ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಕ್ರಿಯೆಗಳಿಗಾಗಿ ಶುದ್ಧಗೊಳಿಸಲ್ಪಟ್ಟ ಜನರು

ಸತ್ಕ್ರಿಯೆಗಳಿಗಾಗಿ ಶುದ್ಧಗೊಳಿಸಲ್ಪಟ್ಟ ಜನರು

ಸತ್ಕ್ರಿಯೆಗಳಿಗಾಗಿ ಶುದ್ಧಗೊಳಿಸಲ್ಪಟ್ಟ ಜನರು

“ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.”​—2 ಕೊರಿಂಥ 7:1.

1. ಯೆಹೋವನು ತನ್ನನ್ನು ಆರಾಧಿಸುವವರಿಂದ ಏನನ್ನು ಅಪೇಕ್ಷಿಸುತ್ತಾನೆ?

“ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು?” ಪುರಾತನ ಕಾಲದ ಇಸ್ರಾಯೇಲಿನ ದಾವೀದ ರಾಜನು, ಯೆಹೋವನಿಗೆ ಸ್ವೀಕಾರಾರ್ಹವಾದ ಆರಾಧನೆಯ ಸಂಬಂಧದಲ್ಲಿ ಈ ವಿಚಾರಪ್ರೇರಕ ಪ್ರಶ್ನೆಗಳನ್ನು ಎಬ್ಬಿಸಿದನು. ಬಳಿಕ ಅವನು ಅವುಗಳಿಗೆ ಉತ್ತರವನ್ನೂ ಕೊಟ್ಟನು: “ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸ ಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ” ಅವನೇ. (ಕೀರ್ತನೆ 24:3, 4) ಪಾವಿತ್ರ್ಯದ ಸಾರವಾಗಿರುವ ಯೆಹೋವನಿಗೆ ಸ್ವೀಕಾರಯೋಗ್ಯನಾಗಿರಬೇಕಾದರೆ, ಒಬ್ಬನು ಶುದ್ಧನೂ ಪವಿತ್ರನೂ ಆಗಿರಬೇಕು. ಆದಿಯಲ್ಲಿ ಯೆಹೋವನು ಇಸ್ರಾಯೇಲ್‌ ಸಭೆಗೆ ಜ್ಞಾಪಕ ಹುಟ್ಟಿಸಿದ್ದು: “ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನು.”​—ಯಾಜಕಕಾಂಡ 11:44, 45; 19:2.

2. ಪೌಲನೂ ಯಾಕೋಬನೂ ಸತ್ಯಾರಾಧನೆಯಲ್ಲಿರಬೇಕಾದ ಶುದ್ಧತೆಯ ಪ್ರಮುಖತೆಯನ್ನು ಹೇಗೆ ಒತ್ತಿಹೇಳಿದರು?

2 ಶತಮಾನಗಳ ಬಳಿಕ, ಅಪೊಸ್ತಲ ಪೌಲನು ಒಂದು ನೀತಿಭ್ರಷ್ಟ ನಗರವಾಗಿದ್ದ ಕೊರಿಂಥದಲ್ಲಿದ್ದ ಜೊತೆಕ್ರೈಸ್ತರಿಗೆ ಬರೆದುದು: “ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಇದು, ದೇವರೊಂದಿಗೆ ಸುಸಂಬಂಧವಿರಬೇಕಾದರೆ, ಆತನ ವಾಗ್ದತ್ತ ಆಶೀರ್ವಾದಗಳನ್ನು ಪಡೆಯಬೇಕಾದರೆ, ಒಬ್ಬನು ಶಾರೀರಿಕ ಮತ್ತು ಆತ್ಮಿಕ ಕಲ್ಮಶ ಮತ್ತು ಭ್ರಷ್ಟತೆಯಿಂದ ಶುದ್ಧನೂ ವಿಮುಕ್ತನೂ ಆಗಿರಬೇಕೆಂಬ ಮುಖ್ಯಾಂಶವನ್ನು ಪುನಃ ಒತ್ತಿಹೇಳುತ್ತದೆ. ಅದೇ ರೀತಿ, ದೇವರಿಗೆ ಸ್ವೀಕಾರಯೋಗ್ಯವಾದ ಆರಾಧನೆಯ ಬಗ್ಗೆ ಬರೆಯುತ್ತ, ಶಿಷ್ಯ ಯಾಕೋಬನು ಹೇಳಿದ್ದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.”​—ಯಾಕೋಬ 1:27.

3. ನಮ್ಮ ಆರಾಧನೆಯು ದೇವರಿಗೆ ಸ್ವೀಕಾರಯೋಗ್ಯವಾಗಬೇಕಾದರೆ, ಯಾವ ವಿಷಯಗಳ ಕುರಿತು ನಾವು ಗಂಭೀರವಾಗಿ ಚಿಂತಿತರಾಗಿರಬೇಕು?

3 ಸತ್ಯಾರಾಧನೆಯಲ್ಲಿ ಶುದ್ಧತೆ, ಪವಿತ್ರತೆ ಮತ್ತು ನೈರ್ಮಲ್ಯಗಳು ಅಷ್ಟು ಪ್ರಮುಖ ಅಂಶಗಳಾಗಿರುವಾಗ, ದೇವರ ಮೆಚ್ಚಿಗೆಯನ್ನು ಪಡೆಯಬಯಸುವ ಯಾವನೂ ಈ ಕ್ಷೇತ್ರಕ್ಕೆ ಸಂಬಂಧಿಸಿರುವ ಆವಶ್ಯಕತೆಗಳನ್ನು ಪೂರೈಸುವುದರ ಬಗ್ಗೆ ಗಂಭೀರವಾಗಿ ಚಿಂತಿತನಾಗಿರಬೇಕು. ಶುದ್ಧತೆಯ ವಿಷಯದಲ್ಲಿ ಇಂದು ಜನರಿಗೆ ವ್ಯಾಪಕವಾಗಿ ವ್ಯತ್ಯಸ್ತವಾಗಿರುವ ಮಟ್ಟಗಳೂ ಅಭಿಪ್ರಾಯಗಳೂ ಇರುವುದರಿಂದ, ನಾವು ಯೆಹೋವನು ಯಾವುದನ್ನು ಶುದ್ಧವೂ ಅಂಗೀಕಾರಾರ್ಹವೂ ಆಗಿದೆಯೆಂದು ಹೇಳುತ್ತಾನೊ ಅದನ್ನು ತಿಳಿದುಕೊಂಡು, ಅದಕ್ಕೆ ಹೊಂದಿಕೊಳ್ಳುವುದು ಅಗತ್ಯ. ಈ ಸಂಬಂಧದಲ್ಲಿ ದೇವರು ತನ್ನ ಆರಾಧಕರಿಂದ ಏನು ಅಪೇಕ್ಷಿಸುತ್ತಾನೆ ಮತ್ತು ಅವರು ಆತನಿಗೆ ಶುದ್ಧರಾಗಿಯೂ ಸ್ವೀಕಾರಯೋಗ್ಯರಾಗಿಯೂ ಪರಿಣಮಿಸಿ, ಹಾಗೆ ಉಳಿಯುವಂತೆ ಯಾವ ಸಹಾಯವನ್ನು ಕೊಟ್ಟಿದ್ದಾನೆಂದು ನಾವು ಕಂಡುಹಿಡಿಯುವುದು ಆವಶ್ಯಕ.​—ಕೀರ್ತನೆ 119:9; ದಾನಿಯೇಲ 12:10.

ಸತ್ಯಾರಾಧನೆಗಾಗಿ ಶುದ್ಧರಾಗಿರುವುದು

4. ಶುದ್ಧತೆಯ ವಿಷಯದಲ್ಲಿ ಬೈಬಲಿನ ಭಾವಾರ್ಥವನ್ನು ವಿವರಿಸಿರಿ.

4 ಹೆಚ್ಚಿನ ಜನರಿಗೆ, ಶುದ್ಧರಾಗಿರುವುದರ ಅರ್ಥ, ಬರೀ ಕೊಳೆ ಅಥವಾ ಮಾಲಿನ್ಯವಿಲ್ಲದವರಾಗಿರುವುದು ಆಗಿರುತ್ತದೆ. ಆದರೆ ಬೈಬಲಿನಲ್ಲಿ, ಶುದ್ಧರಾಗಿರುವ ಸಂಗತಿಯನ್ನು, ಶಾರೀರಿಕ ಅರ್ಥದಲ್ಲಿ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿ ನೈತಿಕ ಅಥವಾ ಆತ್ಮಿಕ ಅರ್ಥದಲ್ಲಿ ವರ್ಣಿಸುವ ಅನೇಕ ಹೀಬ್ರು ಮತ್ತು ಗ್ರೀಕ್‌ ಪದಗಳಿಂದ ಸೂಚಿಸಲಾಗಿದೆ. ಹೀಗೆ, ಒಂದು ಬೈಬಲ್‌ ವಿಶ್ವಕೋಶವು ಹೇಳುವುದು: “‘ಶುದ್ಧ’ ಮತ್ತು ‘ಅಶುದ್ಧ’ ಎಂಬ ಪದಗಳು ಕೇವಲ ಶುಚಿತ್ವಕ್ಕೆ ಕೆಲವೇ ಬಾರಿ ಸೂಚಿಸಲ್ಪಟ್ಟಿದ್ದು, ಮುಖ್ಯವಾಗಿ ಧಾರ್ಮಿಕ ಸಂಬಂಧದಲ್ಲಿ ನುಡಿಯಲ್ಪಟ್ಟಿವೆ. ಹಾಗಿರುವುದರಿಂದ, ‘ಶುದ್ಧತೆ’ಯ ಮೂಲತತ್ತ್ವವು ಜೀವನದ ಪ್ರತಿಯೊಂದು ಅಂಶಕ್ಕೂ ತಟ್ಟುತ್ತದೆ.”

5. ಮೋಶೆಯ ಧರ್ಮಶಾಸ್ತ್ರವು ಒಬ್ಬ ಇಸ್ರಾಯೇಲ್ಯನ ಜೀವನವನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಿತು?

5 ಮೋಶೆಯ ಧರ್ಮಶಾಸ್ತ್ರದಲ್ಲಿ, ಇಸ್ರಾಯೇಲ್ಯ ಜೀವನದ ಹೆಚ್ಚುಕಡಮೆ ಪ್ರತಿಯೊಂದು ಅಂಶಕ್ಕೂ ಅನ್ವಯಿಸುವ, ಯಾವುದು ಶುದ್ಧ ಮತ್ತು ಸ್ವೀಕಾರಯೋಗ್ಯವಾಗಿತ್ತು ಮತ್ತು ಯಾವುದು ಸ್ವೀಕಾರಯೋಗ್ಯವಾಗಿರಲಿಲ್ಲವೆಂದು ಹೇಳಿದ ನಿಯಮ ಹಾಗೂ ಕಟ್ಟಳೆಗಳಿದ್ದವು. ಉದಾಹರಣೆಗೆ, ಯಾಜಕಕಾಂಡ 11-15ನೆಯ ಅಧ್ಯಾಯಗಳಲ್ಲಿ, ಶುದ್ಧತೆ ಮತ್ತು ಅಶುದ್ಧತೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ನಾವು ಕಂಡುಕೊಳ್ಳುತ್ತೇವೆ. ಕೆಲವು ಪ್ರಾಣಿಗಳು ಅಶುದ್ಧವಾಗಿದ್ದವು ಮತ್ತು ಇಸ್ರಾಯೇಲ್ಯರು ಅವನ್ನು ತಿನ್ನಬಾರದಾಗಿತ್ತು. ಒಬ್ಬ ಸ್ತ್ರೀಯು ಮಗುವನ್ನು ಹೆತ್ತಾಗ, ಒಂದು ನಿರ್ದಿಷ್ಟ ಕಾಲದ ವರೆಗೆ ಅಶುದ್ಧಳಾಗಿದ್ದಳು. ಕೆಲವು ಚರ್ಮರೋಗಗಳು, ವಿಶೇಷವಾಗಿ ಕುಷ್ಠರೋಗ ಮತ್ತು ಸ್ತ್ರೀಪುರುಷರ ಜನನೇಂದ್ರಿಯಗಳಿಂದ ಹರಿಯುವ ಸ್ರಾವವು ತದ್ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ಅಶುದ್ಧವಾಗಿಸುತ್ತಿತ್ತು. ಅಶುದ್ಧ ಸ್ಥಿತಿಯಲ್ಲಿರುವಾಗ ಏನು ಮಾಡಬೇಕೆಂಬುದನ್ನೂ ಧರ್ಮಶಾಸ್ತ್ರವು ನಿರ್ದಿಷ್ಟವಾಗಿ ಹೇಳಿತು. ದೃಷ್ಟಾಂತಕ್ಕೆ, ಅರಣ್ಯಕಾಂಡ 5:2ರಲ್ಲಿ ನಾವು ಓದುವುದು: “ಎಲ್ಲಾ ಕುಷ್ಠರೋಗಿಗಳನ್ನೂ ಮೇಹಸ್ರಾವವುಳ್ಳವರನ್ನೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನೂ ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸು.”

6. ಶುದ್ಧತೆಯ ಸಂಬಂಧದ ನಿಯಮಗಳು ಯಾವ ಉದ್ದೇಶದಿಂದ ಕೊಡಲ್ಪಟ್ಟವು?

6 ನಿಸ್ಸಂದೇಹವಾಗಿ ಯೆಹೋವನ ಈ ಮೇಲಿನ ಮತ್ತು ಇತರ ನಿಯಮಗಳಲ್ಲಿರುವ ವೈದ್ಯಕೀಯ ಮತ್ತು ಶರೀರವಿಜ್ಞಾನದ ಕಲ್ಪನೆಗಳು, ವಿಜ್ಞಾನಿಗಳು ಅವುಗಳನ್ನು ಕಂಡುಹಿಡಿಯುವ ಎಷ್ಟೋ ಸಮಯದ ಹಿಂದೆಯೇ ಅಡಕವಾಗಿದ್ದವು. ಮತ್ತು ಅವನ್ನು ಅನುಸರಿಸಿದಾಗ ಜನರು ಪ್ರಯೋಜನ ಹೊಂದಿದರು. ಆದರೂ, ಈ ನಿಯಮಗಳು ಆರೋಗ್ಯ ಸೂತ್ರಗಳಾಗಿ ಅಥವಾ ವೈದ್ಯಕೀಯ ಮಾರ್ಗದರ್ಶನಗಳಾಗಿ ಕೊಡಲ್ಪಟ್ಟಿರಲಿಲ್ಲ. ಅವು ಸತ್ಯಾರಾಧನೆಯ ಭಾಗವಾಗಿದ್ದವು. ಮತ್ತು ಅವು ಜನರ ದೈನಂದಿನ ಜೀವಿತವನ್ನು, ಅಂದರೆ ತಿನ್ನುವುದು, ಜನ್ಮನೀಡುವುದು, ವಿವಾಹ ಸಂಬಂಧ, ಇತ್ಯಾದಿಯನ್ನು ತಟ್ಟಿದ ನಿಜತ್ವವು, ಯೆಹೋವನಿಗೆ ಪೂರ್ತಿಯಾಗಿ ಸಮರ್ಪಿತವಾಗಿದ್ದ ಅವರ ಜೀವಿತದ ಎಲ್ಲ ಭಾಗಗಳಲ್ಲಿ ಯಾವುದು ಸರಿ, ಯಾವುದು ಸರಿಯಲ್ಲ ಎಂಬುದನ್ನು ನಿರ್ಧರಿಸುವ ಹಕ್ಕು ಅವರ ದೇವರಾದ ಯೆಹೋವನಿಗಿತ್ತು ಎಂಬುದನ್ನು ಒತ್ತಿಹೇಳಿತು.​—ಧರ್ಮೋಪದೇಶಕಾಂಡ 7:6; ಕೀರ್ತನೆ 135:4.

7. ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಇಸ್ರಾಯೇಲ್‌ ಜನಾಂಗಕ್ಕೆ ಯಾವ ಆಶೀರ್ವಾದ ದೊರೆಯಲಿತ್ತು?

7 ಧರ್ಮಶಾಸ್ತ್ರದ ಒಡಂಬಡಿಕೆಯು ಇಸ್ರಾಯೇಲ್ಯರನ್ನು ಅವರ ಸುತ್ತಲಿದ್ದ ಜನಾಂಗಗಳ ಮಲಿನಗೊಳಿಸುವ ಆಚಾರಗಳಿಂದಲೂ ರಕ್ಷಿಸಿತು. ಇಸ್ರಾಯೇಲ್ಯರು ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ತೋರಿಬರಲು ಆವಶ್ಯಕವಾಗಿದ್ದ ಎಲ್ಲ ನಿಯಮಗಳೊಂದಿಗೆ ಧರ್ಮಶಾಸ್ತ್ರವನ್ನು ನಂಬಿಗಸ್ತಿಕೆಯಿಂದ ಪಾಲಿಸುವಲ್ಲಿ, ಅವರು ದೇವರನ್ನು ಸೇವಿಸಲು ಮತ್ತು ಆತನ ಆಶೀರ್ವಾದಗಳನ್ನು ಪಡೆಯಲು ಅರ್ಹರಾಗಲಿದ್ದರು. ಈ ಸಂಬಂಧದಲ್ಲಿ, ಯೆಹೋವನು ಆ ಜನಾಂಗಕ್ಕೆ ಹೇಳಿದ್ದು: “ಹೀಗಿರಲಾಗಿ ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವು ಪರಿಶುದ್ಧಜನವೂ ಆಗಿರುವಿರಿ.”​—ವಿಮೋಚನಕಾಂಡ 19:5, 6; ಧರ್ಮೋಪದೇಶಕಾಂಡ 26:19.

8. ಧರ್ಮಶಾಸ್ತ್ರದಲ್ಲಿ ಶುದ್ಧತೆಯ ಬಗ್ಗೆ ಹೇಳಲಾಗಿರುವ ವಿಷಯಕ್ಕೆ ಕ್ರೈಸ್ತರು ಇಂದು ಏಕೆ ಗಮನ ಕೊಡಬೇಕು?

8 ಇಸ್ರಾಯೇಲ್ಯರು ತನಗೆ ಶುದ್ಧರೂ, ಪವಿತ್ರರೂ, ಸ್ವೀಕಾರಯೋಗ್ಯರೂ ಆಗಿರುವಂತೆ ಯೆಹೋವನು ಧರ್ಮಶಾಸ್ತ್ರದಲ್ಲಿ ಅಷ್ಟೊಂದು ವಿವರಗಳನ್ನು ಕೊಟ್ಟಿರುವಾಗ, ತಾವು ಈ ಆವಶ್ಯಕತೆಗಳನ್ನು ಹೇಗೆ ಪಾಲಿಸುತ್ತಿದ್ದೇವೆಂಬುದರ ಕುರಿತು ಕ್ರೈಸ್ತರು ಜಾಗರೂಕತೆಯಿಂದ ಚಿಂತಿಸುವುದು ಆವಶ್ಯಕವಾಗಿರುವುದಿಲ್ಲವೊ? ಕ್ರೈಸ್ತರು ಧರ್ಮಶಾಸ್ತ್ರಕ್ಕೆ ಅಧೀನರಲ್ಲವಾದರೂ, ಪೌಲನು ಹೇಳಿದಂತೆ, ಧರ್ಮಶಾಸ್ತ್ರದಲ್ಲಿ ಕೊಟ್ಟಿರುವ ಎಲ್ಲ ಸಂಗತಿಗಳು, “ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ,” ಎಂಬುದನ್ನು ಕ್ರೈಸ್ತರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. (ಕೊಲೊಸ್ಸೆ 2:17; ಇಬ್ರಿಯ 10:1) “ನಾನು ಮಾರ್ಪಟ್ಟಿಲ್ಲ” ಎಂದು ಹೇಳುವ ಯೆಹೋವನು, ಶುದ್ಧತೆ ಮತ್ತು ನಿರ್ಮಲತೆಯನ್ನು ಹಿಂದಿನ ಕಾಲಗಳಲ್ಲಿ ಅಷ್ಟು ಪ್ರಾಮುಖ್ಯವೆಂದು ನೋಡಿರುವಾಗ, ಆತನ ಒಪ್ಪಿಗೆ ಮತ್ತು ಆಶೀರ್ವಾದವು ನಮಗೆ ಬೇಕಾಗಿರುವಲ್ಲಿ, ಶಾರೀರಿಕ, ನೈತಿಕ ಮತ್ತು ಆತ್ಮಿಕವಾಗಿ ಇಂದು ಶುದ್ಧರಾಗಿರುವ ವಿಷಯವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು.​—ಮಲಾಕಿಯ 3:6; ರೋಮಾಪುರ 15:4; 1 ಕೊರಿಂಥ 10:11, 31.

ಶಾರೀರಿಕ ಶುದ್ಧತೆ ನಮ್ಮನ್ನು ಅರ್ಹರಾಗಿಸುತ್ತದೆ

9, 10. (ಎ) ಕ್ರೈಸ್ತನೊಬ್ಬನಿಗೆ ಶಾರೀರಿಕ ಶುದ್ಧತೆ ಏಕೆ ಪ್ರಾಮುಖ್ಯ? (ಬಿ) ಯೆಹೋವನ ಸಾಕ್ಷಿಗಳ ಅಧಿವೇಶನಗಳ ಬಗ್ಗೆ ಅನೇಕವೇಳೆ ಯಾವ ರೀತಿಯ ಹೇಳಿಕೆಗಳು ಮಾಡಲ್ಪಡುತ್ತವೆ?

9 ಸತ್ಯಾರಾಧನೆಯಲ್ಲಿ ಶಾರೀರಿಕ ಶುದ್ಧತೆಯು ಈಗಲೂ ಪ್ರಾಮುಖ್ಯವೊ? ಶಾರೀರಿಕ ಶುದ್ಧತೆಯು ಮಾತ್ರ ಒಬ್ಬನನ್ನು ದೇವರ ಸತ್ಯಾರಾಧಕನನ್ನಾಗಿ ಮಾಡುವುದಿಲ್ಲವೆಂಬುದು ನಿಜವಾದರೂ, ಸತ್ಯಾರಾಧಕನು ತನ್ನ ಪರಿಸ್ಥಿತಿಯು ಅನುಮತಿಸುವಷ್ಟರ ಮಟ್ಟಿಗೆ ಶಾರೀರಿಕವಾಗಿ ಶುದ್ಧನಾಗಿರುವುದು ನಿಜವಾಗಿಯೂ ಯೋಗ್ಯವಾಗಿದೆ. ವಿಶೇಷವಾಗಿ ಇಂದು, ಅನೇಕರು ತಮ್ಮ ದೇಹ, ಉಡುಪು ಅಥವಾ ತಮ್ಮ ಸುತ್ತುಮುತ್ತಲಿನ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಲು ಅಲಕ್ಷ್ಯಮಾಡುವ ಈ ದಿನಗಳಲ್ಲಿ, ಶುದ್ಧವಾಗಿಟ್ಟುಕೊಳ್ಳುವವರನ್ನು ಸುತ್ತುಮುತ್ತಲಿನ ಜನರು ಅನೇಕವೇಳೆ ಗಮನಿಸುತ್ತಾರೆ. ಪೌಲನು ಹೇಳಿದಂತೆ, ಇದು ಸಕಾರಾತ್ಮಕ ಪರಿಣಾಮಕ್ಕೆ ನಡೆಸಬಲ್ಲದು: “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.”​—2 ಕೊರಿಂಥ 6:3, 4.

10 ಯೆಹೋವನ ಸಾಕ್ಷಿಗಳನ್ನು, ವಿಶೇಷವಾಗಿ ಅವರ ದೊಡ್ಡ ಅಧಿವೇಶನಗಳಲ್ಲಿ ಕಂಡುಬರುವಂತೆ, ಅವರ ಶುದ್ಧವೂ, ಕ್ರಮಬದ್ಧವೂ ಮತ್ತು ಗೌರವಪೂರ್ಣ ನಡತೆ ಹಾಗೂ ಆಚಾರಗಳಿಗಾಗಿ ಸಾರ್ವಜನಿಕ ಅಧಿಕಾರಿಗಳು ಪದೇ ಪದೇ ಪ್ರಶಂಸಿಸಿದ್ದಾರೆ. ಉದಾಹರಣೆಗೆ, ಇಟಲಿಯ ಸವೋನ ಪ್ರಾಂತ್ಯದಲ್ಲಿ ನಡೆದ ಅಧಿವೇಶನದ ಬಗ್ಗೆ ಲ ಸ್ಟಾಂಪ ವಾರ್ತಾಪತ್ರವು ಹೇಳಿದ್ದು: “ಒಬ್ಬನು ಆ ಅಧಿವೇಶನ ನಡೆಯುವ ಸ್ಥಳದಲ್ಲಿ ನಡೆಯುತ್ತ ಹೋಗುವಾಗ ಎದ್ದು ಕಾಣುವ ವಿಷಯವು, ಆ ಸೌಕರ್ಯಗಳನ್ನು ಉಪಯೋಗಿಸುತ್ತಿರುವ ಜನರ ಶುದ್ಧತೆ ಮತ್ತು ವ್ಯವಸ್ಥಿತತೆಯೇ.” ಬ್ರಸಿಲ್‌ನ ಸಾವ್‌ ಪಾವ್ಲೂನಲ್ಲಿ ನಡೆದ ಸಾಕ್ಷಿಗಳ ಅಧಿವೇಶನದ ಬಳಿಕ, ಆ ಸ್ಟೇಡಿಯಮ್‌ನ ಅಧಿಕಾರಿಯು, ಅಲ್ಲಿನ ಶುಚಿಮಾಡುವ ತಂಡದ ಸೂಪರ್‌ವೈಸರ್‌ಗೆ ಹೇಳಿದ್ದು: “ಇಂದಿನಿಂದ ಹಿಡಿದು, ನೀವು ಯೆಹೋವನ ಸಾಕ್ಷಿಗಳು ಮಾಡಿದಂತೆಯೇ ಸ್ಟೇಡಿಯಮನ್ನು ಸ್ವಚ್ಛಗೊಳಿಸಬೇಕು.” ಅದೇ ಸ್ಟೇಡಿಯಮ್‌ನಲ್ಲಿ ಇನ್ನೊಬ್ಬ ಅಧಿಕಾರಿಯು ಹೇಳಿದ್ದು: “ಯೆಹೋವನ ಸಾಕ್ಷಿಗಳು ಸ್ಟೇಡಿಯಮನ್ನು ಬಾಡಿಗೆಗೆ ಪಡೆದುಕೊಳ್ಳಲು ಬಯಸುವಾಗ ನಮಗೆ ತಾರೀಖುಗಳ ಚಿಂತೆ ಬಿಟ್ಟರೆ, ಇನ್ನಾವುದರ ಚಿಂತೆಯೂ ಇರುವುದಿಲ್ಲ.”

11, 12. (ಎ) ನಮ್ಮ ವ್ಯಕ್ತಿಪರ ಶುದ್ಧತೆಯ ವಿಷಯದಲ್ಲಿ ನಾವು ಯಾವ ಬೈಬಲ್‌ ಮೂಲತತ್ತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? (ಬಿ) ನಮ್ಮ ವೈಯಕ್ತಿಕ ಆಚಾರಗಳ ಮತ್ತು ಜೀವನ ರೀತಿಯ ಕುರಿತು ಯಾವ ಪ್ರಶ್ನೆಗಳನ್ನು ಕೇಳಸಾಧ್ಯವಿದೆ?

11 ನಮ್ಮ ಆರಾಧನಾ ಸ್ಥಳದ ಸ್ವಚ್ಛತೆಯೂ ಸುವ್ಯವಸ್ಥಿತ ಸ್ಥಿತಿಯೂ ನಾವು ಆರಾಧಿಸುವ ದೇವರಿಗೆ ಸ್ತುತಿಯನ್ನು ತರುತ್ತಿರುವಲ್ಲಿ, ಈ ಗುಣಗಳನ್ನು ನಮ್ಮ ಸ್ವಂತ ಜೀವನದಲ್ಲಿಯೂ ತೋರಿಸುವುದು ಅಷ್ಟೇ ಪ್ರಾಮುಖ್ಯ. ಆದರೂ, ನಮ್ಮ ಸ್ವಂತ ಮನೆಯೊಳಗೆ, ನಮಗೆ ಹೇಗೆ ಬೇಕೊ ಹಾಗೆ ಇರುವ ಮತ್ತು ವರ್ತಿಸುವ ಹಕ್ಕು ನಮಗಿದೆ ಎಂದು ನಾವೆಣಿಸಬಹುದು. ಮತ್ತು ಉಡುಪು ಹಾಗೂ ಕೇಶಶೈಲಿಯ ವಿಷಯದಲ್ಲಿಯಾದರೊ, ನಮಗೆ ಹಿತಕರವಾಗಿರುವ ಮತ್ತು ಹಿಡಿಸುವ ರೀತಿಯಲ್ಲಿ ಇರುವ ಸ್ವಾತಂತ್ರ್ಯ ನಮಗೆ ಖಂಡಿತವಾಗಿಯೂ ಇದೆ! ಆದರೂ, ಹೆಚ್ಚಿನಾಂಶ ಇದೆಲ್ಲ ಸಂಬಂಧಸೂಚಕ ವಿಷಯಗಳು. ಆಹಾರ ತಿನ್ನುವ ಕುರಿತು ಒಬ್ಬನಿಗಿರುವ ಆಯ್ಕೆಯನ್ನು ಚರ್ಚಿಸುವಾಗ, ಪೌಲನು ಜೊತೆ ಕ್ರೈಸ್ತರನ್ನು ಎಚ್ಚರಿಸಿದ್ದು: “ಆದರೂ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲವಿಲ್ಲದವರಿಗೆ ಒಂದು ವೇಳೆ ವಿಘ್ನವಾದೀತು, ಎಚ್ಚರಿಕೆಯಾಗಿರಿ.” ಬಳಿಕ ಅವನು ಒಂದು ಅಮೂಲ್ಯವಾದ ಮೂಲತತ್ತ್ವವನ್ನು ಹೇಳಿದನು: “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ.” (1 ಕೊರಿಂಥ 8:9; 10:23) ಸ್ವಚ್ಛತೆಯ ವಿಷಯದಲ್ಲಿ ಪೌಲನ ಬುದ್ಧಿವಾದವು ನಮಗೆ ಹೇಗೆ ಅನ್ವಯಿಸುತ್ತದೆ?

12 ದೇವರ ಶುಶ್ರೂಷಕನು ತನ್ನ ಜೀವನರೀತಿಯಲ್ಲಿ ನಿರ್ಮಲನೂ ವ್ಯವಸ್ಥಿತನೂ ಆಗಿರುವಂತೆ ಜನರು ನಿರೀಕ್ಷಿಸುವುದು ನ್ಯಾಯಸಮ್ಮತ. ಆದುದರಿಂದ, ನಮ್ಮ ಮನೆ ಮತ್ತು ಅದರ ಪರಿಸರದ ತೋರಿಕೆಯು ನಾವು ಯಾರಾಗಿದ್ದೇವೆಂದು ಹೇಳಿಕೊಳ್ಳುತ್ತೇವೊ ಅದರ, ಅಂದರೆ ದೇವರ ವಾಕ್ಯದ ಶುಶ್ರೂಷಕರೆಂಬ ಹೆಸರಿನ ಮರ್ಯಾದೆಯನ್ನು ಕುಂದಿಸದಂತೆ ಖಾತರಿ ಮಾಡಿಕೊಳ್ಳಬೇಕು. ನಮ್ಮ ಮತ್ತು ನಮ್ಮ ನಂಬಿಕೆಗಳ ವಿಷಯದಲ್ಲಿ ನಮ್ಮ ಮನೆಯು ಯಾವ ರೀತಿಯ ಸಾಕ್ಷಿಯನ್ನು ಅಥವಾ ಸಾಕ್ಷ್ಯವನ್ನು ಕೊಡುತ್ತದೆ? ನಾವು ಇತರರಿಗೆ ಬಲವಾಗಿ ಯಾವುದನ್ನು ಶಿಫಾರಸ್ಸು ಮಾಡುತ್ತೇವೊ ಅಂತಹ ನಿರ್ಮಲವೂ ವ್ಯವಸ್ಥಿತವೂ ಆದ ಆ ನೂತನ ಲೋಕದಲ್ಲಿ ನಿಜವಾಗಿಯೂ ಜೀವಿಸಲು ನಾವು ಹಾತೊರೆಯುತ್ತಿದ್ದೇವೆ ಎಂಬುದನ್ನು ಅದು ತೋರಿಸುತ್ತದೊ? (2 ಪೇತ್ರ 3:13) ಅಂತೆಯೇ ನಮ್ಮ ವೈಯಕ್ತಿಕ ತೋರಿಕೆಯೂ​—ಅದು ವಿಶ್ರಾಂತಿಯ ಸಮಯದಲ್ಲಾಗಿರಲಿ ಇಲ್ಲವೆ ಶುಶ್ರೂಷೆಯಲ್ಲಾಗಿರಲಿ​—ನಾವು ಸಾರುವ ಸಂದೇಶದ ಕಡೆಗಿನ ಆಕರ್ಷಣೆಯನ್ನು ಒಂದೇ ಹೆಚ್ಚಿಸಬಲ್ಲದು ಇಲ್ಲವೆ ಕುಂದಿಸಬಲ್ಲದು. ದೃಷ್ಟಾಂತಕ್ಕೆ, ಮೆಕ್ಸಿಕೊ ದೇಶದ ಒಬ್ಬ ವಾರ್ತಾ ವರದಿಗಾರನ ಹೇಳಿಕೆಯನ್ನು ಗಮನಿಸಿರಿ: “ನಿಜವಾಗಿಯೂ ಯೆಹೋವನ ಸಾಕ್ಷಿಗಳ ಸದಸ್ಯರ ಒಂದು ದೊಡ್ಡ ಭಾಗವು ಯುವ ಜನರಾಗಿದ್ದಾರೆ. ಮತ್ತು ಅವರ ಮಧ್ಯೆ ಎದ್ದು ಕಾಣುವ ವಿಷಯವು ಅವರ ಕೇಶಶೈಲಿ, ನೈರ್ಮಲ್ಯ ಮತ್ತು ಯೋಗ್ಯ ರೀತಿಯ ಉಡುಪಾಗಿದೆ.” ಇಂತಹ ಯುವ ಜನರು ನಮ್ಮ ಮಧ್ಯೆ ಇದ್ದಾರೆಂಬುದು ಎಷ್ಟು ಸಂತೋಷದ ಸಂಗತಿ!

13. ನಮ್ಮ ದಿನನಿತ್ಯದ ಜೀವಿತದ ಎಲ್ಲ ಅಂಶಗಳು ಶುದ್ಧವೂ ವ್ಯವಸ್ಥಿತವೂ ಆಗಿರುವ ವಿಷಯದಲ್ಲಿ ನಾವೇನು ಮಾಡಬಲ್ಲೆವು?

13 ನಮ್ಮ ಶರೀರ, ನಮ್ಮ ಸ್ವತ್ತು, ನಮ್ಮ ಮನೆ​—ಇವುಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕೆಂದು ಹೇಳುವುದು ಸುಲಭ, ಮಾಡುವುದು ಕಷ್ಟ ನಿಜ. ಸ್ವಚ್ಛವಾಗಿರಲಿಕ್ಕಾಗಿ ಆವಶ್ಯಕವಾಗಿರುವುದು ಜಟಿಲವಾದ ಮತ್ತು ದುಬಾರಿಯಾದ ಸಾಧನಗಳು ಅಥವಾ ಉಪಕರಣಗಳಲ್ಲ, ಬದಲಾಗಿ ಒಳ್ಳೆಯ ಯೋಜನೆ ಮತ್ತು ಹೊಂದಿಕೆಯಾದ ಪ್ರಯತ್ನವೂ ಆಗಿದೆ. ನಮ್ಮ ಶರೀರ, ಬಟ್ಟೆ, ಮನೆ, ವಾಹನ, ಇತ್ಯಾದಿಗಳನ್ನು ಶುಚಿಯಾಗಿಡಲು ಸಮಯವನ್ನು ಬದಿಗಿಡತಕ್ಕದ್ದು. ದೈನಂದಿನ ಜವಾಬ್ದಾರಿಗಳ ಜಾಗ್ರತೆ ವಹಿಸುವುದಕ್ಕೆ ಕೂಡಿಸಿ ಶುಶ್ರೂಷೆಯಲ್ಲಿ ಮಗ್ನರಾಗಿರುವುದು, ಕೂಟಗಳ ಹಾಜರಿ, ಮತ್ತು ವ್ಯಕ್ತಿಗತ ಅಧ್ಯಯನಗಳನ್ನು ಮಾಡಲಿಕ್ಕಿದೆಯೆಂಬ ಸಂಗತಿಯು, ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ನಿರ್ಮಲರಾಗಿರುವ ಆವಶ್ಯಕತೆಯಿಂದ ವಿನಾಯಿತಿ ಕೊಡುವುದಿಲ್ಲ. “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ” ಎಂಬ ಸುಪರಿಚಿತ ಮೂಲತತ್ತ್ವವು ನಮ್ಮ ಜೀವನದ ಈ ಭಾಗಕ್ಕೂ ಅಷ್ಟೇ ಉತ್ತಮವಾಗಿ ಅನ್ವಯಿಸುತ್ತದೆ.​—ಪ್ರಸಂಗಿ 3:1.

ಮಲಿನಗೊಂಡಿರದ ಹೃದಯ

14. ನೈತಿಕ ಮತ್ತು ಆತ್ಮಿಕ ಶುದ್ಧತೆಯು ಶಾರೀರಿಕ ಶುದ್ಧತೆಗಿಂತಲೂ ಹೆಚ್ಚು ಪ್ರಾಮುಖ್ಯವೆಂದು ಏಕೆ ಹೇಳಸಾಧ್ಯವಿದೆ?

14 ಶಾರೀರಿಕ ಶುದ್ಧತೆಗೆ ಗಮನಕೊಡುವುದು ಪ್ರಾಮುಖ್ಯವಾಗಿದೆಯಾದರೂ, ನೈತಿಕ ಮತ್ತು ಆತ್ಮಿಕ ಶುದ್ಧತೆಯ ಕುರಿತು ಚಿಂತಿತರಾಗಿರುವುದು ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ. ನಾವು ಈ ತೀರ್ಮಾನಕ್ಕೆ ಬರುವುದು ಇಸ್ರಾಯೇಲ್‌ ಜನಾಂಗವನ್ನು ಯೆಹೋವನು ತಳ್ಳಿಹಾಕಿದ ಕಾರಣವನ್ನು ಜ್ಞಾಪಕಕ್ಕೆ ತರುವ ಮೂಲಕವೇ. ಅವರು ಶಾರೀರಿಕವಾಗಿ ಅಶುದ್ಧರಾಗಿದ್ದ ಕಾರಣದಿಂದಲ್ಲ, ಬದಲಾಗಿ ನೈತಿಕವಾಗಿಯೂ ಆತ್ಮಿಕವಾಗಿಯೂ ಭ್ರಷ್ಟರಾದ ಕಾರಣ ಆತನು ಅವರನ್ನು ತಳ್ಳಿಹಾಕಿದನು. ಪ್ರವಾದಿ ಯೆಶಾಯನ ಮೂಲಕ ಯೆಹೋವನು ಅವರಿಗೆ, “ಅಧರ್ಮಭಾರಹೊತ್ತಿರುವ . . . ದುಷ್ಟಜಾತಿ” ಅವರಾಗಿರುವುದರಿಂದ, ಅವರ ಯಜ್ಞಗಳು, ಅಮಾವಾಸ್ಯೆ, ಸಬ್ಬತ್ತಿನ ಆಚರಣೆಗಳು, ಹೌದು, ಅವರ ಪ್ರಾರ್ಥನೆಗಳು ಸಹ ಆತನಿಗೆ ಹೊರೆಯಂತಿವೆ ಎಂದು ಹೇಳಿದನು. ಅವರು ದೇವರ ಅನುಗ್ರಹವನ್ನು ಪುನಃ ಪಡೆಯಲಿಕ್ಕಾಗಿ ಏನು ಮಾಡಬೇಕು? ಯೆಹೋವನು ಹೇಳಿದ್ದು: “ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ.”​—ಯೆಶಾಯ 1:4, 11-16.

15, 16. ಮನುಷ್ಯನನ್ನು ಮಲಿನಗೊಳಿಸುವುದು ಯಾವುದೆಂದು ಯೇಸು ಹೇಳಿದನು, ಮತ್ತು ನಾವು ಯೇಸುವಿನ ಮಾತುಗಳಿಂದ ಹೇಗೆ ಪ್ರಯೋಜನ ಪಡೆಯಬಲ್ಲೆವು?

15 ನೈತಿಕ ಮತ್ತು ಆತ್ಮಿಕ ಶುದ್ಧತೆಯ ಪ್ರಮುಖತೆಯನ್ನು ಇನ್ನೂ ಹೆಚ್ಚು ಗಣ್ಯಮಾಡಲಿಕ್ಕಾಗಿ, ಯೇಸು ಫರಿಸಾಯರಿಗೆ ಮತ್ತು ಶಾಸ್ತ್ರಿಗಳಿಗೆ ಏನು ಹೇಳಿದನೊ ಅದನ್ನು ಪರಿಗಣಿಸಿರಿ. ಯೇಸುವಿನ ಶಿಷ್ಯರು ಊಟ ಮಾಡುವ ಮೊದಲು ಕೈಗಳನ್ನು ತೊಳೆಯದ ಕಾರಣ ಅವರು ಅಶುದ್ಧರೆಂದು ಹೇಳಿದಾಗ ಯೇಸು, “ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು ಹೇಳಿದನು.” ಬಳಿಕ ಅವನು ವಿವರಿಸಿದ್ದು: “ಆದರೆ ಬಾಯೊಳಗಿಂದ ಹೊರಡುವಂಥವುಗಳು ಮನಸ್ಸಿನೊಳಗಿಂದ [“ಹೃದಯದೊಳಗಿಂದ,” NW] ಬರುತ್ತವೆ; ಇವೇ ಮನುಷ್ಯನನ್ನು ಹೊಲೆಮಾಡುವವು. ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ. ಮನುಷ್ಯನನ್ನು ಕೆಡಿಸುವಂಥವುಗಳು ಇವೇ; ಆದರೆ ಕೈ ತೊಳಕೊಳ್ಳದೆ ಊಟಮಾಡುವದು ಮನುಷ್ಯನನ್ನು ಕೆಡಿಸುವದಿಲ್ಲ.”​—ಮತ್ತಾಯ 15:11, 18-20.

16 ಯೇಸುವಿನ ಮಾತುಗಳಿಂದ ನಾವು ಏನು ಕಲಿಯಬಲ್ಲೆವು? ಹೃದಯದಲ್ಲಿರುವ ದುಷ್ಟ, ಅನೈತಿಕ ಮತ್ತು ಅಶುದ್ಧ ಪ್ರವೃತ್ತಿಗಳನ್ನು ದುಷ್ಟ, ಅನೈತಿಕ ಮತ್ತು ಅಶುದ್ಧ ವರ್ತನೆಗಳು ಅನುಸರಿಸಿಕೊಂಡು ಬರುತ್ತವೆ ಎಂದು ಯೇಸು ತೋರಿಸಿದನು. ಶಿಷ್ಯ ಯಾಕೋಬನು ಹೇಳಿರುವಂತೆ, “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.” (ಯಾಕೋಬ 1:14, 15) ಆದುದರಿಂದ, ಯೇಸು ವರ್ಣಿಸಿದ ಘೋರ ಪಾಪಗಳಿಗೆ ನಾವು ಬೀಳದಿರಲು ಬಯಸುವಲ್ಲಿ, ನಾವು ಅಂತಹ ಸಂಗತಿಗಳ ಕಡೆಗೆ ನಮಗಿರುವ ಯಾವುದೇ ಒಲವನ್ನು ನಮ್ಮ ಹೃದಯದಿಂದ ಕಿತ್ತುಹಾಕಿ, ಅವುಗಳಿಂದ ದೂರವಿರಬೇಕು. ಇದರ ಅರ್ಥವು, ನಾವು ಏನು ಓದುತ್ತೇವೊ, ನೋಡುತ್ತೇವೊ, ಆಲಿಸುತ್ತೇವೊ, ಆ ವಿಷಯಗಳ ಕುರಿತು ಜಾಗರೂಕತೆಯಿಂದಿರಬೇಕು. ಇಂದು, ವಾಕ್‌ಸ್ವಾತಂತ್ರ್ಯ ಮತ್ತು ಕಲಾಸ್ವಾತಂತ್ರ್ಯದ ಹೆಸರಿನಲ್ಲಿ, ವಿನೋದಾವಳಿಯ ಮತ್ತು ಜಾಹೀರಾತಿನ ಕೈಗಾರಿಕೆಗಳು ಪಾಪಪೂರ್ಣ ದೈಹಿಕಾಸಕ್ತಿಯನ್ನು ತಣಿಸಲಿಕ್ಕಾಗಿ ಅಸಂಖ್ಯಾತ ಸಂಗೀತಗಳನ್ನು ಮತ್ತು ಚಿತ್ರಗಳನ್ನು ತಯಾರಿಸುತ್ತವೆ. ಇಂತಹ ವಿಚಾರಗಳು ನಮ್ಮ ಹೃದಯದಲ್ಲಿ ಬೇರೂರದಂತೆ ನಾವು ದೃಢತೆಯಿಂದಿರಬೇಕು. ಮುಖ್ಯಾಂಶವೇನಂದರೆ, ನಾವು ದೇವರಿಗೆ ಮೆಚ್ಚಿಕೆಯುಳ್ಳವರೂ ಸ್ವೀಕಾರಯೋಗ್ಯರೂ ಆಗಿರಬೇಕಾದರೆ, ನಾವು ಸತತವಾಗಿ ಶುದ್ಧವೂ ನಿರ್ಮಲವೂ ಆದ ಹೃದಯವನ್ನು ಇಟ್ಟುಕೊಳ್ಳುವಂತೆ ಎಚ್ಚರದಿಂದಿರಬೇಕು.​—ಜ್ಞಾನೋಕ್ತಿ 4:23.

ಸತ್ಕ್ರಿಯೆಗಳಿಗಾಗಿ ಪರಿಶುದ್ಧಗೊಳಿಸಲ್ಪಟ್ಟವರು

17. ಯೆಹೋವನು ತನ್ನ ಜನರನ್ನು ಶುದ್ಧ ಸ್ಥಿತಿಗೆ ತಂದಿರುವುದೇಕೆ?

17 ಯೆಹೋವನ ಸಹಾಯದಿಂದ ಆತನ ಮುಂದೆ ಶುದ್ಧವಾದ ನಿಲುವಿನಲ್ಲಿ ಸಂತೋಷಿಸುವ ಸಂದರ್ಭವು ನಮಗೆ ನಿಶ್ಚಯವಾಗಿಯೂ ಒಂದು ಆಶೀರ್ವಾದವೂ ಸಂರಕ್ಷಣೆಯೂ ಆಗಿದೆ. (2 ಕೊರಿಂಥ 6:​14-18) ಹಾಗಿದ್ದರೂ, ಯೆಹೋವನು ತನ್ನ ಜನರನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇಂತಹ ಶುದ್ಧ ಸ್ಥಿತಿಯೊಳಗೆ ತಂದಿದ್ದಾನೆಂಬುದನ್ನೂ ನಾವು ಮಾನ್ಯಮಾಡುತ್ತೇವೆ. ಕ್ರಿಸ್ತ ಯೇಸು, “ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಪರಿಶುದ್ಧಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು,” ಎಂದು ಪೌಲನು ತೀತನಿಗೆ ಹೇಳಿದನು. (ತೀತ 2:14) ಹಾಗಾದರೆ, ಶುದ್ಧೀಕರಿಸಲ್ಪಟ್ಟ ಜನರಾದ ನಾವು ಯಾವ ಕೆಲಸಗಳಲ್ಲಿ ಆಸಕ್ತರಾಗಿರಬೇಕು?

18. ನಾವು ಸತ್ಕ್ರಿಯೆಗಳ ವಿಷಯದಲ್ಲಿ ಆಸಕ್ತರೆಂದು ಹೇಗೆ ತೋರಿಸಬಲ್ಲೆವು?

18 ಪ್ರಥಮವಾಗಿ ಮತ್ತು ಪ್ರಾಮುಖ್ಯವಾಗಿ, ನಾವು ದೇವರ ರಾಜ್ಯದ ಸುವಾರ್ತೆಯನ್ನು ಬಹಿರಂಗವಾಗಿ ಸಾರುವುದರಲ್ಲಿ ಶ್ರಮಪಡಬೇಕು. (ಮತ್ತಾಯ 24:14) ಹಾಗೆ ಮಾಡುವ ಮೂಲಕ, ನಾವು ಎಲ್ಲೆಲ್ಲಿಯೂ ಇರುವ ಜನರಿಗೆ, ಯಾವುದೇ ವಿಧದ ಮಾಲಿನ್ಯವಿಲ್ಲದ ಭೂಮಿಯಲ್ಲಿ ಅನಂತವಾಗಿ ಜೀವಿಸುವ ನಿರೀಕ್ಷೆಯನ್ನು ಎತ್ತಿ ಹಿಡಿಯುತ್ತೇವೆ. (2 ಪೇತ್ರ 3:13) ನಮ್ಮ ಸತ್ಕ್ರಿಯೆಗಳಲ್ಲಿ, ನಮ್ಮ ದೈನಂದಿನ ಜೀವಿತದಲ್ಲಿ ದೇವರಾತ್ಮದ ಫಲಗಳನ್ನು ಫಲಿಸುವ ವಿಷಯವೂ ಸೇರಿರುತ್ತದೆ. ಹೀಗೆ ನಾವು ನಮ್ಮ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸುವೆವು. (ಗಲಾತ್ಯ 5:22, 23; 1 ಪೇತ್ರ 2:12) ನೈಸರ್ಗಿಕ ವಿಪತ್ತುಗಳಿಗೆ ಮತ್ತು ಮಾನವ ದುರಂತಗಳಿಗೆ ಬಲಿ ಬಿದ್ದಿರುವ, ಸತ್ಯದಲ್ಲಿ ಇಲ್ಲದಿರುವ ಜನರನ್ನು ನಾವು ಮರೆತುಬಿಡುವುದಿಲ್ಲ. ನಾವು ಪೌಲನ ಬುದ್ಧಿವಾದವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಇಂತಹ ಸಮಸ್ತ ಸೇವೆಗಳು, ನಿರ್ಮಲ ಹೃದಯ ಮತ್ತು ಶುದ್ಧ ಹೇತುವಿನಿಂದ ಮಾಡಲ್ಪಡುವಲ್ಲಿ, ದೇವರಿಗೆ ಸಂತೋಷವನ್ನು ತರುವ ಕೆಲಸಗಳಾಗಿವೆ.​—1 ತಿಮೊಥೆಯ 1:5.

19. ನಾವು ಶಾರೀರಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧತೆಯ ಉನ್ನತ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ, ಯಾವ ಆಶೀರ್ವಾದಗಳು ನಮಗಾಗಿ ಕಾದಿರುತ್ತವೆ?

19 ಸರ್ವೋನ್ನತನ ಸೇವಕರಾದ ನಾವು, “ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ​—ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು,” ಎಂಬ ಪೌಲನ ಮಾತುಗಳನ್ನು ಹೃದಯಕ್ಕೆ ಹಚ್ಚಿಕೊಳ್ಳುತ್ತೇವೆ. (ರೋಮಾಪುರ 12:1) ಹಾಗಿರುವುದಿಂದ, ನಾವು ಯೆಹೋವನಿಂದ ಶುದ್ಧೀಕರಿಸಲ್ಪಟ್ಟಿರುವ ಸುಯೋಗಕ್ಕೆ ಕೃತಜ್ಞತೆಯನ್ನು ತೋರಿಸುತ್ತ ಮುಂದುವರಿದು, ಶಾರೀರಿಕ, ನೈತಿಕ ಮತ್ತು ಆತ್ಮಿಕ ಶುದ್ಧತೆಯ ಉನ್ನತ ಮಟ್ಟವನ್ನು ಇಟ್ಟುಕೊಳ್ಳಲು ಕೈಲಾಗುವಷ್ಟನ್ನು ಮಾಡೋಣ. ಹಾಗೆ ಮಾಡುವಲ್ಲಿ, ನಮಗೆ ಈಗ ಆತ್ಮಗೌರವ ಮತ್ತು ತೃಪ್ತಿ ದೊರೆಯುವುದು ಮಾತ್ರವಲ್ಲ, “ಮೊದಲಿದ್ದದ್ದು” ಅಂದರೆ ಈಗಿನ ದುಷ್ಟ ಮತ್ತು ಕೆಟ್ಟಿರುವ ವ್ಯವಸ್ಥೆಯು, ದೇವರು “ಎಲ್ಲವನ್ನು ಹೊಸದು” ಮಾಡುವಾಗ ಗತಿಸಿಹೋಗುವುದನ್ನು ನೋಡುವ ಪ್ರತೀಕ್ಷೆಯೂ ದೊರೆಯುವುದು.​—ಪ್ರಕಟನೆ 21:​4, 5.

ನಿಮಗೆ ಜ್ಞಾಪಕವಿದೆಯೆ?

• ಶುದ್ಧತೆಯ ವಿಷಯದಲ್ಲಿ ಇಸ್ರಾಯೇಲ್ಯರಿಗೆ ಅನೇಕ ನಿಯಮಗಳು ಕೊಡಲ್ಪಟ್ಟದ್ದೇಕೆ?

• ನಮ್ಮ ಶಾರೀರಿಕ ಶುದ್ಧತೆಯು, ನಮ್ಮ ಸಾರುವ ಸಂದೇಶದ ಆಕರ್ಷಣೆಯನ್ನು ಹೇಗೆ ವರ್ಧಿಸುತ್ತದೆ?

• ನೈತಿಕ ಮತ್ತು ಆತ್ಮಿಕ ಶುದ್ಧತೆಯು ಶಾರೀರಿಕ ಶುದ್ಧತೆಗಿಂತಲೂ ಹೆಚ್ಚು ಪ್ರಾಮುಖ್ಯವೇಕೆ?

• ನಾವು “ಸತ್ಕ್ರಿಯೆಗಳಲ್ಲಿ ಆಸಕ್ತರು” ಎಂಬುದನ್ನು ಹೇಗೆ ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರಗಳು]

ನಾವು ಸಾರುವ ಸುವಾರ್ತೆಯ ಆಕರ್ಷಣೆಯನ್ನು ಶಾರೀರಿಕ ಶುದ್ಧತೆಯು ವರ್ಧಿಸುತ್ತದೆ

[ಪುಟ 22ರಲ್ಲಿರುವ ಚಿತ್ರ]

ದುರಾಲೋಚನೆಗಳು ದುಷ್ಕ್ರಿಯೆಗಳಿಗೆ ನಡೆಸುತ್ತವೆಂದು ಯೇಸು ಎಚ್ಚರಿಸಿದನು

[ಪುಟ 23ರಲ್ಲಿರುವ ಚಿತ್ರಗಳು]

ಶುದ್ಧೀಕರಿಸಲ್ಪಟ್ಟ ಜನರಾಗಿರುವ ಯೆಹೋವನ ಸಾಕ್ಷಿಗಳು ಸತ್ಕ್ರಿಯೆಗಳಲ್ಲಿ ಆಸಕ್ತರು