ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಹೃದಯ ಹಾಗೂ ಮನಸ್ಸಿನಿಂದ ದೇವರನ್ನು ಹುಡುಕಿರಿ

ನಿಮ್ಮ ಹೃದಯ ಹಾಗೂ ಮನಸ್ಸಿನಿಂದ ದೇವರನ್ನು ಹುಡುಕಿರಿ

ನಿಮ್ಮ ಹೃದಯ ಹಾಗೂ ಮನಸ್ಸಿನಿಂದ ದೇವರನ್ನು ಹುಡುಕಿರಿ

ದೇವರು ಮೆಚ್ಚುವಂಥ ನಂಬಿಕೆಯನ್ನು ಬೆಳೆಸಿಕೊಳ್ಳುವುದರಲ್ಲಿ ಹೃದಯ ಹಾಗೂ ಮನಸ್ಸಿನ ಉಪಯೋಗವನ್ನು ನಿಜ ಕ್ರೈಸ್ತತ್ವವು ಪ್ರೋತ್ಸಾಹಿಸುತ್ತದೆ.

ವಾಸ್ತವದಲ್ಲಿ ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು, ನಾವು ನಮ್ಮ “ಪೂರ್ಣ ಹೃದಯ” ಹಾಗೂ “ಪೂರ್ಣ ಪ್ರಾಣ”ದಿಂದ ಮಾತ್ರವಲ್ಲದೆ, “ಪೂರ್ಣ ಮನಸ್ಸಿನಿಂದ” ಇಲ್ಲವೇ ಬುದ್ಧಿಯಿಂದಲೂ ದೇವರನ್ನು ಪ್ರೀತಿಸಬೇಕೆಂದು ಕಲಿಸಿದನು. (ಮತ್ತಾಯ 22:​37, NW) ಹೌದು, ನಮ್ಮ ಆರಾಧನೆಯಲ್ಲಿ ನಮ್ಮ ಮಾನಸಿಕ ಸಾಮರ್ಥ್ಯಗಳು ಒಂದು ಮುಖ್ಯ ಪಾತ್ರವನ್ನು ವಹಿಸಬೇಕು.

ಯೇಸು ತನ್ನ ಬೋಧನೆಯ ಕುರಿತಾಗಿ ಯೋಚಿಸುವಂತೆ ತನ್ನ ಕೇಳುಗರನ್ನು ಆಮಂತ್ರಿಸುತ್ತಾ ಅನೇಕವೇಳೆ, “ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಿದನು. (ಮತ್ತಾಯ 17:25; 18:12; 21:28; 22:42) ಅದೇ ರೀತಿಯಲ್ಲಿ ಅಪೊಸ್ತಲ ಪೇತ್ರನು ಜೊತೆ ವಿಶ್ವಾಸಿಗಳಿಗೆ ‘ಜ್ಞಾಪಕಕೊಟ್ಟು ಮನಸ್ಸನ್ನು ಪ್ರೇರಿಸಲಿಕ್ಕೋಸ್ಕರ’ ಬರೆದನು. (2 ಪೇತ್ರ 3:​1, 2) ಅತಿ ವಿಸ್ತಾರವಾಗಿ ಪ್ರಯಾಣಿಸಿರುವ ಆರಂಭದ ಮಿಷನೆರಿಯಾಗಿದ್ದ ಅಪೊಸ್ತಲ ಪೌಲನು, ಕ್ರೈಸ್ತರು ತಮ್ಮ “ತರ್ಕಶಕ್ತಿಯನ್ನು” ಉಪಯೋಗಿಸಿ, “ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳು”ವಂತೆ ಪ್ರೇರೇಪಿಸಿದನು. (ರೋಮಾಪುರ 12:​1, 2, NW) ತಮ್ಮ ನಂಬಿಕೆಗಳನ್ನು ಹಾಗೆ ಸಮಗ್ರವಾಗಿ ಮತ್ತು ಜಾಗ್ರತೆಯಿಂದ ಪರೀಕ್ಷಿಸುವುದರಿಂದ ಮಾತ್ರವೇ ಕ್ರೈಸ್ತರು ದೇವರಿಗೆ ಮೆಚ್ಚಿಕೆಯಾದ ಮತ್ತು ಜೀವನದಲ್ಲಿ ಏಳಬಹುದಾದ ಯಾವುದೇ ಪರೀಕ್ಷೆಗಳನ್ನು ಎದುರಿಸಬಲ್ಲ ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲರು.​—ಇಬ್ರಿಯ 11:​1, 6.

ಇತರರು ಅಂಥ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಆರಂಭದ ಕ್ರೈಸ್ತ ಸೌವಾರ್ತಿಕರು, ಕಲಿಸಲಾಗುತ್ತಿದ್ದ ಸಂಗತಿಗಳನ್ನು “ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ [“ತರ್ಕಮಾಡಿ,” NW] ಆಯಾ ವಚನಗಳ ಅರ್ಥವನ್ನು ಬಿಚ್ಚಿ”ಹೇಳುತ್ತಿದ್ದರು. (ಅ. ಕೃತ್ಯಗಳು 17:​1-3) ಅಂಥ ತರ್ಕಬದ್ಧ ಪ್ರಸ್ತಾವನೆಯು, ಪ್ರಾಮಾಣಿಕ ಹೃದಯದ ವ್ಯಕ್ತಿಗಳಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ತಂದಿತು. ಉದಾಹರಣೆಗಾಗಿ, ಮೆಕದೋನ್ಯರ ನಗರವಾದ ಬೆರೋಯದಲ್ಲಿದ್ದ ಅನೇಕ ಜನರು “ಉದಾತ್ತಮನಸ್ಸುಳ್ಳವರಾಗಿದ್ದು [ದೇವರ] ವಾಕ್ಯವನ್ನು ಮನಸ್ಸಿನ ಅತ್ಯಂತ ಹೆಚ್ಚಿನ ಕಾತುರತೆಯಿಂದ ಅಂಗೀಕರಿಸಿ, [ಪೌಲನು ಮತ್ತು ಅವನ ಸಂಗಡಿಗರು ವಿವರಿಸಿ ಹೇಳುತ್ತಿದ್ದ] ಈ ಸಂಗತಿಗಳು ಹೌದೋ ಏನೋ ಎಂಬುದನ್ನು ಪ್ರತಿದಿನವೂ ಶಾಸ್ತ್ರವಚನಗಳಲ್ಲಿ ಜಾಗರೂಕತೆಯಿಂದ ಪರೀಕ್ಷಿಸಿ ನೋಡುತ್ತಿದ್ದರು.” (ಅ. ಕೃತ್ಯಗಳು 17:​11, NW) ಇಲ್ಲಿ ಎರಡು ಅಂಶಗಳಿಗೆ ಗಮನಕೊಡುವುದು ಒಳ್ಳೇದು. ಮೊದಲನೆಯದಾಗಿ, ಬೆರೋಯದವರು ದೇವರ ವಾಕ್ಯಕ್ಕೆ ಕಿವಿಗೊಡಲು ಕಾತುರರಾಗಿದ್ದರು; ಎರಡನೆಯದಾಗಿ, ತಾವು ಕಿವಿಗೊಡುತ್ತಿದ್ದ ಸಂಗತಿಗಳು ಸರಿಯಾಗಿರಬಹುದೆಂದು ಅವರು ಸುಮ್ಮನೆ ಕಲ್ಪಿಸಿಕೊಳ್ಳಲಿಲ್ಲ, ಬದಲಾಗಿ ಅವರು ಅದನ್ನು ಶಾಸ್ತ್ರವಚನಗಳಲ್ಲಿ ಪರೀಕ್ಷಿಸಿ ನೋಡಿದರು. ಹೀಗೆ ಮಾಡಿದ್ದಕ್ಕಾಗಿ ಕ್ರೈಸ್ತ ಮಿಷನೆರಿಯಾಗಿದ್ದ ಲೂಕನು ಬೆರೋಯದವರನ್ನು ಗೌರವಪೂರ್ವಕವಾಗಿ ಶ್ಲಾಘಿಸಿ ಅವರನ್ನು ‘ಉದಾತ್ತಮನಸ್ಸುಳ್ಳವರು’ ಎಂದು ಕರೆದನು. ಆತ್ಮಿಕ ವಿಷಯಗಳ ಕಡೆಗಿನ ನಿಮ್ಮ ದೃಷ್ಟಿಕೋನ ಸಹ ಅಂಥ ಉದಾತ್ತಮನಸ್ಸನ್ನು ಪ್ರತಿಬಿಂಬಿಸುತ್ತದೊ?

ಮನಸ್ಸು ಮತ್ತು ಹೃದಯ ಸಹಕರಿಸುತ್ತವೆ

ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಸತ್ಯಾರಾಧನೆಯಲ್ಲಿ ಮನಸ್ಸು ಹಾಗೂ ಹೃದಯ, ಇವೆರಡರ ಉಪಯೋಗವೂ ಒಳಗೂಡಿದೆ. (ಮಾರ್ಕ 12:30) ಹಿಂದಿನ ಲೇಖನದಲ್ಲಿ ಕೊಡಲ್ಪಟ್ಟಿದ್ದ ದೃಷ್ಟಾಂತದ ಕುರಿತಾಗಿ ಮತ್ತೊಮ್ಮೆ ಯೋಚಿಸಿರಿ. ಬಾಡಿಗೆಗೆ ಕೆಲಸಮಾಡುತ್ತಿದ್ದ ಆ ಪೇಂಟರನು, ಒಂದು ಮನೆಗೆ ಬಣ್ಣ ಹಚ್ಚುತ್ತಿದ್ದಾಗ ತಪ್ಪಾದ ಬಣ್ಣಗಳನ್ನು ಬಳಸಿದನು. ತನ್ನ ಧಣಿಯ ಸೂಚನೆಗಳಿಗೆ ಅವನು ಜಾಗರೂಕತೆಯಿಂದ ಕಿವಿಗೊಟ್ಟಿದ್ದರೆ, ಅವನು ತನ್ನ ಕೆಲಸವನ್ನು ಮನಃಪೂರ್ವಕವಾಗಿ ಮಾಡಬಹುದಿತ್ತು ಮತ್ತು ತನ್ನ ಧಣಿಯ ಮೆಚ್ಚುಗೆಗೆ ಪಾತ್ರನಾಗುವೆನೆಂಬ ಭರವಸೆಯುಳ್ಳವನಾಗಿರಬಹುದಿತ್ತು. ಇದೇ ವಿಷಯವು ನಮ್ಮ ಆರಾಧನೆಗೂ ಅನ್ವಯಿಸುತ್ತದೆ.

‘ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು’ ಎಂದು ಯೇಸು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಯೋಹಾನ 4:​23, ಪರಿಶುದ್ಧ ಬೈಬಲ್‌) ಹೀಗಿರುವುದರಿಂದ ಅಪೊಸ್ತಲ ಪೌಲನು ಬರೆದದ್ದು: “ಆದಕಾರಣ ನಾವು . . . ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ [“ನಿಷ್ಕೃಷ್ಟ ಜ್ಞಾನದಿಂದ,” NW] ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ . . . ದೇವರನ್ನು ಬೇಡಿಕೊಳ್ಳುತ್ತೇವೆ.” (ಕೊಲೊಸ್ಸೆ 1:9, 10, 12) ಅಂಥ ‘ನಿಷ್ಕೃಷ್ಟ ಜ್ಞಾನವು’ ಪ್ರಾಮಾಣಿಕ ವ್ಯಕ್ತಿಗಳನ್ನು, “[ಅವರು] ಅರಿತಿರುವುದನ್ನೇ ಆರಾಧಿಸುವವರಾಗಿ”ರುವುದರಿಂದ ಪೂರ್ಣ ಭರವಸೆಯಿಂದ ತಮ್ಮ ಹೃದಮನಗಳೆರಡನ್ನೂ ಆರಾಧನೆಯಲ್ಲಿ ಒಳಗೂಡಿಸುವುದನ್ನು ಸಾಧ್ಯಗೊಳಿಸುವುದು.​—ಯೋಹಾನ 4:22.

ಈ ಕಾರಣಗಳಿಗಾಗಿಯೇ, ಯೆಹೋವನ ಸಾಕ್ಷಿಗಳು ಶಿಶುಗಳಿಗೆ ದೀಕ್ಷಾಸ್ನಾನಕೊಡುವುದಿಲ್ಲ ಇಲ್ಲವೇ ಶಾಸ್ತ್ರಗಳನ್ನು ಜಾಗ್ರತೆಯಿಂದ ಅಧ್ಯಯನ ಮಾಡಿರದ ಹೊಸಾಸಕ್ತ ವ್ಯಕ್ತಿಗಳಿಗೆ ದೀಕ್ಷಾಸ್ನಾನ ಕೊಡುವುದಿಲ್ಲ. ಯೇಸು ತನ್ನ ಹಿಂಬಾಲಕರಿಗೆ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂದು ಆಜ್ಞಾಪಿಸಿದನು. (ಮತ್ತಾಯ 28:19, 20) ದೇವರ ಚಿತ್ತದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡ ನಂತರವೇ, ಪ್ರಾಮಾಣಿಕ ಬೈಬಲ್‌ ವಿದ್ಯಾರ್ಥಿಗಳು, ಆರಾಧನೆಯ ವಿಷಯದಲ್ಲಿ ಒಂದು ತಿಳಿವಳಿಕೆಭರಿತ ನಿರ್ಣಯವನ್ನು ಮಾಡಶಕ್ತರಾಗುವರು. ಅಂಥ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ನೀವು ಪ್ರಯತ್ನಿಸುತ್ತಿದ್ದೀರೊ?

ಕರ್ತನ ಪ್ರಾರ್ಥನೆಯನ್ನು ಅರ್ಥಮಾಡಿಕೊಳ್ಳುವುದು

ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಹೊಂದಿರುವುದರ ಮತ್ತು ಅದು ಏನು ಹೇಳುತ್ತದೆಂಬುದರ ಬಗ್ಗೆ ಸೀಮಿತ ಮಾಹಿತಿಯುಳ್ಳವರಾಗಿರುವುದರ ನಡುವಿನ ವ್ಯತ್ಯಾಸವನ್ನು ನೋಡಲಿಕ್ಕಾಗಿ, ಮತ್ತಾಯ 6:​9-13ರಲ್ಲಿ ದಾಖಲಿಸಲ್ಪಟ್ಟಿರುವ ನಮ್ಮ ತಂದೆ ಇಲ್ಲವೇ ಕರ್ತನ ಪ್ರಾರ್ಥನೆಯೆಂದು ಸಾಮಾನ್ಯವಾಗಿ ಕರೆಯಲಾಗುವ ಪ್ರಾರ್ಥನೆಯನ್ನು ಪರಿಗಣಿಸೋಣ.

ಕೋಟಿಗಟ್ಟಲೆ ಜನರು ಯೇಸುವಿನ ಮಾದರಿ ಪ್ರಾರ್ಥನೆಯನ್ನು ಕ್ರಮವಾಗಿ ಚರ್ಚಿನಲ್ಲಿ ಪಠಿಸುತ್ತಾರೆ. ಆದರೆ ಅದರ ಅರ್ಥದ ಬಗ್ಗೆ, ವಿಶೇಷವಾಗಿ ದೇವರ ನಾಮ ಮತ್ತು ರಾಜ್ಯದ ಕುರಿತು ತಿಳಿಸುವ ಅದರ ಮೊದಲ ಭಾಗದ ಬಗ್ಗೆ ಎಷ್ಟು ಜನರಿಗೆ ಕಲಿಸಲಾಗಿದೆ? ಈ ವಿಷಯಗಳು ಎಷ್ಟು ಪ್ರಾಮುಖ್ಯವಾಗಿವೆಯೆಂದರೆ, ಯೇಸು ಅವುಗಳಿಗೆ ಪ್ರಾರ್ಥನೆಯಲ್ಲಿ ಮೊತ್ತಮೊದಲ ಸ್ಥಾನವನ್ನು ಕೊಟ್ಟನು.

ಆ ಪ್ರಾರ್ಥನೆಯು ಹೀಗೆ ಆರಂಭವಾಗುತ್ತದೆ: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ,” ಅಂದರೆ ಗೌರವಿಸಲ್ಪಡಲಿ ಇಲ್ಲವೇ ಪವಿತ್ರೀಕರಿಸಲ್ಪಡಲಿ. ದೇವರ ನಾಮವು ಪರಿಶುದ್ಧಗೊಳಿಸಲ್ಪಡಬೇಕು ಎಂದು ಯೇಸು ಹೇಳಿದನೆಂಬುದನ್ನು ಗಮನಿಸಿರಿ. ಅನೇಕ ಜನರ ಮನಸ್ಸಿನಲ್ಲಿ ಇದು ಎರಡು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಮೊದಲನೆಯದು, ದೇವರ ನಾಮ ಏನು? ಮತ್ತು ಎರಡನೆಯದು, ಅದು ಏಕೆ ಪರಿಶುದ್ಧಗೊಳಿಸಲ್ಪಡಬೇಕು?

ಮೊದಲನೆಯ ಪ್ರಶ್ನೆಗೆ ಉತ್ತರವನ್ನು ಬೈಬಲಿನಲ್ಲಿ, ಅದರ ಮೂಲ ಭಾಷೆಗಳಲ್ಲಿ 7,000ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಕಂಡುಕೊಳ್ಳಬಹುದು. ಅದರಲ್ಲೊಂದು ಕೀರ್ತನೆ 83:18 ಆಗಿದೆ: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” (ಓರೆ ಅಕ್ಷರಗಳು ನಮ್ಮವು.) ಯೆಹೋವ ಎಂಬ ದೈವಿಕ ನಾಮದ ಕುರಿತು ವಿಮೋಚನಕಾಂಡ 3:15 ಹೀಗನ್ನುತ್ತದೆ: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲಾತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” * ಆದರೆ ಶುದ್ಧತೆ ಮತ್ತು ಪವಿತ್ರತೆಯ ಸಾರವೇ ಆಗಿರುವ ದೇವರ ನಾಮವು ಏಕೆ ಪರಿಶುದ್ಧಗೊಳಿಸಲ್ಪಡಬೇಕು? ಏಕೆಂದರೆ ಮಾನವ ಇತಿಹಾಸದ ಅತ್ಯಾರಂಭದಿಂದಲೇ ಅದನ್ನು ನಿಂದಿಸಲಾಗಿದೆ ಮತ್ತು ಹಳಿಯಲಾಗಿದೆ.

ಏದೆನಿನಲ್ಲಿ, ಆದಾಮಹವ್ವರು ನಿಷೇಧಿಸಲ್ಪಟ್ಟಿದ್ದ ಹಣ್ಣನ್ನು ತಿನ್ನುವಲ್ಲಿ ಸಾಯುವರೆಂದು ದೇವರು ಅವರಿಗೆ ಹೇಳಿದ್ದನು. (ಆದಿಕಾಂಡ 2:17) ಆದರೆ ಸೈತಾನನು ಭಂಡತನದಿಂದ ದೇವರ ಮಾತಿಗೆ ವಿರುದ್ಧವಾದದ್ದನ್ನು ಹವ್ವಳಿಗೆ ಹೇಳಿದನು: “ನೀವು ಹೇಗೂ ಸಾಯುವುದಿಲ್ಲ.” ದೇವರು ಸುಳ್ಳು ಹೇಳುತ್ತಿದ್ದಾನೆಂಬ ಆರೋಪವನ್ನು ಸೈತಾನನು ಹೊರಿಸಿದನು. ಆದರೆ ಅವನು ಅಷ್ಟಕ್ಕೆ ನಿಲ್ಲಿಸಲಿಲ್ಲ. ದೇವರು ಅನ್ಯಾಯವಾಗಿ ಅವಳಿಂದ ಅಮೂಲ್ಯವಾದ ಜ್ಞಾನವನ್ನು ಹಿಡಿದಿಟ್ಟಿದ್ದಾನೆಂದು ಹೇಳುತ್ತಾ, ಅವನು ದೇವರ ಹೆಸರಿನ ಮೇಲೆ ಇನ್ನೂ ಹೆಚ್ಚಿನ ನಿಂದೆಯನ್ನು ಹೊರಿಸಿದನು. “ನೀವು ಇದರ [ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ] ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” ಎಂಥ ಮಿಥ್ಯಾಪವಾದ!​—ಆದಿಕಾಂಡ 3:4, 5.

ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ, ಆದಾಮಹವ್ವರು ಸೈತಾನನ ಪಕ್ಷ ಹಿಡಿದರು. ಅಂದಿನಿಂದ ಹಿಡಿದು ಈ ವರೆಗೂ, ಹೆಚ್ಚಿನ ಮಾನವರು ದೇವರ ನೀತಿಯ ಮಟ್ಟಗಳನ್ನು ತಿರಸ್ಕರಿಸುವ ಮೂಲಕ ತಿಳಿದೊ ತಿಳಿಯದೆಯೊ ಆ ಆರಂಭದ ನಿಂದೆಗೆ ಕೂಡಿಸಿದ್ದಾರೆ. (1 ಯೋಹಾನ 5:19) ಜನರು ತಮ್ಮ ಕಷ್ಟಾನುಭವಕ್ಕೆ, ಅದು ತಮ್ಮ ಸ್ವಂತ ಕೆಟ್ಟ ಮಾರ್ಗಗಳಿಂದಾಗಿರುವುದಾದರೂ, ದೇವರನ್ನು ದೂಷಿಸುವ ಮೂಲಕ ಈಗಲೂ ಆತನ ಬಗ್ಗೆ ಕೆಟ್ಟದ್ದನ್ನು ಆಡುತ್ತಾರೆ. “ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು ಯೆಹೋವನ ಮೇಲೆ ಕುದಿಯುವನು” ಎಂದು ಜ್ಞಾನೋಕ್ತಿ 19:3 ಹೇಳುತ್ತದೆ. ತನ್ನ ತಂದೆಯನ್ನು ನಿಜವಾಗಿಯೂ ಪ್ರೀತಿಸಿದಂಥ ಯೇಸು, ಆತನ ನಾಮವು ಪರಿಶುದ್ಧಗೊಳಿಸಲ್ಪಡುವಂತೆ ಪ್ರಾರ್ಥಿಸಿದ್ದು ಏಕೆಂದು ನಿಮಗೆ ಈಗ ತಿಳಿಯಿತೊ?

“ನಿನ್ನ ರಾಜ್ಯವು ಬರಲಿ”

ದೇವರ ನಾಮವು ಪರಿಶುದ್ಧಗೊಳಿಸಲ್ಪಡುವಂತೆ ಪ್ರಾರ್ಥಿಸಿದ ಬಳಿಕ, ಯೇಸು ಹೇಳಿದ್ದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಆ ವಚನಭಾಗದ ಕುರಿತಾಗಿ ನಾವು ಹೀಗೆ ಕೇಳಬಹುದು: ‘ದೇವರ ರಾಜ್ಯವೆಂದರೇನು? ಮತ್ತು ಅದಕ್ಕೂ, ದೇವರ ಚಿತ್ತವು ಭೂಲೋಕದಲ್ಲಿ ನೆರವೇರುವುದಕ್ಕೂ ಏನು ಸಂಬಂಧ?’

ಬೈಬಲಿನಲ್ಲಿ, “ರಾಜ್ಯ” ಎಂಬ ಪದದ ಮೂಲಾರ್ಥವು, “ಒಬ್ಬ ರಾಜನಿಂದ ಆಳ್ವಿಕೆ” ಎಂದಾಗಿದೆ. ಆದುದರಿಂದ ತರ್ಕಸಂಗತವಾಗಿ ದೇವರ ರಾಜ್ಯವು, ದೇವರ ಆಯ್ಕೆಯ ರಾಜನುಳ್ಳ ದೇವರ ಆಳ್ವಿಕೆ ಇಲ್ಲವೇ ಸರಕಾರಕ್ಕೆ ಸೂಚಿಸುತ್ತಿರಬೇಕು. ಆ ರಾಜನು, “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವ ಪುನರುತ್ಥಿತ ಯೇಸು ಕ್ರಿಸ್ತನೇ. (ಪ್ರಕಟನೆ 19:16; ದಾನಿಯೇಲ 7:​13, 14) ಯೇಸು ಕ್ರಿಸ್ತನ ಕೈಕೆಳಗಿನ ದೇವರ ಮೆಸ್ಸೀಯ ರಾಜ್ಯದ ಸಂಬಂಧದಲ್ಲಿ ಪ್ರವಾದಿಯಾದ ದಾನಿಯೇಲನು ಬರೆದುದು: “ಆ ರಾಜರ [ಈಗ ಆಳುತ್ತಿರುವ ಮಾನವ ಸರಕಾರಗಳ] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ,” ಅಂದರೆ ಸದಾಕಾಲಕ್ಕೂ “ನಿಲ್ಲುವದು.”​—ದಾನಿಯೇಲ 2:44.

ಹೌದು, ದೇವರ ರಾಜ್ಯವು ಭೂಮಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದು, ದುಷ್ಟರೆಲ್ಲರನ್ನೂ ತೊಲಗಿಸಿ “ಶಾಶ್ವತವಾಗಿ,” ಅಂದರೆ ಸದಾಕಾಲಕ್ಕೂ ಆಳುವುದು. ಈ ವಿಧದಲ್ಲಿ, ದೇವರ ರಾಜ್ಯವು, ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸಿ, ಸೈತಾನನು ಮತ್ತು ದುಷ್ಟ ಮಾನವರು ಅದರ ಮೇಲೆ ಹೊರಿಸಿರುವ ಎಲ್ಲ ನಿಂದೆಯನ್ನು ತೆಗೆದುಹಾಕುವ ಮಾಧ್ಯಮವಾಗಿದೆ.​—ಯೆಹೆಜ್ಕೇಲ 36:23.

ಎಲ್ಲ ಸರಕಾರಗಳಿಗಿರುವಂತೆ, ದೇವರ ರಾಜ್ಯಕ್ಕೂ ಪ್ರಜೆಗಳಿದ್ದಾರೆ. ಇವರು ಯಾರು? ಬೈಬಲ್‌ ಉತ್ತರಿಸುವುದು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11) ತದ್ರೀತಿಯಲ್ಲಿ ಯೇಸು ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” ಖಂಡಿತವಾಗಿಯೂ ಇವರ ಬಳಿ ದೇವರ ಕುರಿತಾದ ನಿಷ್ಕೃಷ್ಟ ಜ್ಞಾನವು ಇದೆ. ಇದು ನಿತ್ಯ ಜೀವವನ್ನು ಪಡೆಯಲಿಕ್ಕಾಗಿ ಒಂದು ಆವಶ್ಯಕತೆಯಾಗಿದೆ.​—ಮತ್ತಾಯ 5:5; ಯೋಹಾನ 17:3.

ನಿಜವಾಗಿಯೂ ದೇವರನ್ನೂ ಪರಸ್ಪರರನ್ನೂ ಪ್ರೀತಿಸುವ ದೀನ, ನಮ್ರಭಾವದ ಜನರಿಂದ ಇಡೀ ಲೋಕವು ತುಂಬಿರುವುದನ್ನು ನೀವು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಲ್ಲಿರೊ? (1 ಯೋಹಾನ 4:​7, 8) “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ಪ್ರಾರ್ಥಿಸಿದಾಗ, ಅವನು ಅಂತಹ ಒಂದು ಲೋಕಕ್ಕಾಗಿಯೇ ಪ್ರಾರ್ಥಿಸುತ್ತಿದ್ದನು. ಯೇಸು ತನ್ನ ಹಿಂಬಾಲಕರಿಗೆ ಆ ರೀತಿಯಲ್ಲಿ ಪ್ರಾರ್ಥಿಸುವಂತೆ ಕಲಿಸಿದ್ದೇಕೆಂದು ನಿಮಗೆ ಈಗ ಅರ್ಥವಾಗುತ್ತದೊ? ಅದಕ್ಕಿಂತಲೂ ಪ್ರಾಮುಖ್ಯವಾಗಿ, ಆ ಪ್ರಾರ್ಥನೆಯ ನೆರವೇರಿಕೆಯು ನಿಮ್ಮನ್ನು ವೈಯಕ್ತಿಕವಾಗಿ ಹೇಗೆ ಬಾಧಿಸಬಲ್ಲದೆಂಬುದು ನಿಮಗೆ ತಿಳಿದಿದೆಯೊ?

ಇಂದು ಲಕ್ಷಾಂತರ ಮಂದಿ ಶಾಸ್ತ್ರವಚನಗಳ ಆಧಾರದಿಂದ ತರ್ಕಮಾಡುತ್ತಾರೆ

ದೇವರ ಬರುತ್ತಿರುವ ರಾಜ್ಯದ ಬಗ್ಗೆ ಘೋಷಿಸುವ ಆತ್ಮಿಕ ಶಿಕ್ಷಣದ ಒಂದು ಭೌಗೋಲಿಕ ಕಾರ್ಯಾಚರಣೆಯನ್ನು ಯೇಸು ಮುಂತಿಳಿಸಿದ್ದನು. ಅವನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ [ಸದ್ಯದ ಲೋಕ ಇಲ್ಲವೇ ವ್ಯವಸ್ಥೆಯ] ಅಂತ್ಯವು ಬರುವದು.”​—ಮತ್ತಾಯ 24:14.

ಲೋಕದ ಸುತ್ತಲೂ ಸುಮಾರು 60 ಲಕ್ಷ ಯೆಹೋವನ ಸಾಕ್ಷಿಗಳು, ಆ ಸುವಾರ್ತೆಯನ್ನು ತಮ್ಮ ನೆರೆಯವರೊಂದಿಗೆ ಹಂಚುತ್ತಿದ್ದಾರೆ. ನಿಮ್ಮ ತರ್ಕಶಕ್ತಿಯನ್ನುಪಯೋಗಿಸಿ, “ಶಾಸ್ತ್ರವಚನಗಳಲ್ಲಿ ಜಾಗರೂಕತೆಯಿಂದ ಪರೀಕ್ಷಿಸಿ ನೋಡುವ” ಮೂಲಕ, ದೇವರು ಹಾಗೂ ಆತನ ರಾಜ್ಯದ ಕುರಿತು ಹೆಚ್ಚನ್ನು ಕಲಿಯುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ಹಾಗೆ ಮಾಡುವುದು ನಿಮ್ಮ ನಂಬಿಕೆಯನ್ನು ಬಲಪಡಿಸುವುದು ಮತ್ತು ‘ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಯೆಹೋವನ ಜ್ಞಾನದಿಂದ ತುಂಬಿಕೊಂಡಿರುವ’ ಒಂದು ಪರದೈಸ ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯೊಂದಿಗೆ ನೀವು ಕಂಗೊಳಿಸುವಂತೆ ಮಾಡುವುದು.​—ಯೆಶಾಯ 11:​6-9.

[ಪಾದಟಿಪ್ಪಣಿ]

^ ಪ್ಯಾರ. 14 ಕೆಲವು ವಿದ್ವಾಂಸರು “ಯೆಹೋವ”ನ ಬದಲಿಗೆ “ಯಾವೇ” ಎಂಬ ಭಾಷಾಂತರವನ್ನು ಇಷ್ಟಪಡುತ್ತಾರೆ. ಆದರೆ ಆಧುನಿಕ ಸಮಯದ ಬಹುಮಟ್ಟಿಗೆ ಎಲ್ಲ ಬೈಬಲ್‌ ತರ್ಜುಮೆಗಾರರು, ತಮ್ಮ ತರ್ಜುಮೆಗಳಿಂದ ಯಾವುದೇ ರೂಪದಲ್ಲಿರುವ ದೇವರ ನಾಮವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ, “ಕರ್ತನು” ಇಲ್ಲವೇ “ದೇವರು” ಎಂಬ ಸಾಮಾನ್ಯ ಬಿರುದುಗಳನ್ನು ಹಾಕಿದ್ದಾರೆ. ದೇವರ ನಾಮದ ಕುರಿತಾದ ಗಾಢವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಸದಾಕಾಲ ಬಾಳುವ ದೈವಿಕ ನಾಮ (ಇಂಗ್ಲಿಷ್‌) ಎಂಬ ಬ್ರೋಷರನ್ನು ದಯವಿಟ್ಟು ನೋಡಿರಿ.

[ಪುಟ 8ರಲ್ಲಿರುವ ಚೌಕ/ಚಿತ್ರ]

ಮಹಾ ಬೋಧಕನನ್ನು ಅನುಕರಿಸಿರಿ 

ಯೇಸು ಅನೇಕವೇಳೆ ನಿರ್ದಿಷ್ಟವಾದ ಬೈಬಲ್‌ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಕಲಿಸಿದನು. ಉದಾಹರಣೆಗಾಗಿ, ತನ್ನ ಮರಣದ ಕುರಿತಾಗಿ ಗಲಿಬಲಿಗೊಂಡಿದ್ದ ತನ್ನ ಇಬ್ಬರು ಶಿಷ್ಯರಿಗೆ, ಅವನು ಪುನರುತ್ಥಾನಗೊಂಡ ನಂತರ ದೇವರ ಉದ್ದೇಶದಲ್ಲಿ ತನ್ನ ಪಾತ್ರವೇನೆಂಬುದನ್ನು ವಿವರಿಸಿದನು. ಲೂಕ 24:47 ಹೇಳುವುದೇನೆಂದರೆ, ಅವನು “ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.”

ಯೇಸು ಒಂದು ನಿರ್ದಿಷ್ಟ ವಿಷಯವನ್ನು, ಮೆಸ್ಸೀಯನಾಗಿರುವ “ತನ್ನ ವಿಷಯ”ವನ್ನು ಆಯ್ಕೆಮಾಡಿದನೆಂಬುದನ್ನು ಮತ್ತು ತನ್ನ ಚರ್ಚೆಯ ಸಮಯದಲ್ಲಿ “ಸಮಸ್ತಗ್ರಂಥ”ಗಳಿಂದ ಉಲ್ಲೇಖಿಸಿದನೆಂಬುದನ್ನು ಗಮನಿಸಿರಿ. ಕಾರ್ಯತಃ ಅವನು, ಒಂದಕ್ಕೊಂದು ಜೋಡಿಸಿ ರಚಿಸಬೇಕಾದ ಚಿತ್ರಬಂಧದ ಭಾಗಗಳಂತೆ ಸಂಬಂಧಿತ ಬೈಬಲ್‌ ವಚನಗಳನ್ನು ಪರಸ್ಪರ ಜೋಡಿಸಿದನು, ಮತ್ತು ಇದು ಅವನ ಶಿಷ್ಯರು ಆತ್ಮಿಕ ಸತ್ಯದ ಸ್ಪಷ್ಟವಾದ ಮಾದರಿಯನ್ನು ನೋಡುವಂತೆ ಶಕ್ತಗೊಳಿಸಿತು. (2 ತಿಮೊಥೆಯ 1:13) ಪರಿಣಾಮವಾಗಿ ಅವರು ಕೇವಲ ಜ್ಞಾನೋದಯವನ್ನು ಪಡೆಯಲಿಲ್ಲ ಬದಲಾಗಿ ಬಲವಾಗಿ ಪ್ರಚೋದಿಸಲ್ಪಟ್ಟರು ಸಹ. ಆ ವೃತ್ತಾಂತವು ಹೇಳುವುದು: “ಆಗ ಅವರು ಒಬ್ಬರಿಗೊಬ್ಬರು​—ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ ಎಂದು ಹೇಳಿ”ಕೊಂಡರು.​—ಲೂಕ 24:32.

ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯಲ್ಲಿ ಯೇಸುವಿನ ವಿಧಾನಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಅವರ ಮುಖ್ಯ ಅಧ್ಯಯನ ಸಹಾಯಕಗಳು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ ಮತ್ತು ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವಾಗಿದೆ. ಇವುಗಳಲ್ಲಿ, “ದೇವರು ಯಾರು?,” “ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?,” “ಸತ್ಯ ಧರ್ಮವನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ?,” “ಇವು ಕೊನೆಯ ದಿವಸಗಳು!” ಮತ್ತು “ದೇವರನ್ನು ಗೌರವಿಸುವ ಒಂದು ಕುಟುಂಬವನ್ನು ಕಟ್ಟುವುದು” ಎಂಬಂಥ ಆಸಕ್ತಿಕರ ಬೈಬಲ್‌ ವಿಷಯಗಳು ಸಂಬೋಧಿಸಲ್ಪಟ್ಟಿವೆ. ಪ್ರತಿಯೊಂದು ಪಾಠದಲ್ಲಿ ಅನೇಕ ಶಾಸ್ತ್ರವಚನಗಳಿವೆ.

ನಿಮ್ಮ ಸಮುದಾಯದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಇಲ್ಲವೇ ಇವುಗಳಂಥ ಅಥವಾ ಬೇರೆ ವಿಷಯಗಳ ಕುರಿತಾಗಿ ಮನೆಯಲ್ಲಿ ಉಚಿತವಾಗಿ ಬೈಬಲನ್ನು ಅಧ್ಯಯನ ಮಾಡುವಂತೆ ಕೇಳಿಕೊಳ್ಳುತ್ತಾ, ಈ ಪತ್ರಿಕೆಯಲ್ಲಿರುವ 2ನೆಯ ಪುಟದಲ್ಲಿರುವ ವಿಳಾಸಕ್ಕೆ ಬರೆಯಿರಿ.

[ಚಿತ್ರ]

ನಿರ್ದಿಷ್ಟವಾದ ಬೈಬಲ್‌ ವಿಷಯಗಳ ಮೇಲೆಯೇ ಕೇಂದ್ರೀಕರಿಸುವ ಮೂಲಕ ನಿಮ್ಮ ವಿದ್ಯಾರ್ಥಿಯ ಹೃದಯವನ್ನು ತಲಪಿರಿ

[ಪುಟ 7ರಲ್ಲಿರುವ ಚಿತ್ರಗಳು]

ಯೇಸು ಕಲಿಸಿಕೊಟ್ಟ ಮಾದರಿ ಪ್ರಾರ್ಥನೆಯ ಅರ್ಥ ನಿಮಗೆ ತಿಳಿದಿದೆಯೊ?

“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ . . .”

“ನಿನ್ನ [ಮೆಸ್ಸೀಯ] ರಾಜ್ಯವು ಬರಲಿ . . .”

“ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ”