ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಬ್ಬ ಸತ್ಕ್ರೈಸ್ತನು ಒಂದು ಶವಸಂಸ್ಕಾರಕ್ಕೆ ಅಥವಾ ಮದುವೆಗೆ ಚರ್ಚ್‌ನಲ್ಲಿ ಹಾಜರಿರುವುದು ಸೂಕ್ತವೊ?

ಸುಳ್ಳು ಧರ್ಮದ ಯಾವುದೇ ರೂಪದಲ್ಲಿ ಭಾಗವಹಿಸುವುದು, ಯೆಹೋವನನ್ನು ಅಸಮಾಧಾನಪಡಿಸುತ್ತದೆ ಮತ್ತು ಅದರಿಂದ ದೂರವಿರತಕ್ಕದ್ದು. (2 ಕೊರಿಂಥ 6:​14-17; ಪ್ರಕಟನೆ 18:4) ಚರ್ಚ್‌ನಲ್ಲಿ ನಡೆಯುವ ಶವಸಂಸ್ಕಾರವು ಧಾರ್ಮಿಕ ಆರಾಧನೆಯಾಗಿದ್ದು, ಅದರಲ್ಲಿ ಪ್ರಾಯಶಃ ಆತ್ಮದ ಅಮರತ್ವದಂತಹ ಮತ್ತು ಒಳ್ಳೆಯವರಿಗೆ ಸ್ವರ್ಗೀಯ ಬಹುಮಾನದಂತಹ ಅಶಾಸ್ತ್ರೀಯ ವಿಚಾರಗಳನ್ನು ಸಮರ್ಥಿಸುವಂತಹ ಭಾಷಣಗಳಿರುತ್ತವೆ. ಅದರಲ್ಲಿ ಶಿಲುಬೆಯ ಚಿಹ್ನೆಯನ್ನು ನಟಿಸಿ ತೋರಿಸುವ ಮತ್ತು ಪಾದ್ರಿಯೊಂದಿಗೆ ಪ್ರಾರ್ಥನೆಯಲ್ಲಿ ಭಾಗಿಯಾಗುವ ಪದ್ಧತಿಗಳೂ ಇರಬಹುದು. ಬೈಬಲ್‌ ಬೋಧನೆಗೆ ವ್ಯತಿರಿಕ್ತವಾಗಿರುವ ಪ್ರಾರ್ಥನೆಗಳು ಮತ್ತು ಧಾರ್ಮಿಕ ಆಚಾರಗಳು, ಚರ್ಚ್‌ನಲ್ಲಿ ಇಲ್ಲವೆ ಬೇರೆಲ್ಲೊ ನಡೆಯುವ ಧಾರ್ಮಿಕ ವಿವಾಹ ಸಮಾರಂಭದಲ್ಲಿಯೂ ಇರಬಹುದು. ಎಲ್ಲರೂ ಸುಳ್ಳು ಧರ್ಮದ ಆಚಾರಗಳಲ್ಲಿ ಭಾಗವಹಿಸುತ್ತಿರುವಾಗ ಆ ಗುಂಪಿನಲ್ಲಿರುವುದಾದರೆ, ಅದರಲ್ಲಿ ಭಾಗವಹಿಸುವ ಒತ್ತಡವನ್ನು ತಡೆಯಲು ನಮಗೆ ಕಷ್ಟವಾಗಬಹುದು. ಆದುದರಿಂದ, ಅಂತಹ ಒತ್ತಡಕ್ಕೆ ನಮ್ಮನ್ನು ಒಡ್ಡಿಕೊಳ್ಳುವುದು ಎಂತಹ ಅವಿವೇಕದ ವಿಷಯ!

ಆದರೆ, ಚರ್ಚ್‌ನಲ್ಲಿ ನಡೆಯುವ ಶವಸಂಸ್ಕಾರ ಇಲ್ಲವೆ ವಿವಾಹಕ್ಕೆ ಹೋಗುವ ಬದ್ಧತೆ ಒಬ್ಬನಿಗೆ ಇದೆಯೆಂದು ಅವನು ನೆನಸುವಲ್ಲಿ ಏನು ಮಾಡಬಹುದು? ಉದಾಹರಣೆಗೆ, ಅವಿಶ್ವಾಸಿಯಾದ ಪತಿಯು ತನ್ನ ಪತ್ನಿಯನ್ನು ಅಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವಂತೆ ಪ್ರೋತ್ಸಾಹಿಸುವುದಾದರೆ ಆಗೇನು? ಕೇವಲ ಮೂಕ ಪ್ರೇಕ್ಷಕಿಯಂತೆ ಆಕೆ ಅವನೊಂದಿಗೆ ಇರಬಹುದೊ? ತನ್ನ ಪತಿಯ ಅಪೇಕ್ಷೆಯನ್ನು ಗೌರವಿಸುತ್ತ, ಆದರೆ ಯಾವುದೇ ಧಾರ್ಮಿಕ ಆಚಾರಗಳಲ್ಲಿ ಭಾಗವಹಿಸುವುದಿಲ್ಲವೆಂದು ದೃಢನಿಶ್ಚಯದಿಂದಿರುತ್ತ ಆಕೆ ಅಲ್ಲಿಗೆ ಹೋಗಲು ಮನಸ್ಸುಮಾಡಬಹುದು. ಅದೇ ಸಮಯದಲ್ಲಿ, ಅಲ್ಲಿಯ ಆಗುಹೋಗುಗಳಿಂದ ಬರುವ ಭಾವಪೂರಿತ ಒತ್ತಡವನ್ನು ತನಗೆ ಸಹಿಸಲು ಸಾಧ್ಯವಾಗದೆ, ದೈವಿಕ ಸೂತ್ರಗಳ ವಿಷಯದಲ್ಲಿ ತಾನು ರಾಜಿಮಾಡಿಕೊಂಡೇನು ಎಂಬ ಚಿಂತೆಯುಳ್ಳವಳಾಗಿ ಆಕೆ ಹೋಗದಿರಲು ಸಹ ನಿರ್ಣಯಿಸಬಹುದು. ಈ ನಿರ್ಣಯವನ್ನು ಮಾಡಬೇಕಾದವಳು ಆಕೆ. ಆಕೆಯು ಶುದ್ಧಾಂತಃಕರಣವುಳ್ಳವಳಾಗಿ ತನ್ನ ಹೃದಯದಲ್ಲಿ ಖಂಡಿತವಾಗಿಯೂ ನಿರ್ಣಯಿಸಿದವಳಾಗಿರಲು ಬಯಸುವಳು.​—1 ತಿಮೊಥೆಯ 1:19.

ಹೇಗೂ ಇರಲಿ, ಆಕೆ ತನ್ನ ಪತಿಗೆ, ತಾನು ಯಾವುದೇ ಧಾರ್ಮಿಕ ಆಚಾರಗಳಲ್ಲಿ ಶುದ್ಧಾಂತಃಕರಣದಿಂದ ಭಾಗವಹಿಸೆನೆಂದೂ, ಗೀತ ಹಾಡುವುದರಲ್ಲಿ ಅಥವಾ ಪ್ರಾರ್ಥನೆಗೆ ತಲೆ ತಗ್ಗಿಸುವುದರಲ್ಲಿ ಭಾಗವಹಿಸೆನೆಂದೂ ವಿವರಿಸುವುದು ಪ್ರಯೋಜನಕರ. ಆಕೆಯ ವಿವರಣೆಯ ಆಧಾರದ ಮೇರೆಗೆ, ತನ್ನ ಹೆಂಡತಿಯ ಸಮಕ್ಷಮವು ತನಗೆ ಅಹಿತಕರವಾದ ಸನ್ನಿವೇಶವನ್ನು ಉಂಟುಮಾಡೀತೆಂದು ಅವನು ತೀರ್ಮಾನಿಸಬಹುದು. ಮತ್ತು ತನ್ನ ಪತ್ನಿಯ ಮೇಲಣ ಪ್ರೀತಿಯ ಕಾರಣ, ಆಕೆಯ ವಿಶ್ವಾಸಗಳಿಗೆ ಗೌರವ ತೋರಿಸುವ ಕಾರಣ ಇಲ್ಲವೆ ಪೇಚಾಟದ ಸನ್ನಿವೇಶದಿಂದ ತಪ್ಪಿಸಿಕೊಳ್ಳುವ ಕಾರಣ, ಅವನೊಬ್ಬನೇ ಅಲ್ಲಿಗೆ ಹೋಗಲು ನಿರ್ಣಯಿಸಬಹುದು. ಆದರೆ ಆಕೆ ಬರಲೇಬೇಕೆಂದು ಅವನು ಪಟ್ಟುಹಿಡಿಯುವುದಾದರೆ, ಕೇವಲ ಪ್ರೇಕ್ಷಕಿಯಂತೆ ಆಕೆ ಹೋಗಬಹುದು.

ಆದರೆ, ನಾವು ಒಂದು ಧಾರ್ಮಿಕ ಕಟ್ಟಡದಲ್ಲಿ ಆರಾಧನೆಗೆ ಕೂಡಿಬರುವ ವಿಷಯವು ಜೊತೆ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಬಹುದೆಂಬ ವಿಷಯವನ್ನು ಒಬ್ಬನು ಅಲಕ್ಷಿಸಬಾರದು. ಕೆಲವರ ಮನಸ್ಸಾಕ್ಷಿಯನ್ನು ಅದು ಕೆಡಿಸಬಹುದೋ? ವಿಗ್ರಹಾರಾಧನೆಯಲ್ಲಿ ಭಾಗವಹಿಸುವುದರಿಂದ ದೂರವಿರಬೇಕೆಂಬ ಅವರ ನಂಬಿಕೆಯನ್ನು ಅದು ಬಲಹೀನಗೊಳಿಸಬಹುದೋ? ಅಪೊಸ್ತಲ ಪೌಲನು ಸಲಹೆ ನೀಡುವುದು: “ನೀವು ನ್ಯೂನತೆಯಿಲ್ಲದವರಾಗಿ ಕ್ರಿಸ್ತನ ದಿನದಲ್ಲಿ ಇತರರನ್ನು ಮುಗ್ಗರಿಸದಂತೆ ಹೆಚ್ಚು ಪ್ರಮುಖವಾದ ವಿಷಯಗಳು ಯಾವುವೆಂದು ನಿಶ್ಚಯ ಮಾಡಿಕೊಳ್ಳಿರಿ.”​—ಫಿಲಿಪ್ಪಿ 1:​10, NW.

ಅದು ನಿಮ್ಮ ಸಮೀಪಬಂಧುವನ್ನು ಒಳಗೂಡಿರುವ ಸಂದರ್ಭವಾಗಿರುವಲ್ಲಿ, ಇನ್ನೂ ಹೆಚ್ಚಿನ ಕೌಟುಂಬಿಕ ಒತ್ತಡವು ನಿಮ್ಮ ಮೇಲೆ ಬರಬಹುದು. ಆದರೂ, ಕ್ರೈಸ್ತನೊಬ್ಬನು ಸಕಲ ಸಂಗತಿಗಳನ್ನು ತೂಗಿ ನೋಡಬೇಕು. ಕೆಲವು ಪರಿಸ್ಥಿತಿಗಳಲ್ಲಿ, ಅವನೊ ಅವಳೊ, ಚರ್ಚ್‌ ಶವಸಂಸ್ಕಾರಕ್ಕೊ ವಿವಾಹಕ್ಕೊ ಪ್ರೇಕ್ಷಕರಂತೆ ಹೋಗುವುದರಿಂದ ಯಾವುದೇ ಪೇಚಾಟಗಳು ಇರಲಾರವು ಎಂದು ತೀರ್ಮಾನಿಸಬಹುದು. ಆದರೂ, ಹಾಗೆ ಹಾಜರಾಗುವುದರಿಂದ ನಮ್ಮ ಸ್ವಂತ ಮನಸ್ಸಾಕ್ಷಿಗಾಗಬಹುದಾದ ಅಥವಾ ಇತರರಿಗಾಗಬಹುದಾದ ಹಾನಿಯು, ಹಾಗೆ ಹಾಜರಾಗುವುದರಿಂದ ಬರುವ ಪ್ರಯೋಜನಕ್ಕಿಂತ ಎಷ್ಟೋ ಹೆಚ್ಚಾಗಿರಬಹುದು. ಸನ್ನಿವೇಶವು ಯಾವುದೇ ಆಗಿರಲಿ, ತನ್ನ ನಿರ್ಣಯವು ದೇವರ ಮತ್ತು ಮನುಷ್ಯರ ಮುಂದೆ ತನ್ನ ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರಿಂದ ತಡೆಯದಂತೆ ಕ್ರೈಸ್ತನು ನಿಶ್ಚಯ ಮಾಡಿಕೊಳ್ಳಬೇಕು.