ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಆವಶ್ಯಕತೆಗಳನ್ನು ಪೂರೈಸುವುದು ಯೆಹೋವನನ್ನು ಘನಪಡಿಸುತ್ತದೆ

ದೈವಿಕ ಆವಶ್ಯಕತೆಗಳನ್ನು ಪೂರೈಸುವುದು ಯೆಹೋವನನ್ನು ಘನಪಡಿಸುತ್ತದೆ

ದೈವಿಕ ಆವಶ್ಯಕತೆಗಳನ್ನು ಪೂರೈಸುವುದು ಯೆಹೋವನನ್ನು ಘನಪಡಿಸುತ್ತದೆ

“ನಾನು . . . ದೇವರ ನಾಮವನ್ನು . . . ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.”​—ಕೀರ್ತನೆ 69:30.

1. (ಎ) ಯೆಹೋವನು ಘನಾರ್ಹನಾಗಿರುವುದು ಏಕೆ? (ಬಿ) ನಾವು ಕೃತಜ್ಞತಾಸ್ತುತಿಯಿಂದ ಅವನನ್ನು ಘನಪಡಿಸುವುದು ಹೇಗೆ?

ಯೆಹೋವನು ಸರ್ವಶಕ್ತನೂ ವಿಶ್ವದ ಪರಮಾಧಿಕಾರಿಯೂ ಸೃಷ್ಟಿಕರ್ತನೂ ಆಗಿದ್ದಾನೆ. ಹಾಗಿರುವುದರಿಂದ ಆತನ ನಾಮ ಮತ್ತು ಉದ್ದೇಶಗಳು ಘನಾರ್ಹವಾಗಿವೆ. ಯೆಹೋವನನ್ನು ಘನಪಡಿಸುವುದೆಂದರೆ ಆತನನ್ನು ಅತ್ಯಂತ ಗೌರವದಿಂದ ಕಾಣುವುದು, ಆತನನ್ನು ನಡೆನುಡಿಗಳಿಂದ ಶ್ಲಾಘಿಸಿ ಕೊಂಡಾಡುವುದೆಂದು ಅರ್ಥ. ಮತ್ತು “ಕೃತಜ್ಞತಾಸ್ತುತಿಯಿಂದ” ಘನಪಡಿಸುವುದೆಂದರೆ, ಆತನು ನಮಗಾಗಿ ಈಗ ಏನು ಮಾಡಿರುತ್ತಾನೊ ಅದಕ್ಕಾಗಿ ಮತ್ತು ಭವಿಷ್ಯತ್ತಿನಲ್ಲಿ ಏನು ಮಾಡಲಿದ್ದಾನೊ ಅದಕ್ಕಾಗಿ ಸದಾ ಕೃತಜ್ಞರಾಗಿರಬೇಕೆಂದು ಅರ್ಥ. ನಮಗಿರಬೇಕಾದ ಮನೋಭಾವವನ್ನು ಪ್ರಕಟನೆ 4:11ರಲ್ಲಿ ತೋರಿಸಲಾಗಿದೆ. ಅಲ್ಲಿ, ಸ್ವರ್ಗದಲ್ಲಿರುವ ನಂಬಿಗಸ್ತ ಆತ್ಮಿಕ ಜೀವಿಗಳು ಹೀಗೆ ಪ್ರಕಟಿಸುತ್ತವೆ: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ನಾವು ಯೆಹೋವನನ್ನು ಘನಪಡಿಸುವುದು ಹೇಗೆ? ಆತನ ಕುರಿತು ಕಲಿತು ಬಳಿಕ ಆತನು ನಮ್ಮಿಂದ ಅಪೇಕ್ಷಿಸುವಂಥದ್ದನ್ನು ಮಾಡುವ ಮೂಲಕವೇ. ಕೀರ್ತನೆಗಾರನ ಅನಿಸಿಕೆಯೇ ನಮ್ಮ ಅನಿಸಿಕೆಯೂ ಆಗಿರಬೇಕು. ಆತನು ಹೇಳಿದ್ದು: “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?”​—ಕೀರ್ತನೆ 143:10.

2. ಯೆಹೋವನು ತನ್ನನ್ನು ಘನಪಡಿಸುವವರೊಂದಿಗೂ ಘನಪಡಿಸದವರೊಂದಿಗೂ ಹೇಗೆ ವ್ಯವಹರಿಸುವನು?

2 ಯೆಹೋವನು ತನ್ನನ್ನು ಘನಪಡಿಸುವವರನ್ನು ಮಾನ್ಯಮಾಡುತ್ತಾನೆ. ಆ ಕಾರಣದಿಂದಲೇ, “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಆತನ ವಿಷಯದಲ್ಲಿ ಹೇಳಲಾಗಿದೆ. (ಇಬ್ರಿಯ 11:6) ಆ ಪ್ರತಿಫಲವೇನು? ಯೇಸು ಸ್ವರ್ಗದಲ್ಲಿರುವ ತನ್ನ ತಂದೆಗೆ ಪ್ರಾರ್ಥಿಸಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, “[ಯೆಹೋವನನ್ನು] ಕೃತಜ್ಞತಾಸ್ತುತಿಯಿಂದ ಘನಪಡಿಸುವ” ಜನರು “ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ತದ್ವಿರುದ್ಧವಾಗಿ, “ಕೆಟ್ಟವನಿಗೆ ಶುಭಕಾಲವು ಬಾರದು.” (ಜ್ಞಾನೋಕ್ತಿ 24:20) ಮತ್ತು ಈ ಕಡೇ ದಿವಸಗಳಲ್ಲಿ, ಯೆಹೋವನನ್ನು ಘನಪಡಿಸುವ ವಿಷಯವು ತುರ್ತಿನದ್ದಾಗಿದೆ, ಏಕೆಂದರೆ ಆತನು ಶೀಘ್ರವೇ ದುಷ್ಟರನ್ನು ನಾಶಗೊಳಿಸಿ ನೀತಿವಂತರನ್ನು ಜೀವದಿಂದ ಉಳಿಸುವನು. “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—1 ಯೋಹಾನ 2:17; ಜ್ಞಾನೋಕ್ತಿ 2:​21, 22.

3. ಮಲಾಕಿಯನ ಪುಸ್ತಕಕ್ಕೆ ನಾವೇಕೆ ಗಮನ ಕೊಡಬೇಕು?

3 ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತ’ವಾಗಿರುವುದರಿಂದ ಯೆಹೋವನ ಚಿತ್ತವು ಬೈಬಲಿನಲ್ಲಿ ಅಡಕವಾಗಿದೆ. (2 ತಿಮೊಥೆಯ 3:16) ಆ ದೇವರ ವಾಕ್ಯದಲ್ಲಿ, ತನ್ನನ್ನು ಘನಪಡಿಸುವವರನ್ನು ಯೆಹೋವನು ಹೇಗೆ ಆಶೀರ್ವದಿಸುತ್ತಾನೆಂಬ ಮತ್ತು ಘನಪಡಿಸದವರಿಗೆ ಏನು ಸಂಭವಿಸುತ್ತದೆಂಬುದರ ಬಗ್ಗೆ ಅನೇಕ ವೃತ್ತಾಂತಗಳಿವೆ. ಆ ವೃತ್ತಾಂತಗಳಲ್ಲಿ ಒಂದು, ಮಲಾಕಿಯ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲಿನಲ್ಲಿ ನಡೆದುದಕ್ಕೆ ಸಂಬಂಧಿಸಿರುತ್ತದೆ. ಸುಮಾರು ಸಾ.ಶ.ಪೂ. 443ರಲ್ಲಿ, ನೆಹೆಮೀಯನು ಯೆಹೂದದ ರಾಜ್ಯಪಾಲನಾಗಿದ್ದಾಗ ಮಲಾಕಿಯನು ತನ್ನ ಹೆಸರಿರುವ ಪುಸ್ತಕವನ್ನು ಬರೆದನು. ಈ ಶಕ್ತಿಯುತವೂ ಭಾವೋದ್ರೇಕಿತವೂ ಆಗಿರುವ ಪುಸ್ತಕದಲ್ಲಿ, “ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ” ಬರೆಯಲ್ಪಟ್ಟಿರುವ ಮಾಹಿತಿಯೂ ಪ್ರವಾದನೆಗಳೂ ಅಡಕವಾಗಿವೆ. (1 ಕೊರಿಂಥ 10:11) ಮತ್ತು ಮಲಾಕಿಯನ ಮಾತುಗಳಿಗೆ ನಾವು ಕೊಡುವ ಗಮನವು, “ಯೆಹೋವನ ಆಗಮನದ ಭಯಂಕರವಾದ ಮಹಾದಿನ”ದಲ್ಲಿ ಆತನು ಈ ದುಷ್ಟ ವ್ಯವಸ್ಥೆಯನ್ನು ನಾಶಮಾಡುವಾಗ ನಾವು ಬದುಕಿ ಉಳಿಯಲು ಸಿದ್ಧರಾಗಿರುವಂತೆ ಸಹಾಯಮಾಡಬಲ್ಲದು.​—ಮಲಾಕಿಯ 4:5.

4. ಮಲಾಕಿಯ 1ನೆಯ ಅಧ್ಯಾಯದಲ್ಲಿ ಯಾವ ಆರು ಅಂಶಗಳು ನಮ್ಮ ಗಮನಕ್ಕೆ ತರಲ್ಪಟ್ಟಿವೆ?

4 ಆದರೆ 2,400 ವರುಷಗಳಿಗೂ ಹೆಚ್ಚು ಹಿಂದೆ ಬರೆಯಲ್ಪಟ್ಟಿರುವ ಮಲಾಕಿಯನ ಪುಸ್ತಕವು, ಯೆಹೋವನ ಆ ಭಯಂಕರವಾದ ಮಹಾದಿನಕ್ಕೆ ನಾವು ಸಿದ್ಧರಾಗಿರುವಂತೆ ಈ 21ನೆಯ ಶತಮಾನದಲ್ಲಿ ನಮಗೆ ಸಹಾಯ ಮಾಡುವುದಾದರೂ ಹೇಗೆ? ಅದರ ಪ್ರಥಮ ಅಧ್ಯಾಯವು, ನಾವು ಯೆಹೋವನ ಅನುಗ್ರಹವನ್ನು ಮತ್ತು ನಿತ್ಯಜೀವವನ್ನು ಪಡೆಯುವ ಉದ್ದೇಶದಿಂದ ಆತನನ್ನು ಕೃತಜ್ಞತಾಸ್ತುತಿಯಿಂದ ಘನಪಡಿಸಲು ನಿರ್ಣಾಯಕವಾಗಿರುವ ಕಡಮೆ ಪಕ್ಷ ಆರು ಅಂಶಗಳಿಗಾದರೂ ನಮ್ಮ ಗಮನವನ್ನು ಸೆಳೆಯುತ್ತದೆ: (1) ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. (2) ನಾವು ಪವಿತ್ರ ವಿಷಯಗಳಿಗೆ ಗಣ್ಯತೆ ತೋರಿಸತಕ್ಕದ್ದು. (3) ನಾವು ನಮ್ಮ ಅತ್ಯುತ್ತಮವಾದದ್ದನ್ನು ಕೊಡಬೇಕೆಂದು ಯೆಹೋವನು ನಿರೀಕ್ಷಿಸುತ್ತಾನೆ. (4) ಸತ್ಯಾರಾಧನೆಯು ಲೋಭದಿಂದಲ್ಲ, ನಿಸ್ವಾರ್ಥವಾದ ಪ್ರೀತಿಯಿಂದ ಪ್ರಚೋದಿಸಲ್ಪಡುತ್ತದೆ. (5) ದೇವರಿಗೆ ನೀಡುವ ಸ್ವೀಕಾರಾರ್ಹವಾದ ಸೇವೆಯು ಹೊರೆಯಾಗಿರುವ ಬಾಹ್ಯೋಪಚಾರವಾಗಿರುವುದಿಲ್ಲ. (6) ನಮ್ಮಲ್ಲಿ ಪ್ರತಿಯೊಬ್ಬನು ದೇವರಿಗೆ ಲೆಕ್ಕವನ್ನು ಒಪ್ಪಿಸತಕ್ಕದ್ದು. ಆದುದರಿಂದ, ಮಲಾಕಿಯ ಪುಸ್ತಕದ ಕುರಿತಾದ ಮೂರು ಲೇಖನಗಳಲ್ಲಿ ಮೊದಲನೆಯದಾಗಿರುವ ಈ ಲೇಖನದಲ್ಲಿ, ಮಲಾಕಿಯ 1ನೆಯ ಅಧ್ಯಾಯವನ್ನು ನಾವು ಪರೀಕ್ಷಿಸುವಾಗ ಆ ಅಂಶಗಳಲ್ಲಿ ಪ್ರತಿಯೊಂದನ್ನು ಪರಿಗಣಿಸೋಣ.

ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ

5, 6. (ಎ) ಯೆಹೋವನು ಯಾಕೋಬನನ್ನು ಪ್ರೀತಿಸಿದ್ದೇಕೆ? (ಬಿ) ನಾವು ಯಾಕೋಬನ ನಂಬಿಗಸ್ತಿಕೆಯನ್ನು ಅನುಕರಿಸುವಲ್ಲಿ ಏನು ನಿರೀಕ್ಷಿಸಬಲ್ಲೆವು?

5 ಮಲಾಕಿಯನ ಪುಸ್ತಕದ ಆರಂಭದ ವಚನಗಳಲ್ಲಿ ಯೆಹೋವನ ಪ್ರೀತಿಯನ್ನು ಸ್ಪಷ್ಟಗೊಳಿಸಲಾಗಿದೆ. ಈ ಪುಸ್ತಕವು ಹೀಗೆ ಆರಂಭಗೊಳ್ಳುತ್ತದೆ: “ಯೆಹೋವನು ಇಸ್ರಾಯೇಲನ್ನು ಕುರಿತು ಮಲಾಕಿಯ ಮೂಲಕ ನುಡಿದ ದೈವೋಕ್ತಿ.” ಇನ್ನೂ ಮುಂದುವರಿಸುತ್ತಾ ದೇವರು ಹೇಳುವುದು: “ನಾನು ನಿಮ್ಮನ್ನು ಪ್ರೀತಿಸಿದ್ದೇನೆ.” ಒಂದು ಉದಾಹರಣೆಯನ್ನು ಕೊಡುತ್ತ, 3ನೆಯ ವಚನದಲ್ಲಿ ಯೆಹೋವನು ಹೇಳುವುದು: ‘ನಾನು ಯಾಕೋಬನನ್ನು ಪ್ರೀತಿಸಿದ್ದೇನೆ.’ ಯಾಕೋಬನು ಯೆಹೋವನನ್ನು ನಂಬಿದ್ದ ಮನುಷ್ಯನಾಗಿದ್ದನು. ಸಮಯಾನಂತರ, ಯೆಹೋವನು ಯಾಕೋಬನ ಹೆಸರನ್ನು ಇಸ್ರಾಯೇಲ್‌ ಎಂಬ ಹೆಸರಿಗೆ ಬದಲಾಯಿಸಿದನು ಮತ್ತು ಹೀಗೆ ಯಾಕೋಬನು ಇಸ್ರಾಯೇಲ್‌ ಜನಾಂಗದ ಮೂಲಪುರುಷನಾಗಿ ಪರಿಣಮಿಸಿದನು. ಯೆಹೋವನು ಯಾಕೋಬನನ್ನು ಪ್ರೀತಿಸಿದ್ದು ಅವನು ನಂಬಿಕೆಯಿದ್ದ ಮನುಷ್ಯನಾಗಿದ್ದ ಕಾರಣವೇ. ಇಸ್ರಾಯೇಲ್ಯರಲ್ಲಿ ಯಾರು ಯೆಹೋವನ ಕಡೆಗೆ ಯಾಕೋಬನಿಗಿದ್ದ ಮನೋಭಾವವನ್ನು ತೋರಿಸಿದರೋ ಅವರನ್ನೂ ಯೆಹೋವನು ಪ್ರೀತಿಸಿದನು.​—ಮಲಾಕಿಯ 1:​1, 2.

6 ನಾವು ಯೆಹೋವನನ್ನು ಪ್ರೀತಿಸಿ ಆತನ ಜನರ ಸಂಗಡ ಅಂಟಿಕೊಂಡಿರುವಲ್ಲಿ 1 ಸಮುವೇಲ 12:22ರ ಹೇಳಿಕೆಯಿಂದ ಆದರಣೆಯನ್ನು ಪಡೆಯಬಲ್ಲೆವು: “ಯೆಹೋವನು . . . ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ.” ಯೆಹೋವನು ತನ್ನ ಜನರನ್ನು ಪ್ರೀತಿಸಿ ಅಂತಿಮವಾಗಿ ಅವರಿಗೆ ನಿತ್ಯಜೀವದ ಪ್ರತಿಫಲವನ್ನು ಕೊಡುತ್ತಾನೆ. ಆದುದರಿಂದಲೇ ನಾವು ಓದುವುದು: “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು. ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.” (ಕೀರ್ತನೆ 37:​3, 4) ನಾವು ಯೆಹೋವನನ್ನು ಪ್ರೀತಿಸುವುದರಲ್ಲಿ ಅಡಕವಾಗಿರುವ ಎರಡನೆಯ ಅಂಶವೊಂದನ್ನು ಮಲಾಕಿಯ 1ನೆಯ ಅಧ್ಯಾಯವು ನಮ್ಮ ಗಮನಕ್ಕೆ ತರುತ್ತದೆ.

ಪವಿತ್ರ ವಿಷಯಗಳಿಗೆ ಗಣ್ಯತೆ ತೋರಿಸಿರಿ

7. ಯೆಹೋವನು ಏಸಾವನನ್ನು ದ್ವೇಷಿಸಿದ್ದೇಕೆ?

7ಮಲಾಕಿಯ 1:3ರಲ್ಲಿ, “ನಾನು ಯಾಕೋಬನನ್ನು ಪ್ರೀತಿಸಿ ಏಸಾವನನ್ನು ದ್ವೇಷಿಸಿ”ದೆನು ಎಂದು ಯೆಹೋವನು ಹೇಳುತ್ತಾನೆ. ಈ ವ್ಯತ್ಯಾಸವೇಕೆ? ಏಕೆಂದರೆ ಯಾಕೋಬನು ಯೆಹೋವನನ್ನು ಘನಪಡಿಸಿದನು, ಆದರೆ ಅವನ ಅವಳಿ ಸೋದರನು ಹಾಗೆ ಮಾಡಲಿಲ್ಲ. ಏಸಾವನನ್ನು ಎದೋಮನೆಂದೂ ಕರೆಯಲಾಗಿದೆ. ಮಲಾಕಿಯ 1:4ರಲ್ಲಿ ಎದೋಮನ್ನು ದುಷ್ಟ ಪ್ರಾಂತವೆಂದು ಕರೆಯಲಾಗಿದ್ದು ಅದರ ನಿವಾಸಿಗಳನ್ನು ಖಂಡಿಸಲಾಗಿದೆ. ಎದೋಮ್‌ (ಕೆಂಪು) ಎಂಬ ಹೆಸರು ಏಸಾವನಿಗೆ ಕೊಡಲ್ಪಟ್ಟದ್ದು ಅವನು ತನ್ನ ಅಮೂಲ್ಯವಾದ ಜನ್ಮಹಕ್ಕನ್ನು ಸ್ವಲ್ಪ ಕೆಂಪು ಸಾರಿಗಾಗಿ ಯಾಕೋಬನಿಗೆ ಮಾರಿಬಿಟ್ಟ ಮೇಲೆಯೇ. “ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು,” ಎನ್ನುತ್ತದೆ ಆದಿಕಾಂಡ 25:34. ಅಪೊಸ್ತಲ ಪೌಲನು ಜೊತೆವಿಶ್ವಾಸಿಗಳಿಗೆ ಪ್ರೋತ್ಸಾಹಿಸಿದ್ದು: “ಜಾರನಾಗಲಿ ಏಸಾವನಂಥ ಪ್ರಾಪಂಚಿಕನಾಗಲಿ [“ಪವಿತ್ರ ವಿಷಯಗಳನ್ನು ಗಣ್ಯಮಾಡದವನಾಗಲಿ,” NW] ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು.”​—ಇಬ್ರಿಯ 12:​14-16.

8. ಪೌಲನು ಏಸಾವನನ್ನು ಜಾರನಿಗೆ ಹೋಲಿಸುವಂತೆ ಮಾಡಿದ್ದು ಯಾವುದು?

8 ಪೌಲನು ಏಸಾವನ ಕೃತ್ಯವನ್ನು ಜಾರತ್ವಕ್ಕೆ ಸಂಬಂಧಿಸಿದ್ದೇಕೆ? ಏಸಾವನಂಥ ಮನೋವೃತ್ತಿಯು ಒಬ್ಬ ವ್ಯಕ್ತಿಯನ್ನು ಪವಿತ್ರ ವಿಷಯಗಳಿಗೆ ಗಣ್ಯತೆ ತೋರಿಸದಂತೆ ನಡೆಸಸಾಧ್ಯವಿರುವುದರಿಂದಲೇ. ಮತ್ತು ಇದು ಸರದಿಯಾಗಿ, ಜಾರತ್ವದಂತಹ ಗಂಭೀರವಾದ ಪಾಪಗಳಿಗೆ ನಡೆಸಬಲ್ಲದು. ಆದಕಾರಣ, ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಕೇಳಿಕೊಳ್ಳಬಹುದು: ‘ನಾನು ಕೆಲವು ಸಂದರ್ಭಗಳಲ್ಲಿ ನನ್ನ ಕ್ರೈಸ್ತ ಬಾಧ್ಯತೆಯಾದ ನಿತ್ಯಜೀವವನ್ನು ಒಂದಿಷ್ಟು ರುಚಿಪದಾರ್ಥದಷ್ಟು ಕ್ಷಣಿಕವಾದ ವಿಷಯಗಳಿಗಾಗಿ ವಿನಿಮಯ ಮಾಡುವಂತೆ ಪ್ರೇರಿಸಲ್ಪಡುತ್ತೇನೊ? ಪ್ರಾಯಶಃ ಅರಿವಿಲ್ಲದೆ, ನಾನು ಪವಿತ್ರ ವಿಷಯಗಳನ್ನು ತಾತ್ಸಾರ ಮಾಡುತ್ತೇನೊ?’ ಏಸಾವನಿಗೆ ತನ್ನ ಶಾರೀರಿಕ ಆಸೆಯನ್ನು ತಣಿಸುವ ಸಹಿಸಲಸಾಧ್ಯವಾದ ಬಯಕೆಯಿತ್ತು. ಅವನು ಯಾಕೋಬನಿಗೆ, “ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವದಕ್ಕೆ ಕೊಡಪ್ಪಾ” ಎಂದು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಆದಿಕಾಂಡ 25:30) ದುಃಖಕರವಾದ ವಿಷಯವೇನಂದರೆ, ದೇವರ ಸೇವಕರಲ್ಲಿ ಕೆಲವರು ಕಾರ್ಯತಃ, “ನನಗೆ ಈಗಲೇ ಬೇಕು! ಗೌರವಾರ್ಹವಾದ ಮದುವೆಗಾಗಿ ಏಕೆ ಕಾಯಬೇಕು?” ಎಂದು ಹೇಳಿದ್ದಾರೆ. ಆಗಲಿರುವ ನಷ್ಟವು ಎಷ್ಟೇ ಆಗಿರಲಿ, ಲೈಂಗಿಕ ಆಸೆಯನ್ನು ತಣಿಸುವ ಬಯಕೆಯು ಅವರ ರುಚಿಪದಾರ್ಥವಾಗಿಬಿಟ್ಟಿದೆ.

9. ಯೆಹೋವನ ಕಡೆಗೆ ಪೂಜ್ಯವಾದ ಭಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು?

9 ಲೈಂಗಿಕ ಶುದ್ಧತೆ, ಸಮಗ್ರತೆ ಮತ್ತು ನಮ್ಮ ಆತ್ಮಿಕ ಬಾಧ್ಯತೆಯನ್ನು ಅಗೌರವಿಸುವ ಮೂಲಕ ನಾವು ಪವಿತ್ರ ವಿಷಯಗಳನ್ನು ತಾತ್ಸಾರ ಮಾಡದೆ ಇರೋಣ. ಏಸಾವನಂತೆ ಜೀವಿಸುವುದರ ಬದಲು ನಾವು ನಂಬಿಗಸ್ತ ಯಾಕೋಬನಂತೆ, ಪವಿತ್ರ ವಿಷಯಗಳಿಗೆ ಆಳವಾದ ಗಣ್ಯತೆಯನ್ನು ತೋರಿಸಿ ದೇವರ ಕಡೆಗೆ ನಮಗಿರುವ ಪೂಜ್ಯವಾದ ಭಯವನ್ನು ಕಾಪಾಡಿಕೊಳ್ಳುತ್ತ ಇರೋಣ. ನಾವು ಇದನ್ನು ಹೇಗೆ ಮಾಡಬಲ್ಲೆವು? ಯೆಹೋವನ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಜಾಗರೂಕತೆಯನ್ನು ತೋರಿಸಿಯೇ. ಇದು ನಮ್ಮನ್ನು ತರ್ಕಸಮ್ಮತವಾಗಿ ಮಲಾಕಿಯ 1ನೆಯ ಅಧ್ಯಾಯದ ಮೂರನೆಯ ವಿಷಯಕ್ಕೆ ನಡೆಸುತ್ತದೆ. ಅದೇನು?

ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವುದು

10. ಯಾಜಕರು ಯೆಹೋವನ ಮೇಜನ್ನು ಹೇಗೆ ತಾತ್ಸಾರ ಮಾಡುತ್ತಿದ್ದರು?

10 ಯೆರೂಸಲೇಮಿನ ದೇವಾಲಯದಲ್ಲಿ ಸೇವೆಮಾಡುತ್ತಿದ್ದ ಯೆಹೂದದ ಯಾಜಕರು ಅತ್ಯುತ್ತಮವಾದ ಯಜ್ಞಗಳನ್ನು ಅರ್ಪಿಸುತ್ತಿರಲಿಲ್ಲ. ಮಲಾಕಿಯ 1:​6-8 ಹೇಳುವುದು: “ನನ್ನ ನಾಮವನ್ನು ಧಿಕ್ಕರಿಸುವ [“ತಾತ್ಸಾರ ಮಾಡುತ್ತಿರುವ,” NW] ಯಾಜಕರೇ, ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಆಳು ದಣಿಗೆ ಭಯಭಕ್ತಿತೋರಿಸುತ್ತಾನಷ್ಟೆ; ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ; ದಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು​—ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ [“ತಾತ್ಸಾರ ಮಾಡಿದ್ದೇವೆ,” NW] ಅನ್ನುತೀರಿ. ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. ಯಾವ ವಿಷಯದಲ್ಲಿ ನಿನ್ನನ್ನು ಅಶುದ್ಧಗೊಳಿಸಿದ್ದೇವೆ ಅನ್ನುತ್ತೀರೋ? ಯೆಹೋವನ ಮೇಜಿಗೆ ಘನತೆಯೇನಿದೆ [“ಮೇಜು ತಾತ್ಸಾರ ಮಾಡುವಂಥದ್ದಾಗಿದೆ,” NW] ಎಂದು ನೀವು ಅಂದುಕೊಳ್ಳುವದರಲ್ಲಿಯೇ.” ಆ ಯಾಜಕರು ಪ್ರತಿ ಸಲ “ದೋಷವಲ್ಲ”ವೆಂದು ಹೇಳಿ ದೋಷಪೂರ್ಣವಾದ ಯಜ್ಞವನ್ನು ಅರ್ಪಿಸಿದಾಗೆಲ್ಲ ತಾವು ಯೆಹೋವನ ಮೇಜನ್ನು ತಾತ್ಸಾರ ಮಾಡುತ್ತಿದ್ದೇವೆಂದು ತೋರಿಸಿದರು.

11. (ಎ) ಯೆಹೋವನು ಅಸ್ವೀಕಾರಯೋಗ್ಯವಾದ ಯಜ್ಞಗಳ ಸಂಬಂಧದಲ್ಲಿ ಏನು ಹೇಳಿದನು? (ಬಿ) ಜನಸಾಮಾನ್ಯರೂ ಯಾವ ವಿಧದಲ್ಲಿ ದೋಷಿಗಳಾಗಿದ್ದರು?

11 ತದನಂತರ ಯೆಹೋವನು ಅಂತಹ ಸ್ವೀಕಾರಯೋಗ್ಯವಲ್ಲದ ಯಜ್ಞಗಳ ಕುರಿತು ತರ್ಕಬದ್ಧವಾಗಿ ಮಾತಾಡಿದನು: “ಇಂಥದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; ನಿನಗೆ ಮೆಚ್ಚುವನೋ? ಪ್ರಸನ್ನನಾಗುವನೋ?” ಇಲ್ಲ, ಅಂತಹ ಕೊಡುಗೆಯನ್ನು ಆ ದೇಶಾಧಿಪತಿ ಮೆಚ್ಚನು. ಹಾಗಿರುವಾಗ ವಿಶ್ವದ ಪರಮಾಧಿಕಾರಿಯು ಅಂತಹ ದೋಷಪೂರ್ಣ ಯಜ್ಞಗಳನ್ನು ಮೆಚ್ಚುವುದಾದರೂ ಹೇಗೆ? ಮತ್ತು ಈ ವಿಷಯದಲ್ಲಿ ಯಾಜಕರು ಮಾತ್ರ ದೋಷಿಗಳಾಗಿದ್ದದ್ದಲ್ಲ. ಹೌದು, ಯಜ್ಞಗಳನ್ನು ಅವರೇ ಅರ್ಪಿಸುತ್ತಿದ್ದುದರಿಂದ ಅವರು ಯೆಹೋವನನ್ನು ಧಿಕ್ಕರಿಸುತ್ತಿದ್ದರೆಂಬುದು ನಿಜ. ಆದರೆ ಜನಸಾಮಾನ್ಯರು ನಿರ್ದೋಷಿಗಳಾಗಿದ್ದರೊ? ಖಂಡಿತವಾಗಿಯೂ ಇಲ್ಲ! ಕುರುಡಾದ, ಕುಂಟಾದ ಮತ್ತು ರೋಗವಿದ್ದ ಪಶುಗಳನ್ನು ಆರಿಸಿದವರೂ ಅವನ್ನು ಯಜ್ಞಕ್ಕಾಗಿ ಯಾಜಕರ ಬಳಿಗೆ ತಂದಿದ್ದವರೂ ಆ ಜನಸಾಮಾನ್ಯರೇ. ಅದೆಷ್ಟು ಪಾಪಭರಿತವಾಗಿತ್ತು!

12. ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡಲು ನಮಗೆ ಹೇಗೆ ಸಹಾಯ ದೊರೆಯುತ್ತದೆ?

12 ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವ ಮೂಲಕ ನಾವು ಆತನನ್ನು ನಿಜವಾಗಿಯೂ ಪ್ರೀತಿಸುತ್ತೇವೆಂದು ತೋರಿಸುತ್ತೇವೆ. (ಮತ್ತಾಯ 22:​37, 38) ಮಲಾಕಿಯನ ದಿನಗಳಲ್ಲಿನ ಮೊಂಡರಾಗಿದ್ದ ಯಾಜಕರಿಗೆ ಅಸದೃಶವಾಗಿ, ನಾವು ದೈವಿಕ ಆವಶ್ಯಕತೆಗಳನ್ನು ಪೂರೈಸುವ ಮೂಲಕ ಕೃತಜ್ಞತಾಸ್ತುತಿಯಿಂದ ಯೆಹೋವನನ್ನು ಘನಪಡಿಸುವಂತೆ ಸಹಾಯಮಾಡಲು ಯೆಹೋವನ ಸಂಸ್ಥೆಯು ಇಂದು ಉತ್ತಮವಾದ ಧಾರಾಳ ಶಾಸ್ತ್ರೀಯ ಮಾಹಿತಿಯನ್ನು ಕೊಡುತ್ತದೆ. ಮಲಾಕಿಯ 1ನೆಯ ಅಧ್ಯಾಯದಿಂದ ಹೊರತೆಗೆಯಬಲ್ಲ ನಾಲ್ಕನೆಯ ಪ್ರಮುಖಾಂಶವು ಇದಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ.

ಸತ್ಯಾರಾಧನೆಯು ಪ್ರೀತಿಯಿಂದ ಪ್ರಚೋದಿತವಾಗಿರುತ್ತದೆ, ಲೋಭದಿಂದಲ್ಲ

13. ಯಾಜಕರ ಯಾವ ಕೃತ್ಯಗಳು ಅವರು ಲೋಭದಿಂದ ಪ್ರಚೋದಿತರಾಗಿದ್ದರು ಎಂಬುದನ್ನು ತೋರಿಸುತ್ತಿದ್ದವು?

13 ಮಲಾಕಿಯನ ದಿನಗಳ ಯಾಜಕರು ಸ್ವಾರ್ಥಿಗಳೂ, ಪ್ರೀತಿಯಿಲ್ಲದವರೂ ಮತ್ತು ಧನಲೋಭಿಗಳೂ ಆಗಿದ್ದರು. ಅದು ನಮಗೆ ಹೇಗೆ ಗೊತ್ತು? ಮಲಾಕಿಯ 1:10 ಹೇಳುವುದು: “ನನ್ನ ಯಜ್ಞವೇದಿಯ ಮೇಲೆ ಯಾರೂ ಬೆಂಕಿಯನ್ನು ವ್ಯರ್ಥವಾಗಿ ಉರಿಸದಂತೆ ನಿಮ್ಮಲ್ಲೊಬ್ಬನು [ದೇವಾಲಯದ] ಬಾಗಿಲುಗಳನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೇದು! ನಾನು ನಿಮಗೆ ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು; ಇದು ಸೇನಾಧೀಶ್ವರ ಯೆಹೋವನ ನುಡಿ.” ಹೌದು, ಆ ಲೋಭಿಗಳಾದ ಯಾಜಕರು ದೇವಾಲಯದ ಸುಲಭವಾದ ಸೇವೆಗಳಿಗೂ, ಅಂದರೆ ಬಾಗಿಲುಗಳನ್ನು ಮುಚ್ಚಲಿಕ್ಕೂ ವೇದಿಗೆ ಬೆಂಕಿ ಹಚ್ಚಲಿಕ್ಕೂ ಹಣವನ್ನು ಕೇಳುತ್ತಿದ್ದರು! ಆದುದರಿಂದ ಅವರ ಕೈಯ ನೈವೇದ್ಯಗಳನ್ನು ಯೆಹೋವನು ಮೆಚ್ಚದೆ ಇದ್ದುದರಲ್ಲಿ ಆಶ್ಚರ್ಯವಿಲ್ಲ!

14. ಯೆಹೋವನ ಸಾಕ್ಷಿಗಳು ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿದ್ದಾರೆಂದು ನಾವೇಕೆ ಹೇಳಬಲ್ಲೆವು?

14 ಪುರಾತನ ಯೆರೂಸಲೇಮಿನಲ್ಲಿ ಪಾಪಿಗಳಾಗಿದ್ದ ಯಾಜಕರ ಲೋಭವೂ ಸ್ವಾರ್ಥವೂ, ದೇವರ ವಾಕ್ಯಾನುಸಾರ, ಲೋಭಿಗಳಾಗಿರುವ ವ್ಯಕ್ತಿಗಳು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದನ್ನು ನಮಗೆ ಜ್ಞಾಪಕ ಹುಟ್ಟಿಸಬಹುದು. (1 ಕೊರಿಂಥ 6:​9, 10) ಆ ಯಾಜಕರ ಸ್ವಾರ್ಥರೀತಿಗಳ ಕುರಿತು ಯೋಚಿಸುವಾಗ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ನಡೆಸುವ ಸಾರುವ ಕಾರ್ಯಕ್ಕೆ ನಮ್ಮ ಗಣ್ಯತೆಯು ಹೆಚ್ಚುತ್ತದೆ. ಆ ಕಾರ್ಯವು ಸ್ವಯಂಪ್ರೇರಿತ; ನಮ್ಮ ಶುಶ್ರೂಷೆಯ ಯಾವುದೇ ಅಂಶಕ್ಕೆ ನಾವು ಹಣವನ್ನು ಕೇಳುವುದಿಲ್ಲ. ಇಲ್ಲ, ‘ನಾವು ದೇವರ ವಾಕ್ಯದ ವ್ಯಾಪಾರಿಗಳಲ್ಲ.’ (2 ಕೊರಿಂಥ 2:​17, NW) ಪೌಲನಂತೆ, ನಮ್ಮಲ್ಲಿ ಪ್ರತಿಯೊಬ್ಬನು “ದೇವರ ಸುವಾರ್ತೆಯನ್ನು [“ಸಂತೋಷದಿಂದ,” NW] ನಿಮಗೆ ಉಚಿತಾರ್ಥವಾಗಿ ಸಾರಿ”ದ್ದೇವೆಂದು ಸತ್ಯವಾಗಿ ಹೇಳಬಲ್ಲೆವು. (2 ಕೊರಿಂಥ 11:7) ಪೌಲನು ‘ಸಂತೋಷದಿಂದ ಸುವಾರ್ತೆಯನ್ನು ಸಾರಿದನು’ ಎಂಬುದನ್ನು ಗಮನಿಸಿರಿ. ಅದು ಮಲಾಕಿಯ 1ನೆಯ ಅಧ್ಯಾಯದಲ್ಲಿ ನಮ್ಮ ಗಮನಕ್ಕೆ ತರಲ್ಪಟ್ಟಿರುವ ಐದನೆಯ ಅಂಶವನ್ನು ಸೂಚಿಸುತ್ತದೆ.

ದೇವರಿಗೆ ಸಲ್ಲಿಸುವ ಸೇವೆಯು ಹೊರೆಯಾಗಿರುವ ಬಾಹ್ಯೋಪಚಾರವಲ್ಲ

15, 16. (ಎ) ಯಜ್ಞಾರ್ಪಣೆಯ ವಿಷಯದಲ್ಲಿ ಯಾಜಕರ ಮನೋಭಾವವೇನಾಗಿತ್ತು? (ಬಿ) ಯೆಹೋವನ ಸಾಕ್ಷಿಗಳು ತಮ್ಮ ಯಜ್ಞಗಳನ್ನು ಅರ್ಪಿಸುವುದು ಹೇಗೆ?

15 ಪುರಾತನದ ಯೆರೂಸಲೇಮಿನ ವಿಶ್ವಾಸರಹಿತ ಯಾಜಕರು ಯಜ್ಞಾರ್ಪಣೆಗಳನ್ನು ಬಳಲಿಸುವಂಥ ಬಾಹ್ಯೋಪಚಾರವಾಗಿ ವೀಕ್ಷಿಸಿದರು. ಅವರಿಗೆ ಅದು ಹೊರೆಯಾಗಿತ್ತು. ಮಲಾಕಿಯ 1:13ರಲ್ಲಿ ಹೇಳಿರುವಂತೆ, ದೇವರು ಅವರಿಗೆ ಹೇಳಿದ್ದು: “ಅಯ್ಯೋ, [ಈ ಸೇವೆಯು] ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ಛೀಗುಟ್ಟುತ್ತೀರಿ.” ದೇವರ ಪವಿತ್ರ ವಿಷಯಗಳನ್ನು ಆ ಯಾಜಕರು ಛೀಗುಟ್ಟಿದರು ಅಥವಾ ತಾತ್ಸಾರ ಮಾಡಿದರು. ನಾವು ವೈಯಕ್ತಿಕವಾಗಿ ಎಂದಿಗೂ ಅವರ ಹಾಗೆ ಆಗದಂತೆ ಪ್ರಾರ್ಥಿಸೋಣ. ಬದಲಿಗೆ, ನಾವು ಸದಾ 1 ಯೋಹಾನ 5:3ರ ಮಾತುಗಳಲ್ಲಿ ವ್ಯಕ್ತವಾಗುವ ಮನೋಭಾವವನ್ನು ಪ್ರದರ್ಶಿಸೋಣ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”

16 ನಾವು ದೇವರಿಗೆ ಆತ್ಮಿಕ ಯಜ್ಞಗಳನ್ನು ಅರ್ಪಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳೋಣ. ಅದನ್ನು ಬಳಲಿಸುವಂಥ ಹೊರೆಯಾಗಿ ನೆನಸದಿರೋಣ. ಈ ಪ್ರವಾದನಾವಾಕ್ಯಗಳಿಗೆ ನಾವು ಕಿವಿಗೊಡೋಣ: “[ಪಶ್ಚಾತ್ತಾಪದ] ಮಾತುಗಳನ್ನು ತೆಗೆದುಕೊಂಡು ಯೆಹೋವನ ಬಳಿಗೆ ಹಿಂದಿರುಗಿ ಆತನಿಗೆ​—ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ [ನಮ್ಮಲ್ಲಿನ] ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು.” (ಹೋಶೇಯ 14:2) “ನಮ್ಮ ಸ್ತೋತ್ರಗಳೆಂಬ ಹೋರಿಗಳು” ಎಂಬ ಮಾತುಗಳು ಆತ್ಮಿಕ ಯಜ್ಞಗಳನ್ನು, ಯೆಹೋವನ ಮತ್ತು ಆತನ ಉದ್ದೇಶಗಳ ಸ್ತುತಿಗಾಗಿ ನಾವು ಆಡುವ ಮಾತುಗಳನ್ನು ಸೂಚಿಸುತ್ತವೆ. ಇಬ್ರಿಯ 13:15 ಹೇಳುವುದು: “ಆದದರಿಂದ ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” ನಮ್ಮ ಆತ್ಮಿಕ ಯಜ್ಞಗಳಾದರೊ ಕೇವಲ ಬಾಹ್ಯೋಪಚಾರಗಳಲ್ಲ, ಬದಲಿಗೆ ದೇವರ ಕಡೆಗೆ ನಮಗಿರುವ ಪ್ರೀತಿಯ ಪೂರ್ಣಹೃದಯದ ಅಭಿವ್ಯಕ್ತಿಗಳಾಗಿವೆ ಎಂಬುದಕ್ಕಾಗಿ ನಾವೆಷ್ಟು ಧನ್ಯರು! ಇದು ಮಲಾಕಿಯ 1ನೆಯ ಅಧ್ಯಾಯದಿಂದ ನಾವು ತಿಳಿಯಲಿರುವ ಆರನೆಯ ಅಂಶಕ್ಕೆ ನಮ್ಮನ್ನು ಒಯ್ಯುತ್ತದೆ.

ಪ್ರತಿಯೊಬ್ಬನು ಲೆಕ್ಕವನ್ನು ಒಪ್ಪಿಸಬೇಕು

17, 18. (ಎ) ಯೆಹೋವನು “ಮೋಸಗಾರ”ನನ್ನು ಶಪಿಸಿದ್ದೇಕೆ? (ಬಿ) ಆ ಮೋಸಗಾರರು ಯಾವುದನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ?

17 ಮಲಾಕಿಯನ ದಿನದಲ್ಲಿ ಬದುಕುತ್ತಿದ್ದವರು ತಮ್ಮ ಕೃತ್ಯಗಳಿಗಾಗಿ ವೈಯಕ್ತಿಕವಾಗಿ ಹೊಣೆಗಾರರಾಗಿದ್ದರು ಮತ್ತು ನಮ್ಮ ವಿಷಯದಲ್ಲಿಯೂ ಇದು ಸತ್ಯ. (ರೋಮಾಪುರ 14:12; ಗಲಾತ್ಯ 6:5) ಈ ಕಾರಣದಿಂದಲೇ ಮಲಾಕಿಯ 1:14 ಹೇಳುವುದು: “ಒಬ್ಬನು ಹರಕೆಹೊತ್ತು ತನ್ನ ಹಿಂಡಿನಲ್ಲಿ ಗಂಡುಪಶುವಿದ್ದರೂ ಕಳಂಕವಾದ ಪಶುವನ್ನು ಯೆಹೋವನಿಗೆ ಯಜ್ಞಮಾಡಿದರೆ ಆ ಮೋಸಗಾರನಿಗೆ ಶಾಪವು ತಗಲಲಿ.” ಪಶುಗಳ ಒಂದು ಹಿಂಡುಳ್ಳ ಒಬ್ಬ ಮನುಷ್ಯನ ಬಳಿ ಒಂದೇ ಒಂದು ಪಶುವಿರುವುದಿಲ್ಲ; ಅಂದರೆ ಅವನ ಬಳಿ ಒಂದೇ ಒಂದು ಪಶುವಿದ್ದು, ಬೇರೆ ಆಯ್ಕೆಯೇ ಇಲ್ಲ ಎಂಬ ಸ್ಥಿತಿಯಲ್ಲಿ ಅವನಿರುವುದಿಲ್ಲ. ಆದುದರಿಂದ ಯಜ್ಞಕ್ಕೆ ಒಂದು ಪ್ರಾಣಿಯನ್ನು ಆರಿಸಿಕೊಳ್ಳುವಾಗ ಕುರುಡಾದ, ಕುಂಟಾದ ಅಥವಾ ರೋಗಗ್ರಸ್ತವಾದ ಪ್ರಾಣಿಯನ್ನೇ ಅವನು ಆರಿಸಿಕೊಳ್ಳಬೇಕಿರಲಿಲ್ಲ. ಆದರೆ ಅವನು ಅಂತಹ ದೋಷವುಳ್ಳ ಪ್ರಾಣಿಯನ್ನು ಆರಿಸಿಕೊಳ್ಳುವಲ್ಲಿ ಅವನು ಯೆಹೋವನ ಯಜ್ಞದ ಏರ್ಪಾಡನ್ನು ತಾತ್ಸಾರ ಮಾಡುತ್ತಿದ್ದಾನೆಂಬದನ್ನು ಅದು ತೋರಿಸುವುದು. ಏಕೆಂದರೆ, ಪ್ರಾಣಿಗಳ ಒಂದು ಹಿಂಡೇ ಇರುವ ಒಬ್ಬನು ಅದರಲ್ಲಿ ದೋಷವಿಲ್ಲದ ಒಂದು ಪಶುವನ್ನು ಖಂಡಿತವಾಗಿಯೂ ಕಂಡುಕೊಳ್ಳಸಾಧ್ಯವಿತ್ತು.

18 ಆದುದರಿಂದ, ಮೋಸಗಾರನನ್ನು ಅಂದರೆ ಯೋಗ್ಯವಾದ ಗಂಡುಪಶುವಿದ್ದರೂ ಕುರುಡಾದ, ಕುಂಟಾದ ಅಥವಾ ರೋಗಗ್ರಸ್ತ ಪಶುವನ್ನು ಯಾಜಕನು ಯಜ್ಞಾರ್ಪಿಸಲು ತಂದವನನ್ನು​—ಪ್ರಾಯಶಃ ಎಳೆದು ತಂದವನನ್ನು, ಯೆಹೋವನು ಶಪಿಸಿದನು. ಹೀಗಿದ್ದರೂ, ದೋಷವುಳ್ಳ ಪ್ರಾಣಿಗಳು ಸ್ವೀಕಾರಯೋಗ್ಯವಾಗಿರುವುದಿಲ್ಲ ಎಂಬ ದೇವರ ನಿಯಮವನ್ನು ಆ ಯಾಜಕರಲ್ಲಿ ಒಬ್ಬನಾದರೂ ಎತ್ತಿಹೇಳಿರುವ ಸೂಚನೆಯೂ ಅಲ್ಲಿಲ್ಲ. (ಯಾಜಕಕಾಂಡ 22:​17-20) ಅವರು ಅಂತಹ ಕೊಡುಗೆಯನ್ನು ದೇಶಾಧಿಪತಿಗೆ ಕೊಡಲು ಪ್ರಯತ್ನಿಸುತ್ತಿದ್ದಲ್ಲಿ ಅವರಿಗೆ ಪರಿಣಾಮವು ನೆಟ್ಟಗಿರಲಾರದು ಎಂಬುದು ಬುದ್ಧಿಯುಳ್ಳ ಜನರಿಗೆ ತಿಳಿದಿತ್ತು. ಆದರೆ ವಾಸ್ತವದಲ್ಲಿ ಅವರು ಇಲ್ಲಿ ಯಾವ ಮಾನವ ರಾಜ್ಯಪಾಲನಿಗೂ ಎಷ್ಟೋ ಶ್ರೇಷ್ಠನಾಗಿದ್ದ ವಿಶ್ವ ಪರಮಾಧಿಕಾರಿಯಾದ ಯೆಹೋವನೊಂದಿಗೆ ವ್ಯವಹರಿಸುತ್ತಿದ್ದರು. ಮಲಾಕಿಯ 1:14 ಈ ವಿಷಯದ ಕುರಿತು ಹೀಗನ್ನುತ್ತದೆ: “ನಾನು ರಾಜಾಧಿರಾಜ, ನನ್ನ ನಾಮವು ಅನ್ಯಜನಾಂಗಗಳ ಭಯಭಕ್ತಿಗೆ ಈಡಾಗಿದೆ; ಇದು ಸೇನಾಧೀಶ್ವರ ಯೆಹೋವನ ನುಡಿ.”

19. ನಾವು ಯಾವುದಕ್ಕಾಗಿ ಹಾತೊರೆಯುತ್ತೇವೆ, ಮತ್ತು ನಾವೇನು ಮಾಡುತ್ತಿರಬೇಕು?

19 ದೇವರ ನಿಷ್ಠಾವಂತ ಸೇವಕರಾದ ನಾವು, ರಾಜಾಧಿರಾಜನಾದ ಯೆಹೋವನನ್ನು ಸಕಲ ಮಾನವಕುಲವು ಪೂಜ್ಯವಾಗಿ ಕಾಣುವ ದಿನಕ್ಕಾಗಿ ಹಾತೊರೆಯುತ್ತೇವೆ. ಆ ಸಮಯದಲ್ಲಿ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಈ ಮಧ್ಯೆ, ನಾವು ಯೆಹೋವನ ಆವಶ್ಯಕತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸೋಣ. “ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು,” ಎಂದು ಹೇಳಿದ ಕೀರ್ತನೆಗಾರನನ್ನು ಅನುಕರಿಸುತ್ತ ಇದನ್ನು ಮಾಡೋಣ. (ಕೀರ್ತನೆ 69:30) ಇದನ್ನು ಪೂರೈಸಲು, ಮಲಾಕಿಯನ ಬಳಿ ಅತಿ ಪ್ರಯೋಜನಕರವಾದ ಹೆಚ್ಚಿನ ಸಲಹೆಯಿದೆ. ಆದುದರಿಂದ ಮುಂದಿನ ಎರಡು ಲೇಖನಗಳಲ್ಲಿ ನಾವು ಮಲಾಕಿಯ ಪುಸ್ತಕದ ಬೇರೆ ಭಾಗಗಳಿಗೆ ಜಾಗರೂಕತೆಯ ಗಮನವನ್ನು ಕೊಡೋಣ.

ನಿಮಗೆ ಜ್ಞಾಪಕವಿದೆಯೆ?

• ನಾವು ಯೆಹೋವನನ್ನು ಏಕೆ ಘನಪಡಿಸಬೇಕು?

• ಮಲಾಕಿಯನ ದಿನಗಳಲ್ಲಿ ಅರ್ಪಿಸಲ್ಪಡುತ್ತಿದ್ದ ಯಾಜಕರ ಯಜ್ಞಗಳು ಯೆಹೋವನಿಗೆ ಏಕೆ ಸ್ವೀಕಾರಯೋಗ್ಯವಾಗಿರಲಿಲ್ಲ?

• ನಾವು ಯೆಹೋವನಿಗೆ ಸ್ತೋತ್ರಯಜ್ಞವನ್ನು ಹೇಗೆ ಅರ್ಪಿಸುತ್ತೇವೆ?

• ಸತ್ಯಾರಾಧನೆಗೆ ಪ್ರಚೋದನೆ ಏನಾಗಿರಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಮಲಾಕಿಯನ ಪ್ರವಾದನೆ ನಮ್ಮ ದಿನಗಳಿಗೆ ಕೈತೋರಿಸಿತು

[ಪುಟ 10ರಲ್ಲಿರುವ ಚಿತ್ರ]

ಏಸಾವನು ಪವಿತ್ರ ವಿಷಯಗಳನ್ನು ಗಣ್ಯಮಾಡಲಿಲ್ಲ

[ಪುಟ 11ರಲ್ಲಿರುವ ಚಿತ್ರ]

ಯಾಜಕರೂ ಜನರೂ ಸ್ವೀಕಾರಯೋಗ್ಯವಲ್ಲದ ಯಜ್ಞಗಳನ್ನು ಅರ್ಪಿಸಿದರು

[ಪುಟ 12ರಲ್ಲಿರುವ ಚಿತ್ರ]

ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಉಚಿತವಾಗಿ ಸ್ತೋತ್ರಯಜ್ಞಗಳನ್ನು ಅರ್ಪಿಸುತ್ತಾರೆ