ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ಮಗನು ತನ್ನ ತಂದೆಗೆ ಸಹಾಯಮಾಡಿದ ವಿಧ

ಒಬ್ಬ ಮಗನು ತನ್ನ ತಂದೆಗೆ ಸಹಾಯಮಾಡಿದ ವಿಧ

ಒಬ್ಬ ಮಗನು ತನ್ನ ತಂದೆಗೆ ಸಹಾಯಮಾಡಿದ ವಿಧ

ಗ್ಲೆಂಡ್‌ನ ಜೇಮ್ಸ್‌ ಎಂಬವನು ತನ್ನ 30ಗಳ ಆರಂಭದ ಪ್ರಾಯದಲ್ಲಿದ್ದಾನೆ. ಅವನಿಗೆ ಗಂಭೀರವಾದ ಮಾನಸಿಕ ಅಂಗವಿಕಲತೆಗಳಿವೆ ಮತ್ತು ಸ್ವಲೀನತೆಯ ಸಮಸ್ಯೆಯಿದೆ. ಆದರೂ, ಅನೇಕ ವರ್ಷಗಳಿಂದ ಅವನು ತನ್ನ ತಾಯಿ ಹಾಗೂ ಅಕ್ಕನ ಜೊತೆ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಿದ್ದಾನೆ. ಇಷ್ಟಾದರೂ, ಇವನ ತಂದೆಯು ಇವರ ನಂಬಿಕೆಗಳಲ್ಲಿ ಎಂದೂ ಹೆಚ್ಚಿನ ಆಸಕ್ತಿಯನ್ನು ತೋರಿಸಿರಲಿಲ್ಲ. ಒಂದು ದಿನ ಸಾಯಂಕಾಲ, ಒಂದು ಕೂಟದಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಪರಿಚಯಸ್ಥರನ್ನು ಹೇಗೆ ಆಮಂತ್ರಿಸುವುದು ಎಂಬ ಪ್ರತ್ಯಕ್ಷಾಭಿನಯವನ್ನು ನೋಡಿದ ಬಳಿಕ, ಜೇಮ್ಸ್‌ ಬೇಗನೆ ತನ್ನ ಕೋಣೆಗೆ ಹೋದನು. ಕುತೂಹಲದಿಂದ ಅವನ ತಾಯಿಯು ಅವನನ್ನು ಹಿಂಬಾಲಿಸಿ ಹೋದಾಗ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ಅವನು ಉದ್ರೇಕದಿಂದ ವಿಂಗಡಿಸುತ್ತಿರುವುದು ಕಣ್ಣಿಗೆ ಬಿತ್ತು. ಕೊನೇ ಪುಟದಲ್ಲಿ ಜ್ಞಾಪಕಾಚರಣೆಯ ಆಮಂತ್ರಣ ಪತ್ರದ ನಕಲು ಪ್ರತಿಯಿದ್ದ ಒಂದು ಪತ್ರಿಕೆಯನ್ನು ಆರಿಸಿಕೊಂಡು, ತನ್ನ ತಂದೆಯ ಬಳಿಗೆ ಧಾವಿಸಿದನು. ಮೊದಲು ಅವನು ಆ ಚಿತ್ರದ ಕಡೆಗೆ ಕೈತೋರಿಸಿ, ನಂತರ ತನ್ನ ತಂದೆಯ ಕಡೆ ನೋಡಿ “ನೀವು!” ಎಂದು ಹೇಳಿದನು. ಅವನ ತಾಯಿ ಹಾಗೂ ತಂದೆ ಆಶ್ಚರ್ಯದಿಂದ ಪರಸ್ಪರ ಮುಖ ನೋಡಿಕೊಂಡರು ಮತ್ತು ಜೇಮ್ಸ್‌ ತನ್ನ ತಂದೆಯನ್ನು ಜ್ಞಾಪಕಾಚರಣೆಗೆ ಆಮಂತ್ರಿಸುತ್ತಿದ್ದಾನೆ ಎಂಬುದನ್ನು ಗ್ರಹಿಸಿದರು. ನಾನು ಆ ಕೂಟಕ್ಕೆ ಬರಲೂಬಹುದು, ಬಾರದಿರಲೂಬಹುದು ಎಂದು ತಂದೆಯವರು ಹೇಳಿದರು.

ಜ್ಞಾಪಕಾಚರಣೆಯ ದಿನ ಸಾಯಂಕಾಲ, ಜೇಮ್ಸ್‌ ತನ್ನ ತಂದೆಯ ಕಪಾಟಿನ ಬಳಿಗೆ ಹೋಗಿ, ಒಂದು ಪ್ಯಾಂಟನ್ನು ಆರಿಸಿಕೊಂಡು, ಅದನ್ನು ತನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, ಅವರು ಇದನ್ನು ಧರಿಸುವಂತೆ ಅಭಿನಯಿಸಿ ತೋರಿಸಿದನು. ಆಗ, ತಾನು ಕೂಟಕ್ಕೆ ಬರುವುದಿಲ್ಲ ಎಂದು ಅವನ ತಂದೆ ಉತ್ತರಿಸಿದನು. ಹೀಗೆ, ಜೇಮ್ಸ್‌ ಹಾಗೂ ಅವನ ತಾಯಿ ಮಾತ್ರ ರಾಜ್ಯ ಸಭಾಗೃಹಕ್ಕೆ ಹೊರಟರು.

ಆದರೆ, ಸ್ವಲ್ಪ ಸಮಯಾನಂತರ, ಕ್ರೈಸ್ತ ಕೂಟಗಳಿಗೆ ಹಾಜರಾಗಲು ಜೇಮ್ಸ್‌ನನ್ನು ಅವನ ತಾಯಿ ಸಿದ್ದಗೊಳಿಸಲು ಪ್ರಯತ್ನಿಸಿದಾಗೆಲ್ಲ, ಅವನು ಹೆಚ್ಚೆಚ್ಚು ಅಸಹಕಾರವನ್ನು ತೋರಿಸತೊಡಗಿದನು. ಅಷ್ಟುಮಾತ್ರವಲ್ಲ, ತನ್ನ ತಂದೆಯೊಂದಿಗೆ ಮನೆಯಲ್ಲೇ ಉಳಿಯುವ ಆಯ್ಕೆಮಾಡುತ್ತಿದ್ದನು. ತದನಂತರ ಒಂದು ಭಾನುವಾರ ಬೆಳಗ್ಗೆ, ಜೇಮ್ಸ್‌ನ ತಾಯಿ ಕೂಟಕ್ಕಾಗಿ ಅವನನ್ನು ಸಿದ್ಧಪಡಿಸಲು ಪ್ರಯತ್ನಿಸಿದಾಗ, ಪುನಃ ಅವನು ಸಹಕರಿಸಲು ನಿರಾಕರಿಸಿದನು. ಆದರೆ ಅವಳ ಆಶ್ಚರ್ಯಕ್ಕೆ, ಜೇಮ್ಸ್‌ನ ತಂದೆ ಅವನ ಕಡೆಗೆ ತಿರುಗಿ ಹೇಳಿದ್ದು: “ಜೇಮ್ಸ್‌, ಒಂದುವೇಳೆ ಇವತ್ತು ನಾನು ಕೂಟಕ್ಕೆ ಹೋಗುವುದಾದರೆ, ನೀನು ಸಹ ಹೋಗುತ್ತೀಯಾ?” ಜೇಮ್ಸ್‌ನ ಮುಖವು ಅರಳಿತು. ಅವನು ತನ್ನ ತಂದೆಯನ್ನು ತಬ್ಬಿಕೊಂಡು, “ಹೌದು!” ಎಂದು ಹೇಳಿದನು ಮತ್ತು ಮೂವರೂ ಒಟ್ಟುಗೂಡಿ ರಾಜ್ಯ ಸಭಾಗೃಹಕ್ಕೆ ಹೋದರು.

ಅಂದಿನಿಂದ, ಜೇಮ್ಸನ ತಂದೆಯು ಭಾನುವಾರದ ಎಲ್ಲ ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಿದನು ಮತ್ತು ತಾನು ಪ್ರಗತಿಯನ್ನು ಮಾಡಬೇಕಾಗಿದ್ದಲ್ಲಿ, ಇತರ ಕೂಟಗಳಿಗೂ ಹಾಜರಾಗಬೇಕು ಎಂದು ಘೋಷಿಸಿದನು. (ಇಬ್ರಿಯ 10:​24, 25) ಅವನು ಎಲ್ಲ ಕೂಟಗಳಿಗೆ ಹಾಜರಾಗತೊಡಗಿದನು, ಮತ್ತು ಎರಡು ತಿಂಗಳುಗಳ ಬಳಿಕ ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡಲಾರಂಭಿಸಿದನು. ಅವನು ಅತಿ ಬೇಗನೆ ಪ್ರಗತಿಯನ್ನು ಮಾಡಿದನು, ತನ್ನ ಜೀವನದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಿದನು, ಮತ್ತು ಸ್ವಲ್ಪ ಸಮಯದಲ್ಲೇ ರಾಜ್ಯ ಸಾರುವಿಕೆಯ ಕೆಲಸದಲ್ಲಿ ಒಳಗೂಡಲು ಆರಂಭಿಸಿದನು. ಅವನು ಬೈಬಲ್‌ ಅಧ್ಯಯನವನ್ನು ಆರಂಭಿಸಿದ ಒಂದು ವರ್ಷದ ನಂತರ, ಅವನು ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡನು ಮತ್ತು ಇದನ್ನು ನೀರಿನಲ್ಲಿ ಮುಳುಗಿ ಏಳುವ ಮೂಲಕ ಸಂಕೇತಿಸಿದನು. ಪ್ರಸ್ತುತ ಇವನು ತನ್ನ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಿದ್ದಾನೆ. ಈಗ ಕುಟುಂಬದಲ್ಲಿರುವ ಎಲ್ಲರೂ ಐಕ್ಯಭಾವದಿಂದ ಯೆಹೋವನ ಸೇವೆಮಾಡುತ್ತಿದ್ದಾರೆ.