ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಂಚಿಸಲ್ಪಡದಿರಿ

ವಂಚಿಸಲ್ಪಡದಿರಿ

ವಂಚಿಸಲ್ಪಡದಿರಿ

ವಂಚನೆಯು ಹೆಚ್ಚುಕಡಿಮೆ ಮಾನವಕುಲದಷ್ಟೇ ಹಳೆಯದಾಗಿದೆ. ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಪ್ರಪ್ರಥಮ ಘಟನೆಗಳಲ್ಲಿ ಒಂದು, ವಂಚನೆಯ ಕೃತ್ಯವಾಗಿತ್ತು. ಅದು ಸೈತಾನನು ಏದೆನ್‌ ತೋಟದಲ್ಲಿ ಹವ್ವಳನ್ನು ವಂಚಿಸಿದಾಗ ನಡೆಯಿತು.​—ಆದಿಕಾಂಡ 3:13; 1 ತಿಮೊಥೆಯ 2:14.

ಅಂದಿನಿಂದ ಹಿಡಿದು, ವಂಚನೆಯೆಂಬುದು ಲೋಕದಲ್ಲಿ ಎಲ್ಲೆಡೆಯೂ ಹಬ್ಬಿರದಂಥ ಸಮಯವು ಎಂದೂ ಇರಲಿಲ್ಲವಾದರೂ, ಅದು ವಿಶೇಷವಾಗಿ ಇಂದು ಅತಿ ವ್ಯಾಪಕವಾಗಿದೆ. ಆಧುನಿಕ ಕಾಲಗಳಿಗೆ ಮುನ್ನೋಡುತ್ತಾ ಬೈಬಲ್‌ ಎಚ್ಚರಿಸಿದ್ದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”​—2 ತಿಮೊಥೆಯ 3:13.

ಜನರು ಎಲ್ಲಾ ತರದ ಕಾರಣಗಳಿಗಾಗಿ ವಂಚಿಸಲ್ಪಡುತ್ತಾರೆ. ಮೋಸಗಾರರು ಮತ್ತು ನಯವಂಚಕರು ತಮ್ಮ ಕುತಂತ್ರಕ್ಕೆ ಬಲಿಬೀಳುವವರ ಹಣವನ್ನು ಪಡೆದುಕೊಳ್ಳಲಿಕ್ಕಾಗಿ ಅವರನ್ನು ವಂಚಿಸುತ್ತಾರೆ. ಕೆಲವು ರಾಜಕಾರಣಿಗಳು, ಏನೇ ಬರಲಿ ತಮ್ಮ ಕುರ್ಚಿಯನ್ನು ಮಾತ್ರ ಬಿಟ್ಟುಕೊಡಬಾರದು ಎಂಬ ದೃಢತೀರ್ಮಾನ ಮಾಡಿದವರಾಗಿ, ತಮ್ಮ ಮತದಾರರನ್ನು ವಂಚಿಸುತ್ತಾರೆ. ಜನರು ತಮ್ಮನ್ನೇ ವಂಚಿಸಿಕೊಳ್ಳುತ್ತಾರೆ ಸಹ. ಅಹಿತಕರ ಸತ್ಯಗಳನ್ನು ಎದುರಿಸುವ ಬದಲು, ಅವರು ಧೂಮಪಾನ, ಅಮಲೌಷಧದ ದುರುಪಯೋಗ, ಅಥವಾ ಲೈಂಗಿಕ ಅನೈತಿಕತೆ ಎಂಬ ಅಪಾಯಕರ ದುಶ್ಚಟಗಳನ್ನು ಬೆನ್ನಟ್ಟುವುದರಿಂದ ಯಾವುದೇ ಹಾನಿಯಿಲ್ಲ ಎಂದು ತಮ್ಮನ್ನೇ ಸಮಾಧಾನಪಡಿಸಿಕೊಳ್ಳುತ್ತಾರೆ.

ಮತ್ತು ಧಾರ್ಮಿಕ ವಿಷಯಗಳಲ್ಲಿ ವಂಚನೆಯಿದೆ. ಯೇಸುವಿನ ದಿನದ ಧಾರ್ಮಿಕ ಮುಖಂಡರು ಜನರನ್ನು ವಂಚಿಸಿದರು. ಆ ವಂಚಕರ ಕುರಿತಾಗಿ ಯೇಸು ಹೇಳಿದ್ದು: “ತಾವೇ ಕುರುಡರು, ಮತ್ತೊಬ್ಬರಿಗೆ ದಾರಿತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು.” (ಮತ್ತಾಯ 15:14) ಮಾತ್ರವಲ್ಲದೆ, ಧಾರ್ಮಿಕ ವಿಷಯಗಳಲ್ಲಿ ಜನರು ತಮ್ಮನ್ನೇ ವಂಚಿಸಿಕೊಳ್ಳುತ್ತಾರೆ. ಜ್ಞಾನೋಕ್ತಿ 14:12 ಹೇಳುವುದು: “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.”

ಯೇಸುವಿನ ಕಾಲದಲ್ಲಿದ್ದಂತೆ, ಅನೇಕರು ಇಂದು ಧಾರ್ಮಿಕ ವಿಷಯಗಳಲ್ಲಿ ವಂಚಿಸಲ್ಪಡುತ್ತಾರೆ, ಮತ್ತು ಇದು ಆಶ್ಚರ್ಯದ ಸಂಗತಿಯೇನಲ್ಲ! ಅಪೊಸ್ತಲ ಪೌಲನು ಹೇಳಿದ್ದು: “ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು [ಸೈತಾನನು] ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.”​—2 ಕೊರಿಂಥ 4:4.

ನಾವು ಒಬ್ಬ ಮೋಸಗಾರನಿಂದ ವಂಚಿಸಲ್ಪಡುವುದಾದರೆ, ನಾವು ಹಣವನ್ನು ಕಳೆದುಕೊಳ್ಳುತ್ತೇವೆ. ಒಬ್ಬ ರಾಜಕಾರಣಿಯು ನಮ್ಮನ್ನು ವಂಚಿಸುವುದಾದರೆ, ಇದರ ಫಲಿತಾಂಶವಾಗಿ ನಾವು ನಮ್ಮ ಸ್ವಾತಂತ್ರ್ಯದಲ್ಲಿ ಸ್ವಲ್ಪವನ್ನು ಕಳೆದುಕೊಳ್ಳಬಹುದು. ಆದರೆ ಸೈತಾನನು ನಮ್ಮನ್ನು ವಂಚಿಸುವುದಾದರೆ, ಮತ್ತು ಇದರಿಂದಾಗಿ ನಾವು ಯೇಸು ಕ್ರಿಸ್ತನ ಕುರಿತಾದ ಸತ್ಯವನ್ನು ನಿರಾಕರಿಸುವಂತಾಗುವಲ್ಲಿ, ನಾವು ನಿತ್ಯಜೀವವನ್ನು ಕಳೆದುಕೊಳ್ಳುವೆವು! ಆದ್ದರಿಂದ ವಂಚಿಸಲ್ಪಡದಿರಿ. ಧಾರ್ಮಿಕ ಸತ್ಯದ ನಿರ್ವಿವಾದಿತ ಏಕ ಮೂಲವಾಗಿರುವ ಬೈಬಲಿಗೆ ನಿಮ್ಮ ಹೃದಮನಗಳನ್ನು ತೆರೆಯಿರಿ. ನಾವು ಇದಕ್ಕೆ ವ್ಯತಿರಿಕ್ತವಾದದ್ದನ್ನು ಮಾಡುವುದಾದರೆ, ಬಹಳಷ್ಟನ್ನು ಕಳೆದುಕೊಳ್ಳುವ ಅಪಾಯವಿದೆ.​—ಯೋಹಾನ 17:3.