ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀಕ್ಷಾಸ್ನಾನವನ್ನು ಏಕೆ ಮಾಡಿಸಿಕೊಳ್ಳಬೇಕು?

ದೀಕ್ಷಾಸ್ನಾನವನ್ನು ಏಕೆ ಮಾಡಿಸಿಕೊಳ್ಳಬೇಕು?

ದೀಕ್ಷಾಸ್ನಾನವನ್ನು ಏಕೆ ಮಾಡಿಸಿಕೊಳ್ಳಬೇಕು?

“ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ . . . ದೀಕ್ಷಾಸ್ನಾನಮಾಡಿಸಿ.”​—ಮತ್ತಾಯ 28:19.

1, 2. (ಎ) ಕೆಲವು ದೀಕ್ಷಾಸ್ನಾನಗಳನ್ನು ಯಾವ ಪರಿಸ್ಥಿತಿಗಳಲ್ಲಿ ನಡೆಸಲಾಗಿದೆ? (ಬಿ) ದೀಕ್ಷಾಸ್ನಾನದ ಸಂಬಂಧದಲ್ಲಿ ಯಾವ ಪ್ರಶ್ನೆಗಳನ್ನು ಎಬ್ಬಿಸಲಾಗಿದೆ?

ಸ್ಯಾಕ್ಸನ್‌ ಜನರನ್ನು ಸೋಲಿಸಿದ ಫ್ರ್ಯಾಂಕ್‌ ಜನಾಂಗದ ರಾಜ ಶಾರ್ಲ್‌ಮೇನ್‌, ಅವರು ಸಾ.ಶ. 775-77ರಲ್ಲಿ ಸಾಮೂಹಿಕವಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವಂತೆ ಒತ್ತಾಯಪಡಿಸಿದನು. “ಅವರನ್ನು ನಾಮಮಾತ್ರದ ಕ್ರೈಸ್ತತ್ವಕ್ಕೆ ಮತಾಂತರ ಹೊಂದುವಂತೆ ಅವನು ನಿರ್ಬಂಧಿಸಿದನು” ಎಂದು ಇತಿಹಾಸಕಾರ ಜಾನ್‌ ಲಾರ್ಡ್‌ ಬರೆದರು. ಹಾಗೆಯೇ, ಗ್ರೀಕ್‌ ಆರ್ತಡಾಕ್ಸ್‌ ಮತದವಳಾಗಿದ್ದ ಒಬ್ಬ ರಾಜಕುಮಾರಿಯನ್ನು ಸಾ.ಶ. 987ರಲ್ಲಿ ಮದುವೆಯಾದ ರಷ್ಯನ್‌ ರಾಜ Iನೆಯ ವ್ಲಾಡೀಮರ್‌ ತನ್ನ ಪ್ರಜೆಗಳು “ಕ್ರೈಸ್ತರು” ಆಗಬೇಕೆಂದು ನಿರ್ಣಯಿಸಿದನು. ತನ್ನ ಜನರು ಸಾಮೂಹಿಕವಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಇಲ್ಲವೆ ಮರಣಕ್ಕೆ ಸಿದ್ಧರಾಗಬೇಕೆಂದು ಅವನು ಆಜ್ಞಾಪಿಸಿದನು!

2 ಇಂತಹ ದೀಕ್ಷಾಸ್ನಾನಗಳು ಯೋಗ್ಯವಾಗಿದ್ದವೊ? ಅವುಗಳು ನಿಜ ಅರ್ಥದಲ್ಲಿ ದೀಕ್ಷಾಸ್ನಾನಗಳಾಗಿದ್ದವೊ? ಯಾವನಾದರೂ ಸರಿ, ಅವನಿಗೆ ದೀಕ್ಷಾಸ್ನಾನ ಮಾಡಿಸಲ್ಪಡಬೇಕೊ?

ದೀಕ್ಷಾಸ್ನಾನ​—ಹೇಗೆ?

3, 4. ತಲೆಗೆ ನೀರು ಚಿಮುಕಿಸುವುದು ಅಥವಾ ಹೊಯ್ಯುವುದು ಸರಿಯಾದ ಕ್ರೈಸ್ತ ದೀಕ್ಷಾಸ್ನಾನವಲ್ಲವೇಕೆ?

3 ಶಾರ್ಲ್‌ಮೇನನೂ Iನೆಯ ವ್ಲಾಡೀಮರನೂ ಜನರನ್ನು ದೀಕ್ಷಾಸ್ನಾನ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದಾಗ, ಅವರು ದೇವರ ವಾಕ್ಯಕ್ಕೆ ವ್ಯತಿರಿಕ್ತವಾಗಿ ವರ್ತಿಸಿದರು. ವಾಸ್ತವವೇನಂದರೆ, ಶಾಸ್ತ್ರೀಯ ಸತ್ಯ ಕಲಿಸಲ್ಪಟ್ಟಿರದವರು ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಾದರೆ, ಅದನ್ನು ನೀರನ್ನು ಚಿಮುಕಿಸಿ ಮಾಡಿಸಲಿ, ತಲೆಯ ಮೇಲೆ ನೀರು ಹೊಯ್ದು ಮಾಡಿಸಲಿ ಇಲ್ಲವೆ ನೀರಿನಲ್ಲಿ ಮುಳುಗಿಸುವುದರ ಮೂಲಕ ಮಾಡಿಸಲಿ, ಅದರಿಂದ ಯಾವ ಪ್ರಯೋಜನವೂ ಇಲ್ಲ.

4 ನಜರೇತಿನ ಯೇಸು ಸಾ.ಶ. 29ರಲ್ಲಿ ಸ್ನಾನಿಕನಾದ ಯೋಹಾನನ ಬಳಿ ಹೋದಾಗ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಯೋಹಾನನು ಜನರಿಗೆ ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು. ಅವರು ತಾವಾಗಿಯೇ ದೀಕ್ಷಾಸ್ನಾನಕ್ಕಾಗಿ ಅವನ ಬಳಿ ಬರುತ್ತಿದ್ದರು. ಅವರು ಯೊರ್ದನ್‌ ಹೊಳೆಯಲ್ಲಿ ನಿಂತಿದ್ದಾಗ ಅವನು ಸ್ವಲ್ಪ ನೀರನ್ನು ತೆಗೆದು ಅವರ ತಲೆಯ ಮೇಲೆ ಹೊಯ್ಯುತ್ತಿದ್ದನೊ ಅಥವಾ ಚಿಮುಕಿಸುತ್ತಿದ್ದನೊ? ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಕೊಟ್ಟ ನಂತರ ಏನು ಸಂಭವಿಸಿತು? ಯೇಸು ದೀಕ್ಷಾಸ್ನಾನ ಹೊಂದಿದ “ಕೂಡಲೆ ನೀರಿನಿಂದ ಮೇಲಕ್ಕೆ” ಬಂದನೆಂದು ಮತ್ತಾಯನು ತಿಳಿಸುತ್ತಾನೆ. (ಮತ್ತಾಯ 3:16) ಅಂದರೆ ಅವನು ಯೊರ್ದನ್‌ ಹೊಳೆಯ ನೀರಿನ ಕೆಳಗಿದ್ದನು ಅಂದರೆ ನೀರಿನಲ್ಲಿ ಮುಳುಗಿಸಲ್ಪಟ್ಟನು. ಅದೇ ರೀತಿ, ದೇವಭಕ್ತನಾಗಿದ್ದ ಐಥಿಯೋಪ್ಯದ ಕಂಚುಕಿಯು ‘ಜಲರಾಶಿಯಲ್ಲಿ’ ದೀಕ್ಷಾಸ್ನಾನ ಹೊಂದಿದನು. ಯೇಸು ಮತ್ತು ಅವನ ಶಿಷ್ಯರ ದೀಕ್ಷಾಸ್ನಾನಗಳಲ್ಲಿ ನೀರಿನಲ್ಲಿ ಪೂರ್ಣವಾಗಿ ಮುಳುಗುವುದು ಅಗತ್ಯವಿದ್ದುದರಿಂದ ಅಂತಹ ಜಲರಾಶಿಗಳು ಆವಶ್ಯಕವಾಗಿದ್ದವು.​—ಅ. ಕೃತ್ಯಗಳು 8:​36, NW.

5. ಆದಿ ಕ್ರೈಸ್ತರು ಜನರಿಗೆ ಹೇಗೆ ದೀಕ್ಷಾಸ್ನಾನ ಮಾಡಿಸಿದರು?

5 “ದೀಕ್ಷಾಸ್ನಾನ ಮಾಡಿಸು,” “ದೀಕ್ಷಾಸ್ನಾನ,” ಮತ್ತು ಇತ್ಯಾದಿ, ಎಂದು ಭಾಷಾಂತರ ಮಾಡಲ್ಪಟ್ಟಿರುವ ಗ್ರೀಕ್‌ ಪದಗಳು, ನೀರಿನೊಳಗೆ ಮುಳುಗಿಸುವುದು, ಅದ್ದುವುದು, ಇಲ್ಲವೇ ಧುಮುಕುವುದನ್ನು ಸೂಚಿಸುತ್ತದೆ. ಸ್ಮಿಥ್ಸ್‌ ಬೈಬಲ್‌ ಡಿಕ್ಷನೆರಿ ಹೇಳುವುದು: “ಸರಿಯಾಗಿಯೂ ಅಕ್ಷರಾರ್ಥವಾಗಿಯೂ ಹೇಳುವುದಾದರೆ ದೀಕ್ಷಾಸ್ನಾನವು ನೀರಿನಲ್ಲಿ ಮುಳುಗಿಸುವಿಕೆಯಾಗಿದೆ.” ಈ ಕಾರಣದಿಂದ ಕೆಲವು ಬೈಬಲ್‌ ಭಾಷಾಂತರಗಳು ಯೋಹಾನನನ್ನು “ಮುಳುಗಿಸುವವನಾದ ಯೋಹಾನನು,” ಮತ್ತು “ಅದ್ದುವವನಾದ ಯೋಹಾನನು” ಎಂದು ಸೂಚಿಸಿ ಮಾತಾಡುತ್ತವೆ. (ಮತ್ತಾಯ 3:​1, ರಾಥರ್‌ಹ್ಯಾಮ್‌; ಡಯಗ್ಲಾಟ್‌ ಇಂಟರ್‌ಲಿನ್ಯರ್‌) ಅಗಸ್ಟಸ್‌ ನೇಆಂಡರ್‌ ಬರೆದ, ಪ್ರಥಮ ಮೂರು ಶತಮಾನಗಳಲ್ಲಿ ಕ್ರೈಸ್ತ ಧರ್ಮ ಮತ್ತು ಚರ್ಚಿನ ಇತಿಹಾಸ (ಇಂಗ್ಲಿಷ್‌) ಹೇಳುವುದು: “ಆರಂಭದಲ್ಲಿ ದೀಕ್ಷಾಸ್ನಾನವು ನೀರಿನಲ್ಲಿ ಮುಳುಗಿಸುವ ಮೂಲಕ ಕೊಡಲ್ಪಡುತ್ತಿತ್ತು.” ಪ್ರಸಿದ್ಧ ಫ್ರೆಂಚ್‌ ಕೃತಿ, 20ನೆಯ ಶತಮಾನದ ಲಾರೂಸ್‌ (ಪ್ಯಾರಿಸ್‌, 1928) ಹೇಳುವುದು: “ಆದಿ ಕ್ರೈಸ್ತರು ನೀರು ಸಿಗುವಲ್ಲೆಲ್ಲ ಅದರಲ್ಲಿ ಮುಳುಗಿಸಲ್ಪಡುವ ಮೂಲಕ ದೀಕ್ಷಾಸ್ನಾನ ಹೊಂದಿದರು.” ಮತ್ತು ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಆದಿ ಚರ್ಚಿನಲ್ಲಿ ದೀಕ್ಷಾಸ್ನಾನವು ನೀರಿನಲ್ಲಿ ಮುಳುಗಿಸಲ್ಪಡುವುದರ ಮೂಲಕವಾಗಿತ್ತೆಂಬುದು ಸ್ಪಷ್ಟ.” (1967, ಸಂಪುಟ II, ಪುಟ 56) ಆದಕಾರಣ, ಇಂದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ದೀಕ್ಷಾಸ್ನಾನವನ್ನು ಪಡೆಯುವುದು, ಪೂರ್ತಿಯಾಗಿ ನೀರಿನಲ್ಲಿ ಮುಳುಗುವುದನ್ನು ಒಳಗೂಡುವ ಇಷ್ಟಪೂರ್ವಕವಾದ ಹೆಜ್ಜೆಯಾಗಿದೆ.

ದೀಕ್ಷಾಸ್ನಾನಕ್ಕೊಂದು ಹೊಸದಾದ ಕಾರಣ

6, 7. (ಎ) ಯೋಹಾನನು ಯಾವ ಉದ್ದೇಶದಿಂದ ದೀಕ್ಷಾಸ್ನಾನಗಳನ್ನು ಕೊಟ್ಟನು? (ಬಿ) ಯೇಸುವಿನ ಹಿಂಬಾಲಕರ ದೀಕ್ಷಾಸ್ನಾನದಲ್ಲಿ ಹೊಸ ಸಂಗತಿ ಏನಾಗಿತ್ತು?

6 ಯೋಹಾನನು ಕೊಟ್ಟ ದೀಕ್ಷಾಸ್ನಾನಗಳು ಯೇಸುವಿನ ಹಿಂಬಾಲಕರು ಕೊಟ್ಟ ದೀಕ್ಷಾಸ್ನಾನಗಳಿಂದ ಉದ್ದೇಶದಲ್ಲಿ ಭಿನ್ನವಾಗಿದ್ದವು. (ಯೋಹಾನ 4:​1, 2) ಯೋಹಾನನು ಜನರಿಗೆ ಕೊಟ್ಟ ದೀಕ್ಷಾಸ್ನಾನವು, ಅವರು ಧರ್ಮಶಾಸ್ತ್ರದ ವಿರುದ್ಧ ಮಾಡಿದ ಪಾಪಗಳಿಗಾಗಿ ಅವರ ಪಶ್ಚಾತ್ತಾಪದ ಬಹಿರಂಗ ಸಂಕೇತವಾಗಿತ್ತು. * (ಲೂಕ 3:3) ಆದರೆ ಯೇಸುವಿನ ಹಿಂಬಾಲಕರ ದೀಕ್ಷಾಸ್ನಾನದಲ್ಲಿ ಏನೊ ಹೊಸ ವಿಷಯವೊಂದು ಒಳಗೊಂಡಿತ್ತು. ಸಾ.ಶ. 33ರ ಪಂಚಾಶತ್ತಮದಲ್ಲಿ ಅಪೊಸ್ತಲ ಪೇತ್ರನು ತನ್ನ ಕೇಳುಗರನ್ನು ಉತ್ತೇಜಿಸಿದ್ದು: “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ.” (ಅ. ಕೃತ್ಯಗಳು 2:​37-41) ಇದನ್ನು ಪೇತ್ರನು ಯೆಹೂದ್ಯರನ್ನೂ ಮತಾಂತರ ಹೊಂದಿದವರನ್ನೂ ಸಂಬೋಧಿಸಿ ಹೇಳಿದ್ದರೂ, ಧರ್ಮಶಾಸ್ತ್ರದ ವಿರುದ್ಧ ಅವರು ಮಾಡಿದ ಪಾಪಗಳಿಗಾಗಿ ಪಶ್ಚಾತ್ತಾಪವನ್ನು ತೋರಿಸುವ ದೀಕ್ಷಾಸ್ನಾನದ ಸಂಬಂಧದಲ್ಲಿ ಅವನು ಮಾತಾಡುತ್ತಿದ್ದದ್ದೂ ಅಲ್ಲ, ಯೇಸುವಿನ ಹೆಸರಿನಲ್ಲಿ ಮಾಡಲ್ಪಡುವ ದೀಕ್ಷಾಸ್ನಾನವು ಪಾಪಗಳನ್ನು ತೊಳೆಯುತ್ತದೆಂಬ ಅರ್ಥದಲ್ಲಿ ಮಾತಾಡಿದ್ದೂ ಅಲ್ಲ.​—ಅ. ಕೃತ್ಯಗಳು 2:10.

7 ಆ ಸಂದರ್ಭದಲ್ಲಿ, ಪೇತ್ರನು ‘ಪರಲೋಕರಾಜ್ಯದ ಬೀಗದ ಕೈಗಳಲ್ಲಿ’ ಮೊದಲನೆಯದ್ದನ್ನು ಉಪಯೋಗಿಸಿದನು. ಯಾವ ಉದ್ದೇಶಕ್ಕಾಗಿ? ಪರಲೋಕರಾಜ್ಯವನ್ನು ಪ್ರವೇಶಿಸಲು ತನ್ನ ಕೇಳುಗರಿಗಿದ್ದ ಸದವಕಾಶದ ಸಂಬಂಧದಲ್ಲಿ ಅವರಿಗೆ ಜ್ಞಾನವನ್ನು ಕೊಡಲಿಕ್ಕಾಗಿಯೇ. (ಮತ್ತಾಯ 16:19) ಯೆಹೂದ್ಯರು ಮೆಸ್ಸೀಯನಾಗಿದ್ದ ಯೇಸುವನ್ನು ತ್ಯಜಿಸಿದ್ದ ಕಾರಣ, ದೇವರ ಕ್ಷಮಾಪಣೆಯನ್ನು ಕೋರಿ ಪಡೆಯಲಿಕ್ಕಾಗಿ, ಅವರು ಪಶ್ಚಾತ್ತಾಪಪಟ್ಟು ಯೇಸುವಿನಲ್ಲಿ ನಂಬಿಕೆಯನ್ನಿಡುವುದು ಒಂದು ಹೊಸ ಹಾಗೂ ಮಹತ್ವದ ಸಂಗತಿಯಾಗಿತ್ತು. ಯೇಸು ಕ್ರಿಸ್ತನ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಲ್ಪಡುವ ಮೂಲಕ ಅವರು ತಮ್ಮ ನಂಬಿಕೆಯ ವಿಷಯದಲ್ಲಿ ಬಹಿರಂಗ ಸಾಕ್ಷ್ಯವನ್ನು ಕೊಡಸಾಧ್ಯವಿತ್ತು. ಈ ರೀತಿಯಲ್ಲಿ ದೇವರಿಗೆ ಕ್ರಿಸ್ತನ ಮೂಲಕ ಮಾಡಿದ ವೈಯಕ್ತಿಕ ಸಮರ್ಪಣೆಯನ್ನು ಅವರು ಸಂಕೇತಿಸಲಿದ್ದರು. ಇಂದು ಯಾರು ದೈವಿಕ ಅನುಗ್ರಹವನ್ನು ಬಯಸುತ್ತಾರೊ ಅವರೆಲ್ಲರೂ ಅದೇ ರೀತಿಯ ನಂಬಿಕೆಯನ್ನು ವ್ಯಕ್ತಪಡಿಸಿ, ಯೆಹೋವ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು, ಸರ್ವೋನ್ನತನಿಗೆ ತಾವು ಮಾಡಿರುವ ಷರತ್ತುರಹಿತ ಸಮರ್ಪಣೆಯ ಸಂಕೇತವಾಗಿ ಕ್ರೈಸ್ತ ದೀಕ್ಷಾಸ್ನಾನವನ್ನು ಹೊಂದತಕ್ಕದ್ದು.

ನಿಷ್ಕೃಷ್ಟ ಜ್ಞಾನ ಅಗತ್ಯ

8. ಕ್ರೈಸ್ತ ದೀಕ್ಷಾಸ್ನಾನಕ್ಕೆ ಎಲ್ಲರೂ ಏಕೆ ಅರ್ಹರಲ್ಲ?

8 ಕ್ರೈಸ್ತ ದೀಕ್ಷಾಸ್ನಾನಕ್ಕೆ ಎಲ್ಲರೂ ಅರ್ಹರಲ್ಲ. ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ದೀಕ್ಷಾಸ್ನಾನ ಹೊಂದುವುದಕ್ಕೆ ಮೊದಲು ಜನರಿಗೆ, ಯೇಸು ‘ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಉಪದೇಶಮಾಡಿಸಬೇಕು.’ ಆದಕಾರಣ, ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿಸಿದ ನಂಬಿಕೆ ಇಲ್ಲದವರಿಗೆ ಕೊಡಲ್ಪಡುವ ಒತ್ತಾಯದ ದೀಕ್ಷಾಸ್ನಾನಗಳು ಬೆಲೆಯಿಲ್ಲದ್ದಾಗಿರುತ್ತವೆ ಮಾತ್ರವಲ್ಲ, ಯೇಸು ತನ್ನ ನಿಜ ಹಿಂಬಾಲಕರಿಗೆ ಕೊಟ್ಟ ಆಜ್ಞೆಗೂ ವಿರುದ್ಧವಾಗಿವೆ.​—ಇಬ್ರಿಯ 11:6.

9. ‘ತಂದೆಯ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

9‘ತಂದೆಯ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥವೇನು? ದೀಕ್ಷಾಸ್ನಾನದ ಅಭ್ಯರ್ಥಿಯು ನಮ್ಮ ಸ್ವರ್ಗೀಯ ಪಿತನ ಸ್ಥಾನವನ್ನೂ ಅಧಿಕಾರವನ್ನೂ ಒಪ್ಪಿಕೊಳ್ಳುತ್ತಾನೆಂದು ಇದರ ಅರ್ಥ. ಹೀಗೆ, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರನ್ನು “ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು,” ವಿಶ್ವ ಪರಮಾಧಿಕಾರಿಯೆಂದು ಒಪ್ಪಿಕೊಳ್ಳಲಾಗುತ್ತದೆ.​—ಕೀರ್ತನೆ 83:18; ಯೆಶಾಯ 40:28; ಅ. ಕೃತ್ಯಗಳು 4:24.

10. ‘ಮಗನ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

10‘ಮಗನ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥ, ದೇವರ ಏಕಜಾತ ಪುತ್ರನಾದ ಯೇಸುವಿನ ಸ್ಥಾನ ಮತ್ತು ಅಧಿಕಾರವನ್ನು ಒಪ್ಪಿಕೊಳ್ಳುವುದಾಗಿದೆ. (1 ಯೋಹಾನ 4:9) ದೀಕ್ಷಾಸ್ನಾನಕ್ಕೆ ಅರ್ಹರಾಗುವವರು ಯೇಸುವನ್ನು, ದೇವರು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡು ಕೊಟ್ಟವನಾಗಿ’ ಅಂಗೀಕರಿಸುತ್ತಾರೆ. (ಮತ್ತಾಯ 20:28; 1 ತಿಮೊಥೆಯ 2:​5, 6) ದೀಕ್ಷಾಸ್ನಾನದ ಅಭ್ಯರ್ಥಿಗಳು, ದೇವರು ತನ್ನ ಪುತ್ರನನ್ನು ಏರಿಸಿರುವ “ಅತ್ಯುನ್ನತ ಸ್ಥಾನ”ವನ್ನು ಸಹ ಒಪ್ಪಿಕೊಳ್ಳಬೇಕು.​—ಫಿಲಿಪ್ಪಿ 2:​8-11; ಪ್ರಕಟನೆ 19:16.

11. ‘ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

11‘ಪವಿತ್ರಾತ್ಮದ ಹೆಸರಿನಲ್ಲಿ’ (NW) ದೀಕ್ಷಾಸ್ನಾನ ಹೊಂದುವುದರ ವಿಶೇಷತೆ ಏನು? ಪವಿತ್ರಾತ್ಮವು ಯೆಹೋವನ ಕಾರ್ಯಕಾರಿ ಶಕ್ತಿಯಾಗಿದ್ದು ಆತನ ಉದ್ದೇಶಕ್ಕೆ ಹೊಂದಿಕೆಯಾಗಿ ವಿವಿಧ ವಿಧಗಳಲ್ಲಿ ಉಪಯೋಗಿಸಲ್ಪಡುತ್ತದೆಂಬ ಸಂಗತಿಯನ್ನು ದೀಕ್ಷಾಸ್ನಾನದ ಅಭ್ಯರ್ಥಿಗಳು ಒಪ್ಪಿಕೊಳ್ಳುತ್ತಾರೆಂಬುದನ್ನು ಇದು ಸೂಚಿಸುತ್ತದೆ. (ಆದಿಕಾಂಡ 1:2; 2 ಸಮುವೇಲ 23:​1, 2; 2 ಪೇತ್ರ 1:21) ದೀಕ್ಷಾಸ್ನಾನಕ್ಕೆ ಯೋಗ್ಯರಾಗುವವರು, ಪವಿತ್ರಾತ್ಮವು ತಮಗೆ “ದೇವರ ಅಗಾಧವಾದ ವಿಷಯಗಳನ್ನು” ತಿಳಿದುಕೊಳ್ಳಲು, ರಾಜ್ಯವನ್ನು ಸಾರುವ ಕೆಲಸವನ್ನು ಮುಂದುವರಿಸಲು ಮತ್ತು “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳಾದ ಆತ್ಮದ ಫಲಗಳನ್ನು ತೋರಿಸಲು ಸಹಾಯ ಮಾಡುತ್ತದೆಂದೂ ಒಪ್ಪಿಕೊಳ್ಳುತ್ತಾರೆ.​—1 ಕೊರಿಂಥ 2:10; ಗಲಾತ್ಯ 5:​22, 23; ಯೋವೇಲ 2:​28, 29.

ಪಶ್ಚಾತ್ತಾಪ ಮತ್ತು ಪರಿವರ್ತನೆಯ ಪ್ರಾಧಾನ್ಯ

12. ಕ್ರೈಸ್ತ ದೀಕ್ಷಾಸ್ನಾನವು ಪಶ್ಚಾತ್ತಾಪದೊಂದಿಗೆ ಜೊತೆಗೂಡಿರುವುದು ಹೇಗೆ?

12 ಪಾಪರಹಿತನಾದ ಯೇಸುವನ್ನು ಬಿಟ್ಟರೆ, ದೀಕ್ಷಾಸ್ನಾನವು ಪಶ್ಚಾತ್ತಾಪದೊಂದಿಗೆ ಜೊತೆಗೂಡಿರುವ ದೇವಾನುಮೋದಿತ ಸಂಕೇತವಾಗಿದೆ. ನಾವು ಪಶ್ಚಾತ್ತಾಪಪಡುವಾಗ, ಮಾಡಿರುವ ಅಥವಾ ಮಾಡಲು ತಪ್ಪಿರುವಂಥ ವಿಷಯಗಳಿಗಾಗಿ ಆಳವಾದ ವಿಷಾದ ಅಥವಾ ಪರಿತಾಪವನ್ನು ಅನುಭವಿಸುತ್ತೇವೆ. ದೇವರನ್ನು ಮೆಚ್ಚಿಸಲು ಬಯಸಿದ ಪ್ರಥಮ ಶತಮಾನದ ಯೆಹೂದ್ಯರು ಕ್ರಿಸ್ತನ ವಿರುದ್ಧ ಮಾಡಿದ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕಾಗಿತ್ತು. (ಅ. ಕೃತ್ಯಗಳು 3:​11-19) ಕೊರಿಂಥದ ಕೆಲವು ಅನ್ಯ ವಿಶ್ವಾಸಿಗಳು ಹಾದರ, ವಿಗ್ರಹಾರಾಧನೆ, ಕಳ್ಳತನ ಮತ್ತು ಇತರ ಗಂಭೀರ ಪಾಪಗಳ ವಿಷಯದಲ್ಲಿ ಪಶ್ಚಾತ್ತಾಪಪಟ್ಟರು. ಅವರ ಪಶ್ಚಾತ್ತಾಪದ ಕಾರಣ, ಅವರು ಯೇಸುವಿನ ರಕ್ತದಲ್ಲಿ ‘ಶುದ್ಧರಾಗಿ ತೊಳೆಯಲ್ಪಟ್ಟರು,’ ‘ಪವಿತ್ರೀಕರಿಸಲ್ಪಟ್ಟರು,’ ಅಥವಾ ದೇವರ ಸೇವೆಗಾಗಿ ಮೀಸಲಾಗಿಡಲ್ಪಟ್ಟವರಾದರು ಮತ್ತು ಕ್ರಿಸ್ತನ ಹೆಸರಿನಲ್ಲಿ ಹಾಗೂ ದೇವರಾತ್ಮದಿಂದ “ನೀತಿವಂತರೆಂದು ಘೋಷಿಸಲ್ಪಟ್ಟರು.” (1 ಕೊರಿಂಥ 6:​9-11, NW) ಶುದ್ಧ ಮನಸ್ಸಾಕ್ಷಿಯನ್ನು ಮತ್ತು ಪಾಪದ ಕಾರಣ ಬರುವ ಅಪರಾಧಿ ಪ್ರಜ್ಞೆಯಿಂದ ದೇವದತ್ತ ಉಪಶಮನವನ್ನು ಪಡೆಯಲು ಪಶ್ಚಾತ್ತಾಪವು ಮಹತ್ವವುಳ್ಳ ಹೆಜ್ಜೆಯಾಗಿದೆ.​—1 ಪೇತ್ರ 3:21.

13. ದೀಕ್ಷಾಸ್ನಾನದ ಸಂಬಂಧದಲ್ಲಿ ನಡೆಯುವ ಪರಿವರ್ತನೆಯಲ್ಲಿ ಏನು ಒಳಗೊಂಡಿದೆ?

13 ನಾವು ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಹೊಂದುವ ಮೊದಲು ಪರಿವರ್ತನೆಯೂ ಸಂಭವಿಸಬೇಕು. ಪರಿವರ್ತನೆಯು, ಕ್ರಿಸ್ತ ಯೇಸುವನ್ನು ಅನುಸರಿಸಲು ಸಂಪೂರ್ಣ ಹೃದಯದ ನಿರ್ಣಯವನ್ನು ಮಾಡಿರುವವನು ಒತ್ತಾಯವಿಲ್ಲದೆ ಇಷ್ಟಪೂರ್ವಕವಾಗಿ ಮಾಡಿರುವ ಕ್ರಿಯೆಯಾಗಿದೆ. ಇಂಥ ಜನರು ತಮ್ಮ ಹಿಂದಿನ ತಪ್ಪಾದ ಜೀವನಕ್ರಮವನ್ನು ತ್ಯಜಿಸಿ ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡಲು ನಿಶ್ಚಯಿಸುತ್ತಾರೆ. ಶಾಸ್ತ್ರವಚನಗಳಲ್ಲಿ, ಪರಿವರ್ತನೆಗೆ ಸಂಬಂಧಿಸಿರುವ ಹೀಬ್ರು ಮತ್ತು ಗ್ರೀಕ್‌ ಪದಗಳಿಗೆ ‘ಹಿಂದೆ ತಿರುಗುವ’ ಅರ್ಥವಿದೆ. ಈ ಕ್ರಿಯೆಯು ತಪ್ಪಾದ ಮಾರ್ಗದಿಂದ ದೇವರ ಕಡೆಗೆ ತಿರುಗುವುದನ್ನು ಸೂಚಿಸುತ್ತದೆ. (1 ಅರಸು 8:​33, 34) ಪರಿವರ್ತನೆಗೆ, “ಮಾನಸಾಂತರಕ್ಕೆ [“ಪಶ್ಚಾತ್ತಾಪಕ್ಕೆ,” NW] ಯೋಗ್ಯವಾದ ಕೃತ್ಯಗಳನ್ನು” ಮಾಡುವುದು ಅಗತ್ಯ. (ಅ. ಕೃತ್ಯಗಳು 26:20) ನಾವು ಸುಳ್ಳಾರಾಧನೆಯನ್ನು ತ್ಯಜಿಸಬೇಕು, ದೇವರ ಆಜ್ಞಾನುಸಾರ ವರ್ತಿಸಬೇಕು ಮತ್ತು ಯೆಹೋವನಿಗೆ ಮಾತ್ರ ಮೀಸಲಾಗಿರುವ ಭಕ್ತಿಯನ್ನು ತೋರಿಸಬೇಕೆಂದು ಇದು ಕೇಳಿಕೊಳ್ಳುತ್ತದೆ. (ಧರ್ಮೋಪದೇಶಕಾಂಡ 30:​2, 8-10; 1 ಸಮುವೇಲ 7:3) ಈ ಪರಿವರ್ತನೆಯು ನಮ್ಮ ಯೋಚನೆಗಳಲ್ಲಿ, ಗುರಿಗಳಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ತರುತ್ತದೆ. (ಯೆಹೆಜ್ಕೇಲ 18:31) ದೇವಭಕ್ತಿರಹಿತ ಗುಣಗಳ ಸ್ಥಾನವನ್ನು ನೂತನ ವ್ಯಕ್ತಿತ್ವವು ಆವರಿಸುವಾಗ ನಾವು ‘ತಿರುಗಿಕೊಳ್ಳುತ್ತೇವೆ.’​—ಅ. ಕೃತ್ಯಗಳು 3:19; ಎಫೆಸ 4:​20-24; ಕೊಲೊಸ್ಸೆ 3:​5-14.

ಸಂಪೂರ್ಣ ಹೃದಯದ ಸಮರ್ಪಣೆ ಅತ್ಯಗತ್ಯ

14. ಯೇಸುವಿನ ಹಿಂಬಾಲಕರ ಸಮರ್ಪಣೆಯು ಏನನ್ನು ಸೂಚಿಸುತ್ತದೆ?

14 ಯೇಸುವಿನ ಹಿಂಬಾಲಕರ ದೀಕ್ಷಾಸ್ನಾನಕ್ಕೆ ಮೊದಲು ದೇವರಿಗೆ ಸಂಪೂರ್ಣ ಹೃದಯದ ಸಮರ್ಪಣೆಯೂ ನಡೆಯಬೇಕು. ಸಮರ್ಪಣೆಯು ಪವಿತ್ರ ಉದ್ದೇಶಕ್ಕಾಗಿ ಮೀಸಲಾಗಿಡುವುದನ್ನು ಸೂಚಿಸುತ್ತದೆ. ಈ ಹೆಜ್ಜೆಯು ಎಷ್ಟು ಪ್ರಾಮುಖ್ಯವೆಂದರೆ, ನಾವು ಸದಾಕಾಲಕ್ಕೂ ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ತೋರಿಸುವೆವೆಂಬ ನಮ್ಮ ನಿರ್ಣಯವನ್ನು ಪ್ರಾರ್ಥನೆಯಲ್ಲಿ ಆತನಿಗೆ ವ್ಯಕ್ತಪಡಿಸಬೇಕು. (ಧರ್ಮೋಪದೇಶಕಾಂಡ 5:9) ನಮ್ಮ ಸಮರ್ಪಣೆಯು ಒಂದು ಕೆಲಸಕ್ಕಾಗಲಿ ಒಬ್ಬ ಮಾನವನಿಗಾಗಲಿ ಆಗಿರದೆ ದೇವರಿಗೇ ಆಗಿರುತ್ತದೆಂಬುದು ನಿಶ್ಚಯ.

15. ದೀಕ್ಷಾಸ್ನಾನದ ಅಭ್ಯರ್ಥಿಗಳು ನೀರಿನಲ್ಲಿ ಮುಳುಗಿಸಲ್ಪಡುವುದು ಏಕೆ?

15 ನಾವು ಕ್ರಿಸ್ತನ ಮೂಲಕ ದೇವರಿಗೆ ನಮ್ಮ ಜೀವವನ್ನು ಸಮರ್ಪಿಸಿಕೊಳ್ಳುವಾಗ, ಶಾಸ್ತ್ರವಚನಗಳಲ್ಲಿ ಹೇಳಿರುವಂತೆ, ನಮ್ಮ ಜೀವವನ್ನು ದೇವರ ಚಿತ್ತವನ್ನು ಮಾಡಲು ಉಪಯೋಗಿಸುವೆವೆಂಬ ದೃಢನಿಶ್ಚಯವನ್ನು ವ್ಯಕ್ತಪಡಿಸುತ್ತೇವೆ. ಆ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನದ ಅಭ್ಯರ್ಥಿಗಳು, ಯೇಸು ದೇವರಿಗೆ ತನ್ನನ್ನು ಅರ್ಪಿಸಿಕೊಳ್ಳುವುದನ್ನು ಸೂಚಿಸಲು ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನ ಹೊಂದಿದಂತೆಯೇ ನೀರಿನಲ್ಲಿ ಮುಳುಗಿಸಲ್ಪಡುತ್ತಾರೆ. (ಮತ್ತಾಯ 3:13) ಆ ಪ್ರಮುಖವಾದ ಸಂದರ್ಭದಲ್ಲಿ ಯೇಸು ಪ್ರಾರ್ಥಿಸುತ್ತಿದ್ದದ್ದು ಗಮನಾರ್ಹವಾದ ವಿಚಾರವಾಗಿದೆ.​—ಲೂಕ 3:​21, 22.

16. ಜನರ ದೀಕ್ಷಾಸ್ನಾನವನ್ನು ನೋಡುವಾಗ, ನಾವು ಸಂತೋಷವನ್ನು ಯೋಗ್ಯ ರೀತಿಯಲ್ಲಿ ಹೇಗೆ ತೋರಿಸಬಲ್ಲೆವು?

16 ಯೇಸುವಿನ ದೀಕ್ಷಾಸ್ನಾನವು ಗಂಭೀರವಾದ ಸಂದರ್ಭವಾಗಿದ್ದರೂ ಸಂತೋಷದ ಸಂದರ್ಭವೂ ಆಗಿತ್ತು. ಆಧುನಿಕ ಕ್ರೈಸ್ತ ದೀಕ್ಷಾಸ್ನಾನವೂ ಅದೇ ರೀತಿಯಲ್ಲಿದೆ. ಜನರು ದೇವರಿಗೆ ಸಮರ್ಪಿಸಿಕೊಳ್ಳುವುದರ ಸೂಚನೆಯನ್ನು ನಾವು ನೋಡುವಾಗ, ನಮ್ಮ ಸಂತೋಷವನ್ನು ಗೌರವಯುತವಾದ ಚಪ್ಪಾಳೆ ಸಮ್ಮತಿಯಿಂದ ಮತ್ತು ಹೃತ್ಪೂರ್ವಕವಾದ ಪ್ರಶಂಸೆಯಿಂದ ತೋರಿಸಬಹುದು. ಆದರೆ ಈ ನಂಬಿಕೆ-ವ್ಯಕ್ತಪಡಿಸುವ ಕಾರ್ಯದ ಪಾವಿತ್ರ್ಯದ ಕಾರಣ ಜಯಕಾರಗಳೊ, ಸೀಟಿಹಾಕುವುದೊ, ಅಥವಾ ಇಂತಹ ಇತರ ವರ್ತನೆಗಳಿಂದ ನಾವು ದೂರವಿರುವೆವು. ನಮ್ಮ ಸಂತೋಷವನ್ನು ನಾವು ಘನತೆಯಿಂದ ತೋರಿಸುವೆವು.

17, 18. ವ್ಯಕ್ತಿಗಳು ದೀಕ್ಷಾಸ್ನಾನಕ್ಕೆ ಯೋಗ್ಯರೊ ಅಲ್ಲವೊ ಎಂಬುದನ್ನು ನಿಶ್ಚಯಿಸಲು ಯಾವುದು ಸಹಾಯಮಾಡುತ್ತದೆ?

17 ಶಿಶುಗಳ ಮೇಲೆ ನೀರನ್ನು ಚಿಮುಕಿಸಿಯೊ, ಶಾಸ್ತ್ರವಚನಗಳ ಜ್ಞಾನವಿಲ್ಲದ ಜನಸಮೂಹಗಳನ್ನು ಒತ್ತಾಯದಿಂದಲೊ ದೀಕ್ಷಾಸ್ನಾನ ಮಾಡಿಸುವವರಿಗೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳು ಯಾರನ್ನೂ ದೀಕ್ಷಾಸ್ನಾನ ಮಾಡಿಸಿಕೊಳ್ಳುವಂತೆ ಒತ್ತಾಯಿಸುವುದಿಲ್ಲ. ವಾಸ್ತವದಲ್ಲಿ, ಆತ್ಮಿಕವಾದ ಯೋಗ್ಯತೆಯಿಲ್ಲದವರಿಗೆ ಅವರು ದೀಕ್ಷಾಸ್ನಾನವನ್ನು ಕೊಡುವುದೇ ಇಲ್ಲ. ಒಬ್ಬನು ಸುವಾರ್ತೆಯ ಅಸ್ನಾತ ಸಾರುವವನಾಗುವ ಮುಂಚೆಯೂ, ಅವನಿಗೆ ಮೂಲ ಬೈಬಲ್‌ ಬೋಧನೆಗಳ ಅರ್ಥ ತಿಳಿದಿದೆಯೊ ಇಲ್ಲವೊ, ಅವನು ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದಾನೊ ಇಲ್ಲವೊ ಎಂಬುದನ್ನು ಕ್ರೈಸ್ತ ಹಿರಿಯರು ನಿಶ್ಚಯಮಾಡಿಕೊಂಡು, “ನಿಮಗೆ ನಿಜವಾಗಿಯೂ ಯೆಹೋವನ ಸಾಕ್ಷಿಯಾಗುವ ಅಪೇಕ್ಷೆಯಿದೆಯೆ?” ಎಂಬ ಪ್ರಶ್ನೆಗೆ ಅವನ ಉತ್ತರವು ಹೌದು ಎಂದಾಗಿದೆಯೊ ಎಂಬುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ.

18 ಹೆಚ್ಚಿನ ಸಂದರ್ಭಗಳಲ್ಲಿ, ರಾಜ್ಯ ಸಾರುವ ಕೆಲಸದಲ್ಲಿ ವ್ಯಕ್ತಿಗಳು ಅರ್ಥಪೂರ್ಣವಾಗಿ ಭಾಗವಹಿಸುತ್ತಿದ್ದು, ದೀಕ್ಷಾಸ್ನಾನ ಹೊಂದುವ ಬಯಕೆಯನ್ನು ವ್ಯಕ್ತಪಡಿಸುವಾಗ ಮಾತ್ರ ಕ್ರೈಸ್ತ ಹಿರಿಯರು ಅವರು ಯೆಹೋವನಿಗೆ ಸಮರ್ಪಿಸಿಕೊಂಡಿರುವ ಮತ್ತು ದೀಕ್ಷಾಸ್ನಾನಕ್ಕಿರುವ ದೈವಿಕ ಆವಶ್ಯಕತೆಗಳನ್ನು ತಲಪಿರುವ ವಿಶ್ವಾಸಿಗಳಾಗಿದ್ದಾರೊ ಇಲ್ಲವೊ ಎಂಬುದನ್ನು ನಿಶ್ಚಯ ಮಾಡಿಕೊಳ್ಳಲಿಕ್ಕಾಗಿ ಅವರೊಂದಿಗೆ ಚರ್ಚೆ ನಡೆಸುತ್ತಾರೆ. (ಅ. ಕೃತ್ಯಗಳು 4:4; 18:8) ಬೈಬಲ್‌ ಬೋಧನೆಗಳ ಬಗ್ಗೆ 100ಕ್ಕಿಂತಲೂ ಹೆಚ್ಚು ಪ್ರಶ್ನೆಗಳಿಗೆ ಆ ವ್ಯಕ್ತಿಯು ಕೊಡುವ ಉತ್ತರಗಳು, ಅವರು ದೀಕ್ಷಾಸ್ನಾನಕ್ಕಾಗಿರುವ ಶಾಸ್ತ್ರೀಯ ಆವಶ್ಯಕತೆಗಳನ್ನು ತಲಪಿದ್ದಾರೊ ಇಲ್ಲವೊ ಎಂಬುದನ್ನು ನಿರ್ಧರಿಸಲು ಹಿರಿಯರಿಗೆ ಸಹಾಯಮಾಡುತ್ತದೆ. ಕೆಲವರು ಇದಕ್ಕೆ ಯೋಗ್ಯರಾಗಿಲ್ಲದಿರುವುದರಿಂದ ಅವರಿಗೆ ಕ್ರೈಸ್ತ ದೀಕ್ಷಾಸ್ನಾನವನ್ನು ಕೊಡಲಾಗುವುದಿಲ್ಲ.

ಬೇಕಾದ ಹೆಜ್ಜೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಏನಾದರೂ ಹಿಡಿದಿಡುತ್ತಿದೆಯೆ?

19. ಯೋಹಾನ 6:44ರ ವೀಕ್ಷಣದಲ್ಲಿ, ಯೇಸುವಿನ ಜೊತೆಬಾಧ್ಯಸ್ಥರು ಯಾರಾಗಿರುವರು?

19 ದೊಡ್ಡ ಸಂಖ್ಯೆಯಲ್ಲಿ ದೀಕ್ಷಾಸ್ನಾನಕ್ಕೆ ಒತ್ತಾಯಿಸಲ್ಪಟ್ಟವರಿಗೆ ಅವರು ಸತ್ತಾಗ ಸ್ವರ್ಗಕ್ಕೆ ಹೋಗುತ್ತಾರೆಂದು ಹೇಳಲಾಗಿದ್ದಿರಬಹುದು. ಆದರೆ ತನ್ನ ಹೆಜ್ಜೆಜಾಡಿನಲ್ಲಿ ನಡೆಯುವವರ ಸಂಬಂಧದಲ್ಲಿ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನ ಜೊತೆಬಾಧ್ಯಸ್ಥರಾಗಿರಲು ಯೆಹೋವನು 1,44,000 ಮಂದಿಯನ್ನು ಕ್ರಿಸ್ತನ ಬಳಿಗೆ ಎಳೆದಿರುತ್ತಾನೆ. ಒತ್ತಾಯದಿಂದ ಮಾಡಲ್ಪಟ್ಟ ದೀಕ್ಷಾಸ್ನಾನವು ದೇವರ ಏರ್ಪಾಡಿನಲ್ಲಿರುವ ಆ ಮಹಿಮಾಭರಿತವಾದ ಸ್ಥಾನಕ್ಕೆ ಯಾರನ್ನೂ ಶುದ್ಧೀಕರಿಸಿರುವುದಿಲ್ಲವೆಂಬುದು ಖಂಡಿತ.​—ರೋಮಾಪುರ 8:​14-17; 2 ಥೆಸಲೊನೀಕ 2:13; ಪ್ರಕಟನೆ 14:1.

20. ಇನ್ನೂ ದೀಕ್ಷಾಸ್ನಾನ ಹೊಂದಿಲ್ಲದ ಕೆಲವರಿಗೆ ಯಾವುದು ಸಹಾಯಮಾಡೀತು?

20 ವಿಶೇಷವಾಗಿ, 1930ಗಳ ಮಧ್ಯಭಾಗದಿಂದ ಹಿಡಿದು, “ಮಹಾ ಸಂಕಟ”ವನ್ನು ಪಾರಾಗಿ ಉಳಿಯುವ ಮತ್ತು ಭೂಮಿಯಲ್ಲಿ ನಿತ್ಯಜೀವ ಪಡೆಯುವ ನಿರೀಕ್ಷೆಯಿರುವ ಜನರು ದೊಡ್ಡ ಸಂಖ್ಯೆಯಲ್ಲಿ ಯೇಸುವಿನ “ಬೇರೆ ಕುರಿ”ಗಳ ವರ್ಗಕ್ಕೆ ಸೇರಿದ್ದಾರೆ. (ಪ್ರಕಟನೆ 7:​9, 14, NW; ಯೋಹಾನ 10:16) ಅವರು ತಮ್ಮ ಜೀವನಗಳನ್ನು ದೇವರ ವಾಕ್ಯಕ್ಕೆ ಹೊಂದಿಸಿಕೊಂಡಿರುವುದರಿಂದಲೂ ದೇವರನ್ನು ‘ತಮ್ಮ ಹೃದಯ, ಪ್ರಾಣ, ಶಕ್ತಿ ಮತ್ತು ಬುದ್ಧಿಯಿಂದ’ ಪ್ರೀತಿಸುವುದರಿಂದಲೂ ದೀಕ್ಷಾಸ್ನಾನಕ್ಕೆ ಯೋಗ್ಯರಾಗುತ್ತಾರೆ. (ಲೂಕ 10:​25-28) ಯೆಹೋವನ ಸಾಕ್ಷಿಗಳು ‘ದೇವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ’ ಎಂಬುದು ಕೆಲವರ ಗ್ರಹಿಕೆಗೆ ಬರುತ್ತದಾದರೂ, ಅವರಿನ್ನೂ ಯೇಸುವಿನ ಮಾದರಿಯನ್ನು ಅನುಸರಿಸಿರುವುದೂ ಇಲ್ಲ, ಯೆಹೋವನಿಗೆ ತಮ್ಮ ನಿಜ ಪ್ರೀತಿಯ ಮತ್ತು ಸಂಪೂರ್ಣ ಭಕ್ತಿಯ ಬಹಿರಂಗ ಸಾಕ್ಷ್ಯವನ್ನು ತಮ್ಮ ದೀಕ್ಷಾಸ್ನಾನದ ಮೂಲಕ ತೋರಿಸಿರುವುದೂ ಇಲ್ಲ. (ಯೋಹಾನ 4:​23, 24; ಧರ್ಮೋಪದೇಶಕಾಂಡ 4:24; ಮಾರ್ಕ 1:​9-11) ಈ ಮಹತ್ವದ ಹೆಜ್ಜೆಯ ಕುರಿತು ಶ್ರದ್ಧಾಪೂರ್ವಕ ಹಾಗೂ ನಿರ್ದಿಷ್ಟ ರೀತಿಯ ಪ್ರಾರ್ಥನೆಯು ದೇವರ ವಾಕ್ಯಕ್ಕೆ ಹೊಂದಿಕೊಳ್ಳುವಂತೆ ಮತ್ತು ಯೆಹೋವ ದೇವರಿಗೆ ಯಾವ ಷರತ್ತೂ ಇಲ್ಲದ ಸಮರ್ಪಣೆಯನ್ನು ಮಾಡಿ ದೀಕ್ಷಾಸ್ನಾನ ಹೊಂದುವಂತೆ ಅವರಿಗೆ ಬೇಕಾದ ಉತ್ತೇಜನವನ್ನೂ ಧೈರ್ಯವನ್ನೂ ಹೆಚ್ಚು ಮಟ್ಟಿಗೆ ಕೊಟ್ಟೀತು.

21, 22. ಕೆಲವರು ಸಮರ್ಪಣೆ ಮತ್ತು ದೀಕ್ಷಾಸ್ನಾನದಿಂದ ಹಿಂಜರಿಯುವುದೇಕೆ?

21 ಕೆಲವರು ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಹಿಂಜರಿಯುವ ಕಾರಣವು, ಅವರು ಲೋಕದ ವಿಚಾರಗಳಲ್ಲಿ ಮುಳುಗಿರುವುದರಿಂದ ಆಗಿರಬಹುದು ಅಥವಾ ಸಂಪತ್ತನ್ನು ಬೆನ್ನಟ್ಟುವ ಕಾರಣ ಅವರಿಗೆ ಆತ್ಮಿಕ ವಿಷಯಗಳಿಗೆ ಸಮಯವಿಲ್ಲದಿರುವ ಕಾರಣದಿಂದ ಆಗಿರಬಹುದು. (ಮತ್ತಾಯ 13:22; 1 ಯೋಹಾನ 2:​15-17) ಅವರ ವೀಕ್ಷಣಗಳನ್ನೂ ಗುರಿಗಳನ್ನೂ ಅವರು ಬದಲಾಯಿಸುವಲ್ಲಿ ಅವರೆಷ್ಟು ಸಂತುಷ್ಟರಾಗಿರಬಹುದು! ಯೆಹೋವನ ಸಮೀಪಕ್ಕೆ ಬರುವುದು ಅವರನ್ನು ಆತ್ಮಿಕವಾಗಿ ಪುಷ್ಟಿಗೊಳಿಸುವುದು, ಅವರ ವ್ಯಾಕುಲತೆ ಕಡಮೆಯಾಗುವಂತೆ ಸಹಾಯಮಾಡಿ, ದೈವಿಕ ಚಿತ್ತವನ್ನು ಮಾಡುವುದರಿಂದ ಬರುವ ಶಾಂತಿ ಮತ್ತು ಸಂತೃಪ್ತಿಯನ್ನು ಅವರಿಗೆ ಕೊಡುವುದು.​—ಕೀರ್ತನೆ 16:11; 40:8; ಜ್ಞಾನೋಕ್ತಿ 10:22; ಫಿಲಿಪ್ಪಿ 4:​6, 7.

22 ಇತರರು ತಾವು ಯೆಹೋವನನ್ನು ಪ್ರೀತಿಸುತ್ತೇವೆಂದು ಹೇಳುತ್ತಾರಾದರೂ, ದೇವರ ಕಡೆಗೆ ತಮಗಿರುವ ಉತ್ತರವಾದಿತ್ವದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಮರ್ಪಣೆಯನ್ನು ಮಾಡದೆ ಮತ್ತು ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳದೆ ಇರುತ್ತಾರೆ. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ದೇವರಿಗೆ ಲೆಕ್ಕವನ್ನು ಒಪ್ಪಿಸಲೇಬೇಕಾಗಿದೆ. ನಾವು ಯೆಹೋವನ ವಾಕ್ಯವನ್ನು ಕೇಳಿದಾಗಿನಿಂದ ಆ ಜವಾಬ್ದಾರಿ ನಮ್ಮ ಮೇಲಿದೆ. (ಯೆಹೆಜ್ಕೇಲ 33:​7-9; ರೋಮಾಪುರ 14:12) ‘ಮೀಸಲಾಗಿಡಲ್ಪಟ್ಟ ಜನರೋಪಾದಿ’ ಪೂರ್ವಕಾಲದ ಇಸ್ರಾಯೇಲ್ಯರು ಯೆಹೋವನಿಗೆ ಸಮರ್ಪಿತವಾಗಿದ್ದ ಜನಾಂಗದಲ್ಲಿ ಹುಟ್ಟಿದ್ದುದರಿಂದ ಅವರಿಗೆ ಆತನನ್ನು ನಂಬಿಗಸ್ತಿಕೆಯಿಂದ ಆತನ ಕಟ್ಟಳೆಗಳಿಗನುಸಾರ ಸೇವಿಸುವ ಹೊಣೆಗಾರಿಕೆಯಿತ್ತು. (ಧರ್ಮೋಪದೇಶಕಾಂಡ 7:​6, 11) ಆದರೆ ಇಂದು ಅಂತಹ ಜನಾಂಗದೊಳಗೆ ಯಾರೂ ಹುಟ್ಟುವುದಿಲ್ಲವಾದರೂ ನಮಗೆ ನಿಷ್ಕೃಷ್ಟವಾದ ಶಾಸ್ತ್ರೀಯ ಮಾಹಿತಿಯು ದೊರಕಿರುವಲ್ಲಿ, ನಾವು ನಂಬಿಕೆಯಿಂದ ಅದರಂತೆ ವರ್ತಿಸುವುದು ಆವಶ್ಯಕ.

23, 24. ಯಾವ ಭಯಗಳು ಜನರನ್ನು ದೀಕ್ಷಾಸ್ನಾನದಿಂದ ತಡೆದು ಹಿಡಿಯಬಾರದು?

23 ತಮಗೆ ಸಾಕಷ್ಟು ಜ್ಞಾನವಿಲ್ಲವೆಂಬ ಭಯವು ದೀಕ್ಷಾಸ್ನಾನದಿಂದ ಕೆಲವರನ್ನು ತಡೆಯಬಹುದು. ಆದರೂ, ನಮಗೆಲ್ಲರಿಗೂ ತುಂಬ ಕಲಿಯಲಿಕ್ಕಿದೆ ಎಂಬುದು ನಿಜ, ಏಕೆಂದರೆ, ‘ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಮಾನವಕುಲವು ಎಂದಿಗೂ ಗ್ರಹಿಸಲಾರದು’. (ಪ್ರಸಂಗಿ 3:11) ಇಥಿಯೋಪ್ಯದ ಆ ಕಂಚುಕಿಯನ್ನು ತೆಗೆದುಕೊಳ್ಳಿರಿ. ಯೆಹೂದಿ ಮತಾಂತರಿಯಾಗಿದ್ದ ಅವನಿಗೆ ಶಾಸ್ತ್ರವಚನಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ಜ್ಞಾನವಿದ್ದರೂ ದೇವರ ಉದ್ದೇಶಗಳ ಬಗ್ಗೆ ಎಲ್ಲ ಪ್ರಶ್ನೆಗಳಿಗೆ ಉತ್ತರವು ಅವನಲ್ಲಿರಲಿಲ್ಲ. ಆದರೂ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಬರುವ ರಕ್ಷಣೆಯ ವಿಷಯದಲ್ಲಿ ಯೆಹೋವನು ಮಾಡಿದ್ದ ಏರ್ಪಾಡಿನ ಬಗ್ಗೆ ಅವನು ಕಲಿತಾಗ ಆ ಕಂಚುಕಿಯು, ಒಡನೆಯೇ ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಂಡನು.​—ಅ. ಕೃತ್ಯಗಳು 8:​26-38.

24 ಇನ್ನು ಕೆಲವರು ತಮ್ಮ ಸಮರ್ಪಣೆಯನ್ನು ತಾವು ಪೂರೈಸದೆ ಹೋದೇವೊ ಎಂದು ಭಯಪಟ್ಟು ಸಮರ್ಪಣೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ. 17 ವರ್ಷ ಪ್ರಾಯದ ಮೋನೀಕ್‌ ಹೇಳುವುದು: “ನಾನು ಮಾಡುವ ಸಮರ್ಪಣೆಯಂತೆ ಜೀವಿಸಲು ಅಸಾಧ್ಯವಾದೀತು ಎಂಬ ಭಯದಿಂದ ನಾನು ದೀಕ್ಷಾಸ್ನಾನದಿಂದ ಹಿಂಜರಿದಿದ್ದೇನೆ.” ಆದರೆ ನಾವು ಯೆಹೋವನಲ್ಲಿ ಪೂರ್ಣ ಹೃದಯದಿಂದ ಭರವಸೆಯಿಡುವಲ್ಲಿ, ‘ಆತನು ನಮ್ಮ ದಾರಿಗಳನ್ನು ಸರಾಗಮಾಡುವನು.’ ಆತನ ನಂಬಿಗಸ್ತ ಸಮರ್ಪಿತ ಸೇವಕರಾದ ನಾವು “ಸತ್ಯವನ್ನನುಸರಿಸಿ ನಡೆಯು”ವಂತೆ ಆತನು ನಮಗೆ ಸಹಾಯಮಾಡುವನು.​—ಜ್ಞಾನೋಕ್ತಿ 3:​5, 6; 3 ಯೋಹಾನ 4.

25. ಈಗ ಯಾವ ಪ್ರಶ್ನೆಯು ಪರಿಗಣನೆಗೆ ಅರ್ಹವಾಗಿದೆ?

25 ಯೆಹೋವನಲ್ಲಿ ದೃಢವಾದ ಭರವಸೆ ಮತ್ತು ಆತನಲ್ಲಿರುವ ಹೃತ್ಪೂರ್ವಕವಾದ ಪ್ರೀತಿಯ ಕಾರಣ ಪ್ರತಿ ವರ್ಷ ಸಾವಿರಾರು ಜನರು ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದುವಂತೆ ಪ್ರಚೋದಿಸಲ್ಪಡುತ್ತಾರೆ. ಮತ್ತು ದೇವರ ಎಲ್ಲ ಸಮರ್ಪಿತ ಸೇವಕರು ಆತನಿಗೆ ನಂಬಿಗಸ್ತರಾಗಿರಲು ಬಯಸುತ್ತಾರೆಂಬುದು ಖಂಡಿತ. ಆದರೂ ನಾವು ಕಠಿನಕಾಲಗಳಲ್ಲಿ ಜೀವಿಸುತ್ತಿದ್ದು ನಂಬಿಕೆಯ ವಿವಿಧ ಪರೀಕ್ಷೆಗಳಿಗೊಳಗಾಗುತ್ತೇವೆ. (2 ತಿಮೊಥೆಯ 3:​1-5) ಆದುದರಿಂದ ನಾವು ಯೆಹೋವನಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸಲು ಏನು ಮಾಡಸಾಧ್ಯವಿದೆ? ನಾವು ಮುಂದಿನ ಲೇಖನದಲ್ಲಿ ಇದನ್ನು ಪರಿಗಣಿಸುವೆವು.

[ಪಾದಟಿಪ್ಪಣಿ]

^ ಪ್ಯಾರ. 6 ಯೇಸುವು ಪಾಪರಹಿತನಾಗಿದ್ದುದರಿಂದ, ಅವನು ದೀಕ್ಷಾಸ್ನಾನ ಹೊಂದಿದ್ದು, ಪಶ್ಚಾತ್ತಾಪದ ಸೂಚನೆಯಾಗಿ ಅಲ್ಲ. ಅವನ ದೀಕ್ಷಾಸ್ನಾನವು, ಅವನು ತನ್ನನ್ನು ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ದೇವರಿಗೆ ಅರ್ಪಿಸಿಕೊಂಡದ್ದನ್ನು ಸೂಚಿಸಿತು.​—ಇಬ್ರಿಯ 7:26; 10:​5-10.

ನಿಮಗೆ ಜ್ಞಾಪಕವಿದೆಯೆ?

• ಕ್ರೈಸ್ತ ದೀಕ್ಷಾಸ್ನಾನವು ಹೇಗೆ ನಡೆಸಲ್ಪಡುತ್ತದೆ?

• ಒಬ್ಬನು ದೀಕ್ಷಾಸ್ನಾನ ಹೊಂದಬೇಕಾದರೆ ಯಾವ ಜ್ಞಾನ ಅಗತ್ಯ?

• ಸತ್ಯ ಕ್ರೈಸ್ತರ ದೀಕ್ಷಾಸ್ನಾನಕ್ಕೆ ನಡೆಸುವ ಹೆಜ್ಜೆಗಳಾವುವು?

• ಕೆಲವರು ದೀಕ್ಷಾಸ್ನಾನಕ್ಕೆ ಹಿಂಜರಿಯುವುದೇಕೆ, ಮತ್ತು ಅವರಿಗೆ ಹೇಗೆ ಸಹಾಯ ದೊರೆಯಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರಗಳು]

‘ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದರ ಅರ್ಥ ನಿಮಗೆ ತಿಳಿದಿದೆಯೆ?