ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ದೀಕ್ಷಾಸ್ನಾನವನ್ನು ಬಯಸುವವನೊಬ್ಬನು ತೀವ್ರ ಅಂಗವಿಕಲತೆಯುಳ್ಳವನಾಗಿರುವಲ್ಲಿ ಅಥವಾ ತೀರ ಅನಾರೋಗ್ಯದಿಂದ ನರಳುತ್ತಿರುವಲ್ಲಿ, ನಿಮಜ್ಜನವು ಕಷ್ಟಕರವಾಗಿರುವುದರಿಂದ, ನೀರಿನಲ್ಲಿ ಪೂರ್ಣವಾಗಿ ಮುಳುಗಿ ನಿಮಜ್ಜನ ಹೊಂದುವುದು ಆವಶ್ಯಕವೊ?
“ದೀಕ್ಷಾಸ್ನಾನ ಮಾಡಿಸುವುದು” ಎಂಬ ಪದಗಳು “ಅದ್ದು” ಎಂಬ ಅರ್ಥದ ಬೇಪ್ಟೋ ಎಂಬ ಗ್ರೀಕ್ ಕ್ರಿಯಾಪದದಿಂದ ಬಂದಿವೆ. (ಯೋಹಾನ 13:26) ಬೈಬಲಿನಲ್ಲಿ, “ದೀಕ್ಷಾಸ್ನಾನ ಮಾಡಿಸು” ಎಂಬುದು “ಮುಳುಗಿಸು” ಎಂಬುದಕ್ಕೆ ಸಮಾನಪದವಾಗಿದೆ. ಫಿಲಿಪ್ಪನು ಐಥಿಯೋಪ್ಯದ ಕಂಚುಕಿಗೆ ಕೊಟ್ಟ ದೀಕ್ಷಾಸ್ನಾನದ ಕುರಿತು ರಾಥರಮ್ ಅವರ ದಿ ಎಂಫೆಸೈಸ್ಡ್ ಬೈಬಲ್ ಹೇಳುವುದು: “ಅವರಿಬ್ಬರೂ—ಫಿಲಿಪ್ಪನೂ ಕಂಚುಕಿಯೂ—ನೀರಿನೊಳಕ್ಕೆ ಇಳಿದರು. ಮತ್ತು ಅವನು ಅವನಿಗೆ ನಿಮಜ್ಜನ ಮಾಡಿಸಿದನು.” (ಅ. ಕೃತ್ಯಗಳು 8:38) ಹೀಗೆ, ದೀಕ್ಷಾಸ್ನಾನ ಹೊಂದುವವನನ್ನು ವಾಸ್ತವದಲ್ಲಿ ನೀರಿನಲ್ಲಿ ಅದ್ದಲಾಗುತ್ತದೆ.—ಮತ್ತಾಯ 3:16; ಮಾರ್ಕ 1:10.
ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನಮಾಡಿಸಿ.” (ಮತ್ತಾಯ 28:19, 20) ಆದುದರಿಂದ, ಯೆಹೋವನ ಸಾಕ್ಷಿಗಳು ದೀಕ್ಷಾಸ್ನಾನ ಕೊಡಲು ಕೆರೆ, ಸರೋವರ, ನದಿ ಅಥವಾ ಪೂರ್ತಿ ನಿಮಜ್ಜನಕ್ಕೆ ಸಾಕಷ್ಟು ನೀರಿರುವ ಸ್ಥಳಗಳನ್ನು ಏರ್ಪಡಿಸುತ್ತಾರೆ. ಪೂರ್ಣವಾಗಿ ಮುಳುಗಿಸುವ ಮೂಲಕ ಮಾಡಲ್ಪಡುವ ದೀಕ್ಷಾಸ್ನಾನವು ಶಾಸ್ತ್ರೀಯ ಆವಶ್ಯಕತೆಯಾಗಿರುವುದರಿಂದ, ದೀಕ್ಷಾಸ್ನಾನದಿಂದ ವಿನಾಯಿತಿ ಕೊಡುವ ಅಧಿಕಾರವು ಯಾವ ಮಾನವನಿಗೂ ಇರುವುದಿಲ್ಲ. ಆದಕಾರಣ, ಒಬ್ಬನ ದೇಹಸ್ಥಿತಿಯ ಕಾರಣ ಸಾಮಾನ್ಯವಲ್ಲದ ಹೆಜ್ಜೆಗಳು ಅಗತ್ಯವಿರುವುದಾದರೂ ಅವನಿಗೆ ದೀಕ್ಷಾಸ್ನಾನವು ಅಗತ್ಯ. ಉದಾಹರಣೆಗೆ, ಅತಿ ಮುದಿಪ್ರಾಯದಲ್ಲಿರುವವರಿಗೆ ಅಥವಾ ಅನಾರೋಗ್ಯದ ಕಾರಣ ವಿಶೇಷವಾಗಿ ಕ್ಷೀಣಸ್ಥಿತಿಯಲ್ಲಿರುವವರಿಗೆ ದೊಡ್ಡ ಸ್ನಾನದ ತೊಟ್ಟಿಗಳಲ್ಲಿ ಕೊಡಲ್ಪಟ್ಟ ದೀಕ್ಷಾಸ್ನಾನಗಳು ಸಹಾಯಕರವಾಗಿ ಕಂಡುಬಂದಿವೆ. ಆ ತೊಟ್ಟಿಯ ನೀರನ್ನು ಬಿಸಿಮಾಡಿ, ಸ್ನಾನಾರ್ಥಿಯನ್ನು ಅದರೊಳಕ್ಕೆ ನಿಧಾನವಾಗಿ ಕ್ರಮೇಣ ಇಳಿಸಿ, ಅವನು ಆ ಸ್ಥಿತಿಗೆ ತನ್ನನ್ನು ಹೊಂದಿಸಿಕೊಂಡ ಮೇಲೆ ದೀಕ್ಷಾಸ್ನಾನ ಮಾಡಿಸಬಹುದು.
ತೀರ ಕಠಿನ ರೀತಿಯ ಅಂಗವಿಕಲತೆಯುಳ್ಳವರೂ ದೀಕ್ಷಾಸ್ನಾನ ಹೊಂದಿರುತ್ತಾರೆ. ಉದಾಹರಣೆಗೆ, ಶ್ವಾಸನಾಳಚ್ಛೇದನವಾದವರು ಮತ್ತು ಅದರ ಪರಿಣಾಮವಾಗಿ ಗಂಟಲಿನಲ್ಲಿ ಕಾಯಂ ತೂತು ಉಳ್ಳವರು ಅಥವಾ ಕೃತಕ ಶ್ವಾಸಸಾಧನವನ್ನು ಉಪಯೋಗಿಸಲೇ ಬೇಕಾಗಿರುವವರಿಗೂ ನಿಮಜ್ಜನವನ್ನು ಮಾಡಿಸಲಾಗಿದೆ. ಇಂತಹ ದೀಕ್ಷಾಸ್ನಾನಗಳಿಗೆ ಸರಿಯಾದ ಕೂಲಂಕಷ ಸಿದ್ಧತೆಗಳನ್ನು ಮಾಡಬೇಕೆಂಬುದು ನಿಶ್ಚಯ. ಸಾಧ್ಯವಿರುವಲ್ಲಿ, ತರಬೇತು ಹೊಂದಿರುವ ನರ್ಸೊ ಡಾಕ್ಟರರೊ ಅಲ್ಲಿರುವುದು ವಿವೇಕದ ಸಂಗತಿ. ಆದರೂ, ವಿಶೇಷ ಜಾಗ್ರತೆ ಅಥವಾ ಮುಂಜಾಗ್ರತೆ ವಹಿಸಿರುವಲ್ಲಿ, ಹೆಚ್ಚು ಕಡಮೆ ಎಲ್ಲ ಸಂದರ್ಭಗಳಲ್ಲಿ ದೀಕ್ಷಾಸ್ನಾನ ಕೊಡುವ ಸಾಧ್ಯತೆ ಇದೆ. ಆದುದರಿಂದ, ಒಬ್ಬನ ಯಥಾರ್ಥವಾದ ಬಯಕೆಯು ದೀಕ್ಷಾಸ್ನಾನವಾಗಿರುವಲ್ಲಿ, ಮತ್ತು ಅದರಲ್ಲಿರುವ ಅಪಾಯಗಳನ್ನು ತಾನು ವಹಿಸಿಕೊಳ್ಳಲು ಅವನು ಸಿದ್ಧನಾಗಿರುವಲ್ಲಿ, ಅವನಿಗೆ ನೀರಿನ ದೀಕ್ಷಾಸ್ನಾನವನ್ನು ಕೊಡಲು ನ್ಯಾಯಸಮ್ಮತವಾದ ಪ್ರತಿಯೊಂದು ಪ್ರಯತ್ನವನ್ನೂ ಮಾಡಬೇಕು.