ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂಗವಿಕಲತೆಗಳು ಹೇಗೆ ಕೊನೆಗೊಳ್ಳುವವು?

ಅಂಗವಿಕಲತೆಗಳು ಹೇಗೆ ಕೊನೆಗೊಳ್ಳುವವು?

ಅಂಗವಿಕಲತೆಗಳು ಹೇಗೆ ಕೊನೆಗೊಳ್ಳುವವು?

ಕುರುಡನ ಕಣ್ಣುಗಳು ನೋಡುವುದನ್ನು, ಕಿವುಡನ ಕಿವಿಗಳು ಎಲ್ಲ ರೀತಿಯ ಶಬ್ದವನ್ನು ಕೇಳಿಸಿಕೊಳ್ಳುವುದನ್ನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದನ್ನು ಮತ್ತು ಕುಂಟನ ಪಾದಗಳು ಸದೃಢವಾಗಿದ್ದು ನಡೆಯಲು ಶಕ್ತವಾಗುವುದನ್ನು ತುಸು ಊಹಿಸಿಕೊಳ್ಳಿರಿ! ನಾವು ಇಲ್ಲಿ ವೈದ್ಯಕೀಯ ವಿಜ್ಞಾನದಲ್ಲಿನ ಅದ್ಭುತ ಪ್ರಗತಿಯ ಕುರಿತಾಗಿ ಮಾತಾಡುತ್ತಿಲ್ಲ, ಬದಲಾಗಿ ಮಾನವಕುಲದ ಪರವಾಗಿ ದೇವರು ಹಸ್ತಕ್ಷೇಪಮಾಡುವುದರ ಫಲಿತಾಂಶಗಳ ಕುರಿತಾಗಿ ಮಾತಾಡುತ್ತಿದ್ದೇವೆ. ಬೈಬಲು ಮುಂತಿಳಿಸುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:​5, 6) ಆದರೆ ಖಂಡಿತವಾಗಿಯೂ ಆಶ್ಚರ್ಯಕರವಾಗಿರುವ ಈ ಪ್ರವಾದನೆಯು ನಿಜವಾಗುತ್ತದೆ ಎಂಬ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?

ಮೊದಲಾಗಿ, ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಎಲ್ಲ ರೀತಿಯ ರೋಗವನ್ನೂ ಅಂಗವಿಕಲತೆಗಳನ್ನೂ ನಿಜವಾಗಿಯೂ ಗುಣಪಡಿಸಿದನು. ಅಷ್ಟುಮಾತ್ರವಲ್ಲ, ಅವನ ಅದ್ಭುತಕಾರ್ಯಗಳಲ್ಲಿ ಹೆಚ್ಚಿನವುಗಳನ್ನು ಅನೇಕ ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಅವನ ವೈರಿಗಳು ಸಹ ಕಣ್ಣಾರೆ ನೋಡಿದರು. ವಾಸ್ತವದಲ್ಲಿ, ಯೇಸುವಿನ ಬಗ್ಗೆ ಅಪನಂಬಿಕೆ ಹುಟ್ಟಿಸುವ ಸಲುವಾಗಿ, ಕಡಿಮೆಪಕ್ಷ ಒಂದು ಸಂದರ್ಭದಲ್ಲಿ ಸಂದೇಹವಾದಿಗಳಾಗಿದ್ದ ವಿರೋಧಿಗಳು ಆ ವಾಸಿಮಾಡುವಿಕೆಯ ಕುರಿತು ಆದ್ಯಂತವಾಗಿ ವಿಚಾರಣೆಮಾಡಿ ನೋಡಿದರು. ಆದರೆ ಅವರಿಗೆ ಆಶಾಭಂಗವಾಯಿತು, ಏಕೆಂದರೆ ಅವನ ಅದ್ಭುತಕಾರ್ಯವನ್ನು ಪುಷ್ಟೀಕರಿಸುವುದರಲ್ಲಿ ಮಾತ್ರ ಅವರಿಂದ ಸಾಧ್ಯವಾಯಿತು. (ಯೋಹಾನ 9:​1, 5-34) ಅಲ್ಲಗಳೆಯಲಾಗದಂಥ ಇನ್ನೊಂದು ಅದ್ಭುತಕಾರ್ಯವನ್ನು ಯೇಸು ಮಾಡಿದಾಗ, ಅವರು ಹತಾಶರಾಗಿ ಹೇಳಿದ್ದು: “ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.” (ಯೋಹಾನ 11:47) ಆದರೂ, ಸಾಮಾನ್ಯ ಜನರು ಅಷ್ಟು ಜಡ ಮನೋಭಾವದವರೂ ತಾತ್ಸಾರ ಭಾವದವರೂ ಆಗಿರಲಿಲ್ಲ. ಏಕೆಂದರೆ ಅವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆಯಿಡತೊಡಗಿದರು.​—ಯೋಹಾನ 2:23; 10:​41, 42; 12:​9-​11.

ಯೇಸುವಿನ ಅದ್ಭುತಕಾರ್ಯಗಳು​—ಭೂವ್ಯಾಪಕ ವಾಸಿಮಾಡುವಿಕೆಯ ಒಂದು ಮುನ್ನೋಟ

ಯೇಸುವಿನ ಅದ್ಭುತಕಾರ್ಯಗಳು, ಯೇಸು ಮೆಸ್ಸೀಯನಾಗಿದ್ದನು ಹಾಗೂ ದೇವಕುಮಾರನಾಗಿದ್ದನು ಎಂಬುದನ್ನು ರುಜುಪಡಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿದವು. ವಿಧೇಯ ಮಾನವಕುಲವು ಭವಿಷ್ಯತ್ತಿನಲ್ಲಿ ವಾಸಿಮಾಡಲ್ಪಡುವುದು ಎಂಬ ಬೈಬಲ್‌ ವಾಗ್ದಾನಗಳಲ್ಲಿ ನಂಬಿಕೆಯನ್ನಿಡಲು ಅವು ಆಧಾರವನ್ನು ಒದಗಿಸಿದವು. ಈ ಲೇಖನದ ಆರಂಭದ ಪ್ಯಾರಗ್ರಾಫ್‌ನಲ್ಲಿ ಉಲ್ಲೇಖಿಸಲ್ಪಟ್ಟ ಯೆಶಾಯ ಪುಸ್ತಕದ 35ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು ಈ ವಾಗ್ದಾನಗಳಲ್ಲಿ ಒಳಗೂಡಿದೆ. ದೇವಭಯವುಳ್ಳ ಮಾನವರ ಭಾವೀ ಆರೋಗ್ಯದ ಕುರಿತು ಯೆಶಾಯ 33:24 ತಿಳಿಸುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ತದ್ರೀತಿಯಲ್ಲಿ, ಪ್ರಕಟನೆ 21:4 ವಾಗ್ದಾನಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ [ಇಂದಿನ ಪರೀಕ್ಷೆಗಳು ಹಾಗೂ ಕಷ್ಟಾನುಭವ] ಇಲ್ಲದೆ ಹೋಯಿತು.”

ಜನರು ಯೇಸುವಿನ ಮಾದರಿ ಪ್ರಾರ್ಥನೆಯನ್ನು ಪುನರಾವರ್ತಿಸುವಾಗ, ಆ ಪ್ರವಾದನೆಗಳ ನೆರವೇರಿಕೆಗಾಗಿ ಕ್ರಮವಾಗಿ ಪ್ರಾರ್ಥಿಸುತ್ತಾರೆ. ಈ ಪ್ರಾರ್ಥನೆಯ ಒಂದು ಭಾಗವು ಹೀಗೆ ಹೇಳುತ್ತದೆ: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಹೌದು, ದೇವರ ಚಿತ್ತದಲ್ಲಿ ಭೂಮಿ ಹಾಗೂ ಮಾನವಕುಲವು ಒಳಗೂಡಿರುತ್ತದೆ. ಒಂದು ಕಾರಣಕ್ಕಾಗಿ ರೋಗ ಹಾಗೂ ಅಂಗವಿಕಲತೆಗಳು ಅನುಮತಿಸಲ್ಪಟ್ಟಿವೆಯಾದರೂ, ಇವು ಇನ್ನೆಂದಿಗೂ ಅಸ್ತಿತ್ವದಲ್ಲಿರವು; ಇವು ದೇವರ “ಪಾದ ಪೀಠ”ವನ್ನು ಸದಾಕಾಲಕ್ಕೂ ಹಾಳುಮಾಡಲಾರವು.​—ಯೆಶಾಯ 66:1. *

ನೋವು ಅಥವಾ ಖರ್ಚುವೆಚ್ಚವಿಲ್ಲದೆ ವಾಸಿಮಾಡಲ್ಪಟ್ಟರು

ಜನರು ಯಾವುದೇ ರೋಗದಿಂದ ನರಳುತ್ತಿರಲಿ, ಯೇಸು ಅವರನ್ನು ನೋವಾಗದಂಥ ರೀತಿಯಲ್ಲಿ, ಆ ಕೂಡಲೆ, ಮತ್ತು ಯಾವುದೇ ಖರ್ಚುವೆಚ್ಚವಿಲ್ಲದೆ ವಾಸಿಮಾಡಿದನು. ಅನಿವಾರ್ಯವಾಗಿ, ಇದರ ಕುರಿತಾದ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು ಮತ್ತು ಸ್ವಲ್ಪದರಲ್ಲೇ “ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು.” ಜನರು ಹೇಗೆ ಪ್ರತಿಕ್ರಿಯಿಸಿದರು? ಮತ್ತಾಯನ ಪ್ರತ್ಯಕ್ಷ ಸಾಕ್ಷಿ ವೃತ್ತಾಂತವು ಹೀಗೆ ಮುಂದುವರಿಯುತ್ತದೆ: “ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್‌ ಜನರ ದೇವರನ್ನು ಕೊಂಡಾಡಿದರು.”​—ಮತ್ತಾಯ 15:​30, 31.

ಯೇಸುವಿನಿಂದ ವಾಸಿಮಾಡಲ್ಪಟ್ಟವರು ಜನರ ಗುಂಪಿನಿಂದ ಜಾಗರೂಕವಾಗಿ ಆಯ್ಕೆಮಾಡಲ್ಪಟ್ಟವರಲ್ಲವೆಂಬುದನ್ನು ಗಮನಿಸಿರಿ. ಏಕೆಂದರೆ ಖೋಟಾವೈದ್ಯರು ಇಂತಹ ತಂತ್ರವನ್ನು ಉಪಯೋಗಿಸುತ್ತಾರೆ. ಅದಕ್ಕೆ ಬದಲಾಗಿ, ಅಸ್ವಸ್ಥರಾಗಿದ್ದವರ ಅನೇಕ ಮಂದಿ ಸಂಬಂಧಿಕರು ಹಾಗೂ ಸ್ನೇಹಿತರು, “ಅವರನ್ನು ಆತನ [ಯೇಸುವಿನ] ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು.” ಯೇಸುವಿನ ವಾಸಿಮಾಡುವಿಕೆಯ ಸಾಮರ್ಥ್ಯದ ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ನಾವೀಗ ಪುನರ್ವಿಮರ್ಶಿಸೋಣ.

ಕುರುಡುತನ: ಯೇಸು ಯೆರೂಸಲೇಮಿನಲ್ಲಿದ್ದಾಗ ಒಬ್ಬ “ಹುಟ್ಟುಕುರುಡ”ನಿಗೆ ದೃಷ್ಟಿಯನ್ನು ಬರಿಸಿದನು. ಈ ಮನುಷ್ಯನು ಆ ಊರಿನಲ್ಲಿ ಒಬ್ಬ ಕುರುಡ ಭಿಕ್ಷುಕನೆಂದೇ ಪ್ರಸಿದ್ಧನಾಗಿದ್ದನು. ಆದುದರಿಂದ, ಅವನು ದೃಷ್ಟಿಯುಳ್ಳವನಾಗಿ ನಡೆದಾಡುತ್ತಿರುವುದನ್ನು ಜನರು ನೋಡಿದಾಗ ಉಂಟಾಗಿರಬಹುದಾದ ಕೋಲಾಹಲವನ್ನು ನೀವು ಊಹಿಸಿಕೊಳ್ಳಸಾಧ್ಯವಿದೆ! ಆದರೂ, ಇದರಿಂದ ಎಲ್ಲರಿಗೂ ಸಂತೋಷವಾಗಲಿಲ್ಲ. ಫರಿಸಾಯರು ಎಂದು ಕರೆಯಲ್ಪಡುತ್ತಿದ್ದ ಒಂದು ಪ್ರಮುಖ ಹಾಗೂ ಪ್ರಭಾವಶಾಲಿ ಯೆಹೂದ್ಯರ ಪಂಥದ ಕೆಲವು ಸದಸ್ಯರು, ಈ ಮುಂಚೆ ಯೇಸು ತಮ್ಮ ದುಷ್ಟತನವನ್ನು ಬಯಲುಪಡಿಸಿದ್ದಕ್ಕಾಗಿ ಕೋಪಗೊಂಡಿದ್ದು, ಯೇಸುವಿನ ಮೇಲೆ ಮೋಸದ ಆರೋಪವನ್ನು ಹೊರಿಸಲಿಕ್ಕಾಗಿ ಪುರಾವೆಯನ್ನು ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದರು. (ಯೋಹಾನ 8:​13, 42-44; 9:​1, 6-31) ಆದುದರಿಂದ, ಅವರು ಮೊದಲು ವಾಸಿಯಾದ ಮನುಷ್ಯನನ್ನು, ತದನಂತರ ಅವನ ತಂದೆತಾಯಿಗಳನ್ನು, ಮತ್ತು ಆಮೇಲೆ ಪುನಃ ಒಮ್ಮೆ ಅದೇ ಮನುಷ್ಯನನ್ನು ವಿಚಾರಿಸಿದರು. ಆದರೆ ಫರಿಸಾಯರ ವಿಚಾರಣೆಗಳು ಯೇಸುವಿನ ಅದ್ಭುತಕಾರ್ಯವನ್ನು ಇನ್ನಷ್ಟು ದೃಢಪಡಿಸಿದವು. ಇದರಿಂದ ಅವರು ಇನ್ನೂ ಕುಪಿತರಾದರು. ಈ ಧಾರ್ಮಿಕ ಕಪಟಿಗಳ ವ್ಯತಿರಿಕ್ತ ಮನೋಭಾವದಿಂದ ಗಲಿಬಿಲಿಗೊಂಡ ಆ ವಾಸಿಯಾದ ಮನುಷ್ಯನು ತಾನೇ ಹೇಳಿದ್ದು: “ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ; ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು.” (ಯೋಹಾನ 9:​32, 33) ನಂಬಿಕೆಯಿಂದ ಕೂಡಿದ್ದ ಈ ಪ್ರಾಮಾಣಿಕ ಹಾಗೂ ಬುದ್ಧಿಪೂರ್ವಕ ಅಭಿವ್ಯಕ್ತಿಯ ಕಾರಣದಿಂದ ಫರಿಸಾಯರು “ಅವನನ್ನು ಹೊರಗೆ ಹಾಕಿದರು.” ಅಂದರೆ ಈ ಮುಂಚೆ ಕುರುಡನಾಗಿದ್ದ ಆ ಮನುಷ್ಯನನ್ನು ಅವರು ಆ ಕೂಡಲೆ ಸಭಾಮಂದಿರದಿಂದ ಬಹಿಷ್ಕರಿಸಿದರು.​—ಯೋಹಾನ 9:​22, 34.

ಕಿವುಡು: ಯೇಸು ಯೋರ್ದನ್‌ ನದಿಯ ಪೂರ್ವ ದಿಕ್ಕಿನಲ್ಲಿದ್ದ ಪ್ರಾಂತ್ಯವಾಗಿದ್ದ ದೆಕಪೊಲಿಯಲ್ಲಿದ್ದಾಗ, “ಕೆಲವರು ತೊದಲು ಮಾತಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರತಂದ”ರು. (ಮಾರ್ಕ 7:​31, 32) ಯೇಸು ಈ ವ್ಯಕ್ತಿಯನ್ನು ಗುಣಪಡಿಸಿದನು ಮಾತ್ರವಲ್ಲ, ಜನರ ಗುಂಪಿನ ಮಧ್ಯೆ ಪೇಚಾಟವನ್ನು ಅನುಭವಿಸಬಹುದಾಗಿದ್ದ ಈ ಕಿವುಡನ ಭಾವನೆಗಳ ವಿಷಯದಲ್ಲಿ ಆಳವಾದ ಒಳನೋಟವನ್ನು ತೋರ್ಪಡಿಸಿದನು. ಯೇಸು ಆ ಕಿವುಡನನ್ನು “ಜನರ ಗುಂಪಿನಿಂದ ಒತ್ತಟ್ಟಿಗೆ ಕರಕೊಂಡು ಹೋಗಿ” ಅವನನ್ನು ಗುಣಪಡಿಸಿದನು ಎಂದು ಬೈಬಲು ಹೇಳುತ್ತದೆ. ಪುನಃ, ಇದನ್ನು ಕಣ್ಣಾರೆ ಕಂಡವರು ‘ಅತ್ಯಂತಾಶ್ಚರ್ಯಪಟ್ಟರು.’ ಅವರು ಹೇಳಿದ್ದು: “[ಅವನು] ಎಲ್ಲಾ ಚೆನ್ನಾಗಿ ಮಾಡಿದ್ದಾನೆ; ಕಿವುಡರಾದರೂ ಕೇಳುವಂತೆ ಮಾಡುತ್ತಾನೆ, ಮೂಕರಾದರೂ ಮಾತಾಡುವಂತೆ ಮಾಡುತ್ತಾನೆ.”​—ಮಾರ್ಕ 7:​33-37.

ಪಾರ್ಶ್ವವಾಯು: ಯೇಸು ಕಪೆರ್ನೌಮಿನಲ್ಲಿದ್ದಾಗ, ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಅವನ ಬಳಿಗೆ ಹೊತ್ತುಕೊಂಡು ಬಂದರು. (ಮತ್ತಾಯ 9:2) 6ರಿಂದ 8ನೆಯ ವಚನಗಳು ಏನು ಸಂಭವಿಸಿತು ಎಂಬುದನ್ನು ವರ್ಣಿಸುತ್ತವೆ. “[ಯೇಸು] ಪಾರ್ಶ್ವವಾಯುರೋಗಿಯನ್ನು ನೋಡಿ​—ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಅಂದನು. ಅವನು ಎದ್ದು ಮನೆಗೆ ಹೋದನು. ಜನರು ಇದನ್ನು ನೋಡಿ ಭಯಪಟ್ಟು ದೇವರು ಮನುಷ್ಯರಿಗೆ ಅಂಥ ಅಧಿಕಾರವನ್ನು ಕೊಟ್ಟದ್ದಕ್ಕೆ ಆತನನ್ನು [“ದೇವರನ್ನು,” NW] ಕೊಂಡಾಡಿದರು.” ಈ ಅದ್ಭುತಕಾರ್ಯವು ಸಹ ಯೇಸುವಿನ ಶಿಷ್ಯರು ಹಾಗೂ ಅವನ ವೈರಿಗಳ ಸಮಕ್ಷಮದಲ್ಲಿ ನಡೆಸಲ್ಪಟ್ಟಿತು. ಯೇಸುವಿನ ಶಿಷ್ಯರು ದ್ವೇಷ ಹಾಗೂ ಪೂರ್ವಕಲ್ಪಿತ ಅಭಿಪ್ರಾಯದಿಂದ ಕುರುಡುಗೊಳಿಸಲ್ಪಟ್ಟಿರಲಿಲ್ಲ, ಬದಲಾಗಿ ತಾವು ಏನನ್ನು ಕಣ್ಣಾರೆ ಕಂಡರೋ ಅದಕ್ಕಾಗಿ “ದೇವರನ್ನು ಕೊಂಡಾಡಿದರು.”

ರೋಗ: “ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು​—ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಳ್ಳಲು ಆತನು ಕನಿಕರಪಟ್ಟು ಕೈನೀಡಿ ಅವನನ್ನು ಮುಟ್ಟಿ​—ನನಗೆ ಮನಸ್ಸುಂಟು; ಶುದ್ಧವಾಗು ಅಂದನು. ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧವಾದನು.” (ಮಾರ್ಕ 1:​40-42) ಯೇಸು ಈ ವ್ಯಕ್ತಿಯನ್ನು ಒಲ್ಲದ ಮನಸ್ಸಿನಿಂದ ವಾಸಿಮಾಡಲಿಲ್ಲ, ಬದಲಾಗಿ ನಿಜವಾದ ಸಹಾನುಭೂತಿಯಿಂದ ಹಾಗೆ ಮಾಡಿದನು. ನೀವು ಒಬ್ಬ ಕುಷ್ಠರೋಗಿಯಾಗಿದ್ದಿರೆಂದು ಭಾವಿಸಿ. ಪ್ರಗತಿಪರವಾಗಿ ನಿಮ್ಮ ದೇಹವನ್ನು ವಿಕಾರಗೊಳಿಸುತ್ತಾ, ನೀವು ಸಮಾಜದಿಂದ ಬಹಿಷ್ಕರಿಸಲ್ಪಡುವಂತೆ ಮಾಡಿದ್ದ ಒಂದು ಮಾರಕ ರೋಗದಿಂದ ನೀವು ಕೂಡಲೆ ಮತ್ತು ಯಾವುದೇ ನೋವಿಲ್ಲದೆ ಗುಣಪಡಿಸಲ್ಪಡುವಲ್ಲಿ ನಿಮಗೆ ಹೇಗನಿಸುತ್ತಿತ್ತು? ಅದ್ಭುತಕರವಾಗಿ ವಾಸಿಮಾಡಲ್ಪಟ್ಟ ಇನ್ನೊಬ್ಬ ಕುಷ್ಠರೋಗಿಯು ಏಕೆ “ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ಉಪಕಾರಸ್ತುತಿಮಾಡಿದನು” ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ ಎಂಬುದರಲ್ಲಿ ಸಂಶಯವಿಲ್ಲ.​—ಲೂಕ 17:​12-16.

ದೈಹಿಕ ಹಾನಿ: ಯೇಸು ಸೆರೆಹಿಡಿಯಲ್ಪಟ್ಟು ಶೂಲಕ್ಕೇರಿಸಲ್ಪಡುವ ಮುಂಚೆ ಅವನು ಮಾಡಿದ ಕೊನೆಯ ಅದ್ಭುತಕಾರ್ಯವು, ವಾಸಿಮಾಡುವಿಕೆಯ ಒಂದು ಕೃತ್ಯವಾಗಿತ್ತು. ಯೇಸುವನ್ನು ಸೆರೆಹಿಡಿದೊಯ್ಯಲಿದ್ದವರ ವಿರುದ್ಧ ಅಪೊಸ್ತಲ ಪೇತ್ರನು ದುಡುಕಿನಿಂದ ಕ್ರಿಯೆಗೈದನು; ಅವನ ಬಳಿ “ಒಂದು ಕತ್ತಿ ಇತ್ತು; ಅದನ್ನು ಅವನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು.” (ಯೋಹಾನ 18:​3-5, 10) ಲೂಕ ಪುಸ್ತಕದಲ್ಲಿರುವ ಸಮಾಂತರ ವೃತ್ತಾಂತವು, ಯೇಸು ‘ಅವನ ಕಿವಿಯನ್ನು ಮುಟ್ಟಿ ಅವನಿಗೆ ವಾಸಿಮಾಡಿದನು’ ಎಂದು ನಮಗೆ ತಿಳಿಸುತ್ತದೆ. (ಲೂಕ 22:​50, 51) ಪುನಃ, ಈ ದಯಾಭರಿತ ಕ್ರಿಯೆಯು ಯೇಸುವಿನ ಸ್ನೇಹಿತರು ಹಾಗೂ ವೈರಿಗಳ​—ಈ ಸಂದರ್ಭದಲ್ಲಿ, ಅವನನ್ನು ಸೆರೆಹಿಡಿದವರ​—ಮುಂದೆಯೇ ನಡೆಸಲ್ಪಟ್ಟಿತು.

ಹೌದು, ಯೇಸುವಿನ ಅದ್ಭುತಕಾರ್ಯಗಳನ್ನು ನಾವು ನಿಕಟವಾಗಿ ಗಮನಿಸಿದಷ್ಟೂ, ಅವುಗಳ ವಿಶ್ವಾಸಾರ್ಹತೆಯ ಸ್ಪಷ್ಟವಾದ ಗುರುತುಗಳನ್ನು ನಾವು ಹೆಚ್ಚು ವಿವೇಚಿಸಿ ತಿಳಿದುಕೊಳ್ಳುತ್ತೇವೆ. (2 ತಿಮೊಥೆಯ 3:16) ಮತ್ತು ಈ ಮುಂಚೆ ತಿಳಿಸಲ್ಪಟ್ಟಂತೆ, ಇಂತಹ ಅಧ್ಯಯನವು, ವಿಧೇಯ ಮಾನವಕುಲವನ್ನು ವಾಸಿಮಾಡುವ ದೇವರ ವಾಗ್ದಾನದಲ್ಲಿನ ನಮ್ಮ ನಂಬಿಕೆಯನ್ನು ಬಲಪಡಿಸಬೇಕು. ಬೈಬಲು ಕ್ರೈಸ್ತ ನಂಬಿಕೆಯ ಅರ್ಥನಿರೂಪಿಸುತ್ತಾ ಹೇಳುವುದು, “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” (ಓರೆ ಅಕ್ಷರಗಳು ನಮ್ಮವು.) (ಇಬ್ರಿಯ 11:1) ದೇವರು ಕುರುಡು ನಂಬಿಕೆಯನ್ನಾಗಲಿ ಆ ನಿರೀಕ್ಷೆಗಳು ನೆರವೇರಿದರೆ ಎಷ್ಟು ಒಳ್ಳೇದಿತ್ತೆಂದು ಕೇವಲ ಹಾರೈಸುತ್ತಾ ಇರುವುದನ್ನಾಗಲಿ ಉತ್ತೇಜಿಸುವುದಿಲ್ಲ, ಬದಲಾಗಿ ರುಜುವಾತಿನ ಮೇಲೆ ಕಟ್ಟಲ್ಪಟ್ಟ ಬಲವಾದ ನಂಬಿಕೆಯನ್ನು ಉತ್ತೇಜಿಸುತ್ತಾನೆ ಎಂಬುದಂತೂ ಸ್ಪಷ್ಟ. (1 ಯೋಹಾನ 4:1) ನಾವು ಅಂತಹ ನಂಬಿಕೆಯನ್ನು ಬೆಳೆಸಿಕೊಳ್ಳುವಾಗ, ನಾವು ಆತ್ಮಿಕವಾಗಿ ಹೆಚ್ಚು ಬಲಿಷ್ಠರೂ, ಹೆಚ್ಚು ಆರೋಗ್ಯವಂತರೂ, ಹೆಚ್ಚು ಸಂತೋಷಿತರೂ ಆಗಿರುವುದು ನಮ್ಮ ಅರಿವಿಗೆ ಬರುತ್ತದೆ.​—ಮತ್ತಾಯ 5:3; ರೋಮಾಪುರ 10:17.

ಆತ್ಮಿಕ ವಾಸಿಮಾಡುವಿಕೆಯು ಪ್ರಥಮವಾಗಿರಬೇಕು!

ಶಾರೀರಿಕವಾಗಿ ಆರೋಗ್ಯವಂತರಾಗಿರುವ ಅನೇಕರು ಅಸಂತೋಷಿಗಳಾಗಿದ್ದಾರೆ. ಭವಿಷ್ಯತ್ತಿಗಾಗಿ ಅವರಿಗೆ ಯಾವುದೇ ನಿರೀಕ್ಷೆ ಇಲ್ಲದ ಕಾರಣ ಅಥವಾ ಸಮಸ್ಯೆಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದೇವೆ ಎಂದು ಅವರಿಗೆ ಅನಿಸುವ ಕಾರಣದಿಂದಾಗಿ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ಕಾರ್ಯತಃ ಅವರು ಆತ್ಮಿಕವಾಗಿ ಅಂಗವಿಕಲರಾಗಿದ್ದಾರೆ; ದೇವರ ದೃಷ್ಟಿಯಲ್ಲಿ ಇದು ಒಂದು ಶಾರೀರಿಕ ಅಂಗವಿಕಲತೆಗಿಂತಲೂ ಹೆಚ್ಚು ಗಂಭೀರವಾದ ಪರಿಸ್ಥಿತಿಯಾಗಿದೆ. (ಯೋಹಾನ 9:41) ಇನ್ನೊಂದು ಕಡೆಯಲ್ಲಿ, ಹಿಂದಿನ ಲೇಖನದಲ್ಲಿ ತಿಳಿಸಲಾದಂಥ ಕ್ರಿಸ್‌ಚನ್‌ ಹಾಗೂ ಜೂನ್ಯರ್‌ರಂತೆ ಶಾರೀರಿಕವಾಗಿ ಅಂಗವಿಕಲರಾಗಿರುವ ಅನೇಕರು, ಸಂತೋಷದಿಂದ ಜೀವಿಸುತ್ತಾರೆ ಹಾಗೂ ಸಾರ್ಥಕವಾದ ಜೀವನಗಳನ್ನು ನಡೆಸುತ್ತಿದ್ದಾರೆ. ಏಕೆ? ಏಕೆಂದರೆ ಅವರು ಆತ್ಮಿಕವಾಗಿ ಆರೋಗ್ಯವಂತರಾಗಿದ್ದಾರೆ ಮತ್ತು ಬೈಬಲಿನ ಮೇಲಾಧಾರಿತವಾದ ನಿಶ್ಚಿತ ನಿರೀಕ್ಷೆಯಿಂದ ಶಕ್ತಿಯನ್ನು ಪಡೆದುಕೊಂಡಿದ್ದಾರೆ.

ಮಾನವರಾಗಿರುವ ನಮ್ಮ ಅಪೂರ್ವ ಆವಶ್ಯಕತೆಯನ್ನು ಸೂಚಿಸುತ್ತಾ ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4) ಹೌದು, ಪ್ರಾಣಿಗಳಿಗೆ ಅಸದೃಶವಾಗಿ, ಮಾನವರಿಗೆ ಭೌತಿಕ ಪೋಷಣೆಗಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ನಾವು ದೇವರ “ಸ್ವರೂಪದಲ್ಲಿ” ಉಂಟುಮಾಡಲ್ಪಟ್ಟಿರುವುದರಿಂದ, ನಮಗೆ ಆತ್ಮಿಕ ಆಹಾರದ ಆವಶ್ಯಕತೆಯಿದೆ; ಅಂದರೆ ದೇವರ ಕುರಿತಾದ ಜ್ಞಾನ ಹಾಗೂ ಆತನ ಉದ್ದೇಶದಲ್ಲಿ ಮತ್ತು ಆತನ ಚಿತ್ತವನ್ನು ಮಾಡುವುದರಲ್ಲಿ ನಾವು ಹೇಗೆ ಹೊಂದಿಕೊಳ್ಳುತ್ತೇವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. (ಆದಿಕಾಂಡ 1:27; ಯೋಹಾನ 4:34) ದೇವರ ಜ್ಞಾನವು, ನಮ್ಮ ಜೀವಿತಗಳು ಉದ್ದೇಶದಿಂದ ಹಾಗೂ ಆತ್ಮಿಕ ಹುರುಪಿನಿಂದ ತುಂಬಿರುವಂತೆ ಮಾಡುತ್ತದೆ. ಒಂದು ಪರದೈಸ ಭೂಮಿಯಲ್ಲಿ ನಿತ್ಯವಾದ ಜೀವನಕ್ಕೆ ತಳಪಾಯವನ್ನೂ ಹಾಕುತ್ತದೆ. ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—ಯೋಹಾನ 17:3.

ಯೇಸುವಿನ ಸಮಕಾಲೀನರು ಅವನನ್ನು “ವಾಸಿಮಾಡುವವನು” ಎಂದು ಕರೆಯಲಿಲ್ಲ, ಬದಲಾಗಿ ‘ಬೋಧಕನು’ ಎಂದು ಕರೆದರು ಎಂಬುದು ಗಮನಾರ್ಹವಾದ ಅಂಶವಾಗಿದೆ. (ಲೂಕ 3:​12, NW; ಲೂಕ 7:40) ಏಕೆ? ಏಕೆಂದರೆ ಮಾನವಕುಲದ ಸಮಸ್ಯೆಗಳಿಗಿರುವ ಶಾಶ್ವತ ಪರಿಹಾರದ ಕುರಿತು, ಅಂದರೆ ದೇವರ ರಾಜ್ಯದ ಕುರಿತು ಯೇಸು ಜನರಿಗೆ ಬೋಧಿಸಿದನು. (ಲೂಕ 4:43; ಯೋಹಾನ 6:​26, 27) ಯೇಸು ಕ್ರಿಸ್ತನ ವಶದಲ್ಲಿರುವ ಈ ಸ್ವರ್ಗೀಯ ಸರಕಾರವು, ಇಡೀ ಭೂಮಿಯ ಮೇಲೆ ಆಳ್ವಿಕೆ ನಡಿಸುವುದು ಮತ್ತು ನೀತಿಭರಿತ ಮಾನವರು ಹಾಗೂ ಅವರ ಭೂಗೃಹದ ಸಂಪೂರ್ಣ ಹಾಗೂ ಶಾಶ್ವತವಾದ ಪುನಸ್ಸ್ಥಾಪನೆಯ ಕುರಿತಾದ ಎಲ್ಲ ಬೈಬಲ್‌ ವಾಗ್ದಾನಗಳನ್ನು ನೆರವೇರಿಸುವುದು. (ಪ್ರಕಟನೆ 11:15) ಆದುದರಿಂದಲೇ ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ, ರಾಜ್ಯದ ಬರೋಣವನ್ನು ದೇವರ ಚಿತ್ತವು ಭೂಮಿಯಲ್ಲಿ ಮಾಡಲ್ಪಡುವುದರೊಂದಿಗೆ ಸಂಬಂಧಿಸಿದನು.​—ಮತ್ತಾಯ 6:10.

ಅನೇಕ ಅಂಗವಿಕಲ ವ್ಯಕ್ತಿಗಳಿಗಾದರೋ, ಈ ಪ್ರೇರಿತ ನಿರೀಕ್ಷೆಯ ಕುರಿತು ಕಲಿಯುವುದು, ಅವರ ದುಃಖದ ಕಣ್ಣೀರನ್ನು ಆನಂದಬಾಷ್ಪವಾಗಿ ಬದಲಾಯಿಸಿದೆ. (ಲೂಕ 6:21) ವಾಸ್ತವದಲ್ಲಿ, ದೇವರು ಕೇವಲ ಅಸ್ವಸ್ಥತೆ ಮತ್ತು ಅಂಗವಿಕಲತೆಯನ್ನು ತೆಗೆದುಹಾಕುವುದಕ್ಕಿಂತಲೂ ಹೆಚ್ಚನ್ನು ಮಾಡುವನು; ಆತನು ಮಾನವ ಕಷ್ಟಾನುಭವದ ಮೂಲವಾಗಿರುವ ಪಾಪವನ್ನೇ ಇಲ್ಲದಂತೆಮಾಡುವನು. ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಯೆಶಾಯ 33:24 ಮತ್ತು ಮತ್ತಾಯ 9:​2-7, ಅಸ್ವಸ್ಥತೆಯನ್ನು ನಮ್ಮ ಪಾಪಪೂರ್ಣ ಸ್ಥಿತಿಯೊಂದಿಗೆ ಸಂಬಂಧಿಸುತ್ತದೆ. (ರೋಮಾಪುರ 5:12) ಆದುದರಿಂದ, ಪಾಪವನ್ನು ಜಯಿಸುವುದರೊಂದಿಗೆ, ಮಾನವಕುಲವು ಕಟ್ಟಕಡೆಗೆ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ,” ಅಂದರೆ ಮನಸ್ಸು ಹಾಗೂ ದೇಹದ ಪರಿಪೂರ್ಣತೆಯನ್ನು ಒಳಗೂಡಿರುವ ವಿಮೋಚನೆಯಲ್ಲಿ ಆನಂದಿಸುವುದು.​—ರೋಮಾಪುರ 8:21.

ಸಾಕಷ್ಟು ಒಳ್ಳೇ ಆರೋಗ್ಯವಿರುವವರು, ತಮ್ಮ ಒಳ್ಳೇ ಆರೋಗ್ಯದ ಮೌಲ್ಯವನ್ನು ಸುಲಭವಾಗಿ ಅಲಕ್ಷಿಸಸಾಧ್ಯವಿದೆ. ಆದರೆ ಅಂಗವಿಕಲತೆಗಳ ನೋವನ್ನು ಅನುಭವಿಸುತ್ತಿರುವವರು ಈ ರೀತಿ ಇರುವುದಿಲ್ಲ. ಆರೋಗ್ಯ ಮತ್ತು ಜೀವನವು ಎಷ್ಟು ಅಮೂಲ್ಯವಾದದ್ದಾಗಿದೆ, ಹಾಗೂ ವಿಷಯಗಳು ಇದ್ದಕ್ಕಿದ್ದಂತೆ ಮತ್ತು ಎಷ್ಟು ಅನಿರೀಕ್ಷಿತವಾಗಿ ಬದಲಾಗಬಲ್ಲವು ಎಂಬುದು ಅವರಿಗೆ ಗೊತ್ತು. (ಪ್ರಸಂಗಿ 9:11) ಆದುದರಿಂದ, ನಮ್ಮ ವಾಚಕರ ಮಧ್ಯೆ ಇರುವ ಅಂಗವಿಕಲರು, ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವಂಥ ದೇವರ ಅದ್ಭುತಕರ ವಾಗ್ದಾನಗಳಿಗೆ ವಿಶೇಷ ಪರಿಗಣನೆಯನ್ನು ನೀಡಲಿ ಎಂಬುದು ನಮ್ಮ ಆಶಯವಾಗಿದೆ. ಈ ವಾಗ್ದಾನಗಳ ನೆರವೇರಿಕೆಯನ್ನು ಖಚಿತಪಡಿಸಲಿಕ್ಕಾಗಿ ಯೇಸು ತನ್ನ ಜೀವವನ್ನೇ ಕೊಟ್ಟನು. ಇದಕ್ಕಿಂತ ಉತ್ತಮವಾದ ಯಾವ ಖಾತ್ರಿಯು ನಮಗೆ ಇರಸಾಧ್ಯವಿದೆ?​—ಮತ್ತಾಯ 8:​16, 17; ಯೋಹಾನ 3:16.

[ಪಾದಟಿಪ್ಪಣಿ]

^ ಪ್ಯಾರ. 6 ದೇವರು ಕಷ್ಟಾನುಭವವನ್ನು ಏಕೆ ಅನುಮತಿಸಿದ್ದಾನೆ ಎಂಬುದರ ಕುರಿತಾದ ವಿವರಣಾತ್ಮಕ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರನ್ನು ನೋಡಿರಿ.