ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಾರ್ಗಗಳಲ್ಲಿ ನಡೆಯುವುದರಿಂದ ಬರುವ ಸಮೃದ್ಧ ಪ್ರತಿಫಲಗಳು

ಯೆಹೋವನ ಮಾರ್ಗಗಳಲ್ಲಿ ನಡೆಯುವುದರಿಂದ ಬರುವ ಸಮೃದ್ಧ ಪ್ರತಿಫಲಗಳು

ಯೆಹೋವನ ಮಾರ್ಗಗಳಲ್ಲಿ ನಡೆಯುವುದರಿಂದ ಬರುವ ಸಮೃದ್ಧ ಪ್ರತಿಫಲಗಳು

ನೀವು ಎಂದಾದರೂ ಪಾದಯಾತ್ರೆ ಮಾಡುತ್ತ ಬೆಟ್ಟಗಳನ್ನು ಹತ್ತಿದ್ದುಂಟೊ? ಹಾಗಿರುವಲ್ಲಿ, ಲೋಕದ ತುತ್ತತುದಿಯಲ್ಲಿ ನಿಂತಿರುವ ಅನುಭವ ನಿಮಗಾಗಿರಬಹುದು. ಆ ನಿರ್ಮಲವಾದ ಗಾಳಿಸೇವನೆ, ದೂರದ ತನಕ ನೋಡುವ ಸಂದರ್ಭ ಮತ್ತು ನೈಸರ್ಗಿಕ ಸೌಂದರ್ಯವನ್ನು ಸವಿಯುವ ಅವಕಾಶವು ಅದೆಷ್ಟು ಸುಖದಾಯಕ! ಅಲ್ಲಿ ಕೆಳಗಣ ಜಗತ್ತಿನ ದೈನಂದಿನ ವ್ಯಾಕುಲತೆಯು ಹೇಗೊ ಕೊಂಚ ಅಮುಖ್ಯವಾಗಿ ಕಾಣುತ್ತದೆ.

ಹೆಚ್ಚಿನವರಿಗೆ ಇಂತಹ ವಿಹಾರಗಳು ಅಪೂರ್ವವಾಗಿರಬಹುದಾದರೂ, ನೀವು ಸಮರ್ಪಿತ ಕ್ರೈಸ್ತರಾಗಿರುವಲ್ಲಿ, ಆತ್ಮಿಕ ಅರ್ಥದಲ್ಲಿ ನೀವು ಒಂದು ಪರ್ವತ ಪ್ರದೇಶದಲ್ಲಿ ಸಂಚರಿಸುತ್ತಿದ್ದೀರಿ. ಹಿಂದಿನ ಕಾಲದ ಕೀರ್ತನೆಗಾರನಂತೆ ನೀವೂ, “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು,” ಎಂದು ಪ್ರಾರ್ಥಿಸಿರುತ್ತೀರಿ ಎಂಬುದು ನಿಸ್ಸಂದೇಹ. (ಕೀರ್ತನೆ 25:4) ನೀವು ಪ್ರಥಮ ಬಾರಿ, ಯೆಹೋವನ ಆಲಯದ ಪರ್ವತವನ್ನು ಹತ್ತಿ ಹೋಗುತ್ತ, ಅದರ ಎತ್ತರದ ಪ್ರದೇಶಗಳಲ್ಲಿ ನಡೆಯಲಾರಂಭಿಸಿದ ಸಮಯ ನಿಮಗೆ ನೆನಪಿದೆಯೊ? (ಮೀಕ 4:2; ಹಬಕ್ಕೂಕ 3:19) ಶುದ್ಧಾರಾಧನೆಯ ಈ ಉನ್ನತ ಮಾರ್ಗಗಳಲ್ಲಿ ನಿಮ್ಮ ಸಂಚಾರವು ನಿಮಗೆ ಸಂರಕ್ಷಣೆ ಮತ್ತು ಆನಂದವನ್ನು ತಂದೊಡ್ಡಿತೆಂಬುದನ್ನು ನೀವು ಬೇಗನೆ ಗ್ರಹಿಸಿದಿರಿ ಎಂಬುದರ ಬಗ್ಗೆ ಸಂಶಯವಿಲ್ಲ. ಆಗ ಕೀರ್ತನೆಗಾರನ ಈ ಅನಿಸಿಕೆಗಳಲ್ಲಿ ನೀವೂ ಭಾಗಿಯಾದಿರಿ: “ಉತ್ಸಾಹಧ್ವನಿಯನ್ನು ಕೇಳಿದ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.”​—ಕೀರ್ತನೆ 89:15.

ಆದರೆ ಕೆಲವು ಸಲ ಪಾದಯಾತ್ರಿಗಳಿಗೆ ದೀರ್ಘವಾದ, ಕಡಿದಾದ ಇಳುಕಲುಗಳಲ್ಲಿ ಕಷ್ಟಪಡಬೇಕಾಗುತ್ತದೆ. ಅವರ ಕಾಲುಗಳು ನೋಯತೊಡಗುತ್ತವೆ, ಮತ್ತು ಅವರು ದಣಿಯುತ್ತಾರೆ. ನಮ್ಮ ದೇವರ ಸೇವೆಯಲ್ಲಿ ನಾವೂ ಪ್ರಯಾಸಪಡಬೇಕಾಗಿ ಬರುತ್ತದೆ. ಇತ್ತೀಚೆಗೆ ನಾವು ಮುಂದಿಡುವ ಹೆಜ್ಜೆಗಳೂ ಪ್ರಯಾಸಕರವಾಗಿದ್ದಿರಬಹುದು. ಹಾಗಾದರೆ ನಾವು ನಮ್ಮ ಶಕ್ತಿ ಮತ್ತು ಆನಂದವನ್ನು ಪುನಃ ಪಡೆಯುವುದಾದರೂ ಹೇಗೆ? ಯೆಹೋವನ ಮಾರ್ಗಗಳ ಸರ್ವ ಶ್ರೇಷ್ಠತೆಯನ್ನು ಅಂಗೀಕರಿಸುವುದೇ ಪ್ರಥಮ ಹೆಜ್ಜೆಯಾಗಿದೆ.

ಯೆಹೋವನ ಉನ್ನತ ನಿಯಮಗಳು

ಯೆಹೋವನ ಮಾರ್ಗಗಳು ‘ಮಾನವ ಮಾರ್ಗಗಳಿಗಿಂತ ಉನ್ನತವಾಗಿವೆ’ ಮತ್ತು ಆತನ ಆರಾಧನೆಯು, ‘ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ನೆಲೆನಿಂತಿದೆ.’ (ಯೆಶಾಯ 55:9; ಮೀಕ 4:1) ಯೆಹೋವನ ವಿವೇಕವು “ಮೇಲಣಿಂದ ಬರುವ ಜ್ಞಾನ [“ವಿವೇಕ,” NW]” ಆಗಿದೆ. (ಯಾಕೋಬ 3:17) ಆತನ ನಿಯಮಗಳು ಇತರ ಸಕಲ ನಿಯಮಗಳಿಗಿಂತಲೂ ಶ್ರೇಷ್ಠವಾಗಿವೆ. ಉದಾಹರಣೆಗೆ, ಕಾನಾನ್ಯರು ಕ್ರೂರವಾದ ಶಿಶು ಯಜ್ಞಗಳನ್ನು ಆಚರಿಸುತ್ತಿದ್ದಾಗ, ಯೆಹೋವನು ಇಸ್ರಾಯೇಲ್ಯರಿಗೆ ನೈತಿಕವಾಗಿ ಶ್ರೇಷ್ಠವಾಗಿರುವ ಮತ್ತು ಕನಿಕರದಿಂದ ಗುರುತಿಸಲ್ಪಟ್ಟಿದ್ದ ನಿಯಮಗಳನ್ನು ಕೊಟ್ಟನು. ಅವನು ಅವರಿಗೆ ಹೇಳಿದ್ದು: “ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ . . . [ಪರದೇಶದವರು] ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು.”​—ಯಾಜಕಕಾಂಡ 19:15, 34.

ಹದಿನೈದು ಶತಮಾನಗಳ ತರುವಾಯ, ಯೆಹೋವನ ‘ಘನವಾದ ಧರ್ಮೋಪದೇಶ’ದ ಕುರಿತು ಯೇಸು ಹೆಚ್ಚು ದೃಷ್ಟಾಂತಗಳನ್ನು ಕೊಟ್ಟನು. (ಯೆಶಾಯ 42:21) ಪರ್ವತ ಪ್ರಸಂಗದಲ್ಲಿ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ.” (ಮತ್ತಾಯ 5:44, 45) ಮತ್ತು “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ,” ಎಂದೂ ಅವನು ಕೂಡಿಸಿ ಹೇಳಿದನು.​—ಮತ್ತಾಯ 7:12.

ಈ ಉನ್ನತ ನಿಯಮಗಳು, ಸ್ಪಂದಿಸುವಂಥ ಜನರ ಹೃದಯಗಳ ಮೇಲೆ ಪ್ರಭಾವ ಬೀರಿ, ಅವರು ತಾವು ಆರಾಧಿಸುವ ದೇವರನ್ನು ಅನುಕರಿಸುವಂತೆ ಪ್ರಚೋದಿಸುತ್ತವೆ. (ಎಫೆಸ 5:1; 1 ಥೆಸಲೊನೀಕ 2:13) ಪೌಲನಲ್ಲಿ ಆದ ಪರಿವರ್ತನೆಯ ಕುರಿತು ಯೋಚಿಸಿರಿ. ಅವನ ಬಗ್ಗೆ ನಮಗೆ ದೊರೆಯುವ ಮೊದಲನೆಯ ವಿವರವು, ಅವನು ಸ್ತೆಫನನ “ಕೊಲೆಗೆ ಸಮ್ಮತಿಸುವವನಾಗಿದ್ದನು” ಮತ್ತು “ಸಭೆಯನ್ನು ಹಾಳುಮಾಡುತ್ತಿದ್ದನು” ಎಂಬುದೇ. ಆದರೆ ಕೆಲವೇ ವರುಷಗಳ ಬಳಿಕ, ಅವನು ಥೆಸಲೊನೀಕದ ಕ್ರೈಸ್ತರೊಂದಿಗೆ ಮೃದುಭಾವದಿಂದ, “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ” ವರ್ತಿಸಿದನು. ದೈವಿಕ ಬೋಧನೆಯು ಪೌಲನನ್ನು ಒಬ್ಬ ಹಿಂಸಕನಿಂದ, ಪರಾಮರಿಸುವಂಥ ಒಬ್ಬ ಕ್ರೈಸ್ತನಾಗಿ ಪರಿವರ್ತಿಸಿತ್ತು. (ಅ. ಕೃತ್ಯಗಳು 8:1, 3; 1 ಥೆಸಲೊನೀಕ 2:7) ಕ್ರಿಸ್ತನ ಬೋಧನೆಯು ತನ್ನ ವ್ಯಕ್ತಿತ್ವವನ್ನು ರೂಪಿಸಿದ್ದಕ್ಕೆ ಅವನು ನಿಶ್ಚಯವಾಗಿಯೂ ಕೃತಜ್ಞನಾಗಿದ್ದನು. (1 ತಿಮೊಥೆಯ 1:​12, 13) ಅಂತಹದೇ ಕೃತಜ್ಞತೆಯು ನಾವೂ ದೇವರ ಉನ್ನತವಾದ ಮಾರ್ಗಗಳಲ್ಲಿ ನಡೆಯುವಂತೆ ನಮಗೆ ಹೇಗೆ ಸಹಾಯಮಾಡಬಲ್ಲದು?

ಕೃತಜ್ಞತೆಯಿಂದ ನಡೆಯುತ್ತಿರುವುದು

ಉನ್ನತ ಪ್ರದೇಶಗಳು ತಮಗೆ ಸಾಧ್ಯಗೊಳಿಸುವ ರಮ್ಯ ದೃಶ್ಯಗಳನ್ನು ನೋಡಿ ಪಾದಯಾತ್ರಿಗಳು ಸಂತೋಷಿಸುತ್ತಾರೆ. ತಮ್ಮ ಕಾಲುದಾರಿಯ ಪಕ್ಕದಲ್ಲಿರುವ ಚಿಕ್ಕ ವಸ್ತುಗಳನ್ನು, ಅಂದರೆ ಒಂದು ವಿಚಿತ್ರ ರೀತಿಯ ಬಂಡೆ, ಮನೋಹರವಾದ ಹೂವು, ಕಾಡುಮೃಗವೊಂದರ ಕ್ಷಣಿಕ ನೋಟ​—ಇವನ್ನು ಸವಿಯಲೂ ಅವರು ಕಲಿಯುತ್ತಾರೆ. ಇದೇ ರೀತಿ, ಆತ್ಮಿಕವಾಗಿಯೂ, ನಾವು ದೇವರೊಂದಿಗೆ ನಡೆದಾಡುವುದರಿಂದ ಬರುವ ದೊಡ್ಡ ಮತ್ತು ಚಿಕ್ಕ ಪ್ರತಿಫಲಗಳನ್ನು ಸವಿಯಲು ನಾವು ಸದಾ ಎಚ್ಚರದಿಂದಿರಬೇಕು. ಈ ಪ್ರಜ್ಞೆಯು ನಾವು ನವೀಕರಿಸಿದ ಶಕ್ತಿಯೊಂದಿಗೆ ನಡೆಯುವಂತೆ ಮಾಡಿ, ನಮ್ಮ ಬಳಲಿರುವ ನಡಿಗೆಯನ್ನು ಚೈತನ್ಯದಾಯಕವಾದ ನಡಿಗೆಯಾಗಿ ಮಾಡಬಲ್ಲದು. ಆಗ ನಾವು “ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು” ಎಂಬ ದಾವೀದನ ಮಾತುಗಳನ್ನು ಪ್ರತಿಧ್ವನಿಸುವೆವು.​—ಕೀರ್ತನೆ 143:8.

ಅನೇಕ ವರ್ಷಗಳಿಂದ ಯೆಹೋವನ ಮಾರ್ಗಗಳಲ್ಲಿ ನಡೆಯುತ್ತಿರುವ ಮೇರಿ ಹೇಳುವುದು: “ನಾನು ಯೆಹೋವನ ಸೃಷ್ಟಿಯನ್ನು ಗಮನಿಸುವಾಗ ಜಟಿಲವಾದ ವಿನ್ಯಾಸವನ್ನು ಮಾತ್ರವಲ್ಲ, ದೇವರ ಪ್ರೀತಿಪೂರ್ವಕವಾದ ವ್ಯಕ್ತಿತ್ವವನ್ನೂ ನೋಡುತ್ತೇನೆ. ಅದು ಒಂದು ಪ್ರಾಣಿಯಾಗಿರಲಿ, ಪಕ್ಷಿಯಾಗಿರಲಿ ಅಥವಾ ಒಂದು ಕೀಟವೇ ಆಗಿರಲಿ, ಅವುಗಳಲ್ಲಿ ಒಂದೊಂದೂ ಆಕರ್ಷಣೆ ತುಂಬಿರುವ ಒಂದು ಚಿಕ್ಕ ಜಗತ್ತಾಗಿದೆ. ವರುಷಗಳು ಕಳೆದಷ್ಟಕ್ಕೆ ಹೆಚ್ಚು ಸ್ಪಷ್ಟವಾಗಿ ತೋರಿಬರುವ ಆತ್ಮಿಕ ಸತ್ಯಗಳಿಂದಲೂ ಅದೇ ರೀತಿಯ ಆನಂದ ಲಭಿಸುತ್ತದೆ.”

ನಾವು ನಮ್ಮ ಕೃತಜ್ಞತೆಯನ್ನು ಹೇಗೆ ಗಾಢಗೊಳಿಸಬಹುದು? ಆಂಶಿಕವಾಗಿ, ಯೆಹೋವನು ನಮಗಾಗಿ ಏನು ಮಾಡಿರುತ್ತಾನೊ ಅದನ್ನು ಲಘುವಾಗಿ ತೆಗೆದುಕೊಳ್ಳದಿರುವ ಮೂಲಕವೇ. ಪೌಲನು ಬರೆದುದು: “ಎಡೆಬಿಡದೆ ಪ್ರಾರ್ಥನೆ ಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ.”​—1 ಥೆಸಲೊನೀಕ 5:17, 18; ಕೀರ್ತನೆ 119:62.

ವೈಯಕ್ತಿಕ ಅಧ್ಯಯನವು ಕೃತಜ್ಞತಾಭಾವವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತದೆ. ಕೊಲೊಸ್ಸೆಯ ಕ್ರೈಸ್ತರನ್ನು ಪೌಲನು ಪ್ರೋತ್ಸಾಹಿಸಿದ್ದು: “ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ. . . . ಕ್ರಿಸ್ತನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರಮಾಡುವವರಾಗಿರಿ.” (ಕೊಲೊಸ್ಸೆ 2:6, 7) ಬೈಬಲನ್ನು ಓದಿ, ಓದಿರುವುದನ್ನು ಧ್ಯಾನಿಸುವುದು, ನಮ್ಮ ನಂಬಿಕೆಯನ್ನು ಬಲಪಡಿಸಿ, ನಮ್ಮನ್ನು ಬೈಬಲಿನ ಗ್ರಂಥಕರ್ತನ ಸಮೀಪಕ್ಕೆ ಎಳೆಯುತ್ತದೆ. ಅದರ ಪುಟಗಳಲ್ಲೆಲ್ಲ, ನಾವು “ಹೆಚ್ಚೆಚ್ಚಾಗಿ ಸ್ತೋತ್ರ” ಮಾಡುವಂತೆ ನಮ್ಮನ್ನು ಪ್ರೇರಿಸುವ ನಿಕ್ಷೇಪಗಳಿವೆ.

ನಮ್ಮ ಸಹೋದರರೊಂದಿಗೆ ಯೆಹೋವನನ್ನು ಸೇವಿಸುವ ವಿಷಯವು ನಮ್ಮ ಮಾರ್ಗವನ್ನು ಸರಾಗವಾಗಿಯೂ ಮಾಡುತ್ತದೆ. ಕೀರ್ತನೆಗಾರನು ತನ್ನ ವಿಷಯದಲ್ಲಿ ಹೇಳಿದ್ದು: “ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.” (ಕೀರ್ತನೆ 119:63) ನಮ್ಮ ಅತ್ಯಂತ ಸಂತೋಷಕರವಾದ ಸಮಯಗಳನ್ನು ನಾವು ಕ್ರೈಸ್ತ ಸಮ್ಮೇಳನಗಳಲ್ಲಿ ಇಲ್ಲವೆ ಸಹೋದರರ ಒಡನಾಟದಲ್ಲಿ ಕಳೆಯುತ್ತೇವೆ. ನಮ್ಮ ಲೋಕವ್ಯಾಪಕವಾದ ಅಮೂಲ್ಯ ಕ್ರೈಸ್ತ ಕುಟುಂಬವು, ಯೆಹೋವನ ಮತ್ತು ಆತನ ಉನ್ನತ ಮಾರ್ಗಗಳ ಕಾರಣವೇ ಅಸ್ತಿತ್ವದಲ್ಲಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ.​—ಕೀರ್ತನೆ 144:15ಬಿ.

ನಾವು ಯೆಹೋವನ ಉನ್ನತ ಮಾರ್ಗಗಳಲ್ಲಿ ಪ್ರಗತಿಮಾಡುತ್ತಾ ಮುಂದುವರಿಯಲು ಕೃತಜ್ಞತೆಯಲ್ಲದೆ, ಹೊಣೆಗಾರಿಕೆಯ ಪ್ರಜ್ಞೆಯೂ ನಮ್ಮನ್ನು ಬಲಗೊಳಿಸುತ್ತದೆ.

ಹೊಣೆಗಾರಿಕೆಯಿಂದ ನಡೆಯುವುದು

ಹೊಣೆಗಾರಿಕೆಯ ಪ್ರಜ್ಞೆಯಿರುವ ಪಾದಯಾತ್ರಿಗಳು, ದಾರಿತಪ್ಪಿಹೋಗದಂತೆ ಅಥವಾ ಅಪಾಯಕರವಾದ ಪ್ರಪಾತಗಳ ಬಳಿ ಸರಿಯದಂತೆ ಜಾಗರೂಕತೆಯಿಂದ ನಡೆಯುವ ಅಗತ್ಯವನ್ನು ಒಪ್ಪಿಕೊಳ್ಳುತ್ತಾರೆ. ನಾವು ಸ್ವತಂತ್ರ ನೈತಿಕ ವ್ಯಕ್ತಿಗಳಾಗಿರುವುದರಿಂದ ಯೆಹೋವನು ನಮಗೆ ನ್ಯಾಯಸಮ್ಮತವಾಗಿರುವಷ್ಟು ಸ್ವಾತಂತ್ರ್ಯವನ್ನೂ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಶಕ್ತಿಯನ್ನೂ ಅನುಮತಿಸಿರುತ್ತಾನೆ. ಆದರೆ ನಮ್ಮ ಕ್ರೈಸ್ತ ಹಂಗುಗಳನ್ನು ಪೂರೈಸಲು ಇಂತಹ ಸ್ವಾತಂತ್ರ್ಯಕ್ಕೆ ಹೊಣೆಗಾರಿಕೆಯ ಪ್ರಜ್ಞೆಯು ಅಗತ್ಯ.

ಉದಾಹರಣೆಗೆ, ತನ್ನ ಸೇವಕರು ಅವರ ಹಂಗುಗಳನ್ನು ಹೊಣೆಗಾರಿಕೆಯಿಂದ ಪೂರೈಸುವರೆಂಬ ವಿಷಯದಲ್ಲಿ ಯೆಹೋವನು ತನ್ನ ಸೇವಕರ ಮೇಲೆ ಭರವಸೆಯಿಡುತ್ತಾನೆ. ನಾವು ಕ್ರೈಸ್ತ ಚಟುವಟಿಕೆಗಳಲ್ಲಿ ನಮ್ಮ ಶಕ್ತಿಯನ್ನೂ ಸಮಯವನ್ನೂ ಎಷ್ಟರ ಮಟ್ಟಿಗೆ ವ್ಯಯಿಸಬೇಕೆಂದೊ ಆರ್ಥಿಕವಾಗಿ ಇಲ್ಲವೆ ಬೇರೆ ವಿಧಗಳಲ್ಲಿ ಎಷ್ಟನ್ನು ಕೊಡಬೇಕೆಂದೊ ಆತನು ಹೇಳಿರುವುದಿಲ್ಲ. ಬದಲಿಗೆ, ಕೊರಿಂಥದವರಿಗೆ ಬರೆದ ಈ ಮಾತುಗಳು ನಮಗೆಲ್ಲರಿಗೂ ಅನ್ವಯಿಸುತ್ತವೆ: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ.”​—2 ಕೊರಿಂಥ 9:7; ಇಬ್ರಿಯ 13:15, 16.

ಹೊಣೆಗಾರಿಕೆಯ ಕ್ರೈಸ್ತ ಕೊಡುವಿಕೆಯಲ್ಲಿ, ಸುವಾರ್ತೆಯಲ್ಲಿ ಇತರರೊಂದಿಗೆ ಪಾಲಿಗರಾಗುವುದೂ ಸೇರಿದೆ. ಲೋಕವ್ಯಾಪಕವಾದ ರಾಜ್ಯ ಸೇವೆಗಾಗಿ ಕಾಣಿಕೆಗಳನ್ನು ಕೊಡುವ ಮೂಲಕವೂ ನಾವು ಹೊಣೆಗಾರರೆಂದು ತೋರಿಸುತ್ತೇವೆ. ಗೆರ್‌ಹಾರ್ಟ್‌ ಎಂಬ ಹೆಸರಿನ ಹಿರಿಯರು, ಪೂರ್ವ ಯೂರೋಪಿನ ಸಮ್ಮೇಳನವೊಂದನ್ನು ಭೇಟಿಮಾಡಿದ ಬಳಿಕ, ತಾನೂ ತನ್ನ ಹೆಂಡತಿಯೂ ಕೊಡುವ ಕಾಣಿಕೆಗಳನ್ನು ಹೆಚ್ಚಿಸಿದೆವೆಂದು ಹೇಳುತ್ತಾರೆ. “ಅಲ್ಲಿ ನಮ್ಮ ಸಹೋದರರಿಗೆ ಪ್ರಾಪಂಚಿಕ ರೀತಿಯಲ್ಲಿ ಅತಿ ಕೊಂಚ ವಸ್ತುಗಳು ಇರುವುದಾದರೂ ಅವರು ನಮ್ಮ ಬೈಬಲ್‌ ಸಾಹಿತ್ಯವನ್ನು ಬಹಳಷ್ಟು ಗಣ್ಯಮಾಡುವುದನ್ನು ನಾವು ನೋಡಿದೆವು; ಆದುದರಿಂದ, ಬೇರೆ ದೇಶಗಳಲ್ಲಿ ಕೊರತೆಯಲ್ಲಿರುವ ನಮ್ಮ ಸಹೋದರರಿಗಾಗಿ ಸಾಧ್ಯವಾಗುವಷ್ಟು ಬೆಂಬಲವನ್ನು ಕೊಡಬೇಕೆಂದು ನಾವು ನಿರ್ಧರಿಸಿದೆವು,” ಎನ್ನುತ್ತಾರೆ ಅವರು.

ನಮ್ಮ ಸಹನೆಯನ್ನು ಹೆಚ್ಚಿಸುವುದು

ಬೆಟ್ಟ ಪ್ರದೇಶದಲ್ಲಿ ನಡೆಯುತ್ತ ಹೋಗಲು ಶಕ್ತಿ ಅಗತ್ಯ. ಪಾದಯಾತ್ರಿಗಳು ಸಾಧ್ಯವಿರುವಾಗಲೆಲ್ಲ ವ್ಯಾಯಾಮಕ್ಕೆ ತೊಡಗುತ್ತಾರೆ ಮತ್ತು ಅನೇಕರು ದೀರ್ಘವಾದ ಪಾದಯಾತ್ರೆಗಳಿಗೆ ಸಿದ್ಧರಾಗಲಿಕ್ಕಾಗಿ ಅನೇಕ ಅಲ್ಪದೂರದ ಅಡ್ಡಾಡುವಿಕೆಗಳನ್ನು ಮಾಡುತ್ತಾರೆ. ಹಾಗೆಯೇ, ನಮ್ಮ ಆತ್ಮಿಕ ಯುಕ್ತತೆಯನ್ನು ಕಾಪಾಡಿಕೊಳ್ಳಲು ನಾವು ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರಬೇಕೆಂದು ಪೌಲನು ಶಿಫಾರಸ್ಸು ಮಾಡುತ್ತಾನೆ. ‘ಯೆಹೋವನಿಗೆ ಯೋಗ್ಯರಾಗಿ ನಡೆಯಲು’ ಮತ್ತು “ಬಲಿಷ್ಠ”ರಾಗಲು, ನಾವು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ” ಹೋಗಬೇಕೆಂದು ಪೌಲನು ಹೇಳಿದನು.​—ಕೊಲೊಸ್ಸೆ 1:​10, 11.

ಪಾದಯಾತ್ರಿಯ ಸಹನ ಶಕ್ತಿಗೆ ಪ್ರಚೋದನೆಯು ಸಹಾಯಮಾಡುತ್ತದೆ. ಹೇಗೆ? ದೂರದ ಬೆಟ್ಟದಂತಹ, ಸ್ಪಷ್ಟವಾಗಿ ಕಾಣುವ ಗುರಿಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುವುದು, ನಮಗೆ ಉತ್ತೇಜಕವಾಗಿ ಪರಿಣಮಿಸುತ್ತದೆ. ಮತ್ತು ಪಾದಯಾತ್ರಿಯು ಮಧ್ಯಂತರ ಸ್ಥಳಗಳಲ್ಲಿರುವ ಹೆಗ್ಗುರುತುಗಳಿಗೆ ಬಂದು ತಲಪುವಾಗ, ಅವನು ತನ್ನ ಅಂತಿಮ ಗುರಿಯ ಕಡೆಗೆ ತಾನು ಮಾಡಿರುವ ಪ್ರಗತಿಯನ್ನು ಅಳೆಯಬಲ್ಲನು. ಮತ್ತು ಅವನು ಹಿಂದಿರುಗಿ, ತಾನು ಈಗಾಗಲೇ ಮಾಡಿರುವ ಪ್ರಯಾಣದ ಅಂತರವನ್ನು ನೋಡುವಾಗ, ಅವನು ತೃಪ್ತನಾಗುತ್ತಾನೆ.

ಅದೇ ರೀತಿ, ನಿತ್ಯಜೀವದ ನಮ್ಮ ನಿರೀಕ್ಷೆಯು ನಮ್ಮನ್ನು ಪೋಷಿಸಿ, ಪ್ರಚೋದಿಸುತ್ತದೆ. (ರೋಮಾಪುರ 12:12) ಮತ್ತು ನಾವು ಯೆಹೋವನ ಮಾರ್ಗಗಳಲ್ಲಿ ನಡೆಯುವಾಗ, ಕ್ರೈಸ್ತ ಗುರಿಗಳನ್ನು ಇಡುತ್ತ, ಅವುಗಳನ್ನು ತಲಪುತ್ತ ಇರುವಲ್ಲಿ, ನಮಗೆ ಆ ಗುರಿಗಳನ್ನು ಸಾಧಿಸಿರುವ ಭಾವನೆಯುಂಟಾಗುತ್ತದೆ. ಮತ್ತು ನಂಬಿಗಸ್ತ ಸೇವೆಯ ಆ ವರುಷಗಳನ್ನು ನಾವು ಹಿಂದಿರುಗಿ ನೋಡುವಾಗ ಅಥವಾ ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಿರುವ ಬದಲಾವಣೆಯನ್ನು ಅವಲೋಕಿಸುವಾಗ ನಮಗಾಗುವ ಆನಂದವೊ ಅಪಾರ!​—ಕೀರ್ತನೆ 16:11.

ದೂರದ ಪ್ರದೇಶಗಳನ್ನು ಆವರಿಸಲು ಮತ್ತು ತಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು, ಪಾದಯಾತ್ರಿಗಳು ಏಕಪ್ರಕಾರದ ವೇಗದಲ್ಲಿ ನಡೆಯುತ್ತಾರೆ. ಅದೇ ರೀತಿ, ಕ್ರಮದ ಕೂಟಗಳು ಮತ್ತು ಕ್ಷೇತ್ರ ಸೇವೆ ಸೇರಿರುವ ಒಂದು ಉತ್ತಮ ನಿಯತಕ್ರಮವು, ನಮ್ಮ ಗುರಿಯ ಕಡೆಗೆ ನಾವು ತತ್ಪರತೆಯಿಂದ ನಡೆಯುತ್ತಾ ಇರುವಂತೆ ಸಹಾಯಮಾಡುವುದು. ಹೀಗಿರುವುದರಿಂದ ಪೌಲನು ಜೊತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದು: “ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.”​—ಫಿಲಿಪ್ಪಿ 3:16.

ನಾವು ಯೆಹೋವನ ಮಾರ್ಗಗಳಲ್ಲಿ ಒಂಟಿಯಾಗಿ ನಡೆಯುವುದಿಲ್ಲವೆಂಬುದು ನಿಶ್ಚಯ. “ನಾವು ಒಬ್ಬರನ್ನೊಬ್ಬರು ಪ್ರೀತಿ ಮತ್ತು ಸತ್ಕಾರ್ಯಗಳ ಕಡೆಗೆ ಹೇಗೆ ಉತ್ತೇಜಿಸಬಹುದೆಂಬುದನ್ನು ಚಿಂತಿಸೋಣ,” ಎಂದು ಪೌಲನು ಬರೆದನು. (ಇಬ್ರಿಯ 10:​24, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ನಾವು ಜೊತೆವಿಶ್ವಾಸಿಗಳೊಂದಿಗೆ ನಡೆಯುವಾಗ, ಉತ್ತಮವಾದ ಆತ್ಮಿಕ ಸಹವಾಸವು ನಾವು ಅವರೊಂದಿಗೆ ನಡೆಯುತ್ತ ಮುಂದುವರಿಯುವುದನ್ನು ಸುಲಭಗೊಳಿಸುವುದು.​—ಜ್ಞಾನೋಕ್ತಿ 13:20.

ಕೊನೆಯದ್ದೂ ಅತ್ಯಂತ ಪ್ರಾಮುಖ್ಯವೂ ಆಗಿರುವ ವಿಷಯವೇನಂದರೆ, ಯೆಹೋವನು ಕೊಡುವ ಶಕ್ತಿಯನ್ನು ನಾವು ಎಂದಿಗೂ ಮರೆಯಬಾರದು. ಯಾರ ಶಕ್ತಿಯು ಯೆಹೋವನಾಗಿದ್ದಾನೊ ಅವರು, ‘ಹೆಚ್ಚುಹೆಚ್ಚಾಗಿ ಬಲಹೊಂದುವರು.’ (ಕೀರ್ತನೆ 84:​5, 7) ಕೆಲವು ಬಾರಿ ನಾವು ಅಂಕುಡೊಂಕಾದ ಪ್ರದೇಶದಲ್ಲಿ ನಡೆಯಬೇಕಾಗಿ ಬರುತ್ತದಾದರೂ, ಯೆಹೋವನ ನೆರವಿನಿಂದ ನಾವು ಅಲ್ಲಿಯೂ ನಡೆಯಬಲ್ಲೆವು.