ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಗತ್ಯದಲ್ಲಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರಿ

ಅಗತ್ಯದಲ್ಲಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರಿ

ಅಗತ್ಯದಲ್ಲಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರಿ

“ಒಬ್ಬರಿಗೊಬ್ಬರು ಪ್ರೀತಿಕರುಣೆಗಳನ್ನು [“ಪ್ರೀತಿಪೂರ್ವಕ ದಯೆಯನ್ನು,” NW] ತೋರಿಸಿರಿ.”​—ಜೆಕರ್ಯ 7:9.

1, 2. (ಎ) ನಾವು ಪ್ರೀತಿಪೂರ್ವಕ ದಯೆಯನ್ನು ಏಕೆ ತೋರಿಸಬೇಕು? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

ಯೆಹೋವ ದೇವರ ವಾಕ್ಯವು ನಾವು “ಪ್ರೀತಿಪೂರ್ವಕ ದಯೆಯನ್ನು” ಪ್ರೀತಿಸುವಂತೆ ಸಲಹೆ ನೀಡುತ್ತದೆ. (ಮೀಕ 6:​8, NW ಪಾದಟಿಪ್ಪಣಿ) ನಾವು ಹಾಗೆ ಮಾಡಬೇಕಾದ ಕಾರಣಗಳನ್ನೂ ಅದು ಕೊಡುತ್ತದೆ. ಒಂದು ಕಾರಣವೇನೆಂದರೆ, ‘ಪರೋಪಕಾರಿಯು [“ಪ್ರೀತಿಪೂರ್ವಕ ದಯೆಯುಳ್ಳವನು,” NW] ತನಗೂ ಉಪಕಾರ’ ಮಾಡಿಕೊಳ್ಳುತ್ತಾನೆ. (ಜ್ಞಾನೋಕ್ತಿ 11:17) ಇದೆಷ್ಟು ನಿಜ! ಪ್ರೀತಿಪೂರ್ವಕ ದಯೆ ಅಥವಾ ನಿಷ್ಠೆಯುಳ್ಳ ಪ್ರೀತಿಯನ್ನು ತೋರಿಸುವುದರಿಂದ, ಇತರರೊಂದಿಗೆ ಹಾರ್ದಿಕವಾದ ಮತ್ತು ಬಾಳಿಕೆ ಬರುವ ಸಂಬಂಧವನ್ನು ಬೆಳೆಸಿಕೊಳ್ಳುವಂತಾಗುತ್ತದೆ. ಇದರ ಫಲವಾಗಿ, ನಮಗೆ ನಿಷ್ಠಾವಂತರಾದ ಸ್ನೇಹಿತರು ಇರುವಂತಾಗುತ್ತದೆ. ಇದು ಅಮೂಲ್ಯವಾದ ಬಹುಮಾನವೇ ಸರಿ!​—ಜ್ಞಾನೋಕ್ತಿ 18:24.

2 ಇದಲ್ಲದೆ, ಶಾಸ್ತ್ರವು ಹೇಳುವುದು: “ನೀತಿ ಕೃಪೆ [“ಪ್ರೀತಿಪೂರ್ವಕ ದಯೆ,” NW]ಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು.” (ಜ್ಞಾನೋಕ್ತಿ 21:21) ಹೌದು, ನಾವು ಪ್ರೀತಿಪೂರ್ವಕ ದಯೆಯನ್ನು ಹುಡುಕುವಲ್ಲಿ, ಅದು ನಾವು ದೇವರಿಗೆ ಪ್ರಿಯರಾಗುವಂತೆ ಮಾಡಿ, ನಿತ್ಯಜೀವವು ಒಳಗೊಂಡಿರುವ ಭಾವೀ ಆಶೀರ್ವಾದಗಳನ್ನು ಪಡೆಯುವವರ ಸಾಲಿನಲ್ಲಿ ನಮ್ಮನ್ನು ನಿಲ್ಲಿಸುವುದು. ಆದರೆ ನಾವು ಈ ಪ್ರೀತಿಪೂರ್ವಕ ದಯೆಯನ್ನು ಹೇಗೆ ತೋರಿಸಬಲ್ಲೆವು? ಅದನ್ನು ಯಾರಿಗೆ ತೋರಿಸಬೇಕು? ಈ ಪ್ರೀತಿಪೂರ್ವಕ ದಯೆಯು ಸಾಮಾನ್ಯವಾದ ಮಾನವ ದಯೆಗಿಂತ ಭಿನ್ನವಾದದ್ದಾಗಿದೆಯೆ?

ಮಾನವ ದಯೆ ಮತ್ತು ಪ್ರೀತಿಪೂರ್ವಕ ದಯೆ

3. ಪ್ರೀತಿಪೂರ್ವಕ ದಯೆಯು ಮಾನವ ದಯೆಗಿಂತ ಹೇಗೆ ಭಿನ್ನವಾಗಿದೆ?

3 ಸಾಮಾನ್ಯವಾದ ಮಾನವ ದಯೆಯೂ ಪ್ರೀತಿಪೂರ್ವಕ ದಯೆಯೂ ವಿವಿಧ ವಿಧಗಳಲ್ಲಿ ಭಿನ್ನವಾಗಿದೆ. ಉದಾಹರಣೆಗೆ, ಮಾನವ ದಯೆಯನ್ನು ತೋರಿಸುವವರು ಅನೇಕವೇಳೆ, ದಯೆ ತೋರಿಸುವವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ಅಂಟಿಕೆ ಅಥವಾ ಸಂಬಂಧವಿಲ್ಲದಿದ್ದರೂ ಅದನ್ನು ತೋರಿಸುತ್ತಾರೆ. ಆದರೆ ನಾವು ಒಬ್ಬನಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸುವಲ್ಲಿ, ನಾವು ಆ ವ್ಯಕ್ತಿಗೆ ಪ್ರೀತಿಪೂರ್ವಕವಾಗಿ ಬಿಗಿಯಾಗಿ ಅಂಟಿಕೊಳ್ಳುತ್ತೇವೆ. ಬೈಬಲಿನಲ್ಲಿ, ಮಾನವರ ನಡುವೆ ಇರುವ ಪ್ರೀತಿಪೂರ್ವಕ ದಯೆಯ ಅಭಿವ್ಯಕ್ತಿಗಳು, ಆ ಮೊದಲೇ ಇರುವ ಸಂಬಂಧಗಳ ಮೇಲೆ ಆಧಾರಿಸಿರಬಹುದು. (ಆದಿಕಾಂಡ 20:13; 2 ಸಮುವೇಲ 3:8; 16:17) ಅಥವಾ, ಹಿಂದೆ ತೋರಿಸಲ್ಪಟ್ಟಿರುವ ದಯಾಕಾರ್ಯಗಳಿಂದಾಗಿ ಉಂಟಾದ ಸಂಬಂಧದ ಮೇಲೆ ಇದು ಆಧಾರಿಸಿರಬಹುದು. (ಯೆಹೋಶುವ 2:​1, 12-14; 1 ಸಮುವೇಲ 15:6; 2 ಸಮುವೇಲ 10:​1, 2) ಈ ವ್ಯತ್ಯಾಸವನ್ನು ಚಿತ್ರಿಸಲು, ಬೈಬಲಿನಿಂದ ಮಾನವರ ನಡುವಿನ ದಯೆಯ ಮತ್ತು ಪ್ರೀತಿಪೂರ್ವಕ ದಯೆಯ ಎರಡು ಉದಾಹರಣೆಗಳನ್ನು ನಾವು ಹೋಲಿಸಿ ನೋಡೋಣ.

4, 5. ಮೇಲೆ ಕೊಟ್ಟಿರುವ ಎರಡು ಬೈಬಲ್‌ ಉದಾಹರಣೆಗಳು, ಮಾನವ ದಯೆಯ ಮತ್ತು ಪ್ರೀತಿಪೂರ್ವಕ ದಯೆಯ ಮಧ್ಯೆ ಇರುವ ವ್ಯತ್ಯಾಸವನ್ನು ಹೇಗೆ ತೋರಿಸುತ್ತವೆ?

4 ಮಾನವ ದಯೆಯ ಒಂದು ಉದಾಹರಣೆಯು, ಹಡಗೊಡೆತಕ್ಕೊಳಗಾಗಿದ್ದ ಒಂದು ಜನರ ಗುಂಪಿಗೆ ಸಂಬಂಧಿಸಿದೆ. ಈ ಗುಂಪಿನಲ್ಲಿ ಅಪೊಸ್ತಲ ಪೌಲನೂ ಇದ್ದನು. ಈ ಜನರನ್ನು ಪ್ರವಾಹವು ಕೊಚ್ಚಿಕೊಂಡು ಹೋಗಿ, ಮೆಲೀತೆ ದ್ವೀಪದ ದಡ ಸೇರಿಸಿತ್ತು. (ಅ. ಕೃತ್ಯಗಳು 27:​37-28:1) ಮೆಲೀತೆಯ ಜನರಿಗೆ, ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದ್ದ ಈ ಪ್ರಯಾಣಿಕರಿಗೆ ಸಹಾಯಮಾಡಬೇಕೆಂಬ ಹಂಗು ಇರಲಿಲ್ಲವಾದರೂ, ಆ ದ್ವೀಪನಿವಾಸಿಗಳು ಈ ಅಪರಿಚಿತರಿಗೆ ಅತಿಥಿಸತ್ಕಾರವನ್ನು ಮಾಡಿ, “ಆದರದಿಂದ ಸತ್ಕರಿಸಿದರು.” (ಅ. ಕೃತ್ಯಗಳು 28:​2, 7) ಅವರ ಅತಿಥಿಸತ್ಕಾರವು ದಯೆಯಿಂದ ಕೂಡಿತ್ತಾದರೂ, ಅದು ಪ್ರಾಸಂಗಿಕವಾಗಿತ್ತು ಮತ್ತು ಅಪರಿಚಿತರಿಗೆ ತೋರಿಸಲ್ಪಟ್ಟದ್ದಾಗಿತ್ತು. ಆದಕಾರಣ ಅದು ಮಾನವ ದಯೆಯಾಗಿತ್ತು.

5 ಇದನ್ನು, ರಾಜ ದಾವೀದನು ತನ್ನ ಮಿತ್ರನಾಗಿದ್ದ ಯೋನಾತಾನನ ಮಗನಾಗಿದ್ದ ಮೆಫೀಬೋಶೆತನಿಗೆ ತೋರಿಸಿದ ಅತಿಥಿಸತ್ಕಾರಕ್ಕೆ ಹೋಲಿಸಿರಿ. “ನೀನು ಪ್ರತಿ ದಿನ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು,” ಎಂದು ದಾವೀದನು ಮೆಫೀಬೋಶೆತನಿಗೆ ಹೇಳಿದನು. ಈ ಏರ್ಪಾಡಿಗೆ ಕಾರಣವನ್ನು ಕೊಡುತ್ತ ದಾವೀದನು ಹೇಳಿದ್ದು: “ನಿನ್ನ ತಂದೆಯಾದ ಯೋನಾತಾನನನ್ನು ನೆನಸಿ ನಿನಗೆ ದಯೆತೋರಿಸುತ್ತೇನೆ.” (2 ಸಮುವೇಲ 9:​6, 7, 13) ದಾವೀದನ ಈ ದೀರ್ಘಕಾಲದ ಅತಿಥಿಸತ್ಕಾರವನ್ನು ಪ್ರೀತಿಪೂರ್ವಕ ದಯೆಯ​—ಕೇವಲ ಮಾನವ ದಯೆಯಲ್ಲ​—ಅಭಿವ್ಯಕ್ತಿಯೆಂದು ಯೋಗ್ಯವಾಗಿಯೇ ಸೂಚಿಸಲಾಗಿದೆ. ಏಕೆಂದರೆ ಇದು ಈ ಮೊದಲೇ ಸ್ಥಾಪಿತವಾಗಿದ್ದ ಸಂಬಂಧಕ್ಕೆ ಅವನ ನಿಷ್ಠೆಯ ಪುರಾವೆಯಾಗಿತ್ತು. (1 ಸಮುವೇಲ 18:3; 20:​15, 42) ಅದೇ ರೀತಿ, ಇಂದು ದೇವರ ಸೇವಕರು ಸಾಮಾನ್ಯ ಜನರಿಗೆ ದಯೆಯನ್ನು ತೋರಿಸುತ್ತಾರೆ. ಆದರೂ, ಯಾರೊಂದಿಗೆ ಅವರಿಗೆ ದೇವರ ಅಂಗೀಕೃತ ಸಂಬಂಧವಿದೆಯೊ ಅವರಿಗೆ, ಬಾಳಿಕೆ ಬರುವ ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠೆಯುಳ್ಳ ಪ್ರೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.​—ಮತ್ತಾಯ 5:45; ಗಲಾತ್ಯ 6:10.

6. ಮಾನವರ ಮಧ್ಯೆ ತೋರಿಸಲ್ಪಟ್ಟಿರುವ ಪ್ರೀತಿಪೂರ್ವಕ ದಯೆಯ ಯಾವ ಲಕ್ಷಣಗಳು ದೇವರ ವಾಕ್ಯದಲ್ಲಿ ಎದ್ದುಕಾಣುತ್ತವೆ?

6 ಪ್ರೀತಿಪೂರ್ವಕ ದಯೆಯ ಕೆಲವೊಂದು ಹೆಚ್ಚಿನ ಲಕ್ಷಣಗಳನ್ನು ಗುರುತಿಸಲಿಕ್ಕಾಗಿ, ಈ ಗುಣವನ್ನು ತೋರಿಸುವ ಮೂರು ಬೈಬಲ್‌ ವೃತ್ತಾಂತಗಳನ್ನು ನಾವು ಸಂಕ್ಷಿಪ್ತವಾಗಿ ಪರಿಗಣಿಸೋಣ. ಇವುಗಳಿಂದ ನಾವು, ಮಾನವರು ತೋರಿಸುವ ಪ್ರೀತಿಪೂರ್ವಕ ದಯೆಯು (1) ನಿರ್ದಿಷ್ಟ ಕಾರ್ಯಗಳಿಂದ ವ್ಯಕ್ತವಾಗುತ್ತದೆ, (2) ಇಷ್ಟಪೂರ್ವಕವಾಗಿ ತೋರ್ಪಡಿಸಲಾಗುತ್ತದೆ, ಮತ್ತು (3) ಅಗತ್ಯವಿರುವವರಿಗೆ ಇದನ್ನು ವಿಶೇಷವಾಗಿ ತೋರಿಸಲಾಗುತ್ತದೆ ಎಂದು ಕಂಡುಕೊಳ್ಳುತ್ತೇವೆ. ಇದಲ್ಲದೆ, ನಾವು ಇಂದು ಪ್ರೀತಿಪೂರ್ವಕ ದಯೆಯನ್ನು ಹೇಗೆ ತೋರಿಸಬಹುದೆಂದು ಈ ವೃತ್ತಾಂತಗಳು ಚಿತ್ರಿಸುತ್ತವೆ.

ಒಬ್ಬ ತಂದೆಯು ಪ್ರೀತಿಪೂರ್ವಕ ದಯೆಯನ್ನು ತೋರಿಸುತ್ತಾನೆ

7. ಅಬ್ರಹಾಮನ ಸೇವಕನು ಬೆತೂವೇಲನಿಗೂ ಲಾಬಾನನಿಗೂ ಏನು ಹೇಳಿದನು, ಮತ್ತು ಆ ಸೇವಕನು ಯಾವ ಪ್ರಸ್ತಾಪವನ್ನೆತ್ತಿದನು?

7 ಹಿಂದಿನ ಲೇಖನದಲ್ಲಿ ಹೇಳಲಾಗಿದ್ದ ಅಬ್ರಹಾಮನ ಸೇವಕನ ಕಥೆಯ ಉಳಿದ ಭಾಗವನ್ನು ಆದಿಕಾಂಡ 24:​28-67 ತಿಳಿಸುತ್ತದೆ. ರೆಬೆಕ್ಕಳನ್ನು ಸಂಧಿಸಿದ ಬಳಿಕ, ಅವನನ್ನು ಆಕೆಯ ತಂದೆಯಾದ ಬೆತೂವೇಲನ ಮನೆಗೆ ಆಮಂತ್ರಿಸಲಾಯಿತು. (ವಚನಗಳು 28-32) ಅಲ್ಲಿ ಆ ಸೇವಕನು, ಅಬ್ರಹಾಮನ ಮಗನಿಗಾಗಿ ಹೆಂಡತಿಯನ್ನು ಹುಡುಕಲು ತಾನು ಮಾಡಿದ ಪ್ರಯತ್ನವನ್ನು ವಿವರಿಸಿದನು. (ವಚನಗಳು 33-47) ಅದರ ಸಂಬಂಧದಲ್ಲಿ ತನಗೆ ಈ ವರೆಗೆ ಸಿಕ್ಕಿರುವ ಸಾಫಲ್ಯವನ್ನು, “ತನ್ನ ದಣಿಯ ಮಗನಿಗೋಸ್ಕರ ಅವನ ತಮ್ಮನ ಮಗಳನ್ನೇ ತೆಗೆದುಕೊಳ್ಳುವಂತೆ ನನ್ನನ್ನು ನೀಟಾದ ದಾರಿಯಲ್ಲಿ ಕರೆದುಕೊಂಡು ಬಂದ” ಯೆಹೋವನು ತೋರಿಸಿದ ಸೂಚನೆಯಾಗಿ ಪರಿಗಣಿಸಿದನೆಂಬ ಸಂಗತಿಯನ್ನು ಅವನು ಒತ್ತಿಹೇಳಿದನು. ((ವಚನ 48) ಈ ಘಟನೆಯ ವಿಷಯದಲ್ಲಿ ತನ್ನ ಶ್ರದ್ಧಾಪೂರ್ವಕವಾದ ವಿವರಣೆಯು, ಈ ಕಾರ್ಯವನ್ನು ಯೆಹೋವನು ತಾನೇ ಆಶೀರ್ವದಿಸಿದ್ದಾನೆಂದು ಬೇತೂವೇಲನೂ ಅವನ ಮಗನಾಗಿದ್ದ ಲಾಬಾನನೂ ಮನದಟ್ಟುಮಾಡಿಕೊಳ್ಳುವಂತೆ ಸಹಾಯಮಾಡಬಹುದು ಎಂದು ಆ ಸೇವಕನು ನಿರೀಕ್ಷಿಸಿದನು ಎಂಬುದರಲ್ಲಿ ಸಂದೇಹವಿಲ್ಲ. ಕೊನೆಗೆ, ಆ ಸೇವಕನು ಹೇಳಿದ್ದು: “ಹೀಗಿರುವಲ್ಲಿ ನೀವು ನನ್ನ ದಣಿಗೆ ಪ್ರೀತಿಯಿಂದಲೂ [“ಪ್ರೀತಿಪೂರ್ವಕ ದಯೆಯಿಂದಲೂ,” NW] ನಂಬಿಕೆಯಿಂದಲೂ ನಡೆಯುವದಕ್ಕೆ ಒಪ್ಪಿದರೆ ನನಗೆ ಹೇಳಿರಿ; ಇಲ್ಲವಾದರೆ ಇಲ್ಲವೆನ್ನಿರಿ; ಆಗ ನಾನು ಬಲಗಡೆಗಾಗಲಿ ಎಡಗಡೆಗಾಗಲಿ ತಿರುಗಿಕೊಂಡು ಹೋಗುವೆನು.”​—ವಚನ 49.

8. ರೆಬೆಕ್ಕಳ ಕುರಿತಾದ ಪ್ರಸ್ತಾಪದಲ್ಲಿ ಬೆತೂವೇಲನ ಪ್ರತಿಕ್ರಿಯೆ ಏನಾಗಿತ್ತು?

8 ಯೆಹೋವನು ಈಗಾಗಲೇ ಅಬ್ರಹಾಮನಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದ್ದನು. (ಆದಿಕಾಂಡ 24:​12, 14, 27) ಆದರೆ ರೆಬೆಕ್ಕಳು ಅಬ್ರಹಾಮನ ಸೇವಕನೊಂದಿಗೆ ಹೋಗುವಂತೆ ಬಿಡಲು ಬೆತೂವೇಲನು ಇಷ್ಟಪಡುವನೊ? ಆ ದಿವ್ಯ ಪ್ರೀತಿಪೂರ್ವಕ ದಯೆಗೆ ಮಾನವ ಪ್ರೀತಿಪೂರ್ವಕ ದಯೆಯು ಕೂಡಿಸಲ್ಪಡುವುದೊ? ಇಲ್ಲವೆ ಆ ಸೇವಕನ ದೀರ್ಘ ಪ್ರಯಾಣವು ವ್ಯರ್ಥವಾಗಿ ಪರಿಣಮಿಸುವುದೊ? ಲಾಬಾನನೂ ಬೆತೂವೇಲನೂ, “ಈ ಕಾರ್ಯವು ಯೆಹೋವನಿಂದಲೇ ಉಂಟಾಯಿತು,” ಎಂದು ಹೇಳುವುದನ್ನು ಕೇಳಿ ಅಬ್ರಹಾಮನ ಸೇವಕನು ತುಂಬ ಉಪಶಮನವನ್ನು ಪಡೆದಿದ್ದಿರಬೇಕು. (ವಚನ 50) ಅವರು ಈ ವಿಷಯದಲ್ಲಿ ಯೆಹೋವನ ಹಸ್ತವನ್ನು ಕಂಡು ಒಡನೆ ಅವನ ನಿರ್ಣಯಕ್ಕೆ ಒಪ್ಪಿಗೆಯನ್ನಿತ್ತರು. ಆ ಬಳಿಕ ಬೆತೂವೇಲನು ಹೀಗೆ ಹೇಳುತ್ತ ತನ್ನ ಪ್ರೀತಿಪೂರ್ವಕ ದಯೆಯನ್ನು ವ್ಯಕ್ತಪಡಿಸಿದನು: “ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವನು ಹೇಳಿದಂತೆಯೇ ಆಕೆ ನಿನ್ನ ದಣಿಯ ಮಗನಿಗೆ ಹೆಂಡತಿಯಾಗಲಿ.” (ವಚನ 51) ರೆಬೆಕ್ಕಳು ಇಷ್ಟಪೂರ್ವಕವಾಗಿ ಅಬ್ರಹಾಮನ ಸೇವಕನ ಜೊತೆಗೆ ಹೋಗಿ ಬೇಗನೆ ಇಸಾಕನ ಪ್ರೀತಿಯ ಪತ್ನಿಯಾದಳು.​—ವಚನಗಳು 49, 52-5867.

ಒಬ್ಬ ಪುತ್ರನು ತೋರಿಸಿದ ಪ್ರೀತಿಪೂರ್ವಕ ದಯೆ

9, 10. (ಎ) ತನ್ನ ಪುತ್ರನಾದ ಯೋಸೇಫನು ಏನು ಮಾಡುವಂತೆ ಯಾಕೋಬನು ಕೇಳಿಕೊಂಡನು? (ಬಿ) ಯೋಸೇಫನು ತನ್ನ ತಂದೆಗೆ ಪ್ರೀತಿಪೂರ್ವಕ ದಯೆಯನ್ನು ಹೇಗೆ ತೋರಿಸಿದನು?

9 ಅಬ್ರಹಾಮನ ಮೊಮ್ಮಗನಾದ ಯಾಕೋಬನೂ ಪ್ರೀತಿಪೂರ್ವಕ ದಯೆಯನ್ನು ಪಡೆದನು. ಆದಿಕಾಂಡ 47 ಹೇಳುವಂತೆ, ಆಗ ಐಗುಪ್ತದಲ್ಲಿ ಜೀವಿಸುತ್ತಿದ್ದ ಯಾಕೋಬನಿಗೆ “ಅವಸಾನಕಾಲ” ಸಮೀಪಿಸಿತು. (ವಚನಗಳು 27-29) ದೇವರು ಅಬ್ರಹಾಮನಿಗೆ ಮಾತುಕೊಟ್ಟಿದ್ದ ದೇಶದ ಹೊರಗೆ ತಾನು ಸಾಯಲಿದ್ದುದರಿಂದ ಅವನು ಚಿಂತಿತನಾಗಿದ್ದನು. (ಆದಿಕಾಂಡ 15:18; 35:​10, 12; 49:​29-32) ಐಗುಪ್ತದಲ್ಲಿ ಹೂಣಲ್ಪಡುವ ಮನಸ್ಸು ಯಾಕೋಬನಿಗಿಲ್ಲದಿದ್ದುದರಿಂದ, ತನ್ನ ಶವವನ್ನು ಕಾನಾನ್‌ ದೇಶಕ್ಕೆ ಕೊಂಡೊಯ್ಯುವ ಏರ್ಪಾಡನ್ನು ಅವನು ಮಾಡಿದನು. ಇದನ್ನು ಮಾಡಲು ಅವನ ವರ್ಚಸ್ಸುಳ್ಳ ಪುತ್ರನಾದ ಯೋಸೇಫನಿಗಿಂತ ಉತ್ತಮ ಸ್ಥಾನದಲ್ಲಿ ಇನ್ನಾವನು ಇರುವನು?

10 ಆ ವೃತ್ತಾಂತವು ಹೇಳುವುದು: “ಯೋಸೇಫನನ್ನು ಕರಸಿ​—ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ ನೀನು ನಂಬಿಕೆಯಿಂದಲೂ ಪ್ರೀತಿಯಿಂದಲೂ [“ಪ್ರೀತಿಪೂರ್ವಕವಾದ ದಯೆಯಿಂದಲೂ,” NW] ನನ್ನ ಮಾತನ್ನು ನಡಿಸಬೇಕು; ಏನಂದರೆ, ನನಗೆ ಐಗುಪ್ತದೇಶದಲ್ಲಿ ಸಮಾಧಿಮಾಡಬೇಡವೆಂದು ಕೇಳಿಕೊಳ್ಳುತ್ತೇನೆ. ನಾನು ಪಿತೃಗಳಲ್ಲಿ ಸೇರಿದಾಗ ನನ್ನ ಶವವನ್ನು ಐಗುಪ್ತದೇಶದಿಂದ ತೆಗೆದುಕೊಂಡು ಹೋಗಿ ಆ ಪಿತೃಗಳ ಶ್ಮಶಾನಭೂಮಿಯಲ್ಲಿಯೇ ಸಮಾಧಿಮಾಡಬೇಕು.” (ಆದಿಕಾಂಡ 47:29, 30) ಈ ಬಿನ್ನಹವನ್ನು ನೆರವೇರಿಸುತ್ತೇನೆಂದು ಯೋಸೇಫನು ಮಾತುಕೊಟ್ಟನು ಮತ್ತು ಸ್ವಲ್ಪ ಸಮಯಾನಂತರ ಯಾಕೋಬನು ತೀರಿಕೊಂಡನು. ಯೋಸೇಫನೂ ಯಾಕೋಬನ ಇತರ ಪುತ್ರರೂ ಅವನ ಶವವನ್ನು “ಕಾನಾನ್‌ದೇಶಕ್ಕೆ ಹೊತ್ತುಕೊಂಡುಹೋಗಿ ಮಕ್ಪೇಲ ಎಂಬ ಬೈಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. ಅಬ್ರಹಾಮನು . . . ಆ ಗವಿಯನ್ನು . . . ಸ್ವಕೀಯ ಶ್ಮಶಾನ ಭೂಮಿಯಾಗುವದಕ್ಕೆ ಕೊಂಡುಕೊಂಡಿದ್ದನು.” (ಆದಿಕಾಂಡ 50:5-8, 12-14) ಹೀಗೆ ಯೋಸೇಫನು ತನ್ನ ತಂದೆಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು.

ಒಬ್ಬ ಸೊಸೆಯು ತೋರಿಸಿದ ಪ್ರೀತಿಪೂರ್ವಕ ದಯೆ

11, 12. (ಎ) ರೂತಳು ನೊವೊಮಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದ್ದು ಹೇಗೆ? (ಬಿ) ರೂತಳು “ಕೊನೆಯಲ್ಲಿ” ತೋರಿಸಿದ ಪ್ರೀತಿಪೂರ್ವಕ ದಯೆಯು “ಮುಂಚಿಗಿಂತ” ಯಾವ ವಿಧದಲ್ಲಿ ಹೆಚ್ಚು ಉತ್ತಮವಾಗಿತ್ತು?

11 ರೂತಳ ಪುಸ್ತಕವು, ವಿಧವೆಯಾಗಿದ್ದ ನೊವೊಮಿಗೆ ಆಕೆಯ ಸೊಸೆಯಾಗಿದ್ದು, ವಿಧವೆಯೂ ಆಗಿದ್ದ ರೂತಳು ಹೇಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದಳೆಂದು ತಿಳಿಸುತ್ತದೆ. ನೊವೊಮಿಯು ಯೆಹೂದದ ಬೇತ್ಲೆಹೇಮಿನಲ್ಲಿ ವಾಸಿಸಲು ನಿರ್ಣಯಿಸಿ ಹಿಂದೆ ಬಂದಾಗ, ರೂತಳು ಪ್ರೀತಿಪೂರ್ವಕ ದಯೆಯನ್ನೂ ದೃಢನಿಶ್ಚಯತೆಯನ್ನೂ ತೋರಿಸಿ, “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು” ಎಂದು ಹೇಳಿದಳು. (ರೂತಳು 1:16) ಸಮಯಾನಂತರ, ನೊವೊಮಿಯ ವಯಸ್ಸಾದ ಸಂಬಂಧಿಯಾಗಿದ್ದ ಬೋವಜನನ್ನು ಮದುವೆಯಾಗಲು ಒಪ್ಪಿಕೊಂಡಾಗ, ರೂತಳು ತನ್ನ ಪ್ರೀತಿಪೂರ್ವಕ ದಯೆಯನ್ನು ವ್ಯಕ್ತಪಡಿಸಿದಳು. * (ಧರ್ಮೋಪದೇಶಕಾಂಡ 25:​5, 6; ರೂತಳು 3:​6-9) ಬೋವಜನು ರೂತಳಿಗೆ ಹೇಳಿದ್ದು: “ನೀನು ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರನ್ನು ನೋಡಿ ಹೋಗಲಿಲ್ಲ. ಈ ನಿನ್ನ ಪತಿಭಕ್ತಿಯು [“ಪ್ರೀತಿಪೂರ್ವಕ ದಯೆಯು,” NW] ಮುಂಚಿಗಿಂತ ವಿಶೇಷವಾಗಿ [“ಕೊನೆಯಲ್ಲಿ,” NW] ಪ್ರತ್ಯಕ್ಷವಾಯಿತು.”​—ರೂತಳು 3:10.

12 ರೂತಳು ‘ಮುಂಚೆ’ ತೋರಿಸಿದ ಪ್ರೀತಿಪೂರ್ವಕ ದಯೆಯು, ಆಕೆ ತನ್ನ ಸ್ವಂತ ಜನರನ್ನು ಬಿಟ್ಟು ನೊವೊಮಿಗೆ ಅಂಟಿಕೊಂಡ ಸಮಯವಾಗಿತ್ತು. (ರೂತಳು 1:14; 2:11) ಆ ಕಾರ್ಯಕ್ಕಿಂತಲೂ, ಆಕೆಯು “ಕೊನೆಯಲ್ಲಿ” ತೋರಿಸಿದ ಪ್ರೀತಿಪೂರ್ವಕ ದಯೆಯ ಕಾರ್ಯವು, ಅಂದರೆ ಆಕೆ ಬೋವಜನನ್ನು ಮದುವೆಯಾಗಲು ಇಷ್ಟಪಟ್ಟ ಕಾರ್ಯವು ಹೆಚ್ಚು ಉತ್ತಮವಾಗಿತ್ತು. ಮಕ್ಕಳನ್ನು ಹಡೆಯುವ ಕಾಲ ಕಳೆದುಹೋಗಿದ್ದ ನೊವೊಮಿಗೆ ಈಗ ರೂತಳು ಒಬ್ಬ ಬಾಧ್ಯಸ್ಥನನ್ನು ಒದಗಿಸಲು ಶಕ್ತಳಾದಳು. ಆ ಮದುವೆ ಮುಗಿದ ತರುವಾಯ ರೂತಳು ಮಗನನ್ನು ಹೆತ್ತಾಗ, “ನೊವೊಮಿಗೆ ಒಬ್ಬ ಮಗನು ಹುಟ್ಟಿದ್ದಾನೆ” ಎಂದು ಬೇತ್ಲೆಹೇಮಿನ ಸ್ತ್ರೀಯರು ಕೂಗಿ ಹೇಳಿದರು. (ರೂತಳು 4:14, 17) ರೂತಳು ನಿಜವಾಗಿಯೂ ಯೇಸು ಕ್ರಿಸ್ತನ ಪೂರ್ವಜೆಯಾಗುವ ಅದ್ಭುತಕರವಾದ ಸದವಕಾಶವು ಯೆಹೋವನಿಂದ ಪ್ರತಿಫಲವಾಗಿ ಕೊಡಲ್ಪಟ್ಟ “ಗುಣವಂತೆ” ಆಗಿದ್ದಳು.​—ರೂತಳು 2:12; 3:11; 4:18-22; ಮತ್ತಾಯ 1:1, 5, 6.

ಕ್ರಿಯೆಗಳಿಂದ ವ್ಯಕ್ತ

13. ಬೆತೂವೇಲ, ಯೋಸೇಫ ಮತ್ತು ರೂತರು ತಮ್ಮ ಪ್ರೀತಿಪೂರ್ವಕ ದಯೆಯನ್ನು ಹೇಗೆ ವ್ಯಕ್ತಪಡಿಸಿದರು?

13 ಬೆತೂವೇಲ, ಯೋಸೇಫ ಮತ್ತು ರೂತರು ತಮ್ಮ ಪ್ರೀತಿಪೂರ್ವಕ ದಯೆಯನ್ನು ಹೇಗೆ ವ್ಯಕ್ತಪಡಿಸಿದರೆಂಬದನ್ನು ನೀವು ಗಮನಿಸಿದಿರೊ? ಅವರು ಹಾಗೆ ಮಾಡಿದ್ದು ದಯೆಯ ನುಡಿಗಳಿಂದ ಮಾತ್ರವಲ್ಲ, ನಿರ್ದಿಷ್ಟ ಕ್ರಿಯೆಗಳಿಂದಲೂ ಮಾಡಿದರು. ಬೆತೂವೇಲನು, “ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ” ಎಂದಷ್ಟೇ ಹೇಳದೆ, “ಕರೆದುಕೊಂಡು ಹೋಗಬಹುದು” ಎಂದೂ ಹೇಳಿದನು. (ಆದಿಕಾಂಡ 24:​51, 59) ಯೋಸೇಫನು ಸಹ ತನ್ನ ತಂದೆಗೆ, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಕೇವಲ ಹೇಳದೆ, ಅವನೂ ಅವನ ಸಹೋದರರೂ “ತಂದೆಯ ಅಪ್ಪಣೆಯ ಮೇರೆಗೆ” ಮಾಡಿದರು. (ಆದಿಕಾಂಡ 47:30; 50:​12, 13) ರೂತಳೂ, “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು” ಎಂದು ಮಾತ್ರ ಹೇಳದೆ, ನೊವೊಮಿಯೊಂದಿಗೆ ಜೊತೆಗೂಡಿ “ಪ್ರಯಾಣ ಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇಮಿಗೆ” ಬಂದರು. (ರೂತಳು 1:​16, 19) ಯೆಹೂದದಲ್ಲಿ ಸಹ ರೂತಳು, “ಅತ್ತೆಯ ಆಜ್ಞೆಯಂತೆಯೇ” ನಡೆದಳು. (ರೂತಳು 3:6) ಹೌದು, ರೂತಳ ಪ್ರೀತಿಪೂರ್ವಕ ದಯೆಯು, ಇತರರಂತೆಯೇ ಕ್ರಿಯೆಗಳಲ್ಲಿ ವ್ಯಕ್ತವಾಯಿತು.

14. (ಎ) ದೇವರ ಇಂದಿನ ಸೇವಕರು ಕ್ರಿಯೆಗಳ ಮೂಲಕ ಪ್ರೀತಿಪೂರ್ವಕ ದಯೆಯನ್ನು ತೋರಿಸುವುದು ಹೇಗೆ? (ಬಿ) ನಿಮ್ಮ ಕ್ಷೇತ್ರದಲ್ಲಿರುವ ಕ್ರೈಸ್ತರು ತೋರಿಸುತ್ತಿರುವ ಪ್ರೀತಿಪೂರ್ವಕ ದಯೆಯ ಯಾವ ಕ್ರಿಯೆಗಳು ನಿಮಗೆ ತಿಳಿದಿವೆ?

14 ದೇವರ ಸೇವಕರು ಇಂದು ಕ್ರಿಯೆಗಳ ಮೂಲಕ ಪ್ರೀತಿಪೂರ್ವಕ ದಯೆಯನ್ನು ತೋರಿಸುತ್ತಾರೆಂಬುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ಉದಾಹರಣೆಗೆ, ನಿಶ್ಶಕ್ತರೂ, ಖಿನ್ನರೂ, ದುಃಖಿತರೂ ಆದ ಜೊತೆವಿಶ್ವಾಸಿಗಳಿಗೆ ಬಾಳಿಕೆ ಬರುವ ಭಾವಪೂರಿತವಾದ ಬೆಂಬಲವನ್ನು ಕೊಡುವವರ ಕುರಿತು ಯೋಚಿಸಿರಿ. (ಜ್ಞಾನೋಕ್ತಿ 12:25) ಅಥವಾ, ವೃದ್ಧರು ಸಭಾ ಕೂಟಗಳಿಗೆ ಹಾಜರಾಗುವಂತೆ ಅವರನ್ನು ನಂಬಿಗಸ್ತಿಕೆಯಿಂದ ಕ್ರಮವಾಗಿ ತಮ್ಮ ವಾಹನಗಳಲ್ಲಿ ಕೊಂಡೊಯ್ಯುವ ಅನೇಕ ಮಂದಿ ಯೆಹೋವನ ಸಾಕ್ಷಿಗಳ ಕುರಿತು ಚಿಂತಿಸಿರಿ. ಆ್ಯನ ಎಂಬ 82 ವರುಷ ಪ್ರಾಯದ, ಸಂಧಿವಾತದಿಂದ ಬಳಲುತ್ತಿರುವ ಸ್ತ್ರೀ ಹೀಗೆ ಹೇಳುವಾಗ, ಅನೇಕರ ಅನಿಸಿಕೆಯನ್ನು ಪ್ರತಿಬಿಂಬಿಸುತ್ತಾರೆ: “ಎಲ್ಲ ಕೂಟಗಳಿಗೆ ವಾಹನಗಳಲ್ಲಿ ಕೊಂಡೊಯ್ಯಲ್ಪಡುವುದು ಯೆಹೋವನ ಆಶೀರ್ವಾದವೇ ಸರಿ. ನನಗೆ ಅಂತಹ ಪ್ರೀತಿಪರ ಸಹೋದರ ಸಹೋದರಿಯರನ್ನು ಕೊಟ್ಟದ್ದಕ್ಕಾಗಿ ನಾನು ಆತನಿಗೆ ಹೃದಯದಾಳದಿಂದ ಕೃತಜ್ಞತೆಯನ್ನು ಸೂಚಿಸುತ್ತೇನೆ.” ನೀವು ನಿಮ್ಮ ಸಭೆಯಲ್ಲಿ ಇಂತಹ ಕ್ರಿಯೆಗಳಲ್ಲಿ ಭಾಗವಹಿಸುತ್ತೀರೊ? (1 ಯೋಹಾನ 3:​17, 18) ನೀವು ಭಾಗವಹಿಸುತ್ತಿರುವಲ್ಲಿ, ನಿಮ್ಮ ಪ್ರೀತಿಪೂರ್ವಕ ದಯೆಯು ಅತಿಯಾಗಿ ಮಾನ್ಯಮಾಡಲ್ಪಡುತ್ತದೆಂಬ ಖಾತ್ರಿ ನಿಮಗಿರಲಿ.

ಇಷ್ಟಪೂರ್ವಕವಾಗಿ ಮಾಡುವುದು

15. ನಾವು ಚರ್ಚಿಸಿರುವ ಮೂರು ಬೈಬಲ್‌ ವೃತ್ತಾಂತಗಳಲ್ಲಿ ಪ್ರೀತಿಪೂರ್ವಕ ದಯೆಯ ಯಾವ ಲಕ್ಷಣವು ಇನ್ನೂ ಹೆಚ್ಚಾಗಿ ಎತ್ತಿಹೇಳಲ್ಪಟ್ಟಿದೆ?

15 ನಾವು ಚರ್ಚಿಸಿರುವ ಬೈಬಲ್‌ ವೃತ್ತಾಂತಗಳು, ಪ್ರೀತಿಪೂರ್ವಕ ದಯೆಯು ಉದಾರವಾಗಿಯೂ ಇಷ್ಟಪೂರ್ವಕವಾಗಿಯೂ ಕೊಡಲ್ಪಡುತ್ತದೆಂದೂ, ಬಲಾತ್ಕಾರದಿಂದಲ್ಲವೆಂದೂ ತೋರಿಸುತ್ತವೆ. ಬೆತೂವೇಲನು ಸ್ವಂತ ಇಷ್ಟದಿಂದ ಅಬ್ರಹಾಮನ ಸೇವಕನೊಂದಿಗೆ ಸಹಕರಿಸಿದನು. ರೆಬೆಕ್ಕಳೂ ಹಾಗೆಯೇ ಮಾಡಿದಳು. (ಆದಿಕಾಂಡ 24:​51, 58) ಯೋಸೇಫನು ಪ್ರೀತಿಪೂರ್ವಕ ದಯೆಯನ್ನು ಇತರರ ಪ್ರೇರಣೆಯಿಲ್ಲದೆ ತೋರಿಸಿದನು. (ಆದಿಕಾಂಡ 50:​4, 5) ರೂತಳು ನೊವೊಮಿಯ “ಜೊತೆಯಲ್ಲಿ ಹೋಗಲು ಪಟ್ಟುಹಿಡಿದಳು.” (ರೂತಳು 1:​18, NW) ರೂತಳು ಬೋವಜನನ್ನು ಸಮೀಪಿಸಬೇಕೆಂದು ನೊವೊಮಿ ಸೂಚಿಸಿದಾಗ, ಆ ಮೋವಾಬ್ಯಳು “ನೀನು ಹೇಳಿದ್ದನ್ನೆಲ್ಲಾ ಮಾಡುವೆನು” ಎಂದು ಹೇಳುವಂತೆ ಪ್ರೀತಿಪೂರ್ವಕ ದಯೆಯು ಆಕೆಯನ್ನು ನಡೆಸಿತು.​—ರೂತಳು 3:​1-5.

16, 17. ಬೆತೂವೇಲ, ಯೋಸೇಫ ಮತ್ತು ರೂತರ ಪ್ರೀತಿಪೂರ್ವಕ ದಯೆಯನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಮಾಡುವುದು ಯಾವುದು, ಮತ್ತು ಈ ಗುಣವನ್ನು ತೋರಿಸುವಂತೆ ಅವರನ್ನು ಯಾವುದು ಪ್ರೇರಿಸಿತು?

16 ಬೆತೂವೇಲ, ಯೋಸೇಫ ಮತ್ತು ರೂತರು ತೋರಿಸಿದ ಪ್ರೀತಿಪೂರ್ವಕ ದಯೆಯು ವಿಶೇಷವಾಗಿ ಗಮನಾರ್ಹವಾಗಿದೆ. ಏಕೆಂದರೆ ಅಬ್ರಹಾಮ, ಯಾಕೋಬ ಮತ್ತು ನೊವೊಮಿಯರು ಅವರ ಮೇಲೆ ಒತ್ತಡವನ್ನು ತರುವ ಸ್ಥಿತಿಯಲ್ಲಿರಲಿಲ್ಲ. ತನ್ನ ಪುತ್ರಿಯನ್ನು ಅಗಲಿ ಹೋಗುವಂತೆ ಹೇಳುವ ಯಾವ ಶಾಸನಬದ್ಧ ಹಂಗೂ ಬೆತೂವೇಲನಿಗಿರಲಿಲ್ಲ. ಅವನು ಅಬ್ರಹಾಮನ ಸೇವಕನಿಗೆ, ‘ಇಲ್ಲ, ನನ್ನ ಶ್ರಮಜೀವಿಯಾದ ಮಗಳನ್ನು ಅಷ್ಟು ದೂರ ಕಳುಹಿಸಿಕೊಡುವ ಮನಸ್ಸು ನನಗಿಲ್ಲ’ ಎಂದು ಸುಲಭವಾಗಿ ಹೇಳಬಹುದಿತ್ತು. (ಆದಿಕಾಂಡ 24:​18-20) ತದ್ರೀತಿಯೇ, ತನ್ನ ತಂದೆಯ ಬಿನ್ನಹದಂತೆ ಮಾಡುವುದು ಅಥವಾ ಮಾಡದಿರಲು ನಿರ್ಣಯಿಸುವುದು ಯೋಸೇಫನ ಇಷ್ಟವಾಗಿತ್ತು. ಹೇಗೂ ಯಾಕೋಬನು ಸಾಯಲಿದ್ದುದರಿಂದ, ಯೋಸೇಫನು ಕೊಟ್ಟ ಮಾತನ್ನು ಪೂರೈಸುವಂತೆ ನಿರ್ಬಂಧಿಸಲು ಅವನು ಅಲ್ಲಿರುತ್ತಿರಲಿಲ್ಲ. ರೂತಳು ಮೋವಾಬಿನಲ್ಲೇ ಉಳಿಯಲು ಸ್ವತಂತ್ರಳೆಂದು ನೊವೊಮಿ ತಾನೇ ಸೂಚಿಸಿದಳು. (ರೂತಳು 1:8) ವಯಸ್ಸಾಗಿದ್ದ ಬೋವಜನನ್ನು ಮದುವೆಯಾಗುವ ಬದಲು, “ಯೌವನಸ್ಥರನ್ನು” ಮದುವೆಯಾಗುವ ಸ್ವಾತಂತ್ರ್ಯವೂ ರೂತಳಿಗಿತ್ತು.

17 ಬೆತೂವೇಲ, ಯೋಸೇಫ ಮತ್ತು ರೂತರು ಪ್ರೀತಿಪೂರ್ವಕ ದಯೆಯನ್ನು ಇಷ್ಟಪೂರ್ವಕವಾಗಿ ತೋರಿಸಿದರು; ಹಾಗೆ ಮಾಡಲು ಅವರ ಹೃದಯವೇ ಅವರನ್ನು ಪ್ರೇರಿಸಿತು. ತಮ್ಮೊಂದಿಗೆ ಯಾರಿಗೆ ಸಂಬಂಧವಿತ್ತೊ ಅವರಿಗೆ ಈ ಗುಣವನ್ನು ತೋರಿಸುವ ನೈತಿಕ ಜವಾಬ್ದಾರಿಯನ್ನು ಅವರು ಮನಗಂಡರು. ಅರಸನಾದ ದಾವೀದನು ಮೆಫೀಬೋಶೆತನಿಗೆ ಸಮಯಾನಂತರ ಈ ಗುಣವನ್ನು ತೋರಿಸುವ ಜವಾಬ್ದಾರಿಯನ್ನು ಮನಗಂಡಂತೆಯೇ ಇವರೂ ಮನಗಂಡರು.

18. (ಎ) ಕ್ರೈಸ್ತ ಹಿರಿಯರು ಯಾವ ಮನೋಭಾವದಿಂದ ‘ದೇವರ ಮಂದೆಯನ್ನು ಕಾಯುತ್ತಾರೆ?’ (ಬಿ) ಜೊತೆ ವಿಶ್ವಾಸಿಗಳಿಗೆ ಸಹಾಯಮಾಡುವುದರ ಬಗ್ಗೆ ಒಬ್ಬ ಹಿರಿಯನು ತನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಿದನು?

18 ಈ ಪ್ರೀತಿಪೂರ್ವಕ ದಯೆಯು ಇನ್ನೂ, ದೇವರ ಮಂದೆಯನ್ನು ನೋಡಿಕೊಳ್ಳುವ ಪುರುಷರು ಸೇರಿರುವ ದೇವಜನರ ಒಂದು ಗುರುತಾಗಿದೆ. (ಕೀರ್ತನೆ 110:3; 1 ಥೆಸಲೊನೀಕ 5:12) ತಮಗೆ ಸಿಕ್ಕಿರುವ ನೇಮಕದ ಕಾರಣ, ಇಂತಹ ಹಿರಿಯರು ಅಥವಾ ಮೇಲ್ವಿಚಾರಕರು ತಮ್ಮ ಹೊಣೆಗಾರಿಕೆಗನುಸಾರವಾಗಿ ಜೀವಿಸುವ ಜವಾಬ್ದಾರಿಗೊಳಗಾಗುತ್ತಾರೆ. (ಅ. ಕೃತ್ಯಗಳು 20:28) ಹೀಗಿದ್ದರೂ, ಸಭೆಯ ಸಂಬಂಧದಲ್ಲಿ ಅವರು ಮಾಡುವ ಕುರಿಪಾಲನೆಯ ಕೆಲಸ ಮತ್ತು ಪ್ರೀತಿಪೂರ್ವಕ ದಯೆಯ ಇತರ ಕಾರ್ಯಗಳು, “ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿ” ಮಾಡಲ್ಪಡುತ್ತವೆ. (1 ಪೇತ್ರ 5:2) ಹಿರಿಯರು ಮಂದೆಯನ್ನು ಏಕೆ ಪರಾಮರಿಸುತ್ತಾರೆಂದರೆ, ಅವರಿಗೆ ಹಾಗೆ ಮಾಡುವ ಜವಾಬ್ದಾರಿಯಿದೆ ಮತ್ತು ಅಪೇಕ್ಷೆಯೂ ಇದೆ. ಅವರು ಕ್ರಿಸ್ತನ ಕುರಿಗಳ ವಿಷಯದಲ್ಲಿ ಪ್ರೀತಿಪೂರ್ವಕ ದಯೆಯನ್ನು ತೋರಿಸುವುದು, ಅವರು ಹಾಗೆ ಮಾಡಲೇ ಬೇಕಾಗಿರುವುದರಿಂದಲೂ ಅವರು ಅದನ್ನು ಮಾಡಲು ಇಷ್ಟಪಡುವುದರಿಂದಲೂ ಆಗಿದೆ. (ಯೋಹಾನ 21:​15-17) ಒಬ್ಬ ಕ್ರೈಸ್ತ ಹಿರಿಯನು ಹೇಳುವುದು: “ಸಹೋದರರ ಮನೆಗಳಿಗೆ ಭೇಟಿಕೊಡುವುದು ಅಥವಾ ಟೆಲಿಫೋನ್‌ನಲ್ಲಿ ಮಾತಾಡುವುದು ನನಗೆ ತುಂಬ ಇಷ್ಟ. ಬೇರೆ ಯಾವ ಕಾರಣಕ್ಕಲ್ಲದಿದ್ದರೂ, ನಾನು ಅವರ ಕುರಿತು ಯೋಚಿಸುತ್ತಿದ್ದೇನೆಂದು ತಿಳಿಸಲಿಕ್ಕಾಗಿ ನಾನಿದನ್ನು ಮಾಡುತ್ತೇನೆ. ಸಹೋದರರಿಗೆ ಸಹಾಯಮಾಡುವುದು ನನಗೆ ಸಂತೋಷ ಮತ್ತು ಸಂತೃಪ್ತಿಯನ್ನು ಕೊಡುವ ಮಹಾ ಮೂಲವಾಗಿರುತ್ತದೆ!” ಎಲ್ಲೆಡೆಗಳಲ್ಲಿಯೂ ಇರುವ ಪರಾಮರಿಸುವ ಹಿರಿಯರು ಇದಕ್ಕೆ ಪೂರ್ಣ ಹೃದಯದ ಸಮ್ಮತಿಯನ್ನು ತೋರಿಸುತ್ತಾರೆ.

ಅಗತ್ಯದಲ್ಲಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರಿ

19. ಈ ಲೇಖನದಲ್ಲಿ ಚರ್ಚಿಸಿರುವ ಬೈಬಲ್‌ ವೃತ್ತಾಂತಗಳಲ್ಲಿ ಪ್ರೀತಿಪೂರ್ವಕ ದಯೆಯ ಕುರಿತಾದ ಯಾವ ನಿಜತ್ವವು ಒತ್ತಿಹೇಳಲ್ಪಟ್ಟಿದೆ?

19 ನಾವು ಚರ್ಚಿಸಿರುವ ಬೈಬಲ್‌ ವೃತ್ತಾಂತಗಳು, ಒಂದು ಅಗತ್ಯವಿದ್ದು, ಅದನ್ನು ತಾವಾಗಿಯೇ ಪೂರೈಸಲು ಅಸಮರ್ಥರಾಗಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕೆಂಬ ನಿಜತ್ವವನ್ನು ಒತ್ತಿಹೇಳುತ್ತವೆ. ತನ್ನ ವಂಶವನ್ನು ಮುಂದುವರಿಸಲು ಅಬ್ರಹಾಮನಿಗೆ ಬೆತೂವೇಲನ ಸಹಕಾರವು ಅಗತ್ಯವಾಗಿತ್ತು. ತನ್ನ ಅವಶೇಷವನ್ನು ಕಾನಾನಿಗೆ ತೆಗೆದುಕೊಂಡು ಹೋಗುವಂತೆ ಮಾಡಲು ಯಾಕೋಬನಿಗೆ ಯೋಸೇಫನ ಆವಶ್ಯಕತೆಯಿತ್ತು. ಬಾಧ್ಯಸ್ಥನನ್ನು ಪಡೆಯಲು ನೊವೊಮಿಗೆ ರೂತಳ ಸಹಾಯದ ಅಗತ್ಯವಿತ್ತು. ಯಾವುದೇ ಸಹಾಯವಿಲ್ಲದೆ ಅಬ್ರಹಾಮನಾಗಲಿ, ಯಾಕೋಬನಾಗಲಿ, ನೊವೊಮಿಯಾಗಲಿ ಈ ಅಗತ್ಯಗಳನ್ನು ಪೂರೈಸಸಾಧ್ಯವಿರುತ್ತಿರಲಿಲ್ಲ. ಅದೇ ರೀತಿ, ಇಂದು ಪ್ರೀತಿಪೂರ್ವಕ ದಯೆಯನ್ನು ವಿಶೇಷವಾಗಿ ಅಗತ್ಯದಲ್ಲಿರುವವರಿಗೆ ತೋರಿಸಬೇಕು. (ಜ್ಞಾನೋಕ್ತಿ 19:17) ನಾವು ಮೂಲಪಿತನಾದ ಯೋಬನನ್ನು ಅನುಕರಿಸಬೇಕು. ಏಕೆಂದರೆ ಅವನು, “ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿ” ಇದ್ದನು. “ಗತಿಯಿಲ್ಲದವ”ನನ್ನು ಲಕ್ಷಿಸಿದನು. ಅವನು “ವಿಧವೆಯ ಹೃದಯವನ್ನು ಉತ್ಸಾಹ”ಗೊಳಿಸುತ್ತಿದ್ದನು. ಅವನು “ಕುರುಡನಿಗೆ ಕಣ್ಣಾಗಿಯೂ ಕುಂಟನಿಗೆ ಕಾಲಾಗಿಯೂ” ಇದ್ದನು.​—ಯೋಬ 29:12-15.

20, 21. ನಮ್ಮ ಪ್ರೀತಿಪೂರ್ವಕ ದಯೆಯ ಅಭಿವ್ಯಕ್ತಿಗಳ ಅಗತ್ಯ ಯಾರಿಗಿದೆ, ಮತ್ತು ನಮ್ಮಲ್ಲಿ ಪ್ರತಿಯೊಬ್ಬನು ಏನು ಮಾಡಲು ನಿಶ್ಚಯಿಸಬೇಕು?

20 ಪ್ರತಿಯೊಂದು ಕ್ರೈಸ್ತ ಸಭೆಯಲ್ಲಿಯೂ, “ಅಂಗಲಾಚುವ ಬಡವರು” ಇದ್ದೇ ಇರುತ್ತಾರೆ. ಇದಕ್ಕೆ ಕಾರಣವು ಒಂಟಿತನ, ನಿರಾಶೆ, ತಾವು ಅರ್ಹರಲ್ಲವೆಂಬ ಭಾವನೆ, ಇತರರ ಕುರಿತಾದ ಆಶಾಭಂಗ, ಗಂಭೀರ ಕಾಯಿಲೆ, ಅಥವಾ ಪ್ರಿಯ ವ್ಯಕ್ತಿಯ ಮರಣ ಆಗಿರಬಹುದು. ಕಾರಣವು ಏನೇ ಆಗಿರಲಿ, ಇಂತಹ ಪ್ರಿಯರಾದ ವ್ಯಕ್ತಿಗಳಿಗೆಲ್ಲ ನಮ್ಮ ಇಷ್ಟಪೂರ್ವಕವಾದ ಮತ್ತು ಬಾಳುವ ಪ್ರೀತಿಪೂರ್ವಕ ದಯೆಯ ಕ್ರಿಯೆಗಳು ಪೂರೈಸಬಲ್ಲ ಮತ್ತು ಪೂರೈಸಬೇಕಾದ ಅಗತ್ಯಗಳಿವೆ.​—1 ಥೆಸಲೊನೀಕ 5:14.

21 ಆದಕಾರಣ, ನಾವು “ಪ್ರೀತಿಪೂರ್ವಕ ದಯೆಯಲ್ಲಿ ಸಮೃದ್ಧನಾಗಿರುವ” ಯೆಹೋವ ದೇವರನ್ನು ಅನುಕರಿಸುತ್ತ ಹೋಗೋಣ. (ವಿಮೋಚನಕಾಂಡ 34:​6, NW; ಎಫೆಸ 5:1) ವಿಶೇಷವಾಗಿ ಅಗತ್ಯದಲ್ಲಿರುವವರ ಪರವಾಗಿ ಇಷ್ಟಪೂರ್ವಕವಾಗಿ ನಿರ್ದಿಷ್ಟ ಕ್ರಿಯೆಗಳನ್ನು ಮಾಡುವ ಮೂಲಕ ನಾವು ಆತನನ್ನು ಅನುಕರಿಸಬಲ್ಲೆವು. ನಾವು “ಒಬ್ಬರಿಗೊಬ್ಬರು ಪ್ರೀತಿಕರುಣೆ [“ಪ್ರೀತಿಪೂರ್ವಕ ದಯೆ,” NW]ಗಳನ್ನು ತೋರಿಸಿ” ಮುನ್ನಡೆಯುವಾಗ, ನಾವು ಯೆಹೋವನನ್ನು ಗೌರವಿಸಿ ಮಹಾ ಸಂತೋಷವನ್ನು ಅನುಭವಿಸುವುದು ಖಂಡಿತ.​—ಜೆಕರ್ಯ 7:9.

[ಪಾದಟಿಪ್ಪಣಿ]

^ ಪ್ಯಾರ. 11 ಇಲ್ಲಿ ಹೇಳಲಾಗಿರುವ ವಿಧದ ವಿವಾಹದ ವಿವರಣೆಗಳಿಗಾಗಿ, ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 1, ಪುಟ 370ನ್ನು ನೋಡಿ.

ನೀವು ಹೇಗೆ ಉತ್ತರ ಕೊಡುವಿರಿ?

• ಪ್ರೀತಿಪೂರ್ವಕ ದಯೆಯು ಮಾನವ ದಯೆಗಿಂತ ಹೇಗೆ ಭಿನ್ನವಾಗಿದೆ?

• ಬೆತೂವೇಲ, ಯೋಸೇಫ ಮತ್ತು ರೂತರು ಪ್ರೀತಿಪೂರ್ವಕ ದಯೆಯನ್ನು ಯಾವ ವಿಧಗಳಲ್ಲಿ ತೋರಿಸಿದರು?

• ನಾವು ಯಾವ ಮನೋಭಾವದಿಂದ ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕು?

• ನಮ್ಮ ಪ್ರೀತಿಪೂರ್ವಕ ದಯೆಯ ಅಗತ್ಯ ಯಾರಿಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಬೆತೂವೇಲನು ಪ್ರೀತಿಪೂರ್ವಕ ದಯೆಯನ್ನು ಹೇಗೆ ತೋರಿಸಿದನು?

[ಪುಟ 21ರಲ್ಲಿರುವ ಚಿತ್ರ]

ರೂತಳ ನಿಷ್ಠೆಯುಳ್ಳ ಪ್ರೀತಿಯು ನೊವೊಮಿಗೆ ಆಶೀರ್ವಾದವಾಗಿ ಪರಿಣಮಿಸಿತು

[ಪುಟ 23ರಲ್ಲಿರುವ ಚಿತ್ರಗಳು]

ಮಾನವ ಪ್ರೀತಿಪೂರ್ವಕ ದಯೆಯು ಇಷ್ಟಪೂರ್ವಕವಾಗಿ ತೋರಿಸಲ್ಪಡುತ್ತದೆ, ನಿರ್ದಿಷ್ಟ ಕ್ರಿಯೆಯ ಮೂಲಕ ವ್ಯಕ್ತಪಡಿಸಲ್ಪಡುತ್ತದೆ, ಮತ್ತು ಅಗತ್ಯದಲ್ಲಿರುವವರಿಗೆ ತೋರಿಸಲ್ಪಡುತ್ತದೆ