ಸೆಪ್ಟ್ಯೂಅಜಿಂಟ್ ಗ್ರೀಕ್ ಭಾಷಾಂತರದಲ್ಲಿ ಟೆಟ್ರಗ್ರ್ಯಾಮಟಾನ್ ಪವಿತ್ರಪದ
ಸೆಪ್ಟ್ಯೂಅಜಿಂಟ್ ಗ್ರೀಕ್ ಭಾಷಾಂತರದಲ್ಲಿ ಟೆಟ್ರಗ್ರ್ಯಾಮಟಾನ್ ಪವಿತ್ರಪದ
ಯೆಹೋವ ಎಂಬ ದೈವಿಕ ನಾಮವನ್ನು ಟೆಟ್ರಗ್ರ್ಯಾಮಟಾನ್ ಅಂದರೆ ನಾಲ್ಕು ಹೀಬ್ರು ಅಕ್ಷರಗಳಾದ יהוה ವೈಎಚ್‌ಡಬ್ಲ್ಯೂಎಚ್ (YHWH) ಪ್ರತಿನಿಧೀಕರಿಸುತ್ತವೆ. ಸೆಪ್ಟ್ಯೂಅಜಿಂಟ್ ಗ್ರೀಕ್ ಭಾಷಾಂತರದಲ್ಲಿ ಈ ಪವಿತ್ರ ಪದವು ಕಂಡುಬರುವುದಿಲ್ಲವೆಂಬುದು ದೀರ್ಘಕಾಲದಿಂದಲೂ ನಂಬಲಾಗಿತ್ತು. ಹೀಗೆ, ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಲೇಖಕರು ಹೀಬ್ರು ಶಾಸ್ತ್ರದಿಂದ ಉದ್ಧರಿಸಿದಾಗ, ಅವರು ಈ ದೈವಿಕ ನಾಮವನ್ನು ತಮ್ಮ ಬರೆವಣಿಗೆಯಲ್ಲಿ ಉಪಯೋಗಿಸಿರಲಿಲ್ಲ ಎಂದು ವಾದಿಸಲಾಗುತ್ತಿತ್ತು.
ಕಳೆದ ಸುಮಾರು ನೂರು ವರುಷಗಳಲ್ಲಿನ ಕಂಡುಹಿಡಿತಗಳು, ದೇವರ ನಾಮವು ಸೆಪ್ಟ್ಯೂಅಜಿಂಟ್‌ನಲ್ಲಿ ಖಂಡಿತವಾಗಿಯೂ ಇತ್ತೆಂಬುದನ್ನು ತೋರಿಸಿದವು. ಒಂದು ಮೂಲವು ಹೇಳುವುದು: “ದೇವರ ಪವಿತ್ರ ಹೆಸರನ್ನು ಉಳಿಸುವ ಬಯಕೆ ಎಷ್ಟು ದೊಡ್ಡದಾಗಿತ್ತೆಂದರೆ, ಗ್ರೀಕ್ ಸಂಸ್ಕೃತಿಯ ಯೆಹೂದ್ಯರು ಹೀಬ್ರು ಬೈಬಲನ್ನು ಗ್ರೀಕ್‌ಗೆ ತರ್ಜುಮೆ ಮಾಡುವಾಗ ಆ ಪವಿತ್ರ ಪದದ ಅಕ್ಷರಗಳನ್ನೇ ಗ್ರೀಕ್ ವಚನಗಳ ಮಧ್ಯೆ ಸೇರಿಸಿದರು.”
ಎಡಭಾಗದಲ್ಲಿ ತೋರಿಸಲ್ಪಟ್ಟಿರುವ ಪಪೈರಸ್ ಅವಶಿಷ್ಟವು ಪಾರಾಗಿ ಉಳಿದಿರುವ ಅನೇಕ ಉದಾಹರಣೆಗಳಲ್ಲಿ ಒಂದಾಗಿದೆ. ಈಜಿಪ್ಟಿನ ಆಕ್ಸಿರಿಂಕಸ್‌ನಲ್ಲಿ ಕಂಡುಹಿಡಿಯಲ್ಪಟ್ಟು, 3522 ಎಂಬ ನಂಬರನ್ನು ಕೊಡಲಾಗಿರುವ ಈ ಅವಶಿಷ್ಟವು ಸಾ.ಶ. ಒಂದನೆಯ ಶತಮಾನದ್ದೆಂದು ತಿಳಿದುಬಂದಿದೆ. * ಅದರ ಉದ್ದಗಲವು 7 ಮತ್ತು 10.5 ಸೆಂಟಿಮೀಟರುಗಳಾಗಿದ್ದು, ಯೋಬ 42:11 ಮತ್ತು 12ನೆಯ ವಚನಗಳು ಅದರಲ್ಲಿವೆ. ಅಲ್ಲಿ ವೃತ್ತದ ಗುರುತಿನಿಂದ ತೋರಿಸಲ್ಪಟ್ಟಿರುವ ಈ ಪವಿತ್ರ ಪದವು, ಹಳೆಯ ಹೀಬ್ರು ಅಕ್ಷರಗಳಲ್ಲಿದೆ. *
ಹಾಗಾದರೆ, ಆದಿಯ ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿ ದೈವಿಕ ನಾಮವು ಇತ್ತೊ? ಜಾರ್ಜ್ ಹಾವರ್ಡ್ ಎಂಬ ವಿದ್ವಾಂಸರು ಹೇಳುವುದು: “ಆದಿ ಚರ್ಚಿನ ಶಾಸ್ತ್ರವಾಗಿದ್ದ ಗ್ರೀಕ್ ಬೈಬಲ್ [ಸೆಪ್ಟ್ಯೂಅಜಿಂಟ್] ಪ್ರತಿಗಳಲ್ಲಿ ಆ ಪವಿತ್ರ ಪದವು ಆಗ ಬರೆಯಲ್ಪಟ್ಟಿದ್ದರಿಂದ, ಹೊಸ ಒಡಂಬಡಿಕೆಯ ಲೇಖಕರು, ಶಾಸ್ತ್ರದಿಂದ ಉದ್ಧರಿಸುವಾಗ, ಆ ಪವಿತ್ರ ಪದವನ್ನು ಬೈಬಲಿನ ಗ್ರಂಥಪಾಠದಲ್ಲಿ ಸೇರಿಸಿ ಉಳಿಸಿದರೆಂದು ಯೋಚಿಸುವುದು ನ್ಯಾಯಸಮ್ಮತವಾಗಿದೆ.” ಅಂದಿನಿಂದ ಸ್ವಲ್ಪ ಸಮಯದ ನಂತರವೇ, ನಕಲು ಪ್ರತಿ ಬರಹಗಾರರು ಬದಲಿ ಪದಗಳಾದ ಕೈರಿಯಾಸ್ (ಕರ್ತ) ಮತ್ತು ಥಿಯಾಸ್ (ದೇವರು)—ಇವನ್ನು ಉಪಯೋಗಿಸಿದರೆಂದು ತೋರಿಬರುತ್ತದೆ.
[ಪಾದಟಿಪ್ಪಣಿಗಳು]
^ ಪ್ಯಾರ. 4 ಆಕ್ಸಿರಿಂಕಸ್‌ನಲ್ಲಿ ಕಂಡುಹಿಡಿಯಲಾದ ಪಪೈರಿಯ ಕುರಿತ ಹೆಚ್ಚಿನ ಮಾಹಿತಿಗೆ, 1992, ಮೇ 15ರ ಕಾವಲಿನಬುರುಜು ಪತ್ರಿಕೆಯ ಪುಟ 26-28ನ್ನು ನೋಡಿ.
^ ಪ್ಯಾರ. 4 ಹಳೆಯ ಗ್ರೀಕ್ ಭಾಷಾಂತರಗಳಲ್ಲಿ ಕಂಡುಬರುವ ದೈವಿಕ ನಾಮದ ಬೇರೆ ಉದಾಹರಣೆಗಳಿಗೆ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್, ಅಪೆಂಡಿಕ್ಸ್ 1Cನ್ನು ನೋಡಿ.
[ಪುಟ 30ರಲ್ಲಿರುವ ಚಿತ್ರ ಕೃಪೆ]
Courtesy of the Egypt Exploration Society