ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ತೇಜಸ್ಸು ಆತನ ಜನರ ಮೇಲೆ ಪ್ರಕಾಶಿಸುತ್ತದೆ

ಯೆಹೋವನ ತೇಜಸ್ಸು ಆತನ ಜನರ ಮೇಲೆ ಪ್ರಕಾಶಿಸುತ್ತದೆ

ಯೆಹೋವನ ತೇಜಸ್ಸು ಆತನ ಜನರ ಮೇಲೆ ಪ್ರಕಾಶಿಸುತ್ತದೆ

“ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು.”​—ಯೆಶಾಯ 60:20.

1.ಯೆಹೋವನು ತನ್ನ ನಂಬಿಗಸ್ತರನ್ನು ಹೇಗೆ ಆಶೀರ್ವದಿಸುತ್ತಾನೆ?

“ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ.” (ಕೀರ್ತನೆ 149:4) ಹಾಗೆಂದು ಪೂರ್ವಕಾಲದ ಕೀರ್ತನೆಗಾರನು ಹೇಳಿದನು ಮತ್ತು ಅವನ ಮಾತುಗಳ ಸತ್ಯತೆಯನ್ನು ಇತಿಹಾಸವು ದೃಢಪಡಿಸಿದೆ. ಯೆಹೋವನ ಜನರು ನಂಬಿಗಸ್ತರಾಗಿರುವಲ್ಲಿ, ಆತನು ಅವರನ್ನು ಪರಾಮರಿಸಿ, ಫಲಪ್ರದರಾಗಿ ಮಾಡಿ, ಅವರನ್ನು ಕಾಪಾಡುತ್ತಾನೆ. ಪುರಾತನ ಕಾಲದಲ್ಲಿ, ಆತನು ಅವರ ಶತ್ರುಗಳ ಮೇಲೆ ಅವರಿಗೆ ವಿಜಯವನ್ನು ಕೊಟ್ಟನು. ಇಂದು ಆತನು ಅವರನ್ನು ಆತ್ಮಿಕವಾಗಿ ಬಲಾಢ್ಯರನ್ನಾಗಿ ಮಾಡಿ, ಯೇಸುವಿನ ಯಜ್ಞದ ಆಧಾರದ ಮೇರೆಗೆ ರಕ್ಷಣೆಯ ಆಶ್ವಾಸನೆಯನ್ನು ನೀಡುತ್ತಾನೆ. (ರೋಮಾಪುರ 5:9) ಅವರು ಆತನ ದೃಷ್ಟಿಯಲ್ಲಿ ಸುಂದರರಾಗಿರುವ ಕಾರಣವೇ ಆತನು ಹೀಗೆ ಮಾಡುತ್ತಾನೆ.

2. ವಿರೋಧ ಬಂದರೂ, ದೇವಜನರಿಗೆ ಯಾವ ಭರವಸೆಯಿದೆ?

2 ಹೌದು, ಕತ್ತಲೆ ಕವಿದಿರುವ ಲೋಕದಲ್ಲಿ “ಸದ್ಭಕ್ತರಾಗಿ” ಜೀವಿಸುವವರ ಮೇಲೆ ವಿರೋಧವು ಬರುತ್ತದೆಂಬುದು ನಿಜ. (2 ತಿಮೊಥೆಯ 3:12) ಆದರೂ, ಯೆಹೋವನು ಆ ವಿರೋಧಿಗಳನ್ನು ಲಕ್ಷಿಸಿ, ಅವರಿಗೆ ಎಚ್ಚರಿಕೆಯನ್ನು ಕೊಡುತ್ತಾನೆ: “ನಿನ್ನನ್ನು ಸೇವಿಸಲೊಲ್ಲದ ಜನಾಂಗ ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳೇ ಹಾಳಾಗಿ ಹೋಗುವವು.” (ಯೆಶಾಯ 60:12) ಇಂದು, ಈ ವಿರೋಧವು ಅನೇಕ ರೂಪಗಳಲ್ಲಿ ಬರುತ್ತದೆ. ಕೆಲವು ದೇಶಗಳಲ್ಲಿ, ಯಥಾರ್ಥ ಕ್ರೈಸ್ತರು ಯೆಹೋವನಿಗೆ ಸಲ್ಲಿಸುವ ಆರಾಧನೆಯನ್ನು ನಿರ್ಬಂಧಿಸಲು ಅಥವಾ ನಿಷೇಧಿಸಲು ವಿರೋಧಿಗಳು ಪ್ರಯತ್ನಿಸುತ್ತಾರೆ. ಬೇರೆ ದೇಶಗಳಲ್ಲಿ, ಮತಾಂಧರು ಯೆಹೋವನ ಆರಾಧಕರ ಮೇಲೆ ಶಾರೀರಿಕವಾಗಿ ಆಕ್ರಮಣ ಮಾಡಿ, ಅವರ ಸ್ವತ್ತುಗಳನ್ನು ಸುಟ್ಟುಬಿಡುತ್ತಾರೆ. ಆದರೆ, ತನ್ನ ಚಿತ್ತವನ್ನು ವಿರೋಧಿಸುವವರಿಗೆ ಸಿಗುವ ಪ್ರತಿಫಲವನ್ನು ಯೆಹೋವನು ಈಗಾಗಲೇ ನಿರ್ಧರಿಸಿರುತ್ತಾನೆ. ವಿರೋಧಿಗಳು ವಿಫಲರಾಗುವರು. ಆತನ ಮಕ್ಕಳಿಂದ ಪ್ರತಿನಿಧಿಸಲ್ಪಟ್ಟಿರುವ ಚೀಯೋನಿಗೆದುರಾಗಿ ಹೋರಾಡುವವರು ಜಯಪ್ರದರಾಗುವುದು ಅಸಾಧ್ಯ. ಇದು ನಮ್ಮ ಮಹಾ ದೇವರಾದ ಯೆಹೋವನಿಂದ ನಮಗೆ ದೊರೆಯುವ ಪ್ರೋತ್ಸಾಹಕರವಾದ ಆಶ್ವಾಸನೆಯಾಗಿಲ್ಲವೊ?

ನಿರೀಕ್ಷೆಗೂ ಮೀರಿದ ಆಶೀರ್ವಾದ

3. ಯೆಹೋವನ ಆರಾಧಕರ ಸೌಂದರ್ಯ ಮತ್ತು ಫಲೋತ್ಪಾದಕತೆಯನ್ನು ಹೇಗೆ ಚಿತ್ರಿಸಲಾಗಿದೆ?

3 ಸತ್ಯ ಸಂಗತಿಯೇನಂದರೆ ಈ ವ್ಯವಸ್ಥೆಯ ಕೊನೆಯ ದಿನಗಳಲ್ಲಿ ಯೆಹೋವನು ತನ್ನ ಜನರನ್ನು ಅವರು ನಿರೀಕ್ಷಿಸಿದ್ದುದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸಿದ್ದಾನೆ. ವಿಶೇಷವಾಗಿ ಆತನು ತನ್ನ ಆರಾಧನಾ ಸ್ಥಳವನ್ನೂ ಅದರೊಳಗಿರುವ ತನ್ನ ನಾಮಧಾರಿಗಳನ್ನೂ ಪ್ರಗತಿಪರವಾಗಿ ಚಂದಗೊಳಿಸಿದ್ದಾನೆ. ಯೆಶಾಯನ ಪ್ರವಾದನೆಗನುಸಾರ, ಅವನು ಚೀಯೋನಿಗೆ ಹೇಳುವುದು: “ನನ್ನ ಪವಿತ್ರಾಲಯವನ್ನು ಭೂಷಿಸುವದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.” (ಯೆಶಾಯ 60:13) ಹುಲುಸಾಗಿ ಬೆಳೆದಿರುವ ಕಾಡುಗಳಿಂದ ಆವರಿತವಾದ ಪರ್ವತಗಳು ಶೋಭಾಯಮಾನವಾಗಿ ಕಾಣುತ್ತವೆ. ಹೀಗೆ, ಸಮೃದ್ಧವಾಗಿ ಬೆಳೆದಿರುವ ವೃಕ್ಷಗಳು ಯೆಹೋವನ ಆರಾಧಕರ ಸೌಂದರ್ಯ ಮತ್ತು ಫಲೋತ್ಪಾದಕತೆಗೆ ತಕ್ಕದಾಗಿರುವ ಪ್ರತೀಕಗಳಾಗಿವೆ.​—ಯೆಶಾಯ 41:19; 55:13.

4. “ಪವಿತ್ರಾಲಯ” ಮತ್ತು ಯೆಹೋವನ “ಪಾದಸನ್ನಿಧಿ” ಎಂದರೇನು, ಮತ್ತು ಅವನ್ನು ಹೇಗೆ ಚಂದಗೊಳಿಸಲಾಗಿದೆ?

4 ಹಾಗಾದರೆ, ಯೆಶಾಯ 60:13ರಲ್ಲಿ ಹೇಳಲ್ಪಟ್ಟಿರುವ “ಪವಿತ್ರಾಲಯ” ಮತ್ತು ಯೆಹೋವನ “ಪಾದಸನ್ನಿಧಿ” ಅಂದರೇನು? ಈ ಪದಗಳು ಯೆಹೋವನ ಮಹಾ ಆತ್ಮಿಕ ದೇವಾಲಯದ ಅಂಗಣಗಳನ್ನು ಸೂಚಿಸುತ್ತವೆ ಮತ್ತು ಇದು ಆರಾಧನೆಯಲ್ಲಿ ಯೇಸು ಕ್ರಿಸ್ತನ ಮೂಲಕ ಯೆಹೋವನನ್ನು ಸಮೀಪಿಸುವ ಏರ್ಪಾಡಾಗಿದೆ. (ಇಬ್ರಿಯ 8:1-5; 9:2-10, 23) ಎಲ್ಲ ಜನಾಂಗಗಳಿಂದ ಜನರು ಬಂದು ಅಲ್ಲಿ ಆರಾಧಿಸುವ ಮೂಲಕ ಆ ಆತ್ಮಿಕಾಲಯವನ್ನು ಮಹಿಮೆಪಡಿಸುವ ತನ್ನ ಉದ್ದೇಶವನ್ನು ಯೆಹೋವನು ಹೇಳಿರುತ್ತಾನೆ. (ಹಗ್ಗಾಯ 2:7) ಯೆಶಾಯನು ಈ ಮೊದಲೇ ಎಲ್ಲ ಜನಾಂಗಗಳ ಜನರು ಯೆಹೋವನ ಉನ್ನತಗೊಳಿಸಲ್ಪಟ್ಟಿರುವ ಆರಾಧನಾ ಪರ್ವತಕ್ಕೆ ಪ್ರವಾಹದಂತೆ ಹರಿದು ಬರುವುದನ್ನು ನೋಡಿರುತ್ತಾನೆ. (ಯೆಶಾಯ 2:​1-4) ಇದಾಗಿ ನೂರಾರು ವರ್ಷಗಳು ಕಳೆದ ಬಳಿಕ, ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿದ್ದು, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ”ವನ್ನು ನೋಡುತ್ತಾನೆ. ಇವರು “ಸಿಂಹಾಸನದ ಮುಂದೆ . . . ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ”ಮಾಡುವುದನ್ನು ಅವನು ನೋಡಿದನು. (ಪ್ರಕಟನೆ 7:​9, 15) ಈ ಪ್ರವಾದನೆಗಳು ನಮ್ಮ ದಿನಗಳಲ್ಲಿ ನೆರವೇರಿರುವುದರಿಂದ, ಯೆಹೋವನ ಆಲಯವು ನಮ್ಮ ಕಣ್ಣುಗಳ ಮುಂದೆಯೇ ಚಂದಗೊಳಿಸಲ್ಪಟ್ಟಿದೆ.

5. ಚೀಯೋನಿನ ಮಕ್ಕಳು ಯಾವ ಸುಧಾರಣೆಯನ್ನು ಅನುಭವಿಸುವರು?

5 ಇದೆಲ್ಲ ಚೀಯೋನಿಗೆ ಎಂತಹ ಸುಧಾರಣೆಯನ್ನು ತಂದಿದೆ! ಯೆಹೋವನು ಹೇಳುವುದು: “ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರಗಳವರಿಗೆ ಉಲ್ಲಾಸಕರವಾಗುವಂತೆ ಮಾಡುವೆನು.” (ಯೆಶಾಯ 60:15) ಒಂದನೆಯ ಲೋಕ ಯುದ್ಧದ ಅಂತ್ಯದ ಸಮಯದಲ್ಲಿ, “ದೇವರ ಇಸ್ರಾಯೇಲ್ಯರು” ದುರ್ಗತಿಯ ಸಮಯಾವಧಿಯನ್ನು ಅನುಭವಿಸಿದರೆಂಬುದು ನಿಜ. (ಗಲಾತ್ಯ 6:16) ತಮ್ಮ ಕಡೆಗಿದ್ದ ದೇವರ ಚಿತ್ತವನ್ನು ಆಕೆಯ ಮಕ್ಕಳು ಸ್ಪಷ್ಟವಾಗಿ ಗ್ರಹಿಸದ ಕಾರಣ ಆಕೆಗೆ “ಬಿಟ್ಟುಬಿಟ್ಟ” ಅನುಭವವಾಗಿತ್ತು. ಆದರೆ 1919ರಲ್ಲಿ, ಯೆಹೋವನು ತನ್ನ ಅಭಿಷಿಕ್ತ ಸೇವಕರನ್ನು ಮತ್ತೆ ಉಜ್ಜೀವಿಸಿ, ಅಂದಿನಿಂದ ಅವರನ್ನು ಅದ್ಭುತಕರವಾದ ಆತ್ಮಿಕ ಸಮೃದ್ಧಿಯಿಂದ ಆಶೀರ್ವದಿಸಿದ್ದಾನೆ. ಅದಲ್ಲದೆ, ಈ ವಚನದಲ್ಲಿರುವ ವಾಗ್ದಾನವು ಚೇತೋಹಾರಿಯಾಗಿದೆಯಲ್ಲವೊ? ಯೆಹೋವನು ಚೀಯೋನನ್ನು “ಶ್ರೇಷ್ಠತೆ”ಯಾಗಿ ನೋಡುವನು. ಆಕೆಯು “ಉಲ್ಲಾಸಕರವಾಗಿ”ರುವಳು, ಅಂದರೆ ಪುಷ್ಕಳ ಆನಂದಕ್ಕೆ ಕಾರಣವಾಗಿರುವಳು. ಮತ್ತು ಅದು ಕೇವಲ ತಾತ್ಕಾಲಿಕವಾಗಿರದು. ಚೀಯೋನಿನ ಭೂಮಕ್ಕಳಿಂದ ಪ್ರತಿನಿಧಿಸಲ್ಪಡುವ ಆಕೆಯ ಅನುಗ್ರಹಿತ ಸ್ಥಿತಿಯು “ತಲತಲಾಂತರಗಳ” ವರೆಗೆ ಬಾಳುವುದು. ಅದು ಎಂದಿಗೂ ಇಲ್ಲದೆ ಹೋಗದು.

6. ನಿಜ ಕ್ರೈಸ್ತರು ಜನಾಂಗಗಳ ಸಂಪತ್ತನ್ನು ಹೇಗೆ ಉಪಯೋಗಿಸುತ್ತಾರೆ?

6 ಈಗ ಇನ್ನೊಂದು ದೈವಿಕ ವಾಗ್ದಾನವನ್ನು ಕೇಳಿರಿ. ಚೀಯೋನಿಗೆ ಮಾತಾಡುತ್ತ, ಯೆಹೋವನು ಹೇಳುವುದು: “ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.” (ಯೆಶಾಯ 60:16) ಜನಾಂಗಗಳ ಮೊಲೆಹಾಲನ್ನು ಚೀಯೋನು ಕುಡಿಯುವುದು ಮತ್ತು “ರಾಜರು” ಅವರಿಗೆ “ಮೊಲೆಯೂಡಿಸುವದು” ಹೇಗೆ? ಶುದ್ಧಾರಾಧನೆಯ ಅಭಿವೃದ್ಧಿಗಾಗಿ ಅಭಿಷಿಕ್ತ ಕ್ರೈಸ್ತರು ಮತ್ತು ಅವರ “ಬೇರೆ ಕುರಿ” ಸಂಗಾತಿಗಳು ಜನಾಂಗಗಳ ಬೆಲೆಬಾಳುವ ಮೂಲಸಂಪತ್ತನ್ನು ಉಪಯೋಗಿಸುವ ಮೂಲಕವೇ. (ಯೋಹಾನ 10:16) ಇಚ್ಛಾಪೂರ್ವಕವಾಗಿ ಕೊಡಲ್ಪಡುವ ಆರ್ಥಿಕ ವಂತಿಗೆಗಳು, ಒಂದು ಮಹಾ, ಅಂತಾರಾಷ್ಟ್ರೀಯ ಸಾರುವ ಮತ್ತು ಬೋಧಿಸುವ ಕೆಲಸವನ್ನು ಸಾಧ್ಯವಾಗಿಸುತ್ತವೆ. ಆಧುನಿಕ ಯಂತ್ರಕಲಾ ಶಾಸ್ತ್ರದ ವಿವೇಕಪೂರ್ಣ ಉಪಯೋಗವು, ಬೈಬಲ್‌ಗಳು ಮತ್ತು ಬೈಬಲ್‌ ಸಾಹಿತ್ಯಗಳು ನೂರಾರು ಭಾಷೆಗಳಲ್ಲಿ ಪ್ರಕಟಿಸಲ್ಪಡುವಂತೆ ಸಹಾಯಮಾಡುತ್ತದೆ. ಇಂದು, ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರಿಗೆ ಬೈಬಲ್‌ ಸತ್ಯವು ಲಭ್ಯವಾಗುತ್ತಿದೆ. ತನ್ನ ಅಭಿಷಿಕ್ತ ಸೇವಕರನ್ನು ಆತ್ಮಿಕ ಬಂಧನದಿಂದ ಮರುಕೊಂಡಿರುವ ಯೆಹೋವನು ನಿಶ್ಚಯವಾಗಿಯೂ ರಕ್ಷಕನಾಗಿದ್ದಾನೆಂದು ಅನೇಕಾನೇಕ ಜನಾಂಗಗಳ ಪ್ರಜೆಗಳು ಕಲಿತುಕೊಳ್ಳುತ್ತಿದ್ದಾರೆ.

ಸಂಘಟನಾತ್ಮಕ ಪ್ರಗತಿ

7. ಚೀಯೋನಿನ ಮಕ್ಕಳು ಯಾವ ಗಮನಾರ್ಹವಾದ ಅಭಿವೃದ್ಧಿಯನ್ನು ಅನುಭವಿಸಿದ್ದಾರೆ?

7 ಯೆಹೋವನು ಇನ್ನೊಂದು ವಿಧದಲ್ಲಿಯೂ ತನ್ನ ಜನರನ್ನು ಚಂದಗೊಳಿಸಿದ್ದಾನೆ. ಸಂಘಟನಾತ್ಮಕ ಅಭಿವೃದ್ಧಿಯಿಂದಲೂ ಆತನು ಅವರನ್ನು ಆಶೀರ್ವದಿಸಿದ್ದಾನೆ. ಯೆಶಾಯ 60:17ರಲ್ಲಿ ನಾವು ಓದುವುದು: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” (ಯೆಶಾಯ 60:17) ತಾಮ್ರದ ಸ್ಥಾನದಲ್ಲಿ ಚಿನ್ನವನ್ನು ಒದಗಿಸುವುದು ಸುಧಾರಣೆಯನ್ನು ಸೂಚಿಸುತ್ತದೆ. ಅಲ್ಲಿ ಹೇಳಲ್ಪಟ್ಟಿರುವ ಬೇರೆ ವಸ್ತುಗಳ ವಿಷಯದಲ್ಲಿಯೂ ಇದು ನಿಜವಾಗಿದೆ. ಇದಕ್ಕೆ ಹೊಂದಿಕೆಯಾಗಿ, ದೇವರ ಇಸ್ರಾಯೇಲ್ಯರು ಅಂತ್ಯಕಾಲಗಳಲ್ಲೆಲ್ಲ ಮುಂದುವರಿಯುತ್ತಿರುವ ಸಂಘಟನಾತ್ಮಕ ಸುಧಾರಣೆಗಳನ್ನು ಅನುಭವಿಸಿದ್ದಾರೆ. ಕೆಲವು ದೃಷ್ಟಾಂತಗಳನ್ನು ಗಮನಿಸಿರಿ.

8-10. ವರುಷ 1919ರಿಂದ ನಡೆದಿರುವ ಕೆಲವು ಸಂಘಟನಾತ್ಮಕ ಸುಧಾರಣೆಗಳನ್ನು ವರ್ಣಿಸಿರಿ.

8 ವರುಷ 1919ಕ್ಕೆ ಮುಂಚಿತವಾಗಿ, ಹಿರಿಯರೂ ಡೀಕನರೆಂದು ಕರೆಯಲ್ಪಡುತ್ತಿದ್ದವರೂ ದೇವಜನರ ಸಭೆಗಳ ಮೇಲ್ವಿಚಾರಣೆ ಮಾಡುತ್ತಿದ್ದರು. ಇವರೆಲ್ಲರನ್ನೂ ಸಭಾಸದಸ್ಯರು ಪ್ರಜಾಪ್ರಭುತ್ವಾತ್ಮಕವಾಗಿ ಚುನಾಯಿಸುತ್ತಿದ್ದರು. ಆದರೆ ಆ ವರ್ಷದಿಂದ ಆರಂಭಿಸುತ್ತಾ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಪ್ರತಿ ಸಭೆಯ ಕ್ಷೇತ್ರ ಸೇವಾ ಚಟುವಟಿಕೆಯನ್ನು ನೋಡಿಕೊಳ್ಳುವಂತೆ ಒಬ್ಬ ಸರ್ವಿಸ್‌ ಡೈರೆಕ್ಟರನನ್ನು ನೇಮಿಸಿತು. (ಮತ್ತಾಯ 24:​45-47) ಆದರೆ ಅನೇಕ ಸಭೆಗಳಲ್ಲಿ, ಚುನಾಯಿಸಲ್ಪಟ್ಟಿದ್ದ ಕೆಲವು ಹಿರಿಯರು ಸಾರುವ ಕೆಲಸವನ್ನು ಪೂರ್ಣವಾಗಿ ಬೆಂಬಲಿಸದಿದ್ದ ಕಾರಣ, ಈ ಏರ್ಪಾಡು ಅಷ್ಟು ಒಳ್ಳೆಯದಾಗಿ ಮುಂದುವರಿಯಲಿಲ್ಲ. ಆದಕಾರಣ, 1932ರಲ್ಲಿ, ಸಭೆಗಳು ಹಿರಿಯರನ್ನೂ ಡೀಕನರನ್ನೂ ಚುನಾಯಿಸುವುದನ್ನು ನಿಲ್ಲಿಸುವಂತೆ ಆದೇಶ ನೀಡಲಾಯಿತು. ಇದಕ್ಕೆ ಬದಲಾಗಿ, ಅವರು ಸೇವಾ ಕಮಿಟಿಯಲ್ಲಿ ಸರ್ವಿಸ್‌ ಡೈರೆಕ್ಟರನ ಜೊತೆಯಲ್ಲಿ ಸೇವೆಮಾಡಲು ಪುರುಷರನ್ನು ನೇಮಿಸುವಂತೆ ಹೇಳಲಾಯಿತು. ಅದು “ಮರವಿದ್ದಲ್ಲಿ ತಾಮ್ರ” ಬರುವುದಕ್ಕೆ ಸಮಾನವಾಯಿತು. ಅದೊಂದು ದೊಡ್ಡ ಸುಧಾರಣೆಯೇ ಸರಿ!

9 ವರುಷ 1938ರಲ್ಲಿ, ಸಭೆಗಳು ಲೋಕಾದ್ಯಂತವಾಗಿ ಇನ್ನೊಂದು ಸುಧಾರಿತ ಏರ್ಪಾಡನ್ನು, ಶಾಸ್ತ್ರೀಯ ಪೂರ್ವನಿದರ್ಶನಕ್ಕೆ ಹೆಚ್ಚು ಹೊಂದಿಕೆಯಲ್ಲಿದ್ದ ಒಂದು ಏರ್ಪಾಡನ್ನು ಅಂಗೀಕರಿಸಲು ನಿರ್ಧರಿಸಿದವು. ಸಭಾ ಆಡಳಿತವನ್ನು ಒಬ್ಬ ಕಂಪನಿ ಸೇವಕನಿಗೂ ಇತರ ಸೇವಕರಿಗೂ ಒಪ್ಪಿಸಲಾಯಿತು. ಇವರೆಲ್ಲರೂ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೇಲ್ವಿಚಾರಣೆಯ ಕೆಳಗೆ ನೇಮಿಸಲ್ಪಟ್ಟಿದ್ದರು. ಇನ್ನು ಮುಂದೆ ಚುನಾವಣೆ ಇರಲಿಲ್ಲ! ಹೀಗೆ ಸಭಾ ನೇಮಕಗಳು ದೇವಪ್ರಭುತ್ವಾತ್ಮಕವಾಗಿ ನಡೆದವು. ಅದು “ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು” ಅಥವಾ “ತಾಮ್ರಕ್ಕೆ ಬದಲಾಗಿ ಚಿನ್ನವನ್ನು” ತಂದಂತಿತ್ತು.

10 ಅಂದಿನಿಂದ ಹಿಡಿದು, ಪ್ರಗತಿ ಆಗುತ್ತಾ ಇದೆ. ಉದಾಹರಣೆಗೆ, 1972ರಲ್ಲಿ, ಒಬ್ಬನೇ ಹಿರಿಯನು ಇತರರ ಮೇಲೆ ಅಧಿಕಾರ ನಡಿಸುವುದಕ್ಕಿಂತ, ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಟ್ಟಿರುವ ಸಹಕಾರಭಾವವುಳ್ಳ ಹಿರಿಯರ ಮಂಡಳಿಯಿಂದ ಸಭೆಯ ಮೇಲ್ವಿಚಾರಣೆಯು ನೋಡಲ್ಪಡುವುದು, ಒಂದನೆಯ ಶತಮಾನದ ಕ್ರೈಸ್ತ ಸಭೆಗಳಲ್ಲಿ ನಡೆಯುತ್ತಿದ್ದ ಮೇಲ್ವಿಚಾರಣೆಯ ವಿಧಕ್ಕೆ ಹೆಚ್ಚು ಹತ್ತಿರವಾಗಿಸುತ್ತದೆ ಎಂದು ತಿಳಿದುಬಂತು. ಮತ್ತು ಇಂದಿಗೆ ಸುಮಾರು ಎರಡು ವರ್ಷಗಳ ಹಿಂದೆ, ಇನ್ನೊಂದು ಹೆಜ್ಜೆಯನ್ನು ಮುಂದಿಡಲಾಯಿತು. ಕೆಲವು ಶಾಸನಬದ್ಧ ಕಾರ್ಪೊರೇಷನ್‌ಗಳ ಡೈರೆಕ್ಟರರ ಸ್ಥಾನಗಳನ್ನು ಕ್ರಮಪಡಿಸಲಾಯಿತು. ಇದರಿಂದಾಗಿ, ಆಡಳಿತ ಮಂಡಳಿಯು ಸಂಸ್ಥೆಯ ದಿನನಿತ್ಯದ ಶಾಸನಬದ್ಧ ವಿಷಯಗಳಿಂದ ಅಪಕರ್ಷಿತರಾಗುವ ಬದಲಿಗೆ ದೇವಜನರ ಆತ್ಮಿಕ ಅಭಿರುಚಿಗಳ ಕಡೆಗೆ ಹೆಚ್ಚು ನಿಗವನ್ನು ಕೊಡಲು ಸಾಧ್ಯವಾಯಿತು.

11. ಯೆಹೋವನ ಜನರ ಮಧ್ಯೆ ಆಗಿರುವ ಸಂಘಟನಾತ್ಮಕ ಬದಲಾವಣೆಗಳ ಹಿಂದೆ ಇದ್ದವರು ಯಾರು, ಮತ್ತು ಈ ಬದಲಾವಣೆಗಳ ಫಲಿತಾಂಶವೇನು?

11 ಈ ಪ್ರಗತಿಪರವಾದ ಬದಲಾವಣೆಗಳ ಹಿಂದೆ ಯಾರಿದ್ದಾರೆ? ಯೆಹೋವ ದೇವರೇ ಎಂಬುದು ಖಂಡಿತ. “[ನಾನು] ಚಿನ್ನವನ್ನು . . . ಒದಗಿಸುವೆನು,” ಎಂದು ಆತನು ಹೇಳುತ್ತಾನೆ. “[ನಾನು] ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದೂ ಆತನು ಹೇಳುತ್ತಾನೆ. ಹೌದು, ತನ್ನ ಜನರ ಮೇಲ್ವಿಚಾರಣೆಗೆ ಯೆಹೋವನೇ ಜವಾಬ್ದಾರನು. ಈ ರೀತಿ ಮುಂತಿಳಿಸಲ್ಪಟ್ಟ ಸಂಘಟನಾತ್ಮಕ ಅಭಿವೃದ್ಧಿಯು ಆತನು ತನ್ನ ಜನರನ್ನು ಚಂದಗೊಳಿಸುವ ಇನ್ನೊಂದು ವಿಧವಾಗಿದೆ. ಮತ್ತು ಯೆಹೋವನ ಸಾಕ್ಷಿಗಳು ಇದರ ಪರಿಣಾಮವಾಗಿ ಅನೇಕ ರೀತಿಗಳಲ್ಲಿ ಆಶೀರ್ವದಿಸಲ್ಪಟ್ಟಿದ್ದಾರೆ. ಯೆಶಾಯ 60:18ರಲ್ಲಿ ನಾವು ಹೀಗೆ ಓದುತ್ತೇವೆ: “ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.” (ಯೆಶಾಯ 60:18) ಎಷ್ಟು ಸೊಗಸಾದ ಮಾತುಗಳವು! ಆದರೆ ಅವು ಹೇಗೆ ನೆರವೇರಿರುತ್ತವೆ?

12. ಸತ್ಯ ಕ್ರೈಸ್ತರ ಮಧ್ಯೆ ಸಮಾಧಾನವು ಪ್ರಮುಖವಾಗಿರುವುದು ಹೇಗೆ?

12 ಸತ್ಯ ಕ್ರೈಸ್ತರು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಯೆಹೋವನನ್ನೇ ದಿಟ್ಟಿಸಿ ನೋಡುತ್ತಾರೆ. ಮತ್ತು ಇದರ ಪರಿಣಾಮವನ್ನೇ ಯೆಶಾಯನು ಮುಂತಿಳಿಸಿದನು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು [“ಸಮಾಧಾನವಿರುವುದು,” NW].” (ಯೆಶಾಯ 54:13) ಇದಲ್ಲದೆ, ಯೆಹೋವನ ಆತ್ಮವು ಆತನ ಜನರ ಮೇಲೆ ಕಾರ್ಯನಡೆಸುತ್ತದೆ ಮತ್ತು ಆ ಆತ್ಮದ ಫಲಗಳಲ್ಲಿ ಒಂದು ಸಮಾಧಾನವಾಗಿದೆ. (ಗಲಾತ್ಯ 5:​22, 23) ಯೆಹೋವನ ಜನರಿಗೆ ಇದರಿಂದ ಒದಗಿಬರುವ ಸಮಾಧಾನವು, ಈ ಹಿಂಸಾತ್ಮಕ ಲೋಕದಲ್ಲಿ ಅವರನ್ನು ಚೈತನ್ಯದಾಯಕವಾದ ತಂಪುಜಾಗವಾಗಿ ಮಾಡುತ್ತದೆ. ಸತ್ಯ ಕ್ರೈಸ್ತರ ಮಧ್ಯೆ ಇರುವ ಪರಸ್ಪರ ಪ್ರೀತಿಯ ಮೇಲೆ ಆಧಾರಿಸಿರುವ ಅವರ ಸಮಾಧಾನಕರ ಸ್ಥಿತಿಯು, ನೂತನ ಲೋಕದಲ್ಲಿರುವ ಜೀವಿತದ ಮುನ್‌ರುಚಿಯಾಗಿದೆ. (ಯೋಹಾನ 15:17; ಕೊಲೊಸ್ಸೆ 3:14) ಇಂತಹ ಸಮಾಧಾನವನ್ನು ಅನುಭವಿಸಿ ಅದಕ್ಕೆ ಹೆಚ್ಚನ್ನು ಕೂಡಿಸಲು ನಮಗಿರುವ ಅವಕಾಶಕ್ಕೆ ನಮ್ಮಲ್ಲಿ ಪ್ರತಿಯೊಬ್ಬರೂ ಪುಳಕಿತರಾಗಿರುವುದು ನಿಶ್ಚಯ. ಇದು ದೇವರಿಗೆ ಸ್ತುತಿ ಮತ್ತು ಮಾನವನ್ನು ತರುವುದು ಮಾತ್ರವಲ್ಲ, ನಮ್ಮ ಆತ್ಮಿಕ ಪರದೈಸಿನ ಪ್ರಧಾನ ಭಾಗವೂ ಆಗಿದೆ.​—ಯೆಶಾಯ 11:9.

ಯೆಹೋವನ ಬೆಳಕು ಪ್ರಕಾಶಿಸುತ್ತ ಹೋಗುವುದು

13. ಯೆಹೋವನ ಬೆಳಕು ಆತನ ಜನರ ಮೇಲೆ ಪ್ರಕಾಶಿಸುವ ವಿಷಯವು ಎಂದಿಗೂ ನಿಂತುಹೋಗದೆಂಬ ಖಾತ್ರಿ ನಮಗೆ ಏಕೆ ಇರಬಲ್ಲದು?

13 ಯೆಹೋವನ ಬೆಳಕು ಆತನ ಜನರ ಮೇಲೆ ಪ್ರಕಾಶಿಸುತ್ತ ಹೋಗುವುದೊ? ಹೌದು! ಯೆಶಾಯ 60:​19, 20ರಲ್ಲಿ ನಾವು ಓದುವುದು: “ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗೊಳ್ಳನು; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು. ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು.” ಆತ್ಮಿಕವಾಗಿ ದೇಶಭ್ರಷ್ಟರಾಗಿದ್ದವರ ಆ “ದುಃಖಿಸುವ” ದಿನಗಳು 1919ರಲ್ಲಿ ಮುಗಿದೊಡನೆ, ಯೆಹೋವನ ಬೆಳಕು ಅವರ ಮೇಲೆ ಪ್ರಕಾಶಿಸತೊಡಗಿತು. ಈಗ, 80 ವರುಷಗಳ ತರುವಾಯ, ಆತನ ಬೆಳಕು ಪ್ರಕಾಶಿಸುತ್ತಿರುವಾಗ ಅವರು ಇನ್ನೂ ಯೆಹೋವನ ಅನುಗ್ರಹದಲ್ಲಿ ಆನಂದಿಸುತ್ತಿದ್ದಾರೆ. ಮತ್ತು ಅದು ಎಂದಿಗೂ ನಿಂತುಹೋಗದು. ತನ್ನ ಆರಾಧಕರ ವಿಷಯದಲ್ಲಿ, ನಮ್ಮ ದೇವರು ಸೂರ್ಯನಂತೆ “ಮುಣುಗನು,” ಚಂದ್ರನಂತೆ “ತೊಲಗನು.” ಬದಲಿಗೆ, ಆತನು ಅವರ ಮೇಲೆ ಶಾಶ್ವತವಾಗಿ ಬೆಳಕನ್ನು ಬೀರುವನು. ಈ ಅಂಧಕಾರದ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ನಮಗೆ ಇದೆಂತಹ ಅದ್ಭುತಕರವಾದ ಆಶ್ವಾಸನೆಯಾಗಿದೆ!

14, 15. (ಎ) ಯೆಹೋವನ ಜನರೆಲ್ಲರೂ ಯಾವ ವಿಧಗಳಲ್ಲಿ “ಸದ್ಧರ್ಮಿಗಳು”? (ಬಿ) ಯೆಶಾಯ 60:21ರ ವಿಷಯದಲ್ಲಿ, ಬೇರೆ ಕುರಿಗಳು ಯಾವ ಪ್ರಮುಖ ನೆರವೇರಿಕೆಯನ್ನು ಮುನ್ನೋಡುತ್ತಾರೆ?

14 ಈಗ, ಚೀಯೋನಿನ ಭೂಪ್ರತಿನಿಧಿಗಳಾಗಿರುವ ದೇವರ ಇಸ್ರಾಯೇಲ್ಯರ ವಿಷಯದಲ್ಲಿ ಯೆಹೋವನು ನೀಡುವ ಇನ್ನೊಂದು ವಾಗ್ದಾನವನ್ನು ಆಲಿಸಿರಿ. ಯೆಶಾಯ 60:21 ಹೇಳುವುದು: “ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.” ಅಭಿಷಿಕ್ತ ಕ್ರೈಸ್ತರನ್ನು 1919ರಲ್ಲಿ ಚಟುವಟಿಕೆಗಾಗಿ ಪುನಸ್ಸ್ಥಾಪಿಸಲಾದಾಗ, ಅವರು ಒಂದು ಅಸಾಧಾರಣ ರೀತಿಯ ಜನರ ಗುಂಪಾಗಿದ್ದರು. ನಿಶ್ಚಯವಾಗಿಯೂ ಪಾಪಕರವಾಗಿದ್ದ ಲೋಕದಲ್ಲಿ, ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ಅವರಿಗಿರುವ ಅಚಲವಾದ ನಂಬಿಕೆಯ ಆಧಾರದ ಮೇರೆಗೆ ಅವರನ್ನು “ನೀತಿವಂತರೆಂದು ನಿರ್ಣಯ”ಮಾಡಲಾಗಿತ್ತು. (ರೋಮಾಪುರ 3:​24; 5:1) ಬಳಿಕ, ಬಾಬೆಲಿನ ಬಂಧನದಿಂದ ಬಿಡಿಸಲ್ಪಟ್ಟಿದ್ದ ಇಸ್ರಾಯೇಲ್ಯರಂತೆ, ಅವರು “ರಾಷ್ಟ್ರ”ವನ್ನು, ಒಂದು ಆತ್ಮಿಕ ದೇಶವನ್ನು ಅಥವಾ ಕಾರ್ಯಕ್ಷೇತ್ರವನ್ನು ಸ್ವಾಧೀನಪಡಿಸಿಕೊಂಡರು. ಇದರಲ್ಲಿ ಅವರು ಒಂದು ಆತ್ಮಿಕ ಪರದೈಸನ್ನು ಅನುಭೋಗಿಸಲಿದ್ದರು. (ಯೆಶಾಯ 66:8) ಆ ರಾಷ್ಟ್ರದ ಪರದೈಸಿಕ ಸೌಂದರ್ಯವು, ಪುರಾತನ ಕಾಲದ ಇಸ್ರಾಯೇಲಿನ ಸೌಂದರ್ಯವು ಕುಂದಿದಂತೆ ಎಂದಿಗೂ ಕುಂದಿಹೋಗದು. ದೇವರ ಇಸ್ರಾಯೇಲ್ಯರು ಒಂದು ಜನಾಂಗವಾಗಿ ಎಂದಿಗೂ ಅಪನಂಬಿಗಸ್ತರಾಗಿ ಪರಿಣಮಿಸರು. ಅವರ ನಂಬಿಕೆ, ಸಹನೆ ಮತ್ತು ಆಸಕ್ತಿಯು ದೇವರ ನಾಮಕ್ಕೆ ಗೌರವ ತರುವುದನ್ನು ಎಂದಿಗೂ ನಿಲ್ಲಿಸದು.

15 ಆ ಆತ್ಮಿಕ ಜನಾಂಗದ ಸಕಲ ಸದಸ್ಯರೂ ನೂತನ ಒಡಂಬಡಿಕೆಯೊಳಗೆ ಬಂದಿರುತ್ತಾರೆ. ಅವರೆಲ್ಲರ ಹೃದಯಗಳಲ್ಲಿ ಯೆಹೋವನ ಧರ್ಮೋಪದೇಶವು ಬರೆಯಲ್ಪಟ್ಟಿದೆ, ಮತ್ತು ಯೆಹೋವನು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇರೆಗೆ, ಅವರ ಪಾಪಗಳನ್ನು ಕ್ಷಮಿಸಿದ್ದಾನೆ. (ಯೆರೆಮೀಯ 31:31-34) ಆತನು ಅವರನ್ನು ‘ಪುತ್ರರಂತೆ’ ಸದ್ಧರ್ಮಿಗಳೆಂದು ನಿರ್ಣಯಿಸಿ, ಅವರು ಪರಿಪೂರ್ಣರೊ ಎಂಬ ರೀತಿಯಲ್ಲಿ ಅವರೊಂದಿಗೆ ವ್ಯವಹರಿಸುತ್ತಾನೆ. (ರೋಮಾಪುರ 8:15, 16, 29, 30) ಅವರ ಬೇರೆ ಕುರಿ ಸಂಗಾತಿಗಳ ಪಾಪಗಳೂ ಯೇಸುವಿನ ಯಜ್ಞದ ಆಧಾರದ ಮೇರೆಗೆ ಕ್ಷಮಿಸಲ್ಪಟ್ಟಿದ್ದು, ಅಬ್ರಹಾಮನಂತೆಯೇ ನಂಬಿಕೆಯ ಮುಖಾಂತರ ಅವರನ್ನು ದೇವರ ಸ್ನೇಹಿತರಾಗಿ ನೀತಿವಂತರೆಂದು ನಿರ್ಣಯಿಸಲಾಗಿದೆ. ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ಮತ್ತು ಈ ಬೇರೆ ಕುರಿ ಸಂಗಾತಿಗಳು ಇನ್ನೊಂದು ಪ್ರಧಾನ ಆಶೀರ್ವಾದವನ್ನು ಮುನ್ನೋಡುತ್ತಾರೆ. ಅವರು “ಮಹಾ ಸಂಕಟ”ವನ್ನು ಪಾರಾದಾಗ ಅಥವಾ ಪುನರುತ್ಥಾನ ಹೊಂದುವಾಗ, ಇಡೀ ಭೂಮಿಯು ಪರದೈಸಾಗಿ ಪರಿವರ್ತನೆ ಹೊಂದುವ ಯೆಶಾಯ 60:21ರ ಅಕ್ಷರಾರ್ಥದ ನೆರವೇರಿಕೆಯನ್ನು ನೋಡುವರು. (ಪ್ರಕಟನೆ 7:14, NW; ರೋಮಾಪುರ 4:​1-3) ಆ ಸಮಯದಲ್ಲಿ, “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”​—ಕೀರ್ತನೆ 37:11, 29.

ವೃದ್ಧಿ ಮುಂದುವರಿಯುತ್ತದೆ

16. ಯೆಹೋವನು ಯಾವ ಗಮನಾರ್ಹವಾದ ವಚನ ಕೊಟ್ಟನು, ಮತ್ತು ಅದು ಹೇಗೆ ನೆರವೇರಿದೆ?

16ಯೆಶಾಯ 60ರ ಕೊನೆಯ ವಚನದಲ್ಲಿ, ಈ ಅಧ್ಯಾಯದಲ್ಲಿರುವ ಯೆಹೋವನ ಅಂತಿಮ ವಾಗ್ದಾನದ ಕುರಿತು ನಾವು ಓದುತ್ತೇವೆ. ಆತನು ಚೀಯೋನಿಗೆ ಹೇಳುವುದು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:22) ನಮ್ಮ ದಿನಗಳಲ್ಲಿ ಯೆಹೋವನು ತನ್ನ ವಚನವನ್ನು ಪಾಲಿಸಿರುತ್ತಾನೆ. ಅಭಿಷಿಕ್ತ ಕ್ರೈಸ್ತರು 1919ರಲ್ಲಿ ಕಾರ್ಯಕ್ಷೇತ್ರಕ್ಕೆ ಪುನಸ್ಸ್ಥಾಪಿಸಲ್ಪಟ್ಟಾಗ, ಅವರ ಸಂಖ್ಯೆಯು ಕೊಂಚವಾಗಿತ್ತು; ಅವರು ನಿಜವಾಗಿಯೂ “ಚಿಕ್ಕವನು” ಆಗಿದ್ದರು. ಆದರೆ, ಹೆಚ್ಚಿನ ಆತ್ಮಿಕ ಇಸ್ರಾಯೇಲ್ಯರು ಒಳತರಲ್ಪಟ್ಟಾಗ ಅವರ ಸಂಖ್ಯೆ ಹೆಚ್ಚಾಯಿತು. ಬಳಿಕ, ಬೇರೆ ಕುರಿಗಳು ಹೆಚ್ಚು ಸಂಖ್ಯೆಯಲ್ಲಿ ಅವರ ಬಳಿಗೆ ಗುಂಪಾಗಿ ಬರಲಾರಂಭಿಸಿದರು. ದೇವಜನರ ಶಾಂತಿಯ ಪರಿಸ್ಥಿತಿಯು, ಅವರ “ರಾಷ್ಟ್ರ”ದಲ್ಲಿರುವ ಆತ್ಮಿಕ ಪರದೈಸಿನ ಸ್ಥಿತಿಯು ಅನೇಕಾನೇಕ ಪ್ರಾಮಾಣಿಕ ಹೃದಯಿಗಳನ್ನು ಆಕರ್ಷಿಸಿರುವುದರಿಂದ, “ಅಲ್ಪನು” ನಿಜವಾಗಿಯೂ “ಬಲವಾದ ಜನಾಂಗ” ಆಗಿರುತ್ತಾನೆ. ಪ್ರಸ್ತುತ, ದೇವರ ಇಸ್ರಾಯೇಲ್ಯರು ಮತ್ತು 60 ಲಕ್ಷಕ್ಕಿಂತಲೂ ಹೆಚ್ಚು ಮಂದಿ “ವಿದೇಶೀಯರು” ಸೇರಿರುವ ಈ “ಜನಾಂಗವು,” ಲೋಕದ ಅನೇಕ ಸ್ವತಂತ್ರ ದೇಶಗಳ ಜನಸಂಖ್ಯೆಗಿಂತ ಹೆಚ್ಚು ದೊಡ್ಡದಾಗಿರುತ್ತದೆ. (ಯೆಶಾಯ 60:10) ಅದರ ಎಲ್ಲ ಪ್ರಜೆಗಳು ಯೆಹೋವನ ಬೆಳಕನ್ನು ಪ್ರತಿಬಿಂಬಿಸುವುದರಲ್ಲಿ ಭಾಗವಹಿಸುವುದರಿಂದ, ಇದು ಅವರೆಲ್ಲರನ್ನು ಆತನ ದೃಷ್ಟಿಯಲ್ಲಿ ಚಂದಗೊಳಿಸುತ್ತದೆ.

17. ಈ ಯೆಶಾಯ 60ನೆಯ ಅಧ್ಯಾಯದ ಚರ್ಚೆಯು ನಿಮ್ಮನ್ನು ಹೇಗೆ ಪ್ರಭಾವಿಸಿದೆ?

17 ಹೌದು, ಯೆಶಾಯ 60ನೆಯ ಅಧ್ಯಾಯದ ಮುಖ್ಯ ವಿಷಯಗಳನ್ನು ಪರಿಗಣಿಸುವುದರಿಂದ ನಂಬಿಕೆಯು ಬಲಗೊಳ್ಳುವುದು ನಿಶ್ಚಯ. ಯೆಹೋವನು ಅಷ್ಟು ಪೂರ್ವದಲ್ಲೇ ತನ್ನ ಜನರು ಆತ್ಮಿಕವಾಗಿ ದೇಶಭ್ರಷ್ಟರಾಗುವರೆಂದೂ ಬಳಿಕ ಪುನಸ್ಸ್ಥಾಪಿಸಲ್ಪಡುವರೆಂದೂ ತಿಳಿದಿದ್ದನೆಂಬುದು ದುಃಖಶಾಮಕವಾದ ವಿಷಯವಾಗಿದೆ. ನಮ್ಮ ದಿನಗಳಲ್ಲಿ ಸತ್ಯಾರಾಧಕರ ಸಂಖ್ಯೆಯಲ್ಲಿ ಆಗುವ ಮಹಾ ವೃದ್ಧಿಯನ್ನು ಯೆಹೋವನು ಮುಂದಾಗಿಯೇ ನೋಡಿದ ವಿಷಯವು ನಮ್ಮನ್ನು ಸ್ತಬ್ಧರನ್ನಾಗಿ ಮಾಡುತ್ತದೆ. ಇದಲ್ಲದೆ, ಯೆಹೋವನು ನಮ್ಮ ಕೈಬಿಡುವಾತನಲ್ಲವೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಅದೆಷ್ಟು ಸಾಂತ್ವನದಾಯಕವಾಗಿದೆ! “ಪಟ್ಟಣ”ದ ದ್ವಾರಗಳು “ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿ” ಇರುವವರನ್ನು ಸತ್ಕರಿಸಲು ಸದಾ ತೆರೆದಿರುವವು ಎಂಬ ಆಶ್ವಾಸನೆ ಅದೆಷ್ಟು ಪ್ರೀತಿಪೂರ್ಣವಾಗಿರುತ್ತದೆ! (ಅ. ಕೃತ್ಯಗಳು 13:​48, NW) ಯೆಹೋವನು ತನ್ನ ಜನರ ಮೇಲೆ ಬೆಳಕನ್ನು ಬೀರುತ್ತ ಹೋಗುವನು. ಚೀಯೋನಿನ ಮಕ್ಕಳು ತಮ್ಮ ಬೆಳಕನ್ನು ಉಜ್ವಲವಾಗಿ ಪ್ರಕಾಶಿಸುತ್ತ ಹೋಗುವಾಗ, ಅವಳು “ಶ್ರೇಷ್ಠತೆ”ಗೆ ಕಾರಣಳಾಗುತ್ತ ಮುಂದುವರಿಯುವಳು. (ಮತ್ತಾಯ 5:16) ನಾವು ದೇವರ ಇಸ್ರಾಯೇಲ್ಯರಿಗೆ ನಿಕಟವಾಗಿರಲು ಮತ್ತು ಯೆಹೋವನ ಬೆಳಕನ್ನು ಪ್ರಕಾಶಿಸಲು ನಮಗಿರುವ ಸದವಕಾಶವನ್ನು ಬೆಲೆಯುಳ್ಳದ್ದೆಂದು ಎಣಿಸಲು ಹಿಂದೆಂದಿಗಿಂತಲೂ ಹೆಚ್ಚು ದೃಢಮನಸ್ಕರಾಗಿದ್ದೇವೆಂಬುದು ನಿಶ್ಚಯ!

ವಿವರಿಸಬಲ್ಲಿರೊ?

• ವಿರೋಧದ ಸಂಬಂಧದಲ್ಲಿ, ನಮಗೆ ಯಾವ ಭರವಸೆಯಿದೆ?

• ಚೀಯೋನಿನ ಮಕ್ಕಳು “ಜನಾಂಗಗಳ ಮೊಲೆಕೂಸು”ಗಳಾದದ್ದು ಹೇಗೆ?

• ಯೆಹೋವನು “ಮರವಿದ್ದಲ್ಲಿ ತಾಮ್ರವನ್ನು” ಯಾವ ವಿಧಗಳಲ್ಲಿ ತಂದನು?

ಯೆಶಾಯ 60:​17, 21ರಲ್ಲಿ ಯಾವ ಎರಡು ಗುಣಗಳನ್ನು ಎತ್ತಿ ತೋರಿಸಲಾಗಿದೆ?

• “ಅಲ್ಪನಿಂದ ಬಲವಾದ ಜನಾಂಗ” ಆದದ್ದು ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚೌಕ/ಚಿತ್ರಗಳು]

ಯೆಶಾಯನ ಪ್ರವಾದನೆ ಸಕಲ ಮಾನವಕುಲಕ್ಕೆ ಬೆಳಕು 

ಈ ಲೇಖನಗಳಲ್ಲಿರುವ ವಿಷಯ ಸಾರಾಂಶವನ್ನು 2001/02ರ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನಗಳಲ್ಲಿನ ಒಂದು ಭಾಷಣದಲ್ಲಿ ಕೊಡಲಾಗಿತ್ತು. ಹೆಚ್ಚಿನ ಅಧಿವೇಶನಗಳಲ್ಲಿ ಭಾಷಣಕಾರರು ಆ ಭಾಷಣದ ಅಂತ್ಯದಲ್ಲಿ, ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು, ಸಂಪುಟ ಎರಡು ಎಂಬ ಹೊಸ ಪುಸ್ತಕವನ್ನು ಬಿಡುಗಡೆ ಮಾಡಿದರು. ಹಿಂದಿನ ವರುಷ, ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು, ಸಂಪುಟ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಹೊಸ ಪುಸ್ತಕದ ಬಿಡುಗಡೆಯೊಂದಿಗೆ, ಈಗ ಯೆಶಾಯನ ಪುಸ್ತಕದ ಹೆಚ್ಚುಕಡಮೆ ಪ್ರತಿ ವಚನದ ಸದ್ಯೋಚಿತ ಚರ್ಚೆ ಲಭ್ಯವಿದೆ. ಯೆಶಾಯನ, ನಂಬಿಕೆಯನ್ನು ಪ್ರೇರಿಸುವಂಥ ಪ್ರವಾದನಾ ಗ್ರಂಥದ ಸಂಬಂಧದಲ್ಲಿ ನಮ್ಮ ತಿಳಿವಳಿಕೆ ಮತ್ತು ಕೃತಜ್ಞತೆಯನ್ನು ಆಳವಾಗಿಸಲು ಈ ಸಂಪುಟಗಳು ಉತ್ತಮವಾದ ಸಹಾಯಕಗಳಾಗಿ ಪರಿಣಮಿಸುತ್ತಿವೆ.

[ಪುಟ 15ರಲ್ಲಿರುವ ಚಿತ್ರಗಳು]

ಹಿಂಸಾತ್ಮಕ ವಿರೋಧದ ಎದುರಿನಲ್ಲಿಯೂ, ‘ಯೆಹೋವನು ತನ್ನ ಜನರನ್ನು ರಕ್ಷಣೆಯಿಂದ ಚಂದಗೊಳಿಸುವನು’

[ಪುಟ 16ರಲ್ಲಿರುವ ಚಿತ್ರಗಳು]

ಶುದ್ಧಾರಾಧನೆಯ ಅಭಿವೃದ್ಧಿಗಾಗಿ ದೇವಜನರು ಜನಾಂಗಗಳ ಬೆಲೆಬಾಳುವ ಮೂಲಸಂಪತ್ತನ್ನು ಉಪಯೋಗಿಸುತ್ತಾರೆ

[ಪುಟ 17ರಲ್ಲಿರುವ ಚಿತ್ರ]

ಯೆಹೋವನು ತನ್ನ ಜನರನ್ನು ಸಂಘಟನಾತ್ಮಕ ಅಭಿವೃದ್ಧಿ ಮತ್ತು ಶಾಂತಿಯನ್ನು ಕೊಟ್ಟು ಆಶೀರ್ವದಿಸಿದ್ದಾನೆ