ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಯೇಸುವಿನ ಹೆಸರಿನಲ್ಲಿ” ಎಂಬ ವಾಕ್ಸರಣಿಯನ್ನು ಉಪಯೋಗಿಸದೆ ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವುದು ಯೋಗ್ಯವಾಗಿದೆಯೋ?

ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸಲು ಬಯಸುವ ಕ್ರೈಸ್ತರು ಇದನ್ನು ಯೇಸುವಿನ ಹೆಸರಿನ ಮೂಲಕ ಮಾಡಬೇಕು ಎಂಬುದನ್ನು ಬೈಬಲು ತೋರಿಸುತ್ತದೆ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” ಅವನು ಕೂಡಿಸಿದ್ದು: “ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವದು. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು.”​—ಯೋಹಾನ 14:6, 13, 14.

ಯೇಸುವಿನ ಅದ್ವಿತೀಯ ಸ್ಥಾನಕ್ಕೆ ಸೂಚಿಸುತ್ತಾ, ಸೈಕ್ಲೊಪೀಡಿಯ ಆಫ್‌ ಬಿಬ್ಲಿಕಲ್‌, ಥಿಯಲಾಜಿಕಲ್‌ ಆ್ಯಂಡ್‌ ಎಕ್ಲೀಸಿಯಾಸ್ಟಿಕಲ್‌ ಲಿಟರೆಚರ್‌ ಹೇಳುವುದು: “ಪ್ರಾರ್ಥನೆಯ ಅರ್ಹನಾದವನು ದೇವರೊಬ್ಬನೇ ಮತ್ತು ಅದನ್ನು ಮಧ್ಯಸ್ಥನ ರೂಪದಲ್ಲಿ ಯೇಸು ಕ್ರಿಸ್ತನ ಮೂಲಕವಾಗಿ ಅರ್ಪಿಸಬೇಕು. ಆದುದರಿಂದ, ಸಂತರಿಗೆ ಮತ್ತು ದೇವದೂತರಿಗೆ ಅರ್ಪಿಸಲ್ಪಡುವ ಎಲ್ಲ ಭಿನ್ನಹಗಳು ವ್ಯರ್ಥವಾಗಿವೆ ಮಾತ್ರವಲ್ಲ ದೂಷಣೀಯವೂ ಆಗಿವೆ. ಸೃಷ್ಟಿಗೆ ಅರ್ಪಿಸಲ್ಪಡುವ ಯಾವುದೇ ಆರಾಧನೆಯು, ಆ ಸೃಷ್ಟಿಯು ಎಷ್ಟೇ ಉನ್ನತವಾದದ್ದಾಗಿರಲಿ, ವಿಗ್ರಹಾರಾಧನೆಯಾಗಿದೆ ಮತ್ತು ದೇವರ ಪವಿತ್ರ ಧರ್ಮಶಾಸ್ತ್ರದಲ್ಲಿ ಖಡಾಖಂಡಿತವಾಗಿ ನಿಷೇಧಿಸಲ್ಪಟ್ಟದ್ದಾಗಿದೆ.”

ಒಂದುವೇಳೆ ಯಾರಾದರೊಬ್ಬರು ಒಂದು ಪ್ರತಿಫಲದಾಯಕ ಅನುಭವದ ನಂತರ, “ಯೇಸುವಿನ ಹೆಸರಿನಲ್ಲಿ” ಎಂಬ ವಾಕ್ಸರಣಿಯನ್ನು ಕೂಡಿಸದೆ ಕೇವಲ “ತುಂಬ ಕೃತಜ್ಞತೆಗಳು ಯೆಹೋವನೇ” ಎಂದು ಹೇಳುವುದಾದರೆ ಆಗೇನು? ಇದು ಅಯೋಗ್ಯವಾದದ್ದಾಗಿದೆಯೋ? ಹಾಗಿರಬೇಕೆಂದಿಲ್ಲ. ಒಬ್ಬ ಕ್ರೈಸ್ತನು ಥಟ್ಟನೆ ಒಂದು ಅಪಾಯದಲ್ಲಿ ಸಿಕ್ಕಿಕೊಳ್ಳುತ್ತಾನೆ ಮತ್ತು “ಯೆಹೋವನೇ ನನ್ನನ್ನು ಕಾಪಾಡು” ಎಂದು ಕೂಗಿಕೊಳ್ಳುತ್ತಾನೆ ಎಂದಿಟ್ಟುಕೊಳ್ಳಿ. ತನ್ನ ಸೇವಕನು “ಯೇಸುವಿನ ಹೆಸರಿನಲ್ಲಿ” ಎಂದು ಹೇಳದಿದ್ದ ಮಾತ್ರಕ್ಕೆ ದೇವರು ಅವನಿಗೆ ಸಹಾಯಮಾಡುವುದನ್ನು ಎಂದಿಗೂ ನಿರಾಕರಿಸಲಾರನು.

ಆದರೂ, ದೇವರೊಂದಿಗೆ ಕೇವಲ ಗಟ್ಟಿ ಸ್ವರದಿಂದ ಮಾತಾಡುವುದು ತಾನೇ ಪ್ರಾರ್ಥನೆಯಾಗಿರುವುದಿಲ್ಲ ಎಂಬುದನ್ನು ಗಮನಿಸತಕ್ಕದ್ದು. ಉದಾಹರಣೆಗೆ, ತನ್ನ ತಮ್ಮನಾದ ಹೇಬೆಲನನ್ನು ಕೊಂದದ್ದಕ್ಕಾಗಿ ಯೆಹೋವನಿಂದ ನ್ಯಾಯತೀರ್ಪನ್ನು ಹೊಂದಿದ ಬಳಿಕ ಕಾಯಿನನು ಹೇಳಿದ್ದು: “ನನ್ನ ಅಪರಾಧಫಲ ತಾಳಕೂಡದಷ್ಟಾಗಿದೆ. ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಹೊರಡಿಸುತ್ತೀಯಲ್ಲಾ; ನಿನ್ನ ಸಾನ್ನಿಧ್ಯವು ತಪ್ಪಿತು; ನಾನು ಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಬೇಕಾಯಿತು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು.” (ಆದಿಕಾಂಡ 4:13, 14) ಕಾಯಿನನು ತನ್ನ ಹೇಳಿಕೆಗಳನ್ನು ಯೆಹೋವನೆಡೆಗೆ ನಿರ್ದೇಶಿಸಿದನಾದರೂ, ಅವನ ಭಾವನಾತ್ಮಕ ಸ್ಫೋಟನವು ಪಾಪದ ಕಹಿ ಫಲದ ಕುರಿತಾದ ಒಂದು ದೂರಾಗಿತ್ತು ಮಾತ್ರ.

ಬೈಬಲು ನಮಗೆ ಹೇಳುವುದು: “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” ಅತ್ಯುನ್ನತನೊಂದಿಗೆ ಮಾತಾಡುವಾಗ ಕೇವಲ ಒಬ್ಬ ಸಾಧಾರಣ ಮನುಷ್ಯನೊಂದಿಗೆ ಮಾತಾಡುವ ಹಾಗೆ ಸರಾಗವಾಗಿ ಬಾಯಿಗೆ ಬಂದ ಮಾತುಗಳನ್ನೆಲ್ಲ ಹೇಳುವುದು ಖಂಡಿತವಾಗಿಯೂ ದೀನತೆಯ ಕೊರತೆಯನ್ನು ತೋರಿಸುವುದು. (ಯಾಕೋಬ 4:6; ಕೀರ್ತನೆ 47:2; ಪ್ರಕಟನೆ 14:7) ಮಾತ್ರವಲ್ಲದೆ, ದೇವರ ವಾಕ್ಯವು ಯೇಸುವಿನ ಪಾತ್ರದ ಕುರಿತು ಏನು ಹೇಳುತ್ತದೆ ಎಂಬುದನ್ನು ತಿಳಿದವರಾಗಿದ್ದೂ ಬೇಕುಬೇಕೆಂದೇ ಯೇಸು ಕ್ರಿಸ್ತನನ್ನು ಅಂಗೀಕರಿಸದೆ ಪ್ರಾರ್ಥಿಸುವುದು ಅಗೌರವಿಸುವಂತಿರುವುದು.​—ಲೂಕ 1:32, 33.

ಇದರ ಅರ್ಥ ನಾವು ಪ್ರಾರ್ಥಿಸುವಾಗ ಯೆಹೋವನು ಒಂದು ನಿರ್ದಿಷ್ಟವಾದ ಶೈಲಿ ಅಥವಾ ನಿರ್ಧರಿತ ನಮೂನೆಯನ್ನು ಎದುರುನೋಡುತ್ತಾನೆ ಎಂದಾಗುವುದಿಲ್ಲ. ಒಂದು ಪ್ರಾಥಮಿಕ ಅಂಶವು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯಾಗಿದೆ. (1 ಸಮುವೇಲ 16:7) ಸಾ.ಶ. ಮೊದಲನೆಯ ಶತಮಾನದಲ್ಲಿ, ಕೊರ್ನೇಲ್ಯ ಎಂಬ ಒಬ್ಬ ಶತಾಧಿಪತಿಯು “ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು.” ಸುನ್ನತಿ ಮಾಡಿಸಿಕೊಂಡಿರದ ಒಬ್ಬ ಅನ್ಯಜನಾಂಗದವನಾದ ಕೊರ್ನೇಲ್ಯನು ಯೆಹೋವನಿಗೆ ಸಮರ್ಪಿತ ವ್ಯಕ್ತಿಯಾಗಿರಲಿಲ್ಲ. ಅವನು ತನ್ನ ಪ್ರಾರ್ಥನೆಗಳನ್ನು ಯೇಸುವಿನ ಹೆಸರಿನಲ್ಲಿ ಅರ್ಪಿಸಿದನು ಎಂಬುದು ಅಸಂಭಾವ್ಯವಾದರೂ, ಅವು “ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು.” ಏಕೆ? ಏಕೆಂದರೆ, ಕೊರ್ನೇಲ್ಯನು “ಭಕ್ತನೂ . . . ದೇವರಿಗೆ ಭಯಪಡುವವನೂ” ಆಗಿದ್ದಾನೆ ಎಂಬುದನ್ನು “ಹೃದಯಗಳನ್ನು ಶೋಧಿಸುವವನು,” ನೋಡಿದನು. (ಅ. ಕೃತ್ಯಗಳು 10:​2, 4; ಜ್ಞಾನೋಕ್ತಿ 17:3) ‘ನಜರೇತಿನ ಯೇಸುವಿನ’ ಕುರಿತು ಜ್ಞಾನವನ್ನು ತೆಗೆದುಕೊಂಡ ನಂತರ, ಕೊರ್ನೇಲ್ಯನು ಪವಿತ್ರಾತ್ಮವನ್ನು ಪಡೆದುಕೊಂಡನು ಮತ್ತು ಯೇಸುವಿನ ದೀಕ್ಷಾಸ್ನಾನಿತ ಶಿಷ್ಯನಾದನು.​—ಅ. ಕೃತ್ಯಗಳು 10:30-48.

ಕೊನೆಯ ಮಾತಾಗಿ, ದೇವರು ಯಾವ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆಂಬುದನ್ನು ನಿರ್ಧರಿಸುವುದು ಮಾನವರಲ್ಲ. ಯಾವುದೇ ಸಂದರ್ಭದಲ್ಲಿ ಒಬ್ಬ ಕ್ರೈಸ್ತನು ದೇವರಿಗೆ ಒಂದು ಹೇಳಿಕೆಯನ್ನು ಮಾಡಿ, “ಯೇಸುವಿನ ಹೆಸರಿನಲ್ಲಿ” ಎಂಬಂಥ ವಾಕ್ಸರಣಿಯನ್ನು ಉಪಯೋಗಿಸುವುದನ್ನು ಬಿಟ್ಟುಬಿಡುವುದಾದರೆ, ಅವನು ಅಪರಾಧಿ ಭಾವನೆಯೊಂದಿಗೆ ಮನಗುಂದಿದವನಾಗುವ ಆವಶ್ಯಕತೆಯಿಲ್ಲ. ಯೆಹೋವನು ನಮ್ಮ ಇತಿಮಿತಿಗಳ ಪೂರ್ಣ ಜ್ಞಾನವುಳ್ಳವನಾಗಿದ್ದಾನೆ ಮತ್ತು ನಮಗೆ ಸಹಾಯಮಾಡಲು ಬಯಸುತ್ತಾನೆ. (ಕೀರ್ತನೆ 103:12-14) ನಾವು “ದೇವರ ಮಗನ”ಲ್ಲಿ ನಂಬಿಕೆಯನ್ನಿಟ್ಟು, “ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ” ಎಂಬ ದೃಢವಿಶ್ವಾಸವು ನಮಗೆ ಇರಬಲ್ಲದು. (1 ಯೋಹಾನ 5:13, 14) ಆದರೂ, ವಿಶೇಷವಾಗಿ ಬೇರೆಯವರನ್ನು ಸಾರ್ವಜನಿಕ ಪ್ರಾರ್ಥನೆಯಲ್ಲಿ ಪ್ರತಿನಿಧಿಸುವಾಗ, ಸತ್ಯ ಕ್ರೈಸ್ತರು ಯೆಹೋವನ ಉದ್ದೇಶದಲ್ಲಿ ಯೇಸು ವಹಿಸುವ ಪಾತ್ರವನ್ನು ಅಂಗೀಕರಿಸುತ್ತಾರೆ. ಮತ್ತು ಅವರು ಪ್ರಾರ್ಥನೆಗಳನ್ನು ಯೇಸುವಿನ ಮುಖಾಂತರ ದೇವರಿಗೆ ಸಲ್ಲಿಸುವ ಮೂಲಕ ಯೇಸುವನ್ನು ಮಹಿಮೆಪಡಿಸಲು ವಿಧೇಯತೆಯಿಂದ ಪ್ರಯತ್ನಿಸುತ್ತಾರೆ.