ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ನಿಯಮಗಳು ನಮ್ಮ ಪ್ರಯೋಜನಕ್ಕಾಗಿವೆ

ದೇವರ ನಿಯಮಗಳು ನಮ್ಮ ಪ್ರಯೋಜನಕ್ಕಾಗಿವೆ

ದೇವರ ನಿಯಮಗಳು ನಮ್ಮ ಪ್ರಯೋಜನಕ್ಕಾಗಿವೆ

“ನಿನ್ನ ಧರ್ಮಶಾಸ್ತ್ರವು [“ನಿಯಮವು,” NW] ನನಗೆ ಎಷ್ಟೋ ಪ್ರಿಯವಾಗಿದೆ.”​—ಕೀರ್ತನೆ 119:97.

1. ಇಂದು ದೇವರ ನಿಯಮಗಳ ಕಡೆಗಿನ ವಿಧೇಯತೆಯ ಕುರಿತು ಚಾಲ್ತಿಯಲ್ಲಿರುವ ಮನೋಭಾವ ಯಾವುದು?

ದೇವರ ನಿಯಮಗಳಿಗೆ ವಿಧೇಯರಾಗುವುದು ಇಂದು ಜನಪ್ರಿಯ ಸಂಗತಿಯಲ್ಲ. ಒಂದು ಅದೃಶ್ಯ ಉಚ್ಚ ಅಧಿಕಾರಕ್ಕೆ ಮಣಿಯುವುದು ಅರ್ಥಹೀನವೆಂದು ಅನೇಕರಿಗೆ ಅನಿಸುತ್ತದೆ. ಸದಾ ಬದಲಾಗುತ್ತಿರುವ ನೈತಿಕ ಮಟ್ಟಗಳು, ಸರಿ ಮತ್ತು ತಪ್ಪು ಯಾವುದೆಂಬುದನ್ನು ಗುರುತಿಸುವುದನ್ನು ಕಷ್ಟಕರವಾಗಿಸುವ ಅಸ್ಪಷ್ಟವಾದ ಮೇರೆಗಳು, ಮತ್ತು ಇದು ಸರಿ ಇಲ್ಲವೆ ಇದು ತಪ್ಪೆಂದು ಸುಲಭವಾಗಿ ಹೇಳಲಾಗದಂಥ ಪರಿಸ್ಥಿತಿಗಳು ಹಾಗೂ ಸನ್ನಿವೇಶಗಳುಳ್ಳ ಒಂದು ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. (ಜ್ಞಾನೋಕ್ತಿ 17:15; ಯೆಶಾಯ 5:20) ಧರ್ಮದ ಪ್ರಭಾವದಿಂದ ಹೊರಬಂದಿರುವ ಅನೇಕ ಸಮಾಜಗಳಲ್ಲಿನ ಯೋಚನಾಧಾಟಿಯನ್ನು ಪ್ರತಿಫಲಿಸುತ್ತಾ, ಇತ್ತೀಚೆಗೆ ನಡೆಸಲ್ಪಟ್ಟ ಒಂದು ಸಮೀಕ್ಷೆಯಲ್ಲಿ, “ಹೆಚ್ಚಿನ ಅಮೆರಿಕನರು ತಮಗೋಸ್ಕರ ಯಾವುದು ಸರಿಯಾದದ್ದು, ಒಳ್ಳೇದು ಮತ್ತು ಉದ್ದೇಶಪೂರ್ಣವಾದದ್ದಾಗಿದೆ ಎಂಬುದನ್ನು ಸ್ವತಃ ನಿರ್ಣಯಿಸಿಕೊಳ್ಳಲು ಬಯಸಿದರು” ಎಂಬುದನ್ನು ತೋರಿಸಿತು. ಅವರಿಗೆ “ಕಟ್ಟುನಿಟ್ಟಾದ ದೇವರು” ಬೇಡ. “ಅವರಿಗೆ ಕಟ್ಟುನಿಟ್ಟಾದ ನಿಯಮಗಳು ಬೇಡ. ನೈತಿಕ ವಿಷಯದಲ್ಲಾಗಲಿ, ಬೇರಾವುದೇ ವಿಷಯದಲ್ಲಾಗಲಿ ಕಟ್ಟುನಿಟ್ಟಾದ ಮೇಲಧಿಕಾರಿಗಳು ಬೇಡ.” ಇಂದು “ಒಳ್ಳೆಯ ಹಾಗೂ ಸದಾಚಾರದ ಜೀವನವೆಂದರೇನು ಎಂಬುದನ್ನು ಜನರು ಸ್ವತಃ ನಿರ್ಧರಿಸುವಂತೆ ಅಪೇಕ್ಷಿಸಲಾಗುತ್ತದೆಂದು” ಒಬ್ಬ ಸಾಮಾಜಿಕ ವಿಶ್ಲೇಷಕನು ಗಮನಿಸಿದನು. ಅವನು ಮುಂದುವರಿಸಿ ಹೇಳಿದ್ದು: “ಯಾವುದೇ ರೀತಿಯ ಉಚ್ಚ ಅಧಿಕಾರವು, ನೈಜ ಜನರ ಅಗತ್ಯಗಳಿಗೆ ತನ್ನ ಆಜ್ಞೆಗಳನ್ನು ಹೊಂದಿಸಿಕೊಳ್ಳಬೇಕು.”

2. ಬೈಬಲಿನಲ್ಲಿ ಮೊತ್ತಮೊದಲ ಬಾರಿ ನಿಯಮಗಳ ಕುರಿತಾದ ಉಲ್ಲೇಖವು, ದೇವರ ಆಶೀರ್ವಾದ ಹಾಗೂ ಮೆಚ್ಚುಗೆಯೊಂದಿಗೆ ಹೇಗೆ ನಿಕಟವಾಗಿ ಸಂಬಂಧಿಸಿತ್ತು?

2 ಇಷ್ಟೊಂದು ಜನರು ಯೆಹೋವನ ನಿಯಮಗಳ ಮೌಲ್ಯದ ಬಗ್ಗೆ ಸವಾಲೆಸೆದಿರುವುದರಿಂದ, ದೇವರ ಮಟ್ಟಗಳು ನಮ್ಮ ಸ್ವಂತ ಪ್ರಯೋಜನಕ್ಕಾಗಿವೆ ಎಂಬ ನಮ್ಮ ದೃಢಾಭಿಪ್ರಾಯವನ್ನು ನಾವು ಇನ್ನಷ್ಟು ಬಲಪಡಿಸಬೇಕು. ನಿಯಮಗಳ ಬಗ್ಗೆ ಬೈಬಲಿನಲ್ಲಿ ಮೊತ್ತಮೊದಲ ಬಾರಿ ತಿಳಿಸಲ್ಪಟ್ಟಿರುವ ವೃತ್ತಾಂತವನ್ನು ಪರಿಗಣಿಸುವುದು ಆಸಕ್ತಿಕರವಾಗಿರುವುದು. ಆದಿಕಾಂಡ 26:4ರಲ್ಲಿ ನಾವು ದೇವರ ಮಾತುಗಳನ್ನು ಹೀಗೆ ಓದುತ್ತೇವೆ: “ಅಬ್ರಹಾಮನು ನನ್ನ ಮಾತನ್ನು ಕೇಳಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞಾನೇಮವಿಧಿಗಳನ್ನು ಕೈಕೊಂಡು ನಡೆದ”ನು. ಆ ಮಾತುಗಳು, ಯೆಹೋವನು ಅಬ್ರಹಾಮನ ಸಂತತಿಯವರಿಗೆ ಒಂದು ವಿವರವಾದ ನಿಯಮಾವಳಿಯನ್ನು ಕೊಡುವ ಶತಮಾನಗಳ ಹಿಂದೆಯೇ ನುಡಿಯಲ್ಪಟ್ಟಿದ್ದವು. ದೇವರಿಗೂ ಆತನ ನಿಯಮಗಳಿಗೂ ಅಬ್ರಹಾಮನು ತೋರಿಸಿದ ವಿಧೇಯತೆಗೆ ಆತನು ಹೇಗೆ ಪ್ರತಿಫಲ ಕೊಟ್ಟನು? ಯೆಹೋವ ದೇವರು ಅವನಿಗೆ ಮಾತುಕೊಟ್ಟದ್ದು: “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:18) ಹೀಗೆ, ದೇವರ ನಿಯಮಗಳಿಗೆ ವಿಧೇಯರಾಗುವುದು ಮತ್ತು ದೇವರ ಆಶೀರ್ವಾದ ಹಾಗೂ ಮೆಚ್ಚುಗೆಯನ್ನು ಗಳಿಸುವುದರ ನಡುವೆ ನಿಕಟವಾದ ಸಂಬಂಧವಿದೆ.

3. (ಎ) ಯೆಹೋವನ ನಿಯಮದ ಕುರಿತಾಗಿ ಒಬ್ಬ ಕೀರ್ತನೆಗಾರನು ಯಾವ ಭಾವನೆಯನ್ನು ವ್ಯಕ್ತಪಡಿಸಿದನು? (ಬಿ) ಯಾವ ಪ್ರಶ್ನೆಗಳಿಗೆ ಗಮನಕೊಡುವುದು ಒಳ್ಳೇದು?

3 ಬಹುಶಃ ಯೆಹೂದದ ಒಬ್ಬ ರಾಜಕುಮಾರನೂ ಭಾವೀ ಅರಸನೂ ಆಗಿದ್ದ ಕೀರ್ತನೆಗಾರರಲ್ಲಿ ಒಬ್ಬನು, ಸಾಮಾನ್ಯವಾಗಿ ನಿಯಮಗಳ ಕುರಿತಾಗಿ ತೋರಿಸಲ್ಪಡದಂಥ ಒಂದು ಭಾವನೆಯನ್ನು ವ್ಯಕ್ತಪಡಿಸಿದನು. ಅವನು ದೇವರಿಗೆ ಹೀಗೆ ಉದ್ಗರಿಸಿದ್ದು: “ನಿನ್ನ ಧರ್ಮಶಾಸ್ತ್ರವು [“ನಿಯಮವು,” NW] ನನಗೆ ಎಷ್ಟೋ ಪ್ರಿಯವಾಗಿದೆ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 119:97) ಇದು ಭಾವುಕಗೊಂಡು ಆಡಲ್ಪಟ್ಟ ಮಾತುಗಳಲ್ಲ. ದೇವರ ನಿಯಮಗಳ ಮೂಲಕ ತಿಳಿಸಲ್ಪಟ್ಟಿರುವ ದೇವರ ಚಿತ್ತದ ಒಂದು ಅಭಿವ್ಯಕ್ತಿ ಇದಾಗಿದೆ. ದೇವರ ಪರಿಪೂರ್ಣ ಮಗನಾದ ಯೇಸು ಕ್ರಿಸ್ತನಿಗೂ ಅದೇ ರೀತಿಯ ಭಾವನೆಗಳಿದ್ದವು. ಪ್ರವಾದನಾರೂಪವಾಗಿ ಯೇಸು ಹೀಗೆ ಹೇಳಿರುವುದಾಗಿ ವರ್ಣಿಸಲಾಗಿದೆ: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತನೆ 40:8; ಇಬ್ರಿಯ 10:9) ನಮ್ಮ ಕುರಿತಾಗಿ ಏನು? ನಾವು ದೇವರ ಚಿತ್ತವನ್ನು ಮಾಡುವುದರಲ್ಲಿ ಸಂತೋಷಿಸುತ್ತೇವೊ? ಯೆಹೋವನ ನಿಯಮಗಳು ಎಷ್ಟು ಉಪಯುಕ್ತಕರ ಹಾಗೂ ಲಾಭದಾಯಕವಾಗಿವೆ ಎಂಬುದರ ಬಗ್ಗೆ ಸ್ವತಃ ನಮಗೆ ಮನದಟ್ಟಾಗಿದೆಯೊ? ನಮ್ಮ ಆರಾಧನೆಯಲ್ಲಿ, ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ನಿರ್ಣಯಗಳಲ್ಲಿ ಮತ್ತು ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ದೇವರ ನಿಯಮಗಳಿಗೆ ವಿಧೇಯತೆಯನ್ನು ತೋರಿಸುವುದಕ್ಕೆ ಯಾವ ಸ್ಥಾನವಿದೆ? ದೇವರ ನಿಯಮಗಳು ನಮಗೆ ಪ್ರಿಯವಾಗಿರಬೇಕಾದಲ್ಲಿ, ನಿಯಮಗಳನ್ನು ರಚಿಸಿ ಅವುಗಳನ್ನು ಜಾರಿಗೆ ತರುವ ಹಕ್ಕು ದೇವರಿಗೆ ಏಕಿದೆಯೆಂಬುದನ್ನು ಅರ್ಥಮಾಡಿಕೊಳ್ಳುವುದು ಒಳ್ಳೇದು.

ಯೆಹೋವನು​—ನ್ಯಾಯವಾದ ಹಕ್ಕುಳ್ಳ ನಿಯಮದಾತನು

4. ಯೆಹೋವನು ಸರ್ವೋಚ್ಚ, ನ್ಯಾಯವಾದ ಹಕ್ಕುಳ್ಳ ನಿಯಮದಾತನಾಗಿರುವುದು ಏಕೆ?

4 ಸೃಷ್ಟಿಕರ್ತನೋಪಾದಿ, ಯೆಹೋವನು ಈ ವಿಶ್ವದಲ್ಲಿ ಸರ್ವೋಚ್ಚ, ನ್ಯಾಯವಾದ ಹಕ್ಕುಳ್ಳ ನಿಯಮದಾತನಾಗಿದ್ದಾನೆ. (ಪ್ರಕಟನೆ 4:11) ಪ್ರವಾದಿಯಾದ ಯೆಶಾಯನು ತಿಳಿಸಿದ್ದು: ‘ಯೆಹೋವನು ನಮಗೆ ಧರ್ಮವಿಧಾಯಕ.’ (ಯೆಶಾಯ 33:22) ಜೀವಂತ ಹಾಗೂ ನಿರ್ಜೀವ ಸೃಷ್ಟಿಯನ್ನು ನಿಯಂತ್ರಿಸುವಂಥ ಭೌತಿಕ ನಿಯಮಗಳನ್ನು ಆತನು ಸ್ಥಾಪಿಸಿದ್ದಾನೆ. (ಯೋಬ 38:​4-38; 39:​1-12; ಕೀರ್ತನೆ 104:​5-19) ಮನುಷ್ಯನು ದೇವರ ಸೃಷ್ಟಿಯಾಗಿರುವುದರಿಂದ ಅವನು ಯೆಹೋವನ ಭೌತಿಕ ನಿಯಮಗಳಿಗೆ ಅಧೀನನಾಗಿರಬೇಕು. ಮತ್ತು ಮನುಷ್ಯನು ಸ್ವತಂತ್ರ ಇಚ್ಛೆಯುಳ್ಳವನಾಗಿದ್ದು, ತನ್ನಷ್ಟಕ್ಕೇ ತರ್ಕಮಾಡಲು ಶಕ್ತನಾಗಿರುವವನಾಗಿದ್ದರೂ, ಅವನು ದೇವರ ನೈತಿಕ ಹಾಗೂ ಆತ್ಮಿಕ ನಿಯಮಗಳಿಗೆ ಅಧೀನನಾಗುವಾಗ ಮಾತ್ರ ಸಂತೋಷದಿಂದಿರುತ್ತಾನೆ.​—ರೋಮಾಪುರ 12:​1, NW; 1 ಕೊರಿಂಥ 2:​14-16.

5. ಗಲಾತ್ಯ 6:7ರಲ್ಲಿರುವ ತತ್ತ್ವವು, ದೇವರ ನಿಯಮಗಳ ವಿಷಯದಲ್ಲಿ ಹೇಗೆ ಸತ್ಯವಾಗಿ ಪರಿಣಮಿಸುತ್ತದೆ?

5 ಯೆಹೋವನ ಭೌತಿಕ ನಿಯಮಗಳು ಮುರಿಯಲಾರದಂಥವು ಎಂಬುದು ನಮಗೆ ತಿಳಿದಿರುವ ಸಂಗತಿ. (ಯೆರೆಮೀಯ 33:​20, 21) ಒಬ್ಬ ವ್ಯಕ್ತಿಯು ಕೆಲವೊಂದು ಭೌತಿಕ ನಿಯಮಗಳಿಗೆ, ಉದಾಹರಣೆಗೆ ಗುರುತ್ವಾಕರ್ಷಣೆಯ ವಿರುದ್ಧ ಹೋಗುವುದಾದರೆ, ಅದರ ಫಲಿತಾಂಶಗಳನ್ನು ಅನುಭವಿಸಬೇಕಾಗುತ್ತದೆ. ತದ್ರೀತಿಯಲ್ಲೇ, ದೇವರ ನೈತಿಕ ನಿಯಮಗಳು ಮಾರ್ಪಡಿಸಲಾಗದಂಥವುಗಳಾಗಿವೆ ಮತ್ತು ಯಾವುದೇ ಶಿಕ್ಷೆಯನ್ನು ಪಡೆಯದೇ ಅವುಗಳನ್ನು ಮುರಿಯಲು ಇಲ್ಲವೆ ಉಲ್ಲಂಘಿಸಲು ಸಾಧ್ಯವಿಲ್ಲ. ಫಲಿತಾಂಶಗಳು ಅಷ್ಟು ಬೇಗನೆ ಕಂಡುಬರದಿದ್ದರೂ ಈ ನೈತಿಕ ನಿಯಮಗಳು ಆತನ ನೈಸರ್ಗಿಕ ನಿಯಮಗಳಷ್ಟೇ ನಿಶ್ಚಿತವಾಗಿ ಜಾರಿಗೆ ತರಲಾಗುತ್ತವೆ. “ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”​—ಗಲಾತ್ಯ 6:7; 1 ತಿಮೊಥೆಯ 5:24.

ಯೆಹೋವನ ನಿಯಮಗಳ ಹರವು

6. ದೇವರ ನಿಯಮಗಳು ಯಾವ್ಯಾವ ಕ್ಷೇತ್ರಗಳನ್ನು ವ್ಯಾಪಿಸುತ್ತವೆ?

6 ದೇವರ ನಿಯಮಗಳ ಒಂದು ಎದ್ದುಕಾಣುವ ಅಭಿವ್ಯಕ್ತಿಯು, ಮೋಶೆಯ ಧರ್ಮಶಾಸ್ತ್ರವಾಗಿದೆ. (ರೋಮಾಪುರ 7:12) ಕಾಲಾನಂತರ ಯೆಹೋವ ದೇವರು ಮೋಶೆಯ ಧರ್ಮಶಾಸ್ತ್ರದ ಸ್ಥಾನದಲ್ಲಿ “ಕ್ರಿಸ್ತನ ನಿಯಮ”ವನ್ನು ತಂದನು. * (ಗಲಾತ್ಯ 6:2; 1 ಕೊರಿಂಥ 9:21) “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣ”ಕ್ಕೆ ಅಧೀನರಾಗಿರುವ ಕ್ರೈಸ್ತರೋಪಾದಿ ನಾವು, ದೇವರು ತನ್ನ ನಿರ್ದೇಶನಗಳನ್ನು ನಮ್ಮ ಜೀವಿತದ ಕೆಲವೊಂದು ಅಂಶಗಳಿಗೆ, ಅಂದರೆ ತಾತ್ವಿಕ ನಂಬಿಕೆಗಳು ಇಲ್ಲವೆ ಸಂಸ್ಕಾರಬದ್ಧ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ ಎಂಬುದನ್ನು ಗ್ರಹಿಸುತ್ತೇವೆ. ಆತನ ಮಟ್ಟಗಳು ಜೀವಿತದ ಎಲ್ಲ ಕ್ಷೇತ್ರಗಳನ್ನು ಅಂದರೆ, ಕುಟುಂಬ ಸಂಬಂಧಗಳು, ವ್ಯಾಪಾರದ ವಹಿವಾಟುಗಳು, ವಿರುದ್ಧ ಲಿಂಗದವರೊಂದಿಗಿನ ನಡತೆ, ಜೊತೆ ಕ್ರೈಸ್ತರ ಕಡೆಗಿನ ಮನೋಭಾವಗಳನ್ನು ಮತ್ತು ಸತ್ಯಾರಾಧನೆಯಲ್ಲಿನ ಪಾಲ್ಗೊಳ್ಳುವಿಕೆಯನ್ನು ಆವರಿಸುತ್ತವೆ.​—ಯಾಕೋಬ 1:​25, 27.

7. ಪ್ರಾಮುಖ್ಯವಾದ ದೇವರ ನಿಯಮಗಳ ಉದಾಹರಣೆಗಳನ್ನು ಕೊಡಿರಿ.

7 ಉದಾಹರಣೆಗಾಗಿ ಬೈಬಲ್‌ ಹೀಗನ್ನುತ್ತದೆ: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಹೌದು, ಜಾರತ್ವ ಮತ್ತು ವ್ಯಭಿಚಾರ ಬರೀ “ಪ್ರೇಮ ಪ್ರಸಂಗಗಳು” ಅಲ್ಲ. ಸಲಿಂಗಿಕಾಮವು ಬರಿಯ “ಅನ್ಯವಿಧದ ಜೀವನಶೈಲಿ” ಅಲ್ಲ. ಇವು ಯೆಹೋವನ ನಿಯಮಗಳ ಉಲ್ಲಂಘನೆಗಳಾಗಿವೆ. ಮತ್ತು ಕಳ್ಳತನ ಮಾಡುವುದು, ಸುಳ್ಳುಹೇಳುವುದು ಹಾಗೂ ಚಾಡಿಮಾತು ಸಹ ಯೆಹೋವನ ನಿಯಮಗಳ ಉಲ್ಲಂಘನೆಗಳಾಗಿವೆ. (ಕೀರ್ತನೆ 101:5; ಕೊಲೊಸ್ಸೆ 3:9; 1 ಪೇತ್ರ 4:15) ಯಾಕೋಬನು ಸ್ವಹೊಗಳಿಕೆಯನ್ನು ಖಂಡಿಸಿದನು ಮತ್ತು ಪೌಲನು ನಾವು ಎಲ್ಲಾ ರೀತಿಯ ಹುಚ್ಚು ಮಾತು ಮತ್ತು ಕುಚೋದ್ಯದ ಹೊಲಸು ಮಾತನ್ನು ದೂರವಿರಿಸುವಂತೆ ಬುದ್ಧಿವಾದವನ್ನು ಕೊಡುತ್ತಾನೆ. (ಎಫೆಸ 5:4; ಯಾಕೋಬ 4:16) ಕ್ರೈಸ್ತರಿಗೆ, ನಡವಳಿಕೆಯ ಕುರಿತಾದ ಈ ಎಲ್ಲ ನಿಯಮಗಳು, ದೇವರ ಲೋಪವಿಲ್ಲದ ಧರ್ಮಶಾಸ್ತ್ರದ ಭಾಗವಾಗಿವೆ.​—ಕೀರ್ತನೆ 19:7.

8. (ಎ) ಯೆಹೋವನ ನಿಯಮಗಳು ಯಾವ ರೀತಿಯದ್ದಾಗಿವೆ? (ಬಿ) “ಧರ್ಮಶಾಸ್ತ್ರ”ಕ್ಕಾಗಿರುವ ಹೀಬ್ರು ಪದದ ಮೂಲಾರ್ಥವೇನು?

8 ಯೆಹೋವನ ನಿಯಮಗಳು ಕಟ್ಟುನಿಟ್ಟಾಗಿ ಚಾಚೂತಪ್ಪದೆ ಪಾಲಿಸಬೇಕಾದ, ಭಾವಶೂನ್ಯ ವಿಧಿಗಳ ಒಂದು ಉದ್ದ ಪಟ್ಟಿಯಾಗಿರುವುದಿಲ್ಲ ಎಂಬುದನ್ನು ಆತನ ವಾಕ್ಯದಲ್ಲಿರುವ ಇಂಥ ಮೂಲಭೂತ ಕಟ್ಟಳೆಗಳು ಪ್ರಕಟಿಸುತ್ತವೆ. ಅದರ ಬದಲು ಅವು, ನಡವಳಿಕೆಯ ಎಲ್ಲ ಅಂಶಗಳಲ್ಲಿ ಪ್ರಯೋಜನಗಳನ್ನು ತರುತ್ತಾ, ಒಂದು ಸಮತೋಲನದ, ಉತ್ಪನ್ನಕಾರಕ ಜೀವನಕ್ಕೆ ಆಧಾರವಾಗಿವೆ. ದೇವರ ನಿಯಮಗಳು ಭಕ್ತಿವೃದ್ಧಿಮಾಡುವಂಥವುಗಳು, ನೀತಿತತ್ತ್ವವುಳ್ಳವುಗಳು ಮತ್ತು ಬೋಧಪ್ರದವೂ ಆಗಿರುತ್ತವೆ. (ಕೀರ್ತನೆ 119:72) ಕೀರ್ತನೆಗಾರನಿಂದ ಉಪಯೋಗಿಸಲ್ಪಟ್ಟಿರುವ “ಧರ್ಮಶಾಸ್ತ್ರ” ಎಂಬ ಪದವು, ತೋಹ್ರಾ ಎಂಬ ಹೀಬ್ರು ಪದದಿಂದ ಭಾಷಾಂತರಿಸಲ್ಪಟ್ಟಿದೆ. ಒಬ್ಬ ಬೈಬಲ್‌ ವಿದ್ವಾಂಸನು ಹೇಳುವುದು: “ಈ ಪದವು ನಿರ್ದೇಶಿಸು, ಮಾರ್ಗದರ್ಶಿಸು, ಗುರಿಯಾಗಿಡು, ಮುಂದಕ್ಕೆ ನುಗ್ಗು ಎಂಬ ಅರ್ಥವುಳ್ಳ ಕ್ರಿಯಾಪದದಿಂದ ಬರುತ್ತದೆ. ಹೀಗಿರುವುದರಿಂದ . . . ಅದರ ಅರ್ಥ ನಡತೆಯ ಸೂತ್ರ ಎಂದಾಗಿದೆ.” ಕೀರ್ತನೆಗಾರನಿಗೆ ಈ ಧರ್ಮಶಾಸ್ತ್ರವು ದೇವರಿಂದ ಬಂದ ಕೊಡುಗೆಯಾಗಿತ್ತು. ನಾವು ಜೀವಿಸುವ ರೀತಿಯನ್ನು ಪ್ರಭಾವಿಸುವಂತೆ ಬಿಡುತ್ತಾ ನಾವು ಸಹ ಅವುಗಳನ್ನು ಅದೇ ರೀತಿಯಲ್ಲಿ ಗೌರವದಿಂದ ಕಾಣಬಾರದೊ?

9, 10. (ಎ) ನಮಗೆ ಭರವಸಾರ್ಹವಾದ ನಿರ್ದೇಶನ ಏಕೆ ಅಗತ್ಯ? (ಬಿ) ನಾವು ಒಂದು ಆನಂದಭರಿತ ಹಾಗೂ ಸಫಲಭರಿತ ಜೀವನವನ್ನು ಪಡೆಯುವ ಏಕಮಾತ್ರ ವಿಧ ಯಾವುದು?

9 ಎಲ್ಲ ಜೀವಿಗಳಿಗೂ ಭರವಸಾರ್ಹವಾದ ನಿರ್ದೇಶನ ಮತ್ತು ವಿಶ್ವಸನೀಯ ಮಾರ್ಗದರ್ಶನದ ಅಗತ್ಯವಿದೆ. ಮನುಷ್ಯರಿಗಿಂತಲೂ ಉಚ್ಚವರ್ಗದವರಾಗಿರುವ ಯೇಸು ಮತ್ತು ಇತರ ದೇವದೂತರ ವಿಷಯದಲ್ಲೂ ಇದು ಸತ್ಯವಾಗಿದೆ. (ಕೀರ್ತನೆ 8:5; ಯೋಹಾನ 5:30; 6:38; ಇಬ್ರಿಯ 2:7; ಪ್ರಕಟನೆ 22:​8, 9) ಈ ಪರಿಪೂರ್ಣ ಜೀವಿಗಳೇ ದೇವರ ಮಾರ್ಗದರ್ಶನದಿಂದ ಪ್ರಯೋಜನ ಪಡೆಯುತ್ತಿರುವಾಗ, ಅಪರಿಪೂರ್ಣರಾದ ಮಾನವರಿಗೆ ಅದೆಷ್ಟು ಹೆಚ್ಚು ಪ್ರಯೋಜನಕಾರಿ ಆಗಿರಬಲ್ಲದು! ಮಾನವ ಇತಿಹಾಸ ಮತ್ತು ನಮ್ಮ ಸ್ವಂತ ಅನುಭವವು, ಪ್ರವಾದಿಯಾದ ಯೆರೆಮೀಯನ ಈ ಅವಲೋಕನದ ಸತ್ಯತೆಯನ್ನು ರುಜುಪಡಿಸಿದೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”​—ಯೆರೆಮೀಯ 10:23.

10 ನಮ್ಮ ಜೀವನವು ಆನಂದಭರಿತವೂ ಸಫಲಭರಿತವೂ ಆಗಿರಬೇಕೆಂದು ನಾವು ಆಶಿಸುವಲ್ಲಿ, ನಾವು ಮಾರ್ಗದರ್ಶನಕ್ಕಾಗಿ ದೇವರ ಕಡೆಗೆ ನೋಡಬೇಕು. ದೇವರ ಮಾರ್ಗದರ್ಶನದಿಂದ ಮುಕ್ತವಾಗಿರುವ ವೈಯಕ್ತಿಕ ಮಟ್ಟಗಳಿಗನುಸಾರ ಜೀವಿಸುವುದರ ಅಪಾಯವನ್ನು ರಾಜ ಸೊಲೊಮೋನನು ಗ್ರಹಿಸಿದನು: “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.”​—ಜ್ಞಾನೋಕ್ತಿ 14:12.

ಯೆಹೋವನ ನಿಯಮಗಳನ್ನು ಪ್ರಿಯವೆಂದೆಣಿಸಲಿಕ್ಕಾಗಿ ಕಾರಣಗಳು

11. ದೇವರ ನಿಯಮವನ್ನು ಅರ್ಥಮಾಡಿಕೊಳ್ಳುವ ಅಭಿಲಾಷೆ ನಮ್ಮಲ್ಲಿ ಏಕೆ ಇರಬೇಕು?

11 ಯೆಹೋವನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಗಾಢವಾದ ಆಸೆಯನ್ನು ಬೆಳೆಸಿಕೊಳ್ಳುವುದು ಒಳ್ಳೇದು. “ನನ್ನ ಕಣ್ಣು ತೆರೆ, ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು” ಎಂದು ಕೀರ್ತನೆಗಾರನು ಹೇಳಿದಾಗ ಅಂಥ ಹಾತೊರೆಯುವಿಕೆಯನ್ನು ವ್ಯಕ್ತಪಡಿಸಿದನು. (ಕೀರ್ತನೆ 119:18) ನಾವು ದೇವರನ್ನೂ ಆತನ ಮಾರ್ಗಗಳನ್ನೂ ಎಷ್ಟು ಹೆಚ್ಚಾಗಿ ತಿಳಿದುಕೊಳ್ಳುತ್ತೇವೊ, ಯೆಶಾಯನ ಈ ಮಾತುಗಳ ನಮ್ಮ ತಿಳಿವಳಿಕೆಯೂ ಅಷ್ಟೇ ಗಾಢವಾಗಿರುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:17, 18) ತನ್ನ ಆಜ್ಞೆಗಳಿಗೆ ಗಮನಕೊಡುವ ಮೂಲಕ ತನ್ನ ಜನರು ವಿಪತ್ತಿನಿಂದ ತಪ್ಪಿಸಿಕೊಳ್ಳಬೇಕು ಮತ್ತು ಜೀವನದಲ್ಲಿ ಆನಂದಿಸಬೇಕೆಂಬುದು ಯೆಹೋವನ ತೀವ್ರಾಭಿಲಾಷೆಯಾಗಿದೆ. ನಾವು ದೇವರ ನಿಯಮಗಳನ್ನು ಏಕೆ ಪ್ರಿಯವೆಂದೆಣಿಸಬೇಕೆಂಬ ಪ್ರಧಾನ ಕಾರಣಗಳನ್ನು ನಾವೀಗ ಪರೀಕ್ಷಿಸೋಣ.

12. ನಮ್ಮ ಬಗ್ಗೆ ಯೆಹೋವನಿಗಿರುವ ತಿಳಿವಳಿಕೆಯು ಆತನನ್ನು ಅತ್ಯುತ್ತಮ ನಿಯಮದಾತನನ್ನಾಗಿ ಮಾಡುವುದು ಹೇಗೆ?

12ದೇವರ ನಿಯಮಗಳು, ನಮ್ಮ ಬಗ್ಗೆ ಚೆನ್ನಾಗಿ ಬಲ್ಲಾತನಿಂದ ಬರುತ್ತವೆ. ಯೆಹೋವನು ನಮ್ಮ ಸೃಷ್ಟಿಕರ್ತನಾಗಿರುವುದರಿಂದ, ಆತನು ಮನುಷ್ಯರನ್ನು ಚೆನ್ನಾಗಿ ತಿಳಿದವನಾಗಿರುತ್ತಾನೆಂಬುದು ತರ್ಕಸಮ್ಮತ. (ಕೀರ್ತನೆ 139:​1, 2; ಅ. ಕೃತ್ಯಗಳು 17:​24-28) ಯೆಹೋವನು ನಮ್ಮನ್ನು ಬಲ್ಲವನಾಗಿರುವಷ್ಟು ಉತ್ತಮವಾಗಿ ನಮ್ಮ ಆಪ್ತ ಮಿತ್ರರು, ಸಂಬಂಧಿಕರು ಮತ್ತು ಹೆತ್ತವರೂ ನಮ್ಮನ್ನು ಬಲ್ಲವರಾಗಿರುವುದಿಲ್ಲ. ನಮ್ಮ ಬಗ್ಗೆ ನಮಗೇ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ದೇವರಿಗೆ ತಿಳಿದಿದೆ! ನಮ್ಮ ಆತ್ಮಿಕ, ಭಾವನಾತ್ಮಕ, ಮಾನಸಿಕ ಮತ್ತು ಶಾರೀರಿಕ ಅಗತ್ಯಗಳ ಕುರಿತಾಗಿ ನಮ್ಮ ನಿರ್ಮಾಣಿಕನಿಗೆ ಸರಿಸಾಟಿಯಿಲ್ಲದ ಗ್ರಹಿಕೆಯಿದೆ. ಆತನು ನಮ್ಮ ಕಡೆಗೆ ತನ್ನ ಗಮನವನ್ನು ನಿರ್ದೇಶಿಸುವಾಗ, ನಮ್ಮ ರಚನೆ, ನಮ್ಮ ಅಭಿಲಾಷೆಗಳು ಮತ್ತು ನಮ್ಮ ಹೆಗ್ಗುರಿಗಳ ಬಗ್ಗೆ ಪರಿಪೂರ್ಣ ತಿಳಿವಳಿಕೆಯನ್ನು ತೋರಿಸುತ್ತಾನೆ. ಯೆಹೋವನಿಗೆ ನಮ್ಮ ಇತಿಮಿತಿಗಳೇನೆಂಬುದು ತಿಳಿದಿದೆಯಾದರೂ ನಾವು ಯಾವ ಒಳಿತನ್ನು ಸಾಧಿಸಬಹುದೆಂಬದೂ ಆತನಿಗೆ ತಿಳಿದಿದೆ. ಕೀರ್ತನೆಗಾರನು ಹೇಳುವುದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಹೀಗೆ ನಾವು ಆತನ ನಿಯಮಗಳಿಗನುಸಾರ ನಡೆಯಲು ಪ್ರಯತ್ನಿಸುತ್ತಾ, ಆತನ ಮಾರ್ಗದರ್ಶನಕ್ಕೆ ನಮ್ಮನ್ನೇ ಸಂತೋಷದಿಂದ ಅಧೀನರಾಗಿಸುವಾಗ ನಮಗೆ ಆತ್ಮಿಕ ಭದ್ರತೆಯ ಭಾವನೆಯಿರಬಲ್ಲದು.​—ಜ್ಞಾನೋಕ್ತಿ 3:​19-26.

13. ನಮಗೇನು ಅತ್ಯುತ್ತಮವಾಗಿದೆಯೊ ಅದರೆ ಬಗ್ಗೆ ಯೆಹೋವನು ನಿಜವಾಗಿಯೂ ಚಿಂತಿತನಾಗಿದ್ದಾನೆಂದು ನಾವೇಕೆ ಭರವಸೆಯಿಂದಿರಬಲ್ಲೆವು?

13ದೇವರ ನಿಯಮಗಳು, ನಮ್ಮನ್ನು ಪ್ರೀತಿಸುವಾತನಿಂದ ಬರುತ್ತವೆ. ದೇವರಿಗೆ ನಮ್ಮ ನಿತ್ಯ ಒಳಿತಿನ ಬಗ್ಗೆ ತುಂಬ ಚಿಂತೆಯಿದೆ. ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡು ಕೊಡುವದಕ್ಕೆ’ ಆತನು ತನ್ನ ಮಗನನ್ನೇ ತ್ಯಾಗಮಾಡಿದನಲ್ಲವೇ? (ಮತ್ತಾಯ 20:28) ‘ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸನು’ ಎಂದು ಯೆಹೋವನು ಮಾತುಕೊಟ್ಟಿದ್ದಾನಲ್ಲವೇ? (1 ಕೊರಿಂಥ 10:13) ಆತನು ‘ನಮಗೋಸ್ಕರ ಚಿಂತಿಸುತ್ತಾನೆ’ ಎಂದು ಬೈಬಲ್‌ ನಮಗೆ ಆಶ್ವಾಸನೆ ಕೊಡುತ್ತದಲ್ಲವೇ? (1 ಪೇತ್ರ 5:7) ಮನುಷ್ಯರಿಗೆ ಉಪಯುಕ್ತಕರವಾದ ನಿರ್ದೇಶನಸೂತ್ರಗಳನ್ನೂ ಕೊಡುವುದರ ಬಗ್ಗೆ ಯೆಹೋವನಿಗಿರುವಷ್ಟು ಪ್ರೀತಿಪರ ಆಸಕ್ತಿ ಬೇರಾರಿಗೂ ಇಲ್ಲ. ನಮಗೇನು ಒಳ್ಳೇದೆಂಬುದು ಮತ್ತು ನಮಗೆ ಯಾವುದು ಸಂತೋಷವನ್ನು ಮತ್ತು ಯಾವುದು ದುಃಖವನ್ನು ತರುವುದೆಂಬುದು ಆತನಿಗೆ ಗೊತ್ತಿದೆ. ನಾವು ಅಪರಿಪೂರ್ಣರಾಗಿದ್ದು ತಪ್ಪುಗಳನ್ನು ಮಾಡುತ್ತೇವಾದರೂ, ನಾವು ನೀತಿಯನ್ನು ಬೆನ್ನಟ್ಟುವಲ್ಲಿ, ಜೀವನ ಮತ್ತು ಆಶೀರ್ವಾದಗಳನ್ನು ತರುವ ವಿಧಗಳಲ್ಲಿ ಆತನು ನಮ್ಮ ಕಡೆಗೆ ತನ್ನ ಪ್ರೀತಿಯನ್ನು ತೋರಿಸುತ್ತಾನೆ.​—ಯೆಹೆಜ್ಕೇಲ 33:11.

14. ದೇವರ ನಿಯಮಗಳು ಮನುಷ್ಯರ ವಿಚಾರಗಳಿಂದ ಯಾವ ಪ್ರಾಮುಖ್ಯ ವಿಧದಲ್ಲಿ ಭಿನ್ನವಾಗಿವೆ?

14ದೇವರ ನಿಯಮಗಳು ಎಂದಿಗೂ ಬದಲಾಗುವುದಿಲ್ಲವೆಂಬುದು ಆಶ್ವಾಸನಾದಾಯಕವಾಗಿದೆ. ನಾವಿಂದು ಜೀವಿಸುತ್ತಿರುವ ಕೋಲಾಹಲಭರಿತ ಸಮಯಗಳಲ್ಲಿ, ಯೆಹೋವನು ಸ್ಥಿರತೆಯ ಬಂಡೆಯಂತಿದ್ದು, ನಿತ್ಯಕ್ಕೂ ಅಸ್ತಿತ್ವದಲ್ಲಿರುವವನಾಗಿದ್ದಾನೆ. (ಕೀರ್ತನೆ 90:2) “ಯೆಹೋವನಾದ ನಾನು ಮಾರ್ಪಟ್ಟಿಲ್ಲ” ಎಂದು ಆತನು ತನ್ನ ಬಗ್ಗೆ ಹೇಳಿದ್ದಾನೆ. (ಮಲಾಕಿಯ 3:6) ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ಮಟ್ಟಗಳು ಸಂಪೂರ್ಣವಾಗಿ ಭರವಸಾರ್ಹವಾಗಿವೆ. ಅವು ಸತತವಾಗಿ ಬದಲಾಗುತ್ತಾ ಇರುವ ಮನುಷ್ಯನ ವಿಚಾರಗಳಂತಿರುವುದಿಲ್ಲ. (ಯಾಕೋಬ 1:17) ಉದಾಹರಣೆಗಾಗಿ, ಅನೇಕ ವರ್ಷಗಳಿಂದ ಮನಶ್ಶಾಸ್ತ್ರಜ್ಞರು ಮಕ್ಕಳನ್ನು ತುಂಬ ಸ್ವಾತಂತ್ರ್ಯ ಕೊಟ್ಟು ಬೆಳೆಸಬೇಕು ಎಂಬ ವಿಚಾರವನ್ನು ಪ್ರವರ್ಧಿಸುತ್ತಿದ್ದರು. ಆದರೆ ಅನಂತರ ಕೆಲವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ, ತಾವು ಕೊಟ್ಟ ಬುದ್ಧಿವಾದವು ತಪ್ಪಾಗಿತ್ತೆಂಬುದನ್ನು ಒಪ್ಪಿಕೊಂಡರು. ಈ ವಿಷಯದ ಮೇಲೆ ಲೋಕದ ಮಟ್ಟಗಳು ಮತ್ತು ನಿರ್ದೇಶನಸೂತ್ರಗಳು, ಗಾಳಿಯಿಂದ ದೂಡಲ್ಪಡುತ್ತಾ ಇರುವಂತೆ ಹಿಂದೆ ಮುಂದೆ ತೂಗಾಡುತ್ತಾ ಇರುತ್ತವೆ. ಆದರೆ ಯೆಹೋವನ ವಾಕ್ಯವಾದರೊ ಅಚಲವಾಗಿದೆ. ಮಕ್ಕಳನ್ನು ಪ್ರೀತಿಯಿಂದ ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಬೈಬಲ್‌ ಅನೇಕ ಶತಮಾನಗಳಿಂದ ಸಲಹೆಯನ್ನು ಒದಗಿಸಿದೆ. ಅಪೊಸ್ತಲ ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ನಾವು ಯೆಹೋವನ ಮಟ್ಟಗಳ ಮೇಲೆ ಆತುಕೊಳ್ಳಬಹುದು, ಅವು ಎಂದಿಗೂ ಬದಲಾಗವು ಎಂಬ ಅರಿವು ನಮಗೆ ಎಷ್ಟು ಪುನರಾಶ್ವಾಸನಾದಾಯಕವಾಗಿದೆ!

ದೇವರ ನಿಯಮಗಳಿಗೆ ವಿಧೇಯರಾಗುವವರಿಗಾಗಿ ಆಶೀರ್ವಾದಗಳು

15, 16. (ಎ) ನಾವು ಯೆಹೋವನ ಮಟ್ಟಗಳನ್ನು ಅನ್ವಯಿಸುವುದಾದರೆ ಏನು ಪರಿಣಮಿಸುವುದು? (ಬಿ) ದೇವರ ನಿಯಮಗಳು ವಿವಾಹಕ್ಕಾಗಿ ಒಂದು ದೃಢವಾದ ಮಾರ್ಗದರ್ಶಕವಾಗಿರಬಲ್ಲದು ಹೇಗೆ?

15 ತನ್ನ ಪ್ರವಾದಿಯಾದ ಯೆಶಾಯನ ಮೂಲಕ ದೇವರು ಹೇಳಿದ್ದು: ‘ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸುವುದು.’ (ಯೆಶಾಯ 55:11) ನಾವು ಆತನ ವಾಕ್ಯದಲ್ಲಿ ಕಂಡುಬರುವ ಮಟ್ಟಗಳನ್ನು ಶ್ರದ್ಧೆಯಿಂದ ಪಾಲಿಸಲು ಪ್ರಯತ್ನಿಸುವಾಗ, ನಮಗೂ ಅಷ್ಟೇ ನಿಶ್ಚಿತವಾಗಿ ಯಶಸ್ಸು ದೊರೆಯುವುದು, ಒಳಿತನ್ನು ಸಾಧಿಸಲು ಸಾಧ್ಯವಾಗುವುದು ಮತ್ತು ನಾವು ಸಂತೋಷವನ್ನು ಕಂಡುಕೊಳ್ಳುವೆವು.

16 ದೇವರ ನಿಯಮಗಳು ಒಂದು ಯಶಸ್ವೀ ವಿವಾಹಕ್ಕೆ ಹೇಗೆ ಒಂದು ದೃಢವಾದ ಮಾರ್ಗದರ್ಶಕ ಆಗಿವೆ ಎಂಬುದನ್ನು ಪರಿಗಣಿಸಿರಿ. ಪೌಲನು ಬರೆದದ್ದು: “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿಯ 13:4) ವಿವಾಹ ಸಂಗಾತಿಗಳು ಪರಸ್ಪರ ಗೌರವಿಸುವವರು ಮತ್ತು ಪ್ರೀತಿಪರರಾಗಿರಬೇಕು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.” (ಎಫೆಸ 5:33) ಅಗತ್ಯವಾಗಿರುವಂಥ ರೀತಿಯ ಪ್ರೀತಿಯನ್ನು ಇಲ್ಲಿ 1 ಕೊರಿಂಥ 13:​4-8ರಲ್ಲಿ ವರ್ಣಿಸಲಾಗಿದೆ: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ; ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” ಈ ರೀತಿಯ ಪ್ರೀತಿಯಿಂದ ಕೂಡಿರುವ ವಿವಾಹವು ಎಂದಿಗೂ ಮುರಿಯದು.

17. ಮದ್ಯದ ಬಳಕೆಯ ಕುರಿತಾದ ಯೆಹೋವನ ಮಟ್ಟಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಯಾವ ಪ್ರಯೋಜನಗಳು ಸಿಗುತ್ತವೆ?

17 ಯೆಹೋವನ ಮಟ್ಟಗಳು ಉಪಯುಕ್ತವಾಗಿವೆ ಎಂಬುದಕ್ಕೆ ಇನ್ನೊಂದು ಪುರಾವೆಯು, ಆತನು ಕುಡುಕತನವನ್ನು ಖಂಡಿಸುತ್ತಾನೆಂಬ ವಾಸ್ತವಾಂಶವೇ. ‘ಮದ್ಯನಿರತರಾಗಿರುವುದನ್ನು’ ಆತನು ಅಸಮ್ಮತಿಸುತ್ತಾನೆ. (1 ತಿಮೊಥೆಯ 3:​3, 8; ರೋಮಾಪುರ 13:13) ಈ ವಿಷಯದ ಕುರಿತು ದೇವರ ಮಟ್ಟಗಳನ್ನು ಅಲಕ್ಷಿಸುವ ಅನೇಕರು, ವಿಪರೀತವಾದ ಕುಡಿತದಿಂದಾಗಿ ಉಂಟಾಗುವ ಅಥವಾ ಉಲ್ಪಣಿಸುವ ರೋಗಗಳಿಂದ ನರಳುತ್ತಾರೆ. ಮಿತಭಾವದ ಕುರಿತಾದ ಬೈಬಲ್‌ ಸಲಹೆಯನ್ನು ಅಲಕ್ಷಿಸುತ್ತಾ ಕೆಲವರು, “ಬಿಗುಪನ್ನು ತಗ್ಗಿಸಲಿಕ್ಕಾಗಿ” ಎಂದಾರಂಭಿಸುತ್ತಾ, ಭಾರೀ ಕುಡಿತದ ಚಟವನ್ನು ಬೆಳೆಸಿಕೊಂಡಿದ್ದಾರೆ. ವಿಪರೀತ ಕುಡಿತದಿಂದ ಪರಿಣಮಿಸುವ ಸಮಸ್ಯೆಗಳು ಅನೇಕ: ಗೌರವದ ನಷ್ಟ, ಬಿಗಡಾಯಿಸಿಕೊಂಡಿರುವ ಕುಟುಂಬ ಸಂಬಂಧಗಳು ಇಲ್ಲವೆ ಕುಟುಂಬದ ಒಡೆತ, ಪೋಲಾಗಿ ಹೋಗುವ ಸಂಬಳ ಮತ್ತು ಉದ್ಯೋಗದ ನಷ್ಟ. (ಜ್ಞಾನೋಕ್ತಿ 23:​19-21, 29-35) ಮದ್ಯದ ಬಳಕೆಯ ಕುರಿತಾದ ಯೆಹೋವನ ಮಟ್ಟಗಳು ಒಂದು ರಕ್ಷಣೆಯಾಗಿದೆಯಲ್ಲವೇ?

18. ಹಣಕಾಸಿನ ಸಂಬಂಧದಲ್ಲಿ ದೇವರ ನಿಯಮಗಳು ಪ್ರಾಯೋಗಿಕವಾಗಿವೆಯೊ? ವಿವರಿಸಿರಿ.

18 ದೇವರ ಮಟ್ಟಗಳು ಹಣಕಾಸಿನ ವಿಷಯಗಳಲ್ಲೂ ಪ್ರಾಯೋಗಿಕವೆಂದು ರುಜುವಾಗಿವೆ. ಕ್ರೈಸ್ತರು ಪ್ರಾಮಾಣಿಕರೂ ಶ್ರದ್ಧಾಪೂರ್ವಕರೂ ಆಗಿರುವಂತೆ ಬೈಬಲ್‌ ಉತ್ತೇಜಿಸುತ್ತದೆ. (ಲೂಕ 16:10; ಎಫೆಸ 4:28; ಕೊಲೊಸ್ಸೆ 3:23) ಅವರು ಈ ಸಲಹೆಯನ್ನು ಪಾಲಿಸುವುದರಿಂದ ಅನೇಕ ಕ್ರೈಸ್ತರಿಗೆ ತಮ್ಮ ಉದ್ಯೋಗದಲ್ಲಿ ಬಡತಿ ಸಿಕ್ಕಿದೆ ಅಥವಾ ಬೇರೆಯವರು ಕೆಲಸದಿಂದ ತೆಗೆಯಲ್ಪಟ್ಟಾಗ ಇವರನ್ನು ಇಡಲಾಗಿದೆ. ಜೂಜಾಟ, ಧೂಮಪಾನ, ಮತ್ತು ಅಮಲೌಷಧದ ದುರುಪಯೋಗದಂಥ ಅಶಾಸ್ತ್ರೀಯ ರೂಢಿಗಳು ಮತ್ತು ಚಟಗಳಿಂದ ದೂರವಿರುವುದರಿಂದ ಒಬ್ಬ ವ್ಯಕ್ತಿಗೆ ಆರ್ಥಿಕ ಪ್ರಯೋಜನಗಳು ಸಹ ಫಲಿಸುತ್ತವೆ. ದೇವರ ಮಟ್ಟಗಳನ್ನು ಪಾಲಿಸುವುದರ ಆರ್ಥಿಕ ಪ್ರಾಯೋಗಿಕತೆಯ ಇತರ ಉದಾಹರಣೆಗಳು ಸಹ ನಿಸ್ಸಂದೇಹವಾಗಿ ನಿಮ್ಮ ಮನಸ್ಸಿಗೆ ಬರಬಹುದು.

19, 20. ದೇವರ ನಿಯಮಗಳನ್ನು ಅಂಗೀಕರಿಸಿ ಅವುಗಳಿಗೆ ಅಂಟಿಕೊಳ್ಳುವುದು ವಿವೇಕದ ಸಂಗತಿ ಏಕೆ?

19 ಅಪರಿಪೂರ್ಣ ಮಾನವರಿಗೆ ದೇವರ ನಿಯಮಗಳನ್ನೂ ಮಟ್ಟಗಳನ್ನೂ ಬಿಟ್ಟು ಅಲೆದಾಡುವುದು ತುಂಬ ಸುಲಭ. ಸೀನಾಯಿ ಪರ್ವತದಲ್ಲಿದ್ದ ಇಸ್ರಾಯೇಲ್ಯರ ಕುರಿತಾಗಿ ಯೋಚಿಸಿರಿ. ದೇವರು ಅವರಿಗೆ ಹೀಗಂದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ.” ಆಗ ಅವರು ಹೀಗೆ ಪ್ರತಿಕ್ರಿಯಿಸಿದರು: “ಯೆಹೋವನು ಹೇಳಿದಂತೆಯೇ ಮಾಡುವೆವು.” ಆದರೆ ಅವರು ಅನುಸರಿಸಿದ ಮಾರ್ಗಕ್ರಮವು ಇದಕ್ಕೆ ಎಷ್ಟು ವಿರುದ್ಧವಾಗಿತ್ತು! (ವಿಮೋಚನಕಾಂಡ 19:5, 8; ಕೀರ್ತನೆ 106:12-43) ಅವರಿಗೆ ವ್ಯತಿರಿಕ್ತವಾಗಿ, ನಾವು ದೇವರ ಮಟ್ಟಗಳನ್ನು ಅಂಗೀಕರಿಸಿ, ಅವುಗಳಿಗೆ ಅಂಟಿಕೊಂಡಿರೋಣ.

20 ನಮ್ಮ ಜೀವನಗಳನ್ನು ಮಾರ್ಗದರ್ಶಿಸುವಂತೆ ಸಹಾಯಮಾಡಲಿಕ್ಕಾಗಿ ಯೆಹೋವನು ಒದಗಿಸಿರುವ ಸರಿಸಾಟಿಯಿಲ್ಲದ ನಿಯಮಗಳಿಗೆ ನಿಕಟವಾಗಿ ಅಂಟಿಕೊಳ್ಳುವುದು ವಿವೇಕದ ಸಂಗತಿಯಾಗಿದೆ ಮತ್ತು ನಮಗೆ ಸಂತೋಷವನ್ನು ತರುತ್ತದೆ. (ಕೀರ್ತನೆ 19:​7-11) ಯಶಸ್ಸನ್ನು ತರುವ ರೀತಿಯಲ್ಲಿ ಇದನ್ನು ಮಾಡಲಿಕ್ಕೋಸ್ಕರ, ನಾವು ದೈವಿಕ ಮೂಲತತ್ತ್ವಗಳ ಮೌಲ್ಯವನ್ನು ಗ್ರಹಿಸಿಕೊಳ್ಳಬೇಕು. ಇದೇ ನಮ್ಮ ಮುಂದಿನ ಲೇಖನದ ವಿಷಯವಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 6ಕ್ರಿಸ್ತನ ನಿಯಮ”ದ ಬಗ್ಗೆ ವಿವರವಾದ ಚರ್ಚೆಗಾಗಿ 1996, ಸೆಪ್ಟೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯ, 14-24ನೆಯ ಪುಟಗಳನ್ನು ನೋಡಿರಿ.

ನಿಮಗೆ ಜ್ಞಾಪಕವಿದೆಯೊ?

• ದೇವರ ನಿಯಮಗಳು ನಮ್ಮ ಪ್ರಯೋಜನಕ್ಕಾಗಿವೆ ಎಂದು ನಾವೇಕೆ ಭರವಸೆಯಿಡಬಲ್ಲೆವು?

• ಯಾವ ಕಾರಣಗಳಿಗಾಗಿ ನಾವು ಯೆಹೋವನ ನಿಯಮಗಳನ್ನು ಪ್ರಿಯವೆಂದೆಣಿಸಬೇಕು?

• ಯಾವ ವಿಧಗಳಲ್ಲಿ ದೇವರ ನಿಯಮಗಳು ಉಪಯುಕ್ತವಾಗಿವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಯೆಹೋವನ ನಿಯಮಗಳಿಗೆ ವಿಧೇಯನಾದದ್ದಕ್ಕಾಗಿ ಅಬ್ರಹಾಮನು ಹೇರಳವಾಗಿ ಆಶೀರ್ವದಿಸಲ್ಪಟ್ಟನು

[ಪುಟ 15ರಲ್ಲಿರುವ ಚಿತ್ರಗಳು]

ಇಂದಿನ ಕಾರ್ಯಮಗ್ನ ಜೀವನದ ಚಿಂತೆಗಳು ಅನೇಕರನ್ನು ದೇವರ ನಿಯಮಗಳಿಂದ ಅಪಕರ್ಷಿಸುತ್ತವೆ

[ಪುಟ 17ರಲ್ಲಿರುವ ಚಿತ್ರ]

ಒಂದು ಬಂಡೆಯ ಮೇಲಿರುವ ದೀಪದಮನೆಯಂತೆ, ದೇವರ ನಿಯಮಗಳು ಸ್ಥಿರವೂ ಎಂದಿಗೂ ಬದಲಾಗದಂಥವುಗಳೂ ಆಗಿವೆ