ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದಿನವನ್ನು ಯಾರು ಪಾರಾಗುವರು?

ಯೆಹೋವನ ದಿನವನ್ನು ಯಾರು ಪಾರಾಗುವರು?

ಯೆಹೋವನ ದಿನವನ್ನು ಯಾರು ಪಾರಾಗುವರು?

“ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ.”​—ಮಲಾಕಿಯ 4:1.

1.ಈ ವ್ಯವಸ್ಥೆಯ ಅಂತ್ಯವನ್ನು ಮಲಾಕಿಯನು ಹೇಗೆ ವರ್ಣಿಸುತ್ತಾನೆ?

ಪ್ರವಾದಿಯಾದ ಮಲಾಕಿಯನು ಅತಿ ಶೀಘ್ರ ಭವಿಷ್ಯತ್ತಿನಲ್ಲಿ ನಡೆಯಲಿರುವ ಭಯಪ್ರೇರಕವಾದ ಘಟನೆಗಳ ಕುರಿತಾದ ಪ್ರವಾದನೆಗಳನ್ನು ಬರೆದಿಡುವಂತೆ ದೇವರಿಂದ ಪ್ರೇರಿಸಲ್ಪಟ್ಟನು. ಈ ಘಟನೆಗಳು ಭೂಮಿಯ ಪ್ರತಿಯೊಬ್ಬ ವ್ಯಕ್ತಿಯನ್ನು ತಟ್ಟಲಿಕ್ಕಿವೆ. ಮಲಾಕಿಯ 4:1 ಮುಂತಿಳಿಸುವುದು: “ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು; ಬುಡರೆಂಬೆಗಳಾವದನ್ನೂ ಉಳಿಸದು.” ಈ ವ್ಯವಸ್ಥೆಯ ನಾಶನವು ಎಷ್ಟು ಸಂಪೂರ್ಣವಾಗಿರುವುದು? ಬೇರು ನಾಶವಾಗಿರುವ ಮರದಂತೆ ಅದಿರುವುದು; ಅದು ಇನ್ನು ಮುಂದೆ ಬೆಳೆದು ಬರಲಾರದು.

2. ಕೆಲವು ಶಾಸ್ತ್ರವಚನಗಳು ಯೆಹೋವನ ದಿನವನ್ನು ಹೇಗೆ ವರ್ಣಿಸುತ್ತವೆ?

2 ಪ್ರವಾದಿಯಾದ ಮಲಾಕಿಯನು ಯಾವ “ದಿನ”ದ ಬಗ್ಗೆ ಮುಂತಿಳಿಸುತ್ತಿದ್ದಾನೆ ಎಂದು ನೀವು ಕೇಳಬಹುದು. ಯೆಶಾಯ 13:9ರಲ್ಲಿ ಹೇಳಲ್ಪಟ್ಟಿರುವ ದಿನವೇ ಅದು. ಅಲ್ಲಿ ಹೇಳಿರುವುದು: “ಇಗೋ, ಯೆಹೋವನ ದಿನವು ಬರುತ್ತಿದೆ; ಅದು ಭೂಮಿಯನ್ನು ಹಾಳುಮಾಡಿ ಪಾಪಿಗಳನ್ನು ನಿರ್ಮೂಲಪಡಿಸುವದಕ್ಕೆ [ಆತನ] ಕೋಪೋದ್ರೇಕದಿಂದಲೂ ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವದು.” ಚೆಫನ್ಯ 1:15 ಈ ವರ್ಣನೆಯನ್ನು ಒದಗಿಸುತ್ತದೆ: “ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ.”

“ಮಹಾ ಸಂಕಟ”

3. “ಯೆಹೋವನ ದಿನ” ಎಂದರೇನು?

3 ಮಲಾಕಿಯನ ಪ್ರವಾದನೆಯ ಪ್ರಧಾನ ನೆರವೇರಿಕೆಯಲ್ಲಿ, “ಯೆಹೋವನ ದಿನವು” “ಮಹಾಸಂಕಟ”ದಿಂದ ಗುರುತಿಸಲ್ಪಡುವ ಒಂದು ಸಮಯಾವಧಿಯಾಗಿದೆ. ಯೇಸು ಮುಂತಿಳಿಸಿದ್ದು: “ಅಂಥ [ಮಹಾ] ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ಈ ಲೋಕವು ಈಗಾಗಲೇ, ವಿಶೇಷವಾಗಿ 1914ರಿಂದ ನೋಡಿರುವ ಸಂಕಟಗಳ ಕುರಿತಾಗಿ ಯೋಚಿಸಿರಿ. (ಮತ್ತಾಯ 24:​7-12) ಎರಡನೆಯ ಜಾಗತಿಕ ಯುದ್ಧವೊಂದೇ ಐದು ಕೋಟಿ ಜೀವಗಳನ್ನು ಆಹುತಿ ತೆಗೆದುಕೊಂಡಿತು! ಆದರೂ, ಬರಲಿರುವ “ಮಹಾ ಸಂಕಟವು” ಈ ಎಲ್ಲ ಸಂಕಷ್ಟಗಳನ್ನು ಕ್ಷುಲ್ಲಕವಾಗಿ ಮಾಡುವ ರೀತಿಯ ವಿಪತ್ತುಗಳನ್ನು ತರುವುದು. ಯೆಹೋವನ ದಿನದಂತೆಯೇ ಆ ಘಟನೆಯು, ಅರ್ಮಗೆದೋನಿನಲ್ಲಿ, ಈ ದುಷ್ಟ ವ್ಯವಸ್ಥೆಯ ಕೊನೆಯ ದಿನಗಳಿಗೆ ಅಂತ್ಯವನ್ನು ತರುತ್ತಾ ಮುಗಿಯುವುದು.​—2 ತಿಮೊಥೆಯ 3:1⁠-5, 13; ಪ್ರಕಟನೆ 7:14; 16:​14, 16.

4. ಯೆಹೋವನ ದಿನವು ಮುಗಿಯುವಾಗ ಏನೆಲ್ಲ ಸಂಭವಿಸಿರುವುದು?

4 ಯೆಹೋವನ ದಿನವು ಮುಗಿಯುವುದರೊಳಗೆ ಸೈತಾನನ ಲೋಕವೂ ಅದರ ಸಮರ್ಥಕರೂ ಅಳಿದು ಹೋಗಿರುವರು. ಪ್ರಥಮವಾಗಿ ಸಕಲ ಸುಳ್ಳು ಧರ್ಮವು ನಾಶಗೊಳ್ಳುವುದು. ಆ ಬಳಿಕ ಯೆಹೋವನ ನ್ಯಾಯತೀರ್ಪು ಸೈತಾನನ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳ ಮೇಲೆ ಹೊಯ್ಯಲ್ಪಡುವುದು. (ಪ್ರಕಟನೆ 17:​12-14; 19:​17, 18) ಯೆಹೆಜ್ಕೇಲನು ಪ್ರವಾದಿಸುವುದು: “ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧಪದಾರ್ಥದಂತಿರುವದು; ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು.” (ಯೆಹೆಜ್ಕೇಲ 7:19) ಆ ದಿನದ ಸಂಬಂಧದಲ್ಲಿ ಚೆಫನ್ಯ 1:14 ಹೇಳುವುದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” ಯೆಹೋವನ ದಿನದ ಕುರಿತು ಬೈಬಲು ಏನು ಹೇಳುತ್ತದೊ ಅದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ನಾವು ದೇವರ ನೀತಿಯ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ದೃಢನಿಶ್ಚಯ ಮಾಡಬೇಕು.

5. ಯೆಹೋವನ ನಾಮಕ್ಕೆ ಭಯಪಡುವವರು ಏನನ್ನು ಅನುಭವಿಸುತ್ತಾರೆ?

5 ಯೆಹೋವನ ದಿನವು ಸೈತಾನನ ಲೋಕಕ್ಕೆ ಏನು ಮಾಡಲಿದೆ ಎಂಬುದನ್ನು ಮುಂತಿಳಿಸಿದ ಬಳಿಕ, ಯೆಹೋವನು ಹೀಗನ್ನುತ್ತಾನೆಂದು ಮಲಾಕಿಯ 4:2 ಹೇಳುತ್ತದೆ: “ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ [ದೇವರ] ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ.” ಆ “ಧರ್ಮವೆಂಬ ಸೂರ್ಯನು” ಯೇಸು ಕ್ರಿಸ್ತನೇ. ಅವನೇ “ಲೋಕಕ್ಕೆ” ಆತ್ಮಿಕವಾದ “ಬೆಳಕು.” (ಯೋಹಾನ 8:12) ಯೇಸು ಸ್ವಸ್ಥತೆಯನ್ನು ಉಂಟುಮಾಡುವ ರೀತಿಯಲ್ಲಿ ಬೆಳಗುತ್ತಾನೆ. ಪ್ರಥಮವಾಗಿ ನಾವಿಂದು ಅನುಭವಿಸುತ್ತಿರುವ ಆತ್ಮಿಕ ಸ್ವಸ್ಥತೆಯನ್ನು ಕೊಟ್ಟು, ಬಳಿಕ ನೂತನ ಲೋಕದಲ್ಲಿ ಪೂರ್ಣವಾದ ಶಾರೀರಿಕ ಸ್ವಸ್ಥತೆಯನ್ನು ಕೊಟ್ಟು ಅವನು ಬೆಳಗುತ್ತಾನೆ. ಯೆಹೋವನು ಹೇಳುವಂತೆ, ಸ್ವಸ್ಥರಾಗಿರುವವರು ಬಂಧಿಸಿದ್ದ “ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ” ಉದ್ರೇಕ ಮತ್ತು ಸಂತೋಷದಿಂದ ‘ಕುಣಿದಾಡುವರು.’

6. ಯೆಹೋವನ ಸೇವಕರು ಯಾವ ವಿಜಯೋತ್ಸವದಲ್ಲಿ ಆನಂದಿಸುವರು?

6 ಆದರೆ ಯೆಹೋವನ ಆವಶ್ಯಕತೆಗಳನ್ನು ಅಲಕ್ಷಿಸುವವರಿಗೇನಾಗುತ್ತದೆ? ಮಲಾಕಿಯ 4:​2, 3 ಹೇಳುವುದು: “ದುಷ್ಟರನ್ನು ತುಳಿದುಬಿಡುವಿರಿ; ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನಿಮ್ಮ [ದೇವರ ಸೇವಕರ] ಅಂಗಾಲುಗಳ ಕೆಳಗೆ ಬೂದಿಯಾಗಿ ಬಿದ್ದಿರುವರು; ಇದು ಸೇನಾಧೀಶ್ವರ ಯೆಹೋವನ ನುಡಿ.” ಸೈತಾನನ ಲೋಕವನ್ನು ನಾಶಗೊಳಿಸುವುದರಲ್ಲಿ ದೇವರ ಮಾನವಾರಾಧಕರು ಯಾವುದೇ ರೀತಿಯಲ್ಲಿ ಭಾಗವಹಿಸುವುದಿಲ್ಲವಾದರೂ ಯೆಹೋವನ ದಿನವನ್ನು ಅನುಸರಿಸಿಬರುವ ವಿಜಯೋತ್ಸವದಲ್ಲಿ ಭಾಗವಹಿಸುವ ಮೂಲಕ ಅವರು ಸಾಂಕೇತಿಕವಾಗಿ ‘ದುಷ್ಟರನ್ನು ತುಳಿದುಬಿಡುವರು.’ ಫರೋಹನ ಸೈನ್ಯವು ಕೆಂಪು ಸಮುದ್ರದಲ್ಲಿ ನಾಶಗೊಂಡ ಬಳಿಕ ಒಂದು ಮಹಾ ವಿಜಯೋತ್ಸವವು ನಡೆಯಿತು. (ವಿಮೋಚನಕಾಂಡ 15:​1-21) ಹಾಗೆಯೇ, ಮಹಾ ಸಂಕಟದಲ್ಲಿ ಸೈತಾನನು ಮತ್ತು ಅವನ ಜಗತ್ತು ವಜಾಮಾಡಲ್ಪಟ್ಟ ನಂತರ, ಒಂದು ವಿಜಯೋತ್ಸವವು ನಡೆಯುವುದು. ಆಗ ಯೆಹೋವನ ದಿನದಲ್ಲಿ ನಂಬಿಗಸ್ತಿಕೆಯ ಕಾರಣ ಬದುಕಿ ಉಳಿದಿರುವವರು, “ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು” ಎಂದು ಆರ್ಭಟಿಸುವರು. (ಯೆಶಾಯ 25:9) ಆಗ, ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವಾಗ ಮತ್ತು ಭೂಮಿಯು ಶಾಂತಿಯ ನಿವಾಸವಾಗಿ ಶುದ್ಧೀಕರಿಸಲ್ಪಡುವಾಗ ಎಂತಹ ಸಂಭ್ರಮವು ಇರುವುದು!

ಕ್ರೈಸ್ತಪ್ರಪಂಚವು ಇಸ್ರಾಯೇಲನ್ನು ಅನುಕರಿಸುತ್ತದೆ

7, 8. ಮಲಾಕಿಯನ ದಿನಗಳಲ್ಲಿ ಇಸ್ರಾಯೇಲಿನ ಆತ್ಮಿಕ ಅವಸ್ಥೆಯನ್ನು ವರ್ಣಿಸಿರಿ.

7 ಯೆಹೋವನ ಅನುಗ್ರಹದ ಸ್ಥಾನದಲ್ಲಿರುವವರು ಆತನನ್ನು ಸೇವಿಸುವವರಾಗಿದ್ದಾರೆ. ಆತನನ್ನು ಸೇವಿಸದವರಿಗೆ ಈ ಅನುಗ್ರಹವು ಲಭ್ಯವಾಗುವುದಿಲ್ಲ. ಮಲಾಕಿಯನು ತನ್ನ ಪುಸ್ತಕವನ್ನು ಬರೆದಾಗಲೂ ಸಂಗತಿಯು ಹಾಗೆಯೇ ಇತ್ತು. ಸಾ.ಶ.ಪೂ. 537ರಲ್ಲಿ, ಬಾಬೆಲಿನಲ್ಲಿ 70 ವರುಷಗಳ ಸೆರೆವಾಸದ ನಂತರ, ಇಸ್ರಾಯೇಲಿನ ಜನಶೇಷವೊಂದನ್ನು ಅವರ ದೇಶದಲ್ಲಿ ಪುನಸ್ಸ್ಥಾಪಿಸಲಾಯಿತು. ಆದರೂ, ಮುಂದಿನ ಶತಮಾನದಲ್ಲಿ ಆ ಪುನಸ್ಸ್ಥಾಪಿತ ಜನಾಂಗವು ಧರ್ಮಭ್ರಷ್ಟತೆ ಮತ್ತು ದುಷ್ಟತನದತ್ತ ತೇಲಿಹೋಗತೊಡಗಿತು. ಕುರುಡಾದ, ಕುಂಟಾದ ಮತ್ತು ರೋಗಗ್ರಸ್ತ ಪಶುಗಳನ್ನು ಯಜ್ಞಕ್ಕಾಗಿ ತರುವ ಮೂಲಕ ಹಾಗೂ ತಮ್ಮ ಯೌವನದ ಪತ್ನಿಯರಿಗೆ ವಿಚ್ಛೇದನೆ ನೀಡುವ ಮೂಲಕ, ಹೆಚ್ಚಿನ ಜನರು ಯೆಹೋವನ ನಾಮವನ್ನು ಅಗೌರವಿಸಿ, ಆತನ ನೀತಿಯ ನಿಯಮಗಳನ್ನು ಅಸಡ್ಡೆಮಾಡಿ, ಆತನ ಆಲಯವನ್ನು ಮಲಿನಮಾಡುತ್ತಿದ್ದರು.

8 ಈ ಕಾರಣದಿಂದ ಯೆಹೋವನು ಅವರಿಗಂದದ್ದು: “ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರ, ಸೂಳೆಗಾರ, ಸುಳ್ಳುಸಾಕ್ಷಿ, ಕೂಲಿಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನೂ ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು, ಅಂತು ನನಗಂಜದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರಸಾಕ್ಷಿಯಾಗಿರುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ. ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ; ಆದದರಿಂದ ಯಾಕೋಬ ಸಂತತಿಯವರೇ, ನೀವು ನಾಶವಾಗಲಿಲ್ಲ.” (ಮಲಾಕಿಯ 3:5, 6) ಆದರೂ, ತಮ್ಮ ಕೆಟ್ಟ ಮಾರ್ಗಗಳಿಂದ ತಿರುಗುವ ಯಾವನಿಗೂ ಯೆಹೋವನು ಈ ಆಮಂತ್ರಣವನ್ನು ಕೊಟ್ಟನು: “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.”​—ಮಲಾಕಿಯ 3:7.

9. ಮಲಾಕಿಯನ ಪ್ರವಾದನೆಗಳು ಪೂರ್ವಭಾವಿ ನೆರವೇರಿಕೆಯನ್ನು ಹೇಗೆ ಪಡೆದವು?

9 ಆ ಮಾತುಗಳ ಒಂದು ನೆರವೇರಿಕೆ ಸಾ.ಶ. ಒಂದನೆಯ ಶತಮಾನದಲ್ಲಿಯೂ ಆಯಿತು. ಆಗ ಯೆಹೂದ್ಯರಲ್ಲಿ ಉಳಿಕೆಯವರ ಒಂದು ಗುಂಪು ಆತ್ಮಾಭಿಷಿಕ್ತ ಕ್ರೈಸ್ತರ ಹೊಸ “ಜನಾಂಗ”ವಾಗಿ ಪರಿಣಮಿಸಿತು. ತಕ್ಕ ಸಮಯದಲ್ಲಿ ಇದರಲ್ಲಿ ಯೆಹೂದ್ಯೇತರರೂ ಸೇರಿದರು. ಆದರೆ ಪ್ರಾಕೃತಿಕ ಇಸ್ರಾಯೇಲ್ಯರಲ್ಲಿ ಅಧಿಕಾಂಶ ಮಂದಿ ಯೇಸುವನ್ನು ತಿರಸ್ಕರಿಸಿದರು. ಆದಕಾರಣ ಯೇಸು ಆ ಇಸ್ರಾಯೇಲ್‌ ಜನಾಂಗಕ್ಕೆ ಹೇಳಿದ್ದು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟಿದೆ.” (ಮತ್ತಾಯ 23:38; 1 ಕೊರಿಂಥ 16:22) ಸಾ.ಶ. 70ರಲ್ಲಿ, ಮಲಾಕಿಯ 4:1 ಮುಂತಿಳಿಸಿದ ಪ್ರಕಾರ “ಒಲೆಯಂತೆ ಉರಿಯುವ” ದಿನವು ಮಾಂಸಿಕ ಇಸ್ರಾಯೇಲಿನ ಮೇಲೆ ಬಂತು. ಯೆರೂಸಲೇಮೂ ಅದರ ದೇವಾಲಯವೂ ನಾಶಮಾಡಲ್ಪಟ್ಟವು. ಮತ್ತು ಕ್ಷಾಮ, ಅಧಿಕಾರಕ್ಕಾಗಿ ಆಂತರಿಕ ಕಾದಾಟ ಹಾಗೂ ರೋಮನ್‌ ಸೈನ್ಯದಿಂದ ನಡೆಸಲ್ಪಟ್ಟ ಆಕ್ರಮಣದ ನಿಮಿತ್ತವಾಗಿ ಹತ್ತು ಲಕ್ಷ ಜನರು ಸತ್ತರೆಂದು ವರದಿಯಾಗಿದೆ. ಆದರೂ, ಯೆಹೋವನನ್ನು ಸೇವಿಸುತ್ತಿದ್ದವರು ಆ ಸಂಕಟವನ್ನು ಪಾರಾದರು.​—ಮಾರ್ಕ 13:​14-20.

10. ಜನಸಾಮಾನ್ಯರು ಮತ್ತು ಧರ್ಮ ಮುಖಂಡರು ಒಂದನೆಯ ಶತಮಾನದ ಇಸ್ರಾಯೇಲನ್ನು ಯಾವ ವಿಧದಲ್ಲಿ ಅನುಕರಿಸುತ್ತಾರೆ?

10 ಮಾನವಕುಲ, ಅದರಲ್ಲೂ ವಿಶೇಷವಾಗಿ ಕ್ರೈಸ್ತಪ್ರಪಂಚವು ಒಂದನೆಯ ಶತಮಾನದ ಇಸ್ರಾಯೇಲ್‌ ಜನಾಂಗವನ್ನು ಅನುಕರಿಸಿದೆ. ಕ್ರೈಸ್ತಪ್ರಪಂಚದ ನಾಯಕರು ಮತ್ತು ಜನರು ಸಾಮಾನ್ಯವಾಗಿ ಯೇಸು ಬೋಧಿಸಿದ ದೇವರ ಸತ್ಯಗಳನ್ನು ಅನುಸರಿಸುವ ಬದಲಾಗಿ ತಮ್ಮದೇ ಆದ ಧಾರ್ಮಿಕ ತತ್ತ್ವಗಳನ್ನು ಇಷ್ಟಪಡುತ್ತಾರೆ. ಇದರಲ್ಲಿ ವಿಶೇಷವಾಗಿ ಧಾರ್ಮಿಕ ನಾಯಕರು ದೋಷಿಗಳಾಗಿದ್ದಾರೆ. ಅವರು ಯೆಹೋವನ ನಾಮವನ್ನು ಉಪಯೋಗಿಸಲು ನಿರಾಕರಿಸುವುದು ಮಾತ್ರವಲ್ಲ, ಅದನ್ನು ತಮ್ಮ ಬೈಬಲ್‌ ಭಾಷಾಂತರಗಳಿಂದ ತೆಗೆದುಬಿಡುವುದೂ ಉಂಟು. ಅಶಾಸ್ತ್ರೀಯ ಬೋಧನೆಗಳನ್ನು ಅಂದರೆ ನರಕಾಗ್ನಿಯಲ್ಲಿ ನಿತ್ಯಯಾತನೆ, ತ್ರಯೈಕ್ಯ, ಆತ್ಮದ ಅಮರತ್ವದಂತಹ ವಿಧರ್ಮಿ ಬೋಧನೆಗಳನ್ನು ಮತ್ತು ವಿಕಾಸವಾದವನ್ನು ಒಳತಂದು ಅವರು ಯೆಹೋವನಿಗೆ ಅವಮಾನವನ್ನು ತರುತ್ತಾರೆ. ಹೀಗೆ ಅವರು ಮಲಾಕಿಯನ ದಿನಗಳ ಯಾಜಕರ ಹಾಗೆ ಯೆಹೋವನಿಗೆ ಅರ್ಹವಾಗಿರುವ ಸ್ತುತಿಯನ್ನು ಆತನಿಂದ ಸುಲಿದುಕೊಳ್ಳುತ್ತಾರೆ.

11. ತಾವು ನಿಜವಾಗಿಯೂ ಯಾರನ್ನು ಸೇವಿಸುತ್ತೇವೆಂಬುದನ್ನು ಲೋಕದ ಧರ್ಮಗಳು ಹೇಗೆ ತೋರಿಸುತ್ತವೆ?

11 ಕೊನೆಯ ದಿವಸಗಳು 1914ರಲ್ಲಿ ಆರಂಭಗೊಂಡಾಗ, ಈ ಲೋಕದ ಧರ್ಮಗಳು, ಪ್ರಧಾನವಾಗಿ ಕ್ರೈಸ್ತರೆಂದು ಹೇಳಿಕೊಳ್ಳುವವರು, ತಾವು ನಿಜವಾಗಿಯೂ ಯಾರನ್ನು ಸೇವಿಸುತ್ತೇವೆಂಬುದನ್ನು ತೋರಿಸಿದವು. ರಾಷ್ಟ್ರೀಯ ವಿವಾದಾಂಶಗಳ ಕಾರಣ ನಡೆದ ಎರಡು ಜಾಗತಿಕ ಯುದ್ಧಗಳಲ್ಲಿಯೂ ತಮ್ಮ ಸದಸ್ಯರು, ತಮ್ಮ ಸ್ವಂತ ಧರ್ಮದವರನ್ನೇ ಕೊಲ್ಲಬೇಕಾಗಿ ಬಂದರೂ ಯುದ್ಧಕ್ಕೆ ಹೋಗುವಂತೆ ಅವರು ಪ್ರೋತ್ಸಾಹಿಸಿದರು. ಆದರೆ ದೇವರ ವಾಕ್ಯವು ಯೆಹೋವನಿಗೆ ವಿಧೇಯರಾಗುವವರನ್ನೂ ಆಗದವರನ್ನೂ ಸ್ಪಷ್ಟವಾಗಿ ಗುರುತಿಸುತ್ತದೆ: “ನೀತಿಯನ್ನು ಅನುಸರಿಸದವನೂ ತನ್ನ ಸಹೋದರರನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾಕ್ಯವಾಗಿದೆ. ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು.”​—1 ಯೋಹಾನ 3:​10-12.

ಪ್ರವಾದನೆಯನ್ನು ನೆರವೇರಿಸುವುದು

12, 13. ನಮ್ಮ ದಿನಗಳಲ್ಲಿ ದೇವರ ಸೇವಕರು ಯಾವ ಪ್ರವಾದನೆಗಳನ್ನು ನೆರವೇರಿಸಿದ್ದಾರೆ?

12 ಒಂದನೆಯ ಲೋಕ ಯುದ್ಧವು 1918ರಲ್ಲಿ ಅಂತ್ಯಗೊಳ್ಳುವುದರೊಳಗೆ, ದೇವರು ಕ್ರೈಸ್ತಪ್ರಪಂಚವನ್ನೂ ಎಲ್ಲ ಸುಳ್ಳು ಧರ್ಮವನ್ನೂ ಖಂಡಿಸಿರುತ್ತಾನೆಂದು ಯೆಹೋವನ ಸೇವಕರು ಗ್ರಹಿಸಿದರು. ಅಂದಿನಿಂದ, ಸಹೃದಯಿಗಳಿಗೆ ಈ ಕರೆಯು ಹೋಯಿತು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು.” (ಪ್ರಕಟನೆ 18:4, 5) ಆಗ ಯೆಹೋವನನ್ನು ಸೇವಿಸಲು ಅಪೇಕ್ಷಿಸಿದವರು ಸುಳ್ಳು ಧರ್ಮದ ಎಲ್ಲ ಸುಳಿವುಗಳಿಂದ ತಮ್ಮನ್ನು ಶುದ್ಧೀಕರಿಸಿಕೊಳ್ಳತೊಡಗಿದರು ಮತ್ತು ಸ್ಥಾಪಿತವಾಗಿರುವ ರಾಜ್ಯದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರತೊಡಗಿದರು. ಇದನ್ನು ಈ ದುಷ್ಟ ವ್ಯವಸ್ಥೆಯು ಅಂತ್ಯವಾಗುವುದರೊಳಗೆ ಮುಗಿಸಬೇಕಾಗಿತ್ತು.​—ಮತ್ತಾಯ 24:14.

13ಮಲಾಕಿಯ 4:5ರ ಪ್ರವಾದನೆಯನ್ನು ನೆರವೇರಿಸಲು ಇದು ಅಗತ್ಯವಾಗಿತ್ತು. ಅಲ್ಲಿ ಯೆಹೋವನು ಹೇಳಿದ್ದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು.” ಆ ಪ್ರವಾದನೆಯ ಪ್ರಥಮ ನೆರವೇರಿಕೆಯು ಎಲೀಯನ ಮುನ್‌ಛಾಯೆಯಾಗಿದ್ದ ಸ್ನಾನಿಕನಾದ ಯೋಹಾನನ ಕೆಲಸದಲ್ಲಿ ನಡೆಯಿತು. ಧರ್ಮಶಾಸ್ತ್ರದ ಒಡಂಬಡಿಕೆಯ ವಿರುದ್ಧ ಪಾಪಮಾಡಿದ್ದ ಕಾರಣ ಪಶ್ಚಾತ್ತಾಪಪಟ್ಟ ಯೆಹೂದ್ಯರಿಗೆ ಯೋಹಾನನು ದೀಕ್ಷಾಸ್ನಾನ ಕೊಟ್ಟಾಗ, ಅವನು ಎಲೀಯಸದೃಶವಾದ ಕೆಲಸವೊಂದನ್ನು ಮಾಡಿದನು. ಇದಕ್ಕಿಂತಲೂ ಪ್ರಾಮುಖ್ಯವಾಗಿ, ಯೋಹಾನನು ಮೆಸ್ಸೀಯನು ಬರುವುದನ್ನು ಮುನ್ಸೂಚಿಸಿದನು. ಆದರೂ, ಯೋಹಾನನ ಕೆಲಸವು ಮಲಾಕಿಯ ಪ್ರವಾದನೆಯ ಆರಂಭದ ನೆರವೇರಿಕೆ ಮಾತ್ರ ಆಗಿತ್ತು. ಯೇಸು, ಯೋಹಾನನನ್ನು ಎರಡನೆಯ ಎಲೀಯನಾಗಿ ಗುರುತಿಸಿದಾಗ ಭವಿಷ್ಯತ್ತಿನಲ್ಲೂ “ಎಲೀಯ” ಕೆಲಸವೊಂದು ಇರುವುದೆಂಬುದನ್ನು ಸೂಚಿಸಿದನು.​—ಮತ್ತಾಯ 17:​11, 12.

14. ಈ ವ್ಯವಸ್ಥೆ ಅಂತ್ಯಗೊಳ್ಳುವ ಮೊದಲು ಯಾವ ಮಹತ್ವದ ಕೆಲಸವು ಮಾಡಲ್ಪಡಬೇಕು?

14 ಈ ಮಹಾ ಎಲೀಯ ಕೆಲಸವು “ಯೆಹೋವನ ಆಗಮನದ ಭಯಂಕರವಾದ ಮಹಾದಿನ”ದ ಮೊದಲು ಮಾಡಲ್ಪಡುವುದೆಂದು ಮಲಾಕಿಯನ ಪ್ರವಾದನೆ ತೋರಿಸುತ್ತದೆ. ಆ ದಿನವು ಅರ್ಮಗೆದೋನಿನಲ್ಲಿ ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧದಲ್ಲಿ ಮುಗಿಯುವುದು. ಇದರರ್ಥ, ದುಷ್ಟ ವ್ಯವಸ್ಥೆಯ ಅಂತ್ಯವೂ ಸಿಂಹಾಸನಾರೂಢನಾದ ಯೇಸು ಕ್ರಿಸ್ತನ ಕೈಕೆಳಗಿರುವ ದೇವರ ಸ್ವರ್ಗೀಯ ರಾಜ್ಯದ ಸಹಸ್ರ ವರುಷಗಳ ಆಳಿಕೆಯ ಆರಂಭವೂ ಆಗುವ ಮೊದಲು ಎಲೀಯನ ಕೆಲಸಕ್ಕೆ ಅನುರೂಪವಾದ ಕೆಲಸವೊಂದು ನಡೆಯುವುದು. ಆ ಪ್ರವಾದನೆ ಹೇಳುವಂತೆ, ಯೆಹೋವನು ಈ ದುಷ್ಟ ವ್ಯವಸ್ಥೆಯನ್ನು ನಾಶಗೊಳಿಸುವ ಮೊದಲು, ಆಧುನಿಕ ದಿನಗಳ ಎಲೀಯ ವರ್ಗದ ಜನರು ಭೂನಿರೀಕ್ಷೆಯಿರುವ ಲಕ್ಷಾಂತರ ಮಂದಿ ಜೊತೆ ಕ್ರೈಸ್ತರ ಬೆಂಬಲದಿಂದ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ಕೆಲಸವನ್ನು ಉತ್ಸಾಹದಿಂದ ನಡೆಸಿ, ಯೆಹೋವನ ನಾಮವನ್ನು ಸಮರ್ಥಿಸಿ, ಕುರಿಸದೃಶರಿಗೆ ಬೈಬಲ್‌ ಸತ್ಯಗಳನ್ನು ಕಲಿಸುತ್ತಾರೆ.

ಯೆಹೋವನು ತನ್ನ ಸೇವಕರನ್ನು ಆಶೀರ್ವದಿಸುತ್ತಾನೆ

15. ಯೆಹೋವನು ತನ್ನ ಸೇವಕರನ್ನು ಹೇಗೆ ಸ್ಮರಿಸಿಕೊಳ್ಳುತ್ತಾನೆ?

15 ಯೆಹೋವನು ತನ್ನನ್ನು ಸೇವಿಸುವವರನ್ನು ಆಶೀರ್ವದಿಸುತ್ತಾನೆ. ಮಲಾಕಿಯ 3:16 ಹೇಳುವುದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” ಹೇಬೆಲನಿಂದ ಮೊದಲ್ಗೊಂಡು, ದೇವರು ನಿತ್ಯಜೀವವನ್ನು ಕೊಡುವ ಉದ್ದೇಶದಿಂದ ಸ್ಮರಿಸಲ್ಪಡುವವರ ಹೆಸರುಗಳನ್ನು ಒಂದು ಪುಸ್ತಕದಲ್ಲಿಯೊ ಎಂಬಂತೆ ಬರೆಯುತ್ತಿದ್ದಾನೆ. ಇವರಿಗೆ ಯೆಹೋವನು ಹೇಳುವುದು: “ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ.”​—ಮಲಾಕಿಯ 3:10.

16, 17. ಯೆಹೋವನು ತನ್ನ ಜನರನ್ನೂ ಅವರ ಕೆಲಸವನ್ನೂ ಹೇಗೆ ಆಶೀರ್ವದಿಸಿರುತ್ತಾನೆ?

16 ಯೆಹೋವನು ತನ್ನನ್ನು ಸೇವಿಸುವವರನ್ನು ಆಶೀರ್ವದಿಸಿರುವುದೇನೊ ನಿಶ್ಚಯ. ಹೇಗೆ? ಇದನ್ನು ಮಾಡಿರುವ ಒಂದು ವಿಧವು ಆತನ ಉದ್ದೇಶಗಳ ಹೆಚ್ಚುತ್ತಿರುವ ತಿಳಿವಳಿಕೆಯನ್ನು ಕೊಟ್ಟೇ. (ಜ್ಞಾನೋಕ್ತಿ 4:18; ದಾನಿಯೇಲ 12:10) ಅವರ ಸಾರುವ ಕೆಲಸದಲ್ಲಿ ಬೆರಗಾಗಿಸುವಷ್ಟು ಫಲಿತಾಂಶಗಳನ್ನು ಅವರಿಗೆ ಕೊಟ್ಟಿರುವದು ಇನ್ನೊಂದು ವಿಧವಾಗಿದೆ. ಅನೇಕ ಪ್ರಾಮಾಣಿಕ ಹೃದಯದ ಜನರು ಸತ್ಯಾರಾಧನೆಯಲ್ಲಿ ಅವರನ್ನು ಸೇರಿಕೊಂಡಿದ್ದಾರೆ. ಇವರು, “ಮಹಾ ಸಮೂಹ”ದ ಭಾಗವಾಗುತ್ತ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು. . . . . ಅವರು​—ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು.” (ಪ್ರಕಟನೆ 7:9, 10) ಈ ಮಹಾ ಸಮೂಹದವರು ಅದ್ಭುತಕರವಾದ ರೀತಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಭೂಮಿಯಾದ್ಯಂತ 93,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಯೆಹೋವನನ್ನು ಕ್ರಿಯಾಶೀಲರಾಗಿ ಸೇವಿಸುತ್ತಿರುವವರ ಸಂಖ್ಯೆಯು ಈಗ 60 ಲಕ್ಷಗಳಿಗಿಂತಲೂ ಹೆಚ್ಚಾಗಿದೆ!

17 ಇತಿಹಾಸದಲ್ಲೆಲ್ಲ ಅತಿ ವ್ಯಾಪಕವಾಗಿ ಹಂಚಲ್ಪಟ್ಟಿರುವ ಬೈಬಲಾಧಾರಿತ ಪ್ರಕಾಶನಗಳನ್ನು ಯೆಹೋವನ ಸಾಕ್ಷಿಗಳು ಪ್ರಕಾಶಿಸುತ್ತಿದ್ದಾರೆ ಎಂಬ ವಿಷಯದಲ್ಲೂ ಯೆಹೋವನ ಆಶೀರ್ವಾದವು ತೋರಿಬರುತ್ತದೆ. ಪ್ರಸ್ತುತ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂಬತ್ತು ಕೋಟಿ ಪ್ರತಿಗಳನ್ನು ಪ್ರತಿ ತಿಂಗಳಲ್ಲಿ ಮುದ್ರಿಸಲಾಗುತ್ತದೆ. ಕಾವಲಿನಬುರುಜು 144 ಭಾಷೆಗಳಲ್ಲಿಯೂ ಎಚ್ಚರ! ಪತ್ರಿಕೆಯು 87 ಭಾಷೆಗಳಲ್ಲಿಯೂ ಪ್ರಕಟಿಸಲ್ಪಡುತ್ತದೆ. ನಿತ್ಯಜೀವಕ್ಕೆ ನಡೆಸುವ ಸತ್ಯ ಎಂಬ, 1968ರಲ್ಲಿ ಪ್ರಕಾಶಿಸಲ್ಪಟ್ಟ ಬೈಬಲ್‌ ಅಧ್ಯಯನ ಸಹಾಯಕ ಪುಸ್ತಕದ ವಿತರಣೆಯು 117 ಭಾಷೆಗಳಲ್ಲಿ 10 ಕೋಟಿ 70 ಲಕ್ಷ ಪ್ರತಿಗಳನ್ನು ತಲುಪಿತು. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ ಎಂಬ, 1982ರಲ್ಲಿ ಬಿಡುಗಡೆಹೊಂದಿದ ಪುಸ್ತಕದ ವಿತರಣೆಯು, 131 ಭಾಷೆಗಳಲ್ಲಿ 8 ಕೋಟಿ 10 ಲಕ್ಷ ಪ್ರತಿಗಳನ್ನು ತಲುಪಿತು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ 1995ರಲ್ಲಿ ಬಿಡುಗಡೆಯಾದ ಪುಸ್ತಕವು ಈ ವರೆಗೆ 154 ಭಾಷೆಗಳಲ್ಲಿ 8 ಕೋಟಿ 50 ಲಕ್ಷ ಪ್ರತಿಗಳನ್ನು ಮುಟ್ಟಿದೆ. ದೇವರು ನಮ್ಮಿಂದ ಏನು ಅಪೇಕ್ಷಿಸುತ್ತಾನೆ? ಎಂಬ, 1996ರಲ್ಲಿ ಪ್ರಕಾಶಿಸಲ್ಪಟ್ಟ ಬ್ರೋಷರ್‌ನ ವಿತರಣೆಯು ಇಷ್ಟರ ವರೆಗೆ 244 ಭಾಷೆಗಳಲ್ಲಿ 15 ಕೋಟಿಯನ್ನು ಮುಟ್ಟಿದೆ.

18. ವಿರೋಧದ ಎದುರಿನಲ್ಲಿಯೂ ನಾವು ಆತ್ಮಿಕ ಸಮೃದ್ಧಿಯನ್ನು ಅನುಭವಿಸುವುದೇಕೆ?

18 ಸೈತಾನನ ಲೋಕದಿಂದ ಬಂದಿರುವ ಅತಿ ಕಠಿನವಾದ ಹಾಗೂ ದೀರ್ಘಕಾಲಿಕ ವಿರೋಧದ ಎದುರಿನಲ್ಲಿಯೂ ಈ ಆತ್ಮಿಕ ಸಮೃದ್ಧಿಯನ್ನು ಅನುಭವಿಸಲಾಗಿದೆ. ಇದು ಯೆಶಾಯ 54:17ರ ಸತ್ಯವನ್ನು ಎತ್ತಿ ತೋರಿಸುತ್ತದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.” ಆದಕಾರಣ, ಮಲಾಕಿಯ 3:17 ತಮ್ಮಲ್ಲಿ ದೊಡ್ಡದಾದ ರೀತಿಯಲ್ಲಿ ನೆರವೇರುತ್ತಿದೆಯೆಂಬುದನ್ನು ತಿಳಿಯುವುದು ಯೆಹೋವನ ಸೇವಕರಿಗೆ ಎಷ್ಟೊಂದು ಸಾಂತ್ವನದಾಯಕವಾದ ವಿಷಯವಾಗಿದೆ! ಅದು ಹೇಳುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ​—ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು.”

ಯೆಹೋವನನ್ನು ಸಂತೋಷದಿಂದ ಸೇವಿಸುತ್ತಿರುವುದು

19. ಯೆಹೋವನನ್ನು ಸೇವಿಸುವವರು ಆತನನ್ನು ಸೇವಿಸದವರಿಗಿಂತ ಭಿನ್ನರಾಗಿರುವುದು ಹೇಗೆ?

19 ಸಮಯ ದಾಟಿದಷ್ಟಕ್ಕೆ, ಯೆಹೋವನ ನಂಬಿಗಸ್ತ ಸೇವಕರ ಮತ್ತು ಸೈತಾನನ ಲೋಕದವರ ಮಧ್ಯೆ ಇರುವ ತಾರತಮ್ಯವು ದೊಡ್ಡ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಮಲಾಕಿಯ 3:18 ಮುಂತಿಳಿಸಿದ್ದು: “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.” ಅನೇಕ ತಾರತಮ್ಯಗಳಲ್ಲಿ ಒಂದು ಯಾವುದೆಂದರೆ, ಯೆಹೋವನನ್ನು ಸೇವಿಸುವವರು ಬಹಳಷ್ಟು ಸಂತೋಷದಿಂದ ಆತನನ್ನು ಸೇವಿಸುತ್ತಾರೆ. ಇದಕ್ಕಾಗಿ ಅವರಿಗಿರುವ ಕಾರಣಗಳಲ್ಲಿ ಒಂದು, ಅವರಿಗಿರುವಂಥ ಅದ್ಭುತಕರವಾದ ನಿರೀಕ್ಷೆಯೇ ಆಗಿದೆ. “ಇಗೋ, ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ” ಎಂಬ ಯೆಹೋವನ ಮಾತುಗಳಲ್ಲಿ ಅವರಿಗೆ ಪೂರ್ತಿ ಭರವಸೆಯಿದೆ.​—ಯೆಶಾಯ 65:17, 18; ಕೀರ್ತನೆ 37:10, 11, 29; ಪ್ರಕಟನೆ 21:4, 5.

20. ನಾವು ಏಕೆ ಆನಂದಭರಿತ ಜನರಾಗಿದ್ದೇವೆ?

20 ಯೆಹೋವನ ನಿಷ್ಠ ಜನರು ಆತನ ಮಹಾದಿನವನ್ನು ಪಾರಾಗಿ ನೂತನ ಲೋಕದೊಳಗೆ ತರಲ್ಪಡುವರು ಎಂಬ ಆತನ ವಾಗ್ದಾನವನ್ನು ನಾವು ನಂಬುತ್ತೇವೆ. (ಚೆಫನ್ಯ 2:3; ಪ್ರಕಟನೆ 7:​13, 14) ಕೆಲವರು ಮುದಿ ಪ್ರಾಯ, ರೋಗ ಅಥವಾ ಅಪಘಾತಗಳ ಕಾರಣ ಅದಕ್ಕಿಂತ ಮೊದಲೇ ಸಾಯಬಹುದಾದರೂ, ತಾನು ಅವರಿಗೆ ನಿತ್ಯಜೀವವನ್ನು ಕೊಡುವ ಉದ್ದೇಶದಿಂದ ಪುನರುತ್ಥಾನಗೊಳಿಸುವೆನೆಂದು ಯೆಹೋವನು ವಚನ ಕೊಟ್ಟಿದ್ದಾನೆ. (ಯೋಹಾನ 5:​28, 29; ತೀತ 1:2) ಹೀಗೆ, ಯೆಹೋವನ ದಿನವನ್ನು ಎದುರು ನೋಡುತ್ತಿರುವಾಗ ನಮಗೆಲ್ಲರಿಗೂ ನಮ್ಮ ಸ್ವಂತ ಸಮಸ್ಯೆಗಳು ಮತ್ತು ಪಂಥಾಹ್ವಾನಗಳು ಇರುತ್ತವಾದರೂ, ಭೂಮಿಯ ಮೇಲೆ ಅತ್ಯಂತ ಸಂತೋಷದ ಜನರಾಗಿರುವುದಕ್ಕೆ ನಮಗೆ ಸಕಲ ಕಾರಣಗಳೂ ಇವೆ.

ನಿಮ್ಮ ಉತ್ತರವೇನು?

• “ಯೆಹೋವನ ದಿನ” ಎಂದರೇನು?

• ಲೋಕದ ಧರ್ಮಗಳು ಪುರಾತನ ಇಸ್ರಾಯೇಲನ್ನು ಹೇಗೆ ಅನುಕರಿಸುತ್ತವೆ?

• ಯೆಹೋವನ ಸೇವಕರು ಯಾವ ಪ್ರವಾದನೆಗಳನ್ನು ನೆರವೇರಿಸುತ್ತಾರೆ?

• ಯೆಹೋವನು ತನ್ನ ಜನರನ್ನು ಹೇಗೆ ಆಶೀರ್ವದಿಸಿದ್ದಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಒಂದನೆಯ ಶತಮಾನದ ಯೆರೂಸಲೇಮು ‘ಒಲೆಯಂತೆ ಉರಿಯಿತು’

[ಪುಟ 23ರಲ್ಲಿರುವ ಚಿತ್ರಗಳು]

ಯೆಹೋವನು ತನ್ನನ್ನು ಸೇವಿಸುವವರ ಅಗತ್ಯಗಳನ್ನು ಒದಗಿಸುತ್ತಾನೆ

[ಪುಟ 24ರಲ್ಲಿರುವ ಚಿತ್ರಗಳು]

ತಮಗಿರುವ ಅದ್ಭುತಕರವಾದ ನಿರೀಕ್ಷೆಯ ಕಾರಣ ಯೆಹೋವನ ಸೇವಕರು ನಿಜವಾಗಿಯೂ ಸಂತೋಷಿತರು