ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಲಿಯಲು ವಯಸ್ಸು ತಡೆಯಲ್ಲ

ಕಲಿಯಲು ವಯಸ್ಸು ತಡೆಯಲ್ಲ

ಕಲಿಯಲು ವಯಸ್ಸು ತಡೆಯಲ್ಲ

ಕ್ಸೀನಿಯ ಎಂಬವರು 1897ರಲ್ಲಿ ಹುಟ್ಟಿದರು. ಅವರಿಗೆ 3 ಮಂದಿ ಹೆಣ್ಣುಮಕ್ಕಳು, ಒಬ್ಬ ಮಗ, 15 ಮಂದಿ ಮೊಮ್ಮಕ್ಕಳು ಮತ್ತು 25 ಮಂದಿ ಮರಿಮಕ್ಕಳು ಇದ್ದಾರೆ. ತಮ್ಮ ಜೀವನದಾದ್ಯಂತ ಅವರು ತಮ್ಮ ಹೆತ್ತವರು ಏನನ್ನು ಮಾಡುವಂತೆ ಕಲಿಸಿದರೊ ಅದನ್ನೇ ಮಾಡಿದರು. ಕಪ್ಪು ಸಮುದ್ರ ಹಾಗೂ ಕೌಕಾಸಸ್‌ನ ನಡುವೆಯಿರುವ ಯುದ್ಧ-ಛಿದ್ರ ಅಬ್‌ಖಾಸ್‌ ಗಣರಾಜ್ಯದಿಂದ ಅವರು ನಿರಾಶ್ರಿತರಾಗಿ ಮಾಸ್ಕೋವಿಗೆ ಬಂದಿದ್ದರು. ಆದರೂ ಅವರು ತಮ್ಮ ಜೀವನದೊಂದಿಗೆ, ವಿಶೇಷವಾಗಿ ಅವರು ಯಾವುದನ್ನು ತಮ್ಮ ಪಿತ್ರಾರ್ಜಿತ ನಂಬಿಕೆಯೆಂದು ಕರೆದರೊ ಆ ಧರ್ಮದೊಂದಿಗೆ ತೃಪ್ತರಾಗಿದ್ದರು.

ಇಸವಿ 1993ರಲ್ಲಿ ಕ್ಸೀನಿಯವರ ಮಗಳಾದ ಮೆರೀ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು. ಮೆರೀ ಕ್ಸೀನಿಯವರೊಂದಿಗೆ, ಯೆಹೋವ ದೇವರು ಮತ್ತು ಬೈಬಲಿನ ಕುರಿತಾಗಿ ಮಾತಾಡಲಾರಂಭಿಸಿದಳು, ಆದರೆ ಅವರಿಗೆ ಕಿವಿಗೊಡಲಿಕ್ಕೆ ಮನಸ್ಸೇ ಇರಲಿಲ್ಲ. ಅವರು ಯಾವಾಗಲೂ ತಮ್ಮ ಮಗಳಿಗೆ, “ನಾನು ಹೊಸ ವಿಷಯಗಳನ್ನು ಕಲಿಯುವ ಪ್ರಾಯ ಇದಲ್ಲ” ಎಂದು ಹೇಳುತ್ತಿದ್ದರು.

ಆದರೂ ಯೆಹೋವನ ಸಾಕ್ಷಿಗಳಾಗಿದ್ದ ಅವರ ಮಗಳಾದ ಮೆರೀ, ಮೊಮ್ಮಗನ ಹೆಂಡತಿಯಾದ ಲೊಂಡಾ ಮತ್ತು ಅವರ ಮರಿಮಕ್ಕಳಾದ ನಾನಾ ಮತ್ತು ಸಾಸಾ ಬೈಬಲಿನ ಕುರಿತಾಗಿ ಅವರೊಂದಿಗೆ ಮಾತಾಡುವುದನ್ನು ಮುಂದುವರಿಸಿದರು. 1999ರ ಒಂದು ಸಾಯಂಕಾಲ, ಅವರು ಓದಿದಂಥ ಒಂದು ವಚನವು ಕ್ಸೀನಿಯವರ ಮನಮುಟ್ಟಿತು. ಅದರಲ್ಲಿ ಯೇಸು, ಕರ್ತನ ರಾತ್ರಿ ಭೋಜನವನ್ನು ಸ್ಥಾಪಿಸಿದಾಗ ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದಂಥ ಹೃದಯಸ್ಪರ್ಶಿ ಮಾತುಗಳಿದ್ದವು. (ಲೂಕ 22:​19, 20) ಆ ಸಾಯಂಕಾಲ, ಕ್ಸೀನಿಯವರು ಬೈಬಲ್‌ ಅಧ್ಯಯನವನ್ನು ಆರಂಭಿಸುವ ನಿರ್ಧಾರವನ್ನು ಮಾಡಿದರು. ಆಗ ಅವರ ವಯಸ್ಸು 102 ವರ್ಷವಾಗಿತ್ತು.

ಕ್ಸೀನಿಯವರು ಹೇಳುವುದು, “102 ವರ್ಷಗಳ ಬಾಳ್ವೆಯ ನಂತರ, ಕೊನೆಗೆ ನನಗೆ ಜೀವನದ ಉದ್ದೇಶವೇನೆಂಬದು ಅರ್ಥವಾಯಿತು. ನಮ್ಮ ಅದ್ಭುತ, ಪ್ರೀತಿಯ ದೇವರಾದ ಯೆಹೋವನನ್ನು ಸೇವಿಸುವುದಕ್ಕಿಂತಲೂ ಹೆಚ್ಚು ಉತ್ತಮವಾದದ್ದು ಏನೂ ಇಲ್ಲವೆಂಬುದು ನನಗೆ ಈಗ ಅರಿವಾಗುತ್ತಿದೆ. ನನ್ನ ಮನಸ್ಸು ಈಗಲೂ ಚುರುಕಾಗಿದೆ ಮತ್ತು ನಾನು ಒಳ್ಳೇ ಆರೋಗ್ಯದಿಂದಿದ್ದೇನೆ. ಕನ್ನಡಕಗಳಿಲ್ಲದೇ ನಾನು ಓದಬಲ್ಲೆ ಮತ್ತು ನನ್ನ ಕುಟುಂಬದೊಂದಿಗೆ ಸಕ್ರಿಯಳಾಗಿ ಸಹವಾಸಿಸಲು ಶಕ್ತಳಾಗಿದ್ದೇನೆ.”

ಇಸವಿ 2000, ನವೆಂಬರ್‌ 5ರಂದು ಕ್ಸೀನಿಯವರ ದೀಕ್ಷಾಸ್ನಾನವಾಯಿತು. ಅವರನ್ನುವುದು: “ಈಗ ನಾನು ಯೆಹೋವನನ್ನು ಪ್ರೀತಿಯಿಂದ ಸೇವಿಸಲು ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ. ನನ್ನ ಮನೆಯ ಹತ್ತಿರದಲ್ಲಿರುವ ಬಸ್‌ ನಿಲ್ದಾಣದಲ್ಲಿ ಕುಳಿತು ಪತ್ರಿಕೆಗಳನ್ನು ಮತ್ತು ಟ್ರ್ಯಾಕ್ಟ್‌ಗಳನ್ನು ನೀಡುತ್ತೇನೆ. ಸಂಬಂಧಿಕರು ನನ್ನನ್ನು ಭೇಟಿಯಾಗಲು ಬರುತ್ತಾರೆ ಮತ್ತು ನಾನು ಸಂತೋಷದಿಂದ ಅವರೊಂದಿಗೆ ಯೆಹೋವನ ಕುರಿತಾದ ಸತ್ಯವನ್ನು ಹಂಚಿಕೊಳ್ಳುತ್ತೇನೆ.”

‘ಅವರ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವ ಮತ್ತು ಅವರು ಪುನಃ ಎಳೆಯತನದ ದಿನಗಳನ್ನು ಅನುಭವಿಸುವ’ ಸಮಯಕ್ಕಾಗಿ ಕ್ಸೀನಿಯವರು ಎದುರುನೋಡುತ್ತಿದ್ದಾರೆ. (ಯೋಬ 33:25) ಬೈಬಲಿನಿಂದ ಜೀವನದ ಉದ್ದೇಶವೇನೆಂಬುದನ್ನು ಕಲಿಯಲು ಒಬ್ಬ ಶತಾಯುಷಿಯು ತನ್ನ ವಯಸ್ಸನ್ನು ಒಂದು ತಡೆಯೋಪಾದಿ ಎಣಿಸದಿದ್ದರೆ, ನಿಮ್ಮ ಕುರಿತಾಗಿ ಏನು?