ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನಿರೀಕ್ಷಿತ ಸ್ಥಳದಲ್ಲಿ ಸತ್ಯವನ್ನು ಕಂಡುಕೊಳ್ಳುವುದು

ಅನಿರೀಕ್ಷಿತ ಸ್ಥಳದಲ್ಲಿ ಸತ್ಯವನ್ನು ಕಂಡುಕೊಳ್ಳುವುದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಅನಿರೀಕ್ಷಿತ ಸ್ಥಳದಲ್ಲಿ ಸತ್ಯವನ್ನು ಕಂಡುಕೊಳ್ಳುವುದು

“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊಥೆಯ 2:​3, 4) ಈ ಉದ್ದೇಶದಿಂದಲೇ ಯೆಹೋವನ ಸಾಕ್ಷಿಗಳು, ಬೈಬಲ್‌ ಮತ್ತು ಬೈಬಲ್‌ ಅಧ್ಯಯನ ಸಹಾಯಕಗಳ ನೂರಾರು ಪ್ರತಿಗಳನ್ನು ಮುದ್ರಿಸಿದ್ದಾರೆ ಮತ್ತು ವಿತರಿಸಿದ್ದಾರೆ. ಕೆಲವೊಮ್ಮೆ ಈ ಪ್ರಕಾಶನಗಳು, ತೀರ ಅನಿರೀಕ್ಷಿತವಾದ ವಿಧಗಳಲ್ಲಿ ಪ್ರಾಮಾಣಿಕಹೃದಯದ ಜನರು ಸತ್ಯವನ್ನು ಕಲಿಯುವಂತೆ ಸಹಾಯಮಾಡಿವೆ. ಈ ಸಂಬಂಧದಲ್ಲಿ, ಸೀಎರ ಲಿಯೋನ್‌ನ ಫ್ರೀಟೌನ್‌ ಎಂಬಲ್ಲಿನ ರಾಜ್ಯ ಘೋಷಕರು ಈ ಮುಂದಿನ ಅನುಭವವನ್ನು ವರದಿಸಿದರು.

ಓಸ್ಮಾನ್‌ ಎಂಬವನು, ಒಂಬತ್ತು ಮಕ್ಕಳಿದ್ದ ಒಂದು ಕುಟುಂಬದಲ್ಲಿ ಎರಡನೆಯ ಮಗನಾಗಿದ್ದನು. ಅವನು ಒಂದು ಧಾರ್ಮಿಕ ಕುಟುಂಬದಲ್ಲಿ ಬೆಳೆಸಲ್ಪಟ್ಟಿದ್ದು, ಆರಾಧನೆಗಾಗಿ ನಿತ್ಯವೂ ತನ್ನ ತಂದೆಯೊಂದಿಗೆ ಹೋಗುತ್ತಿದ್ದನು. ಆದರೆ ನರಕದ ಬಗ್ಗೆ ತನ್ನ ಧರ್ಮವು ಏನನ್ನು ಕಲಿಸುತ್ತಿತ್ತೊ ಅದರಿಂದ ಓಸ್ಮಾನನಿಗೆ ತುಂಬ ಕಳವಳವಾಗುತ್ತಿತ್ತು. ಒಬ್ಬ ಕರುಣಾಮಯಿ ದೇವರು ದುಷ್ಟ ಜನರನ್ನು ಬೆಂಕಿಯಲ್ಲಿ ಸುಡುವ ಮೂಲಕ ಹೇಗೆ ಚಿತ್ರಹಿಂಸೆ ಕೊಡಬಲ್ಲನೆಂಬುದು ಅವನಿಗೆ ಅರ್ಥವಾಗದ ಸಂಗತಿಯಾಗಿತ್ತು. ಈ ನರಕಾಗ್ನಿಯ ಬೋಧನೆಯನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು ಓಸ್ಮಾನನಿಗೆ ಕೊಡಲಾಗುತ್ತಿದ್ದ ಎಲ್ಲ ವಿವರಣೆಗಳಿಂದ ಅವನಿಗೆ ಸಮಾಧಾನವಾಗಲಿಲ್ಲ.

ಓಸ್ಮಾನನು 20 ವರ್ಷದವನಾಗಿದ್ದಾಗ ಒಂದು ದಿನ, ಒಂದು ಕಸದ ತೊಟ್ಟಿಯಲ್ಲಿದ್ದ ಕಳಪೆಯ ಅಡಿಯಲ್ಲಿ ಒಂದು ನೀಲಿ ಬಣ್ಣದ ಪುಸ್ತಕದ ಅಂಚು ಅವನ ಕಣ್ಣಿಗೆ ಬಿತ್ತು. ಪುಸ್ತಕಗಳೆಂದರೆ ಅವನಿಗೆ ಪಂಚಪ್ರಾಣ. ಆದುದರಿಂದ ಅವನು ಅದನ್ನು ಅಲ್ಲಿಂದ ತೆಗೆದು, ಸ್ವಚ್ಛಗೊಳಿಸಿ ಅನಂತರ ಅದರ ಶೀರ್ಷಿಕೆಯನ್ನು ಗಮನಿಸಿದನು. ಅದು, ನಿತ್ಯ ಜೀವಕ್ಕೆ ನಡಿಸುವ ಸತ್ಯವು * ಎಂದಾಗಿತ್ತು.

‘ಇದು ಯಾವ ಸತ್ಯ?’ ಎಂದು ಓಸ್ಮಾನನು ಯೋಚಿಸಲಾರಂಭಿಸಿದನು. ಓಸ್ಮಾನನ ಕುತೂಹಲವು ಕೆರಳಿಸಲ್ಪಟ್ಟದ್ದರಿಂದ, ಅವನು ಆ ಪುಸ್ತಕವನ್ನು ಮನೆಗೆ ತೆಗೆದುಕೊಂಡುಹೋದನು. ಆ ಇಡೀ ಪುಸ್ತಕವನ್ನು ಓದಿ ಮುಗಿಸುವ ವರೆಗೆ ಅವನು ತನ್ನ ಜಾಗದಿಂದ ಎದ್ದೇಳಲಿಲ್ಲ! ದೇವರಿಗೆ ಯೆಹೋವ ಎಂಬ ಒಂದು ವೈಯಕ್ತಿಕ ಹೆಸರಿದೆ ಎಂಬುದನ್ನು ಕಲಿತು ಅವನೆಷ್ಟು ಸಂತೋಷಪಟ್ಟನು! (ಕೀರ್ತನೆ 83:18) ದೇವರ ಪ್ರಧಾನ ಗುಣವು ಪ್ರೀತಿಯಾಗಿದೆ, ಮತ್ತು ಜನರನ್ನು ಒಂದು ಅಗ್ನಿಕುಂಡದಲ್ಲಿ ಪೀಡಿಸುವ ವಿಚಾರವು ಸಹ ಆತನಿಗೆ ಅಸಹ್ಯಕರವಾದದ್ದಾಗಿದೆ ಎಂಬುದನ್ನೂ ಓಸ್ಮಾನನು ಕಲಿತನು. (ಯೆರೆಮೀಯ 32:25; 1 ಯೋಹಾನ 4:8) ಕೊನೆಗೆ, ಜನರು ಸದಾಕಾಲಕ್ಕೂ ಜೀವಿಸಲು ಶಕ್ತರಾಗಿರುವ ಒಂದು ಭೂಪರದೈಸವನ್ನು ಯೆಹೋವನು ಬೇಗನೆ ತರಲಿದ್ದಾನೆ ಎಂಬ ವಿಷಯವನ್ನು ಓಸ್ಮಾನನು ಓದಿದನು. (ಕೀರ್ತನೆ 37:29; ಪ್ರಕಟನೆ 21:​3, 4) ಒಬ್ಬ ಕರುಣಾಭರಿತ, ಪ್ರೀತಿಯ ದೇವರಿಂದ ಎಂಥ ಅದ್ಭುತಕರವಾದ ಸತ್ಯವು ಕೊಡಲ್ಪಟ್ಟಿದೆ! ಸತ್ಯವನ್ನು ತೀರ ಅನಿರೀಕ್ಷಿತವಾದ ಸ್ಥಳದಲ್ಲಿ ಕಂಡುಹಿಡಿಯುವಂತೆ ಸಾಧ್ಯಮಾಡಿದ್ದಕ್ಕಾಗಿ ಓಸ್ಮಾನನು ಯೆಹೋವನಿಗೆ ಹೃದಯದಾಳದ ಕೃತಜ್ಞತೆಯೊಂದಿಗೆ ಉಪಕಾರ ಸಲ್ಲಿಸಿದನು!

ಕೆಲವು ದಿನಗಳ ನಂತರ, ತನ್ನ ಕೆಲವು ಮಿತ್ರರ ಸಹಾಯದಿಂದ ಓಸ್ಮಾನನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಪತ್ತೆಹಚ್ಚಿದನು ಮತ್ತು ಮೊತ್ತಮೊದಲ ಬಾರಿ ಒಂದು ಕೂಟಕ್ಕೆ ಹಾಜರಾದನು. ಅವನಲ್ಲಿದ್ದಾಗ, ತನ್ನೊಂದಿಗೆ ಬೈಬಲ್‌ ಅಧ್ಯಯನ ಮಾಡುವಂತೆ ಅವನು ಒಬ್ಬ ಸಾಕ್ಷಿಯ ಬಳಿ ಕೇಳಿಕೊಂಡನು. ಕುಟುಂಬದಿಂದ ಬಂದ ವಿಪರೀತವಾದ ವಿರೋಧದ ಎದುರಿನಲ್ಲೂ, ಓಸ್ಮಾನನು ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಹೋದನು ಮತ್ತು ದೀಕ್ಷಾಸ್ನಾನ ಹೊಂದಿದನು. (ಮತ್ತಾಯ 10:36) ಇಂದು ಅವನು ಸಭೆಯಲ್ಲಿ ಒಬ್ಬ ಹಿರಿಯನಾಗಿದ್ದಾನೆ. ಇದೆಲ್ಲವೂ, ಒಂದು ಕಸದ ತೊಟ್ಟಿಯಲ್ಲಿ ಬೈಬಲ್‌ ಪ್ರಕಾಶನವನ್ನು ಕಂಡುಕೊಂಡದ್ದರಿಂದ ಫಲಿಸಿತ್ತೆಂಬುದು ಎಷ್ಟು ಅದ್ಭುತಕರ!

[ಪಾದಟಿಪ್ಪಣಿ]

^ ಪ್ಯಾರ. 5 ಯೆಹೋವನ ಸಾಕ್ಷಿಗಳಿಂದ 1968ರಲ್ಲಿ ಪ್ರಕಾಶಿಸಲ್ಪಟ್ಟದ್ದು.