ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿಪೂರ್ವಕ ದಯೆಯಿಂದ ಪ್ರಯೋಜನ ಹೊಂದುವುದು

ಯೆಹೋವನ ಪ್ರೀತಿಪೂರ್ವಕ ದಯೆಯಿಂದ ಪ್ರಯೋಜನ ಹೊಂದುವುದು

ಯೆಹೋವನ ಪ್ರೀತಿಪೂರ್ವಕ ದಯೆಯಿಂದ ಪ್ರಯೋಜನ ಹೊಂದುವುದು

“ವಿವೇಕಿಯು ಯಾರು? ಅವನು . . . ಯೆಹೋವನ ಪ್ರೀತಿಪೂರ್ವಕ ದಯೆಯ ಕಾರ್ಯಗಳಿಗೆ ಗಮನಕೊಡುವವನೆಂದು ತೋರಿಸಿಕೊಳ್ಳುವನು.”​—ಕೀರ್ತನೆ 107:​43, NW.

1.“ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರವಾಗಿರುವ ಹೀಬ್ರು ಪದವು ಬೈಬಲಿನಲ್ಲಿ ಪ್ರಥಮ ಬಾರಿ ಉಪಯೋಗಿಸಲ್ಪಟ್ಟದ್ದು ಯಾವಾಗ, ಮತ್ತು ಈ ಗುಣದ ಸಂಬಂಧದಲ್ಲಿ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಲಿದ್ದೇವೆ?

ಸುಮಾರು 4,000 ವರುಷಗಳಿಗೆ ಹಿಂದೆ, ಅಬ್ರಹಾಮನ ಸೋದರಳಿಯನಾಗಿದ್ದ ಲೋಟನು ಯೆಹೋವನ ಕುರಿತು, “ನೀನು ನಿನ್ನ ಪ್ರೀತಿಪೂರ್ವಕ ದಯೆಯನ್ನು ವರ್ಧಿಸುತ್ತಿದ್ದೀ” ಎಂದು ಹೇಳಿದನು. (ಆದಿಕಾಂಡ 19:​19, NW) “ಪ್ರೀತಿಪೂರ್ವಕ ದಯೆ” ಎಂಬ ಪದವು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—ರೆಫರೆನ್ಸ್‌ಗಳೊಂದಿಗೆ (ಇಂಗ್ಲಿಷ್‌) ಬೈಬಲ್‌ನಲ್ಲಿ ತೋರಿಬರುವುದು ಇದು ಮೊದಲ ಬಾರಿ. ಆ ಬೈಬಲ್‌ನಲ್ಲಿ, “ಪ್ರೀತಿಪೂರ್ವಕ ದಯೆ” ಮತ್ತು “ಪ್ರೀತಿಪೂರ್ವಕ ದಯೆಗಳು” ಎಂಬ ಪದಗಳು ಸುಮಾರು 250 ಸಲ ಬರುತ್ತವೆ. ಆದರೆ ಕನ್ನಡ ಬೈಬಲಿನಲ್ಲಿ ಅವುಗಳನ್ನು ಹೆಚ್ಚಾಗಿ “ಕೃಪೆ,” “ಪ್ರೀತಿ,” “ದಯೆ” ಮತ್ತು “ಉಪಕಾರ” ಎಂದು ಭಾಷಾಂತರಿಸಲಾಗಿದೆ. ಯಾಕೋಬ, ನೊವೊಮಿ, ದಾವೀದ ಮತ್ತು ದೇವರ ಇತರ ಸೇವಕರು ಕೂಡ ಯೆಹೋವನ ಈ ಗುಣದ ಕುರಿತಾಗಿ ಮಾತಾಡಿದರು. (ಆದಿಕಾಂಡ 32:10; ರೂತ 1:8; 2 ಸಮುವೇಲ 2:6) ಆದರೆ ಯೆಹೋವನ ಪ್ರೀತಿಪೂರ್ವಕ ದಯೆ ಎಂದರೇನು? ಇದು ಗತ ಸಮಯಗಳಲ್ಲಿ ಯಾರಿಗೆ ತೋರಿಸಲ್ಪಟ್ಟಿತು? ಮತ್ತು ನಾವು ಇಂದು ಅದರಿಂದ ಹೇಗೆ ಪ್ರಯೋಜನ ಹೊಂದುತ್ತೇವೆ?

2. “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರವಾಗಿರುವ ಹೀಬ್ರು ಪದದ ನಿರೂಪಣೆಯು ಅಷ್ಟು ಕಷ್ಟಕರವೇಕೆ, ಮತ್ತು ಇದಕ್ಕೆ ತಕ್ಕದಾಗಿರುವ ಬದಲಿ ಪದವು ಯಾವುದು?

2 ಶಾಸ್ತ್ರದಲ್ಲಿ “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರವಾಗಿರುವ ಹೀಬ್ರು ಪದವು ಎಷ್ಟು ಅರ್ಥಗರ್ಭಿತವಾಗಿದೆಯೆಂದರೆ, ಅದರ ಪೂರ್ಣಾರ್ಥವನ್ನು ಸರಿಯಾಗಿ ತಿಳಿಯಪಡಿಸುವ ಒಂದು ಪದವು ಹೆಚ್ಚಿನ ಭಾಷೆಗಳಲ್ಲಿ ಇರುವುದಿಲ್ಲ. ಹೀಗಿರುವುದರಿಂದ “ಕೃಪೆ,” “ಪ್ರೀತಿ,” “ದಯೆ” ಮತ್ತು “ಉಪಕಾರ” ಎಂಬ ಪದಗಳು ಅದರ ಪೂರ್ಣಾರ್ಥವನ್ನು ನಿರೂಪಿಸುವುದಿಲ್ಲ. ಆದರೂ, ಹೆಚ್ಚು ವ್ಯಾಪಕಾರ್ಥವುಳ್ಳ “ಪ್ರೀತಿಪೂರ್ವಕ ದಯೆ” ಎಂಬ ಪದವು, “ಆ ಪದದ ಪೂರ್ಣಾರ್ಥದಲ್ಲಿ ಹೆಚ್ಚನ್ನು ವ್ಯಕ್ತಪಡಿಸುತ್ತದೆ” ಎಂದು ಥಿಯಲಾಜಿಕಲ್‌ ವರ್ಡ್‌ಬುಕ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌ ಹೇಳುತ್ತದೆ. ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—ರೆಫರೆನ್ಸ್‌ಗಳೊಂದಿಗೆ (ಇಂಗ್ಲಿಷ್‌) ಬೈಬಲು, “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದದ ಬದಲಿ ಅನುವಾದದೋಪಾದಿ “ನಿಷ್ಠೆಯುಳ್ಳ ಪ್ರೀತಿ” ಎಂಬ ಪದವನ್ನು ಸೂಕ್ತವಾಗಿಯೇ ನೀಡುತ್ತದೆ.​—ವಿಮೋಚನಕಾಂಡ 15:13; ಕೀರ್ತನೆ 5:​7, NW ಪಾದಟಿಪ್ಪಣಿ.

ಪ್ರೀತಿ ಮತ್ತು ನಿಷ್ಠೆಗಳಿಗಿಂತ ಭಿನ್ನವಾದದ್ದು

3. ಪ್ರೀತಿಪೂರ್ವಕ ದಯೆಯೆಂದು ಭಾಷಾಂತರವಾಗಿರುವ ಹೀಬ್ರು ಪದವು ಪ್ರೀತಿಗಿಂತ ಭಿನ್ನವಾಗಿರುವುದು ಹೇಗೆ?

3 ಪ್ರೀತಿಪೂರ್ವಕ ದಯೆ ಅಥವಾ ನಿಷ್ಠೆಯುಳ್ಳ ಪ್ರೀತಿಯು, ಪ್ರೀತಿ ಮತ್ತು ನಿಷ್ಠೆ ಎಂಬ ಗುಣಗಳಿಗೆ ಹತ್ತಿರ ಸಂಬಂಧವುಳ್ಳದ್ದಾಗಿದೆ. ಆದರೂ, ಪ್ರಾಮುಖ್ಯ ವಿಧಗಳಲ್ಲಿ ಅದು ಅವುಗಳಿಂದ ಭಿನ್ನವೂ ಆಗಿದೆ. ಪ್ರೀತಿಪೂರ್ವಕ ದಯೆ ಮತ್ತು ಪ್ರೀತಿ​—ಇವುಗಳ ಮಧ್ಯೆ ಇರುವ ವ್ಯತ್ಯಾಸವನ್ನು ಪರಿಗಣಿಸಿರಿ. ಕೆಲವು ಭಾಷೆಗಳಲ್ಲಿ, ಪ್ರೀತಿಯನ್ನು ವಸ್ತುಗಳಿಗೆ ಮತ್ತು ಕಲ್ಪನಾ ವಿಷಯಗಳಿಗೂ ಅನ್ವಯಿಸಸಾಧ್ಯವಿದೆ. ಬೈಬಲು ‘ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವ’ ಮತ್ತು ‘ಜ್ಞಾನವನ್ನು ಪ್ರೀತಿಸುವ’ ವಿಷಯದಲ್ಲಿ ಮಾತಾಡುತ್ತದೆ. (ಜ್ಞಾನೋಕ್ತಿ 21:17; 29:3, ಪರಿಶುದ್ಧ ಬೈಬಲ್‌) ಆದರೆ ಪ್ರೀತಿಪೂರ್ವಕ ದಯೆಯು ಜನರಿಗೆ ಅನ್ವಯಿಸುತ್ತದೆಯೇ ಹೊರತು ಕಲ್ಪನೆಗಳಿಗೆ ಅಥವಾ ನಿರ್ಜೀವ ವಸ್ತುಗಳಿಗಲ್ಲ. ಉದಾಹರಣೆಗೆ, ವಿಮೋಚನಕಾಂಡ 20:6ರಲ್ಲಿ (NW) ಯೆಹೋವನು, “ಸಾವಿರ ತಲೆಗಳ ವರೆಗೆ ಪ್ರೀತಿಪೂರ್ವಕ ದಯೆ ತೋರಿಸುವವನು” ಆಗಿದ್ದಾನೆಂದು ಹೇಳುವಾಗ ಅದರಲ್ಲಿ ಜನರು ಸೇರಿರುತ್ತಾರೆ.

4. ಪ್ರೀತಿಪೂರ್ವಕ ದಯೆಯು ನಿಷ್ಠೆಗಿಂತ ಭಿನ್ನವಾಗಿರುವುದು ಹೇಗೆ?

4 “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರವಾಗಿರುವ ಹೀಬ್ರು ಪದಕ್ಕೆ “ನಿಷ್ಠೆ” ಎಂಬ ಪದಕ್ಕಿಂತ ಹೆಚ್ಚು ವಿಶಾಲಾರ್ಥವಿದೆ. ಕೆಲವು ಭಾಷೆಗಳಲ್ಲಿ, ಅನೇಕವೇಳೆ ಕೆಳಸ್ಥಾನದಲ್ಲಿರುವವನು ಮೇಲಧಿಕಾರಿಗೆ ತೋರಿಸಲೇಬೇಕಾದ ಮನೋಭಾವಕ್ಕೆ “ನಿಷ್ಠೆ” ಎಂಬ ಪದವನ್ನು ಉಪಯೋಗಿಸಲಾಗುತ್ತದೆ. ಆದರೆ ಒಬ್ಬ ಸಂಶೋಧಕರು ಗಮನಿಸುವಂತೆ, ಬೈಬಲಿನ ದೃಷ್ಟಿಕೋನದಲ್ಲಿ, ಪ್ರೀತಿಪೂರ್ವಕ ದಯೆಯು “ಸಂಬಂಧಗಳಲ್ಲಿ ನೇರವಾಗಿ ವ್ಯತಿರಿಕ್ತ ದಿಕ್ಕನ್ನು ಸೂಚಿಸುತ್ತದೆ: ಶಕ್ತಿಶಾಲಿಯಾಗಿರುವವನು ಬಲಹೀನನಿಗೆ ಅಥವಾ ಕೊರತೆಯುಳ್ಳವನಿಗೆ ಅಥವಾ ತನಗೆ ಅಧೀನನಾಗಿರುವವನಿಗೆ ನಿಷ್ಠನಾಗಿರುತ್ತಾನೆ.” ಆದಕಾರಣ, ರಾಜ ದಾವೀದನು ಯೆಹೋವನಿಗೆ, “ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ [“ಪ್ರೀತಿಪೂರ್ವಕ ದಯೆಯಿಂದ,” NW] ನನ್ನನ್ನು ರಕ್ಷಿಸು” ಎಂದು ಬೇಡಿಕೊಳ್ಳಸಾಧ್ಯವಿತ್ತು. (ಕೀರ್ತನೆ 31:16) ಇಲ್ಲಿ ಶಕ್ತಿಶಾಲಿಯಾಗಿರುವ ಯೆಹೋವನು, ಕೊರತೆಯಲ್ಲಿರುವ ದಾವೀದನಿಗೆ ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠೆಯುಳ್ಳ ಪ್ರೀತಿಯನ್ನು ತೋರಿಸುವಂತೆ ಕೇಳಿಕೊಳ್ಳಲಾಗಿದೆ. ಕೊರತೆಯಲ್ಲಿರುವವನಿಗೆ ಶಕ್ತಿವಂತನ ಮೇಲೆ ಅಧಿಕಾರವಿಲ್ಲದಿರುವುದರಿಂದ, ಅಂತಹ ಸಂದರ್ಭದಲ್ಲಿ ತೋರಿಸಲ್ಪಡುವ ಪ್ರೀತಿಪೂರ್ವಕ ದಯೆಯು, ಸ್ವಂತ ಇಷ್ಟದಿಂದ ತೋರಿಸಲ್ಪಡುತ್ತದೆಯೇ ಹೊರತು ಬಲಾತ್ಕಾರದಿಂದಲ್ಲ.

5. (ಎ) ದೇವರ ಪ್ರೀತಿಪೂರ್ವಕ ದಯೆಯ ಯಾವ ಲಕ್ಷಣಗಳು ಆತನ ವಾಕ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ? (ಬಿ) ಯೆಹೋವನ ಪ್ರೀತಿಪೂರ್ವಕ ದಯೆಯ ಯಾವ ಅಭಿವ್ಯಕ್ತಿಗಳನ್ನು ನಾವು ಪರಿಗಣಿಸುವೆವು?

5 “ವಿವೇಕಿಯು ಯಾರು?” ಎಂದು ಕೀರ್ತನೆಗಾರನು ಪ್ರಶ್ನಿಸಿ, “ಅವನು . . . ಯೆಹೋವನ ಪ್ರೀತಿಪೂರ್ವಕ ದಯೆಯ ಕಾರ್ಯಗಳಿಗೆ ಗಮನಕೊಡುವವನೆಂದು ತೋರಿಸಿಕೊಳ್ಳುವನು” ಎಂದು ಉತ್ತರ ಕೊಡುತ್ತಾನೆ. (ಕೀರ್ತನೆ 107:​43, NW) ಯೆಹೋವನ ಪ್ರೀತಿಪೂರ್ವಕ ದಯೆಯು ವಿಮೋಚನೆ ಮತ್ತು ಸುರಕ್ಷಿತತೆಯಾಗಿ ಪರಿಣಮಿಸಬಲ್ಲದು. (ಕೀರ್ತನೆ 6:​4; 119:​88, 159) ಅದು ಸಂರಕ್ಷಣೆಯೂ ಕಷ್ಟಗಳಿಂದ ಉಪಶಮನವನ್ನು ತರುವ ಸಂಗತಿಯೂ ಆಗಿರುತ್ತದೆ. (ಕೀರ್ತನೆ 31:​16, 21; 40:11; 143:12) ಈ ಗುಣದ ಕಾರಣದಿಂದಾಗಿ ಪಾಪದಿಂದ ವಿಮುಕ್ತಿಯನ್ನು ಪಡೆಯಸಾಧ್ಯವಿದೆ. (ಕೀರ್ತನೆ 25:7) ಕೆಲವು ಶಾಸ್ತ್ರೀಯ ವೃತ್ತಾಂತಗಳನ್ನು ಪುನರ್ವಿಮರ್ಶಿಸುವ ಹಾಗೂ ಇತರ ಬೈಬಲ್‌ ವಚನಗಳನ್ನು ಪರೀಕ್ಷಿಸುವ ಮೂಲಕ, ಯೆಹೋವನ ಪ್ರೀತಿಪೂರ್ವಕ ದಯೆಯು (1) ನಿರ್ದಿಷ್ಟ ಕಾರ್ಯಗಳ ಮೂಲಕ ವ್ಯಕ್ತವಾಗುತ್ತದೆ ಮತ್ತು (2) ಆತನ ನಂಬಿಗಸ್ತ ಸೇವಕರಿಂದ ಅನುಭವಿಸಲ್ಪಟ್ಟಿದೆ ಎಂಬುದನ್ನು ನಾವು ನೋಡುವೆವು.

ವಿಮೋಚನೆ​—ಪ್ರೀತಿಪೂರ್ವಕ ದಯೆಯ ಅಭಿವ್ಯಕ್ತಿ

6, 7. (ಎ) ಲೋಟನ ಸಂಬಂಧದಲ್ಲಿ ಯೆಹೋವನು ತನ್ನ ಪ್ರೀತಿಪೂರ್ವಕ ದಯೆಯ ವಿಶೇಷತೆಯನ್ನು ವರ್ಧಿಸಿದ್ದು ಹೇಗೆ? (ಬಿ) ಯೆಹೋವನ ಪ್ರೀತಿಪೂರ್ವಕ ದಯೆಯ ವಿಷಯವನ್ನು ಲೋಟನು ತಿಳಿಯಪಡಿಸಿದ್ದು ಯಾವಾಗ?

6 ಪ್ರಾಯಶಃ ಯೆಹೋವನ ಪ್ರೀತಿಪೂರ್ವಕ ದಯೆಯ ವ್ಯಾಪ್ತಿಯನ್ನು ನಿರ್ಧರಿಸುವ ಅತ್ಯುತ್ತಮ ಮಾರ್ಗವು, ಈ ಗುಣವು ಒಳಗೂಡಿರುವ ಶಾಸ್ತ್ರೀಯ ವೃತ್ತಾಂತಗಳನ್ನು ಪರೀಕ್ಷಿಸುವುದೇ ಆಗಿದೆ. ಆದಿಕಾಂಡ 14:​1-16ರಲ್ಲಿ, ಅಬ್ರಹಾಮನ ಸೋದರಳಿಯನಾಗಿದ್ದ ಲೋಟನನ್ನು ವೈರಿಸೈನ್ಯಗಳು ಹಿಡಿದುಕೊಂಡು ಹೋಗಿದ್ದವೆಂದು ನಾವು ತಿಳಿಯುತ್ತೇವೆ. ಆದರೆ ಅಬ್ರಹಾಮನು ಲೋಟನನ್ನು ರಕ್ಷಿಸಿದನು. ಲೋಟನೂ ಅವನ ಕುಟುಂಬವೂ ಜೀವಿಸುತ್ತಿದ್ದ ದುಷ್ಟ ನಗರವಾಗಿದ್ದ ಸೊದೋಮನ್ನು ಯೆಹೋವನು ನಾಶಮಾಡಲು ನಿರ್ಣಯಿಸಿದಾಗ, ಲೋಟನ ಜೀವ ಇನ್ನೊಮ್ಮೆ ಅಪಾಯಕ್ಕೊಳಗಾಯಿತು.​—ಆದಿಕಾಂಡ 18:​20-22; 19:​12, 13.

7 ಸೊದೋಮಿನ ನಾಶನಕ್ಕೆ ಸ್ವಲ್ಪ ಮುಂಚೆ, ಯೆಹೋವನ ದೂತರು ಲೋಟನನ್ನೂ ಅವನ ಕುಟುಂಬವನ್ನೂ ಊರಿನ ಹೊರಕ್ಕೆ ಕರೆದುಕೊಂಡು ಹೋದರು. ಆಗ ಲೋಟನು ಹೇಳಿದ್ದು: “ನಿನ್ನ ಸೇವಕನು ನಿನ್ನ ದೃಷ್ಟಿಯಲ್ಲಿ ಅನುಗ್ರಹಪಾತ್ರನಾಗಿರುವ ಕಾರಣ ನೀನು ನನ್ನ ಪ್ರಾಣವನ್ನು ರಕ್ಷಿಸಿ ಉಳಿಸಲು ಉಪಯೋಗಿಸುವ ನಿನ್ನ ಪ್ರೀತಿಪೂರ್ವಕ ದಯೆಯನ್ನು ವರ್ಧಿಸುತ್ತಿದ್ದೀ.” (ಆದಿಕಾಂಡ 19:​16, 19, NW) ತನ್ನನ್ನು ರಕ್ಷಿಸುವ ಮೂಲಕ ಯೆಹೋವನು ವಿಶೇಷವಾದ ಪ್ರೀತಿಪೂರ್ವಕ ದಯೆಯನ್ನು ತೋರಿಸಿದ್ದಾನೆಂದು ಈ ಮಾತುಗಳಿಂದ ಲೋಟನು ಅಂಗೀಕರಿಸಿದನು. ಈ ಸಂದರ್ಭದಲ್ಲಿ, ದೇವರ ಪ್ರೀತಿಪೂರ್ವಕ ದಯೆಯು ವಿಮೋಚನೆ ಮತ್ತು ಸುರಕ್ಷಿಕತೆಯ ಮೂಲಕ ವ್ಯಕ್ತವಾಯಿತು.​—2 ಪೇತ್ರ 2:7.

ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಆತನ ಮಾರ್ಗದರ್ಶನ

8, 9. (ಎ) ಅಬ್ರಹಾಮನ ಸೇವಕನಿಗೆ ಯಾವ ಕೆಲಸವನ್ನು ನೇಮಿಸಲಾಗಿತ್ತು? (ಬಿ) ಆ ಸೇವಕನು ದೇವರ ಪ್ರೀತಿಪೂರ್ವಕ ದಯೆಗಾಗಿ ಏಕೆ ಪ್ರಾರ್ಥಿಸಿದನು, ಮತ್ತು ಅವನು ಪ್ರಾರ್ಥಿಸುತ್ತಿದ್ದಾಗ ಏನು ನಡೆಯಿತು?

8ಆದಿಕಾಂಡ 24ನೆಯ ಅಧ್ಯಾಯದಲ್ಲಿ ನಾವು ದೇವರ ಪ್ರೀತಿಪೂರ್ವಕ ದಯೆಯ ಕುರಿತಾದ ಇನ್ನೊಂದು ಅಭಿವ್ಯಕ್ತಿಯನ್ನು ಓದುತ್ತೇವೆ. ಅಲ್ಲಿ ಅಬ್ರಹಾಮನು ತನ್ನ ಸೇವಕನನ್ನು, ಅವನು ಅಬ್ರಹಾಮನ ಸಂಬಂಧಿಕರಿರುವ ದೇಶಕ್ಕೆ ಹೋಗಿ ತನ್ನ ಮಗನಾದ ಇಸಾಕನಿಗೆ ಪತ್ನಿಯನ್ನು ಹುಡುಕುವಂತೆ ನೇಮಿಸಿದ ವೃತ್ತಾಂತವಿದೆ. (ವಚನಗಳು 2-4) ನೇಮಿಸಲ್ಪಟ್ಟ ಕೆಲಸವು ಕಷ್ಟಕರವಾಗಿದ್ದರೂ, ಯೆಹೋವನ ದೂತನು ಆ ಸೇವಕನನ್ನು ನಡೆಸುವನೆಂಬ ಭರವಸೆ ಅವನಿಗೆ ಕೊಡಲಾಗಿತ್ತು. (ವಚನ 7) ಅಂತಿಮವಾಗಿ ಆ ಸೇವಕನು ‘ನಾಹೋರನು ವಾಸಿಸಿದ ಊರಿನ’ (ಖಾರಾನ್‌ ಅಥವಾ ಅದರ ಸಮೀಪದಲ್ಲಿದ್ದ ಸ್ಥಳ) ಹೊರಗಡೆಯಲ್ಲಿದ್ದ ಬಾವಿಯ ಬಳಿ, ಸ್ತ್ರೀಯರು ನೀರೆಳೆಯಲು ಬರುತ್ತಿದ್ದ ಸಮಯಕ್ಕೆ ಸರಿಯಾಗಿ ತಲಪಿದನು. (ವಚನಗಳು 10, 11) ಸ್ತ್ರೀಯರು ಸಮೀಪಿಸುವುದನ್ನು ನೋಡಿದಾಗ, ತನ್ನ ಉದ್ದೇಶವನ್ನು ನೆರವೇರಿಸುವ ನಿರ್ಣಾಯಕ ಗಳಿಗೆ ಬಂದಿದೆಯೆಂದು ಅವನಿಗೆ ತಿಳಿದಿತ್ತು. ಆದರೆ ಈಕೆಯೇ ಸರಿಯಾದ ಸ್ತ್ರೀ ಎಂದು ಅವನು ಹೇಗೆ ನಿರ್ಣಯಿಸಿಯಾನು?

9 ತನಗೆ ದೈವಿಕ ಸಹಾಯವು ಆವಶ್ಯಕವೆಂಬುದನ್ನು ಮನಗಂಡು, ಅಬ್ರಹಾಮನ ಆ ಸೇವಕನು, “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಅನುಕೂಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು [“ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕೆಂದು,” NW] ಬೇಡುತ್ತೇನೆ” ಎಂದು ಪ್ರಾರ್ಥಿಸಿದನು. (ವಚನ 12) ಹಾಗಾದರೆ ಯೆಹೋವನು ಆತನ ಪ್ರೀತಿಪೂರ್ವಕ ದಯೆಯನ್ನು ಹೇಗೆ ವ್ಯಕ್ತಪಡಿಸಿದನು? ದೇವರು ಆರಿಸಿದ ಆ ಯುವ ಸ್ತ್ರೀಯನ್ನು ಗುರುತಿಸಲು ಆ ಸೇವಕನು ಒಂದು ನಿರ್ದಿಷ್ಟ ಸೂಚನೆಗಾಗಿ ಕೇಳಿಕೊಂಡನು. (ವಚನಗಳು 13, 14) ಒಬ್ಬಾಕೆ ಸ್ತ್ರೀ ಅವನು ಯೆಹೋವನೊಂದಿಗೆ ಏನು ಕೇಳಿಕೊಂಡನೊ ಅದನ್ನೇ ನಿಷ್ಕೃಷ್ಟವಾಗಿ ಮಾಡಿದಳು. ಅವನ ಪ್ರಾರ್ಥನೆಯು ಅವಳಿಗೆ ಕೇಳಿಸಿತ್ತೊ ಎಂಬಂತೆ ಆಕೆ ವರ್ತಿಸಿದಳು. ಇದರಿಂದ ಆಶ್ಚರ್ಯಗೊಂಡ ಆ ಸೇವಕನು, “ಏನೂ ಮಾತಾಡದೆ ಆಕೆಯನ್ನು ದೃಷ್ಟಿಸಿ” ನೋಡಿದನು. ಆದರೂ, ಇನ್ನು ಕೆಲವು ಮಹತ್ವದ ನಿಜತ್ವಗಳನ್ನು ನಿರ್ಣಯಿಸಬೇಕಾಗಿತ್ತು. ಈ ಸುಂದರಿಯು ಅಬ್ರಹಾಮನ ಸಂಬಂಧಿಯಾಗಿದ್ದಳೊ? ಆಕೆ ಇನ್ನೂ ಅವಿವಾಹಿತಳಾಗಿದ್ದಳೊ? ಈ ಕಾರಣದಿಂದ, ಆ ಸೇವಕನು, “ಯೆಹೋವನು ನನ್ನ ಪ್ರಯಾಣವನ್ನು ಸಫಲಮಾಡಿದನೋ ಇಲ್ಲವೋ ಎಂದು ತಿಳಿಯುವದಕ್ಕಾಗಿ ಕಾದುಕೊಂಡಿದ್ದನು.”​—ವಚನಗಳು 16, 21.

10. ಯೆಹೋವನು ತನ್ನ ದಣಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದ್ದಾನೆಂದು ಅಬ್ರಹಾಮನ ಸೇವಕನು ತೀರ್ಮಾನಿಸಿದ್ದೇಕೆ?

10 ಸ್ವಲ್ಪದರಲ್ಲಿ, ಆ ಯುವತಿಯು, ತಾನು “[ಅಬ್ರಹಾಮನ ಸಹೋದರನಾದ] ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು” ಎಂದು ಗುರುತಿಸಿಕೊಂಡಳು. (ಆದಿಕಾಂಡ 11:26; 24:24) ಯೆಹೋವನು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದಾನೆಂದು ಆ ಕ್ಷಣದಲ್ಲಿ ಆ ಸೇವಕನು ಮನಗಂಡನು. ಇದರಿಂದ ಭಾವಪರವಶನಾಗಿ, ಅವನು ತಲೆತಗ್ಗಿಸಿ ಹೇಳಿದ್ದು: “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಪ್ರೀತಿಯನ್ನೂ [“ಪ್ರೀತಿಪೂರ್ವಕ ದಯೆಯನ್ನೂ,” NW] ಸತ್ಯತೆಯನ್ನೂ ನನ್ನ ದಣಿಯಿಂದ ತೆಗೆಯಲಿಲ್ಲ; ನನ್ನನ್ನು ನನ್ನ ದಣಿಯ ಬಂಧುಗಳ ಮನೆಗೆ ನೀಟಾದ ದಾರಿಯಿಂದಲೇ ಕರಕೊಂಡು ಬಂದಿದ್ದಾನೆ.” (ವಚನ 27) ಹೀಗೆ, ಮಾರ್ಗದರ್ಶನವನ್ನು ಕೊಡುವ ಮೂಲಕ ದೇವರು ಆ ಸೇವಕನ ದಣಿಯಾದ ಅಬ್ರಹಾಮನಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು.

ದೇವರ ಪ್ರೀತಿಪೂರ್ವಕ ದಯೆ ಉಪಶಮನ ಮತ್ತು ಸಂರಕ್ಷಣೆಯನ್ನು ಕೊಡುತ್ತದೆ

11, 12. (ಎ) ಯಾವ ಪರೀಕ್ಷೆಗಳಲ್ಲಿ ಯೋಸೇಫನು ಯೆಹೋವನ ಪ್ರೀತಿಪೂರ್ವಕ ದಯೆಯನ್ನು ಅನುಭವಿಸಿದನು? (ಬಿ) ಯೋಸೇಫನ ವಿಷಯದಲ್ಲಿ ದೇವರ ಪ್ರೀತಿಪೂರ್ವಕ ದಯೆಯು ಹೇಗೆ ವ್ಯಕ್ತಪಡಿಸಲ್ಪಟ್ಟಿತು?

11 ಮುಂದಕ್ಕೆ, ಆದಿಕಾಂಡ 39ನೆಯ ಅಧ್ಯಾಯವನ್ನು ನಾವು ಪರಿಗಣಿಸೋಣ. ಇದು, ಐಗುಪ್ತಕ್ಕೆ ದಾಸನಾಗಿ ಮಾರಲ್ಪಟ್ಟಿದ್ದ ಅಬ್ರಹಾಮನ ಮರಿಮಗನಾದ ಯೋಸೇಫನ ಕುರಿತು ಮುಖ್ಯವಾಗಿ ತಿಳಿಸುತ್ತದೆ. ದಾಸನಾಗಿದ್ದರೂ, ‘ಯೆಹೋವನು ಯೋಸೇಫನ ಸಂಗಡ ಇದ್ದನು.’ (ವಚನಗಳು 1, 2) ವಾಸ್ತವದಲ್ಲಿ, ಯೋಸೇಫನ ಐಗುಪ್ತದ ಯಜಮಾನನಾಗಿದ್ದ ಪೋಟೀಫರನು ಸಹ, ಯೆಹೋವನು ಯೋಸೇಫನ ಸಂಗಡ ಇದ್ದಾನೆಂಬ ತೀರ್ಮಾನಕ್ಕೆ ಬಂದನು. (ವಚನ 3) ಆದರೂ, ಯೋಸೇಫನು ಒಂದು ಗಂಭೀರವಾದ ಪರೀಕ್ಷೆಯನ್ನು ಎದುರಿಸಿದನು. ಪೋಟೀಫರನ ಹೆಂಡತಿಯ ಮೇಲೆ ಲೈಂಗಿಕ ಬಲಾತ್ಕಾರ ನಡೆಸಿದನೆಂಬ ಸುಳ್ಳು ಅಪವಾದವು ಅವನ ಮೇಲೆ ಹಾಕಲ್ಪಟ್ಟಾಗ, ಅವನನ್ನು ಸೆರೆಮನೆಗೆ ಹಾಕಲಾಯಿತು. (ವಚನಗಳು 7-20) ಅಲ್ಲಿ ಅವನು ‘ಸೆರೆಯಲ್ಲಿ ಹಾಕಲ್ಪಟ್ಟು,’ “ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು.”​—ಆದಿಕಾಂಡ 40:15; ಕೀರ್ತನೆ 105:18.

12 ವಿಶೇಷವಾಗಿ ಪರೀಕ್ಷಾತ್ಮಕವಾಗಿದ್ದ ಆ ಸಂದರ್ಭದಲ್ಲಿ ಏನು ಸಂಭವಿಸಿತು? “ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆ [“ಪ್ರೀತಿಪೂರ್ವಕ ದಯೆ,” NW]”ಯನ್ನು ತೋರಿಸುತ್ತಾ ಹೋದನು. (ವಚನ 21ಎ) ಪ್ರೀತಿಪೂರ್ವಕ ದಯೆಯ ಒಂದು ನಿರ್ದಿಷ್ಟವಾದ ಕ್ರಿಯೆಯು, ಯೋಸೇಫನು ಅನುಭವಿಸುತ್ತಿದ್ದ ಕಷ್ಟಗಳಿಂದ ಅವನನ್ನು ಪಾರುಗೊಳಿಸಿ, ಉಪಶಮನಕ್ಕೆ ಅವನನ್ನು ನಡೆಸಿದ ಘಟನೆಗಳ ಒಂದು ಸರಣಿಯನ್ನೇ ಆರಂಭಿಸಿತು. ಯೆಹೋವನು ಯೋಸೇಫನಿಗೆ, “ಸೆರೆ ಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.” (ವಚನ 21ಬಿ) ಇದರ ಫಲವಾಗಿ, ಆ ಅಧಿಕಾರಿಯು ಯೋಸೇಫನನ್ನು ಒಂದು ಜವಾಬ್ದಾರಿಯ ಸ್ಥಾನಕ್ಕೆ ನೇಮಿಸಿದನು. (ವಚನ 22) ಆ ಬಳಿಕ, ಅವನನ್ನು ಕ್ರಮೇಣ ಐಗುಪ್ತದ ರಾಜನಾದ ಫರೋಹನ ಗಮನಕ್ಕೆ ಅರ್ಹನನ್ನಾಗಿ ಮಾಡಿದಂಥ ಒಬ್ಬ ಮನುಷ್ಯನನ್ನು ಯೋಸೇಫನು ಭೇಟಿಯಾದನು. (ಆದಿಕಾಂಡ 40:​1-4, 9-15; 41:​9-14) ರಾಜನು ಯೋಸೇಫನನ್ನು ಐಗುಪ್ತ ದೇಶದ ದ್ವಿತೀಯ ಸರ್ವಾಧಿಕಾರಿಯ ಸ್ಥಾನಕ್ಕೇರಿಸಿದನು. ಇದರ ಫಲವಾಗಿ, ಬರಗಾಲಪೀಡಿತ ದೇಶವಾಗಿದ್ದ ಐಗುಪ್ತದಲ್ಲಿ ಜೀವರಕ್ಷಿಸುವ ಕೆಲಸವನ್ನು ಅವನು ಮಾಡುವಂತಾಯಿತು. (ಆದಿಕಾಂಡ 41:​37-55) ಯೋಸೇಫನ ಕಷ್ಟಾನುಭವಗಳು ಅವನು 17 ವರ್ಷ ಪ್ರಾಯದವನಾಗಿದ್ದಾಗ ಆರಂಭಗೊಂಡು, ಹನ್ನೆರಡಕ್ಕೂ ಹೆಚ್ಚು ವರ್ಷಕಾಲ ಮುಂದುವರಿದವು! (ಆದಿಕಾಂಡ 37:​2, 4; 41:46) ಆ ವ್ಯಥೆ ಮತ್ತು ಕ್ಲೇಶ ತುಂಬಿದ ಕಾಲಗಳಲ್ಲೆಲ್ಲ, ಯೆಹೋವ ದೇವರು ಯೋಸೇಫನನ್ನು ವಿಪರೀತವಾದ ವಿಪತ್ತಿನಿಂದ ರಕ್ಷಿಸುವ ಮೂಲಕ ಮತ್ತು ದೈವಿಕ ಉದ್ದೇಶದಲ್ಲಿ ಒಂದು ಸುಯೋಗದ ಪಾತ್ರಕ್ಕಾಗಿ ಅವನು ಬದುಕಿ ಉಳಿಯುವಂತೆ ಮಾಡುವ ಮೂಲಕ ತನ್ನ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು.

ದೇವರ ಪ್ರೀತಿಪೂರ್ವಕ ದಯೆಯು ಎಂದಿಗೂ ವಿಫಲಗೊಳ್ಳುವುದಿಲ್ಲ

13. (ಎ) ಕೀರ್ತನೆ 136ರಲ್ಲಿ ಯೆಹೋವನ ಪ್ರೀತಿಪೂರ್ವಕ ದಯೆಯ ಯಾವ ಅಭಿವ್ಯಕ್ತಿಗಳಿವೆ? (ಬಿ) ಪ್ರೀತಿಪೂರ್ವಕ ದಯೆಯ ಸಹಜ ಗುಣವೇನು?

13 ಯೆಹೋವನು ಇಸ್ರಾಯೇಲ್ಯರಿಗೆ ಒಂದು ಜನಾಂಗದೋಪಾದಿ ಪದೇ ಪದೇ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು. ಕೀರ್ತನೆ 136 ಹೇಳುವಂತೆ, ಆತನು ತನ್ನ ಪ್ರೀತಿಪೂರ್ವಕ ದಯೆಯ ಕಾರಣ ಅವರಿಗೆ ವಿಮೋಚನೆಯನ್ನು (ವಚನಗಳು 10-15), ಮಾರ್ಗದರ್ಶನವನ್ನು (ವಚನ 16), ಮತ್ತು ಸಂರಕ್ಷಣೆಯನ್ನು (ವಚನಗಳು 17-20) ಒದಗಿಸಿದನು. ದೇವರು ತನ್ನ ಪ್ರೀತಿಪೂರ್ವಕ ದಯೆಯನ್ನು ವ್ಯಕ್ತಿಗಳ ಪರವಾಗಿಯೂ ತೋರಿಸಿದ್ದಾನೆ. ಜೊತೆಮಾನವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸುವ ಒಬ್ಬ ವ್ಯಕ್ತಿಯು, ಅವರ ಮಹತ್ವದ ಆವಶ್ಯಕತೆಯನ್ನು ಪೂರೈಸುವ ಉದ್ದೇಶದಿಂದ ಇಷ್ಟಪೂರ್ವಕವಾಗಿ ಮಾಡುವ ಕಾರ್ಯಗಳ ಮೂಲಕ ಅದನ್ನು ತೋರಿಸುತ್ತಾನೆ. ಪ್ರೀತಿಪೂರ್ವಕ ದಯೆಯ ಕುರಿತು, ಒಂದು ಬೈಬಲ್‌ ಸೂಚಿ ಗ್ರಂಥವು ಹೇಳುವುದು: “ಅದು ಜೀವವನ್ನು ಸುರಕ್ಷಿತವಾಗಿ ಇಡುವ ಮತ್ತು ವರ್ಧಿಸುವ ಒಂದು ಕಾರ್ಯವಾಗಿದೆ. ಒಬ್ಬನು ದೌರ್ಭಾಗ್ಯ ಅಥವಾ ಸಂಕಟವನ್ನು ಅನುಭವಿಸುವಾಗ, ಅವನ ಪರವಾಗಿ ಹಸ್ತಕ್ಷೇಪಮಾಡುವ ಕಾರ್ಯವೇ ಅದು.” ಒಬ್ಬ ವಿದ್ವಾಂಸನು ಅದನ್ನು, “ಕ್ರಿಯೆಯಲ್ಲಿ ಪರಿವರ್ತನೆಗೊಂಡ ಪ್ರೀತಿ” ಎಂದು ವರ್ಣಿಸುತ್ತಾನೆ.

14, 15. ಲೋಟನು ದೇವರ ಒಪ್ಪಿಗೆಯನ್ನು ಪಡೆದ ಸೇವಕನಾಗಿದ್ದನೆಂದು ನಾವೇಕೆ ನಿಶ್ಚಯವಾಗಿ ಹೇಳಬಲ್ಲೆವು?

14 ನಾವು ಪರೀಕ್ಷಿಸಿರುವ ಆದಿಕಾಂಡದ ವೃತ್ತಾಂತಗಳು, ಯೆಹೋವನು ತನ್ನನ್ನು ಪ್ರೀತಿಸುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಲು ಎಂದಿಗೂ ತಪ್ಪುವವನಲ್ಲವೆಂದು ತೋರಿಸುತ್ತವೆ. ಲೋಟ, ಅಬ್ರಹಾಮ ಮತ್ತು ಯೋಸೇಫರು ವಿವಿಧ ಪರಿಸ್ಥಿತಿಗಳಡಿಯಲ್ಲಿ ಜೀವಿಸಿ, ಬೇರೆ ಬೇರೆ ಪರೀಕ್ಷೆಗಳನ್ನು ಎದುರಿಸಿದರು. ಅವರು ಅಪರಿಪೂರ್ಣ ಮಾನವರಾಗಿದ್ದರೂ, ಯೆಹೋವನ ಒಪ್ಪಿಗೆಯಿದ್ದ ಸೇವಕರಾಗಿದ್ದರು ಮತ್ತು ಅವರಿಗೆ ದೈವಿಕ ಸಹಾಯದ ಅಗತ್ಯವಿತ್ತು. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಅಂತಹ ವ್ಯಕ್ತಿಗಳ ಕಡೆಗೆ ಪ್ರೀತಿಪೂರ್ವಕ ದಯೆಯನ್ನು ಪ್ರದರ್ಶಿಸುತ್ತಾನೆ ಎಂಬ ವಿಷಯದಲ್ಲಿ ನಾವು ಸಾಂತ್ವನವನ್ನು ಪಡೆಯಬಹುದು.

15 ಕಷ್ಟಗಳಿಗೆ ನಡೆಸಿದ ಕೆಲವು ಅವಿವೇಕದ ನಿರ್ಣಯಗಳನ್ನು ಲೋಟನು ಮಾಡಿದನು. (ಆದಿಕಾಂಡ 13:​12, 13; 14:​11, 12) ಆದರೂ ಅವನು ಪ್ರಶಂಸನೀಯ ಗುಣಗಳನ್ನೂ ತೋರಿಸಿದನು. ದೇವದೂತರಲ್ಲಿ ಇಬ್ಬರು ಸೊದೋಮಿಗೆ ಬಂದಾಗ, ಲೋಟನು ಅವರಿಗೆ ಅತಿಥಿ ಸತ್ಕಾರವನ್ನು ತೋರಿಸಿದನು. (ಆದಿಕಾಂಡ 19:​1-3) ಅವನು ನಂಬಿಕೆಯಿಂದ, ತನ್ನ ಅಳಿಯಂದಿರಿಗೆ ಸೊದೋಮಿಗಾಗಲಿದ್ದ ನಾಶನದ ವಿಷಯದಲ್ಲಿ ಎಚ್ಚರಿಸಿದನು. (ಆದಿಕಾಂಡ 19:14) ಲೋಟನ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು 2 ಪೇತ್ರ 2:​7-9ರಲ್ಲಿ ಕಾಣಬಹುದು. ಅಲ್ಲಿ ನಾವು ಹೀಗೆ ಓದುತ್ತೇವೆ: “ಆದರೆ ಆ ಅಧರ್ಮಿಗಳ ನಾಚಿಕೆಗೆಟ್ಟ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು [ಯೆಹೋವನು] ತಪ್ಪಿಸಿದನು. ಆ ನೀತಿವಂತನು ಅವರ ನಡುವೆ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡನು. ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” ಹೌದು, ಲೋಟನು ನೀತಿವಂತನಾಗಿದ್ದನು ಮತ್ತು ಇಲ್ಲಿಯ ವಾಕ್ಯರಚನೆಯು ಅವನು ದೇವಭಕ್ತಿಯ ಮನುಷ್ಯನಾಗಿದ್ದನೆಂದು ಸೂಚಿಸುತ್ತದೆ. ಅವನಂತೆ ನಾವೂ, “ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿ” ಇರುವಲ್ಲಿ, ದೇವರ ಪ್ರೀತಿಪೂರ್ವಕ ದಯೆಯನ್ನು ಅನುಭವಿಸುತ್ತೇವೆ.​—2 ಪೇತ್ರ 3:11, 12.

16. ಅಬ್ರಹಾಮ ಮತ್ತು ಯೋಸೇಫರ ಕುರಿತು ಯಾವ ಪ್ರಶಂಸನೀಯ ಪದಗಳಲ್ಲಿ ಬೈಬಲ್‌ ಮಾತಾಡುತ್ತದೆ?

16ಆದಿಕಾಂಡ 24ನೆಯ ಅಧ್ಯಾಯದಲ್ಲಿರುವ ವೃತ್ತಾಂತವು ಅಬ್ರಹಾಮನಿಗೆ ಯೆಹೋವನೊಂದಿಗೆ ನಿಕಟವಾದ ಸಂಬಂಧವಿತ್ತೆಂದು ನಿಸ್ಸಂದೇಹವಾಗಿ ತೋರಿಸುತ್ತದೆ. “ಯೆಹೋವನು ಅವನನ್ನು ಸಕಲವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು” ಎನ್ನುತ್ತದೆ ಒಂದನೆಯ ವಚನ. ಅಬ್ರಹಾಮನ ಸೇವಕನು ಯೆಹೋವನನ್ನು, “ನನ್ನ ದಣಿಯಾದ ಅಬ್ರಹಾಮನ ದೇವರು” ಎಂದು ಕರೆದನು. (ವಚನಗಳು 12, 27) ಮತ್ತು ಅಬ್ರಹಾಮನು “ನೀತಿವಂತನೆಂಬ ನಿರ್ಣಯ” ಹೊಂದಿದನೆಂದೂ “ದೇವರ [“ಯೆಹೋವನ,” NW] ಸ್ನೇಹಿತನು” ಎಂದು ಕರೆಯಲ್ಪಟ್ಟನೆಂದೂ ಶಿಷ್ಯ ಯಾಕೋಬನು ಹೇಳುತ್ತಾನೆ. (ಯಾಕೋಬ 2:​21-23) ಯೋಸೇಫನ ವಿಷಯದಲ್ಲಿಯೂ ಇದು ನಿಜವಾಗಿದೆ. ಆದಿಕಾಂಡ 39ನೆಯ ಅಧ್ಯಾಯದಲ್ಲೆಲ್ಲ ಯೆಹೋವ ಮತ್ತು ಯೋಸೇಫರ ಮಧ್ಯೆ ಇದ್ದ ನಿಕಟ ಸಂಬಂಧವನ್ನು ಒತ್ತಿಹೇಳಲಾಗಿದೆ. (ವಚನಗಳು 2, 3, 21, 23) ಇದಲ್ಲದೆ, ಯೋಸೇಫನ ವಿಷಯದಲ್ಲಿ ಶಿಷ್ಯ ಸ್ತೆಫನನು, “ದೇವರು ಅವನ ಸಂಗಡ” ಇದ್ದನೆಂದು ಹೇಳಿದನು.​—ಅ. ಕೃತ್ಯಗಳು 7:10.

17. ಲೋಟ, ಅಬ್ರಹಾಮ ಮತ್ತು ಯೋಸೇಫರ ಮಾದರಿಗಳಿಂದ ನಾವೇನು ಕಲಿತುಕೊಳ್ಳಬಲ್ಲೆವು?

17 ನಾವು ಈಗ ತಾನೇ ಪರಿಗಣಿಸಿರುವ ದೈವಿಕ ಪ್ರೀತಿಪೂರ್ವಕ ದಯೆಯನ್ನು ಪಡೆದಿದ್ದ ವ್ಯಕ್ತಿಗಳು, ಯೆಹೋವ ದೇವರೊಂದಿಗೆ ಉತ್ತಮ ಸಂಬಂಧವಿದ್ದ ವ್ಯಕ್ತಿಗಳೂ ದೈವಿಕ ಉದ್ದೇಶವನ್ನು ವಿವಿಧ ವಿಧಗಳಲ್ಲಿ ಪೂರೈಸಿದವರೂ ಆಗಿದ್ದರು. ಅವರ ಮುಂದೆ ಇದ್ದ ತಡೆಗಳನ್ನು ಅವರಾಗಿಯೇ ಜಯಿಸಲು ಸಾಧ್ಯವಿರಲಿಲ್ಲ. ಲೋಟನ ಜೀವವನ್ನು ಸಂರಕ್ಷಿಸುವುದು, ಅಬ್ರಹಾಮನ ವಂಶವನ್ನು ಮುಂದುವರಿಸುವುದು ಮತ್ತು ಯೋಸೇಫನ ಪಾತ್ರವನ್ನು ಕಾಪಾಡುವಂಥ ಸಂಗತಿಗಳು ಅಪಾಯಕ್ಕೊಳಗಾಗಿದ್ದವು. ಈ ದೈವಭಕ್ತಿಯ ಜನರ ಆವಶ್ಯಕತೆಯನ್ನು ಪೂರೈಸಲು ಸಾಧ್ಯವಿದ್ದವನು ಯೆಹೋವನೊಬ್ಬನೇ ಆಗಿದ್ದನು ಮತ್ತು ಆತನು ತನ್ನ ಪ್ರೀತಿಪೂರ್ವಕ ದಯಾಕಾರ್ಯಗಳ ಮೂಲಕ ಹಸ್ತಕ್ಷೇಪಮಾಡುತ್ತ ಅದನ್ನೇ ಮಾಡಿರುತ್ತಾನೆ. ನಾವು ಯೆಹೋವನ ಪ್ರೀತಿಪೂರ್ವಕ ದಯೆಯನ್ನು ಅನಂತವಾಗಿ ಅನುಭವಿಸಬೇಕಾದರೆ, ನಮಗೂ ಆತನೊಂದಿಗೆ ನಿಕಟವಾದ ವೈಯಕ್ತಿಕ ಸಂಬಂಧವಿರತಕ್ಕದ್ದು ಮತ್ತು ನಾವು ಆತನ ಚಿತ್ತವನ್ನು ಮಾಡುತ್ತ ಮುಂದುವರಿಯತಕ್ಕದ್ದು.​—ಎಜ್ರ 7:28; ಕೀರ್ತನೆ 18:50.

ದೇವರ ಸೇವಕರು ಅನುಗ್ರಹಕ್ಕೊಳಗಾಗಿದ್ದಾರೆ

18. ಯೆಹೋವನ ಪ್ರೀತಿಪೂರ್ವಕ ದಯೆಯ ಬಗ್ಗೆ ಬೈಬಲಿನ ವಿವಿಧ ವಚನಗಳು ಏನು ಸೂಚಿಸುತ್ತವೆ?

18 ಯೆಹೋವನ ಪ್ರೀತಿಪೂರ್ವಕ ದಯೆಯಿಂದ “ಭೂಲೋಕವು . . . ಪೂರ್ಣವಾಗಿದೆ,” ಮತ್ತು ನಾವಿದಕ್ಕೆ ಎಷ್ಟು ಕೃತಜ್ಞರು! (ಕೀರ್ತನೆ 119:64) ನಾವು ಕೀರ್ತನೆಗಾರನ ಈ ಪಲ್ಲವಿಗೆ ಪೂರ್ಣಹೃದಯದ ಪ್ರತಿವರ್ತನೆಯನ್ನು ತೋರಿಸುತ್ತೇವೆ: “ಅವರು ಯೆಹೋವನ ಕೃಪೆ [“ಪ್ರೀತಿಪೂರ್ವಕ ದಯೆ,” NW]ಗೋಸ್ಕರವೂ ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ.” (ಕೀರ್ತನೆ 107:8, 15, 21, 31) ಯೆಹೋವನು ತನ್ನ ಪ್ರೀತಿಪೂರ್ವಕ ದಯೆಯನ್ನು, ವ್ಯಕ್ತಿಗತವಾಗಿ ಅಥವಾ ಗುಂಪಿನೋಪಾದಿ ತನ್ನ ಒಪ್ಪಿಗೆಯನ್ನು ಪಡೆದಿರುವ ಸೇವಕರಿಗೆ ತೋರಿಸುತ್ತಾನೆ. ಪ್ರವಾದಿ ದಾನಿಯೇಲನು ಪ್ರಾರ್ಥನೆಯಲ್ಲಿ ಯೆಹೋವನನ್ನು, “ಮಹೋನ್ನತನೂ ಭಯಂಕರನೂ ಆದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನ [“ಪ್ರೀತಿಪೂರ್ವಕ ದಯೆ,” NW]ಗಳನ್ನು ನೆರವೇರಿಸುವವನೇ,” ಎಂದು ಸಂಬೋಧಿಸಿದನು. (ದಾನಿಯೇಲ 9:4) ದಾವೀದ ರಾಜನು ಪ್ರಾರ್ಥಿಸಿದ್ದು: “ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿ [“ಪ್ರೀತಿಪೂರ್ವಕ ದಯೆ,” NW]ಯನ್ನು ಯಾವಾಗಲೂ ದಯಪಾಲಿಸು.” (ಕೀರ್ತನೆ 36:10) ಯೆಹೋವನು ಪ್ರೀತಿಪೂರ್ವಕ ದಯೆಯನ್ನು ತನ್ನ ಸೇವಕರಿಗೆ ವ್ಯಕ್ತಪಡಿಸುವ ವಿಷಯಕ್ಕೆ ನಾವೆಷ್ಟು ಕೃತಜ್ಞರಾಗಿರುತ್ತೇವೆ!​—1 ಅರಸುಗಳು 8:23; 1 ಪೂರ್ವಕಾಲವೃತ್ತಾಂತ 17:13.

19. ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸುವೆವು?

19 ನಿಜ, ಯೆಹೋವನ ಜನರೋಪಾದಿ ನಾವು ಅನುಗ್ರಹಪಾತ್ರರಾಗಿದ್ದೇವೆ! ದೇವರು ಮಾನವಕುಲಕ್ಕೆ ಸಾಮಾನ್ಯವಾಗಿ ತೋರಿಸಿರುವ ಪ್ರೀತಿಯ ಕಾರಣ ನಾವು ಪ್ರಯೋಜನ ಪಡೆಯುವುದಲ್ಲದೆ, ನಾವು ನಮ್ಮ ದೇವರ ಪ್ರೀತಿಪೂರ್ವಕ ದಯೆಯಿಂದ ಅಥವಾ ನಿಷ್ಠೆಯುಳ್ಳ ಪ್ರೀತಿಯಿಂದ ಬರುವ ವಿಶೇಷ ಆಶೀರ್ವಾದಗಳನ್ನು ಅನುಭವಿಸುತ್ತೇವೆ. (ಯೋಹಾನ 3:16) ವಿಶೇಷವಾಗಿ ಕಷ್ಟಗಳ ಸಮಯದಲ್ಲಿ ನಾವು ಯೆಹೋವನ ಈ ಅಮೂಲ್ಯ ಗುಣದಿಂದ ಪ್ರಯೋಜನ ಪಡೆಯುತ್ತೇವೆ. (ಕೀರ್ತನೆ 36:7) ಆದರೆ ಯೆಹೋವ ದೇವರ ಪ್ರೀತಿಪೂರ್ವಕ ದಯೆಯನ್ನು ನಾವು ಹೇಗೆ ಅನುಕರಿಸಬಲ್ಲೆವು? ನಾವು ವ್ಯಕ್ತಿಪರವಾಗಿ ಈ ಗಮನಾರ್ಹವಾದ ಗುಣವನ್ನು ತೋರಿಸುತ್ತೇವೊ? ಇವನ್ನು ಮತ್ತು ಸಂಬಂಧಿತ ಪ್ರಶ್ನೆಗಳನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸುವೆವು.

ನಿಮಗೆ ಜ್ಞಾಪಕವಿದೆಯೆ?

• “ಪ್ರೀತಿಪೂರ್ವಕ ದಯೆ”ಗೆ ಬದಲಿ ಶಾಸ್ತ್ರೀಯ ಪದವು ಯಾವುದು?

• ಪ್ರೀತಿಪೂರ್ವಕ ದಯೆಯು, ಪ್ರೀತಿ ಮತ್ತು ನಿಷ್ಠೆಗಿಂತ ಭಿನ್ನವಾಗಿರುವುದು ಹೇಗೆ?

• ಯೆಹೋವನು ಯಾವ ವಿಧಗಳಲ್ಲಿ ಲೋಟನಿಗೆ, ಅಬ್ರಹಾಮನಿಗೆ ಮತ್ತು ಯೋಸೇಫನಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು?

• ಪ್ರೀತಿಪೂರ್ವಕ ದಯೆಯ ಸಂಬಂಧದಲ್ಲಿ ಯೆಹೋವನ ಗತ ಅಭಿವ್ಯಕ್ತಿಗಳಿಂದ ನಾವು ಯಾವ ಆಶ್ವಾಸನೆಯನ್ನು ಪಡೆಯಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ದೇವರು ಲೋಟನಿಗೆ ಹೇಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನೆಂದು ನಿಮಗೆ ತಿಳಿದಿದೆಯೆ?

[ಪುಟ 15ರಲ್ಲಿರುವ ಚಿತ್ರಗಳು]

ಯೆಹೋವನು ತನ್ನ ಪ್ರೀತಿಪೂರ್ವಕ ದಯೆಯಿಂದ ಅಬ್ರಹಾಮನ ಸೇವಕನನ್ನು ನಡೆಸಿದನು

[ಪುಟ 16ರಲ್ಲಿರುವ ಚಿತ್ರಗಳು]

ಯೋಸೇಫನನ್ನು ಸಂರಕ್ಷಿಸುವ ಮೂಲಕ ಯೆಹೋವನು ಪ್ರೀತಿಪೂರ್ವಕ ದಯೆಯನ್ನು ವ್ಯಕ್ತಪಡಿಸಿದನು