ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಬೋಧಿಸುವಿಕೆಯು ಪರಿಣಾಮಕಾರಿಯಾಗಿದೆಯೋ?

ನಿಮ್ಮ ಬೋಧಿಸುವಿಕೆಯು ಪರಿಣಾಮಕಾರಿಯಾಗಿದೆಯೋ?

ನಿಮ್ಮ ಬೋಧಿಸುವಿಕೆಯು ಪರಿಣಾಮಕಾರಿಯಾಗಿದೆಯೋ?

ಹೆತ್ತವರು, ಹಿರಿಯರು, ಸುವಾರ್ತೆಯ ಘೋಷಕರು​—ಇವರೆಲ್ಲರೂ ಬೋಧಕರಾಗಿರುವಂತೆ ಅಪೇಕ್ಷಿಸಲಾಗುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಬೋಧಿಸುತ್ತಾರೆ, ಹಿರಿಯರು ಕ್ರೈಸ್ತ ಸಭೆಯ ಸದಸ್ಯರಿಗೆ ಬೋಧಿಸುತ್ತಾರೆ, ಮತ್ತು ಸುವಾರ್ತೆಯ ಪ್ರಚಾರಕರು ಹೊಸ ಆಸಕ್ತ ಜನರಿಗೆ ಬೋಧಿಸುತ್ತಾರೆ. (ಧರ್ಮೋಪದೇಶಕಾಂಡ 6:6, 7; ಮತ್ತಾಯ 28:19, 20; 1 ತಿಮೊಥೆಯ 4:13, 16) ನಿಮ್ಮ ಬೋಧಿಸುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿಕ್ಕಾಗಿ ನೀವೇನು ಮಾಡಬಹುದು? ನೀವು ಮಾಡಬಹುದಾದ ಒಂದು ವಿಷಯವು, ದೇವರ ವಾಕ್ಯದಲ್ಲಿ ಸೂಚಿಸಲ್ಪಟ್ಟಿರುವ ಸಮರ್ಥ ಬೋಧಕರ ಮಾದರಿ ಮತ್ತು ವಿಧಾನವನ್ನು ಅನುಕರಿಸುವುದೇ ಆಗಿದೆ. ಎಜ್ರನು ಇಂತಹ ಒಬ್ಬ ಬೋಧಕನಾಗಿದ್ದನು.

ಎಜ್ರನ ಮಾದರಿಯಿಂದ ಕಲಿಯುವುದು

ಎಜ್ರನು 2,500 ವರ್ಷಗಳಿಗೆ ಮುಂಚೆ ಬಾಬೆಲಿನಲ್ಲಿ ಜೀವಿಸಿದ ಒಬ್ಬ ಆರೋನ್ಯ ಯಾಜಕನಾಗಿದ್ದನು. ಸಾ.ಶ.ಪೂ. 468ನೆಯ ಇಸವಿಯಲ್ಲಿ, ಯೆರೂಸಲೇಮ್‌ನಲ್ಲಿ ವಾಸಮಾಡುತ್ತಿದ್ದ ಯೆಹೂದ್ಯರ ನಡುವೆ ಶುದ್ಧಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಅವನು ಅಲ್ಲಿಗೆ ಹೋದನು. (ಎಜ್ರ 7:1, 6, 12, 13) ಈ ಕೆಲಸವು ಅವನು ದೇವರ ಧರ್ಮಶಾಸ್ತ್ರವನ್ನು ಜನರಿಗೆ ಬೋಧಿಸುವುದನ್ನು ಆವಶ್ಯಪಡಿಸಿತು. ತನ್ನ ಬೋಧಿಸುವಿಕೆಯು ಪರಿಣಾಮಕಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೋಸ್ಕರ ಎಜ್ರನು ಏನು ಮಾಡಿದನು? ಎಜ್ರ 7:10ರಲ್ಲಿ (NW) ದಾಖಲಿಸಲ್ಪಟ್ಟಿರುವಂತೆ ಈ ಆವಶ್ಯಕ ಅಂಶಗಳನ್ನು ಗಮನಿಸಿರಿ.

“ಎಜ್ರನು ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿ, ಅದನ್ನು ಮಾಡಿ, ಇಸ್ರಾಯೇಲಿನಲ್ಲಿ ವಿಧಿ ಮತ್ತು ನ್ಯಾಯವನ್ನು ಬೋಧಿಸಲಿಕ್ಕಾಗಿ ತನ್ನ ಹೃದಯವನ್ನು ಸಿದ್ಧಮಾಡಿಕೊಂಡನು.” ನಾವು ಈ ಅಂಶಗಳಲ್ಲಿ ಪ್ರತಿಯೊಂದರ ಕುರಿತು ಸಂಕ್ಷಿಪ್ತವಾಗಿ ಪರಿಶೀಲಿಸಿ, ಇವುಗಳಿಂದ ನಾವೇನನ್ನು ಕಲಿಯಬಲ್ಲೆವು ಎಂಬುದನ್ನು ನೋಡೋಣ.

‘ಎಜ್ರನು ತನ್ನ ಹೃದಯವನ್ನು ಸಿದ್ಧಮಾಡಿಕೊಂಡನು’

ವ್ಯವಸಾಯಗಾರನು ಬೀಜವನ್ನು ಬಿತ್ತುವ ಮೊದಲು ನೇಗಿಲನ್ನು ಉಪಯೋಗಿಸಿ ಮಣ್ಣನ್ನು ಸಿದ್ಧಮಾಡುವ ಪ್ರಕಾರವೇ, ಎಜ್ರನು ದೇವರ ವಾಕ್ಯವನ್ನು ಸ್ವೀಕರಿಸುವುದಕ್ಕೋಸ್ಕರ ಪ್ರಾರ್ಥನಾಪೂರ್ವಕವಾಗಿ ತನ್ನ ಹೃದಯವನ್ನು ಸಿದ್ಧಮಾಡಿಕೊಂಡನು. (ಎಜ್ರ 10:1) ಬೇರೆ ಮಾತುಗಳಲ್ಲಿ, ಅವನು ಯೆಹೋವನ ಬೋಧನೆಗೆ ‘ತನ್ನ ಹೃದಯವನ್ನು ತಿರುಗಿಸಿದನು.’​—ಜ್ಞಾನೋಕ್ತಿ 2:2.

ತದ್ರೀತಿಯಲ್ಲಿ, ರಾಜ ಯೆಹೋಷಾಫಾಟನು “ಸತ್ಯದೇವರನ್ನು ಹುಡುಕಲಿಕ್ಕಾಗಿ [ತನ್ನ] ಹೃದಯವನ್ನು ಸಿದ್ಧಮಾಡಿ”ಕೊಂಡನು ಎಂಬುದಾಗಿ ಬೈಬಲು ತಿಳಿಸುತ್ತದೆ. (2 ಪೂರ್ವಕಾಲವೃತ್ತಾಂತ 19:​3, NW) ಇದಕ್ಕೆ ತದ್ವಿರುದ್ಧವಾಗಿ, “ತಮ್ಮ ಹೃದಯವನ್ನು ಸಿದ್ಧಮಾಡಿಕೊಂಡಿರದ” ಒಂದು ಇಸ್ರಾಯೇಲ್ಯ ವಂಶವನ್ನು “ಮೊಂಡರೂ ಅವಿಧೇಯರೂ” ಎಂದು ವರ್ಣಿಸಲಾಯಿತು. (ಕೀರ್ತನೆ 78:​8, NW) “ಆಂತರ್ಯದಲ್ಲಿರುವ ಶಾಂತಮನಸ್ಸು ಎಂಬ ಒಳಗಣ ಭೂಷಣ”ವನ್ನು ಯೆಹೋವನು ನೋಡುತ್ತಾನೆ. (1 ಪೇತ್ರ 3:4) ವಾಸ್ತವದಲ್ಲಿ, ‘ಆತನು ತನ್ನ ಮಾರ್ಗವನ್ನು ದೀನರಿಗೆ ತೋರಿಸುವನು [“ಬೋಧಿಸುವನು,” NW].’ (ಕೀರ್ತನೆ 25:9) ಆದುದರಿಂದ, ಇಂದಿನ ಬೋಧಕರು ಎಜ್ರನ ಮಾದರಿಯನ್ನು ಅನುಕರಿಸುತ್ತಾ, ಮೊದಲು ಪ್ರಾರ್ಥನಾಪೂರ್ವಕವಾಗಿ ತಮ್ಮ ಹೃದಯವನ್ನು ಯೋಗ್ಯ ಸ್ಥಿತಿಗೆ ತರುವುದು ಎಷ್ಟು ಪ್ರಾಮುಖ್ಯವಾಗಿದೆ!

‘ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಲು’

ಒಬ್ಬ ಸಮರ್ಥ ಬೋಧಕನಾಗಿರುವುದಕ್ಕೋಸ್ಕರ ಎಜ್ರನು ದೇವರ ವಾಕ್ಯವನ್ನು ವಿಚಾರಿಸಿದನು. ನೀವು ಒಬ್ಬ ಡಾಕ್ಟರನ ಬಳಿ ವಿಚಾರಿಸುವುದಾದರೆ, ಅವನಿಗೆ ಜಾಗರೂಕತೆಯಿಂದ ಕಿವಿಗೊಟ್ಟು, ಅವನು ಹೇಳುತ್ತಿರುವ ವಿಷಯಗಳ ಕುರಿತು ಅಥವಾ ಅವನು ಶಿಫಾರಸ್ಸು ಮಾಡುತ್ತಿರುವ ಚಿಕಿತ್ಸೆಯ ಬಗ್ಗೆ ನೀವು ಎಲ್ಲವನ್ನೂ ಅರ್ಥಮಾಡಿಕೊಂಡಿರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳುವುದಿಲ್ಲವೋ? ಖಂಡಿತವಾಗಿಯೂ ನೀವು ಹೀಗೆ ಮಾಡುವಿರಿ; ಏಕೆಂದರೆ ನಿಮ್ಮ ಆರೋಗ್ಯವು ಅಪಾಯಕ್ಕೊಳಗಾಗಿದೆ. ಆದುದರಿಂದ, ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ನಮಗೆ ಹೇಳುತ್ತಿರುವ ಅಥವಾ ಚಿಕಿತ್ಸಾ ವಿಧಾನದಂತೆ ತಿಳಿಸುತ್ತಿರುವ ವಿಷಯಗಳಿಗೆ ನಾವು ಇನ್ನಷ್ಟು ತೀವ್ರವಾದ ಗಮನವನ್ನು ಕೊಡಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ, ಆತನ ಬುದ್ಧಿವಾದವು ನಮ್ಮ ಸ್ವಂತ ಜೀವಿತಗಳನ್ನು ತಟ್ಟುವಂಥದ್ದಾಗಿದೆ. (ಮತ್ತಾಯ 4:4; 24:45-47) ಒಬ್ಬ ಡಾಕ್ಟರನ ಸಲಹೆಯು ತಪ್ಪಾಗಿರಬಹುದು, ಆದರೆ “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು” ಎಂಬುದಂತೂ ಖಂಡಿತ. (ಕೀರ್ತನೆ 19:7) ನಮಗೆ ಮತ್ತೊಬ್ಬನ ಅಭಿಪ್ರಾಯವನ್ನು ಪಡೆದುಕೊಳ್ಳುವ ಜರೂರಿಯೇ ಏಳುವುದಿಲ್ಲ.

ಪೂರ್ವಕಾಲವೃತ್ತಾಂತಗಳ ಬೈಬಲ್‌ ಪುಸ್ತಕಗಳು, (ಇವುಗಳನ್ನು ಮೂಲಭೂತವಾಗಿ ಎಜ್ರನು ಒಂದೇ ಸಂಪುಟವಾಗಿ ಬರೆದನು) ಎಜ್ರನು ನಿಜವಾಗಿ ಒಬ್ಬ ಶ್ರದ್ಧಾಶೀಲ ವಿದ್ಯಾರ್ಥಿಯಾಗಿದ್ದನು ಎಂಬುದನ್ನು ತೋರಿಸುತ್ತವೆ. ಈ ಪುಸ್ತಕಗಳನ್ನು ಬರೆಯುವುದಕ್ಕೋಸ್ಕರ ಅವನು ಅನೇಕ ಮೂಲಗಳನ್ನು ಸಂಪರ್ಕಿಸಿದನು. * ಇತ್ತೀಚೆಗೆ ಬಾಬೆಲ್‌ನಿಂದ ಬಂದಿದ್ದ ಯೆಹೂದ್ಯರಿಗೆ ತಮ್ಮ ದೇಶದ ಇತಿಹಾಸದ ಒಂದು ಸಾರಾಂಶದ ಆವಶ್ಯಕತೆಯಿತ್ತು. ಅವರಿಗೆ ತಮ್ಮ ಧರ್ಮದ ಆಚರಣೆಗಳ ವಿಷಯದಲ್ಲಿ, ದೇವಾಲಯದಲ್ಲಿ ಸಲ್ಲಿಸುವ ಸೇವೆಯ ವಿಷಯದಲ್ಲಿ, ಮತ್ತು ಲೇವಿಯರ ವೃತ್ತಿಗಳ ವಿಷಯದಲ್ಲಿ ಸಾಕಷ್ಟು ತಿಳಿವಳಿಕೆಯಿರಲಿಲ್ಲ. ವಂಶಾವಳಿಯ ದಾಖಲೆಗಳು ಅವರಿಗೆ ಅತಿ ಪ್ರಾಮುಖ್ಯವಾದ ವಿಷಯಗಳಾಗಿದ್ದವು. ಈ ವಿಚಾರಗಳಿಗೆ ಎಜ್ರನು ವಿಶೇಷ ಗಮನವನ್ನು ಕೊಟ್ಟನು. ಮೆಸ್ಸೀಯನ ಬರೋಣದ ತನಕ, ಯೆಹೂದ್ಯರು ತಮ್ಮ ಸ್ವಂತ ದೇಶ, ದೇವಾಲಯ, ಯಾಜಕತ್ವ, ಮತ್ತು ಅಧಿಪತಿಯುಳ್ಳ ಜನಾಂಗವಾಗಿ ಉಳಿಯಬೇಕಿತ್ತು. ಎಜ್ರನು ಸಂಗ್ರಹಿಸಿದ ಮಾಹಿತಿಯ ಫಲಿತಾಂಶವಾಗಿ, ಐಕ್ಯತೆ ಮತ್ತು ಸತ್ಯಾರಾಧನೆಯು ಜೀವದಿಂದುಳಿಯಲು ಸಾಧ್ಯವಾಯಿತು.

ನಿಮ್ಮ ಅಧ್ಯಯನ ರೂಢಿಗಳು ಎಜ್ರನ ರೂಢಿಗಳೊಂದಿಗೆ ಹೇಗೆ ಹೋಲುತ್ತವೆ? ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡುವುದು ನೀವು ಅದನ್ನು ಪರಿಣಾಮಕಾರಿಯಾಗಿ ಬೋಧಿಸುವುದರಲ್ಲಿ ಸಹಾಯಕರವಾಗಿರುವುದು.

ಒಂದು ಕುಟುಂಬವಾಗಿ ‘ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿ’

ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸುವುದು ಕೇವಲ ವೈಯಕ್ತಿಕ ಅಧ್ಯಯನಕ್ಕೆ ನಿರ್ಬಂಧಿತವಾಗಿಲ್ಲ. ಇದನ್ನು ಮಾಡಲು ಕುಟುಂಬ ಅಧ್ಯಯನವು ಕೂಡ ಒಂದು ಅತ್ಯುತ್ತಮವಾದ ಸಂದರ್ಭವಾಗಿದೆ.

ಯಾನ್‌ ಮತ್ತು ಯುಲ್‌ಯಾ​—ನೆದರ್ಲೆಂಡ್ಸ್‌ನಲ್ಲಿರುವ ಒಬ್ಬ ದಂಪತಿ​—ತಮ್ಮ ಇಬ್ಬರು ಗಂಡು ಮಕ್ಕಳಿಗೆ ಅವರು ಹುಟ್ಟಿದಂದಿನಿಂದಲೇ ಗಟ್ಟಿಯಾಗಿ ಓದಿಹೇಳಿದ್ದಾರೆ. ಈಗ, ಈವೋ 15 ವರ್ಷ ಪ್ರಾಯದವನಾಗಿದ್ದಾನೆ ಮತ್ತು ಆ್ಯಡೊ 14 ವರ್ಷದವನಾಗಿದ್ದಾನೆ. ಇದು ವರೆಗೂ ವಾರಕ್ಕೊಮ್ಮೆ ಅವರ ಕುಟುಂಬ ಅಧ್ಯಯನವು ನಡೆಸಲ್ಪಡುತ್ತದೆ. ಯಾನ್‌ ವಿವರಿಸುವುದು: “ನಮ್ಮ ಮುಖ್ಯ ಗುರಿಯು, ಅಧ್ಯಯನದ ಸಮಯದಲ್ಲಿ ಅತಿ ಹೆಚ್ಚು ವಿಷಯಭಾಗವನ್ನು ಆವರಿಸುವುದು ಆಗಿರುವುದಿಲ್ಲ, ಬದಲಿಗೆ ಚರ್ಚಿಸಲ್ಪಡುತ್ತಿರುವ ವಿಷಯವನ್ನು ಹುಡುಗರು ಗ್ರಹಿಸಬೇಕೆಂಬುದೇ.” ಅವನು ಕೂಡಿಸುವುದು: “ಹುಡುಗರು ತುಂಬ ಸಂಶೋಧನೆಯನ್ನು ಮಾಡುತ್ತಾರೆ. ಅವರು ಅಪರಿಚಿತ ಪದಗಳನ್ನು ಮತ್ತು ಬೈಬಲಿನಲ್ಲಿರುವ ವ್ಯಕ್ತಿಗಳನ್ನು​—ಅವರು ಯಾವಾಗ ಜೀವಿಸಿದರು, ಯಾರಾಗಿದ್ದರು, ಅವರ ವೃತ್ತಿ ಯಾವುದಾಗಿತ್ತು, ಇತ್ಯಾದಿಯ ಕುರಿತು ಶೋಧಿಸಿ ನೋಡುತ್ತಾರೆ. ಓದಲು ಕಲಿತಾಗಿನಿಂದ ಹಿಡಿದು, ಅವರು ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌), ಶಬ್ದಕೋಶಗಳು, ಮತ್ತು ವಿಶ್ವಕೋಶಗಳು ಎಂಬಂತಹ ಪುಸ್ತಕಗಳನ್ನು ವಿಚಾರಿಸಿ ನೋಡಿದ್ದಾರೆ. ಇದು ಕುಟುಂಬ ಅಧ್ಯಯನವನ್ನು ಹೆಚ್ಚು ಆನಂದದಾಯಕವಾಗಿ ಮಾಡುತ್ತದೆ. ಹುಡುಗರು ಅದಕ್ಕಾಗಿ ಕಾತರದಿಂದ ಎದುರುನೋಡುತ್ತಿರುತ್ತಾರೆ.” ಇದರ ಒಂದು ಹೆಚ್ಚಿನ ಪ್ರಯೋಜನದೋಪಾದಿ, ಭಾಷೀಯ ಸಾಮರ್ಥ್ಯಗಳಲ್ಲಿ ಈ ಹುಡುಗರು ಈಗ ತಮ್ಮ ತರಗತಿಗಳಲ್ಲಿ ಬೇರೆಲ್ಲರಿಗಿಂತಲೂ ಮುಂದಿದ್ದಾರೆ.

ಜಾನ್‌ ಮತ್ತು ಟೀನಿ​—ನೆದರ್ಲೆಂಡ್ಸ್‌ನಲ್ಲಿರುವ ಮತ್ತೊಬ್ಬ ದಂಪತಿ​—ತಮ್ಮ ಮಗ ಎಸ್‌ಲೀ (ಈಗ 24 ವರ್ಷ ಪ್ರಾಯದವನು ಮತ್ತು ಇನ್ನೊಂದು ಸಭೆಯಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದಾನೆ) ಮತ್ತು ಅವರ ಮಗಳು ಲಿಂಡಳೊಂದಿಗೆ (ಈಗ 20 ವರ್ಷ ಪ್ರಾಯದವಳು ಮತ್ತು ಒಬ್ಬ ಒಳ್ಳೇ ಯುವ ಸಹೋದರನಿಗೆ ವಿವಾಹವಾಗಿದ್ದಾಳೆ) ಅಧ್ಯಯನ ಮಾಡಿದ್ದರು. ಆದರೆ, ವಾಡಿಕೆಯ ಪ್ರಕಾರ ಒಂದು ನಿರ್ದಿಷ್ಟವಾದ ಪ್ರಕಾಶನವನ್ನು ಪ್ರಶ್ನೆ ಮತ್ತು ಉತ್ತರ ಎಂಬ ವಿಧಾನವನ್ನು ಉಪಯೋಗಿಸಿ ಅಧ್ಯಯನ ಮಾಡುವ ಬದಲು, ಅವರು ಕುಟುಂಬ ಅಧ್ಯಯನವನ್ನು ಮಕ್ಕಳ ವಯಸ್ಸು ಮತ್ತು ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಂಡಿದ್ದರು. ಅವರು ಯಾವ ವಿಧಾನವನ್ನು ಉಪಯೋಗಿಸಿದರು?

ಜಾನ್‌ ವಿವರಿಸಿದ್ದೇನೆಂದರೆ, ಅವನ ಮಗ ಮತ್ತು ಮಗಳು, “ವಾಚಕರಿಂದ ಪ್ರಶ್ನೆಗಳು” (ಕಾವಲಿನಬುರುಜು ಪತ್ರಿಕೆಯಿಂದ) ಮತ್ತು “ಬೈಬಲಿನ ದೃಷ್ಟಿಕೋನ” (ಎಚ್ಚರ! ಪತ್ರಿಕೆಯಿಂದ) ಎಂಬ ಭಾಗಗಳಿಂದ ಒಂದು ಆಸಕ್ತಿಕರ ವಿಷಯವಸ್ತುವನ್ನು ಆರಿಸಿಕೊಳ್ಳುತ್ತಿದ್ದರು. ನಂತರ, ಅವರು ಏನನ್ನು ತಯಾರಿಸಿದ್ದರೋ ಅದನ್ನು ಪ್ರಸ್ತುತಪಡಿಸುತ್ತಿದ್ದರು, ಮತ್ತು ಇದು ಯಾವಾಗಲೂ ಆಸಕ್ತಿಕರ ಕೌಟುಂಬಿಕ ಚರ್ಚೆಗಳಲ್ಲಿ ಫಲಿಸುತ್ತಿತ್ತು. ಈ ರೀತಿಯಲ್ಲಿ ಆ ಯುವ ಜನರು ಸಂಶೋಧನೆ ನಡೆಸುವುದರಲ್ಲಿ ಮತ್ತು ತಮ್ಮ ಅಧ್ಯಯನದ ಫಲಿತಾಂಶಗಳನ್ನು ಚರ್ಚಿಸುವುದರಲ್ಲಿ ಅನುಭವವನ್ನು ಪಡೆದುಕೊಂಡರು. ನೀವು ನಿಮ್ಮ ಮಕ್ಕಳೊಂದಿಗೆ ‘ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸು’ತ್ತೀರೋ? ಇದು ವೈಯಕ್ತಿಕವಾಗಿ ನಿಮ್ಮ ಬೋಧನಾ ಕೌಶಲವನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ನಿಮ್ಮ ಮಕ್ಕಳೂ ಹೆಚ್ಚು ಪರಿಣಾಮಕಾರಿಯಾದ ಬೋಧಕರಾಗಲು ಅವರಿಗೆ ಸಹಾಯಮಾಡುವುದು.

‘ಅದನ್ನು ಮಾಡಲು’

ಎಜ್ರನು ಏನನ್ನು ಕಲಿತನೋ ಅದನ್ನು ಅನ್ವಯಿಸಿದನು. ಉದಾಹರಣೆಗೆ, ಬಾಬೆಲ್‌ನಲ್ಲೇ ಇದ್ದಾಗ, ಅವನು ಒಂದು ಸುಸ್ಥಾಪಿತ ಜೀವನವನ್ನು ನಡೆಸುತ್ತಿದ್ದಿರಬಹುದು. ಆದರೆ, ಹೊರದೇಶದಲ್ಲಿರುವ ತನ್ನ ಜನರಿಗೆ ಅವನು ನೆರವಾಗಬಲ್ಲನು ಎಂಬುದನ್ನು ಅವನು ಗ್ರಹಿಸಿದಾಗ, ಅವನು ಬಾಬೆಲಿನ ಐಷಾರಾಮದ ಜೀವನವನ್ನು ಬಿಟ್ಟು, ದೂರದೇಶವಾದ ಯೆರೂಸಲೇಮ್‌ ಮತ್ತು ಅದರ ಎಲ್ಲ ಅನನುಕೂಲತೆಗಳು, ಸಮಸ್ಯೆಗಳು, ಹಾಗೂ ಅಪಾಯಗಳನ್ನು ಸ್ವೀಕರಿಸಿದನು. ಸ್ಪಷ್ಟವಾಗಿಯೇ, ಎಜ್ರನು ಬೈಬಲ್‌ ಜ್ಞಾನವನ್ನು ಸಂಗ್ರಹಿಸುತ್ತಿದ್ದನು ಮಾತ್ರವಲ್ಲ, ಅವನು ಏನನ್ನು ಕಲಿತನೋ ಅದಕ್ಕನುಸಾರ ಕ್ರಿಯೆಗೈಯಲೂ ಸಿದ್ಧನಿದ್ದನು.​—1 ತಿಮೊಥೆಯ 3:13.

ನಂತರ, ಯೆರೂಸಲೇಮ್‌ನಲ್ಲಿ ಜೀವಿಸುತ್ತಿದ್ದಾಗ, ಎಜ್ರನು ಏನನ್ನು ಕಲಿತಿದ್ದನೋ ಮತ್ತು ಬೋಧಿಸುತ್ತಿದ್ದನೋ ಅದನ್ನು ಅನ್ವಯಿಸುತ್ತಿದ್ದನು ಎಂಬುದನ್ನು ಪುನಃ ತೋರಿಸಿದನು. ಇದು, ಇಸ್ರಾಯೇಲ್ಯ ಪುರುಷರು ಯೆಹೂದ್ಯೇತರ ಸ್ತ್ರೀಯರೊಂದಿಗೆ ಮದುವೆಮಾಡಿಕೊಂಡಿರುವುದರ ಸುದ್ದಿ ಅವನ ಕಿವಿಗೆ ಬಿದ್ದಾಗ ವ್ಯಕ್ತವಾಯಿತು. ‘ಅವನು ತನ್ನ ಬಟ್ಟೆಮೇಲಂಗಿಗಳನ್ನು ಹರಿದುಕೊಂಡು ತಲೆಯ ಮತ್ತು ಗಡ್ಡದ ಕೂದಲುಗಳನ್ನು ಕಿತ್ತುಕೊಂಡು ಸಂಜೆಯ ವರೆಗೆ ಸ್ತಬ್ಧವಾಗಿ ಕೂತುಕೊಂಡಿದ್ದನು,’ ಎಂದು ಬೈಬಲ್‌ ದಾಖಲೆಯು ನಮಗೆ ಹೇಳುತ್ತದೆ. ಅವನಿಗೆ “ಮನಗುಂದಿದ” ಮತ್ತು ಯೆಹೋವನ “ಕಡೆಗೆ ಮುಖವನ್ನೆತ್ತುವದಕ್ಕೆ ನಾಚಿ”ಕೊಳ್ಳುವ ಅನಿಸಿಕೆಯೂ ಆಯಿತು.​—ಎಜ್ರ 9:1-6.

ದೇವರ ಧರ್ಮಶಾಸ್ತ್ರದ ಅಧ್ಯಯನವು ಅವನನ್ನು ಎಷ್ಟು ಪ್ರಭಾವಿಸಿತ್ತು! ಜನರ ಅವಿಧೇಯತೆಯ ಘೋರ ಪರಿಣಾಮಗಳ ಪೂರ್ಣ ಅರಿವು ಎಜ್ರನಿಗಿತ್ತು. ಪುನಃಸ್ಥಾಪಿತ ಇಸ್ರಾಯೇಲ್ಯರ ಸಂಖ್ಯೆಯು ಚಿಕ್ಕದಾಗಿತ್ತು. ಅವರು ಮಿಶ್ರ ವಿವಾಹಗಳಲ್ಲಿ ತೊಡಗುವುದಾದರೆ, ಅವರು ಕಾಲಕ್ರಮೇಣ ಸುತ್ತಲಿನ ವಿಧರ್ಮಿ ಜನಾಂಗಗಳೊಂದಿಗೆ ಬೆರೆತುಹೋಗುವರು ಮತ್ತು ಶುದ್ಧಾರಾಧನೆಯು ಲೋಕದ ಸಮ್ಮುಖದಿಂದ ಸುಲಭವಾಗಿ ಮಾಯವಾಗಬಹುದು!

ಸಂತೋಷಕರವಾಗಿ, ದೈವಿಕ ಭಯ ಮತ್ತು ಹುರುಪಿನ ವಿಷಯದಲ್ಲಿ ಎಜ್ರನ ಮಾದರಿಯು ಇಸ್ರಾಯೇಲ್ಯರು ತಮ್ಮ ಮಾರ್ಗಗಳನ್ನು ತಿದ್ದಿಕೊಳ್ಳುವಂತೆ ಪ್ರೇರಿಸಿತು. ಅವರು ತಮ್ಮ ವಿದೇಶೀ ಹೆಂಡತಿಯರನ್ನು ತೊರೆದುಬಿಟ್ಟರು. ಮೂರೇ ತಿಂಗಳುಗಳಲ್ಲಿ ಎಲ್ಲವೂ ಯಥಾಕ್ರಮಕ್ಕೆ ತರಲ್ಪಟ್ಟಿತು. ದೇವರ ಧರ್ಮಶಾಸ್ತ್ರಕ್ಕೆ ಎಜ್ರನು ತೋರಿಸಿದ ವೈಯಕ್ತಿಕ ನಿಷ್ಠೆಯು, ಅವನ ಬೋಧಿಸುವಿಕೆಯನ್ನು ಪರಿಣಾಮಕಾರಿಯಾಗಿ ಮಾಡುವುದರಲ್ಲಿ ಹೆಚ್ಚಿನದ್ದನ್ನು ಮಾಡಿತು.

ಇಂದೂ ಇದೇ ವಿಷಯವು ಸತ್ಯವಾಗಿದೆ. ಒಬ್ಬ ಕ್ರೈಸ್ತ ಹೆತ್ತವನು ಹೇಳಿದ್ದು: “ಮಕ್ಕಳು ನೀವು ಹೇಳುವಂತೆ ಮಾಡುವುದಿಲ್ಲ; ನೀವು ಮಾಡುವಂತೆ ಮಾಡುತ್ತಾರೆ!” ಇದೇ ಮೂಲತತ್ತ್ವವು ಕ್ರೈಸ್ತ ಸಭೆಯಲ್ಲಿಯೂ ಅನ್ವಯಿಸುತ್ತದೆ. ಒಳ್ಳೆಯ ಮಾದರಿಯನ್ನು ಇಡುವ ಹಿರಿಯರು, ತಮ್ಮ ಬೋಧಿಸುವಿಕೆಗೆ ಸಭೆಯು ಪ್ರತಿಕ್ರಿಯಿಸುವುದನ್ನು ನಿರೀಕ್ಷಿಸಬಲ್ಲರು.

‘ಇಸ್ರಾಯೇಲಿನಲ್ಲಿ ವಿಧಿ ಮತ್ತು ನ್ಯಾಯವನ್ನು ಬೋಧಿಸಲು’

ಎಜ್ರನ ಬೋಧಿಸುವಿಕೆಯು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕೆ ಮತ್ತೊಂದು ಕಾರಣವೂ ಇದೆ. ಅವನು ತನ್ನ ಸ್ವಂತ ವಿಚಾರಗಳನ್ನು ಬೋಧಿಸಲಿಲ್ಲ, ಬದಲಿಗೆ ಅವನು “ವಿಧಿ ಮತ್ತು ನ್ಯಾಯವನ್ನು” ಬೋಧಿಸಿದನು. ಅಂದರೆ, ಯೆಹೋವನ ವಿಧಿಗಳು ಅಥವಾ ನಿಯಮಗಳನ್ನು ಬೋಧಿಸಿದನು. ಇದು ಅವನ ಯಾಜಕೀಯ ಜವಾಬ್ದಾರಿಯಾಗಿತ್ತು. (ಮಲಾಕಿಯ 2:7) ಅವನು ನ್ಯಾಯವನ್ನೂ ಬೋಧಿಸಿದನು. ಮತ್ತು ಅವನು ಏನನ್ನು ಬೋಧಿಸಿದನೋ ಅದಕ್ಕೆ ಒಂದು ಮಾದರಿಯನ್ನು ಒದಗಿಸುತ್ತಾ, ಯಾವುದು ಸರಿಯಾಗಿದೆಯೋ ಅದಕ್ಕೆ ನ್ಯಾಯಸಮ್ಮತವಾದ ಮತ್ತು ನಿಷ್ಪಕ್ಷಪಾತವಾದ ರೀತಿಯಲ್ಲಿ ಒಂದು ನಿಯಮಿತ ಮಟ್ಟಕ್ಕೆ ಅಂಟಿಕೊಂಡಿದ್ದನು. ಅಧಿಕಾರವಿರುವವರು ನ್ಯಾಯವನ್ನು ತೋರಿಸುವಾಗ, ಸ್ಥಿರತೆಯು ನೆಲೆಗೊಳ್ಳುತ್ತದೆ ಮತ್ತು ಶಾಶ್ವತ ಪರಿಣಾಮಗಳು ಉಂಟುಮಾಡಲ್ಪಡುತ್ತವೆ. (ಜ್ಞಾನೋಕ್ತಿ 29:4) ತದ್ರೀತಿಯಲ್ಲಿ, ದೇವರ ವಾಕ್ಯದೊಂದಿಗೆ ಸುಪರಿಚಿತರಾಗಿರುವ ಕ್ರೈಸ್ತ ಹಿರಿಯರು, ಹೆತ್ತವರು, ಮತ್ತು ರಾಜ್ಯ ಘೋಷಕರು ಸಭೆಯಲ್ಲಿ, ತಮ್ಮ ಕುಟುಂಬಗಳಲ್ಲಿ, ಮತ್ತು ಆಸಕ್ತ ಜನರಿಗೆ ಯೆಹೋವನ ವಿಧಿಗಳು ಹಾಗೂ ನ್ಯಾಯವನ್ನು ಬೋಧಿಸುವಾಗ ಆತ್ಮಿಕ ಸ್ಥಿರತೆಯನ್ನು ಕಟ್ಟುವರು.

ನೀವು ಎಜ್ರನ ನಂಬಿಗಸ್ತ ಮಾದರಿಯನ್ನು ಸಂಪೂರ್ಣವಾಗಿ ಅನುಕರಿಸುವುದಾದರೆ, ನಿಮ್ಮ ಬೋಧಿಸುವಿಕೆಯೂ ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ? ಆದುದರಿಂದ, ‘ನಿಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳಿರಿ, ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿರಿ, ಅದನ್ನು ಮಾಡಿರಿ, ಮತ್ತು ಯೆಹೋವನ ವಿಧಿ ಹಾಗೂ ನ್ಯಾಯವನ್ನು ಬೋಧಿಸಿರಿ.’​—ಎಜ್ರ 7:​10, NW.

[ಪಾದಟಿಪ್ಪಣಿ]

^ ಪ್ಯಾರ. 11 ಇಪ್ಪತ್ತು ಮೂಲಗಳ ಒಂದು ಪಟ್ಟಿಯನ್ನು, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 1ರ 444-5ನೆಯ ಪುಟಗಳಲ್ಲಿ ನೋಡಬಹುದು.

[ಪುಟ 22ರಲ್ಲಿರುವ ಚೌಕ/ಚಿತ್ರ]

ಎಜ್ರನ ಬೋಧಿಸುವಿಕೆಯನ್ನು ಪರಿಣಾಮಕಾರಿಯಾಗಿ ಮಾಡಿದ್ದು ಯಾವುದು? 

1. ಅವನು ತನ್ನ ಹೃದಯವನ್ನು ಯೋಗ್ಯ ಸ್ಥಿತಿಗೆ ತಂದನು

2. ಅವನು ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿದನು

3. ಅವನು ಏನನ್ನು ಕಲಿತನೋ ಅದನ್ನು ಅನ್ವಯಿಸುವುದರಲ್ಲಿ ಒಂದು ಒಳ್ಳೆಯ ಮಾದರಿಯನ್ನಿಟ್ಟನು

4. ಅವನು ಶಾಸ್ತ್ರೀಯ ನೋಟವನ್ನು ಬೋಧಿಸಲಿಕ್ಕಾಗಿ ಶ್ರದ್ಧಾಪೂರ್ವಕವಾಗಿ ಅಧ್ಯಯನಮಾಡಿದನು