ಐಗುಪ್ತದ ಸರ್ವೈಶ್ವರ್ಯಕ್ಕಿಂತಲೂ ಶ್ರೇಷ್ಠವಾದದ್ದು
ಐಗುಪ್ತದ ಸರ್ವೈಶ್ವರ್ಯಕ್ಕಿಂತಲೂ ಶ್ರೇಷ್ಠವಾದದ್ದು
ಎಲ್ಲ ಐತಿಹಾಸಿಕ ವ್ಯಕ್ತಿಗಳ ಮಧ್ಯೆ ಇರುವ ಅತಿ ಮಹಾನ್ ವ್ಯಕ್ತಿಗಳಲ್ಲಿ ಮೋಶೆ ಒಬ್ಬನು. ವಿಮೋಚನಕಾಂಡದಿಂದ ಹಿಡಿದು ಧರ್ಮೋಪದೇಶಕಾಂಡದ ವರೆಗೆ ನಾಲ್ಕು ಬೈಬಲ್ ಪುಸ್ತಕಗಳು, ಮೋಶೆಯ ನಾಯಕತ್ವದ ಕೆಳಗೆ ಇಸ್ರಾಯೇಲ್ಯರೊಂದಿಗಿನ ದೇವರ ವ್ಯವಹಾರಗಳನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ವಿವರಿಸುತ್ತವೆ. ಐಗುಪ್ತದಿಂದ ಬಿಡುಗಡೆಯಾಗಿ ಹೊರಬರುವಾಗ ಮೋಶೆ ಅವರನ್ನು ನಿರ್ದೇಶಿಸಿದನು, ನಿಯಮದೊಡಂಬಡಿಕೆಗೆ ಮಧ್ಯಸ್ಥನಾಗಿದ್ದನು, ಮತ್ತು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದ ಸೀಮೆಯ ವರೆಗೆ ಮಾರ್ಗದರ್ಶಿಸಿದನು. ಮೋಶೆಯನ್ನು ಫರೋಹನ ಮನೆತನದಲ್ಲಿ ಬೆಳೆಸಲಾಗಿತ್ತು. ಆದರೆ ಅವನು ದೇವರ ಜನರ ಅಧಿಕೃತ ದಳಾಧಿಪತಿಯಾದನು ಹಾಗೂ ಪ್ರವಾದಿ, ನ್ಯಾಯಾಧೀಶ ಮತ್ತು ದೇವರಿಂದ ಪ್ರೇರಣೆ ಪಡೆದ ಬರಹಗಾರನಾದನು. ಹೀಗಿದ್ದರೂ, ಅವನು “ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ”ನಾಗಿದ್ದನು.—ಅರಣ್ಯಕಾಂಡ 12:3.
ಮೋಶೆಯ ಬಗ್ಗೆ ಬೈಬಲ್ ಏನನ್ನು ತಿಳಿಸುತ್ತದೊ, ಅದರಲ್ಲಿ ಹೆಚ್ಚಿನದ್ದು ಅವನ ಜೀವಿತದ ಕೊನೆಯ 40 ವರ್ಷಗಳ ಬಗ್ಗೆ ಅದೆ. ಅದು, ದಾಸತ್ವದಿಂದ ಇಸ್ರಾಯೇಲ್ಯರಿಗಾದ ಬಿಡುಗಡೆಯಿಂದ ಹಿಡಿದು, 120ನೆಯ ವಯಸ್ಸಿನಲ್ಲಿ ಮೋಶೆಯ ಮರಣದ ವರೆಗಿನ ಅವಧಿಯನ್ನು ಆವರಿಸುತ್ತದೆ. 40ರಿಂದ 80 ವರ್ಷಗಳ ವರೆಗೆ ಮಿದ್ಯಾನಿನಲ್ಲಿ ಅವನೊಬ್ಬ ಕುರುಬನಾಗಿದ್ದನು. ಆದರೆ ಒಂದು ಮೂಲಕ್ಕನುಸಾರ, ಅವನ ಜನನದಿಂದ ಹಿಡಿದು ಐಗುಪ್ತದಿಂದ ಅವನು ಪಲಾಯನಗೈದ ಮೊದಲ 40 ವರ್ಷಗಳು, “ಬಹುಶಃ ಅವನ ಜೀವನದ ಅತಿ ಕುತೂಹಲಕಾರಿ ಆದರೂ ಅತಿ ರಹಸ್ಯಕರವಾದ ಭಾಗವಾಗಿದೆ.” ಈ ಕಾಲಾವಧಿಯ ಬಗ್ಗೆ ನಾವೇನನ್ನು ವಿವೇಚಿಸಿ ತಿಳಿದುಕೊಳ್ಳಬಹುದು? ಮೋಶೆಯು ಯಾವ ರೀತಿಯ ವ್ಯಕ್ತಿಯಾದನೊ ಅದನ್ನು ಅವನು ಬೆಳೆಸಲ್ಪಟ್ಟಿದ್ದ ಪರಿಸ್ಥಿತಿಗಳು ಹೇಗೆ ಪ್ರಭಾವಿಸಿರಬೇಕು? ಅವನು ಯಾವ ಪ್ರಭಾವಗಳಿಗೆ ಗುರಿಯಾಗಿದ್ದಿರಬಹುದು? ಅವನು ಯಾವ ಕಷ್ಟಗಳನ್ನು ಎದುರಿಸಬೇಕಾಗಿದ್ದಿರಬಹುದು? ಮತ್ತು ಇದೆಲ್ಲವು ನಮಗೇನನ್ನು ಕಲಿಸಬಲ್ಲದು?
ಐಗುಪ್ತದಲ್ಲಿ ದಾಸತ್ವ
ಐಗುಪ್ತದಲ್ಲಿ ನೆಲೆಸಿದ್ದ ಇಸ್ರಾಯೇಲ್ಯರ ಸಂತಾನವು ವೃದ್ಧಿಯಾಗುತ್ತಾ ಇರುವುದನ್ನು ನೋಡಿ ಒಬ್ಬ ಫರೋಹನಿಗೆ ಗಾಬರಿಯಾಗಿಬಿಟ್ಟಿತ್ತೆಂದು ವಿಮೋಚನಕಾಂಡ ಪುಸ್ತಕವು ಹೇಳುತ್ತದೆ. ತಾನು ‘ಉಪಾಯದಿಂದ’ ಕೆಲಸಮಾಡುತ್ತಿದ್ದೇನೆಂದು ನೆನಸುತ್ತಾ ಅವನು ಅವರನ್ನು ದಬ್ಬಾಳಿಕೆಯ ಆಳು ದುಡಿಮೆಗೆ ಒಳಪಡಿಸುವ ಮೂಲಕ ಅವರ ಸಂಖ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿದನು. ಇಸ್ರಾಯೇಲ್ಯರು ಅಧಿಕಾರಿಗಳ ಚಡಿಯೇಟುಗಳನ್ನು ತಿನ್ನುತ್ತಾ, ಭಾರಗಳನ್ನು ಹೊರಬೇಕಾಗಿತ್ತು, ಮಣ್ಣಿನ ಗಾರೆಗಳನ್ನು ಮಾಡಬೇಕಾಗಿತ್ತು ಮತ್ತು ದಿನಾಲೂ ಇಂತಿಷ್ಟು ಸಂಖ್ಯೆಯ ಇಟ್ಟಿಗೆಗಳನ್ನು ತಯಾರಿಸಿ ಕೊಡಬೇಕಾಗಿತ್ತು.—ವಿಮೋಚನಕಾಂಡ 1:8-14; 5:6-18.
ಮೋಶೆಯು ಹುಟ್ಟಿದಾಗ ಐಗುಪ್ತದಲ್ಲಿದ್ದ ಪರಿಸ್ಥಿತಿಗಳ ಈ ಚಿತ್ರಣವು, ಐತಿಹಾಸಿಕ ರುಜುವಾತಿನೊಂದಿಗೆ ನಿಕರವಾಗಿ ಹೋಲುತ್ತದೆ. ಪ್ರಾಚೀನಕಾಲದ ಪಪೈರಸ್ ಕಾಗದಗಳು ಮತ್ತು ಕಡಿಮೆಪಕ್ಷ ಒಂದು ಸಮಾಧಿಯಲ್ಲಿರುವ ಚಿತ್ರಬರಹವು, ಸಾ.ಶ.ಪೂ. ಎರಡನೆಯ ಸಹಸ್ರಮಾನದಲ್ಲಿ ಇಲ್ಲವೆ ಅದಕ್ಕಿಂತಲೂ ಹಿಂದೆ ದಾಸರು ಮಣ್ಣಿನ ಇಟ್ಟಿಗೆಗಳನ್ನು ತಯಾರಿಸುವುದನ್ನು ವರ್ಣಿಸುತ್ತವೆ. ಇಟ್ಟಿಗೆಗಳನ್ನು ಸರಬರಾಜುಮಾಡಲು ಜವಾಬ್ದಾರರಾಗಿದ್ದ ಅಧಿಕಾರಿಗಳು, ನೂರಾರು ಮಂದಿ ಆಳುಗಳನ್ನು 6ರಿಂದ 18 ವ್ಯಕ್ತಿಗಳ ಒಂದು ತಂಡದೋಪಾದಿ ಗುಂಪುಮಾಡುತ್ತಿದ್ದರು .
ಮತ್ತು ಅವರ ಮೇಲೆ ಒಬ್ಬ ಮುಖ್ಯಸ್ಥ ಇಲ್ಲವೆ ತಂಡದ ನಾಯಕನನ್ನು ಇರಿಸುತ್ತಿದ್ದರು. ಇಟ್ಟಿಗೆಗಾಗಿ ಮಣ್ಣನ್ನು ಅಗೆದು ತೆಗೆಯಬೇಕಾಗುತ್ತಿತ್ತು ಮತ್ತು ಒಣಹುಲ್ಲನ್ನು ಇಟ್ಟಿಗೆಯಂಗಳಕ್ಕೆ ರವಾನಿಸಬೇಕಾಗುತ್ತಿತ್ತು. ಬೇರೆಬೇರೆ ರಾಷ್ಟ್ರೀಯತೆಗಳ ಕಾರ್ಮಿಕರು ನೀರನ್ನು ಸೇದಿ, ಗುದ್ದಲಿಗಳನ್ನು ಉಪಯೋಗಿಸಿ ಅದನ್ನು ಮಣ್ಣು ಮತ್ತು ಒಣಹುಲ್ಲಿನೊಂದಿಗೆ ಬೆರೆಸುತ್ತಿದ್ದರು. ಟೊಳ್ಳಾಗಿರುವ ಆಯಾಕಾರದ ಇಟ್ಟಿಗೆಯ ಅಚ್ಚುಗಳನ್ನು ಉಪಯೋಗಿಸಿ ರಾಶಿ ರಾಶಿ ಇಟ್ಟಿಗೆಗಳನ್ನು ಉತ್ಪಾದಿಸಲಾಗುತ್ತಿತ್ತು. ಆಮೇಲೆ ಕಾರ್ಮಿಕರು, ಬಿಸಿಲಿನಲ್ಲಿ ಒಣಗಿಸಲ್ಪಟ್ಟಿರುವ ಇಟ್ಟಿಗೆಗಳನ್ನು, ಕಟ್ಟುವ ಕೆಲಸವು ನಡೆಯುತ್ತಿದ್ದ ನಿವೇಶನಕ್ಕೆ, ಎರಡು ಪಕ್ಕಗಳಲ್ಲಿ ಭಾರ ಹೊರಲು ಹೆಗಲ ಮೇಲೆ ಇರಿಸುವ ಮರದ ಕಮಾನು ಪಟ್ಟಿಯಲ್ಲಿಟ್ಟು ಕೊಂಡೊಯುತ್ತಿದ್ದರು. ಈ ನಿವೇಶನಗಳನ್ನು ತಲಪಲಿಕ್ಕಾಗಿ ಅವರು ಕೆಲವೊಮ್ಮೆ ಎತ್ತರದ ಇಳಿವಾಟದ ಮೇಲೆ ನಡೆದು ಹೋಗಬೇಕಾಗುತ್ತಿತ್ತು. ಕೈಗಳಲ್ಲಿ ಲಾಠಿಗಳನ್ನು ಹಿಡಿದುಕೊಂಡು ಐಗುಪ್ತದ ಮೇಲ್ವಿಚಾರಕರು, ಕೆಲಸದ ಮೇಲೆ ತಮ್ಮ ಕಣ್ಣಿಡುತ್ತಾ ಕೂತುಕೊಂಡಿರುತ್ತಿದ್ದರು ಇಲ್ಲವೆ ಅತ್ತಿತ್ತ ನಿಧಾನವಾಗಿ ನಡೆದಾಡುತ್ತಾ ಇರುತ್ತಿದ್ದರುಒಂದು ಪ್ರಾಚೀನ ದಾಖಲೆಯು 602 ಜೀತಾಳುಗಳಿಂದ ತಯಾರಿಸಲ್ಪಟ್ಟ 38,118 ಇಟ್ಟಿಗೆಗಳ ಬಗ್ಗೆ ಸೂಚಿಸುತ್ತದೆ. ಇದು, ಪ್ರತಿ ಮನುಷ್ಯನು ಒಂದು ಪಾಳಿಯಲ್ಲಿ ಸರಾಸರಿ 65 ಇಟ್ಟಿಗೆಗಳನ್ನು ಮಾಡುತ್ತಿದ್ದನು ಎಂದರ್ಥ. ಮತ್ತು ಸಾ.ಶ.ಪೂ. 13ನೆಯ ಶತಮಾನದ ಒಂದು ದಸ್ತಾವೇಜು ಹೇಳುವುದೇನೆಂದರೆ: “ಆ ಪುರುಷರು . . . ತಮ್ಮ ಇಟ್ಟಿಗೆಗಳ ಹಿಸ್ಸೆಯನ್ನು ದಿನಾಲು ಮಾಡುತ್ತಿದ್ದಾರೆ.” ಇದೆಲ್ಲವೂ, ವಿಮೋಚನಕಾಂಡದ ಪುಸ್ತಕದಲ್ಲಿ ವರ್ಣಿಸಲ್ಪಟ್ಟಿರುವಂತೆ ಇಸ್ರಾಯೇಲ್ಯರಿಂದ ಕೇಳಲ್ಪಡುತ್ತಿದ್ದ ಕಠಿನ ದುಡಿಮೆಗೆ ಬಹಳಷ್ಟು ಹೋಲುತ್ತದೆ.
ಈ ದಬ್ಬಾಳಿಕೆಯು ಹೀಬ್ರು ಜನಸಂಖ್ಯೆಯನ್ನು ತಗ್ಗಿಸುವುದರಲ್ಲಿ ವಿಫಲಗೊಂಡಿತು. ಅದಕ್ಕೆ ಬದಲಾಗಿ, “ಐಗುಪ್ತ್ಯರು ಅವರನ್ನು ಎಷ್ಟು ಉಪದ್ರವಪಡಿಸಿದರೂ ಅವರು ಅತ್ಯಧಿಕವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತ್ಯರು ಇಸ್ರಾಯೇಲ್ಯರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು.” (ವಿಮೋಚನಕಾಂಡ 1:10, 12) ಹೀಗಿರುವುದರಿಂದ ಫರೋಹನು ಮೊದಲು ಇಬ್ರಿಯ ಸೂಲಗಿತ್ತಿಯರಿಗೆ ಮತ್ತು ಅನಂತರ ತನ್ನ ಎಲ್ಲ ಜನರಿಗೆ ಪ್ರತಿಯೊಂದು ನವಜಾತ ಇಸ್ರಾಯೇಲ್ಯ ಗಂಡುಮಗುವನ್ನು ಹತಿಸುವ ಅಪ್ಪಣೆಯನ್ನು ಕೊಟ್ಟನು. ಇಂಥ ಭೀತಿದಾಯಕ ಪರಿಸ್ಥಿತಿಗಳಲ್ಲಿ, ಒಂದು ಸುಂದರ ಗಂಡುಮಗುವಾದ ಮೋಶೆ, ಅಮ್ರಾಮ ಮತ್ತು ಯೋಕೆಬೆದರೆಂಬ ದಂಪತಿಗೆ ಹುಟ್ಟಿದನು.—ವಿಮೋಚನಕಾಂಡ 1:15-22; 6:20; ಅ. ಕೃತ್ಯಗಳು 7:20.
ಅಡಗಿಸಲ್ಪಟ್ಟನು, ಕಂಡುಹಿಡಿಯಲ್ಪಟ್ಟನು, ದತ್ತು ತೆಗೆದುಕೊಳ್ಳಲ್ಪಟ್ಟನು
ಮೋಶೆಯ ಹೆತ್ತವರು ಫರೋಹನ ಕೊಲೆಗೆಡುಕ ಅಪ್ಪಣೆಯನ್ನು ಉಪೇಕ್ಷಿಸಿ, ತಮ್ಮ ಪುಟ್ಟ ಕಂದನನ್ನು ಅಡಗಿಸಿಟ್ಟರು. ಶಿಶುಗಳಿಗೆ ಹುಡುಕಾಡುತ್ತಿದ್ದ ಗೂಢಚಾರರು ಮತ್ತು ಮನೆಯಿಂದ ಮನೆಗೆ ಹೋಗುತ್ತಿದ್ದ ಪರೀಕ್ಷಕರಿದ್ದರೂ ಅವರು ಹೀಗೆ ಮಾಡಿದರೊ? ನಮಗೆ ನಿಶ್ಚಯವಿಲ್ಲ. ಏನೇ ಇದ್ದರೂ, ಮೋಶೆಗೆ ಮೂರು ತಿಂಗಳುಗಳಾದ ಬಳಿಕ, ಅವನ ಹೆತ್ತವರಿಗೆ ಅವನನ್ನು ಇನ್ನೂ ಅಡಗಿಸಿಡಲು ಆಗಲಿಲ್ಲ. ಆದುದರಿಂದ ಹತಾಶೆಯಿಂದ ಅವನ ತಾಯಿಯು ಆಪಿನ ಪೆಟ್ಟಿಗೆಯನ್ನು ತಯಾರಿಸಿ, ಅದರೊಳಗೆ ನೀರು ಹೋಗದಂತೆ ಪೂರ್ತಿಯಾಗಿ ರಾಳವನ್ನು ಹಚ್ಚಿದಳು ಮತ್ತು ತನ್ನ ಮಗುವನ್ನು ಅದರೊಳಗೆ ಇಟ್ಟಳು. ಇಬ್ರಿಯರ ಪ್ರತಿಯೊಂದು ಗಂಡುಕೂಸನ್ನು ನೈಲ್ ನದಿಯಲ್ಲಿ ಹಾಕಬೇಕೆಂಬ ಫರೋಹನ ಅಪ್ಪಣೆಯ ಪದಗಳಿಗೆ ಯೋಕೆಬೆದಳು ಒಂದರ್ಥದಲ್ಲಿ ವಿಧೇಯಳಾದಳು, ಆದರೆ ನಿಜವಾಗಿ ನೋಡುವುದಾದರೆ ಅದರ ಒಳಾರ್ಥಕ್ಕೆ ವಿಧೇಯಳಾಗಲಿಲ್ಲ. ಮೋಶೆಯ ಅಕ್ಕ, ಮಿರ್ಯಾಮಳು ಆ ಬುಟ್ಟಿಯ ಹತ್ತಿರದಲ್ಲೇ ನಿಂತು ಅದರ ಮೇಲೆ ಕಣ್ಣಿಟ್ಟಳು.—ವಿಮೋಚನಕಾಂಡ 1:22–2:4.
ಫರೋಹನ ಮಗಳು ನದಿಯಲ್ಲಿ ಸ್ನಾನಮಾಡಲು ಬರುವಾಗ ಅವನನ್ನು ಕಂಡುಹಿಡಿಯಬೇಕೆಂದು ಯೋಕೆಬೆದಳು ಉದ್ದೇಶಿಸಿದಳೋ ಏನೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಹಾಗೆಯೇ ಆಯಿತು. ಈ ಮಗು ಇಬ್ರಿಯರಲ್ಲೊಬ್ಬರದ್ದು ಆಗಿರಬೇಕೆಂದು ರಾಜಕುಮಾರಿಗೆ ಗೊತ್ತಾಯಿತು. ಆಗ ಅವಳೇನು ಮಾಡಿದಳು? ತನ್ನ ತಂದೆಯ ಅಪ್ಪಣೆಗೆ ವಿಧೇಯಳಾಗಿ ಅವಳು ಸಹ ಅದನ್ನು ಕೊಂದುಹಾಕುವ ಅಪ್ಪಣೆಯನ್ನು ಕೊಡುವಳೊ? ಇಲ್ಲ, ಹೆಚ್ಚಿನ ಸ್ತ್ರೀಯರು ಸಹಜವಾಗಿ ಪ್ರತಿಕ್ರಿಯಿಸುವಂಥ ರೀತಿಯಲ್ಲೇ ಅವಳು ಪ್ರತಿಕ್ರಿಯಿಸಿದಳು. ಅವಳು ಕನಿಕರದಿಂದ ವರ್ತಿಸಿದಳು.
ಕೂಡಲೇ ಮಿರ್ಯಾಮಳು ಅವಳ ಪಕ್ಕದಲ್ಲಿ ಬಂದು ನಿಂತಳು. ‘ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ಕರೆದುಕೊಂಡು ಬರಲೋ?’ ಎಂದವಳು ಕೇಳಿದಳು. ಕೆಲವರಿಗೆ ಈ ಭಾಗವು ತುಂಬ ಹಾಸ್ಯವ್ಯಂಗ್ಯವಾಗಿ ತೋರುತ್ತದೆ. ಇಬ್ರಿಯರೊಂದಿಗೆ ‘ಉಪಾಯದಿಂದ’ ವ್ಯವಹರಿಸುವಂತೆ ತನ್ನ ಸಲಹೆಗಾರರೊಂದಿಗೆ ಸಂಚು ಹೂಡಿದ ಫರೋಹನಿಗಿಂತ ಭಿನ್ನವಾದ ರೀತಿಯಲ್ಲಿ ಮೋಶೆಯ ಅಕ್ಕ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿರುವುದನ್ನು ಈ ಭಾಗದಲ್ಲಿ ತೋರಿಸಲಾಗಿದೆ. ಹೀಗಿದ್ದರೂ ಮೋಶೆಯ ಕ್ಷೇಮವು, ರಾಜಕುಮಾರಿಯು ಅವನ ಅಕ್ಕನ ಯೋಜನೆಗೆ ಸಮ್ಮತ್ತಿಸಿದಾಗಲೇ ದೃಢೀಕರಿಸಲ್ಪಟ್ಟಿತೆಂಬುದು ನಿಜ. “ಹಾಗೇ ಮಾಡು” ಎಂದು ಫರೋಹನ ಪುತ್ರಿಯು ಉತ್ತರಿಸಿದಳು, ಮತ್ತು ಮಿರ್ಯಾಮಳು ಕೂಡಲೆ ಹೋಗಿ ತನ್ನ ತಾಯಿಯನ್ನು ಕರೆತಂದಳು. ಈ ಗಮನಾರ್ಹವಾದ ವ್ಯವಹಾರದಲ್ಲಿ, ಯೋಕೆಬೆದಳು ತನ್ನ ಸ್ವಂತ ಮಗನನ್ನು ರಾಜವೈಭವದ ಸಂರಕ್ಷಣೆಯೊಂದಿಗೆ ಬೆಳೆಸಲು ಬಾಡಿಗೆಗಿರಿಸಲ್ಪಟ್ಟಳು.—ರಾಜಕುಮಾರಿಯ ಕನಿಕರವು ಖಂಡಿತವಾಗಿಯೂ ಅವಳ ತಂದೆಯ ಕ್ರೂರತನಕ್ಕೆ ತೀರ ವಿರುದ್ಧವಾಗಿತ್ತು. ಅವಳಿಗೆ ಮಗುವಿನ ಬಗ್ಗೆ ಏನೂ ತಿಳಿದಿರಲಿಲ್ಲ ಅಥವಾ ವಂಚಿಸಲ್ಪಟ್ಟಿದ್ದಳೆಂದು ಹೇಳಸಾಧ್ಯವಿಲ್ಲ. ಅವಳ ಅನುರಾಗಭರಿತ ಕನಿಕರವು ಅವಳು ಅವನನ್ನು ದತ್ತುತೆಗೆದುಕೊಳ್ಳುವಂತೆ ಪ್ರೇರಿಸಿತು. ಮತ್ತು ಮೊಲೆಯೂಡಿಸುವ ದಾದಿಯಾಗಿರಲು ಒಬ್ಬ ಇಬ್ರಿಯ ಸ್ತ್ರೀಯನ್ನು ತರುವ ವಿಚಾರಕ್ಕೆ ಅವಳು ಕೊಟ್ಟ ಸಮ್ಮತಿಯು, ಅವಳಿಗೆ ತನ್ನ ತಂದೆಯಂತೆ ಪೂರ್ವಾಗ್ರಹಗಳಿರಲಿಲ್ಲವೆಂಬುದನ್ನು ಪ್ರಕಟಪಡಿಸುತ್ತದೆ.
ಪೋಷಣೆ ಮತ್ತು ಶಿಕ್ಷಣ
ಯೋಕೆಬೆದಳು “ಕೂಸನ್ನು ತೆಗೆದುಕೊಂಡು ಸಾಕಿದಳು. ಆ ಹುಡುಗನು ಬೆಳೆದಾಗ ಅವನನ್ನು ಫರೋಹನ ಕುಮಾರ್ತೆಯ ಬಳಿಗೆ ತೆಗೆದುಕೊಂಡು ಬಂದಳು; ಅವನು ಆಕೆಗೆ ಮಗನಾದನು.” (ವಿಮೋಚನಕಾಂಡ 2:9, 10) ಮೋಶೆಯು ಎಷ್ಟು ಸಮಯ ತನ್ನ ನಿಜವಾದ ಹೆತ್ತವರೊಂದಿಗಿದ್ದನು ಎಂಬುದನ್ನು ಬೈಬಲ್ ಹೇಳುವುದಿಲ್ಲ. ಅವನಿಗೆ ಮೊಲೆಹಾಲು ಬಿಡಿಸುವ ವರೆಗೆ ಅಂದರೆ ಎರಡು ಮೂರು ವರ್ಷಗಳ ವರೆಗೆ ಮಾತ್ರ ಎಂದು ಕೆಲವರು ನೆನಸುತ್ತಾರೆ. ಆದರೆ ಇದಕ್ಕಿಂತಲೂ ಹೆಚ್ಚು ಸಮಯ ಇದ್ದಿರಲೂಬಹುದು. ವಿಮೋಚನಕಾಂಡವು, ಅವನು ತನ್ನ ಹೆತ್ತವರೊಂದಿಗಿದ್ದಾಗ ‘ಬೆಳೆದನು’ ಎಂದಷ್ಟೇ ಹೇಳುತ್ತದೆ ಮತ್ತು ಇದು ಯಾವುದೇ ವಯಸ್ಸಿಗೆ ಸೂಚಿಸುತ್ತಿರಬಹುದು. ಏನೇ ಆಗಲಿ, ಅಮ್ರಾಮ ಮತ್ತು ಯೋಕೆಬೆದರು ಆ ಸಮಯವನ್ನು ತಮ್ಮ ಮಗನಿಗೆ ತನ್ನ ಇಬ್ರಿಯ ವಂಶಮೂಲದ ಬಗ್ಗೆ ಅರಿವು ಮೂಡಿಸಲು ಮತ್ತು ಯೆಹೋವನ ಬಗ್ಗೆ ಕಲಿಸಲು ಉಪಯೋಗಿಸಿದ್ದರೆಂಬ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ. ಮೋಶೆಯ ಹೃದಯದಲ್ಲಿ ಅವರು ನಂಬಿಕೆ ಮತ್ತು ನೀತಿಗಾಗಿ ಪ್ರೀತಿಯನ್ನು ಬೇರೂರಿಸುವುದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಗಳಾಗಿದ್ದಾರೆಂಬುದನ್ನು ಸಮಯವೇ ಬಯಲುಪಡಿಸಲಿತ್ತು.
ಫರೋಹನ ಮಗಳಿಗೆ ಹಿಂದಿರುಗಿಸಲ್ಪಟ್ಟ ನಂತರ ಮೋಶೆಯು “ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ”ದನು. (ಅ. ಕೃತ್ಯಗಳು 7:22) ಮೋಶೆಯು ಸರಕಾರಿ ಹುದ್ದೆಗೆ ಯೋಗ್ಯನಾಗುವಂತೆ ಬೇಕಾದ ತರಬೇತಿಯನ್ನು ಪಡೆದನೆಂಬುದು ಇದರ ಸೂಚಿತಾರ್ಥ. ಐಗುಪ್ತದೇಶದ ವಿಸ್ತಾರವಾದ ಜ್ಞಾನಭಂಡಾರದಲ್ಲಿ, ಗಣಿತಶಾಸ್ತ್ರ, ರೇಖಾಗಣಿತ, ವಾಸ್ತುಶಿಲ್ಪ, ನಿರ್ಮಾಣಕೆಲಸ ಮತ್ತು ಇತರ ಕಲೆ ಹಾಗೂ ವಿಜ್ಞಾನಗಳು ಸೇರಿದ್ದವು. ರಾಜಮನೆತನವು, ಅವನು ಐಗುಪ್ತ ಧರ್ಮದ ಬಗ್ಗೆಯೂ ಉಪದೇಶವನ್ನು ಪಡೆಯಬೇಕೆಂದು ಬಯಸಿದ್ದಿರಬಹುದು.
ಮೋಶೆಯು ತನ್ನ ಅಪೂರ್ವವಾದ ಶಿಕ್ಷಣವನ್ನು ರಾಜಮನೆತನದ ಇತರ ಮಕ್ಕಳ ಜೊತೆಯಲ್ಲಿ ಪಡೆದಿದ್ದಿರಬಹುದು. ಇಂಥ ಕುಲೀನ ಶಿಕ್ಷಣದಿಂದ ಪ್ರಯೋಜನಪಡೆದವರಲ್ಲಿ, “ವಿದೇಶಿ ಅರಸರ ಮಕ್ಕಳೂ ಇರುತ್ತಿದ್ದರು. ಇವರನ್ನು ‘ಸಭ್ಯರಾಗಿಸಿ’” ಫರೋಹನಿಗೆ ನಿಷ್ಠರಾದ “ಸಾಮಂತ ರಾಜರಾಗಿ ಆಳಲಿಕ್ಕಾಗಿ ಕಳುಹಿಸಲ್ಪಡಲು ಐಗುಪ್ತಕ್ಕೆ ಬಂಧಿಗಳೋಪಾದಿ ಕಳುಹಿಸಲಾಗುತ್ತಿತ್ತು ಇಲ್ಲವೇ ಕೊಂಡೊಯ್ಯಲಾಗುತ್ತಿತ್ತು.” (ಬೆಟ್ಸಿ ಎಮ್. ಬ್ರಾಯನ್‌ರಿಂದ IVನೆಯ ತುಟ್‌ಮೋಸನ ಆಳ್ವಿಕೆ, ಇಂಗ್ಲಿಷ್) ರಾಜಮನೆತನದ ಅರಮನೆಗಳಿಗೆ ಜೋಡಿಸಲ್ಪಟ್ಟಿದ್ದ ನರ್ಸರಿಗಳು, ಯುವ ಜನರನ್ನು ಆಸ್ಥಾನದ ಅಧಿಕಾರಿಗಳಾಗಿ ಕೆಲಸಮಾಡುವಂತೆ ತಯಾರಿಸುತ್ತಿದ್ದವೆಂದು ತೋರುತ್ತದೆ. * ಐಗುಪ್ತದ ಮಧ್ಯ ಹಾಗೂ ಹೊಸ ರಾಜ್ಯಗಳ ಅವಧಿಗಳಷ್ಟು ಹಿಂದಿನಕಾಲದ ಸ್ಮಾರಕ ಲೇಖನಗಳು, ಫರೋಹನ ವೈಯಕ್ತಿಕ ಪರಿಚಾರಕರು ಮತ್ತು ಉಚ್ಚ ಪದವಿಯ ಸರಕಾರಿ ಅಧಿಕಾರಿಗಳು, ವಯಸ್ಕರಾದಾಗಲೂ “ನರ್ಸರಿಯ ಬಾಲಕ” (ಚೈಲ್ಡ್ ಆಫ್ ದ ನರ್ಸರಿ) ಎಂಬ ಸನ್ಮಾನಯೋಗ್ಯ ಬಿರುದನ್ನು ಇಟ್ಟುಕೊಳ್ಳುತ್ತಿದ್ದರೆಂಬದನ್ನು ಪ್ರಕಟಪಡಿಸುತ್ತದೆ.
ಆಸ್ಥಾನದ ಜೀವನವು ಮೋಶೆಯನ್ನು ಪರೀಕ್ಷೆಗೊಳಪಡಿಸಲಿತ್ತು. ಅದು ಐಶ್ವರ್ಯ, ಸುಖಭೋಗ ಮತ್ತು ಅಧಿಕಾರವನ್ನು ನೀಡಿತು. ಆದರೆ ಅದು ನೈತಿಕ ಅಪಾಯಗಳನ್ನೂ ಮುಂದೆ ಒಡ್ಡಿತು. ಮೋಶೆಯು ಹೇಗೆ ಪ್ರತಿಕ್ರಿಯೆ ತೋರಿಸಲಿದ್ದನು? ಅವನು ಯಾರಿಗೆ ನಿಷ್ಠನಾಗಿರುವನು? ಅಂತರಾಳದಲ್ಲಿ ಅವನು ಯೆಹೋವನ ಆರಾಧಕನಾಗಿದ್ದು, ದಬ್ಬಾಳಿಕೆಗೊಳಗಾಗಿದ್ದ ಇಬ್ರಿಯ ಜನರ ಸಹೋದರನಾಗಿದ್ದನೊ, ಇಲ್ಲವೆ ವಿಧರ್ಮಿ ಐಗುಪ್ತವು ನೀಡಸಾಧ್ಯವಿದ್ದದ್ದೆಲ್ಲವನ್ನೂ ಅವನು ಇಷ್ಟಪಡುತ್ತಿದ್ದನೊ?
ಬಹುಮುಖ್ಯವಾದ ಒಂದು ನಿರ್ಣಯ
ಮೋಶೆಯು 40 ವರ್ಷ ಪ್ರಾಯದವನಾದಾಗ, ಅಂದರೆ ಅಷ್ಟರೊಳಗೆ ಅವನು ಪೂರ್ಣ ರೀತಿಯಲ್ಲಿ ಒಬ್ಬ ಐಗುಪ್ತ್ಯನಾಗಿರಸಾಧ್ಯವಿದ್ದಾಗ, ಅವನು ‘ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡಿದನು.’ ಅನಂತರದ ಅವನ ಕೃತ್ಯಗಳು ಅವನು ಸುಮ್ಮನೆ ಕುತೂಹಲಕ್ಕಾಗಿ ಹೋಗಿ ನೋಡಲಿಲ್ಲವೆಂಬುದನ್ನು ತೋರಿಸಿದವು. ಅವನು ನಿಜವಾಗಿಯೂ ಅವರಿಗೆ ಸಹಾಯಮಾಡಲು ಹಾತೊರೆಯುತ್ತಿದ್ದನು. ಒಬ್ಬ ಐಗುಪ್ತ ವ್ಯಕ್ತಿಯು ಒಬ್ಬ ಇಬ್ರಿಯನನ್ನು ಹೊಡೆಯುವುದನ್ನು ಅವನು ನೋಡಿದಾಗ, ಅವನು ಮಧ್ಯಪ್ರವೇಶಿಸಿ ಆ ದಬ್ಬಾಳಿಕೆಗಾರರನ್ನು ಕೊಂದುಹಾಕಿದನು. ಆ ಕೃತ್ಯವು, ಅವನ ಮನಸ್ಸು ಅವನ ಇಬ್ರಿಯ ಸಹೋದರರೊಂದಿಗಿತ್ತು ಎಂಬುದನ್ನು ತೋರಿಸಿತು. ಮರಣಹೊಂದಿದ ಆ ಪುರುಷನು, ಒಬ್ಬ ಅಧಿಕಾರಿಯಾಗಿದ್ದಿರಬಹುದು ಮತ್ತು ಅವನ ಕರ್ತವ್ಯಗಳನ್ನು ಪೂರೈಸುತ್ತಿದ್ದಾಗಲೇ ಅವನು ಕೊಲ್ಲಲ್ಪಟ್ಟನು. ಐಗುಪ್ತ ಜನರ ದೃಷ್ಟಿಯಲ್ಲಿ ಮೋಶೆಯು ಫರೋಹನಿಗೆ ನಿಷ್ಠನಾಗಿರಲು ಎಲ್ಲ ಕಾರಣಗಳಿದ್ದವು. ಆದರೆ ಮೋಶೆಯನ್ನು ಪ್ರಚೋದಿಸಿದ ಇನ್ನೊಂದು ಸಂಗತಿಯು ನ್ಯಾಯಕ್ಕಾಗಿರುವ ಪ್ರೀತಿ ಆಗಿತ್ತು. ಈ ಗುಣವು ಮರುದಿನ, ಅನ್ಯಾಯದಿಂದ ತನ್ನ ಸಂಗಾತಿಯನ್ನು ಹೊಡೆಯುತ್ತಿದ್ದ ಒಬ್ಬ ಇಬ್ರಿಯನನ್ನು ಅವನು ಪ್ರತಿಭಟಿಸಿದಾಗ ಇನ್ನೂ ಹೆಚ್ಚಾಗಿ ಪ್ರದರ್ಶಿಸಲ್ಪಟ್ಟಿತು. ಮೋಶೆಯು ಇಬ್ರಿಯ ಜನರನ್ನು ದಾಸತ್ವದಿಂದ ಬಿಡುಗಡೆಮಾಡಲು ಅಪೇಕ್ಷಿಸಿದನು, ಆದರೆ ಫರೋಹನಿಗೆ ಅವನ ಪಕ್ಷಾಂತರದ ಬಗ್ಗೆ ಗೊತ್ತಾದಾಗ ಮತ್ತು ಅವನನ್ನು ಕೊಲ್ಲಿಸಲು ಪ್ರಯತ್ನಿಸಿದಾಗ, ಮೋಶೆಯು ಮಿದ್ಯಾನಿಗೆ ಓಡಿಹೋಗಲು ಒತ್ತಾಯಿಸಲ್ಪಟ್ಟನು.—ವಿಮೋಚನಕಾಂಡ 2:11-15; ಅ. ಕೃತ್ಯಗಳು 7:23-29. *
ದೇವರ ಜನರನ್ನು ಬಿಡಿಸಲಿಕ್ಕಾಗಿ ಮೋಶೆಯು ಆಯ್ಕೆ ಮಾಡಿದ ಸಮಯವು ಯೆಹೋವನ ಸಮಯದೊಂದಿಗೆ ತಾಳೆಬೀಳಲಿಲ್ಲ. ಆದರೂ ಅವನ ಕೃತ್ಯಗಳು ನಂಬಿಕೆಯನ್ನು ಪ್ರಕಟಪಡಿಸಿದವು. ಇಬ್ರಿಯ 11:24-26 ಹೀಗನ್ನುತ್ತದೆ: “ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.” ಏಕೆ? ಏಕೆಂದರೆ ಅವನು “ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಸಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.” “ಅಭಿಷಿಕ್ತನು” ಎಂದರ್ಥವುಳ್ಳ ‘ಕ್ರಿಸ್ತನು’ ಎಂಬ ಈ ಅಸಾಧಾರಣವಾದ ಉಪಯೋಗವು, ಮೋಶೆಗೆ ತಕ್ಕದ್ದಾಗಿದೆ ಯಾಕಂದರೆ, ಅನಂತರ ಅವನು ನೇರವಾಗಿ ಯೆಹೋವನಿಂದಲೇ ಒಂದು ವಿಶೇಷ ನೇಮಕವನ್ನು ಪಡೆದನು.
ಸ್ವಲ್ಪ ಊಹಿಸಿಕೊಳ್ಳಿ! ಮೋಶೆಯು ಪಡೆದಂಥ ಪೋಷಣೆಯು, ಕೇವಲ ಐಗುಪ್ತದ ಕುಲೀನ ವ್ಯಕ್ತಿಯೊಬ್ಬನು ಮಾತ್ರ ಪಡೆಯಸಾಧ್ಯವಿತ್ತು. ಅವನಿಗಿದ್ದ ಹುದ್ದೆಯು ಅವನಿಗೊಂದು ಉಜ್ವಲವಾದ ಜೀವನವೃತ್ತಿ ಮತ್ತು ಕಲ್ಪಿಸಸಾಧ್ಯವಿರುವ ಪ್ರತಿಯೊಂದು ವಿಧದ ಸುಖಭೋಗವನ್ನು ಮುಂದಿಟ್ಟಿತ್ತು. ಆದರೆ ಅವನು ಅದೆಲ್ಲವನ್ನೂ ತಳ್ಳಿಬಿಟ್ಟನು. ದಬ್ಬಾಳಿಕೆಗಾರನಾಗಿದ್ದ ಫರೋಹನ ಆಸ್ಥಾನದಲ್ಲಿ ಜೀವನವನ್ನೂ, ಯೆಹೋವನಿಗಾಗಿ ಮತ್ತು ನ್ಯಾಯಕ್ಕಾಗಿರುವ ತನ್ನ ಪ್ರೀತಿಯನ್ನು ಅವನು ಪರಸ್ಪರ ಹೊಂದಿಸಲು ಸಾಧ್ಯವಿರಲಿಲ್ಲ. ತನ್ನ ಪೂರ್ವಜರಾದ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ದೇವರು ಮಾಡಿದಂಥ ವಾಗ್ದಾನಗಳ ಕುರಿತಾದ ಜ್ಞಾನ ಮತ್ತು ಮನನವು, ಮೋಶೆಯು ದೇವರ ಅನುಗ್ರಹವನ್ನು ಆಯ್ಕೆಮಾಡುವಂತೆ ನಡೆಸಿದವು. ಫಲಿತಾಂಶವಾಗಿ, ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುವುದರಲ್ಲಿ ಮೋಶೆಯನ್ನು ಒಂದು ಬಹು ಮಹತ್ವಪೂರ್ಣ ಪಾತ್ರದಲ್ಲಿ ಉಪಯೋಗಿಸಲು ಶಕ್ತನಾಗಿದ್ದನು.
ಯಾವ ಸಂಗತಿಗಳು ಅತಿ ಪ್ರಾಮುಖ್ಯವಾಗಿವೆ ಎಂಬುದನ್ನು ನಿರ್ಣಯಿಸಬೇಕಾಗುವ ಆಯ್ಕೆಗಳು ನಮ್ಮೆಲ್ಲರ ಮುಂದೆ ಇವೆ. ಮೋಶೆಯಂತೆ ನಿಮ್ಮ ಮುಂದೆಯೂ ಒಂದು ಕಷ್ಟಕರವಾದ ನಿರ್ಣಯವು ಇರಬಹುದು. ನೀವು ಯಾವುದೇ ತ್ಯಾಗವನ್ನು ಮಾಡಲಿಕ್ಕಿರಲಿ, ನೀವು ನಿರ್ದಿಷ್ಟ ಪದ್ಧತಿಗಳನ್ನು ಅಥವಾ ಲಾಭಗಳಂತೆ ತೋರುವಂಥ ಸಂಗತಿಗಳನ್ನು ಬಿಟ್ಟುಕೊಡಬೇಕೊ? ಆ ಆಯ್ಕೆ ನಿಮ್ಮ ಮುಂದಿರುವುದಾದರೆ, ಮೋಶೆಯು ಯೆಹೋವನ ಸ್ನೇಹವನ್ನು ಐಗುಪ್ತದ ಸರ್ವೈಶ್ವರ್ಯಕ್ಕಿಂತಲೂ ಹೆಚ್ಚಾಗಿ ಮೌಲ್ಯವೆಂದೆಣಿಸಿದನು ಮತ್ತು ಅವನದನ್ನು ಪಡೆಯದಿದ್ದದ್ದಕ್ಕಾಗಿ ಎಂದೂ ವಿಷಾದಿಸಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
[ಪಾದಟಿಪ್ಪಣಿಗಳು]
^ ಪ್ಯಾರ. 17 ಈ ಶಿಕ್ಷಣವು, ದಾನಿಯೇಲ ಮತ್ತು ಅವನ ಸಂಗಡಿಗರು ಬಾಬೆಲಿನಲ್ಲಿ ರಾಜ್ಯದ ಅಧಿಕಾರಿಗಳಾಗಿ ಸೇವೆಸಲ್ಲಿಸುವಂತೆ ಪಡೆದಂಥ ಶಿಕ್ಷಣಕ್ಕೆ ಹೋಲುತ್ತಿದ್ದಿರಬಹುದು. (ದಾನಿಯೇಲ 1:3-7) ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ದಾನಿಯೇಲನ ಪ್ರವಾದನೆಗೆ ಕಿವಿಗೊಡಿರಿ! ಅಧ್ಯಾಯ 3ನ್ನು ಹೋಲಿಸಿರಿ.
^ ಪ್ಯಾರ. 20 ಮೋಶೆಗೆ ನ್ಯಾಯದ ಕುರಿತಾಗಿ ಹುರುಪಿತ್ತೆಂಬುದು, ಅವನು ಎಲ್ಲಿ ಆಶ್ರಯಪಡೆದನೊ ಆ ಮಿದ್ಯಾನಿನಲ್ಲಿ ನಿಸ್ಸಹಾಯಕರಾಗಿದ್ದ ಕುರುಬ ಸ್ತ್ರೀಯರನ್ನು ಅವನು ದುರುಪಚಾರದಿಂದ ರಕ್ಷಿಸಿದಾಗ ಮುಂದೆಯೂ ತೋರಿಬರುತ್ತದೆ.—ವಿಮೋಚನಕಾಂಡ 2:16, 17.
[ಪುಟ 11ರಲ್ಲಿರುವ ಚೌಕ]
ಮೊಲೆಯೂಡಿಸುವ ದಾದಿಯರ ಕಾಂಟ್ರ್ಯಾಕ್ಟ್‌ಗಳು
ತಾಯಂದಿರು ಸಾಮಾನ್ಯವಾಗಿ ತಮ್ಮ ಸ್ವಂತ ಶಿಶುಗಳಿಗೆ ಮೊಲೆಯುಣಿಸುತ್ತಿದ್ದರು. ಆದರೆ ಜರ್ನಲ್ ಆಫ್ ಬೈಬಲ್ ಲಿಟ್‌ರೇಚರ್‌ನಲ್ಲಿ ವಿದ್ವಾಂಸ ಬ್ರೀವರ್ಡ್ ಚೈಲ್ಡ್ಸ್ ಹೇಳುವದೇನೆಂದರೆ, “ಕೆಲವೊಂದು ಕುಲೀನ [ಪೂರ್ವ ದಿಕ್ಕಿನ ಹತ್ತಿರದ] ಕುಟುಂಬಗಳಲ್ಲಿ ಮೊಲೆಯೂಡಿಸುವ ದಾದಿಯೊಬ್ಬಳನ್ನು ಬಾಡಿಗೆಗೆ ಇಡಲಾಗುತ್ತಿತ್ತು. ತಾಯಿಯು ತನ್ನ ಮಗುವಿಗೆ ಪೋಷಣೆಯನ್ನು ಕೊಡಲು ಅಶಕ್ತಳಾಗಿದ್ದ ಇಲ್ಲವೆ ತಾಯಿ ಯಾರೆಂದು ಗೊತ್ತಿರದಂಥ ಸಂದರ್ಭಗಳಲ್ಲೂ ಈ ರೂಢಿಯು ಸರ್ವಸಾಮಾನ್ಯವಾಗಿತ್ತು. ಮಗುವನ್ನು ಬೆಳೆಸುವ ಹಾಗೂ ಇಂತಿಷ್ಟು ಅವಧಿಯಲ್ಲಿ ಅದಕ್ಕೆ ಮೊಲೆಯೂಡಿಸುವ ಜವಾಬ್ದಾರಿಯನ್ನು ದಾದಿಯು ವಹಿಸಿಕೊಳ್ಳುತ್ತಿದ್ದಳು.” ಪಪೈರಸ್ ಕಾಗದದಲ್ಲಿ ಹಲವಾರು, ಮೊಲೆಯೂಡಿಸುವ ದಾದಿಯರ ಕುರಿತಾದ ಕಾಂಟ್ರ್ಯಾಕ್ಟ್‌ಗಳು, ಪೂರ್ವ ದಿಕ್ಕಿನ ಪುರಾತನ ಅವಶೇಷಗಳಿಂದ ಪಾರಾಗಿ ಉಳಿದಿವೆ. ಈ ದಸ್ತಾವೇಜುಗಳು ಸುಮೇರಿಯನ್ ಅವಧಿಯಿಂದ ಆರಂಭಿಸಿ, ಐಗುಪ್ತದಲ್ಲಿ ಗ್ರೀಕ್ ಸಂಸ್ಕೃತಿಯಿದ್ದ ಅವಧಿಯ ಕೊನೆಯ ಭಾಗದಲ್ಲಿ ವ್ಯಾಪಕವಾಗಿದ್ದ ಆಚರಣೆಗೆ ಸಾಕ್ಷ್ಯವನ್ನು ಕೊಡುತ್ತವೆ. ಈ ದಸ್ತಾವೇಜುಗಳ ಸಾಮಾನ್ಯ ವೈಶಿಷ್ಟ್ಯಗಳು, ಒಳಗೂಡಿರುವ ವ್ಯಕ್ತಿಗಳ ಒಂದು ಹೇಳಿಕೆ, ಆ ಕಾಂಟ್ರ್ಯಾಕ್ಟ್‌ನ ಸಮಯಾವಧಿ, ಕೆಲಸದ ಷರತ್ತುಗಳು, ಪೌಷ್ಠಿಕತೆಯ ಕುರಿತಾದ ನಿಶ್ಚಿತ ಹೇಳಿಕೆಗಳು, ಕಾಂಟ್ರ್ಯಾಕ್ಟನ್ನು ಉಲ್ಲಂಘಿಸಿದ್ದಕ್ಕಾಗಿ ದಂಡಗಳು, ದಿನಕೂಲಿ, ಮತ್ತು ದಿನಕೂಲಿಯನ್ನು ಹೇಗೆ ಕೊಡಲಾಗುವುದು ಎಂಬ ವಿಷಯಗಳಾಗಿದ್ದವು. ಸಾಮಾನ್ಯವಾಗಿ “ಮೊಲೆಯೂಡಿಸುವಿಕೆಯು ಎರಡರಿಂದ ಮೂರು ವರ್ಷಗಳ ಅವಧಿಯದ್ದಾಗಿರುತ್ತಿತ್ತು,” ಎಂದು ಚೈಲ್ಡ್ಸ್ ವಿವರಿಸುತ್ತಾನೆ. “ಮೊಲೆಯೂಡಿಸುವ ದಾದಿಯು ಮಗುವನ್ನು ತನ್ನ ಮನೆಯಲ್ಲಿ ಬೆಳೆಸುತ್ತಿದ್ದಳು, ಆದರೆ ಆಗಾಗ್ಗೆ ಮಗುವನ್ನು ಪರೀಕ್ಷಿಸಲಿಕ್ಕಾಗಿ ಅದರ ದಣಿಗೆ ಒಪ್ಪಿಸುವಂತೆ ಅಪೇಕ್ಷಿಸಲಾಗುತ್ತಿತ್ತು.”
[ಪುಟ 9ರಲ್ಲಿರುವ ಚಿತ್ರಗಳು]
ಒಂದು ಪುರಾತನ ವರ್ಣಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಐಗುಪ್ತದಲ್ಲಿ ಇಟ್ಟಿಗೆ ಮಾಡುವ ಉದ್ಯಮವು ಮೋಶೆಯನ ದಿನದಲ್ಲಿ ಇದ್ದಂತೆಯೇ ಇದೆ
[ಕೃಪೆ]
ಮೇಲೆ: Pictorial Archive (Near Eastern History) Est.; ಕೆಳಗೆ: Erich Lessing/Art Resource, NY