ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರು ಹೊಣೆ ನೀವೊ ನಿಮ್ಮ ಜೀನ್‌ಗಳೊ?

ಯಾರು ಹೊಣೆ ನೀವೊ ನಿಮ್ಮ ಜೀನ್‌ಗಳೊ?

ಯಾರು ಹೊಣೆ ನೀವೊ ನಿಮ್ಮ ಜೀನ್‌ಗಳೊ?

ಮದ್ಯದ ಗೀಳು, ಸಲಿಂಗಕಾಮ, ಸ್ವಚ್ಛಂದ ಸಂಭೋಗ, ಹಿಂಸಾಚಾರ ಮತ್ತು ಇತರ ತಪ್ಪು ನಡತೆಗೆ ಮತ್ತು ಮರಣಕ್ಕೂ ಆನುವಂಶಿಕ ಕಾರಣಗಳಿವೆಯೆ ಎಂದು ಕಂಡುಹಿಡಿಯಲು ವಿಜ್ಞಾನಿಗಳು ಬಹಳ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಮ್ಮ ವರ್ತನೆಗಳಿಗೆ ನಾವು ಕಾರಣರಲ್ಲ, ನಾವು ಕೇವಲ ನಮ್ಮ ಜೀನ್‌ಗಳ ರಚನೆಗೆ ಬಲಿಯಾಗಿದ್ದೇವೆ ಎಂಬುದನ್ನು ಕಂಡುಹಿಡಿಯುವುದು ನೆಮ್ಮದಿಯನ್ನು ಕೊಡುವುದು ಅಲ್ಲವೆ? ನಮ್ಮ ದೋಷಗಳಿಗೆ ಯಾರೊ ಒಬ್ಬನು ಅಥವಾ ಯಾವುದೊ ಒಂದು ಸಂಗತಿಯು ಹೊಣೆ ಎಂದು ತಪ್ಪು ಹೊರಿಸುವುದು ಮಾನವ ಸ್ವಭಾವವಾಗಿದೆ.

ಜೀನ್‌ಗಳು ಕಾರಣವಾಗಿರುವುದಾದರೆ, ಅವುಗಳನ್ನು ಬದಲಾಯಿಸುವ ಸಾಧ್ಯತೆಯನ್ನು ಅಂದರೆ, ಅನಪೇಕ್ಷಣೀಯ ಗುಣಲಕ್ಷಣಗಳನ್ನು ಜಿನೆಟಿಕ್‌(ತಳಿ) ಎಂಜಿನಿಯರಿಂಗ್‌ ಮೂಲಕ ನಿವಾರಿಸುವ ಸಾಧ್ಯತೆಯನ್ನು ವಿಜ್ಞಾನಿಗಳು ಎತ್ತಿಹಿಡಿಯುತ್ತಾರೆ. ಇಡೀ ಮಾನವ ಜೀನೋಮ್‌(ಜೀನ್‌ ಸಮುದಾಯ)ನ ಇತ್ತೀಚಿನ ನಕ್ಷೆಯ ತಯಾರಿಯು ಇಂತಹ ಹಾರೈಕೆಗೆ ಹೊಸ ಉತ್ತೇಜನವನ್ನು ಕೊಟ್ಟಿದೆ.

ಆದರೆ ಈ ಸಾಧ್ಯತೆಯು, ನಮಗೆ ಕೊಡಲ್ಪಟ್ಟಿರುವ ಜೀನ್‌ ಸಮುದಾಯವು ನಮ್ಮ ಎಲ್ಲ ತಪ್ಪು ಮತ್ತು ದೋಷಗಳಿಗೆ ಕಾರಣವೆಂಬ ತರ್ಕದ ಮೇಲೆ ಆಧಾರಗೊಂಡಿದೆ. ನಮ್ಮ ಜೀನ್‌ಗಳೇ ಕಾರಣವೆಂಬುದಕ್ಕೆ ವೈಜ್ಞಾನಿಕ ಪತ್ತೇದಾರರು ಸಾಕಷ್ಟು ಪುರಾವೆಗಳನ್ನು ಕಂಡುಹಿಡಿದಿದ್ದಾರೊ? ಇದಕ್ಕೆ ದೊರೆಯುವ ಉತ್ತರವು ನಾವು ನಮ್ಮನ್ನು ಮತ್ತು ನಮ್ಮ ಭವಿಷ್ಯವನ್ನು ಹೇಗೆ ವೀಕ್ಷಿಸುತ್ತೇವೆ ಎಂಬುದರ ಮೇಲೆ ಗಾಢವಾದ ಪ್ರಭಾವವನ್ನು ಬೀರುವುದು. ಆದರೆ, ಈ ಸಾಕ್ಷ್ಯವನ್ನು ಪರೀಕ್ಷಿಸುವ ಮೊದಲು ಮಾನವಕುಲದ ಮೂಲವನ್ನು ತುಸು ನೋಡುವುದು ನಮಗೆ ತಿಳಿವಳಿಕೆಯನ್ನು ಕೊಡುವುದು.

ಇದೆಲ್ಲ ಆರಂಭವಾದ ವಿಧ

ಏದೆನ್‌ ತೋಟದಲ್ಲಿ ಪ್ರಥಮ ಮಾನವ ಜೊತೆಯಾದ ಆದಾಮಹವ್ವರ ಪತನದ ವೃತ್ತಾಂತದ ಕುರಿತು ಅನೇಕರಿಗೆ ಪರಿಚಯವಿದೆ ಇಲ್ಲವೆ ಅವರು ಕಡಿಮೆಪಕ್ಷ ಅದರ ವಿಷಯ ಕೇಳಿದ್ದಾರೆ. ಆರಂಭದಲ್ಲೇ ಅವರನ್ನು ತಮ್ಮ ಜೀನ್‌ಗಳಲ್ಲಿ ಸ್ವಲ್ಪ ದೋಷವುಳ್ಳವರಾಗಿ ಸೃಷ್ಟಿಸಲಾಗಿತ್ತೊ, ಅಂದರೆ ಅವರು ಪಾಪ ಮತ್ತು ಅವಿಧೇಯತೆಯ ಕಡೆಗೆ ಓಲುವಂತೆ ಮಾಡುವ ಒಂದು ರೀತಿಯ ವಿನ್ಯಾಸದೋಷವಿತ್ತೊ?

ಯಾರ ಕ್ರಿಯೆಗಳೆಲ್ಲವೂ ಯಾವ ಕುಂದೂ ಇಲ್ಲದವುಗಳಾಗಿವೆಯೊ ಅಂತಹ ಸೃಷ್ಟಿಕರ್ತನಾದ ಯೆಹೋವನು, ತನ್ನ ಅತಿ ಶ್ರೇಷ್ಠವಾಗಿದ್ದ ಭೂಸೃಷ್ಟಿಯು “ಬಹು ಒಳ್ಳೇದಾಗಿತ್ತು” ಎಂದು ಉದ್ಗರಿಸಿದನು. (ಆದಿಕಾಂಡ 1:31; ಧರ್ಮೋಪದೇಶಕಾಂಡ 32:4) ತನ್ನ ಕೆಲಸವು ತೃಪ್ತಿಕರವಾಗಿತ್ತೆಂಬುದಕ್ಕೆ ಇನ್ನೂ ಹೆಚ್ಚಿನ ರುಜುವಾತಾಗಿ, ಆತನು ಮೊದಲ ಜೋಡಿಯನ್ನು ಆಶೀರ್ವದಿಸಿ, ಅವರು ವೃದ್ಧಿಯಾಗಿ, ಭೂಮಿಯನ್ನು ಮಾನವರಿಂದ ತುಂಬಿಸಿ, ಆತನ ಭೂಸೃಷ್ಟಿಯ ಜಾಗ್ರತೆಯನ್ನು ವಹಿಸಿಕೊಳ್ಳುವಂತೆ ಆಜ್ಞಾಪಿಸಿದನು. ತನ್ನ ಕೈಕೆಲಸದ ವಿಷಯದಲ್ಲಿ ಖಾತರಿಯಿಲ್ಲದ ಯಾವನೂ ಇಂತಹ ಆಜ್ಞೆಯನ್ನು ಕೊಡುತ್ತಿರಲಿಲ್ಲ.​—ಆದಿಕಾಂಡ 1:28.

ಪ್ರಥಮ ಮಾನವ ಜೋಡಿಯ ಸೃಷ್ಟಿಯ ಸಂಬಂಧದಲ್ಲಿ, ಬೈಬಲ್‌ ಹೇಳುವುದು: “ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” (ಆದಿಕಾಂಡ 1:27) ಇದರ ಅರ್ಥವು, ಮಾನವರು ತಮ್ಮ ದೈಹಿಕ ತೋರಿಕೆಯಲ್ಲಿ ದೇವರನ್ನು ಹೋಲುತ್ತಾರೆಂದಲ್ಲ. ಏಕೆಂದರೆ, “ದೇವರು ಆತ್ಮಸ್ವರೂಪನು.” (ಯೋಹಾನ 4:24) ಬದಲಿಗೆ, ಮಾನವ ಜೀವಿಗಳಿಗೆ ದೈವಿಕ ಗುಣಗಳು ಮತ್ತು ನೈತಿಕ ಪ್ರಜ್ಞೆ, ಅಂದರೆ ಒಂದು ಮನಸ್ಸಾಕ್ಷಿಯು ಕೊಡಲ್ಪಟ್ಟಿತ್ತು ಎಂದರ್ಥ. (ರೋಮಾಪುರ 2:​14, 15) ನೀತಿಯನ್ನಾರಿಸಿಕೊಳ್ಳುವ ನೈತಿಕ ಸ್ವತಂತ್ರ ಅವರಿಗಿತ್ತು. ಅವರು ವಿಷಯವನ್ನು ತೂಗಿನೋಡಿ ಯಾವ ಕ್ರಮವನ್ನು ಕೈಕೊಳ್ಳಬೇಕೆಂದು ನಿರ್ಣಯಿಸುವ ಸಾಮರ್ಥ್ಯವುಳ್ಳವರು ಆಗಿದ್ದರು.

ಹಾಗಿದ್ದರೂ, ನಮ್ಮ ಆದಿಹೆತ್ತವರು ನಿರ್ದೇಶನಗಳೇ ಇಲ್ಲದವರಾಗಿರಲಿಲ್ಲ. ಬದಲಾಗಿ, ತಪ್ಪು ಮಾಡುವದರ ದುಷ್ಪರಿಣಾಮಗಳ ಕುರಿತು ಅವರನ್ನು ಎಚ್ಚರಿಸಲಾಗಿತ್ತು. (ಆದಿಕಾಂಡ 2:17) ಆದಾಮನು ಒಂದು ನೈತಿಕ ನಿರ್ಣಯವನ್ನು ಮಾಡಬೇಕಾದಾಗ, ಅವನಿಗೆ ಆ ಸಮಯದಲ್ಲಿ ಯಾವುದು ಯಥೋಚಿತ ಅಥವಾ ಲಾಭದಾಯಕವಾಗಿದೆ ಎಂದು ಕಂಡುಬಂತೊ ಅದನ್ನು ಮಾಡಲು ಅವನು ಆರಿಸಿಕೊಂಡನು ಎಂದು ಪುರಾವೆಗಳು ಸೂಚಿಸುತ್ತವೆ. ತನಗೆ ಸೃಷ್ಟಿಕರ್ತನೊಂದಿಗಿದ್ದ ಸಂಬಂಧದ ಕುರಿತು ಅಥವಾ ತನ್ನ ಕ್ರಿಯೆಯ ದೀರ್ಘಕಾಲಿಕ ಪರಿಣಾಮಗಳ ಕುರಿತು ಚಿಂತಿಸುವ ಬದಲು ಅವನು ತನ್ನ ಹೆಂಡತಿಯೊಂದಿಗೆ ತಪ್ಪುಮಾಡುವುದರಲ್ಲಿ ಜೊತೆಗೂಡಿದನು. ತರುವಾಯ ಅವನು, ದೇವರು ಕೊಟ್ಟ ಸ್ತ್ರೀಯು ತನ್ನನ್ನು ದಾರಿತಪ್ಪಿಸಿದಳೆಂದು ಹೇಳಿ ಈ ದೋಷವನ್ನು ಯೆಹೋವನ ಮೇಲೆ ಹಾಕಲೂ ಪ್ರಯತ್ನಿಸಿದನು.​—ಆದಿಕಾಂಡ 3:6, 12; 1 ತಿಮೊಥೆಯ 2:14.

ಆದಾಮಹವ್ವರ ಪಾಪಕ್ಕೆ ದೇವರು ತೋರಿಸಿದ ಪ್ರತಿಕ್ರಿಯೆಯು ಒಂದು ಸಂಗತಿಯನ್ನು ಹೊರಗೆಡಹುತ್ತದೆ. ಆತನು ಅವರ ಜೀನ್‌ಗಳಲ್ಲಿದ್ದ ಯಾವುದೊ ‘ವಿನ್ಯಾಸ ದೋಷ’ವನ್ನು ಸರಿಪಡಿಸಲು ಪ್ರಯತ್ನಿಸಲಿಲ್ಲ. ಬದಲಿಗೆ, ಆತನು ಅವರ ವರ್ತನೆಗಳ ದುಷ್ಪರಿಣಾಮವು ಯಾವುದೆಂದು ಹೇಳಿದ್ದನೊ ಅದನ್ನು ಕಾರ್ಯರೂಪಕ್ಕೆ ತಂದನು. ಇದು ಅವರನ್ನು ಕ್ರಮೇಣ ಸಾವಿಗೆ ನಡೆಸಿತು. (ಆದಿಕಾಂಡ 3:17-19) ಈ ಆದಿ ಇತಿಹಾಸವು ಮಾನವ ನಡತೆಯ ಸ್ವಭಾವದ ಮೇಲೆ ತುಂಬ ಬೆಳಕನ್ನು ಬೀರುತ್ತದೆ. *

ಜೀನ್‌ಗಳು ಕಾರಣವೆಂಬ ವಾದದ ವಿರುದ್ಧ ರುಜುವಾತು

ವಿಜ್ಞಾನಿಗಳು ದೀರ್ಘಕಾಲದಿಂದ ಮಾನವ ರೋಗ ಮತ್ತು ವರ್ತನೆಗಳಿಗೆ ಕಾರಣಗಳನ್ನೂ ಪರಿಹಾರಗಳನ್ನೂ ಕಂಡುಹಿಡಿಯುವ ಬೃಹತ್ತಾದ ಕೆಲಸದಲ್ಲಿ ತೊಡಗಿದ್ದಾರೆ. ಸಂಶೋಧಕರ ಆರು ತಂಡಗಳು ಹತ್ತು ವರುಷ ಕೆಲಸ ಮಾಡಿದ ಬಳಿಕ, ಹಂಟಿಂಗ್‌ಟನ್‌ ರೋಗಕ್ಕೆ ಸಂಬಂಧಿತವಾದ ಜೀನನ್ನು ಬೇರ್ಪಡಿಸಲಾಯಿತಾದರೂ, ಆ ಜೀನ್‌ ಆ ರೋಗವನ್ನು ಹೇಗೆ ಉಂಟುಮಾಡುತ್ತದೆಂದು ಆ ಸಂಶೋಧಕರಿಗೆ ಇನ್ನೂ ತಿಳಿದಿರುವುದಿಲ್ಲ. ಆದರೂ, ಈ ಸಂಶೋಧನೆಯ ಕುರಿತು ವರದಿ ಮಾಡುತ್ತ, ಸೈಅಂಟಿಫಿಕ್‌ ಅಮೇರಿಕನ್‌ ಪತ್ರಿಕೆಯು ಹಾರ್ವರ್ಡ್‌ ಜೀವಶಾಸ್ತ್ರಜ್ಞ ಈವನ್‌ ಬಾಲಬನ್‌, “ವರ್ತನೆಗೆ ಸಂಬಂಧಿಸಿದ ರೋಗಗಳ ಜೀನ್‌ಗಳನ್ನು ಕಂಡುಹಿಡಿಯುವುದು ಎಷ್ಟೋ ಹೆಚ್ಚು ಕಷ್ಟಕರವಾಗಿದೆ” ಎಂದು ಹೇಳಿದರೆಂಬುದನ್ನು ಉದ್ಧರಿಸುತ್ತದೆ.

ವಾಸ್ತವವೇನಂದರೆ, ನಿರ್ದಿಷ್ಟ ಜೀನ್‌ಗಳನ್ನು ಮಾನವ ವರ್ತನೆಗೆ ಜೋಡಿಸಲು ಮಾಡಿರುವ ಸಂಶೋಧನಾ ಪ್ರಯತ್ನವು ಯಶಸ್ಸನ್ನು ಕಂಡಿಲ್ಲ. ಉದಾಹರಣೆಗೆ, ಸೈಖಾಲಜಿ ಟುಡೇ ಪತ್ರಿಕೆಯಲ್ಲಿ ಖಿನ್ನತೆಗೆ ಜೀನ್‌ಸಂಬಂಧಿತ ಕಾರಣವನ್ನು ಕಂಡುಹಿಡಿಯುವ ಪ್ರಯತ್ನದ ಸಂಬಂಧದಲ್ಲಿ ಒಂದು ವರದಿಯು ಹೇಳುವುದು: “ಗಂಭೀರವಾದ ಮಾನಸಿಕ ರೋಗಗಳ ವಿಷಯದಲ್ಲಿ ಸೋಂಕುಶಾಸ್ತ್ರೀಯ ದತ್ತಾಂಶವು, ಆ ರೋಗಗಳಿಗೆ ಕೇವಲ ಜೀನ್‌ಸಂಬಂಧಿತ ಕಾರಣಗಳನ್ನು ಕೊಡಲಾಗುವುದಿಲ್ಲವೆಂದು ಸ್ಪಷ್ಟೀಕರಿಸುತ್ತವೆ.” ಆ ವರದಿಯು ಒಂದು ದೃಷ್ಟಾಂತವನ್ನು ಕೊಡುತ್ತದೆ: “1905ಕ್ಕೆ ಮೊದಲು ಹುಟ್ಟಿದ್ದ ಅಮೆರಿಕನ್‌ ಜನರಲ್ಲಿ ಅವರು 75ನೆಯ ವರುಷ ಪ್ರಾಯಕ್ಕೆ ಬರುವಾಗ 1 ಪ್ರತಿಶತ ಖಿನ್ನತೆಯಿತ್ತು. ಆದರೆ ಅರ್ಧ ಶತಮಾನದ ಬಳಿಕ ಹುಟ್ಟಿದ ಅಮೆರಿಕನರಲ್ಲಿ, 6 ಪ್ರತಿಶತ ಮಂದಿ 24ನೆಯ ವರುಷ ಪ್ರಾಯದೊಳಗೆ ಖಿನ್ನತೆಯನ್ನು ಅನುಭವಿಸಿದರು.” ಈ ಕಾರಣದಿಂದ ಅದು, ಇಷ್ಟೊಂದು ಅಲ್ಪಾವಧಿಯಲ್ಲಿ, ಕೇವಲ ಬಾಹ್ಯ ಇಲ್ಲವೇ ಸಾಮಾಜಿಕ ಅಂಶಗಳು ಮಾತ್ರ ಇಷ್ಟೊಂದು ಗಣನೀಯ ಬದಲಾವಣೆಗಳನ್ನು ಬರಮಾಡಬಲ್ಲವೆಂಬ ತೀರ್ಮಾನಕ್ಕೆ ಬರುತ್ತದೆ.

ಇವು ಮತ್ತು ಇನ್ನೂ ಅಸಂಖ್ಯಾತ ಅಧ್ಯಯನಗಳು ನಮಗೇನು ತಿಳಿಸುತ್ತವೆ? ಜೀನ್‌ಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪಾತ್ರ ವಹಿಸಬಹುದಾದರೂ, ಬೇರೆ ಪ್ರಭಾವಗಳೂ ಪಾತ್ರ ವಹಿಸುತ್ತವೆಂಬುದು ಸ್ಪಷ್ಟ. ಇದಕ್ಕೆ ಒಂದು ಕಾರಣವು ಆಧುನಿಕ ದಿನಗಳಲ್ಲಿ ವಿಪರೀತವಾಗಿ ಬದಲಾವಣೆ ಹೊಂದಿರುವ ನಮ್ಮ ಪರಿಸರವೇ. ಇಂದಿನ ಯುವಜನರು ಜನಪ್ರಿಯ ವಿನೋದಾವಳಿಗಳಲ್ಲಿ ಯಾವುದಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆಂಬುದರ ಕುರಿತು ಹುಡುಗರು ಹುಡುಗರಾಗಿಯೇ ಇರುವರು (ಇಂಗ್ಲಿಷ್‌) ಎಂಬ ಪುಸ್ತಕವು ಅವಲೋಕಿಸುವುದೇನಂದರೆ, ಮಕ್ಕಳು “ಸಾವಿರಾರು ತಾಸು ಟಿವಿ ಪ್ರದರ್ಶನಗಳನ್ನೊ ಚಲನಚಿತ್ರಗಳನ್ನೊ ನೋಡುತ್ತಿರುವಾಗ ಮತ್ತು ಅದರಲ್ಲಿ ಅವರು ಜನರು ಹೊಡೆಯಲ್ಪಡುವುದನ್ನು, ಗುಂಡಿಗೆ ಬಲಿ ಬೀಳುವುದನ್ನು, ತಿವಿಯಲ್ಪಡುವುದನ್ನು, ಜನರ ಹೊಟ್ಟೆ ಸೀಳಲ್ಪಡುವುದನ್ನು, ಜನರು ಕೊಚ್ಚಿ ಹಾಕಲ್ಪಡುವುದನ್ನು, ಅವರ ಚರ್ಮ ಸುಲಿಯಲ್ಪಡುವುದನ್ನು ಅಥವಾ ಅವರು ಛೇದಿಸಲ್ಪಡುವುದನ್ನು ನೋಡುವಾಗ ಮತ್ತು ಮಕ್ಕಳು, ಬಲಾತ್ಕಾರ ಸಂಭೋಗ, ಆತ್ಮಹತ್ಯೆ, ಅಮಲೌಷಧ, ಮದ್ಯ ಹಾಗೂ ಅಂಧಾಭಿಮಾನವನ್ನು ಉನ್ನತ ಸ್ಥಾನಕ್ಕೇರಿಸುವ ಸಂಗೀತಗಳನ್ನು ಕೇಳುತ್ತಾ ಬೆಳೆಯುವಾಗ” ಅವರು ಸ್ವಸ್ಥ ನೈತಿಕ ಮೂಲತತ್ತ್ವಗಳನ್ನು ಬೆಳೆಸಿಕೊಳ್ಳುವುದು ಅಸಂಭವ.

“ಇಹಲೋಕಾಧಿಪತಿ”ಯಾದ ಸೈತಾನನು ಮಾನವನ ತುಚ್ಛ ಬಯಕೆಗಳನ್ನು ತೃಪ್ತಿಪಡಿಸುವ ಪರಿಸರವನ್ನು ರೂಪಿಸಿದ್ದಾನೆಂಬುದು ಸ್ಪಷ್ಟ. ಮತ್ತು ಇಂತಹ ಪರಿಸರವು ನಮ್ಮೆಲ್ಲರ ಮೇಲೆ ಬೀರುವ ಬಲಾಢ್ಯವಾದ ಪ್ರಭಾವವನ್ನು ಯಾರು ತಾನೇ ಅಲ್ಲಗಳೆಯಬಲ್ಲರು?​—ಯೋಹಾನ 12:31; ಎಫೆಸ 6:12; ಪ್ರಕಟನೆ 12:9, 12.

ಮಾನವಕುಲದ ಉಪದ್ರವಗಳ ಮೂಲ

ನಾವು ಈಗಾಗಲೇ ನೋಡಿರುವಂತೆ, ಪ್ರಥಮ ಮಾನವ ಜೋಡಿಯು ಪಾಪ ಮಾಡಿದಾಗ ಮಾನವಕುಲದ ಸಮಸ್ಯೆಗಳು ಆರಂಭವಾದವು. ಪರಿಣಾಮವೇನು? ಆದಾಮನ ವಂಶಜರು ಆದಾಮನ ಪಾಪಕ್ಕೆ ಹೊಣೆಗಾರರಲ್ಲವಾದರೂ, ಅವರೆಲ್ಲರೂ ಪಾಪ, ಅಪರಿಪೂರ್ಣತೆ ಮತ್ತು ಮರಣವನ್ನು ಬಳುವಳಿಯಾಗಿ ಪಡೆದು ಹುಟ್ಟಿದ್ದಾರೆ. ಬೈಬಲು ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”​—ರೋಮಾಪುರ 5:12.

ಮಾನವನ ಅಪರಿಪೂರ್ಣತೆಯು ಅವನನ್ನು ಖಂಡಿತವಾಗಿಯೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾಕುತ್ತದೆ. ಆದರೆ ಇದು ಅವನಿಗಿರುವ ನೈತಿಕ ಜವಾಬ್ದಾರಿಯನ್ನೆಲ್ಲ ತೊಲಗಿಸಿಬಿಡುವುದಿಲ್ಲ. ಯಾರು ಜೀವಕ್ಕಾಗಿರುವ ಯೆಹೋವನ ಏರ್ಪಾಡಿನಲ್ಲಿ ನಂಬಿಕೆಯಿಡುತ್ತಾರೊ ಮತ್ತು ಯಾರು ತಮ್ಮ ಜೀವನಗಳನ್ನು ದೇವರ ಮಟ್ಟಗಳಿಗೆ ಹೊಂದಿಸಿಕೊಳ್ಳುತ್ತಾರೊ ಅವರಿಗೆ ಆತನ ಒಪ್ಪಿಗೆಯಿರುತ್ತದೆಂದು ಬೈಬಲು ತೋರಿಸುತ್ತದೆ. ತನ್ನ ಪ್ರೀತಿಪೂರ್ವಕ ದಯೆಯ ಕಾರಣ, ಯೆಹೋವನು ಮಾನವಕುಲವನ್ನು ವಿಮೋಚಿಸಲು, ಆದಾಮನು ಕಳೆದುಕೊಂಡದ್ದನ್ನು ಹಿಂದಿರುಗಿಸಲೊ ಎಂಬಂತೆ ಕೃಪಾಪೂರ್ಣವಾದ ಒದಗಿಸುವಿಕೆಯನ್ನು ಮಾಡಿದನು. ಆ ಒದಗಿಸುವಿಕೆಯು ತನ್ನ ಪರಿಪೂರ್ಣ ಪುತ್ರನಾದ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವೇ. ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”​—ಯೋಹಾನ 3:16; 1 ಕೊರಿಂಥ 15:21, 22.

ಅಪೊಸ್ತಲ ಪೌಲನು ಈ ಒದಗಿಸುವಿಕೆಗೆ ತನ್ನ ಆಳವಾದ ಕೃತಜ್ಞತೆಯನ್ನು ತೋರಿಸಿ ಹೇಳಿದ್ದು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು? ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:24, 25) ತಾನು ಬಲಹೀನತೆಯ ಕಾರಣ ಪಾಪಕ್ಕೆ ಬಲಿಬೀಳುವುದಾದರೆ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇರೆಗೆ ದೇವರಿಂದ ಕ್ಷಮೆಯನ್ನು ಕೇಳಿಕೊಳ್ಳಬಹುದಿತ್ತೆಂದು ಪೌಲನಿಗೆ ತಿಳಿದಿತ್ತು. *

ಒಂದನೆಯ ಶತಮಾನದಲ್ಲಿ ನಡೆದಂತೆ, ಈ ಹಿಂದೆ ತೀರ ಕೆಟ್ಟ ಜೀವನಗಳನ್ನು ನಡೆಸುತ್ತಿದ್ದ ಅಥವಾ ನಿರೀಕ್ಷಾಹೀನ ಸ್ಥಿತಿಯಲ್ಲಿದ್ದಂತೆ ತೋರುತ್ತಿದ್ದ ಅನೇಕರು, ಇಂದು ಬೈಬಲ್‌ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಬಂದು, ಬೇಕಾದ ಬದಲಾವಣೆಗಳನ್ನು ಮಾಡುತ್ತ, ದೇವರ ಆಶೀರ್ವಾದಗಳನ್ನು ಪಡೆಯುವ ಸಾಲಿನಲ್ಲಿದ್ದಾರೆ. ಅವರು ಮಾಡಬೇಕಾಗಿದ್ದ ಬದಲಾವಣೆಗಳು ಸುಲಭವಾದವುಗಳಾಗಿರಲಿಲ್ಲ, ಮತ್ತು ಅನೇಕರು ಈಗಲೂ ಹಾನಿಕಾರಕ ಪ್ರವೃತ್ತಿಗಳೊಂದಿಗೆ ಹೋರಾಡಬೇಕಾಗುತ್ತದೆ. ಆದರೆ ದೇವರ ಸಹಾಯದಿಂದ ಅವರು ಸಮಗ್ರತೆಯನ್ನು ಕಾಪಾಡಿಕೊಳ್ಳಶಕ್ತರಾಗಿದ್ದು, ಆತನನ್ನು ಸೇವಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. (ಫಿಲಿಪ್ಪಿ 4:13) ದೇವರನ್ನು ಪ್ರೀತಿಸುವ ಸಲುವಾಗಿ ದೊಡ್ಡ ಬದಲಾವಣೆಗಳನ್ನು ಮಾಡಿದ ಒಬ್ಬನ ದೃಷ್ಟಾಂತವನ್ನು ಪರಿಗಣಿಸಿರಿ.

ಒಂದು ಪ್ರೋತ್ಸಾಹಜನಕ ಅನುಭವ

“ನಾನು ಚಿಕ್ಕ ಹುಡುಗನಾಗಿ ಬೋರ್ಡಿಂಗ್‌ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ನಾನು ಸಲಿಂಗಕಾಮಿ ಆಚರಣೆಯಲ್ಲಿ ಒಳಗೂಡಿದರೂ, ನನ್ನನ್ನೇ ಸಲಿಂಗೀಕಾಮಿಯೆಂದು ಎಂದಿಗೂ ಎಣಿಸುತ್ತಿರಲಿಲ್ಲ. ನನ್ನ ಹೆತ್ತವರು ವಿವಾಹ ವಿಚ್ಛೇದನೆ ಮಾಡಿಕೊಂಡಿದ್ದರು, ಮತ್ತು ಹೆತ್ತವರ ಪ್ರೀತಿಗಾಗಿ ನಾನು ಹಾರೈಸುತ್ತಿದ್ದರೂ ಅದು ನನಗೆ ದೊರೆಯಲಿಲ್ಲ. ಶಾಲೆ ತೀರಿಸಿದ ಮೇಲೆ, ನಾನು ಕಡ್ಡಾಯದ ಮಿಲಿಟರಿ ಸೇವೆ ಮಾಡಿದೆ. ಅಲ್ಲಿ ನನ್ನ ಸೈನಿಕ ಸಾಲುಮನೆಯಾಚೆಗಿನ ಸಾಲುಮನೆಯಲ್ಲಿ ಸಲಿಂಗೀಕಾಮಿಗಳ ಗುಂಪೊಂದಿತ್ತು. ಅವರ ಜೀವನಶೈಲಿಯನ್ನು ನೋಡಿ ಅದನ್ನು ಅಪೇಕ್ಷಿಸಿದ ನಾನು ಅವರೊಂದಿಗೆ ಕೂಡಿಕೊಳ್ಳತೊಡಗಿದೆ. ಅವರೊಂದಿಗೆ ಒಂದು ವರ್ಷಕಾಲ ಕೂಡಿಕೊಂಡ ಮೇಲೆ ನಾನೂ ಒಬ್ಬ ಸಲಿಂಗೀಕಾಮಿಯೆಂದು ಎಣಿಸತೊಡಗಿದೆ. ‘ನಾನು ಹಾಗೆಯೇ ರಚಿಸಲ್ಪಟ್ಟಿದ್ದೇನೆ ಆದ್ದರಿಂದ ಅದರ ವಿಷಯದಲ್ಲಿ ನಾನೇನೂ ಮಾಡಸಾಧ್ಯವಿಲ್ಲ’ ಎಂದು ನಾನು ತರ್ಕಿಸಿದೆ.

“ನಾನು ಅವರ ಶಬ್ದಭಂಡಾರವುಳ್ಳ ಭಾಷೆಯನ್ನು ಕಲಿಯತೊಡಗಿ ಅವರ ಕ್ಲಬ್‌ಗಳಿಗೆ ಹೋದೆ. ಅಲ್ಲಿ ಅಮಲೌಷಧ ಮತ್ತು ಮದ್ಯ ಧಾರಾಳವಾಗಿ ಹರಿಯುತ್ತಿತ್ತು. ಹೊರಗಣ ತೋರಿಕೆ ಅತಿ ಉತ್ತೇಜಕವೂ ಆಕರ್ಷಕವೂ ಆಗಿದ್ದರೂ, ಅದು ನಿಜವಾಗಿಯೂ ಜುಗುಪ್ಸೆ ಹುಟ್ಟಿಸುವಂಥದ್ದಾಗಿತ್ತು. ಆಂತರ್ಯದಲ್ಲಿ, ಈ ಸಂಬಂಧವು ಸ್ವಾಭಾವಿಕವಲ್ಲವೆಂದೂ ಇದಕ್ಕೆ ಭವಿಷ್ಯವೇ ಇಲ್ಲವೆಂದೂ ನನಗೆ ತಿಳಿದಿತ್ತು.

“ಒಂದು ಚಿಕ್ಕ ಪಟ್ಟಣದಲ್ಲಿ, ನಾನು ಯೆಹೋವನ ಸಾಕ್ಷಿಗಳ ಒಂದು ರಾಜ್ಯ ಸಭಾಗೃಹವನ್ನು ನೋಡಿದೆ. ಆಗ ಅಲ್ಲಿ ಕೂಟ ನಡೆಯುತ್ತಾ ಇತ್ತು. ನಾನು ಒಳಗೆ ಹೋಗಿ ಭಾವೀ ಪರದೈಸಿನ ಪರಿಸ್ಥಿತಿಗಳನ್ನು ವಿವರಿಸುತ್ತಿದ್ದ ಭಾಷಣವನ್ನು ಕೇಳಿದೆ. ಆ ಬಳಿಕ, ನಾನು ಕೆಲವು ಮಂದಿ ಸಾಕ್ಷಿಗಳನ್ನು ಭೇಟಿಯಾದಾಗ ಅವರು ಒಂದು ಸಮ್ಮೇಳನಕ್ಕೆ ನನ್ನನ್ನು ಆಮಂತ್ರಿಸಿದರು. ನಾನು ಹೋದಾಗ ಅಲ್ಲಿ ಇಡೀ ಕುಟುಂಬಗಳು ಜೊತೆಯಾಗಿ ಆರಾಧಿಸುವುದನ್ನು ನೋಡುವುದು ಒಂದು ಅಚ್ಚರಿಯ ವಿಷಯವಾಗಿತ್ತು. ನಾನು ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನಕ್ಕೆ ತೊಡಗಿದೆ.

“ಬೈಬಲಿನಿಂದ ಕಲಿತದ್ದನ್ನು ಅನ್ವಯಿಸುವುದು ಕಷ್ಟಕರವಾಗಿದ್ದರೂ, ನಾನು ಅದನ್ನು ಅನ್ವಯಿಸಿಕೊಳ್ಳತೊಡಗಿದೆ. ನಾನು ನನ್ನ ಎಲ್ಲ ಅಶುದ್ಧ ಆಚಾರಗಳಿಂದ ಬಿಡುಗಡೆ ಹೊಂದಿ ಹೊರಬರಲು ಶಕ್ತನಾದೆ. ನಾನು 14 ತಿಂಗಳುಗಳ ತನಕ ಬೈಬಲ್‌ ಅಧ್ಯಯನ ಮಾಡಿದ ನಂತರ, ಯೆಹೋವನಿಗೆ ನನ್ನ ಜೀವವನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದಿದೆ. ನನ್ನ ಜೀವನದಲ್ಲಿ ಪ್ರಥಮ ಬಾರಿ ನನಗೆ ನಿಜ ಸ್ನೇಹಿತರು ದೊರಕಿದರು. ಇತರರು ಬೈಬಲ್‌ ಸತ್ಯವನ್ನು ಕಲಿಯುವಂತೆ ಸಹಾಯಮಾಡಲು ನನಗೆ ಸಾಧ್ಯವಾಗಿದೆ ಮತ್ತು ನಾನು ಈಗ ಕ್ರೈಸ್ತ ಸಭೆಯಲ್ಲಿ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತೇನೆ. ಯೆಹೋವನು ನಿಜವಾಗಿಯೂ ನನ್ನನ್ನು ಆಶೀರ್ವದಿಸಿದ್ದಾನೆ.”

ನಾವು ಜವಾಬ್ದಾರರು

ನಮ್ಮ ದುರ್ನಡತೆಗೆ ಪೂರ್ತಿ ದೋಷವನ್ನು ನಮ್ಮ ಜೀನ್‌ಗಳ ಮೇಲೆ ಹೊರಿಸಲು ಪ್ರಯತ್ನಿಸುವುದು ವ್ಯರ್ಥ. ಅದು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಜಯಿಸಲು ಸಹಾಯಮಾಡುವ ಬದಲಾಗಿ, ಸೈಖಾಲಜಿ ಟುಡೇ ಹೇಳುವಂತೆ, “ನಮ್ಮ ಸಮಸ್ಯೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲವಾಗಿರುವ ನಿಸ್ಸಹಾಯಕತೆಯನ್ನು ಕಲಿಸೀತು. ಆ ಸಮಸ್ಯೆಗಳ ಸಂಭವಿಸುವಿಕೆಗಳನ್ನು ಕಡಮೆ ಮಾಡುವ ಬದಲಾಗಿ, ಇದು ಅವುಗಳ ಬೆಳೆವಣಿಗೆಗೆ ಸಹಾಯಮಾಡಿದೆ ಎಂದು ಕಾಣುತ್ತದೆ.”

ನಾವು ನಮ್ಮ ಸ್ವಂತ ಪಾಪಪೂರ್ಣ ಪ್ರವೃತ್ತಿಗಳು ಮತ್ತು ದೇವರಿಗೆ ವಿಧೇಯರಾಗುವುದರಿಂದ ನಮ್ಮನ್ನು ಅಪಕರ್ಷಿಸುವ ಸೈತಾನನ ಪ್ರಯತ್ನಗಳು ಸೇರಿರುವ ಮಹತ್ತಾದ ಪ್ರತಿಕೂಲ ಶಕ್ತಿಗಳೊಂದಿಗೆ ಹೋರಾಡಲಿಕ್ಕಿವೆಯೆಂಬುದು ನಿಜ. (1 ಪೇತ್ರ 5:8) ನಮ್ಮ ಜೀನ್‌ಗಳು ನಮ್ಮನ್ನು ಒಂದಲ್ಲ ಒಂದು ವಿಧದಲ್ಲಿ ಪ್ರಭಾವಿಸಬಹುದೆಂಬುದು ನಿಜ. ಆದರೆ ನಾವು ನಿಸ್ಸಹಾಯಕರಲ್ಲವೆಂಬುದು ಖಂಡಿತ. ಸತ್ಕ್ರೈಸ್ತರಿಗೆ ಬಲಾಢ್ಯವಾದ ಸಹಾಯಕರಿದ್ದಾರೆ​—ಯೆಹೋವನು, ಯೇಸು ಕ್ರಿಸ್ತನು, ದೇವರ ಪವಿತ್ರಾತ್ಮ, ದೇವರ ವಾಕ್ಯವಾದ ಬೈಬಲು ಮತ್ತು ಕ್ರೈಸ್ತ ಸಭೆ ನಮಗಿವೆ.​—1 ತಿಮೊಥೆಯ 6:11, 12; 1 ಯೋಹಾನ 2:1.

ಇಸ್ರಾಯೇಲ್‌ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು, ದೇವರ ಮುಂದೆ ಆ ಜನರಿಗಿದ್ದ ಜವಾಬ್ದಾರಿಯನ್ನು ಮೋಶೆಯು ಜ್ಞಾಪಕ ಹುಟ್ಟಿಸಿದನು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ. ಆತನನ್ನು ಹೊಂದಿಕೊಂಡೇ ಇರ್ರಿ.” (ಓರೆ ಅಕ್ಷರಗಳು ನಮ್ಮವು.) (ಧರ್ಮೋಪದೇಶಕಾಂಡ 30:19, 20) ಅದೇ ರೀತಿ ಇಂದು ಜವಾಬ್ದಾರನಾದ ಪ್ರತಿಯೊಬ್ಬನು ದೇವರನ್ನು ಸೇವಿಸುವ ಮತ್ತು ಆತನ ಆವಶ್ಯಕತೆಗಳನ್ನು ಪೂರೈಸುವ ವಿಷಯದಲ್ಲಿ ತನ್ನ ವೈಯಕ್ತಿಕ ನಿರ್ಣಯವನ್ನು ಮಾಡಲು ಹಂಗಿಗನಾಗಿದ್ದಾನೆ.​—ಗಲಾತ್ಯ 6:​7, 8.

[ಪಾದಟಿಪ್ಪಣಿಗಳು]

^ ಪ್ಯಾರ. 10 ಸೆಪ್ಟೆಂಬರ್‌ 22, 1996ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ, 3-8ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 19 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ ಪುಟಗಳು 62-9ನ್ನು ನೋಡಿ.

[ಪುಟ 9ರಲ್ಲಿರುವ ಚಿತ್ರಗಳು]

ಆದಾಮಹವ್ವರ ಜೀನ್‌ಗಳಲ್ಲಿನ ಯಾವುದೊ ದೋಷದಿಂದಾಗಿ ಅವರು ಪಾಪಮಾಡುವ ಮುನ್‌ಪ್ರವೃತ್ತಿಯುಳ್ಳವರಾಗಿದ್ದರೊ?

[ಪುಟ 10ರಲ್ಲಿರುವ ಚಿತ್ರಗಳು]

ಪ್ರತಿಯೊಬ್ಬನು ತನ್ನ ನಿರ್ಣಯಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೊ?

[ಕೃಪೆ]

ಅಮಲೌಷಧ ಬಳಸುವವಳು: Godo-Foto

[ಪುಟ 11ರಲ್ಲಿರುವ ಚಿತ್ರ]

ಮಾನವ ವರ್ತನೆಗಳಿಗೆ ಜೀನ್‌ ಸಂಬಂಧಿತ ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನಗಳು ಯಶಸ್ವಿಯಾಗಿಲ್ಲ

[ಪುಟ 12ರಲ್ಲಿರುವ ಚಿತ್ರ]

ಬೈಬಲ್‌ ಏನು ಹೇಳುತ್ತದೊ ಅದನ್ನು ಅನ್ವಯಿಸಿಕೊಳ್ಳುವುದು ಯಥಾರ್ಥವಂತರಿಗೆ ಬದಲಾವಣೆ ಮಾಡುವಂತೆ ಸಹಾಯಮಾಡಬಲ್ಲದು