ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವಕುಲದ ಸಮಸ್ಯೆಗಳು ಅವು ಎಂದಾದರೂ ಕೊನೆಗೊಳ್ಳುವವೊ?

ಮಾನವಕುಲದ ಸಮಸ್ಯೆಗಳು ಅವು ಎಂದಾದರೂ ಕೊನೆಗೊಳ್ಳುವವೊ?

ಮಾನವಕುಲದ ಸಮಸ್ಯೆಗಳು ಅವು ಎಂದಾದರೂ ಕೊನೆಗೊಳ್ಳುವವೊ?

“ಲೋಕದ ಜನಸಂಖ್ಯೆಯಲ್ಲಿ ಕಾಲುಭಾಗ ಬಡತನದ ಬೇಗೆಯಲ್ಲಿ ಬೇಯುತ್ತಿದೆ, 130 ಕೋಟಿ ಜನರು ಪ್ರತಿದಿನ 50 ರೂಪಾಯಿಗಿಂತಲೂ ಕಡಿಮೆ ಹಣದಲ್ಲಿ ಜೀವಿಸುತ್ತಾರೆ, 100 ಕೋಟಿ ಜನರು ಅನಕ್ಷರಸ್ಥರಾಗಿದ್ದಾರೆ, 130 ಕೋಟಿ ಜನರಿಗೆ ಸುರಕ್ಷಿತವಾದ ಕುಡಿಯುವ ನೀರು ಲಭ್ಯವಿಲ್ಲ ಮತ್ತು ದಿನಾಲೂ 100 ಕೋಟಿ ಮಂದಿ ಹೊಟ್ಟೆಗಿಲ್ಲದೆ ಇರುತ್ತಾರೆ.” ಜಗತ್ತಿನ ಈ ದೆಶೆಯ ಕುರಿತಾಗಿ ಐರ್ಲಂಡ್‌ನ ಒಂದು ವರದಿಯು ಈ ಮೇಲಿನಂತೆ ಹೇಳುತ್ತದೆ.

ಜಗತ್ತಿನ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಗಳನ್ನು ಕಂಡುಕೊಳ್ಳಲು ಮಾನವನು ಅಶಕ್ತನೆಂಬದರ ಬಗ್ಗೆ ಎಂಥ ದುಃಖಕರ ದೋಷಾರೋಪಣೆಯಿದು! ಆ ವರದಿಯಲ್ಲಿ ವರ್ಣಿಸಲ್ಪಟ್ಟಿದ್ದ ಅಧಿಕಾಂಶ ಮಂದಿ, ಅರಕ್ಷಿತ ಮಹಿಳೆಯರು ಮತ್ತು ಮಕ್ಕಳು ಎಂಬುದು ಗೊತ್ತಾಗುವಾಗ ಆ ಸಮಸ್ಯೆಗಳು ಇನ್ನೂ ಹೆಚ್ಚು ದುರಂತಮಯವಾಗಿ ತೋರುತ್ತವೆ. ಈಗಲೂ, ಈ 21ನೆಯ ಶತಮಾನದಲ್ಲೂ ಅವರ ಹಕ್ಕುಗಳು, “ಎಣಿಸಲಾಗದಂಥ ಸಂಖ್ಯೆಯಲ್ಲಿ ಪ್ರತಿ ದಿನ ಉಲ್ಲಂಘಿಸಲ್ಪಡುವುದು” ಮುಂದುವರಿಯುತ್ತಿದೆ ಎಂಬ ಸಂಗತಿಯು ಎದೆಗುಂದಿಸುತ್ತದಲ್ಲವೊ?​—ಜಗತ್ತಿನ ಮಕ್ಕಳ ದೆಶೆ 2000 (ಇಂಗ್ಲಿಷ್‌).

‘ಒಂದೇ ತಲೆಮಾರಿನೊಳಗೆ ಒಂದು ಹೊಸ ಜಗತ್ತು’

“ಈ ದೌರ್ಜನ್ಯಗಳು ಭೂಗೋಳದಾದ್ಯಂತ ಜೀವಿತಗಳ ಮೇಲೆ ಬೀಸಿರುವ . . . ಮಬ್ಬಾದ ಮಸುಕು ತೆಗೆದುಹಾಕಲ್ಪಡಸಾಧ್ಯವಿದೆ” ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿಯು ಭರವಸೆಯನ್ನು ವ್ಯಕ್ತಪಡಿಸಿತು. ದುರ್ದೆಶೆಯಲ್ಲಿರುವ ಈ ನೂರಾರು ಕೋಟಿ ಜನರು ಸದ್ಯಕ್ಕೆ ತಾಳಿಕೊಳ್ಳಬೇಕಾದ ಘೋರ ಪರಿಸ್ಥಿತಿಗಳು, “ಅನಿವಾರ್ಯವೂ ಅಲ್ಲ, ಬದಲಾಯಿಸಲಾಗದಂಥವೂ ಆಗಿರುವುದಿಲ್ಲ” ಎಂದು ಈ ಸಂಸ್ಥೆಯು ಹೇಳುತ್ತದೆ. ವಾಸ್ತವದಲ್ಲಿ, “ಎಲ್ಲ ಜನರು ಒಂದೇ ತಲೆಮಾರಿನೊಳಗೆ ಒಂದು ಹೊಸ ಜಗತ್ತನ್ನು ಸಾಕಾರಗೊಳಿಸಲಿಕ್ಕಾಗಿ” ಅದು ಒಂದು ಕರೆಯನ್ನು ಹೊರಡಿಸಿದೆ. ಮತ್ತು ಇದು, ಎಲ್ಲ ಮಾನವಕುಲವು, “ಬಡತನ ಮತ್ತು ಭೇದಭಾವ, ಹಿಂಸಾಚಾರ ಮತ್ತು ರೋಗದಿಂದ ಮುಕ್ತವಾಗಿರುವ” ಒಂದು ಜಗತ್ತಾಗಿರುವುದೆಂಬುದು ಅದರ ನಿರೀಕ್ಷೆಯಾಗಿದೆ.

ಇಂಥ ಭಾವಾವೇಶಗಳನ್ನು ವ್ಯಕ್ತಪಡಿಸುವವರಿಗೆ ಎಲ್ಲಿಂದ ಸ್ಫೂರ್ತಿ ಸಿಗುತ್ತದೆ? ಈಗಲೂ ಎಷ್ಟೊ ಜನರು, “ಅಂತ್ಯವಿಲ್ಲದಂತೆ ತೋರುವ ಸಂಘರ್ಷಗಳು ಮತ್ತು ಬಿಕ್ಕಟ್ಟುಗಳ ಸರಮಾಲೆಯ” ದುಃಖಕರ ಫಲಿತಾಂಶಗಳನ್ನು ತಗ್ಗಿಸಲು ಬಹಳಷ್ಟು ಕೆಲಸವನ್ನು ಮಾಡಲು ಆಸಕ್ತಿಯನ್ನು ತೋರಿಸುತ್ತಾರೆಂಬ ವಾಸ್ತವಾಂಶದಿಂದಲೇ. ಉದಾಹರಣೆಗೆ ಗತ 15 ವರ್ಷಗಳಿಂದ, ಷೆರ್ನೋಬಿಲ್‌ ಮಕ್ಕಳ ಕಾರ್ಯಯೋಜನೆಯು, “ಪರಮಾಣು ದುರಂತದ ಉಪಪರಿಣಾಮಗಳಿಂದಾಗಿ ಕ್ಯಾನ್ಸರ್‌ ರೋಗ ತಟ್ಟಿರುವ ನೂರಾರು ಮಕ್ಕಳ ನರಳಾಟವನ್ನು ಕಡಿಮೆಮಾಡಲು ಸಹಾಯಮಾಡಿದೆ.” (ದಿ ಐರಿಷ್‌ ಎಕ್ಸಾಮಿನರ್‌, ಏಪ್ರಿಲ್‌ 4, 2000) ದೊಡ್ಡ ಹಾಗೂ ಚಿಕ್ಕ ನೆರವು ಸಂಸ್ಥೆಗಳು, ಯುದ್ಧ ಹಾಗೂ ವಿಪತ್ತುಗಳಿಗೆ ಬಲಿಯಾಗಿರುವ ಅಸಂಖ್ಯಾತರ ಜೀವಿತಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತವೆ ನಿಜ.

ಹಾಗಿದ್ದರೂ, ಅಂಥ ಮಾನವ ಹಿತದ ಪ್ರಯತ್ನಗಳಲ್ಲಿ ಒಳಗೂಡಿರುವವರು ವಾಸ್ತವವಾದಿಗಳಾಗಿರುತ್ತಾರೆ. ಎದುರಿಸಲಾಗುತ್ತಿರುವ ಸಮಸ್ಯೆಗಳು “ಒಂದು ದಶಕದ ಹಿಂದೆ ಇದ್ದದ್ದಕ್ಕಿಂತಲೂ ಈಗ ಹೆಚ್ಚು ವ್ಯಾಪಕ ಮತ್ತು ಗಾಢವಾಗಿ ತಳವೂರಿಬಿಟ್ಟಿವೆ” ಎಂಬುದು ಅವರಿಗೆ ಗೊತ್ತಿದೆ. ಐರಿಷ್‌ ಚಾರಿಟಿ ಕನ್ಸರ್ನ್‌ನ ಮುಖ್ಯ ನಿರ್ವಹಣಾಧಿಕಾರಿಯಾಗಿರುವ ಡೇವಿಡ್‌ ಬೆಗ್‌ ಹೇಳುವುದೇನೆಂದರೆ, ಮೊಸಾಂಬೀಕ್‌ನಲ್ಲಿ ಮಹಾ ದುರಂತವನ್ನು ತಂದ ನೆರೆಹಾವಳಿಯಾದಾಗ, “ಸಿಬ್ಬಂದಿ, ಬೆಂಬಲಿಗರು ಮತ್ತು ದಾನಿಗಳು ತುಂಬ ಔದಾರ್ಯದಿಂದ ಸ್ಪಂದಿಸಿದರು.” ಅವರು ಕೂಡಿಸಿ ಹೇಳಿದ್ದು: “ಆದರೆ ಇಂಥ ವಿಪತ್ತುಗಳ ಪ್ರಮಾಣವನ್ನು ನಾವು ಒಂಟಿಗರಾಗಿ ನಿಭಾಯಿಸಲು ಸಾಧ್ಯವಿಲ್ಲ.” ಆಫ್ರಿಕದಲ್ಲಿನ ನೆರವು ಪ್ರಯತ್ನಗಳ ಕುರಿತಾಗಿ ಅವರು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುವುದು: “ಇರುವಂಥ ಕೆಲವೊಂದೇ ನಿರೀಕ್ಷೆಯ ಮೊಂಬತ್ತಿಗಳು ಸಹ ಮಿಣಿಮಿಣಿಗುಟ್ಟುತ್ತಿವೆ.” ಅವರ ಈ ಹೇಳಿಕೆಯು ಭೂಗೋಳದಾದ್ಯಂತ ಇರುವ ಸ್ಥಿತಿಯನ್ನೂ ಚೆನ್ನಾಗಿ ವರ್ಣಿಸುತ್ತದೆಂದು ಅನೇಕರಿಗೆ ಅನಿಸಬಹುದು.

ನಿರೀಕ್ಷಿತ ‘ಹೊಸ ಜಗತ್ತು ಒಂದೇ ತಲೆಮಾರಿನೊಳಗೆ’ ಬರುವುದನ್ನು ನೋಡಲು ನಾವು ವಾಸ್ತವಿಕವಾಗಿ ನಿರೀಕ್ಷಿಸಬಹುದೊ? ಸದ್ಯದಲ್ಲಿ ಮಾಡಲಾಗುತ್ತಿರುವ ಮಾನವ ಹಿತದ ಪ್ರಯತ್ನಗಳು ನಿಜವಾಗಿಯೂ ಶ್ಲಾಘನೀಯವಾಗಿದ್ದರೂ, ಒಂದು ನ್ಯಾಯಯುತ ಮತ್ತು ಶಾಂತಿಪೂರ್ಣ ಹೊಸ ಜಗತ್ತಿನ ಕುರಿತಾದ ಇನ್ನೊಂದು ಪ್ರತೀಕ್ಷೆಯನ್ನು ಪರಿಗಣಿಸುವುದು ಖಂಡಿತವಾಗಿಯೂ ಬುದ್ಧಿವಂತಿಕೆಯ ಮಾತಾಗಿದೆ. ಆ ಪ್ರತೀಕ್ಷೆಯ ಕಡೆಗೆ ಬೈಬಲ್‌ ಕೈತೋರಿಸುತ್ತದೆ ಮತ್ತು ಇದನ್ನು ಮುಂದಿನ ಲೇಖನವು ಪರಿಗಣಿಸಲಿದೆ.

[ಪುಟ 2ರಲ್ಲಿರುವ ಚಿತ್ರ ಕೃಪೆ]

ಪುಟ 3, ಮಕ್ಕಳು: UN/DPI Photo by James Bu