ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣದ ಬಗ್ಗೆ ಇರುವ ಕೆಲವು ಮಿಥ್ಯಾಕಲ್ಪನೆಗಳತ್ತ ನಿಕಟ ನೋಟ

ಮರಣದ ಬಗ್ಗೆ ಇರುವ ಕೆಲವು ಮಿಥ್ಯಾಕಲ್ಪನೆಗಳತ್ತ ನಿಕಟ ನೋಟ

ಮರಣದ ಬಗ್ಗೆ ಇರುವ ಕೆಲವು ಮಿಥ್ಯಾಕಲ್ಪನೆಗಳತ್ತ ನಿಕಟ ನೋಟ

ಇತಿಹಾಸದಲ್ಲೆಲ್ಲ ಮನುಷ್ಯನು ಮರಣದ ಕರಾಳ ಪ್ರತೀಕ್ಷೆಯ ಮುಂದೆ ತಬ್ಬಿಬ್ಬುಗೊಂಡವನಾಗಿಯೂ ಭಯಭೀತನಾಗಿಯೂ ನಿಂತಿದ್ದಾನೆ. ಅದಲ್ಲದೆ, ಈ ಮರಣಭಯವನ್ನು ಸುಳ್ಳು ಧಾರ್ಮಿಕ ವಿಚಾರಗಳು, ಜನಪ್ರಿಯ ಪದ್ಧತಿಗಳು ಮತ್ತು ಆಳವಾಗಿ ಬೇರುಬಿಟ್ಟಿರುವ ವೈಯಕ್ತಿಕ ವಿಶ್ವಾಸಗಳ ಸಮ್ಮಿಶ್ರಣವು ಉದ್ರೇಕಿಸಿದೆ ಮತ್ತು ಉರಿಸಿದೆ. ಮರಣಭಯದ ಸಂಬಂಧದಲ್ಲಿರುವ ಸಮಸ್ಯೆಯೇನಂದರೆ, ಅದು ಜೀವನವನ್ನು ಆನಂದಿಸುವ ಒಬ್ಬನ ಸಾಮರ್ಥ್ಯವನ್ನು ಸ್ತಂಭಿತಗೊಳಿಸಿ, ಜೀವಕ್ಕೆ ಅರ್ಥವಿದೆ ಎಂಬ ವಿಷಯದಲ್ಲಿ ಒಬ್ಬನಿಗಿರುವ ಭರವಸೆಯನ್ನು ಸವೆಯಿಸುತ್ತದೆ.

ಮರಣದ ಬಗ್ಗೆ ಅನೇಕ ಜನಪ್ರಿಯ ಕಲ್ಪನೆಗಳನ್ನು ಪ್ರವರ್ಧಿಸಿರುವುದಕ್ಕೆ ವಿಶೇಷವಾಗಿ ಜನಪ್ರಿಯ ಧರ್ಮವು ನಿಂದೆಗರ್ಹವಾಗಿದೆ. ಇವುಗಳಲ್ಲಿ ಕೆಲವನ್ನು ಬೈಬಲ್‌ ಸತ್ಯದ ಬೆಳಕಿನಲ್ಲಿ ಪರೀಕ್ಷಿಸುವ ಮೂಲಕ, ಮರಣದ ಬಗ್ಗೆ ನಿಮಗಿರುವ ಕಲ್ಪನೆಗಳು ಸ್ಪಷ್ಟಗೊಳಿಸಲ್ಪಡುವವೊ ಎಂದು ನೋಡಿರಿ.

ಮಿಥ್ಯಾಕಲ್ಪನೆ 1: ಮರಣವು ಜೀವನದ ಸಹಜ ಅಂತ್ಯವಾಗಿದೆ.

“ಮರಣವು . . . ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ” ಎನ್ನುತ್ತದೆ, ಮರಣ​—ಬೆಳವಣಿಗೆಯ ಅಂತಿಮ ಹಂತ (ಇಂಗ್ಲಿಷ್‌) ಎಂಬ ಪುಸ್ತಕ. ಈ ರೀತಿಯ ಹೇಳಿಕೆಗಳು, ಮರಣವು ಸ್ವಾಭಾವಿಕ, ಎಲ್ಲ ಜೀವಿಗಳ ಸಹಜವಾದ ಅಂತ್ಯ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ. ಫಲಿತಾಂಶವಾಗಿ ಇಂತಹ ನಂಬಿಕೆಯು ಶೂನ್ಯ ಸೈದ್ಧಾಂತಿಕ ತತ್ತ್ವಜ್ಞಾನವನ್ನೂ ಅನೇಕರಲ್ಲಿ ಸ್ವಾರ್ಥಸಾಧಕ ವರ್ತನೆಯನ್ನೂ ಪೋಷಿಸಿದೆ.

ಆದರೆ ಮರಣವು ಜೀವನದ ಸಹಜ ಅಂತ್ಯವಾಗಿರುವುದು ನಿಜವೊ? ಸಂಶೋಧಕರಲ್ಲಿ ಎಲ್ಲರೂ ಇದನ್ನು ನಂಬುವುದಿಲ್ಲ. ಉದಾಹರಣೆಗೆ, ಮಾನವ ವಯಸ್ಸಾಗುವಿಕೆಯನ್ನು ಅಧ್ಯಯನ ಮಾಡುವ ಜೀವಶಾಸ್ತ್ರಜ್ಞರಾದ ಕ್ಯಾಲ್ವಿನ್‌ ಹಾರ್ಲೀ, ಒಂದು ಪತ್ರಿಕಾಭೇಟಿಯಲ್ಲಿ, ಮನುಷ್ಯರಲ್ಲಿ “ಸಾಯಲು ಒಂದು ಕಾರ್ಯಕ್ರಮವಿದೆ” ಎಂಬ ವಿಷಯವನ್ನು ತಾವು ನಂಬುವುದಿಲ್ಲವೆಂದು ಹೇಳಿದರು. ಪ್ರತಿರಕ್ಷಾ ಶಾಸ್ತ್ರಜ್ಞ ವಿಲ್ಯಮ್‌ ಕ್ಲಾರ್ಕ್‌ ಹೇಳಿದ್ದು: “ಮರಣವು ಜೀವದ ನಿರೂಪಣೆಯೊಂದಿಗೆ ಬಿಡಿಸಲಾಗದಂಥ ರೀತಿಯಲ್ಲಿ ಹೆಣೆದುಕೊಂಡಿರುವುದಿಲ್ಲ.” ಮತ್ತು ಕ್ಯಾಲಿಫೊರ್ನಿಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸೀಮೂರ್‌ ಬೆನ್ಸರ್‌ ಚಿಂತಿಸುವುದು: “ವಯಸ್ಸಾಗುವಿಕೆಯನ್ನು ಒಂದು ಗಡಿಯಾರವಾಗಿಯಲ್ಲ, ಬದಲಾಗಿ ನಾವು ಪರಿಷ್ಕರಿಸಲು ನಿರೀಕ್ಷಿಸಸಾಧ್ಯವಿರುವ ಒಂದು ದೃಶ್ಯ ವಿವರವಾಗಿ ಉತ್ತಮವಾಗಿ ವರ್ಣಿಸಬಹುದು.”

ವಿಜ್ಞಾನಿಗಳು ಮಾನವರ ರಚನೆಯನ್ನು ಅಧ್ಯಯನ ಮಾಡುವಾಗ ಬೆರಗಾಗುತ್ತಾರೆ. ನಮ್ಮ 70-80 ವರ್ಷಗಳ ಆಯುಷ್ಕಾಲಕ್ಕೆ ಬೇಕಾಗುವುದಕ್ಕಿಂತಲೂ ಎಷ್ಟೋ ಹೆಚ್ಚಿನ ಸಂಪನ್ಮೂಲಗಳೂ ಸಾಮರ್ಥ್ಯಗಳೂ ನಮಗೆ ಕೊಡಲ್ಪಟ್ಟಿವೆಯೆಂದು ಅವರು ಕಂಡುಹಿಡಿಯುತ್ತಾರೆ. ಉದಾಹರಣೆಗೆ, ಮಾನವ ಮಿದುಳಿಗೆ ಭಾರಿ ಜ್ಞಾಪಕಶಕ್ತಿಯ ಸಾಮರ್ಥ್ಯವಿದೆಯೆಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನಮ್ಮ ಮಿದುಳಿನಲ್ಲಿ, “ಲೋಕದ ಅತಿ ದೊಡ್ಡ ಪುಸ್ತಕ ಸಂಗ್ರಹಾಲಯಗಳಲ್ಲಿರುವಷ್ಟು ಮಾಹಿತಿಯನ್ನು, ಅಂದರೆ ಸುಮಾರು ಎರಡು ಕೋಟಿ ಸಂಪುಟಗಳಲ್ಲಿರುವ” ಮಾಹಿತಿಯಷ್ಟನ್ನು ತುಂಬಿಸಬಹುದೆಂದು ಅವರು ಲೆಕ್ಕಹಾಕಿದರು. ಕೆಲವು ಮಂದಿ ನರವಿಜ್ಞಾನಿಗಳು ಲೆಕ್ಕ ಹಾಕುವುದೇನಂದರೆ, ಒಬ್ಬನ ಸರಾಸರಿ ಆಯುಷ್ಕಾಲದಲ್ಲಿ ಅವನು ತನ್ನ ಮಿದುಳಿಗಿರುವ ಸಾಮರ್ಥ್ಯದಲ್ಲಿ 1 ಪ್ರತಿಶತದ ಕೇವಲ 1/100 (.0001)ನ್ನು ಉಪಯೋಗಿಸುತ್ತಾನೆ. ಹಾಗಾದರೆ, ಹೀಗೆ ಕೇಳುವುದು ಉಚಿತ: ‘ಸರಾಸರಿ ಆಯುಷ್ಕಾಲದಲ್ಲಿ ಒಂದು ಅತಿ ಚಿಕ್ಕ ಅಂಶವನ್ನು ಮಾತ್ರ ನಾವು ಉಪಯೋಗಿಸುವುದರಿಂದ, ಅಷ್ಟು ವಿಸ್ತಾರವಾದ ಸಾಮರ್ಥ್ಯವಿರುವ ಮಿದುಳು ನಮಗೆ ಏಕಿದೆ?’

ಮನುಷ್ಯರು ಮರಣಕ್ಕೆ ಪ್ರತಿವರ್ತಿಸುವ ಅಸ್ವಾಭಾವಿಕವಾದ ವಿಧದ ಕುರಿತೂ ಚಿಂತಿಸಿರಿ! ಹೆಚ್ಚಿನ ಜನರಿಗೆ ಹೆಂಡತಿಯ, ಗಂಡನ ಅಥವಾ ಮಗುವಿನ ಮರಣವು ಜೀವಮಾನದ ಅತ್ಯಂತ ಹೆಚ್ಚಿನ ಮನಕ್ಷೋಭೆಯನ್ನು ಹುಟ್ಟಿಸುವ ಅನುಭವವಾಗಿರುತ್ತದೆ. ಅತಿ ಪ್ರಿಯನಾಗಿದ್ದ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಾಗ ಜನರ ಇಡೀ ಭಾವಾತ್ಮಕ ವ್ಯವಸ್ಥೆಯು ಅನೇಕವೇಳೆ ಬಹಳ ಸಮಯದ ವರೆಗೆ ತಲೆಕೆಳಗಾಗಿ ಹೋಗುತ್ತದೆ. ಮರಣವು ಮಾನವರಿಗೆ ಸಹಜವೆಂದು ವಾದಿಸುವವರಿಗೂ, ತಮ್ಮ ಸ್ವಂತ ಮರಣವು ಎಲ್ಲವನ್ನು ಅಂತ್ಯಗೊಳಿಸುತ್ತದೆಂಬ ವಿಚಾರವನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌, “ಸಾಧ್ಯವಾಗುವಷ್ಟು ದೀರ್ಘಕಾಲ ಜೀವಿಸಲು ಪ್ರತಿಯೊಬ್ಬನೂ ಬಯಸುವುದರ ಸಾಮಾನ್ಯ ಪ್ರವೀಣ ಪೂರ್ವಭಾವನೆ”ಯ ಕುರಿತು ಮಾತಾಡಿತು.

ಮನುಷ್ಯನು ಮರಣಕ್ಕೆ ತೋರಿಸುವ ಸಾಮಾನ್ಯ ಪ್ರತಿಕ್ರಿಯೆ, ಜ್ಞಾಪಕದಲ್ಲಿಡುವ ಮತ್ತು ಕಲಿಯಲು ಅವನಿಗಿರುವ ಬೆರಗಾಗಿಸುವ ಸಾಮರ್ಥ್ಯ ಮತ್ತು ಅನಂತಕಾಲದ ಜೀವನಕ್ಕೆ ಅವನಲ್ಲಿರುವ ಆಂತರಿಕ ಹಾರೈಕೆ​—ಇವೆಲ್ಲ ಅವನನ್ನು ಜೀವಿಸಲಿಕ್ಕಾಗಿಯೇ ರಚಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲವೇ? ಹೌದು, ದೇವರು ಮನುಷ್ಯರನ್ನು ಸೃಷ್ಟಿಸಿದ್ದು ಸ್ವಾಭಾವಿಕವಾಗಿ ಸಾಯಲಿಕ್ಕಲ್ಲ, ಬದಲಾಗಿ ಅನಿಶ್ಚಿತ ಕಾಲ ಜೀವಿಸುವ ದೃಷ್ಟಿಯಿಂದಲೇ. ದೇವರು ಪ್ರಥಮ ಮಾನವಜೊತೆಯ ಮುಂದಿಟ್ಟ ಭವಿಷ್ಯವನ್ನು ಗಮನಿಸಿರಿ: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಅದೆಷ್ಟು ಅದ್ಭುತಕರವಾದ, ಅನಂತವಾದ ಭವಿಷ್ಯವಾಗಿದೆ!

ಮಿಥ್ಯಾಕಲ್ಪನೆ 2: ಮರಣದ ಮೂಲಕ ದೇವರು ಜನರನ್ನು ತನ್ನೊಂದಿಗಿರಿಸಿಕೊಳ್ಳಲು ಒಯ್ಯುತ್ತಾನೆ.

ತನ್ನ ಮೂವರು ಮಕ್ಕಳನ್ನು ಅಗಲಿಹೋಗಲಿದ್ದ, ಮರಣ ಶಯ್ಯೆಯಲ್ಲಿದ್ದ 27 ವರುಷ ಪ್ರಾಯದ ಒಬ್ಬ ತಾಯಿಯು ಕ್ಯಾಥೊಲಿಕ್‌ ನನ್‌ಗೆ ಹೇಳಿದ್ದು: “ಒಳಗೆ ಬಂದು ಇದು ನನಗಾಗಿ ದೇವರ ಚಿತ್ತವಾಗಿದೆಯೆಂದು ಹೇಳಬೇಡಿ. . . . ಯಾರಾದರೂ ಹಾಗೆ ಹೇಳುವುದನ್ನು ಕೇಳಲು ನನಗೆ ಒಂದಿಷ್ಟೂ ಇಷ್ಟವಿಲ್ಲ.” ಆದರೂ, ಅನೇಕ ಧರ್ಮಗಳು ಮರಣದ ವಿಷಯದಲ್ಲಿ ಅದನ್ನೇ, ಅಂದರೆ ದೇವರು ಜನರನ್ನು ತನ್ನ ಬಳಿ ಇರಿಸಿಕೊಳ್ಳಲಿಕ್ಕಾಗಿ ಕೊಂಡೊಯ್ಯುತ್ತಾನೆಂದು ಕಲಿಸುತ್ತವೆ.

ಹಾಗಾದರೆ, ಮರಣವು ನಮ್ಮ ಎದೆಯೊಡೆಯುತ್ತದೆಂಬುದನ್ನು ತಿಳಿದಿದ್ದರೂ, ನಿರ್ದಯತೆಯಿಂದ ಮರಣವನ್ನು ಬರಮಾಡಿಸಲು ಸೃಷ್ಟಿಕರ್ತನು ಅಷ್ಟು ಕ್ರೂರಿಯೊ? ಇಲ್ಲ, ಬೈಬಲಿನ ದೇವರು ಹಾಗಿರುವುದಿಲ್ಲ. “ದೇವರು ಪ್ರೀತಿಸ್ವರೂಪಿಯು,” ಎನ್ನುತ್ತದೆ 1 ಯೋಹಾನ 4:8. ದೇವರಲ್ಲಿ ಪ್ರೀತಿ ಇದೆ ಎಂದಾಗಲಿ ದೇವರು ಪ್ರೀತಿಸುವವನು ಎಂದಾಗಲಿ ಅಲ್ಲಿ ಹೇಳದೆ, ದೇವರು ಪ್ರೀತಿ ಆಗಿದ್ದಾನೆ ಎಂದು ಹೇಳುವುದನ್ನು ಗಮನಿಸಿರಿ. ದೇವರ ಪ್ರೀತಿಯು ಎಷ್ಟು ತೀಕ್ಷ್ಣ, ಎಷ್ಟು ನಿರ್ಮಲ, ಎಷ್ಟು ಪರಿಪೂರ್ಣವಾಗಿದೆಯೆಂದರೆ, ಅದು ಆತನ ವ್ಯಕ್ತಿತ್ವವನ್ನು ಮತ್ತು ಕ್ರಿಯೆಯನ್ನು ಎಷ್ಟು ಪೂರ್ತಿಯಾಗಿ ವ್ಯಾಪಿಸಿದೆಯೆಂದರೆ, ಆತನು ಪ್ರೀತಿಯ ವ್ಯಕ್ತೀಕರಣವೇ ಆಗಿದ್ದಾನೆಂದು ಸರಿಯಾಗಿಯೇ ಹೇಳಬಹುದು. ಜನರು ತನ್ನ ಬಳಿಯಲ್ಲಿರುವಂತೆ ಅವರನ್ನು ಮರಣದ ಮೂಲಕ ಒಯ್ಯುವಂಥ ರೀತಿಯ ದೇವರು ಆತನಲ್ಲ.

ಸುಳ್ಳು ಧರ್ಮವು ಮೃತರು ಎಲ್ಲಿದ್ದಾರೆ ಮತ್ತು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಬಗ್ಗೆ ಅನೇಕರನ್ನು ಗಲಿಬಿಲಿಯಲ್ಲಿರಿಸಿದೆ. ಸ್ವರ್ಗ, ನರಕ, ಪರ್ಗೆಟರಿ ಮತ್ತು ಲಿಂಬೊ​—ಇವು ಮತ್ತು ಇತರ ಗಮ್ಯಸ್ಥಾನಗಳು ಜನರಿಗೆ ಅರ್ಥಮಾಡಿಕೊಳ್ಳಲಾಗದಂತಹ ಸ್ಥಳಗಳಿಂದ ಹಿಡಿದು ಭೀತಿದಾಯಕವಾದ ಸ್ಥಳಗಳಾಗಿಬಿಟ್ಟಿವೆ. ಆದರೆ ಬೈಬಲ್‌ ನಮಗೆ, ಮೃತರಿಗೆ ಪ್ರಜ್ಞೆಯಿಲ್ಲವೆಂದೂ ಹೆಚ್ಚೆಂದರೆ ಅವರು ನಿದ್ರೆಯನ್ನು ಹೋಲುವ ಸ್ಥಿತಿಯಲ್ಲಿದ್ದಾರೆಂದೂ ಹೇಳುತ್ತದೆ. (ಪ್ರಸಂಗಿ 9:5, 10; ಯೋಹಾನ 11:11-14) ಆದಕಾರಣ, ಒಬ್ಬನು ಚೆನ್ನಾಗಿ ನಿದ್ರಿಸುತ್ತಿರುವುದನ್ನು ನೋಡುವಾಗ ನಮಗೆ ಹೇಗೆ ಚಿಂತೆ ಹತ್ತುವುದಿಲ್ಲವೊ ಹಾಗೆಯೆ ಮರಣಾನಂತರ ಏನು ಸಂಭವಿಸುತ್ತದೆಂಬ ವಿಷಯದಲ್ಲಿಯೂ ನಾವು ಚಿಂತಿಸಬೇಕಾಗಿಲ್ಲ. “ಸಮಾಧಿಗಳಲ್ಲಿರುವವರೆಲ್ಲರು” ಭೂಪರದೈಸಿನಲ್ಲಿ ನವೀಕರಿಸಲ್ಪಟ್ಟ ಜೀವನಕ್ಕೆ “ಎದ್ದು ಹೊರಗೆ ಬರುವ” ಸಮಯದ ಕುರಿತು ಯೇಸು ಹೇಳಿದನು.​—ಯೋಹಾನ 5:28, 29; ಲೂಕ 23:43.

ಮಿಥ್ಯಾಕಲ್ಪನೆ 3: ಚಿಕ್ಕ ಮಕ್ಕಳು ದೇವದೂತರಾಗುವಂತೆ ದೇವರು ಅವರನ್ನು ಒಯ್ಯುತ್ತಾನೆ.

ಮರಣಾಂತಕ ರೋಗವಿರುವ ರೋಗಿಗಳನ್ನು ಅಧ್ಯಯನ ಮಾಡಿದ ಎಲೀಸಬೆತ್‌ ಕೂಬ್ಲರ್‌-ರಾಸ್‌, ಧಾರ್ಮಿಕ ಜನರಲ್ಲಿರುವ ಇನ್ನೊಂದು ಸಾಮಾನ್ಯ ಗ್ರಹಿಕೆಯನ್ನು ಸೂಚಿಸಿದರು. ಒಂದು ನಿಜ ಘಟನೆಯನ್ನು ವರ್ಣಿಸುತ್ತ, ಅವರು ಹೇಳಿದ್ದು: “ತನ್ನ ತಮ್ಮನನ್ನು ಕಳೆದುಕೊಂಡಿದ್ದ ಹುಡುಗಿಗೆ, ದೇವರು ಜಾನಿಯನ್ನು ತುಂಬ ಪ್ರೀತಿಸುತ್ತಿದ್ದದ್ದರಿಂದಲೇ ಅವನನ್ನು ಕೊಂಡೊಯ್ದನು ಎಂದು ಹೇಳುವುದು ಬುದ್ಧಿಹೀನತೆಯಾಗಿದೆ.” ಅಂಥ ಹೇಳಿಕೆಯು ದೇವರ ಕುರಿತು ಕೆಟ್ಟ ಅಭಿಪ್ರಾಯವನ್ನು ಮೂಡಿಸುವುದು ಮಾತ್ರವಲ್ಲ, ಆತನ ವ್ಯಕ್ತಿತ್ವ ಮತ್ತು ವರ್ತನೆಗಳನ್ನು ಸರಿಯಾಗಿ ಪ್ರತಿನಿಧಿಸುವುದೂ ಇಲ್ಲ. ಡಾ. ಕೂಬ್ಲರ್‌-ರಾಸ್‌ ಮುಂದುವರಿಸಿ ಹೇಳಿದ್ದು: “ಆ ಚಿಕ್ಕ ಹುಡುಗಿ ದೊಡ್ಡವಳಾಗಿ ಒಬ್ಬ ಸ್ತ್ರೀಯಾದಾಗ, ಅವಳಿಗೆ ದೇವರ ಮೇಲಿದ್ದ ಕೋಪವು ಪರಿಹಾರವಾಗಲಿಲ್ಲ. ಇದರ ಪರಿಣಾಮವಾಗಿ, ಆಕೆ ಮೂರು ದಶಕಗಳ ಬಳಿಕ ತನ್ನ ಸ್ವಂತ ಪುಟ್ಟ ಮಗನನ್ನು ಮರಣದಲ್ಲಿ ಕಳೆದುಕೊಂಡಾಗ, ಮನೋವಿಕೃತ ಖಿನ್ನತೆಗೆ ಗುರಿಯಾದಳು.”

ಇನ್ನೊಬ್ಬ ದೇವದೂತನನ್ನು ಮಾಡಿಕೊಳ್ಳಲು ದೇವರು ಒಂದು ಮಗುವನ್ನು ಏಕೆ ಕಸಿದುಕೊಳ್ಳಬೇಕು? ಮಗುವಿನ ಹೆತ್ತವರಿಗಿಂತ ಹೆಚ್ಚಾಗಿ ದೇವರಿಗೆ ಆ ಮಗುವಿನ ಆವಶ್ಯಕತೆಯಿದೆಯೊ? ದೇವರು ಮಕ್ಕಳನ್ನು ಒಯ್ಯುವುದು ನಿಜವಾಗಿರುವಲ್ಲಿ, ಅದು ಆತನನ್ನು ಪ್ರೀತಿರಹಿತನೂ ಸ್ವಾರ್ಥಿಯೂ ಆದ ದೇವರಾಗಿ ಮಾಡುವುದಿಲ್ಲವೊ? ಇಂತಹ ಗ್ರಹಿಕೆಗೆ ವ್ಯತಿರಿಕ್ತವಾಗಿ, ಬೈಬಲ್‌ ಹೇಳುವುದು: “ಪ್ರೀತಿಯು ದೇವರಿಂದಾಗಿದೆ.” (1 ಯೋಹಾನ 4:7) ಶಿಷ್ಟಾಚಾರಿಗಳಾದ ಜನರೂ ಸಹಿಸಿಕೊಳ್ಳದಿರುವ ಒಂದು ನಷ್ಟವನ್ನು ಪ್ರೀತಿಯ ದೇವರೇ ಬರಮಾಡಿಯಾನೆ?

ಹಾಗಾದರೆ, ಮಕ್ಕಳು ಸಾಯುವುದೇಕೆ? “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ಬೈಬಲಿನ ಉತ್ತರದ ಒಂದು ಭಾಗವು ಪ್ರಸಂಗಿ 9:11ರಲ್ಲಿ ಬರೆಯಲ್ಪಟ್ಟಿದೆ. ಮತ್ತು ನಾವು ಹುಟ್ಟಿದಂದಿನಿಂದ ಅಪರಿಪೂರ್ಣರೂ ಪಾಪಿಗಳೂ ಆಗಿದ್ದೇವೆ ಎಂದು ಕೀರ್ತನೆ 51:5 ಹೇಳುತ್ತದೆ, ಮತ್ತು ಈಗ ಎಲ್ಲ ಮಾನವರ ಅಂತ್ಯಾವಸ್ಥೆಯು ಅನೇಕಾನೇಕ ಕಾರಣಗಳಿಂದಾಗಿರುವ ಮರಣವೇ. ಕೆಲವು ಸಲ, ಮರಣವು ಜನನಕ್ಕೆ ಮೊದಲೇ ಬಡಿದು ಮೃತಜನನವನ್ನುಂಟುಮಾಡುತ್ತದೆ. ಬೇರೆ ಸಂದರ್ಭಗಳಲ್ಲಿ, ಮಕ್ಕಳು ವಿಪತ್ಕಾರಕ ಸ್ಥಿತಿಗಳಿಗೆ ತುತ್ತಾಗಿ ಅಥವಾ ಅವಘಡಗಳಿಗೆ ತುತ್ತಾಗಿ ಸಾಯುತ್ತಾರೆ. ಇಂತಹ ಅಂತ್ಯಾವಸ್ಥೆಗಳಿಗೆ ದೇವರು ಜವಾಬ್ದಾರನಲ್ಲ.

ಮಿಥ್ಯಾಕಲ್ಪನೆ 4: ಮರಣಾನಂತರ ಕೆಲವರು ಯಾತನೆಯನ್ನು ಅನುಭವಿಸುತ್ತಾರೆ.

ದುಷ್ಟರು ಅಗ್ನಿಮಯ ನರಕಕ್ಕೆ ಹೋಗಿ ಅಲ್ಲಿ ನಿತ್ಯ ಯಾತನೆಯನ್ನು ಅನುಭವಿಸುತ್ತಾರೆಂದು ಅನೇಕ ಧರ್ಮಗಳು ಬೋಧಿಸುತ್ತವೆ. ಈ ಬೋಧನೆಯು ನ್ಯಾಯಸಮ್ಮತವೂ ಶಾಸ್ತ್ರೀಯವೂ ಆಗಿದೆಯೆ? ಮಾನವ ಜೀವಮಾನವು 70 ಅಥವಾ 80 ವರುಷಗಳಿಗೆ ಸೀಮಿತವಾಗಿದೆ. ಒಬ್ಬನು ತನ್ನ ಜೀವಮಾನವೆಲ್ಲ ತೀರ ದುಷ್ಟನಾಗಿ ಜೀವಿಸಿದ್ದರೂ, ನಿತ್ಯ ಯಾತನೆಯು ನ್ಯಾಯವಾದ ಶಿಕ್ಷೆಯಾಗಿರುತ್ತದೊ? ಇಲ್ಲ. ಏಕೆಂದರೆ, ಅಲ್ಪಾವಧಿಯ ಆಯುಷ್ಕಾಲದಲ್ಲಿ ಅವನು ಮಾಡಿದ್ದ ತಪ್ಪುಗಳಿಗಾಗಿ ಶಾಶ್ವತವಾಗಿ ಯಾತನೆಗೊಳಪಡಿಸುವುದು ತುಂಬ ಅನ್ಯಾಯವೇ ಸರಿ.

ಜನರು ಸತ್ತ ಮೇಲೆ ಅವರಿಗೇನಾಗುತ್ತದೆಂದು ತಿಳಿಸಬಲ್ಲವನು ದೇವರೊಬ್ಬನೇ. ಮತ್ತು ಆತನು ಅದನ್ನು ತನ್ನ ಲಿಖಿತ ವಾಕ್ಯವಾದ ಬೈಬಲಿನಲ್ಲಿ ತಿಳಿಸಿದ್ದಾನೆ. ಬೈಬಲು ಹೇಳುವುದು: “ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು; ಎಲ್ಲಕ್ಕೂ ಪ್ರಾಣ ಒಂದೇ; . . . ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.” (ಪ್ರಸಂಗಿ 3:19, 20) ಇಲ್ಲಿ ಅಗ್ನಿಮಯವಾದ ನರಕದ ಸುದ್ದಿಯೇ ಇಲ್ಲ. ಮನುಷ್ಯರು ಸಾಯುವಾಗ ಅವರು ಮಣ್ಣಿಗೆ, ಅಸ್ತಿತ್ವಹೀನ ಸ್ಥಿತಿಗೆ ಹಿಂದಿರುಗುತ್ತಾರೆ.

ಒಬ್ಬನು ಯಾತನೆಪಡಬೇಕಾದರೆ ಅವನು ಪ್ರಜ್ಞೆಯಿರುವವನಾಗಿರಬೇಕು. ಮೃತರಿಗೆ ಪ್ರಜ್ಞೆಯಿದೆಯೆ? ಬೈಬಲು ಇನ್ನೊಮ್ಮೆ ಉತ್ತರ ಕೊಡುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ [“ಪ್ರಜ್ಞೆಯೂ” NW] ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.” (ಪ್ರಸಂಗಿ 9:5) “ಯಾವ ಪ್ರಜ್ಞೆಯೂ ಇಲ್ಲ”ದಿರುವ ಮೃತರಿಗೆ, ಎಲ್ಲಿಯೇ ಆಗಲಿ, ಯಾವುದೇ ಸಂಕಟದ ಅನುಭವವು ಅಸಾಧ್ಯ.

ಮಿಥ್ಯಾಕಲ್ಪನೆ 5: ಮರಣವು ನಮ್ಮ ಅಸ್ತಿತ್ವದ ಕಾಯಂ ಅಂತ್ಯವಾಗಿದೆ.

ನಾವು ಸಾಯುವಾಗ ಅಸ್ತಿತ್ವಹೀನ ಸ್ಥಿತಿಗೆ ಹೋದರೂ, ಎಲ್ಲವೂ ಅಂತ್ಯಗೊಳ್ಳುವುದಿಲ್ಲ. ತಾನು ಸತ್ತಾಗ ಸಮಾಧಿಗೆ, ಷೀಯೋಲ್‌ಗೆ ಹೋಗುತ್ತೇನೆಂಬುದು ನಂಬಿಗಸ್ತ ಯೋಬನಿಗೆ ತಿಳಿದಿತ್ತು. ಆದರೆ ಅವನು ದೇವರಿಗೆ ಪ್ರಾರ್ಥಿಸಿದ್ದನ್ನು ಕೇಳಿರಿ: “ನೀನು ನನ್ನನ್ನು ಪಾತಾಳದಲ್ಲಿ [“ಷೀಯೋಲ್‌ನಲ್ಲಿ,” NW] ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು! ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? . . . ನೀನು ಕರೆದರೆ ಉತ್ತರಕೊಡುವೆನು.”​—ಯೋಬ 14:13-15.

ತಾನು ಮರಣದ ತನಕ ನಂಬಿಗಸ್ತನಾಗಿರುವಲ್ಲಿ, ದೇವರು ತನ್ನನ್ನು ಜ್ಞಾಪಿಸಿಕೊಂಡು, ತಕ್ಕ ಸಮಯದಲ್ಲಿ ಪುನರುತ್ಥಾನಗೊಳಿಸುವನೆಂದು ಯೋಬನು ನಂಬಿದನು. ಪುರಾತನ ಕಾಲದ ದೇವರ ಎಲ್ಲಾ ಸೇವಕರ ನಂಬಿಕೆಯೂ ಇದೇ ಆಗಿತ್ತು. ಯೇಸು ತಾನೇ ಈ ನಿರೀಕ್ಷೆಯನ್ನು ಸ್ಥಿರೀಕರಿಸಿ, ಸತ್ತವರನ್ನು ಎಬ್ಬಿಸಲು ದೇವರು ತನ್ನನ್ನು ಉಪಯೋಗಿಸುವನೆಂದು ತೋರಿಸಿದನು. ಕ್ರಿಸ್ತನು ತಾನೇ ಹೇಳಿದ ಮಾತುಗಳು ಈ ಆಶ್ವಾಸನೆಯನ್ನು ಕೊಡುತ್ತವೆ: “ಸಮಾಧಿ [“ಸ್ಮಾರಕ ಸಮಾಧಿ,”NW]ಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”​—ಯೋಹಾನ 5:28, 29.

ದೇವರು ಅತಿ ಬೇಗನೆ ಎಲ್ಲ ದುಷ್ಟತನವನ್ನು ತೊಲಗಿಸಿ, ಸ್ವರ್ಗೀಯ ಆಳಿಕೆಯ ಕೆಳಗೆ ನೂತನ ಲೋಕವನ್ನು ಸ್ಥಾಪಿಸುವನು. (ಕೀರ್ತನೆ 37:10, 11; ದಾನಿಯೇಲ 2:44; ಪ್ರಕಟನೆ 16:14, 16) ಇದರ ಪರಿಣಾಮವು, ದೇವರನ್ನು ಸೇವಿಸುವ ಜನರು ವಾಸಿಸುವ ಇಡೀ ಭೂಮಿಯು ಪರದೈಸವಾಗುವುದು. ನಾವು ಬೈಬಲಿನಲ್ಲಿ ಓದುವುದು: “ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು​—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.”​—ಪ್ರಕಟನೆ 21:3, 4.

ಭಯದಿಂದ ಬಿಡುಗಡೆ

ಪುನರುತ್ಥಾನದ ನಿರೀಕ್ಷೆಯ ಕುರಿತಾದ ಜ್ಞಾನ ಹಾಗೂ ಆ ಏರ್ಪಾಡಿನ ಮೂಲನಾದಾತನ ಕುರಿತಾದ ಜ್ಞಾನವು ನಿಮಗೆ ದುಃಖಶಮನವನ್ನು ನೀಡಬಲ್ಲದು. ಯೇಸು ವಚನ ಕೊಟ್ಟದ್ದು: “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಇದರಲ್ಲಿ ಮರಣಭಯದಿಂದ ಬಿಡುಗಡೆಯೂ ಸೇರಿದೆ. ವಯಸ್ಸಾಗುವಿಕೆಯ ಮತ್ತು ಸಾಯುವ ಪ್ರಕ್ರಿಯೆಯನ್ನು ಬದಲಾಯಿಸಿ, ನಮಗೆ ನಿತ್ಯಜೀವವನ್ನು ಕೊಡುವಾತನು ಯೆಹೋವನೊಬ್ಬನೇ. ನೀವು ದೇವರ ವಾಗ್ದಾನಗಳನ್ನು ನಂಬಬಲ್ಲಿರೊ? ಹೌದು, ಇದು ಸಾಧ್ಯ ಏಕೆಂದರೆ ದೇವರ ಮಾತು ಸದಾ ಸತ್ಯವಾಗಿ ಪರಿಣಮಿಸುತ್ತದೆ. (ಯೆಶಾಯ 55:11) ಮಾನವಕುಲಕ್ಕಾಗಿರುವ ದೇವರ ಉದ್ದೇಶಗಳ ಕುರಿತು ಇನ್ನೂ ಹೆಚ್ಚು ಕಲಿತುಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ನಿಮಗೆ ಸಹಾಯ ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮರಣಭಯದ ಸಮಸ್ಯೆಯೇನಂದರೆ, ಅದು ಜೀವನವನ್ನು ಆನಂದಿಸುವ ಒಬ್ಬನ ಸಾಮರ್ಥ್ಯವನ್ನು ಸ್ತಂಭಿತಗೊಳಿಸಬಲ್ಲದು

[ಪುಟ 7ರಲ್ಲಿರುವ ಚಾರ್ಟು]

ಮರಣದ ಸಂಬಂಧದಲ್ಲಿ ಕೆಲವು ಸಾಮಾನ್ಯ ಮಿಥ್ಯಾಕಲ್ಪನೆಗಳು ಶಾಸ್ತ್ರಗಳು ಏನನ್ನುತ್ತವೆ?

ಮರಣವು ಜೀವನದ ಸಹಜ ಆದಿಕಾಂಡ 1:28; 2:17; ರೋಮಾಪುರ 5:12

ಅಂತ್ಯವಾಗಿದೆ

ಮರಣದ ಮೂಲಕ ದೇವರು ಜನರನ್ನು ಯೋಬ 34:15; ಕೀರ್ತನೆ 37:​11, 29; 115:16

ತನ್ನೊಂದಿಗಿರಿಸಿಕೊಳ್ಳಲು ಒಯ್ಯುತ್ತಾನೆ

ಚಿಕ್ಕ ಮಕ್ಕಳು ದೇವದೂತರಾಗುವಂತೆ ಕೀರ್ತನೆ 51:5; 104:​1, 4, NW;

ದೇವರು ಅವರನ್ನು ಒಯ್ಯುತ್ತಾನೆ ಇಬ್ರಿಯ 1:​7, 14, NW

ಮರಣಾನಂತರ ಕೆಲವರು ಯಾತನೆಯನ್ನು ಕೀರ್ತನೆ 146:4; ಪ್ರಸಂಗಿ 9:​5, 10;

ಅನುಭವಿಸುತ್ತಾರೆ ರೋಮಾಪುರ 6:23

ಮರಣವು ನಮ್ಮ ಅಸ್ತಿತ್ವದ ಕಾಯಂ ಯೋಬ 14:​14, 15; ಯೋಹಾನ 3:16; 17:​3;

ಅಂತ್ಯವಾಗಿದೆ ಅ. ಕೃತ್ಯಗಳು 24:15

[ಪುಟ 8ರಲ್ಲಿರುವ ಚಿತ್ರ]

ಮರಣದ ಕುರಿತಾದ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮನ್ನು ಮರಣಭಯದಿಂದ ಬಿಡುಗಡೆ ಮಾಡುತ್ತದೆ

[ಪುಟ 5ರಲ್ಲಿರುವ ಚಿತ್ರ ಕೃಪೆ]

Barrators​—Giampolo/The Doré Illustrations For Dante’s Divine Comedy/Dover Publications Inc.