ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈಗ ಭದ್ರತೆಯಿಂದಿರುವುದು ಸದಾಕಾಲಕ್ಕೂ ಭದ್ರತೆಯನ್ನು ಅನುಭವಿಸುವುದು

ಈಗ ಭದ್ರತೆಯಿಂದಿರುವುದು ಸದಾಕಾಲಕ್ಕೂ ಭದ್ರತೆಯನ್ನು ಅನುಭವಿಸುವುದು

ಈಗ ಭದ್ರತೆಯಿಂದಿರುವುದು ಸದಾಕಾಲಕ್ಕೂ ಭದ್ರತೆಯನ್ನು ಅನುಭವಿಸುವುದು

ಭದ್ರತೆಯು ಏಕೆ ಕಂಡುಕೊಳ್ಳಲು ಕಷ್ಟಕರವಾದದ್ದಾಗಿದೆ, ಕಂಡುಕೊಂಡರೂ ಏಕೆ ತಾತ್ಕಾಲಿಕವಾಗಿದೆ? ನಮ್ಮ ಭದ್ರತೆಯ ಭಾವವು, ಯಾವುದು ಲಭಿಸಸಾಧ್ಯವೋ ಅದರ ಮೇಲೆ ಆತುಕೊಂಡಿರದೆ, ಲಭಿಸಬೇಕೆಂದು ನಾವು ಆಶಿಸುವ ಕಲ್ಪನೆಯ ಮೇಲೆ ಆತುಕೊಂಡಿದೆಯೋ? ಇಂತಹ ಒಂದು ಮನೋಭ್ರಾಂತಿಯನ್ನು ಸ್ವಪ್ನಲೋಕದಲ್ಲಿ ಜೀವಿಸುವುದು ಎಂದು ಕರೆಯಬಹುದು.

ಕಲ್ಪನೆಯು, ಜೀವಿತದ ನಿಜತ್ವವನ್ನು ಅದರ ಅಭದ್ರತೆಗಳೊಂದಿಗೆ ಬಿಟ್ಟುಬಿಟ್ಟು, ಒಂದು ಸುಂದರವಾದ, ಸುಭದ್ರ ಪರಿಸ್ಥಿತಿಯಲ್ಲಿ ಪ್ರವೇಶಿಸಲು ಮನಸ್ಸನ್ನು ಅನುಮತಿಸುತ್ತದೆ ಮತ್ತು ಈ ಕನಸನ್ನು ಕೆಡಿಸಬಹುದಾದ ಯಾವುದೇ ವಿಷಯವನ್ನು ಅಂಗೀಕರಿಸಲು ನಿರಾಕರಿಸುತ್ತದೆ. ಆದರೆ, ಅನೇಕವೇಳೆ ನಿಜ ಲೋಕದ ಸಮಸ್ಯೆಗಳು ಆ ಕನಸಿನ ಲೋಕದಲ್ಲಿ ಹಠಾತ್ತನೆ ಒಳನುಗ್ಗಿ, ಕನಸು ಕಾಣುವವನು ಗಂಭೀರವಾದ ನಿಜತ್ವಕ್ಕೆ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಾ, ದಯದಾಕ್ಷಿಣ್ಯವಿಲ್ಲದೆ ಅವನ ಸುಕ್ಷೇಮದ ಅನಿಸಿಕೆಯನ್ನು ಅಳಿಸಿಹಾಕುತ್ತವೆ.

ಜನರು ಭದ್ರತೆಯನ್ನು ಹುಡುಕುವ ಒಂದು ಕ್ಷೇತ್ರವನ್ನು ನಾವು ಪರಿಗಣಿಸೋಣ​—ಭೌಗೋಲಿಕ ನೆಲೆ. ಉದಾಹರಣೆಗಾಗಿ, ದೊಡ್ಡ ನಗರವು ಭರವಸಾರ್ಹವಾಗಿ ತೋರಬಹುದು, ಮತ್ತು ಒಳ್ಳೇ ಸಮಯಗಳ, ದೊಡ್ಡ ಸಂಪಾದನೆಗಳ, ಹಾಗೂ ಆಡಂಬರವಾದ ವಾಸಸ್ಥಳಗಳ ದರ್ಶನಗಳನ್ನು ಉಂಟುಮಾಡಬಹುದು. ಹೌದು, ಇದು ದೀರ್ಘ ಕಾಲದಿಂದ ಕಾದುಕೊಂಡಿದ್ದ ಭದ್ರತೆಯನ್ನು ಕೊಡುವಂತಿರುವುದು. ಆದರೆ ಈ ದರ್ಶನವು ನೈಜವಾಗಿದೆಯೋ?

ನೆಲೆ​—ದೊಡ್ಡ ನಗರವು ಭದ್ರತೆಯನ್ನು ಕಂಡುಕೊಳ್ಳಬಹುದಾದ ನೆಲೆಯಾಗಿದೆಯೋ?

ಬೆಳೆಯುತ್ತಿರುವ ದೇಶಗಳಲ್ಲಿ, ದೊಡ್ಡ ನಗರದೆಡೆಗಿನ ಸೆಳೆತವು ಜಾಹೀರಾತುಗಳಿಂದ ಮಾಡಲ್ಪಡುತ್ತದೆ ಮತ್ತು ಅವು ಕಟ್ಟಾಸೆಯ ಕಲ್ಪನೆಗಳನ್ನು ಹುಟ್ಟಿಸಬಹುದು. ಇಂತಹ ಜಾಹೀರಾತುಗಳನ್ನು ಪ್ರಾಯೋಜಿಸುವ ಸಂಸ್ಥೆಗಳವರು ನಿಮ್ಮ ಭದ್ರತೆಯಲ್ಲಿ ಅಷ್ಟೇನೂ ಆಸಕ್ತರಾಗಿಲ್ಲ, ಬದಲಿಗೆ ಅವರ ವ್ಯಾಪಾರದಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಅವರು ನಿಜವಾಗಿಯೂ ಇರುವ ಸಮಸ್ಯೆಗಳನ್ನು ತಿಳಿಸುವುದಕ್ಕೆ ಬದಲಾಗಿ ಭದ್ರತೆಯನ್ನು ಚಿತ್ರಿಸುವ ಯಶಸ್ವಿದಾಯಕ ಚಿತ್ರಗಳನ್ನು ಚಿತ್ರಿಸುತ್ತಾರೆ. ಹೀಗೆ, ಭದ್ರತೆಯೆಂಬುದು ಅವರ ಜಾಹೀರಾತುಮಾಡಲ್ಪಟ್ಟ ವಸ್ತು ಮತ್ತು ದೊಡ್ಡ ನಗರದೊಂದಿಗೆ ಜೋಡಿಸಲ್ಪಡುತ್ತದೆ.

ಈ ಉದಾಹರಣೆಯನ್ನು ಪರಿಗಣಿಸಿರಿ. ಪಶ್ಚಿಮ ಆಫ್ರಿಕದ ಒಂದು ನಗರದಲ್ಲಿನ ಅಧಿಕಾರಿಗಳು, ಹೊಗೆಸೊಪ್ಪಿನ ಸೇವನೆಯು ವಾಸ್ತವದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಸುಟ್ಟುಹಾಕುವುದಕ್ಕೆ ಸಮಾನವಾಗಿದೆ ಎಂಬುದನ್ನು ಸ್ಪಷ್ಟವಾಗಿ ದೃಷ್ಟಾಂತಿಸುವ ಬ್ಯಾನರ್‌ಗಳನ್ನು ಹಾಕಿದರು. ಇದು, ಹೊಗೆಸೊಪ್ಪಿನ ಸೇವನೆಗೆ ಎದುರಾಗಿ ತಮ್ಮ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಲಿಕ್ಕಾಗಿ ಏರ್ಪಡಿಸಲ್ಪಟ್ಟ ಒಂದು ಚಳವಳಿಯ ಭಾಗವಾಗಿತ್ತು. ಸಿಗರೇಟ್‌ ಉತ್ಪಾದಕರು ಮತ್ತು ಮಾರಾಟಗಾರರು ಇದಕ್ಕೆ ಪ್ರತಿಕ್ರಿಯಿಸುತ್ತಾ, ಸಂತೋಷ ಮತ್ತು ಯಶಸ್ಸನ್ನು ತೋರಿಸುವ ಸೇದುಗರ ಆಕರ್ಷಕ ಚಿತ್ರಗಳಿರುವ ಚಾತುರ್ಯಭರಿತ ಬ್ಯಾನರ್‌ಗಳನ್ನು ಹಾಕಿದರು. ಇದಕ್ಕೆ ಕೂಡಿಸುತ್ತಾ, ಒಂದು ಸಿಗರೇಟ್‌ ಕಂಪನಿಯು, ಅದರ ಕೆಲವು ಕಾರ್ಮಿಕರನ್ನು ಆಡಂಬರಕರ ಸಮವಸ್ತ್ರಗಳಿಂದ ಹಾಗೂ ಕಣ್ಣುಕುಕ್ಕುವಂಥ ಬೇಸ್‌ಬಾಲ್‌ ಕ್ಯಾಪ್‌ಗಳಿಂದ ಅಲಂಕರಿಸಿ, ಬೀದಿಯಲ್ಲಿ ಯುವ ಜನರಿಗೆ ಸಿಗರೇಟ್‌ಗಳನ್ನು ವಿತರಿಸುವಂತೆ ಮತ್ತು ಪ್ರತಿಯೊಬ್ಬರೂ “ಟ್ರೈ ಮಾಡಿ ನೋಡಿ” ಎಂದು ಪ್ರೋತ್ಸಾಹಿಸುವಂತೆ ಮಾಡಿತು. ಇವರಲ್ಲಿ ಅನೇಕ ಯುವಕರು ಹಳ್ಳಿಗಳಿಂದ ಬಂದವರಾಗಿದ್ದು, ಇಂತಹ ಚತುರ ಜಾಹೀರಾತು ವಿಧಾನಗಳ ವಿಷಯದಲ್ಲಿ ಮುಗ್ಧರಾಗಿದ್ದ ಕಾರಣ, ಈ ಆಮಂತ್ರಣಕ್ಕೆ ಬಲಿಬಿದ್ದರು. ಅವರು ಧೂಮಪಾನ ವ್ಯಸನಿಗಳಾದರು. ಈ ಯುವ ಹಳ್ಳಿಗರು, ದೊಡ್ಡ ನಗರಕ್ಕೆ ಭದ್ರತೆಯನ್ನು ಹುಡುಕುತ್ತಾ, ತಮ್ಮ ಕುಟುಂಬಗಳನ್ನು ಬೆಂಬಲಿಸಲಿಕ್ಕಾಗಿ ಅಥವಾ ಆರ್ಥಿಕವಾಗಿ ಯಶಸ್ಸನ್ನು ಪಡೆಯಲಿಕ್ಕಾಗಿ ಬಂದಿದ್ದರು. ಆದರೆ ಅದರ ಬದಲಿಗೆ, ಉತ್ತಮವಾದ ಉದ್ದೇಶಗಳಿಗಾಗಿ ಉಪಯೋಗಿಸಿರಬಹುದಾದ ಹಣವನ್ನು ಅವರು ಸುಟ್ಟುಹಾಕುತ್ತಿದ್ದರು.

ದೊಡ್ಡ ನಗರದಲ್ಲಿ ಯಶಸ್ವಿದಾಯಕವಾದ ಒಂದು ಜೀವನವನ್ನು ಚಿತ್ರಿಸುವ ಜಾಹೀರಾತುಗಳು ಎಲ್ಲಾ ಸಮಯಗಳಲ್ಲಿ ವ್ಯಾಪಾರಿಗಳಿಂದ ಮಾತ್ರ ಬರುವುದಿಲ್ಲ. ಅದು ದೊಡ್ಡ ನಗರಕ್ಕೆ ಸ್ಥಳಾಂತರಿಸಿರುವ ಮತ್ತು ತಮ್ಮ ಸ್ವಂತ ಹಳ್ಳಿಗೆ ಹಿಂದಿರುಗಲು ನಾಚಿಕೊಂಡಿರುವ ವ್ಯಕ್ತಿಗಳಿಂದಲೂ ಬರಬಹುದು. ತಾವು ಸೋಲನ್ನಪ್ಪಿದ್ದೇವೆ ಎಂಬುದನ್ನು ಮುಚ್ಚಿಹಾಕಲಿಕ್ಕಾಗಿ, ಅವರು ನಗರದಲ್ಲಿ ಕಂಡುಕೊಂಡಿರಬಹುದಾದ ನಾಮಮಾತ್ರದ ಐಶ್ವರ್ಯ ಮತ್ತು ಸಾಧನೆಗಳ ಕುರಿತು ಕೊಚ್ಚಿಕೊಳ್ಳುತ್ತಾರೆ. ಆದರೆ, ಅವರು ಹೇಳಿಕೊಳ್ಳುವ ಸ್ಥಾನಮಾನವನ್ನು ನಿಕಟವಾಗಿ ಗಮನಿಸುವುದು, ಅವರ ಈಗಿನ ಜೀವನ ಶೈಲಿಯು ಅವರ ಹಿಂದಿನ ಹಳ್ಳಿ ಜೀವನಕ್ಕಿಂತ ಉತ್ತಮವಾಗಿಲ್ಲ ಎಂಬುದನ್ನು ವ್ಯಕ್ತಪಡಿಸುತ್ತದೆ; ಅವರು ಇನ್ನಿತರ ಅಧಿಕಾಂಶ ನಗರವಾಸಿಗಳಂತೆ ಆರ್ಥಿಕವಾಗಿ ಹೆಣಗಾಡುತ್ತಿದ್ದಾರೆ.

ವಿಶೇಷವಾಗಿ ದೊಡ್ಡ ನಗರಗಳಲ್ಲೇ, ಭದ್ರತೆಯನ್ನು ಹುಡುಕುತ್ತಾ ಬಂದ ಹೊಸಬರು ವಂಚಕರ ಬಲಿಬೀಳುತ್ತಾರೆ. ಏಕೆ? ಏಕೆಂದರೆ ಸಾಮಾನ್ಯವಾಗಿ, ಆಪ್ತವಾದ ಸ್ನೇಹವನ್ನು ಬೆಳೆಸಿಕೊಳ್ಳಲು ಅವರಿಗೆ ಸಮಯವಿಲ್ಲ ಮತ್ತು ಕುಟುಂಬ ಸದಸ್ಯರಿಂದ ಅವರು ದೂರವಿದ್ದಾರೆ. ಆದುದರಿಂದ, ಪ್ರಾಪಂಚಿಕವಾದ ನಗರವಾಸದ ಪಾಶಗಳ ಕುರಿತು ಎಚ್ಚರವಾಗಿರಲು ಅವರಿಗೆ ಸಲಹೆ ನೀಡಲು ಯಾರೂ ಇಲ್ಲ.

ಸೊಸ್ಯಾ ಧೂಮಪಾನದ ಬೋನಿನೊಳಗೆ ಬೀಳಲಿಲ್ಲ. ಮಾತ್ರವಲ್ಲದೆ, ನಗರದಲ್ಲಿನ ಜೀವಿತದ ಬೇಡಿಕೆಗಳು ತಾನು ಯಶಸ್ವಿಕರವಾಗಿ ನಿಭಾಯಿಸಸಾಧ್ಯವಿರುವ ಶಕ್ತಿಗಿಂತಲೂ ಅತಿ ಹೆಚ್ಚಾಗಿತ್ತು ಎಂಬುದನ್ನು ಅವನು ಗ್ರಹಿಸಿದನು. ಅವನ ವಿಷಯದಲ್ಲಿ ಹೇಳುವುದಾದರೆ, ಅತ್ಯಂತ ಸುಗಮವಾದ ಪರಿಸ್ಥಿತಿಗಳ ಕೆಳಗೆ ನಗರವು ಅವನಿಗೆ ನಿಜವಾಗಿಯೂ ನೀಡಬಹುದಾಗಿದ್ದ ಒಂದೇ ವಿಷಯವು, ದೊಡ್ಡ ಪೂರೈಸಲ್ಪಡದ ಕನಸುಗಳಾಗಿತ್ತು. ನಗರದಲ್ಲಿ ತನಗೆ ನಿಜವಾದ ಭದ್ರತೆಯು ಇಲ್ಲವೆಂಬುದನ್ನು ಅವನು ಗ್ರಹಿಸಿದನು; ನಗರವಾಸವು ಅವನಿಗೆ ನುಂಗಲಾಗದ ತುತ್ತಾಗಿತ್ತು. ಬರಿದಾದ ಅನಿಸಿಕೆ, ಕೀಳು ಮನೋಭಾವ ಮತ್ತು ಸೋಲು ಅವನ ಮೇಲೆ ಜಯಗಳಿಸಿದವು, ಮತ್ತು ಕಾಲಕ್ರಮೇಣ ಅವನು ತನ್ನನ್ನು ತಗ್ಗಿಸಿಕೊಂಡು ಹಳ್ಳಿಗೆ ಹಿಂದಿರುಗಿದನು.

ಜನರು ತನ್ನನ್ನು ಅಪಹಾಸ್ಯಮಾಡುವರು ಎಂಬ ಭಯ ಅವನಿಗಿತ್ತು. ಆದರೆ, ಅವನ ಕುಟುಂಬದ ಸದಸ್ಯರೂ ನಿಜ ಸ್ನೇಹಿತರೂ ಅವನನ್ನು ಹೃತ್ಪೂರ್ವಕ ಆಲಿಂಗನದೊಂದಿಗೆ ಬರಮಾಡಿಕೊಂಡರು. ಅವನ ಕುಟುಂಬದ ಪ್ರೀತಿವಾತ್ಸಲ್ಯ, ಹಳ್ಳಿಯ ಚಿರಪರಿಚಿತ ವಾತಾವರಣ, ಮತ್ತು ಕ್ರೈಸ್ತ ಸಭೆಯಲ್ಲಿರುವ ಅವನ ಸ್ನೇಹಿತರ ಪ್ರೀತಿಯ ಫಲವಾಗಿ, ಅನೇಕರ ಕನಸುಗಳು ಘೋರ ಸ್ವಪ್ನಗಳಾಗುವ ದೊಡ್ಡ ನಗರಕ್ಕಿಂತ ಇಲ್ಲಿ ಅವನಿಗೆ ಹೆಚ್ಚು ಭದ್ರತೆಯ ಅನಿಸಿಕೆಯಾಯಿತು. ಅವನ ಆಶ್ಚರ್ಯಕ್ಕೆ, ಹೊಲಗದ್ದೆಗಳಲ್ಲಿ ಅವನ ತಂದೆಯೊಂದಿಗೆ ಕಷ್ಟಪಟ್ಟು ಕೆಲಸಮಾಡುವುದು, ನಗರದಲ್ಲಿನ ಅವನ ನಿವ್ವಳ ಲಾಭಕ್ಕಿಂತ ಅವನಿಗೆ ಮತ್ತು ಅವನ ಕುಟುಂಬಕ್ಕೆ ಹೆಚ್ಚಿನ ಸಂಪಾದನೆಯನ್ನು ತಂದಿತು.

ಹಣ​—ನಿಜವಾದ ಸಮಸ್ಯೆಯೇನು?

ಹಣವು ನಿಮಗೆ ಭದ್ರತೆಯ ಅನಿಸಿಕೆಯನ್ನು ಕೊಡಬಲ್ಲದೋ? ಕೆನಡದ ಲಿಸ್‌ ಹೇಳುವುದು: “ಒಬ್ಬ ಯೌವನಸ್ಥಳಾಗಿರುವ ನಾನು, ಹಣವು ಚಿಂತೆಯಿಂದ ವಿಮುಕ್ತಿಯನ್ನು ತರುತ್ತದೆಂದು ನೆನಸಿದ್ದೆ.” ಅವಳು ಆರ್ಥಿಕವಾಗಿ ಸಫಲನಾಗಿದ್ದ ಒಬ್ಬ ವ್ಯಕ್ತಿಯನ್ನು ಪ್ರೀತಿಸಲಾರಂಭಿಸಿದಳು. ಬೇಗನೆ ಅವರು ಮದುವೆಮಾಡಿಕೊಂಡರು. ಅವಳಿಗೆ ಭದ್ರತೆಯ ಅನಿಸಿಕೆಯಾಯಿತೋ? ಲಿಸ್‌ ಮುಂದುವರಿಸುವುದು: “ನಾನು ಮದುವೆ ಮಾಡಿಕೊಂಡಾಗ, ನಮಗೆ ಒಂದು ಸುಂದರವಾದ ಮನೆ ಮತ್ತು ಎರಡು ಕಾರುಗಳು ಇದ್ದವು. ಐಹಿಕ ವಿಷಯಗಳು, ಪ್ರಯಾಣ, ಮತ್ತು ಮನೋರಂಜನೆಯ ರೂಪದಲ್ಲಿ ಈ ಲೋಕವು ಏನೆಲ್ಲ ನೀಡಲಿಕ್ಕಿತ್ತೋ ಅವೆಲ್ಲವನ್ನು ಅನುಭವಿಸುವ ಸ್ವಾತಂತ್ರ್ಯವನ್ನು ನಮ್ಮ ಆರ್ಥಿಕ ಸ್ಥಿತಿಯು ನಮಗೆ ಒದಗಿಸಿತು . . . ವಿಚಿತ್ರವಾದ ವಿಷಯವೇನೆಂದರೆ, ನನಗೆ ಆಗಲೂ ಹಣದ ಚಿಂತೆಯಿತ್ತು.” ಏಕೆಂಬುದನ್ನು ಅವಳು ವಿವರಿಸುತ್ತಾಳೆ: “ನಮ್ಮ ಬಳಿ ಕಳೆದುಕೊಳ್ಳಸಾಧ್ಯವಿರುವ ಎಷ್ಟೋ ವಿಷಯಗಳಿದ್ದವು. ನಿಮ್ಮ ಹತ್ತಿರ ಎಷ್ಟು ಹೆಚ್ಚು ಇದೆಯೋ, ಅಷ್ಟು ಕಡಿಮೆ ಭದ್ರತೆಯ ಅನಿಸಿಕೆಯಾಗುತ್ತದೆ ಎಂಬಂತೆ ತೋರುತ್ತದೆ. ಹಣವು ಆತಂಕ ಅಥವಾ ಚಿಂತೆಯಿಂದ ವಿಮುಕ್ತಿಯನ್ನು ನೀಡಲಿಲ್ಲ.”

ಭದ್ರತೆಯಿಂದಿರುವಷ್ಟು ಹಣ ನಿಮ್ಮ ಬಳಿಯಿಲ್ಲ ಎಂದು ನಿಮಗನಿಸುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಿಜವಾದ ಸಮಸ್ಯೆ ಏನು? ಅದು ನಿಜವಾಗಿಯೂ ಹಣದ ಕೊರತೆಯೋ, ಅಥವಾ ವಿವೇಕಯುತ ಹಣದ ನಿರ್ವಹಣೆಯ ಕೊರತೆಯೋ?’ ತನ್ನ ಗತಕಾಲವನ್ನು ಜ್ಞಾಪಿಸಿಕೊಳ್ಳುತ್ತಾ ಲಿಸ್‌ ಹೇಳುವುದು: “ನಾನು ಒಂದು ಮಗುವಾಗಿದ್ದಾಗ, ನನ್ನ ಕೌಟುಂಬಿಕ ಸಮಸ್ಯೆಗಳ ಮೂಲವು ಹಣಕಾಸಿನ ಅಸಮರ್ಥ ನಿರ್ವಹಣೆಯಾಗಿತ್ತು ಎಂಬುದನ್ನು ನಾನು ಈಗ ಗ್ರಹಿಸಿದ್ದೇನೆ. ನಾವು ಸಾಲದ ಮೇಲೆ ವಸ್ತುಗಳನ್ನು ಖರೀದಿಸುತ್ತಿದ್ದೆವು, ಆದ್ದರಿಂದ ಸಾಲದ ಭಾರವು ಯಾವಾಗಲೂ ನಮ್ಮ ಮೇಲಿತ್ತು. ಇದು ಚಿಂತೆಯನ್ನು ತಂದಿತು.”

ಆದರೆ, ಇಂದು ಅವರ ಬಳಿ ಕಡಿಮೆ ಹಣವಿದ್ದರೂ ಲಿಸ್‌ ಮತ್ತು ಅವಳ ಗಂಡನಿಗೆ ಹೆಚ್ಚು ಭದ್ರರಾಗಿದ್ದೇವೆ ಎಂಬ ಅನಿಸಿಕೆಯಿದೆ. ಅವರು ದೇವರ ವಾಕ್ಯದ ಸತ್ಯವನ್ನು ಕಲಿತಾಗ, ಹಣದ ಕುರಿತಾದ ಮನಮೋಹಿಸುವ ಕೋರಿಕೆಗಳಿಗೆ ಕಿವಿಗೊಡುವುದನ್ನು ನಿಲ್ಲಿಸಿಬಿಟ್ಟು, ದೇವರ ವಿವೇಕದ ಮಾತುಗಳಿಗೆ ಕಿವಿಗೊಡಲು ಆರಂಭಿಸಿದರು, ಮತ್ತು ಅದರಲ್ಲಿ ಈ ಮಾತುಗಳೂ ಒಳಗೂಡಿದ್ದವು: “ನನ್ನ ಮಾತಿಗೆ ಕಿವಿಗೊಡುವವನಾದರೋ [“ಭದ್ರತೆಯಿಂದಿರುತ್ತಾ,” NW] ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” (ಜ್ಞಾನೋಕ್ತಿ 1:33) ಒಂದು ದೊಡ್ಡ ಬ್ಯಾಂಕ್‌ ಅಕೌಂಟ್‌ ಕೊಡುವ ಅರ್ಥಕ್ಕಿಂತಲೂ ಜೀವನದಲ್ಲಿ ಹೆಚ್ಚಿನ ಅರ್ಥವನ್ನು ಅವರು ಬಯಸಿದರು. ಈಗ, ಲಿಸ್‌ ಮತ್ತು ಅವಳ ಗಂಡ ದೂರದೇಶವೊಂದರಲ್ಲಿ ಮಿಷನೆರಿಗಳಾಗಿದ್ದು, ಯೆಹೋವ ದೇವರು ಅತಿ ಬೇಗನೆ ನಿಜವಾದ ಭದ್ರತೆಯನ್ನು ಲೋಕವ್ಯಾಪಕವಾಗಿ ಸ್ಥಾಪಿಸುವನು ಎಂಬುದಾಗಿ, ಶ್ರೀಮಂತ ಬಡವರೆನ್ನದೆ ಎಲ್ಲರಿಗೂ ಬೋಧಿಸುತ್ತಿದ್ದಾರೆ. ಹಣಕಾಸಿನ ಲಾಭದಿಂದಲ್ಲ, ಬದಲಾಗಿ ಶ್ರೇಷ್ಠವಾದ ಉದ್ದೇಶ ಮತ್ತು ಅತಿ ಉತ್ತಮವಾದ ಮೌಲ್ಯಗಳಿಂದ ಹೊರಹೊಮ್ಮುವ ಆಳವಾದ ಸಂತೃಪ್ತಿ ಮತ್ತು ದೃಢತೆಯನ್ನು ಈ ಚಟುವಟಿಕೆಯು ಒದಗಿಸುತ್ತದೆ.

ಈ ಮೂಲಭೂತ ಸತ್ಯವನ್ನು ನೆನಪಿನಲ್ಲಿಟ್ಟುಕೊಳ್ಳಿ: ಐಹಿಕ ಐಶ್ವರ್ಯಗಳನ್ನು ಹೊಂದಿರುವುದಕ್ಕಿಂತ ದೇವರೊಂದಿಗೆ ಐಶ್ವರ್ಯವಂತರಾಗಿರುವುದು ಹೆಚ್ಚು ಅಮೂಲ್ಯವಾದದ್ದಾಗಿದೆ. ಪವಿತ್ರ ಶಾಸ್ತ್ರದಾದ್ಯಂತ ಐಹಿಕ ಐಶ್ವರ್ಯಗಳನ್ನು ಹೊಂದಿರುವುದಕ್ಕಲ್ಲ, ಬದಲಾಗಿ ನಂಬಿಕೆಯಿಂದ ದೈವಿಕ ಚಿತ್ತವನ್ನು ಮಾಡುತ್ತಾ ಮುಂದುವರಿಯುವ ಮೂಲಕ ಕಾಪಾಡಿಕೊಳ್ಳಬಹುದಾದ ಯೆಹೋವನೊಂದಿಗಿನ ಒಂದು ಒಳ್ಳೆಯ ನಿಲುವಿಗೆ ಪ್ರಾಮುಖ್ಯತೆಯು ಕೊಡಲ್ಪಟ್ಟಿದೆ. ‘ದೇವರ ದೃಷ್ಟಿಯಲ್ಲಿ ಐಶ್ವರ್ಯವಂತ’ನಾಗಿರುವಂತೆ ಮತ್ತು “ಸಂಪತ್ತನ್ನು ಪರಲೋಕದಲ್ಲಿ” ಶೇಖರಿಸಿಟ್ಟುಕೊಳ್ಳುವಂತೆ ಕ್ರಿಸ್ತ ಯೇಸು ಪ್ರೋತ್ಸಾಹಿಸಿದನು.​—ಲೂಕ 12:21, 33, NW.

ಸ್ಥಾನಮಾನ​—ನಿಮ್ಮ ಗುರಿಯೇನು?

ಸಮಾಜದಲ್ಲಿ ದೊಡ್ಡ ಸ್ಥಾನಮಾನವನ್ನು ಪಡೆಯುವುದೇ ಭದ್ರತೆಗಾಗಿರುವ ಮಾರ್ಗವಾಗಿದೆ ಎಂದು ನಂಬುವಂತೆ ನೀವು ಶೋಧಿಸಲ್ಪಡುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ಏಣಿಯಲ್ಲಿ ಯಾರು ನಿಜವಾದ ಭದ್ರತೆಯೆಂಬ ಹಂತವನ್ನು ತಲಪಿದ್ದಾರೆ? ಆ ಹಂತವನ್ನು ತಲಪಲು ನಾನು ಎಷ್ಟು ಎತ್ತರಕ್ಕೆ ಹತ್ತಬೇಕು?’ ಒಂದು ಯಶಸ್ವಿಕರವಾದ ಜೀವನವೃತ್ತಿಯು ನಿಮಗೆ ಸುಳ್ಳಾದ ಭದ್ರತೆಯ ಅನಿಸಿಕೆಯನ್ನು ಕೊಡಬಹುದು, ಆದರೆ ಆಶಾಭಂಗಕ್ಕೆ ಅಥವಾ ಇನ್ನೂ ಘೋರವಾಗಿ, ಒಂದು ವಿಪತ್ಕಾರಕ ಕುಸಿತಕ್ಕೆ ಅದು ನಡೆಸಬಹುದು.

ಮನುಷ್ಯನೊಂದಿಗಿನ ಒಂದು ಒಳ್ಳೆಯ ಹೆಸರಿಗಿಂತ ದೇವರೊಂದಿಗೆ ಒಂದು ಒಳ್ಳೆಯ ಹೆಸರು ಹೆಚ್ಚಿನ ಭದ್ರತೆಯನ್ನು ಕೊಡುತ್ತದೆ ಎಂಬುದನ್ನು ನಿಜ ಅನುಭವಗಳು ತೋರಿಸಿವೆ. ಕೇವಲ ಯೆಹೋವನು ಮಾತ್ರ ಮಾನವರಿಗೆ ಅನಂತಕಾಲದ ಜೀವಿತವನ್ನು ಕೊಡಬಲ್ಲನು. ನಮ್ಮ ಹೆಸರನ್ನು, ಇಂತಿಂಥವನು ಎಂದು ಗುರುತಿಸಲು ಬರೆದಿಡುವ ಯಾವುದೇ ಒಂದು ಸಮಾಜ ನಿರ್ದೇಶಕ ಪುಸ್ತಕದಲ್ಲಲ್ಲ, ಬದಲಾಗಿ ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿಡುವುದನ್ನು ಅದು ಒಳಗೊಳ್ಳುತ್ತದೆ.​—ವಿಮೋಚನಕಾಂಡ 32:32; ಪ್ರಕಟನೆ 3:5.

ನೀವು ಬರಿಯ ಭ್ರಾಂತಿಯ ಯೋಚನೆಯನ್ನು ಬದಿಗಿರಿಸುವಾಗ, ನಿಮ್ಮ ಸದ್ಯದ ಪರಿಸ್ಥಿತಿಯನ್ನು ನೀವು ಹೇಗೆ ಬೆಲೆಕಟ್ಟುತ್ತೀರಿ, ಮತ್ತು ನಿಮ್ಮ ಭವಿಷ್ಯದಿಂದ ನೀವು ಪ್ರಾಮಾಣಿಕವಾಗಿ ಏನನ್ನು ಅಪೇಕ್ಷಿಸಬಹುದು? ಯಾರ ಹತ್ತಿರವೂ ಎಲ್ಲವೂ ಇಲ್ಲ. ಒಬ್ಬ ಜಾಣ ಕ್ರೈಸ್ತನು ಹೇಳಿದಂತೆ, “ಜೀವಿತವು ಇದು ಮತ್ತು ಅದು ಎಂದಾಗಿಲ್ಲ ಬದಲಿಗೆ ಇದು ಅಥವಾ ಅದು ಎಂದಾಗಿದೆ ಎಂಬುದನ್ನು ನಾನು ಕಲಿಯಬೇಕಾಗಿತ್ತು.” ಇಲ್ಲಿ ಒಂದು ಕ್ಷಣ ನಿಲ್ಲಿಸಿ, “ಬೆನಿನ್‌ನಲ್ಲಿ ಹೇಳಲ್ಪಡುತ್ತದೆ” ಎಂಬ ರೇಖಾಚೌಕವನ್ನು ಓದಿರಿ.

ಈಗ ಈ ಪ್ರಶ್ನೆಗಳನ್ನು ಉತ್ತರಿಸಿರಿ: ನನ್ನ ಜೀವನದಲ್ಲಿ ಮುಖ್ಯವಾದ ಉದ್ದೇಶ, ಅಥವಾ ಗುರಿ ಯಾವುದಾಗಿದೆ? ಅಲ್ಲಿ ತಲಪಲು ಹೆಚ್ಚು ನೇರವಾದ ದಾರಿಯು ಯಾವುದಾಗಿದೆ? ಅಥವಾ ನಾನೊಂದು ಉದ್ದವಾದ, ನನ್ನ ಗುರಿಯನ್ನು ಮುಟ್ಟಲು ನಾನು ಹೋಗಬೇಕಾದ ದಾರಿಯಿಂದ ದೂರ ಸರಿಯುವ ಅಭದ್ರ ಬಳಸುದಾರಿಯಲ್ಲಿ ಹೋಗುತ್ತಿದ್ದೇನೋ ಮತ್ತು ನನಗೆ ನಿಜವಾಗಿಯೂ ಬೇಕಾಗಿರುವ ಹಾಗೂ ವಾಸ್ತವಿಕವಾಗಿ ಸಾಧ್ಯವಿರುವ ವಿಷಯವನ್ನು ಕಡಿಮೆ ಗಲಿಬಿಲಿಯಿರುವ ದಾರಿಯಿಂದ ಪಡೆದುಕೊಳ್ಳಬಹುದೋ?

ಆತ್ಮಿಕ ವಿಷಯಗಳ ಮೌಲ್ಯಕ್ಕೆ ಹೋಲಿಕೆಯಲ್ಲಿ ಐಹಿಕ ವಿಷಯಗಳ ಸಂಬಂಧಿತ ಮೌಲ್ಯದ ಕುರಿತು ಸಲಹೆ ನೀಡಿದ ನಂತರ, ಯೇಸು ಕಣ್ಣುಗಳನ್ನು “ಸರಳ”ವಾಗಿಟ್ಟುಕೊಳ್ಳುವುದರ ಅಥವಾ “ಕೇಂದ್ರೀಕರಣದಲ್ಲಿ” ಇಟ್ಟುಕೊಳ್ಳುವುದರ ಕುರಿತಾಗಿ ಹೇಳಿದನು. (ಮತ್ತಾಯ 6:​22, NW ಪಾದಟಿಪ್ಪಣಿ) ದೇವರ ಹೆಸರು ಮತ್ತು ಆತನ ರಾಜ್ಯದ ಮೇಲೆ ಕೇಂದ್ರೀಕರಿಸಿರುವ ಆತ್ಮಿಕ ಮೌಲ್ಯಗಳು ಮತ್ತು ಗುರಿಗಳೇ ಜೀವನದಲ್ಲಿ ಮುಖ್ಯವಾದ ವಿಷಯಗಳು ಎಂಬುದನ್ನು ಅವನು ಸ್ಪಷ್ಟಪಡಿಸಿದನು. (ಮತ್ತಾಯ 6:9, 10) ಬೇರೆಲ್ಲ ವಿಷಯಗಳು ಹೆಚ್ಚು ಪ್ರಾಮುಖ್ಯವಲ್ಲದವುಗಳಾಗಿವೆ, ಅಥವಾ ಕೇಂದ್ರೀಕರಣಕ್ಕೆ ಬೇಕಿಲ್ಲದ ವಿಷಯಗಳೋ ಎಂಬಂತಿವೆ.

ಇಂದು ಅನೇಕ ಕ್ಯಾಮರಾಗಳು ಯಾಂತ್ರಿಕವಾಗಿಯೇ ದೂರದ ಮತ್ತು ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತವೆ. ನೀವು ಸಹ ಹಾಗಿರಲು ಮನಸ್ಸುಳ್ಳವರಾಗಿದ್ದೀರೋ? ನಿಮ್ಮ ‘ಕೇಂದ್ರೀಕರಣಕ್ಕೆ’ ಬರುವ ಎಲ್ಲಾ ವಿಷಯಗಳು, ಬರಿಯ ಭ್ರಾಂತಿಯ ಯೋಚನೆಗಳು ಸಹ ನಿಮಗೆ ಪ್ರಾಮುಖ್ಯವೂ ಮೆಚ್ಚಿಕೆಯುಳ್ಳವೂ ಪಡೆಯಸಾಧ್ಯವಿರುವಂತವೂ ಆಗಿ ತೋರುತ್ತವೋ? ಇದು ಕೇವಲ ಆಂಶಿಕವಾಗಿ ಸತ್ಯವಾಗಿದ್ದರೂ, ಕ್ರೈಸ್ತರ ಮುಖ್ಯ ಗುರಿಯಾಗಿರಬೇಕಾದ ರಾಜ್ಯವು, ನಿಮ್ಮ ಗಮನವನ್ನು ಕೇಳಿಕೊಳ್ಳುವ ಇನ್ನಿತರ ಅಂಶಗಳ ಒಂದು ಸಮೂಹದಲ್ಲಿ ಕಳೆದುಹೋಗಬಹುದು. ಯೇಸುವಿನ ಬಲವಾದ ಉತ್ತೇಜನವು, “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು” ಎಂದಾಗಿತ್ತು.​—ಮತ್ತಾಯ 6:33.

ಈಗಲೂ ಸದಾಕಾಲಕ್ಕೂ ಭದ್ರತೆಯಿಂದಿರುವುದು

ನಾವೆಲ್ಲರೂ ನಮಗೂ ನಮ್ಮ ಪ್ರಿಯ ವ್ಯಕ್ತಿಗಳಿಗೂ ಒಳ್ಳೆಯ ವಿಷಯಗಳು ಸಿಗುವ ಕನಸನ್ನು ಕಾಣಬಹುದು. ಆದರೂ, ನಾವು ಅಪರಿಪೂರ್ಣರಾಗಿದ್ದೇವೆ, ಒಂದು ಅಪರಿಪೂರ್ಣ ಲೋಕದಲ್ಲಿ ಜೀವಿಸುತ್ತಿದ್ದೇವೆ, ಮತ್ತು ಒಂದು ಚಿಕ್ಕ ಜೀವನಾವಧಿಯನ್ನು ಹೊಂದಿದ್ದೇವೆ ಎಂಬ ವಾಸ್ತವಾಂಶವು, ನಾವು ನೈಜವಾಗಿ ಪಡೆದುಕೊಳ್ಳಲು ನಿರೀಕ್ಷಿಸುವ ವಿಷಯಗಳನ್ನು ಕಡಿಮೆಗೊಳಿಸಲು ಒತ್ತಾಯಿಸುತ್ತದೆ. ಒಬ್ಬ ಬೈಬಲ್‌ ಲೇಖಕನು ಸಾವಿರಾರು ವರ್ಷಗಳ ಹಿಂದೆ ವಿವರಿಸಿದ್ದು: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು.”​—ಪ್ರಸಂಗಿ 9:11.

ಕೆಲವೊಮ್ಮೆ ದಿನನಿತ್ಯದ ಕಾರ್ಯಕಲಾಪಗಳ ಚಕ್ರಗತಿಯಲ್ಲಿ ನಾವು ಎಷ್ಟು ಮುಳುಗಿಹೋಗುತ್ತೇವೆಂದರೆ, ನಾವು ಯಾರು ಮತ್ತು ನೈಜವಾದ ಭದ್ರತೆಯ ಅನಿಸಿಕೆಯೊಂದಿಗಿರಲು ನಮಗೆ ನಿಜವಾಗಿಯೂ ಏನು ಆವಶ್ಯಕ ಎಂಬ ಹೆಚ್ಚು ಪ್ರಾಮುಖ್ಯವಾದ ಅಂಶವನ್ನು ನೋಡಲು ನಾವು ಮರೆತುಬಿಡುತ್ತೇವೆ. ಈ ಪ್ರಾಚೀನ ವಿವೇಕಯುತ ಮಾತುಗಳನ್ನು ಪರಿಗಣಿಸಿರಿ: “ನಿಮಗೆ ಹಣದಾಸೆಯಿರುವುದಾದರೆ, ನಿಮಗೆ ಎಂದಿಗೂ ತೃಪ್ತಿಯಾಗದು; ನೀವು ಐಶ್ವರ್ಯಕ್ಕಾಗಿ ಹಂಬಲಿಸುವುದಾದರೆ, ನೀವು ಬಯಸುವ ಎಲ್ಲವನ್ನೂ ನೀವು ಪಡೆದುಕೊಳ್ಳಲಾರಿರಿ. ಇದು ವ್ಯರ್ಥವೇ. ದುಡಿಯುವವನಿಗೆ ತಿನ್ನಲು ಬೇಕಾಗಿರುವಷ್ಟು ಆಹಾರ ಇರಬಹುದು ಅಥವಾ ಇಲ್ಲದಿರಬಹುದು, ಆದರೆ ಕಡಿಮೆಪಕ್ಷ ಅವನು ಹಾಯಾಗಿ ನಿದ್ರಿಸಶಕ್ತನು. ಆದರೆ ಐಶ್ವರ್ಯವಂತನಿಗೆ ಎಷ್ಟು ಆಸ್ತಿಯಿದೆಯೆಂದರೆ, ಅದರ ಕುರಿತು ಚಿಂತಿಸುತ್ತಾ ಅವನು ನಿದ್ರೆಯಿಲ್ಲದೆ ನರಳಾಡುತ್ತಾನೆ.” (ಪ್ರಸಂಗಿ 5:10, 12, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ನಿಜ, ನಿಮ್ಮ ಭದ್ರತೆಯು ಯಾವುದರ ಮೇಲೆ ಆತುಕೊಂಡಿದೆ?

ನಿಮ್ಮ ಪರಿಸ್ಥಿತಿಯು ಹೆಚ್ಚುಕಡಿಮೆ ಸೊಸ್ಯಾನ ನೈಜವಾಗದ ಕನಸಿನಂತೆಯೇ ಇರುವುದಾದರೆ, ನಿಮ್ಮ ಯೋಜನೆಗಳನ್ನು ನೀವು ಬದಲಾಯಿಸಬಲ್ಲಿರೋ? ನಿಜವಾದ ಪ್ರೀತಿಯುಳ್ಳವರು, ಸೊಸ್ಯಾನ ಕುಟುಂಬದ ಸದಸ್ಯರಂತೆ ಮತ್ತು ಕ್ರೈಸ್ತ ಸಭೆಯ ಸ್ನೇಹಿತರಂತೆ ಬೆಂಬಲಿಸುವವರಾಗಿರುವರು. ನಿಮ್ಮ ಮುಗ್ಧತೆಯನ್ನು ಸದುಪಯೋಗಿಸಿಕೊಳ್ಳಲು ಪ್ರಯತ್ನಿಸಬಹುದಾದ ಜನರಿರುವ ನಗರಕ್ಕಿಂತ, ಸಾಮಾನ್ಯವಾದ ಪರಿಸರದಲ್ಲಿ ನಿಮ್ಮನ್ನು ಪ್ರೀತಿಸುವವರ ಸಂಗಡ ನೀವು ಹೆಚ್ಚು ಭದ್ರತೆಯನ್ನು ಕಂಡುಕೊಳ್ಳಬಹುದು.

ಲಿಸ್‌ ಮತ್ತು ಅವಳ ಗಂಡನಂತೆ ನಿಮ್ಮಲ್ಲಿ ಸಾಕಷ್ಟು ಐಶ್ವರ್ಯವಿರುವುದಾದರೆ, ನಿಜವಾದ ಭದ್ರತೆಯನ್ನು ಕಂಡುಕೊಳ್ಳುವುದರ ಮೂಲವಾದ ರಾಜ್ಯದ ಕುರಿತು ಕಲಿತುಕೊಳ್ಳುವಂತೆ ಜನರಿಗೆ​—ಶ್ರೀಮಂತ ಬಡವರೆನ್ನದೆ​—ಸಹಾಯಮಾಡಲು ನಿಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ನಿರ್ದೇಶಿಸಲಿಕ್ಕಾಗಿ, ನೀವು ನಿಮ್ಮ ಜೀವನ ಶೈಲಿಯನ್ನು ಹೊಂದಿಸಿಕೊಳ್ಳಬಲ್ಲಿರೋ?

ನೀವು ಸಾಮಾಜಿಕ ಅಥವಾ ಸ್ಥಾನಮಾನದ ಏಣಿಯನ್ನು ಹತ್ತುತ್ತಿರುವುದಾದರೆ, ನಿಮ್ಮನ್ನು ಯಾವುದು ಉತ್ತೇಜಿಸುತ್ತಿದೆ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚಿಸಿ ನೋಡಬಯಸಬಹುದು. ನಿಮ್ಮ ಹತೋಟಿಯಲ್ಲಿರುವ ಕೆಲವು ಅನುಕೂಲಗಳು ಜೀವಿತಕ್ಕೆ ಆನಂದವನ್ನು ಕೂಡಿಸಬಹುದು ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆಗಲೂ, ಶಾಶ್ವತವಾದ ಭದ್ರತೆಯನ್ನು ಪಡೆದುಕೊಳ್ಳುವುದರ ನಿಜ ಮೂಲವಾದ ರಾಜ್ಯವನ್ನು ಕೇಂದ್ರೀಕರಣದಲ್ಲಿಟ್ಟುಕೊಳ್ಳಲು ನಿಮ್ಮಿಂದ ಸಾಧ್ಯವಾಗಿದೆಯೋ? ಯೇಸುವಿನ ಮಾತುಗಳನ್ನು ಮರುಜ್ಞಾಪಿಸಿಕೊಳ್ಳಿರಿ: ‘ತೆಗೆದುಕೊಳ್ಳುವದಕ್ಕಿಂತ ಕೊಡುವದರಲ್ಲೇ ಹೆಚ್ಚಿನ ಭಾಗ್ಯವಿದೆ.’ (ಅ. ಕೃತ್ಯಗಳು 20:35) ನೀವು ನಿಮ್ಮನ್ನೇ ಕ್ರೈಸ್ತ ಸಭೆಯ ವಿಭಿನ್ನವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾದರೆ, ನೀವು ತೃಪ್ತಿದಾಯಕ ಭದ್ರತೆಯನ್ನು ಅನುಭವಿಸುವಿರಿ.

ಯೆಹೋವನ ಮತ್ತು ಆತನ ರಾಜ್ಯದಲ್ಲಿ ಸಂಪೂರ್ಣವಾದ ಭರವಸೆಯನ್ನು ಇಡುವವರು ಈಗ ಹೃತ್ಪೂರ್ವಕ ಭದ್ರತೆಯಲ್ಲಿ ತುಂಬಿತುಳುಕುತ್ತಾರೆ ಮತ್ತು ಭವಿಷ್ಯದಲ್ಲಿ ಸಂಪೂರ್ಣವಾದ ಭದ್ರತೆಗಾಗಿ ಎದುರುನೋಡುತ್ತಾರೆ. ಕೀರ್ತನೆಗಾರನು ಹೇಳಿದ್ದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ. ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ [ಸುಭದ್ರವಾಗಿರುವದು].”​—ಕೀರ್ತನೆ 16:8, 9.

[ಪುಟ 6ರಲ್ಲಿರುವ ಚೌಕ/ಚಿತ್ರ]

ಬೆನಿನ್‌ನಲ್ಲಿ ಹೇಳಲ್ಪಡುತ್ತದೆ

ಈ ಕಥೆಯು ಅನೇಕ ವಿಭಿನ್ನತೆಗಳೊಂದಿಗೆ ಸಾವಿರಾರು ಬಾರಿ ಹೇಳಲ್ಪಡುತ್ತದೆ. ಇತ್ತೀಚೆಗೆ, ಪಶ್ಚಿಮ ಆಫ್ರಿಕದ ಬೆನಿನ್‌ನ ಒಬ್ಬ ವೃದ್ಧ ಹಳ್ಳಿಗನು ಈ ಮುಂದಿನ ಅನುವಾದವನ್ನು ಕೆಲವು ಯುವಕರಿಗೆ ಹೇಳಿದನು.

ಬೆಸ್ತನು ತನ್ನ ತೋಡುದೋಣಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ಈ ಬೆಳೆಯುತ್ತಿರುವ ದೇಶದಲ್ಲಿ ಸೇವೆ ಸಲ್ಲಿಸುವ ಒಬ್ಬ ವ್ಯಾಪಾರ ಮಾಧ್ಯಮದ ವಿದೇಶೀ ನಿಪುಣನಿಂದ ಭೇಟಿಮಾಡಲ್ಪಡುತ್ತಾನೆ. ಆ ನಿಪುಣನು ಬೆಸ್ತನನ್ನು ಅವನು ಇಷ್ಟು ಬೇಗ ಹಿಂದಿರುಗಿ ಬಂದದ್ದೇಕೆ ಎಂದು ಕೇಳುತ್ತಾನೆ. ತಾನು ಇನ್ನೂ ಸ್ವಲ್ಪ ಸಮಯ ಹಿಂದುಳಿದಿರಬಹುದಿತ್ತು, ಆದರೆ ತನ್ನ ಕುಟುಂಬವನ್ನು ಪರಾಮರಿಸಲು ಬೇಕಾಗಿರುವಷ್ಟು ಮೀನನ್ನು ಈಗಾಗಲೇ ಹಿಡಿದಿರುವುದರಿಂದ ಹಿಂದಿರುಗಿದೆ ಎಂದು ಬೆಸ್ತನು ಉತ್ತರಿಸುತ್ತಾನೆ.

“ಮತ್ತು ಈಗ, ನಿನ್ನ ಉಳಿದಿರುವ ಸಮಯದಲ್ಲಿ ನೀನು ಏನು ಮಾಡುವೆ?” ಎಂದು ಕೇಳುತ್ತಾನೆ ನಿಪುಣನು.

ಬೆಸ್ತನು ಉತ್ತರಿಸುವುದು: “ನಾನು ಸ್ವಲ್ಪ ಮೀನನ್ನು ಹಿಡಿಯುತ್ತೇನೆ. ನನ್ನ ಮಕ್ಕಳೊಂದಿಗೆ ಆಟವಾಡುತ್ತೇನೆ. ಬಿಸಿಲು ಜಾಸ್ತಿಯಾದಾಗ ನಾವೆಲ್ಲರೂ ಮಧ್ಯಾಹ್ನದ ಲಘುನಿದ್ರೆಯನ್ನು ಮಾಡುತ್ತೇವೆ. ಸಾಯಂಕಾಲ ನಾವು ಒಟ್ಟಾಗಿ ಊಟಮಾಡುತ್ತೇವೆ. ನಂತರ, ನಾನು ಸ್ನೇಹಿತರೊಂದಿಗೆ ಒಟ್ಟುಗೂಡಿ ಕೆಲವು ಸಂಗೀತವನ್ನು ಆನಂದಿಸಲಿಕ್ಕಾಗಿ ಹೋಗುತ್ತೇನೆ ಮತ್ತು ಹೀಗೆ ಏನೇನೋ ಮಾಡುತ್ತೇನೆ.”

ಆ ನಿಪುಣನು ಮಧ್ಯೆ ಪ್ರವೇಶಿಸುತ್ತಾ ಹೇಳುವುದು: “ನೋಡು, ನನ್ನ ಬಳಿ ವಿಶ್ವವಿದ್ಯಾನಿಲಯದ ಡಿಗ್ರಿ ಇದೆ ಮತ್ತು ನಾನು ಈ ವಿಷಯಗಳನ್ನು ಕಲಿತಿದ್ದೇನೆ. ನಾನು ನಿನಗೆ ಸಹಾಯಮಾಡಲು ಬಯಸುತ್ತೇನೆ. ನೀನು ಹೆಚ್ಚಿನ ಸಮಯ ಮೀನು ಹಿಡಿಯುವುದರಲ್ಲಿ ಕಳೆಯಬೇಕು. ನೀನು ಹೆಚ್ಚು ಸಂಪಾದಿಸಬಲ್ಲೆ ಮತ್ತು ಶೀಘ್ರವೇ ಈ ತೋಡುದೋಣಿಗಿಂತ ದೊಡ್ಡ ಒಂದು ದೋಣಿಯನ್ನು ಖರೀದಿಸಬಲ್ಲೆ. ಒಂದು ದೊಡ್ಡ ದೋಣಿಯೊಂದಿಗೆ, ನೀನು ಇನ್ನೂ ಹೆಚ್ಚು ಸಂಪಾದನೆಯನ್ನು ಮಾಡಿ, ಶೀಘ್ರವೇ ಬಲೆದೋಣಿಗಳ ಒಂದು ಪಡೆಯನ್ನೇ ಒಟ್ಟಗೂಡಿಸಬಲ್ಲೆ.”

“ನಂತರ?” ಎಂದು ಕೇಳುತ್ತಾನೆ ಬೆಸ್ತನು.

“ನಂತರ, ಒಬ್ಬ ಮಧ್ಯಸ್ಥನ ಮೂಲಕವಾಗಿ ಮೀನನ್ನು ಮಾರುವ ಬದಲು, ನೀನು ಕಾರ್ಖಾನೆಯೊಂದಿಗೆ ನೇರವಾಗಿ ವ್ಯಾಪಾರ ವ್ಯವಹಾರಗಳನ್ನು ನಡೆಸಬಲ್ಲೆ ಅಥವಾ ನಿನ್ನ ಸ್ವಂತ ಮೀನುಗಾರಿಕೆಯನ್ನು ಆರಂಭಿಸಬಲ್ಲೆ. ನೀನು ನಿನ್ನ ಹಳ್ಳಿಯನ್ನು ಬಿಟ್ಟು, ಕೋಟನೂ, ಅಥವಾ ಪ್ಯಾರಿಸ್‌, ಅಥವಾ ನ್ಯೂ ಯಾರ್ಕ್‌ಗೆ ಸ್ಥಳಾಂತರಿಸಿ ಇಡೀ ವ್ಯಾಪಾರವನ್ನು ಅಲ್ಲಿಂದಲೇ ನಡೆಸಬಹುದು. ನೀನು ನಿನ್ನ ವ್ಯಾಪಾರವನ್ನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಾಕುವುದನ್ನೂ ಪರಿಗಣಿಸಬಹುದು ಮತ್ತು ಕೋಟಿಗಟ್ಟಲೆ ಹಣವನ್ನು ಸಂಪಾದಿಸಬಹುದು.”

“ಇದಕ್ಕೆಲ್ಲಾ ಎಷ್ಟು ಕಾಲ ಹಿಡಿಯಬಹುದು?” ಎಂದು ಕೇಳುತ್ತಾನೆ ಬೆಸ್ತನು.

“ಪ್ರಾಯಶಃ 15 ಅಥವಾ 20 ವರ್ಷಗಳು,” ಎಂದುತ್ತರಿಸುತ್ತಾನೆ ನಿಪುಣನು.

“ಆಮೇಲೆ?” ಎಂದು ಬೆಸ್ತನು ಮುಂದುವರಿಸುತ್ತಾನೆ.

“ಆಗಲೇ ಜೀವನವು ಹೆಚ್ಚು ಆಸಕ್ತಿಕರವಾಗುವುದು,” ಎಂದು ವಿವರಿಸುತ್ತಾನೆ ನಿಪುಣನು. “ಆಗ ನೀನು ವಿರಾಮವನ್ನು ಪಡೆದುಕೊಳ್ಳಬಹುದು. ನಗರದ ದಿನನಿತ್ಯದ ಓಡಾಟಗಳನ್ನೆಲ್ಲಾ ಬಿಟ್ಟುಬಿಟ್ಟು ನೀನು ಒಂದು ಪ್ರಶಾಂತವಾದ ಹಳ್ಳಿಗೆ ಸ್ಥಳಾಂತರಿಸಬಹುದು.”

“ಆಮೇಲೆ ಏನು?” ಎಂದು ಬೆಸ್ತನು ಕೇಳುತ್ತಾನೆ.

“ಆಗ ನಿನಗೆ ಸ್ವಲ್ಪ ಮೀನನ್ನು ಹಿಡಿಯಲು, ನಿನ್ನ ಮಕ್ಕಳೊಂದಿಗೆ ಆಟವಾಡಲು, ಬಿಸಿಲು ಜಾಸ್ತಿಯಾದಾಗ ಮಧ್ಯಾಹ್ನದಲ್ಲಿ ಲಘುನಿದ್ರೆಯನ್ನು ಮಾಡಲು, ಕುಟುಂಬದೊಂದಿಗೆ ಸಂಜೆಯೂಟವನ್ನು ತಿನ್ನಲು, ಮತ್ತು ನಿನ್ನ ಸ್ನೇಹಿತರೊಂದಿಗೆ ಸಂಗೀತವನ್ನು ಆನಂದಿಸಲಿಕ್ಕಾಗಿ ಒಟ್ಟುಗೂಡಲು ಸಮಯವಿರುವುದು.”

[ಪುಟ 7ರಲ್ಲಿರುವ ಚಿತ್ರಗಳು]

ಬಡತಿಯು ಭದ್ರತೆಯನ್ನು ತರುತ್ತದೋ?

[ಪುಟ 8ರಲ್ಲಿರುವ ಚಿತ್ರಗಳು]

ನಿಮ್ಮ ಜೊತೆ ಕ್ರೈಸ್ತರು ನಿಮ್ಮ ಭದ್ರತೆಯಲ್ಲಿ ನಿಜವಾಗಿಯೂ ಆಸಕ್ತರಾಗಿದ್ದಾರೆ