ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ಥಿರವಾದ ಹೃದಯದಿಂದ ಯೆಹೋವನನ್ನು ಸೇವಿಸುತ್ತಾ ಇರ್ರಿ

ಸ್ಥಿರವಾದ ಹೃದಯದಿಂದ ಯೆಹೋವನನ್ನು ಸೇವಿಸುತ್ತಾ ಇರ್ರಿ

ಸ್ಥಿರವಾದ ಹೃದಯದಿಂದ ಯೆಹೋವನನ್ನು ಸೇವಿಸುತ್ತಾ ಇರ್ರಿ

“ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ.”​—ಕೀರ್ತನೆ 57:7.

1. ದಾವೀದನಿಗಿದ್ದಂತಹ ನಿಶ್ಚಿತಾಭಿಪ್ರಾಯ ನಮಗೆ ಏಕಿರಬಲ್ಲದು?

ಸಮರ್ಪಿತ ಸೇವಕರೋಪಾದಿ ನಾವು ನಿಜ ಕ್ರೈಸ್ತತ್ವಕ್ಕೆ ಅಂಟಿಕೊಳ್ಳಸಾಧ್ಯವಾಗುವಂತೆ ಯೆಹೋವನು ನಮ್ಮನ್ನು ಕ್ರೈಸ್ತ ನಂಬಿಕೆಯಲ್ಲಿ ಸ್ಥಿರಗೊಳಿಸಬಲ್ಲನು. (ರೋಮಾಪುರ 14:4) ಆದಕಾರಣ, ಕೀರ್ತನೆಗಾರನಾದ ದಾವೀದನಿಗಿದ್ದ ನಿಶ್ಚಿತಾಭಿಪ್ರಾಯ ನಮಗೂ ಇರಬಲ್ಲದು. ಅವನು ಹೀಗೆ ಹಾಡುವಂತೆ ಪ್ರೇರಿಸಲ್ಪಟ್ಟನು: “ದೇವರೇ, ನನ್ನ ಹೃದಯವು ಸ್ಥಿರವಾಗಿದೆ.” (ಕೀರ್ತನೆ 108:1) ನಮ್ಮ ಹೃದಯವು ಸ್ಥಿರವಾಗಿರುವಲ್ಲಿ, ದೇವರಿಗೆ ನಾವು ಮಾಡಿರುವ ಸಮರ್ಪಣೆಯನ್ನು ನಾವು ಪೂರೈಸುವಂತೆ ಪ್ರಚೋದಿಸಲ್ಪಡುವೆವು. ಮಾರ್ಗದರ್ಶನಕ್ಕಾಗಿಯೂ ಬಲಕ್ಕಾಗಿಯೂ ಆತನ ಕಡೆಗೆ ನೋಡುವ ಮೂಲಕ, ನಾವು ನಿಶ್ಚಲರಾಗಿ, ಸಮಗ್ರತೆಯನ್ನು ಕಾಪಾಡಿಕೊಳ್ಳುವವರಾಗಿ ಸಂಕಲ್ಪದಲ್ಲಿಯೂ ನಂಬಿಕೆಯಲ್ಲಿಯೂ ಸ್ಥಿರರಾಗಿ, “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ” ಮಾಡುವವರಾಗಿ ಪರಿಣಮಿಸುವೆವು.​—1 ಕೊರಿಂಥ 15:58.

2, 3. ಒಂದನೆಯ ಕೊರಿಂಥ 16:13ರಲ್ಲಿ ದಾಖಲಾಗಿರುವ ಪೌಲನ ಸಲಹೆಯ ಅರ್ಥವೇನು?

2 ಪುರಾತನ ಕಾಲದ ಕೊರಿಂಥದಲ್ಲಿದ್ದ ಯೇಸುವಿನ ಹಿಂಬಾಲಕರಿಗೆ ಸಂಬೋಧಿಸಲ್ಪಟ್ಟಿದ್ದರೂ ಇಂದಿನ ಕ್ರೈಸ್ತರಿಗೂ ಖಂಡಿತವಾಗಿಯೂ ಅನ್ವಯಿಸುವ ಸಲಹೆಯಲ್ಲಿ ಅಪೊಸ್ತಲ ಪೌಲನು ಹೇಳಿದ್ದು: “ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಶೂರರಾಗಿರಿ, ಬಲಗೊಳ್ಳಿರಿ.” (1 ಕೊರಿಂಥ 16:13) ಗ್ರೀಕ್‌ ಭಾಷೆಯಲ್ಲಿ ಈ ಆದೇಶಗಳಲ್ಲಿ ಪ್ರತಿಯೊಂದೂ ವರ್ತಮಾನಕಾಲದಲ್ಲಿ ಕೊಡಲ್ಪಟ್ಟಿದ್ದು, ಸತತವಾಗಿ ಕ್ರಿಯೆಗೈಯುವುದನ್ನು ಪ್ರೋತ್ಸಾಹಿಸುತ್ತದೆ. ಈ ಸಲಹೆಯ ಮಹತ್ವವೇನು?

3 ಪಿಶಾಚನನ್ನು ವಿರೋಧಿಸುತ್ತಾ ದೇವರಿಗೆ ನಿಕಟವಾಗಿರುವ ಮೂಲಕ ನಾವು ಆತ್ಮಿಕವಾಗಿ ‘ಎಚ್ಚರವಾಗಿರ’ಬಲ್ಲೆವು. (ಯಾಕೋಬ 4:​7, 8) ಯೆಹೋವನ ಮೇಲಣ ಆತುಕೊಳ್ಳುವಿಕೆಯು ನಮ್ಮನ್ನು ಐಕ್ಯವಾಗಿರಿಸಿ, ನಾವು ‘ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲು’ವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು. ನಾವು ಮತ್ತು ನಮ್ಮ ಮಧ್ಯೆ ಇರುವ ಅನೇಕ ಸ್ತ್ರೀಯರು ರಾಜ್ಯ ಘೋಷಕರಾಗಿ ಧೈರ್ಯದಿಂದ ದೇವರನ್ನು ಸೇವಿಸುತ್ತ “ಶೂರರಾಗಿ” ಮುಂದುವರಿಯುತ್ತೇವೆ. (ಕೀರ್ತನೆ 68:11) ನಾವು ನಮ್ಮ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ಬೇಕಾಗಿರುವ ಬಲಕ್ಕಾಗಿ ಆತನ ಕಡೆಗೆ ನೋಡುತ್ತಾ ಹೋಗುವ ಮೂಲಕ ‘ಬಲಗೊಳ್ಳುತ್ತೇವೆ.’​—ಫಿಲಿಪ್ಪಿ 4:13.

4. ನಾವು ಕ್ರೈಸ್ತರೋಪಾದಿ ದೀಕ್ಷಾಸ್ನಾನ ಹೊಂದುವುದಕ್ಕೆ ನಡೆಸಿದ ಹೆಜ್ಜೆಗಳಾವವು?

4 ನಾವು ಯೆಹೋವನಿಗೆ ಷರತ್ತುರಹಿತವಾದ ಸಮರ್ಪಣೆಯನ್ನು ಮಾಡಿ, ನೀರಿನ ದೀಕ್ಷಾಸ್ನಾನದ ಮೂಲಕ ಅದನ್ನು ಸಂಕೇತಿಸಿದಾಗ, ಸತ್ಯಕ್ಕಾಗಿ ನಮ್ಮ ನಿಲುವನ್ನು ತೆಗೆದುಕೊಂಡೆವು. ಆದರೆ ನಮ್ಮ ದೀಕ್ಷಾಸ್ನಾನಕ್ಕೆ ನಡೆಸಿದಂಥ ಸಂಗತಿ ಯಾವುದು? ಮೊದಲು ನಾವು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ತೆಗೆದುಕೊಂಡೆವು. (ಯೋಹಾನ 17:3) ಇದು ನಂಬಿಕೆಯನ್ನು ಉತ್ಪಾದಿಸಿತು ಮತ್ತು ನಮ್ಮ ಹಿಂದಿನ ತಪ್ಪುಗಳ ಬಗ್ಗೆ ನಿಜವಾದ ದುಃಖವನ್ನು ವ್ಯಕ್ತಪಡಿಸುತ್ತಾ ಪಶ್ಚಾತ್ತಾಪಪಡುವಂತೆ ಪ್ರೇರಿಸಿತು. (ಅ. ಕೃತ್ಯಗಳು 3:19; ಇಬ್ರಿಯ 11:6) ಅನಂತರ ನಮ್ಮ ಪರಿವರ್ತನೆ ಆಯಿತು. ಯಾಕೆಂದರೆ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಒಂದು ಜೀವನವನ್ನು ಬೆನ್ನಟ್ಟಲಿಕ್ಕಾಗಿ ನಾವು ತಪ್ಪಾಚರಣೆಗಳಿಂದ ದೂರ ಸರಿದೆವು. (ರೋಮಾಪುರ 12:2; ಎಫೆಸ 4:​23, 24) ಇದಾದ ಬಳಿಕ, ನಾವು ಪ್ರಾರ್ಥನೆಯ ಮೂಲಕ ಯೆಹೋವನಿಗೆ ಮನಃಪೂರ್ವಕವಾದ ಸಮರ್ಪಣೆಯನ್ನು ಮಾಡಿಕೊಂಡೆವು. (ಮತ್ತಾಯ 16:24; 1 ಪೇತ್ರ 2:21) ನಾವು ದೇವರ ಬಳಿ ಒಂದು ಒಳ್ಳೇ ಮನಸ್ಸಾಕ್ಷಿಗಾಗಿ ವಿನಂತಿಸಿದೆವು ಮತ್ತು ನಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡೆವು. (1 ಪೇತ್ರ 3:21) ಈ ಎಲ್ಲ ಹೆಜ್ಜೆಗಳ ಕುರಿತಾಗಿ ಯೋಚಿಸುವುದು, ನಾವು ನಮ್ಮ ಸಮರ್ಪಣೆಗನುಸಾರ ಜೀವಿಸಲು ಮತ್ತು ಯೆಹೋವನನ್ನು ಸ್ಥಿರವಾದ ಹೃದಯದೊಂದಿಗೆ ಸೇವಿಸುತ್ತಾ ಇರುವ ಅಗತ್ಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ನಮಗೆ ಸಹಾಯಮಾಡುವುದು.

ನಿಷ್ಕೃಷ್ಟ ಜ್ಞಾನಕ್ಕಾಗಿರುವ ನಿಮ್ಮ ಅನ್ವೇಷಣೆಯನ್ನು ಮುಂದುವರಿಸಿರಿ

5. ನಾವು ಶಾಸ್ತ್ರೀಯ ಜ್ಞಾನವನ್ನು ಏಕೆ ತೆಗೆದುಕೊಳ್ಳುತ್ತಾ ಇರಬೇಕು?

5 ನಾವು ದೇವರಿಗೆ ಮಾಡಿರುವ ಸಮರ್ಪಣೆಗನುಸಾರವಾಗಿ ಜೀವಿಸಲು, ನಂಬಿಕೆ ಕಟ್ಟುವಂಥ ಶಾಸ್ತ್ರೀಯ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇರಬೇಕು. ನಾವು ಮೊತ್ತಮೊದಲ ಬಾರಿ ದೇವರ ಸತ್ಯದೊಂದಿಗೆ ಪರಿಚಿತರಾದಾಗ, ಆತ್ಮಿಕ ಆಹಾರವನ್ನು ಸೇವಿಸುವುದು ನಮಗೆಷ್ಟು ಹರ್ಷದಾಯಕವಾಗಿತ್ತು! (ಮತ್ತಾಯ 24:​45-47) ಆ “ಊಟಗಳು” ಸ್ವಾದಿಷ್ಟವಾಗಿದ್ದವು, ಮತ್ತು ನಮ್ಮನ್ನು ಆತ್ಮಿಕವಾಗಿ ಚೆನ್ನಾಗಿ ಪುಷ್ಟೀಕರಿಸಿದವು. ಈಗ, ಯೆಹೋವನ ಸಮರ್ಪಿತ ಸೇವಕರೋಪಾದಿ ಒಂದು ಸ್ಥಿರವಾದ ಹೃದಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಆ ಪೌಷ್ಠಿಕ ಆತ್ಮಿಕ ಆಹಾರವನ್ನು ತೆಗೆದುಕೊಳ್ಳುತ್ತಾ ಇರುವುದು ಅತ್ಯಾವಶ್ಯಕವಾಗಿದೆ.

6. ಬೈಬಲ್‌ ಸತ್ಯಕ್ಕಾಗಿ ಹೃತ್ಪೂರ್ವಕ ಗಣ್ಯತೆಯನ್ನು ಬೆಳೆಸಲಿಕ್ಕಾಗಿ ನೀವು ಹೇಗೆ ಸಹಾಯಮಾಡಲ್ಪಟ್ಟಿರಬಹುದು?

6 ಶಾಸ್ತ್ರವಚನಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಗಳಿಸಲಿಕ್ಕಾಗಿ ಶ್ರಮಪಡಬೇಕು. ಅದು ಗುಪ್ತ ನಿಧಿಗಾಗಿ ಹುಡುಕುವಂತೆಯೇ ಇದೆ. ಇದಕ್ಕಾಗಿ ಪ್ರಯಾಸದ ಆವಶ್ಯಕತೆಯಿದೆ. ಆದರೆ “ದೈವಜ್ಞಾನವನ್ನು” ಕಂಡುಕೊಳ್ಳುವುದು ಎಷ್ಟು ಪ್ರತಿಫಲದಾಯಕವಾಗಿದೆ! (ಜ್ಞಾನೋಕ್ತಿ 2:​1-6) ಒಬ್ಬ ರಾಜ್ಯ ಪ್ರಚಾರಕನು/ಳು ನಿಮ್ಮೊಂದಿಗೆ ಆರಂಭದಲ್ಲಿ ಬೈಬಲ್‌ ಅಧ್ಯಯನ ಮಾಡಿದಾಗ, ಅವನು ಇಲ್ಲವೇ ಅವಳು ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಉಪಯೋಗಿಸಿರಬಹುದು. ಪ್ರತಿಯೊಂದು ಅಧ್ಯಾಯವನ್ನು ಚರ್ಚಿಸಲಿಕ್ಕಾಗಿ ಸಾಕಷ್ಟು ಸಮಯ, ಪ್ರಾಯಶಃ ಒಂದಕ್ಕಿಂತ ಹೆಚ್ಚು ಅಧ್ಯಯನಾವಧಿಯು ಉಪಯೋಗಿಸಲ್ಪಟ್ಟಿರಬಹುದು. ಕೊಡಲ್ಪಟ್ಟಿದ್ದ ವಚನಗಳನ್ನು ಓದಿ ಚರ್ಚಿಸಲಾದಾಗ ನೀವು ಪ್ರಯೋಜನ ಹೊಂದಿದ್ದೀರಿ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದ್ದಾಗ ಅದನ್ನು ನಿಮಗೆ ವಿವರಿಸಿ ಹೇಳಲಾಯಿತು. ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಿದವರು ಚೆನ್ನಾಗಿ ತಯಾರಿಮಾಡಿದರು, ದೇವರ ಆತ್ಮಕ್ಕಾಗಿ ಪ್ರಾರ್ಥಿಸಿದರು, ಮತ್ತು ನೀವು ಸತ್ಯಕ್ಕಾಗಿ ಹೃತ್ಪೂರ್ವಕವಾದ ಕೃತಜ್ಞತಾಭಾವವನ್ನು ಬೆಳೆಸಲಿಕ್ಕಾಗಿ ಸಹಾಯಮಾಡಿದರು.

7. ಒಬ್ಬ ವ್ಯಕ್ತಿಯು ಇತರರಿಗೆ ದೇವರ ಸತ್ಯವನ್ನು ಕಲಿಸುವಂತೆ ಯಾವುದು ಅರ್ಹಗೊಳಿಸುತ್ತದೆ?

7 ಈ ಪ್ರಯತ್ನವು ಸೂಕ್ತವಾಗಿತ್ತು, ಯಾಕೆಂದರೆ ಪೌಲನು ಬರೆದುದು: “ದೇವರ ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶಮಾಡುವವನೊಂದಿಗೆ ಎಲ್ಲಾ ಒಳ್ಳೆಯ ವಿಷಯಗಳಲ್ಲಿ ಪಾಲ್ಗೊಳ್ಳಲಿ.” (ಗಲಾತ್ಯ 6:6, NW) ‘ಉಪದೇಶಹೊಂದುವವನ’ ಹೃದಮನಗಳಲ್ಲಿ ದೇವರ ವಾಕ್ಯದ ಬೋಧನೆಗಳು ಬೇರೂರಿಸಲ್ಪಟ್ಟವು ಎಂದು ಗ್ರೀಕ್‌ ಗ್ರಂಥಪಾಠವು ಇಲ್ಲಿ ಸೂಚಿಸುತ್ತದೆ. ನಿಮಗೆ ಆ ವಿಧದಲ್ಲಿ ಕಲಿಸಲ್ಪಡುವುದು, ನೀವು ಸಹ ಇನ್ನಿತರರಿಗೆ ಬೋಧಕರಾಗಿರುವಂತೆ ನಿಮ್ಮನ್ನು ಅರ್ಹಗೊಳಿಸುತ್ತದೆ. (ಅ. ಕೃತ್ಯಗಳು 18:25) ಆದರೆ ನಿಮ್ಮ ಸಮರ್ಪಣೆಗೆ ನಂಬಿಗಸ್ತರಾಗಿರಲು, ನೀವು ದೇವರ ವಾಕ್ಯದ ಈ ಅಧ್ಯಯನವನ್ನು ಸತತವಾಗಿ ಮಾಡುತ್ತಾ ಇರುವ ಮೂಲಕ ನಿಮ್ಮ ಆತ್ಮಿಕ ಆರೋಗ್ಯ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು.​—1 ತಿಮೊಥೆಯ 4:13; ತೀತ 1:​13; 2:2.

ನಿಮ್ಮ ಪಶ್ಚಾತ್ತಾಪ ಮತ್ತು ಪರಿವರ್ತನೆಯನ್ನು ನೆನಪಿನಲ್ಲಿಡಿರಿ

8. ದೈವಿಕ ನಡತೆಯನ್ನು ಹೇಗೆ ಕಾಪಾಡಿಕೊಳ್ಳಲು ಸಾಧ್ಯವಿದೆ?

8 ನೀವು ಸತ್ಯವನ್ನು ಕಲಿತುಕೊಂಡು, ಪಶ್ಚಾತ್ತಾಪಪಟ್ಟು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೇಲಣ ನಂಬಿಕೆಯ ಆಧಾರದ ಮೇಲೆ ದೇವರ ಕ್ಷಮೆಯನ್ನು ಅನುಭವಿಸಿದಾಗ, ನಿಮಗಾದ ನೆಮ್ಮದಿಯ ಭಾವನೆಯು ನೆನಪಿದೆಯೊ? (ಕೀರ್ತನೆ 32:​1-5; ರೋಮಾಪುರ 5:8; 1 ಪೇತ್ರ 3:18) ಖಂಡಿತವಾಗಿಯೂ ನೀವು ಒಂದು ಪಾಪಪೂರ್ಣ ಜೀವಿತಕ್ಕೆ ಮರಳಿಹೋಗಲು ಬಯಸುವುದಿಲ್ಲ. (2 ಪೇತ್ರ 2:​20-22) ದೈವಿಕ ನಡತೆಯನ್ನು ಕಾಪಾಡಿಕೊಳ್ಳಲು, ನಿಮ್ಮ ಸಮರ್ಪಣೆಗನುಸಾರ ಜೀವಿಸಲು, ಮತ್ತು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಬೇರೆ ಸಂಗತಿಗಳೊಂದಿಗೆ ಯೆಹೋವನಿಗೆ ಕ್ರಮವಾದ ಪ್ರಾರ್ಥನೆಯೂ ನಿಮಗೆ ಸಹಾಯಮಾಡುವುದು.​—2 ಪೇತ್ರ 3:​11, 12.

9. ಪಾಪಪೂರ್ಣ ಆಚರಣೆಗಳಿಂದ ನಾವು ತಿರುಗಿರುವುದರಿಂದ ಈಗ ಯಾವ ಮಾರ್ಗವನ್ನು ಬೆನ್ನಟ್ಟಬೇಕು?

9 ಪಾಪಪೂರ್ಣ ಆಚರಣೆಗಳಿಂದ ತಿರುಗಿಕೊಳ್ಳುವ ಮೂಲಕ ಪರಿವರ್ತನೆ ಹೊಂದಿದ ನಂತರ ನಿಮ್ಮ ಹೃದಯವನ್ನು ಸ್ಥಿರವಾಗಿಡಲಿಕ್ಕಾಗಿ ದೇವರ ಸಹಾಯವನ್ನು ಕೋರುತ್ತಾ ಇರ್ರಿ. ಕಾರ್ಯತಃ ನೀವು ಒಂದು ಸಮಯದಲ್ಲಿ ತಪ್ಪಾದ ಹೆದ್ದಾರಿಯಲ್ಲಿ ಹೋಗುತ್ತಿದ್ದೀರಿ. ಆದರೆ ನೀವು ಒಂದು ವಿಶ್ವಸನೀಯ ಭೂಪಟವನ್ನು ವಿಚಾರಿಸಿ, ಸರಿಯಾದ ಮಾರ್ಗದಲ್ಲಿ ಪ್ರಯಾಣಿಸಲು ಆರಂಭಿಸಿದ್ದೀರಿ. ಈಗ ನಿಮ್ಮ ಮಾರ್ಗದಿಂದ ತಪ್ಪಿಹೋಗಬೇಡಿರಿ. ದೇವರ ವಾಕ್ಯದ ಮೇಲೆ ಆತುಕೊಳ್ಳುತ್ತಾ ಇರ್ರಿ ಮತ್ತು ಜೀವಕ್ಕೆ ನಡೆಸುವ ಮಾರ್ಗದಲ್ಲಿ ಉಳಿಯಲು ದೃಢಸಂಕಲ್ಪವುಳ್ಳವರಾಗಿರ್ರಿ.​—ಯೆಶಾಯ 30:​20, 21; ಮತ್ತಾಯ 7:​13, 14.

ನಿಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನವನ್ನು ಎಂದಿಗೂ ಮರೆಯಬೇಡಿರಿ

10. ದೇವರಿಗೆ ನಾವು ಮಾಡಿರುವ ಸಮರ್ಪಣೆಯ ಬಗ್ಗೆ ನಾವು ಯಾವ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?

10 ನಿತ್ಯಕ್ಕೂ ನಂಬಿಗಸ್ತಿಕೆಯಿಂದ ಸೇವೆಮಾಡುವ ನಿರೀಕ್ಷೆಯೊಂದಿಗೆ ನೀವು ಪ್ರಾರ್ಥನೆಯ ಮೂಲಕ ಯೆಹೋವನಿಗೆ ಸಮರ್ಪಣೆಯನ್ನು ಮಾಡಿದ್ದೀರೆಂಬುದನ್ನು ಮನಸ್ಸಿನಲ್ಲಿಡಿರಿ. (ಯೂದ 20, 21) ಸಮರ್ಪಣೆಯು, ಒಂದು ಪವಿತ್ರ ಉದ್ದೇಶಕ್ಕಾಗಿ ಮೀಸಲಾಗಿರಿಸುವುದನ್ನು ಅಥವಾ ಪ್ರತ್ಯೇಕವಾಗಿರಿಸುವುದನ್ನು ಸೂಚಿಸುತ್ತದೆ. (ಯಾಜಕಕಾಂಡ 15:31; 22:2) ನಿಮ್ಮ ಸಮರ್ಪಣೆಯು ಒಂದು ತಾತ್ಕಾಲಿಕ ಒಪ್ಪಂದವಾಗಲಿ, ಮನುಷ್ಯರಿಗೆ ಮಾಡಿದ ಒಂದು ವಚನಬದ್ಧತೆಯಾಗಲಿ ಆಗಿರಲಿಲ್ಲ. ಅದು ಇಡೀ ವಿಶ್ವದ ಪರಮಾಧಿಕಾರಿಗೆ ಮಾಡಲ್ಪಟ್ಟ ಒಂದು ಕಾಯಂ ಸಮರ್ಪಣೆಯಾಗಿತ್ತು, ಮತ್ತು ಆ ಸಮರ್ಪಣೆಗನುಸಾರವಾಗಿ ಜೀವಿಸುವುದು, ದೇವರಿಗೆ ಜೀವನಪರ್ಯಂತ ನಿಷ್ಠೆ ತೋರಿಸುವುದನ್ನು ಅವಶ್ಯಪಡಿಸುತ್ತದೆ. ಹೌದು, ‘ನಾವು ಬದುಕಿದರೂ ಸತ್ತರೂ ನಾವು ಯೆಹೋವನವರೇ.’ (ರೋಮಾಪುರ 14:​7, 8, NW) ನಮ್ಮ ಸಂತೋಷವು, ಆತನ ಚಿತ್ತಕ್ಕೆ ನಮ್ಮ ಅಧೀನತೆ ಮತ್ತು ನಾವು ಆತನನ್ನು ಒಂದು ಸ್ಥಿರವಾದ ಹೃದಯದೊಂದಿಗೆ ಸೇವಿಸುತ್ತಾ ಇರುವುದರ ಮೇಲೆ ಅವಲಂಬಿಸಿರುತ್ತದೆ.

11. ನೀವು ನಿಮ್ಮ ದೀಕ್ಷಾಸ್ನಾನ ಮತ್ತು ಅದರ ಅರ್ಥವನ್ನು ಏಕೆ ಸದಾ ನೆನಪಿನಲ್ಲಿಡಬೇಕು?

11 ದೇವರಿಗೆ ನೀವು ಮಾಡಿದ ಪೂರ್ಣಹೃದಯದ ಸಮರ್ಪಣೆಯ ಸಂಕೇತವಾಗಿ ನೀವು ಮಾಡಿಸಿಕೊಂಡ ದೀಕ್ಷಾಸ್ನಾನವನ್ನು ಯಾವಾಗಲೂ ನೆನಪಿನಲ್ಲಿಡಿರಿ. ಆ ದೀಕ್ಷಾಸ್ನಾನವನ್ನು ಒತ್ತಾಯದಿಂದ ಮಾಡಲಾಗಲಿಲ್ಲ, ಏಕೆಂದರೆ ನೀವಾಗಿಯೇ ಆ ನಿರ್ಣಯವನ್ನು ಮಾಡಿದಿರಿ. ಈಗ ನಿಮ್ಮ ಉಳಿದ ಜೀವಮಾನದುದ್ದಕ್ಕೂ, ನಿಮ್ಮ ಇಚ್ಛೆಯನ್ನು ದೈವಿಕ ಚಿತ್ತದೊಂದಿಗೆ ಸರಿಹೊಂದಿಸಲು ನೀವು ದೃಢನಿರ್ಧಾರವುಳ್ಳವರಾಗಿದ್ದೀರೊ? ಒಂದು ಒಳ್ಳೇ ಮನಸ್ಸಾಕ್ಷಿಗಾಗಿ ನೀವು ದೇವರಿಗೆ ವಿನಂತಿಯನ್ನು ಮಾಡಿ, ಆತನಿಗೆ ನೀವು ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಹೊಂದಿದ್ದೀರಿ. ಈಗ ನಿಮ್ಮ ಸಮರ್ಪಣೆಯನ್ನು ಪೂರೈಸುವ ಮೂಲಕ ಆ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿರಿ, ಆಗ ಯೆಹೋವನ ಸಮೃದ್ಧ ಆಶೀರ್ವಾದವು ನಿಮ್ಮ ಮೇಲೆ ನೆಲೆಸುವುದು.​—ಜ್ಞಾನೋಕ್ತಿ 10:22.

ನಿಮ್ಮ ಇಚ್ಛೆಯು ಪಾತ್ರವಹಿಸುತ್ತದೆ

12, 13. ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ನಮ್ಮ ಸ್ವಂತ ಇಚ್ಛೆ ಹೇಗೆ ಸಂಬಂಧಿಸಿದೆ?

12 ಸಮರ್ಪಣೆ ಮತ್ತು ದೀಕ್ಷಾಸ್ನಾನವು ನಿಜವಾಗಿಯೂ ಲೋಕದಾದ್ಯಂತ ಲಕ್ಷಾಂತರ ಜನರಿಗೆ ಮಹಾ ಆಶೀರ್ವಾದಗಳನ್ನು ತಂದಿದೆ. ನೀರಿನ ದೀಕ್ಷಾಸ್ನಾನವನ್ನು ಹೊಂದುವ ಮೂಲಕ ನಾವು ನಮ್ಮ ಸಮರ್ಪಣೆಯನ್ನು ಸಂಕೇತಿಸುವಾಗ, ನಮ್ಮ ಗತ ಜೀವನರೀತಿಯ ಸಂಬಂಧದಲ್ಲಿ ನಾವು ಸಾಯುತ್ತೇವೆ ನಿಜ. ಆದರೆ ನಮ್ಮ ಸ್ವಂತ ಇಚ್ಛೆಯ ಸಂಬಂಧದಲ್ಲಿ ನಾವು ಸಾಯುವುದಿಲ್ಲ. ಸರಿಯಾಗಿ ಉಪದೇಶಿಸಲ್ಪಟ್ಟಿರುವ ವಿಶ್ವಾಸಿಗಳೋಪಾದಿ, ನಾವು ಪ್ರಾರ್ಥನೆಯಲ್ಲಿ ದೇವರಿಗೆ ಸಮರ್ಪಣೆಯನ್ನು ಮಾಡಿ, ದೀಕ್ಷಾಸ್ನಾನ ಹೊಂದಿದಾಗ ವಾಸ್ತವದಲ್ಲಿ ನಮ್ಮ ಸ್ವಂತ ಇಚ್ಛೆಯ ಪ್ರಕಾರವೇ ಕ್ರಿಯೆಗೈದೆವು. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮಾರ್ಗಕ್ರಮವು, ದೇವರ ಚಿತ್ತವೇನಾಗಿದೆ ಎಂಬುದನ್ನು ನಾವು ನಿರ್ಧರಿಸಿ ಅದನ್ನು ಮಾಡಲು ಉದ್ದೇಶಪೂರ್ವಕವಾಗಿ ಆಯ್ಕೆಮಾಡುವುದನ್ನು ಅವಶ್ಯಪಡಿಸುತ್ತದೆ. (ಎಫೆಸ 5:17) ಈ ರೀತಿಯಲ್ಲಿ ನಾವು ಯೇಸುವನ್ನು ಅನುಕರಿಸುತ್ತೇವೆ. ಅವನು ತನ್ನ ಬಡಗಿ ಕೆಲಸವನ್ನು ಬಿಟ್ಟು, ದೀಕ್ಷಾಸ್ನಾನ ಹೊಂದಿ, ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ತನ್ನನ್ನೇ ಸಂಪೂರ್ಣವಾಗಿ ಅರ್ಪಿಸಿದಾಗ ಅವನು ತನ್ನ ಸ್ವಂತ ಇಚ್ಛೆಯ ಪ್ರಕಾರವೇ ಕ್ರಿಯೆಗೈದನು.​—ಕೀರ್ತನೆ 40:​7, 8; ಯೋಹಾನ 6:​38-40.

13 ತನ್ನ ಮಗನು “ಬಾಧೆಗಳ ಮೂಲಕ ಸಿದ್ಧಿಗೆ” ತರಲ್ಪಡುವನೆಂದು ಯೆಹೋವ ದೇವರು ಉದ್ದೇಶಿಸಿದನು. ಆದುದರಿಂದ ಅಂಥ ಕಷ್ಟಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳಲಿಕ್ಕಾಗಿ ಯೇಸು ತನ್ನ ಇಚ್ಛೆಯನ್ನು ಪ್ರಯೋಗಿಸಬೇಕಾಯಿತು. ಆ ಉದ್ದೇಶಕ್ಕಾಗಿ ಅವನು “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 2:10, 18; 5:7, 8) ನಾವು ಸಹ ಅದೇ ರೀತಿಯಲ್ಲಿ ದೇವರ ಕುರಿತು ಪೂಜ್ಯಭಾವನೆಯ ಭಯವನ್ನು ಪ್ರದರ್ಶಿಸುವಲ್ಲಿ, ನಾವು ಸಹ ‘ಕೇಳಲ್ಪಡುವೆವು’ ಎಂಬ ಖಾತ್ರಿ ನಮಗಿದೆ ಮತ್ತು ಯೆಹೋವನು ನಮ್ಮನ್ನು ತನ್ನ ಸಮರ್ಪಿತ ಸಾಕ್ಷಿಗಳೋಪಾದಿ ಸ್ಥಿರರನ್ನಾಗಿ ಮಾಡುವನೆಂಬ ಭರವಸೆ ನಮಗಿರಬಲ್ಲದು.​—ಯೆಶಾಯ 43:10.

ನೀವೊಂದು ಸ್ಥಿರವಾದ ಹೃದಯವನ್ನು ಕಾಪಾಡಿಕೊಳ್ಳಬಲ್ಲಿರಿ

14. ನಾವು ಬೈಬಲನ್ನು ಏಕೆ ದಿನಾಲೂ ಓದಬೇಕು?

14 ಒಂದು ಸ್ಥಿರವಾದ ಹೃದಯವನ್ನು ಕಾಪಾಡಿಕೊಳ್ಳುವ ಮೂಲಕ, ನೀವು ದೇವರಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸುವಂತೆ ಯಾವುದು ಸಹಾಯಮಾಡುವುದು? ದೇವರ ವಾಕ್ಯದ ಸದಾ ಹೆಚ್ಚುತ್ತಿರುವ ಜ್ಞಾನವನ್ನು ಗಳಿಸುವ ಉದ್ದೇಶದಿಂದ ದಿನಾಲೂ ಬೈಬಲನ್ನು ಓದಿರಿ. ಇದು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ನಮಗೆ ಮಾಡುವಂತೆ ನಿರಂತರವಾಗಿ ಉತ್ತೇಜಿಸುವ ವಿಷಯವಾಗಿದೆ. ನಮ್ಮ ಸಮರ್ಪಣೆಗನುಗುಣವಾಗಿ ಜೀವಿಸುವುದರಲ್ಲಿ ನಾವು ದೇವರ ಸತ್ಯದಲ್ಲಿ ನಡೆಯುತ್ತಾ ಇರುವುದು ಆವಶ್ಯಕವಾಗಿರುವುದರಿಂದ ಇಂಥ ಸಲಹೆಯನ್ನು ಕೊಡಲಾಗುತ್ತದೆ. ಒಂದುವೇಳೆ ಯೆಹೋವನ ಸಂಸ್ಥೆಯು ಬೇಕುಬೇಕೆಂದೇ ಸುಳ್ಳು ಬೋಧನೆಗಳನ್ನು ಅನುಮೋದಿಸುತ್ತಿದ್ದರೆ, ಯೆಹೋವನ ಸಾಕ್ಷಿಗಳಿಗೆ ಮತ್ತು ಅವರು ಸಾರುವಂಥ ಇತರ ಜನರಿಗೆ ಬೈಬಲನ್ನು ಓದುವ ಸಲಹೆಯನ್ನು ಎಂದೂ ಕೊಡಲಾಗುತ್ತಿರಲಿಲ್ಲ.

15. (ಎ) ನಿರ್ಣಯಗಳನ್ನು ಮಾಡುವಾಗ ಏನು ಪರಿಗಣಿಸಲ್ಪಡಬೇಕು? (ಬಿ) ಐಹಿಕ ಉದ್ಯೋಗವು ಒಬ್ಬ ಕ್ರೈಸ್ತನ ಉಪಕಸಬು ಆಗಿದೆಯೆಂದು ಏಕೆ ಹೇಳಸಾಧ್ಯವಿದೆ?

15 ನಿರ್ಣಯಗಳನ್ನು ಮಾಡುವಾಗ ಅವು, ಯೆಹೋವನಿಗೆ ನೀವು ಮಾಡಿದಂಥ ಸಮರ್ಪಣೆಯನ್ನು ಪೂರೈಸುವುದನ್ನು ಹೇಗೆ ಪ್ರಭಾವಿಸಬಲ್ಲವೆಂಬುದನ್ನು ಯಾವಾಗಲೂ ಪರಿಗಣಿಸಿರಿ. ಇದು ನಿಮ್ಮ ಐಹಿಕ ಕೆಲಸದೊಂದಿಗೆ ಸಂಬಂಧಿಸಿರಬಹುದು. ನೀವು ಸತ್ಯಾರಾಧನೆಯನ್ನು ಮುಂದಿಡುವಂತೆ ಅದು ನಿಮಗೆ ಸಹಾಯಮಾಡುತ್ತದೊ? ಸಮರ್ಪಿತ ಕ್ರೈಸ್ತರು ವಿಶ್ವಾಸಾರ್ಹರೂ, ಕಾರ್ಯದಕ್ಷರೂ ಆಗಿದ್ದಾರೆಂಬುದನ್ನು ಸಾಮಾನ್ಯವಾಗಿ ಮಾಲೀಕರು ಕಂಡುಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಲೋಕದಲ್ಲಿ ಎಲ್ಲರಿಗಿಂತಲೂ ಮುಂದೆ ಹೋಗುವ ಹೆಬ್ಬಯಕೆಯಿಂದ ಪ್ರೇರಿಸಲ್ಪಡುವುದಿಲ್ಲ ಮತ್ತು ಅತಿ ಉನ್ನತವಾದ ಲಾಭದಾಯಕ ಹುದ್ದೆಗಳಿಗಾಗಿ ಇತರರೊಂದಿಗೆ ಪೈಪೋಟಿ ನಡೆಸುವುದಿಲ್ಲ ಎಂಬುದನ್ನು ಸಹ ಅವರು ಗಮನಿಸುತ್ತಾರೆ. ಏಕೆಂದರೆ ಸಾಕ್ಷಿಗಳ ಗುರಿ ಐಶ್ವರ್ಯ, ಖ್ಯಾತಿ, ಪ್ರತಿಷ್ಠೆ ಇಲ್ಲವೇ ಅಧಿಕಾರವನ್ನು ಗಿಟ್ಟಿಸಿಕೊಳ್ಳುವುದು ಆಗಿರುವುದಿಲ್ಲ. ದೇವರಿಗೆ ತಾವು ಮಾಡಿದ ಸಮರ್ಪಣೆಗನುಸಾರವಾಗಿ ಜೀವಿಸುವವರಿಗೆ, ದೇವರ ಚಿತ್ತವನ್ನು ಮಾಡುವುದೇ ಅತಿ ಪ್ರಾಮುಖ್ಯ ವಿಷಯವಾಗಿರುತ್ತದೆ. ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವುದನ್ನು ಸಾಧ್ಯಮಾಡುವ ಐಹಿಕ ಉದ್ಯೋಗವು, ಒಂದು ಉಪಕಸಬು, ಅಂದರೆ ಎರಡನೆಯ ಸ್ಥಾನಕ್ಕೆ ಬರುವ ವೃತ್ತಿಯಾಗಿದೆ ಅಷ್ಟೇ. ಅಪೊಸ್ತಲ ಪೌಲನಂತೆ, ಅವರ ಮುಖ್ಯ ಕಸಬು ಇಲ್ಲವೇ ಪ್ರಧಾನ ಕೆಲಸವು ಕ್ರೈಸ್ತ ಶುಶ್ರೂಷೆಯಾಗಿದೆ. (ಅ. ಕೃತ್ಯಗಳು 18:​3, 4; 2 ಥೆಸಲೊನೀಕ 3:​7, 8; 1 ತಿಮೊಥೆಯ 5:8) ನಿಮ್ಮ ಜೀವಿತದಲ್ಲಿ ನೀವು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುತ್ತೀರೊ?​—ಮತ್ತಾಯ 6:​25-33.

16. ಅನುಚಿತವಾದ ಚಿಂತೆಯು, ನಾವು ದೇವರಿಗೆ ಮಾಡಿರುವ ಸಮರ್ಪಣೆಗನುಸಾರವಾಗಿ ಜೀವಿಸುವುದನ್ನು ಕಷ್ಟಕರವನ್ನಾಗಿ ಮಾಡುತ್ತಿರುವಲ್ಲಿ ನಾವೇನು ಮಾಡಬಲ್ಲೆವು?

16 ಕೆಲವರು ಸತ್ಯವನ್ನು ಕಲಿಯುವ ಮುಂಚೆ ವಿಭಿನ್ನವಾದ ಚಿಂತೆಗಳಿಂದ ಬಹುಮಟ್ಟಿಗೆ ಮುಳುಗಿಹೋಗಿರಬಹುದು. ಆದರೆ ಅವರು ರಾಜ್ಯದ ನಿರೀಕ್ಷೆಯನ್ನು ಅಂಗೀಕರಿಸಿದಾಗ, ಅವರ ಹೃದಯವು ಆನಂದ, ಕೃತಜ್ಞತೆ ಮತ್ತು ದೇವರಿಗಾಗಿ ಪ್ರೀತಿಯಿಂದ ಎಷ್ಟು ತುಂಬಿಬಂತು! ಅಂದಿನಿಂದ ಅವರು ಆನಂದಿಸಿರುವ ಆಶೀರ್ವಾದಗಳ ಕುರಿತಾಗಿ ಯೋಚಿಸುವುದು, ಅವರು ತಾವು ಯೆಹೋವನಿಗೆ ಮಾಡಿರುವ ಸಮರ್ಪಣೆಗನುಸಾರವಾಗಿ ಜೀವಿಸುವಂತೆ ಸಹಾಯಮಾಡಿರಬಹುದು. ಆದರೆ ಇನ್ನೊಂದು ಕಡೆ, ಬೀಜಗಳು ಫಲವನ್ನು ಉತ್ಪಾದಿಸುವ ಪ್ರೌಢಾವಸ್ಥೆಯನ್ನು ತಲಪುವುದರಿಂದ ತಡೆಗಟ್ಟುವ ಮುಳ್ಳುಗಳಂತೆ ಈ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿರುವಂಥ ಸಮಸ್ಯೆಗಳ ಕುರಿತಾಗಿ ಅನುಚಿತವಾದ ಚಿಂತೆಯು “ದೇವರ ವಾಕ್ಯ”ವನ್ನು ಅಡಗಿಸುವ ಬೆದರಿಕೆಯೊಡ್ಡುವುದಾದರೆ ಆಗೇನು? (ಲೂಕ 8:​7, 11, 14; ಮತ್ತಾಯ 13:22; ಮಾರ್ಕ 4:​18, 19) ಇದು ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಸಂಭವಿಸಲು ಆರಂಭಿಸುತ್ತಿದೆಯೆಂದು ನಿಮಗೆ ಅರಿವಾಗುವಲ್ಲಿ, ಯೆಹೋವನ ಮೇಲೆ ನಿಮ್ಮ ಚಿಂತೆಯನ್ನು ಹಾಕಿ, ನೀವು ಪ್ರೀತಿ ಮತ್ತು ಗಣ್ಯತೆಯಲ್ಲಿ ಬೆಳೆಯುವಂತೆ ಸಹಾಯಮಾಡಲಿಕ್ಕಾಗಿ ಪ್ರಾರ್ಥಿಸಿರಿ. ನಿಮ್ಮ ಚಿಂತಾಭಾರವನ್ನು ಆತನ ಮೇಲೆ ಹಾಕಿದರೆ, ಆತನು ನಿಮ್ಮನ್ನು ಪೋಷಿಸುವನು, ಮತ್ತು ಒಂದು ಸ್ಥಿರವಾದ ಹೃದಯದೊಂದಿಗೆ ಆತನನ್ನು ಸಂತೋಷದಿಂದ ಸೇವಿಸುತ್ತಾ ಇರಲು ಬೇಕಾದ ಶಕ್ತಿಯನ್ನು ಕೊಡುವನು.​—ಕೀರ್ತನೆ 55:22; ಫಿಲಿಪ್ಪಿ 4:​6, 7; ಪ್ರಕಟನೆ 2:4.

17. ಕಠಿನವಾದ ಪರೀಕ್ಷೆಗಳನ್ನು ನಿಭಾಯಿಸುವುದು ಹೇಗೆ ಸಾಧ್ಯ?

17 ನೀವು ಯೆಹೋವ ದೇವರಿಗೆ ಸಮರ್ಪಣೆಯನ್ನು ಮಾಡಿದಾಗ ಪ್ರಾರ್ಥಿಸಿದಂತೆಯೇ, ಆತನಿಗೆ ಕ್ರಮವಾಗಿ ಪ್ರಾರ್ಥನೆ ಮಾಡುತ್ತಾ ಇರ್ರಿ. (ಕೀರ್ತನೆ 65:2) ತಪ್ಪುಮಾಡುವಂತೆ ಶೋಧಿಸಲ್ಪಟ್ಟಾಗ ಇಲ್ಲವೇ ಒಂದು ಕಠಿನವಾದ ಪರೀಕ್ಷೆಯನ್ನು ಎದುರಿಸುತ್ತಿರುವಾಗ ದೇವರ ಮಾರ್ಗದರ್ಶನವನ್ನು ಮತ್ತು ಅದನ್ನು ಅನುಸರಿಸುವಂತೆ ಆತನ ಸಹಾಯವನ್ನು ಕೋರಿರಿ. ನಂಬಿಕೆಯ ಅಗತ್ಯವನ್ನು ಮನಸ್ಸಿನಲ್ಲಿಡಿರಿ. ಯಾಕೆಂದರೆ ಶಿಷ್ಯನಾದ ಯಾಕೋಬನು ಬರೆದುದು: “ನಿಮ್ಮಲ್ಲಿ ಯಾವನಿಗಾದರೂ [ಒಂದು ಪರೀಕ್ಷೆಯನ್ನು ನಿಭಾಯಿಸಲಿಕ್ಕಾಗಿ] ಜ್ಞಾನ [“ವಿವೇಕ,” NW] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.” (ಯಾಕೋಬ 1:5-8) ಒಂದು ಸಂಕಷ್ಟವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲವೆಂದು ತೋರುವಾಗ, ಈ ವಿಷಯದ ಕುರಿತಾಗಿ ನಾವು ಖಾತ್ರಿಯಿಂದಿರಬಲ್ಲೆವು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”​—1 ಕೊರಿಂಥ 10:13.

18. ಮುಚ್ಚಿಡಲ್ಪಟ್ಟಿರುವ ಒಂದು ಗಂಭೀರವಾದ ಪಾಪವು, ಯೆಹೋವನಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸುವ ನಮ್ಮ ದೃಢಸಂಕಲ್ಪವನ್ನು ದುರ್ಬಲಗೊಳಿಸುತ್ತಾ ಇರುವಲ್ಲಿ ನಾವೇನು ಮಾಡಬಲ್ಲೆವು?

18 ನೀವು ಮಾಡಿರುವ ಆದರೆ ಮುಚ್ಚಿಟ್ಟಿರುವ ಒಂದು ಗಂಭೀರವಾದ ಪಾಪವು ನಿಮ್ಮ ಮನಸ್ಸಾಕ್ಷಿಯನ್ನು ಚುಚ್ಚುತ್ತಾ ಇದ್ದು, ದೇವರಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸುವ ನಿಮ್ಮ ದೃಢಸಂಕಲ್ಪವನ್ನು ದುರ್ಬಲಗೊಳಿಸುತ್ತಾ ಇರುವಲ್ಲಿ ಆಗೇನು? ನೀವು ಪಶ್ಚಾತ್ತಾಪಪಟ್ಟಿರುವಲ್ಲಿ, ಯೆಹೋವನು ‘ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ’ ಎಂಬ ವಿಚಾರದಿಂದ ನೀವು ಸಾಂತ್ವನ ಪಡೆಯಬಹುದು. (ಕೀರ್ತನೆ 51:17) ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ಒಂದು ಒಳ್ಳೆಯ ಸಂಬಂಧದ ಪುನಸ್ಸ್ಥಾಪನೆಯಲ್ಲಿ ಆನಂದಿಸುವ ನಿಮ್ಮ ಆಸೆಯನ್ನು ಹಗುರವೆಂದೆಣಿಸದ ಮತ್ತು ಯೆಹೋವನನ್ನು ಅನುಕರಿಸುವ ಪ್ರೀತಿಪರ ಕ್ರೈಸ್ತ ಹಿರಿಯರ ಸಹಾಯವನ್ನು ಕೋರಿರಿ. (ಕೀರ್ತನೆ 103:​10-14; ಯಾಕೋಬ 5:​13-15) ಅನಂತರ, ನವೀಕರಿಸಲ್ಪಟ್ಟ ಆತ್ಮಿಕ ಶಕ್ತಿ ಹಾಗೂ ಸ್ಥಿರವಾದ ಹೃದಯದೊಂದಿಗೆ, ನೀವು ನಿಮ್ಮ ಪಾದಗಳಿಗಾಗಿ ನೇರವಾದ ಮಾರ್ಗಗಳನ್ನು ಮಾಡಲು ಶಕ್ತರಾಗುವಿರಿ ಮತ್ತು ದೇವರಿಗೆ ನೀವು ಮಾಡಿದ ಸಮರ್ಪಣೆಗನುಸಾರವಾಗಿ ನಡೆಯಲು ಸಾಧ್ಯವಾಗುವುದು.​—ಇಬ್ರಿಯ 12:​12, 13.

ಒಂದು ಸ್ಥಿರವಾದ ಹೃದಯದಿಂದ ಸೇವಿಸುತ್ತಾ ಇರ್ರಿ

19, 20. ನಾವು ನಮ್ಮ ಸಮರ್ಪಣೆಗನುಸಾರ ಜೀವಿಸುವುದನ್ನು ಮುಂದುವರಿಸುವುದು ಏಕೆ ಆವಶ್ಯಕ?

19 ಈ ಕಷ್ಟಕರ ಸಮಯಗಳಲ್ಲಿ, ನಮ್ಮ ಸಮರ್ಪಣೆಗನುಸಾರವಾಗಿ ಜೀವಿಸಲು ಮತ್ತು ದೇವರನ್ನು ಒಂದು ಸ್ಥಿರವಾದ ಹೃದಯದಿಂದ ಸೇವಿಸುತ್ತಾ ಇರಲು ನಾವು ಕಠಿನವಾಗಿ ಶ್ರಮಿಸಬೇಕು. ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ, ಅಂತ್ಯವು ಯಾವ ಕ್ಷಣದಲ್ಲಾದರೂ ಬರಬಲ್ಲದು. (2 ತಿಮೊಥೆಯ 3:1) ಅಷ್ಟುಮಾತ್ರವಲ್ಲದೆ, ನಮ್ಮಲ್ಲಿ ಯಾರೂ ತಾನು ನಾಳೆ ಬದುಕಿರುವೆನೊ ಇಲ್ಲವೊ ಎಂದು ಹೇಳಲಾರನು. (ಯಾಕೋಬ 4:​13, 14) ಆದುದರಿಂದ ನಾವು ಇಂದೇ ನಮ್ಮ ಸಮರ್ಪಣೆಗನುಸಾರವಾಗಿ ಜೀವಿಸುವುದು ಅತ್ಯಾವಶ್ಯಕ!

20 ಅಪೊಸ್ತಲ ಪೇತ್ರನು ಇದನ್ನು ತನ್ನ ಎರಡನೆಯ ಪತ್ರದಲ್ಲಿ ಒತ್ತಿಹೇಳಿದನು. ದುಷ್ಟ ಜನರು ಜಲಪ್ರಳಯದಲ್ಲಿ ನಾಶಗೊಳಿಸಲ್ಪಟ್ಟಂತೆಯೇ, ಸಾಂಕೇತಿಕ ಭೂಮಿ ಇಲ್ಲವೇ ದುಷ್ಟ ಮಾನವ ಸಮಾಜವು ‘ಯೆಹೋವನ ದಿನದಲ್ಲಿ’ ನಾಶವಾಗುವುದು. ಆದುದರಿಂದ ಪೇತ್ರನು ಉದ್ಗರಿಸಿದ್ದು: “ನೀವು . . . ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ”! ಅವನು ಮತ್ತೂ ಪ್ರೇರಿಸಿದ್ದು: “ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ಅಧರ್ಮಿಗಳ [ಮತ್ತು ಸುಳ್ಳು ಬೋಧಕರ] ಭ್ರಾಂತಿಯ ಸೆಳವಿಗೆ ಸಿಕ್ಕಿಕೊಂಡು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಟರಾಗದಂತೆ ಎಚ್ಚರಿಕೆಯಾಗಿರಿ.” (2 ಪೇತ್ರ 3:5-17) ದೀಕ್ಷಾಸ್ನಾನ ಹೊಂದಿರುವ ಒಬ್ಬ ವ್ಯಕ್ತಿಯು ತಪ್ಪುದಾರಿಗೆಳೆಯಲ್ಪಟ್ಟು, ಒಂದು ಸ್ಥಿರವಾದ ಹೃದಯವನ್ನು ಕಾಪಾಡಿಕೊಳ್ಳಲು ತಪ್ಪಿಹೋದವನೋಪಾದಿ ತನ್ನ ಜೀವನದ ಅಂತ್ಯವನ್ನು ತಲಪುವುದು ಅದೆಷ್ಟು ದುಃಖಕರವಾಗಿರುವುದು!

21, 22. ಕೀರ್ತನೆ 57:7ರ ಮಾತುಗಳು ದಾವೀದನ ಮತ್ತು ಸತ್ಯ ಕ್ರೈಸ್ತರ ವಿಷಯದಲ್ಲಿ ಹೇಗೆ ಸತ್ಯವಾಗಿ ಪರಿಣಮಿಸಿವೆ?

21 ನಿಮ್ಮ ದೀಕ್ಷಾಸ್ನಾನದ ಸಂತೋಷದ ದಿನವನ್ನು ನೀವು ಮನಸ್ಸಿನಲ್ಲಿಟ್ಟರೆ ಮತ್ತು ನಿಮ್ಮ ನಡೆನುಡಿಯು ದೇವರ ಮನಸ್ಸನ್ನು ಸಂತೋಷಪಡಿಸುವಂತೆ ಆತನ ಸಹಾಯವನ್ನು ಕೋರಿದರೆ ನೀವು ದೇವರಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸುವ ನಿಮ್ಮ ದೃಢನಿರ್ಧಾರವು ಬಲಗೊಳ್ಳಬಹುದು. (ಜ್ಞಾನೋಕ್ತಿ 27:11) ಯೆಹೋವನು ತನ್ನ ಜನರನ್ನು ಎಂದೂ ನಿರಾಶೆಗೊಳಿಸುವುದಿಲ್ಲ, ಮತ್ತು ಖಂಡಿತವಾಗಿಯೂ ನಾವು ಸಹ ಆತನಿಗೆ ನಂಬಿಗಸ್ತರಾಗಿರಬೇಕು. (ಕೀರ್ತನೆ 94:14) ಶತ್ರುಗಳ ಯೋಜನೆಗಳನ್ನು ಬುಡಮೇಲು ಮಾಡಿ ದಾವೀದನನ್ನು ಪಾರುಮಾಡುವ ಮೂಲಕ ಆತನು ಕರುಣೆ ಮತ್ತು ಕನಿಕರವನ್ನು ತೋರಿಸಿದನು. ಇದಕ್ಕಾಗಿ ಕೃತಜ್ಞನಾಗಿದ್ದು, ದಾವೀದನು ತನ್ನ ವಿಮೋಚಕನಿಗಾಗಿದ್ದ ಪ್ರೀತಿಯ ದೃಢತೆ ಮತ್ತು ಅಚಲತೆಯನ್ನು ಘೋಷಿಸಿದನು. ಗಾಢ ಭಾವನೆಗಳೊಂದಿಗೆ ಅವನು ಹಾಡಿದ್ದು: “ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ಬಾರಿಸುತ್ತಾ ಹಾಡುವೆನು.”​—ಕೀರ್ತನೆ 57:7.

22 ದಾವೀದನಂತೆ, ಕ್ರೈಸ್ತರು ದೇವರಿಗೆ ತೋರಿಸುವ ತಮ್ಮ ಭಕ್ತಿಯಲ್ಲಿ ಸ್ವಲ್ಪವೂ ಅಲುಗಾಡಿಲ್ಲ. ಸ್ಥಿರವಾದ ಹೃದಯಗಳೊಂದಿಗೆ ಅವರು ತಮ್ಮ ವಿಮೋಚನೆ ಮತ್ತು ಸಂರಕ್ಷಣೆಗಾಗಿ ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸುತ್ತಾರೆ ಮತ್ತು ಆನಂದದಿಂದ ಆತನಿಗೆ ಸ್ತುತಿಗಳನ್ನು ಹಾಡುತ್ತಾರೆ. ನಿಮ್ಮ ಹೃದಯವು ಸ್ಥಿರವಾಗಿರುವಲ್ಲಿ, ಅದು ದೇವರ ಮೇಲೆ ಆತುಕೊಳ್ಳುವುದು ಮತ್ತು ಆತನ ಸಹಾಯದೊಂದಿಗೆ ನೀವು ನಿಮ್ಮ ಸಮರ್ಪಣೆಯನ್ನು ಪೂರೈಸಲು ಶಕ್ತರಾಗಿರುವಿರಿ. ಹೌದು, ಕೀರ್ತನೆಗಾರನು ಯಾರ ಬಗ್ಗೆ ಹೀಗೆ ಹಾಡಿದನೊ ಆ ‘ನೀತಿವಂತನ’ ಹಾಗೆ ನೀವಿರಬಲ್ಲಿರಿ: “ಅವನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವದರಿಂದ ಅವನ [ಹೃದಯವು] ಸ್ಥಿರವಾಗಿರುವದು.” (ಕೀರ್ತನೆ 112:6, 7) ದೇವರಲ್ಲಿ ನಂಬಿಕೆ ಮತ್ತು ಆತನಲ್ಲಿ ಪೂರ್ಣ ಆತುಕೊಳ್ಳುವಿಕೆಯೊಂದಿಗೆ, ನೀವು ನಿಮ್ಮ ಸಮರ್ಪಣೆಗನುಗುಣವಾಗಿ ಜೀವಿಸಬಲ್ಲಿರಿ ಮತ್ತು ಯೆಹೋವನನ್ನು ಒಂದು ಸ್ಥಿರವಾದ ಹೃದಯದೊಂದಿಗೆ ಸೇವಿಸುತ್ತಾ ಇರಬಲ್ಲಿರಿ.

ನಿಮಗೆ ಜ್ಞಾಪಕವಿದೆಯೆ?

• ನಾವು ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಏಕೆ ತೆಗೆದುಕೊಳ್ಳುತ್ತಾ ಇರಬೇಕು?

• ನಾವು ನಮ್ಮ ಪಶ್ಚಾತ್ತಾಪ ಹಾಗೂ ಪರಿವರ್ತನೆಯನ್ನು ಏಕೆ ಮನಸ್ಸಿನಲ್ಲಿಡಬೇಕು?

• ನಮ್ಮ ಸಮರ್ಪಣೆ ಹಾಗೂ ದೀಕ್ಷಾಸ್ನಾನವನ್ನು ಜ್ಞಾಪಿಸಿಕೊಳ್ಳುವ ಮೂಲಕ ನಾವು ಹೇಗೆ ಪ್ರಯೋಜನಹೊಂದಬಲ್ಲೆವು?

• ಯೆಹೋವನನ್ನು ಒಂದು ಸ್ಥಿರವಾದ ಹೃದಯದೊಂದಿಗೆ ಸೇವಿಸುತ್ತಾ ಇರುವಂತೆ ನಮಗೆ ಯಾವುದು ಸಹಾಯಮಾಡುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರಗಳು]

ದೇವರ ವಾಕ್ಯವನ್ನು ದಿನಾಲೂ ಓದುವ ಮೂಲಕ ನೀವು ನಿಮ್ಮ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೀರೊ?

[ಪುಟ 18ರಲ್ಲಿರುವ ಚಿತ್ರ]

ಕ್ರೈಸ್ತ ಶುಶ್ರೂಷೆಯನ್ನು ನಮ್ಮ ಮುಖ್ಯ ಕೆಲಸವನ್ನಾಗಿ ಮಾಡುವುದು, ನಾವು ಯೆಹೋವನನ್ನು ಒಂದು ಸ್ಥಿರವಾದ ಹೃದಯದೊಂದಿಗೆ ಸೇವಿಸುತ್ತಾ ಇರುವಂತೆ ಸಹಾಯಮಾಡುತ್ತದೆ