ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ನೈತಿಕತೆಯನ್ನು ಕಲಿಯಿರಿ ಮತ್ತು ಇತರರಿಗೂ ಬೋಧಿಸಿರಿ

ಕ್ರೈಸ್ತ ನೈತಿಕತೆಯನ್ನು ಕಲಿಯಿರಿ ಮತ್ತು ಇತರರಿಗೂ ಬೋಧಿಸಿರಿ

ಕ್ರೈಸ್ತ ನೈತಿಕತೆಯನ್ನು ಕಲಿಯಿರಿ ಮತ್ತು ಇತರರಿಗೂ ಬೋಧಿಸಿರಿ

“ಮತ್ತೊಬ್ಬನಿಗೆ ಉಪದೇಶಮಾಡುವ [“ಬೋಧಿಸುವ,” NW] ನೀನು ನಿನಗೆ ಉಪದೇಶಮಾಡಿಕೊಳ್ಳದೆ [“ಬೋಧಿಸಿಕೊಳ್ಳದೆ,” NW] ಇದ್ದೀಯೊ?”​—ರೋಮಾಪುರ 2:21.

1, 2. ಬೈಬಲಿನ ಅಧ್ಯಯನ ಮಾಡುವಂತೆ ಬಯಸಲು ನಿಮಗೆ ಯಾವ ಕಾರಣಗಳಿವೆ?

ದೇವರ ವಾಕ್ಯವನ್ನು ಅಧ್ಯಯನ ಮಾಡಲು ನಿಮಗೆ ತುಂಬ ಕಾರಣಗಳಿವೆ. ಅದರಲ್ಲಿರುವ ನಿಜತ್ವಗಳ ಕುರಿತು, ಅಂದರೆ ಜನರು, ಘಟನೆಗಳು, ಸ್ಥಳಗಳು ಮತ್ತು ಬೇರೆ ಸಂಗತಿಗಳ ಕುರಿತು ನೀವು ತಿಳಿಯಲು ಬಯಸಬಹುದು. ಧಾರ್ಮಿಕ ಸುಳ್ಳುಗಳಾದ ತ್ರಯೈಕ್ಯ ಅಥವಾ ನರಕಾಗ್ನಿಯ ವಿರುದ್ಧವಾಗಿರುವ ತಾತ್ವಿಕ ಸತ್ಯವನ್ನು ನೀವು ತಿಳಿಯಲು ಬಯಸಬಹುದು. (ಯೋಹಾನ 8:32) ನೀವು ಇನ್ನೂ ಹೆಚ್ಚಾಗಿ ಯೆಹೋವನಂತಾಗುವ ಮತ್ತು ಆತನ ಮುಂದೆ ಯಥಾರ್ಥತೆಯಿಂದ ನಡೆಯುವ ಉದ್ದೇಶದಿಂದ ಆತನನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳಲು ಬಯಸುತ್ತಿರಬಹುದು.​—1 ಅರಸುಗಳು 15:​4, 5.

2 ದೇವರ ವಾಕ್ಯದ ಅಧ್ಯಯನ ಮಾಡಲು ಇರುವ ಇನ್ನೊಂದು ಸಂಬಂಧಿತ ಮತ್ತು ಗಮನಾರ್ಹ ಕಾರಣವು, ನಿಮ್ಮ ಪ್ರಿಯರಿಗೆ, ಪರಿಚಿತರಿಗೆ ಮತ್ತು ಅಪರಿಚಿತರಿಗೆ ಸಹ ಬೋಧಿಸಲು ನಿಮ್ಮನ್ನು ಸನ್ನದ್ಧರಾಗಿಸುವುದೇ ಆಗಿದೆ. ಹೀಗೆ ಮಾಡುವುದು ಸತ್ಕ್ರೈಸ್ತರಿಗೆ ಒಂದು ಐಚ್ಛಿಕ ವಿಷಯವಾಗಿರುವುದಿಲ್ಲ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”​—ಮತ್ತಾಯ 28:19, 20.

3, 4. ಯೇಸು ಆಜ್ಞಾಪಿಸಿದಂತೆ ಬೋಧಿಸುವುದು ನಿಮಗೆ ಸನ್ಮಾನಯೋಗ್ಯವಾಗಿರುವುದೇಕೆ?

3 ಇತರರಿಗೆ ಬೋಧಿಸುವ ಉದ್ದೇಶದಿಂದ ಬೈಬಲ್‌ ಅಧ್ಯಯನ ಮಾಡುವುದು ಸನ್ಮಾನಯೋಗ್ಯವೂ ಬಾಳುವಂಥ ತೃಪ್ತಿಯ ಮೂಲವೂ ಆಗಿರಬಲ್ಲದು. ಬೋಧಿಸುವ ಕೆಲಸವು ದೀರ್ಘಕಾಲದಿಂದ ಒಂದು ಸನ್ಮಾನಯೋಗ್ಯ ಕೆಲಸವಾಗಿರುತ್ತದೆ. ಎನ್‌ಕಾರ್ಟ ಎನ್‌ಸೈಕ್ಲೊಪೀಡಿಯ ಹೇಳುವುದು: “ಯೆಹೂದ್ಯರಲ್ಲಿ ಅನೇಕ ವಯಸ್ಕರು ಬೋಧಕರನ್ನು, ರಕ್ಷಣೆಗೆ ನಡೆಸುವ ಮಾರ್ಗದರ್ಶಕರೆಂದು ಎಣಿಸಿ, ತಮ್ಮ ಮಕ್ಕಳು ಹೆತ್ತವರಿಗಿಂತಲೂ ಹೆಚ್ಚಾಗಿ ಅವರ ಶಿಕ್ಷಕರನ್ನು ಸನ್ಮಾನಿಸುವಂತೆ ಪ್ರೋತ್ಸಾಹಿಸಿದರು.” ಕ್ರೈಸ್ತರು ಬೈಬಲನ್ನು ಅಧ್ಯಯನ ಮಾಡುವ ಮೂಲಕ ತಮಗೆ ತಾವೇ ಕಲಿಸಿಕೊಂಡು ಬಳಿಕ ಇತರರಿಗೆ ಅದನ್ನು ಬೋಧಿಸುವುದು ವಿಶೇಷವಾಗಿ ಸನ್ಮಾನಯೋಗ್ಯ ವಿಷಯವಾಗಿದೆ.

4 “ಬೇರಾವುದೇ ವೃತ್ತಿಗಿಂತಲೂ ಹೆಚ್ಚಾಗಿ ಅಧ್ಯಾಪಕ ವೃತ್ತಿಯಲ್ಲಿ ಜನರು ಅತ್ಯಧಿಕವಾಗಿ ಒಳಗೂಡುತ್ತಾರೆ. ಲೋಕವ್ಯಾಪಕವಾಗಿ ಸುಮಾರು 4 ಕೋಟಿ 80 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸ್ತ್ರೀಪುರುಷರು ಅಧ್ಯಾಪಕರಾಗಿದ್ದಾರೆ.” (ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ) ಒಬ್ಬ ಐಹಿಕ ಶಿಕ್ಷಕನು ಯುವ ಜನರಿಗೆ ಬೋಧಿಸಲು ಜವಾಬ್ದಾರನಾಗಿರುತ್ತಾನೆ ಮತ್ತು ಅವರನ್ನು ಮುಂಬರುವ ವರುಷಗಳಲ್ಲಿಯೂ ಪ್ರಭಾವಿಸಬಲ್ಲನು. ಆದರೆ ಇತರರಿಗೆ ಕಲಿಸುವಂತೆ ಹೇಳುವ ಯೇಸುವಿನ ಆಜ್ಞೆಗೆ ನೀವು ವಿಧೇಯರಾಗುವಾಗಲಾದರೊ ಪರಿಣಾಮವು ಇನ್ನೂ ಬಹುವ್ಯಾಪಕವಾಗಿರುವುದು; ನೀವು ಅವರ ಶಾಶ್ವತ ಭವಿಷ್ಯದ ಮೇಲೆ ಪ್ರಭಾವವನ್ನು ಬೀರಬಲ್ಲಿರಿ. ಅಪೊಸ್ತಲ ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದಾಗ ಇದನ್ನೇ ಒತ್ತಿಹೇಳಿದನು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಹೌದು, ನಿಮ್ಮ ಬೋಧನೆಯಲ್ಲಿ ರಕ್ಷಣೆಯು ಒಳಗೂಡಿದೆ.

5. ಕ್ರೈಸ್ತ ಬೋಧನೆ ಅತ್ಯುತ್ತಮ ಗುಣಮಟ್ಟದ್ದಾಗಿರುವುದೇಕೆ?

5 ಸ್ವತಃ ಬೋಧಿಸಿಕೊಂಡ ಬಳಿಕ ಇತರರಿಗೂ ಬೋಧಿಸುವುದು, ಈ ಬೋಧನೆಯ ಅತ್ಯುಚ್ಚ ಮೂಲಕರ್ತನೂ ವಿಶ್ವದ ಪರಮಾಧಿಕಾರಿಯೂ ಆಗಿರುವಾತನಿಂದ ಮಂಜೂರು ಮಾಡಲ್ಪಟ್ಟು ನಿರ್ದೇಶಿಸಲ್ಪಟ್ಟಿದೆ. ಇದು ತಾನೇ ಈ ಬೋಧನಾ ಕ್ಷೇತ್ರವನ್ನು ಯಾವುದೇ ಐಹಿಕ ರೀತಿಯ ಬೋಧಿಸುವಿಕೆಗಿಂತ ಹೆಚ್ಚು ಅರ್ಥಗರ್ಭಿತವಾದದ್ದಾಗಿ ಮಾಡುತ್ತದೆ. ಪ್ರಾಥಮಿಕ ವಿಷಯಗಳು, ಉದ್ಯೋಗ ಕೌಶಲಗಳು, ಅಥವಾ ವೈದ್ಯಕೀಯ ವಿಶೇಷತೆಗಳ ಕುರಿತಾದ ಬೋಧಿಸುವಿಕೆಯನ್ನು ಇದಕ್ಕೆ ತುಲನೆಮಾಡಸಾಧ್ಯವಿಲ್ಲ. ಒಬ್ಬ ಕ್ರೈಸ್ತನ ಬೋಧಿಸುವಿಕೆಯಲ್ಲಿ, ವಿದ್ಯಾರ್ಥಿಯು ವೈಯಕ್ತಿಕವಾಗಿ ದೇವಪುತ್ರನಾದ ಕ್ರಿಸ್ತ ಯೇಸುವನ್ನು ಅನುಕರಿಸಲು ಮತ್ತು ಇತರರೂ ಹಾಗೆ ಮಾಡುವಂತೆ ಅವರಿಗೆ ಬೋಧಿಸಲು ಕಲಿತುಕೊಳ್ಳುವುದು ಸೇರಿದೆ.​—ಯೋಹಾನ 15:10.

ನಿಮ್ಮನ್ನೇ ಬೋಧಿಸಿಕೊಳ್ಳುವುದೇಕೆ?

6, 7. (ಎ) ನಾವು ಪ್ರಥಮವಾಗಿ ನಮಗೇ ಏಕೆ ಕಲಿಸಿಕೊಳ್ಳಬೇಕು? (ಬಿ) ಪ್ರಥಮ ಶತಮಾನದ ಯೆಹೂದ್ಯರು ಬೋಧಕರೋಪಾದಿ ಯಾವ ಅರ್ಥದಲ್ಲಿ ವೈಫಲ್ಯಹೊಂದಿದರು?

6 ನಾವು ಮೊತ್ತಮೊದಲಾಗಿ ನಮಗೇ ಬೋಧಿಸಿಕೊಳ್ಳಬೇಕೆಂದು ಏಕೆ ಹೇಳಲಾಗಿದೆ? ನಾವು ಮೊದಲಾಗಿ ನಮಗೇ ಬೋಧಿಸಿಕೊಳ್ಳದಿರುವಲ್ಲಿ, ನಾವು ಇತರರಿಗೆ ಸರಿಯಾಗಿ ಬೋಧಿಸಲಾರೆವು. ಪೌಲನು ಈ ನಿಜತ್ವವನ್ನು, ಆಗಿನ ಯೆಹೂದ್ಯರಿಗೆ ಮಹತ್ವಪೂರ್ಣವಾಗಿದ್ದ, ಆದರೆ ಇಂದು ಸಹ ಕ್ರೈಸ್ತರಿಗೆ ಮಹತ್ವವುಳ್ಳ ಸಂದೇಶವಿರುವ ವಿಚಾರ ಪ್ರೇರಕ ವಾಕ್ಯಭಾಗದಲ್ಲಿ ಒತ್ತಿಹೇಳಿದನು. ಪೌಲನು ಕೇಳಿದ್ದು: “ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶಮಾಡುವ [“ಬೋಧಿಸುವ,” NW] ನೀನು ನಿನಗೆ ಉಪದೇಶಮಾಡಿಕೊಳ್ಳದೆ [“ಬೋಧಿಸಿಕೊಳ್ಳದೆ,” NW] ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ? ಮೂರ್ತಿಗಳಲ್ಲಿ ಅಸಹ್ಯಪಡುತ್ತಿರುವ ನೀನು ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತೀಯೋ? ಧರ್ಮಶಾಸ್ತ್ರದಲ್ಲಿ ಅಭಿಮಾನಿಯಾಗಿರುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?”​—ರೋಮಾಪುರ 2:21-23.

7 ಇಲ್ಲಿ ಪೌಲನು ಭಾವೋತ್ತೇಜಕ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ದಶಾಜ್ಞೆಗಳಲ್ಲಿ ನೇರವಾಗಿ ತಿಳಿಸಲ್ಪಟ್ಟಿರುವ ಎರಡು ತಪ್ಪುಗಳನ್ನು ಉಲ್ಲೇಖಿಸಿದನು: ಕದಿಯಬಾರದು ಮತ್ತು ಹಾದರ ಮಾಡಬಾರದು. (ವಿಮೋಚನಕಾಂಡ 20:14, 15) ಪೌಲನ ದಿನಗಳಲ್ಲಿದ್ದ ಕೆಲವು ಮಂದಿ ಯೆಹೂದ್ಯರು ತಮ್ಮ ಬಳಿ ದೇವರ ಧರ್ಮಶಾಸ್ತ್ರವಿದೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಅವರು ‘ಧರ್ಮಶಾಸ್ತ್ರದಲ್ಲಿ ಜ್ಞಾನಸತ್ಯಗಳ ಸ್ವರೂಪವೇ ತಮಗೆ ಇರುವದರಿಂದ ಕುರುಡರಿಗೆ ದಾರಿ ತೋರಿಸುವವರೂ ಕತ್ತಲೆಯಲ್ಲಿರುವವರಿಗೆ ಬೆಳಕೂ ತಿಳುವಳಿಕೆಯಿಲ್ಲದವರಿಗೆ ಶಿಕ್ಷಕರೂ ಬಾಲಕರಿಗೆ ಉಪಾಧ್ಯಾಯರೂ ಆಗಿದ್ದಾರೆಂದು ನಂಬಿಸಲ್ಪಟ್ಟರು.’ (ರೋಮಾಪುರ 2:​17-20) ಆದರೆ ಕೆಲವರು ಕಪಟಿಗಳಾಗಿದ್ದು ಗುಟ್ಟಾಗಿ ಕಳ್ಳತನ ಮತ್ತು ಹಾದರವನ್ನು ಮಾಡುತ್ತಿದ್ದರು. ಇದು ಧರ್ಮಶಾಸ್ತ್ರವನ್ನು ಮಾತ್ರವಲ್ಲ ಸ್ವರ್ಗದಲ್ಲಿದ್ದ ಅದರ ರಚಕನನ್ನೂ ಅಗೌರವಿಸುವುದು. ಅವರಿಗೆ ಇತರರಿಗೆ ಕಲಿಸುವ ಯೋಗ್ಯತೆ ಖಂಡಿತ ಇರಲಿಲ್ಲವೆಂದು ನೀವು ನೋಡಬಲ್ಲಿರಿ; ಅವರು ತಮಗೇ ಬೋಧಿಸಿಕೊಳ್ಳುತ್ತಿರಲಿಲ್ಲ.

8. ಪೌಲನ ದಿನಗಳಲ್ಲಿದ್ದ ಕೆಲವು ಮಂದಿ ಯೆಹೂದ್ಯರು ಹೇಗೆ ‘ದೇವಸ್ಥಾನಗಳಲ್ಲಿ ಕದಿಯುತ್ತಿ’ದ್ದಿರಬಹುದು?

8 ದೇವಸ್ಥಾನದಲ್ಲಿ ಕಳ್ಳತನ ಮಾಡುವ ವಿಷಯದಲ್ಲಿ ಪೌಲನು ಮಾತಾಡುತ್ತಾನೆ. ಕೆಲವು ಮಂದಿ ಯೆಹೂದ್ಯರು ಅಕ್ಷರಾರ್ಥವಾಗಿ ಹಾಗೆ ಮಾಡಿದರೊ? ಪೌಲನ ಮನಸ್ಸಿನಲ್ಲಿ ಏನಿತ್ತು? ನೇರವಾಗಿ ಹೇಳುವುದಾದರೆ, ಈ ವಚನಭಾಗದಲ್ಲಿ ಸೀಮಿತ ಮಾಹಿತಿ ಇರುವುದರಿಂದ, ಕೆಲವು ಮಂದಿ ಯೆಹೂದ್ಯರು ಹೇಗೆ ‘ದೇವಸ್ಥಾನಗಳಲ್ಲಿ ಕದಿಯುತ್ತಿದ್ದರು’ ಎಂಬ ವಿಷಯದಲ್ಲಿ ನಾವು ಖಂಡಿತವಾಗಿ ಹೇಳಸಾಧ್ಯವಿಲ್ಲ. ಇದಕ್ಕೆ ಮೊದಲು ಎಫೆಸ ಪಟ್ಟಣದ ಯಜಮಾನನು, ಪೌಲನ ಸಂಗಡಿಗರ ಬಗ್ಗೆ, ಇವರು “ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ” ಎಂದು ಹೇಳಿದ್ದುದರಿಂದ, ಯೆಹೂದ್ಯರ ಮೇಲೆ ಆ ಆರೋಪವಿತ್ತು ಎಂದು ಕೆಲವು ಜನರಾದರೂ ನೆನಸುತ್ತಿದ್ದರೆಂಬುದು ತೋರಿಬರುತ್ತದೆ. (ಅ. ಕೃತ್ಯಗಳು 19:​29-37) ವಿಜೇತ ರಾಜರು ಅಥವಾ ಧಾರ್ಮಿಕ ಹಠೋತ್ಸಾಹಿಗಳು, ವಿಧರ್ಮಿ ದೇವಸ್ಥಾನಗಳಲ್ಲಿ ಸೂರೆ ಮಾಡಿದ ಅಮೂಲ್ಯ ವಸ್ತುಗಳನ್ನು ಅವರು ಸ್ವಂತಕ್ಕಾಗಿ ಉಪಯೋಗಿಸುತ್ತಿದ್ದರೊ ಅಥವಾ ಅವುಗಳ ವ್ಯಾಪಾರಮಾಡುತ್ತಿದ್ದರೊ? ದೇವರ ನಿಯಮಾನುಸಾರ, ವಿಗ್ರಹಗಳ ಬೆಳ್ಳಿಬಂಗಾರಗಳನ್ನು ನಾಶಗೊಳಿಸಬೇಕಾಗಿತ್ತು, ಅವನ್ನು ಸ್ವಂತಕ್ಕಾಗಿ ಉಪಯೋಗಿಸಬಾರದಾಗಿತ್ತು. (ಧರ್ಮೋಪದೇಶಕಾಂಡ 7:25) * ಆದುದರಿಂದ ದೇವರ ಆಜ್ಞೆಗಳನ್ನು ಅಲಕ್ಷಿಸಿ, ವಿಧರ್ಮಿ ದೇವಸ್ಥಾನಗಳಿಂದ ಬಂದಿದ್ದ ವಸ್ತುಗಳನ್ನು ಬಳಸಿದ ಅಥವಾ ಮಾರಿ ಲಾಭಪಡೆದ ಯೆಹೂದ್ಯರನ್ನು ಸೂಚಿಸಿ ಪೌಲನು ಮಾತಾಡುತ್ತಿದ್ದಿರಬಹುದು.

9. ಯೆರೂಸಲೇಮಿನ ದೇವಾಲಯದ ಸಂಬಂಧದಲ್ಲಿ ನಡೆಯುತ್ತಿದ್ದ ಯಾವ ತಪ್ಪು ಪದ್ಧತಿಗಳು ಹೆಚ್ಚುಕಡಮೆ ದೇವಸ್ಥಾನದಲ್ಲಿ ಕದಿಯುವುದಕ್ಕೆ ಸಮಾನವಾಗಿದ್ದಿರಬಹುದು?

9 ಅದೇ ಸಮಯದಲ್ಲಿ, ಯಾರ ನಾಯಕನು ಧರ್ಮಶಾಸ್ತ್ರದ ಬೋಧಕನಾಗಿದ್ದನೊ ಅಂತಹ ನಾಲ್ವರು ಯೆಹೂದ್ಯರು ರೋಮ್‌ನಲ್ಲಿ ಉಂಟುಮಾಡಿದ ಅಪನಿಂದೆಯ ಕುರಿತು ಜೋಸೀಫಸನು ಮಾತನಾಡುತ್ತಾನೆ. ಯೆಹೂದಿ ಮತಕ್ಕೆ ಪರಿವರ್ತಿತಳಾಗಿದ್ದ ಒಬ್ಬ ರೋಮನ್‌ ಸ್ತ್ರೀಯು, ಯೆರೂಸಲೇಮ್‌ ದೇವಾಲಯಕ್ಕೆ ಕಾಣಿಕೆಯಾಗಿ ತನ್ನ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಅವರಿಗೊಪ್ಪಿಸುವಂತೆ ಆ ನಾಲ್ವರು ಆಕೆಯ ಮನವೊಪ್ಪಿಸಿದ್ದರು. ಆದರೆ ಅದು ಅವಳಿಂದ ಅವರಿಗೆ ದೊರೆತೊಡನೆ, ಅವರು ತಮ್ಮನ್ನೇ ಹಣವಂತರಾಗಿ ಮಾಡಿಕೊಂಡರು, ಒಂದರ್ಥದಲ್ಲಿ ದೇವಸ್ಥಾನದಿಂದ ಕಳ್ಳತನ ಮಾಡಿದರು. * ಇತರರು, ನ್ಯೂನ ಯಜ್ಞಗಳನ್ನು ಅರ್ಪಿಸುತ್ತ, ದೇವಾಲಯದ ಅಂಗಣದಲ್ಲಿ ದುರಾಶೆಯ ವ್ಯಾಪಾರಗಳನ್ನು ಬೆಳೆಸಿ, ದೇವಾಲಯವನ್ನು “ಕಳ್ಳರ ಗವಿ”ಯಾಗಿ ಮಾಡುವ ಮೂಲಕ, ಇನ್ನೊಂದು ರೀತಿಯಲ್ಲಿ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದರು.​—ಮತ್ತಾಯ 21:12, 13; ಮಲಾಕಿಯ 1:12-14; 3:8, 9.

ಕ್ರೈಸ್ತ ನೈತಿಕತೆಯನ್ನು ಕಲಿಸಿರಿ

10. ರೋಮಾಪುರ 2:​21-23ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳ ಯಾವ ಮುಖ್ಯ ತಿರುಳನ್ನು ನಾವು ತಪ್ಪಿಸಬಾರದು?

10 ಕಳ್ಳತನ, ಹಾದರ ಮತ್ತು ದೇವಸ್ಥಾನದಲ್ಲಿ ಕಳ್ಳತನ ಮಾಡುವುದರ ವಿಷಯದಲ್ಲಿ ಪ್ರಥಮ ಶತಮಾನದ ಯಾವುದೇ ಪದ್ಧತಿಗಳಿಗೆ ಪೌಲನು ಸೂಚಿಸುತ್ತಿದ್ದಿರಲಿ, ಅವನ ಹೇಳಿಕೆಯ ಮುಖ್ಯ ತಿರುಳನ್ನು ನಾವು ಅಲಕ್ಷ್ಯಮಾಡದಿರೋಣ. ಅವನು ಪ್ರಶ್ನಿಸಿದ್ದು: ‘ಮತ್ತೊಬ್ಬನಿಗೆ ಬೋಧಿಸುವ ನೀನು ನಿನಗೆ ಬೋಧಿಸಿಕೊಳ್ಳದೆ ಇದ್ದೀಯೋ?’ ಇಲ್ಲಿ ಪೌಲನು ಎತ್ತಿ ಹೇಳಿದ ದೃಷ್ಟಾಂತಗಳು ನೈತಿಕತೆಯ ಸಂಬಂಧದಲ್ಲಿ ಇರುವುದು ಗಮನಾರ್ಹ. ಇಲ್ಲಿ ಅಪೊಸ್ತಲನು, ಬೈಬಲಿನ ತತ್ತ್ವಗಳು ಅಥವಾ ಇತಿಹಾಸದ ಮೇಲೆ ಗಮನವನ್ನು ಕೇಂದ್ರೀಕರಿಸಲಿಲ್ಲ. ಪೌಲನು ಇಲ್ಲಿ ಸೂಚಿಸಿದ, ಒಬ್ಬನು ತನ್ನನ್ನೇ ಬೋಧಿಸಿಕೊಳ್ಳುವ ಮತ್ತು ಇತರರಿಗೆ ಬೋಧಿಸುವ ವಿಷಯವು ಕ್ರೈಸ್ತ ನೈತಿಕತೆಯಾಗಿದೆ.

11. ದೇವರ ವಾಕ್ಯವನ್ನು ಅಧ್ಯಯನ ಮಾಡುವಾಗ ಕ್ರೈಸ್ತ ನೈತಿಕತೆಗೆ ನೀವು ಏಕೆ ಗಮನಕೊಡಬೇಕು?

11ರೋಮಾಪುರ 2:​21-23ರ ಪಾಠವನ್ನು ನಾವು ಅನ್ವಯಿಸಿಕೊಳ್ಳುವುದರ ಅರ್ಥ, ಕ್ರೈಸ್ತ ನೀತಿಸೂತ್ರಗಳನ್ನು ದೇವರ ವಾಕ್ಯದಿಂದ ಕಲಿತುಕೊಂಡು, ನಾವು ಕಲಿತಿರುವ ಸಂಗತಿಗಳಿಗನುಸಾರ ಕ್ರಿಯೆಗೈದು, ಬಳಿಕ ಇತರರೂ ಹಾಗೆಯೇ ಮಾಡುವಂತೆ ಕಲಿಸುವುದೇ ಆಗಿದೆ. ಆದುದರಿಂದ, ನೀವು ಬೈಬಲಿನ ಅಧ್ಯಯನ ಮಾಡುತ್ತಿರುವಾಗ, ಕ್ರೈಸ್ತ ನೀತಿಸೂತ್ರಗಳು ಎಲ್ಲಿಂದ ಬರುತ್ತವೊ ಆ ಯೆಹೋವನ ಮಟ್ಟಗಳ ಸೂಚನೆಗಳು ಎಲ್ಲಿಯಾದರೂ ಕಂಡುಬರುತ್ತಿವೆಯೊ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಬೈಬಲಿನಲ್ಲಿ ನಿಮಗೆ ಕಂಡುಬರುವ ಸಲಹೆ ಮತ್ತು ಪಾಠಗಳ ಕುರಿತು ಧ್ಯಾನಿಸಿರಿ. ಬಳಿಕ, ನೀವು ಕಲಿತುಕೊಂಡಿರುವುದನ್ನು ಧೈರ್ಯದಿಂದ ಅನ್ವಯಿಸಿಕೊಳ್ಳಿರಿ. ಹೀಗೆ ಮಾಡಲು ಧೈರ್ಯದೊಂದಿಗೆ ದೃಢನಿರ್ಣಯವೂ ಬೇಕಾಗುತ್ತದೆ. ನೆವಗಳನ್ನು ಕೊಡುವುದು, ಅಂದರೆ ಒಂದು ವಿಶಿಷ್ಟ ಸಂದರ್ಭದಲ್ಲಿ ಕ್ರೈಸ್ತ ನೈತಿಕತೆಯನ್ನು ಅಲಕ್ಷಿಸುವುದನ್ನು ಒಂದು ಸನ್ನಿವೇಶವು ಏಕೆ ಅನುಮತಿಸುತ್ತದೆ ಅಥವಾ ಏಕೆ ಅವಶ್ಯಪಡಿಸುತ್ತದೆಂಬ ಕಾರಣಗಳನ್ನು ಕೊಡುವುದು ಅಪರಿಪೂರ್ಣ ಮಾನವರಿಗೆ ತುಂಬ ಸುಲಭ. ಪೌಲನು ತಿಳಿಸಿದಂತಹ ಆ ಯೆಹೂದ್ಯರು ಪ್ರಾಯಶಃ ಯಾವುದಾದರೂ ವಿವರಣೆ ಕೊಟ್ಟು ವಿಷಯಗಳನ್ನು ತೇಲಿಸಿಬಿಡುವುದರಲ್ಲಿ ಅಥವಾ ಇತರರನ್ನು ತಪ್ಪುದಾರಿಗೆಳೆಯಲು ಅಂಥ ಕುಯುಕ್ತಿಯ ವಾದಗಳನ್ನು ಉಪಯೋಗಿಸುವುದರಲ್ಲಿ ಅನುಭವಸ್ಥರಾಗಿದ್ದರು. ಆದರೆ ಪೌಲನ ಮಾತುಗಳು, ಕ್ರೈಸ್ತ ನೈತಿಕತೆಯು ನಮ್ಮ ಸ್ವಂತ ಆಯ್ಕೆಗನುಸಾರ ಕನಿಷ್ಠವೆಂದೆಣಿಸಲ್ಪಡಬಾರದು ಅಥವಾ ಅಸಡ್ಡೆ ಮಾಡಲ್ಪಡಬಾರದೆಂಬುದನ್ನು ತೋರಿಸುತ್ತವೆ.

12. ಸದ್ವರ್ತನೆಯಾಗಲಿ ದುರ್ವರ್ತನೆಯಾಗಲಿ ಯೆಹೋವನ ಕುರಿತಾಗಿ ಹೇಗೆ ಒಂದು ಅಭಿಪ್ರಾಯವನ್ನು ಮೂಡಿಸುತ್ತದೆ, ಮತ್ತು ಈ ನಿಜತ್ವವನ್ನು ಮನಸಿನಲ್ಲಿಟ್ಟುಕೊಳ್ಳುವುದು ಏಕೆ ಸಹಾಯಕರ?

12 ಬೈಬಲಿನಲ್ಲಿ ಕಂಡುಬರುವ ನೀತಿಸೂತ್ರಗಳನ್ನು ಕಲಿಯಲು ಮತ್ತು ಬಳಿಕ ಅನ್ವಯಿಸಿಕೊಳ್ಳಲು ಇರುವ ಒಂದು ಮುಖ್ಯ ಕಾರಣವನ್ನು ಅಪೊಸ್ತಲನು ಎತ್ತಿ ಹೇಳಿದನು. ಯೆಹೂದ್ಯರ ದುರ್ನಡತೆ ಯೆಹೋವನ ಕುರಿತು ಈ ಅಭಿಪ್ರಾಯವನ್ನು ಮೂಡಿಸಿತು: “ಧರ್ಮಶಾಸ್ತ್ರದಲ್ಲಿ ಅಭಿಮಾನಿಯಾಗಿರುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ? ನಿಮ್ಮ ದೆಸೆಯಿಂದ ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತದೆ.” (ರೋಮಾಪುರ 2:​23, 24) ಇದು ಈಗಲೂ ಅಷ್ಟೇ ಸತ್ಯ. ನಾವು ಕ್ರೈಸ್ತ ನೈತಿಕತೆಯನ್ನು ಅಸಡ್ಡೆ ಮಾಡುವಲ್ಲಿ ನಾವು ಅದರ ಮೂಲಕರ್ತನನ್ನು ಅಗೌರವಿಸುತ್ತೇವೆ. ವಿಪರ್ಯಾಯವಾಗಿ, ನಾವು ದೇವರ ಮಟ್ಟಗಳನ್ನು ಬಿಗಿಯಾಗಿ ಹಿಡಿದುಕೊಳ್ಳುವಲ್ಲಿ, ಅದು ಆತನ ಕುರಿತು ಒಳ್ಳೇ ಅಭಿಪ್ರಾಯವನ್ನು ಮೂಡಿಸಿ, ಆತನಿಗೆ ಗೌರವ ತರುತ್ತದೆ. (ಯೆಶಾಯ 52:5; ಯೆಹೆಜ್ಕೇಲ 36:20) ನೀವು ಇದರ ಬಗ್ಗೆ ಅರಿವುಳ್ಳವರಾಗಿರುವುದು, ಕ್ರೈಸ್ತ ನೈತಿಕತೆಯನ್ನು ಅಸಡ್ಡೆ ಮಾಡುವುದೇ ಅತಿ ಸುಲಭವಾದ ಅಥವಾ ಅತ್ಯನುಕೂಲವಾದ ಮಾರ್ಗವೆಂಬಂತೆ ತೋರುವ ಶೋಧನೆಗಳನ್ನೊ ಪರಿಸ್ಥಿತಿಗಳನ್ನೊ ನೀವು ಎದುರಿಸುವಾಗ, ನಿಮ್ಮ ನಿರ್ಧಾರವನ್ನು ಬಲಪಡಿಸಬಲ್ಲದು. ಇದಲ್ಲದೆ, ಪೌಲನ ಮಾತುಗಳು ನಮಗೆ ಇನ್ನೊಂದು ಸಂಗತಿಯನ್ನು ಕಲಿಸುತ್ತವೆ. ನಿಮ್ಮ ನಡತೆ ದೇವರಿಗೆ ಒಳ್ಳೆಯ ಹೆಸರನ್ನು ತರುತ್ತದೆಂದು ವೈಯಕ್ತಿಕವಾಗಿ ನಿಮಗೆ ಅರಿವಿರಬೇಕು ಮಾತ್ರವಲ್ಲ, ನೀವು ಇತರರಿಗೆ ಬೋಧಿಸುವಾಗ, ಅವರು ಕಲಿಯುವ ನೈತಿಕ ಮಟ್ಟಗಳನ್ನು ಅನ್ವಯಿಸಿಕೊಳ್ಳುವುದು ಯೆಹೋವನ ಬಗ್ಗೆ ಹೇಗೆ ಒಂದು ಅಭಿಪ್ರಾಯವನ್ನು ಮೂಡಿಸುತ್ತದೆಂದು ಅವರು ತಿಳಿಯುವಂತೆ ಸಹಾಯಮಾಡಿರಿ. ಕ್ರೈಸ್ತ ನೈತಿಕತೆಯು ಒಬ್ಬನಲ್ಲಿ ಸಂತೃಪ್ತಿಯನ್ನು ಬೆಳೆಸಿ, ಅವನ ಆರೋಗ್ಯವನ್ನು ಕಾಪಾಡುತ್ತದೆ ಮಾತ್ರವಲ್ಲ, ಆ ನೈತಿಕತೆಯನ್ನು ಒದಗಿಸಿ ಅದನ್ನು ಪ್ರೋತ್ಸಾಹಿಸುವಾತನ ಕುರಿತಾಗಿಯೂ ಅದು ಒಂದು ಅಭಿಪ್ರಾಯವನ್ನು ಮೂಡಿಸುತ್ತದೆ.​—ಕೀರ್ತನೆ 74:10; ಯಾಕೋಬ 3:17.

13. (ಎ) ನೈತಿಕತೆಯ ವಿಷಯದಲ್ಲಿ ಬೈಬಲು ನಮಗೆ ಹೇಗೆ ಸಹಾಯಮಾಡುತ್ತದೆ? (ಬಿ) ಒಂದನೆಯ ಥೆಸಲೊನೀಕ 4:​3-7ರಲ್ಲಿರುವ ಸಲಹೆಯ ಸಾರಾಂಶವನ್ನು ಕೊಡಿರಿ.

13 ನೈತಿಕತೆಯು ಇತರ ಮಾನವರ ಮೇಲೆಯೂ ಪರಿಣಾಮ ಬೀರುತ್ತದೆ. ದೇವರ ನೈತಿಕ ಮಟ್ಟಗಳನ್ನು ಅನ್ವಯಿಸಿಕೊಳ್ಳುವುದರ ಮೌಲ್ಯವನ್ನು ಮತ್ತು ಅದನ್ನು ಅಲಕ್ಷ್ಯ ಮಾಡುವುದರ ಪರಿಣಾಮಗಳನ್ನು ಚಿತ್ರಿಸುವ ದೇವರ ವಾಕ್ಯದಲ್ಲಿರುವ ಮಾದರಿಗಳಿಂದ ನೀವಿದನ್ನು ನೋಡಬಲ್ಲಿರಿ. (ಆದಿಕಾಂಡ 39:1-9, 21; ಯೆಹೋಶುವ 7:1-25) ನೈತಿಕತೆಯ ವಿಷಯದಲ್ಲಿ ಈ ಕೆಳಗಿನಂತಹ ನೇರವಾದ ಸಲಹೆಯನ್ನೂ ನೀವು ಕಂಡುಕೊಳ್ಳಬಲ್ಲಿರಿ: “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡಬಾರದು [“ಸಹೋದರನ ಹಕ್ಕುಗಳಿಗೆ ಹಾನಿಯನ್ನು ಮಾಡಬಾರದು ಮತ್ತು ಅತಿಕ್ರಮಿಸಬಾರದು,” NW]. . . . ದೇವರು ನಮ್ಮನ್ನು ಬಂಡತನಕ್ಕೆ ಕರೆಯದೆ ಶುದ್ಧರಾಗಿರುವದಕ್ಕೆ ಕರೆದನು.”​—1 ಥೆಸಲೊನೀಕ 4:3-7.

14. ನೀವು 1 ಥೆಸಲೊನೀಕ 4:​3-7ರಲ್ಲಿರುವ ಸಲಹೆಯ ವಿಷಯದಲ್ಲಿ ಸ್ವತಃ ಏನು ಕೇಳಿಕೊಳ್ಳಬಹುದು?

14 ಈ ವಚನಗಳಿಂದ, ಲೈಂಗಿಕ ದುರಾಚಾರವು ಕ್ರೈಸ್ತ ನೈತಿಕತೆಯನ್ನು ಉಲ್ಲಂಘಿಸುತ್ತದೆಂಬುದನ್ನು ಬಹುಮಟ್ಟಿಗೆ ಯಾವನಾದರೂ ನೋಡಬಲ್ಲನು. ಆದರೆ ಈ ವಚನಗಳ ಬಾಹ್ಯ ತಿಳಿವಳಿಕೆಗಿಂತಲೂ ಹೆಚ್ಚು ಆಳವಾದ ತಿಳಿವಳಿಕೆ ನಿಮಗೆ ದೊರೆಯಬಲ್ಲದು. ಕೆಲವು ವಚನಗಳು ಗಣನೀಯ ಅಧ್ಯಯನ ಮತ್ತು ಮನನಕ್ಕೆ ಮಾರ್ಗಗಳನ್ನು ತೆರೆದು, ಒಳನೋಟವನ್ನು ದೊರಕಿಸುತ್ತವೆ. ಉದಾಹರಣೆಗೆ, ಹಾದರದಲ್ಲಿ ತೊಡಗುವುದು, ಒಬ್ಬನು ತನ್ನ ‘ಸಹೋದರನ ಹಕ್ಕುಗಳಿಗೆ ಹಾನಿ ಮಾಡುವ ಮತ್ತು ಅತಿಕ್ರಮಿಸುವ’ ಹಂತದ ವರೆಗೆ ಅವನನ್ನು ನಡೆಸಬಹುದು ಎಂದು ಪೌಲನು ಯಾವ ಅರ್ಥದಲ್ಲಿ ಹೇಳಿದನೆಂಬದರ ಬಗ್ಗೆ ನೀವು ಚಿಂತನೆಮಾಡಬಹುದು. ಇದರಲ್ಲಿ ಯಾವ ಹಕ್ಕುಗಳು ಸೇರಿವೆ, ಮತ್ತು ಇದರ ಕುರಿತಾದ ಹೆಚ್ಚು ಉತ್ತಮವಾದ ತಿಳಿವಳಿಕೆಯು, ನೀವು ಕ್ರೈಸ್ತ ನೈತಿಕತೆಯನ್ನು ಕಾಪಾಡಿಕೊಳ್ಳುವಂತೆ ಹೇಗೆ ಹೆಚ್ಚು ಪ್ರೋತ್ಸಾಹವನ್ನು ಕೊಡುವುದು? ಇಂತಹ ಸಂಶೋಧನೆಯ ಫಲಿತಾಂಶಗಳು, ನೀವು ಅದನ್ನು ಇತರರಿಗೆ ಕಲಿಸಲು ಮತ್ತು ಅವರೂ ದೇವರಿಗೆ ಗೌರವವನ್ನು ತರುವಂತೆ ಸಹಾಯಮಾಡಲು ನಿಮ್ಮನ್ನು ಹೇಗೆ ಇನ್ನೂ ಹೆಚ್ಚು ಸನ್ನದ್ಧರಾಗಿ ಮಾಡಬಲ್ಲವು?

ಬೋಧಿಸಬೇಕಾದರೆ ಅಧ್ಯಯನ ಮಾಡಿರಿ

15. ವೈಯಕ್ತಿಕ ಅಧ್ಯಯನದ ಮೂಲಕ ನಿಮ್ಮನ್ನೇ ಬೋಧಿಸಿಕೊಳ್ಳಲು ನೀವು ಯಾವ ಉಪಕರಣಗಳನ್ನು ಉಪಯೋಗಿಸಬಲ್ಲಿರಿ?

15 ಸ್ವತಃ ತಮಗೆ ಬೋಧಿಸಿಕೊಳ್ಳಲು ಅಥವಾ ಇತರರಿಗೆ ಬೋಧಿಸಲು ಯೆಹೋವನ ಸಾಕ್ಷಿಗಳು ಅಧ್ಯಯನ ಮಾಡುವಾಗ, ಏಳುವಂಥ ಪ್ರಶ್ನೆಗಳ ಅಥವಾ ಸಮಸ್ಯೆಗಳ ಮೇಲೆ ಸಂಶೋಧನೆ ನಡೆಸಲು ಅವರ ಬಳಿ ಉಪಕರಣಗಳಿವೆ. ಅನೇಕ ಭಾಷೆಗಳಲ್ಲಿರುವ ಒಂದು ಉಪಕರಣವು ವಾಚ್‌ಟವರ್‌ ಪಬ್ಲಿಕೇಶನ್ಸ್‌ ಇಂಡೆಕ್ಸ್‌ ಆಗಿದೆ. ಇದು ನಿಮಗೆ ಲಭ್ಯವಿರುವಲ್ಲಿ, ಯೆಹೋವನ ಸಾಕ್ಷಿಗಳ ಬೈಬಲಾಧರಿತ ಪ್ರಕಾಶನಗಳಲ್ಲಿ ಮಾಹಿತಿಯನ್ನು ಕಂಡುಹಿಡಿಯಲು ನೀವು ಇದನ್ನು ಉಪಯೋಗಿಸಬಲ್ಲಿರಿ. ಇದನ್ನು ನೀವು ವಿಷಯಕ್ಕನುಸಾರ ಅಥವಾ ಬೈಬಲ್‌ ವಚನಗಳ ಪಟ್ಟಿಯಲ್ಲಿ ಹುಡುಕಬಲ್ಲಿರಿ. ಯೆಹೋವನ ಸಾಕ್ಷಿಗಳಿಗೆ ಅನೇಕ ಪ್ರಮುಖ ಭಾಷೆಗಳಲ್ಲಿ ಲಭ್ಯವಿರುವ ಇನ್ನೊಂದು ಉಪಕರಣವು, ವಾಚ್‌ಟವರ್‌ ಲೈಬ್ರರಿ ಆಗಿದೆ. ಸಿಡಿ-ರಾಮ್‌ನಲ್ಲಿರುವ ಈ ಕಂಪ್ಯೂಟರ್‌ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್‌ ರೂಪದಲ್ಲಿ ಸಾಹಿತ್ಯಗಳ ಸಂಗ್ರಹವಿದೆ. ವಿಷಯಗಳನ್ನು ಮತ್ತು ವಚನಗಳ ಚರ್ಚೆಗಳನ್ನು ಸಂಶೋಧನೆ ಮಾಡುವುದನ್ನು ಈ ಕಾರ್ಯಕ್ರಮವು ಸಾಧ್ಯಮಾಡುತ್ತದೆ. ಇವುಗಳಲ್ಲಿ ಒಂದಾಗಲಿ ಎರಡಾಗಲಿ ಉಪಕರಣಗಳು ನಿಮಗೆ ಲಭ್ಯವಿರುವಲ್ಲಿ, ಇತರರಿಗೆ ಕಲಿಸಲಾಗುವಂತೆ ನೀವು ದೇವರ ವಾಕ್ಯವನ್ನು ಅಧ್ಯಯನ ಮಾಡುವಾಗ ಅವುಗಳನ್ನು ಕ್ರಮವಾಗಿ ಉಪಯೋಗಿಸಿರಿ.

16, 17. (ಎ) ನೀವು 1 ಥೆಸಲೊನೀಕ 4:​6ರಲ್ಲಿರುವ ಹಕ್ಕುಗಳ ವಿಷಯದಲ್ಲಿ ಮಾಹಿತಿಭರಿತ ಹೇಳಿಕೆಗಳನ್ನು ಎಲ್ಲಿ ಕಂಡುಕೊಳ್ಳಬಲ್ಲಿರಿ? (ಬಿ) ಹಾದರವು ಇತರರ ಹಕ್ಕುಗಳನ್ನು ಯಾವ ವಿಧಗಳಲ್ಲಿ ಅತಿಕ್ರಮಿಸಬಲ್ಲದು?

16 ಮೇಲೆ ತಿಳಿಸಲ್ಪಟ್ಟಿರುವ 1 ಥೆಸಲೊನೀಕ 4:​3-7ರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಲ್ಲಿ ಹಕ್ಕುಗಳ ಪ್ರಶ್ನೆ ಎದ್ದುಬಂತು. ಯಾರ ಹಕ್ಕುಗಳು? ಮತ್ತು ಆ ಹಕ್ಕುಗಳು ಹೇಗೆ ಅತಿಕ್ರಮಿಸಲ್ಪಟ್ಟಿರಬಹುದು? ಈ ಮುಂಚೆ ತಿಳಿಸಲ್ಪಟ್ಟಿರುವ ಅಧ್ಯಯನ ಉಪಕರಣಗಳ ಮೂಲಕ, ಈ ವಚನಗಳ ಬಗ್ಗೆ ಮತ್ತು ಪೌಲನು ತಿಳಿಸಿದ ಹಕ್ಕುಗಳ ಬಗ್ಗೆಯೂ ನೀವು ಜ್ಞಾನೋದಯವನ್ನುಂಟುಮಾಡುವ ಅನೇಕ ಹೇಳಿಕೆಗಳನ್ನು ಪ್ರಾಯಶಃ ಕಂಡುಕೊಳ್ಳುವಿರಿ. ಇಂತಹ ಹೇಳಿಕೆಗಳನ್ನು ನೀವು ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಸಂಪುಟ 1, ಪುಟಗಳು 863-4; ನಿಜ ಶಾಂತಿ ಮತ್ತು ಭದ್ರತೆ​—ಅದನ್ನು ನೀವು ಹೇಗೆ ಕಂಡುಕೊಳ್ಳಬಹುದು? (ಇಂಗ್ಲಿಷ್‌) ಪುಟ 145; ಕಾವಲಿನಬುರುಜು, ನವೆಂಬರ್‌ 15, 1989, ಪುಟ 31ರಲ್ಲಿ ಓದಬಲ್ಲಿರಿ.

17 ನೀವು ಅಧ್ಯಯನವನ್ನು ಮುಂದುವರಿಸುವಾಗ, ಪೌಲನ ಮಾತುಗಳು ಎಷ್ಟು ಸತ್ಯವೆಂಬುದನ್ನು ಆ ಪ್ರಕಾಶನಗಳು ತೋರಿಸುವುದನ್ನು ನೀವು ನೋಡುವಿರಿ. ಒಬ್ಬ ಜಾರನು ದೇವರ ವಿರುದ್ಧವಾಗಿ ಪಾಪಮಾಡಿ, ತನ್ನನ್ನು ರೋಗಗಳಿಗೆ ಒಡ್ಡಿಕೊಳ್ಳುತ್ತಾನೆ. (1 ಕೊರಿಂಥ 6:18, 19; ಇಬ್ರಿಯ 13:4) ಹಾದರದಲ್ಲಿ ಒಳಗೂಡುವವನು ಅವನು ಯಾರೊಂದಿಗೆ ಪಾಪ ಮಾಡುತ್ತಾನೋ ಆ ಸ್ತ್ರೀಯ ವಿವಿಧ ಹಕ್ಕುಗಳನ್ನು ಅತಿಕ್ರಮಿಸುತ್ತಾನೆ. ಅವನು ಆಕೆಯ ಶುದ್ಧ ನೈತಿಕ ನಿಲುವನ್ನು ಮತ್ತು ಶುದ್ಧ ಮನಸ್ಸಾಕ್ಷಿಯನ್ನು ಅಪಹರಿಸುತ್ತಾನೆ. ಆಕೆ ಅವಿವಾಹಿತೆಯಾಗಿದ್ದರೆ, ಕನ್ಯೆಯಾಗಿ ವಿವಾಹಬಂಧದೊಳಗೆ ಪ್ರವೇಶಿಸುವ ಆಕೆಯ ಹಕ್ಕನ್ನು ಮತ್ತು ಆಕೆಯ ಭಾವೀ ಗಂಡನು ಆಕೆಯನ್ನು ಕನ್ಯೆಯಾಗಿ ಪಡೆಯುವ ಹಕ್ಕನ್ನು ಅತಿಕ್ರಮಿಸುತ್ತಾನೆ. ಅವನು ಆ ಸ್ತ್ರೀಯ ಹೆತ್ತವರನ್ನು ಮತ್ತು ವಿವಾಹಿತಳಾಗಿರುವುದಾದರೆ ಆಕೆಯ ಗಂಡನನ್ನು ನೋಯಿಸುತ್ತಾನೆ. ಆ ದುರಾಚಾರಿಯು ತನ್ನ ಸ್ವಂತ ಕುಟುಂಬಕ್ಕೆ ಶುದ್ಧ ನೈತಿಕ ದಾಖಲೆಯನ್ನು ಹೊಂದಲಿಕ್ಕಾಗಿ ಇರುವ ಹಕ್ಕನ್ನು ಅಪಹರಿಸುತ್ತಾನೆ. ಅವನು ಕ್ರೈಸ್ತ ಸಭೆಯ ಸದಸ್ಯನಾಗಿರುವಲ್ಲಿ, ಅವನು ಅದಕ್ಕೆ ಕಳಂಕವನ್ನು ತಂದು ಅದರ ಹೆಸರನ್ನು ಮಣ್ಣುಪಾಲುಮಾಡುತ್ತಾನೆ.​—1 ಕೊರಿಂಥ 5:​1.

18. ಕ್ರೈಸ್ತ ನೈತಿಕತೆಯ ಸಂಬಂಧದಲ್ಲಿ ಬೈಬಲ್‌ ಅಧ್ಯಯನದಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ?

18 ಹಕ್ಕುಗಳ ಕುರಿತಾದ ಅಂಥ ಹೇಳಿಕೆಗಳು, ಆ ವಚನದ ಅರ್ಥವನ್ನು ನಿಮ್ಮ ಮುಂದೆ ತೆರೆಯುವುದಿಲ್ಲವೆ? ಆ ರೀತಿಯ ಅಧ್ಯಯನವು ತುಂಬ ಅಮೂಲ್ಯವಾದ ವಿಷಯವಾಗಿದೆ. ನೀವು ಅದನ್ನು ಬೆನ್ನಟ್ಟಿದಂತೆ, ನೀವು ಸ್ವತಃ ಬೋಧಿಸಿಕೊಳ್ಳುತ್ತೀರಿ. ದೇವರ ಸಂದೇಶದ ಸತ್ಯತೆ ಮತ್ತು ಬಲವಾದ ಪ್ರಭಾವದ ವಿಷಯದಲ್ಲಿ ನಿಮ್ಮ ಗ್ರಹಿಕೆಯು ಬೆಳೆಯುತ್ತದೆ. ಇದರಿಂದಾಗಿ, ಯಾವ ಶೋಧನೆಯು ಬಂದರೂ ಕ್ರೈಸ್ತ ನೈತಿಕತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವ ನಿಮ್ಮ ದೃಢನಿಶ್ಚಯತೆಯನ್ನು ನೀವು ಬಲಗೊಳಿಸುತ್ತೀರಿ. ಮತ್ತು ಒಬ್ಬ ಬೋಧಕರಾಗಿ ನೀವು ಎಷ್ಟು ಹೆಚ್ಚು ಪರಿಣಾಮಕಾರಿಯಾಗಿರಬಲ್ಲಿರಿ ಎಂಬುದನ್ನು ಯೋಚಿಸಿರಿ! ಉದಾಹರಣೆಗೆ, ನೀವು ಇತರರಿಗೆ ಬೈಬಲ್‌ ಸತ್ಯವನ್ನು ಕಲಿಸುತ್ತಿರುವಾಗ, 1 ಥೆಸಲೊನೀಕ 4:​3-7ರ ವಿಷಯದಲ್ಲಿ ಅವರಿಗೆ ಒಳನೋಟವನ್ನು ಕೊಟ್ಟು, ಹೀಗೆ ಕ್ರೈಸ್ತ ನೈತಿಕತೆಯ ವಿಷಯದಲ್ಲಿ ಅವರ ತಿಳಿವಳಿಕೆಯನ್ನೂ ಗಣ್ಯತೆಯನ್ನೂ ಹೆಚ್ಚಿಸಬಲ್ಲಿರಿ. ಹೀಗೆ ನಿಮ್ಮ ಅಧ್ಯಯನವು ನೀವೂ ಬೇರೆ ಅನೇಕರೂ ದೇವರನ್ನು ಗೌರವಿಸುವಂತೆ ಸಹಾಯಮಾಡಬಲ್ಲದು. ನಾವು ಇಲ್ಲಿ ಹೇಳಿರುವುದು ಪೌಲನು ಥೆಸಲೊನೀಕದವರಿಗೆ ಬರೆದ ಪತ್ರದ ಕೇವಲ ಒಂದು ದೃಷ್ಟಾಂತ. ಕ್ರೈಸ್ತ ನೈತಿಕತೆಯ ವಿಷಯದಲ್ಲಿ ನೀವು ಅಧ್ಯಯನ ಮಾಡಿ, ಅನ್ವಯಿಸಿಕೊಂಡು, ಬೋಧಿಸಬಹುದಾದ ಇನ್ನೂ ಅನೇಕ ಅಂಶಗಳಿವೆ ಮತ್ತು ಅನುರೂಪವಾಗಿ, ಅನೇಕ ಬೈಬಲ್‌ ಮಾದರಿಗಳೂ ಸಲಹೆಯ ಅಂಶಗಳೂ ಇವೆ.

19. ನೀವು ಕ್ರೈಸ್ತ ನೈತಿಕತೆಗೆ ಅಂಟಿಕೊಂಡಿರುವುದು ಏಕೆ ಅಗತ್ಯವಾಗಿದೆ?

19 ಕ್ರೈಸ್ತ ನೈತಿಕತೆಯನ್ನು ಕಾಪಾಡಿಕೊಳ್ಳುವುದು ವಿವೇಕಪ್ರದವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. “ಮೇಲಣಿಂದ ಬರುವ ಜ್ಞಾನವು [“ವಿವೇಕವು,” NW] ಮೊದಲು ಪರಿಶುದ್ಧವಾದದ್ದು,” ಎನ್ನುತ್ತದೆ ಯಾಕೋಬ 3:17. ದೇವರ ನೈತಿಕ ಮಟ್ಟಗಳನ್ನು ಅನುಸರಿಸಬೇಕೆಂಬುದನ್ನು ಅದು ಸ್ಪಷ್ಟವಾಗಿ ಸೂಚಿಸುತ್ತದೆ. ವಾಸ್ತವವೇನಂದರೆ, ಬೈಬಲನ್ನು ಬೋಧಿಸುವುದರಲ್ಲಿ ತನ್ನನ್ನು ಪ್ರತಿನಿಧಿಸುವವರು, “ಶುದ್ಧತ್ವ”ದ ವಿಷಯದಲ್ಲಿ ಉತ್ತಮ ಮಾದರಿಗಳಾಗಿರಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. (1 ತಿಮೊಥೆಯ 4:12) ಪೌಲ, ತಿಮೊಥೆಯರಂತಹ ಆರಂಭದ ಶಿಷ್ಯರ ಜೀವನಾದರ್ಶಗಳು ಇದಕ್ಕೆ ಸಾಕ್ಷಿ ನೀಡುತ್ತವೆ. ಅವರು ಲೈಂಗಿಕ ದುರಾಚಾರಗಳಿಂದ ದೂರವಿದ್ದರು. “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ,” ಎಂದೂ ಪೌಲನು ಬರೆದನು.​—ಎಫೆಸ 5:3, 4.

20, 21. ಅಪೊಸ್ತಲ ಯೋಹಾನನು 1 ಯೋಹಾನ 5:3ರಲ್ಲಿ ಏನನ್ನು ಬರೆದಿದ್ದಾನೊ ಅದನ್ನು ನೀವು ಏಕೆ ಒಪ್ಪುತ್ತೀರಿ?

20 ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ನೈತಿಕ ಮಟ್ಟಗಳು ಸ್ಪಷ್ಟವೂ ನಿರ್ದಿಷ್ಟವೂ ಆಗಿರುವುದಾದರೂ, ಅವು ಗೋಳುಗುಟ್ಟಿಸುವ ಒಂದು ಹೊರೆಯಾಗಿರುವುದಿಲ್ಲ. ಇದು ಅಪೊಸ್ತಲರಲ್ಲಿ ಹೆಚ್ಚು ಕಾಲ ಬದುಕಿ ಉಳಿದಿದ್ದ ಯೋಹಾನನಿಗೂ ಸ್ಪಷ್ಟವಾಗಿ ತಿಳಿದಿತ್ತು. ಅನೇಕ ದಶಕಗಳ ಜೀವಿತದಲ್ಲಿ ಅವನು ಅವಲೋಕಿಸಿದ ಆಧಾರದ ಮೇಲೆ, ಕ್ರೈಸ್ತ ನೈತಿಕತೆ ಹಾನಿಕರವಾಗಿರಲಿಲ್ಲವೆಂದು ಅವನಿಗೆ ತಿಳಿದಿತ್ತು. ಬದಲಿಗೆ, ಅದು ಸದಾಚಾರದ್ದೂ, ಪ್ರಯೋಜನಕರವೂ, ಒಂದು ಆಶೀರ್ವಾದವಾಗಿಯೂ ಪರಿಣಮಿಸಿತು. ಯೋಹಾನನು ಇದನ್ನು ಒತ್ತಿಹೇಳುತ್ತ ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”​—1 ಯೋಹಾನ 5:3.

21 ಆದರೆ ಕ್ರೈಸ್ತ ನೈತಿಕತೆಯ ಮೂಲಕ ದೇವರಿಗೆ ವಿಧೇಯರಾಗುವುದು, ನಮ್ಮನ್ನು ಸಮಸ್ಯೆಗಳಿಂದ ರಕ್ಷಿಸುತ್ತದೆ, ಹಾನಿಕರವಾದ ಪರಿಣಾಮಗಳಿಂದ ತಪ್ಪಿಸುತ್ತದೆ ಎಂಬ ಕಾರಣದಿಂದ ಮಾತ್ರ ಅದು ಅತ್ಯುತ್ತಮ ಮಾರ್ಗವೆಂದು ಪೌಲನು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅದು ಯೆಹೋವ ದೇವರ ಕಡೆಗೆ ನಮಗಿರುವ ಪ್ರೀತಿಯ ಅಭಿವ್ಯಕ್ತಿ, ನಮ್ಮ ಪ್ರೀತಿಯನ್ನು ಆತನಿಗೆ ತೋರಿಸುವ ಅಮೂಲ್ಯ ಸಂದರ್ಭವೆಂಬುದನ್ನು ಪ್ರಥಮವಾಗಿ ಅಂಗೀಕರಿಸುವ ಮೂಲಕ ಅವನು, ವಿಧೇಯತೆಯ ಕಡೆಗಿನ ಸರಿಯಾದ ದೃಷ್ಟಿಕೋನವನ್ನು ಯೋಗ್ಯವಾಗಿಯೇ ವ್ಯಕ್ತಪಡಿಸಿದನು. ನಿಜ, ದೇವರನ್ನು ಪ್ರೀತಿಸುವಂತೆ ಸ್ವತಃ ಬೋಧಿಸಿಕೊಳ್ಳುವುದು ಇಲ್ಲವೇ ಬೇರೆಯವರಿಗೆ ಬೋಧಿಸುವುದು, ನಾವು ಆತನ ಉನ್ನತ ಮಟ್ಟಗಳನ್ನು ಅಂಗೀಕರಿಸಿ, ಅನ್ವಯಿಸಿಕೊಳ್ಳುವುದನ್ನು ಅಪೇಕ್ಷಿಸುತ್ತದೆ. ಹೌದು, ಇದರರ್ಥ ಸ್ವತಃ ನಮಗೆ ಮತ್ತು ಇತರರಿಗೆ ಕ್ರೈಸ್ತ ನೈತಿಕತೆಯನ್ನು ಕಲಿಸುವುದೇ ಆಗಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 8 ಯೆಹೂದ್ಯರು ಪವಿತ್ರ ವಸ್ತುಗಳನ್ನು ಗೌರವಿಸದವರಲ್ಲ ಎಂಬ ಚಿತ್ರಣವನ್ನು ಕೊಟ್ಟ ಬಳಿಕ, ಜೋಸೀಫಸನು ದೇವರ ನಿಯಮವನ್ನು ಹೀಗೆ ಪುನರುಚ್ಚರಿಸಿದನು: “ಬೇರೆ ಪಟ್ಟಣಗಳು ಆರಾಧಿಸುವ ದೇವತೆಗಳನ್ನು ಯಾವನೂ ದೂಷಿಸದಿರಲಿ, ವಿದೇಶೀ ದೇವಸ್ಥಾನಗಳಲ್ಲಿ ಕಳ್ಳತನ ಮಾಡದಿರಲಿ, ಯಾವುದೇ ದೇವತೆಯ ಹೆಸರಿನಲ್ಲಿ ಮೀಸಲಾಗಿರಿಸಿದ ನಿಧಿಯನ್ನು ತೆಗೆದುಕೊಂಡು ಹೋಗದಿರಲಿ.” (ಓರೆ ಅಕ್ಷರಗಳು ನಮ್ಮವು.)​—ಜ್ಯೂವಿಷ್‌ ಆ್ಯಂಟಿಕ್ವಿಟೀಸ್‌, ಪುಸ್ತಕ 4, ಅಧ್ಯಾಯ 8, ಪ್ಯಾರಗ್ರಾಫ್‌ 10.

^ ಪ್ಯಾರ. 9 ಜ್ಯೂವಿಷ್‌ ಆ್ಯಂಟಿಕ್ವಿಟೀಸ್‌, ಪುಸ್ತಕ 18, ಅಧ್ಯಾಯ 3, ಪ್ಯಾರಗ್ರಾಫ್‌ 5.

ನಿಮಗೆ ಜ್ಞಾಪಕವಿದೆಯೆ?

• ಇತರರಿಗೆ ಬೋಧಿಸುವ ಮುನ್ನ ನಮಗೆ ಬೋಧಿಸಿಕೊಳ್ಳಲಿಕ್ಕಾಗಿ ನಾವು ಏಕೆ ಅಧ್ಯಯನ ಮಾಡತಕ್ಕದ್ದು?

• ನಮ್ಮ ನಡತೆ ಹೇಗೆ ಯೆಹೋವನ ಕುರಿತಾಗಿ ಒಂದು ಅಭಿಪ್ರಾಯವನ್ನು ಮೂಡಿಸಬಲ್ಲದು?

• ಹಾದರ ಮಾಡುವವನು ಯಾರ ಹಕ್ಕುಗಳನ್ನು ಅತಿಕ್ರಮಿಸುತ್ತಿರಬಹುದು?

• ಕ್ರೈಸ್ತ ನೈತಿಕತೆಯ ವಿಷಯದಲ್ಲಿ ನಿಮ್ಮ ದೃಢನಿರ್ಧಾರವೇನು?

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

“ಆತನ ಆಜ್ಞೆಗಳು ಭಾರವಾದವುಗಳಲ್ಲ”