ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಮೂಲತತ್ತ್ವಗಳು ನಡೆಸುವ ಹಾಗೆ ನಿಮ್ಮ ಹೆಜ್ಜೆಗಳನ್ನಿಡಿರಿ

ದೈವಿಕ ಮೂಲತತ್ತ್ವಗಳು ನಡೆಸುವ ಹಾಗೆ ನಿಮ್ಮ ಹೆಜ್ಜೆಗಳನ್ನಿಡಿರಿ

ದೈವಿಕ ಮೂಲತತ್ತ್ವಗಳು ನಡೆಸುವ ಹಾಗೆ ನಿಮ್ಮ ಹೆಜ್ಜೆಗಳನ್ನಿಡಿರಿ

‘ಯಾವದು ಪ್ರಯೋಜನಕರವೊ ಅದನ್ನು ಮಾಡಲು [ಯೆಹೋವನು] ಕಲಿಸುತ್ತಾನೆ.’​—ಯೆಶಾಯ 48:17, ಪರಿಶುದ್ಧ ಬೈಬಲ್‌.

1. ಸೃಷ್ಟಿಕರ್ತನು ಮನುಷ್ಯರನ್ನು ಹೇಗೆ ನಡೆಸುತ್ತಾನೆ?

ವಿಜ್ಞಾನಿಗಳು ವಿಶ್ವದ ರಹಸ್ಯಗಳನ್ನು ಬಿಡಿಸಲು ಶ್ರಮಿಸುತ್ತಿರುವಾಗ, ನಮ್ಮ ಸುತ್ತಲಿರುವ ವಿಶ್ವದಲ್ಲಿ ಕಟ್ಟಿಡಲ್ಪಟ್ಟಿರುವ ಪ್ರಚಂಡ ಮೊತ್ತದ ಶಕ್ತಿಯನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ಮಧ್ಯಮ ಗಾತ್ರದ ನಕ್ಷತ್ರವಾಗಿರುವ ನಮ್ಮ ಸೂರ್ಯನು, “ಪ್ರತಿಯೊಂದು ಸೆಕೆಂಡಿಗೆ ಸಿಡಿಯುತ್ತಿರುವ 10,000 ಕೋಟಿ ಹೈಡ್ರೊಜನ್‌ ಬಾಂಬುಗಳಷ್ಟು” ಶಕ್ತಿಯನ್ನು ಉತ್ಪಾದಿಸುತ್ತಾನೆ. ಸೃಷ್ಟಿಕರ್ತನು ತನ್ನ ಅಪರಿಮಿತವಾದ ಶಕ್ತಿಯ ಮೂಲಕ ಇಂಥ ಘನವಾದ ಆಕಾಶಕಾಯಗಳನ್ನು ನಿಯಂತ್ರಿಸಿ, ನಿರ್ದೇಶಿಸಬಲ್ಲನು. (ಯೋಬ 38:32; ಯೆಶಾಯ 40:26) ಆದರೆ ಇಚ್ಛಾ ಸ್ವಾತಂತ್ರ್ಯ, ನೈತಿಕ ಸಾಮರ್ಥ್ಯ, ತರ್ಕಶಕ್ತಿಯ ಮತ್ತು ಆತ್ಮಿಕ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯ ವರಗಳನ್ನು ಪಡೆದಿರುವ ಮನುಷ್ಯರಾದ ನಮ್ಮ ಕುರಿತಾಗಿ ಏನು ಹೇಳಬಹುದು? ನಮ್ಮ ನಿರ್ಮಾಣಿಕನು ನಮ್ಮನ್ನು ನಡೆಸಲು ಯಾವ ವಿಧವನ್ನು ಆಯ್ಕೆಮಾಡಿದ್ದಾನೆ? ನಮ್ಮ ಸುಶಿಕ್ಷಿತ ಮನಸ್ಸಾಕ್ಷಿಯ ಜೊತೆಗೆ, ಆತನು ಪ್ರೀತಿಯಿಂದ ತನ್ನ ದೋಷರಹಿತ ನಿಯಮಗಳ ಮತ್ತು ಉದಾತ್ತ ಮೂಲತತ್ತ್ವಗಳ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತಾನೆ.​—2 ಸಮುವೇಲ 22:31; ರೋಮಾಪುರ 2:​14, 15.

2, 3. ದೇವರು ಯಾವ ರೀತಿಯ ವಿಧೇಯತೆಯಲ್ಲಿ ಹರ್ಷಿಸುತ್ತಾನೆ?

2 ತನಗೆ ವಿಧೇಯರಾಗಲು ಆಯ್ಕೆಮಾಡುವಂಥ ಬುದ್ಧಿಜೀವಿಗಳಲ್ಲಿ ದೇವರು ಹರ್ಷಿಸುತ್ತಾನೆ. (ಜ್ಞಾನೋಕ್ತಿ 27:11) ಮಿದುಳಿಲ್ಲದ ರೋಬಾಟ್‌ ಯಂತ್ರ ಮಾನವರಂತೆ ಏನನ್ನೂ ಯೋಚಿಸದೆ ತನಗೆ ಅಧೀನರಾಗುವಂಥ ರೀತಿಯಲ್ಲಿ ನಮ್ಮನ್ನು ಪ್ರೋಗ್ರ್ಯಾಮ್‌ ಮಾಡುವ ಬದಲು, ಯಾವುದು ಸರಿಯೊ ಅದನ್ನು ಮಾಡಲಿಕ್ಕಾಗಿ ತಿಳಿವಳಿಕೆಭರಿತ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಆತನು ನಮಗೆ ಇಚ್ಛಾ ಸ್ವಾತಂತ್ರ್ಯವನ್ನು ದಯಪಾಲಿಸಿದ್ದಾನೆ.​—ಇಬ್ರಿಯ 5:14.

3 ತನ್ನ ತಂದೆಯನ್ನು ಅಖಂಡವಾಗಿ ಪ್ರತಿಬಿಂಬಿಸಿದ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ.” (ಯೋಹಾನ 15:14, 15) ಪುರಾತನ ಕಾಲಗಳಲ್ಲಿ, ಒಬ್ಬ ಆಳು ತನ್ನ ಯಜಮಾನನ ಅಪ್ಪಣೆಗಳಿಗೆ ವಿಧೇಯನಾಗಲೇಬೇಕಿತ್ತು. ಆದರೆ ಸ್ನೇಹವು ಹಾಗೆ ಬೆಳೆಯುವುದಿಲ್ಲ. ಅದು ಹೃದಯವನ್ನು ಆಕರ್ಷಿಸುವಂಥ ಗುಣಗಳ ಪ್ರದರ್ಶನದಿಂದ ಬೆಸೆಯುತ್ತದೆ. ನಾವು ಯೆಹೋವನ ಸ್ನೇಹಿತರಾಗಬಲ್ಲೆವು. (ಯಾಕೋಬ 2:23) ಈ ಸ್ನೇಹವು ಪರಸ್ಪರ ಪ್ರೀತಿಯಿಂದಾಗಿ ಬಲಗೊಳಿಸಲ್ಪಡುತ್ತದೆ. “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು” ಎಂದು ಯೇಸು ಹೇಳಿದಾಗ, ದೇವರಿಗೆ ತೋರಿಸುವ ವಿಧೇಯತೆಯನ್ನು ಅವನು ಪ್ರೀತಿಯೊಂದಿಗೆ ಜೋಡಿಸಿದನು. (ಯೋಹಾನ 14:23) ದೇವರು ನಮ್ಮನ್ನು ಪ್ರೀತಿಸಿ, ನಮ್ಮನ್ನು ಸುರಕ್ಷಿತವಾಗಿ ಮಾರ್ಗದರ್ಶಿಸಲು ಬಯಸುವುದರಿಂದಲೇ, ನಾವು ಆತನ ಮೂಲತತ್ತ್ವಗಳಿಗನುಸಾರ ಜೀವಿಸುವಂತೆ ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ.

ದೈವಿಕ ಮೂಲತತ್ತ್ವಗಳು

4. ಮೂಲತತ್ತ್ವಗಳೆಂದರೇನು ಎಂಬುದನ್ನು ನೀವು ಹೇಗೆ ವರ್ಣಿಸುವಿರಿ?

4 ಮೂಲತತ್ತ್ವಗಳು ಅಂದರೇನು? ಮೂಲತತ್ತ್ವವು, “ಒಂದು ಸಾಮಾನ್ಯ ಇಲ್ಲವೆ ಮೂಲಭೂತ ಸತ್ಯ: ಬೇರೆ ನಿಯಮಗಳು ಇಲ್ಲವೇ ಸಿದ್ಧಾಂತಗಳು ಯಾವುದರ ಮೇಲೆ ಆಧಾರಿತವಾಗಿವೆಯೊ ಇಲ್ಲವೆ ಯಾವುದರಿಂದ ಹುಟ್ಟುತ್ತವೊ ಅಂಥ ಒಂದು ವ್ಯಾಪಕ ಹಾಗೂ ಮೂಲಭೂತ ನಿಯಮ, ಸಿದ್ಧಾಂತ ಇಲ್ಲವೆ ವಾಸ್ತವಾಂಶ ಆಗಿದೆ.” (ವೆಬ್ಸ್‌ಸ್ಟರ್ಸ್‌ ಥರ್ಡ್‌ ನ್ಯೂ ಇಂಟರ್‌ನ್ಯಾಷನಲ್‌ ಡಿಕ್ಷನೆರಿ) ಬೈಬಲನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವಾಗ, ಜೀವನದ ವಿಭಿನ್ನ ಸನ್ನಿವೇಶಗಳು ಹಾಗೂ ಕ್ಷೇತ್ರಗಳನ್ನು ಆವರಿಸುವಂಥ ಮೂಲತತ್ತ್ವಗಳನ್ನು ನಮ್ಮ ಸ್ವರ್ಗೀಯ ತಂದೆಯು ಒದಗಿಸಿದ್ದಾನೆಂಬುದು ತಿಳಿದುಬರುತ್ತದೆ. ನಮ್ಮ ನಿತ್ಯ ಪ್ರಯೋಜನವನ್ನು ಮನಸ್ಸಿನಲ್ಲಿಟ್ಟು ಆತನಿದನ್ನು ಮಾಡಿದ್ದಾನೆ. ಇದು ವಿವೇಕಿ ರಾಜನಾದ ಸೊಲೊಮೋನನು ಬರೆದ ಈ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಕಂದಾ, ಆಲಿಸಿ ನನ್ನ ಮಾತುಗಳನ್ನು ಕೇಳು; ಕೇಳಿದರೆ, ನಿನ್ನ ಜೀವಮಾನದ ವರುಷಗಳು ಹೆಚ್ಚುವವು. ನಾನು ಜ್ಞಾನಮಾರ್ಗವನ್ನು ಉಪದೇಶಿಸಿ ಧರ್ಮಮಾರ್ಗದಲ್ಲಿ ನಿನ್ನನ್ನು ನಡಿಸುವೆನು.” (ಜ್ಞಾನೋಕ್ತಿ 4:10, 11) ಯೆಹೋವನಿಂದ ಒದಗಿಸಲ್ಪಟ್ಟಿರುವ ಮೂಲತತ್ತ್ವಗಳು, ಆತನೊಂದಿಗೆ ಹಾಗೂ ಜೊತೆ ಮಾನವರೊಂದಿಗಿನ ನಮ್ಮ ಸಂಬಂಧ, ನಮ್ಮ ಆರಾಧನೆ ಮತ್ತು ನಮ್ಮ ದಿನನಿತ್ಯದ ಜೀವಿತಗಳ ಮೇಲೆ ಪ್ರಭಾವ ಬೀರುತ್ತವೆ. (ಕೀರ್ತನೆ 1:1, 2) ಆ ಮೂಲತತ್ತ್ವಗಳಲ್ಲಿ ಕೆಲವೊಂದನ್ನು ನಾವು ಪರಿಗಣಿಸೋಣ.

5. ಕೆಲವೊಂದು ಮೂಲತತ್ತ್ವಗಳ ಉದಾಹರಣೆಗಳನ್ನು ಕೊಡಿರಿ.

5 ಯೆಹೋವನೊಂದಿಗಿನ ನಮ್ಮ ಸಂಬಂಧದ ಕುರಿತಾಗಿ ಯೇಸು ತಿಳಿಸಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಅಲ್ಲದೆ, ಜೊತೆ ಮಾನವರೊಂದಿಗಿನ ನಮ್ಮ ವ್ಯವಹಾರಗಳಿಗೆ ಸಂಬಂಧಿಸುವ ಮೂಲತತ್ತ್ವಗಳನ್ನು ದೇವರು ಒದಗಿಸುತ್ತಾನೆ. ಉದಾಹರಣೆಗೆ ಈ ಸುವರ್ಣ ನಿಯಮವನ್ನು ತೆಗೆದುಕೊಳ್ಳಿ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12; ಗಲಾತ್ಯ 6:10; ತೀತ 3:2) ಆರಾಧನೆಯ ಸಂಬಂಧದಲ್ಲಿ ನಮಗೆ ಈ ಬುದ್ಧಿವಾದವನ್ನು ಕೊಡಲಾಗಿದೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು . . . ನಾವು ಬಿಟ್ಟು ಬಿಡ”ದಿರೋಣ. (ಇಬ್ರಿಯ 10:24, 25) ನಮ್ಮ ಜೀವಿತದ ಪ್ರತಿನಿತ್ಯದ ಕಾರ್ಯಗಳ ಕುರಿತಾಗಿ ಅಪೊಸ್ತಲ ಪೌಲನು ಹೀಗನ್ನುತ್ತಾನೆ: “ನೀವು ಉಂಡರೂ ಕುಡಿದರೂ ಇನ್ನೇನೂ ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ದೇವರ ವಾಕ್ಯದಲ್ಲಿ, ಎಣಿಸಲಾಗದಷ್ಟು ಅನೇಕ ಇತರ ಮೂಲತತ್ತ್ವಗಳು ಇವೆ.

6. ಮೂಲತತ್ತ್ವಗಳು ನಿಯಮಗಳಿಂದ ಹೇಗೆ ಭಿನ್ನವಾಗಿವೆ?

6 ಮೂಲತತ್ತ್ವಗಳು ಕಾರ್ಯನಡೆಸಬಲ್ಲ ಮೂಲಭೂತ ಸತ್ಯಗಳಾಗಿವೆ ಮತ್ತು ವಿವೇಕಿ ಕ್ರೈಸ್ತರು ಅವುಗಳನ್ನು ಪ್ರೀತಿಸಲು ಕಲಿಯುತ್ತಾರೆ. ಯೆಹೋವನು ಸೊಲೊಮೋನನಿಗೆ ಹೀಗೆ ಬರೆಯುವಂತೆ ಪ್ರೇರಿಸಿದನು: “ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು.” (ಜ್ಞಾನೋಕ್ತಿ 4:20-22) ಮೂಲತತ್ತ್ವಗಳು ಮತ್ತು ನಿಯಮಗಳಲ್ಲಿ ಇರುವ ವ್ಯತ್ಯಾಸವೇನು? ಮೂಲತತ್ತ್ವಗಳು, ನಿಯಮಗಳಿಗೆ ಆಧಾರವಾಗಿವೆ. ನಿಯಮಗಳು ನಿರ್ದಿಷ್ಟವಾಗಿರುತ್ತವೆ, ಅವು ಇಂಥಿಂಥ ಸಮಯ ಅಥವಾ ಸನ್ನಿವೇಶಕ್ಕೆ ಮಾತ್ರ ಅನ್ವಯವಾಗಬಹುದು. ಆದರೆ ಮೂಲತತ್ತ್ವಗಳು ಅನಂತವಾಗಿರುತ್ತವೆ. (ಕೀರ್ತನೆ 119:111) ದೈವಿಕ ಮೂಲತತ್ತ್ವಗಳು ಎಂದೂ ಹಳತಾಗುವುದಿಲ್ಲ ಇಲ್ಲವೆ ಅಸ್ತಿತ್ವಹೀನವಾಗುವುದಿಲ್ಲ. ಪ್ರವಾದಿಯಾದ ಯೆಶಾಯನ ಈ ಪ್ರೇರಿತ ಮಾತುಗಳು ನಿಜವೆಂದು ರುಜುವಾಗುತ್ತವೆ: “ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”​—ಯೆಶಾಯ 40:8.

ಮೂಲತತ್ತ್ವಗಳ ಆಧಾರದ ಮೇಲೆ ಯೋಚಿಸಿರಿ ಮತ್ತು ಕ್ರಿಯೆಗೈಯಿರಿ

7. ಮೂಲತತ್ತ್ವಗಳ ಆಧಾರದ ಮೇಲೆ ನಾವು ಯೋಚಿಸುವಂತೆ ಮತ್ತು ಕ್ರಿಯೆಗೈಯುವಂತೆ ದೇವರ ವಾಕ್ಯವು ನಮ್ಮನ್ನು ಹೇಗೆ ಉತ್ತೇಜಿಸುತ್ತದೆ?

7 ಮೂಲತತ್ತ್ವಗಳ ಆಧಾರದ ಮೇಲೆ ನಾವು ಯೋಚಿಸುವಂತೆ ಮತ್ತು ಕ್ರಿಯೆಗೈಯುವಂತೆ ‘ದೇವರ ಮಾತು’ ನಮಗೆ ಆಗಾಗ್ಗೆ ಪ್ರೋತ್ಸಾಹಿಸುತ್ತಾ ಇರುತ್ತದೆ. ಧರ್ಮಶಾಸ್ತ್ರದ ಸಾರಾಂಶವನ್ನು ಕೊಡುವಂತೆ ಯೇಸುವಿಗೆ ಕೇಳಲ್ಪಟ್ಟಾಗ, ಅವನು ಎರಡು ಸಂಕ್ಷಿಪ್ತವಾದ ಹೇಳಿಕೆಗಳನ್ನು ತಿಳಿಸಿದನು. ಒಂದು ಹೇಳಿಕೆಯು, ಯೆಹೋವನಿಗಾಗಿ ಪ್ರೀತಿಯನ್ನು ಮತ್ತು ಇನ್ನೊಂದು, ಜೊತೆ ಮಾನವನಿಗಾಗಿ ಪ್ರೀತಿಯನ್ನು ಒತ್ತಿಹೇಳಿತು. (ಮತ್ತಾಯ 22:​37-40) ಹಾಗೆ ಮಾಡುವ ಮೂಲಕ, ಮೋಶೆಯ ಧರ್ಮಶಾಸ್ತ್ರದ ಮೂಲಭೂತ ಸಿದ್ಧಾಂತಗಳ ಬಗ್ಗೆ ಈ ಹಿಂದೆ ಕೊಡಲ್ಪಟ್ಟಿದ್ದ ಒಂದು ಸಂಕ್ಷಿಪ್ತ ಸಾರಾಂಶದ ಒಂದು ಭಾಗವನ್ನು ಯೇಸು ಉಲ್ಲೇಖಿಸಿದನು. ಇದು ಧರ್ಮೋಪದೇಶಕಾಂಡ 6:​4, 5 ರಲ್ಲಿ ತಿಳಿಸಲ್ಪಟ್ಟಿದೆ: “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” ಯಾಜಕಕಾಂಡ 19:18 ರಲ್ಲಿರುವ ದೇವರ ಮೂಲತತ್ತ್ವವೂ ಯೇಸುವಿನ ಮನಸ್ಸಿನಲ್ಲಿದ್ದಿರಬಹುದು. ಪ್ರಸಂಗಿ ಪುಸ್ತಕದ ಸ್ಪಷ್ಟ, ಸಂಕ್ಷಿಪ್ತ, ಮತ್ತು ಪ್ರಭಾವಪೂರ್ಣ ಸಮಾಪ್ತಿಯಲ್ಲಿ, ರಾಜ ಸೊಲೊಮೋನನ ಈ ಮಾತುಗಳಲ್ಲಿ ದೈವಿಕ ನಿಯಮಗಳ ಇಡೀ ಸಮೂಹವೇ ಅಡಕವಾಗಿದೆ: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.”​—ಪ್ರಸಂಗಿ 12:13, 14; ಮೀಕ 6:8.

8. ಬೈಬಲಿನ ಮೂಲತತ್ತ್ವಗಳನ್ನು ಸಂಪೂರ್ಣವಾಗಿ ಗ್ರಹಿಸುವುದು ಏಕೆ ಒಂದು ಸಂರಕ್ಷಣೆಯಾಗಿದೆ?

8 ಅಂಥ ಮೂಲತತ್ತ್ವಗಳನ್ನು ಸಂಪೂರ್ಣವಾಗಿ ಗ್ರಹಿಸುವುದು, ನಾವು ಹೆಚ್ಚು ನಿರ್ದಿಷ್ಟವಾದ ಮೂಲತತ್ತ್ವಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಅನ್ವಯಿಸುವಂತೆ ಸಹಾಯಮಾಡಬಲ್ಲದು. ಅದಲ್ಲದೆ, ನಾವು ಮೂಲತತ್ತ್ವಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು, ಅವುಗಳನ್ನು ಅಂಗೀಕರಿಸದಿದ್ದರೆ, ನಾವು ವಿವೇಕಯುತ ನಿರ್ಣಯಗಳನ್ನು ಮಾಡಲಶಕ್ತರಾಗಿರುವೆವು ಮತ್ತು ನಮ್ಮ ನಂಬಿಕೆಯು ಸುಲಭವಾಗಿ ತತ್ತರಿಸಬಲ್ಲದು. (ಎಫೆಸ 4:14) ನಾವು ಅಂಥ ಮೂಲತತ್ತ್ವಗಳನ್ನು ನಮ್ಮ ಹೃದಮನಗಳಲ್ಲಿ ದೃಢವಾಗಿ ಬೇರೂರಿಸಿದರೆ, ನಾವು ನಿರ್ಣಯಗಳನ್ನು ಮಾಡುವಾಗ ಅವುಗಳನ್ನು ಉಪಯೋಗಿಸಲು ತಯಾರಾಗಿರುವೆವು. ನಾವು ವಿವೇಕದೊಂದಿಗೆ ಅವುಗಳನ್ನು ಉಪಯೋಗಿಸುವಾಗ, ನಮಗೆ ಯಶಸ್ಸು ಲಭಿಸುವುದು.​—ಯೆಹೋಶುವ 1:8; ಜ್ಞಾನೋಕ್ತಿ 4:​1-9, NW.

9. ಬೈಬಲ್‌ ಮೂಲತತ್ತ್ವಗಳನ್ನು ವಿವೇಚಿಸಿ, ಅನ್ವಯಿಸಿಕೊಳ್ಳುವುದು ಯಾವಾಗಲೂ ಸುಲಭವಲ್ಲ ಏಕೆ?

9 ಬೈಬಲ್‌ ಮೂಲತತ್ತ್ವಗಳನ್ನು ವಿವೇಚಿಸಿ, ಅನ್ವಯಿಸಿಕೊಳ್ಳುವುದು, ನಿಯಮಗಳ ಕಟ್ಟನ್ನು ಪಾಲಿಸುವಷ್ಟು ಸುಲಭವಾಗಿರುವುದಿಲ್ಲ. ನಾವು ಅಪರಿಪೂರ್ಣ ಮಾನವರಾಗಿರುವುದರಿಂದ, ಮೂಲತತ್ತ್ವಗಳ ಆಧಾರದ ಮೇಲೆ ತರ್ಕಮಾಡಲಿಕ್ಕಾಗಿ ಆವಶ್ಯಕವಾಗಿರುವ ಪ್ರಯತ್ನವನ್ನು ಮಾಡುವುದರಿಂದ ದೂರಸರಿಯುತ್ತಿರಬಹುದು. ಅದರ ಬದಲು, ನಾವು ಒಂದು ನಿರ್ಣಯವನ್ನು ಮಾಡಬೇಕಾದಾಗ ಇಲ್ಲವೆ ಒಂದು ಸಂದಿಗ್ಧ ಸ್ಥಿತಿಯಲ್ಲಿರುವಾಗ ಏನು ಮಾಡಬೇಕೆಂದು ಹೇಳುವ ಒಂದು ಸ್ಪಷ್ಟವಾದ ನಿಯಮವನ್ನು ಇಷ್ಟಪಡಬಹುದು. ಕೆಲವೊಮ್ಮೆ ನಾವು ಒಬ್ಬ ಪ್ರೌಢ ಕ್ರೈಸ್ತ ವ್ಯಕ್ತಿಯಿಂದ, ಬಹುಶಃ ಒಬ್ಬ ಹಿರಿಯನಿಂದ ನಿರ್ದೇಶನವನ್ನು ಕೇಳುತ್ತಿರಬಹುದು. ನಮ್ಮ ಸನ್ನಿವೇಶಕ್ಕೆ ಅನ್ವಯವಾಗುವಂಥ ಒಂದು ನಿರ್ದಿಷ್ಟ ನಿಯಮವನ್ನು ನಾವು ಅವರಿಂದ ಪಡೆಯಲು ಅಪೇಕ್ಷಿಸುತ್ತಿರಬಹುದು. ಆದರೆ ಬೈಬಲ್‌ ಆಗಲಿ, ಬೈಬಲ್‌ ಆಧಾರಿತ ಪ್ರಕಾಶನಗಳಾಗಲಿ, ಎಲ್ಲ ಸಮಯಗಳಿಗಾಗಿಯೂ ಎಲ್ಲ ಪರಿಸ್ಥಿತಿಗಳಲ್ಲೂ ಅನ್ವಯವಾಗಬಹುದಾದ ಒಂದು ಸ್ಪಷ್ಟವಾದ ನಿಯಮವನ್ನು ಕೊಡದಿರಬಹುದು. ಯಾವುದಾದರೊಂದು ನಿಯಮವು ಕೊಡಲ್ಪಟ್ಟರೂ ಅದು ಎಲ್ಲ ಸಮಯಕ್ಕೂ ಎಲ್ಲ ಸನ್ನಿವೇಶಗಳಿಗೂ ಅನ್ವಯವಾಗದಿರಬಹುದು. ಒಬ್ಬ ವ್ಯಕ್ತಿಯು ಯೇಸುವಿಗೆ ಹೀಗೆ ಕೇಳಿದ್ದು ನಿಮಗೆ ನೆನಪಿರಬಹುದು: “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಅಣ್ಣನಿಗೆ ಹೇಳು.” ಅಣ್ಣತಮ್ಮಂದಿರ ನಡುವಿನ ಜಗಳಗಳನ್ನು ಇತ್ಯರ್ಥಗೊಳಿಸಲಿಕ್ಕಾಗಿ ಕೂಡಲೇ ಒಂದು ನಿಯಮವನ್ನು ಕೊಡುವ ಬದಲು, ಯೇಸು ಅವನಿಗೆ, ಹಲವಾರು ಕ್ಷೇತ್ರಗಳಿಗೆ ಅನ್ವಯವಾಗುವ ಈ ಮೂಲತತ್ತ್ವವನ್ನು ಕೊಟ್ಟನು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ.” ಈ ರೀತಿಯಲ್ಲಿ ಯೇಸು ಅವನಿಗೆ, ಆ ಸಮಯದಲ್ಲಿ ಮತ್ತು ಈಗಲೂ ಉಪಯುಕ್ತಕರವಾಗಿರುವ ಒಂದು ನಿರ್ದೇಶನಸೂತ್ರವನ್ನು ಕೊಟ್ಟನು.​—ಲೂಕ 12:13-15.

10. ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಡೆಯುವುದು, ನಮ್ಮ ಹೃದಯದಲ್ಲಿರುವ ಉದ್ದೇಶಗಳನ್ನು ಹೇಗೆ ಹೊರಗೆಡಹುತ್ತದೆ?

10 ಒಲ್ಲದ ಮನಸ್ಸಿನಿಂದ ಇಲ್ಲವೆ ಶಿಕ್ಷೆ ಸಿಗಬಹುದೆಂಬ ಭಯದಿಂದಾಗಿ ಜನರು ನಿಯಮಗಳಿಗೆ ವಿಧೇಯತೆ ತೋರಿಸುವುದನ್ನು ನೀವು ಬಹುಶಃ ನೋಡಿರಬಹುದು. ಮೂಲತತ್ತ್ವಗಳಿಗಾಗಿ ಗೌರವವಿರುವಲ್ಲಿ ಆ ಮನೋಭಾವವು ಇರುವುದಿಲ್ಲ. ಮೂಲತತ್ತ್ವಗಳ ಸ್ವರೂಪವೇ, ಅವುಗಳಿಂದ ನಿಯಂತ್ರಿಸಲ್ಪಡುವವರು ಮನಃಪೂರ್ವಕವಾಗಿ ಅವುಗಳಿಗೆ ಸ್ಪಂದಿಸುವಂತೆ ಮಾಡುತ್ತವೆ. ವಾಸ್ತವದಲ್ಲಿ ಹೆಚ್ಚಿನ ಮೂಲತತ್ತ್ವಗಳಲ್ಲಿ, ಅವುಗಳನ್ನು ಪಾಲಿಸದಿರುವವರಿಗಾಗಿ ತತ್‌ಕ್ಷಣದ ಯಾವುದೇ ಶಿಕ್ಷೆಯಿರುವುದಿಲ್ಲ. ಇದು ನಾವು ಏಕೆ ಯೆಹೋವನಿಗೆ ವಿಧೇಯರಾಗುತ್ತೇವೆ, ನಮ್ಮ ಹೃದಯದಲ್ಲಿ ಯಾವ ಉದ್ದೇಶವಿದೆ ಎಂಬುದನ್ನು ಹೊರಗೆಡಹುತ್ತದೆ. ಪೋಟೀಫರನ ಹೆಂಡತಿಯ ಅನೈತಿಕ ಪ್ರಣಯಪ್ರಯತ್ನಗಳನ್ನು ತಳ್ಳಿಹಾಕಿದ ಯೋಸೇಫನಿಂದ ಒಂದು ಉದಾಹರಣೆ ಸಿಗುತ್ತದೆ. ಅಷ್ಟರವರೆಗೂ ಯೆಹೋವನು ಹಾದರದ ವಿರುದ್ಧ ಯಾವುದೇ ಲಿಖಿತ ನಿಯಮವನ್ನು ಕೊಟ್ಟಿರದಿದ್ದರೂ ಮತ್ತು ಇನ್ನೊಬ್ಬ ವ್ಯಕ್ತಿಯ ಹೆಂಡತಿಯ ಜೊತೆ ಲೈಂಗಿಕ ಸಂಬಂಧವನ್ನಿಟ್ಟದ್ದಕ್ಕಾಗಿ ಯಾವುದೇ ದೈವಿಕ ದಂಡನೆಯು ಇರದಿದ್ದರೂ, ವೈವಾಹಿಕ ನಿಷ್ಠೆಯ ಕುರಿತಾದ ದೇವದತ್ತ ಮೂಲತತ್ತ್ವಗಳ ಬಗ್ಗೆ ಯೋಸೇಫನಿಗೆ ತಿಳಿದಿತ್ತು. (ಆದಿಕಾಂಡ 2:24; 12:​18-20) “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ”? ಎಂಬ ಅವನ ಪ್ರತಿಕ್ರಿಯೆಯಿಂದ ಅಂಥ ಮೂಲತತ್ತ್ವಗಳು ಅವನ ಮೇಲೆ ಬಲವಾದ ಪ್ರಭಾವವನ್ನು ಬೀರಿದ್ದವೆಂಬುದನ್ನು ನೋಡಬಹುದು.​—ಆದಿಕಾಂಡ 39:9.

11. ಕ್ರೈಸ್ತರು ಯಾವ ಕ್ಷೇತ್ರಗಳಲ್ಲಿ ಯೆಹೋವನ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡಲು ಬಯಸುತ್ತಾರೆ?

11 ಒಡನಾಡಿಗಳು, ಮನೋರಂಜನೆ, ಸಂಗೀತ, ಮತ್ತು ಓದುವ ಸಾಮಗ್ರಿಯನ್ನು ಆಯ್ಕೆಮಾಡುವುದರಂಥ ವೈಯಕ್ತಿಕ ವಿಷಯಗಳಲ್ಲಿ ಇಂದು ಕ್ರೈಸ್ತರು ಯೆಹೋವನ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡಲು ಬಯಸುತ್ತಾರೆ. (1 ಕೊರಿಂಥ 15:33; ಫಿಲಿಪ್ಪಿ 4:8) ನಮ್ಮ ಜ್ಞಾನ, ತಿಳಿವಳಿಕೆ ಮತ್ತು ಯೆಹೋವ ಹಾಗೂ ಆತನ ಮಟ್ಟಗಳ ಬಗ್ಗೆ ಗಣ್ಯತೆಯು ವೃದ್ಧಿಯಾಗುತ್ತಾ ಹೋದಂತೆ, ನಮ್ಮ ಮನಸ್ಸಾಕ್ಷಿ, ಅಂದರೆ ನಮ್ಮ ನೈತಿಕ ಪ್ರಜ್ಞೆಯು, ನಾವು ಯಾವುದೇ ಪರಿಸ್ಥಿತಿಗಳನ್ನು ಎದುರಿಸುತ್ತಿರಲಿ, ತೀರ ವೈಯಕ್ತಿಕ ವಿಷಯಗಳಲ್ಲೂ ದೈವಿಕ ಮೂಲತತ್ತ್ವಗಳನ್ನು ಅನ್ವಯಿಸುವಂತೆ ನಮಗೆ ಸಹಾಯಮಾಡುವುದು. ನಾವು ಬೈಬಲಿನ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿರುವುದರಿಂದ, ದೇವರ ನಿಯಮಗಳನ್ನು ತಪ್ಪಿಸಿಕೊಳ್ಳಲು ಉಪಾಯಗಳನ್ನು ಮಾಡದಿರುವೆವು. ಅಥವಾ, ವಾಸ್ತವದಲ್ಲಿ ಒಂದು ನಿರ್ದಿಷ್ಟ ನಿಯಮವನ್ನು ಉಲ್ಲಂಘಿಸುವ ಹಂತವನ್ನು ತಲಪದೇ ಎಷ್ಟು ದೂರ ಹೋಗಬಹುದೆಂಬುದನ್ನು ಪ್ರಯತ್ನಿಸಿ ನೋಡುವವರನ್ನು ಅನುಕರಿಸದಿರುವೆವು. ಆ ಯೋಚನೆಯೇ, ನಿಷ್ಪ್ರಯೋಜಕವೂ ಹಾನಿಕರವೂ ಆಗಿದೆಯೆಂಬುದನ್ನು ನಾವು ಗ್ರಹಿಸುತ್ತೇವೆ.​—ಯಾಕೋಬ 1:​22-25.

12. ದೈವಿಕ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವುದರಲ್ಲಿ ಒಂದು ಮುಖ್ಯ ಅಂಶವೇನು?

12 ದೈವಿಕ ಮೂಲತತ್ತ್ವಗಳನ್ನು ಪಾಲಿಸುವುದಕ್ಕಾಗಿ ಒಂದು ಮುಖ್ಯ ಅಂಶವು, ಒಂದು ನಿರ್ದಿಷ್ಟ ವಿಷಯದ ಬಗ್ಗೆ ಯೆಹೋವನ ಅಭಿಪ್ರಾಯವೇನೆಂಬುದನ್ನು ತಿಳಿಯಬಯಸುವುದೇ ಆಗಿದೆಯೆಂದು ಪ್ರೌಢ ಕ್ರೈಸ್ತರು ಅಂಗೀಕರಿಸುತ್ತಾರೆ. “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ” ಎಂದು ಕೀರ್ತನೆಗಾರನು ಉತ್ತೇಜಿಸುತ್ತಾನೆ. (ಕೀರ್ತನೆ 97:10) ದೇವರು ಯಾವುದನ್ನು ಕೆಟ್ಟದ್ದೆಂದು ವರ್ಗೀಕರಿಸುವನೊ ಆ ವಿಷಯಗಳಲ್ಲಿ ಕೆಲವೊಂದನ್ನು ಪಟ್ಟಿಮಾಡುತ್ತಾ, ಜ್ಞಾನೋಕ್ತಿ 6:​16-19 ಹೇಳುವುದು: “ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು, ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ. ಯಾವವಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು, ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು, ಈ ಏಳೇ.” ಇಂಥ ಮೂಲಭೂತ ವಿಷಯಗಳಲ್ಲಿ ಯೆಹೋವನ ಅನಿಸಿಕೆಗಳನ್ನು ಪ್ರತಿಬಿಂಬಿಸಬೇಕೆಂಬ ಆಸೆಯು ನಮ್ಮ ಜೀವಿತಗಳನ್ನು ನಿಯಂತ್ರಿಸುವಾಗ, ಮೂಲತತ್ತ್ವಗಳಿಗನುಸಾರ ಜೀವಿಸುವುದು ಒಂದು ನಿರಂತರ ರೂಢಿಯಾಗಿಬಿಡುತ್ತದೆ.​—ಯೆರೆಮೀಯ 22:16.

ಸದುದ್ದೇಶದ ಅಗತ್ಯವಿದೆ

13. ಯೇಸು ಪರ್ವತ ಪ್ರಸಂಗದಲ್ಲಿ ಯಾವ ರೀತಿಯ ಯೋಚನೆಗೆ ಮಹತ್ವಕೊಟ್ಟನು?

13 ಮೂಲತತ್ತ್ವಗಳನ್ನು ತಿಳಿದುಕೊಳ್ಳುವುದು ಮತ್ತು ಅನ್ವಯಿಸಿಕೊಳ್ಳುವುದು, ನಿಸ್ಸಾರವಾದ, ಔಪಚಾರಿಕವಾದ ಆರಾಧನೆಯ ಪಾಶದಿಂದಲೂ ನಮ್ಮನ್ನು ಸಂರಕ್ಷಿಸುತ್ತದೆ. ಮೂಲತತ್ತ್ವಗಳನ್ನು ಅನುಸರಿಸುವುದಕ್ಕೂ, ನಿಯಮಗಳನ್ನು ಚಾಚೂತಪ್ಪದೆ ಕಟ್ಟುನಿಟ್ಟಿನಿಂದ ಪಾಲಿಸುವುದಕ್ಕೂ ವ್ಯತ್ಯಾಸವಿದೆ. ಇದನ್ನು ಯೇಸು ಪರ್ವತ ಪ್ರಸಂಗದಲ್ಲಿ ಸ್ಪಷ್ಟವಾಗಿ ತೋರಿಸಿದನು. (ಮತ್ತಾಯ 5:​17-48) ಯೇಸುವಿಗೆ ಕಿವಿಗೊಡುತ್ತಿದ್ದವರು ಯೆಹೂದ್ಯರಾಗಿದ್ದರು ಎಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ ಅವರ ನಡತೆಯು ಮೋಶೆಯ ಧರ್ಮಶಾಸ್ತ್ರದಿಂದ ನಿಯಂತ್ರಿಸಲ್ಪಡಬೇಕಿತ್ತು. ಆದರೆ ವಾಸ್ತವದಲ್ಲಿ ಅವರಿಗೆ ಧರ್ಮಶಾಸ್ತ್ರದ ಬಗ್ಗೆ ಡೊಂಕಾದ ದೃಷ್ಟಿಕೋನವಿತ್ತು. ಧರ್ಮಶಾಸ್ತ್ರದ ನಿಜಾರ್ಥದ ವಿರುದ್ಧ ಕ್ರಿಯೆಗೈದರೂ ತಪ್ಪೇನಿಲ್ಲ, ಆದರೆ ಅದರ ಕಟ್ಟುನಿಟ್ಟಾದ ಇಲ್ಲವೆ ಬಾಹ್ಯ ಅರ್ಥಕ್ಕೆ ವಿಧೇಯರಾಗಬೇಕೆಂಬದಕ್ಕೆ ಅವರು ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದರು. ಮತ್ತು ಅವರು ತಮ್ಮ ಸಂಪ್ರದಾಯಗಳನ್ನು ದೇವರ ಬೋಧನೆಗಳಿಗಿಂತಲೂ ಮೇಲಿನ ಸ್ಥಾನದಲ್ಲಿಟ್ಟು ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರು. (ಮತ್ತಾಯ 12:​9-12; 15:​1-9) ಫಲಿತಾಂಶವಾಗಿ, ಸಾಮಾನ್ಯ ಜನರು ಮೂಲತತ್ತ್ವಗಳ ಕುರಿತಾಗಿ ಯೋಚಿಸುವಂತೆ ಕಲಿಸಲ್ಪಟ್ಟಿರಲಿಲ್ಲ.

14. ತನ್ನ ಕೇಳುಗರು ಮೂಲತತ್ತ್ವಗಳ ಆಧಾರದ ಮೇಲೆ ಯೋಚಿಸುವಂತೆ ಯೇಸು ಹೇಗೆ ಸಹಾಯಮಾಡಿದನು?

14 ಇದಕ್ಕೆ ವ್ಯತಿರಿಕ್ತವಾಗಿ, ಯೇಸು ಪರ್ವತ ಪ್ರಸಂಗದಲ್ಲಿ ನೈತಿಕತೆಯ ಐದು ಕ್ಷೇತ್ರಗಳ ಕುರಿತಾದ ಮೂಲತತ್ತ್ವಗಳನ್ನು ಸೇರಿಸಿದನು: ಕೋಪ, ಮದುವೆ ಮತ್ತು ವಿಚ್ಛೇದನೆ, ವಾಗ್ದಾನಗಳು, ಪ್ರತೀಕಾರ, ಮತ್ತು ಪ್ರೀತಿ ಹಾಗೂ ದ್ವೇಷ. ಪ್ರತಿಯೊಂದು ಮೂಲತತ್ತ್ವವನ್ನು ತಿಳಿಸಿದಾಗ, ಅದನ್ನು ಪಾಲಿಸುವ ಪ್ರಯೋಜನವನ್ನು ಯೇಸು ತೋರಿಸಿದನು. ಹೀಗೆ ಯೇಸು ತನ್ನ ಹಿಂಬಾಲಕರ ನೈತಿಕ ಮಟ್ಟವನ್ನು ಏರಿಸಿದನು. ಉದಾಹರಣೆಗಾಗಿ, ವ್ಯಭಿಚಾರದ ವಿಷಯದಲ್ಲಿ ಅವನು, ನಮ್ಮ ಕೃತ್ಯಗಳನ್ನು ಮಾತ್ರವಲ್ಲ ಬದಲಾಗಿ ಯೋಚನೆಗಳನ್ನೂ ಆಸೆಗಳನ್ನೂ ರಕ್ಷಿಸುವ ಒಂದು ಮೂಲತತ್ತ್ವವನ್ನು ಕೊಟ್ಟನು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”​—ಮತ್ತಾಯ 5:28.

15. ನಿಯಮಗಳನ್ನು ಚಾಚೂತಪ್ಪದೆ ಕಟ್ಟುನಿಟ್ಟಾಗಿ ಪಾಲಿಸುವವರಾಗಿರುವ ಪ್ರವೃತ್ತಿಯನ್ನು ನಾವು ಹೇಗೆ ದೂರವಿಡಬಲ್ಲೆವು?

15 ನಾವು ಯೆಹೋವನ ಮೂಲತತ್ತ್ವಗಳ ಉದ್ದೇಶ ಮತ್ತು ನಿಜಾರ್ಥವನ್ನು ಎಂದಿಗೂ ಮರೆಯಬಾರದೆಂಬುದನ್ನು ಈ ಉದಾಹರಣೆಯು ದೃಷ್ಟಾಂತಿಸುತ್ತದೆ. ಕೇವಲ ಬಾಹ್ಯ ತೋರಿಕೆಯ ಮೂಲಕ ನಾವು ದೇವರ ಅನುಗ್ರಹವನ್ನು ಗಿಟ್ಟಿಸಿಕೊಳ್ಳಲು ಖಂಡಿತವಾಗಿಯೂ ಪ್ರಯತ್ನಿಸಬಾರದು. ಅಂಥ ಮನೋಭಾವವು ಎಷ್ಟು ತಪ್ಪಾಗಿದೆಯೆಂಬುದನ್ನು, ದೇವರ ದಯೆ ಮತ್ತು ಪ್ರೀತಿಯ ಕುರಿತು ಹೇಳುವ ಮೂಲಕ ಯೇಸು ಬಯಲಿಗೆಳೆದನು. (ಮತ್ತಾಯ 12:7; ಲೂಕ 6:​1-11) ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುವಾಗ, ನಾವು ಬೈಬಲಿನ ಬೋಧನೆಗಳನ್ನೂ ಮೀರಿಹೋಗುವ, ವಿಸ್ತಾರವಾದ ಹಾಗೂ ಗಡುಸಾದ ನಿಯಮಗಳ ಒಂದು ಕಟ್ಟಿಗನುಸಾರ ಜೀವಿಸಲು (ಮತ್ತು ಇತರರೂ ಪಾಲಿಸುವಂತೆ ಒತ್ತಾಯಿಸಲು) ಪ್ರಯತ್ನಿಸದಿರುವೆವು. ನಾವು ಆರಾಧನೆಯ ಬಾಹ್ಯ ತೋರಿಕೆಗಿಂತಲೂ, ದೇವರ ಕಡೆಗೆ ಪ್ರೀತಿ ಮತ್ತು ವಿಧೇಯತೆಯನ್ನು ತೋರಿಸುವುದರ ಮೂಲತತ್ತ್ವಗಳ ಕುರಿತಾಗಿ ಹೆಚ್ಚು ಚಿಂತಿತರಾಗಿರುವೆವು.​—ಲೂಕ 11:42.

ಸಂತೋಷಕರ ಫಲಿತಾಂಶಗಳು

16. ಕೆಲವು ಬೈಬಲ್‌ ನಿರ್ದೇಶನಗಳ ಹಿಂದಿರುವ ಮೂಲತತ್ತ್ವಗಳ ಉದಾಹರಣೆಗಳನ್ನು ಕೊಡಿರಿ.

16 ನಾವು ಯೆಹೋವನಿಗೆ ವಿಧೇಯರಾಗಲು ಪ್ರಯತ್ನಿಸುತ್ತಿರುವಾಗ, ಆತನ ನಿಯಮಗಳು ಪ್ರಮುಖ ಮೂಲತತ್ತ್ವಗಳ ಮೇಲೆ ಆಧಾರಿತವಾಗಿವೆ ಎಂಬುದನ್ನು ಗ್ರಹಿಸುವುದು ಮಹತ್ವಪೂರ್ಣ. ಉದಾಹರಣೆಗಾಗಿ, ಕ್ರೈಸ್ತರು ವಿಗ್ರಹಾರಾಧನೆ, ಲೈಂಗಿಕ ಅನೈತಿಕತೆ, ಮತ್ತು ರಕ್ತದ ದುರುಪಯೋಗದಿಂದ ದೂರವಿರಬೇಕು. (ಅ. ಕೃತ್ಯಗಳು 15:​28, 29) ಈ ವಾದಾಂಶಗಳ ಕುರಿತು ಕ್ರೈಸ್ತರು ತೆಗೆದುಕೊಳ್ಳುವ ನಿಲುವಿನ ಹಿಂದೆ ಯಾವ ಮೂಲತತ್ತ್ವಗಳಿವೆ? ದೇವರು ನಮ್ಮ ಅನನ್ಯ ಭಕ್ತಿಗೆ ಅರ್ಹನಾಗಿದ್ದಾನೆ; ನಮ್ಮ ಸಂಗಾತಿಗೆ ನಾವು ನಂಬಿಗಸ್ತರಾಗಿರಬೇಕು; ಮತ್ತು ಯೆಹೋವನು ಜೀವದಾತನಾಗಿದ್ದಾನೆ. (ಆದಿಕಾಂಡ 2:24; ವಿಮೋಚನಕಾಂಡ 20:​5, NW; ಕೀರ್ತನೆ 36:9) ಆಧಾರವಾಗಿರುವ ಈ ಮೂಲತತ್ತ್ವಗಳನ್ನು ಅರ್ಥಮಾಡಿಕೊಂಡರೆ, ಅವುಗಳಿಗೆ ಸಂಬಂಧಿಸಿರುವ ನಿಯಮಗಳನ್ನು ಅಂಗೀಕರಿಸಿ ಪಾಲಿಸುವುದು ಹೆಚ್ಚು ಸುಲಭವಾಗುತ್ತದೆ.

17. ಬೈಬಲಿನ ಮೂಲತತ್ತ್ವಗಳನ್ನು ಗ್ರಹಿಸಿ, ಅನ್ವಯಿಸುವುದರಿಂದ ಯಾವ ಒಳ್ಳೇ ಪರಿಣಾಮಗಳು ಬರಬಲ್ಲವು?

17 ಆಧಾರವಾಗಿರುವ ಮೂಲತತ್ತ್ವಗಳನ್ನು ನಾವು ತಿಳಿದುಕೊಂಡು ಅವುಗಳನ್ನು ಅನ್ವಯಿಸಲು ಪ್ರಯತ್ನಿಸುವಾಗ, ಅವು ನಮ್ಮ ಒಳಿತಿಗಾಗಿವೆ ಎಂಬುದನ್ನು ನಾವು ಗ್ರಹಿಸುತ್ತೇವೆ. ದೇವರ ಜನರು ಆನಂದಿಸುವಂಥ ಆತ್ಮಿಕ ಆಶೀರ್ವಾದಗಳೊಂದಿಗೆ ಅನೇಕವೇಳೆ ಕಣ್ಣಾರೆ ನೋಡಸಾಧ್ಯವಿರುವ ಪ್ರಯೋಜನಗಳೂ ಇರುತ್ತವೆ. ಉದಾಹರಣೆಗಾಗಿ, ಧೂಮಪಾನಮಾಡದವರು, ನೈತಿಕ ಜೀವನಗಳನ್ನು ಬಾಳುವವರು ಮತ್ತು ರಕ್ತದ ಪಾವಿತ್ರ್ಯವನ್ನು ಗೌರವಿಸುವವರು, ನಿರ್ದಿಷ್ಟ ರೋಗಗಳಿಗೆ ಬಲಿಬೀಳುವುದಿಲ್ಲ. ಅದೇ ರೀತಿಯಲ್ಲಿ ದೈವಿಕ ಸತ್ಯಕ್ಕೆ ಹೊಂದಿಕೆಯಲ್ಲಿ ಜೀವಿಸುವುದು, ನಮಗೆ ಆರ್ಥಿಕ, ಸಾಮಾಜಿಕ ಹಾಗೂ ಗೃಹ ಜೀವನಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ತರಬಹುದು. ಕಣ್ಣಾರೆ ನೋಡಸಾಧ್ಯವಿರುವ ಅಂಥ ಯಾವುದೇ ಪ್ರಯೋಜನಗಳು ಯೆಹೋವನ ಮಟ್ಟಗಳ ಮೌಲ್ಯವನ್ನು, ಅಂದರೆ ಅವು ನಿಜವಾಗಿಯೂ ಪ್ರಾಯೋಗಿಕವಾಗಿವೆ ಎಂಬುದನ್ನು ರುಜುಪಡಿಸುತ್ತವೆ. ಆದರೆ ಇಂಥ ಪ್ರಾಯೋಗಿಕ ಪ್ರಯೋಜನಗಳನ್ನು ಪಡೆಯುವುದೇ ನಾವು ದೇವರ ಮೂಲತತ್ತ್ವಗಳನ್ನು ಅನ್ವಯಿಸುವುದಕ್ಕಾಗಿರುವ ಮುಖ್ಯ ಕಾರಣವಲ್ಲ. ಸತ್ಯ ಕ್ರೈಸ್ತರು ಯೆಹೋವನಿಗೆ ವಿಧೇಯರಾಗುತ್ತಾರೆ, ಏಕೆಂದರೆ ಅವರು ಆತನನ್ನು ಪ್ರೀತಿಸುತ್ತಾರೆ, ಆತನು ಅವರ ಆರಾಧನೆಯನ್ನು ಪಡೆಯಲು ಅರ್ಹನಾಗಿದ್ದಾನೆ, ಮತ್ತು ಅದೇ ಮಾಡಬೇಕಾದ ಸರಿಯಾದ ಸಂಗತಿಯಾಗಿದೆ.​—ಪ್ರಕಟನೆ 4:11.

18. ನಾವು ಯಶಸ್ವಿ ಕ್ರೈಸ್ತರಾಗಿರಬೇಕಾದರೆ, ನಮ್ಮ ಜೀವನವನ್ನು ಯಾವುದು ಮಾರ್ಗದರ್ಶಿಸಬೇಕು?

18 ಬೈಬಲ್‌ ಮೂಲತತ್ತ್ವಗಳು ನಮ್ಮ ಜೀವನವನ್ನು ಮಾರ್ಗದರ್ಶಿಸುವಂತೆ ನಾವು ಅನುಮತಿಸುವುದು, ಒಂದು ಶ್ರೇಷ್ಠ ಜೀವನ ರೀತಿಗೆ ನಡೆಸುತ್ತದೆ ಮತ್ತು ಇದು ತಾನೇ ಇತರರನ್ನು ದೇವರ ಮಾರ್ಗದ ಕಡೆಗೆ ಆಕರ್ಷಿಸುತ್ತದೆ. ಇನ್ನೂ ಮಹತ್ವದ ಸಂಗತಿಯೇನೆಂದರೆ, ನಮ್ಮ ಜೀವನ ಕ್ರಮವು ಯೆಹೋವನಿಗೆ ಗೌರವವನ್ನು ತರುತ್ತದೆ. ಯೆಹೋವನು ನಿಜವಾಗಿ ನಮಗೆ ಅತ್ಯುತ್ತಮವಾದದ್ದನ್ನೇ ಬಯಸುವ ಒಬ್ಬ ಪ್ರೀತಿಪರ ದೇವರಾಗಿದ್ದಾನೆಂಬುದನ್ನು ನಾವು ಗ್ರಹಿಸುತ್ತೇವೆ. ನಾವು ಬೈಬಲಿನ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುವ ನಿರ್ಣಯಗಳನ್ನು ಮಾಡಿ, ಯೆಹೋವನು ಹೇಗೆ ನಮ್ಮನ್ನು ಆಶೀರ್ವದಿಸುತ್ತಾನೆಂಬುದನ್ನು ನೋಡುವಾಗ, ನಾವು ಆತನಿಗೆ ಇನ್ನೂ ಆಪ್ತರಾಗುವ ಅನಿಸಿಕೆಯುಂಟಾಗುತ್ತದೆ. ಹೌದು, ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಾವು ಇನ್ನೂ ಮುಂದಕ್ಕೆ ಒಂದು ಪ್ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ.

ನಿಮಗೆ ಜ್ಞಾಪಕವಿದೆಯೆ?

• ಮೂಲತತ್ತ್ವವೆಂದರೇನು?

• ಮೂಲತತ್ತ್ವಗಳು ನಿಯಮಗಳಿಂದ ಹೇಗೆ ಭಿನ್ನವಾಗಿವೆ?

• ಮೂಲತತ್ತ್ವಗಳ ಆಧಾರದ ಮೇಲೆ ಯೋಚಿಸಿ, ಕ್ರಿಯೆಗೈಯುವುದು ನಮಗೆ ಏಕೆ ಪ್ರಯೋಜನಕಾರಿಯಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 20ರಲ್ಲಿರುವ ಚೌಕ]

ವಿಲ್ಸನ್‌ ಎಂಬವನು, ಘಾನದಲ್ಲಿರುವ ಒಬ್ಬ ಕ್ರೈಸ್ತನಾಗಿದ್ದಾನೆ. ಅವನು ಕೆಲವೇ ದಿನಗಳೊಳಗೆ ಕೆಲಸದಿಂದ ತೆಗೆದುಹಾಕಲಾಗುವುದೆಂದು ತಿಳಿಸಲಾಯಿತು. ತನ್ನ ಉದ್ಯೋಗದ ಕೊನೆಯ ದಿನದಂದು ಅವನಿಗೆ ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ನ ಖಾಸಗಿ ಕಾರನ್ನು ತೊಳೆಯುವ ಕೆಲಸವನ್ನು ಕೊಡಲಾಯಿತು. ಆಗ ಅವನಿಗೆ ಕಾರ್‌ನಲ್ಲಿ ಒಂದು ದೊಡ್ಡ ಮೊತ್ತದ ಹಣ ಸಿಕ್ಕಿತು. ಅವನನ್ನು ಆ ದಿನ ಕೆಲಸದಿಂದ ತೆಗೆಯಲಾಗುವ ಕಾರಣ ದೇವರೇ ಆ ಹಣವನ್ನು ಕಳುಹಿಸಿದ್ದನೆಂದು ಅವನಿಗಿಂತ ಮೇಲ್ಮಟ್ಟದಲ್ಲಿರುವ ಅಧಿಕಾರಿಯು ಅವನಿಗೆ ಹೇಳಿದನು. ಆದರೆ ಪ್ರಾಮಾಣಿಕತೆಯ ಬಗ್ಗೆ ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುತ್ತಾ, ವಿಲ್ಸನ್‌ ಆ ಹಣವನ್ನು ಡೈರೆಕ್ಟರನಿಗೆ ಹಿಂದಿರುಗಿಸಿದನು. ಇದರಿಂದ ಚಕಿತನಾದ ಮತ್ತು ಪ್ರಭಾವಿಸಲ್ಪಟ್ಟ ಡೈರೆಕ್ಟರನು ಕೂಡಲೇ ವಿಲ್ಸನನಿಗೆ ಕಾಯಂ ನೌಕರಿಯನ್ನು ನೀಡಿದನು ಮಾತ್ರವಲ್ಲ, ಅವನು ಕಂಪನಿಯ ಸಿಬ್ಬಂದಿಯಲ್ಲಿ ಒಬ್ಬ ಹಿರಿಯ ಸದಸ್ಯನಾಗಿ ಬಡತಿಯನ್ನೂ ಪಡೆದನು.​—ಎಫೆಸ 4:28.

[ಪುಟ 21ರಲ್ಲಿರುವ ಚೌಕ]

ರುಕಿಯಾ ಎಂಬವರು, 60ರ ಪ್ರಾಯದಲ್ಲಿರುವ ಆಲ್ಬೇನಿಯದ ಮಹಿಳೆಯಾಗಿದ್ದಾರೆ. ಕೌಟುಂಬಿಕ ವೈಮನಸ್ಯದಿಂದಾಗಿ, ಅವರು 17ಕ್ಕಿಂತಲೂ ಹೆಚ್ಚು ವರ್ಷಗಳಿಂದ ತಮ್ಮ ಅಣ್ಣನೊಂದಿಗೆ ಮಾತಾಡುತ್ತಿರಲಿಲ್ಲ. ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಧ್ಯಯನ ಮಾಡಲು ಆರಂಭಿಸಿದರು ಮತ್ತು ಸತ್ಯ ಕ್ರೈಸ್ತರು ಯಾವುದೇ ದ್ವೇಷವನ್ನಿಟ್ಟುಕೊಳ್ಳದೆ ಇತರರೊಂದಿಗೆ ಸಮಾಧಾನದಿಂದಿರಬೇಕೆಂಬುದನ್ನು ಕಲಿತರು. ಅವರು ಇಡೀ ರಾತ್ರಿ ಪ್ರಾರ್ಥನೆ ಮಾಡಿದ ನಂತರ, ತನ್ನ ಅಣ್ಣನ ಮನೆಗೆ ಹೋಗಲು ನಡೆಯುತ್ತಿರುವಾಗ, ಅವರ ಹೃದಯವು ಡಬಡಬ ಹೊಡೆದುಕೊಳ್ಳುತ್ತಾ ಇತ್ತು. ಅವರ ಅಣ್ಣನ ಮಗಳು ಬಾಗಿಲನ್ನು ತೆರೆದಳು. ಆಶ್ಚರ್ಯದಿಂದ ಅವಳು ರುಕಿಯಾಗೆ ಕೇಳಿದ್ದು: “ಯಾರು ಸತ್ತಿದ್ದಾರೆ? ಇಲ್ಲಿಗೇಕೆ ಬಂದಿದ್ದೀರಿ?” ರುಕಿಯಾ ತನ್ನ ಅಣ್ಣನನ್ನು ಭೇಟಿಯಾಗಲು ಬಯಸುತ್ತೇನೆಂದು ಹೇಳಿದರು. ಬೈಬಲ್‌ ಮೂಲತತ್ತ್ವಗಳು ಮತ್ತು ಯೆಹೋವನ ಬಗ್ಗೆ ಕಲಿಯುವುದೇ ತಾನು ಅಣ್ಣನೊಂದಿಗೆ ರಾಜಿಮಾಡಿಕೊಳ್ಳುವಂತೆ ಪ್ರೇರಿಸಿತೆಂಬುದನ್ನು ಅವರು ಶಾಂತವಾಗಿ ವಿವರಿಸಿದರು. ಆನಂದಬಾಷ್ಪಗಳು ಮತ್ತು ಪರಸ್ಪರ ಆಲಿಂಗನಗಳ ನಂತರ, ಅವರು ಈ ವಿಶೇಷವಾದ ಪುನರ್ಮಿಲನವನ್ನು ಸಂಭ್ರಮದಿಂದ ಆಚರಿಸಿದರು!​—ರೋಮಾಪುರ 12:​17, 18.

[ಪುಟ 23ರಲ್ಲಿರುವ ಚಿತ್ರ]

ಮತ್ತಾಯ 5:​27, 28

[ಪುಟ 23ರಲ್ಲಿರುವ ಚಿತ್ರ]

ಮತ್ತಾಯ 5:3

[ಪುಟ 23ರಲ್ಲಿರುವ ಚಿತ್ರ]

ಮತ್ತಾಯ 5:24

[ಪುಟ 23ರಲ್ಲಿರುವ ಚಿತ್ರ]

‘ಆತನು ಆ ಜನರ ಗುಂಪುಗಳನ್ನು ಕಂಡು ಬೆಟ್ಟವನ್ನೇರಿ ಕೂತುಕೊಂಡ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು. ಆತನು ಅವರಿಗೆ ಉಪದೇಶ ಮಾಡಿದನು.’​—ಮತ್ತಾಯ 5:​1, 2