೇಸು ಒಂದಕ್ಕಿಂತಲೂ ಹೆಚ್ಚು ಬಾರಿ, ಸಮಾರ್ಯದವರು ಮುಂದೆ ಸುವಾರ್ತೆಯನ್ನು ಸ್ವೀಕರಿಸುವಂತೆ ಮಾರ್ಗವನ್ನು ತಯಾರಿಸಿದನು. ಒಬ್ಬ ಸಮಾರ್ಯ ಸ್ತ್ರೀಯೊಂದಿಗೆ ಮಾತಾಡುವ ಮೂಲಕ ಅವನು ತನ್ನ ನಿಷ್ಪಕ್ಷಪಾತವನ್ನು ತೋರಿಸಿದನು. (ಯೋಹಾನ 4:​7-26) ಇನ್ನೊಂದು ಸಂದರ್ಭದಲ್ಲಿ, ಯೆಹೂದ್ಯರಲ್ಲದ ಜನರು ಸಹ ನೆರೆಯವರಿಗಾಗಿ ಪ್ರೀತಿಯನ್ನು ತೋರಿಸಲು ಶಕ್ತರಾಗಿದ್ದಾರೆಂಬುದನ್ನು ಸ್ನೇಹಭಾವದ ಸಮಾರ್ಯದವನ ದೃಷ್ಟಾಂತದ ಮೂಲಕ ಒಬ್ಬ ಧಾರ್ಮಿಕ ಯೆಹೂದಿಗೆ ತೋರಿಸಿದನು. (ಲೂಕ 10:​25-37) ಸಮಾರ್ಯದವರನ್ನು ಕ್ರೈಸ್ತ ಸಭೆಯೊಳಗೆ ತರುವ ಯೆಹೋವನ ಸಮಯ ಬಂದಾಗ, ಯೆಹೂದಿ ಹಿನ್ನೆಲೆಯಿಂದ ಬಂದಿದ್ದವರಾಗಿದ್ದ ಫಿಲಿಪ್ಪ, ಪೇತ್ರ ಮತ್ತು ಯೋಹಾನರು ಸಮಾರ್ಯದ ನಿವಾಸಿಗಳಿಗೆ ಸಾರಿದರು. ಅವರ ಸಂದೇಶವು ಆ ಪಟ್ಟಣದಲ್ಲಿ ಬಹು ಸಂತೋಷವನ್ನು ಉಂಟುಮಾಡಿತು.​—ಅ. ಕೃತ್ಯಗಳು 8:​4-8, 14-17.

ಯೆಹೂದಿ ಕ್ರೈಸ್ತರಿಗೆ, ವಾಸ್ತವದಲ್ಲಿ ಯೆಹೂದ್ಯರ ದೂರದ ಸಂಬಂಧಿಗಳಾಗಿದ್ದ ಸಮಾರ್ಯದವರನ್ನೇ ಪ್ರೀತಿಸುವುದು ಕಷ್ಟವಾಗುತ್ತಿದ್ದರೆ, ಯೆಹೂದ್ಯರು ಅಪಹಾಸ್ಯಮಾಡಿ ದ್ವೇಷಿಸುತ್ತಿದ್ದ ಯೆಹೂದ್ಯೇತರರು ಇಲ್ಲವೇ ಅನ್ಯಜನಾಂಗದವರಿಗೆ ಸ್ನೇಹಮಯ ಪ್ರೀತಿಯನ್ನು ತೋರಿಸುವುದು ಅವರಿಗೆ ಇನ್ನೂ ಹೆಚ್ಚು ಕಷ್ಟಕರವಾಗಿದ್ದಿರಬೇಕು. ಹಾಗಿದ್ದರೂ ಯೇಸು ಸತ್ತ ಬಳಿಕ, ಯೆಹೂದಿ ಕ್ರೈಸ್ತರು ಮತ್ತು ಅನ್ಯಜನಾಂಗದವರ ನಡುವೆಯಿದ್ದ ತಡೆಯು ತೆಗೆದುಹಾಕಲ್ಪಡಸಾಧ್ಯವಿತ್ತು. (ಎಫೆಸ 2:​13, 14) ಪೇತ್ರನು ಈ ಹೊಸ ಏರ್ಪಾಡನ್ನು ಸ್ವೀಕರಿಸುವಂತೆ ಸಹಾಯಮಾಡಲು, ದೇವರು ಅವನಿಗೆ ಒಂದು ದರ್ಶನವನ್ನು ತೋರಿಸಿದನು. ಅದರಲ್ಲಿ ಆತನು ಪೇತ್ರನಿಗೆ, “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬೇಡ” ಎಂದು ಹೇಳಿದನು. ಅನಂತರ ಯೆಹೋವನ ಆತ್ಮವು ಅವನನ್ನು ಕೊರ್ನೇಲ್ಯ ಎಂಬ ಅನ್ಯಜನಾಂಗದವನೊಬ್ಬನ ಬಳಿ ನಡೆಸಿತು. ಅನ್ಯಜನಾಂಗದ ಈ ಮನುಷ್ಯನನ್ನು ದೇವರು ಶುದ್ಧಮಾಡಿದ್ದರಿಂದ ತಾನು ಅವನನ್ನು ಹೊಲೆ ಎನ್ನಬಾರದೆಂಬ ದೇವರ ದೃಷ್ಟಿಕೋನವನ್ನು ಪೇತ್ರನು ಅರ್ಥಮಾಡಿಕೊಂಡ ಬಳಿಕ, ದೈವಪ್ರೇರಣೆಯಿಂದ ಅವನು ಹೀಗಂದನು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:​9-35) ಕೊರ್ನೇಲ್ಯ ಮತ್ತು ಅವನ ಕುಟುಂಬದ ಮೇಲೆ ಪವಿತ್ರಾತ್ಮವನ್ನು ಸುರಿಸುವ ಮೂಲಕ ತಾನು ಅವರನ್ನು ಸ್ವೀಕರಿಸಿದ್ದೇನೆಂದು ದೇವರು ತೋರಿಸಿದಾಗ ಪೇತ್ರನು ಎಷ್ಟು ಚಕಿತನಾದನು!

ಪೌಲ​—ಅನ್ಯಜನರಿಗಾಗಿ ಆರಿಸಿಕೊಳ್ಳಲ್ಪಟ್ಟ ಒಂದು ಸಾಧನ

ಯೆಹೋವನು ತನ್ನ ಸೇವಕರಿಗೆ, ಅವರು ಎಲ್ಲಾ ವಿಧಗಳ ಜನರನ್ನು ಪ್ರೀತಿಸಿ ಅವರಿಗೆ ಸಹಾಯಮಾಡುವಂತೆ ಹೇಗೆ ಪ್ರಗತಿಪರವಾಗಿ ತಯಾರಿಸುತ್ತಾನೆಂಬುದಕ್ಕೆ ಪೌಲನ ಶುಶ್ರೂಷೆಯು ಒಂದು ಎದ್ದುಕಾಣುವ ಉದಾಹರಣೆಯಾಗಿದೆ. ಪೌಲನು ಮತಾಂತರಗೊಂಡ ಸಮಯದಲ್ಲಿ, ಅವನು ಅನ್ಯಜನರಿಗೆ ತನ್ನ ಹೆಸರನ್ನು ತಿಳಿಸುವುದಕ್ಕಾಗಿ ಆರಿಸಿಕೊಂಡಿರುವ ಸಾಧನವಾಗಿ ಸೇವಿಸುವನೆಂದು ಯೇಸು ಹೇಳಿದ್ದನು. (ಅ. ಕೃತ್ಯಗಳು 9:15) ಅನಂತರ ಪೌಲನು ಪ್ರಾಯಶಃ, ಅನ್ಯಜನರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನನ್ನು ಉಪಯೋಗಿಸುವ ದೇವರ ಉದ್ದೇಶದ ಕುರಿತಾಗಿ ಮನನಮಾಡಲಿಕ್ಕಾಗಿ ಅರಬಸ್ಥಾನಕ್ಕೆ ಹೋದನು.​—ಗಲಾತ್ಯ 1:​15-17.

ತನ್ನ ಪ್ರಥಮ ಮಿಷನೆರಿ ಸಂಚಾರದ ಸಮಯದಲ್ಲಿ, ಪೌಲನು ಯೆಹೂದ್ಯೇತರರಿಗೆ ಸಾರುವುದರಲ್ಲಿ ಹುರುಪನ್ನು ತೋರಿಸಿದನು. (ಅ. ಕೃತ್ಯಗಳು 13:​46-48) ಆ ಅಪೊಸ್ತಲನು ಯೆಹೋವನ ಏರ್ಪಾಡಿಗನುಸಾರ ಕೆಲಸಗಳನ್ನು ಮಾಡುತ್ತಿದ್ದನೆಂಬುದರ ರುಜುವಾತಾಗಿ ಯೆಹೋವನು ಪೌಲನ ಚಟುವಟಿಕೆಯನ್ನು ಆಶೀರ್ವದಿಸಿದನು. ಪೇತ್ರನು ತನ್ನ ಯೆಹೂದ್ಯೇತರ ಸಹೋದರರೊಂದಿಗೆ ಸಹವಾಸಿಸುವುದರಿಂದ ದೂರವಿರುವ ಮೂಲಕ ಪಕ್ಷಪಾತವನ್ನು ತೋರಿಸಿದಾಗ ಅವನನ್ನು ಧೈರ್ಯದಿಂದ ತಿದ್ದಿದ ಮೂಲಕ, ಪೌಲನು ತಾನು ಯೆಹೋವನ ದೃಷ್ಟಿಕೋನವನ್ನು ಪೂರ್ಣವಾಗಿ ಗ್ರಹಿಸಿದ್ದೇನೆಂಬುದನ್ನು ತೋರಿಸಿದನು.​—ಗಲಾತ್ಯ 2:​11-14.

ದೇವರೇ ಪೌಲನ ಪ್ರಯತ್ನಗಳನ್ನು ನಿರ್ದೇಶಿಸುತ್ತಿದ್ದನೆಂಬುದಕ್ಕೆ ಹೆಚ್ಚಿನ ಸಾಕ್ಷ್ಯವು ಸಿಕ್ಕಿದ್ದು, ಅವನು ತನ್ನ ಎರಡನೆಯ ಮಿಷನೆರಿ ಸಂಚಾರದಲ್ಲಿ ರೋಮನ್‌ ಪ್ರಾಂತವಾದ ಬಿಥೂನ್ಯದಲ್ಲಿ ಸಾರುವುದರಿಂದ ಪವಿತ್ರಾತ್ಮವು ತಡೆದಾಗಲೇ. (ಅ. ಕೃತ್ಯಗಳು 16:7) ಆ ಸಮಯವು ತಕ್ಕದ್ದಾಗಿರಲಿಲ್ಲವೊ ಏನೋ. ಆದರೆ ಅನಂತರ ಬಿಥೂನ್ಯದ ಕೆಲವರು ಕ್ರೈಸ್ತರಾದರು. (1 ಪೇತ್ರ 1:1) ಒಂದು ದರ್ಶನದಲ್ಲಿ ಮಕೆದೋನ್ಯ ದೇಶದವನೊಬ್ಬನು, ‘ನೀನು ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು’ ಎಂದು ಪೌಲನನ್ನು ಬೇಡಿಕೊಂಡನು. ಆಗ, ಪೌಲನು ತಾನು ಆ ರೋಮನ್‌ ಪ್ರಾಂತದಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನ ಪ್ರಯಾಣ ಮಾರ್ಗವನ್ನು ಬದಲಾಯಿಸಬೇಕೆಂಬ ನಿರ್ಣಯವನ್ನು ಮಾಡಿದನು.​—ಅ. ಕೃತ್ಯಗಳು 16:​9, 10.

ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಪೌಲನ ಸಾಮರ್ಥ್ಯವು, ಅವನು ಅಥೇನೆಯವರಿಗೆ ಸಾರಿದಾಗ ಕಠಿನವಾದ ಪರೀಕ್ಷೆಗೊಳಗಾಯಿತು. ಪರ ದೇವರುಗಳನ್ನೂ ಹೊಸ ಧಾರ್ಮಿಕ ಪದ್ಧತಿಗಳನ್ನೂ ಪರಿಚಯಿಸುವುದು ಗ್ರೀಕ್‌ ಮತ್ತು ರೋಮನ್‌ ಕಾನೂನಿಗನುಸಾರ ನಿಷಿದ್ಧವಾಗಿತ್ತು. ಜನರ ಕಡೆಗೆ ಪೌಲನಿಗಿದ್ದ ಪ್ರೀತಿಯು ಅವರ ಧಾರ್ಮಿಕ ವ್ರತಾಚರಣೆಗಳನ್ನು ನಿಕಟವಾಗಿ ಪರೀಕ್ಷಿಸಿ ನೋಡುವಂತೆ ಅವನನ್ನು ಪ್ರೇರಿಸಿತು. ಅಥೇನೆಯಲ್ಲಿ ಅವನು “ತಿಳಿಯದ ದೇವರಿಗೆ” ಎಂದು ಬರೆಯಲ್ಪಟ್ಟಿದ್ದ ಒಂದು ಬಲಿಪೀಠವನ್ನು ಗಮನಿಸಿದನು. ತನ್ನ ಸಾಕ್ಷಿಕಾರ್ಯದಲ್ಲಿ ಅವನು ಈ ವಿವರವನ್ನು ಸೇರಿಸಿದನು. (ಅ. ಕೃತ್ಯಗಳು 17:​22, 23) ತನ್ನ ಸಂದೇಶವನ್ನು ದಯಾಪರ, ಗೌರವಭರಿತ ವಿಧಾನದಲ್ಲಿ ಪರಿಚಯಿಸುವ ಎಷ್ಟೊಂದು ಉತ್ತಮ ವಿಧಾನ!

ಅನ್ಯಜನರಿಗೆ ಅಪೊಸ್ತಲನಾಗಿ ತಾನು ಮಾಡಿದ ಕೆಲಸದ ಫಲಿತಾಂಶಗಳ ಕುರಿತಾಗಿ ಯೋಚಿಸಿದಾಗ, ಪೌಲನಿಗೆ ಎಷ್ಟು ಸಂತೋಷವಾಗಿದ್ದಿರಬೇಕು! ಅವನು ಕೊರಿಂಥ, ಫಿಲಿಪ್ಪಿ, ಥೆಸಲೊನೀಕ, ಮತ್ತು ಗಲಾತ್ಯದ ಪಟ್ಟಣಗಳಲ್ಲಿ ಯೆಹೂದ್ಯೇತರ ಮೂಲದಿಂದ ಬಂದ ಅಸಂಖ್ಯಾತ ಕ್ರೈಸ್ತರಿಂದ ಕೂಡಿದ ಸಭೆಗಳನ್ನು ಸ್ಥಾಪಿಸಲು ಸಹಾಯಮಾಡಿದನು. ದಾಮರಿ, ದಿಯೊನುಸ್ಯ, ಸೆರ್ಗ್ಯಪೌಲ ಮತ್ತು ತೀತನಂಥ ನಂಬಿಗಸ್ತ ಸ್ತ್ರೀಪುರುಷರಿಗೆ ಅವನು ಸಹಾಯಮಾಡಿದನು. ಯೆಹೋವನ ಬಗ್ಗೆಯಾಗಲಿ, ಬೈಬಲಿನ ಬಗ್ಗೆಯಾಗಲಿ ಏನೂ ತಿಳಿದಿರದ ಜನರು ಕ್ರೈಸ್ತತ್ವದ ಸತ್ಯವನ್ನು ಸ್ವೀಕರಿಸುವುದನ್ನು ನೋಡುವುದು ಎಂಥ ಒಂದು ಸುಯೋಗ! ಯೆಹೂದ್ಯೇತರರು ಸತ್ಯದ ಜ್ಞಾನವನ್ನು ಪಡೆಯಲು ಸಹಾಯಮಾಡುವುದರಲ್ಲಿ ಅವನ ಪಾತ್ರದ ಕುರಿತಾಗಿ ಪೌಲನು ಹೇಳಿದ್ದು: “ಇತರರು ಕ್ರಿಸ್ತನ ಹೆಸರನ್ನು ತಿಳಿಸಿದ ಕಡೆಯಲ್ಲಿ ಸುವಾರ್ತೆಯನ್ನು ಪ್ರಕಟಿಸುವದಿಲ್ಲವೆಂಬದಾಗಿ ನಿಷ್ಕರ್ಷೆಮಾಡಿಕೊಂಡೆನು. ಯಾರಿಗೆ ಆತನ ಸಮಾಚಾರ ಬಂದಿರಲಿಲ್ಲವೋ ಅವರೇ ಆತನನ್ನು ನೋಡುವರು; ಯಾರು ಆತನ ವರ್ತಮಾನವನ್ನು ಕೇಳಿರಲಿಲ್ಲವೋ ಅವರೇ ಗ್ರಹಿಸಿಕೊಳ್ಳುವರು ಎಂಬದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ.” (ರೋಮಾಪುರ 15:​20, 21) ನಮ್ಮ ಸಂಸ್ಕೃತಿಯವರಾಗಿರದಿರುವ ಜನರಿಗೆ ಸುವಾರ್ತೆಯನ್ನು ಸಾರುವುದರಲ್ಲಿ ನಾವು ಪಾಲ್ಗೊಳ್ಳಬಲ್ಲೆವೊ?

ಲೋಕದ ಎಲ್ಲಾ ಜನರಿಗೆ ಸಹಾಯಮಾಡುವುದು

ಯೆರೂಸಲೇಮಿನಲ್ಲಿದ್ದ ಆಲಯದಲ್ಲಿ ಆರಾಧನೆಗಾಗಿ ಬರಲಿದ್ದ ಇಸ್ರಾಯೇಲ್ಯೇತರರ ಕುರಿತಾಗಿ ಸೊಲೊಮೋನನು ಯೆಹೋವನಿಗೆ ಪ್ರಾರ್ಥಿಸಿದನು. ಅವನು ಬಿನ್ನಹಿಸಿದ್ದು: “ಒಬ್ಬ ಪರದೇಶಿಯು ನಿನ್ನ ನಾಮಕ್ಕೋಸ್ಕರ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು; ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು . . . ತಿಳಿದುಕೊಳ್ಳುವರು.” (ಓರೆ ಅಕ್ಷರಗಳು ನಮ್ಮವು.) (1 ಅರಸುಗಳು 8:41-43) ಇಂದು ಅನೇಕ ದೇಶಗಳಲ್ಲಿರುವ ಸಾವಿರಾರು ರಾಜ್ಯ ಘೋಷಕರು ಇದೇ ರೀತಿಯ ಭಾವನೆಗಳನ್ನು ಮರುಧ್ವನಿಸುತ್ತಾರೆ. ನಿನೆವೆಯವರಂತೆ, ಆತ್ಮಿಕ ವಿಷಯಗಳಲ್ಲಿ ‘ಎಡಗೈ ಬಲಗೈ ತಿಳಿಯದ’ ಅನೇಕರನ್ನು ಅವರು ಭೇಟಿಯಾಗುತ್ತಾರೆ. ಮತ್ತು ಈ ರಾಜ್ಯ ಪ್ರಚಾರಕರು, ಭಿನ್ನ ದೇಶಗಳಿಂದ ಸತ್ಯಾರಾಧಕರನ್ನು ಕೂಡಿಸುವುದರ ಕುರಿತಾದ ಪ್ರವಾದನೆಗಳ ನೆರವೇರಿಕೆಯಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ.​—ಯೆಶಾಯ 2:​2, 3; ಮೀಕ 4:​1-3.

ಕ್ರೈಸ್ತಪ್ರಪಂಚದಿಂದ ಬಂದಿರುವ ಜನರು ಬೈಬಲಿನ ನಿರೀಕ್ಷೆಯ ಸಂದೇಶವನ್ನು ಸ್ವೀಕರಿಸಿರುವಂತೆಯೇ, ಬೇರೆ ಧಾರ್ಮಿಕ ಹಿನ್ನೆಲೆಗಳ ಜನರು ಸಹ ಆ ಸಂದೇಶವನ್ನು ಸ್ವೀಕರಿಸಿದ್ದಾರೆ. ಇದು ವೈಯಕ್ತಿಕವಾಗಿ ನಿಮ್ಮನ್ನು ಹೇಗೆ ಪ್ರಭಾವಿಸಬೇಕು? ನಿಮ್ಮನ್ನೇ ಪ್ರಾಮಾಣಿಕವಾಗಿ ಪರೀಕ್ಷಿಸಿರಿ. ಪೂರ್ವಾಗ್ರಹವು ನಿಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟಿದೆಯೆಂದು ನಿಮಗನಿಸಿದರೆ, ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ಅದನ್ನು ಬೇರುಸಹಿತ ಕಿತ್ತುಹಾಕಿರಿ. * ದೇವರೇ ಅಂಗೀಕರಿಸಲು ಸಿದ್ಧನಿರುವ ಅಂಥ ಜನರನ್ನು ನೀವು ತಿರಸ್ಕರಿಸಬೇಡಿರಿ.​—ಯೋಹಾನ 3:16.

ಇನ್ನೊಂದು ಹಿನ್ನಲೆಯ ಜನರೊಂದಿಗೆ ಮಾತಾಡುವ ಮುಂಚೆ ನಿಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸಿಕೊಳ್ಳಿರಿ. ಅವರ ನಂಬಿಕೆಗಳು, ಅವರ ಚಿಂತೆಗಳು, ಮತ್ತು ಅವರ ಯೋಚನಾಧಾಟಿಯೊಂದಿಗೆ ಪರಿಚಿತರಾಗಿರಿ. ಅನಂತರ ಅವರೊಂದಿಗೆ ನೀವು ಮಾತಾಡಸಾಧ್ಯವಾಗುವಂತೆ, ನಿಮಗೂ ಅವರಿಗೂ ಅಭಿರುಚಿಯುಳ್ಳ ಒಂದು ಸಾಮಾನ್ಯ ವಿಷಯಕ್ಕಾಗಿ ಹುಡುಕಿರಿ. ಬೇರೆಯವರ ಕಡೆಗೆ ಒಳ್ಳೆತನ ಮತ್ತು ಕರುಣೆಯನ್ನು ತೋರಿಸಿರಿ. ವಾದವಿವಾದಗಳಿಂದ ದೂರವಿರಿ, ಮಣಿಯುವವರೂ ಸಕಾರಾತ್ಮಕರೂ ಆಗಿರ್ರಿ. (ಲೂಕ 9:​52-56) ಹೀಗೆ ಮಾಡುವ ಮೂಲಕ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬ . . . ಚಿತ್ತ”ವುಳ್ಳವನಾಗಿರುವ ಯೆಹೋವನನ್ನು ನೀವು ಸಂತೋಷಪಡಿಸುವಿರಿ.​—1 ತಿಮೊಥೆಯ 2:4.

ನಮ್ಮ ಸಭೆಗಳಲ್ಲಿ, ಭಿನ್ನ ಭಿನ್ನ ಹಿನ್ನಲೆಗಳಿಂದ ಬಂದಿರುವ ಜನರನ್ನು ಪಡೆದಿರಲು ನಾವೆಷ್ಟು ಹರ್ಷಿಸುತ್ತೇವೆ! (ಯೆಶಾಯ 56:​6, 7) ಬರೀ ಮೇರಿ, ಜಾನ್‌, ಸುನಿಲ್‌, ಟೊನಿ ಎಂಬ ಹೆಸರುಗಳನ್ನು ಮಾತ್ರ ಕೇಳಿಸಿಕೊಳ್ಳುವ ಬದಲು, ಮಾಮಡೂ, ಜೀಗನ್‌, ರೀಸಾ, ಮತ್ತು ಚಾನ್‌ರಂಥ ಹೆಸರುಗಳನ್ನೂ ಇಂದು ಕೇಳಿಸಿಕೊಳ್ಳುವುದು ಎಷ್ಟು ಉಲ್ಲಾಸಕರವಾಗಿದೆ! ನಿಜವಾಗಿಯೂ “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು” ನಮಗೆ ಇದೆ. (1 ಕೊರಿಂಥ 16:9) ನಿಷ್ಪಕ್ಷಪಾತಿ ದೇವರಾಗಿರುವ ಯೆಹೋವನು, ಎಲ್ಲಾ ದೇಶಗಳ ಜನರನ್ನು ಸ್ವಾಗತಿಸಲು ಕೊಟ್ಟಿರುವ ಆಮಂತ್ರಣವನ್ನು ಹಂಚಲಿಕ್ಕಾಗಿ ನಮ್ಮ ಮುಂದಿಟ್ಟಿರುವ ಸಂದರ್ಭಗಳ ಲಾಭ ಪಡೆಯೋಣ!

[ಪಾದಟಿಪ್ಪಣಿಗಳು]

^ ಪ್ಯಾರ. 19 ಎಚ್ಚರ! ಪತ್ರಿಕೆಯ 1996, ಆಗಸ್ಟ್‌ 8ರ 5-7ನೆಯ ಪುಟಗಳಲ್ಲಿ “ಸಂವಾದವನ್ನು ತಡೆಗಟ್ಟುವ ಅಡ್ಡಗೋಡೆಗಳು” ಎಂಬ ಲೇಖನವನ್ನು ನೋಡಿರಿ.

[ಪುಟ 23ರಲ್ಲಿರುವ ಚಿತ್ರಗಳು]

ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ಪೌಲನು ಎಲ್ಲೆಡೆಯೂ ಜನರೊಂದಿಗೆ ಸುವಾರ್ತೆಯನ್ನು ಹಂಚಿದನು

. . . ಅಥೇನೆಯಲ್ಲಿ

. . . ಫಿಲಿಪ್ಪಿಯಲ್ಲಿ

. . . ಪ್ರಯಾಣಿಸುತ್ತಿರುವಾಗ