ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಮಕ್ಕಳ ಹೃದಯಗಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ನೆಡುವುದು

ನಮ್ಮ ಮಕ್ಕಳ ಹೃದಯಗಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ನೆಡುವುದು

ಜೀವನ ಕಥೆ

ನಮ್ಮ ಮಕ್ಕಳ ಹೃದಯಗಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ನೆಡುವುದು

ವರ್ನರ್‌ ಮ್ಯಾಟ್ಸನ್‌ ಅವರು ಹೇಳಿದಂತೆ

ಕೆಲವು ವರ್ಷಗಳ ಹಿಂದೆ, ನನ್ನ ಹಿರಿಯ ಮಗ ಹಾನ್ಸ್‌ ವರ್ನರ್‌ ನನಗೊಂದು ಬೈಬಲನ್ನು ಕೊಟ್ಟನು. ಅದರ ಆವರಣ ಪುಟದ ಒಳಭಾಗದಲ್ಲಿ ಅವನು ಹೀಗೆ ಬರೆದಿದ್ದನು: “ಪ್ರೀತಿಯ ಅಪ್ಪ, ಯೆಹೋವನ ವಾಕ್ಯವು ನಮ್ಮನ್ನು ಒಂದು ಕುಟುಂಬದೋಪಾದಿ ಜೀವದ ಮಾರ್ಗದಲ್ಲಿ ನಡೆಸುವುದನ್ನು ಮುಂದುವರಿಸುತ್ತಿರಲಿ. ಕೃತಜ್ಞತೆಯೊಂದಿಗೆ, ನಿಮ್ಮ ಹಿರಿಯ ಮಗ.” ಆ ಮಾತುಗಳು ನನ್ನ ಹೃದಯದಲ್ಲಿ ಎಷ್ಟು ಕೃತಜ್ಞತೆ ಮತ್ತು ಆನಂದವನ್ನು ತುಂಬಿಸಿದವೆಂಬುದನ್ನು ಹೆತ್ತವರೇ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ನನ್ನ ಕುಟುಂಬವು ಇನ್ನೂ ಎದುರಿಸಲಿರುವ ಪಂಥಾಹ್ವಾನಗಳ ಬಗ್ಗೆ ನನಗೆ ಆ ಸಮಯದಲ್ಲಿ ಏನೂ ತಿಳಿದಿರಲಿಲ್ಲ.

ಹ್ಯಾಮ್‌ಬರ್ಗ್‌ ಎಂಬ ಜರ್ಮನ್‌ ಬಂದರಿನಿಂದ ಸುಮಾರು 20 ಕಿಲೊಮೀಟರ್‌ ದೂರದಲ್ಲಿರುವ ಹಾಲ್‌ಸ್ಟನ್‌ಬೆಕ್‌ನಲ್ಲಿ ನಾನು 1924ರಲ್ಲಿ ಜನಿಸಿದೆ. ನನ್ನನ್ನು ಪೋಷಿಸಿ ಬೆಳೆಸಿದವರು ನನ್ನ ತಾಯಿ ಮತ್ತು ಅಜ್ಜ. ಉಪಕರಣ ತಯಾರಕನೋಪಾದಿ ತರಬೇತಿ ಪಡೆದುಕೊಂಡ ನಂತರ ನನ್ನನ್ನು 1942ರಲ್ಲಿ ಶಸ್ತ್ರಸಜ್ಜಿತ ಸೇನಾಪಡೆಯಾದ ವೇರ್‌ಮಾಕ್ಟ್‌ಗೆ ಸೇರಿಸಲಾಯಿತು. ಎರಡನೆಯ ವಿಶ್ವ ಯುದ್ಧದ ಸಮಯದಲ್ಲಿ ರಷ್ಯದ ಯುದ್ಧರಂಗದಲ್ಲಿ ಹೋರಾಡಿದಾಗ ನಾನು ಏನು ಅನುಭವಿಸಿದೆನೊ ಅದು ಮಾತುಗಳಲ್ಲಿ ಹೇಳಲಾಗದಷ್ಟು ಭೀಕರವಾಗಿತ್ತು. ನನಗೆ ಟೈಫಾಯಿಡ್‌ ಜ್ವರ ತಗಲಿತು, ಆದರೆ ಚಿಕಿತ್ಸೆಯನ್ನು ಪಡೆದ ನಂತರ ಪುನಃ ನನ್ನನ್ನು ಯುದ್ಧಕ್ಕೆ ಕಳುಹಿಸಲಾಯಿತು. ಜನವರಿ 1945ರಲ್ಲಿ ನಾನು ಪೊಲೆಂಡಿನ ಲಾಡ್ಸ್‌ನಲ್ಲಿದ್ದೆ. ಅಲ್ಲಿ ನಾನು ಭೀಕರವಾಗಿ ಗಾಯಗೊಂಡು, ಒಂದು ಮಿಲಿಟರಿ ಆಸ್ಪತ್ರೆಯಲ್ಲಿ ಹಾಕಲ್ಪಟ್ಟೆ. ಯುದ್ಧವು ಅಂತ್ಯಗೊಂಡಾಗಲೂ ನಾನು ಅಲ್ಲಿಯೇ ಇದ್ದೆ. ನಾನು ಆಸ್ಪತ್ರೆಯಲ್ಲಿದ್ದಾಗ ಮತ್ತು ಅನಂತರ ನಾಎನ್‌ಗಾಮ್‌ನಲ್ಲಿದ್ದ ಸೆರೆ ಶಿಬಿರದಲ್ಲಿದ್ದಾಗ, ನನ್ನ ಬಳಿ ಯೋಚಿಸಲಿಕ್ಕಾಗಿ ಬಹಳಷ್ಟು ಸಮಯವಿತ್ತು. ನಿಜವಾಗಿಯೂ ಒಬ್ಬ ದೇವರಿದ್ದಾನೊ? ಇರುವಲ್ಲಿ, ಇಷ್ಟೊಂದು ಕ್ರೂರತನವನ್ನು ಆತನೇಕೆ ಅನುಮತಿಸುತ್ತಾನೆ? ಎಂಬಂಥ ಪ್ರಶ್ನೆಗಳಿಂದ ನಾನು ಕಳವಳಗೊಂಡಿದ್ದೆ.

ಸೆಪ್ಟೆಂಬರ್‌ 1947ರಲ್ಲಿ ಸೆರೆ ಶಿಬಿರದಿಂದ ಬಿಡುಗಡೆಮಾಡಲ್ಪಟ್ಟ ಸ್ವಲ್ಪ ಸಮಯದೊಳಗೆ ನಾನು ಕಾರ್ಲಾ ಎಂಬವಳನ್ನು ಮದುವೆಯಾದೆ. ನಾವಿಬ್ಬರೂ ಒಂದೇ ಪಟ್ಟಣದಲ್ಲಿ ಬೆಳೆದಿದ್ದೆವು. ಕಾರ್ಲಾ ಒಬ್ಬ ಕ್ಯಾಥೊಲಿಕಳಾಗಿದ್ದಳು, ಆದರೆ ನನಗೆ ಮಾತ್ರ ಮನೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವು ಕೊಡಲ್ಪಟ್ಟಿರಲಿಲ್ಲ. ನಮ್ಮಿಬ್ಬರ ಮದುವೆಯನ್ನು ನಡೆಸಿದ ಪಾದ್ರಿಯು, ನಾವು ಪ್ರತಿ ಸಾಯಂಕಾಲ ಜೊತೆಯಾಗಿ ಕಡಿಮೆಪಕ್ಷ ಕರ್ತನ ಪ್ರಾರ್ಥನೆಯನ್ನಾದರೂ ಹೇಳುವಂತೆ ಸಲಹೆಕೊಟ್ಟರು. ಅವನು ಹೇಳಿದಂತೆ ನಾವು ಮಾಡಿದೆವು. ಆದರೆ ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದೇವೆಂದು ನಮಗೇ ಅರ್ಥವಾಗುತ್ತಿರಲಿಲ್ಲ.

ಒಂದು ವರ್ಷದ ನಂತರ ಹಾನ್ಸ್‌ ವರ್ನರ್‌ ಹುಟ್ಟಿದನು. ಸುಮಾರು ಆ ಸಮಯದಲ್ಲೇ, ನನ್ನ ಜೊತೆಕಾರ್ಮಿಕನಾಗಿದ್ದ ವಿಲ್ಹೆಲ್ಮ್‌ ಆರೆನ್ಸ್‌ ನನಗೆ ಯೆಹೋವನ ಸಾಕ್ಷಿಗಳ ಪರಿಚಯವನ್ನು ಮಾಡಿಸಿದನು. ಒಂದು ದಿನ ಎಲ್ಲ ಯುದ್ಧಗಳು ನಿಂತುಹೋಗುವವೆಂದು ಅವನು ನನಗೆ ಬೈಬಲಿನಿಂದ ತೋರಿಸಿದನು. (ಕೀರ್ತನೆ 46:9) 1950ರ ಶರತ್ಕಾಲದಲ್ಲಿ, ನಾನು ಯೆಹೋವನಿಗೆ ನನ್ನ ಜೀವವನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಪಡೆದುಕೊಂಡೆ. ಒಂದು ವರ್ಷದ ಬಳಿಕ ನನ್ನ ಪ್ರೀತಿಯ ಹೆಂಡತಿಯೂ ದೀಕ್ಷಾಸ್ನಾನ ಪಡೆದುಕೊಂಡಾಗ ನನಗೆಷ್ಟು ಆನಂದವಾಯಿತು!

ಯೆಹೋವನ ಮಾರ್ಗಗಳಲ್ಲಿ ಮಕ್ಕಳನ್ನು ಬೆಳೆಸುವುದು

ವಿವಾಹವನ್ನು ಆರಂಭಿಸಿದವನು ಯೆಹೋವನೆಂಬದನ್ನು ನಾನು ಬೈಬಲಿನಲ್ಲಿ ಓದಿದೆ. (ಆದಿಕಾಂಡ 1:​26-28; 2:​22-24) ನಮ್ಮ ಮಕ್ಕಳಾದ ಹಾನ್ಸ್‌ ವರ್ನರ್‌, ಕಾರ್ಲ್‌ ಹೈನ್ಸ್‌, ಮಿಕಾಯೆಲ್‌, ಗಾಬ್ರೀಏಲಾ, ಮತ್ತು ಟೋಮಾಸ್‌ ಜನಿಸಿದಾಗ ನಾನು ಉಪಸ್ಥಿತನಿದ್ದದ್ದು, ನಾನೊಬ್ಬ ಒಳ್ಳೇ ಗಂಡನೂ ತಂದೆಯೂ ಆಗಿರಬೇಕೆಂಬ ನನ್ನ ಪ್ರತಿಜ್ಞೆಯನ್ನು ಇನ್ನಷ್ಟು ಬಲಪಡಿಸಿತು. ನಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರ ಹುಟ್ಟಿನ ಸಮಯದಲ್ಲಿ ನಾನು ಮತ್ತು ಕಾರ್ಲಾ ತುಂಬ ಸಂಭ್ರಮಿಸಿದೆವು.

ನ್ಯೂರಂಬರ್ಗ್‌ನಲ್ಲಿ 1953ರಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನವು ನಮ್ಮ ಕುಟುಂಬಕ್ಕೆ ಒಂದು ಬಹುಮುಖ್ಯ ಸಂದರ್ಭವಾಗಿತ್ತು. ಶುಕ್ರವಾರ ಮಧ್ಯಾಹ್ನ, “ಹೊಸ ಲೋಕ ಸಮಾಜದಲ್ಲಿ ಮಕ್ಕಳನ್ನು ಬೆಳೆಸಿರಿ” ಎಂಬ ಭಾಷಣದಲ್ಲಿ, ಭಾಷಣಕರ್ತನು ಹೇಳಿದಂಥ ಒಂದು ವಿಷಯವನ್ನು ನಾವು ಎಂದೂ ಮರೆಯಲಿಲ್ಲ. ಅವರಂದದ್ದು: “ನಾವು ನಮ್ಮ ಮಕ್ಕಳಿಗೆ ಕೊಡಬಹುದಾದ ಅತಿ ಶ್ರೇಷ್ಠವಾದ ಆಸ್ತಿಯು, ಅವರು ದೇವರ ಸೇವಕರಾಗಬೇಕೆಂಬ ಆಸೆಯೇ ಆಗಿದೆ.” ಯೆಹೋವನ ಸಹಾಯದೊಂದಿಗೆ ನಾನು ಮತ್ತು ಕಾರ್ಲಾ ಸೇರಿ ಅದನ್ನೇ ಮಾಡಲು ಬಯಸಿದೆವು. ಆದರೆ ಹೇಗೆ?

ಆರಂಭದಲ್ಲಿ ನಾವು ಒಂದು ಕುಟುಂಬದೋಪಾದಿ ಪ್ರತಿ ದಿನ ಪ್ರಾರ್ಥಿಸುವುದನ್ನು ಒಂದು ರೂಢಿಯಾಗಿ ಮಾಡಿಕೊಂಡೆವು. ಇದು, ಪ್ರಾರ್ಥನೆಯು ಎಷ್ಟು ಮಹತ್ವಪೂರ್ಣವಾಗಿದೆ ಎಂಬದನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿಸಿತು. ಊಟಮಾಡುವ ಮುಂಚೆ ನಾವು ಯಾವಾಗಲೂ ಪ್ರಾರ್ಥನೆಯನ್ನು ಹೇಳಬೇಕು ಎಂಬದನ್ನು ಎಲ್ಲ ಮಕ್ಕಳೂ ಚಿಕ್ಕ ಪ್ರಾಯದಲ್ಲೇ ಕಲಿತುಕೊಂಡರು. ಅವರು ತುಂಬ ಚಿಕ್ಕವರಾಗಿದ್ದಾಗಲೂ, ತಮ್ಮ ಹಾಲಿನ ಬಾಟಲಿಯನ್ನು ನೋಡಿದ ಕೂಡಲೇ ತಮ್ಮ ಪುಟ್ಟ ತಲೆಗಳನ್ನು ಬಾಗಿಸಿ, ತಮ್ಮ ಪುಟ್ಟ ಕೈಗಳನ್ನು ಜೋಡಿಸುತ್ತಿದ್ದರು. ಒಂದು ಸಂದರ್ಭದಲ್ಲಿ, ನಾವು ನನ್ನ ಹೆಂಡತಿಯ ಸಂಬಂಧಿಕರಲ್ಲೊಬ್ಬರ ಮದುವೆಗೆ ಹೋಗಿದ್ದೆವು. ಅವರು ಸಾಕ್ಷಿಗಳಾಗಿರಲಿಲ್ಲ. ಸಮಾರಂಭದ ನಂತರ, ವಧುವಿನ ಹೆತ್ತವರು ಅತಿಥಿಗಳನ್ನು ಊಟಕ್ಕಾಗಿ ಮನೆಗೆ ಆಮಂತ್ರಿಸಿದ್ದರು. ಕೂಡಿ ಬಂದವರೆಲ್ಲರೂ ನೇರವಾಗಿ ಊಟಮಾಡಲು ಸಿದ್ಧರಿದ್ದರು. ಆದರೆ ಇದು ಸರಿಯಲ್ಲವೆಂದು ನಮ್ಮ ಐದು ವರ್ಷದ ಕಾರ್ಲ್‌ ಹೈನ್ಸ್‌ನಿಗನಿಸಿತು. “ದಯವಿಟ್ಟು ಮೊದಲು ಒಂದು ಪ್ರಾರ್ಥನೆ ಹೇಳಿ” ಎಂದವನು ಹೇಳಿದನು. ಅತಿಥಿಗಳು ಮೊದಲು ಅವನತ್ತ, ನಂತರ ನಮ್ಮತ್ತ ಮತ್ತು ಕೊನೆಯಲ್ಲಿ ಆತಿಥೇಯನತ್ತ ನೋಡಿದರು. ಅವರನ್ನು ಪೇಚಿನಿಂದ ತಪ್ಪಿಸಲಿಕ್ಕಾಗಿ, ನಾನೇ ಊಟಕ್ಕಾಗಿ ಉಪಕಾರದ ಪ್ರಾರ್ಥನೆಯನ್ನು ಹೇಳುವೆನೆಂದು ಹೇಳಿದೆ, ಮತ್ತು ಆತಿಥೇಯನು ಇದಕ್ಕೆ ಒಪ್ಪಿದನು.

ಈ ಪ್ರಸಂಗವು ನನಗೆ ಯೇಸುವಿನ ಈ ಮಾತುಗಳನ್ನು ನೆನಪಿಗೆ ತಂದಿತು: “ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ.” (ಮತ್ತಾಯ 21:16) ನಮ್ಮ ಕ್ರಮವಾದ ಮತ್ತು ಹೃತ್ಪೂರ್ವಕ ಪ್ರಾರ್ಥನೆಗಳು, ನಮ್ಮ ಮಕ್ಕಳು ಯೆಹೋವನನ್ನು ತಮ್ಮ ಪ್ರೀತಿಯ ಸ್ವರ್ಗೀಯ ತಂದೆಯೋಪಾದಿ ದೃಷ್ಟಿಸುವಂತೆ ಸಹಾಯಮಾಡಿದವೆಂದು ನಮಗೆ ನಿಶ್ಚಯವಿದೆ.

ಯೆಹೋವನ ಕಡೆಗೆ ನಮ್ಮ ಜವಾಬ್ದಾರಿ

ದೇವರನ್ನು ಪ್ರೀತಿಸುವಂತೆ ಮಕ್ಕಳಿಗೆ ಕಲಿಸುವುದಕ್ಕಾಗಿ, ಆತನ ವಾಕ್ಯವನ್ನು ಕ್ರಮವಾಗಿ ಓದುವುದು ಮತ್ತು ಅಧ್ಯಯನ ಮಾಡುವುದು ಸಹ ಆವಶ್ಯಕ. ಇದನ್ನು ಮನಸ್ಸಿನಲ್ಲಿಟ್ಟು, ನಾವು ಪ್ರತಿ ವಾರ ಕುಟುಂಬ ಅಭ್ಯಾಸವನ್ನು ನಡೆಸುತ್ತಿದ್ದೆವು. ಹೆಚ್ಚಾಗಿ ಇದನ್ನು ಸೋಮವಾರ ಸಾಯಂಕಾಲಗಳಂದು ನಡೆಸುತ್ತಿದ್ದೆವು. ನಮ್ಮ ಹಿರಿಯ ಮಗ ಮತ್ತು ಕೊನೆಯ ಮಗನ ನಡುವೆ ಒಂಬತ್ತು ವರ್ಷಗಳ ಅಂತರವಿದ್ದುದರಿಂದ, ಮಕ್ಕಳ ಅಗತ್ಯಗಳು ತುಂಬ ಭಿನ್ನ ಭಿನ್ನವಾಗಿದ್ದವು. ಆದುದರಿಂದ ಎಲ್ಲ ಮಕ್ಕಳೊಂದಿಗೆ ನಾವು ಯಾವಾಗಲೂ ಒಂದೇ ರೀತಿಯ ಮಾಹಿತಿಯನ್ನು ಅಭ್ಯಾಸಮಾಡಲು ಸಾಧ್ಯವಿರಲಿಲ್ಲ.

ಉದಾಹರಣೆಗೆ, ಇನ್ನೂ ಶಾಲೆಗೆ ಹೋಗದಿರುತ್ತಿದ್ದ ಮಕ್ಕಳಿಗೆ, ನಾವು ತುಂಬ ಸರಳವಾದ ಮಾಹಿತಿಯನ್ನು ಕಲಿಸುತ್ತಿದ್ದೆವು. ಕಾರ್ಲಾ ಅವರೊಂದಿಗೆ ಕೇವಲ ಒಂದು ಬೈಬಲ್‌ ವಚನವನ್ನು ಚರ್ಚಿಸುತ್ತಿದ್ದಳು, ಇಲ್ಲವೆ ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿದ್ದ ಚಿತ್ರಗಳನ್ನು ಉಪಯೋಗಿಸುತ್ತಿದ್ದಳು. ನಮ್ಮ ಕಿರಿಯ ಮಕ್ಕಳು, ಹೊಸ ಲೋಕ * (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ತಮ್ಮ ಅಚ್ಚುಮೆಚ್ಚಿನ ಚಿತ್ರಗಳು ಯಾವುವು ಎಂಬುದನ್ನು ತೋರಿಸಲಿಕ್ಕಾಗಿ ಮುಂಜಾನೆ ನಮ್ಮ ಮಂಚವನ್ನು ಹತ್ತಿ ನಮ್ಮನ್ನು ಎಬ್ಬಿಸುತ್ತಿದ್ದುದರ ಸವಿನೆನಪುಗಳು ನನಗೆ ಈಗಲೂ ಇವೆ.

ಯೆಹೋವನನ್ನು ಪ್ರೀತಿಸಲು ನಮಗೆಲ್ಲರಿಗೂ ಇರುವ ಅನೇಕ ಕಾರಣಗಳನ್ನು ಮಕ್ಕಳಿಗೆ ತಾಳ್ಮೆಯಿಂದ ಕಲಿಸುವ ಕೌಶಲವನ್ನು ಕಾರ್ಲಾ ಕಲಿತುಕೊಂಡಳು. ಇದು ತುಂಬ ಸರಳ ಮತ್ತು ಸುಲಭವಾದ ಕೆಲಸದಂತೆ ತೋರಬಹುದಾದರೂ, ನಿಜ ಸಂಗತಿಯೇನೆಂದರೆ ಅದು ಶಾರೀರಿಕವಾಗಿಯೂ ಭಾವನಾತ್ಮಕವಾಗಿಯೂ ನನಗೂ ಕಾರ್ಲಾಳಿಗೂ ಬಹುಮಟ್ಟಿಗೆ ಪೂರ್ಣ ಸಮಯದ ಉದ್ಯೋಗವೇ ಆಗಿತ್ತು. ಆದರೂ ನಾವು ಬಿಟ್ಟುಕೊಡಲಿಲ್ಲ. ಯೆಹೋವನನ್ನು ಅರಿಯದ ಬೇರೆ ಜನರು ಅವರ ಹೃದಯಗಳ ಮೇಲೆ ಯಾವುದೇ ಪ್ರಭಾವವನ್ನು ಬೀರುವ ಮುಂಚೆಯೇ ನಾವು ಅವುಗಳಲ್ಲಿ ದೇವರಿಗಾಗಿ ಪ್ರೀತಿಯನ್ನು ನೆಡಲು ಬಯಸಿದೆವು. ಈ ಕಾರಣದಿಂದಾಗಿಯೇ, ನಮ್ಮ ಮಕ್ಕಳು ಕುಳಿತುಕೊಳ್ಳಲು ಶಕ್ತರಾದ ಕೂಡಲೆ, ಅವರು ಕುಟುಂಬ ಅಭ್ಯಾಸಕ್ಕಾಗಿ ಹಾಜರಾಗುವಂತೆ ನಾವು ಒತ್ತಾಯಿಸುತ್ತಿದ್ದೆವು.

ಹೆತ್ತವರೋಪಾದಿ ನಾನು ಮತ್ತು ಕಾರ್ಲಾ, ನಮ್ಮ ಮಕ್ಕಳಿಗಾಗಿ ಆರಾಧನೆಯ ವಿಷಯದಲ್ಲಿ ಸರಿಯಾದ ಮಾದರಿಯನ್ನಿಡುವ ಪ್ರಾಮುಖ್ಯತೆಯನ್ನು ಅರಿತುಕೊಂಡೆವು. ನಾವು ಊಟಮಾಡುತ್ತಿರಲಿ, ತೋಟದಲ್ಲಿ ಕೆಲಸಮಾಡುತ್ತಿರಲಿ, ಇಲ್ಲವೆ ತಿರುಗಾಡುತ್ತಿರಲಿ, ನಾವು ಯೆಹೋವನೊಂದಿಗೆ ಪ್ರತಿಯೊಂದು ಮಗುವಿನ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿದೆವು. (ಧರ್ಮೋಪದೇಶಕಾಂಡ 6:​6, 7) ಪ್ರತಿಯೊಂದು ಮಗುವಿಗೆ ಚಿಕ್ಕ ಪ್ರಾಯದಲ್ಲೇ ತನ್ನ ಸ್ವಂತ ಬೈಬಲ್‌ ಇರುವಂತೆ ನೋಡಿಕೊಂಡೆವು. ಅಷ್ಟುಮಾತ್ರವಲ್ಲದೆ, ಪತ್ರಿಕೆಗಳನ್ನು ಪಡೆದಾಕ್ಷಣ ನಾನು ಪ್ರತಿಯೊಬ್ಬ ಕುಟುಂಬ ಸದಸ್ಯನ ಹೆಸರನ್ನು ಅವನ ಇಲ್ಲವೆ ಅವಳ ವೈಯಕ್ತಿಕ ಪ್ರತಿಯ ಮೇಲೆ ಬರೆದಿಡುತ್ತಿದ್ದೆ. ಹೀಗೆ ಮಕ್ಕಳು ತಮ್ಮ ಸ್ವಂತ ಸಾಹಿತ್ಯ ಯಾವುದೆಂಬುದನ್ನು ಗುರುತಿಸಲು ಕಲಿತುಕೊಂಡರು. ಮಕ್ಕಳಿಗೆ ಓದಲಿಕ್ಕಾಗಿ ಎಚ್ಚರ! ಪತ್ರಿಕೆಯ ನಿರ್ದಿಷ್ಟ ಲೇಖನಗಳನ್ನು ನೇಮಿಸುವ ವಿಚಾರವು ನಮ್ಮ ಮನಸ್ಸಿಗೆ ಬಂತು. ಪ್ರತಿ ಭಾನುವಾರ ಮಧ್ಯಾಹ್ನದೂಟದ ನಂತರ, ಅವರಿಗೆ ಆ ಲೇಖನದಿಂದ ಏನು ಅರ್ಥವಾಯಿತೆಂಬುದನ್ನು ಅವರು ನಮಗೆ ವಿವರಿಸಿ ಹೇಳುತ್ತಿದ್ದರು.

ಮಕ್ಕಳಿಗೆ ಅಗತ್ಯವಿದ್ದ ಗಮನವನ್ನು ಕೊಡುವುದು

ಯಾವಾಗಲೂ ಎಲ್ಲವೂ ಸುಗಮವಾಗಿ ಸಾಗಲಿಲ್ಲ ನಿಜ. ಮಕ್ಕಳು ಬೆಳೆಯುತ್ತಾ ಹೋದಂತೆ, ಅವರ ಹೃದಯಗಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ನೆಡಲಿಕ್ಕಾಗಿ, ಮೊದಲು ಅವರ ಹೃದಯದಲ್ಲಿ ಈಗಾಗಲೇ ಏನಿದೆಯೆಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವೆಂಬುದನ್ನು ನಾವು ಕಂಡುಹಿಡಿದೆವು. ಇದಕ್ಕಾಗಿ ನಾವು ಅವರಿಗೆ ಕಿವಿಗೊಡಬೇಕಿತ್ತು. ನಮ್ಮ ಮಕ್ಕಳಿಗೆ ಕೆಲವೊಮ್ಮೆ ನಮ್ಮ ಬಗ್ಗೆ ದೂರುಗಳಿದ್ದವು, ಆದುದರಿಂದ ನಾನು ಮತ್ತು ಕಾರ್ಲಾ ಅವರೊಂದಿಗೆ ಕುಳಿತುಕೊಂಡು ಆ ವಿಷಯವನ್ನು ಚರ್ಚಿಸುತ್ತಿದ್ದೆವು. ಕುಟುಂಬ ಅಭ್ಯಾಸದ ಅಂತ್ಯದಲ್ಲಿ ನಾವು ಒಂದು ವಿಶೇಷವಾದ ಅರ್ಧ ತಾಸನ್ನು ಸೇರಿಸಿದೆವು. ಆಗ, ಕುಟುಂಬದ ಸದಸ್ಯರೆಲ್ಲರೂ ತಮಗೇನು ಅನಿಸುತ್ತದೆಂಬುದನ್ನು ಮುಚ್ಚುಮರೆಯಿಲ್ಲದೆ ಹೇಳಬಹುದಿತ್ತು.

ಉದಾಹರಣೆಗೆ, ನಮ್ಮ ಕಿರಿಯ ಮಕ್ಕಳಾದ ಟೋಮಾಸ್‌ ಮತ್ತು ಗಾಬ್ರೀಏಲಾರಿಗೆ, ಹೆತ್ತವರಾದ ನಾವು ಅವರ ಹಿರಿಯಣ್ಣನಿಗೆ ಪಕ್ಷಪಾತವನ್ನು ತೋರಿಸುತ್ತಿದ್ದೇವೆಂದು ಅನಿಸುತ್ತಿತ್ತು. ಒಂದು ಅಭ್ಯಾಸದ ನಂತರ, ಅವರು ತಮ್ಮ ಮನಸ್ಸಿನಲ್ಲಿದ್ದ ವಿಚಾರವನ್ನು ಹಿಂಜರಿಯದೆ ತಿಳಿಸಿಯೇಬಿಟ್ಟರು: “ಅಪ್ಪ, ನೀವು ಮತ್ತು ಅಮ್ಮ ಯಾವಾಗಲೂ ಹಾನ್ಸ್‌ ವರ್ನರ್‌ಗೆ ಅವನಿಗೆ ಇಷ್ಟಬಂದಂತೆ ಮಾಡಲು ಬಿಡುತ್ತೀರೆಂದು ನಮಗನಿಸುತ್ತದೆ.” ಮೊದಲು ನನಗೆ ಅದನ್ನು ನಂಬಲಿಕ್ಕೇ ಆಗಲಿಲ್ಲ. ಆದರೆ ಆ ವಿಷಯವನ್ನು ಯಾವುದೇ ಪೂರ್ವಾಭಿಪ್ರಾಯವಿಲ್ಲದೆ ತೂಗಿನೋಡಿದಾಗ, ಆ ಮಕ್ಕಳು ಹೇಳಿದ ಸಂಗತಿ ಸರಿಯೆಂದು ನಾವು ಒಪ್ಪಿಕೊಳ್ಳಬೇಕಾಯಿತು. ಆದುದರಿಂದ ಎಲ್ಲ ಮಕ್ಕಳನ್ನೂ ಒಂದೇ ಸಮಾನವಾಗಿ ಉಪಚರಿಸಲು ನಾವು ಹೆಚ್ಚಿನ ಪ್ರಯತ್ನವನ್ನು ಮಾಡಿದೆವು.

ಕೆಲವೊಮ್ಮೆ ನಾನು ಮಕ್ಕಳಿಗೆ ಆತುರತೆಯಿಂದ ಇಲ್ಲವೆ ಅನ್ಯಾಯವಾಗಿ ಶಿಕ್ಷಿಸುತ್ತಿದ್ದೆ. ಅಂಥ ಸಂದರ್ಭಗಳಲ್ಲಿ ಹೆತ್ತವರೋಪಾದಿ ನಾವು ಕ್ಷಮೆಯಾಚಿಸಲು ಕಲಿತುಕೊಳ್ಳಬೇಕಾಯಿತು. ನಂತರ, ನಾವು ಪ್ರಾರ್ಥನೆಯ ಮೂಲಕ ಯೆಹೋವನ ಬಳಿ ಹೋಗುತ್ತಿದ್ದೆವು. ತಮ್ಮ ತಂದೆಯು ಯೆಹೋವನಿಂದಲೂ, ಮಕ್ಕಳಾದ ತಮ್ಮಿಂದಲೂ ಕ್ಷಮೆಯನ್ನು ಬೇಡಲು ಸಿದ್ಧನಾಗಿದ್ದಾನೆಂಬುದನ್ನು ಅವರು ಅರಿತುಕೊಳ್ಳುವುದು ಪ್ರಾಮುಖ್ಯವಾಗಿತ್ತು. ಫಲಸ್ವರೂಪವಾಗಿ, ನಮಗೆ ಅವರೊಂದಿಗೆ ಒಂದು ಹಾರ್ದಿಕವಾದ, ಸ್ನೇಹಮಯ ಸಂಬಂಧವಿತ್ತು. “ನೀವೇ ನಮ್ಮ ಅತ್ಯಾಪ್ತ ಸ್ನೇಹಿತರು” ಎಂದು ಅವರು ಎಷ್ಟೋ ಸಲ ನಮಗಂದಿದ್ದಾರೆ. ಇದು ನಮಗೆ ತುಂಬ ಸಂತೋಷವನ್ನು ತರುತ್ತಿತ್ತು.

ಒಂದು ಕುಟುಂಬದೋಪಾದಿ ಜೊತೆಯಾಗಿ ಕೆಲಸಮಾಡುವುದು ಐಕ್ಯವನ್ನು ಹೆಚ್ಚಿಸುತ್ತದೆ. ಈ ಉದ್ದೇಶದಿಂದಲೇ, ಪ್ರತಿಯೊಬ್ಬರಿಗೆ ಮನೆಯಲ್ಲಿ ಮಾಡಲಿಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಕೊಡಲಾಗಿತ್ತು. ಹಾನ್ಸ್‌ ವರ್ನರ್‌ನಿಗೆ ವಾರದಲ್ಲಿ ಒಂದು ದಿನ ಮಾರುಕಟ್ಟೆಗೆ ಹೋಗಿ, ಮನೆಗೆ ಬೇಕಾಗುವ ಎಲ್ಲ ಸಾಮಾನುಗಳನ್ನು ತರುವ ಕೆಲಸವನ್ನು ನೇಮಿಸಲಾಗಿತ್ತು. ಇದರರ್ಥ, ಖರೀದಿಸಬೇಕಾದ ಸಾಮಾನುಗಳ ಒಂದು ಪಟ್ಟಿಯೊಂದಿಗೆ ಅವನಿಗೆ ಸ್ವಲ್ಪ ಹಣವನ್ನೂ ಕೊಡಲಾಗುತ್ತಿತ್ತು. ಆದರೆ ಒಂದು ವಾರ ನಾವು ಅವನಿಗೆ ಆ ಪಟ್ಟಿಯನ್ನೂ ಕೊಡಲಿಲ್ಲ, ಹಣವನ್ನೂ ಕೊಡಲಿಲ್ಲ. ಅವನು ತನ್ನ ತಾಯಿಯ ಬಳಿ ಇದರ ಕುರಿತಾಗಿ ವಿಚಾರಿಸಿದಾಗ, ನಮ್ಮ ಕೈಗೆ ಇನ್ನೂ ಹಣ ಬಂದಿಲ್ಲವೆಂದು ಅವಳು ಅವನಿಗೆ ಹೇಳಿದಳು. ಆಗ ಮಕ್ಕಳು ತಮ್ಮೊಳಗೆ ಗುಸುಗುಸು ಮಾತನಾಡಲಾರಂಭಿಸಿದರು. ನಂತರ ಎಲ್ಲರೂ ತಮ್ಮ ಹಣದ ಡಬ್ಬಿಗಳನ್ನು ತಂದು ಅದನ್ನು ಮೇಜಿನ ಮೇಲೆ ಖಾಲಿಮಾಡಿದರು. “ಅಮ್ಮ ಈಗ ನಾವು ಖರೀದಿಮಾಡಲು ಹೋಗಬಹುದು!” ಎಂದವರೆಲ್ಲರೂ ಘೋಷಿಸಿದರು. ಹೌದು, ತುರ್ತುಪರಿಸ್ಥಿತಿಯಲ್ಲಿ ಸಹಾಯಮಾಡುವ ಸಂಗತಿಯನ್ನು ಮಕ್ಕಳು ಕಲಿತಿದ್ದರು, ಮತ್ತು ಇದರಿಂದಾಗಿ ಕುಟುಂಬವು ಇನ್ನೂ ಹೆಚ್ಚು ನಿಕಟ ಸಂಬಂಧವುಳ್ಳದ್ದಾಯಿತು.

ವಯಸ್ಸಿಗೆ ಬರುತ್ತಿದ್ದಾಗ, ನಮ್ಮ ಹುಡುಗರು ಹುಡುಗಿಯರ ಬಗ್ಗೆ ಆಸಕ್ತಿ ವಹಿಸಲಾರಂಭಿಸಿದರು. ಉದಾಹರಣೆಗೆ ಟೋಮಾಸ್‌, 16 ವರ್ಷ ಪ್ರಾಯದ ಜೊತೆ ಸಾಕ್ಷಿಯೊಬ್ಬಳಲ್ಲಿ ತುಂಬ ಅನುರಕ್ತನಾದನು. ಅವನಿಗೆ ನಿಜವಾಗಿಯೂ ಆ ಹುಡುಗಿಯಲ್ಲಿ ಆಸಕ್ತಿಯಿರುವಲ್ಲಿ, ಅವನು ಅವಳನ್ನು ಮದುವೆಯಾಗಿ, ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಿದ್ಧನಾಗಿರಬೇಕೆಂದು ನಾನು ಅವನಿಗೆ ವಿವರಿಸಿದೆ. ಅವನು ಆಗ ಕೇವಲ 18 ವರ್ಷದವನಾಗಿದ್ದುದರಿಂದ, ತಾನು ಮದುವೆಗೆ ಸಿದ್ಧನಾಗಿಲ್ಲವೆಂಬುದನ್ನು ಟೋಮಾಸ್‌ ಗ್ರಹಿಸಿದನು.

ಒಂದು ಕುಟುಂಬದೋಪಾದಿ ಪ್ರಗತಿಮಾಡುವುದು

ಮಕ್ಕಳು ಎಳೆಯ ಪ್ರಾಯದಲ್ಲೇ ಒಬ್ಬರ ನಂತರ ಇನ್ನೊಬ್ಬರಂತೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಸೇರಿಕೊಂಡರು. ನಾವು ಅವರ ಭಾಷಣಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದೆವು, ಮತ್ತು ಮಕ್ಕಳಲ್ಲಿ ದೇವರ ಕಡೆಗಿದ್ದ ವೈಯಕ್ತಿಕವಾದ ಹೃತ್ಪೂರ್ವಕ ಪ್ರೀತಿಯನ್ನು ನೋಡಿ ಪ್ರೋತ್ಸಾಹಿಸಲ್ಪಟ್ಟೆವು. ನಮ್ಮೊಂದಿಗೆ ಆಗಾಗ್ಗೆ ತಂಗುತ್ತಿದ್ದ ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಮೇಲ್ವಿಚಾರಕರು ತಮ್ಮ ಸ್ವಂತ ಜೀವನಗಳಲ್ಲಿ ನಡೆದ ಅನುಭವಗಳನ್ನು ತಿಳಿಸುತ್ತಿದ್ದರು ಇಲ್ಲವೆ ಬೈಬಲಿನಿಂದ ವಚನಗಳನ್ನು ಓದಿ ಹೇಳುತ್ತಿದ್ದರು. ಈ ಪುರುಷರು ಮತ್ತು ಅವರ ಹೆಂಡತಿಯರು, ನಮ್ಮ ಕುಟುಂಬ ಸದಸ್ಯರ ಹೃದಯಗಳಲ್ಲಿ ಪೂರ್ಣ ಸಮಯದ ಸೇವೆಗಾಗಿ ಪ್ರೀತಿಯನ್ನು ಬೆಳೆಸಲು ಸಹಾಯಮಾಡಿದರು.

ನಾವು ಅಧಿವೇಶನಗಳಿಗಾಗಿ ಎದುರುನೋಡುತ್ತಿದ್ದೆವು. ದೇವರ ಸೇವಕರಾಗಿರುವ ಆಸೆಯನ್ನು ನಮ್ಮ ಮಕ್ಕಳಲ್ಲಿ ನೆಡುವ ನಮ್ಮ ಪ್ರಯತ್ನಗಳಲ್ಲಿ ಈ ಅಧಿವೇಶನಗಳು ಒಂದು ಮುಖ್ಯ ಅಂಶವಾಗಿದ್ದವು. ಅಧಿವೇಶನದ ಸ್ಥಳಕ್ಕೆ ಪ್ರಯಾಣ ಬೆಳೆಸುವ ಮುಂಚೆ ತಮ್ಮ ಲಪೆಲ್‌ ಕಾರ್ಡುಗಳನ್ನು ಧರಿಸುವುದು ಮಕ್ಕಳಿಗೆ ಒಂದು ವಿಶೇಷ ಕ್ಷಣವಾಗಿರುತ್ತಿತ್ತು. ಹಾನ್ಸ್‌ ವರ್ನರ್‌ ಹತ್ತು ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಹೊಂದಿದಾಗ ನಮ್ಮ ಹೃದಯವು ತುಂಬಿಬಂತು. ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಳ್ಳಲು ಅವನು ತೀರ ಚಿಕ್ಕವನೆಂದು ಅನೇಕರು ನೆನಸಿದ್ದರು. ಆದರೆ ಈಗ 50ರ ವಯಸ್ಸಿನವನಾಗಿರುವ ಅವನು, ತಾನು ಯೆಹೋವನನ್ನು 40 ವರ್ಷಗಳಿಂದ ಸೇವಿಸುತ್ತಿರುವುದಕ್ಕಾಗಿ ತಾನೆಷ್ಟು ಆಭಾರಿಯಾಗಿದ್ದೇನೆಂದು ನನಗೆ ಹೇಳಿದನು.

ಯೆಹೋವನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳುವುದು ಪ್ರಾಮುಖ್ಯ ಎಂಬುದನ್ನು ನಾವು ನಮ್ಮ ಮಕ್ಕಳಿಗೆ ತೋರಿಸಿದೆವು, ಆದರೆ ಅವರು ಸಮರ್ಪಣೆಯನ್ನು ಮಾಡಿಕೊಳ್ಳುವಂತೆ ನಾವು ಒತ್ತಾಯಮಾಡಲಿಲ್ಲ. ಆದರೆ ಉಳಿದ ಮಕ್ಕಳು ಸಹ ತಮ್ಮ ಸ್ವಂತ ಸಮಯದಲ್ಲಿ ದೀಕ್ಷಾಸ್ನಾನವನ್ನು ಪಡೆಯುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದಾಗ ನಾವು ಸಂತೋಷಪಟ್ಟೆವು.

ಯೆಹೋವನ ಮೇಲೆ ನಮ್ಮ ಭಾರವನ್ನು ಹಾಕಲು ಕಲಿಯುವುದು

ಹಾನ್ಸ್‌ ವರ್ನರ್‌, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 51ನೆಯ ತರಗತಿಯ ಸದಸ್ಯನೋಪಾದಿ 1971ರಲ್ಲಿ ಪದವಿಪ್ರಾಪ್ತನಾಗಿ, ಸ್ಪೆಯ್ನ್‌ನಲ್ಲಿ ಮಿಷನೆರಿಯಾಗಿ ಸೇವೆಸಲ್ಲಿಸಲು ನೇಮಿಸಲ್ಪಟ್ಟಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಒಬ್ಬರ ನಂತರ ಇನ್ನೊಬ್ಬರಂತೆ ಉಳಿದ ಮಕ್ಕಳು ಸಹ ಸ್ವಲ್ಪ ಸಮಯ ಪೂರ್ಣ ಸಮಯದ ಶುಶ್ರೂಷಕರೋಪಾದಿ ಸೇವೆಸಲ್ಲಿಸಿದರು, ಮತ್ತು ಇದು ಹೆತ್ತವರಾದ ನಮಗೆ ತುಂಬ ಸಂತೋಷವನ್ನು ತಂದಿತ್ತು. ಈ ಸಮಯದಲ್ಲೇ, ಹಾನ್ಸ್‌ ವರ್ನರ್‌, ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಬೈಬಲನ್ನು ಕೊಟ್ಟನು. ಒಂದು ಕುಟುಂಬದೋಪಾದಿ ನಮ್ಮ ಸಂತೋಷವು ಪೂರ್ಣವಾಗಿದ್ದಂತೆ ತೋರಿತು.

ಆದರೆ ಆಗ, ನಾವು ಯೆಹೋವನಿಗೆ ಇನ್ನೂ ಹೆಚ್ಚು ಆಪ್ತರಾಗಿ ಅಂಟಿಕೊಳ್ಳುವ ಅಗತ್ಯವಿದೆ ಎಂಬುದನ್ನು ಕಂಡುಹಿಡಿದೆವು. ಏಕೆ? ಏಕೆಂದರೆ ಬೆಳೆದಿದ್ದ ನಮ್ಮ ಮಕ್ಕಳಲ್ಲಿ ಕೆಲವರು, ತಮ್ಮ ನಂಬಿಕೆಯನ್ನು ಗಂಭೀರವಾಗಿ ಪರೀಕ್ಷೆಗೊಳಪಡಿಸಿದಂಥ ಸಮಸ್ಯೆಗಳನ್ನು ಎದುರಿಸುವುದನ್ನು ನಾವು ನೋಡಿದೆವು. ಉದಾಹರಣೆಗೆ, ನಮ್ಮ ಮುದ್ದು ಮಗಳಾದ ಗಾಬ್ರೀಏಲಾ ಸಂಕಷ್ಟಗಳಿಗೆ ತುತ್ತಾದಳು. 1976ರಲ್ಲಿ ಅವಳು ಲೋಟಾರ್‌ ಎಂಬವನನ್ನು ಮದುವೆಯಾದಳು. ಮದುವೆಯಾದ ಸ್ವಲ್ಪ ಸಮಯದಲ್ಲೇ ಅವನು ಕಾಯಿಲೆಬಿದ್ದನು. ಅವನು ದುರ್ಬಲನಾಗುತ್ತಾ ಹೋದಂತೆ, ಅವನ ಸಾವಿನ ವರೆಗೂ ಗಾಬ್ರೀಏಲಾ ಅವನ ಆರೈಕೆಮಾಡಿದಳು. ಕುಟುಂಬದ ಒಬ್ಬ ಆರೋಗ್ಯವಂತ ಸದಸ್ಯನು ನಮ್ಮ ಕಣ್ಮುಂದೆಯೇ ಕಾಯಿಲೆಬಿದ್ದು ಸಾಯುವುದನ್ನು ನೋಡುವುದು, ನಮಗೆ ಯೆಹೋವನ ಪ್ರೀತಿಯ ಹಸ್ತವು ಎಷ್ಟು ಆವಶ್ಯಕವಾಗಿದೆ ಎಂಬುದನ್ನು ಜ್ಞಾಪಕಕ್ಕೆ ತಂದಿತು.​—ಯೆಶಾಯ 33:2.

ಯೆಹೋವನ ಸಂಸ್ಥೆಯಲ್ಲಿ ಸುಯೋಗಗಳು

ಇಸವಿ 1955ರಲ್ಲಿ ನನ್ನನ್ನು ಸಭಾ ಸೇವಕನಾಗಿ (ಈಗ ಅಧ್ಯಕ್ಷ ಮೇಲ್ವಿಚಾರಕನೆಂದು ಕರೆಯಲಾಗುತ್ತದೆ) ನೇಮಿಸಲಾದಾಗ, ನಾನು ಆ ಜವಾಬ್ದಾರಿಗೆ ಅರ್ಹನಲ್ಲವೆಂದು ನನಗನಿಸುತ್ತಿತ್ತು. ಮಾಡಲು ಬಹಳಷ್ಟು ಕೆಲಸಗಳಿದ್ದವು, ಮತ್ತು ಈ ಎಲ್ಲ ಜವಾಬ್ದಾರಿಗಳನ್ನು ಪೂರೈಸುವ ಒಂದೇ ಒಂದು ಮಾರ್ಗ, ನಾನು ಕೆಲವೊಮ್ಮೆ ಮುಂಜಾನೆ ನಾಲ್ಕು ಗಂಟೆಗೇಳುವುದೇ ಆಗಿತ್ತು. ನನ್ನ ಹೆಂಡತಿ ಮತ್ತು ಮಕ್ಕಳು ನನಗೆ ತುಂಬ ಬೆಂಬಲವನ್ನು ಕೊಟ್ಟರು. ಸಾಯಂಕಾಲಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡಲಿಕ್ಕಿರುತ್ತಿದ್ದರೂ, ಆ ಸಮಯದಲ್ಲಿ ನನಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅವರು ನೋಡಿಕೊಳ್ಳುತ್ತಿದ್ದರು.

ಹಾಗಿದ್ದರೂ, ಒಂದು ಕುಟುಂಬದೋಪಾದಿ ನಾವು ಸಾಧ್ಯವಿರುವಷ್ಟು ಹೆಚ್ಚು ಸಮಯವನ್ನು ಜೊತೆಯಾಗಿ ಕಳೆಯುತ್ತಿದ್ದೆವು. ಕೆಲವೊಮ್ಮೆ ನನ್ನ ಧಣಿಯು, ನಾನು ಕುಟುಂಬವನ್ನು ಹೊರಗೆಲ್ಲಿಯಾದರೂ ತಿರುಗಾಡಲಿಕ್ಕಾಗಿ ಕರೆದುಕೊಂಡು ಹೋಗುವಂತೆ ತಮ್ಮ ಕಾರನ್ನು ನನ್ನ ಉಪಯೋಗಕ್ಕಾಗಿ ಕೊಡುತ್ತಿದ್ದರು. ನಾವು ಕಾಡಿನಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಅಭ್ಯಾಸಮಾಡುತ್ತಿದ್ದ ಸಮಯಗಳಲ್ಲಿ ಮಕ್ಕಳು ಆನಂದಿಸುತ್ತಿದ್ದರು. ನಾವು ಜೊತೆಯಾಗಿ ಊರಿಂದಾಚೆ ಸುತ್ತಾಡುತ್ತಾ ಹೋಗುತ್ತಿದ್ದೆವು. ಕೆಲವೊಮ್ಮೆ ನಾನು ಹಾರ್ಮೋನಿಕವನ್ನು ಬಾರಿಸುತ್ತಿದ್ದಾಗ ಎಲ್ಲರೂ ಜೊತೆಯಾಗಿ ಹಾಡುಗಳನ್ನು ಹಾಡುತ್ತಾ ಅರಣ್ಯದಲ್ಲಿ ನಡೆಯುತ್ತಾ ಹೋಗುತ್ತಿದ್ದೆವು.

ಇಸವಿ 1978ರಲ್ಲಿ ನನ್ನನ್ನು ಬದಲಿ ಸರ್ಕಿಟ್‌ ಮೇಲ್ವಿಚಾರಕ (ಸಂಚರಣಾ ಶುಶ್ರೂಷಕ)ನಾಗಿ ನೇಮಿಸಲಾಯಿತು. ಭಾವಪರವಶನಾಗಿ ನಾನು ಹೀಗೆ ಪ್ರಾರ್ಥಿಸಿದೆ: “ಯೆಹೋವನೇ ನಾನಿದನ್ನು ಮಾಡಶಕ್ತನೆಂದು ನನಗನಿಸುವುದಿಲ್ಲ. ಆದರೆ ನಾನು ಪ್ರಯತ್ನಿಸಬೇಕೆಂದು ನೀನು ಬಯಸುತ್ತಿರುವಲ್ಲಿ, ಖಂಡಿತವಾಗಿಯೂ ನನ್ನಿಂದಾದದ್ದೆಲ್ಲವನ್ನು ಮಾಡುವೆ.” ಎರಡು ವರ್ಷಗಳ ನಂತರ, 54 ವರ್ಷ ಪ್ರಾಯದಲ್ಲಿ, ನಾನು ನನ್ನ ಚಿಕ್ಕ ವ್ಯಾಪಾರವನ್ನು ನನ್ನ ಕಿರಿಯ ಪುತ್ರನಾದ ಟೋಮಾಸ್‌ನಿಗೆ ಒಪ್ಪಿಸಿದೆ.

ನಮ್ಮ ಎಲ್ಲ ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಇದು ನನಗೂ ಕಾರ್ಲಾಳಿಗೂ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಅವಕಾಶವನ್ನು ಕೊಟ್ಟಿತು. ಅದೇ ವರ್ಷ ನನ್ನನ್ನು ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಿಸಿ, ಹ್ಯಾಮ್‌ಬರ್ಗ್‌ನ ಒಂದು ಭಾಗವನ್ನು ಮತ್ತು ಇಡೀ ಶ್ಲೆಷ್‌ವಿಗ್‌ ಹೋಲ್‌ಸ್ಟೆನ್‌ ಪ್ರದೇಶವನ್ನು ನನಗೆ ಕೊಡಲಾಯಿತು. ಒಂದು ಕುಟುಂಬವನ್ನು ಬೆಳೆಸುವುದರಲ್ಲಿ ನಮಗಿದ್ದ ಅನುಭವದಿಂದಾಗಿ, ನಾವು ಹೆತ್ತವರನ್ನು ಮತ್ತು ಅವರ ಮಕ್ಕಳನ್ನು ವಿಶೇಷವಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದೆವು. ಅನೇಕ ಸಹೋದರರು ನಮ್ಮನ್ನು ತಮ್ಮ ಸರ್ಕಿಟ್‌ ಹೆತ್ತವರು ಎಂದು ಕರೆಯುತ್ತಿದ್ದರು!

ಸರ್ಕಿಟ್‌ ಕೆಲಸದಲ್ಲಿ ಹತ್ತು ವರ್ಷಗಳ ವರೆಗೆ ನನ್ನೊಂದಿಗೆ ಜೊತೆಗೂಡಿದ ನಂತರ, ಕಾರ್ಲಾ ಒಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅದೇ ವರ್ಷದಲ್ಲಿ ನನಗೆ ಮಿದುಳಿನ ಟ್ಯೂಮರ್‌ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಆದುದರಿಂದ ನಾನು ಸರ್ಕಿಟ್‌ ಮೇಲ್ವಿಚಾರಕನೋಪಾದಿ ನನ್ನ ಸೇವೆಯನ್ನು ನಿಲ್ಲಿಸಬೇಕಾಯಿತು ಮತ್ತು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಮೂರು ವರ್ಷಗಳ ನಂತರವೇ ನಾನು ಪುನಃ ಒಮ್ಮೆ ಬದಲಿ ಸರ್ಕಿಟ್‌ ಮೇಲ್ವಿಚಾರಕನೋಪಾದಿ ಕೆಲಸಮಾಡಲು ಶಕ್ತನಾದೆ. ನಾನು ಮತ್ತು ಕಾರ್ಲಾ ಈಗ ನಮ್ಮ 70ರ ಪ್ರಾಯದಲ್ಲಿದ್ದೇವೆ ಮತ್ತು ನಾವೀಗ ಸಂಚರಣಾ ಕೆಲಸದಲ್ಲಿಲ್ಲ. ನಾನು ಇನ್ನು ಮುಂದೆ ಪೂರೈಸಲು ಶಕ್ತನಾಗಿರದಂಥ ಒಂದು ಸುಯೋಗಕ್ಕೆ ಅಂಟಿಕೊಳ್ಳುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂಬುದನ್ನು ನಾವು ಮನಗಾಣುವಂತೆ ಯೆಹೋವನು ನಮಗೆ ಸಹಾಯಮಾಡಿದನು.

ಹಿಂದೆ ತಿರುಗಿ ನೋಡುವಾಗ, ನಾನು ಮತ್ತು ಕಾರ್ಲಾ, ನಮ್ಮ ಮಕ್ಕಳ ಹೃದಯಗಳಲ್ಲಿ ಸತ್ಯಕ್ಕಾಗಿ ಪ್ರೀತಿಯನ್ನು ನೆಡಲು ಸಹಾಯವನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ಆಭಾರಿಗಳಾಗಿದ್ದೇವೆ. (ಜ್ಞಾನೋಕ್ತಿ 22:6) ಈ ಎಲ್ಲ ವರ್ಷಗಳಾದ್ಯಂತ, ಯೆಹೋವನು ನಮ್ಮನ್ನು ಮಾರ್ಗದರ್ಶಿಸಿ ತರಬೇತಿ ಕೊಟ್ಟಿದ್ದಾನೆ, ಹಾಗೂ ನಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ಸಹಾಯಮಾಡಿದ್ದಾನೆ. ನಾವು ವೃದ್ಧರೂ ನಿರ್ಬಲರೂ ಆಗಿರುವುದಾದರೂ, ಯೆಹೋವನಿಗಾಗಿರುವ ನಮ್ಮ ಪ್ರೀತಿಯಂತೂ ಎಂದಿನಂತೆಯೇ ಹಚ್ಚಹಸುರಾಗಿದೆ.​—ರೋಮಾಪುರ 12:​10, 11.

[ಪಾದಟಿಪ್ಪಣಿ]

^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಆದರೆ ಈಗ ಲಭ್ಯವಿಲ್ಲ.

[ಪುಟ 26ರಲ್ಲಿರುವ ಚಿತ್ರ]

ಹ್ಯಾಮ್‌ಬರ್ಗ್‌ನಲ್ಲಿ ಎಲ್ಬ ನದಿಯ ಕಿನಾರೆಯಲ್ಲಿ ನಡೆದಾಡುತ್ತಿರುವ ನಮ್ಮ ಕುಟುಂಬ, 1965

[ಪುಟ 28ರಲ್ಲಿರುವ ಚಿತ್ರ]

ಬರ್ಲಿನ್‌ನಲ್ಲಿ 1998ರಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಕುಟುಂಬದ ಕೆಲವು ಸದಸ್ಯರು

[ಪುಟ 29ರಲ್ಲಿರುವ ಚಿತ್ರ]

ನನ್ನ ಹೆಂಡತಿ ಕಾರ್ಲಾಳೊಂದಿಗೆ