ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಯಾರು?

ದೇವರು ಯಾರು?

ದೇವರು ಯಾರು?

“ವಿಶ್ವದ ಪರಮ ಶ್ರೇಷ್ಠ ಮೂಲ ಮತ್ತು ಶಕ್ತಿಯಾಗಿರುವ ಹಾಗೂ ಧಾರ್ಮಿಕ ಭಕ್ತಿಗೆ ಪಾತ್ರನಾಗಿರುವವನಿಗೆ ಸಾಮಾನ್ಯವಾಗಿ ಕೊಡಲ್ಪಟ್ಟಿರುವ ಹೆಸರೇ ದೇವರು” ಎಂದು ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನಾ ಹೇಳುತ್ತದೆ. ಒಂದು ಶಬ್ದಕೋಶವು “ದೇವರು” ಎಂಬ ಪದವನ್ನು, ಸರ್ವೋಚ್ಛ ಇಲ್ಲವೇ ಅತ್ಯುಚ್ಛ ಅಸ್ತಿತ್ವ ಎಂದು ಅರ್ಥನಿರೂಪಿಸುತ್ತದೆ. ಅಂಥ ಭಯಪ್ರೇರಕ ಅಸ್ತಿತ್ವದ ಸ್ವರೂಪ ಏನು?

ದೇವರು ಒಂದು ನಿರಾಕಾರ ಶಕ್ತಿಯಾಗಿದ್ದಾನೋ ಇಲ್ಲವೇ ಒಬ್ಬ ನೈಜ ವ್ಯಕ್ತಿಯಾಗಿದ್ದಾನೊ? ಆತನಿಗೊಂದು ಹೆಸರಿದೆಯೊ? ಅನೇಕರು ನಂಬುವಂತೆ ಆತನೊಬ್ಬ ತ್ರೈಯಕ್ಯನಾಗಿದ್ದಾನೊ? ನಾವು ದೇವರ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು? ಈ ಪ್ರಶ್ನೆಗಳಿಗೆ ಸತ್ಯ ಹಾಗೂ ತೃಪ್ತಿದಾಯಕ ಉತ್ತರಗಳನ್ನು ಬೈಬಲ್‌ ಕೊಡುತ್ತದೆ. “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಹೇಳುವ ಮೂಲಕ, ವಾಸ್ತವದಲ್ಲಿ ಅದು ನಾವು ದೇವರನ್ನು ಹುಡುಕುವಂತೆ ಉತ್ತೇಜಿಸುತ್ತದೆ.​—ಅ. ಕೃತ್ಯಗಳು 17:27.

ಒಂದು ನಿರಾಕಾರ ಶಕ್ತಿಯೊ ಅಥವಾ ಒಬ್ಬ ನೈಜ ವ್ಯಕ್ತಿಯೊ?

ದೇವರಲ್ಲಿ ನಂಬಿಕೆ ಇಟ್ಟಿರುವ ಅನೇಕರು, ಆತನು ಒಬ್ಬ ವ್ಯಕ್ತಿಯೆಂದಲ್ಲ ಬದಲಾಗಿ ಒಂದು ಶಕ್ತಿಯಾಗಿದ್ದಾನೆಂದು ನೆನಸುತ್ತಾರೆ. ಉದಾಹರಣೆಗಾಗಿ, ಕೆಲವೊಂದು ಸಂಸ್ಕೃತಿಗಳಲ್ಲಿ, ಪ್ರಾಕೃತಿಕ ಶಕ್ತಿಗಳನ್ನು ದೇವತೆಗಳೆಂದು ನಂಬಲಾಗುತ್ತದೆ. ಈ ವಿಶ್ವದ ರಚನೆ ಮತ್ತು ಭೂಮಿಯ ಮೇಲಿನ ಜೀವದ ಸ್ವರೂಪದ ಬಗ್ಗೆ ವೈಜ್ಞಾನಿಕ ಸಂಶೋಧನೆಯ ಮೂಲಕ ಶೇಖರಿಸಿರುವ ಪುರಾವೆಯನ್ನು ಪರೀಕ್ಷಿಸಿದ ಕೆಲವರು, ಇವುಗಳೆಲ್ಲವೂ ಅಸ್ತಿತ್ವಕ್ಕೆ ಬರಲು ಒಂದು ಆದಿ ಕಾರಣ ಇರಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಈ ಆದಿ ಕಾರಣಕ್ಕೆ ಒಂದು ವ್ಯಕ್ತಿತ್ವವಿದೆಯೆಂದು ನಂಬಲು ಅವರು ಹಿಂಜರಿಯುತ್ತಾರೆ.

ಆದರೆ, ಸೃಷ್ಟಿಯಲ್ಲಿನ ಜಟಿಲತೆಯು, ಆ ಆದಿಕಾರಣಕ್ಕೆ ತುಂಬ ಬುದ್ಧಿವಂತಿಕೆಯಿದ್ದಿರಬೇಕೆಂಬುದನ್ನು ಸೂಚಿಸುವುದಿಲ್ಲವೊ? ಬುದ್ಧಿವಂತಿಕೆ ಎಂದು ಹೇಳುವಾಗ ಅಲ್ಲಿ ಒಂದು ಮನಸ್ಸು ಇರಲೇಬೇಕು. ಎಲ್ಲ ಸೃಷ್ಟಿಗೆ ಕಾರಣವಾಗಿರುವ ಆ ಮಹಾ ಮನಸ್ಸು, ದೇವರ ದೇಹದಲ್ಲಿದೆ. ಹೌದು, ದೇವರಿಗೆ ಒಂದು ದೇಹವಿದೆ. ನಮ್ಮಂತೆ ಒಂದು ಶಾರೀರಿಕ ದೇಹವಲ್ಲದಿದ್ದರೂ, ಅದು ಒಂದು ಆತ್ಮಿಕ ದೇಹವಾಗಿದೆ. “ಪ್ರಾಕೃತದೇಹವಿರುವದಾದರೆ ಆತ್ಮಿಕದೇಹವೂ ಇರುವದು” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 15:44) ದೇವರ ಸ್ವರೂಪವನ್ನು ವಿವರಿಸುತ್ತಾ, ಬೈಬಲ್‌ ಸ್ಪಷ್ಟವಾಗಿ ಹೀಗನ್ನುತ್ತದೆ: “ದೇವರು ಆತ್ಮಸ್ವರೂಪನು.” (ಯೋಹಾನ 4:24) ಒಂದು ಆತ್ಮಜೀವಿಗೆ, ನಮಗಿಂತಲೂ ಬಹಳಷ್ಟು ಭಿನ್ನವಾಗಿರುವ ಜೀವದ ಒಂದು ರೂಪವಿದೆ ಮತ್ತು ಅದು ಮಾನವ ದೃಷ್ಟಿಗೆ ಅಗೋಚರವಾಗಿದೆ. (ಯೋಹಾನ 1:18) ಇನ್ನಿತರ ಅದೃಶ್ಯ ಜೀವಿಗಳೂ ಇದ್ದಾರೆ. ಅವರು ದೇವದೂತರಾಗಿದ್ದಾರೆ, ಅಂದರೆ “ಸತ್ಯ ದೇವರ ಪುತ್ರ”ರಾಗಿದ್ದಾರೆ​—ಯೋಬ 1:6; 2:​1, NW.

ದೇವರು, ಯಾರೂ ಸೃಷ್ಟಿಮಾಡಿರದಂಥ ವ್ಯಕ್ತಿಯಾಗಿದ್ದು, ಆತ್ಮಿಕ ದೇಹವುಳ್ಳವನಾಗಿರುವುದರಿಂದ, ತರ್ಕಸಂಗತವಾಗಿ ಆತನಿಗೆ ಒಂದು ನಿವಾಸ ಸ್ಥಾನವೂ ಇರಬೇಕು. ಆತ್ಮಿಕ ಜೀವಿಗಳ ಕ್ಷೇತ್ರಕ್ಕೆ ಸೂಚಿಸುತ್ತಾ, ಪರಲೋಕವು ದೇವರ “ನಿವಾಸ” ಆಗಿದೆಯೆಂದು ಬೈಬಲ್‌ ನಮಗೆ ಹೇಳುತ್ತದೆ. (1 ಅರಸುಗಳು 8:43) ಅಲ್ಲದೆ, ಬೈಬಲ್‌ ಲೇಖಕನಾದ ಪೌಲನು ತಿಳಿಸಿದ್ದು: ‘ಕ್ರಿಸ್ತನು ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿ ಪ್ರವೇಶಿಸಿದನು.’​—ಇಬ್ರಿಯ 9:24.

“ಆತ್ಮ” ಎಂಬ ಪದವನ್ನು ಬೈಬಲಿನಲ್ಲಿ ಬೇರೊಂದು ಅರ್ಥದಲ್ಲೂ ಉಪಯೋಗಿಸಲಾಗಿದೆ. ಪ್ರಾರ್ಥನೆಯಲ್ಲಿ ದೇವರನ್ನು ಸಂಬೋಧಿಸುತ್ತಾ ಕೀರ್ತನೆಗಾರನು ಹೇಳಿದ್ದು: “ನೀನು ಜೀವಶ್ವಾಸವನ್ನು [“ನಿನ್ನ ಆತ್ಮವನ್ನು,” NW] ಊದಲು ಅವು ಹೊಸದಾಗಿ ಹುಟ್ಟುತ್ತವೆ. ಭೂಮಿಯನ್ನು ನೂತನಪಡಿಸುತ್ತಿರುತ್ತೀ.” (ಕೀರ್ತನೆ 104:30) ಈ ಆತ್ಮವು ದೇವರಲ್ಲ, ಬದಲಾಗಿ ದೇವರು ತಾನು ಬಯಸುವಂಥದ್ದೆಲ್ಲವನ್ನೂ ಪೂರೈಸಲು ಉಪಯೋಗಿಸುವ ಒಂದು ಶಕ್ತಿಯಾಗಿದೆ. ಅದರ ಮೂಲಕವೇ ದೇವರು ಭೌತಿಕ ಆಕಾಶ, ಭೂಮಿ ಮತ್ತು ಎಲ್ಲ ಜೀವಿಗಳನ್ನು ಸೃಷ್ಟಿಸಿದನು. (ಆದಿಕಾಂಡ 1:2; ಕೀರ್ತನೆ 33:6) ಆತನ ಆತ್ಮವನ್ನು ಪವಿತ್ರಾತ್ಮವೆಂದು ಕರೆಯಲಾಗುತ್ತದೆ. ಬೈಬಲನ್ನು ಬರೆದಂಥ ಪುರುಷರನ್ನು ಪ್ರೇರಿಸಲಿಕ್ಕಾಗಿ ದೇವರು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು. (2 ಪೇತ್ರ 1:​20, 21) ಹೀಗಿರುವುದರಿಂದ, ಪವಿತ್ರಾತ್ಮವು ದೇವರು ತನ್ನ ಉದ್ದೇಶಗಳನ್ನು ಪೂರೈಸಲಿಕ್ಕಾಗಿ ಉಪಯೋಗಿಸುವಂಥ ಅದೃಶ್ಯ ಸಕ್ರಿಯ ಶಕ್ತಿಯಾಗಿದೆ.

ದೇವರಿಗೆ ಅಪೂರ್ವವಾದ ಹೆಸರೊಂದಿದೆ

ಬೈಬಲ್‌ ಲೇಖಕನಾದ ಅಗೂರನು ಕೇಳಿದ್ದು: “ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಟಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು?” (ಜ್ಞಾನೋಕ್ತಿ 30:4) ಕಾರ್ಯತಃ ಅಗೂರನು ಹೀಗೆ ಕೇಳುತ್ತಾ ಇದ್ದನು: ‘ಇದೆಲ್ಲವನ್ನೂ ಮಾಡಿರುವ ಯಾವುದೇ ಮನುಷ್ಯನ ಹೆಸರು ಅಥವಾ ಕುಲದ ಬಗ್ಗೆ ನಿಮಗೆ ಗೊತ್ತಿದೆಯೊ?’ ಪ್ರಾಕೃತಿಕ ಶಕ್ತಿಗಳನ್ನು ನಿಯಂತ್ರಿಸುವ ಶಕ್ತಿ ಕೇವಲ ದೇವರಿಗೊಬ್ಬನಿಗಿದೆ. ದೇವರು ಅಸ್ತಿತ್ವದಲ್ಲಿದ್ದಾನೆಂಬ ರುಜುವಾತನ್ನಂತೂ ಸೃಷ್ಟಿಯು ಕೊಡುತ್ತದೆ, ಆದರೆ ದೇವರ ಹೆಸರೇನೆಂಬುದನ್ನು ಅದು ಪ್ರಕಟಪಡಿಸುವುದಿಲ್ಲ. ಸ್ವತಃ ದೇವರೇ ನಮಗೆ ಅದನ್ನು ತಿಳಿಸದಿದ್ದರೆ ನಮಗೆ ದೇವರ ಹೆಸರೇನೆಂಬುದು ಎಂದೂ ಗೊತ್ತಾಗುತ್ತಿರಲಿಲ್ಲ. ಆತನು ಅದನ್ನು ನಮಗೆ ತಿಳಿಸಿದ್ದಾನೆ. “ನಾನೇ ಯೆಹೋವನು; ಇದೇ ನನ್ನ ನಾಮವು” ಎಂದು ಸೃಷ್ಟಿಕರ್ತನು ಹೇಳುತ್ತಾನೆ.​—ಯೆಶಾಯ 42:8.

ಯೆಹೋವ ಎಂಬ ದೇವರ ಅಪೂರ್ವವಾದ ಹೆಸರು ಕೇವಲ ಹೀಬ್ರು ಶಾಸ್ತ್ರವಚನಗಳಲ್ಲಿ ಸುಮಾರು 7,000 ಸಲ ಕಂಡುಬರುತ್ತದೆ. ಯೇಸು ಕ್ರಿಸ್ತನು ಆ ಹೆಸರನ್ನು ಇತರರಿಗೆ ತಿಳಿಯಪಡಿಸಿ ಅದನ್ನು ಅವರ ಮುಂದೆ ಸ್ತುತಿಸಿದನು. (ಯೋಹಾನ 17:​6, 26) ಆ ಹೆಸರು ಬೈಬಲಿನ ಕೊನೆಯ ಪುಸ್ತಕದಲ್ಲಿ, ‘ಹಲ್ಲೆಲೂಯಾ’ ಎಂಬ ಪದದ ಭಾಗವಾಗಿ ಕಂಡುಬರುತ್ತದೆ. ಆ ಪದದ ಅರ್ಥ ‘ಯಾಹುವನ್ನು ಸ್ತುತಿಸು’ ಎಂದಾಗಿದೆ. ಮತ್ತು ‘ಯಾಹು’ ಎಂಬುದು “ಯೆಹೋವ” ಎಂಬ ಹೆಸರಿನ ಸಂಕ್ಷಿಪ್ತ ರೂಪವಾಗಿದೆ. (ಪ್ರಕಟನೆ 19:​1-6) ಆದರೆ ಅನೇಕ ಆಧುನಿಕ ಬೈಬಲುಗಳು ಆ ಹೆಸರನ್ನು ತೀರ ವಿರಳವಾಗಿ ಉಪಯೋಗಿಸುತ್ತವೆ. ಅದಕ್ಕೆ ಬದಲಾಗಿ ಅವು ಹೆಚ್ಚಾಗಿ “ಕರ್ತನು” ಅಥವಾ “ದೇವರು” ಎಂಬ ಪದಗಳನ್ನು ಉಪಯೋಗಿಸುತ್ತವೆ. ದೇವರ ಹೆಸರನ್ನು ಯಾಹ್ವೆ ಎಂದು ಉಚ್ಚರಿಸಲಾಗುತ್ತಿದ್ದಿರಬಹುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.

ವಿಶ್ವದಲ್ಲೇ ಅತಿ ಮಹಾನ್‌ ವ್ಯಕ್ತಿಯ ಹೆಸರಿನ ಬಗ್ಗೆ ಈ ವ್ಯತ್ಯಸ್ತ ಅಭಿಪ್ರಾಯಗಳು ಏಕೆ? ಅನೇಕ ಶತಮಾನಗಳ ಹಿಂದೆ, ಯೆಹೂದ್ಯರು ಮೂಢನಂಬಿಕೆಯಿಂದಾಗಿ ದೇವರ ಹೆಸರನ್ನು ಉಚ್ಚರಿಸುವುದನ್ನು ನಿಲ್ಲಿಸಿ, ಶಾಸ್ತ್ರವಚನಗಳಲ್ಲಿ ಆ ದೈವಿಕ ಹೆಸರು ಬಂದಾಗಲೆಲ್ಲ “ಸಾರ್ವಭೌಮ ಕರ್ತನು” ಎಂಬ ಹೀಬ್ರು ಪದವನ್ನು ಉಪಯೋಗಿಸಲಾರಂಭಿಸಿದಾಗ, ಈ ಸಮಸ್ಯೆಯು ಆರಂಭವಾಯಿತು. ಬೈಬಲ್‌ನಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಭಾಷೆಯು ಯಾವುದೇ ಸ್ವರಾಕ್ಷರಗಳಿಲ್ಲದೆ ಬರೆಯಲ್ಪಟ್ಟಿರುವುದರಿಂದ, ಮೋಶೆ, ದಾವೀದ ಮತ್ತು ಪ್ರಾಚೀನ ಕಾಲದ ಇನ್ನಿತರರು ದೇವರ ಹೆಸರಿನ ಆ ಅಕ್ಷರಗಳನ್ನು ಹೇಗೆ ಉಚ್ಚರಿಸಿದರೆಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಅಸಾಧ್ಯ. ಆದರೆ “ಜೆಹೋವ” ಎಂಬ ಇಂಗ್ಲಿಷ್‌ ಉಚ್ಚಾರಣೆಯು ಅನೇಕ ಶತಮಾನಗಳಿಂದ ಉಪಯೋಗದಲ್ಲಿದೆ ಮತ್ತು ಅನೇಕ ಭಾಷೆಗಳಲ್ಲಿ ಅದರ ಸಮಾನರೂಪವು ಪ್ರಸಿದ್ಧವಾಗಿಬಿಟ್ಟಿದೆ.​—ವಿಮೋಚನಕಾಂಡ 6:3; ಯೆಶಾಯ 26:4.

ಪ್ರಾಚೀನ ಹೀಬ್ರು ಭಾಷೆಯಲ್ಲಿ ದೇವರ ಹೆಸರನ್ನು ಹೇಗೆ ಉಚ್ಚರಿಸಲಾಗುತ್ತಿತ್ತೆಂಬುದರ ಬಗ್ಗೆ ಅನಿಶ್ಚಯತೆ ಇದ್ದರೂ, ಅದರ ಅರ್ಥವು ಸಂಪೂರ್ಣವಾಗಿ ನಿಗೂಢವಾಗಿಲ್ಲ. ಆತನ ಹೆಸರಿನ ಅರ್ಥ, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಈ ರೀತಿಯಲ್ಲಿ ದೇವರು ತನ್ನನ್ನೇ ಮಹಾ ಉದ್ದೇಶಕನಾಗಿ ಗುರುತಿಸಿಕೊಳ್ಳುತ್ತಾನೆ. ತನ್ನ ಉದ್ದೇಶಗಳೂ ವಾಗ್ದಾನಗಳೂ ಯಾವಾಗಲೂ ನಿಜವಾಗುವಂತೆ ಆತನು ನೋಡಿಕೊಳ್ಳುತ್ತಾನೆ. ಇದನ್ನು ಮಾಡುವ ಶಕ್ತಿಯಿರುವ ಸತ್ಯ ದೇವರೊಬ್ಬನೇ ಆ ಹೆಸರನ್ನು ಯೋಗ್ಯವಾಗಿ ಇಟ್ಟುಕೊಳ್ಳಬಹುದು.​—ಯೆಶಾಯ 55:11.

ಯೆಹೋವ ಎಂಬ ಆ ಹೆಸರು, ಸರ್ವಶಕ್ತನಾದ ದೇವರನ್ನು ನಿಸ್ಸಂದೇಹವಾಗಿಯೂ ಬೇರೆಲ್ಲ ದೇವರುಗಳಿಂದ ಪ್ರತ್ಯೇಕಿಸುತ್ತದೆ. ಆದುದರಿಂದಲೇ ಆ ಹೆಸರು ಇಷ್ಟೊಂದು ಸಲ ಬೈಬಲಿನಲ್ಲಿ ಕಂಡುಬರುತ್ತದೆ. ಅನೇಕ ತರ್ಜುಮೆಗಳು ಆ ದೈವಿಕ ಹೆಸರನ್ನು ಉಪಯೋಗಿಸದಿದ್ದರೂ, ಕೀರ್ತನೆ 83:18 ಸ್ಪಷ್ಟವಾಗಿ ಹೀಗನ್ನುತ್ತದೆ: ‘ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.’ ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೀಗೆ ಕಲಿಸಿದನು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು​—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:​9, 10) ಹಾಗಾದರೆ, ನಾವು ಪ್ರಾರ್ಥನೆ ಮಾಡುವಾಗ, ದೇವರ ಬಗ್ಗೆ ಮಾತಾಡುವಾಗ ಮತ್ತು ಇತರರ ಮುಂದೆ ಆತನನ್ನು ಸ್ತುತಿಸುವಾಗ ಆತನ ಹೆಸರನ್ನು ಉಪಯೋಗಿಸಲೇಬೇಕು.

ಯೇಸು ದೇವರೋ?

ತನ್ನ ಪುತ್ರನು ಯಾರಾಗಿದ್ದಾನೆ ಎಂಬುದರ ಬಗ್ಗೆ ಯೆಹೋವ ದೇವರು ಯಾವುದೇ ಸಂದೇಹಕ್ಕೆ ಆಸ್ಪದವನ್ನು ಕೊಟ್ಟಿಲ್ಲ. ಯೇಸುವಿನ ದೀಕ್ಷಾಸ್ನಾನದ ನಂತರ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು” ಎಂದು ಮತ್ತಾಯನ ಸುವಾರ್ತಾ ವೃತ್ತಾಂತವು ತಿಳಿಸುತ್ತದೆ. (ಮತ್ತಾಯ 3:16, 17) ಯೇಸು ಕ್ರಿಸ್ತನು ದೇವರ ಮಗನಾಗಿದ್ದಾನೆ.

ಆದರೆ ಯೇಸುವೇ ದೇವರು ಎಂದು ಕೆಲವು ಧಾರ್ಮಿಕ ಜನರು ಹೇಳುತ್ತಾರೆ. ದೇವರು ತ್ರಯೈಕ್ಯನಾಗಿದ್ದಾನೆಂದು ಇನ್ನಿತರರು ಹೇಳುತ್ತಾರೆ. ಈ ಬೋಧನೆಗನುಸಾರ, “ತಂದೆಯು ದೇವರು, ಮಗನು ದೇವರು, ಮತ್ತು ಪವಿತ್ರಾತ್ಮವು ದೇವರು. ಆದರೆ ಇವರು ಮೂರು ದೇವರಲ್ಲ ಬದಲಾಗಿ ಒಂದೇ ದೇವರಾಗಿದ್ದಾರೆ.” ಈ ಮೂವರೂ, “ಪರಸ್ಪರ ಅನಂತತೆ ಮತ್ತು ಪರಸ್ಪರ ಸಮಾನತೆ” ಉಳ್ಳವರೆಂದು ನಂಬಲಾಗುತ್ತದೆ. (ದ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ) ಈ ಅಭಿಪ್ರಾಯಗಳು ಸರಿಯೊ?

ಯೆಹೋವನ ಕುರಿತಾಗಿ ಪ್ರೇರಿತ ಶಾಸ್ತ್ರವಚನಗಳು ಹೀಗನ್ನುತ್ತವೆ: “ಯುಗಯುಗಾಂತರಗಳಲ್ಲಿಯೂ ನೀನೇ ದೇವರು.” (ಕೀರ್ತನೆ 90:2) ಆತನು “ಸರ್ವಯುಗಗಳ ಅರಸನೂ” ಆದಿ ಅಂತ್ಯವಿಲ್ಲದವನೂ ಆಗಿದ್ದಾನೆ. (1 ತಿಮೊಥೆಯ 1:17) ಯೇಸುವಾದರೊ, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ, “ದೇವರ ಸೃಷ್ಟಿಗೆ ಮೂಲನೂ” ಆಗಿದ್ದಾನೆ. (ಕೊಲೊಸ್ಸೆ 1:​13-15; ಪ್ರಕಟನೆ 3:14) ದೇವರನ್ನು ತನ್ನ ತಂದೆಯೆಂದು ಕರೆಯುತ್ತಾ ಯೇಸು ಹೇಳಿದ್ದು: “ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ತನಗೂ ದೇವದೂತರಿಗೂ ಗೊತ್ತಿರದ ಆದರೆ ಕೇವಲ ದೇವರೊಬ್ಬನಿಗೆ ಮಾತ್ರ ಗೊತ್ತಿರುವ ಕೆಲವು ವಿಷಯಗಳಿವೆ ಎಂಬುದನ್ನೂ ಯೇಸು ವಿವರಿಸಿದನು. (ಮಾರ್ಕ 13:32) ಅಷ್ಟುಮಾತ್ರವಲ್ಲದೆ, ಯೇಸು ತನ್ನ ತಂದೆಗೆ ಹೀಗನ್ನುತ್ತಾ ಪ್ರಾರ್ಥಿಸಿದನು: “ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.” (ಲೂಕ 22:42) ತನಗಿಂತಲೂ ಶ್ರೇಷ್ಠ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗಲ್ಲದೆ ಅವನು ಇನ್ನಾರಿಗೆ ಪ್ರಾರ್ಥಿಸುತ್ತಿದ್ದನು? ಮತ್ತು ಯೇಸುವನ್ನು ಮರಣದಿಂದ ಎಬ್ಬಿಸಿದವನು ದೇವರು, ಸ್ವತಃ ಯೇಸುವಲ್ಲ.​—ಅ. ಕೃತ್ಯಗಳು 2:32.

ಹಾಗಾದರೆ, ಯೆಹೋವನು ಸರ್ವಶಕ್ತ ದೇವರಾಗಿದ್ದಾನೆ ಮತ್ತು ಯೇಸು ಆತನ ಪುತ್ರನಾಗಿದ್ದಾನೆಂದು ಬೈಬಲ್‌ ತೋರಿಸುತ್ತದೆ. ಯೇಸು ಭೂಮಿಗೆ ಬರುವ ಮುಂಚೆಯಾಗಲಿ, ಅವನ ಭೂಜೀವಿತದ ಸಮಯದಲ್ಲಾಗಲಿ ಅವರಿಬ್ಬರೂ ಸಮಾನರಾಗಿರಲಿಲ್ಲ. ಮತ್ತು ಯೇಸು ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋದ ನಂತರವೂ ತನ್ನ ತಂದೆಗೆ ಸಮಾನನಾಗಲಿಲ್ಲ. (1 ಕೊರಿಂಥ 11:3; 15:28) ನಾವು ನೋಡಿರುವಂತೆ, ತ್ರಯೈಕ್ಯದ ಮೂರನೆ ವ್ಯಕ್ತಿಯೆಂದು ಕರೆಯಲಾಗುವ ಪವಿತ್ರಾತ್ಮವು ಒಂದು ವ್ಯಕ್ತಿಯಲ್ಲ. ಅದಕ್ಕೆ ಬದಲಾಗಿ ಅದು, ದೇವರು ತಾನು ಬಯಸಿದ್ದೆಲ್ಲವನ್ನೂ ಸಾಧಿಸಲು ಉಪಯೋಗಿಸುವ ಒಂದು ಶಕ್ತಿಯಾಗಿದೆ. ಹಾಗಾದರೆ ತ್ರಯೈಕ್ಯವು ಒಂದು ಬೈಬಲ್‌ ಬೋಧನೆಯಲ್ಲ. * “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು” ಎಂದು ಬೈಬಲ್‌ ಹೇಳುತ್ತದೆ.​—ಧರ್ಮೋಪದೇಶಕಾಂಡ 6:4.

ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿರಿ

ದೇವರನ್ನು ಪ್ರೀತಿಸಲಿಕ್ಕಾಗಿ ಮತ್ತು ಆತನಿಗೆ ಸಲ್ಲತಕ್ಕ ಅನನ್ಯ ಭಕ್ತಿಯನ್ನು ಸಲ್ಲಿಸಲಿಕ್ಕಾಗಿ, ಆತನು ನಿಜವಾಗಿ ಹೇಗಿದ್ದಾನೊ ಅದನ್ನೇ ನಾವು ತಿಳಿದುಕೊಳ್ಳಬೇಕು. ನಾವು ದೇವರನ್ನು ಹೆಚ್ಚು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುವುದು ಹೇಗೆ? ಬೈಬಲ್‌ ಹೀಗನ್ನುತ್ತದೆ: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ದೇವರ ಬಗ್ಗೆ ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವ ಒಂದು ಮಾರ್ಗವು, ಆತನು ಏನನ್ನು ಸೃಷ್ಟಿಸಿದ್ದಾನೊ ಅದನ್ನು ಗಮನಿಸಿ, ಅದರ ಬಗ್ಗೆ ಕೃತಜ್ಞತಾಭಾವದೊಂದಿಗೆ ಆಲೋಚಿಸುವುದರ ಮೂಲಕವೇ.

ಆದರೆ, ನಮಗೆ ದೇವರ ಬಗ್ಗೆ ಏನೇನು ತಿಳಿಯಬೇಕೊ ಅದೆಲ್ಲವನ್ನೂ ಸೃಷ್ಟಿಯು ತಿಳಿಸುವುದಿಲ್ಲ. ದೃಷ್ಟಾಂತಕ್ಕಾಗಿ, ಆತನು ಒಂದು ಅಪೂರ್ವ ಹೆಸರುಳ್ಳ ಒಬ್ಬ ನೈಜ ಆತ್ಮ ವ್ಯಕ್ತಿಯಾಗಿದ್ದಾನೆಂಬುದನ್ನು ಅರ್ಥಮಾಡಿಕೊಳ್ಳಲು ನಾವು ಬೈಬಲನ್ನು ಪರೀಕ್ಷಿಸಬೇಕಾಗುತ್ತದೆ. ವಾಸ್ತವದಲ್ಲಿ ಬೈಬಲಿನ ಅಧ್ಯಯನ ಮಾಡುವುದು, ದೇವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವ ಅತ್ಯುತ್ತಮ ವಿಧವಾಗಿದೆ. ತಾನು ಯಾವ ರೀತಿಯ ದೇವರಾಗಿದ್ದೇನೆ ಎಂಬುದರ ಕುರಿತು ಇನ್ನೂ ಹೆಚ್ಚನ್ನು ಯೆಹೋವನು ನಮಗೆ ಶಾಸ್ತ್ರವಚನಗಳಲ್ಲಿ ತಿಳಿಸುತ್ತಾನೆ. ಆತನು ತನ್ನ ಉದ್ದೇಶಗಳನ್ನು ನಮಗೆ ಪ್ರಕಟಿಸುತ್ತಾನೆ ಮತ್ತು ತನ್ನ ಮಾರ್ಗಗಳ ಬಗ್ಗೆ ನಮ್ಮನ್ನು ಶಿಕ್ಷಿಸುತ್ತಾನೆ. (ಆಮೋಸ 3:7; 2 ತಿಮೊಥೆಯ 3:​16, 17) ನಾವು ಆತನ ಪ್ರೀತಿಪರ ಏರ್ಪಾಡುಗಳಿಂದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವಂತೆ, ನಾವು ‘ಸತ್ಯದ ಜ್ಞಾನಕ್ಕೆ ಸೇರುವಂತೆ’ ದೇವರು ಬಯಸುತ್ತಿರುವುದಕ್ಕಾಗಿ ನಾವೆಷ್ಟು ಸಂತೋಷಿತರಾಗಿರಬಲ್ಲೆವು! (1 ತಿಮೊಥೆಯ 2:4) ಹೀಗಿರುವುದರಿಂದ, ನಾವು ಯೆಹೋವನ ಬಗ್ಗೆ ಕಲಿಯಸಾಧ್ಯವಿರುವುದೆಲ್ಲವನ್ನು ಕಲಿಯಲಿಕ್ಕಾಗಿ ಎಲ್ಲ ಪ್ರಯತ್ನವನ್ನು ಮಾಡೋಣ.

[ಪಾದಟಿಪ್ಪಣಿ]

^ ಪ್ಯಾರ. 19 ಈ ವಿಷಯದ ಕುರಿತಾದ ವಿವರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರಗಳು]

ಭೂಮಿಯನ್ನು ಸೃಷ್ಟಿಸಲಿಕ್ಕಾಗಿ ಮತ್ತು ಬೈಬಲನ್ನು ಬರೆಯುವಂತೆ ಮನುಷ್ಯರನ್ನು ಪ್ರೇರಿಸಲಿಕ್ಕಾಗಿ ದೇವರು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು

[ಪುಟ 5ರಲ್ಲಿರುವ ಚಿತ್ರ]

ಆಕಾಶದಿಂದ ಬಂದ ಒಂದು ವಾಣಿಯು ಹೀಗಂದಿತು: ‘ಈತನು ನನ್ನ ಮಗನು’

[ಪುಟ 7ರಲ್ಲಿರುವ ಚಿತ್ರ]

ಯೇಸು, ದೇವರಿಗೆ ಅಂದರೆ ತನಗಿಂತಲೂ ಶ್ರೇಷ್ಠ ಸ್ಥಾನದಲ್ಲಿರುವ ವ್ಯಕ್ತಿಗೆ ಪ್ರಾರ್ಥಿಸಿದನು

[ಪುಟ 7ರಲ್ಲಿರುವ ಚಿತ್ರ]

ದೇವರ ಹೆಸರನ್ನು ಯೇಸು ಇತರರಿಗೆ ತಿಳಿಯಪಡಿಸಿದನು

[ಪುಟ 7ರಲ್ಲಿರುವ ಚಿತ್ರಗಳು]

ನಾವು ದೇವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಬಹುದು