ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾವು ಎಷ್ಟೇ ಆರೋಗ್ಯವಂತರಾಗಿರಲಿ ಎಷ್ಟೇ ಧನಿಕರಾಗಿರಲಿ, ದೈನಂದಿನ ಜೀವನವನ್ನು ನಡೆಸುತ್ತಿರುವಾಗ ಮರಣವು ತನ್ನ ಛಾಯೆಯನ್ನು ನಮ್ಮ ಮೇಲೆ ಬೀಳಿಸುತ್ತದೆ. ನಾವು ಮುಂದಿನ ಸಾರಿ ರಸ್ತೆಯನ್ನು ದಾಟುವಾಗ ಇಲ್ಲವೆ ಮಲಗಿರುವಾಗಲೂ ಅದು ನಮ್ಮ ಮೇಲೆ ಬಂದೆರಗಬಲ್ಲದು. 2001, ಸೆಪ್ಟೆಂಬರ್‌ 11ರಂದು ನ್ಯೂ ಯಾರ್ಕ್‌ ಸಿಟಿ ಮತ್ತು ವಾಷಿಂಗ್ಟನ್‌ ಡಿ.ಸಿ.ಯ ಮೇಲೆ ನಡೆದ ಭಯೋತ್ಪಾದಕರ ದಾಳಿಗಳಿಂದ ಬಂದೊದಗಿದ ವಿಪತ್ತುಗಳು, ಈ “ಕಡೇ ಶತ್ರು”ವಾದ ಮರಣವು, ತನ್ನ ಬಲಿಪಶುಗಳನ್ನು ಜೀವನದ ಸರ್ವ ವೃತ್ತಿಯವರಿಂದಲೂ ಸರ್ವ ಪ್ರಾಯಗಳವರಿಂದಲೂ ಆರಿಸಿಕೊಳ್ಳುತ್ತದೆಂಬ ಮತ್ತು ಕೆಲವು ಸಲ ಕೆಲವೇ ನಿಮಿಷಗಳಲ್ಲಿ ಸಾವಿರಾರು ಮಂದಿಯನ್ನು ಆಹುತಿ ತೆಗೆದುಕೊಳ್ಳುತ್ತದೆಂಬ ನಿಜತ್ವವನ್ನು ನಮ್ಮೆದುರಿಗೆ ತರುತ್ತದೆ.​—1 ಕೊರಿಂಥ 15:26.

ಹೀಗಿರುವುದಾದರೂ, ಮರಣದ ಕಡೆಗೆ ಜನರಿಗೆ ಒಂದು ರೀತಿಯ ಆಕರ್ಷಣೆಯಿರುವಂತೆ ತೋರುತ್ತದೆ. ಸಾವಿನ ವರದಿಗಳು, ಅದರಲ್ಲೂ ಭಯಂಕರ ರೀತಿಯಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಸಾಯುವ ಜನರ ಮರಣದ ಕುರಿತಾದ ವರದಿಗಳಿಂದಾಗಿ ಎಷ್ಟು ಹೆಚ್ಚು ವಾರ್ತಾಪತ್ರಗಳ ಮಾರಾಟವಾಗುತ್ತದೊ ಅಥವಾ ಎಷ್ಟು ಹೆಚ್ಚು ಜನರನ್ನು ಟೆಲಿವಿಷನ್‌ಗಳ ಬಳಿ ಎಳೆಯುತ್ತವೊ ಅಷ್ಟನ್ನು ಇನ್ನಾವುದೇ ಸುದ್ದಿಯು ಮಾಡುವುದಿಲ್ಲ ಎಂಬಂತೆ ತೋರಿಬರುತ್ತದೆ. ಮರಣವು ಯುದ್ಧಗಳಿಂದ ಆಗಲಿ, ನೈಸರ್ಗಿಕ ವಿಪತ್ತುಗಳಿಂದ ಆಗಲಿ, ಪಾತಕಗಳಿಂದ ಆಗಲಿ ಇಲ್ಲವೆ ರೋಗಗಳಿಂದ ಆಗಲಿ, ಈ ಸಾವಿನ ಸುದ್ದಿಗಳಿಂದ ಜನರು ಬೇಸತ್ತುಹೋಗುವಂತೆ ಕಾಣುವುದಿಲ್ಲ. ಆದರೆ ಮರಣದ ಬಗ್ಗೆ ಇರುವ ಇಂತಹ ಅನುರಕ್ತಿಯು, ಪ್ರಸಿದ್ಧ ವ್ಯಕ್ತಿಗಳು ಅಥವಾ ಹೆಸರುವಾಸಿ ಜನರು ಸಾಯುವಾಗ ಜನರು ತೋರಿಸುವ ತೀವ್ರವಾದ ಭಾವಾವೇಶಗಳಲ್ಲಿ ತಬ್ಬಿಬ್ಬಾಗಿಸುವಂಥ ರೀತಿಯಲ್ಲಿ ವ್ಯಕ್ತವಾಗುತ್ತದೆ.

ಇದೆಲ್ಲ ಅಲ್ಲಗಳೆಯಲಾಗದ ಸಂಗತಿ. ಇತರರ ಮರಣವು ಜನರನ್ನು ಆಕರ್ಷಿಸುತ್ತದೆ. ಆದರೆ ತಮ್ಮ ಸ್ವಂತ ಮರಣದ ಕುರಿತಾಗಿ ಅವರು ಯೋಚಿಸಲೂ ಭಯಪಡುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಯೋಚಿಸಲೂ ಬಯಸದಂಥ ಒಂದು ವಿಷಯವು, ನಮ್ಮ ಸ್ವಂತ ಮರಣದ ಸಂಗತಿಯಾಗಿದೆ.

ಮರಣವು ದಿಗ್ಭ್ರಮೆ ಹಿಡಿಸುತ್ತದೊ?

ನಿಮ್ಮ ಸ್ವಂತ ಮರಣದ ಕುರಿತಾದ ವಿಚಾರವು ಯಾವಾಗಲೂ ಅಹಿತಕರವಾಗಿರುತ್ತದೆ ಮಾತ್ರವಲ್ಲ, ಅದು ಯಾವಾಗಲೂ ಹಾಗೆಯೇ ಇರುವುದು. ಅದೇಕೆ? ಏಕೆಂದರೆ ದೇವರು ನಮ್ಮಲ್ಲಿ ಸದಾ ಜೀವಿಸುವ ತೀವ್ರಾಪೇಕ್ಷೆಯನ್ನು ತುಂಬಿಸಿದ್ದಾನೆ. “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ” ಎನ್ನುತ್ತದೆ ಬೈಬಲು. (ಪ್ರಸಂಗಿ 3:11) ಆದಕಾರಣವೇ, ಮರಣದ ಅನಿವಾರ್ಯತೆಯು ಮಾನವರಲ್ಲಿ ಒಂದು ಆಂತರಿಕ ಹೋರಾಟವನ್ನು, ನಿತ್ಯ ಅಸಾಮರಸ್ಯವನ್ನು ಉಂಟುಮಾಡಿದೆ. ಈ ಆಂತರಿಕ ಹೋರಾಟವನ್ನು ಶಮನಗೊಳಿಸಲು ಮತ್ತು ಜೀವಿಸುತ್ತ ಹೋಗಬೇಕೆನ್ನುವ ಸ್ವಾಭಾವಿಕ ತೀವ್ರಾಪೇಕ್ಷೆಯನ್ನು ತೃಪ್ತಿಪಡಿಸಲು, ಜನರು ಸಕಲ ವಿಧದ ನಂಬಿಕೆಗಳನ್ನು, ಅಂದರೆ ಆತ್ಮದ ಅಮರತ್ವದ ಬೋಧನೆಯಿಂದ ಹಿಡಿದು ಪುನರ್ಜನ್ಮದ ವರೆಗಿನ ನಂಬಿಕೆಗಳನ್ನು ಕಂಡುಹಿಡಿದಿದ್ದಾರೆ.

ಏನೇ ಆಗಿರಲಿ, ಮರಣವು ಒಂದು ಮನಕಲಕಿಸುವ, ಭೀತಿದಾಯಕ ಘಟನೆಯಾಗಿದೆ ಮತ್ತು ಮರಣದ ಭಯವು ಸಾರ್ವತ್ರಿಕವಾಗಿದೆ. ಆದುದರಿಂದ, ಸಾಮಾನ್ಯವಾಗಿ ಮಾನವಕುಲವು ಮರಣವನ್ನು ಒಂದು ಸವಾಲೊಡ್ಡುವ ಪ್ರತೀಕ್ಷೆಯಾಗಿ ಕಾಣುತ್ತದೆಂಬ ವಿಷಯವು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಒಂದು ವಿಷಯವೇನಂದರೆ, ಧನ ಮತ್ತು ಅಧಿಕಾರವನ್ನು ಬೆನ್ನಟ್ಟುವ ಜೀವನದ ಅಂತಿಮ ವ್ಯರ್ಥತೆಯನ್ನು ಮರಣವು ಬಯಲುಪಡಿಸುತ್ತದೆ.

ಸಾವು ಹತ್ತಿರವಿರುವಾಗ ಪ್ರತ್ಯೇಕಿಸಲ್ಪಡುವುದು?

ಹಿಂದಿನ ಕಾಲದಲ್ಲಿ, ಮಾರಕವಾದ ರೋಗವಿರುವವನನ್ನು ಇಲ್ಲವೆ ಮಾರಕವಾಗಿ ಗಾಯಗೊಂಡಿರುವವನನ್ನು ಅವನ ಸ್ವಂತ ಮನೆಯ, ಪರಿಚಿತವಾದ ಮತ್ತು ಪ್ರಿಯ ಪರಿಸರದಲ್ಲಿ ಸಾಯುವಂತೆ ಬಿಡಲಾಗುತ್ತಿತ್ತು. ಬೈಬಲ್‌ ಕಾಲಗಳಲ್ಲಿನ ಪರಿಸ್ಥಿತಿಯೂ ಅನೇಕವೇಳೆ ಹೀಗೆಯೇ ಇತ್ತು ಮತ್ತು ಕೆಲವು ಸಂಸ್ಕೃತಿಗಳಲ್ಲಿ ಇದು ಈಗಲೂ ನಿಜವಾಗಿದೆ. (ಆದಿಕಾಂಡ 49:​1, 2, 33) ಇಂತಹ ಸಂದರ್ಭಗಳಲ್ಲಿ, ಅವರು ಕುಟುಂಬವಾಗಿ ಕೂಡಿಬರುವಾಗ ಮಕ್ಕಳನ್ನೂ ಅವರ ಸಂಭಾಷಣೆಯಲ್ಲಿ ಒಳಗೂಡಿಸಲಾಗುತ್ತದೆ. ಇದು ಕುಟುಂಬದಲ್ಲಿರುವ ಪ್ರತಿಯೊಬ್ಬನಿಗೆ ತಾನೊಬ್ಬನೇ ದುಃಖಿಸುತ್ತಿಲ್ಲ ಎಂಬ ಭಾವನೆಯನ್ನು ಕೊಟ್ಟು, ಕೂಡುಜವಾಬ್ದಾರಿ ಮತ್ತು ಕೂಡುಶೋಕವನ್ನು ತೋರಿಸುವ ನೆಮ್ಮದಿಯನ್ನು ಕೊಡುತ್ತದೆ.

ಆದರೆ ಇದು, ಎಲ್ಲಿ ಮರಣದ ಕುರಿತಾದ ಚರ್ಚೆಯು ನಿಷಿದ್ಧ ಹಾಗೂ ವಿಕೃತವೆಂದು ಎಣಿಸಲ್ಪಡುತ್ತದೊ ಅಂತಹ ಸಮಾಜದಲ್ಲಿ ಏನು ನಡೆಯುತ್ತದೊ ಅದಕ್ಕೆ ತೀರ ವ್ಯತಿರಿಕ್ತವಾಗಿದೆ. ಇಂತಹ ಕಡೆಗಳಲ್ಲಿ ಮಕ್ಕಳನ್ನು, ಅದು ಅವರಿಗೆ “ತಡೆದುಕೊಳ್ಳಲು ಸಾಧ್ಯವಾಗದ ವಿಷಯ” ಎಂಬ ಕಲ್ಪನೆಯಿಂದ ಈ ಚರ್ಚೆಯಿಂದ ಹೊರಗಿಡಲಾಗುತ್ತದೆ. ಇಂದು ಮರಣಹೊಂದುವುದು ಅನೇಕ ವಿಧಗಳಲ್ಲಿ ಭಿನ್ನವಾಗಿದೆ ಮತ್ತು ಅನೇಕವೇಳೆ ಇದು ಹೆಚ್ಚು ಒಂಟಿಗ ಭಾವನೆಯನ್ನು ಕೊಡುತ್ತದೆ. ಹೆಚ್ಚಿನವರಿಗೆ ಮನೆಯಲ್ಲೇ ಶಾಂತಿಯಿಂದ, ಕುಟುಂಬದವರೇ ನೋಡಿಕೊಂಡು ಸಾಯಬೇಕೆಂಬ ಮನಸ್ಸಿದ್ದರೂ, ದುಃಖಕರವಾದ ವಾಸ್ತವಾಂಶವೇನಂದರೆ, ಅನೇಕರು ಆಸ್ಪತ್ರೆಯಲ್ಲಿ, ಸಾಮಾನ್ಯವಾಗಿ ಒಂಟಿಗರಾಗಿ, ವೇದನೆಪೀಡಿತರಾಗಿ, ಹೆದರಿಕೆಹುಟ್ಟಿಸುವಂಥ ರೀತಿಯ ಆಧುನಿಕ ಉಪಕರಣಗಳಿಗೆ ಜೋಡಿಸಲ್ಪಟ್ಟವರಾಗಿ ಸಾಯುತ್ತಾರೆ. ಇನ್ನೊಂದು ಕಡೆಯಲ್ಲಿ, ಕೋಟಿಗಟ್ಟಲೆ ಜನರು ಅನಾಮಧೇಯರಾಗಿ, ಜನಾಂಗಹತ್ಯೆ, ಬರ, ಏಡ್ಸ್‌, ಆಂತರಿಕ ಯುದ್ಧ ಅಥವಾ ವಿಪರೀತ ದಾರಿದ್ರ್ಯದ ಬಲಿಗಳಾಗಿ ಸಾಯುತ್ತಾರೆ.

ಪರ್ಯಾಲೋಚಿಸಲು ತಕ್ಕದಾದ ವಿಷಯ

ಮರಣದ ಬಗ್ಗೆ ಯೋಚಿಸುವುದನ್ನು ಬೈಬಲು ನಿರುತ್ತೇಜಿಸುವುದಿಲ್ಲ. ವಾಸ್ತವವಾಗಿ, ಪ್ರಸಂಗಿ 7:2 ಹೇಳುವುದು: “ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವದು ಲೇಸು; ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ.” ಮರಣದ ವಾಸ್ತವಿಕತೆಯನ್ನು ಎದುರಿಸುವಾಗ, ನಾವು ನಮ್ಮ ದಿನನಿತ್ಯದ ಚಿಂತೆಗಳನ್ನು ಅಥವಾ ಚಟುವಟಿಕೆಗಳನ್ನು ಬಿಟ್ಟುಬಿಟ್ಟು ಜೀವನದ ಅಲ್ಪಾವಧಿಯ ಕುರಿತು ಚಿಂತಿಸುತ್ತೇವೆ. ಇದು ಜೀವನದಲ್ಲಿ ಗೊತ್ತುಗುರಿಯಿಲ್ಲದೆ ಮುಂದೆ ಸಾಗುವ ಅಥವಾ ಅದನ್ನು ವ್ಯರ್ಥವಾಗಿ ಉಪಯೋಗಿಸುವ ಬದಲು, ನಾವು ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿ ನಡೆಸುವಂತೆ ಸಹಾಯಮಾಡಬಲ್ಲದು.

ಮರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಜೀವನದ ಅಂತ್ಯದ ಬಗ್ಗೆ ನಿಮಗಿರುವ ಅನಿಸಿಕೆ, ನಂಬಿಕೆ, ನಿರೀಕ್ಷೆ ಮತ್ತು ಭಯವನ್ನು ನೀವು ಪರೀಕ್ಷಿಸಿ ನೋಡಿದ್ದೀರೊ?

ಜೀವದ ಸ್ವರೂಪವು ಹೇಗೆ ವಿವರಿಸಲು ಮತ್ತು ಗ್ರಹಿಸಲು ಮಾನವ ಸಾಮರ್ಥ್ಯಕ್ಕೆ ನಿಲುಕದ ಸಂಗತಿಯಾಗಿದೆಯೊ ಹಾಗೆಯೇ ಮರಣದ ಸ್ವರೂಪವೂ ಆ ಸಾಮರ್ಥ್ಯಕ್ಕೆ ನಿಲುಕದ ಸಂಗತಿಯಾಗಿದೆ. ಆ ವಿಷಯದ ಕುರಿತು ಭರವಸಾರ್ಹವಾದ ಅಧಿಕಾರವಾಣಿಯಿಂದ ಮಾತಾಡಶಕ್ತನಾಗಿರುವಾತನು ನಮ್ಮ ಸೃಷ್ಟಿಕರ್ತನೊಬ್ಬನೇ. ಆತನಲ್ಲಿ “ಜೀವದ ಬುಗ್ಗೆ” ಇದೆ, ಮತ್ತು “ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.” (ಕೀರ್ತನೆ 36:9; 68:20) ಇದು ಆಶ್ಚರ್ಯಕರವಾಗಿ ಕಂಡುಬರಬಹುದಾದರೂ, ದೇವರ ವಾಕ್ಯದ ಬೆಳಕಿನಲ್ಲಿ, ಮರಣದ ಬಗ್ಗೆ ಇರುವ ಕೆಲವು ಜನಪ್ರಿಯ ನಂಬಿಕೆಗಳನ್ನು ಪರೀಕ್ಷಿಸುವುದು, ನಮಗೆ ದುಃಖಶಾಮಕವೂ ಚೈತನ್ಯದಾಯಕವೂ ಆಗಿ ಪರಿಣಮಿಸಬಲ್ಲದು. ಮರಣವು ಸಕಲ ವಿಷಯಗಳ ಅಂತ್ಯವಾಗಿರಬೇಕೆಂದಿಲ್ಲ ಎಂಬುದನ್ನು ಅದು ನಮಗೆ ತಿಳಿಯಪಡಿಸುವುದು.

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮರಣದ ಸಾಧ್ಯತೆಯು ನಾವು ನಮ್ಮ ಜೀವನವನ್ನು ಹೆಚ್ಚು ಅರ್ಥಪೂರ್ಣವಾದ ರೀತಿಯಲ್ಲಿ ನಡೆಸುವಂತೆ ಸಹಾಯಮಾಡುತ್ತದೆ