ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಾಮ ಪರಿಹಾರವು ಬರುತ್ತಾ ಇದೆ!

ಕ್ಷಾಮ ಪರಿಹಾರವು ಬರುತ್ತಾ ಇದೆ!

ಕ್ಷಾಮ ಪರಿಹಾರವು ಬರುತ್ತಾ ಇದೆ!

‘ಯಾವ ರೀತಿಯ ಕ್ಷಾಮ?’ ಎಂದು ನೀವು ಕೇಳಬಹುದು. ಆತ್ಮಿಕ ಆಹಾರಕ್ಕಾಗಿರುವ ಕ್ಷಾಮವೇ! ಒಬ್ಬ ಪ್ರಾಚೀನ ಹೀಬ್ರು ಪ್ರವಾದಿಯು ಈ ಕ್ಷಾಮದ ಕುರಿತಾಗಿ ಮುಂತಿಳಿಸಿದ್ದು: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ​—ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” (ಆಮೋಸ 8:11) ಆತ್ಮಿಕ ಕ್ಷಾಮಕ್ಕೆ ಪರಿಹಾರವನ್ನೊದಗಿಸಲು, ನ್ಯೂ ಯಾರ್ಕ್‌ನ ಪ್ಯಾಟರ್ಸನ್‌ನಲ್ಲಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 112ನೆಯ ತರಗತಿಯ 48 ಸದಸ್ಯರು, 5 ಭೂಖಂಡಗಳು ಮತ್ತು ಸಮುದ್ರ ದ್ವೀಪಗಳಲ್ಲಿರುವ 19 ಭಿನ್ನ ದೇಶಗಳಿಗೆ ಹೋಗಲಿರುವರು.

ಅವರು ಅಕ್ಷರಶಃವಾದ ಮಾಂಸ ಮತ್ತು ಧಾನ್ಯವನ್ನು ತೆಗೆದುಕೊಂಡು ಹೋಗದೆ, ಜ್ಞಾನ, ಅನುಭವ ಹಾಗೂ ತರಬೇತಿಯಿಂದ ಸಜ್ಜಾಗಿ ಹೋಗುತ್ತಾರೆ. ಐದು ತಿಂಗಳುಗಳ ವರೆಗೆ ಅವರು ಬೈಬಲಿನ ತೀವ್ರವಾದ ಅಧ್ಯಯನದಲ್ಲಿ ಮುಳುಗಿದ್ದರು ಮತ್ತು ಇದು, ಅವರು ವಿದೇಶೀ ಕ್ಷೇತ್ರಗಳಲ್ಲಿ ಮಿಷನೆರಿ ಸೇವೆಗಾಗಿ ತಮ್ಮ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿತ್ತು. 2002ರ ಮಾರ್ಚ್‌ 9ರಂದು, ಪದವಿಪ್ರಾಪ್ತಿ ಕಾರ್ಯಕ್ರಮಕ್ಕೆ ಹಾಜರಿದ್ದ 5,554 ಮಂದಿ ಹರ್ಷಾನಂದದಿಂದ ಕಿವಿಗೊಟ್ಟರು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆಸಲ್ಲಿಸುತ್ತಿರುವ ಸ್ಟೀಫನ್‌ ಲೆಟ್‌ ಕಾರ್ಯಕ್ರಮವನ್ನು ಉತ್ಸಾಹದಿಂದ ಆರಂಭಿಸಿದರು. ಲೋಕದ ಬೇರೆ ಬೇರೆ ಸ್ಥಳಗಳಿಂದ ಬಂದಿದ್ದ ಅನೇಕ ಅತಿಥಿಗಳಿಗೆ ಅವರು ವಿಶೇಷ ಸ್ವಾಗತವನ್ನು ನೀಡಿದರು. ಅನಂತರ ಅವರು, “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂಬ ಯೇಸುವಿನ ಮಾತುಗಳನ್ನು ಭಾವೀ ಮಿಷನೆರಿಗಳ ಕೆಲಸಕ್ಕೆ ಅನ್ವಯಿಸಿದರು. (ಮತ್ತಾಯ 5:14) ಅವರು ವಿವರಿಸಿದ್ದು: ‘ನಿಮ್ಮ ನೇಮಕಗಳಲ್ಲಿ ನೀವು ಯೆಹೋವನ ಅದ್ಭುತಕರವಾದ ಕೆಲಸಗಳ ವಿವಿಧ ಅಂಶಗಳನ್ನು “ಬೆಳಗಿಸುತ್ತಾ” ಪ್ರಾಮಾಣಿಕ ಹೃದಯದ ಜನರು ಯೆಹೋವನ ಮತ್ತು ಆತನ ಉದ್ದೇಶಗಳ ಮನೋಹರತೆಯನ್ನು ನೋಡುವುದನ್ನು ಸಾಧ್ಯಗೊಳಿಸುವಿರಿ.’ ಸುಳ್ಳು ಸಿದ್ಧಾಂತಗಳ ಅಂಧಕಾರವನ್ನು ಬಯಲುಪಡಿಸಲು ಮತ್ತು ಸತ್ಯಾನ್ವೇಷಕರಿಗೆ ಮಾರ್ಗದರ್ಶನವನ್ನು ಕೊಡಲಿಕ್ಕಾಗಿ ದೇವರ ವಾಕ್ಯದ ಬೆಳಕನ್ನು ಉಪಯೋಗಿಸುವಂತೆ ಸಹೋದರ ಲೆಟ್‌ ಮಿಷನೆರಿಗಳನ್ನು ಪ್ರೋತ್ಸಾಹಿಸಿದರು.

ಯಶಸ್ಸಿಗೆ ಯೋಗ್ಯ ಮನೋಭಾವವು ಅತ್ಯಾವಶ್ಯಕ

ಅಧ್ಯಕ್ಷರ ಆರಂಭದ ಹೇಳಿಕೆಗಳ ನಂತರ, ಅಮೆರಿಕದ ಬ್ರಾಂಚ್‌ ಕಮಿಟಿಯ ಸದಸ್ಯರಾಗಿರುವ ಬಾಲ್ಟಾಸರ್‌ ಪೆರ್ಲಾ ಅವರು, ಯಶಸ್ವೀ ಮಿಷನೆರಿಗಳಾಗಲು ಪದವೀಧರರಿಗೆ ನೆರವಾಗುವಂತೆ ವಿನ್ಯಾಸಿಸಲ್ಪಟ್ಟಿರುವ ಭಾಷಣಗಳ ಸರಮಾಲೆಯಲ್ಲಿ ಮೊದಲ ಭಾಷಣವನ್ನು ಕೊಟ್ಟರು. “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಕೆಲಸಕ್ಕೆ ಕೈಹಾಕಿರಿ” ಎಂಬ ಮುಖ್ಯ ವಿಷಯವನ್ನು ಅವರು ವಿಕಸಿಸಿದರು. (1 ಪೂರ್ವಕಾಲವೃತ್ತಾಂತ 28:20) ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು, ತಾನು ಈ ಹಿಂದೆ ಎಂದೂ ಮಾಡಿರದಂಥ ಒಂದು ಕಷ್ಟಕರವಾದ ಕೆಲಸದ ನೇಮಕವನ್ನು ಪಡೆದನು. ಅದು ಯೆರೂಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟುವುದಾಗಿತ್ತು. ಸೊಲೊಮೋನನು ನಿಶ್ಚಯವಾಗಿಯೂ ಕೆಲಸಕ್ಕೆ ಕೈಹಾಕಿದನು ಮತ್ತು ಯೆಹೋವನ ಬೆಂಬಲದೊಂದಿಗೆ ಆ ಆಲಯವು ಪೂರ್ಣಗೊಳಿಸಲ್ಪಟ್ಟಿತು. ಆ ಪಾಠವನ್ನು ತರಗತಿಗೆ ಅನ್ವಯಿಸುತ್ತಾ, ಸಹೋದರ ಪೆರ್ಲಾ ಹೇಳಿದ್ದು: ‘ಮಿಷನೆರಿಯಾಗುವ ಹೊಸ ನೇಮಕವೊಂದನ್ನು ನೀವು ಪಡೆದಿದ್ದೀರಿ, ಮತ್ತು ನೀವು ಸ್ಥಿರಚಿತ್ತತೆಯಿಂದಲೂ, ಧೈರ್ಯದಿಂದಲೂ ಇರಬೇಕು.’ ತಾವು ಯೆಹೋವನಿಗೆ ಆಪ್ತರಾಗಿರುವಷ್ಟು ಸಮಯ ಆತನು ಎಂದಿಗೂ ತಮ್ಮ ಕೈಬಿಡುವುದಿಲ್ಲ ಎಂಬ ಆಶ್ವಾಸನೆಯಲ್ಲಿ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಸಾಂತ್ವನಸಿಕ್ಕಿತು. ‘ಮಿಷನೆರಿಗಳೋಪಾದಿ ನೀವು ತುಂಬ ಒಳಿತನ್ನು ಸಾಧಿಸಬಲ್ಲಿರಿ. ಮಿಷನೆರಿಗಳೇ ನನಗೂ ನನ್ನ ಕುಟುಂಬಕ್ಕೂ ಸತ್ಯವನ್ನು ತಂದುಕೊಟ್ಟರು!’ ಎಂಬ ಈ ವೈಯಕ್ತಿಕ ಅಭಿಪ್ರಾಯೋಕ್ತಿಯೊಂದಿಗೆ ಕೊನೆಗೊಳಿಸುತ್ತಾ ಸಹೋದರ ಪೆರ್ಲಾ ಸಭಿಕರ ಮನಮುಟ್ಟಿದರು.

“ಯಶಸ್ಸಿಗಾಗಿ ಯೆಹೋವನೆಡೆಗೆ ನೋಡಿರಿ” ಎಂಬುದು, ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಸ್ಯಾಮುವೆಲ್‌ ಹರ್ಡ್‌ ಅವರು ಕೊಟ್ಟ ಭಾಷಣದ ಮುಖ್ಯ ವಿಷಯವಾಗಿತ್ತು. ವಿದ್ಯಾರ್ಥಿಗಳು ಮಿಷನೆರಿ ಕೆಲಸದಲ್ಲಿನ ಒಂದು ಜೀವನ ವೃತ್ತಿಗೆ ಕಾಲಿರಿಸುತ್ತಿದ್ದಾರೆ ಮತ್ತು ಅವರ ಯಶಸ್ಸು ಹೆಚ್ಚಿನ ಮಟ್ಟಿಗೆ ಯೆಹೋವನೊಂದಿಗಿನ ಅವರ ಸಂಬಂಧದ ಮೇಲೆ ಅವಲಂಬಿಸುತ್ತದೆ. ಸಹೋದರ ಹರ್ಡ್‌ ವಿದ್ಯಾರ್ಥಿಗಳಿಗೆ ಬುದ್ಧಿವಾದ ಕೊಟ್ಟದ್ದು: ‘ಗಿಲ್ಯಡ್‌ನಲ್ಲಿ ನಿಮ್ಮ ಅಧ್ಯಯನಗಳ ಮೂಲಕ ಬೈಬಲಿನ ಕುರಿತಾಗಿ ಬಹಳಷ್ಟು ಜ್ಞಾನವನ್ನು ಶೇಖರಿಸಿದ್ದೀರಿ. ನೀವು ಸಂತೋಷದಿಂದ ತೆಗೆದುಕೊಳ್ಳುತ್ತಾ ಇದ್ದೀರಿ. ಆದರೆ ಈಗ, ನಿಜವಾದ ಯಶಸ್ಸಿಗಾಗಿ ನೀವು ಏನನ್ನು ಕಲಿತಿದ್ದೀರೊ ಅದನ್ನು ಕೊಡಲು ಆರಂಭಿಸಬೇಕು.’ (ಅ. ಕೃತ್ಯಗಳು 20:35) ಮಿಷನೆರಿಗಳು ಇತರರಿಗೋಸ್ಕರ ತಮ್ಮನ್ನೇ ‘ಅರ್ಪಿಸಿಕೊಳ್ಳುವಾಗ,’ ಅವರಿಗೆ ಇದನ್ನು ಮಾಡುವ ಅನೇಕ ಅವಕಾಶಗಳಿರುವವು.​—ಫಿಲಿಪ್ಪಿ 2:17.

ಈ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೀಳ್ಕೊಡುವಿಕೆಯ ಯಾವ ಸಲಹೆಯನ್ನು ಕೊಟ್ಟರು? ಮಾರ್ಕ್‌ ನೂಮ್ಯಾರ್‌ ತಮ್ಮ ಮುಖ್ಯ ವಿಷಯವನ್ನು ರೂತಳು 3:18ರ ಮೇಲಾಧರಿಸಿದರು. ಅದು, “ಕಾರ್ಯವು ಹೇಗಾಗುವದೆಂದು ಗೊತ್ತಾಗುವ ವರೆಗೂ ಸುಮ್ಮನಿರಿ” ಎಂದಾಗಿತ್ತು. ನೊವೊಮಿ ಮತ್ತು ರೂತಳ ಉದಾಹರಣೆಯನ್ನು ಉಪಯೋಗಿಸುತ್ತಾ, ಈ ಪದವೀಧರರು ದೇವರ ಭೂಸಂಸ್ಥೆಯು ಸ್ಥಾಪಿಸಿರುವ ಏರ್ಪಾಡುಗಳಲ್ಲಿ ಪೂರ್ಣ ಭರವಸೆಯನ್ನಿಡುವಂತೆ ಮತ್ತು ದೇವಪ್ರಭುತ್ವಾತ್ಮಕ ಅಧಿಕಾರವನ್ನು ಗೌರವಿಸುವಂತೆ ಅವರು ಉತ್ತೇಜಿಸಿದರು. ‘ನಿಮ್ಮನ್ನು ಬಾಧಿಸುವಂಥ ಒಂದು ನಿರ್ಣಯವನ್ನು ಏಕೆ ಮಾಡಲಾಯಿತು ಎಂಬುದು ನಿಮಗೆ ಅರ್ಥವಾಗದ ಇಲ್ಲವೆ ಯಾವುದಾದರೊಂದು ವಿಷಯವು ಬೇರೆ ವಿಧದಲ್ಲಿ ಮಾಡಲ್ಪಡಬೇಕಿತ್ತು ಎಂಬುದರ ಬಗ್ಗೆ ನಿಮಗೆ ಬಲವಾದ ಅಭಿಪ್ರಾಯಗಳಿರುವ ಸಮಯಗಳು ಖಂಡಿತವಾಗಿಯೂ ಬರುವವು. ಆಗ ನೀವೇನು ಮಾಡುವಿರಿ? ನೀವು ಎದ್ದುನಿಂತು, ವಿಷಯಗಳನ್ನು ನಿಮ್ಮ ಸ್ವಂತ ಕೈಗೆತ್ತುವಿರೊ ಇಲ್ಲವೆ ದೇವರು ಸಕಾಲದಲ್ಲಿ ಕೇವಲ ಹಿತವು ಪರಿಣಮಿಸುವಂತೆ ಮಾಡುವನು ಎಂಬ ದೃಢವಿಶ್ವಾಸದೊಂದಿಗೆ ದೇವರ ನಿರ್ದೇಶನದಲ್ಲಿ ಭರವಸೆಯಿಡುತ್ತಾ “ಸುಮ್ಮನಿರುವಿರೊ”?’ ಎಂದು ಸಹೋದರ ನೂಮ್ಯಾರ್‌ ಹೇಳಿ, ವಿದ್ಯಾರ್ಥಿಗಳ ಹೃದಯಗಳನ್ನು ಸ್ಪರ್ಶಿಸಿದರು. (ರೋಮಾಪುರ 8:28) ‘ವ್ಯಕ್ತಿಗಳ ಮೇಲೆ ಕಣ್ಣಿಡುವ ಬದಲು ಯೆಹೋವನ ಸಂಸ್ಥೆ ಏನು ಮಾಡುತ್ತಿದೆಯೊ ಅದರ ಮೇಲೆ ಕಣ್ಣಿಡುತ್ತಾ, ರಾಜ್ಯಾಭಿರುಚಿಗಳನ್ನು ಮುಂದುವರಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ’ ಎಂಬ ಬುದ್ಧಿವಾದವು, ಭಾವೀ ಮಿಷನೆರಿಗಳಿಗೆ ತಮ್ಮ ವಿದೇಶೀ ನೇಮಕಗಳಲ್ಲಿ ಅಮೂಲ್ಯವಾಗಿರುವುದು.

ಒಂದು ಸಮಯದಲ್ಲಿ ಸ್ವತಃ ಒಬ್ಬ ಮಿಷನೆರಿಯಾಗಿದ್ದ, ಆದರೆ ಈಗ ಗಿಲ್ಯಡ್‌ ಶಿಕ್ಷಕರಾಗಿರುವ ವಾಲಸ್‌ ಲಿವರೆನ್ಸ್‌, ಈ ಮೊದಲನೆಯ ಭಾಷಣ ಸರಮಾಲೆಯಲ್ಲಿನ ಕೊನೆಯ ಭಾಷಣವನ್ನು ನೀಡಿದರು. ಅವರ ಭಾಷಣದ ಮುಖ್ಯ ವಿಷಯವು, “ಏಕಾಗ್ರಚಿತ್ತವುಳ್ಳವರಾಗಿ ಉಳಿಯಿರಿ, ದೇವರ ಸೇವೆಯಲ್ಲಿ ಉಳಿಯಿರಿ” ಎಂದಾಗಿತ್ತು. ಬಾಬೆಲಿನ ಪತನವನ್ನು ನೋಡುವ ಮೂಲಕ ಮತ್ತು ಯೆರೆಮೀಯನು ಏನನ್ನು ಮುಂತಿಳಿಸಿದ್ದನೊ ಅದರಿಂದಾಗಿ ಪ್ರವಾದಿಯಾದ ದಾನಿಯೇಲನು, ಬಂದಿವಾಸದಿಂದ ಇಸ್ರಾಯೇಲ್ಯರ ಬಿಡುಗಡೆಯು ಹತ್ತಿರವಿತ್ತೆಂಬುದನ್ನು ವಿವೇಚಿಸಿ ತಿಳಿದುಕೊಂಡನು ಎಂಬುದನ್ನು ಅವರು ತೋರಿಸಿದರು. (ಯೆರೆಮೀಯ 25:11; ದಾನಿಯೇಲ 9:2) ಯೆಹೋವನ ಕಾಲತಖ್ತೆಯ ಪ್ರಜ್ಞೆ ದಾನಿಯೇಲನಿಗಿತ್ತು, ಮತ್ತು ಇದು ಅವನು ದೇವರ ಉದ್ದೇಶದ ನೆರವೇರಿಕೆಯ ವಿಷಯದಲ್ಲಿ ಏಕಾಗ್ರಚಿತ್ತವುಳ್ಳವನಾಗಿ ಉಳಿಯಲು ಸಹಾಯಮಾಡಿತು. ವ್ಯತಿರಿಕ್ತವಾಗಿ, ಪ್ರವಾದಿಯಾದ ಹಗ್ಗಾಯನ ದಿನಗಳಲ್ಲಿದ್ದ ಇಸ್ರಾಯೇಲ್ಯರು ಹೇಳಿದ್ದು: “ಸಮಯವು ಇನ್ನು ಬಂದಿಲ್ಲ.” (ಹಗ್ಗಾಯ 1:2) ತಾವು ಜೀವಿಸುತ್ತಿದ್ದ ಸಮಯಗಳ ಕುರಿತು ಅವರು ಏಕಾಗ್ರಚಿತ್ತವುಳ್ಳವರಾಗಿರಲಿಲ್ಲ, ಬದಲಾಗಿ ತಮ್ಮ ಸ್ವಂತ ಸುಖ ಮತ್ತು ಸ್ವಾರ್ಥ ಇಚ್ಛೆಗಳ ಪೂರೈಸುವಿಕೆಯ ಮೇಲೆ ಕೇಂದ್ರೀಕರಿಸಿಕೊಂಡು, ಅವರನ್ನು ಯಾವ ಕೆಲಸಕ್ಕಾಗಿ ಬಾಬೆಲಿನಿಂದ ಬಿಡಿಸಲಾಗಿತ್ತೊ ಅದನ್ನು, ಅಂದರೆ ದೇವಾಲಯದ ಪುನರ್ನಿರ್ಮಾಣದ ಕೆಲಸವನ್ನು ಅವರು ಬಿಟ್ಟುಬಿಟ್ಟರು. ಸಹೋದರ ಲಿವರೆನ್ಸ್‌ ಸಮಾಪ್ತಿಗೊಳಿಸಿದ್ದು: “ಆದುದರಿಂದ ಎಲ್ಲ ಸಮಯಗಳಲ್ಲೂ ಯೆಹೋವನ ಉದ್ದೇಶವನ್ನು ಮನಸ್ಸಿನಲ್ಲಿಡುವ ಮೂಲಕ ಏಕಾಗ್ರಚಿತ್ತವುಳ್ಳವರಾಗಿ ಉಳಿಯಿರಿ.”

ಗಿಲ್ಯಡ್‌ ಶಿಕ್ಷಕರಾದ ಲಾರೆನ್ಸ್‌ ಬೋವನ್‌, “ಸಜೀವ ವಾಕ್ಯವನ್ನು ಬಳಸುವವರನ್ನು ಯೆಹೋವನು ಆಶೀರ್ವದಿಸುತ್ತಾನೆ” ಎಂಬ ಮುಖ್ಯ ವಿಷಯವುಳ್ಳ ಒಂದು ಭಾಗದ ಅಧ್ಯಕ್ಷತೆ ವಹಿಸಿದರು. (ಇಬ್ರಿಯ 4:12) ಈ ಭಾಗದಲ್ಲಿ, ತರಗತಿಯ ವಿದ್ಯಾರ್ಥಿಗಳಿಗಿದ್ದ ಕ್ಷೇತ್ರ ಸೇವೆಯಲ್ಲಿನ ಅನುಭವಗಳಿದ್ದವು ಮತ್ತು ಇದು ಸಾರುವಾಗಲೂ ಕಲಿಸುವಾಗಲೂ ಬೈಬಲನ್ನು ಉಪಯೋಗಿಸುವವರನ್ನು ಯೆಹೋವನು ಹೇಗೆ ಆಶೀರ್ವದಿಸುತ್ತಾನೆಂಬುದನ್ನು ಎತ್ತಿತೋರಿಸಿತು. ಯೇಸು ಕ್ರಿಸ್ತನು ದೇವರ ಎಲ್ಲ ಶುಶ್ರೂಷಕರಿಗಾಗಿ ಒಂದು ಉತ್ತಮ ಮಾದರಿಯನ್ನಿಟ್ಟನೆಂದು ಅಧ್ಯಕ್ಷರು ಹೇಳಿದರು. ‘ತನ್ನ ಬೋಧನೆಯು ದೇವರಿಂದ ಬಂದದ್ದೇ ಹೊರತು, ತಾನೇ ಕಲ್ಪಿಸಿ ಹೇಳಿದ್ದಲ್ಲವೆಂದು ಯೇಸು ಸತ್ಯವಾಗಿಯೂ ಹೇಳಸಾಧ್ಯವಿತ್ತು.’ ಪ್ರಾಮಾಣಿಕ ಹೃದಯದ ಜನರು ಸತ್ಯವನ್ನು ಅಂಗೀಕರಿಸಿ, ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದರು. (ಯೋಹಾನ 7:​16, 17) ಈ ಮಾತು ಇಂದು ಕೂಡ ಸತ್ಯ.

ಗಿಲ್ಯಡ್‌ ತರಬೇತಿಯು ಒಬ್ಬನನ್ನು ಸಕಲಸತ್ಕಾರ್ಯಕ್ಕೂ ಸನ್ನದ್ಧಗೊಳಿಸುತ್ತದೆ

ಆನಂತರ, ದೀರ್ಘಸಮಯದಿಂದ ಬೆತೆಲ್‌ ಕುಟುಂಬದ ಸದಸ್ಯರಾಗಿರುವ ರಿಚರ್ಡ್‌ ಏಬ್ರಹಾಮ್‌ಸನ್‌ ಮತ್ತು ಪ್ಯಾಟ್ರಿಕ್‌ ಲಫ್ರಾಂಕರವರು, ವಿಶೇಷವಾದ ಪೂರ್ಣ ಸಮಯದ ಸೇವೆಯ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಈಗ ಸೇವಿಸುತ್ತಿರುವ ಆರು ಮಂದಿ ಗಿಲ್ಯಡ್‌ ಪದವೀಧರರನ್ನು ಇಂಟರ್‌ವ್ಯೂ ಮಾಡಿದರು. ಅನೇಕಾನೇಕ ವರ್ಷಗಳ ನಂತರವೂ ಈ ಆರು ಮಂದಿ, ತಮ್ಮ ಸದ್ಯದ ನೇಮಕವು ಏನೇ ಆಗಿದ್ದರೂ, ಬೈಬಲ್‌ ಅಧ್ಯಯನ, ಸಂಶೋಧನಾ ಯೋಜನೆಗಳು, ಮತ್ತು ಜನರೊಂದಿಗೆ ಹೊಂದಿಕೊಂಡು ಹೋಗುವುದರ ಸಂಬಂಧದಲ್ಲಿ ಗಿಲ್ಯಡ್‌ನಲ್ಲಿ ಪಡೆದುಕೊಂಡ ತರಬೇತಿಯನ್ನು ಈಗಲೂ ಬಳಸುತ್ತಿದ್ದಾರೆಂಬುದನ್ನು ಕೇಳಿ, 112ನೆಯ ತರಗತಿಯ ಪದವೀಧರರು ಉತ್ತೇಜಿತರಾದರು.

ಆಡಳಿತ ಮಂಡಲಿಯ ಸದಸ್ಯರಾಗಿರುವ ಥಿಯೊಡರ್‌ ಜಾರಸ್‌ರವರು ಕಾರ್ಯಕ್ರಮದ ಮುಖ್ಯ ಭಾಷಣವನ್ನು ಕೊಟ್ಟರು. ಅದರ ಶೀರ್ಷಿಕೆಯು, “ಸೈತಾನಸಂಬಂಧಿತ ದ್ವೇಷವನ್ನು ತಾಳಿಕೊಳ್ಳುವುದರಿಂದ ಸಾಧಿಸಲ್ಪಡುವ ಕೆಲಸಗಳು” ಎಂದಾಗಿತ್ತು. ಗತ ಐದು ತಿಂಗಳುಗಳಲ್ಲಿ, ವಿದ್ಯಾರ್ಥಿಗಳು ಒಂದು ಪ್ರೀತಿಪರವಾದ ಮತ್ತು ದೇವಪ್ರಭುತ್ವಾತ್ಮಕ ಪರಿಸರದಲ್ಲಿದ್ದರು. ಆದರೆ ಅವರ ಪಾಠಗಳಲ್ಲಿ ತಿಳಿಸಲ್ಪಟ್ಟಂತೆ, ನಾವು ಒಂದು ಶತ್ರು ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಲೋಕದಾದ್ಯಂತ ಯೆಹೋವನ ಜನರು ಆಕ್ರಮಣಕ್ಕೆ ತುತ್ತಾಗಿದ್ದಾರೆ. (ಮತ್ತಾಯ 24:9) ಹಲವಾರು ಬೈಬಲ್‌ ವೃತ್ತಾಂತಗಳನ್ನು ಉಪಯೋಗಿಸುತ್ತಾ, ಸಹೋದರ ಜಾರಸ್‌ ತೋರಿಸಿದ್ದೇನೆಂದರೆ, ‘ನಾವು ಪಿಶಾಚನ ಒಂದು ವಿಶೇಷ ಗುರಿಹಲಗೆಯಾಗಿದ್ದೇವೆ. ನಾವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಬೇಕು ಮತ್ತು ಪರೀಕ್ಷೆಗಳನ್ನು ಎದುರಿಸಲಿಕ್ಕಾಗಿ ನಮ್ಮನ್ನೇ ಭದ್ರಪಡಿಸಿಕೊಳ್ಳಬೇಕು.’ (ಯೋಬ 1:8; ದಾನಿಯೇಲ 6:4; ಯೋಹಾನ 15:20; ಪ್ರಕಟನೆ 12:​12, 17) ದೇವಜನರ ವಿರುದ್ಧ ದ್ವೇಷವು ಮುಂದುವರಿಯುತ್ತಾ ಇದ್ದರೂ, ‘ಯೆಶಾಯ 54:17 ಹೇಳುವಂತೆ, ನಮ್ಮ ವಿರುದ್ಧ ಕಲ್ಪಿಸಲ್ಪಟ್ಟ ಯಾವ ಆಯುಧವೂ ಜಯಿಸದು. ತನ್ನ ಸ್ವಂತ ಸಮಯದಲ್ಲಿ ಮತ್ತು ತನ್ನ ಸ್ವಂತ ವಿಧದಲ್ಲಿ ನಾವು ರಕ್ಷಿಸಲ್ಪಡುವಂತೆ ಯೆಹೋವನು ಖಂಡಿತವಾಗಿಯೂ ನೋಡಿಕೊಳ್ಳುವನು.’

ಸಂಪೂರ್ಣವಾಗಿ ‘ಸನ್ನದ್ಧರಾಗಿ,’ ಗಿಲ್ಯಡ್‌ನ 112ನೆಯ ತರಗತಿಯ ಪದವೀಧರರು, ತಾವು ಸೇವೆಸಲ್ಲಿಸಲಿರುವ ದೇಶಗಳಲ್ಲಿನ ಆತ್ಮಿಕ ಆಹಾರದ ಕ್ಷಾಮವನ್ನು ತಗ್ಗಿಸುವುದರಲ್ಲಿ ನಿಸ್ಸಂದೇಹವಾಗಿಯೂ ಬಹಳಷ್ಟು ಕೆಲಸವನ್ನು ಮಾಡುವರು. (2 ತಿಮೊಥೆಯ 3:​16, 17) ಈ ದೇಶಗಳಲ್ಲಿರುವ ಜನರಿಗೆ ಅವರು ಪೌಷ್ಟಿಕವಾದ ಸಂದೇಶವನ್ನು ಹೇಗೆ ಕೊಡುವರೆಂಬುದರ ಕುರಿತಾದ ವರದಿಗಳಿಗಾಗಿ ನಾವು ಉತ್ಸುಕತೆಯಿಂದ ಎದುರುನೋಡುತ್ತೇವೆ.

[ಪುಟ 23ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು 

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 6

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 19

ವಿದ್ಯಾರ್ಥಿಗಳ ಸಂಖ್ಯೆ: 48

ಸರಾಸರಿ ಪ್ರಾಯ: 33.2

ಸತ್ಯದಲ್ಲಿ ಸರಾಸರಿ ವರ್ಷಗಳು: 15.7

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.2

[ಪುಟ 24ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 112ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ಪಾರಾಟ್‌, ಎಮ್‌.; ಹುಕರ್‌, ಇ.; ಆನಾಯಾ, ಆರ್‌.; ರೆನಲ್ಡ್ಸ್‌, ಜೆ.; ಜೆಸ್ವಾಲ್ಡೀ, ಕೆ.; ಗೊನ್ಸಾಲಿಸ್‌, ಜೆ. (2) ರಾಬಿನ್ಸನ್‌, ಸಿ.; ಫಿಲಿಪ್ಸ್‌, ಬಿ.; ಮೇಡ್ಮಂಟ್‌, ಕೆ.; ಮೋರ್‌, ಐ.; ನೋಕ್ಸ್‌, ಜೆ.; ಬಾರ್ನೆಟ್‌, ಎಸ್‌. (3) ಸ್ಟೈರ್ಸ್‌, ಟಿ.; ಪಾಮರ್‌, ಬಿ.; ಯ್ಯಾಂಗ್‌, ಸಿ.; ಗ್ರೂಟ್‌ಹ್ಯೂಸ್‌, ಎಸ್‌.; ಗ್ರೋಪ್‌, ಟಿ.; ಬಾಕ್‌, ಸಿ. (4) ಆನಾಯಾ, ಆರ್‌.; ಸೂಕರೆಫ್‌, ಈ.; ಸ್ಟ್ಯೂಅರ್ಟ್‌, ಕೆ.; ಸಿಮೋಸ್ರ್ಯಾಗ್‌, ಎನ್‌.; ಸಿಮಾಟೆಲ್‌, ಸಿ.; ಬಾಕ್‌, ಈ. (5) ಸ್ಟ್ಯೂಅರ್ಟ್‌, ಆರ್‌.; ಯ್ಯಾಂಗ್‌, ಎಚ್‌; ಗಿಲ್‌ಫೆದರ್‌, ಎ.; ಹ್ಯಾರಿಸ್‌, ಆರ್‌.; ಬಾರ್ನೆಟ್‌, ಡಿ.; ಪಾರಾಟ್‌, ಎಸ್‌. (6) ಮೇಡ್ಮಂಟ್‌, ಎ.; ಮೋರ್‌, ಜೆ.; ಗ್ರೂಟ್‌ಹ್ಯೂಸ್‌, ಸಿ.; ಗಿಲ್‌ಫೆದರ್‌, ಸಿ.; ನೋಕ್ಸ್‌, ಎಸ್‌.; ಸ್ಟೈರ್ಸ್‌, ಟಿ. (7) ಜೆಸ್ವಾಲ್ಡೀ, ಡಿ.; ಗ್ರೋಪ್‌, ಟಿ.; ಸೂಕರೆಫ್‌, ಬಿ.; ಪಾಮರ್‌, ಜಿ.; ಫಿಲಿಪ್ಸ್‌, ಎನ್‌.; ಸಿಮಾಟೆಲ್‌, ಜೆ. (8) ಹ್ಯಾರಿಸ್‌, ಎಸ್‌.; ಹುಕರ್‌, ಪಿ.; ಗೊನ್ಸಾಲಿಸ್‌, ಜೆ.; ಸಿಮೋಸ್ರ್ಯಾಗ್‌, ಡಿ.; ರೆನಲ್ಡ್ಸ್‌, ಡಿ.; ರಾಬಿನ್ಸನ್‌, ಎಮ್‌.