ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟೆರ್ಟಲ್ಯನ್‌ ಪ್ರತಿಪಾದಿಸಿದ ಸ್ವಯಂವಿರೋಧೋಕ್ತಿಗಳು

ಟೆರ್ಟಲ್ಯನ್‌ ಪ್ರತಿಪಾದಿಸಿದ ಸ್ವಯಂವಿರೋಧೋಕ್ತಿಗಳು

ಟೆರ್ಟಲ್ಯನ್‌ ಪ್ರತಿಪಾದಿಸಿದ ಸ್ವಯಂವಿರೋಧೋಕ್ತಿಗಳು

‘ಒಬ್ಬ ಕ್ರೈಸ್ತನ ಮತ್ತು ತತ್ತ್ವಜ್ಞಾನಿಯ ಮಧ್ಯೆ ಯಾವುದೇ ಹೋಲಿಕೆ ಎಲ್ಲಿದೆ? ಸತ್ಯವನ್ನು ಕೆಡಿಸುವವನ ಮತ್ತು ಅದನ್ನು ಪುನಸ್ಸ್ಥಾಪಿಸಿ ಬೋಧಿಸುವವನ ಮಧ್ಯೆ ಹೋಲಿಕೆ ಎಲ್ಲಿದೆ? ತತ್ತ್ವಜ್ಞಾನದ ಶಾಲೆಯ ಮತ್ತು ಚರ್ಚಿನ ಮಧ್ಯೆ ಯಾವ ಸಮ್ಮತಿಯಿದೆ?’ ಸಾ.ಶ. ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಒಬ್ಬ ಲೇಖಕನಾಗಿದ್ದ ಟೆರ್ಟಲ್ಯನ್‌ನು ಇಂತಹ ಧೀರ ಪ್ರಶ್ನೆಗಳನ್ನು ಹಾಕಿದನು. ಅವನು “ಚರ್ಚಿನ ಇತಿಹಾಸ ಮತ್ತು ತನ್ನ ಕಾಲದಲ್ಲಿ ಕಲಿಸಲ್ಪಡುತ್ತಿದ್ದ ತತ್ತ್ವಗಳ ಧಾರಾಳವಾದ ಮಾಹಿತಿಯ ಮೂಲಗಳಲ್ಲಿ ಒಬ್ಬನಾಗಿ” ಪ್ರಸಿದ್ಧನಾಗಿದ್ದನು. ಧಾರ್ಮಿಕ ಜೀವನದ ಹೆಚ್ಚುಕಡಮೆ ಯಾವುದೇ ಅಂಶವು ಅವನ ಗಮನವನ್ನು ತಪ್ಪಿಹೋಗಲಿಲ್ಲ.

ಟೆರ್ಟಲ್ಯನ್‌ ಪ್ರಾಯಶಃ ಅತಿ ಪ್ರಸಿದ್ಧನಾಗಿದ್ದದ್ದು ಅವನ ವಿರೋಧೋಕ್ತಿ ಹೇಳಿಕೆಗಳಿಗೆ. ಆ ಹೇಳಿಕೆಗಳು ಇಂಥವುಗಳಾಗಿದ್ದವು: “ದೇವರು ಮಹಾನ್‌ ವ್ಯಕ್ತಿಯಾಗಿರುವುದು ಆತನು ಚಿಕ್ಕ ವ್ಯಕ್ತಿಯಾಗಿರುವಾಗಲೇ.” “[ದೇವಪುತ್ರನ] ಮರಣವನ್ನು ಅವಶ್ಯವಾಗಿ ನಂಬಬೇಕಾಗಿದೆ, ಏಕೆಂದರೆ ಅದು ಅಸಹಜ.” “[ಯೇಸು] ಹೂಣಲ್ಪಟ್ಟು ಪುನಃ ಎದ್ದು ಬಂದದ್ದು ನಿಶ್ಚಯ, ಏಕೆಂದರೆ ಅದು ಅಸಾಧ್ಯ.”

ಟೆರ್ಟಲ್ಯನ್‌ನ ಸಂಬಂಧದಲ್ಲಿ ಅವನ ಹೇಳಿಕೆಗಳು ಮಾತ್ರ ವಿರೋಧೋಕ್ತಿಗಳಾಗಿರಲಿಲ್ಲ. ಅವನ ಲೇಖನಗಳು ಸತ್ಯವನ್ನು ಸಮರ್ಥಿಸಿ, ಚರ್ಚ್‌ ಮತ್ತು ಅದರ ತತ್ತ್ವಗಳ ಸಮಗ್ರತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಬರೆಯಲ್ಪಟ್ಟರೂ, ಅವನು ಕಾರ್ಯತಃ ಸತ್ಯ ಬೋಧನೆಗಳನ್ನು ಕೆಡಿಸಿದನು. ಕ್ರೈಸ್ತಪ್ರಪಂಚಕ್ಕೆ ಅವನು ಕೊಟ್ಟ ಮುಖ್ಯ ನೆರವು, ಮುಂದಿನ ಲೇಖಕರು ತ್ರಯೈಕ್ಯ ತತ್ತ್ವವನ್ನು ಯಾವುದರ ಮೇಲೆ ಕಟ್ಟಿದರೊ ಆ ಕಲ್ಪನೆಯಾಗಿತ್ತು. ಇದು ಹೇಗೆ ಸಂಭವಿಸಿತೆಂಬ ವಿಷಯದಲ್ಲಿ ಒಳನೋಟವನ್ನು ಪಡೆಯಲು ನಾವು ಮೊದಲಾಗಿ ಟೆರ್ಟಲ್ಯನ್‌ ಎಂಬ ವ್ಯಕ್ತಿಯನ್ನೇ ತುಸು ಪರೀಕ್ಷಿಸೋಣ.

“ನೀರಸನಾಗಿರುವುದು ಅವನಿಗೆ ಅಸಾಧ್ಯ”

ಟೆರ್ಟಲ್ಯನನ ಜೀವನದ ಕುರಿತು ಅತಿ ಕೊಂಚ ಮಾತ್ರ ತಿಳಿದಿರುತ್ತದೆ. ಹೆಚ್ಚಿನ ವಿದ್ವಾಂಸರು, ಅವನು ಸುಮಾರು ಸಾ.ಶ. 160ರಲ್ಲಿ ಉತ್ತರ ಆಫ್ರಿಕದ ಕಾರ್ತೇಜ್‌ನಲ್ಲಿ ಹುಟ್ಟಿದನೆಂದು ಒಪ್ಪುತ್ತಾರೆ. ಅವನು ಸುಶಿಕ್ಷಿತನೂ ಆಗಿನ ಪ್ರಧಾನ ತತ್ತ್ವಜ್ಞಾನಿಗಳ ಬೋಧನೆಗಳನ್ನು ಚೆನ್ನಾಗಿ ತಿಳಿದವನೂ ಆಗಿದ್ದನು ಎಂಬುದು ವ್ಯಕ್ತ. ಅವನನ್ನು ಕ್ರೈಸ್ತತ್ವಕ್ಕೆ ಆಕರ್ಷಿಸಿದ್ದು, ಕ್ರೈಸ್ತರು ತಮ್ಮ ನಂಬಿಕೆಗಾಗಿ ಸಾಯಲು ಸಿದ್ಧರಾಗಿರುವ ವಿಷಯವಾಗಿತ್ತೆಂದು ವ್ಯಕ್ತವಾಗುತ್ತದೆ. ಕ್ರೈಸ್ತ ಹುತಾತ್ಮತೆಯ ವಿಷಯದಲ್ಲಿ ಅವನು, “ಅದನ್ನು ಯೋಚಿಸುವ ಯಾವನು ಅದಕ್ಕಿರುವ ಪ್ರಚೋದನೆಯ ಬುಡವನ್ನು ತಿಳಿಯಬಯಸನು? ಅದನ್ನು ವಿಚಾರಿಸಿ ತಿಳಿದ ಬಳಿಕ ನಮ್ಮ ತತ್ತ್ವಗಳನ್ನು ಯಾರು ಅವಲಂಬಿಸನು?” ಎಂದು ಕೇಳುತ್ತಾನೆ.

ನಾಮಮಾತ್ರದ ಕ್ರೈಸ್ತತ್ವಕ್ಕೆ ಪರಿವರ್ತಿತನಾದ ಬಳಿಕ ಟೆರ್ಟಲ್ಯನನು ಹಿತಮಿತವಾದ ಮತ್ತು ರಸಿಕೋಕ್ತಿಯ ಹೇಳಿಕೆಗಳ ಕುಶಲನಾದ ಸೃಜನಶೀಲ ಲೇಖಕನಾದನು. ಚರ್ಚ್‌ ಗ್ರಂಥಕಾರರು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ದೇವತಾಶಾಸ್ತ್ರಜ್ಞರ ಮಧ್ಯೆ ವಿರಳವಾಗಿದ್ದ ಸಾಮರ್ಥ್ಯ ಅವನದ್ದಾಗಿತ್ತು. ನೀರಸನಾಗಿರುವುದು ಅವನಿಗೆ ಅಸಾಧ್ಯವಾಗಿತ್ತು.” ಒಬ್ಬ ವಿದ್ವಾಂಸರು ಹೇಳಿದ್ದು: “ಟೆರ್ಟಲ್ಯನನಿಗೆ ವಾಕ್ಯ ವರಕ್ಕಿಂತಲೂ ಹೆಚ್ಚಾಗಿ ಪದ ವರವಿತ್ತು. ಅವನ ವಾದಗಳನ್ನು ತಿಳಿಯುವುದಕ್ಕಿಂತ ರಸಿಕೋಕ್ತಿಗಳನ್ನು ತಿಳಿಯುವುದು ಹೆಚ್ಚು ಸುಲಭವಾಗಿತ್ತು. ಪ್ರಾಯಶಃ ಈ ಕಾರಣದಿಂದಲೇ, ಅವನ ಬರಹಗಳಿಂದ ದೊಡ್ಡ ಭಾಗಗಳನ್ನು ಉಲ್ಲೇಖಿಸುವ ಬದಲು ಚಿಕ್ಕ ಭಾಗಗಳನ್ನೇ ಎಷ್ಟೋ ಬಾರಿ ಉಲ್ಲೇಖಿಸಲಾಗುತ್ತದೆ.”

ಕ್ರೈಸ್ತತ್ವದ ಸಂಬಂಧದಲ್ಲಿ ಅವನ ಸಮರ್ಥನೆ

ಟೆರ್ಟಲ್ಯನನ ಅತಿ ಪ್ರಸಿದ್ಧವಾದ ಪುಸ್ತಕವು ಸಕಾರಣವುಳ್ಳ ಸಮರ್ಥನೆ (ಇಂಗ್ಲಿಷ್‌) ಎಂಬುದಾಗಿತ್ತು. ಇದನ್ನು ನಾಮಮಾತ್ರದ ಕ್ರೈಸ್ತತ್ವವನ್ನು ಅತಿ ಪ್ರಭಾವಶಾಲಿಯಾಗಿ ಸಮರ್ಥಿಸುವ ಸಾಹಿತ್ಯವೆಂದು ಎಣಿಸಲಾಗಿದೆ. ಕ್ರೈಸ್ತರು ಅನೇಕವೇಳೆ ಮೂಢಭಕ್ತಿಯ ಜನರಿಂದ ಆಕ್ರಮಣಕ್ಕೊಳಗಾಗುತ್ತಿದ್ದ ಸಮಯದಲ್ಲಿ ಇದನ್ನು ಬರೆಯಲಾಯಿತು. ಟೆರ್ಟಲ್ಯನನು ಈ ಕ್ರೈಸ್ತರನ್ನು ಸಮರ್ಥಿಸುತ್ತ, ಅವರನ್ನು ವಿಚಾರಹೀನವಾಗಿ ಹಿಂಸಿಸುವ ವಿಷಯದಲ್ಲಿ ಆಕ್ಷೇಪವನ್ನೆತ್ತಿದನು. ಅವನು ಹೇಳಿದ್ದು: “[ವಿರೋಧಿಗಳು] ಜನರಿಗೆ ಬರುವ ಪ್ರತಿಯೊಂದು ವಿಪತ್ತಿಗೂ ಪ್ರತಿಯೊಂದು ದೌರ್ಭಾಗ್ಯಕ್ಕೂ ಕ್ರೈಸ್ತರೇ ಕಾರಣವೆಂದು ನೆನಸುತ್ತಾರೆ. . . . ನೈಲ್‌ ನದಿಯು ತನ್ನ ದಡವನ್ನು ದಾಟುತ್ತ ಹರಿದು ಹೊಲಗಳಿಗೆ ನೀರು ಒದಗಿಸದಿದ್ದರೆ, ಹವಾಮಾನದಲ್ಲಿ ಬದಲಾವಣೆಯಾಗದಿದ್ದರೆ, ಭೂಕಂಪವೊ, ಬರವೊ, ವ್ಯಾಧಿಯೊ ಬರುವುದಾದರೆ, ಕೂಡಲೇ ‘ಕ್ರೈಸ್ತರನ್ನು ಸಿಂಹಗಳಿಗೆ ಎಸೆಯಿರಿ!’ ಎಂಬ ಕೂಗು ಕೇಳಿಬರುತ್ತದೆ.”

ಕ್ರೈಸ್ತರ ಮೇಲೆ ಅನೇಕಾವರ್ತಿ ಸರಕಾರಕ್ಕೆ ದ್ರೋಹ ಬಗೆಯುವವರು ಎಂಬ ದೂರನ್ನು ಹೊರಿಸಲಾಗುತ್ತಿದ್ದರೂ, ಅವರು ನಿಜವಾಗಿಯೂ ದೇಶದ ಭರವಸಾರ್ಹ ಪ್ರಜೆಗಳೆಂದು ತೋರಿಸಲು ಟೆರ್ಟಲ್ಯನ್‌ ಪ್ರಯತ್ನಿಸಿದನು. [ರೋಮ್‌] ಸರಕಾರವನ್ನು ಉರುಳಿಸಲು ಮಾಡಲ್ಪಟ್ಟಿದ್ದ ಅನೇಕ ಪ್ರಯತ್ನಗಳಿಗೆ ಗಮನ ಸೆಳೆದ ಬಳಿಕ, ಹಾಗೆ ಒಳಸಂಚು ಮಾಡಿದವರು ವಿಧರ್ಮಿಗಳಾಗಿದ್ದರು, ಕ್ರೈಸ್ತರಾಗಿರಲಿಲ್ಲವೆಂದು ಅವನು ತನ್ನ ವಿರೋಧಿಗಳಿಗೆ ಜ್ಞಾಪಕ ಹುಟ್ಟಿಸಿದನು. ಮತ್ತು ಕ್ರೈಸ್ತರು ವಧಿಸಲ್ಪಟ್ಟಾಗಲೇ ಸರಕಾರವು ನಿಜವಾದ ನಷ್ಟವನ್ನು ಅನುಭವಿಸಿತ್ತೆಂದು ಅವನು ಎತ್ತಿ ಹೇಳಿದನು.

ಟೆರ್ಟಲ್ಯನನ ಬೇರೆ ಗ್ರಂಥಗಳು ಕ್ರೈಸ್ತ ಜೀವಿತದ ವಿಷಯದಲ್ಲಿದ್ದವು. ಪ್ರದರ್ಶನಗಳು (ಇಂಗ್ಲಿಷ್‌) ಎಂಬ ತನ್ನ ಪ್ರತಿಪಾದನೆಯಲ್ಲಿ, ಕೆಲವು ವಿನೋದಾವಳಿಗಳು, ವಿಧರ್ಮಿ ಆಟಗಳು ಮತ್ತು ನಾಟಕೀಯ ಸಂಭವಗಳಲ್ಲಿ ಕ್ರೈಸ್ತರು ಹಾಜರಿರಬಾರದೆಂದು ಬುದ್ಧಿಹೇಳಿದನು. ಏಕೆಂದರೆ, ಬೈಬಲ್‌ ಮಾಹಿತಿಯ ಕೂಟಗಳಿಗೆ ಹಾಜರಾಗಿ, ಬಳಿಕ ವಿಧರ್ಮಿ ಆಟಗಳಿಗೆ ಹೋಗುವುದರಲ್ಲಿ ಅಸಂಗತತೆಯೇನೂ ಇಲ್ಲ ಎಂದು ಹೊಸದಾಗಿ ಪರಿವರ್ತನೆ ಹೊಂದಿದ್ದವರು ಎಣಿಸಿದ್ದಿರಬೇಕು. ಅವರ ಯೋಚನಾ ಸಾಮರ್ಥ್ಯವನ್ನು ಕೆರಳಿಸುತ್ತ, ಟೆರ್ಟಲ್ಯನ್‌ ಬರೆದುದು: “ದೇವರ ಚರ್ಚಿನಿಂದ ಪಿಶಾಚನದ್ದಕ್ಕೆ ಮತ್ತು ಆತ್ಮಿಕತೆಯಿಂದ ಪಾಶವೀಯತೆಗೆ ಹೋಗುವುದು ಎಷ್ಟು ಅಸಹಜವಾಗಿದೆ.” ಅವನು ಹೇಳಿದ್ದು: “ನೀವು ಕ್ರಿಯೆಯಲ್ಲಿ ಯಾವುದನ್ನು ತಳ್ಳಿಹಾಕುತ್ತೀರೊ ಅದನ್ನು ನೀವು ಮಾತಿನಲ್ಲಿ ಅಂಗೀಕರಿಸಬಾರದು.”

ಸತ್ಯವನ್ನು ಸಮರ್ಥಿಸುತ್ತಿದ್ದಾಗಲೇ ಅದನ್ನು ಕೆಡಿಸಿದ್ದು

ಪ್ರ್ಯಾಕ್ಸಿಯಸನ ವಿರುದ್ಧ (ಇಂಗ್ಲಿಷ್‌) ಎಂಬ ತನ್ನ ಪ್ರಬಂಧದಲ್ಲಿ ಟೆರ್ಟಲ್ಯನ್‌ ಹೀಗೆ ಹೇಳುತ್ತ ಆರಂಭಿಸುತ್ತಾನೆ: “ಪಿಶಾಚನು ಸತ್ಯವನ್ನು ವಿವಿಧ ವಿಧಗಳಲ್ಲಿ ಪ್ರತಿಸ್ಪರ್ಧಿಸಿ ತಡೆದಿರುತ್ತಾನೆ. ಕೆಲವು ಬಾರಿ ಅವನ ಗುರಿಯು ಸತ್ಯವನ್ನು ಸಮರ್ಥಿಸುವ ಮೂಲಕ ಅದನ್ನು ನಾಶಪಡಿಸುವುದಾಗಿದೆ.” ಈ ಪ್ರಬಂಧದಲ್ಲಿ ಹೆಸರಿಸಿರುವ ಪ್ರ್ಯಾಕ್ಸಿಯಸ್‌ ಯಾರೆಂದು ಸರಿಯಾಗಿ ತಿಳಿದಿಲ್ಲವಾದರೂ, ದೇವರ ಮತ್ತು ಕ್ರಿಸ್ತನ ಕುರಿತಾದ ಅವನ ಬೋಧನೆಗಳ ವಿಷಯದಲ್ಲಿ ಟೆರ್ಟಲ್ಯನ್‌ ಸವಾಲೊಡ್ಡಿದನು. ಈ ಪ್ರ್ಯಾಕ್ಸಿಯಸ್‌ ಕ್ರೈಸ್ತತ್ವವನ್ನು ಭ್ರಷ್ಟಗೊಳಿಸಲು ಸೈತಾನನು ಉಪಯೋಗಿಸಿರುವ ಸಾಧನವೆಂದು ಟೆರ್ಟಲ್ಯನ್‌ ವೀಕ್ಷಿಸಿದನು.

ಆ ಸಮಯದ ನಾಮಮಾತ್ರದ ಕ್ರೈಸ್ತರ ಮಧ್ಯೆ ನಡೆಯುತ್ತಿದ್ದ ಗಮನಾರ್ಹವಾದ ವಿವಾದವು, ದೇವರು ಮತ್ತು ಕ್ರಿಸ್ತನ ಮಧ್ಯೆ ಇದ್ದ ಸಂಬಂಧದ ಕುರಿತಾಗಿತ್ತು. ಅವರಲ್ಲಿ ವಿಶೇಷವಾಗಿ ಗ್ರೀಕ್‌ ಹಿನ್ನೆಲೆಯಿಂದ ಬಂದಿದ್ದ ಕೆಲವರಿಗೆ, ಒಬ್ಬನೆ ದೇವರಲ್ಲಿರುವ ವಿಶ್ವಾಸವನ್ನು ರಕ್ಷಕನೂ ವಿಮೋಚಕನೂ ಆಗಿದ್ದ ಯೇಸುವಿನ ಪಾತ್ರಕ್ಕೆ ಹೊಂದಿಸಿಕೊಳ್ಳುವುದು ಕಷ್ಟಕರವಾಯಿತು. ಈ ಸಮಸ್ಯೆಯನ್ನು ಪ್ರ್ಯಾಕ್ಸಿಯಸ್‌, ಯೇಸುವು ತಂದೆಯ ಕೇವಲ ಇನ್ನೊಂದು ರೂಪವಾಗಿದ್ದಾನೆಂದೂ ತಂದೆ ಮತ್ತು ಮಗನ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲವೆಂದೂ ಬೋಧಿಸುತ್ತ ಪರಿಹರಿಸಲು ಪ್ರಯತ್ನಿಸಿದನು. ದೇವರ ತ್ರಿರೂಪ ಎಂಬ ಈ ಬೋಧನೆಯು, ದೇವರು “ಸೃಷ್ಟಿಯಲ್ಲಿ ಮತ್ತು ಧರ್ಮಶಾಸ್ತ್ರವನ್ನು ಕೊಟ್ಟದ್ದರಲ್ಲಿ ತನ್ನನ್ನು ತಂದೆಯೆಂದೂ ಯೇಸು ಕ್ರಿಸ್ತನಲ್ಲಿ ತನ್ನನ್ನು ಮಗನೆಂದೂ, ಕ್ರಿಸ್ತನ ದಿವಾರೋಹಣಾನಂತರ ಪವಿತ್ರ ಆತ್ಮನೆಂದೂ” ತೋರಿಸಿಕೊಂಡನು ಎಂದು ಆಪಾದಿಸುತ್ತದೆ.

ಆದರೆ ಟೆರ್ಟಲ್ಯನ್‌ ತೋರಿಸಿದ್ದೇನೆಂದರೆ, ಶಾಸ್ತ್ರವು ತಂದೆ ಮತ್ತು ಮಗ​—ಇವರ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸುತ್ತದೆ. 1 ಕೊರಿಂಥ 15:​27, 28ನ್ನು ಉಲ್ಲೇಖಿಸಿದ ಬಳಿಕ ಅವನು ತರ್ಕಿಸಿದ್ದು: “ಯಾರು (ಸಕಲವನ್ನೂ) ಅಧೀನಪಡಿಸಿದನೊ ಅವನು ಮತ್ತು ಅವು ಯಾರಿಗೆ ಅಧೀನವಾದವೊ ಅವರಿಬ್ಬರು ಭಿನ್ನ ವ್ಯಕ್ತಿಗಳಾಗಿರಲೇ ಬೇಕು.” ಯೇಸುವಿನ “ತಂದೆಯು ನನಗಿಂತ ದೊಡ್ಡವನು” ಎಂಬ ಸ್ವಂತ ಮಾತುಗಳಿಗೆ ಟೆರ್ಟಲ್ಯನನು ಗಮನ ಸೆಳೆದನು. (ಯೋಹಾನ 14:28) ಹೀಬ್ರು ಶಾಸ್ತ್ರದ ಕೀರ್ತನೆ 8:5ರಂತಹ ಭಾಗಗಳನ್ನು ಉದ್ಧರಿಸುತ್ತ, ಮಗನ “ಕಡಿಮೆ” ಸ್ಥಾನವನ್ನು ಬೈಬಲು ಹೇಗೆ ವರ್ಣಿಸುತ್ತದೆಂದು ಅವನು ತೋರಿಸಿದನು. “ಹೀಗೆ ತಂದೆಯು ಮಗನಿಗಿಂತ ಶ್ರೇಷ್ಠನಾಗಿರುವುದರಿಂದ, ಅವನು ಭಿನ್ನವಾಗಿದ್ದಾನೆ” ಎಂದು ಟೆರ್ಟಲ್ಯನ್‌ ತೀರ್ಮಾನಿಸಿದನು. “ಹುಟ್ಟಿಸುವವನು ಒಬ್ಬನು ಮತ್ತು ಹುಟ್ಟಿಸಲ್ಪಟ್ಟವನು ಇನ್ನೊಬ್ಬನು ಹೇಗೆ ಭಿನ್ನವಾಗಿರುತ್ತಾರೊ ಹಾಗೆಯೆ ಕಳುಹಿಸಿದವನು ಒಬ್ಬನು ಮತ್ತು ಕಳುಹಿಸಲ್ಪಟ್ಟವನು ಇನ್ನೊಬ್ಬನು ಭಿನ್ನರಾಗಿರುತ್ತಾರೆ. ಮತ್ತು ಪುನಃ, ಮಾಡುವಾತನು ಒಬ್ಬನು ಮತ್ತು ಮಾಡಲ್ಪಟ್ಟವನು ಇನ್ನೊಬ್ಬನು ಆಗಿದ್ದಾರೆ.”

ಟೆರ್ಟಲ್ಯನನು ಮಗನನ್ನು ತಂದೆಗೆ ಅಧೀನನಾಗಿದ್ದವನಾಗಿ ವೀಕ್ಷಿಸಿದನು. ಆದರೂ, ದೇವರ ತ್ರಿರೂಪ ಬೋಧನೆಯನ್ನು ವಿರೋಧಿಸುವ ಪ್ರಯತ್ನದಲ್ಲಿ ಅವನು, ‘ಬರೆದಿರುವದನ್ನು ಮೀರಿಹೋದನು.’ (1 ಕೊರಿಂಥ 4:6) ಟೆರ್ಟಲ್ಯನನು ಯೇಸುವಿನ ದೇವತ್ವವನ್ನು ತಪ್ಪಾಗಿ ಇನ್ನೊಂದು ಬೋಧನೆಯ ಮೂಲಕ ರುಜುಪಡಿಸಲು ಪ್ರಯತ್ನಿಸಿದಾಗ, “ಮೂವರು ವ್ಯಕ್ತಿಗಳಿರುವ ಒಂದೇ ಮೂಲದ್ರವ್ಯ” ಎಂಬ ಸೂತ್ರವನ್ನು ಕಲ್ಪಿಸಿದನು. ಈ ಕಲ್ಪನೆಯನ್ನು ಉಪಯೋಗಿಸುತ್ತ ಅವನು, ದೇವರು, ಆತನ ಪುತ್ರನು ಮತ್ತು ಪವಿತ್ರಾತ್ಮ ಒಂದೇ ದಿವ್ಯ ಮೂಲದ್ರವ್ಯದಲ್ಲಿರುವ ಮೂವರು ಪ್ರತ್ಯೇಕ ವ್ಯಕ್ತಿಗಳೆಂದು ತೋರಿಸಲು ಪ್ರಯತ್ನಿಸಿದನು. ಹೀಗೆ, ಟೆರ್ಟಲ್ಯನ್‌ ತ್ರಯೈಕ್ಯ ಪದದ ಲ್ಯಾಟಿನ್‌ ರೂಪವನ್ನು ತಂದೆ, ಮಗ ಮತ್ತು ಪವಿತ್ರಾತ್ಮಕ್ಕೆ ಅನ್ವಯಿಸುವುದರಲ್ಲಿ ಪ್ರಥಮನಾದನು.

ಲೌಕಿಕ ತತ್ತ್ವಜ್ಞಾನದ ಬಗ್ಗೆ ಎಚ್ಚರಿಕೆಯಿಂದಿರ್ರಿ

ಟೆರ್ಟಲ್ಯನನು “ಮೂವರು ವ್ಯಕ್ತಿಗಳಿರುವ ಒಂದೇ ಮೂಲದ್ರವ್ಯ” ಬೋಧನೆಯನ್ನು ರಚಿಸಲು ಶಕ್ತನಾದದ್ದು ಹೇಗೆ? ಇದಕ್ಕೆ ಉತ್ತರವು ಈ ಮನುಷ್ಯನ ಬಗ್ಗೆ ಇರುವ ಇನ್ನೊಂದು ವಿರೋಧೋಕ್ತಿಯಲ್ಲಿ​—ತತ್ತ್ವಜ್ಞಾನದ ಕುರಿತಾದ ಅವನ ವೀಕ್ಷಣದಲ್ಲಿ ಕಂಡುಬರುತ್ತದೆ. ಟೆರ್ಟಲ್ಯನನು ತತ್ತ್ವಜ್ಞಾನವನ್ನು “ಮನುಷ್ಯರ ಮತ್ತು ‘ದೆವ್ವಗಳ’ ‘ಬೋಧನೆಗಳು’” ಎಂದು ಕರೆದನು. ಕ್ರೈಸ್ತ ಸತ್ಯಗಳನ್ನು ಬೆಂಬಲಿಸಲು ತತ್ತ್ವಜ್ಞಾನವನ್ನು ಉಪಯೋಗಿಸುವ ಪದ್ಧತಿಯನ್ನು ಅವನು ಬಹಿರಂಗವಾಗಿ ಟೀಕಿಸಿದನು. “ಸ್ಟಾಯಿಕ, ಪ್ಲೇಟೋನಿಕ ಮತ್ತು ತಾತ್ತ್ವಿಕ ಸಂಯೋಜನೆಯ ಫಲವಾಗಿ ಭ್ರಷ್ಟ ಕ್ರೈಸ್ತತ್ವವನ್ನು ಉಂಟುಮಾಡುವ ಸಕಲ ಪ್ರಯತ್ನಗಳಿಂದ ದೂರವಾಗಿರಿ” ಎಂದು ಅವನು ಹೇಳಿದನು. ಆದರೂ, ತನ್ನ ಸ್ವಂತ ವಿಚಾರಗಳಿಗೆ ಹೊಂದಿಕೆಯಾಗಿರುವಾಗ, ಟೆರ್ಟಲ್ಯನನೇ ಲೌಕಿಕ ತತ್ತ್ವಜ್ಞಾನವನ್ನು ಧಾರಾಳವಾಗಿ ಉಪಯೋಗಿಸಿದನು.​—ಕೊಲೊಸ್ಸೆ 2:8.

ಒಂದು ಪರಾಮರ್ಶನ ಗ್ರಂಥವು ಹೇಳುವುದು: “ತ್ರಯೈಕ್ಯ ಸಂಬಂಧವಾದ ದೇವತಾಶಾಸ್ತ್ರವು, ತನ್ನ ಬೆಳವಣಿಗೆ ಮತ್ತು ಅಭಿವ್ಯಕ್ತಿಗಾಗಿ ಗ್ರೀಕ್‌ ಚಿಂತನಾರೂಪ ಮತ್ತು ವರ್ಗಗಳನ್ನು ಅವಶ್ಯಗೊಳಿಸಿತು.” ಟೆರ್ಟಲ್ಯನನ ದೇವತಾಶಾಸ್ತ್ರ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಕರ್ಮಪ್ರಾಧಾನ್ಯ ವಾದ ಮತ್ತು ತಾತ್ತ್ವಿಕ ವಿಚಾರ ಮತ್ತು ಪದಸರಣಿಗಳ ವಿಚಿತ್ರ ಮಿಶ್ರಣವು ಇದಾಗಿತ್ತು. ಮತ್ತು ಇದು ಟೆರ್ಟಲ್ಯನನು ತ್ರಯೈಕ್ಯ ಬೋಧನೆಯನ್ನು, ಅದಕ್ಕೆ ಇತಿಮಿತಿ ಮತ್ತು ಅಪೂರ್ಣತೆಗಳಿದ್ದರೂ, ತರುವಾಯ ನೈಸೀಯ ಕೌನ್ಸಿಲ್‌ನಲ್ಲಿ ಈ ಬೋಧನೆಯ ಪ್ರಸ್ತಾಪವನ್ನೆತ್ತಲು ಆಧಾರಕಟ್ಟನ್ನು ಒದಗಿಸಲು ಶಕ್ತನಾಗುವಂತೆ ಮಾಡಿತು.” ಹೀಗೆ, ಟೆರ್ಟಲ್ಯನನ, ಒಂದೇ ಮೂಲದ್ರವ್ಯದಲ್ಲಿ ಮೂರು ವ್ಯಕ್ತಿಗಳು ಎಂಬ ಸೂತ್ರವು ಧಾರ್ಮಿಕ ತಪ್ಪನ್ನು ಕ್ರೈಸ್ತಪ್ರಪಂಚದಲ್ಲೆಲ್ಲ ಹರಡಿಸುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸಿತು.

ಇತರರು ಸತ್ಯವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾಗ, ಅವರು ಅದನ್ನು ನಾಶಗೊಳಿಸುತ್ತಿದ್ದಾರೆಂದು ಟೆರ್ಟಲ್ಯನನು ಆಪಾದಿಸಿದನು. ಆದರೆ ಹಾಸ್ಯವ್ಯಂಗ್ಯವಾಗಿ, ದೇವಪ್ರೇರಿತ ಬೈಬಲ್‌ ಸತ್ಯವನ್ನು ಮಾನವ ತತ್ತ್ವಜ್ಞಾನದೊಂದಿಗೆ ಬೆರಕೆಮಾಡುವ ಮೂಲಕ ಸ್ವತಃ ಅವನೇ ಅದೇ ಬೋನಿನೊಳಗೆ ಸಿಕ್ಕಿಬಿದ್ದನು. ಆದಕಾರಣ, “ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ” ಲಕ್ಷ್ಯಕೊಡಬಾರದೆಂಬ ಶಾಸ್ತ್ರೀಯ ಎಚ್ಚರಿಕೆಯನ್ನು ನಾವು ಹೃದಯಕ್ಕೆ ತೆಗೆದುಕೊಳ್ಳೋಣ.​—1 ತಿಮೊಥೆಯ 4:1.

[ಪುಟ 29, 30ರಲ್ಲಿರುವ ಚಿತ್ರಗಳು]

ಟೆರ್ಟಲ್ಯನನು ತತ್ತ್ವಜ್ಞಾನವನ್ನು ಟೀಕಿಸಿದರೂ ತನ್ನ ಸ್ವಂತ ವಿಚಾರಗಳನ್ನು ವರ್ಧಿಸಲು ಅದನ್ನು ಉಪಯೋಗಿಸಿದನು

[ಕೃಪೆ]

ಪುಟಗಳು 29 ಮತ್ತು 30: © Cliché Bibliothèque nationale de France, Paris

[ಪುಟ 31ರಲ್ಲಿರುವ ಚಿತ್ರ]

ಸತ್ಯ ಕ್ರೈಸ್ತರು ಬೈಬಲ್‌ ಸತ್ಯವನ್ನು ಮಾನವ ತತ್ತ್ವಜ್ಞಾನದೊಂದಿಗೆ ಬೆರಕೆಮಾಡುವುದರಿಂದ ದೂರವಿರುತ್ತಾರೆ