ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

“ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು” ಎಂದು ಬೈಬಲ್‌ ಹೇಳುತ್ತದೆ. (ಯೋಬ 14:1) ಕಷ್ಟಾನುಭವ ಮತ್ತು ನೋವುಗಳು, ಮಾನವರಿಗಾಗಿ ಕಟ್ಟಿಟ್ಟ ಬುತ್ತಿಯಾಗಿರುವಂತೆ ತೋರುತ್ತವೆ. ದೈನಂದಿನ ಜೀವನವು ಸಹ ಚಿಂತೆ ಹಾಗೂ ಸಂಕ್ಷೋಭೆಗಳಿಂದ ತುಂಬಿರುವಂಥದ್ದಾಗಿರಬಲ್ಲದು. ಹಾಗಾದರೆ, ಪರೀಕ್ಷಾತ್ಮಕ ಪರಿಸ್ಥಿತಿಗಳಿಂದ ಯಶಸ್ವಿಯಾಗಿ ಹೊರಬರುವಂತೆ ಮಾರ್ಗದರ್ಶಿಸಿ, ದೇವರ ಮುಂದೆ ನೀತಿಭರಿತ ನಿಲುವನ್ನು ಕಾಪಾಡಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡುವುದು?

ಯೋಬ ಎಂಬ ಹೆಸರಿನ ಒಬ್ಬ ಧನಿಕ ವ್ಯಕ್ತಿಯ ಉದಾಹರಣೆಯನ್ನು ತೆಗೆದುಕೊಳ್ಳಿ. ಈಗ ಅರೇಬಿಯ ಎಂದು ಕರೆಯಲ್ಪಡುವಂಥ ಸ್ಥಳದಲ್ಲಿ ಅವನು ಸುಮಾರು 3,500 ವರ್ಷಗಳ ಹಿಂದೆ ಜೀವಿಸಿದ್ದನು. ದೇವಭಯವಿದ್ದ ಈ ಪುರುಷನ ಮೇಲೆ ಸೈತಾನನು ಎಂಥ ದುರಂತಗಳ ಸುರಿಮಳೆಗೈದನು! ಅವನು ತನ್ನ ಎಲ್ಲ ಜಾನುವಾರುಗಳನ್ನು ಕಳೆದುಕೊಂಡನು, ಮತ್ತು ಮರಣದಲ್ಲಿ ತನ್ನ ಮುದ್ದಿನ ಮಕ್ಕಳನ್ನು ಕಳೆದುಕೊಂಡನು. ಅನಂತರ ಸ್ವಲ್ಪದರಲ್ಲೇ, ಸೈತಾನನು ಯೋಬನ ಶರೀರದ ಮೇಲೆ ಅಡಿಯಿಂದ ಮುಡಿಯ ವರೆಗೂ ಹುಣ್ಣುಗಳನ್ನು ಬರಮಾಡಿದನು. (ಯೋಬ, ಅಧ್ಯಾಯಗಳು 1, 2) ಯೋಬನಿಗೆ ಈ ಎಲ್ಲ ಕಷ್ಟಗಳೇಕೆ ತನ್ನ ಮೇಲೆ ಬರುತ್ತಿವೆಯೆಂಬುದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ ‘ಪಾಪದ ಮಾತೊಂದೂ ಯೋಬನ ತುಟಿಗಳಿಂದ ಹೊರಡಲಿಲ್ಲ.’ (ಯೋಬ 2:10) “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು” ಎಂದವನು ಹೇಳಿದನು. (ಯೋಬ 27:5) ಹೌದು, ಪರೀಕ್ಷೆಗಳ ಸಮಯದಲ್ಲಿ ಯೋಬನ ಸಮಗ್ರತೆಯು ಅವನನ್ನು ಮಾರ್ಗದರ್ಶಿಸಿತು.

ಸಮಗ್ರತೆಯನ್ನು, ನೈತಿಕ ಸ್ವಸ್ಥತೆ ಇಲ್ಲವೆ ಪೂರ್ಣತೆಯೆಂದು ಅರ್ಥನಿರೂಪಿಸಲಾಗಿದೆ. ದೇವರ ದೃಷ್ಟಿಯಲ್ಲಿ ನಿರ್ದೋಷಿಗಳೂ ದೋಷರಹಿತರೂ ಆಗಿರುವುದು ಅದರಲ್ಲಿ ಒಳಗೂಡಿರುತ್ತದೆ. ಆದರೆ ಅಪರಿಪೂರ್ಣರಾದ ಮನುಷ್ಯರು, ನಡೆನುಡಿಯಲ್ಲಿ ಪರಿಪೂರ್ಣರಾಗಿರಬೇಕೆಂದು ಅದರ ಅರ್ಥವಲ್ಲ. ಏಕೆಂದರೆ ಮನುಷ್ಯರು ದೇವರ ಮಟ್ಟಗಳನ್ನು ಸಂಪೂರ್ಣವಾಗಿ ಪೂರೈಸಲಾರರು. ಅದರ ಬದಲು, ಮಾನವ ಸಮಗ್ರತೆಯು, ಯೆಹೋವನಿಗೂ ಆತನ ಚಿತ್ತ ಹಾಗೂ ಉದ್ದೇಶಗಳಿಗೂ ಅಖಂಡವಾದ ಅಥವಾ ಸಂಪೂರ್ಣವಾದ ಹೃತ್ಪೂರ್ವಕ ಭಕ್ತಿಯನ್ನು ಅರ್ಥೈಸುತ್ತದೆ. ಅಂಥ ದೈವಿಕ ಭಕ್ತಿಯು, ಯಥಾರ್ಥ ಜನರನ್ನು ಎಲ್ಲ ಪರಿಸ್ಥಿತಿಗಳಲ್ಲೂ ಎಲ್ಲ ಸಮಯಗಳಲ್ಲೂ ಮಾರ್ಗದರ್ಶಿಸುತ್ತದೆ ಇಲ್ಲವೆ ನಡೆಸುತ್ತದೆ. ಜ್ಞಾನೋಕ್ತಿ ಎಂಬ ಬೈಬಲ್‌ ಪುಸ್ತಕದ 11ನೆಯ ಅಧ್ಯಾಯವು, ನಮ್ಮ ಸಮಗ್ರತೆಯು ಜೀವಿತದ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ನಮ್ಮನ್ನು ಹೇಗೆ ಮಾರ್ಗದರ್ಶಿಸಬಲ್ಲದು ಎಂಬುದನ್ನು ತೋರಿಸಿ, ಅದನ್ನು ಹಿಂಬಾಲಿಸಿಕೊಂಡು ಬರುವ ಆಶೀರ್ವಾದಗಳ ಆಶ್ವಾಸನೆಯನ್ನು ನಮಗೆ ಕೊಡುತ್ತದೆ. ಆದುದರಿಂದ, ಅಲ್ಲಿ ಏನು ಬರೆಯಲ್ಪಟ್ಟಿದೆಯೊ ಅದರ ಕಡೆಗೆ ನಾವು ತೀವ್ರಾಸಕ್ತಿಯಿಂದ ನಮ್ಮ ಗಮನವನ್ನು ತಿರುಗಿಸೋಣ.

ಸಮಗ್ರತೆಯು ವ್ಯಾಪಾರದಲ್ಲಿ ಪ್ರಾಮಾಣಿಕತೆಗೆ ನಡೆಸುತ್ತದೆ

ಪ್ರಾಮಾಣಿಕತೆಯ ಮೂಲತತ್ತ್ವವನ್ನು ಎತ್ತಿತೋರಿಸುತ್ತಾ, ಪುರಾತನ ಇಸ್ರಾಯೇಲಿನ ರಾಜನಾದ ಸೊಲೊಮೋನನು ಕಾನೂನುಸಂಬಂಧಿತ ಪದಗಳ ಬದಲು ಕಾವ್ಯಾತ್ಮಕ ಪದಗಳನ್ನು ಉಪಯೋಗಿಸುತ್ತಾ ಹೇಳುವುದು: “ಮೋಸದ ತ್ರಾಸು ಯೆಹೋವನಿಗೆ ಅಸಹ್ಯ; ನ್ಯಾಯದ ತೂಕ ಆತನಿಗೆ ಸಂತೋಷ.” (ಜ್ಞಾನೋಕ್ತಿ 11:1) ತನ್ನ ಆರಾಧಕರು ತಮ್ಮ ವ್ಯಾಪಾರ ವಹಿವಾಟುಗಳಲ್ಲಿ ಪ್ರಾಮಾಣಿಕರಾಗಿರುವುದನ್ನು ಯೆಹೋವನು ಬಯಸುತ್ತಾನೆಂಬುದನ್ನು ತೋರಿಸಲು, ಜ್ಞಾನೋಕ್ತಿ ಪುಸ್ತಕದಲ್ಲಿ ನಾಲ್ಕು ಸಲ ಕಂಡುಬರುವ ತ್ರಾಸು ಮತ್ತು ತೂಕಗಳ ಕುರಿತಾದ ಉಲ್ಲೇಖದಲ್ಲಿ ಇದು ಮೊದಲನೆಯದ್ದಾಗಿದೆ.​—ಜ್ಞಾನೋಕ್ತಿ 16:​11; 20:​10, 23.

ಮೋಸದ ತ್ರಾಸನ್ನು​—ಇಲ್ಲವೇ ಅಪ್ರಾಮಾಣಿಕತೆಯನ್ನು⁠—ಉಪಯೋಗಿಸುವವರ ಸಮೃದ್ಧಿಯು ಆಕರ್ಷಣೀಯವಾಗಿರಬಹುದು. ಆದರೆ ನೀತಿನಿಯಮಗಳಿಲ್ಲದ ವ್ಯಾಪಾರದ ಆಚರಣೆಗಳಲ್ಲಿ ತೊಡಗುವ ಮೂಲಕ, ಒಳ್ಳೇದರ ಮತ್ತು ಕೆಟ್ಟದ್ದರ ಕುರಿತಾದ ದೇವರ ಮಟ್ಟಗಳನ್ನು ನಾವು ನಿಜವಾಗಿಯೂ ತೊರೆಯಲು ಬಯಸುವೆವೊ? ಸಮಗ್ರತೆಯು ನಮ್ಮನ್ನು ಮಾರ್ಗದರ್ಶಿಸುತ್ತಿರುವಲ್ಲಿ ಹಾಗೆ ಮಾಡೆವು. ನಾವು ಅಪ್ರಾಮಾಣಿಕತೆಯನ್ನು ದೂರವಿಡುತ್ತೇವೆ, ಏಕೆಂದರೆ ಪ್ರಾಮಾಣಿಕತೆಯನ್ನು ಸೂಚಿಸುವ ಪೂರ್ಣವಾದ ತೂಕದ ಕಲ್ಲು, ಇಲ್ಲವೆ ಸರಿಯಾದ ತೂಕವು ಯೆಹೋವನಿಗೆ ಹರ್ಷವನ್ನು ತರುತ್ತದೆ.

“ದೀನರಲ್ಲಿ ಜ್ಞಾನ”

ರಾಜನಾದ ಸೊಲೊಮೋನನು ಮುಂದುವರಿಸುವುದು: “ದುರಭಿಮಾನ ಉಂಟಾಗಿದೆಯೋ? ಹಾಗಾದರೆ ಅದರ ಪರಿಣಾಮ ಅವಮಾನವೇ; ಆದರೆ ವಿನಯಶೀಲರಲ್ಲಿ ವಿವೇಕವಿದೆ.” (ಜ್ಞಾನೋಕ್ತಿ 11:2, NW) ಹೆಮ್ಮೆ, ಅವಿಧೇಯತೆ, ಇಲ್ಲವೆ ಅಸೂಯೆ, ಹೀಗೆ ಯಾವುದೇ ರೀತಿಯಲ್ಲಿ ದುರಭಿಮಾನವು ವ್ಯಕ್ತವಾಗಲಿ ಅದು ಅಪಮಾನವನ್ನು ತರುತ್ತದೆ. ಇನ್ನೊಂದು ಬದಿಯಲ್ಲಿ, ನಮ್ಮ ಇತಿಮಿತಿಗಳನ್ನು ದೈನ್ಯದಿಂದ ಅಂಗೀಕರಿಸುವುದು ವಿವೇಕದ ಮಾರ್ಗಕ್ರಮವಾಗಿದೆ. ಈ ಜ್ಞಾನೋಕ್ತಿಯ ಸತ್ಯತೆಯನ್ನು ಶಾಸ್ತ್ರೀಯ ಉದಾಹರಣೆಗಳು ಎಷ್ಟು ಚೆನ್ನಾಗಿ ದೃಷ್ಟಾಂತಿಸುತ್ತವೆ!

ಯೆಹೋವನ ನೇಮಿತ ಸೇವಕರಾದ ಮೋಶೆ ಆರೋನರ ಅಧಿಕಾರದ ವಿರುದ್ಧ ಅಸೂಯೆಪಟ್ಟ ಲೇವ್ಯನಾದ ಕೋರಹನು, ದಂಗೆಕೋರರ ಒಂದು ಜನಸಮೂಹದ ನಾಯಕನಾದನು. ಆ ದುರಭಿಮಾನಿ ಕೃತ್ಯದ ಫಲಿತಾಂಶವೇನಾಗಿತ್ತು? ಈ ದಂಗೆಕೋರರಲ್ಲಿ ಕೆಲವರನ್ನು ‘ಭೂಮಿಯು ಬಾಯ್ದೆರೆದು ನುಂಗಿಬಿಟ್ಟಿತು’ ಮತ್ತು ಕೋರಹನನ್ನು ಸೇರಿಸಿ ಇತರ ದಂಗೆಕೋರರನ್ನು ಬೆಂಕಿಯು ಕಬಳಿಸಿಬಿಟ್ಟಿತು. (ಅರಣ್ಯಕಾಂಡ 16:​1-3, 16-35; 26:10; ಧರ್ಮೋಪದೇಶಕಾಂಡ 11:6) ಎಂಥ ಅವಮಾನ! ಉಜ್ಜನನ್ನೂ ಪರಿಗಣಿಸಿರಿ! ಒಡಂಬಡಿಕೆಯ ಮಂಜೂಷವನ್ನು ಬೀಳದಂತೆ ತಡೆಯಲು ಅವನು ದುರಭಿಮಾನದಿಂದ ಕೈಚಾಚಿ ಅದನ್ನು ಹಿಡಿದನು. ಆಗ ಅವನು ಅಲ್ಲೇ ಸತ್ತುಬಿದ್ದನು! (2 ಸಮುವೇಲ 6:​3-8) ನಾವು ದುರಭಿಮಾನವನ್ನು ದೂರವಿಡುವುದು ಎಷ್ಟು ಪ್ರಾಮುಖ್ಯ!

ಒಬ್ಬ ನಮ್ರ ಮತ್ತು ವಿನಯಶೀಲ ವ್ಯಕ್ತಿಯು, ತಪ್ಪುಮಾಡಿದಾಗಲೂ ಅವಮಾನಿತನಾಗುವುದಿಲ್ಲ. ಯೋಬನು ಅನೇಕ ವಿಧಗಳಲ್ಲಿ ಆದರ್ಶಪ್ರಾಯನಾಗಿದ್ದರೂ, ಅಪರಿಪೂರ್ಣನಾಗಿದ್ದನು. ಅವನ ಮೇಲೆ ಬಂದ ಪರೀಕ್ಷೆಗಳು, ಅವನ ಕೆಲವು ಯೋಚನಾ ರೀತಿಗಳಲ್ಲಿದ್ದ ಒಂದು ಗಂಭೀರವಾದ ದೋಷವನ್ನು ಬಯಲಿಗೆಳೆದವು. ತನ್ನ ಆರೋಪಿಗಳ ವಿರುದ್ಧ ತನ್ನನ್ನು ಸಮರ್ಥಿಸುತ್ತಿದ್ದಾಗ, ಯೋಬನು ಸ್ವಲ್ಪ ಸಮತೋಲನ ತಪ್ಪಿದನು. ತಾನು ದೇವರಿಗಿಂತಲೂ ನೀತಿವಂತನೆಂದೂ ಅವನು ಸೂಚಿಸಿದನು. (ಯೋಬ 35:​2, 3) ಯೆಹೋವನು ಯೋಬನ ಯೋಚನೆಯನ್ನು ಹೇಗೆ ಸರಿಪಡಿಸಿದನು?

ಭೂಮಿ, ಸಮುದ್ರ, ನಕ್ಷತ್ರಮಯ ಆಕಾಶ, ಕೆಲವು ಪ್ರಾಣಿಗಳು, ಮತ್ತು ಸೃಷ್ಟಿಯ ಇತರ ಅದ್ಭುತಗಳತ್ತ ನಿರ್ದೇಶಿಸುತ್ತಾ ಯೆಹೋವನು ಯೋಬನಿಗೆ, ದೇವರ ಮಹೋನ್ನತೆಯ ಮುಂದೆ ಮನುಷ್ಯನು ಎಷ್ಟು ಅಲ್ಪನಾಗಿದ್ದಾನೆಂಬುದರ ಬಗ್ಗೆ ಒಂದು ಪಾಠವನ್ನು ಕಲಿಸಿದನು. (ಯೋಬ, 38-41ನೆಯ ಅಧ್ಯಾಯಗಳು) ಯೋಬನು ಏಕೆ ಕಷ್ಟಕ್ಕೀಡಾಗಿದ್ದಾನೆಂಬುದನ್ನು ಯೆಹೋವನು ಯೋಬನೊಂದಿಗೆ ಮಾತಾಡಿದಾಗ ಎಲ್ಲಿಯೂ ತಿಳಿಸಲಿಲ್ಲ. ಆತನಿಗೆ ಹಾಗೆ ಮಾಡುವ ಅಗತ್ಯವೂ ಇರಲಿಲ್ಲ. ಯೋಬನು ವಿನಯಶೀಲನಾಗಿದ್ದನು. ತನ್ನ ಹಾಗೂ ದೇವರ ನಡುವೆ, ತನ್ನ ಸ್ವಂತ ಅಪರಿಪೂರ್ಣತೆ ಹಾಗೂ ಬಲಹೀನತೆಗಳು ಮತ್ತು ಯೆಹೋವನ ನೀತಿ ಹಾಗೂ ಶಕ್ತಿಯ ನಡುವೆ ಇರುವ ದೊಡ್ಡ ವ್ಯತ್ಯಾಸವನ್ನು ಅವನು ನಮ್ರತೆಯಿಂದ ಅಂಗೀಕರಿಸಿದನು. “[ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಎಂದು ಅವನು ಹೇಳಿದನು. (ಯೋಬ 42:6) ಯೋಬನ ಸಮಗ್ರತೆಯು ಅವನು ಆ ಗದರಿಕೆಯನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುವಂತೆ ನಡೆಸಿತು. ನಮ್ಮ ಕುರಿತಾಗಿ ಏನು? ಸಮಗ್ರತೆಯಿಂದ ನಡೆಸಲ್ಪಟ್ಟವರಾಗಿ, ಅಗತ್ಯಬೀಳುವಾಗಲೆಲ್ಲ ಕೊಡಲ್ಪಡುವ ಗದರಿಕೆ ಇಲ್ಲವೆ ತಿದ್ದುಪಾಟನ್ನು ನಾವು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತೇವೊ?

ಮೋಶೆಯು ಸಹ ವಿನಯಶೀಲನೂ ನಮ್ರನೂ ಆಗಿದ್ದನು. ಇತರರ ಸಮಸ್ಯೆಗಳನ್ನು ಬಗೆಹರಿಸುತ್ತಾ ಸ್ವತಃ ಬಳಲಿ ಬೆಂಡಾಗಿದ್ದ ಅವನಿಗೆ, ಅವನ ಮಾವನಾದ ಇತ್ರೋವನು ಈ ಪ್ರಾಯೋಗಿಕ ಪರಿಹಾರವನ್ನು ನೀಡಿದನು: ಸ್ವಲ್ಪ ಜವಾಬ್ದಾರಿಯನ್ನು ಬೇರೆ ಅರ್ಹ ಪುರುಷರಿಗೆ ಹಂಚಿಕೊಡು. ತನ್ನ ಸ್ವಂತ ಇತಿಮಿತಿಗಳನ್ನು ಅಂಗೀಕರಿಸುತ್ತಾ ಮೋಶೆಯು ಆ ಸಲಹೆಯನ್ನು ಕಾರ್ಯರೂಪಕ್ಕೆ ಹಾಕಿದನು. (ವಿಮೋಚನಕಾಂಡ 18:​17-26; ಅರಣ್ಯಕಾಂಡ 12:3) ಒಬ್ಬ ವಿನಯಶೀಲ ಪುರುಷನು ಅಧಿಕಾರವನ್ನು ಇತರರಿಗೆ ವಹಿಸಿಕೊಡಲು ಹೆದರುವುದಿಲ್ಲ, ಇಲ್ಲವೆ ಬೇರೆ ಅರ್ಹ ವ್ಯಕ್ತಿಗಳೊಂದಿಗೆ ಸೂಕ್ತವಾದ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರಿಂದ ತನ್ನ ಅಧಿಕಾರವು ಕಡಿಮೆಯಾಗುವುದೆಂಬ ಭಯ ಅವನಿಗಿರುವುದಿಲ್ಲ. (ಅರಣ್ಯಕಾಂಡ 11:​16, 17, 26-29) ಅದರ ಬದಲು, ಅವರು ಆತ್ಮಿಕವಾಗಿ ಪ್ರಗತಿಮಾಡುವಂತೆ ಸಹಾಯಮಾಡಲು ಅವನು ತವಕಿಸುತ್ತಾನೆ. (1 ತಿಮೊಥೆಯ 4:15) ನಮ್ಮ ವಿಷಯದಲ್ಲೂ ಇದು ಸತ್ಯವಾಗಿರಬೇಕಲ್ಲವೊ?

‘ನಿರ್ದೋಷಿಯ ಮಾರ್ಗವು ಸರಾಗವಾಗಿದೆ’

ಸಮಗ್ರತೆಯು, ಯಥಾರ್ಥ ಜನರನ್ನು ಯಾವಾಗಲೂ ಅಪಾಯ ಇಲ್ಲವೆ ಆಪತ್ತಿನಿಂದ ಸಂರಕ್ಷಿಸುವುದಿಲ್ಲವೆಂಬುದನ್ನು ಅಂಗೀಕರಿಸುತ್ತಾ ಸೊಲೊಮೋನನು ತಿಳಿಸಿದ್ದು: “ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ, ಆದರೆ ಮೋಸಕರವಾಗಿ ವ್ಯವಹರಿಸುವವರ ವಂಚನೆಯು ಅವರಿಗೆ ನಾಶಕರ.” (ಜ್ಞಾನೋಕ್ತಿ 11:​3, NW) ಎಲ್ಲ ಸಮಯಗಳಲ್ಲಿ, ಕಷ್ಟಕರ ಸಮಯಗಳಲ್ಲೂ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವಂತೆ ಸಮಗ್ರತೆಯು ಯಥಾರ್ಥ ವ್ಯಕ್ತಿಗಳನ್ನು ಮಾರ್ಗದರ್ಶಿಸುತ್ತದೆ ಮತ್ತು ಇದು ಕಟ್ಟಕಡೆಗೆ ಪ್ರಯೋಜನಗಳನ್ನು ತರುತ್ತದೆ. ಯೋಬನು ತನ್ನ ಸಮಗ್ರತೆಯನ್ನು ಬಿಟ್ಟುಬಿಡಲು ನಿರಾಕರಿಸಿದನು ಮತ್ತು ಯೆಹೋವನು ‘ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೆಚ್ಚಾಗಿ ಆಶೀರ್ವದಿಸಿದನು.’ (ಯೋಬ 42:12) ಮೋಸಕರವಾಗಿ ವ್ಯವಹರಿಸುವವರು, ಬೇರೆಯವರನ್ನು ತುಳಿದು ತಮ್ಮ ಸ್ಥಿತಿಯನ್ನು ಉತ್ತಮಗೊಳಿಸುತ್ತಿದ್ದೇವೆಂದು ನೆನಸಬಹುದು ಮತ್ತು ಅವರು ಕೆಲವು ಸಮಯ ಸಮೃದ್ಧಿಯನ್ನು ಆನಂದಿಸುತ್ತಿರುವಂತೆಯೂ ತೋರಬಹುದು. ಆದರೆ ಒಂದಲ್ಲ ಒಂದು ಸಮಯ ಅವರ ಸ್ವಂತ ಮೋಸವೇ ಅವರನ್ನು ಅಳಿಸಿಹಾಕುವುದು.

“ಧನವು [“ಅಮೂಲ್ಯ ವಸ್ತುಗಳು,” NW] ಕೋಪದ ದಿನದಲ್ಲಿ ವ್ಯರ್ಥ; ಧರ್ಮವು [“ನೀತಿಯು,” NW] ಮರಣವಿಮೋಚಕ” ಎಂದು ಆ ವಿವೇಕಿ ರಾಜನು ಹೇಳುತ್ತಾನೆ. (ಜ್ಞಾನೋಕ್ತಿ 11:4) ಭೌತಿಕ ಲಾಭಕ್ಕಾಗಿ ಕತ್ತೆಚಾಕರಿ ಮಾಡಿ, ದೇವರಿಗಾಗಿರುವ ನಮ್ಮ ಪ್ರೀತಿಯನ್ನು ಗಾಢಗೊಳಿಸುವ ಮತ್ತು ಆತನ ಕಡೆಗಿನ ನಮ್ಮ ಭಕ್ತಿಯನ್ನು ಬಲಪಡಿಸುವ ಚಟುವಟಿಕೆಗಳಾದ ವೈಯಕ್ತಿಕ ಅಧ್ಯಯನ, ಪ್ರಾರ್ಥನೆ, ಕೂಟಗಳಲ್ಲಿನ ಉಪಸ್ಥಿತಿ, ಮತ್ತು ಕ್ಷೇತ್ರ ಸೇವೆಯನ್ನು ಅಲಕ್ಷಿಸುವುದು ಎಂಥ ಮೂರ್ಖತನವಾಗಿದೆ! ಎಷ್ಟೇ ಧನವಿರುವುದಾದರೂ, ಅದು ಮುಂಬರಲಿರುವ ಮಹಾ ಸಂಕಟದಿಂದ ವಿಮೋಚನೆಯನ್ನು ತರಲಾರದು. (ಮತ್ತಾಯ 24:21) ಅದನ್ನು ಕೇವಲ ಯಥಾರ್ಥವಂತರ ನೀತಿಯು ತರಬಲ್ಲದು. (ಪ್ರಕಟನೆ 7:​9, 14) ಹೀಗಿರುವುದರಿಂದ, ಚೆಫನ್ಯನ ಈ ವಿನಂತಿಯನ್ನು ಪಾಲಿಸುವುದು ಬುದ್ಧಿವಂತಿಕೆಯಾಗಿದೆ: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫನ್ಯ 2:2, 3) ಅಷ್ಟರ ವರೆಗೆ, ‘ನಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸುವುದನ್ನು’ ನಾವು ನಮ್ಮ ಗುರಿಯನ್ನಾಗಿ ಮಾಡಿಕೊಳ್ಳೋಣ.​—ಜ್ಞಾನೋಕ್ತಿ 3:​9, NW.

ನೀತಿಯನ್ನು ಬೆನ್ನಟ್ಟುವ ಮೌಲ್ಯಕ್ಕೆ ಇನ್ನೂ ಒತ್ತನ್ನು ನೀಡಲಿಕ್ಕಾಗಿ, ಸೊಲೊಮೋನನು ನಿರ್ದೋಷಿಗಳಿಗೆ ಸಿಗುವ ಫಲಿತಾಂಶವನ್ನು ದುಷ್ಟರಿಗೆ ಸಿಗುವ ಫಲಿತಾಂಶದೊಂದಿಗೆ ಹೋಲಿಸುತ್ತಾ ಹೇಳುವುದು: “ನಿರ್ದೋಷಿಯ ಧರ್ಮವು [“ನೀತಿಯು,” NW] ಅವನ ಮಾರ್ಗವನ್ನು ಸರಾಗಮಾಡುವದು; ದೋಷಿಯು [“ದುಷ್ಟನು,” NW] ತನ್ನ ದೋಷದಿಂದಲೇ ಬಿದ್ದುಹೋಗುವನು. ಧರ್ಮವು [“ನೀತಿಯು,” NW] ಯಥಾರ್ಥವಂತರನ್ನು ಉದ್ಧರಿಸುವದು; ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು. ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವದು; ಬಲದ ಮೇಲಣ ನಂಬಿಕೆಯು ಬಿದ್ದುಹೋಗುವದು. ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು; ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು.” (ಜ್ಞಾನೋಕ್ತಿ 11:5-8) ನಿರ್ದೋಷಿಯು ತನ್ನ ಸ್ವಂತ ಮಾರ್ಗದಲ್ಲೇ ಬಿದ್ದುಹೋಗುವುದಿಲ್ಲ, ಇಲ್ಲವೆ ತನ್ನ ಸ್ವಂತ ವ್ಯವಹಾರಗಳಲ್ಲಿ ಸಿಕ್ಕಿಬೀಳುವುದಿಲ್ಲ. ಅವನ ಮಾರ್ಗವು ಸರಾಗವಾಗಿದೆ. ಕಟ್ಟಕಡೆಗೆ ಯಥಾರ್ಥ ಜನರು ಇಕಟ್ಟಿನಿಂದ ಪಾರುಗೊಳಿಸಲ್ಪಡುತ್ತಾರೆ. ದುಷ್ಟರು ಶಕ್ತಿಶಾಲಿಗಳಾಗಿ ತೋರಬಹುದಾದರೂ, ಅವರಿಗೆ ಅಂಥ ಯಾವುದೇ ವಿಮೋಚನೆಯಿರುವುದಿಲ್ಲ.

“ಪಟ್ಟಣಕ್ಕೆ ಉಲ್ಲಾಸ”

ಯಥಾರ್ಥ ಜನರ ಸಮಗ್ರತೆ ಮತ್ತು ಕೆಡುಕರ ದುಷ್ಟತನವು ಕೂಡ ಬೇರೆ ಜನರ ಮೇಲೆ ಪ್ರಭಾವ ಬೀರುತ್ತದೆ. “ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು; ಶಿಷ್ಟನು [“ನೀತಿವಂತನು,” NW] ತಿಳುವಳಿಕೆಯಿಂದ [“ಜ್ಞಾನದಿಂದ,” NW] ಉದ್ಧಾರವಾಗುವನು” ಎಂದು ಇಸ್ರಾಯೇಲಿನ ರಾಜನು ಹೇಳುತ್ತಾನೆ. (ಜ್ಞಾನೋಕ್ತಿ 11:9) ಚಾಡಿ ಮಾತು, ಹಾನಿಕರ ಹರಟೆ, ಅಶ್ಲೀಲ ಮಾತು, ಮತ್ತು ನಿಷ್ಪ್ರಯೋಜಕ ಮಾತುಕತೆಯು ಬೇರೆಯವರಿಗೆ ಹಾನಿಕರವಾಗಿದೆಯೆಂಬುದನ್ನು ಯಾರು ಅಲ್ಲಗಳೆಯಬಲ್ಲರು? ಆದರೆ ಇನ್ನೊಂದು ಬದಿಯಲ್ಲಿ, ಒಬ್ಬ ನೀತಿವಂತನ ಮಾತುಕತೆಯು ಶುದ್ಧವೂ, ಆಲೋಚನಾಭರಿತವೂ, ಮತ್ತು ವಿಚಾರಪೂರ್ಣವೂ ಆಗಿರುತ್ತದೆ. ಜ್ಞಾನದಿಂದಾಗಿ ಅವನಿಗೆ ಉದ್ಧಾರವಾಗುತ್ತದೆ ಯಾಕೆಂದರೆ ಅವನ ಸಮಗ್ರತೆಯು, ತನ್ನ ಆರೋಪಿಗಳು ಸುಳ್ಳುಹೇಳುತ್ತಿದ್ದಾರೆಂದು ತೋರಿಸಲು ಬೇಕಾದ ತರ್ಕಾಂಶಗಳನ್ನು ಅವನಿಗೆ ಕೊಡುತ್ತದೆ.

“ಸಜ್ಜನರು ಸುಖಿಗಳಾದರೆ [“ನೀತಿವಂತರ ಸಜ್ಜನಿಕೆಯಿಂದ,” NW] ಪಟ್ಟಣಕ್ಕೆ ಉಲ್ಲಾಸ; ದುರ್ಜನರು ಹಾಳಾದರೆ ಜಯಘೋಷ” ಎಂದು ರಾಜನು ಮುಂದುವರಿಸಿ ಹೇಳುತ್ತಾನೆ. (ಜ್ಞಾನೋಕ್ತಿ 11:10) ಸಾಮಾನ್ಯವಾಗಿ ನೀತಿವಂತರನ್ನು ಬೇರೆಯವರು ಪ್ರೀತಿಸುತ್ತಾರೆ, ಮತ್ತು ಅವರು ತಮ್ಮ ನೆರೆಹೊರೆಯವರು ಉಲ್ಲಾಸಪಡುವಂತೆ, ಸಂತೋಷಭರಿತರಾಗುವಂತೆ ಹಾಗೂ ಆನಂದಿತರಾಗುವಂತೆ ಮಾಡುತ್ತಾರೆ. “ದುರ್ಜನರ”ನ್ನಾದರೊ ಯಾರೂ ನಿಜವಾಗಿಯೂ ಇಷ್ಟಪಡುವುದಿಲ್ಲ. ದುಷ್ಟರು ಸಾಯುವಾಗ, ಸಾಮಾನ್ಯವಾಗಿ ಜನರು ಅವರಿಗಾಗಿ ಶೋಕಿಸುವುದಿಲ್ಲ. ಯೆಹೋವನು ‘ದುಷ್ಟರನ್ನು ದೇಶದೊಳಗಿಂದ ಕೀಳುವಾಗ ಮತ್ತು ದ್ರೋಹಿಗಳನ್ನು ನಿರ್ಮೂಲಮಾಡುವಾಗ’ ಖಂಡಿತವಾಗಿಯೂ ಸ್ವಲ್ಪವೂ ದುಃಖವಿರದು. (ಜ್ಞಾನೋಕ್ತಿ 2:​21, 22) ಅದರ ಬದಲು ಅವರು ತೆಗೆದುಹಾಕಲ್ಪಟ್ಟಿರುವುದಕ್ಕಾಗಿ ಎಲ್ಲೆಡೆಯೂ ಆನಂದವಿರುವುದು. ನಮ್ಮ ಕುರಿತಾಗಿ ಏನು? ನಾವು ನಡೆದುಕೊಳ್ಳುವ ರೀತಿಯು ಬೇರೆಯವರಿಗೆ ಆನಂದವನ್ನು ತರುತ್ತದೊ ಎಂದು ಪರಿಗಣಿಸುವುದು ಒಳ್ಳೇದು.

“ಪಟ್ಟಣವು ಉನ್ನತಿಗೆ ಬರುವದು”

ಒಂದು ಸಮಾಜದ ಮೇಲೆ ಯಥಾರ್ಥವಂತರು ಹಾಗೂ ದುಷ್ಟರು ಬೀರುವ ಪರಿಣಾಮದಲ್ಲಿರುವ ವ್ಯತ್ಯಾಸವನ್ನು ಇನ್ನೂ ತೋರಿಸುತ್ತಾ ಸೊಲೊಮೋನನು ತಿಳಿಸುವುದು: “ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವದು, ಕೆಟ್ಟವರ ಬಾಯಿಂದ ಕೆಡವಲ್ಪಡುವದು.”​—ಜ್ಞಾನೋಕ್ತಿ 11:11.

ಯಥಾರ್ಥವಾದ ಮಾರ್ಗಕ್ರಮವನ್ನು ಅನುಸರಿಸುವ ಪಟ್ಟಣದ ಜನರು ಶಾಂತಿ, ಕ್ಷೇಮವನ್ನು ವರ್ಧಿಸಿ, ಸಮುದಾಯದಲ್ಲಿ ಇತರರನ್ನು ಉತ್ತೇಜಿಸುತ್ತಾರೆ. ಹೀಗೆ ಒಂದು ಪಟ್ಟಣವು ಉನ್ನತಿಗೆ ಬರುತ್ತದೆ; ಅದು ಸಮೃದ್ಧವಾಗುತ್ತದೆ. ಚಾಡಿ ಮಾತು, ಹಾನಿಕರ ಹಾಗೂ ತಪ್ಪಾದ ವಿಷಯಗಳನ್ನು ಆಡುವವರು, ಗಲಭೆ, ಅಸಂತೋಷ, ಅನೈಕ್ಯ ಮತ್ತು ತೊಂದರೆಯನ್ನು ಉಂಟುಮಾಡುತ್ತಾರೆ. ಮತ್ತು ಇಂಥವರು ಯಾವುದೊ ಪ್ರಮುಖ ಹುದ್ದೆಯಲ್ಲಿರುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ಅಂಥ ಪಟ್ಟಣವು, ಅವ್ಯವಸ್ಥೆ, ಭ್ರಷ್ಟಾಚಾರ, ಮತ್ತು ನೈತಿಕ ಹಾಗೂ ಪ್ರಾಯಶಃ ಆರ್ಥಿಕ ಪತನವನ್ನು ಅನುಭವಿಸುತ್ತದೆ.

ಜ್ಞಾನೋಕ್ತಿ 11:11ರಲ್ಲಿ ತಿಳಿಸಲ್ಪಟ್ಟಿರುವ ಸೂತ್ರವು, ಇಂದು ಸಹ ಯೆಹೋವನ ಜನರಿಗೆ ಅನ್ವಯಿಸುತ್ತದೆ. ಅವರು ತಮ್ಮ ಪಟ್ಟಣಸದೃಶ ಸಭೆಗಳಲ್ಲಿ ಪರಸ್ಪರ ಸಹವಾಸಮಾಡುತ್ತಾರೆ. ಆತ್ಮಿಕ ಜನರು, ಅಂದರೆ ತಮ್ಮ ಸಮಗ್ರತೆಯಿಂದ ನಡೆಸಲ್ಪಟ್ಟಿರುವ ಯಥಾರ್ಥ ಜನರು ಯಾವುದರ ಮೇಲೆ ಪ್ರಭಾವವನ್ನು ಬೀರುತ್ತಾರೊ ಆ ಸಭೆಯು, ದೇವರಿಗೆ ಗೌರವವನ್ನು ತರುವ ಸಂತೋಷದ, ಸಕ್ರಿಯ ಮತ್ತು ಸಹಾಯಕಾರಿ ಜನರ ಗುಂಪಾಗಿದೆ. ಯೆಹೋವನು ಆ ಸಭೆಯನ್ನು ಆಶೀರ್ವದಿಸುತ್ತಾನೆ ಮತ್ತು ಅದು ಆತ್ಮಿಕವಾಗಿ ಸಮೃದ್ಧವಾಗುತ್ತದೆ. ಅಲ್ಲಿಲ್ಲಿ ದುಮ್ಮಾನಗೊಂಡಿರುವ ಮತ್ತು ಅತೃಪ್ತರಾಗಿರುವ ಕೆಲವರು, ಕೆಲಸಗಳು ಮಾಡಲ್ಪಡುತ್ತಿರುವ ರೀತಿಯ ಬಗ್ಗೆ ಯಾವಾಗಲೂ ಟೀಕಿಸುತ್ತಾ, ಕಹಿಯಾಗಿ ಮಾತಾಡುತ್ತಾರೆ. ಇವರು ‘ವಿಷವುಳ್ಳ ಬೇರಿನಂತಿದ್ದು,’ ಹರಡಿಕೊಂಡು, ಆರಂಭದಲ್ಲಿ ಯಾವುದೇ ಪ್ರಭಾವವು ತಟ್ಟಿರದಂಥ ಇತರರಿಗೂ ವಿಷ ತಟ್ಟಿಸುತ್ತಾರೆ. (ಇಬ್ರಿಯ 12:15) ಅಂಥವರಿಗೆ ಅನೇಕವೇಳೆ ಹೆಚ್ಚಿನ ಅಧಿಕಾರ ಮತ್ತು ಪ್ರತಿಷ್ಠೆ ಬೇಕು. ಸಭೆಯಲ್ಲಿ ಅಥವಾ ಹಿರಿಯರಿಂದ ಅನ್ಯಾಯವಾಗುತ್ತಿದೆ, ಜಾತೀಯ ಪೂರ್ವಾಗ್ರಹವಿದೆ ಎಂಬಂಥ ಗಾಳಿ ಸುದ್ದಿಗಳನ್ನು ಅವರು ಹಬ್ಬಿಸುತ್ತಾರೆ. ಅವರ ಬಾಯಿ ನಿಜವಾಗಿಯೂ ಸಭೆಯಲ್ಲಿ ಒಡಕನ್ನುಂಟುಮಾಡಬಲ್ಲದು. ನಾವು ಅವರ ಮಾತುಗಳಿಗೆ ಕಿವಿಗೊಡದೆ, ಸಭೆಯ ಶಾಂತಿ ಮತ್ತು ಐಕ್ಯಕ್ಕಾಗಿ ಕೆಲಸಮಾಡುತ್ತಿರುವ ಆತ್ಮಿಕ ಜನರಾಗಿರಲು ಪ್ರಯಾಸಪಡಬಾರದೊ?

ಸೊಲೊಮೋನನು ಮುಂದುವರಿಯುತ್ತಾ ಹೇಳುವುದು: “ನೆರೆಯವನನ್ನು ಹೀನೈಸುವವನು ಬುದ್ಧಿಹೀನನು; ವಿವೇಕಿಯು ಬಾಯಿಬಿಡನು. ಚಾಡಿಕೋರನು ಗುಟ್ಟು ರಟ್ಟುಮಾಡುವನು; ನಂಬಿಗಸ್ತನು ಸಂಗತಿಯನ್ನು ಗುಪ್ತಪಡಿಸುವನು.”​—ಜ್ಞಾನೋಕ್ತಿ 11:12, 13.

“ಬುದ್ಧಿಹೀನನು” ಇಲ್ಲವೆ ಒಳ್ಳೆಯ ವಿವೇಚನಾಶಕ್ತಿಯ ಕೊರತೆಯುಳ್ಳ ಒಬ್ಬನು ಎಂಥ ದೊಡ್ಡ ಹಾನಿಯನ್ನು ಉಂಟುಮಾಡಬಲ್ಲನು! ಅವನ ಲಂಗುಲಗಾಮಿಲ್ಲದ ಮಾತುಗಳು, ಚಾಡಿ ಮಾತು ಇಲ್ಲವೆ ಹೀನವಾದ ಮಾತಿನ ಹಂತವನ್ನೂ ತಲಪುತ್ತವೆ. ಅಂಥ ಅಹಿತಕರವಾದ ಪ್ರಭಾವವನ್ನು ಕೊನೆಗೊಳಿಸಲು ನೇಮಿತ ಹಿರಿಯರು ತಡಮಾಡಬಾರದು. ಆದರೆ ವಿವೇಕಿಯಾದ ವ್ಯಕ್ತಿಯು, “ಬುದ್ಧಿಹೀನ”ನಂತಿರದೆ, ಯಾವಾಗ ಮೌನವಾಗಿರಬೇಕೆಂದು ತಿಳಿದವನಾಗಿದ್ದಾನೆ. ಒಬ್ಬನ ಗುಟ್ಟನ್ನು ರಟ್ಟುಮಾಡುವ ಬದಲು, ಅವನು ಅದನ್ನು ಗುಪ್ತವಾಗಿಡುತ್ತಾನೆ. ಕಡಿವಾಣವಿಲ್ಲದ ನಾಲಿಗೆಯು ತುಂಬ ಹಾನಿಯನ್ನು ಮಾಡಬಲ್ಲದೆಂದು ತಿಳಿದವನಾಗಿ, ವಿವೇಕಿಯು “ನಂಬಿಗಸ್ತ”ನಾಗಿರುತ್ತಾನೆ. ಅವನು ಜೊತೆ ವಿಶ್ವಾಸಿಗಳಿಗೆ ನಿಷ್ಠನಾಗಿರುತ್ತಾನೆ ಮತ್ತು ಅವರನ್ನು ಅಪಾಯದಲ್ಲಿ ಸಿಕ್ಕಿಸಬಲ್ಲ ಗೋಪ್ಯ ವಿಷಯಗಳನ್ನು ತಿಳಿಸಿಬಿಡುವುದಿಲ್ಲ. ಅಂಥ ಸಮಗ್ರತೆ ಪಾಲಕರು ಸಭೆಗೆ ಎಂಥ ಆಶೀರ್ವಾದವಾಗಿದ್ದಾರೆ!

ನಿರ್ದೋಷಿಗಳ ಮಾರ್ಗದಲ್ಲಿ ನಡೆಯುವಂತೆ ನಮಗೆ ಸಹಾಯಮಾಡಲು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ನಿರ್ದೇಶನದ ಕೆಳಗೆ ತಯಾರಿಸಲ್ಪಡುವ ಆತ್ಮಿಕ ಆಹಾರದ ಸಮೃದ್ಧ ಸರಬರಾಯಿಯನ್ನು ಯೆಹೋವನು ಒದಗಿಸುತ್ತಾನೆ. (ಮತ್ತಾಯ 24:45) ನಮ್ಮ ಸ್ವಂತ ಪಟ್ಟಣಸದೃಶ ಸಭೆಗಳಲ್ಲಿ ಕ್ರೈಸ್ತ ಹಿರಿಯರ ಮೂಲಕವೂ ನಾವು ಬಹಳಷ್ಟು ವೈಯಕ್ತಿಕ ನೆರವನ್ನು ಪಡೆಯುತ್ತೇವೆ. (ಎಫೆಸ 4:​11-13) ಇಂಥವರಿಗಾಗಿ ನಾವು ನಿಜವಾಗಿಯೂ ಆಭಾರಿಗಳಾಗಿದ್ದೇವೆ, ಯಾಕಂದರೆ “ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವದು; ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವದು.” (ಜ್ಞಾನೋಕ್ತಿ 11:14) ಏನೇ ಆಗಲಿ, ನಾವು ‘ನಮ್ಮ ಸಮಗ್ರತೆಯಲ್ಲಿ ನಡೆಯಲು’ ದೃಢಸಂಕಲ್ಪವುಳ್ಳವರಾಗಿರೋಣ.​—ಕೀರ್ತನೆ 26:1, NW.

[ಪುಟ 26ರಲ್ಲಿರುವ ಸಂಕ್ಷಿಪ್ತ ವಿವರಣೆ]

ಭೌತಿಕ ಲಾಭಕ್ಕಾಗಿ ಕತ್ತೆಚಾಕರಿ ಮಾಡಿ, ದೇವಪ್ರಭುತ್ವಾತ್ಮಕ ಚಟುವಟಿಕೆಗಳನ್ನು ಅಲಕ್ಷಿಸುವುದು ಎಂಥ ಮೂರ್ಖತನ!

[ಪುಟ 24ರಲ್ಲಿರುವ ಚಿತ್ರಗಳು]

ಯೋಬನನ್ನು ಅವನ ಸಮಗ್ರತೆಯು ಮಾರ್ಗದರ್ಶಿಸಿತು, ಮತ್ತು ಯೆಹೋವನು ಅವನನ್ನು ಆಶೀರ್ವದಿಸಿದನು

[ಪುಟ 25ರಲ್ಲಿರುವ ಚಿತ್ರ]

ಉಜ್ಜನು ಅವನ ದುರಭಿಮಾನದಿಂದಾಗಿ ಸತ್ತನು