ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಯಾರೆಂಬುದನ್ನು ನಾವು ತಿಳಿದುಕೊಳ್ಳಬೇಕು

ದೇವರು ಯಾರೆಂಬುದನ್ನು ನಾವು ತಿಳಿದುಕೊಳ್ಳಬೇಕು

ದೇವರು ಯಾರೆಂಬುದನ್ನು ನಾವು ತಿಳಿದುಕೊಳ್ಳಬೇಕು

ಮೋಡರಹಿತ ರಾತ್ರಿಯಂದು ನಕ್ಷತ್ರಮಯ ಆಕಾಶವನ್ನು ನೋಡಿ ನೀವು ರೋಮಾಂಚಿತರಾಗುವುದಿಲ್ಲವೊ? ಬಣ್ಣಬಣ್ಣದ ಹೂವುಗಳ ಸುವಾಸನೆಯು ಹರ್ಷದಾಯಕವಲ್ಲವೊ? ಪಕ್ಷಿಗಳ ಗಾನಗಳಿಗೆ ಮತ್ತು ತಿಳಿ ಗಾಳಿಯಲ್ಲಿ ಎಲೆಗಳ ಮರ್ಮರ ಶಬ್ದಕ್ಕೆ ಕಿವಿಗೊಡುವುದರಲ್ಲಿ ನೀವು ಆನಂದಿಸುವುದಿಲ್ಲವೊ? ಮತ್ತು ಸಮುದ್ರ ನಿವಾಸಿಗಳಾಗಿರುವ ಶಕ್ತಿಶಾಲಿಯಾದ ತಿಮಿಂಗಿಲಗಳು ಹಾಗೂ ಬೇರೆ ಜೀವಿಗಳು ನಮ್ಮನ್ನೆಷ್ಟು ಮಂತ್ರಮುಗ್ಧಗೊಳಿಸುತ್ತವೆ! ಮತ್ತು ಮನಸ್ಸಾಕ್ಷಿಯ ಕಾರ್ಯಕ್ಷಮತೆ ಹಾಗೂ ವಿಸ್ಮಯಕರವಾಗಿ ಜಟಿಲವಾಗಿರುವ ಮಿದುಳುಳ್ಳ ಮಾನವರೂ ಇದ್ದಾರೆ. ನಮ್ಮ ಸುತ್ತಲೂ ಇರುವ ಈ ಎಲ್ಲ ಅದ್ಭುತ ವಿಷಯಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದಕ್ಕೆ ಯಾವ ವಿವರಣೆಯನ್ನು ಕೊಡುವಿರಿ?

ಇದೆಲ್ಲವೂ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದವೆಂದು ಕೆಲವರು ನಂಬುತ್ತಾರೆ. ಹೀಗಿರುವಲ್ಲಿ, ಮನುಷ್ಯರು ದೇವರಲ್ಲಿ ನಂಬಿಕೆಯಿಡುವುದೇಕೆ? ವಿಭಿನ್ನ ರಾಸಾಯನಿಕಗಳ ಒಂದು ಆಕಸ್ಮಿಕ ಸಂಯೋಜನೆಯು, ಆತ್ಮಿಕ ಅಗತ್ಯವಿರುವ ಜೀವಿಗಳನ್ನು ಏಕೆ ಉತ್ಪಾದಿಸಬೇಕು?

“ಧರ್ಮವು ಮಾನವ ಸ್ವಭಾವದಲ್ಲಿ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಂದು ಮಟ್ಟದ ಆರ್ಥಿಕ ಸ್ಥಾನಮಾನ ಹಾಗೂ ಶೈಕ್ಷಣಿಕ ಹಿನ್ನೆಲೆಯಲ್ಲಿ ಕಂಡುಬರುತ್ತದೆ.” ಈ ವಾಕ್ಯವು, ಮನುಷ್ಯನ ಆತ್ಮಿಕ ಸ್ವರೂಪ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಪ್ರೊಫೆಸರರಾದ ಆ್ಯಲಿಸ್ಟರ್‌ ಹಾರ್ಡಿ ಎಂಬವರು ಮಾಡಿದ ಸಂಶೋಧನೆಯನ್ನು ಸಾರಾಂಶಿಸಿತು. ಮಿದುಳಿನ ಮೇಲೆ ನಡೆಸಲ್ಪಟ್ಟಿರುವ ಇತ್ತೀಚಿನ ಪ್ರಯೋಗಗಳು, ಮನುಷ್ಯರಲ್ಲಿ ಧರ್ಮವನ್ನು ಆಚರಿಸುವ ಒಂದು ಸಾಮರ್ಥ್ಯವು “ವಂಶವಾಹಿಯಲ್ಲೇ ಪ್ರೊಗ್ರ್ಯಾಮ್‌ ಮಾಡಲ್ಪಟ್ಟಿ”ರಬಹುದೆಂಬ ತೀರ್ಮಾನಕ್ಕೆ ಬರುವಂತೆ ಕೆಲವು ನರವಿಜ್ಞಾನಿಗಳನ್ನು ನಡೆಸಿದೆ. ದೇವರು ಏಕಮಾತ್ರ ವಾಸ್ತವಿಕತೆಯೊ? (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಪುಸ್ತಕವು ಹೀಗನ್ನುತ್ತದೆ: “ಒಂದು ಉದ್ದೇಶವನ್ನು ಕಂಡುಹಿಡಿಯಲು ಧರ್ಮದ ಮುಖಾಂತರ ಮಾಡಲಾಗುವ ಅನ್ವೇಷಣೆಯು . . . ಮಾನವಕುಲವು ತಲೆದೋರಿದಂದಿನಿಂದ ಪ್ರತಿಯೊಂದು ಸಂಸ್ಕೃತಿ ಮತ್ತು ಪ್ರತಿಯೊಂದು ಯುಗದಲ್ಲಿನ ಸಾಮಾನ್ಯ ಅನುಭವವಾಗಿದೆ.”

ಸುಮಾರು 2,000 ವರ್ಷಗಳ ಹಿಂದೆ ಒಬ್ಬ ಸುಶಿಕ್ಷಿತ ಮನುಷ್ಯನ ತೀರ್ಮಾನವೇನಾಗಿತ್ತೆಂಬುದನ್ನು ಪರಿಗಣಿಸಿರಿ. ಅವನು ಬರೆದುದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ವಾಸ್ತವದಲ್ಲಿ, ಬೈಬಲಿನ ಪ್ರಥಮ ವಚನವೇ ಹೀಗನ್ನುತ್ತದೆ: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”​—ಆದಿಕಾಂಡ 1:1.

ಆದರೆ ದೇವರು ಯಾರು? ಮಾನವಕುಲವು ಈ ಪ್ರಶ್ನೆಗೆ ಪರಸ್ಪರ ವಿರೋಧವಾಗಿರುವ ಉತ್ತರಗಳನ್ನು ನೀಡುತ್ತದೆ. ದೇವರು ಯಾರು ಎಂದು ಯೋಶೀ ಎಂಬ ಒಬ್ಬ ಜಪಾನಿ ಹದಿವಯಸ್ಕನಿಗೆ ಕೇಳಲ್ಪಟ್ಟಾಗ ಅವನು ಉತ್ತರಿಸಿದ್ದು: “ನಾನು ಖಂಡಿತವಾಗಿ ಹೇಳಲಾರೆ. ನಾನೊಬ್ಬ ಬೌದ್ಧ ವ್ಯಕ್ತಿಯಾಗಿದ್ದೇನೆ, ಮತ್ತು ದೇವರು ಯಾರೆಂಬುದನ್ನು ತಿಳಿಯುವುದು ನನಗೆ ಮಹತ್ವದ ಸಂಗತಿಯಾಗಿಲ್ಲ.” ಆದರೆ ಅನೇಕರು ಬುದ್ಧನನ್ನೇ ದೇವರಾಗಿ ಮಾಡಿಕೊಂಡಿರುವುದು ನಿಜ ಎಂದು ಯೋಶೀ ಒಪ್ಪಿಕೊಂಡನು. ತನ್ನ 60ರ ಪ್ರಾಯದಲ್ಲಿರುವ ನಿಕ್‌ ಎಂಬ ಒಬ್ಬ ವ್ಯಾಪಾರಿಯು ದೇವರಲ್ಲಿ ನಂಬಿಕೆಯಿಡುತ್ತಾನೆ ಮತ್ತು ಆತನು ಸರ್ವಶಕ್ತ ಶಕ್ತಿಯಾಗಿದ್ದಾನೆಂದು ನೆನಸುತ್ತಾನೆ. ದೇವರ ಬಗ್ಗೆ ಅವನಿಗೆ ಏನು ಗೊತ್ತಿದೆಯೊ ಅದನ್ನು ವಿವರಿಸಿ ಹೇಳುವಂತೆ ಕೇಳಲ್ಪಟ್ಟಾಗ, ನಿಕ್‌ ತುಂಬ ಹೊತ್ತು ಸುಮ್ಮನಿದ್ದ ಬಳಿಕ ಹೇಳಿದ್ದು: “ಗೆಳೆಯನೇ, ಅದು ತುಂಬ ಕಠಿನ ಪ್ರಶ್ನೆ. ನಾನು ಇಷ್ಟೇ ಹೇಳಬಲ್ಲೆ, ಏನಂದರೆ ದೇವರಂತೂ ಇದ್ದಾನೆ. ನಿಶ್ಚಯವಾಗಿಯೂ ಅವನು ಅಸ್ತಿತ್ವದಲ್ಲಿದ್ದಾನೆ.”

ಕೆಲವರು, “ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸು”ತ್ತಾರೆ. (ರೋಮಾಪುರ 1:25) ಕೋಟಿಗಟ್ಟಲೆ ಮಂದಿ ತಮ್ಮ ಮೃತ ಪೂರ್ವಜರನ್ನು ಆರಾಧಿಸುತ್ತಾರೆ, ದೇವರು ತುಂಬ ದೂರದಲ್ಲಿದ್ದು, ನಾವಾತನನ್ನು ಸಂಪರ್ಕಿಸಲಾರೆವೆಂಬುದು ಅವರೆಣಿಕೆ. ಹಿಂದೂ ಧರ್ಮದಲ್ಲಿ ಅನೇಕಾನೇಕ ದೇವದೇವತೆಗಳಿವೆ. ಯೇಸು ಕ್ರಿಸ್ತನ ಅಪೊಸ್ತಲರ ದಿನಗಳಲ್ಲಿ ದ್ಯೌಸ್‌ ಮತ್ತು ಹೆರ್ಮೆಯಂಥ ವಿಭಿನ್ನ ದೇವತೆಗಳನ್ನು ಆರಾಧಿಸಲಾಗುತ್ತಿತ್ತು. (ಅ. ಕೃತ್ಯಗಳು 14:​11, 12) ದೇವರು, ತಂದೆಯಾದ ದೇವರು, ಪುತ್ರನಾದ ದೇವರು, ಮತ್ತು ಪವಿತ್ರಾತ್ಮನಾದ ದೇವರಿಂದ ರಚಿತವಾಗಿರುವ ಒಬ್ಬ ತ್ರಯೈಕ್ಯನಾಗಿದ್ದಾನೆಂದು ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳು ಕಲಿಸುತ್ತವೆ.

ನಿಜವಾಗಿಯೂ ‘ಅನೇಕ ದೇವರುಗಳೂ ಕರ್ತರೂ’ ಇದ್ದಾರೆಂದು ಬೈಬಲ್‌ ತಿಳಿಸುತ್ತದೆ. ಆದರೆ ಅದು ಕೂಡಿಸಿ ಹೇಳುವುದು: “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು.” (1 ಕೊರಿಂಥ 8:​5, 6) ಹೌದು, ಕೇವಲ ಒಬ್ಬ ಸತ್ಯ ದೇವರಿದ್ದಾನೆ. ಆದರೆ ಆತನು ಯಾರು? ಆತನು ಹೇಗಿದ್ದಾನೆ? ಈ ಪ್ರಶ್ನೆಗಳಿಗೆ ಉತ್ತರಗಳು ನಮಗೆ ತಿಳಿದಿರುವುದು ಪ್ರಾಮುಖ್ಯವಾಗಿದೆ. ಆತನಿಗೆ ಪ್ರಾರ್ಥನೆಯಲ್ಲಿ ಸ್ವತಃ ಯೇಸು ಹೀಗಂದನು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ನಮ್ಮ ನಿತ್ಯ ಕ್ಷೇಮವು ದೇವರ ಕುರಿತಾದ ಸತ್ಯವನ್ನು ತಿಳಿದುಕೊಳ್ಳುವುದರ ಮೇಲೆ ಆಧಾರಿತವಾಗಿದೆಯೆಂದು ನಂಬಲು ಕಾರಣವಿದೆ.

[ಪುಟ 3ರಲ್ಲಿರುವ ಚಿತ್ರ]

ಇವುಗಳೆಲ್ಲವೂ ಅಸ್ತಿತ್ವಕ್ಕೆ ಬಂದಿರುವುದು ಹೇಗೆ?

[ಕೃಪೆ]

ತಿಮಿಂಗಿಲ: Courtesy of Tourism Queensland

[ಪುಟ 2ರಲ್ಲಿರುವ ಚಿತ್ರ ಕೃಪೆ]

COVER: Index Stock Photography © 2002