ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ನೀತಿಯಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಯೆಹೋವನ ನೀತಿಯಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಯೆಹೋವನ ನೀತಿಯಲ್ಲಿ ಆನಂದವನ್ನು ಕಂಡುಕೊಳ್ಳಿರಿ

“ನೀತಿ ಕೃಪೆಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು.”​—ಜ್ಞಾನೋಕ್ತಿ 21:21.

1. ಇಂದಿನ ಜನರ ಯಾವ ರೀತಿನೀತಿಗಳು ವಿಪತ್ಕಾರಕ ಫಲಿತಾಂಶಗಳಿಗೆ ನಡೆಸಿವೆ?

“ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ.” (ಜ್ಞಾನೋಕ್ತಿ 16:25) ಇಂದಿನ ಹೆಚ್ಚಿನ ಜನರ ಮಾರ್ಗಗಳನ್ನು ಈ ಬೈಬಲ್‌ ಜ್ಞಾನೋಕ್ತಿಯು ಎಷ್ಟು ನಿಷ್ಕೃಷ್ಟವಾಗಿ ವರ್ಣಿಸುತ್ತದೆ! ಸಾಮಾನ್ಯವಾಗಿ, ಜನರು ತಮ್ಮ ದೃಷ್ಟಿಯಲ್ಲಿ ಸರಿಯಾಗಿ ಕಾಣುವುದನ್ನೇ ಮಾಡುತ್ತಾರೆ. ಮತ್ತು ಹೀಗೆ ಮಾಡುವಾಗ ಅವರು ಇತರರ ಅತಿ ಮೂಲಾವಶ್ಯಕತೆಗಳನ್ನೂ ಅಲಕ್ಷಿಸುತ್ತಾರೆ. (ಜ್ಞಾನೋಕ್ತಿ 21:2) ದೇಶದ ಕಾನೂನು ಮತ್ತು ಮಟ್ಟಗಳಿಗೆ ಅವರು ಬಾಯುಪಚಾರಮಾಡಿದರೂ, ಸಾಧ್ಯವಿರುವಲ್ಲೆಲ್ಲ ಅವುಗಳಿಂದ ನುಣುಚಿಕೊಳ್ಳುತ್ತಾರೆ. ಇದು ತುಂಡುತುಂಡಾಗಿರುವ, ಅಸ್ತವ್ಯಸ್ತವಾಗಿರುವ ಮತ್ತು ತಬ್ಬಿಬ್ಬಾಗಿರುವ ಸಮಾಜವನ್ನು ಫಲಿಸಿದೆ.​—2 ತಿಮೊಥೆಯ 3:​1-5.

2. ಮಾನವನ ಸ್ವಂತ ಒಳಿತಿಗಾಗಿ ಯಾವುದು ತುರ್ತಾಗಿ ಬೇಕಾಗಿದೆ?

2 ನಮ್ಮ ಒಳಿತಿಗಾಗಿಯೂ ಇಡೀ ಮಾನವ ಕುಟುಂಬದ ಶಾಂತಿ ಮತ್ತು ಭದ್ರತೆಗಾಗಿಯೂ, ನಮಗೆ ನ್ಯಾಯವಾದ ಮತ್ತು ಸರಿಯಾದ, ಎಲ್ಲ ಜನರು ಅಂಗೀಕರಿಸಿ ವಿಧೇಯರಾಗಲು ಬಯಸುವ ಒಂದು ನಿಯಮ ಅಥವಾ ಮಟ್ಟವು ತುರ್ತಾಗಿ ಬೇಕಾಗಿದೆ. ಯಾವನೇ ಮಾನವನು ಪ್ರಸ್ತಾಪಿಸುವ ನಿಯಮ ಅಥವಾ ಮಟ್ಟವು, ಅವನೆಷ್ಟೇ ಚುರುಕು ಬುದ್ಧಿಯವನು ಅಥವಾ ಪ್ರಾಮಾಣಿಕನಾಗಿರಲಿ, ಈ ಆವಶ್ಯಕತೆಯನ್ನು ಪೂರೈಸದೆಂಬುದು ಸುವ್ಯಕ್ತ. (ಯೆರೆಮೀಯ 10:23; ರೋಮಾಪುರ 3:10, 23) ಅಂತಹ ಒಂದು ಮಟ್ಟವು ಇರುವಲ್ಲಿ, ಅದು ಎಲ್ಲಿರಬಹುದು ಮತ್ತು ಅದು ಹೇಗಿರಬಹುದು? ಪ್ರಾಯಶಃ ಹೆಚ್ಚು ಪ್ರಾಮುಖ್ಯವಾದ ಪ್ರಶ್ನೆಯು ಇದಾಗಿದೆ: ಅಂತಹ ಒಂದು ಆದರ್ಶ ಮಟ್ಟವು ಇರುವಲ್ಲಿ, ನೀವು ಅದರಲ್ಲಿ ಆನಂದಿಸಿ, ಅದಕ್ಕೆ ವಿಧೇಯರಾಗುವಿರೊ?

ನೀತಿಯ ಮಟ್ಟವನ್ನು ಕಂಡುಹಿಡಿಯುವುದು

3. ಎಲ್ಲರಿಗೆ ಸ್ವೀಕಾರಾರ್ಹವೂ ಪ್ರಯೋಜನದಾಯಕವೂ ಆದ ಮಟ್ಟವನ್ನು ಒದಗಿಸಲು ಅತ್ಯರ್ಹನು ಯಾರು ಮತ್ತು ಏಕೆ?

3 ಎಲ್ಲರಿಗೂ ಸ್ವೀಕಾರಾರ್ಹವಾದ ಮತ್ತು ಪ್ರಯೋಜನದಾಯಕವಾದ ಒಂದು ಮಟ್ಟವನ್ನು ಕಂಡುಹಿಡಿಯಲು, ಎಲ್ಲ ಕುಲ, ಸಂಸ್ಕೃತಿ ಮತ್ತು ರಾಜಕೀಯ ಮೇರೆಗಳಿಗೆ ಅತೀತವಾಗಿರುವ ಮತ್ತು ಮಾನವನಿಗಿರುವ ಮುಂದಾಲೋಚನೆಯ ಕೊರತೆ ಹಾಗೂ ಬಲಹೀನತೆಗಳಿಂದ ಬಾಧಿಸಲ್ಪಟ್ಟಿರದ ಒಬ್ಬಾತನ ಬಳಿಗೆ ಹೋಗಬೇಕಾಗುತ್ತದೆ. ಈ ರೀತಿಯಲ್ಲಿ ಅಪೂರ್ವವಾದ ಯೋಗ್ಯತೆಯುಳ್ಳ ಏಕಮಾತ್ರನು ಸರ್ವಶಕ್ತ ಸೃಷ್ಟಿಕರ್ತನಾದ ಯೆಹೋವ ದೇವರೇ ಎಂಬುದಕ್ಕೆ ಸಂದೇಹವಿಲ್ಲ. ಆತನು ಪ್ರಕಟಿಸುವುದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.” (ಯೆಶಾಯ 55:9) ಅಲ್ಲದೆ, ಬೈಬಲು ಯೆಹೋವನನ್ನು, “ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ,” ಎಂದು ಹೇಳಿ ವರ್ಣಿಸುತ್ತದೆ. (ಧರ್ಮೋಪದೇಶಕಾಂಡ 32:4) ಬೈಬಲಿನಲ್ಲಿ ವ್ಯಾಪಕವಾಗಿ “ಯೆಹೋವನು ನ್ಯಾಯವಂತನು [“ನೀತಿವಂತನು,” NW]” ಎಂಬ ಮಾತುಗಳನ್ನು ನಾವು ಕಂಡುಕೊಳ್ಳುತ್ತೇವೆ. (ವಿಮೋಚನಕಾಂಡ 9:27; 2 ಪೂರ್ವಕಾಲವೃತ್ತಾಂತ 12:6; ಕೀರ್ತನೆ 11:7; 129:4; ಪ್ರಲಾಪಗಳು 1:18; ಪ್ರಕಟನೆ 19:2) ಹೌದು, ಯೆಹೋವನು ನಂಬಿಗಸ್ತನೂ ನ್ಯಾಯವಂತನೂ ನೀತಿವಂತನೂ ಆಗಿರುವುದರಿಂದ, ಅಂತಿಮವಾದ ಆದರ್ಶ ಮಟ್ಟಕ್ಕಾಗಿ ನಾವು ಯೆಹೋವನ ಕಡೆಗೆ ಮಾತ್ರ ನೋಡಬಲ್ಲೆವು.

4. “ನೀತಿ” ಎಂಬ ಪದದ ಅರ್ಥವೇನು?

4 ತಮ್ಮನ್ನೇ ಇತರರಿಗಿಂತಲೂ ಹೆಚ್ಚು ನೀತಿವಂತರು ಇಲ್ಲವೆ ಪವಿತ್ರರು ಎಂದೆಣಿಸುವ ಜನರ ಬಗ್ಗೆ ಹೆಚ್ಚಿನವರಿಗೆ ನಕಾರಾತ್ಮಕವಾದ, ಕೀಳಾದ ಅಭಿಪ್ರಾಯವಿರುತ್ತದೆ. ಆದರೂ, ಒಂದು ನಿಘಂಟಿಗನುಸಾರ, “ನೀತಿ” ಅಂದರೆ “ನ್ಯಾಯವಾದ, ಪ್ರಾಮಾಣಿಕವಾದ, ಸದ್ಗುಣದ, ನಿರ್ದೋಷದ, ಪಾಪರಹಿತವಾದ, ದೈವಿಕ ನಿಯಮ ವಿಧಿಗಳಿಗೆ ಅಥವಾ ಸ್ವೀಕೃತ ನೈತಿಕ ಮಟ್ಟಗಳಿಗೆ ಹೊಂದಿಕೊಳ್ಳುವುದು; ಸರಿಯಾಗಿ ಅಥವಾ ನ್ಯಾಯವಾಗಿ ವರ್ತಿಸುವುದು,” ಎಂಬ ಅರ್ಥವಿದೆ. ಇಂತಹ ಉತ್ತಮ ಲಕ್ಷಣಗಳನ್ನು ಆವರಿಸಿರುವ ನಿಯಮ ಅಥವಾ ಮಟ್ಟದಲ್ಲಿ ನೀವು ಆನಂದಿಸಲಾರಿರೊ?

5. ಬೈಬಲಿನಲ್ಲಿ ಕೊಟ್ಟಿರುವಂತೆ ನೀತಿಯ ಗುಣವನ್ನು ವರ್ಣಿಸಿರಿ.

5 ನೀತಿಯೆಂಬ ಗುಣದ ಕುರಿತು, ಎನ್‌ಸೈಕ್ಲೊಪೀಡಿಯ ಜೂಡೈಕ ಹೇಳುವುದು: “ನೀತಿಯು ಭಾವನಾರೂಪದ ಎಣಿಕೆಯಾಗಿರದೆ, ಎಲ್ಲ ಸಂಬಂಧಗಳಲ್ಲಿ ನ್ಯಾಯವಾದುದನ್ನೂ ಸರಿಯಾದುದನ್ನೂ ಮಾಡುವುದನ್ನು ಒಳಗೊಳ್ಳುತ್ತದೆ.” ಉದಾಹರಣೆಗೆ, ದೇವರ ನೀತಿಯು ಆತನಲ್ಲಿರುವ ಪಾವಿತ್ರ್ಯ ಮತ್ತು ನೈರ್ಮಲ್ಯಗಳಂತಹ ಕೇವಲ ಆಂತರಿಕ ಅಥವಾ ವೈಯಕ್ತಿಕವಾದ ಒಂದು ಗುಣವಲ್ಲ. ಬದಲಾಗಿ, ಅದು ಸರಿಯಾದ ಮತ್ತು ನ್ಯಾಯವಾದ ರೀತಿಗಳಲ್ಲಿ ತೋರಿಸಲ್ಪಡುವ ಆತನ ಸ್ವಭಾವದ ಅಭಿವ್ಯಕ್ತಿಯಾಗಿದೆ. ಯೆಹೋವನು ಪವಿತ್ರನೂ ಶುದ್ಧನೂ ಆಗಿರುವುದರಿಂದ, ಆತನು ಮಾಡುವ ಮತ್ತು ಆತನಿಂದ ಬರುವ ಪ್ರತಿಯೊಂದು ವಿಷಯವು ನೀತಿಯದ್ದಾಗಿದೆ. ಬೈಬಲು ಹೇಳುವಂತೆ, “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು.”​—ಕೀರ್ತನೆ 145:17.

6. ತನ್ನ ದಿನಗಳಲ್ಲಿದ್ದ ಕೆಲವು ಮಂದಿ ಅವಿಶ್ವಾಸಿಗಳಾದ ಯೆಹೂದ್ಯರ ಕುರಿತು ಪೌಲನು ಏನು ಹೇಳಿದನು, ಮತ್ತು ಏಕೆ?

6 ಅಪೊಸ್ತಲ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಈ ವಿಷಯವನ್ನು ಒತ್ತಿಹೇಳಿದನು. ಅವಿಶ್ವಾಸಿಗಳಾದ ಕೆಲವು ಮಂದಿ ಯೆಹೂದ್ಯರ ವಿಷಯದಲ್ಲಿ ಅವನು ಬರೆದುದು: “ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.” (ರೋಮಾಪುರ 10:3) ಇಂಥವರು “ದೇವರಿಂದ ದೊರಕುವ ನೀತಿಯನ್ನು” ಅರಿಯದಿರುವವರೆಂದು ಪೌಲನು ಅವರ ಬಗ್ಗೆ ಹೇಳಿದ್ದೇಕೆ? ಅವರಿಗೆ ದೇವರ ಧರ್ಮಶಾಸ್ತ್ರವು, ದೇವರ ನೀತಿಯ ಮಟ್ಟಗಳು ಕಲಿಸಲ್ಪಟ್ಟಿರಲಿಲ್ಲವೊ? ಖಂಡಿತವಾಗಿ ಕಲಿಸಲ್ಪಟ್ಟಿತ್ತು. ಆದರೂ, ಅವರಲ್ಲಿ ಹೆಚ್ಚಿನವರು ಆ ನೀತಿಯನ್ನು ವೈಯಕ್ತಿಕವಾದ ಸದ್ಗುಣವಾಗಿ ದೃಷ್ಟಿಸಿದರು. ಅವರು ಅದನ್ನು, ಜೊತೆಮಾನವರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಮಾರ್ಗದರ್ಶಿಸುವ ಮಟ್ಟವಾಗಿ ನೋಡುವ ಬದಲು, ಧಾರ್ಮಿಕ ನಿಯಮಗಳ ಕಟ್ಟುನಿಟ್ಟಿನ ಮತ್ತು ಶ್ರದ್ಧೆಯ ಆಚರಣೆಯ ಮೂಲಕ ಸಾಧಿಸಲ್ಪಡುವ ಸಂಗತಿಯಾಗಿ ನೋಡಿದರು. ಯೇಸುವಿನ ದಿನಗಳ ಧಾರ್ಮಿಕ ನಾಯಕರಂತೆ, ಅವರು ನ್ಯಾಯ ಮತ್ತು ನೀತಿಯ ಕುರಿತಾದ ವಿಚಾರವನ್ನು ಅರ್ಥಮಾಡಿಕೊಳ್ಳದೆ ಹೋದರು.​—ಮತ್ತಾಯ 23:23-28.

7. ಯೆಹೋವನ ನೀತಿಯು ಹೇಗೆ ವ್ಯಕ್ತಪಡಿಸಲ್ಪಡುತ್ತದೆ?

7 ಇದಕ್ಕೆ ತೀರ ವ್ಯತಿರಿಕ್ತವಾಗಿ, ಯೆಹೋವನ ನೀತಿಯು ಆತನ ಸಕಲ ವ್ಯವಹಾರಗಳಲ್ಲಿ ವ್ಯಕ್ತವಾಗುತ್ತದೆ ಮತ್ತು ಸ್ಪಷ್ಟವಾಗಿ ಕಂಡುಬರುತ್ತದೆ. ಬೇಕುಬೇಕೆಂದು ಪಾಪಮಾಡುವವರ ಪಾಪಗಳ ಕಡೆಗೆ ಕಣ್ಮುಚ್ಚಿಕೊಂಡಿರದಂತೆ ನೀತಿಯು ಕೇಳಿಕೊಳ್ಳುತ್ತದಾದರೂ, ಇದು ಆತನನ್ನು ಭಾವರಹಿತನಾದ ಮತ್ತು ಕಟ್ಟುನಿಟ್ಟಿನ ದೇವರಾಗಿ, ಭಯಪಡಬೇಕಾದವನೂ ದೂರದಲ್ಲಿಡಬೇಕಾದವನೂ ಆದ ದೇವರಾಗಿ ಮಾಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಆತನ ನೀತಿಯ ಕ್ರಿಯೆಗಳು ಮಾನವಕುಲವು ಆತನನ್ನು ಸಮೀಪಿಸಿ ಪಾಪದ ಕಠಿನ ದುಷ್ಪರಿಣಾಮಗಳಿಂದ ರಕ್ಷಿಸಲ್ಪಡುವುದಕ್ಕೆ ಆಧಾರವನ್ನು ಒದಗಿಸಿವೆ. ಆದುದರಿಂದ, ಯೆಹೋವನನ್ನು “ಸತ್ಯಸ್ವರೂಪನೂ [“ನೀತಿಯ ದೇವರು,” NW] ರಕ್ಷಕನೂ” ಎಂದು ವರ್ಣಿಸಿರುವುದು ಅತಿ ಯೋಗ್ಯವಾಗಿದೆ.​—ಯೆಶಾಯ 45:21.

ನೀತಿ ಮತ್ತು ರಕ್ಷಣೆ

8, 9. ದೇವರ ನೀತಿಯನ್ನು ಧರ್ಮಶಾಸ್ತ್ರವು ಹೇಗೆ ವ್ಯಕ್ತಪಡಿಸಿತು?

8 ದೇವರ ನೀತಿ ಹಾಗೂ ಪ್ರೀತಿಪೂರ್ವಕವಾದ ರಕ್ಷಣಾಕಾರ್ಯಗಳನ್ನು ಮಾನ್ಯಮಾಡಲಿಕ್ಕಾಗಿ, ಮೋಶೆಯ ಮೂಲಕ ಇಸ್ರಾಯೇಲ್‌ ಜನಾಂಗಕ್ಕೆ ಕೊಡಲಾದ ಧರ್ಮಶಾಸ್ತ್ರದ ಕುರಿತು ಚಿಂತಿಸಿರಿ. ಧರ್ಮಶಾಸ್ತ್ರವು ನೀತಿಯದ್ದಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ತನ್ನ ಬೀಳ್ಕೊಡುವ ಮಾತುಗಳಲ್ಲಿ ಮೋಶೆಯು ಇಸ್ರಾಯೇಲ್ಯರಿಗೆ ಜ್ಞಾಪಕ ಹುಟ್ಟಿಸಿದ್ದು: “ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ [“ನೀತಿಯುಳ್ಳ,” NW] ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?” (ಧರ್ಮೋಪದೇಶಕಾಂಡ 4:8) ಶತಮಾನಗಳ ಬಳಿಕ, ಇಸ್ರಾಯೇಲಿನ ರಾಜ ದಾವೀದನು ಹೇಳಿದ್ದು: “ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯ [“ನೀತಿ,” NW]ವಾಗಿವೆ.”​—ಕೀರ್ತನೆ 19:9.

9 ಯೆಹೋವನು ಧರ್ಮಶಾಸ್ತ್ರದ ಮೂಲಕ, ಸರಿ ಮತ್ತು ತಪ್ಪಿನ ವಿಷಯವಾದ ಪರಿಪೂರ್ಣ ಮಟ್ಟವನ್ನು ಸ್ಪಷ್ಟಪಡಿಸಿದನು. ಇಸ್ರಾಯೇಲ್ಯರು ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲ, ವ್ಯಾಪಾರ ವ್ಯವಹಾರಗಳಲ್ಲಿ, ಮದುವೆಯ ಸಂಬಂಧದಲ್ಲಿ, ಆಹಾರ ಹಾಗೂ ಆರೋಗ್ಯ ಕ್ರಮಗಳಲ್ಲಿ ಮತ್ತು ನ್ಯಾಯವಿಧಾಯಕ ವಿಚಾರಗಳಲ್ಲಿ ಹೇಗೆ ನಡೆಯಬೇಕೆಂಬುದರ ಸೂಕ್ಷ್ಮ ವಿವರಣೆಯನ್ನು ಧರ್ಮಶಾಸ್ತ್ರವು ಕೊಟ್ಟಿತು. ನಿಯಮವನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಾದ ಶಿಕ್ಷೆಗಳು, ಕೆಲವು ವಿಷಯಗಳಲ್ಲಿ ಮರಣಶಿಕ್ಷೆಯೂ ಧರ್ಮಶಾಸ್ತ್ರದಲ್ಲಿತ್ತು. * ಆದರೆ ಧರ್ಮಶಾಸ್ತ್ರದಲ್ಲಿ ಕೊಡಲ್ಪಟ್ಟಿದ್ದ ದೇವರ ನೀತಿಯ ಆವಶ್ಯಕತೆಗಳು, ಕೆಲವರು ಇಂದು ವಾದಿಸುವಂತೆ, ಜನರಿಗೆ ಕಷ್ಟಕರವಾದ, ಬಳಲಿಸುವಂಥ ಹೊರೆಯಾಗಿದ್ದು, ಅವರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಕಸಿದುಕೊಂಡವೋ?

10. ಯೆಹೋವನನ್ನು ಪ್ರೀತಿಸಿದವರಿಗೆ ಆತನ ನಿಯಮಗಳ ಕುರಿತಾಗಿ ಹೇಗನಿಸಿತು?

10 ಯೆಹೋವನನ್ನು ಪ್ರೀತಿಸಿದವರು ಆತನ ನೀತಿಯ ನಿಯಮ ಮತ್ತು ಆಜ್ಞೆಗಳಲ್ಲಿ ಮಹಾ ಆನಂದವನ್ನು ಕಂಡುಕೊಂಡರು. ಉದಾಹರಣೆಗೆ, ನಾವು ನೋಡಿರುವಂತೆ, ರಾಜ ದಾವೀದನು ಯೆಹೋವನ ನ್ಯಾಯಿಕ ನಿರ್ಣಯಗಳನ್ನು, ಸತ್ಯವಾದವುಗಳೂ ನೀತಿಯವುಗಳೂ ಆಗಿವೆಯೆಂದು ಒಪ್ಪಿಕೊಂಡದ್ದು ಮಾತ್ರವಲ್ಲ, ಅವನಿಗೆ ಅವುಗಳ ಕಡೆಗೆ ಹೃತ್ಪೂರ್ವಕವಾದ ಪ್ರೀತಿಯೂ ಗಣ್ಯತೆಯೂ ಇತ್ತು. ಯೆಹೋವನ ಕಟ್ಟಳೆಗಳು ಮತ್ತು ನ್ಯಾಯಸಂಬಂಧಿತ ನಿರ್ಣಯಗಳ ವಿಷಯದಲ್ಲಿ ಅವನು ಬರೆದುದು: “ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ. ಅವುಗಳ ಮೂಲಕ ನಿನ್ನ ದಾಸನಿಗೆ ಎಚ್ಚರಿಕೆಯಾಗುತ್ತದೆ; ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.”​—ಕೀರ್ತನೆ 19:7, 10, 11.

11. ಧರ್ಮಶಾಸ್ತ್ರವು ‘ಕ್ರಿಸ್ತನ ಬಳಿಗೆ ನಡೆಸುವ ಶಿಕ್ಷಕ’ನಾಗಿ ಪರಿಣಮಿಸಿದ್ದು ಹೇಗೆ?

11 ಶತಮಾನಗಳ ನಂತರ, ಪೌಲನು ಧರ್ಮಶಾಸ್ತ್ರಕ್ಕಿದ್ದಂಥ ಇನ್ನೂ ಮಹತ್ತಾದ ಮೌಲ್ಯವನ್ನು ಸೂಚಿಸಿದನು. ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಅವನು ಬರೆದುದು: “ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ [“ಶಿಕ್ಷಕನಾಗಿ ಪರಿಣಮಿಸಿದೆ,” NW].” (ಗಲಾತ್ಯ 3:24) ಪೌಲನ ದಿನಗಳಲ್ಲಿ, ಶಿಕ್ಷಕನು (ಪೆಡಗಾಗ್‌, ಕಿಂಗ್‌ಡಮ್‌ ಇಂಟರ್‌ಲಿನಿಯರ್‌) ಒಂದು ದೊಡ್ಡ ಕುಟುಂಬದಲ್ಲಿ ಸೇವಕನು ಅಥವಾ ದಾಸನಾಗಿದ್ದನು. ಮಕ್ಕಳನ್ನು ಸುರಕ್ಷಿತವಾಗಿಡುವುದು ಮತ್ತು ಅವರನ್ನು ಶಾಲೆಗೆ ಒಯ್ಯುವುದು ಅವನ ಕರ್ತವ್ಯವಾಗಿತ್ತು. ಅದೇ ರೀತಿ, ಧರ್ಮಶಾಸ್ತ್ರವು ಇಸ್ರಾಯೇಲ್ಯರನ್ನು ಸುತ್ತಲಿದ್ದ ಜನಾಂಗಗಳ ಕೀಳಾದ ನೈತಿಕ ಮತ್ತು ಧಾರ್ಮಿಕ ಆಚಾರಗಳಿಂದ ಕಾಪಾಡಿತು. (ಧರ್ಮೋಪದೇಶಕಾಂಡ 18:9-13; ಗಲಾತ್ಯ 3:23) ಅದಲ್ಲದೆ, ಧರ್ಮಶಾಸ್ತ್ರವು ಇಸ್ರಾಯೇಲ್ಯರಲ್ಲಿ ಅವರ ಪಾಪಪೂರ್ಣ ಸ್ಥಿತಿಯ ಮತ್ತು ಕ್ಷಮೆ ಹಾಗೂ ರಕ್ಷಣೆಯ ಆವಶ್ಯಕತೆಯ ಪ್ರಜ್ಞೆಯನ್ನು ಹುಟ್ಟಿಸಿತು. (ಗಲಾತ್ಯ 3:19) ಯಜ್ಞದ ಏರ್ಪಾಡುಗಳು ಪ್ರಾಯಶ್ಚಿತ್ತ ಯಜ್ಞದ ಆವಶ್ಯಕತೆಯನ್ನು ಸೂಚಿಸಿ, ನಿಜವಾದ ಮೆಸ್ಸೀಯನನ್ನು ಹೇಗೆ ಗುರುತಿಸಬಹುದೆಂಬುದಕ್ಕೆ ಒಂದು ಪ್ರವಾದನಾ ನಮೂನೆಯನ್ನು ಒದಗಿಸಿದವು. (ಇಬ್ರಿಯ 10:1, 11, 12) ಹೀಗೆ, ಯೆಹೋವನು ಧರ್ಮಶಾಸ್ತ್ರದ ಮುಖೇನ ನೀತಿಯನ್ನು ವ್ಯಕ್ತಪಡಿಸಿದರೂ, ಆತನು ಜನರ ಹಿತ ಮತ್ತು ನಿತ್ಯ ರಕ್ಷಣೆಯ ದೃಷ್ಟಿಯಿಂದ ಹಾಗೆ ಮಾಡಿದನು.

ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟವರು

12. ಧರ್ಮಶಾಸ್ತ್ರವನ್ನು ಜಾಗರೂಕತೆಯಿಂದ ಪಾಲಿಸುತ್ತಿದ್ದಲ್ಲಿ ಇಸ್ರಾಯೇಲ್ಯರು ಏನನ್ನು ಪಡೆಯುತ್ತಿದ್ದರು?

12 ಯೆಹೋವನು ಕೊಟ್ಟ ಧರ್ಮಶಾಸ್ತ್ರವು ಸಕಲ ವಿಧದಲ್ಲಿಯೂ ನೀತಿಯುಳ್ಳದ್ದಾಗಿದ್ದುದರಿಂದ, ಇಸ್ರಾಯೇಲ್ಯರು ಅದಕ್ಕೆ ವಿಧೇಯರಾಗುವಲ್ಲಿ ಅವರು ದೇವರ ಮುಂದೆ ನೀತಿವಂತರೆಂಬ ನಿಲುವನ್ನು ಪಡೆಯುತ್ತಿದ್ದರು. ಇಸ್ರಾಯೇಲ್ಯರು ಇನ್ನೇನು ವಾಗ್ದತ್ತ ದೇಶವನ್ನು ಪ್ರವೇಶಿಸಲಿದ್ದಾಗ, ಮೋಶೆ ಅವರಿಗೆ ನೆನಪು ಹುಟ್ಟಿಸಿದ್ದು: “ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಎಣಿಸಲ್ಪಡುವೆವು.” (ಧರ್ಮೋಪದೇಶಕಾಂಡ 6:25) ಇದಕ್ಕೆ ಕೂಡಿಸಿ, ಯೆಹೋವನು ಹೀಗೆ ವಾಗ್ದಾನ ಕೊಟ್ಟಿದ್ದನು: “ನನ್ನ ಆಜ್ಞಾವಿಧಿಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾವಿಧಿಗಳ ಮೂಲಕ ಬದುಕುವರು. ಆದದರಿಂದ ನೀವು ಅವುಗಳನ್ನೇ ಅನುಸರಿಸಬೇಕು; ನಾನು ಯೆಹೋವನು.”​—ಯಾಜಕಕಾಂಡ 18:5; ರೋಮಾಪುರ 10:5.

13. ನೀತಿಯ ಧರ್ಮಶಾಸ್ತ್ರವನ್ನು ತನ್ನ ಜನರು ಪಾಲಿಸುವಂತೆ ಅಪೇಕ್ಷಿಸಿದ್ದರಲ್ಲಿ ಯೆಹೋವನು ಅನ್ಯಾಯಸ್ಥನಾಗಿದ್ದನೊ? ವಿವರಿಸಿ.

13 ಆದರೆ ವಿಷಾದಕರವಾದ ಸಂಗತಿಯೇನಂದರೆ, ಇಸ್ರಾಯೇಲ್ಯರು “ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ” ಅನುಸರಿಸುವುದರಲ್ಲಿ ತಪ್ಪಿಬಿದ್ದು, ವಾಗ್ದತ್ತ ಆಶೀರ್ವಾದಗಳನ್ನು ಕಳೆದುಕೊಂಡರು. ದೇವರ ಧರ್ಮಶಾಸ್ತ್ರವು ಪರಿಪೂರ್ಣವಾಗಿದ್ದಾಗ್ಯೂ ಅವರು ಅಪರಿಪೂರ್ಣರಾಗಿದ್ದ ಕಾರಣ ಅವರು ದೇವರ ಎಲ್ಲ ಆಜ್ಞೆಗಳಿಗೆ ವಿಧೇಯರಾಗಲು ತಪ್ಪಿಹೋದರು. ಹಾಗಾದರೆ ದೇವರು ಅನ್ಯಾಯಸ್ಥನು ಅಥವಾ ಅನೀತಿವಂತನು ಎಂದು ಇದರ ಅರ್ಥವೊ? ಖಂಡಿತ ಇಲ್ಲ. ಪೌಲನು ಬರೆದುದು: “ಹಾಗಾದರೆ ಏನು ಹೇಳೋಣ? ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.” (ರೋಮಾಪುರ 9:14) ವಾಸ್ತವವೇನಂದರೆ, ಧರ್ಮಶಾಸ್ತ್ರವು ಕೊಡಲ್ಪಡುವ ಮೊದಲೂ ಕೊಡಲ್ಪಟ್ಟ ಬಳಿಕವೂ, ಒಬ್ಬೊಬ್ಬ ವ್ಯಕ್ತಿಗಳನ್ನು​—ಅವರು ಅಪರಿಪೂರ್ಣರೂ ಪಾಪಿಗಳೂ ಆಗಿದ್ದರೂ​—ದೇವರು ನೀತಿವಂತರೆಂದು ಎಣಿಸಿದ್ದನು. ಇಂತಹ ದೇವಭಯವಿದ್ದ ಜನರ ಪಟ್ಟಿಯಲ್ಲಿ ನೋಹ, ಅಬ್ರಹಾಮ, ಯೋಬ, ರಹಾಬ ಮತ್ತು ದಾನಿಯೇಲರು ಇದ್ದಾರೆ. (ಆದಿಕಾಂಡ 7:1; 15:6; ಯೋಬ 1:1; ಯೆಹೆಜ್ಕೇಲ 14:14; ಯಾಕೋಬ 2:25) ಹಾಗಾದರೆ, ಪ್ರಶ್ನೆಯು ಹೀಗಿದೆ: ದೇವರು ಈ ವ್ಯಕ್ತಿಗಳನ್ನು ಯಾವ ಆಧಾರದ ಮೇರೆಗೆ ನೀತಿವಂತರೆಂದು ಎಣಿಸಿದನು?

14. ಮಾನವನು “ನೀತಿವಂತನು” ಎಂದು ಬೈಬಲು ಹೇಳುವಾಗ ಅದರ ಅರ್ಥವೇನು?

14 ಮಾನವನು “ನೀತಿವಂತನು” ಎಂದು ಬೈಬಲು ಹೇಳುವಾಗ, ಅವನು ಪಾಪರಹಿತನು ಅಥವಾ ಪರಿಪೂರ್ಣನೆಂದು ಅದು ಸೂಚಿಸುವುದಿಲ್ಲ. ಬದಲಿಗೆ, ಇದರ ಅರ್ಥವು, ದೇವರ ಮತ್ತು ಮನುಷ್ಯರ ಮುಂದೆ ತನಗಿರುವ ಜವಾಬ್ದಾರಿಗಳನ್ನು ಪೂರೈಸುವುದು ಎಂದೇ. ದೃಷ್ಟಾಂತಕ್ಕೆ, ನೋಹನು “ನೀತಿವಂತನು,” “ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು,” ಮತ್ತು “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು,” ಎಂದು ಹೇಳಲಾಗಿದೆ. (ಆದಿಕಾಂಡ 6:9, 22; ಮಲಾಕಿಯ 3:18) ಸ್ನಾನಿಕನಾದ ಯೋಹಾನನ ಹೆತ್ತವರಾದ ಜಕರೀಯ ಮತ್ತು ಎಲಿಸಬೇತ್‌, “ಕರ್ತನ [“ಯೆಹೋವನ,” NW] ಎಲ್ಲಾ ಆಜ್ಞೆಗಳನ್ನೂ ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು.” (ಲೂಕ 1:6) ಮತ್ತು ಇಸ್ರಾಯೇಲ್ಯನಲ್ಲದ, ಕೊರ್ನೇಲ್ಯನೆಂಬ ಇಟೆಲಿಯ ಸೇನಾಧಿಕಾರಿಯೊಬ್ಬನನ್ನು, “ನೀತಿವಂತನೂ ದೇವರಿಗೆ ಭಯಪಡುವವನೂ” ಎಂದು ವರ್ಣಿಸಲಾಗಿದೆ.​—ಅ. ಕೃತ್ಯಗಳು 10:22.

15. ನೀತಿಯು ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸುತ್ತದೆ?

15 ಇದಲ್ಲದೆ, ಮಾನವರಲ್ಲಿರುವ ನೀತಿಯು ಒಬ್ಬನ ಹೃದಯದಲ್ಲಿ ಏನಿದೆಯೊ ಅದಕ್ಕೆ, ಅಂದರೆ ಯೆಹೋವನ ಮತ್ತು ಆತನ ವಾಗ್ದಾನಗಳ ವಿಷಯದಲ್ಲಿ ಒಬ್ಬನಲ್ಲಿರುವ ನಂಬಿಕೆ, ಗಣ್ಯತೆ ಮತ್ತು ಪ್ರೀತಿಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಅದು ದೇವರು ಅಪೇಕ್ಷಿಸುವುದನ್ನು ಒಬ್ಬನು ಮಾಡುವುದಕ್ಕೆ ಮಾತ್ರ ಸಂಬಂಧಿಸಿರುವುದಿಲ್ಲ. ಅಬ್ರಹಾಮನು “ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು” ಎನ್ನುತ್ತದೆ ಶಾಸ್ತ್ರ. (ಆದಿಕಾಂಡ 15:6) ಅಬ್ರಹಾಮನಿಗೆ ದೇವರ ಅಸ್ತಿತ್ವದ ಮೇಲೆ ಮಾತ್ರವಲ್ಲ, “ಸಂತಾನ”ದ ವಿಷಯದಲ್ಲಿ ಆತನು ಕೊಟ್ಟಿದ್ದ ವಾಗ್ದಾನದ ಮೇಲೆಯೂ ನಂಬಿಕೆಯಿತ್ತು. (ಆದಿಕಾಂಡ 3:15; 12:2; 15:5; 22:18) ಅಂತಹ ನಂಬಿಕೆಯ ಮತ್ತು ನಂಬಿಕೆಗೆ ಹೊಂದಿಕೆಯಲ್ಲಿದ್ದ ಕೆಲಸಗಳ ಆಧಾರದ ಮೇರೆಗೆ, ಯೆಹೋವನು ಅಬ್ರಹಾಮನೊಂದಿಗೂ ಇತರ ನಂಬಿಗಸ್ತರೊಂದಿಗೂ, ಅವರು ಅಪೂರ್ಣರಾಗಿದ್ದರೂ ವ್ಯವಹರಿಸಿ ಅವರನ್ನು ಆಶೀರ್ವದಿಸಸಾಧ್ಯವಿತ್ತು.​—ಕೀರ್ತನೆ 36:10; ರೋಮಾಪುರ 4:20-22.

16. ಪ್ರಾಯಶ್ಚಿತ್ತದಲ್ಲಿ ನಂಬಿಕೆಯು ಯಾವುದನ್ನು ಫಲಿಸಿದೆ?

16 ಅಂತಿಮವಾಗಿ, ಮಾನವರಲ್ಲಿ ನೀತಿಯು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ಅವರಿಗಿರುವ ನಂಬಿಕೆಯ ಮೇಲೆ ಹೊಂದಿಕೊಂಡಿದೆ. ಒಂದನೆಯ ಶತಮಾನದ ಕ್ರೈಸ್ತರ ಕುರಿತು ಪೌಲನು ಬರೆದುದು: “ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು.” (ರೋಮಾಪುರ 3:24) ಪೌಲನು ಅಲ್ಲಿ ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಜೊತೆಬಾಧ್ಯಸ್ಥರಾಗಿರಲು ಆರಿಸಿಕೊಳ್ಳಲ್ಪಟ್ಟಿರುವವರ ವಿಷಯದಲ್ಲಿ ಮಾತಾಡುತ್ತಿದ್ದನು. ಆದರೆ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಲಕ್ಷಾಂತರ ಮಂದಿ ಇತರರಿಗೂ ದೇವರ ಮುಂದೆ ನೀತಿಯ ನಿಲುವನ್ನು ಪಡೆಯುವ ಸದವಕಾಶವನ್ನು ತೆರೆಯಿತು. ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು . . . ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು” ಇರುವುದನ್ನು ಕಂಡನು.​—ಪ್ರಕಟನೆ 7:9, 14.

ಯೆಹೋವನ ನೀತಿಯಲ್ಲಿ ಆನಂದಿಸಿರಿ

17. ನೀತಿಯ ಬೆನ್ನಟ್ಟುವಿಕೆಯಲ್ಲಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳಾವುವು?

17 ಯೆಹೋವನು ಪ್ರೀತಿಪೂರ್ವಕವಾಗಿ ತನ್ನ ಮಗನಾದ ಯೇಸು ಕ್ರಿಸ್ತನನ್ನು ಮಾನವರು ತನ್ನ ಮುಂದೆ ನೀತಿಯ ನಿಲುವನ್ನು ಪಡೆಯಲಿಕ್ಕಾಗಿ ಒದಗಿಸಿರುವುದಾದರೂ, ಇದರ ಫಲಿತಾಂಶವು ತನ್ನಿಂದ ತಾನೇ ಸಿಗುವುದಿಲ್ಲ. ಒಬ್ಬನು ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಟ್ಟು, ತನ್ನ ಜೀವಿತವನ್ನು ದೇವರ ಚಿತ್ತಕ್ಕೆ ಹೊಂದಿಸಿಕೊಂಡು, ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸಬೇಕು. ಬಳಿಕ ಅವನು ನೀತಿಯನ್ನು ಮತ್ತು ಬೇರೆ ಆತ್ಮಿಕ ಗುಣಗಳನ್ನು ಬೆನ್ನಟ್ಟುತ್ತಾ ಹೋಗಬೇಕು. ಸ್ವರ್ಗೀಯ ಕರೆಯಿದ್ದ ಸ್ನಾತ ಕ್ರೈಸ್ತ ತಿಮೊಥೆಯನಿಗೆ ಪೌಲನು, “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು” ಎಂದು ಬುದ್ಧಿ ಹೇಳಿದನು. (1 ತಿಮೊಥೆಯ 6:11; 2 ತಿಮೊಥೆಯ 2:22) “ಹಾಗಾದರೆ ಮೊದಲಾಗಿ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ” ಎಂದು ಹೇಳಿದಾಗ, ಯೇಸು ಸಹ ಮುಂದುವರಿಯುತ್ತ ಪ್ರಯತ್ನಿಸುವ ಆವಶ್ಯಕತೆಯನ್ನು ಒತ್ತಿ ಹೇಳಿದನು. ನಾವು ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆಯಲು ಬಹಳ ಶ್ರಮಪಡಬಹುದು, ಆದರೆ ಯೆಹೋವನ ನೀತಿಯ ಮಾರ್ಗಗಳನ್ನು ಬೆನ್ನಟ್ಟಲು ನಾವು ಅಷ್ಟೇ ಶ್ರಮಪಡುತ್ತೇವೊ?​—ಮತ್ತಾಯ 6:​33, NW.

18. (ಎ) ನೀತಿಯನ್ನು ಬೆನ್ನಟ್ಟುವುದು ಏಕೆ ಸುಲಭವಲ್ಲ? (ಬಿ) ಲೋಟನ ಮಾದರಿಯಿಂದ ನಾವೇನು ಕಲಿಯಬಲ್ಲೆವು?

18 ನೀತಿಯನ್ನು ಬೆನ್ನಟ್ಟುವುದು ಸುಲಭವಲ್ಲವೆಂಬುದು ನಿಶ್ಚಯ. ಇದಕ್ಕೆ ನಮ್ಮ ಅಪರಿಪೂರ್ಣತೆಯೂ ಅನೀತಿಯನ್ನು ಮಾಡಲು ನಮಗಿರುವ ಸ್ವಾಭಾವಿಕ ಪ್ರವೃತ್ತಿಯೂ ಕಾರಣವಾಗಿದೆ. (ಯೆಶಾಯ 64:6) ಇದಲ್ಲದೆ, ಯೆಹೋವನ ನೀತಿಯ ಮಾರ್ಗಗಳನ್ನು ಅಲಕ್ಷಿಸುವ ಜನರಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. ನಮ್ಮ ಪರಿಸ್ಥಿತಿಯು ಆ ಕುಖ್ಯಾತ ದುಷ್ಟ ನಗರವಾಗಿದ್ದ ಸೋದೋಮಿನಲ್ಲಿ ಜೀವಿಸುತ್ತಿದ್ದ ಲೋಟನ ಪರಿಸ್ಥಿತಿಯಂತಿದೆ. ಬರಲಿದ್ದ ನಾಶನದಿಂದ ಪಾರಾಗಲು ಲೋಟನು ಯೋಗ್ಯನೆಂದು ಯೆಹೋವನು ಏಕೆ ಯೋಚಿಸಿದನೆಂಬುದನ್ನು ಅಪೊಸ್ತಲ ಪೇತ್ರನು ವಿವರಿಸಿದನು: “ಆ ನೀತಿವಂತನು ಅವರ ನಡುವೆ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡನು [“ಯಾತನೆಯನ್ನು ಅನುಭವಿಸಿದನು,” NW].” (2 ಪೇತ್ರ 2:7, 8) ಆದಕಾರಣ, ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಕೇಳಿಕೊಳ್ಳುವುದು ವಿವೇಕಯುತವಾಗಿದೆ: ‘ನಮ್ಮ ಸುತ್ತಲೂ ನೋಡುವ ಅನೈತಿಕ ಆಚಾರಗಳಿಗೆ ನಾನು ಹೃದಯದಲ್ಲಿ ಮೌನ ಸಮ್ಮತಿಯನ್ನು ಕೊಡುತ್ತೇನೊ? ಜನಪ್ರಿಯವಾದ ಹಿಂಸಾತ್ಮಕ ವಿನೋದಾವಳಿಗಳು ಅಥವಾ ಪಂದ್ಯಗಳ ವಿಷಯದಲ್ಲಿ, ಅವು ನನಗೆ ಹಿಡಿಸುವುದಿಲ್ಲ ಎಂದಷ್ಟೇ ಹೇಳುತ್ತೇನೊ? ಇಲ್ಲವೆ ಅಂತಹ ಅನೀತಿಯ ಕೃತ್ಯಗಳಿಂದಾಗಿ ನನಗೆ ಲೋಟನಂತೆ ಯಾತನೆಯಾಗುತ್ತದೊ?’

19. ದೇವರ ನೀತಿಯಲ್ಲಿ ಆನಂದವನ್ನು ನಾವು ಕಂಡುಕೊಳ್ಳುವಲ್ಲಿ ಯಾವ ಆಶೀರ್ವಾದಗಳು ನಮ್ಮದಾಗಬಲ್ಲವು?

19 ಈ ಅಪಾಯಕರವಾದ ಅನಿಶ್ಚಿತ ಕಾಲಗಳಲ್ಲಿ, ಯೆಹೋವನ ನೀತಿಯಲ್ಲಿ ಆನಂದಿಸುವ ವಿಷಯವು ನಮಗೆ ಭದ್ರತೆಯೂ ಸಂರಕ್ಷೆಯೂ ಆಗಿದೆ. “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” ಎಂಬ ಪ್ರಶ್ನೆಗೆ ರಾಜ ದಾವೀದನು, “ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು” ಎಂದು ಉತ್ತರಕೊಟ್ಟನು. (ಕೀರ್ತನೆ 15:1, 2) ದೇವರ ನೀತಿಯನ್ನು ಬೆನ್ನಟ್ಟಿ ಅದರಲ್ಲಿ ಆನಂದಿಸುವ ಮೂಲಕ, ನಾವು ಆತನೊಂದಿಗೆ ಸುಸಂಬಂಧವನ್ನಿಟ್ಟುಕೊಳ್ಳುತ್ತ, ಆತನ ಅನುಗ್ರಹ ಮತ್ತು ಆಶೀರ್ವಾದಗಳನ್ನು ಅನುಭವಿಸುತ್ತ ಹೋಗುವೆವು. ಹೀಗಿರುವುದರಿಂದ ಸಂತೃಪ್ತಿಕರವಾದ, ಆತ್ಮಗೌರವದ ಮತ್ತು ಮನಶ್ಶಾಂತಿಯ ಜೀವನವು ನಮ್ಮದಾಗಿದೆ. “ನೀತಿ ಕೃಪೆಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು” ಎಂದು ದೇವರ ವಾಕ್ಯವು ಹೇಳುತ್ತದೆ. (ಜ್ಞಾನೋಕ್ತಿ 21:21) ಇದಲ್ಲದೆ, ನಮ್ಮ ಎಲ್ಲ ಕೆಲಸಗಳಲ್ಲಿ ನ್ಯಾಯವಾದದ್ದನ್ನು ಮತ್ತು ಸರಿಯಾದದ್ದನ್ನು ಮಾಡಲು ಕೈಲಾದಷ್ಟು ಪ್ರಯತ್ನಿಸುವುದು, ಸಂತೋಷದ ವ್ಯಕ್ತಿಪರ ಸಂಬಂಧಗಳನ್ನು ಮತ್ತು ನೈತಿಕವಾಗಿಯೂ ಆತ್ಮಿಕವಾಗಿಯೂ ಉತ್ತಮಗೊಂಡಿರುವ ಗುಣಮಟ್ಟದ ಜೀವನವನ್ನು ಫಲಿಸುವುದು. ಕೀರ್ತನೆಗಾರನು ಹೇಳಿದ್ದು: “ಯಾವಾಗಲೂ ನ್ಯಾಯವನ್ನು ಕಾಪಾಡುವವರೂ ನೀತಿಯನ್ನು ಪಾಲಿಸುವವರೂ ಧನ್ಯರು.”​—ಕೀರ್ತನೆ 106:3.

[ಪಾದಟಿಪ್ಪಣಿ]

^ ಪ್ಯಾರ. 9 ಮೋಶೆಯ ಧರ್ಮಶಾಸ್ತ್ರದ ಕುರಿತಾದ ವಿಸ್ತಾರವಾದ ವಿವರಗಳಿಗಾಗಿ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದ 2ನೆಯ ಸಂಪುಟದ ಪುಟಗಳು 214-20ರ ವರೆಗಿರುವ “ಧರ್ಮಶಾಸ್ತ್ರದ ಕೆಲವು ವೈಶಿಷ್ಟ್ಯಗಳು” ಎಂಬ ಲೇಖನವನ್ನು ನೋಡಿ.

ನೀವು ವಿವರಿಸಬಲ್ಲಿರೊ?

• ನೀತಿಯೆಂದರೇನು?

• ರಕ್ಷಣೆಯು ದೇವರ ನೀತಿಗೆ ಸಂಬಂಧಿಸಿರುವುದು ಹೇಗೆ?

• ದೇವರು ಮಾನವರನ್ನು ಯಾವ ಆಧಾರದ ಮೇರೆಗೆ ನೀತಿವಂತರೆಂದು ಎಣಿಸುತ್ತಾನೆ?

• ನಾವು ಯೆಹೋವನ ನೀತಿಯಲ್ಲಿ ಹೇಗೆ ಆನಂದವನ್ನು ಕಂಡುಕೊಳ್ಳಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ರಾಜ ದಾವೀದನು ಯೆಹೋವನ ನಿಯಮಗಳಿಗಾಗಿ ಹೃತ್ಪೂರ್ವಕವಾದ ಪ್ರೀತಿಯನ್ನು ವ್ಯಕ್ತಪಡಿಸಿದನು

[Picutres on page 16]

ನೋಹ, ಅಬ್ರಹಾಮ, ಜಕರೀಯ ಹಾಗೂ ಎಲಿಸಬೇತ್‌ ಮತ್ತು ಕೊರ್ನೇಲ್ಯರನ್ನು ದೇವರು ನೀತಿವಂತರೆಂದು ಎಣಿಸಿದನು. ಏಕೆಂದು ಬಲ್ಲಿರೊ?