ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಮಹಾ ಸಮೂಹ”ದವರು ಯೆಹೋವನ ಆಲಯದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಯೋಹಾನನು ನೋಡಿದಾಗ, ಅವರು ಆಲಯದ ಯಾವ ಭಾಗದಲ್ಲಿ ಇದನ್ನು ಮಾಡುತ್ತಿದ್ದರು?​—ಪ್ರಕಟನೆ 7:9-15.

ಮಹಾ ಸಮೂಹದವರು ಯೆಹೋವನ ಮಹಾ ಆತ್ಮಿಕ ಆಲಯದ ಭೂ ಅಂಗಣಗಳಲ್ಲೊಂದರಲ್ಲಿ, ವಿಶಿಷ್ಟವಾಗಿ ಸೊಲೊಮೋನನ ಆಲಯದಲ್ಲಿದ್ದ ಹೊರಗಣ ಅಂಗಣಕ್ಕೆ ಹೋಲುವ ಅಂಗಣದಲ್ಲಿ ಆತನನ್ನು ಆರಾಧಿಸುತ್ತಿದ್ದಾರೆಂದು ಹೇಳುವುದು ತರ್ಕಸಮ್ಮತವಾಗಿದೆ.

ಮಹಾ ಸಮೂಹದವರು ಯೇಸುವಿನ ದಿನದಲ್ಲಿದ್ದ ಅನ್ಯಜಾತಿಯವರ ಅಂಗಣದ ಆತ್ಮಿಕ ಸಮಾನರೂಪ ಇಲ್ಲವೆ ಪಡಿಮಾದರಿ ಅಂಗಣದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆಂದು ಹಿಂದಿನ ಸಮಯಗಳಲ್ಲಿ ಹೇಳಲಾಗುತ್ತಿತ್ತು. ಆದರೆ ಹೀಗೇಕೆ ಇರಸಾಧ್ಯವಿಲ್ಲ ಎಂಬುದಕ್ಕೆ ಹೆಚ್ಚಿನ ಸಂಶೋಧನೆಯು ಕಡಿಮೆಪಕ್ಷ ಐದು ಕಾರಣಗಳನ್ನು ಪ್ರಕಟಪಡಿಸುತ್ತದೆ. ಮೊದಲನೆಯದ್ದಾಗಿ, ಯೆಹೋವನ ಮಹಾ ಆತ್ಮಿಕ ಆಲಯದಲ್ಲಿ ಹೆರೋದನ ಆಲಯದಲ್ಲಿದ್ದ ಎಲ್ಲ ವೈಶಿಷ್ಟ್ಯಗಳ ಪಡಿಮಾದರಿ ಇಲ್ಲ. ಉದಾಹರಣೆಗಾಗಿ, ಹೆರೋದನ ಆಲಯದಲ್ಲಿ ಸ್ತ್ರೀಯರ ಅಂಗಣ ಮತ್ತು ಇಸ್ರಾಯೇಲಿನ ಅಂಗಣ ಎಂಬುದಿತ್ತು. ಸ್ತ್ರೀಯರ ಅಂಗಣದಲ್ಲಿ ಸ್ತ್ರೀಪುರುಷರೆಲ್ಲರೂ ಪ್ರವೇಶಿಸಬಹುದಿತ್ತು, ಆದರೆ ಇಸ್ರಾಯೇಲಿನ ಅಂಗಣದಲ್ಲಿ ಪುರುಷರಿಗೆ ಮಾತ್ರ ಅನುಮತಿಯಿತ್ತು. ಯೆಹೋವನ ಮಹಾ ಆತ್ಮಿಕ ಆಲಯದ ಭೂ ಅಂಗಣಗಳಲ್ಲಾದರೊ, ಸ್ತ್ರೀಪುರುಷರನ್ನು ಆರಾಧನೆಯಲ್ಲಿ ವಿಭಾಜಿಸಲಾಗುವುದಿಲ್ಲ. (ಗಲಾತ್ಯ 3:​28, 29) ಆದುದರಿಂದ ಆತ್ಮಿಕ ಆಲಯದಲ್ಲಿ, ಸ್ತ್ರೀಯರ ಅಂಗಣ ಮತ್ತು ಇಸ್ರಾಯೇಲಿನ ಅಂಗಣದ ಸಮಾನರೂಪವಿಲ್ಲ.

ಎರಡನೆಯದ್ದಾಗಿ, ಸೊಲೊಮೋನನ ಆಲಯಕ್ಕಾಗಿ ದೈವಿಕವಾಗಿ ಕೊಡಲ್ಪಟ್ಟಿದ್ದ ವಾಸ್ತುಶಿಲ್ಪಿ ಯೋಜನೆಗಳಲ್ಲಿ ಇಲ್ಲವೆ ಯೆಹೆಜ್ಕೇಲನ ದಾರ್ಶನಿಕ ಆಲಯದಲ್ಲಿ, ಅಥವಾ ಜೆರುಬಾಬ್ಬೆಲನು ಪುನರ್‌ನಿರ್ಮಿಸಿದ ಆಲಯದಲ್ಲಿ ಅನ್ಯಜಾತಿಯವರ ಅಂಗಣ ಎಂಬುದಿರಲಿಲ್ಲ. ಹೀಗಿರುವುದರಿಂದ ಆರಾಧನೆಗಾಗಿರುವ ಯೆಹೋವನ ಮಹಾ ಆತ್ಮಿಕ ಆಲಯದ ಏರ್ಪಾಡಿನಲ್ಲಿ, ಅನ್ಯಜಾತಿಯವರ ಅಂಗಣದ ಒಂದು ಸಮಾನರೂಪವಿರಲಿಕ್ಕಾಗಿ ಯಾವುದೇ ಆಧಾರವಿಲ್ಲ. ವಿಶೇಷವಾಗಿ ಈ ಮುಂದಿನ ಅಂಶವು ಪರಿಗಣಿಸಲ್ಪಡುವಾಗ ಇದು ಸತ್ಯ.

ಮೂರನೆಯದ್ದಾಗಿ, ಅನ್ಯಜಾತಿಯವರ ಅಂಗಣವು, ಎದೋಮ್ಯ ರಾಜನಾದ ಹೆರೋದನಿಂದ ಕಟ್ಟಿಸಲ್ಪಟ್ಟಿತ್ತು. ಅವನು ತನ್ನನ್ನೇ ಮಹಿಮೆಗೇರಿಸಿಕೊಳ್ಳಲು ಮತ್ತು ರೋಮಿನ ಅನುಗ್ರಹವನ್ನು ಗಿಟ್ಟಿಸಿಕೊಳ್ಳಲು ಇದನ್ನು ಮಾಡಿದ್ದನು. ಜೆರುಬಾಬ್ಬೆಲನ ಆಲಯವನ್ನು ಹೆರೋದನು ಬಹುಶಃ ಸಾ.ಶ.ಪೂ. 18 ಇಲ್ಲವೆ 17ರಲ್ಲಿ ಜೀರ್ಣೋದ್ಧಾರಮಾಡಲು ಆರಂಭಿಸಿದನು. ದಿ ಆ್ಯಂಕರ್‌ ಬೈಬಲ್‌ ಡಿಕ್ಷನೆರಿ ವಿವರಿಸುವುದು: “ಪಶ್ಚಿಮದಲ್ಲಿದ್ದ [ರೋಮ್‌] ರಾಜ ಶಕ್ತಿಯ ಸಾಂಸ್ಕೃತಿಕ ಅಭಿರುಚಿಯು . . . ಪೌರಾತ್ಯ ನಗರಗಳಿಗಿಂತಲೂ ದೊಡ್ಡದಾದ ಆಲಯವನ್ನು ಅವಶ್ಯಪಡಿಸಿತು.” ಆದರೆ, ಆಲಯದ ವಿಸ್ತೀರ್ಣಗಳು ಈಗಾಗಲೇ ಸ್ಥಾಪಿಸಲ್ಪಟ್ಟಿದ್ದವು. ಆ ಡಿಕ್ಷನೆರಿಯು ವಿವರಿಸುವುದು: “ಆಲಯಕ್ಕೆ ಅದರ ಹಿಂದಿನ [ಸೊಲೊಮೋನನ ಮತ್ತು ಜೆರುಬಾಬ್ಬೆಲನ] ಆಲಯಗಳಿಗಿದ್ದಂಥದ್ದೇ ವಿಸ್ತೀರ್ಣಗಳಿರಬೇಕಾಗಿದ್ದರೂ, ಆಲಯ ದಿಬ್ಬದ ಸಂಭಾವ್ಯ ಗಾತ್ರವು ನಿರ್ಬಂಧಿಸಲ್ಪಟ್ಟಿರಲಿಲ್ಲ.” ಹೀಗಿರುವುದರಿಂದ, ಯಾವುದನ್ನು ಆಧುನಿಕ ಸಮಯಗಳಲ್ಲಿ ಅನ್ಯಜಾತಿಯವರ ಅಂಗಣ ಎಂದು ಕರೆಯಲಾಗಿದೆಯೊ ಅದನ್ನು ಕೂಡಿಸುವ ಮೂಲಕ ಹೆರೋದನು ಆಲಯದ ಕ್ಷೇತ್ರವನ್ನು ವಿಸ್ತರಿಸಿದನು. ಈ ರೀತಿಯ ಹಿನ್ನೆಲೆಯುಳ್ಳ ಒಂದು ನಿರ್ಮಾಣಕ್ಕೆ, ಯೆಹೋವನ ಆತ್ಮಿಕ ಆಲಯದ ಏರ್ಪಾಡಿನಲ್ಲಿ ಪಡಿಮಾದರಿ ಇರುವ ಅಗತ್ಯವೇನು?

ನಾಲ್ಕನೆಯದ್ದಾಗಿ, ಬಹುಮಟ್ಟಿಗೆ ಎಲ್ಲರೂ, ಅಂದರೆ ಕುರುಡರು, ಕುಂಟರು ಮತ್ತು ಸುನ್ನತಿಮಾಡಿಸಿಕೊಂಡಿರದ ಅನ್ಯಜಾತಿಯವರು ಆ ಅನ್ಯಜಾತಿಯವರ ಅಂಗಣದೊಳಗೆ ಪ್ರವೇಶಿಸಬಹುದಿತ್ತು. (ಮತ್ತಾಯ 21:​14, 15) ದೇವರಿಗೆ ಯಜ್ಞಗಳನ್ನು ಅರ್ಪಿಸಲು ಬಯಸುತ್ತಿದ್ದ, ಆದರೆ ಸುನ್ನತಿಮಾಡಿಸಿಕೊಂಡಿರದ ಅನೇಕ ಅನ್ಯಜಾತಿಯವರಿಗಾಗಿ ಈ ಅಂಗಣವು ಉಪಯುಕ್ತವಾಗಿತ್ತೆಂಬುದು ನಿಜ. ಮತ್ತು ಇಲ್ಲಿಯೇ ಯೇಸು ಕೆಲವೊಮ್ಮೆ ಜನರನ್ನು ಸಂಬೋಧಿಸಿ, ಎರಡು ಬಾರಿ ಚಿನಿವಾರರನ್ನು ಮತ್ತು ವ್ಯಾಪಾರಿಗಳನ್ನು ಹೊರಗಟ್ಟಿದ್ದನು. ಅವರು ತನ್ನ ತಂದೆಯ ಮನೆಯನ್ನು ಅವಮಾನಗೊಳಿಸಿದ್ದರೆಂದು ಅವನು ಹೇಳಿದನು. (ಮತ್ತಾಯ 21:​12, 13; ಯೋಹಾನ 2:​14-16) ಆದರೂ, ದ ಜ್ಯೂವಿಷ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಕಟ್ಟುನಿಟ್ಟಾಗಿ ಹೇಳುವುದಾದರೆ, ಈ ಹೊರಗಿನ ಅಂಗಣವು ದೇವಾಲಯದ ಭಾಗವಾಗಿರಲಿಲ್ಲ. ಅದರ ಮಣ್ಣು ಪವಿತ್ರವಾಗಿರಲಿಲ್ಲ ಮತ್ತು ಅಲ್ಲಿ ಯಾರು ಬೇಕಾದರೂ ಪ್ರವೇಶಿಸಬಹುದಿತ್ತು.”

ಐದನೆಯದ್ದಾಗಿ, ಅನ್ಯಜಾತಿಯವರ ಅಂಗಣಕ್ಕೆ ಸೂಚಿಸುತ್ತಾ ಬಳಸಲ್ಪಡುವ “ಆಲಯ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು (ಹೀರಾನ್‌), “ನಿರ್ದಿಷ್ಟವಾಗಿ ಆಲಯದ ಕಟ್ಟಡಕ್ಕೇ ಸೂಚಿಸುವ ಬದಲು, ಇಡೀ ಸಂಕೀರ್ಣಕ್ಕೆ ಸೂಚಿಸುತ್ತದೆ” ಎಂದು ಬಾರ್ಕ್ಲೇ ಎಮ್‌. ನ್ಯೂಮ್ಯಾನ್‌ ಮತ್ತು ಫಿಲಿಪ್‌ ಸಿ. ಸ್ಟೈನ್‌ರವರ ಮತ್ತಾಯನ ಸುವಾರ್ತೆ ಪುಸ್ತಕದ ಕುರಿತಾದ ಕೈಪಿಡಿ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ, ಮಹಾ ಸಮೂಹದ ಕುರಿತಾದ ಯೋಹಾನನ ದರ್ಶನದಲ್ಲಿ “ಆಲಯ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು (ನಾಓಸ್‌) ಹೆಚ್ಚು ನಿರ್ದಿಷ್ಟವಾಗಿದೆ. ಯೆರೂಸಲೇಮಿನ ಆಲಯವನ್ನು ಮನಸ್ಸಿನಲ್ಲಿಡುವಾಗ, ಅದು ಸಾಮಾನ್ಯವಾಗಿ ಅತಿಪವಿತ್ರಸ್ಥಾನಕ್ಕೆ, ಆಲಯದ ಕಟ್ಟಡಕ್ಕೆ ಇಲ್ಲವೆ ಆಲಯದ ಪ್ರಾಕಾರಕ್ಕೆ ಸೂಚಿಸುತ್ತದೆ.​—ಮತ್ತಾಯ 27:​5, 51; ಲೂಕ 1:​9, 21; ಯೋಹಾನ 2:20.

ಮಹಾ ಸಮೂಹದ ಸದಸ್ಯರು ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುತ್ತಾರೆ. ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿ”ಕೊಂಡವರಾಗಿ ಆತ್ಮಿಕವಾಗಿ ಶುದ್ಧರಾಗಿದ್ದಾರೆ. ಹೀಗಿರುವುದರಿಂದ, ಅವರು ದೇವರ ಸ್ನೇಹಿತರಾಗುವ ಮತ್ತು ಮಹಾ ಸಂಕಟವನ್ನು ಪಾರಾಗುವ ಪ್ರತೀಕ್ಷೆಯೊಂದಿಗೆ ನೀತಿವಂತರೆಂದು ಘೋಷಿಸಲ್ಪಟ್ಟಿದ್ದಾರೆ. (ಯಾಕೋಬ 2:​23, 25) ಅನೇಕ ವಿಧಗಳಲ್ಲಿ, ಅವರು ಇಸ್ರಾಯೇಲಿನಲ್ಲಿದ್ದ ಮತಾವಲಂಬಿಗಳಂತಿದ್ದಾರೆ. ಇವರು ನಿಯಮದೊಡಂಬಡಿಕೆಗೆ ಅಧೀನರಾಗಿ, ಇಸ್ರಾಯೇಲ್ಯರೊಂದಿಗೆ ಆರಾಧನೆಯಲ್ಲಿ ಜೊತೆಗೂಡಿದರು.

ಆ ಮತಾವಲಂಬಿಗಳು ಒಳಗಣ ಪ್ರಾಕಾರದೊಳಕ್ಕೆ ಸೇವೆ ಸಲ್ಲಿಸಲಿಲ್ಲವೆಂಬುದಂತೂ ನಿಜ. ಅಲ್ಲಿ ಯಾಜಕರು ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಹಾಗೆಯೇ ಮಹಾ ಸಮೂಹದ ಸದಸ್ಯರು ಯೆಹೋವನ ಮಹಾ ಆತ್ಮಿಕ ಆಲಯದ ಒಳಗಣ ಪ್ರಾಕಾರದೊಳಗಿಲ್ಲ. ಈ ಪ್ರಾಕಾರವು, ಯೆಹೋವನ “ಪವಿತ್ರ ಯಾಜಕವರ್ಗದ” ಸದಸ್ಯರು ಭೂಮಿಯ ಮೇಲಿದ್ದಾಗಿನ ಪರಿಪೂರ್ಣ, ನೀತಿವಂತ ಮಾನವ ಪುತ್ರತ್ವವನ್ನು ಪ್ರತಿನಿಧಿಸುತ್ತದೆ. (1 ಪೇತ್ರ 2:5) ಆದರೆ ಸ್ವರ್ಗೀಯ ಹಿರಿಯನು ಯೋಹಾನನಿಗೆ ಹೇಳಿದಂತೆ, ಮಹಾ ಸಮೂಹವು ವಾಸ್ತವದಲ್ಲಿ ಆಲಯದ ಒಳಗೇ ಇದೆ. ಅದು, ಒಂದು ಆತ್ಮಿಕ ಅರ್ಥದ ಅನ್ಯಜಾತಿಯವರ ಅಂಗಣದಲ್ಲಿಯೊ ಎಂಬಂತೆ, ಆಲಯದ ಹೊರಗಿನ ಒಂದು ಕ್ಷೇತ್ರದಲ್ಲಿಲ್ಲ. ಇದೆಂಥ ಸುಯೋಗವಾಗಿದೆ! ಮತ್ತು ಒಬ್ಬ ವ್ಯಕ್ತಿಯು ಎಲ್ಲ ಸಮಯಗಳಲ್ಲಿಯೂ ಆತ್ಮಿಕ ಹಾಗೂ ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಅದು ಎಷ್ಟೊಂದು ಎತ್ತಿತೋರಿಸುತ್ತದೆ!

[ಪುಟ 31ರಲ್ಲಿರುವ ರೇಖಾಕೃತಿ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸೊಲೊಮೋನನ ಆಲಯ

1. ಆಲಯದ ಕಟ್ಟಡ

2. ಒಳಗಣ ಪ್ರಾಕಾರ

3. ಹೊರಗಣ ಪ್ರಾಕಾರ

4. ಆಲಯದ ಅಂಗಣಕ್ಕೆ ಹೋಗುವ ಮೆಟ್ಟಿಲಸಾಲು