ನೀವು ವೆಚ್ಚವನ್ನು ಲೆಕ್ಕಮಾಡಿ ನೋಡುತ್ತೀರೊ?
ನೀವು ವೆಚ್ಚವನ್ನು ಲೆಕ್ಕಮಾಡಿ ನೋಡುತ್ತೀರೊ?
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನಿತ್ಯ ಜೀವದ ನಿರೀಕ್ಷೆಯನ್ನು ಕೊಟ್ಟನು. ಆದರೆ ಅದೇ ಸಮಯದಲ್ಲಿ ಒಬ್ಬ ಕ್ರೈಸ್ತನಾಗುವುದರ ವೆಚ್ಚವನ್ನು ಲೆಕ್ಕಿಸುವಂತೆಯೂ ಅವರನ್ನು ಪ್ರೇರೇಪಿಸಿದನು. ಈ ವಿಷಯವನ್ನು ಅವನು ಹೀಗೆ ಕೇಳುವ ಮೂಲಕ ದೃಷ್ಟಾಂತಿಸಿದನು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ [ಇಲ್ಲವೆ, ವೆಚ್ಚವನ್ನು ಲೆಕ್ಕಹಾಕಿ ನೋಡುವುದಿಲ್ಲವೇ]?” (ಲೂಕ 14:28) ಯೇಸುವಿನ ಮನಸ್ಸಿನಲ್ಲಿ ಯಾವ ವೆಚ್ಚ ಇತ್ತು?
ಎಲ್ಲ ಕ್ರೈಸ್ತರು ಸಂಕಷ್ಟಗಳನ್ನು ಖಂಡಿತವಾಗಿಯೂ ಎದುರಿಸುತ್ತಾರೆ, ಅದರಲ್ಲೂ ಕೆಲವು ಗಂಭೀರವಾದದ್ದಾಗಿರುತ್ತವೆ. (ಕೀರ್ತನೆ 34:19; ಮತ್ತಾಯ 10:36) ಆದುದರಿಂದ ವಿರೋಧ ಇಲ್ಲವೆ ಬೇರಾವುದೇ ಸಮಸ್ಯೆಗಳು ನಮ್ಮ ಮುಂದೆ ಬರುವಾಗ, ನಾವು ಆಶ್ಚರ್ಯಪಡದಂತೆ ಯಾವಾಗಲೂ ಮಾನಸಿಕವಾಗಿಯೂ ಆತ್ಮಿಕವಾಗಿಯೂ ಸಿದ್ಧರಾಗಿರಬೇಕು. ಕ್ರಿಸ್ತನ ಶಿಷ್ಯನಾಗುವುದರ ವೆಚ್ಚದಲ್ಲಿ ಅಂಥ ಪಂಥಾಹ್ವಾನಗಳು ಸೇರಿವೆ ಎಂಬುದನ್ನು ನಾವು ಈಗಾಗಲೇ ಲೆಕ್ಕಮಾಡಿರಬಹುದು. ಆದರೆ ಈ ಸದ್ಯದ ವ್ಯವಸ್ಥೆಯು ನಮಗೆ ನೀಡಬಹುದಾದ ಯಾವುದೇ ಸಂಗತಿಗಿಂತಲೂ ಎಷ್ಟೋ ಅಮೂಲ್ಯವಾದ ಬಹುಮಾನ, ಅಂದರೆ ಪಾಪಮರಣಗಳಿಂದ ರಕ್ಷಣೆಯೆಂಬ ಪ್ರತಿಫಲದ ಬಗ್ಗೆ ನಮಗೆ ತಿಳಿದಿತ್ತು. ಹೌದು, ನಾವು ದೇವರ ಸೇವೆಯನ್ನು ಮಾಡುತ್ತಾ ಇರುವುದಾದರೆ, ದೇವರು ಅನುಮತಿಸುವ ಯಾವುದೇ ಸಂಗತಿಯು—ಅದು ಮರಣವೇ ಆಗಿರಲಿ—ನಮಗೆ ಶಾಶ್ವತ ಹಾನಿಯನ್ನು ಮಾಡಲಾರದು.—2 ಕೊರಿಂಥ 4:16-18; ಫಿಲಿಪ್ಪಿ 3:8.
ನಮ್ಮ ನಂಬಿಕೆಯು ಹೇಗೆ ಅಷ್ಟು ಬಲವಾಗಿರಬಲ್ಲದು? ನಾವು ಒಂದು ಸರಿಯಾದ ನಿರ್ಣಯವನ್ನು ಮಾಡಿದಾಗ, ಕ್ರೈಸ್ತ ಮೂಲತತ್ತ್ವಗಳ ಪರವಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳುವಾಗ, ಇಲ್ಲವೆ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಯಾವುದಾದರೂ ಕ್ರಿಯೆಗೈಯುವಾಗ—ಮತ್ತು ವಿಶೇಷವಾಗಿ ಇದಕ್ಕೆ ವಿರುದ್ಧವಾದುದನ್ನು ಮಾಡುವ ಒತ್ತಡದ ಕೆಳಗಿರುವಾಗಲೂ ನಾವಿದನ್ನು ಮಾಡುವಾಗ, ನಮ್ಮ ನಂಬಿಕೆಯು ಬಲವಾಗುತ್ತಾ ಹೋಗುತ್ತದೆ. ನಮ್ಮ ನಂಬಿಗಸ್ತ ಮಾರ್ಗಕ್ರಮದ ಫಲವಾಗಿ ನಾವು ವೈಯಕ್ತಿಕವಾಗಿ ಯೆಹೋವನ ಆಶೀರ್ವಾದವನ್ನು ಅನುಭವಿಸುವಾಗ, ನಮ್ಮ ನಂಬಿಕೆಯು ಬಲಗೊಳಿಸಲ್ಪಟ್ಟು, ಗಾಢಗೊಳಿಸಲ್ಪಡುತ್ತದೆ. ಈ ವಿಧದಲ್ಲಿ, ದೇವರನ್ನು ಸೇವಿಸುವುದರ ‘ವೆಚ್ಚವನ್ನು ಲೆಕ್ಕಮಾಡಿನೋಡಿರುವ’ ಯೇಸು, ಅವನ ಮೊದಲ ಶಿಷ್ಯರ ಮತ್ತು ಇತಿಹಾಸದಾದ್ಯಂತ ಇದ್ದ ಎಲ್ಲ ನಂಬಿಗಸ್ತ ಸ್ತ್ರೀಪುರುಷರ ಮಾದರಿಯನ್ನು ನಾವು ಅನುಕರಿಸುತ್ತೇವೆ.—ಮಾರ್ಕ 1:16-20; ಇಬ್ರಿಯ 11:4, 7, 17, 24, 25, 32-38.