ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನಗೆ ದೇವರನ್ನು ಸೇವಿಸುವ ಬಯಕೆ ಇತ್ತು”

“ನನಗೆ ದೇವರನ್ನು ಸೇವಿಸುವ ಬಯಕೆ ಇತ್ತು”

ರಾಜ್ಯ ಘೋಷಕರು ವರದಿ ಮಾಡುತ್ತಾರೆ

“ನನಗೆ ದೇವರನ್ನು ಸೇವಿಸುವ ಬಯಕೆ ಇತ್ತು”

“ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ.” ಇದು, ಸಾ.ಶ. ಮೊದಲನೆಯ ಶತಮಾನದಲ್ಲಿ ಅಪೊಸ್ತಲ ಯೋಹಾನನು ಕೇಳಿಸಿಕೊಂಡ ದೇವದೂತನ ಕರೆಯಾಗಿತ್ತು. ನಮ್ಮ ದಿನದಲ್ಲಿ ಲಕ್ಷಾಂತರ ಮಂದಿ ಪ್ರಾಮಾಣಿಕ ಜನರು ಇದಕ್ಕೆ ಪ್ರತಿಕ್ರಿಯೆ ತೋರಿಸಿ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲನ್ನು’ ಬಿಟ್ಟು ಹೊರಬಂದಿದ್ದಾರೆ. (ಪ್ರಕಟನೆ 18:​1-4) ಹಾಗೆ ಮಾಡಿದವರಲ್ಲೊಬ್ಬರು, ಹೇಟೀ ದೇಶದ ವಿಲ್ನಾರ್‌ ಎಂಬವರು. ಅವರು ತಮ್ಮ ಅನುಭವವನ್ನು ಹೇಳುತ್ತಾರೆ.

“ನಾನು 1956ರಲ್ಲಿ, ಹೇಟೀ ದೇಶದ ಸೆಂಟ್‌ ಮಾರ್ಕ್‌ ಎಂಬ ಚಿಕ್ಕ ಪಟ್ಟಣದಲ್ಲಿ ಒಂದು ದೇವಭಕ್ತ ಕ್ಯಾಥೊಲಿಕ್‌ ಕುಟುಂಬದಲ್ಲಿ ಹುಟ್ಟಿದೆ. ಹೇಟೀಯ ಸಾನ್‌ ಮೀಷೆರ್‌ ಡಾ ಲಾಟಾಲೇಯಲ್ಲಿರುವ ಸೆಮಿನೆರಿಗೆ ಹಾಜರಾಗಲು, ನಮ್ಮ ಪಟ್ಟಣದಲ್ಲಿದ್ದ ಇನ್ನಿಬ್ಬರೊಂದಿಗೆ ನಾನು ಆಯ್ಕೆಮಾಡಲ್ಪಟ್ಟಾಗ, ನನ್ನ ಕುಟುಂಬಕ್ಕೆ ಎಷ್ಟು ಸಂತೋಷವಾಗಿರಬೇಕು ಎಂಬುದನ್ನು ಸ್ವಲ್ಪ ಊಹಿಸಿಕೊಳ್ಳಿ. ಅನಂತರ 1980ರಲ್ಲಿ ನಮ್ಮನ್ನು ಹೆಚ್ಚಿನ ತರಬೇತಿಗಾಗಿ ಬೆಲ್ಜಿಯಮ್‌ನಲ್ಲಿರುವ ಸ್ಟಾವ್‌ಲೊಟ್‌ಗೆ ಕಳುಹಿಸಲಾಯಿತು. ಅಲ್ಲಿ ನಾವು ಒಂದು ಕ್ಯಾಥೊಲಿಕ್‌ ವಿಶ್ವವಿದ್ಯಾನಿಲಯಕ್ಕೂ ಹಾಜರಾದೆವು.

“ಆರಂಭದಲ್ಲಿ ನಾನು ಪಾದ್ರಿಯಾಗುವುದರ ಬಗ್ಗೆ ತುಂಬ ಉತ್ಸಾಹಿಯಾಗಿದ್ದೆ. ಒಂದು ದಿನ ಊಟದ ಕೋಣೆಯಲ್ಲಿ, ನಮ್ಮ ಗುಂಪನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಪಾದ್ರಿಯು ನನಗೆ ಏನೋ ಹೇಳಲಿಕ್ಕಿದೆಯೆಂದು ತಿಳಿಸಿ, ಕೆಲವು ನಿಮಿಷ ಹಿಂದುಳಿಯುವಂತೆ ಕೇಳಿಕೊಂಡನು. ಅವನು ನನ್ನತ್ತ ಲೈಂಗಿಕವಾಗಿ ಆಕರ್ಷಿತನಾಗಿದ್ದಾನೆಂದು ಮುಚ್ಚುಮರೆಯಿಲ್ಲದೆ ಹೇಳಿದಾಗ ನನಗಾದ ಆಘಾತವನ್ನು ಕಲ್ಪಿಸಿಕೊಳ್ಳಿ! ಅವನ ಲೈಂಗಿಕ ಪ್ರಸ್ತಾವಗಳನ್ನು ನಾನು ತಳ್ಳಿಹಾಕಿದೆನಾದರೂ ನಾನು ಪೂರ್ತಿಯಾಗಿ ಭ್ರಮನಿರಸನಾದೆ. ಈ ಘಟನೆಯ ಬಗ್ಗೆ ನನ್ನ ಕುಟುಂಬಕ್ಕೆ ಪತ್ರ ಬರೆದೆ. ನನ್ನ ಕುಟುಂಬದವರಿಗೆ ಸಂತೋಷವಾಗದಿದ್ದರೂ, ಕೆಲವು ತಿಂಗಳುಗಳ ನಂತರ ನಾನು ಸೆಮಿನೆರಿಯನ್ನು ಬಿಟ್ಟುಬಂದೆ. ನನಗೆ ಹಳ್ಳಿಯಲ್ಲಿ ಉಳಿಯಲಿಕ್ಕಾಗಿ ಒಂದು ಸ್ಥಳ ಸಿಕ್ಕಿತು, ಮತ್ತು ನಾನು ಇನ್ನೊಂದು ವೃತ್ತಿಯಲ್ಲಿ ವ್ಯಾಸಂಗವನ್ನು ಮುಂದುವರಿಸಿದೆ.

“ನಾನು ಸೆಂಟ್‌ ಮಾರ್ಕ್‌ಗೆ ಹಿಂದಿರುಗಿದಾಗ, ನನಗೆ ಕ್ಯಾಥೊಲಿಕ್‌ ಚರ್ಚಿನಲ್ಲಿ ಕಿಂಚಿತ್ತೂ ಭರವಸೆ ಉಳಿದಿರಲಿಲ್ಲ. ಹೀಗಿದ್ದರೂ, ನನಗೆ ದೇವರನ್ನು ಸೇವಿಸುವ ಬಯಕೆ ಇತ್ತು. ಆದರೆ ನಾನೇನು ಮಾಡಬೇಕೆಂದು ನನಗೆ ಗೊತ್ತಿರಲಿಲ್ಲ. ನಾನು ಆಡ್ವೆಂಟಿಸ್ಟ್‌ ಚರ್ಚು, ಇಬೆನೆಸರ್‌ ಚರ್ಚು, ಮತ್ತು ಮಾರ್ಮನ್‌ ಚರ್ಚಿಗೂ ಹೋದೆ. ಆತ್ಮಿಕವಾಗಿ ನಾನು ಮಾರ್ಗದರ್ಶನವಿಲ್ಲದವನಾಗಿದ್ದೆ.

“ಆಗ ನನಗೆ, ನಾನು ಬೆಲ್ಜಿಯಮ್‌ನಲ್ಲಿನ ಸೆಮಿನೆರಿಗೆ ಹಾಜರಾಗುತ್ತಿದ್ದಾಗ ಕ್ರ್ಯಾಂಪೊನ್‌ ಬೈಬಲನ್ನು ಓದುತ್ತಿದ್ದದ್ದು ನೆನಪಿಗೆ ಬಂತು. ಅದರಲ್ಲಿ ನಾನು ದೇವರಿಗೆ ಒಂದು ಹೆಸರಿದೆ ಎಂಬುದನ್ನು ತಿಳಿದುಕೊಂಡಿದ್ದೆ. ಆದುದರಿಂದ ಆತನ ಹೆಸರನ್ನು ಉಪಯೋಗಿಸುತ್ತಾ, ಸತ್ಯ ಧರ್ಮವನ್ನು ಕಂಡುಕೊಳ್ಳಲು ನನಗೆ ಸಹಾಯಮಾಡುವಂತೆ ನಾನು ತೀವ್ರಾಸಕ್ತಿಯಿಂದ ಪ್ರಾರ್ಥಿಸಿದೆ.

“ಸ್ವಲ್ಪ ಸಮಯದೊಳಗೆ, ಇಬ್ಬರು ಯೆಹೋವನ ಸಾಕ್ಷಿಗಳು ನನ್ನ ನೆರೆಹೊರೆಯಲ್ಲಿ ಬಂದು ನೆಲೆಸಿದರು. ಅವರು ಶಾಂತರೂ, ಗೌರವಪೂರ್ಣರೂ, ಘನತೆಯುಳ್ಳವರೂ ಆಗಿದ್ದರು. ಅವರ ಜೀವನ ರೀತಿಯಿಂದ ನಾನು ಪ್ರಭಾವಿತನಾದೆ. ಒಂದು ದಿನ, ಆ ಇಬ್ಬರು ಸಾಕ್ಷಿಗಳಲ್ಲಿ ಒಬ್ಬಳು, ನಾನು ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಾಗುವಂತೆ ಆಮಂತ್ರಿಸಿದಳು. ನಾನು ಆ ಕೂಟವನ್ನು ಬಹಳಷ್ಟು ಆನಂದಿಸಿದೆ, ಮತ್ತು ಸಾಕ್ಷಿಗಳೊಂದಿಗೆ ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡಲು ಒಪ್ಪಿಕೊಂಡೆ. ಸುಮಾರು ಆರು ತಿಂಗಳಲ್ಲಿ, ನಾನು ದೇವರನ್ನು ಸೇವಿಸುವ ಸರಿಯಾದ ಮಾರ್ಗವನ್ನು ಕಂಡುಹಿಡಿದಿದ್ದೇನೆಂದು ನನಗೆ ಮನದಟ್ಟಾಯಿತು. ನಾನು ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿಕೊಂಡೆ ಮತ್ತು 1988ರ ನವೆಂಬರ್‌ 20ರಂದು ದೀಕ್ಷಾಸ್ನಾನಹೊಂದಿದೆ.”

ಸಕಾಲದಲ್ಲಿ, ವಿಲ್ನಾರ್‌ ಪೂರ್ಣ ಸಮಯದ ಸೇವೆಯಲ್ಲಿ ತೊಡಗಿದರು. ಇಂದು ಅವರೊಬ್ಬ ಸಭಾ ಹಿರಿಯರಾಗಿದ್ದಾರೆ. ಅವರು, ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಸಂತೋಷದಿಂದ ಸಭೆಯಲ್ಲಿ ಸೇವೆ ಸಲ್ಲಿಸುತ್ತಾರೆ.

[ಪುಟ 9ರಲ್ಲಿರುವ ಚಿತ್ರ]

ಬೈಬಲನ್ನು ಓದುವ ಮೂಲಕ, ದೇವರ ಹೆಸರು ಯೆಹೋವ ಎಂಬುದನ್ನು ವಿಲ್ನಾರ್‌ ಕಂಡುಹಿಡಿದನು